Saturday 8 September 2018

ಅಲ್ಪದಲ್ಲಿ ಕಲ್ಪವನ್ನು ಅಡಗಿಸಿದ ಶ್ಮಶಾನ ಕುರುಕ್ಷೇತ್ರ

           ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ನಾಟಕ ಅಭಿನಯ

ವಿಮರ್ಶೆ :   ಡಾ.ಎಸ್.ಎಂ. ಮುತ್ತಯ್ಯ


ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕುವೆಂಪು ಅವರ ನಾಟಕಗಳಿಗೆ ವಿಶೇಷ ಮಹತ್ವವಿದೆ. ಇವು ಪಾರಂಪರಿಕ ಪುರಾಣ ಕಥೆಗಳನ್ನು ಸಮಕಾಲೀನ ಅಗತ್ಯದ ಅನುಗುಣವಾಗಿ ಮರು ರೂಪಿಸಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿವೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ ಅವುಗಳಲ್ಲಿದ್ದ  ಅಮಾನವೀಯ ಮುಖಗಳನ್ನು ಕತ್ತರಿಸಿ ಮಾನವೀಯ ಮುಖಗಳನ್ನು ಜೋಡಿಸಿದ್ದಾರೆ. ಇಂಥ ನಾಟಕಗಳ ಮೂಲಕ ಸಮಾಜವನ್ನು ಎಚ್ಚರವಾಗಿಡುವ ಪ್ರಯತ್ನ ಕುವೆಂಪು ಅವರದಾಗಿತ್ತು.  ಇಂಥ ಆಲೋಚನಾ ಪ್ರೇರಕವಾದ ಕುವೆಂಪು ಅವರ ನಾಟಕಗಳು ಸಮಾಜದ ಎಲ್ಲಾ ಕ್ಷೇತ್ರದ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಶಿಕ್ಷಣ ಕ್ಷೇತ್ರದಲ್ಲಿಯಂತೂ ವಿದ್ಯಾರ್ಥಿ ಯುವಜನತೆಯವನ್ನು ಸಮಕಾಲೀನ ಚಿಂತನೆಗೆ ಹಚ್ಚುವ ಆಶಯದೊಂದಿಗೆ ಪಠ್ಯಕ್ರಮದಲ್ಲಿ ಕಡ್ಡಾಯವೆಂಬಂತೆ ಸ್ಥಾನ ದೊರೆತಿದೆ
ಕುವೆಂಪು ಅವರ ನಾಟಕಗಳು ಸಾಮಾನ್ಯವಾಗಿ ಭಾಷೆ ಬಂಧದ ವಿಷಯದಲ್ಲಿ ಸಂಕೀರ್ಣ ರಚನೆಗಳಾಗಿವೆ. ಹಳೆಗನ್ನಡದ ಭಾಷಾ ಸಂರಚನೆಗಳನ್ನು ಬಳಸಿರುವುದರಿಂದ ವಿದ್ಯಾರ್ಥಿಗಳಿಗೆ ಸಂವಹನಗೊಳ್ಳುವಲ್ಲಿ ತೊಡಕಾಗಿದೆ ಎಂಬುದು ಸಾಮಾನ್ಯ ತಿಳುವಳಿಕೆ. ಹಾಗಾಗಿ ಪಾಠ ಹೇಳುವ ಅಧ್ಯಾಪಕರು ಕೂಡ ಕುವೆಂಪು ನಾಟಕಗಳನ್ನು ಭೋಧಿಸುವಲ್ಲಿ ಹೆಚ್ಚಿನ ಶ್ರಮ ವಹಿಸುತ್ತಾರೆ. ಕುವೆಂಪು ಅವರ ಶ್ರೀಮಂತ ಪದಸಂಪತ್ತು ಓದುಗರನ್ನು ಬೆರಗುಗೊಳಿಸುತ್ತದೆ. ಈ ಕಾರಣಗಳಿಂದ ಇಂಥ ನಾಟಕಗಳನ್ನು ಸುಲಭವಾಗಿ ಓದುಗರಿಗೆ ತಲುಪಿಸುವ ಮಾರ್ಗಗಳ ಬಗ್ಗೆ ಯೋಚಿಸಿದಾಗ ಸಿಕ್ಕಿರುವ ಪ್ರಮುಖ ಮಾಧ್ಯಮವೆಂದರೆ ರಂಗಭೂಮಿ. ನಾಟಕವನ್ನು ವೇದಿಕೆಯ ಮೇಲೆ ತರುವ ಮೂಲಕ ಸರಳವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ.


ಕುವೆಂಪು ಅವರು ತಮ್ಮ ನಾಟಕಗಳನ್ನು ರಂಗಭೂಮಿ ಮೇಲೆ ಪ್ರದರ್ಶಿಸುವುದನ್ನು ಅಷ್ಟಾಗಿ ಒಪ್ಪುವುದಿಲ್ಲ. ತಮ್ಮ ನಾಟಕಗಳಲ್ಲಿ ಬರುವ ಚಿತ್ರಗಳ ಬೃಹತ್ ಹಾಗೂ ಮಹತ್‌ಗಳನ್ನು ಹೊರಗಡೆಯ ಅಲ್ಪ ವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದು ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾದ್ಯವಾದ ಮನೋ ರಂಗಭೂಮಿಯಲ್ಲಿ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು. ದೃಶ್ಯರೂಪಿಯಾದರೂ ಅದು ಕಾವ್ಯಾತ್ಮಕವಾದುದು. ಮನೋವೇದಿಕೆಯ ಸಜೀವತೆಯ ಮತ್ತು ಶ್ರೀಮಂತತೆಯ ಮುಂದೆ ಹೊರಗಡೆಯ ನಾಟಕ ಶಾಲೆ ಒಂದು ದರಿದ್ರ ಪ್ರಯತ್ನವೆಂದು ಪ್ರತಿಭಾ ಪ್ರಭುಗಳೆಲ್ಲರಿಗೂ ನಿತ್ಯಾನುಭವವೇದ್ಯ  ಈ ಮಾತುಗಳನ್ನು ಕುವೆಂಪು ಅವರ ಶೂದ್ರ ತಪಸ್ವಿ ನಾಟಕದ ಮುನ್ನುಡಿಯಲ್ಲಿ ಬರೆಯುತ್ತಾರೆ. ವಿಶೇಷವೆಂದರೆ ಕುವೆಂಪು ಈ ಮಾತುಗಳನ್ನು ಬರೆಯುವ ಹೊತ್ತಿಗೆ ಅವರ ’ಬೆರಳ್ಗೆ ಕೊರಳ್’ ನಾಟಕವನ್ನು ಅತ್ಯಂತ ಅದ್ಭುತವಾಗಿ ರಂಗದ ಮೇಲೆ ತಂದು ಪ್ರೇಕ್ಷಕರ ಮೆಚುಗೆಯನ್ನು ಗಳಿಸಲಾಗಿತ್ತು. ಈ ವಿಷಯ ತಿಳಿದಿದ್ದ ಕುವೆಂಪು ’ನಟಸಾಹಸಿಗಳಿಗೆ ಮುನ್ನುಡಿಕಾರನ ಈ ಉಕ್ತಿಯನ್ನು ಹುಸಿಗೊಳಿಸಲು ಸಾಧ್ಯವಾಗಬಹುದೇನೋ’ ಎಂಬ ಅನುಮಾನವನ್ನು ಅಲ್ಲಿಯೇ ವ್ಯಕ್ತಪಡಿಸುತ್ತಾರೆ. ಕುವೆಂಪು ಅವರ ಈ ಅನುಮಾನವನ್ನು ಆದಷ್ಟು ಬೇಗ ಸತ್ಯಮಾಡಿದವರು ನಮ್ಮ ಕನ್ನಡ ರಂಗ ನಿದೇರ್ಶಕರು ಹಾಗೂ ರಂಗಕಲಾವಿದರು. ಕುವೆಂಪು ಅವರ ನಾಟಕ ರೂಪಗಳನ್ನಷ್ಟೇ ಅಲ್ಲದೆ ಅವರ ಅನೇಕ ಸಣ್ಣ ಕಥೆಗಳನ್ನು ಕೂಡ ರಂಗ ರೂಪಕ್ಕೆ ಅಳವಡಿಸಿ ಪ್ರದರ್ಶನ ನೀಡಿದರು. ಈ ಕ್ಷೇತ್ರದ ಮತ್ತೊಂದು ಅದ್ಭುತವೆಂದರೆ ಸಿ.ಬಸವಲಿಂಗಯ್ಯ ಅವರು ಕುವೆಂಪು ಅವರ ೭೦೦ ಕ್ಕೂ ಹೆಚ್ಚು ಪುಟಗಳಿರುವ ’ಮಲೆಗಳಲ್ಲಿ ಮದುಮಗಳು’  ಮಹಾ ಕಾದಂಬರಿಯನ್ನು ಕೂಡ ಸುದೀರ್ಘ ರಂಗ ಪ್ರದರ್ಶನಕ್ಕೆ ಒಳಪಡಿಸಿದ್ದು ಗಮನಿಸಲೇ ಬೇಕಾದ ಸಂಗತಿ.
ಕುವೆಂಪು ಅವರ ನಾಟಕಗಳನ್ನು ರಂಗದ ಮೇಲೆ ತರುವುದು ಬಹಳ ಕಷ್ಟ ಎಂದೆನಿಸಿದರೂ ಅಸಾಧ್ಯವಾದುದೇನಲ್ಲ ಎಂಬುದನ್ನು ನಮ್ಮ ರಂಗ ಕಲಾವಿದರು ಮಾಡಿ ತೋರಿಸಿದ್ದಾರೆ. ಈ ಪ್ರಯತ್ನಗಳು ಯಾವಾಗಲೋ ಒಮ್ಮೆ ಮಾತ್ರವಲ್ಲದೆ ಸಮಯ ಬಂದಾಗಲೆಲ್ಲ ಅತೀ ನಿಷ್ಠೆಯಿಂದ ಈ ಕಾರ್ಯಗಳನ್ನು ಮಾಡಿದ್ದಾರೆ. ಈ ಪ್ರಯತ್ನಗಳ ಚರಿತ್ರೆಯ ಭಾಗವಾಗಿ ಶಿವಮೊಗ್ಗೆಯ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿ.ಎಸ್ಸಿ. ವಿದ್ಯಾರ್ಥಿ/ನಿಯರು ಕುವೆಂಪು ಅವರ ’ಶ್ಮಶಾನ ಕುರುಕ್ಷೇತ್ರ’ ನಾಟಕವನ್ನು ರಂಗದ ಮೇಲೆ ಪ್ರದರ್ಶಿಸುವುದರ ಮೂಲಕ ಅತ್ಯಂತ ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ವಿಜ್ಞಾನ ವಿದ್ಯಾರ್ಥಿಗಳು ಪ್ರಯೋಗಶಾಲೆಗಳ ಗುಂಗಲ್ಲಿ ಇರುವವರು. ಅವರೇಕೆ ಇಂಥ ಸಾಹಸದ ಕೆಲಸಕ್ಕಿಳಿದರು ಎಂಬುದು ನಮಗೆ ಸಹಜವಾಗಿ ಎದುರಾಗುವ ಪ್ರಶ್ನೆ. ಆದರೆ ಈ ಪ್ರಯತ್ನ ನಾವು ಊಹಿಸಿದಂತಿಲ್ಲ. ಕುವೆಂಪು ವಿಶ್ವವಿದ್ಯಾಲಯ ಈ ಶೈಕ್ಷಣಿಕ ವರ್ಷದಲ್ಲಿ ’ಶ್ಮಶಾನ ಕುರುಕ್ಷೇತ್ರ’  ನಾಟವನ್ನು ಬಿ.ಎ, ಬಿಎಸ್ಸಿ, ಬಿ.ಕಾಂ, ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ತರಗತಿಗಳಿಗೆ ಕನ್ನಡ ಭಾಷಾ ಪಠ್ಯವಾಗಿ ನಿಗಧಿಪಡಿಸಿದೆ. ಈ ಪಠ್ಯದ ಅನುಸಂಧಾನಕ್ಕೆ ತೊಡಗಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮನಸಲ್ಲಿ ಕುವೆಂಪು ಅವರ ಈ ನಾಟಕದ ಇಂಥ ಗಂಭೀರ ಭಾಷೆ ಮತ್ತು ಬಂಧವಿರುವ ಕಾರಣಕ್ಕಾಗಿ ಇದನ್ನು ಏಕೆ ರಂಗದ ಮೇಲೆ ತಂದು ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸಬಾರದು ಎಂಬ ಭಾವನೆ ಬಂದಿದ್ದೆ ತಡ ಸಹಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ರಂಗ ನಿರ್ದೇಶಕ ಜಿ.ಆರ್. ಲವ ಅವರು ಆಸಕ್ತ ವಿದ್ಯಾರ್ಥಿಗಳ ತಂಡವೊಂದನ್ನು ಕಟ್ಟಿ ನಾಟಕದ ತಾಲೀಮು ಶುರುಮಾಡುತ್ತಾರೆ. ವಿಶೇಷವೆಂದರೆ ಈ ನಾಟಕವನ್ನು ಅಭಿನಯಿಸಲು ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರು ಮೊದಲ ಬಾರಿಗೆ ರಂಗಕ್ಕೆ ಪ್ರವೇಶಿಸಿದವರೆ ಆಗಿದ್ದರು. ಆದರೆ ಆ ಎಲ್ಲಾ ವಿದ್ಯಾರ್ಥಿಗಳಲ್ಲಿ ಅನುಭವವಿಲ್ಲದಿದ್ದರೂ ಉತ್ಸಾಹ ಹಾಗೂ ಛಲವಿತ್ತು. ಇವರ ಈ ಮನೋಸ್ಥಿತಿಗೆ ಇನ್ನಷ್ಟು ಉತ್ತೇಜನ ನೀಡಬಲ್ಲ ಜಿ.ಆರ್.ಲವ ಅವರ ನಿರ್ದೇಶನದ ಶಕ್ತಿ ಇತ್ತು. ಇವರೆಲ್ಲರಿಗೂ ಧೈರ‍್ಯ ತುಂಬಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಆರ್. ಶಶಿರೇಖ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ಕೆ.ಎಲ್.ನಾಯಕ್ ಅವರ ಪ್ರಯತ್ನ  ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರ ಸಹಕಾರದೊಂದಿಗೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಶಶಾನ ಕುರುಕ್ಷೇತ್ರ ನಾಟಕ ಪಠ್ಯವನ್ನು ರಂಗದ ಮೇಲೆ(ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ) ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಈ ಪ್ರದರ್ಶನದಲ್ಲಿ ಕಬ್ಬಿಣದ ಕಡಲೆಯಂತಿದ್ದ ಹಳೆಗನ್ನಡ ಭಾಷೆಯನ್ನು ಹೊಸಗನ್ನಡಕ್ಕೆ ರೂಪಾಂತರಿಸದೆ ಅದರ ಮೂಲ ಸ್ವರೂಪದಲ್ಲಿಯೇ ನಿಖರವಾಗಿ ಬಿಡಿಸಿ, ಸ್ಪಷ್ಟವಾಗಿ ಉಚ್ಛಾರಮಾಡಿ ಪ್ರೇಕ್ಷಕ ವಿದ್ಯಾರ್ಥಿಗಳು ಇದು ಹೀಗಾ!? ಎಂದು ಬೆರಗುಗೊಳಿಸುವಂತೆ ಸಂಭಾಷಣೆಗಳನ್ನು ಪ್ರಸ್ತುತಪಡಿಸಿದರು.
ಈ ನಾಟಕ ಕುರುಕ್ಷೇತ್ರದ ನಂತರ ಜರುಗಿದ ಘಟನಾವಳಿಗಳನ್ನು ಚಿತ್ರಿಸುತ್ತದೆ. ಮುಖ್ಯವಾಗಿ ಕುರುಕ್ಷೇತ್ರ ಯುದ್ಧದ ಕಾರಣದಿಂದ ಕೌರವರು, ಪಾಂಡವರು ಹಾಗೂ ಸೈನಿಕ ಕುಟುಂಬಗಳಲ್ಲಿ ಉಂಟಾಗುವ ಮನೋ ವ್ಯಾಕುಲತೆಗಳನ್ನು ದರ್ಶಿಸುವ ಪ್ರಯತ್ನಮಾಡುತ್ತದೆ. ಹತ್ತು ದೃಶ್ಯಗಳ ಈ ನಾಟಕವನ್ನು ರಂಗ ರೂಪಕ್ಕೆ ಅಳವಡಿಸಿಕೊಳ್ಳುವಾಗ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ವಿದ್ಯಾರ್ಥಿಗಳ ಪಠ್ಯ ಸಂವಹನದ ಉದ್ದೇಶ ಇಲ್ಲಿ ಮುಖ್ಯವಾಗಿರುವುದರಿಂದ ಆದಷ್ಟು ಮೂಲಕ್ಕೆ ನಿಷ್ಠೆಯಾಗಿ ರಂಗ ಪಠ್ಯವನ್ನು ರೂಪಿಸಿಕೊಳ್ಳಲಾಗಿದೆ.
ದ್ವಾಪರ ದೇವ ಮತ್ತು ಕಲಿ ದೇವನ ಸಂಭಾಷಣೆಯೊಂದಿಗೆ ಆರಂಭವಾಗುವ ನಾಟಕದ ಮೊದಲ ದೃಶ್ಯದಲ್ಲಿ ದ್ವಾಪರದೇವ ದುರಂತದಲ್ಲಿ ಅಂತ್ಯಗೊಳ್ಳುತ್ತಿರುವ ತನ್ನ ವೈಭವಯುತ ಯುಗದ ದುಸ್ಥಿತಿಯನ್ನು ಕಂಡು ಮನೋ ವ್ಯಾಕುಲತೆಗೆ ಒಳಗಾಗಿದ್ದಾನೆ. ಹಾಗೆ ಮುಂದೆ ಬರಲಿರುವ ಕಲಿಯುಗದ ಅಧಿಪತಿ ಕಲಿಮಹಾಶಯ ತನ್ನ ಯುಗವನ್ನು ಶ್ರೀಮಂತವಾಗಿ ಕಟ್ಟುವ ಉತ್ಸಾಹದಲ್ಲಿದ್ದಾನೆ. ನಂತರದ ದೃಶ್ಯದಲ್ಲಿ ಶಶಾನ ರೂಪುತಳೆದಿರುವ ಕುರುಕ್ಷೇತ್ರ ಯುದ್ಧ ಭೂಮಿಗೆ ಬಂದ ಮರುಳುಗಳು ಅಲ್ಲಿನ ಸ್ಥಿತಿಯನ್ನು ಕಂಡು ’ಮಾನವರ್ ಕೊಲೆಗೆ ಕೈಯಿಡೆ ಮಾರಿಯನ್ ಮೀರ್ದಪರ್’, ’ಇದೇನ್ ಮಾನವರ ಮರುಳುತನಂ ಎಮ್ಮನ್ನು ಗೆಲುವಂತಿರ್ಪುದು!’, ’ಏನ್ ಮಚ್ಚರವೋ? ಏನ್ ಕಾಳಗದ ಪುರ್ಚೊ ಈ ಕೀಳ್ಮಾನಿಸರ್ಗೆ!’ ಎಂಬುದಾಗಿ ಹೇಳುವ ಮಾತುಗಳು ಮನುಷ್ಯ ತನ್ನ ಪ್ರತಿಷ್ಠೆಯ ಕಾರಣಕ್ಕೆ ನಡೆಸಿದ ರಾಕ್ಷಸೀ ಕೃತ್ಯಗಳನ್ನು ಹಿಯ್ಯಾಳಿಸುತ್ತವೆ.
ಮುಂದಿನ ದೃಶ್ಯಗಳಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಕಳೆದುಕೊಂಡ ತಮ್ಮವರಿಗಾಗಿ ಹುಡಕಾಟ ನಡೆಸುವ ಕುರುಪತಿಯ ನಿಷ್ಠರು ಹಾಗೂ ಸೈನಿಕರ ಕುಟುಂಬಸ್ತರಾದ ಮಾತೆ ಮತ್ತು ಮುದುಕಿಯರ ಸಂಭಾಷಣೆಗಳಲ್ಲಿ ನಾಟಕದ ಮಹತ್ವದ ಆಶಯಗಳು ಬಿಂಬಿತವಾಗಿವೆ. ಇನ್ನೂ ಮನಕಲಕುವ ಸಂಗತಿಯೆಂದರೆ ಕುರುಪತಿಯ ತಂದೆ ದೃತರಾಷ್ಟ್ರ, ತಾಯಿ ಗಾಂಧಾರಿಯರು  ಮಗನನ್ನು ಹುಡುಕಿ ಸ್ಮಶಾನ ಸದೃಶ್ಯವಾದ ಯುದ್ಧಭೂಮಿಗೆ ಬರುವ ದೃಶ್ಯ ಪ್ರೇಕ್ಷಕರ ಮನ ಕಲಕುತ್ತದೆ. ಬಹುಮುಖ್ಯವಾಗಿ ಯುದ್ಧವನ್ನು ಗೆದ್ದ ಪಾಂಡವರೂ ಕೂಡ ಯುದ್ಧಭೂಮಿಯಲ್ಲಿ ಮಡಿದು ಬಿದ್ದಿರುವ ತಮ್ಮ ಬಂಧುಗಳನ್ನು ಕಂಡು ನಿಜವಾದ ಅರ್ಥದಲ್ಲಿ ಸೋಲುತ್ತಾರೆ. ಯುದ್ಧದಿಂದಾಗಿರುವ ಅನಾಹುತಗಳ ಕಂಡು ಅಸಹ್ಯಪಟ್ಟುಕೊಳ್ಳುತ್ತಾರೆ. ಈ ಸಹಜ ಭಾವನೆಗಳನ್ನು ಮೀರಿ ಶೌರ‍್ಯವನ್ನು ತೋರುವ ಭೀಮ ಕೂಡ ತಮ್ಮ ಮಕ್ಕಳಾದ ಅಭಿಮನ್ಯು ಮತ್ತು ಘಟೋತ್ಕಜರ ಶವಗಳ ಮುಂದೆನಿಂತು ’ಕೊಲೆಗಾರನ್ ಆನ್ ಎಂಬುದನ್ ಈಗಳ್ ಅರಿತೆನ್. ಗಾಂಧಾರಿ, ದೃತರಾಷ್ಟ್ರರ ಅಳಲಾಳಂ ತಿಳಿದೆನ್’ ಹಾಗೂ ದುರ್ಯೋಧನನ ಕಡೆ ಹೋರಾಡಿ ತಮ್ಮವರ ಪ್ರಾಣಹಾನಿಗೆ ಕಾರಣವಾದ ಕರ್ಣ ನಮ್ಮ ಅಣ್ಣ ಎಂಬುದನ್ನು ಅರಿತ ಮೇಲೆ    ’ಕಡೆಗೂ ಪೊಲಸಾದುದೀ ಭಾರತ ಸಂಗ್ರಾಮಂ’ ಎನ್ನುವ ಮಾತುಗಳ ಮೂಲಕ ಯುದ್ಧದ ಬಗ್ಗೆ ಜಿಗುಪ್ಸೆಯ ಭಾವ ತಾಳುತ್ತಾನೆ. ಭೀಮನ ಗದೆಯಿಂದ ತೊಡೆಮುರಿದು ಬಿದ್ದ ದುರ್ಯೋಧನ ತನ್ನ ಗರ್ವ ಹಾಗೂ ಹಠಮಾರಿತನವನ್ನು ಮೆರೆಯುತ್ತಾನಾದರೂ ಆತನ ತಂದೆ ತಾಯಿಯ ಮುಖ ನೋಡಿದ ತಕ್ಷಣ ಕುಗ್ಗಿ ಹೋಗುತ್ತಾನೆ. ಹೀಗೆ ಯುದ್ಧಾಸ್ತಕರಾಗಿದ್ದ ಎಲ್ಲಾ ವೀರರು ಯುದ್ಧದ ಪರಿಣಾಮಗಳನ್ನು ಕಂಡಾಕ್ಷಣ ಯುದ್ಧ ವಿಮುಖವಾಗುವ ಸಂದರ್ಭಗಳು, ನಮ್ಮ ಸಮಾಜಕ್ಕೆ ಯುದ್ಧ ಬೇಡವೆನ್ನುವ ಸಂದೇಶ ನೀಡುವಲ್ಲಿ ಯಶಸ್ವಿಯಾಗುತ್ತವೆ. ಇಲ್ಲಿ ಬರುವ ಕುಂತಿ ತನ್ನ ಹಿರಿಯ ಮಗ ಮಡಿದ ಕರ್ಣನನ್ನು ಬಂಧುಗಳ ಚಿತೆಯಲ್ಲಿಗೂ ಸೇರಿಸಲಾಗದೆ ಪಡುವ ದುಖಃ; ಮಾನವನ ದ್ವೇಷ ಹಾಗೂ ಯುದ್ಧದ ಬಗ್ಗೆ ನಮ್ಮಲ್ಲಿ ಇನ್ನಷ್ಟು ಅಸಹ್ಯವನ್ನು ಹುಟ್ಟಿಸುತ್ತವೆ. ಕೊನೆಗೆ ಮಾತೆ ಮತ್ತು ಮುದುಕಿ, ತಮ್ಮವರು ಪರಸ್ಪರ ಶತ್ರುಗಳಲ್ಲದೇ ಹೋದರು ರಾಜರ ಶತೃತ್ವದ ಕಾರಣಕ್ಕೆ ಒಬ್ಬರನ್ನೊಬ್ಬರು ಹಿರಿದುಕೊಂಡು ಸತ್ತಿರುವ ದೃಶ್ಯವನ್ನು ಕಂಡು ಗೋಳಿಡುವ ಹಾಗೂ ಕೌರವರಿಗೂ ಪಾಂಡವರಿಗೂ ದಿಕ್ಕಾರ ಹೇಳುವ; ಹಾಳಾಗಲಿ ಎಂದು ಶಪಿಸುವ ಸಂದರ್ಭವಂತೂ ಯುದ್ದ ವಿರೋಧಿ ಭಾವನೆಯನ್ನು ಸಮರ್ಥವಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕುವೆಂಪು ಅವರು ತಮ್ಮ ಉದ್ದೇಶವನ್ನು ಇಲ್ಲಿಗೆ ಮುಗಿಸುವುದಿಲ್ಲ. ಕೊನೆಯ ದೃಶ್ಯದಲ್ಲಿ ಕೃಷ್ಣ ರುದ್ರನಿಗೆ ಮುಂದೆ ಬರಲಿರುವ ಕಲಿಯುಗದ ದಿವ್ಯ ದರ್ಶನವನ್ನು ತೋರುತ್ತಾನೆ. ವಿಶೇಷವೆಂದರೆ ಅಲ್ಲಿಯೂ ಕೂಡ ಮನುಷ್ಯನ ಶ್ರೇಷ್ಠ ಬದುಕಿನ ನಡುವೆ ವಿಕೃತ ಕೆಲಸಗಳಿರುತ್ತವೆ ಎಂಬುದನ್ನು ಸೂಚ್ಯವಾಗಿ ತೋರುತ್ತಾನೆ. ಅಂದರೆ ಎಲ್ಲಾ ಕಾಲದಲ್ಲೂ ಕೆಟ್ಟದ್ದೂ ಇದ್ದೇ ಇರುತ್ತದೆ. ಆದರೆ ಅದನ್ನು ವಿವೇಕವಂತನಾದ ಮನುಷ್ಯ ಮೀರಿ ನಡೆಯಬೇಕಾಗುತ್ತದೆ ಎಂಬ ಭವಿಷ್ಯ ರೂಪದ ಮಾರ್ಗದರ್ಶನ ಇಲ್ಲಿ ಎದ್ದು ಕಾಣುತ್ತದೆ. ಈ ನಾಟಕದ ಕಥಾ ಹಂದರವನ್ನು ನೋಡಿದರೆ ಇಡೀ ಮಹಾಭಾರತದ ವಸ್ತುವಿಷಯಗಳು ಪ್ರಸ್ತಾಪವಾಗುತ್ತವೆ. ಇಂಥ ಸುದೀರ್ಘ ಸಂಗತಿಗಳನ್ನು ನಾಟಕದ ಕರ್ತೃ ಕುವೆಂಪು ಐವತ್ತು ಪುಟಗಳಲ್ಲಿ ಅಡಗಿಸಿದರೆ. ಪ್ರಸ್ತುತ ಪ್ರದರ್ಶನ ಕೇವಲ ಒಂದೂವರೆ ಗಂಟೆಯಲ್ಲಿ ಅವೆಲ್ಲವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಈ ಪ್ರದರ್ಶನ ಅಲ್ಪದಲ್ಲಿ ಕಲ್ಪವನ್ನು ಬಿಂಬಿಸುವ ಪ್ರಯತ್ನವಾಗಿದೆ ಎನ್ನಬಹುದು.
ಒಟ್ಟಾರೆ ಕೌರವ-ಪಾಂಡವರ ವೈಯುಕ್ತಿಕ ಕ್ಷುಲ್ಲಕ, ದ್ವೇಷ-ಅಸೂಯೆಗಳಿಂದ ಹುಟ್ಟಿದ ಯುದ್ಧ  ಇಡೀ ಮನುಕುಲಕ್ಕೆ ಅಪಾರ ಸಾವು ನೋವನ್ನು ತಂದೊಡ್ಡಿದ ಪರಿಯನ್ನು ನಾಟಕ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಟು, ಯುದ್ಧ ಮನುಷ್ಯನ ಬದುಕಲ್ಲಿ ಬೇಡವಾದುದು ಎಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇಂದಿನ ಆಧುನಿಕ ಯುಗವೂ ಕೂಡ ಕಳೆದ ಕಾಲದ ಯುದ್ಧದ ಭೀಕರ ಪರಿಣಾಮಗಳನ್ನು ತಿಳಿದಿದ್ದರೂ ಮತ್ತೆ ಮತ್ತೆ ಯುದ್ಧವನ್ನೇ ಧ್ಯಾನಿಸುವ ವಿಚಿತ್ರ ಮನಸ್ಸಿನಲ್ಲಿದೆ. ಇಂಥ ಸಂದರ್ಭದಲ್ಲಿ ಕುವೆಂಪು ಅವರ ಈ ಆಶಯ ನಮ್ಮದಾಗಬೇಕಿದೆ.

ಇಂಥ ಗಂಭೀರವಾದ ವಿಷಯ, ಸಂಕೀರ್ಣವಾದ ಸಂರಚನೆಯ ನಾಟಕವನ್ನು ಅತ್ಯಂತ ಸುಲಲಿತವಾಗಿ ಪ್ರೇಕ್ಷಕರ ಮುಂದಿಡುವಲ್ಲಿ ಹಾಗೂ ಅದರ ಸಂದೇಶಗಳನ್ನು ತಲುಪಿಸುವಲ್ಲಿ ವಿದ್ಯಾರ್ಥಿ ಕಲಾವಿದರು ಹಾಗೂ ನಿರ್ದೇಶಕರು ನಡೆಸಿದ   ಪ್ರಯತ್ನ ವಿದ್ಯಾರ್ಥಿ ಪ್ರೇಕ್ಷಕರ ಕಣ್ಣಲ್ಲಿ ನೀರೂರಿಸಿ ಯಶಸ್ವಿಯಾಗಿತ್ತು. ಪಠ್ಯ ರಂಗ ಎನ್ನುವ ಆಲೋಚನೆಯೊಂದಿಗೆ ತೆರಳಿದ್ದ ವಿದ್ಯಾರ್ಥಿಗಳು ಪಠ್ಯದಾಚೆಗೆ ಪಡೆಯಬೇಕಿದ್ದ ಪ್ರಯೋಜನವನ್ನು ಪಡೆದಿದ್ದರು. ಈ ಪರಿಣಾಮವನ್ನು ಕಂಡ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕ ವರ್ಗ ಈ ಪ್ರಯತ್ನ ಕೇವಲ ಇದೊಂದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೇ ಇನ್ನುಳಿದ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರದರ್ಶನಗಳನ್ನು ನೀಡಬಹುದೆಂಬ ಭಾವನೆಗಳನ್ನು ವ್ಯಕ್ತಪಡಿಸಿದರು. ಇದರಿಂದ ಇನ್ನಷ್ಟು ಉತ್ಸಾಹಗೊಂಡ ವಿದ್ಯಾರ್ಥಿಗಳು ಹಾಗೂ ನಿರ್ದೇಶಕರು ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ನಾಟಕವನ್ನು ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದಾರೆ. ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಭೋದಿಸುವ ಕ್ರಮಗಳಲ್ಲಿ ಹಲವಾರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿರುವ ಇಂದಿನ ದಿನಗಳಲ್ಲಿ ಈ ರೀತಿಯ ರಂಗ ಮಾಧ್ಯಮದ ಮೂಲಕ ಪಠ್ಯಗಳನ್ನು ತಲುಪಿಸುವ ರೀತಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೊಸಬೆಳಕು ತೋರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿ ಇಂಥ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿರುವ ಅಧ್ಯಾಪಕರಿಗೆ ಅವರನ್ನು ಪ್ರೋತ್ಸಾಹಿಸುತ್ತಿರುವ ಆಡಳಿತ ವರ್ಗದವರಿಗೆ ಅಭಿನಂದನೆಗಳು. 

**********************************

No comments:

Post a Comment