Saturday 23 June 2012

ಪುರಾಣ ಪರಿಕಲ್ಪನೆ : ಶಿಷ್ಟ - ಪರಿಶಿಷ್ಟ ದೃಷ್ಟಿಕೋನಗಳು


ಡಾ.ಎಸ್.ಎಂ. ಮುತ್ತಯ್ಯ

                  ಪುರಾಣ ಎಂಬುದು ಬರೀ ಶಬ್ಧವಲ್ಲ. ಶಬ್ಧದಾಚೆಗೆ ಸಮಾಜದಲ್ಲಿ ತನ್ನ ಪ್ರಭಾವಳಿಯನ್ನು ಸೃಷ್ಟಿಸಿದ ಶಕ್ತಶಾಲಿಯಾದ ಒಂದು ಪರಿಕಲ್ಪನೆಯಾಗಿದೆ. ಹಾಗಾಗಿ ಪುರಾಣ ಎಂದರೇನು? ಅದರ ಸೃಷ್ಟಿಯ ಹಿಂದಿನ ಉದ್ದೇಶ ಯಾವುದು? ಅದರ ಬಗ್ಗೆ ಶಿಷ್ಟ - ಪರಿಶಿಷ್ಟ ಸಮುದಾಯಗಳಲ್ಲಿ ಪ್ರಚಲಿತವಿರುವ ಅರ್ಥ ಮತ್ತು ಬಳಕೆಯ ಸಾಧ್ಯತೆಗಳೇನು? ಎಂಬಿತ್ಯಾದಿ ವಿಷಯಗಳನ್ನು ವಿವರಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

 ಪುರಾಣದ ಅರ್ಥ ಮತ್ತು ಸ್ವರೂಪ

       'ಪುರಾಣ'ವು ಆಂಗ್ಲಭಾಷೆಯ 'Myth'ನ ಜೊತೆ ಸಮೀಕರಣಗೊಂಡಿದೆ. ಪುರಾಣವನ್ನು ಪುರಾ=ನವ=ಪುರಾಣ ಎಂಬುದಾಗಿ ವಿಭಜಿಸಿ ಅರ್ಥೈಯಿಸಲಾಗಿದೆ. 'ಪುರಾ' ಎಂದರೆ ಪುರಾತನವಾದುದು ಎಂತಲೂ 'ನವ' ಎಂದರೆ ನಿತ್ಯನೂತನವಾದುದು ಎಂತಲೂ ಹೇಳಲಾಗಿದೆ. ಹಾಗಾಗಿ ಪುರಾಣ ಎಂಬುದು ಭಾಷಿಕ ಅಭಿವ್ಯಕ್ತಿಗೆ ಒಳಪಟ್ಟ ಒಂದು ದೀರ್ಘನಿರೂಪಣೆ. ಪ್ರಾಚೀನ ಮಾನವ ತನ್ನ ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಹಾಗೂ ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಕಟ್ಟಿಕೊಂಡ ಕಾಲ್ಪನಿಕ ಕಥೆಗಳು ಇಲ್ಲಿವೆ. ಜೊತೆಗೆ ಪೂಜ್ಯ, ಗೌರವಯುತ ವ್ಯಕ್ತಿಗಳ, ದೈವಗಳ, ಸಾಂಸ್ಕೃತಿಕ ನಾಯಕರ ಜೀವನ ವಿವರಗಳು ಹಾಗೂ ಜನ ಸಮುದಾಯಗಳ ನಡುವೆ ಬದುಕಿರುವ ಧಾರ್ಮಿಕ ನಂಬಿಕೆಗಳು, ಆಚರಣೆ ಸಂಪ್ರದಾಯಗಳು ಪ್ರಧಾನವಾಗಿವೆ. ಇಂಥ ಸಂಗತಿಗಳನ್ನು ಅದ್ಭುತ ಶೈಲಿಯಲ್ಲಿ ವಿವರಿಸುವ ಮತ್ತು ಸಮರ್ಥಿಸುವ ಕಥನಗಳಾಗಿಯೂ ಪುರಾಣಗಳು ಕಾರ್ಯನಿರ್ವಹಿಸುತ್ತವೆ. ಒಂದು ದೃಷ್ಟಿಯಲ್ಲಿ ವಿಜ್ಞಾನ ಪೂರ್ವಯುಗದ ವಿಜ್ಞಾನಗಳು. 

   ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಊಹಾತ್ಮಕ ನೆಲೆಯಿಂದ ವಿವರಿಸುವಂತಹವು. ಈ ದೃಷ್ಟಿಯಿಂದ ನೋಡಿದಾಗ ಪುರಾಣಗಳ ವಸ್ತು ಏನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ವಿಚಾರದಲ್ಲಿ ಅಮರಕೋಶ ಹೇಳಿದ ಮಾತು ಗಮನಾರ್ಹ. 
                                                            ಸರ್ಗಶ್ಚ ಪ್ರತಿಸರ್ಗಶ್ಚವಂಶೋ ಮನ್ವಂತರಾಣಿ ಚ
                                                           ವಂಶಾನು ಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ      ಎನ್ನುತ್ತದೆ. 

  ಅಂದರೆ ಪುರಾಣವೆನ್ನುವುದು ಸ್ವರ್ಗ, ಪ್ರತಿಸ್ವರ್ಗ, ವಂಶ, ಮನ್ವಂತರ ಮತ್ತು ವಂಶಾನುಚರಿತೆ ಎಂಬ ಐದು ಲಕ್ಷಣಗಳುಳ್ಳದ್ದು. ಇವುಗಳಲ್ಲಿ ಸ್ವರ್ಗ ಎಂದರೆ ಜಗತ್ತಿನ ಮೂಲಸೃಷ್ಟಿ; ಪ್ರತಿಸ್ವರ್ಗ ಎಂದರೆ ಬ್ರಹ್ಮನಿಂದಾದ ಜಗತ್ಸೃಷ್ಟಿ; ವಂಶವೆಂದರೆ ಪ್ರಾಚೀನ ಕಾಲದಿಂದ ಬಂದ ದೇವತೆಗಳು, ಋಷಿಗಳು, ಮಾನವರು; ಮನ್ವಂತರ ಎಂದರೆ ಮನುಗಳ ಕಾಲ; ವಂಶಾನುಚರಿತ್ರೆ ಎಂದರೆ ಬೇರೆ ಬೇರೆ ವಂಶಗಳಲ್ಲಿ ಬಂದ ರಾಜಾಧಿರಾಜರ ಚರಿತ್ರೆ ಎಂದರ್ಥವಿದೆ. ಈ ಮೇಲಿನ ಐದು ಮುಖ್ಯ ನೆಲೆಗಳೇ ಪುರಾಣದ ವಸ್ತುಗಳು. 
                ಮೊದಲಿಗೆ, ಇಡೀ ಪುರಾಣಗಳನ್ನು ಲಿಖಿತ ಹಾಗೂ ಮೌಖಿಕವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವೆರಡೂ ಗುಂಪುಗಳು ಸ್ಪಷ್ಟವಾದ ಭಿನ್ನತೆಗಳನ್ನು ರೂಢಿಸಿಕೊಂಡಿರುತ್ತವೆ. ಇನ್ನು ಪುರಾಣಗಳಲ್ಲಿ ಸೃಷ್ಟಿಪುರಾಣಗಳು, ಆಕಾಶಕಾಯ ಮತ್ತು ಮನುಷ್ಯ ಚಟುವಟಿಕೆ ಕುರಿತ ಪುರಾಣಗಳು, ಸಾವಿನ ನಂತರದ ಜಗತ್ತನ್ನು ಕುರಿತ ಪುರಾಣಗಳು ಎಂಬಿತ್ಯಾದಿಯಾಗಿ ವಿಂಗಡಿಸಿಕೊಳ್ಳಬಹುದು. ಇದೇ ಹಿನ್ನೆಲೆಯಲ್ಲಿ ಎಲ್.ಆರ್. ಹೆಗಡೆಯವರು ಪುರಾಣದ ಬಗೆಗಳನ್ನು ಸೃಷ್ಟಿಕ್ರಮದ ಕಥೆಗಳು, ಮಾನವ ಹಾಗೂ ಪ್ರಾಣಿಗಳ ಉತ್ಪತ್ತಿ, ಆಕಾಶದ ನಕ್ಷತ್ರ-ಗ್ರಹಗಳ ಉತ್ಪತ್ತಿಗಳು ಮತ್ತು ವಿಧಿಕ್ರಮಗಳನ್ನು ರೂಪಿಸಿದ ಕಥೆಗಳು ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಹಿ.ಶಿ. ರಾಮಚಂದ್ರೇಗೌಡರ ಪ್ರಕಾರ ಪುರಾಣಗಳನ್ನು ಋತುಮಾನಕ್ಕೆ ಸಂಬಂಧಿಸಿದ, ನಿಸರ್ಗದ ಹುಟ್ಟ-ಸಂದರ್ಭಕ್ಕೆ ಸಂಬಂಧಿಸಿದ, ದೇವತೆಗಳ ಹುಟ್ಟು ಮನುಷ್ಯ ಪ್ರಾಣಿಗಳ ಹುಟ್ಟು-ರೂಪಾಂತರ, ಸಾಂಸ್ಕೃತಿಕ ನಾಯಕರ ಸಾಮಾಜಿಕ ಅನ್ವೇಷಣೆಗಳು, ಸಾವಿನ ನಂತರದ ಸ್ಥಳಗಳ ಕುರಿತ, ಚಾರಿತ್ರಿಕ ಘಟನೆಗಳ ಕುರಿತ ಪುರಾಣಗಳು ಎಂಬುದಾಗಿ ವರ್ಗೀಕರಿಸಬಹುದು 

               ಅನೇಕ ವಿದ್ವಾಂಸರು ಹೇಳಿರುವಂತೆ, 'ಆದಿ ಮಾನವನ ಲೋಕದೃಷ್ಟಿಯ ಅಭಿವ್ಯಕ್ತಿಯೇ ಪುರಾಣ. ಅದೊಂದು ನಿರೂಪಣೆ, ಮನುಷ್ಯ ತಾನು ಪರಿಸರಕ್ಕೆ ಹೊಂದಿಕೊಂಡು ಬಾಳಲಾರಂಭಿಸಿದ ಕಾಲಕ್ಕೆ ಪರಿಸರದ ಭೌತಿಕ ಜಗತ್ತು ಹಾಗೂ ಪಕ್ಷಿ, ಪ್ರಾಣಿ ಪರಿಸರಗಳ ಹುಟ್ಟು-ಸಾವಿನ ಬಗೆಗೆ ತಳೆದ ಊಹಾತ್ಮಕ ವಿಚಾರಗಳ ಮೊತ್ತ. ಮೊದಲು ಪ್ರಾಚೀನ ಘಟನಾವಳಿಗಳು, ಪಳಗತೆಗಳು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಇವು ನಂತರದ ಕಾಲಕ್ಕೆ ಪುರಾಣ ಎಂಬುದಾಗಿ ಕರೆಸಿಕೊಂಡಿವೆ'. ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ಕುರಿತಂತಿರುವ ಆದಿ ಮಾನವನ ಕಲ್ಪನೆಗಳೇ ಪುರಾಣಗಳು. ಇವುಗಳ ಪ್ರಧಾನ ಉದ್ದೇಶ ವಿವರಣೆ, ಸಮರ್ಥನೆ, ಶಿಕ್ಷಣ, ಪುನರ್ ನವೀಕರಣ ಮತ್ತು ಸ್ಪೂರ್ತಿಯನ್ನು ಹುಟ್ಟಿಸುವುದು. ಈ ಮಾತನ್ನು ಇನ್ನಷ್ಟು ವಿವರಿಸುವುದಾದರೆ, ಜಗತ್ತು ಹೀಗೇ ಯಾಕೆ ಇದೆ ಎಂಬ ಸಹಜ ಕುತೂಹಲಕ್ಕೆ ಇರುವ ಉತ್ತರಗಳೇ ಪುರಾಣಗಳು. ಇವು ತಾವು ಮಂಡಿಸುವ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಇವುಗಳನ್ನು ಪುರಾಣಗಳಿಗಿರುವ ಅಧಿಕಾರ ಹಾಗೂ ಗೌರವದ ಸ್ಥಾನಮಾನಗಳು ಸತ್ಯವೆನ್ನುವಂತೆ ನಂಬಿಸುತ್ತವೆ. ಹೀಗೆ ಜನರಿಗೆ ಜಗತ್ತಿನ ಚರಾಚರ ವಸ್ತು ವಿಷಯಗಳ ಉಗಮ-ವಿಕಾಸವನ್ನು ಕುರಿತು ಹೇಳುವುದರಿಂದ ಇದು ಶಿಕ್ಷಣದ ಒಂದು ಕ್ರಮವೂ ಹೌದು. ಮಾನವ ಒಂದು ಕಾಲಕ್ಕೆ ತಾನು ಊಹಿಸಿದ ಸಂಗತಿಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗು ರವಾನಿಸುವ ಮೂಲಕ ಜಗತ್ತಿನ ಬಗ್ಗೆ ಒಂದು ಬಗೆಯ ತಿಳುವಳಿಕೆಯನ್ನು ನೀಡುತ್ತಾನೆ. ಈ ಊಹಾತ್ಮಕ ಸಂಗತಿಗಳು ಎಲ್ಲಾ ಕಾಲ, ಧರ್ಮ, ಜಾತಿ, ಜನಾಂಗಗಳಲ್ಲಿ ಒಂದೇ ರೀತಿ ಇರಲಾರವು. ಕಾಲಕ್ಕೆ ತಕ್ಕಂತೆ ಆದಿಮಾನವನ ಕಲ್ಪನೆಗಳು ಬದಲಾವಣೆಯಾಗುತ್ತಾ ಬರುತ್ತವೆ. ಇವೆಲ್ಲವುಗಳ ಜೊತೆಗೆ ಪುರಾಣಗಳು ಲೋಕದ ನಡುವೆ ಬದುಕುವ ಮನುಷ್ಯನಿಗೆ ಈ ಮತ್ರ್ಯಲೋಕದಲ್ಲಿ ಇನ್ನಷ್ಟು ಕಾಲ ಬದುಕುವ, ಬರೀ ಬದುಕುವ ಅಲ್ಲ; ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ  ಸ್ಪೂರ್ತಿಯನ್ನು  ನೀಡುತ್ತವೆ. ವಿಶೇಷವಾಗಿ ಸಾಂಸ್ಕೃತಿಕ ನಾಯಕರನ್ನು ಕುರಿತ ಪುರಾಣಗಳು ಸಾಂಸ್ಕೃತಿಕ ನಾಯಕನ ಶೌರ್ಯ-ಸಾಹಸಗಳನ್ನು ವಿವರಿಸುವುದರ ಮೂಲಕ ಕೇಳುವವರಲ್ಲಿ ಆಸಕಿ ಮತ್ತು  ಸ್ಪೂರ್ತಿಯನ್ನು  ತುಂಬುತ್ತವೆ. 

               ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಊಹಾತ್ಮಕ ವಿವರಣೆ ನೀಡುವುದಷ್ಟೇ ಅಲ್ಲ, ಅದರಾಚೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತವೆ. ತಮ್ಮ ಬುದ್ಧಿಗೆ ನಿಲುಕದಿರುವ ವಿಷಯಗಳಿಗೂ ಕಾರ್ಯ ಕಾರಣ ಸಂಬಂಧವನ್ನು ಸೂಚಿಸುತ್ತವೆ. ಜೊತೆಗೆ ಕೆಲವು ಸತ್ಯ ಸಂಗತಿಗಳನ್ನೂ ಪುರಾಣೀಕರಿಸುತ್ತವೆ. ಪ್ರಸಿದ್ಧ ರಚನಾವಾದಿ ಲೆವಿಸ್ಟ್ರಾಸ್ ಹೇಳುವ ಹಾಗೆ ಪುರಾಣ ಎನ್ನುವುದು ಒಂದು ಭಾಷೆ. ಮಾನವನ ಸುಪ್ತ ಅಭೀಪ್ಸೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಿದ ರಚನೆಗಳಿವು. ಹೀಗೆಂದಾಕ್ಷಣ ಸಾಹಿತ್ಯಕ ಪ್ರಕಾರಗಳೆಲ್ಲವೂ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಈ ಎಲ್ಲಾ ಪ್ರಕಾರಗಳಲ್ಲಿ ಪುರಾಣಗಳ ಆಶಯಗಳಿರುತ್ತವೆ. ಹೀಗೆ ಪ್ರಾಚೀನಕಾಲದಿಂದಲೂ ಮಾನವ ತನ್ನ ಪರಿಸರದ ಸ್ವರೂಪ ಹಾಗೂ ಚಟುವಟಿಕೆಗಳಿಗೆ ಕಾರ್ಯಕಾರಣ ಸಂಬಂಧಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಹುಟ್ಟಿದ ಈ ಪುರಾಣಗಳ ಸೃಷ್ಟಿ ಅಲ್ಲಿಗೇ ನಿಂತಿಲ್ಲ. ಈ ರೀತಿಯ ರಚನೆಗಳು ಆಧುನಿಕ ಕಾಲದವರೆಗೂ ಮುಂದುವರೆದಿದೆ. ಈ ಮುಂದುವರಿಕೆ ಹೊಸ ಪುರಾಣಗಳ ಸೃಷ್ಟಿಗಿಂತ ಹಳೆಯ ಪುರಾಣಗಳನ್ನು ಹೊಸ ಅರ್ಥ ಹಾಗೂ ಆಶಯಗಳಿಗೆ ಒಗ್ಗಿಸುವ ಕಡೆ ಗಮನ ಹರಿಸುತ್ತದೆ. ಸಮಾಜದಲ್ಲಿ ಹೊಸ ದರ್ಶನಗಳು ಮೂಡಿದಾಗ ಅವುಗಳನ್ನು ಜನಪ್ರಿಯಗೊಳಿಸಲು ಸಂಪೂರ್ಣ ಹೊಸದೇ ಆದ ಪುರಾಣ ರಚನೆಯಾಗುವುದು ಅಪರೂಪ. ಏಕೆಂದರೆ ಜನ ಹೊಸದನ್ನು ಅಷ್ಟು ಸುಲಭವಾಗಿ ಶೀಘ್ರವಾಗಿ ಸ್ವೀಕರಿಸಲಾರರು. ಇಂಥ ಸಂದರ್ಭದಲ್ಲಿ ತಮ್ಮ ಮೂಲ ಆಕಾರವನ್ನು ಕಳೆದುಕೊಳ್ಳದೇ ಹೊಸ ದರ್ಶನಗಳನ್ನು ಹೇಳಲಾಗುತ್ತದೆ.

         ಹೀಗೆ ರೂಪಗೊಂಡಿರುವ ಪುರಾಣಗಳು ಯಾವಗ ರಚಿತವಾದವು ಎಂಬುದು ಮುಖ್ಯವಾದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಆಲೋಚಿಸುತ್ತಿರುವ ಹಲವು ವಿದ್ವಾಂಸರು ಕ್ರಿ.ಶ. ಆರಂಭದ ಹೊತ್ತಿಗಾಗಲೇ ಪುರಣಾಗಳು ಅಸ್ತಿತ್ವದಲ್ಲಿದ್ದವು. ವಿಶೇಷವಾಗಿ ವೈದಿಕ ಸಮುದಾಯಗಳಲ್ಲಿ ರಾಜಾಯಣ-ಮಹಾಭಾರತಗಳು ರಚನೆಯಾಗುತ್ತಿದ್ದ ಕಾಲಕ್ಕೆ ಮತ್ತೊಂದು ಕಡೆ ಪುರಾಣಗಳು ರಚನೆಯಾಗುತ್ತಿದ್ದವು. ಅವುಗಳನ್ನೇ ನಾವು ಇಂದು 18 ಮಹಾಪುರಾಣಗಳು 18 ಉಪ-ಪುರಾಣಗಳು ಎಂಬುದಾಗಿ ಕರೆದುಕೊಳ್ಳುತ್ತಿದ್ದೇವೆ. ಆ ಕಾಲಕ್ಕೆ ವೇದಗಳು ಪ್ರಧಾನ ಸಾಹಿತ್ಯ ಸಾಮಗ್ರಿಗಳಾಗಿ ನೆಲೆನಿಂತಿದ್ದರೂ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ಸು ಕಂಡಿರಲಿಲ್ಲ. ಕಾರಣ ಸಾಮಾನ್ಯ ಜನ ಹಾಗೂ ವಿಶೇಷವಾಗಿ ಕೆಳಜಾತಿಯ ಜನ ವೇದಗಳನ್ನು ಓದಲು ಅರ್ಹರಲ್ಲ ಎಂಬ ಹೇರಿಕೆ ಇತ್ತು. ಜೊತೆಗೆ ಸ್ವತಃ ವೇದಗಳೇ ಕಠಿಣ ರಚನೆಗಳಾಗಿದ್ದವು. ಈ ಕಾರಣಕ್ಕಾಗಿ ವೇದಗಳು ಜನರಿಂದ ದೂರವಾಗಲಾರಂಭಿಸಿದವರು. ಈ ಅಭಿಪ್ರಾಯವನ್ನು ತಪ್ಪಿಸುವ ಸಲುವಾಗಿ ವೇದಗಳನ್ನೇ ಅತ್ಯಂತ ಸರಳವಾದ ಜನಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಲಾಯಿತು. ಅದರ ಫಲವೇ 18 ಮಹಾಪುರಾಣಗಳು, 18 ಉಪಪುರಾಣಗಳ ಸೃಷ್ಟಿ. ಈ ಕಾರಣಕ್ಕಾಗಿಯೇ ಇರಬೇಕು, ಪುರಾಣಗಳನ್ನು ಐದನೇ ವೇದ ಎಂಬುದಾಗಿ ಕರೆಯಲಾಗಿದೆ. ಇವುಗಳಲ್ಲಿ ಆದಿಮಾನವನ ಕಲ್ಪನೆಗಳಿದ್ದು ಇವು ಒಂದು ರೀತಿಯಲ್ಲಿ ಪುರಾಣದ ಆಶಯ-ಸ್ವರೂಪಗಳನ್ನು ಪಡೆದಿವೆ ಎಂಬುದು ಗಮನಾರ್ಹ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಜನಪದರಲ್ಲಿ ಅವರವೇ ಆದ ನಂಬಿಕೆ-ಸಂಪ್ರದಾಯ-ಹಾಡು-ಕಥೆಗಳಿದ್ದವು. ಈ ಹೊತ್ತಿಗೂ ಜನಪದರಲ್ಲಿ ಪ್ರಚಲಿತವಿರುವ ಆಚರಣೆಗಳಲ್ಲಿ ಅಂತಹ ಆಶಯಗಳನ್ನು ಗುರುತಿಸಬಹುದಾಗಿದೆ. 

          ಮುಖ್ಯವಾಗಿ, ಪುರಾಣಗಳಿಗೆ ವ್ಯವಸ್ಥಿತ ರೂಪ ಕೊಟ್ಟು ತಮ್ಮ ಉದ್ದೇಶಗಳ ಈಡೇರಿಕೆಗೆ ಬಳಸಿಕೊಂಡಿದ್ದು ಮಾತ್ರ ವೈದಿಕ ಧಮ್. ತದನಂತರ ಈ ತಂತ್ರವನ್ನು ಎಲ್ಲಾ ಧರ್ಮಗಳು ಉಪಯೋಗಿಸಿಕೊಂಡು ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಂಡವು. ಜೈನಧರ್ಮದ ತೀರ್ಥಂಕರ ಚರಿತೆಗಳು, ಶೈವಸಂತರ ಚರಿತ್ರೆಗಳು ವಿಶೇಷವಾಗಿ ಸೃಷ್ಟಿಯಾಗಿರುವುದನ್ನು ನೋಡಬಹುದು. ಹೀಗೆ ಧರ್ಮ ಪ್ರಚಾರದ ಆಶಯವನ್ನೇ ಕೇಂದ್ರವಾಗಿಸಿಕೊಂಡ ಪುರಾಣಗಳಿಗೆ ಸಂಕೀರ್ಣತೆ ಬಂದೊದಗಿತು. ಇದನ್ನು ರಾಜಾರಾಮ ಹೆಗಡೆಯವರು ಹೀಗೆ ವಿವರಿಸುತ್ತಾರೆ: ಪುರಾಣಗಳು ವೈದಿಕ ಅವೈದಿಕ ಧಾರೆಗಳೆರಡರಲ್ಲಿ ಸಮ್ಮಿಶ್ರ ರೂಪಗಳಿರುತ್ತವೆ. ಯಾವೊಂದು ಗುಂಪಿನ ಪುರಾಣಗಳು ಕೂಡಾ ತನ್ನಷ್ಟಕ್ಕೆ ತಾನೇ ಸ್ವಯಂಭೂ ಆಗಿರುವುದಿಲ್ಲ. ಏಕೆಂದರೆ ಇದೊಂದು ಸಾಂಸ್ಕೃತಿಕ ಉತ್ಪನ್ನ. ಹಾಗಾಗಿ ಇತಿಹಾಸದ ವಿಭಿನ್ನ ಸಂದರ್ಭಗಳನ್ನು ಹೊಂದುತ್ತ, ಹಿಗ್ಗುತ್ತಾ, ರೂಪಾಂತರಗೊಳ್ಳುತ್ತಾ ಹೋಗುತ್ತವೆ. ಹಾಗಾಗಿ, ಈ ಪುರಾಣಲೋಕ ಒಂದು ಸಮ್ಮಿಶ್ರ ಸಂಪ್ರದಾಯವಾಗಿ ಕಂಡುಬರುತ್ತದೆ. ಆದ್ದರಿಂದ ಪುರಾಣಗಳು ಇಡಿಯಾಗಿ ಯಾವುದೇ ಒಂದು ಧರ್ಮದ ಸಂಪ್ರದಾಯವನ್ನು ಪ್ರತಿಪಾದಿಸಬೇಕೆಂದೇನೂ ಇಲ್ಲ. ಕೂರ್ಮ ಪುರಾಣದಲ್ಲಿ ರುದ್ರನೇ ಶೈವ ಸಂಪ್ರದಾಯದಲ್ಲಿ ಸೇರಿದ ಕಾಪಾಲಕರನ್ನು ಹಳಿಯುವಂತೆ ಚಿತ್ರಿಸಲಾಗಿದೆ. ವೃಷ್ಣವ ಸಂಪ್ರದಾಯ ಶಿವನನ್ನು ವಿಷ್ಣುವಿನ ಅಧೀನಕ್ಕೆ ತಂದು ದಂತ ಕಥೆಗಳನ್ನು ಸಷ್ಟಿಸಿದರೆ; ಅದೇ ದಂತ ಕಥೆಯಲ್ಲಿ ಶಿವನನ್ನು ಎತ್ತಿ ಹಿಡಿಯುವ ಶೈವ ಪಾಠವೊಂದು ಬಂದಿರುತ್ತದೆ. ಪುರಾಣಗಳಲ್ಲಿ ಇಂಥ ಹಲವು ದಂತಕಥೆಗಳನ್ನು ನೋಡಬಹುದು. ಶಿಷ್ಟಪರಂಪರೆಯ ಪಂಡಿತರಿಂದ ವ್ಯಕ್ತವಾಗುವ ವಿಚಾರಗಳಿವು. ಈ ಪರಂಪರೆಗಿಂತ ಭಿನ್ನವಾದ ದೃಷ್ಟಿ - ಧೋರಣೆಗಳಿರುವ ಜನಪದರು ಇದೇ ಪರಂಪರೆಯ ಪುರಾಣಗಳನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ? ಹಾಗೂ ಅವರು ಕಟ್ಟಿಕೊಂಡಿರುವ ಜನಪದ ಪುರಾಣಗಳ ಸ್ವರೂಪವೇನು ಎಂಬುದು ವಿಚಾರಾರ್ಹ. ಹಾಗಾಗಿ, ಮೊದಲಿಗೆ ಜನಸಾಮಾನ್ಯರು ಪುರಾಣಗಳನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು. 

           ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಹುತೇಕ ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಆಶ್ರಯಿಸಿದ್ದು ಅರಣ್ಯವಾಸಿ ಮತ್ತು ಕೃಷಿಕರಂಥ ಶ್ರಮಸಂಸ್ಕೃತಿಯ ಜನರನ್ನೇ. ಈ ಪ್ರಕ್ರಿಯೆಯೊಳಗೆ ಹಲವಾರು ಸಮುದಾಯಗಳು ತಮ್ಮ ಅನನ್ಯತೆಯನ್ನು ಕಳೆದುಕೊಂಡವು. ಮತ್ತೆ ಕೆಲವು ಅನನ್ಯತೆಯ ಉಳಿವಿಗಾಗಿ ಹೋರಾಡಿದವು. ಈ ಹೋರಾಟಗಳು ಯಾವ ಸ್ವರೂಪದಲ್ಲಿದ್ದವು ಎಂಬುದಕ್ಕೆ ನಿಖರವಾದ ಯಾವ ಆಧಾರಗಳೂ ಇಲ್ಲ. ಆದರೂ ಭಾಷಾಭಿವ್ಯಕ್ತಿಗಳಿಂದ ಪ್ರತಿಭಟನೆ ಮಾಡಿದ್ದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕೆ ಇಂದಿಗೂ ಸಮುದಾಯಗಳಲ್ಲಿ ಪ್ರಚಲಿತವಿರುವ ಪುರಾಣಗಳು ಸಮರ್ಥ ಉದಾಹರಣೆಯಾಗಬಲ್ಲವು. ಈ ಕಾಲದ ಜನಪದ ಪುರಾಣಗಳು ಶಾಸ್ತ್ರೀ ಪುರಾಣಗಳ ಅನುಕರಣೆ ಎಂಬಂತೆ ಇವೆ. ಆದರೆ ಅವುಗಳ ಆಳದಲ್ಲಿ ಶಾಸ್ತ್ರೀಯ ಧಾರೆಯ ಮೌಲ್ಯಗಳನ್ನು ಟೀಕಿಸುವ, ಅವುಗಳನ್ನು ಮೀರುವ ಪ್ರಯತ್ನಗಳಿವೆ. ಜೊತೆಗೆ ಆ ಮೌಲ್ಯಗಳ ಸ್ಥಾನದಲ್ಲಿ ಅವರದೇ ಜಗತ್ತಿನೊಳಗೆ ಚಾಲ್ತಿಯಲ್ಲಿದ್ದ ಮೌಲ್ಯಗಳು ತುಂಬಿಕೊಂಡಿವೆ. ಜನಪದ ಪುರಾಣಗಳು ಇಂಥ ರೂಪಾಂತರ ಕಂಡ ಕಾಲ ಯಾವುದು? ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ಸದ್ಯ ನಮಗೆ ಲಭಿಸಿರುವ ಐತಿಹ್ಯ ಪುರಾಣಗಳ ಸ್ವರೂಪವನ್ನು ಗಮನಿಸಿದರೆ 15, 16, 17ನೇ ಶತಮಾನದಿಂದಲೇ ಸೃಷ್ಟಿಯಾದಂತೆ ತೋರುತ್ತದೆ. .......................... ಇದನ್ನು ಒಪ್ಪಿಕೊಂಡರೆ, 15, 16, 17ನೇ ಶತಮಾನದ ಸಾಮಾಜಿಕ, ಆಥರ್ಿಕ, ಧಾಮರ್ಿಕ ಸಂರಚನೆಗಳು ಐತಿಹ್ಯ ಮತ್ತು ಪುರಾಣಗಳ ಸೃಷ್ಟಿಗೆ ಕಾರಣವಾಗಿರಬೇಕೆಂದು ಊಹಿಸಬಹುದು. ಇದಕ್ಕೆ ಪುಷ್ಟಿನೀಡುವಂತೆ ಅನೇಕ ಜನಪದ ಮಹಾಕಾವ್ಯಗಳ ಹುಟ್ಟು ಇದೇ ಕಾಲಮಾನದಲ್ಲಿ ಓಡಾಡುತ್ತಿರುವುದು ಗಮನಾರ್ಹ. ಈ ಕಾಲ ಭಕ್ತಿ ಪಂಥದ ಕಾಲ, ಈ ಭಕ್ತಿಪಂಥ ಮಾಡಿದ ಮುಖ್ಯ ಕೆಲಸವೆಂದರೆ ಆದಿವಾಸಿ, ಕೆಳಜಾತಿಗಳ ಮೂಲಧರ್ಮದ ನಿರಾಕರಣೆ. ಇದಕ್ಕೆ ಕಾರಣ ಕಲ್ಲು, ಮರ, ಮೊದಲಾದ ಕ್ಷುದ್ರ ದೇವತೆಗಳು ಇವರವೆಂಬುದು. ಹೀಗೆ ಕೆಳಜಾತಿಗಳ ದೈವಗಳನ್ನು ನಿರಾಕರಿಸಿ, ಹೊಸ ರೀತಿಯ ಧರ್ಮದ ಪ್ರತಿಷ್ಠಾಪನೆಗೆ ಪ್ರಯತ್ನಿಸಿತು ಪರಿಣಾಮ, ಕೆಳ ಜಾತಿಗಳು ತಮ್ಮ ಮೂಲ ಧರ್ಮ, ದೇವತೆಗಳನ್ನು ಕಾಯ್ದಿಟ್ಟುಕೊಳ್ಳುವ ತಂತ್ರವಾಗಿ ಇಂಥ ಪುರಾಣ ಕಾವ್ಯಗಳನ್ನು ಕಟ್ಟಿಕೊಂಡಿರಬಹುದೆಂದು ಊಹಿಸಬಹುದಾಗಿದೆ.

          'ಪುರಾಣ'ವನ್ನು ಕುರಿತ ಹಾಗೆ ಪ್ರಾಚೀನ ಕಾಲದಿಂದಲೂ ಇರುವ ವಿವಿಧ ರೀತಿಯ ಅರ್ಥಗ್ರಹಿಕೆಗಳಲ್ಲಿ ಜನಪದರ ಗ್ರಹಿಕೆಯೊಂದಿದೆ ಎಂಬುದು ವಿಶೇಷ. ಸಾಮಾನ್ಯ ಜನತೆಯ ಪುರಾಣದ ವ್ಯಾಖ್ಯಾನ ಅತ್ಯಂತ ಕುತೂಹಲಕರವಾದುದು. ಇವರು ಪುರಾಣದ ಹಿನ್ನೆಲೆ ಮುನ್ನೆಲೆಗಳನ್ನು ತಾತ್ವಿಕವಾಗಿ ಗ್ರಹಿಸದೇ ಹೋದರೂ, ಅವು ಅರ್ಥವಾದಷ್ಟನ್ನು ಸ್ಪಷ್ಟವಾಗಿ ಹೇಳಬಲ್ಲರು. ಈ ಹಿನ್ನೆಲೆಯಲ್ಲಿ ಪ್ರಚಲಿತವಿರುವ ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಗಮನಿಸುವುದರ ಮೂಲಕ ಪುರಾಣದ ಬಗ್ಗೆ ಜನಸಾಮಾನ್ಯರಿಗಿರುವ ದೃಷ್ಟಿಕೋನವನ್ನು ನೋಡಬಹುದು. 
                             1) ಪುರಾಣ ಹೇಳೋಕೆ; ಬದನೆಕಾಯಿ ತಿನ್ನೋಕೆ 
                             2) ಪುರಾಣ ಕೇಳಿ ಪರಾಣ (ಪ್ರಾಣ) ಹೋಯಿತು 
                             3) ಪುರಾಣ ಹೇಳ್ಬೇಡ
                             4) ರಾತ್ರಿಯೆಲ್ಲ ರಾಮಾಯಣ ನೋಡಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕೆಂದನಂತೆ 
                             5) ಪೂರ್ವಿಕರು ಹೇಳಿದ್ದು ಪುರಾಣ; ಊರ್ವಿಕರು ಹೇಳಿದ್ದು ಗಾದೆ 
         ಮೇಲಿನ ನುಡಿಗಟ್ಟುಗಳಲ್ಲಿ, ಮೊದಲನೆಯ ನುಡಿಗಟ್ಟು ಪುರಾಣಗಳನ್ನು ವಾಸ್ತವ, ಅವಾಸ್ತವ ಎಂಬೆರಡು ನೆಲೆಗಳಿಂದ ವಿವರಿಸುತ್ತದೆ. ಇಲ್ಲಿ ಪುರಾಣ ಹೇಳೋಕೆ ಮಾತ್ರ ಎಂಬ ಮಾತಿನಿಂದ ಅದೊಂದು ಅವಾಸ್ತವತೆಯಿಂದ ಕೂಡಿದ್ದು, ಬರೀ ನುಡಿ, ತಾತ್ವಿಕ ದೃಷ್ಟಿ ಎಂಬರ್ಥ ಹೊರಡುತ್ತದೆ. ಮುಂದಿನ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವ ನೆಲೆಯುಳ್ಳದ್ದು. ಎರಡನೇ ನುಡಿಗಟ್ಟು ಪುರಾಣವೆಂದರೆ, ದೀರ್ಘವಾದುದು ಆದರೆ, ಜೀವನ ಮಾತ್ರ ಅಲ್ಪಕಾಲಾವಧಿಯುಳ್ಳದ್ದು. ಮನುಷ್ಯನ ಜೀವಿತಾವಧಿ ಮುಗಿದರೂ ಪುರಾಣ ಮುಗಿಯಲಾರದು ಎಂಬರ್ಥ ಸ್ಫುರಿಸುತ್ತದೆ. ಇದೇ ನೆಲೆಯಲ್ಲಿ ಮೂರನೇ ನುಡಿಗಟ್ಟನ್ನು ಗಮನಿಸಬಹುದಾಗಿದೆ. ಅದರಲ್ಲಿಯೂ ಕೂಡ ಪುರಾಣ ದೀರ್ಘವಾದುದು ಎಂಬರ್ಥ ಬರುವಂತೆ ಹೇಳಲಾಗಿದೆ. ಹಾಗೆಯೇ ಅವಾಸ್ತವ ಎಂಬರ್ಥ ಹೊಳೆಯುತ್ತದೆ. ಇನ್ನು ನಾಲ್ಕನೇ ನುಡಿಗಟ್ಟು ಪುರಾಣದ ಸಂಕೀರ್ಣತೆಯ ಕಡೆಗೆ ಗಮನಕೊಡುತ್ತದೆ. ರಾತ್ರಿಯೆಲ್ಲ ರಾಮಾಯಣ ಕಥೆ ನೋಡಿದರೂ ರಾಮ ಸೀತೆಯರ ಸಂಬಂಧಗಳು ಅರ್ಥವಾಗದೇ ಉಳಿಯುತ್ತವೆ. ಹಾಗಾಗಿ ಪುರಾಣವೆಂಬುದು ಅಷ್ಟೊಂದು ಸಂಕೀರ್ಣ ಸ್ಥಿತಿಯದ್ದು. ಐದನೇ ನುಡಿಗಟ್ಟಾದರೂ ಪುರಾಣದ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಆದಿ ಮಾನವನ ಕಲ್ಪನೆ ಅಥವಾ ಊಹೆಯ ಅಭಿವ್ಯಕ್ತಿಯಾಗಿ ಪುರಾಣಗಳನ್ನು; ಅನುಭವದ ಮಾತಾಗಿ ಗಾದೆಯನ್ನು ಪರಿಭಾವಿಸಿರುವುದು ಸ್ಪಷ್ಟವಾಗುತ್ತದೆ. 

      ಒಟ್ಟಾರೆ, ಪುರಾಣವೆಂದರೆ ಪುರಾತನವಾದುದು, ಪುರಾತನ ಮಾನವನ ಊಹಾತ್ಮಕ ಮಾತು, ಧೀರ್ಘವಾದುದು, ಸಂಕೀರ್ಣವಾದುದು ಎಂಬರ್ಥದಲ್ಲಿ ಸಾಮಾನ್ಯ ಜನತೆ ಅರ್ಥೈಸಿರುವುದು ಸ್ಪಷ್ಟವಾಗಿದೆ. ಇದರ ಜೊತೆಗೆ ಸೂಕ್ಷ್ಮವಾಗಿ ಗಮನಿಸಿದರೆ ಪುರಾಣದ ಬಗೆಗೆ ಮೇಲಿರುವ ಜನಸಾಮಾನ್ಯರ ಹೇಳಿಕೆಗಳು ಪುರಾಣಗಳನ್ನು ನೇತ್ಯಾತ್ಮಕವಾಗಿ ನೋಡಿರುವುದು ಸ್ಪಷ್ಟವಾಗುತ್ತದೆ. ಶಿಷ್ಟ ಪರಂಪರೆಗಳು ಸೃಷ್ಟಿಸಿ ಇವರ ನಡುವೆ ಚಲಾವಣೆಗೆ ಬಿಟ್ಟಿದ್ದ ಪುರಾಣಗಳನ್ನು ಹೀಗೆ ನೋಡಿದ ಈ ಮನಸ್ಸುಗಳು ತಾವು ಸೃಷ್ಟಿಸಿದ ಪುರಾಣಗಳಿಗೆ ಯಾವ ಸ್ವರೂಪ ನೀಡಿವೆ ಎಂಬುದು ಕುತೂಹಲಕರವಾದುದು. ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

  ಜನಪದ - ಶಿಷ್ಟ ಪುರಾಣಗಳು

 ಪುರಾಣಗಳನ್ನು ಶಿಷ್ಟ-ಜಾನಪದ ಎಂಬುದಾಗಿ ವಿಂಗಡಿಸಿ ನೋಡುವುದು ಅಂತಿಮವಾಗಿ ಯಾವುದೇ ಬಹುದೊಡ್ಡ ಫಲಿತ ನೀಡಲಾರದು. ಆದರೂ ಎರಡು ವಿಭಿನ್ನ ಗುಂಪುಗಳ ಸೃಷ್ಟಿಗಳನ್ನು ಸೂಕ್ಷ್ಮ ಅಧ್ಯಯನಕ್ಕೊಳಪಡಿಸುವ ಕಾರಣಕ್ಕಾಗಿ ಇಂಥ ವಗರ್ೀಕರಣ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ: ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳೆರಡರ ಮೂಲ ಸಾಮಗ್ರಿಗಳು ಮನೋಬಿಂಬಗಳು, ಪ್ರತಿಮೆಗಳಂಥ ಸ್ವಪ್ನ ಪ್ರತೀಕಗಳೇ ಆಗಿವೆ. ಎರಡರಲ್ಲಿಯೂ ಹೇರಳವಾದ ಬ್ರಾಮಕಗಳಿರುತ್ತವೆ. ಅಪ್ಪ-ಅಮ್ಮ, ಗಂಡ-ಹೆಂಡತಿ, ಮಗ-ಮಗಳು, ಕಾಮ-ಪ್ರೇಮ, ಹುಟ್ಟು-ಸಾವು, ಲೌಕಿಕ-ಅಲೌಕಿಕ ಪ್ರತೀಕಗಳು ಎರಡರಲ್ಲಿಯೂ ಇರುತ್ತವೆ. ಎರಡರಲ್ಲಿಯೂ ಸಂಸ್ಕೃತಿಯ ವೀರನೊಬ್ಬನ ಮೂಲಕ ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ಕೆಲವು ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

        ಲಿಖಿತ ಅಥವಾ ಶಿಷ್ಟಪುರಾಣಗಳು ಅಧಿಕಾರದ ನೆಲೆಯ ಸೃಷ್ಟಿಗಳು. ಇವುಗಳಲ್ಲಿ ಬಹುತೇಕ ಸುಖಾಂತ ನಿರೂಪಣೆಯುಳ್ಳವು. ಇಲ್ಲಿಯ ನಾಯಕ ಹುಟ್ಟುತ್ತಲೇ ಮಹಾನ್ ವ್ಯಕ್ತಿಯಾಗಿದ್ದು, ಕೊನೆಗೆ ಅಮರನಾಗುತ್ತಾನೆ. ಸಾವು ಈತನ ಹತ್ತಿರ ಸುಳಿಯುವುದಿಲ್ಲ. ಇಲ್ಲಿ ಬರುವ ಹೋರಾಟಗಳು ರಕ್ಷಣಾತ್ಮಕವಾಗಿರುತ್ತವೆ. ಸಾಮ್ರಾಜ್ಯ ಉಳಿಸಿಕೊಳ್ಳುವಿಕೆ, ಸಮರ್ಥವಾಗಿ ಮೂಡಿಬಂದರೆ ಮಾತ್ರ ಸಮೂಹದ ಪ್ರತಿಬಿಂಬಗಳಾಗುತ್ತವೆ. ಮೌಖಿಕ ಅಥವಾ ಜನಪದ ಪುರಾಣಗಳಾದರೋ ಸಮಾಜದ ನೊಂದ ಜನತೆಯ ದನಿಗಳು. ಬಹುತೇಕ ಜನಪದ ಪುರಾಣಗಳು ದುಃಖಾಂತ ನಿರೂಪಣೆಗಳಾಗಿವೆ. ಸಾಮಾನ್ಯವಾಗಿ ಇಲ್ಲಿಯ ಹೆಚ್ಚಾನುಹೆಚ್ಚು ನಾಯಕರು ಮಧ್ಯೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಕಾರಣ ಇಲ್ಲಿಯ ನಾಯಕರು ಸಾಮಾನ್ಯ ಜನತೆಯ ಸ್ವರೂಪದಲ್ಲಿ ಬಂದವರು. ಶಿಷ್ಟನಾಯಕರಿಗಿದ್ದಂತಹ ದೈವತ್ವ ಇಲ್ಲಿಯ ನಾಯಕರಿಗಿಲ್ಲ. ಹಾಗಾಗಿ ಇಲ್ಲಿಯ ನಾಯಕರು ಸಾಧನೆಯಿಂದ ಮೇಲೇರುತ್ತಾರೆ. ಇಡೀ ಪುರಾಣಗಳಲ್ಲಿ ನಾಯಕರ ಹೋರಾಟದ ನೆಲೆ ಸೃಷ್ಟ್ಯಾತ್ಮಕ ನೆಲೆಯುಳ್ಳದ್ದು. ಇಲ್ಲಿ ಯಾವುದೇ ಸಾಮ್ರಾಜ್ಯದ ಅಥವಾ ಅಧಿಕಾರದ ವಿಸ್ತರಣೆ ಅಥವಾ ಉಳಿವಿಗಾಗಿ ಹೋರಾಟ ನಡೆಯುವುದಿಲ್ಲ. ಬದಲಿಗೆ ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಡುತ್ತಾರೆ. ಅಧಿಕಾರ ಪಡೆಯುವ ಆಸಕ್ತಿಯೂ ಕೆಲವೊಮ್ಮೆ ಇದ್ದಿರಬಹುದು. ಒಟ್ಟಾರೆ ಸಾಮೂಹಿಕ ಅಭಿವ್ಯಕ್ತಿಯಾಗಿರುವ ಇವು ಸಮುದಾಯಗಳ ಅನುಭವಗಳಿಂದ ಮೂಡಿಬಂದವುಗಳು. 

ಪುರಾಣ ಮತ್ತು ಚರಿತ್ರೆ 

ಜಗತ್ತಿನ ಸಂಗತಿಗಳ ಬಗ್ಗೆ ಮಾನವ ಊಹಿಸಿ ಕಟ್ಟಿದ ಕಥೆಗಳೇ ಪುರಾಣಗಳಾದವು. ಜೊತೆಗೆ ಚರಿತ್ರೆಯ ಘಟನೆಗಳೂ ಕಾಲಾನಂತರ ಪುರಾಣಗಳಾದವು. ಇವೆರಡು ಮಾತುಗಳು ಪುರಾಣ ಮತ್ತು ಚರಿತ್ರೆಯ ಸಂಬಂಧಗಳ ಕುರಿತು ವಿವೇಚಿಸಲು ಹಚ್ಚುತ್ತವೆ. ನಮ್ಮಲ್ಲಿ ಪುರಾಣಗಳನ್ನು ಎರಡು ಅತಿರೇಖದ ನೆಲೆಗಳಲ್ಲಿ ಗ್ರಹಿಸಲಾಗಿದೆ.

 1. ಪುರಾಣಗಳು ಆದಿಮಾನವನ ಊಹೆಗಳು. ಧಾಮರ್ಿಕ ಪುಣ್ಯ ಕಥೆಗಳು
 2. ಪುರಾಣಗಳು ಚರಿತ್ರೆಗಳೇ ಆಗಿವೆ. 

 ಇವುಗಳಲ್ಲಿ ಮೊದಲನೆಯದು ಭಕ್ತರನ್ನು ಕೇವಲ ಕೇಳುವ ಭಕ್ತರನ್ನಾಗಿಸುವ ಪ್ರಯತ್ನ ಮಾಡಿದರೆ; ಎರಡನೆಯದು ಪುರಾಣಗಳ ಅನೇಕ ಕಲ್ಪನೆಗಳನ್ನು ಚರಿತ್ರೆಯ ಘಟನೆಗಳೆಂದೇ ನಂಬಿಸುವ ಮನೋಭಾವ ಹೊಂದಿದೆ. ಹಾಗಾದರೆ ಪುರಾಣ ಮತ್ತು ಚರಿತ್ರೆಗಳ ಸಂಬಂಧ ಎಂಥದ್ದು? ಎಂಬುದು ಇಲ್ಲಿಯ ಪ್ರಶ್ನೆ. ಪುರಾಣ ಮತ್ತು ಚರಿತ್ರೆ ಸಂಪೂರ್ಣ ಪ್ರತ್ಯೇಕ ಅಸ್ತಿತ್ವ ಹೊಂದಿರುವಂಥವು. ಆದರೆ ತೀರಾ ಹತ್ತಿರದ ಸಂಬಂಧಗಳನ್ನೂ ಪಡೆದಿರುವುದು ಸಹ ಅಷ್ಟೇ ಸತ್ಯ. ಪುರಾಣದೊಳಗೆ ಚರಿತ್ರೆ ಇರುವುದನ್ನು ವಿವರಿಸುತ್ತಾ ಬರಗೂರು ರಾಮಚಂದ್ರಪ್ಪ ಹೀಗೆನ್ನುತ್ತಾರೆ. ಪುರಾಣಗಳ ವಿವರಗಳೆಲ್ಲ ನಿಜವಾಗಿ ನಡೆದ ಘಟನೆಗಳಲ್ಲ. ಪುರಾಣದ ಪಾತ್ರಗಳೆಲ್ಲ ಹಿಂದೆ ಜೀವಂತವಿದ್ದ ವ್ಯಕ್ತಿಗಳಲ್ಲ. ಆದರೆ ಪುರಾಣಗಳಲ್ಲಿ ಸಮಾಜ ಹಾಗೂ ಸಾಂಸ್ಕೃತಿಕ ಚಾರಿತ್ರಿಕ ವಿನ್ಯಾಸಗಳು ಇರುತ್ತವೆ. ಪುರಾಣದ ಪಾತ್ರಗಳು ಬದುಕಿನ ವ್ಯಕ್ತಿ ರೂಪಕಗಳಾಗಿರುತ್ತವೆ. ನಿದರ್ಿಷ್ಟ ಸ್ವಭಾವ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ಅರ್ಥಪೂರ್ಣವಾಗಿದೆ. 

          ಜನಪದ ಪುರಾಣಗಳು ಆಳುವ ವರ್ಗ ಮತ್ತು ಆಳುವ ವರ್ಗ ಪ್ರತಿಪಾದಿಸಿರುವ ಮೌಲ್ಯಗಳನ್ನು ಪ್ರಬಲವಾಗಿ ವಿರೋಧಿಸಿವೆ. ಹಾಗೂ ಹೊಸ ಮೌಲ್ಯ ಪ್ರಪಂಚದ ಕನಸ್ಸೊಂದನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ ಜನಪದ ಪುರಾಣ ಹಾಗೂ ಶಿಷ್ಟ ಪುರಾಣಗಳ ನಡುವೆ ಕೆಲ ಮುಖಾಮುಖಿಗಳಿವೆ. ಹಿಂದಿನ ಭಾಗದಲ್ಲಿ ವಿಶ್ಲೇಷಿಸಿರುವಂತೆ, ಪುರಾಣಗಳ ಮೂಲ ಮಾದರಿಗಳು ಜಾನಪದದಲ್ಲಿಯೇ ಇದ್ದವು. ಆದರೆ ಅಂಥ ವಿಚಾರಗಳ ಆಧಾರದ ಮೇಲೆ ವೈದಿಕಾದಿ ಸಾಂಸ್ಥಿಕ ಧರ್ಮಗಳು ಹೊಸ ಮಾದರಿಯ ಅಂದರೆ ಧರ್ಮ ಪ್ರಚಾರಕ್ಕೆ ಯೋಗ್ಯವಾದ ಪುರಾಣಗಳನ್ನು ಸೃಷ್ಟಿಸಿದವು. ಇವುಗಳನ್ನು ಮತ್ತೆ ಜನಪದದ ಕ್ರಿಯಾಶೀಲ ಮನಸ್ಸುಗಳು ತಮ್ಮ ಅಸ್ತಿತ್ವ-ಅನನ್ಯತೆಗಳ ಪ್ರಕಟಣೆಗೆ ಬಳಸಿಕೊಂಡವು. ಹಾಗಾಗಿಯೇ ಶಿಷ್ಟ ಹಾಗೂ ಮೌಖಿಕ ಧಾರೆಗಳ ಪುರಾಣಗಳಲ್ಲಿ ಹಲವಾರು ಸಾಮ್ಯತೆಗಳಿವೆ. ನಾಯಕರ ಗುಣ-ಲಕ್ಷಣಗಳು ಮತ್ತು ವಿವಿಧ ಪಾತ್ರಗಳ ಆಳದಲ್ಲಿ ಇಂಥ ಸಂಬಂಧವಿದೆ. ಇಂಥ ಹೋಲಿಕೆಯಿಂದ ಸ್ಪಷ್ಟವಾಗುವ ಸಂಗತಿಗಳು ಹಲವಾರು. 

           ಈ ದಿಕ್ಕಿನಲ್ಲಿ ಆಲೋಚಿಸಿರುವ ವಿದ್ವಾಂಸರು ಜನಪದ ಪುರಾಣಗಳು ಒಂದಲ್ಲ ಒಂದು ರೀತಿಯಲ್ಲಿ ಶಿಷ್ಟ ಪುರಾಣಗಳಿಂದ ಪಾತ್ರಗಳನ್ನು, ಘಟನೆಗಳನ್ನು ಪರಿಕಲ್ಪನೆಗಳನ್ನು ಕಾಣಬಹುದು............... ಆ ಮೂಲಕ ಶಿಷ್ಟ ಪರಂಪರೆಯ ಕಡೆಗೆ ಸಾಗುವ ಪ್ರಯತ್ನ ನಡೆಸಿರುವುದನ್ನು ಗುರುತಿಸಬಹುದು. ಸಣ್ಣ ಸಣ್ಣ ಸಮುದಾಯಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೀರರ ಚರಿತ್ರೆಗಳು ಆ ಸಮುದಾಯಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದವು. ಪ್ರಬಲ ಸಂಸ್ಕೃತಿಯ ಪ್ರಭಾವ ಪ್ರೇರಣೆಗಳಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ವೀರರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಲು ಹವಣಿಸಿದವು. ಆಳುವ ವರ್ಗದಲ್ಲಿ ಹುಟ್ಟುವ ಅನೇಕ ಪುರಾಣಗಳ ವಿಷಯಗಳನ್ನು ಎತ್ತಿಕೊಂಡು ತನ್ನ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಡಿಸಿಕೊಂಡವು. ಪ್ರಬಲ ಕೋಮಿನ ಬೆನ್ನು ಹತ್ತಿದ ನಮ್ಮ ಕಾವ್ಯಗಳಲ್ಲಿನ ವೀರರು ತಮ್ಮ ತನವನ್ನು ಕಳೆದುಕೊಂಡರು ಎನ್ನುತ್ತಾರೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈಗಿರುವ ಜನಪದ ಪುರಾಣಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ದೃಷ್ಟಿ ಮೂಲತಃ ಶಾಸ್ತ್ರೀಯ ಸಂಪ್ರದಾಯಗಳಿಂದ ಪ್ರೇರಿತವಾದುದು. ಹಾಗೂ ತಮ್ಮ ಉದ್ದೇಶಕ್ಕೆ ತಕ್ಕ ಹಾಗೆ ರೂಪಗೊಂಡಂತಹವು. ಮೇಲಿನ ವಿದ್ವಾಂಸರ ಮಾತುಗಳಲ್ಲಿರುವ ಆತಂಕವೆಂದರೆ ಕೆಳ ಎನಿಸಿಕೊಂಡಿರುವ ಸಂಸ್ಕೃತಿಗಳು ಮೇಲ್ವರ್ಗ ಅಥವಾ ಅಧಿಕಾರದ ನೆಲೆಯ ಸಂಪ್ರದಾಯಗಳನ್ನು ಅನುಕರಿಸುವುದರ ಮೂಲಕ ತಮ್ಮ ತನವನ್ನು ಕಳೆದುಕೊಂಡರು ಎಂಬುದು. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಮೇಲೆ ಉಲ್ಲೇಖಿಸಿರುವ ವಿದ್ವಾಂಸರ ಮಾತುಗಳಲ್ಲಿನ ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಮಾರ್ಪಡಿಸಿದರು ಎಂಬಲ್ಲಿಯೇ ಅ ಸಮುದಾಯಗಳ ಅನನ್ಯತೆ ಇದೆ. ಯಾವುದೋ ಒಂದು ಸಂಸ್ಕೃತಿ ಪ್ರಬಲವಾದ ಮತ್ತೊಂದು ಸಂಸ್ಕೃತಿ ಜೊತೆ ಮುಖಾಮುಖಿಯಾದಾಗ ನೇರ ಹಾಗೂ ಖಚಿತವಾಗಿ ಪ್ರತಿಭಟನೆ ಮಾಡದೆ ಹೋದರೂ ಅಂರ್ತಮುಖಿಯಾದ ವಿರೋಧ ಇದ್ದೆ ಇರುತ್ತದೆ. ಜೊತೆಗೆ ವಿರೋಧಿಸಿದ ಮೌಲ್ಯ ಪ್ರಪಂಚಕ್ಕಿಂತ ಆರೋಗ್ಯಪೂರ್ಣ ಎನಿಸಿದ ಮತ್ತೊಂದು ಮೌಲ್ಯ ಪ್ರಪಂಚವನ್ನು ಕಟ್ಟುವ ಆಶಯಗಳಿರುತ್ತವೆ. ಸಮುದಾಯಗಳ ಇಂಥ ಪ್ರಕ್ರಿಯೆಯನ್ನು ಪ್ರತಿಸಂಸ್ಕೃತಿಯ ನಿರ್ಮಾಣ ಎನ್ನಬಹುದು. ಈ ನೆಲೆಯಲ್ಲಿ ಅದರ ಸ್ವರೂಪ ಮತ್ತು ಸಾಧ್ಯತೆಗಳ ಪ್ರಧಾನ ಚರ್ಚೆಯನ್ನು ಹೀಗೆ ಬೆಳೆಸಬಹುದು. 

        ಪುರಾಣಗಳೆಂದರೆ ವ್ಯಕ್ತಿಗಳ ಅಥವಾ ಸಮೂಹಗಳ ಸುಪ್ತ ಮನಸ್ಸಿನ ಅಭಿವ್ಯಕ್ತಿಗಳಲ್ಲದೆ ಮತ್ತೇನು ಅಲ್ಲ. ಇಂಥ ಅಭಿವ್ಯಕ್ತಿಗಳ ಸಂದರ್ಭಗಳಲ್ಲಿ ಸಹಜವಾಗಿ ಪರಂಪರೆ ಪ್ರಭುತ್ವ ಸಾಧಿಸಿದೆ. ಹಾಗೂ ಈಗಲೂ ಸಾಧಿಸುತ್ತಿದೆ. ಜೊತೆಗೆ ಇಂಥ ಪುರಾಣಗಳ ಬಗೆಗೆ ನಿರ್ಲಕ್ಷಿತ ಸಮುದಾಯದಲ್ಲಿ ಸಮ್ಮಿಶ್ರವಾದ ಅಭಿಪ್ರಾಯಗಳೂ ಇರಲು ಸಾಧ್ಯ. ಇವುಗಳಲ್ಲಿ ಪ್ರತಿಷ್ಠೆಯ ಪುರಾಣಗಳ ಬಗ್ಗೆ ಮೋಹಗೊಂಡು ಅವುಗಳನ್ನು ಅನುಕರಿಸುವ ಹಂಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ಅಂಥವುಗಳಿಂದ ನಾನೇನು ಕಡಿಮೆ? ಎನ್ನುವ ಮನೋಧರ್ಮದೊಡನೆ ಪರ್ಯಾಯ ನೆಲೆಯಲ್ಲಿ ಸೃಜಿಸುವ ಧೈರ್ಯಮಾಡುತ್ತವೆ. ಇಂತ ಸಂದರ್ಭಗಳೇ ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಗಳನ್ನು ತೋರ್ಪಡಿಸುತ್ತವೆ.

 ಕೊನೆ ಟಿಪ್ಪಣಿಗಳು 
  •  ವಿವರಗಳಿಗೆ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 4-5, 1987 
  •  ಉದ್ಧೃತ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 5, 1987
  •  ಎಲ್.ಆರ್. ಹೆಗಡೆ, ಪುರಾಣಜಿಜ್ಞಾಸೆ, ಪುಟ: 71, 1976 
  •  ಸೋಮಶೇಖರ ಇಮ್ರಾಪುರ, (ಸಂ) ಜಾನಪದ ಸಾಹಿತ್ಯ ದರ್ಶನ-15, ಪುಟ: 49-50, 1994
  •  ಓ.ಎಲ್. ನಾಗಭೂಷಣಸ್ವಾಮಿ, ಪುರಾಣ, ಪುಟ: 13,
  •  1993 ರಾಜರಾಮ ಹೆಗಡೆ, ಭಾರತೀಯ ಮೂರ್ತಿಶಾಸ್ತ್ರ......, ಅರಿವು ಬರಹ-4, ಪುಟ: 86,
  •  1993 ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ-101, 1997
  •  ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪುಟ-60, 2000 
  •  ಹಿ.ಶಿ. ರಾಮಚಂದ್ರೇಗೌಡ ಅವರ ವಿಚಾರಗಳಿಗೆ ಋಣಿ ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ: 99, 1997
  •  ಬರಗೂರು ರಾಮಚಂದ್ರಪ್ಪ,ಪುರಾಣದೊಳಗೆ ಚರಿತ್ರೆಯ ಚಡಪಡಿಕೆ,ಪ್ರಜಾವಾಣಿ (ಸಾ.ಪು),ಪುಟ:8, 25-08-2002 
  •  ತೀ.ನಂ. ಶಂಕರನಾರಾಯಣ, ಜನಪದ ಮಹಾಕಾವ್ಯ, ಪುಟ: 55, 1996
  •  ಗಂಗಾಧರ ದೈವಜ್ಞ, ಮಾಳಿಂಗರಾಯನ ಕಾವ್ಯ, ಪುಟ: 12, 1999





Wednesday 20 June 2012

ಭಾರತದಲ್ಲಿ ಉನ್ನತ ಶಿಕ್ಷಣ : ಇತ್ತೀಚಿನ ಹೊಸ ಆಯಾಮಗಳು




  ಬೇರೆ ಯಾವುದೇ ರಾಷ್ಟ್ರಗಳಿಗಿಂತ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶಿಕ್ಷಣದ ಅಗತ್ಯತೆ ಹೆಚ್ಚಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಸಮಾಜಗಳ ಸರ್ವ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಶಿಕ್ಷಣ ಪಡೆಯುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ. ಸರ್ಕಾರಕ್ಕೆ ತನ್ನ ಪ್ರಜೆಗಳಿಗೆ ಶಿಕ್ಷಣ ನೀಡುವುದು ಮೂಲಭೂತ ಕರ್ತವ್ಯವಾಗಿದೆ. ಇಂಥ ಪ್ರಜ್ಞೆಯೊಳಗೆ ನಮಗೆ ಎಂತಹ ಶಿಕ್ಷಣ ಬೇಕು ಎಂಬುದರ ಬಗ್ಗೆ ಸರ್ಕಾರಗಳು ಮತ್ತು ಪ್ರಜೆಗಳು ಸಾಕಷ್ಟು ಗಂಭೀರವಾಗಿ ಚಿಂತನ-ಮಂಥನ, ಪ್ರಯೋಗ -ಪ್ರಯತ್ನಗಳು ನಡೆಯುತ್ತಲೇ ಇವೆ

ಭಾರತದ ಶಿಕ್ಷಣ ವ್ಯವಸ್ಥೆ ಅನೇಕ ಹಂತಗಳನ್ನು ಹೊಂದಿದ್ದು , ಅವುಗಳಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಅಧ್ಯಯನ ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಪದವಿಪೂರ್ವ ಅಂದರೆ 12 ನೇ ತರಗತಿಯ ನಂತರದ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಶಿಕ್ಷಣದ ಹಂತ ಎಂಬುದಾಗಿ ಭಾರತೀಯ ಜ್ಞಾನ ಆಯೋಗವು ವ್ಯಾಖ್ಯಾನಿಸಿದೆ.ಭಾರತದ ಶೈಕ್ಷಣಿಕ ಚರಿತ್ರೆಯನ್ನು ಗಮನಿಸಿದ ಯಾರಿಗಾದರೂ ತಟ್ಟನೆ ಹೊಳೆಯುವ ಸಂಗತಿ ಎಂದರೆ ಭಾರತ ಸರ್ಕಾರ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತಕ್ಕೆ ನೀಡಿದಷ್ಟು ಮಹತ್ವವನ್ನು ಉನ್ನತ ಶಿಕ್ಷಣಕ್ಕೆ ನೀಡಿಲ್ಲ. ಇದಕ್ಕೆ ಅದರದೇ ಆದ ಅನೇಕ ಕಾರಣಗಳಿವೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ನೀಡುವುದು ಮಾತ್ರ  ಸರ್ಕಾರದ ಜವಾಬ್ಧಾರಿ ಉನ್ನತ ಶಿಕ್ಷಣ ಪಡೆಯುವುದು ಪ್ರಜೆಗಳ ಜವಾಬ್ಧಾರಿ ಎಂಬ  ಸರ್ಕಾರದ ಧೋರಣೆ ಪ್ರಮುಖ ಕಾರಣವಾಗಿದೆ. ಈ ಪರಿಸ್ಥಿತಿ 2005 ರಿಂದ ಬದಲಾಯಿತು ಇದಕ್ಕೆ ಕಾರಣವಾಗಿದ್ದು ಭಾರತೀಯ ಜ್ಞಾನ ಆಯೋಗದ ರಚನೆ. ಪ್ರಧಾನ ಮಂತ್ರಿಗಳ ಅತ್ಯುನ್ನತ ಮಟ್ಟದ ಶೈಕ್ಷಣಿಕ ಸಲಹಾ ಮಂಡಳಿಯಾದ ಇದು ಭಾರತದ ಉನ್ನತ ಶಿಕ್ಷಣದ ಸ್ಥಿತಿಗತಿಗಳನ್ನು ಅಧ್ಯಯನಮಾಡಿ, ಇಷ್ಟು ದೊಡ್ಡ ರಾಷ್ಟದ ಜನಸಂಖ್ಯೆಯಲ್ಲಿ  ಕೇವಲ ಶೇ. 7 ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆದವರಿದ್ದಾರೆ ಎಂಬ ವಾಸ್ತವವನ್ನು ಬಿಚ್ಚಿಟ್ಟಿತು. ಅಷ್ಟೆ ಅಲ್ಲದೇ ಇನ್ನು ಹದಿನೈದು ವರ್ಷಗಳಲ್ಲಿ ಅಂದರೆ 2020 ರ ವೇಳೆಗೆ ಉನ್ನತ ಶಿಕ್ಷಣದ ಪ್ರಮಾಣವನ್ನು ಕನಿಷ್ಟ ಶೇ.20 ಕ್ಕೆ ಹೆಚ್ಚಿಸಬೇಕೆಂದು ಸಲಹೆಮಾಡಿತು. ಇದರ ಪರಿಣಾಮ ಕೇಂದ್ರ ಸಕರ್ಾರ ತನ್ನ ಮೂಲ ನಿಲುವನ್ನು ಸಡಿಲಗೊಳಿಸಿ ಯುಜಿಸಿ ಯ ಮೂಲಕ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪ್ರಮಾಣ ಮತ್ತು ಪರಿಮಾಣದಲ್ಲಿ ಉನ್ನತೀಕರಿಸುವ ಪ್ರಯತ್ನ ಆರಂಭಿಸಿದೆ. ಈ ಪ್ರಯತ್ನಗಳ ಭಾಗವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗಗಳು ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದೆ . ಅದರಲ್ಲಿ ಮುಖ್ಯವಾಗಿ NAAC, CPE- UPE, Autonomous stetas, Innovative university, Deemed Universities  ಗಮನಿಸಬೇಕಾದ ಸಂಗತಿಗಳಾಗಿವೆ. ಇವುಗಳಲ್ಲಿAutonomous status, Innovative university  ಎನ್ನುವ ಹೊಸ ಪರಿಕಲ್ಪನೆಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯಬಹುದಾಗಿದೆ.

   ಅ. ಪದವಿ ಕಾಲೇಜುಗಳಿಗೆ ಸ್ವಾಯತ್ತತೆಯ ಸ್ಥಾನಮಾನ

        ಪ್ರಸ್ತುತ  ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳ ಅಂಗಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಮತ್ತು ಶೈಕ್ಷಣಿಕವಾದ ಎಲ್ಲಾ ಜವಾಬ್ದಾರಿಗಳು  ಸರ್ಕಾರ  ಮತ್ತು ವಿಶ್ವವಿದ್ಯಾಲಯಗಳದ್ದಾಗಿದೆ. ಇತ್ತೀಚೆಗೆ ಈ ಕ್ಷೇತ್ರದಲ್ಲಿ 'ಸ್ವಾಯತ್ತತೆ' ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದರೆ, ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯದ ಅನೇಕ ಪದವಿ ಕಾಲೇಜುಗಳು ಶೈಕ್ಷಣಿಕ ಸ್ವಾಯತ್ತತೆ ಪಡೆದು ಮಿನಿ ವಿಶ್ವವಿದ್ಯಾಲಯಗಳಂತೆ ಕಾರ್ಯ ನಿರ್ವಹಿಸಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ, ಸ್ವಾಯತ್ತತೆ ಎಂದರೇನು? ಅದರ ಸ್ವರೂಪವೇನು? ಇದನ್ನು ಹೇಗೆ ಮತ್ತು ಯಾಕೆ ಜಾರಿಗೆ ತರಲಾಗುತ್ತೆ. ಜಾರಿಗೆ ತರುವಲ್ಲಿ ಎದುರಿಸಬೇಕಾದ ಸವಾಲುಗಳು ಯಾವುವು? ಇದರಿಂದ ಆಗುವ ಅನುಕೂಲಗಳೇನು? ಅನಾನುಕೂಲಗಳೇನು? ಎಂಬಿತ್ಯಾದಿ ಸಂಗತಿಗಳನ್ನು ಕುರಿತು ಚಚರ್ಿಸುವ ತುತರ್ು ನಮ್ಮೆಲ್ಲರ ಮುಂದಿದೆ.

           ಇಲ್ಲಿ ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ, ಪದವಿ ಕಾಲೇಜುಗಳು ಇನ್ನು ಪಡೆಯಲಿರುವ ಸ್ವಾಯತ್ತತೆ ಕೇವಲ ಶೈಕ್ಷಣಿಕ ಸ್ವಾಯತ್ತತೆ. ಉಳಿದಂತೆ ನೇಮಕಾತಿ, ನೌಕರರ ಜವಾಬ್ದಾರಿ ಇವೇ ಮೊದಲಾದ ಹಲವು ಜವಾಬ್ದಾರಿಗಳು ಎಂದಿನಂತೆ ಸಕರ್ಾರ ಮತ್ತು ವಿಶ್ವವಿದ್ಯಾಲಯಗಳ ಕೈಯಲ್ಲೇ ಉಳಿಯಲಿವೆ. ಶೈಕ್ಷಣಿಕ ಸ್ವಾಯತ್ತತೆ ಪಠ್ಯಕ್ರಮ ರಚನೆ, ಬೋಧನಕ್ರಮ ನಿಗಧಿ, ಪರೀಕ್ಷೆ ನಡೆಸುವುದು ಮೌಲ್ಯಮಾಪನ ಮಾಡಿಸುವುದು, ಅಂಕಪಟ್ಟಿ ನೀಡುವುದು ಹೀಗೆ ಶೈಕ್ಷಣಿಕವಾದ ಸರ್ವ ಅಧಿಕಾರಗಳನ್ನು ಕಾಲೇಜುಗಳಿಗೆ ನೀಡಲಿದೆ. 

       ಈ ಶೈಕ್ಷಣಿಕ ಸ್ವಾಯತ್ತತೆಯ ಬಗ್ಗೆ 1976 ರಲ್ಲಿಯೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೀತಿಯೊಂದನ್ನು ರೂಪಿಸಿತ್ತು. ಅದರಂತೆ ಕನರ್ಾಟಕದ ಮೈಸೂರು ಮತ್ತು ಬೆಂಗಳೂರು ನಗರಗಳ ಒಂದೆರಡು ಕಾಲೇಜುಗಳು ಸೇರಿದಂತೆ ದೇಶದ ಹಲವಾರು ಕಾಲೇಜುಗಳು ಸ್ವಾಯತ್ತತೆ ಪಡೆಯುವ ಪ್ರಯತ್ನ ನಡೆಸಿ ಅನುಮತಿಯನ್ನು ಕೂಡ ಪಡೆದಿದ್ದರು. ಆದರೆ ಎಲ್ಲಿಯೂ ಈ ವ್ಯವಸ್ಥೆ ಪೂರ್ಣ ಯಶಸ್ಸು ಕಾಣಲಿಲ್ಲ. ಸ್ವಾಯತ್ತತೆಯ ಬಗ್ಗೆ ಇದ್ದ ಹುಸಿ ಭಯಗಳೇ ಯಶಸ್ಸು ಕಾಣದಿರುವುದಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. . ಈಗ ಮತ್ತೆ ಭಾರತದ ಹಲವು ಕಾಲೇಜುಗಳು ಆ ಕಡೆ ಮುಖಮಾಡುವಂತಹ ವಾತಾವರಣವನ್ನು ನಿಮರ್ಾಣಮಾಡಲಾಗಿದೆ.  ವಿಶೇಷ ಸಂಗತಿ ಎಂದರೆ ಉತ್ತರ ಭಾರತದಲ್ಲಿ ಸ್ವಾಯತ್ತ ವ್ಯವಸ್ಥೆ ಈಗಲೂ ಯಶಸ್ವಿಯಾಗಿಲ್ಲ. ಆದರೆ ದಕ್ಷಿಣ ಭಾರತದ ರಾಜ್ಯಗಳು ಅದೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕನರ್ಾಟಕದ ಬೆಂಗಳೂರು, ಮಂಗಳೂರು, ಕುವೆಂಪು ವಿಶ್ವವಿದ್ಯಾನಿಲಯಗಳ ಕೆಲವು ಕಾಲೇಜುಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿವೆ. ದೇಶದಲ್ಲಿ ಪ್ರಸ್ತುತ ಸುಮಾರು 255 ಸ್ವಾಯತ್ತ ಕಾಲೇಜುಗಳಿವೆ. ಅದರಲ್ಲಿ ತಮಿಳುನಾಡು 86 ಸ್ವಾಯತ್ತ ಕಾಲೇಜುಗಳನ್ನು ಹೊಂದಿ ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದರ ನಂತರ ಆಂದ್ರಪ್ರದೇಶ 34 ಕಾಲೇಜುಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ ಕನರ್ಾಟಕ 31 ಕಾಲೇಜುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಸ್ವಾಯತ್ತತೆ ಪಡೆಯುವುದು ಹೇಗೆ?
ಯು.ಜಿ.ಸಿ.ಯು ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಹಾಗೂ ಪದವಿ ಕಾಲೇಜುಗಳಿಗೆ ಅನೇಕ ಷರತ್ತುಗಳನ್ನು ವಿಧಿಸಿದ್ದು, ಉತ್ತಮ ಗುಣಮಟ್ಟ ಹಾಗೂ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಲು ನಿದರ್ೇಶಿಸುತ್ತಿದೆ. ಇವುಗಳ ಗುಣಮಟ್ಟವನ್ನು ಅಳೆಯಲು ಯು.ಜಿ.ಸಿ ಅನೇಕ ಸಮಿತಿಗಳನ್ನು ನೇಮಿಸಿದೆ. ಇತ್ತೀಚೆಗೆ ಕಾಲೇಜುಗಳೀಗೆ ಬೇಟಿ ನೀಡುತ್ತಿರುವ 'ನ್ಯಾಕ್' ಅಂಥ ಒಂದು ಸಮಿತಿ. ಇಂಥ ಸಮಿತಿಗಳ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ಶೈಕ್ಷಣಿಕ ಸ್ವಾಯತ್ತತೆ ಪಡೆಯಲು ಅರ್ಹವಾಗಿರುತ್ತವೆ. ಉದಾ: ಯು.ಜಿ.ಸಿ.ಯ 12ಬಿ ಮತ್ತು ಅದಕ್ಕಿಂತ ಮೇಲಿನ ಗುಂಪಿಗೆ ಸೇರಿರುವ ಕಾಲೇಜುಗಳು ಸ್ವಾಯತ್ತತೆ ಬಯಸಿ ಅಜರ್ಿ ಸಲ್ಲಿಸಬಹುದಾಗಿದೆ.

ಸ್ವಾಯತ್ತತೆ ಪಡೆಯುವುದು ಅಷ್ಟು ಸರಳವೇನಲ್ಲ. ಅರ್ಹ ಕಾಲೇಜುಗಳು ತಮ್ಮ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯ - ಸಾಧನೆ, ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಇವೇ ಮೊದಲಾದ ಮೂಲಭೂತ ಸೌಕರ್ಯಗಳ ಲಭ್ಯತೆ: ಸಾಂಸ್ಕೃತಿಕ ಸಂಘ, ಕ್ರೀಡೆ, ಎನ್.ಸಿ.ಸಿ, ಎನ್ಎಸ್ಎಸ್ ಮೊದಲಾದ ಸಹಪಠ್ಯ ಚಟುವಟಿಕೆಗಳ ಸಾಮಥ್ರ್ಯ ಹಾಗೂ ಸಾಧನಗಳೇನು? ಎಂಬೆಲ್ಲಾ ವಿವರಗಳೊಂದಿಗೆ, ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಮೂಲಕ ಯು.ಜಿ.ಸಿಗೆ ಅಜರ್ಿ ಸಲ್ಲಿಸುತ್ತವೆ. ಆ ಅಜರ್ಿಯನ್ನು ಪರಿಶೀಲಿಸಿ ಪರಿಗಣಿಸುವಂತಿದ್ದರೆ ಯುಜಿಸಿಯು ಅಂಥ ಕಾಲೇಜುಗಳನ್ನು ಪರೀಕ್ಷಿಸಲು 'ಪರಿಣಿತ ಸಮಿತಿ' ಯನ್ನು ನೇಮಿಸುತ್ತದೆ. ಪರಿಣಿತ ಸಮಿತಿಯಲ್ಲಿ ಯು.ಜಿ.ಸಿ.ಯ ಉನ್ನತ ಅಧಿಕಾರಿಗಳು, ಈಗಾಗಲೇ ಸ್ವಾಯತ್ತತೆ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಈ ಸಮಿತಿ ಅಜರ್ಿ ಸಲ್ಲಿಸಿದ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ಅರ್ಹತೆ, ಶಕ್ತಿ -ಸಾಮಥ್ರ್ಯಗಳನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ ಸ್ವಾಯತ್ತತೆ ಕೊಡಬೇಕೆ? ಬೇಡವೇ? ಎಂಬುದರ ಬಗ್ಗೆ ವರದಿಯನ್ನು ಸಿದ್ಧಪಡಿಸಿ, ಸಂಬಂಧಪಟ್ಟ ವಿಶ್ವವಿದ್ಯಾನಿಲಯ ಹಾಗೂ ಸಕರ್ಾರಕ್ಕೆ ನೀಡುತ್ತದೆ. ಅಂಥ ವರದಿಯನ್ನಾಧರಿಸಿ ವಿಶ್ವವಿದ್ಯಾನಿಲಯ ಮತ್ತು ಸಕರ್ಾರದ ಅಭಿಪ್ರಾಯಗಳ       ಅನ್ವಯ ಯುಜಿಸಿ ಸ್ವಾಯತ್ತ ಸ್ಥಾನಮಾನವನ್ನು ಘೋಷಣೆಮಾಡುತ್ತದೆ. 

ಸ್ವಾಯತ್ತ ಕಾಲೇಜಿನ ಕಾರ್ಯ ಸ್ವರೂಪ

ಸ್ವಾಯತ್ತತೆ ಪಡೆದ ಕಾಲೇಜು ಶೈಕ್ಷಣಿಕ ಭಾಗದ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊರಬೇಕಾಗುತ್ತದೆ. ಈ ವಿಷಯದಲ್ಲಿ ತಾನೇ ಒಂದು ವಿಶ್ವವಿದ್ಯಾಲಯವಾಗುತ್ತದೆ. ಹಾಗಾಗಿ ಕಾಲೇಜು ವಿವಿಧ ರೀತಿಯ ಕಾರ್ಯನಿರ್ವಹಣೆಗೆ ಈಗ ವಿಶ್ವವಿದ್ಯಾನಿಲಯಗಳಲ್ಲಿರುವಂತೆ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ, ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ, ಮೊದಲಾದ ಸಮಿತಿಗಳನ್ನು ರಚಿಸುತ್ತದೆ. ಈ ಎಲ್ಲಾ ಮಂಡಳಿಗಳೂ ಸಕರ್ಾರ, ಕುಲಪತಿ, ಪ್ರಾಂಶುಪಾಲರು ನಿಯೋಜಿಸಿದ ತಜ್ಞರು, ಕಾಲೇಜಿನ ಅಧ್ಯಾಪಕರು ಸದಸ್ಯರಾಗಿರುತ್ತಾರೆ. ಒಂದು ವಿಶೇಷವೆಂದರೆ ಕಾಲೇಜಿನ ಹಾಲಿ ವಿದ್ಯಾಥರ್ಿ, ಹಳೆಯ ವಿದ್ಯಾಥರ್ಿಗಳಿಗೂ ಕೆಲವು ಮಂಡಳಿಗಳಲ್ಲಿ ಅವಕಾಶವಿರುತ್ತದೆ.

ಮೇಲ್ಕಾಣಿಸಿದ ಮಂಡಳಿಗಳಲ್ಲಿ ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಮಂಡಳಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುತ್ತವೆ. ಅಧ್ಯಯನ ಮಂಡಳಿ ಪಠ್ಯ ನಿಯೋಜನೆಯ ಮುಖ್ಯಕಾರ್ಯವನ್ನು ನಿರ್ವಹಿಸುತ್ತದೆ. ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿಸುತ್ತದೆ. ಹಣಕಾಸು ಮಂಡಳಿ ಕಾಲೇಜಿನ ಅಭಿವೃದ್ಧಿಯೋಜನೆಗಳನ್ನು ರೂಪಿಸುತ್ತದೆ. ಇವು ರೂಪಿಸಿದ ನೀತಿ ನಿಯಮಗಳಿಗೆ ಶೈಕ್ಷಣಿಕ ಮಂಡಳಿ ಅನುಮತಿ ನೀಡುತ್ತದೆ. ಒಟ್ಟಾರೆ ಸ್ವಾಯತ್ತತೆ ಕಾಲೇಜು ಪ್ರವೇಶ ನೀತಿ, ಶುಲ್ಕ ನೀತಿ, ಪಠ್ಯ ನಿಯೋಜನೆ, ಬೋಧನಾಕ್ರಮ, ಪರೀಕ್ಷೆಗಳ ಕ್ರಮ, ಮೌಲ್ಯಮಾಪನ ಪದ್ಧತಿ, ಅಂಕಪಟ್ಟಿ ನೀಡುವ ಕ್ರಮ ಹೀಗೆ ಶೈಕ್ಷಣಿಕವಾಗಿ ಸ್ವತಂತ್ರ ಪಡೆಯುತ್ತದೆ.

ಹಾಗಾಗಿ ಕಾಲೇಜಿನ ವಿವಿಧ ಸಮಿತಿಗಳ ದೃಷ್ಟಿ-ಧೋರಣೆಗಳು, ಶಕ್ತಿ-ಸಾಮಥ್ರ್ಯಗಳು ಹೇಗಿರುತ್ತವೆಯೋ ಅಂಥ ಶಿಕ್ಷಣ ಲಭ್ಯವಾಗಲಿದೆ. ಕಾಲೇಜು ತನ್ನಲ್ಲಿ ಪದವಿ ಮುಗಿಸಿದ ಅಭ್ಯಥರ್ಿಗಳಿಗೆ ಅಂಕಪಟ್ಟಿ ನೀಡುತ್ತದೆ. ನಂತರ ಕಾಲೇಜಿನ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾನಿಲಯ ಪದವಿ ಪ್ರಮಾಣ ಪತ್ರ ನೀಡುತ್ತದೆ. ಹೀಗೆ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸುವ ಕಾಲೇಜುಗಳು ನಿರಂತರವಾದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರತಿ ಐದು ವರ್ಷಗಳಿಗೊಮ್ಮೆ ಯು.ಜಿ.ಸಿ ಸ್ವಾಯತ್ತ ಕಾಲೇಜನ್ನು ಕಾರ್ಯಸ್ವರೂಪ, ಫಲಿತಗಳು ಮೊದಲಾದ ವಿಷಯಗಳಲ್ಲಿ ಪರೀಕ್ಷೆಗೊಳಪಡಿಸುತ್ತದೆ. ಏನಾದರೂ ಅಸಮರ್ಥತೆ, ಕಾರ್ಯದೋಷಗಳು ಕಂಡುಬಂದಲ್ಲಿ ಅಂಥ ಕಾಲೇಜಿನ ಸ್ವಾಯತ್ತತೆಯನ್ನು ರದ್ದುಪಡಿಸುತ್ತದೆ. ಆದ್ದರಿಂದಲೇ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಕಾಲೇಜು ಸದಾ ಶ್ರಮಿಸಬೇಕಾಗುತ್ತದೆ.
  • ಕಾಲೇಜುಗಳಿಗೆ ಸ್ವಾಯತ್ತತೆ ನೀಡುವುದರಿಂದ ವಿದ್ಯಾಥರ್ಿಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಡೀ ಸಮಾಜಕ್ಕೆ      ಸಾಕಷ್ಟು ಅನುಕೂಲಗಳಾಗಲಿವೆ.
  • ಅತೀ ವಿಸ್ತಾರದ ವ್ಯವಸ್ಥೆಯೊಂದರಲ್ಲಿ ಎಲ್ಲಾ ಪ್ರದೇಶದ ಜನರ ಆಸೆಗಳು ಸಾಧ್ಯವಾಗುವುದು ಕಷ್ಟ. ಇಂಥ ಕಷ್ಟಗಳನ್ನು ಸಾಧ್ಯವಾಗಿಸುವಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಕಾಲೇಜು ಸಮಾಜದ ನಿರೀಕ್ಷಿತ ಕ್ಷೇತ್ರಗಳಿಗೆ ಬೇಕಾದ ಕೌಶಲ್ಯಯುತ ಶಿಕ್ಷಣವನ್ನು ನೀಡುವುದರ ಮೂಲಕ, ವಿದ್ಯಾಥರ್ಿಗಳನ್ನು ಸ್ಪಧರ್ಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಬಹುದಾಗಿದೆ.
  • ಕಾಲೇಜಿನಲ್ಲಿ ಆಡಳಿತವನ್ನು ಹಾಗೂ ಅಧ್ಯಾಪಕ ಕಾರ್ಯದಕ್ಷತೆಯನ್ನು ಇವುಗಳ ಜೊತೆಗೆ ವಿದ್ಯಾಥರ್ಿಗಳಲ್ಲಿ ಶ್ರಮದಾಯಕ ಮನೋಭಾವವನ್ನು ಹೆಚ್ಚಿಸಲು ಸಾಧ್ಯ.
  • ಕಾಲೇಜಿನ ಶೈಕ್ಷಣಿಕ, ಸಂಶೋಧನಾತ್ಮಕ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ದೊರೆಯಲಿದೆ. ಈಗ ಯುಜಿಸಿಯ ಮಾನ್ಯತೆ ಗಳಿಸಿರುವ ಕಾಲೇಜುಗಳು ಐದು ವರ್ಷದ ಒಂದು ಯೋಜನೆಯಲ್ಲಿ 5 ಲಕ್ಷ ಮಾತ್ರ ಪಡೆಯಲಿವೆ. ಸ್ವಾಯತ್ತತೆ ಪಡೆದರೆ ಒಂದು ವರ್ಷಕ್ಕೆ 10 ರಿಂದ 15 ಲಕ್ಷ ಅನುದಾನ ಪಡೆಯಬಹುದಾಗಿದೆ. ಸ್ವಾಯತ್ತತೆಯಲ್ಲಿ ಸಾಕಷ್ಟು ಯಶಸ್ಸುಕಂಡರಂತೂ ವರ್ಷಕ್ಕೆ 1 ಕೋಟಿ ಅನುಧಾನ ಪಡೆಯಲಿಕ್ಕೆ ಸಾಧ್ಯವಿದೆ.
  • ಅಧ್ಯಾಪಕರು ಸಂಶೋಧನ ಯೋಜನೆಗಳ ಮೂಲಕ ತಾವು ಸ್ವಂತ ಬೆಳವಣಿಗೆ ಕಾಣುವುದಕ್ಕೆ ಈ ವ್ಯವಸ್ಥೆಯಲ್ಲಿ ವಿಪುಲ ಅವಕಾಶಗಳಿವೆ.

       ಇಂಥ ಒಳ್ಳೆಯ ಅನುಕೂಲಗಳ ಜೊತೆಗೆ ಕೆಲವು ಅನಾನುಕೂಲಗಳು ಆಗಲಿವೆ ಎಂಬುದೇ ವಿದ್ಯಾಥರ್ಿಗಳನ್ನು ಪೋಷಕರನ್ನು ಆತಂಕಕ್ಕೆ ಒಳಗುಮಾಡಿದೆ. ಇದರಿಂದಾಗುವ ಅನಾನುಕೂಲಗಳಲ್ಲಿ ಕೆಲವನ್ನು ಹೇಳುವುದಾದರೆ ಅವು ಹೀಗಿವೆ.
  • ಸ್ವಾಯತ್ತತೆ ಪಡೆಯಲಿರುವ ಕಾಲೇಜುಗಳಲ್ಲಿ ಖಾಸಗೀ ಕಾಲೇಜುಗಳೇ ಹೆಚ್ಚಾಗಿರುತ್ತವೆ. ಕಾರಣ ಸಕರ್ಾರಿ ಕಾಲೇಜುಗಳಿಗಿಂತ ಹೆಚ್ಚು ಸಮರ್ಥವಾಗಿರುವುದು ಖಾಸಗಿ ಕಾಲೇಜುಗಳೇ. ಖಾಸಗಿಯವರಿಗೆ ಇಂಥ ಅಧಿಕಾರಗಳು ಲಭ್ಯವಾದರೆ ಪದವಿ ಶಿಕ್ಷಣವೂ ಕೂಡ ಬಡಮಧ್ಯಮ ವರ್ಗದವರಿಗೆ ಕೈಗೆಟುಕದಂತಾಗುವ ಸಂಭವವಿದೆ. ಸಕರ್ಾರಿ ಕಾಲೇಜುಗಳೂ ಕೂಡ ಸ್ವಾಯತ್ತತೆಯನ್ನು ಪಡೆದ ಮೇಲೆ ಖಾಸಗೀ ಕಾಲೇಜುಗಳ ಮೊತ್ತೊಂದು ಮುಖ ಆಗುವುದರಲ್ಲಿ ಸಂಶಯವಿಲ್ಲ.
  • ಪರೀಕ್ಷೆ-ಮೌಲ್ಯಮಾಪನ ಮೊದಲಾದ ಮಹತ್ವಕೆಲಸ-ಕಾರ್ಯಗಳ ಜವಾಬ್ದಾರಿ ಕಾಲೇಜಿನದೇ ಆಗಿರುವುದರಿಂದ ಜಾತಿವ್ಯಾಮೋಹ, ಸ್ವಜನ ಪಕ್ಷಪಾತಗಳು ಮತ್ತಿತರ ಭ್ರಷ್ಟಾಚಾರಗಳು ನಡೆಯುವುದಿಲ್ಲ ಎಂದು ನಂಬುವುದಾದರೂ ಹೇಗೆ?
  • ಒಂದೊಂದು ಕಾಲೇಜಿಗೆ ಒಂದೊಂದು ಪಠ್ಯಕ್ರಮ ಇರುವುದರಿಂದ ಪಠ್ಯಗಳ ಅಲಭ್ಯತೆ, ಹೊಸ ಹೊಸ ಪಠ್ಯಗಳಾದರೆ ಅಧ್ಯಾಪಕರ ಅಸಮರ್ಥತೆಗಳನ್ನು ಬಗೆಹರಿಸುವುದು ಕಷ್ಟ ಸಾಧ್ಯವಾಗುತ್ತದೆ.
  • ಇಂಥ ಸಾಧಕ-ಬಾಧಕಗಳ ನಡುವೆಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ವ್ಯವಸ್ಥೆ ಸಾಧ್ಯವಾಗಬೇಕಾದರೆ ಅಧ್ಯಾಪಕರ ಕಾರ್ಯನಿಷ್ಠತೆ, ಜವಾಬ್ದಾರಿಗಳು ಹಾಗೂ ಒಟ್ಟು ವ್ಯವಸ್ಥೆಯ ಪಾರದರ್ಶಕತೆಗಳು ಅತೀ ಮುಖ್ಯವಾಗುತ್ತವೆ. ಆ ಗುಣಗಳನ್ನು ಕಾಲೇಜುಗಳ ಮೈಗೂಡಿಸಿಕೊಳ್ಳಬೇಕಷ್ಟೇ.


ಆ. ಮಾದರಿ ವಿಶ್ವವಿದ್ಯಾಲಯಗಳ (Innovative Universities)  ರಚನೆ

         ಇಂದು ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಹಲವಾರು ಆಂತರಿಕ ದೋಷಗಳು ಹಾಗೂ ವಿಪರೀತ ರಾಜಕೀಯ ಹಸ್ತಕ್ಷೇಪದ ಕಾರಣದಿಂದಾಗಿ ರೋಗಗ್ರಸ್ಥ ವ್ಯವಸ್ಥೆಯಾಗಿ ಮಾಪರ್ಾಡಾಗಿದೆ. ಇದೇ ಸಂದರ್ಭಕ್ಕೆ ಶಿಕ್ಷಣ, ಉದಾರೀಕರಣ ನೀತಿಗಳಿಗೊಳಗಾದ ಪರಿಣಾಮವಾಗಿ ವಿದೇಶಿ ವಿಶ್ವವಿದ್ಯಾಲಯಗಳು ಭಾರತದೊಳಕ್ಕೆ ಪ್ರವೇಶ ಪಡೆಯಲಾರಂಭಿಸಿವೆ. ಹಾಗಾಗಿ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಪುನರ್ರಚಿಸುವ ಅಗತ್ಯತೆಯನ್ನು ಭಾರತದ ಜ್ಞಾನ ಆಯೋಗ ಒತ್ತಿ ಹೇಳಿದೆ. ಈ ಹಿನ್ನೆಲೆಯೊಳಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಗಂಭೀರವಾಗಿ ಆಲೋಚಿಸಿದ ಪರಿಣಾಮ ಮಾದರಿ ವಿಶ್ವವಿದ್ಯಾಲಯಗಳ (ಟಿಟಿಠತಚಿಣತಜ ಗಟಿತಜಡಿಣಥಿ) ಕಲ್ಪನೆ ಒಡಮೂಡಿದೆ. ಭಾರತದಲ್ಲಿ ಇಂಥ ಪ್ರಯತ್ನದ ಫಲವಾಗಿ ಸುಮಾರು 14 ವಿಶ್ವವಿದ್ಯಾಲಯಗಳು ಹಳೆಯ ಪದ್ಧತಿಗಳಿಂದ ಬಿಡುಗಡೆಗೊಂಡು ನವೀನಾತ್ಮಕ ವಿಶ್ವವಿದ್ಯಾಲಯಗಳ ರೂಪವನ್ನು ಪಡೆಯುವ ಪ್ರಯತ್ನದಲ್ಲಿವೆ. ಕನರ್ಾಟಕದಲ್ಲೂ ಆ ರೀತಿಯ ಪ್ರಯತ್ನಗಳು ಆರಂಭಗೊಂಡಿದ್ದು ಮೈಸೂರು ಹಾಗೂ ಕನರ್ಾಟಕ ವಿಶ್ವವಿದ್ಯಾಲಯಗಳು ನವೀನ ರೂಪ ಪಡೆಯುವ ಅಂತಿಮ ಹಂತದಲ್ಲಿವೆ.
ಮಾದರಿ ವಿಶ್ವವಿದ್ಯಾಲಯಗಳ ಉದ್ದೇಶ-ಗುರಿಗಳಿಗನುಗುಣವಾಗಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದ್ದು ಅವು ಹಳೆಯ ಕಾಯ್ದೆಗಿಂತ ಭಿನ್ನವಾಗಿವೆ. ಇಲ್ಲಿ ಮೊದಲಿಗೆ ಹೊಸ ರೂಪದಲ್ಲಿ ಹೊರಹೊಮ್ಮುವ ವಿಶ್ವವಿದ್ಯಾಲಯಗಳಿಗೆ ಬೇಕಾಗಿರುವ ಉದ್ದೇಶ-ಗುರಿಗಳನ್ನು ಪ್ರಸ್ತಾಪಿಸಿದ್ದು ಅವು ಈ ಮುಂದಿನಂತಿವೆ.
  • ಸಮಕಾಲೀನ ಸ್ಪಧರ್ಾತ್ಮಕ ಪರಿಸರದಲ್ಲಿ ಸಮರ್ಥವಾಗಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸುವುದು.
  • ಇಂದು ಕುಸಿಯಲಾರಂಬಿಸಿರುವ ಶೈಕ್ಷಣಿಕ, ಆಡಳಿತಾತ್ಮಕ, ಸಂಶೋಧನೆಯ ಗುಣಮಟ್ಟವನ್ನು ನಿಯಂತ್ರಿಸುವುದು.
  • ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ಬೇರ್ಪಡಿಸುವ ಮತ್ತು ಅಧಿಕಾರಗಳನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ಬೇಕಾಗಿರುವ ಸ್ವಾಯತ್ತತೆಯನ್ನು ನೀಡುವುದು.
  • ಅಂತರ್ ಶಿಸ್ತೀಯ ಹಾಗೂ ಬಹು ಶಿಸ್ತೀಯ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂರಚನೆಗಳಲ್ಲಿ ಮಹಾನ್ ನಮನೀಯತೆಯನ್ನು (ಈಟಜಥಛಟಣಥಿ) ತರುವುದು.
  • ನೀತಿ-ನಿಯಮಗಳು ಹಾಗೂ ಕಾರ್ಯಕ್ರಮಗಳ ಮೂಲಕ ಮಾನವೀಯ ವ್ಯಕ್ತಿತ್ವದ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವುದು.

        ಈ ಪ್ರಧಾನ ಉದ್ದೇಶಗಳ ಜೊತೆಗೆ ವಿಶ್ವವಿದ್ಯಾಲಯಗಳು ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿರಬೇಕು. ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಮೊದಲಾದ ಸಮಾಜಿಕ ದುರ್ಬಲರಿಗೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು ನೀಡುವ ಗುರಿಗಳನ್ನು ನಿಗದಿಪಡಿಸಲಾಗಿದೆ.

    ಇಂಥ ದೊಡ್ಡ ಪ್ರಮಾಣದ ಧೇಯ್ಯೋದ್ದೇಶಗಳು ಸಾಕಾರಗೊಳಿಸಲು ವಿಶ್ವವಿದ್ಯಾಲಯಗಳು ನಿದರ್ಿಷ್ಟವಾದ ಪ್ರಾಧಿಕಾರಗಳನ್ನು ಹಾಗೂ ಅವುಗಳ ಮುಖ್ಯಸ್ಥ ಅಧಿಕಾರಿಗಳನ್ನು ಸ್ಥಾನೀಕರಣಗೊಳಿಸಲಾಗಿದೆ. ಇಡೀ ವಿಶ್ವವಿದ್ಯಾಲಯಕ್ಕೆ ಉನ್ನತಾಧಿಕಾರಿಯಾಗಿ ಸವರ್ೋಚ್ಚ ಅಧಿಕಾರವುಳ್ಳ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಹಳೆಯ ಪದ್ಧತಿಯಲ್ಲಿ ರಾಜ್ಯಪಾಲರಿಗಿದ್ದ ಎಲ್ಲಾ ಅಧಿಕಾರಗಳು ಇವರಿಗಿರುತ್ತವೆ. ವಿ.ವಿ.ಗೆ ಕುಲಪತಿಗಳನ್ನು ನೇಮಿಸಿರುವುದರಿಂದ ಹಿಡಿದು ಹಲವು ಅಧಿಕಾರಿಗಳನ್ನು ನೇಮಿಸುವ ಹಾಗೂ ಅವರನ್ನು ನಿಯಂತ್ರಿಸುವ ಅಧಿಕಾರ ಇವರಿಗೆ ಇರತ್ತದೆ. ಇಂಥ ಅಧ್ಯಕ್ಷರನ್ನು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಭಾಪತಿ, ವಿರೋಧಪಕ್ಷದ ನಾಯಕರು, ರಾಜ್ಯದ ಹೈಕೋಟರ್್ನ ಮುಖ್ಯ ನ್ಯಾಯಮೂತರ್ಿಗಳನ್ನೊಳಗೊಂಡ ಸಮಿತಿ ಆಯ್ಕೆಮಾಡುತ್ತದೆ. ಅಧ್ಯಕ್ಷರ ಆಯ್ಕೆಗೆ ಇರುವ ಪ್ರಮುಖ ಮಾನದಂಡಗಳೆಂದರೆ: ಅಧ್ಯಕ್ಷರಾಗುವವರಿಗೆ ಶಿಕ್ಷಣ/ಸಂಶೋಧನೆ/ಉಧ್ಯಮ/ಕಾನೂನು ಈ ಕ್ಷೇತ್ರಗಳಲ್ಲಿ ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದ್ಲಲಾಗಲಿ ಅತ್ಯುತ್ತಮ ಸಾಧನೆ ಮಾಡಿರಬೇಕು. ಈ ಕಾಯ್ದೆಯನ್ನು ಅಳವಡಿಸಿಕೊಂಡ ಪ್ರತೀ ವಿಶ್ವವಿದ್ಯಾಲಯಕ್ಕೂ ಪ್ರತ್ಯೇಕವಾಗಿ ಅಧ್ಯಕ್ಷರು ಇರುತ್ತಾರೆ. ಅಧ್ಯಕ್ಷರು ನೇಮಕವಾದ ತಕ್ಷಣ ರಾಜ್ಯಪಾಲರು ಹಾಗೂ ಸಕರ್ಾರ ವಿಶ್ವವಿದ್ಯಾಲಯದ ಆಡಳಿತಕ್ಕೆ ಕೇವಲ ಸಲಹೆಗಾರರಾಗಿ, ಪ್ರವರ್ತಕರಾಗಿರುತ್ತಾರೆ. ಅಧ್ಯಕ್ಷ ಹುದ್ದೆ ವಿಶ್ವವಿದ್ಯಾಲಯಕ್ಕೆ ಹೊಸ ಸೃಷ್ಟಿಯಾಗಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಯುವ ಉದ್ದೇಶಕ್ಕೆ ಪೂರಕವಾದ ಬೆಳವಣಿಗೆಯಾಗಿದೆ. 

       ಪ್ರಸ್ತುತ ನವೀನಾತ್ಮಕ ವಿಶ್ವವಿದ್ಯಾಲಯಗಳ ಕಾಯ್ದೆ ಅನ್ವಯ ಪುನರ್ ರಚನೆಗೊಳುವ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ಮೂರು ಹಂತಗಳಲ್ಲಿ ರೂಪುಗೊಳ್ಳುತ್ತವೆ. ಆ ಮೂರು ಹಂತಗಳೆಂದರೆ ಸಾಮಾನ್ಯ ವ್ಯವಸ್ಥೆ, ಏಕೀಕೃತ ವ್ಯವಸ್ಥೆ. ಸಂಯೋಜಿತ ವ್ಯವಸ್ಥೆ ಈ ವ್ಯವಸ್ಥೆಗಳಲ್ಲಿ ನಿಧರ್ಿಷ್ಟವಾದ ಅಧಿಕಾರಿಗಳು ಹಾಗೂ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ವ್ಯವಸ್ಥೆಗಳ ರಚನೆಗಳನ್ನು ಮುಂದಿನಂತೆ ವಿವರಿಸಬಹುದು.

1. ಸಾಮಾನ್ಯ ವ್ಯವಸ್ಥೆ (General  System)
ಪ್ರಸ್ತತ ವ್ಯವಸ್ಥೆಯಲ್ಲಿ ಅಧ್ಯಕ್ಷರು, ಕುಲಪತಿಗಳು, ಕುಲಸಚಿವರು, ಹಣಕಾಸು ಅಧಿಕಾರಿಗಳು, ಓಂಬಡ್ಸ್ಮನ್ ಮೊದಲಾದ ಅಧಿಕಾರಿಗಳು; ಆಡಳಿತ ಮಂಡಳಿ, ಓಂಬಡ್ಸ್ಮನ್ ಸಮಿತಿ, ಹಣಕಾಸು ಮತ್ತು ಲೆಕ್ಕಪತ್ರ ಸಮಿತಿ ಮುಂತಾದ ಪ್ರಾಧಿಕಾರಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯಿದೆ. ಇದರಲ್ಲಿ ಅಧ್ಯಕ್ಷರು ಹಾಗೂ ಓಂಬಡ್ಸ್ಮನ್ ಕಲ್ಪನೆಗಳು ನವೀನಾತ್ಮಕವಾದವು. ಹಾಗೆಯೇ ಆಡಳಿತ ಮಂಡಳಿ ಹಳೆಯ ಪದ್ಧತಿಯ ಸಿಂಡಿಕೇಟ್ನ ಮರುನಾಮಕರಣವಾಗಿದೆ.

2. ಏಕೀಕೃತ ವ್ಯವಸ್ಥೆ (Unitary System)  
ಇದರಲ್ಲಿ ಶೈಕ್ಷಣಿಕ ಮಂಡಳಿ, ನೇಮಕಾತಿ ಮಂಡಳಿ ಈಚಿಛಿಣಟಣಥಿ ಅಠಣಟಿಛಿಟ, ಖಜಜಚಿಡಿಛಿ ಚಿಟಿಜ ಟಿಟಿಠತಚಿಣಠಟಿ ಅಠಣಟಿಛಿಟ ಮೊದಲಾದ ಪ್ರಾಧಿಕಾರಗಳು; ಸಮ ಕುಲಾಧಿಪತಿ, ವಿವಿಧ ನಿಕಾಯಗಳ ಡೀನರು, ಜ್ಞಾನ ಸಂಪನ್ಮೂಲ ನಿರದ್ಏಶಕರು, ದೈಹಿಕ ಶಿಕ್ಷಣ ಹಾಗೂ ವಿದ್ಯಾಥರ್ಿ ಕ್ಷೇಮಪಾಲನಾ ನಿದರ್ೇಶಕರು, ಸಂಶೋಧನಾ ಗುಣಮಟ್ಟ ಮತ್ತು ನವೀನತೆಯ   ನಿರ್ದೇಶಕರು  ಮೊದಲಾದ ಅಧಿಕಾರಿಗಳು ಸ್ಥಾನೀಕರಣಗೊಂಡಿರುತ್ತಾರೆ. ಇಲ್ಲಿ ಹಲವಾರು ಹುದ್ದೆಗಳು ಮತ್ತು ಪ್ರಾಧಿಕಾರಗಳು ಹೊಸ ಸೃಷ್ಠಿಗಳಾಗಿವೆ. ಮುಖ್ಯವಾಗಿ ಸಮಕುಲಾಧಿಪತಿ ಹುದ್ದೆ ಇದಕ್ಕೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರನ್ನು ನೇಮಿಸಲಾಗುತ್ತದೆ. ಇಡೀ ಏಕೀಕೃತ ವ್ಯವಸ್ಥೆಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಈವರೆಗೆ ದೈಹಿಕ ಶಿಕ್ಷಣ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗಗಳು ಬೇರೆಯಾಗಿದ್ದು ಪ್ರಸ್ತುತ ವ್ಯವಸ್ಥೆಯಲ್ಲಿ ಒಂದೇ ವಿಭಾಗವಾಗಿ ಕಾರ್ಯನಿರ್ವಹಿಸುತ್ತವೆ. ಸಂಶೋಧನೆಯಲ್ಲಿ ನವೀನತೆತಂದು ಅದರ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಒಂದು ವಿಭಾಗ ಮತ್ತು ಅದಕ್ಕೊಂದು  ನಿರ್ದೇಶಕರ ಹುದ್ದೆಯನ್ನು ಸೃಜಿಸಿರುವುದು ವಿಶೇಷವಾಗಿದೆ. 

3. ಸಂಯೋಜಿತ ವ್ಯವಸ್ಥೆ (Affiliation System)
ಇಲ್ಲಿ ನಿರ್ವಹಣಾ ಮಂಡಳಿ, ಸಂಯೋಜನೆ ಮತ್ತು ಪರೀಕ್ಷಾ ಮಂಡಳಿ, ಮುಕ್ತ ಮತ್ತು ದೂರ ಶಿಕ್ಷಣ ಮಂಡಳಿ, ಅಧ್ಯಯನ ಮಂಡಳಿ ಇತ್ಯಾದಿ ಪ್ರಾಧಿಕಾರಗಳು ಅಸ್ತಿತ್ವದಲ್ಲಿದ್ದು ಇವುಗಳನ್ನು ನಿರ್ವಹಿಸಲು ಪ್ರತೀ ವಿಭಾಗಕ್ಕೆ ಒಬ್ಬೊಬ್ಬ ನಿರ್ದೇಶಕರು ಇರುತ್ತಾರೆ. ಇವರೆಲ್ಲರನ್ನು ಮೇಲ್ವಿಚಾರಣೆ ಮಾಡಲು ಮತ್ತೊಬ್ಬ ಸಮಕುಲಾಧಿಪತಿ ಇರುತ್ತಾರೆ.

ವಿಮರ್ಶೆ

ಉದ್ದೇಶಿತ ಮಾದರಿ ವಿಶ್ವವಿದ್ಯಾಲಯಗಳ ಸ್ಥಾಪನೆ ಅಥವಾ ಮರು ರೂಪಣೆಯ ಹಿಂದೆ ಇರುವ ಉದ್ದೇಶ-ಗುರಿಗಳನುಸಾರವಾಗಿ ಮೇಲಿನಂತೆ ಹಳೆಯ ವ್ಯವಸ್ಥೆಯನ್ನು ಮಾಪರ್ಾಡು ಮಾಡಲಾಗಿದೆ. ಮೇಲು ನೋಟಕ್ಕೆ ಆಕರ್ಷಕವಾಗಿ ಕಾಣುವ ಈ ನಿಯಮಗಳು ನಿಜವಾಗಿ ಮೂಲ ಉದ್ದೇಶಗಳನ್ನು ಈಡೇರಿಸುತ್ತವೆಯೆ? ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು ಇದರಿಂದ ಸಾಧ್ಯವೇ? ಶಿಕ್ಷಣ ಹಾಗೂ ಸಂಶೋಧನೆಗಳ ಗುಣಮಟ್ಟ ಪ್ರಸ್ತುತ ವ್ಯವಸ್ಥೆಯಿಂದ ಸುಧಾರಿಸಬಲ್ಲ್ಲುದಾ? ವಿಕೇಂದ್ರಿಕರಣದಿಂದ ಆಡಳಿತ ಶಕ್ತಿಶಾಲಿಯಾಗಬಲ್ಲದಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಕೇಳಿಕೊಳ್ಳಬೇಕು. ಇಂಥ ಪ್ರಶ್ನೆಗಳು ಪ್ರಸ್ತುತ ಮಸೂದೆಯನ್ನು ವಿಮಶರ್ಾತ್ಮಕವಾಗಿ ನೋಡಲು ಪ್ರೇರೇಪಿಸುತ್ತವೆ. ಈ ಹಿನ್ನೆಲೆಯೊಳಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದು.
  • ಉದ್ದೇಶಿತ ಸದರಿ ಮಸೂದೆಯು ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸುವುದು, ಅಧಿಕಾರ ವಿಕೇಂದ್ರಿಕರಣಗೊಳಿಸುವ ಉದ್ದೇಶದಿಂದ ಕಂಡುಕೊಂಡಿರುವ ಹೊಸ ವ್ಯವಸ್ಥೆಯಲ್ಲಿ ಅಧ್ಯಕ್ಷರಿಗೆ ನೀಡಿರುವ ಅಧಿಕಾರಗಳು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತವೆ. ಅಧ್ಯಕ್ಷರ ಆಯ್ಕೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಇದೆಯಾದರೂ ಅದು ಸಮಕಾಲೀನ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದು ನಮಗೆ ಎದುರಾಗುವ ಮೊದಲ ಪ್ರಶ್ನೆ. ಅಧ್ಯಕ್ಷರ ಹುದ್ದೆಗೆ ಬರುವವರು ಕೇವಲ ಶೈಕ್ಷಣಿಕ ವಲಯದಿಂದಲೇ ಬರಬೇಕಿಲ್ಲ. ಕೈಗಾರಿಕಾ ಉದ್ಯಮಿಗಳು ಕೂಡ ಈ ಸ್ಥಾನಕ್ಕೆ ಅರ್ಹವಾದ್ದರಿಂದ ಅಂಥ ಹಿನ್ನಲೆಯಿಂದ ಬಂದವರು ಶಿಕ್ಷಣಪದ್ಧತಿಯನ್ನು ಒಂದು ಉದ್ಯಮವೆಂಬಂತೆ ನೋಡುವುದರಲ್ಲಿ ಅನುಮಾನವಿಲ್ಲ. ಹೀಗಾದರೆ ಅದರ ದುಷ್ಪರಿಣಾಮಗಳು ಅಗಾಧವಾಗಿರುತ್ತವೆ. ಇನ್ನೂ ಅಧಿಕಾರ ವಿಕೇಂದ್ರಿಕರಣ ನೆಪದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥೆಯೊಳಗೆ ಸೃಷ್ಟಿಯಾಗಲಿರುವ ಓಂಬಡ್ಸ್ಮನ್, ಸಮಕುಲಾದಿಪತಿಗಳು, ಆಡಳಿತ ಮಂಡಳಿ ಈ ವಿಭಾಗಗಳ ಮಧ್ಯೆ ವೃತ್ತಿ ಕಲಹಗಳು ಹೆಚ್ಚಾಗುವ ಸಂಭವವೇ ಹೆಚ್ಚಾಗಿದೆ. ಇದೆಲ್ಲದರ ನಡುವೆ  ಸರ್ಕಾರದ ಪಾತ್ರ ನಗಣ್ಯವೆ? ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಸರ್ಕಾರದಿಂದಲೇ ನೇಮಕಗೊಳ್ಳುವವರಾದ್ದರಿಂದ ಇವರು ರಾಜಕಾರಣದ ಮುಖವಾಡವಾಗಿ ಕೆಲಸ ಮಾಡುತ್ತಾರೆಂಬುದು ಈಗಿನ ಕಲುಷಿತ ರಾಜಕೀಯ ವ್ಯವಸ್ಥೆಯನ್ನು ಗಮನಿಸಿ ಯಾರಿಗೂ ಅರ್ಥವಾಗುವ ಸಂಗತಿಯಾಗಿದೆ. 
  • ಜಾಗತೀಕ ಮಟ್ಟಕ್ಕೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ಗುಣಮಟ್ಟವನ್ನು ಎತ್ತರಿಸುವ ಆಶಯವುಳ್ಳ ಈ ಮಸೂದೆಯಲ್ಲಿ, ಅಂಥ ಬೆಳವಣಿಗೆಗೆ ಬೇಕಾದ ನಿರ್ದಿಷ್ಟ ಕಲ್ಪನೆಗಳು ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಆಶಯ ಈಡೇರುವುದಕ್ಕೆ ಶಿಕ್ಷಕರ ಬೆಳವಣಿಗೆ ಹಾಗೂ ವೃತ್ತಿಕೌಶಲಗಳು, ಇವುಗಳಿಗಿಂತ ಹೆಚ್ಚಾಗಿ ಕೆಲಸ ಮಾಡುವ ಮನಸ್ಸು ಬೇಕಾಗುತ್ತದೆ. ಶಿಕ್ಷಕರಲ್ಲಿ ಇಂಥ ಮನಸ್ಥಿತಿಯನ್ನು ತರುವುದಕ್ಕೆ ವಿಶ್ವವಿದ್ಯಾಲಯ ಮಾಡಬೇಕಾದ ಪ್ರಯತ್ನ ಎಂಥದ್ದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. 
  • ವಿಶ್ವವಿದ್ಯಾಲಯದಲ್ಲಿ ಉನ್ನತಮಟ್ಟದ ಸಂಶೋಧನೆಗಳು ನಡೆಯಬೇಕೆಂಬುದರ ಬಗ್ಗೆ ಯಾರದು ಭಿನ್ನಾಭಿಪ್ರಾಯಗಳು ಇರಲಾರವು. ಆದರೆ ಪ್ರಶ್ನೆ ಇರುವುದು ಅದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳು ಮತ್ತು ಹಣಕಾಸಿನ ಸೌಲಭ್ಯಗಳು ಎಲ್ಲಿಂದ ದೊರೆಯುತ್ತವೆ. ಸಕರ್ಾರಗಳು ಯಾವುದೇ ಯೋಜನೆಗಳ ತತ್ವಗಳನ್ನು ಒಪ್ಪಿಕೊಂಡಷ್ಟು ಸುಲಭವಾಗಿ  ಆರ್ಥಿಕ ಸಹಾಯವನ್ನು ನೀಡಲು ಒಪ್ಪಲಾರವು. ಸರ್ಕಾರಗಳ ಇಂಥ ಇಬ್ಬಗಿಯ ನೀತಿಗಳು ಉದ್ದೇಶಿತ ಗುರಿಗಳನ್ನು ತಲುಪುವದಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯೊಳಗೆ ವಿಶ್ವವಿದ್ಯಾಲಯಗಳು ಹಠಕ್ಕೆ ಬಿದ್ದರೆ ವಿದ್ಯಾರ್ಥಿಗಳ ಶುಲ್ಕವನ್ನು ಏರಿಸಿಕೊಳ್ಳಬಹುದು. ಇದು ಕೂಡ ಮತ್ತೊಂದು ದೊಡ್ಡ ಸಮಸ್ಯೆಗೆ ನಮ್ಮೆಲ್ಲರನ್ನು ಸಿಲುಕಿಸುತ್ತದೆ.
  • ಈ ಮಸೂದೆಯ ಹಿಂದಿರುವ ಗುಪ್ತ ಅಜೆಂಡಗಳೆಂದರೆ ಭಾರತಕ್ಕೆ ಪ್ರವೇಶಿಸುವ ವಿದೇಶಿ ವಿಶ್ವವಿದ್ಯಾಲಯಗಳಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನ ಕಲ್ಪಿಸಿಕೊಡುವುದು ಮತ್ತು ಸ್ವಾಯತ್ತತೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದೇ ಆಗಿದೆ. ಇದಕ್ಕೆ ಬೇಕಾಗಿರುವ ನಿಯಮಗಳು ಮಸೂದೆಯಲ್ಲಿ ಸೇರ್ಪಡೆಯೂ ಆಗಿವೆ. ಹಾಗಾಗಿ ಮಸೂದೆಯ ಈ ಮುಖದ ಬಗೆಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ.
  • ಪ್ರಸ್ತುತ ಮಸೂದೆಯಲ್ಲಿ ಕಂಡುಬರುವ ಮತ್ತೊಂದು ದೋಷವೆಂದರೆ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಸರ್ಕಾರಗಳನ್ನಷ್ಟೇ ಅಲ್ಲದೆ ಕೈಗಾರಿಕೋದ್ಯಮಗಳು, ಖಾಸಗೀ ಸಂಘ-ಸಂಸ್ಥೆ-ವ್ಯಕ್ತಿಗಳು ಅಷ್ಟೇ ಅಲ್ಲದೆ ವಿದೇಶಿ ಮೂಲಗಳಿಂದಲೂ ಸಹಾಯ ಪಡೆದುಕೊಳ್ಳಬಹುದಾಗಿದೆ. ಹೀಗೆ ಮಾಡುವುದರಿಂದ ನಾವು ಅಂದು ಕೊಂಡಿರುವ ಗುರಿಗಳನ್ನು ತಲುಪಲು ಹಲವಾರು ರೀತಿಯ ಅಡಚಣೆಗಳು ಎದುರಾಗುತ್ತವೆ.
  • ನೇಮಕಾತಿಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಗುಣಮಟ್ಟ ಇವೆರಡು ಸಮಾನವಾಗಿ ಪರಿಗಣಿತವಾಗಬೇಕಾಘಿದೆ. ಇದು ಕೂಡ ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಕಷ್ಟಸಾಧ್ಯ ಎನ್ನಬೇಕಾಗುತ್ತದೆ.
  • ಇನ್ನೂ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ದೇಶೀಯ ಹಾಗೂ ವಿದೇಶಿಯ ವಿದ್ಯಾರ್ಥುಗಳ ಪ್ರವೇಶಕ್ಕೆ ಇಲ್ಲಿ ಅವಕಾಶವಿರುವುದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತವೆ. ದೇಶೀಯ ವಿಧ್ಯಾರ್ಥಿಗಳು ಹೊರಗಿನವರ ಜೊತೆ  ಸ್ಪರ್ಧೆ ಮಾಡಬೇಕಾದ ಒತ್ತಡಕ್ಕೆ ಒಳಗಾಗುತ್ತಾರೆ.

      ಇಂಥ ಹತ್ತಾರು ಸವಾಲುಗಳು ಪ್ರಸ್ತುತ ರೂಪುಗೋಳ್ಳುತ್ತಿರುವ ನವೀನಾತ್ಮಕ ವಿಶ್ವವಿದ್ಯಾಲಯಗಳಿಗೆ ಇರುತ್ತವೆ. ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ನಮ್ಮ ನೆಲದ ಸ್ಥಿತಿ-ಗತಿಗಳಿಗನುಗುಣವಾಗಿ ರೂಪುಗೊಂಡರೆ ಉತ್ತಮ ಬೆಳವಣಿಗೆಯೇ ಆಗುತ್ತದೆ. 

ಪರಾಮರ್ಶನ
  • ಎಸ್.ಎಂ. ಮುತ್ತಯ್ಯ,ಕರ್ನಾಟಕ ನವೀನಾತ್ಮಕ ವಿಶ್ವವಿದ್ಯಾಲಯಗಳ ಮಸೂದೆ-2011- ಸ್ವರೂಪ ಸಾಧ್ಯತೆಗಳು, (ಲೇಖನ), ಇದರಲ್ಲಿ : ಹೊಸತು ಮಾಸ ಪತ್ರಿಕೆ, ಏಪ್ರಿಲ್-2012
  •  ಎಸ್.ಎಂ ಮುತ್ತಯ್ಯ, ಲಿಖಿತ-ಅಲಿಖಿತ;2005;ಸೃಷ್ಟಿ ಪ್ರಕಾಶನ;ಬೆಂಗಳೂರು
  • CONCEPT NOTE ON INNOVATION UNIVERSITIES AIMING AT WORLD CLASS               STANDARDS,.mhrd.gov.in/sites/upload_files/mhrd/files/Universitiesconcep 
  • THE KARNATAKA STATE INNOVATIVE UNIVERSITIES  BILL, 2011
  • Presentation: “Decade of Innovations: 2010-2020 Roadmap”; Report by CII & INSEAD, “The Global Innovation Index Report 2009-2010”; http://www.globalinnovationindex.org/gii/ main/home.cfm
  •   XI Plan Guidelines ,Scheme of Autonomous College, www.ugc.ac.in  
  • http://www.knowledgecommission.gov.in/focus/higher.asp
  • UGC and the tale of two promotions, Economic Times, 15 November 2005
  •  'Regulating Higher Education' ( published in three parts),  Indian Express, New Delhi
  •  Edition on July 14th, 15th and 16th, 2005- also posted online in   www.indianexpres.com).
  •  India on Top in US Varsity enrolments, Hindustan Times, 8 November 2005
  •  India's Higher Education needs Policy, Hindustan Times, 28 November 2005

  ಡಾ. ಮುತ್ತಯ್ಯ ಎಸ್.ಎಂ