Saturday 27 September 2014

ಟಿ.ಪಿ.ಅಶೋಕ ಅವರ ವಿಮರ್ಶೆಯಲ್ಲಿ ದಲಿತ ದೃಷ್ಟಿಕೋನ

ಆಧುನಿಕ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ’ಸಾಹಿತ್ಯ ವಿಮರ್ಶೆ’ ಮಹತ್ವದ ಪ್ರಕಾರವಾಗಿ ಬೆಳೆದು ನಿಂತಿದೆ. ಈ ಬೆಳವಣಿಗೆಯಲ್ಲಿ ಅನೇಕ ಬರೆಹಗಾರರು ಪಾಲುದಾರರರಾಗಿದ್ದಾರೆ. ಅಂಥ ಪಾಲುದಾರರಲ್ಲಿ ಟಿ.ಪಿ. ಅಶೋಕ ಅವರೂ ಕೂಡ ಒಬ್ಬರು. ಇವರು ಆಧುನಿಕ ಕನ್ನಡ ಸಾಹಿತ್ಯ ವಿಮಶೆಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿಮಾಡಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮೂಲತಃ ನಂಜನಗೂಡಿನವರಾದ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್.ಬಿ. ಕಾಲೇಜಿನಲ್ಲಿ  ಇಂಗ್ಲಿಷ್ ಪ್ರಾಧ್ಯಾಪಕ ವೃತ್ತಿಯನ್ನು ಮಾಡುತ್ತಾ ಸಾಹಿತ್ಯ ವಿಮರ್ಶೆಯನ್ನು ಒಂದು ಪ್ರವೃತ್ತಿಯನ್ನಾಗಿಸಿ ಕೊಂಡವರು. ತಮ್ಮ ಸಾಹಿತ್ಯದ ವಿದ್ವತ್ ಚಿಂತನೆಗಳ ಪರಿಣಾಮ ಕೆಲಕಾಲ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದಾರೆ. ೧೯೭೮ ರಿಂದಲೇ ಸಾಹಿತ್ಯ ವಿಮರ್ಶೆಯ ಬರವಣಿಗೆಯನ್ನು ಆರಂಭಿಸಿದ ಇವರು ವಿಶೇಷವಾಗಿ ಪುಸ್ತಕ ವಿಮರ್ಶೆಯ ಕಾರ್ಯವನ್ನು ನೋಂಪಿಯಂತೆ ಮಾಡುತ್ತಾ ಬಂದವರು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ೧೯೮೪ ರಿಂದ ೧೯೯೧ ರವರೆಗೆ ’ಮಯೂರ’ ಪತ್ರಿಕೆಯಲ್ಲಿ ’ಅವಲೋಕನ’ ಎನ್ನುವ ಅಂಕಣದ ಮೂಲಕ; ೧೯೭೮ ರಿಂದ ೧೯೯೩ ರವರೆಗೆ ’ಪ್ರಜಾವಾಣಿಯ’ಯ ’ಸಾಪ್ತಾಹಿಕ ಪುರವಣಿ’ ಯಲ್ಲಿ ; ೨೦೦೦ ದಿಂದ ೨೦೧೦ ರವರೆಗೆ ’ವಿಜಯ ಕರ್ನಾಟಕ’ ದ ’ಸಾಪ್ತಾಹಿಕ ವಿಜಯ’ ದ ’ವಿರಾಮದ ಓದು’ ಅಂಕಣದ ಮೂಲಕ; ’ಸಂಯುಕ ಕರ್ನಾಟಕ’ ದ ’ಅಂತರ್ಯ’ ಅಂಕಣದಲ್ಲಿ , ’ಕಸ್ತೂರಿ’ ಪತ್ರಿಕೆಯಲ್ಲಿ; ಇಂಗ್ಲಿಷ್ ನ ’ದಿ ಹಿಂದೂ’ ಪತ್ರಿಕೆಯಲ್ಲಿ ಕನ್ನಡ ಹಾಗೂ ಬೇರೆ ಬೇರೆ ಭಾಷೆಯ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿದ್ದಾರೆ. ಇದಲ್ಲದೆ ಅಶೋಕ ಅವರು ಬರೆದಷ್ಟೆ ಮಾತನಾಡಿದ್ದಾರೆ. ಇದಕ್ಕಾಗಿ ಶಿಬಿರಗಳನ್ನು ಬಳಸಿಕೊಂಡಿದ್ದಾರೆ. ಶಿಬಿರಗಳನ್ನು ಆಯೋಜಿಸುವುದರಲ್ಲಿ ಇವರು ಸಿದ್ಧಹಸ್ತರು. ಸುಮಾರು ೩೦೦ ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ. ಆ ಮೂಲಕ ಹೊಸ ತಲೆಮಾರಿನ ತರುಣ ಓದುಗರನ್ನು ಬೆಳೆಸಿದ್ದಾರೆ. ಇದರ ಫಲವೆಂಬಂತೆ ಪತ್ರಿಕೆಗಳಲ್ಲಿ ಹಾಗೂ ಶಿಬಿರಗಳಲ್ಲಿ ಹೊರಹೊಮ್ಮಿದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಆಶೋಕ ಅವರ ಈವರೆಗೂ ಪ್ರಕಟವಾದ ಕೃತಿಗಳು ಹೀಗಿವೆ : ’ಸಾಹಿತ್ಯ ಸಂದರ್ಭ’, ’ಸಾಹಿತ್ಯ ಸಂಪರ್ಕ’, ’ಸಾಹಿತ್ಯ ಸಂಬಂಧ’, ’ಪುಸ್ತಕ ಪ್ರೀತಿ’, ’ಪುಸ್ತಕ ಸಮಯ’, ’ನವ್ಯ ಕಾದಂಬರಿಯ ಪ್ರೇರಣೆಗಳು’,’ಹೊಸ ಹೆಜ್ಜೆ- ಹೊಸ ಹಾದಿ’, ’ಕಾರಂತರ ಕಾದಂಬರಿಗಳಲ್ಲಿ ಆಧುನೀಕರಣ ಪ್ರ್ರಕ್ರಿಯೆ’, ’ಶಿವರಾಮ ಕಾರಂತ : ಎರಡು ಅಧ್ಯಯನಗಳು’, ’ವೈದೇಹಿ ಅವರ ಕಥೆಗಳು’, ’ಯು. ಆರ್. ಅನಂತಮೂರ್ತಿ : ಒಂದು ಅಧ್ಯಯನ’, ’ಕುವೆಂಪು ಕಾದಂಬರಿ : ಎರಡು ಅಧ್ಯಯನಗಳು’ ಮತ್ತು ’ತೇಜಸ್ವಿ ಕಥನ’ ಮೊದಲಾದ ವಿಮರ್ಶಾ ಸಂಕಲನಗಳು ; ’ಕೆ.ವಿ ಸುಬ್ಬಣ್ಣ ಆಯ್ದ ಬರೆಹಗಳು’ , ’ಸಾಹಿತ್ಯ ವಿಮರ್ಶೆ-೧೯೮೩’, ’ಎ.ಕೆ. ರಾಮಾನುಜನ್ ಅವರ ನೆನಪಿನ ಸಂಪುಟ’, ’ಕಾರಂತ ಮಂಥನ’, ’ಶಿವರಾಮ ಕಾರಂತ : ಈ ಶತಮಾನದ ನೋಟ’ ಮುಂತಾದ ಸಂಪಾದಿತ ಕೃತಿಗಳು ; ಇವಲ್ಲದೆ ರಷ್ಯನ್ ನೀಳ್ಗತೆಗಳು, ರಿಕ್ತ ರಂಗಭೂಮಿ ಎಂಬ ಎರಡು ಅನುವಾದ ಕೃತಿಗಳು ಕೂಡ ಪ್ರಕಟವಾಗಿವೆ.
ಇದುವರೆಗೂ ಒಟ್ಟು ೨೮ ಕೃತಿಗಳನ್ನು ಪ್ರಕಟಿಸಿರುವ ಟಿ.ಪಿ.ಅಶೋಕ ಅವರಿಗೆ ’ಸಾಹಿತ್ಯ ಸಂಪರ್ಕ’ ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನಾಮ್ದಾರ್ ಸ್ಮಾರಕ ಬಹುಮಾನ; ’ಪುಸ್ತಕ ಪ್ರೀತಿ’ ಗ್ರಂಥಕ್ಕೆ ವರ್ಧಮಾನ ಪ್ರಶಸ್ತಿ; ’ಸಾಹಿತ್ಯ ಸಂದರ್ಭ’ ಕೃತಿಗಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ತೀನಂಶ್ರೀ ಸ್ಮಾರಕ ಬಹುಮಾನ; ’ಶಿವರಾಮ ಕಾರಂತ : ಎರಡು ಅಧ್ಯಯನಗಳು’ ಕೃತಿಗೆ ಆರ್ಯಭಟ ಪ್ರಶಸ್ತಿಗಳು ಲಭಿಸಿವೆ. ಇದಲ್ಲದೆ ನಾಡಿನಾದ್ಯಂತ ಶಿಬಿರಗಳನ್ನು ನಡೆಸಿದ ಸಾಧನೆಗಾಗಿ ಸಂದೇಶ್ ಪ್ರಶಸ್ತಿ ಹಾಗೂ ಎಸ್.ವಿ. ಪರಮೇಶ್ವರಭಟ್ಟ ಸಂಸ್ಮರಣಾ ಪ್ರಶಸ್ತಿ ಗಳಿಸಿದ್ದಾರೆ.  ಇವೆಲ್ಲ ಪ್ರಶಸ್ತಿಗಳಿಗೆ ಮುಕುಟವೆಂಬಂತೆ ಆರನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಟಿ.ಪಿ ಅಶೋಕ ಅವರ ವಿಮರ್ಶಾ ದೃಷ್ಟಿ 
ಟಿ.ಪಿ. ಅಶೋಕ ಅವರ ವಿಮರ್ಶಾ ಬರೆಹದ ಹಿಂದೆ ಇರುವ ತಾತ್ವಿಕತೆಯ ಸ್ವರೂಪ ಮತ್ತು ಬೆಳವಣಿಗೆ ಅತ್ಯಂತ ಕೂತೂಹಲದಾಯಕವಾದುದು. ೧೯೭೯ ರಲ್ಲಿ ಪ್ರಕಟವಾದ ’ನವ್ಯ ಕಾದಂಬರಿಯ ಪ್ರೇರಣೆಗಳು’ ಕೃತಿಯಿಂದ ಆರಂಭಿಸಿ ೨೦೧೧ ರಲ್ಲಿ ಪ್ರಕಟವಾದ ’ಪುಸ್ತಕ ಸಮಯ’ ಕೃತಿಯವರೆಗಿನ ಒಟ್ಟು ಬರೆಹಗಳಲ್ಲಿ ಪ್ರಮುಖವಾದ ಎರಡು ರೀತಿಯ ಬರೆಹಗಳಿವೆ. ಅವುಗಳಲ್ಲಿ ಒಂದು : ಪುಸ್ತಕ ಪರಿಚಯ. ಸುಮಾರು ನೂರಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಗ್ರಂಥಗಳ ವಿಮರ್ಶಾತ್ಮಕ ಅವಲೋಕನ. ಎರಡು : ಕವಿ-ಕಾಲ-ಸಂದರ್ಭಗಳೊಡನೆ ಕೃತಿಗಳ ಮೌಲ್ಯಮಾಪನ. ಅಶೋಕರ ಆರಂಭಿಕ  ಬರೆಹಗಳಲ್ಲಿ ಕಥೆಯನ್ನು ನಂಬು ಕಥೆಗಾರರನ್ನಲ್ಲ ಎಂಬ ಭಾವನೆ ಪ್ರಧಾನವಾಗಿ ಕಂಡರೆ, ನಂತರದ ಬರೆಹಗಳಲ್ಲಿ ಕಥೆ ಹಾಗೂ ಕಥೆಗಾರ ಇವೆರಡನ್ನು ಒಂದೇ ಕಥಾನಕವಾಗಿ ಕಾಣುವ ದೃಷ್ಟಿ ಕಂಡು ಬರುತ್ತದೆ. ಇವರು  ವಿಮರ್ಶೆ ಎನ್ನುವುದು ಕೇವಲ ಅಕಾಡೆಮಿಕ್ ಕಾರ್ಯವಲ್ಲ. ಅದೊಂದು ಮಾನಸಿಕ, ಸಾಂಸ್ಕೃತಿಕ ಅಗತ್ಯ. ಮನಸ್ಸಿನ ಆರೋಗ್ಯಕ್ಕೆ, ಸಂಸ್ಕೃತಿಯ ಆರೋಗ್ಯಕ್ಕೆ ವಿಮರ್ಶೆ ಅತ್ಯವಶ್ಯ...... ವಿಮರ್ಶೆ ಕೇವಲ ಪ್ರತಿಕ್ರಿಯೆಯಲ್ಲ ಅದೇ ಮುಖ್ಯ ಕ್ರಿಯೆ. ಸರಿ ತಪ್ಪುಗಳ ತೀರ್ಪಿಗಿಂತ ಹೆಚ್ಚಾಗಿ ಎಚ್ಚರ ಸಂವಾದ ವಿಮರ್ಶೆಯ ಗುರಿಯಾಗಿರಬೇಕು.  ವಿಮರ್ಶೆಯು ಕೃತಿಯ ಮೇಲೆ ಸವಾರಿ ಮಾಡಬಾರದು. ಒಳ್ಳೆಯ ವಿಮರ್ಶೆಯು ಕಲಾ ಕೃತಿಯೊಂದು ಹೀಗೆ ಇರಬೇಕೆಂದು ಷರತ್ತು ಹಾಕುವುದಿಲ್ಲ. ಕಲಾಕೃತಿಯ ಅನನ್ಯತೆಯನ್ನು ಗುರುತಿಸುವುದೆ ವಿಮರ್ಶೆಯ ಮುಖ್ಯ ಕಾರ್ಯ. ಓದುಗನು ಕೃತಿಕಾರನನ್ನು ತಲುಪಲು ಇರುವ ಅಡ್ಡಿ ಆತಂಕಗಳನ್ನು ತೊಡದು ಹಾಕಲು ಪ್ರಯತ್ನಿಸಬೇಕು. ಆ ಮೂಲಕ ಒಳ್ಳೆಯ ಕೃತಿಗಳ ವ್ಯಾಪಕ ಓದು, ಚರ್ಚೆಯನ್ನು ಪ್ರಚೋದಿಸುವಂತಿರಬೇಕು. (ಸಾಹಿತ್ಯ ಸಂಬಂಧ, ೨೦೦೮, ಪುಟ : ೨೯೦-೨೯೨) ಎಂದು ನಂಬಿದವರು. ಈ ನಂಬಿಕೆ ಇವರ ಬರೆಹಗಳುದ್ದಕ್ಕೂ ಕಾಣುತ್ತದೆ. ಇಂಥ ತಾತ್ವಿಕತೆಯ ಹಿನ್ನೆಲೆಯಲ್ಲಿ ವಿಮರ್ಶಿಸುವ ಇವರು ’ಕಲಾಕೃತಿಗಳು ನಿರ್ದಿಷ್ಟ ಕಾಲ-ದೇಶ- ಸಂಸ್ಕೃತಿಗಳ ಒತ್ತಡದಲ್ಲಿ ಸೃಷ್ಟಿಯಾಗುತ್ತವೆ’ ಎಂಬುದನ್ನು ಪ್ರಧಾನವಾಗಿ ಪರಿಗಣಿಸುತ್ತಾರೆ. ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಪಂಚದಲ್ಲಿ ಇವರ ವಿಮರ್ಶೆಯ ಸ್ಥಾನ ಯಾವುದು ? ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಇಲ್ಲಿ ಕೇಳಿಕೊಳ್ಳಬೇಕು. ಇದಕ್ಕೆ ಉತ್ತರವೆಂಬಂತೆ ಅಶೋಕ ಅವರ ’ಸಾಹಿತ್ಯ ಸಂಬಂಧ’ ಕೃತಿಗೆ ಪ್ರಸ್ತಾವನೆ ಬರೆದ ಕೆ.ವಿ. ಅಕ್ಷರ ಅವರ ಮಾತುಗಳನ್ನು ಇಲ್ಲಿ ನೋಡಬಹುದು ; ಕನ್ನಡ ವಿಮರ್ಶೆಯಲ್ಲಿ ಪ್ರಮುಖವಾದ ಎರಡು ವಿಧಗಳಿವೆ. ಒಂದು ಡಿ.ಆರ್. ನಾಗರಾಜ್ ಅವರ ಮಾರ್ಗ, ಅದು ಪಶ್ಚಿಮದ ಪರಿಣಿತರಿಗಿಂತ ಹೆಚ್ಚು ಪರಿಣಿತಿಗೆ ಯತ್ನಿಸುವ ಮತ್ತು ಆ ಮೂಲಕವೇ ನಾಜೂಕಾಗಿ ಅವರಿಗೇ ಚೆಳ್ಳೇಹಣ್ಣು ತಿನಿಸುವ ತಿರುಮಂತ್ರದ ಹಾದಿ. ಇನ್ನೊಂದು ’ಡಿ ಪ್ರೊಫೇಷನಲೈಜೇಷನ್’ ನ ಹಾದಿ. ಟಿ.ಪಿ ಅಶೋಕ ಅವರ ವಿಮರ್ಶೆ ಈ ಎರಡನೇ ಮಾದರಿಯದು. ಈ ಹಾದಿಯಲ್ಲಿ ಹೊರಡುವ ಲೇಖಕರು ತಾವು ಮತ್ತು ತಮ್ಮ ಓದುಗ, ಕೇಳುಗರಿಬ್ಬರೂ ಸಮಾನವಾಗಿ ಸರಳರೆಂದು ಭಾವಿಸಿಕೊಂಡು, ಮೇಲ್ನೋಟಕ್ಕೆ ಕ್ಲಿಷ್ಟವಾಗಿ ಕಾಣಬಹುದಾದ ಸಂಗತಿಗಳನ್ನು ಸರಳವಾಗಿ ವಿವರಿಸಲಿಕ್ಕೆ ಸಾಧ್ಯವೆಂದು ನಂಬುವಂತವರು. ಮಾತ್ರವಲ್ಲ ಸಾಹಿತ್ಯದ ಪ್ರಯೋಜನವು ಸಾಹಿತ್ಯದ ವಿದ್ಯಾರ್ಥಿಗಳ ಆಚೆಗೂ ಇದೆಯೆಂಬ ನಂಬಿಕೆ ಈ ವರ್ಗದ ವಿಮರ್ಶಕರಿಗಿದೆ.(ಸಾಹಿತ್ಯ ಸಂಬಂಧ, ೨೦೦೮, ಪುಟ : ೦೯-೧೦). ಈ ಕಾರಣದಿಂದಾಗಿಯೇ ಅಶೋಕ ಅವರ ವಿಮರ್ಶೆಯ ಬರೆಹವು ಅತ್ಯಂತ ಸರಳವಾಗಿರುತ್ತದೆ ಹಾಗೂ ಕೃತಿನಿಷ್ಟವಾಗಿರುತ್ತದೆ. ಇವರು ಯಾವುದೇ ಕೃತಿಯ ಬಗ್ಗೆ ಬರೆಯುವಾಗಲೂ ಅದರಲ್ಲಿನ ಕಥೆಯನ್ನು ಪುನಃ ಹೇಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ ಆ ಕೃತಿಯೊಳಗಿಂದ ದೀರ್ಘ ಉಲ್ಲೇಖಗಳನ್ನು ನೀಡುತ್ತಾರೆ. ಇದರಿಂದಾಗಿ ಕೆಲವರು ಅಶೋಕ ಅವರನ್ನು ’ಸಾರಾಂಶ ವಿಮರ್ಶಕ’ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಆದರೆ ಮೇಲೆ ವಿವರಿಸಿದ ಅವರ ವಿಮರ್ಶಾ ನಂಬಿಕೆ ಹಾಗೂ ತಿಳುವಳಿಕೆಯ ಹಿನ್ನೆಲೆಯಲ್ಲಿ ಗಮನಿಸಿದರೆ ಅದೊಂದು ದೋಷವಲ್ಲ; ಗುಣ ಎಂಬುದು ಅರಿವಿಗೆ ಬರುತ್ತದೆ. ಅದೂ ಅಲ್ಲದೇ ಸಾರಾಂಶ ಹೇಳುವುದರಲ್ಲೇ ಅಶೋಕ ಅವರು ವಿರಮಿಸುವುದಿಲ್ಲ. ಅದರ ಗುಣ ದೋಷಗಳನ್ನು ಹಾಗೂ ಸಾಧ್ಯತೆಗಳನ್ನು ಪರಿಶೀಲಿಸಿ ಮೌಲ್ಯಮಾಪನವನ್ನು ಮಾಡುತ್ತಾರೆ. ಇದರೊಳಗೆ ಅವರದೇ ಆದ ದೃಷ್ಟಿ ಧೋರಣೆಗಳೂ ಇರುತ್ತವೆ.
ಟಿ.ಪಿ ಅಶೋಕ ಅವರ ವಿಮರ್ಶೆಯಲ್ಲಿ ದಲಿತ ದೃಷ್ಟಿ 
ಟಿ.ಪಿ ಅಶೋಕ ಅವರ ವಿಮರ್ಶೆಯ ಒಟ್ಟು ಬರೆಹದ ಬೃಹತ್ ರಾಶಿಯಲ್ಲಿ ದಲಿತ ಕಥನಗಳು ಹಾಗೂ ಕಥನಕಾರರ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅವುಗಳಲ್ಲಿ ’ಲೋಹಿಯಾ ಅವರ ಜಾತಿ ಪದ್ಧತಿ’, ’ಕುಂವೀ ಅವರ ಡೋಮ ಮತ್ತಿತರ ಕಥೆಗಳು’, ’ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳು’, ’ದೇವನೂರ ಮಹದೇವ ಅವರ ಕುಸುಮಬಾಲೆ’, ’ಸಿದ್ಧಲಿಂಗಯ್ಯ ಅವರ ಉರಿ ಕಂಡಾಯ’, ದೇವನೂರ ಮಹದೇವ : ವ್ಯಕ್ತಿ ಮತ್ತು ಕೃತಿ’, ’ಕುವೆಂಪು ಆಧುನಿಕತೆಯ ಪ್ರಶ್ನೆ’, ಕನ್ನಡ ಕಾದಂಬರಿ ಪರಂಪರೆ ಮತ್ತು ಭಾರತೀಪುರ’ ಇವೇ ಮೊದಲಾದ ಬರೆಹಗಳನ್ನು ಆಧರಿಸಿ ಟಿ.ಪಿ.ಅಶೋಕ ಅವರ ದಲಿತ ದೃಷ್ಟಿಕೋನವನ್ನು ಗುರುತಿಸುವ ಪ್ರಯತ್ನ ಮಾಡಬಹುದಾಗಿದೆ.
ಟಿ.ಪಿ.ಅಶೋಕ ಅವರ ವಿಮರ್ಶಾ ಬರೆಹಗಳಲ್ಲಿ ವ್ಯಕ್ತವಾಗಿರುವ ದಲಿತ ದೃಷ್ಟಿಕೋನವನ್ನು ಪ್ರಧಾನವಾದ ಎರಡು ನೆಲೆಗಳಲ್ಲಿ ಗುರುತಿಸಬಹುದಾಗಿದೆ. ಅವುಗಳಲ್ಲಿ ಒಂದು : ದಲಿತ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆ. ಎರಡು : ದಲಿತ ಕೃತಿಗಳ ಸಾಹಿತ್ಯಿಕ ನೆಲೆ
 ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆ 
ಭಾರತೀಯ ಸಂದರ್ಭದೊಳಗೆ ದಲಿತರು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಣೆಗೆ ಒಳಗಾದವರು ಎಂಬ ಸಾಮಾನ್ಯ ತಿಳುವಳಿಕೆಯನ್ನು ಅಶೋಕ ಅವರೂ ಕೂಡ ಮಾನ್ಯ ಮಾಡುತ್ತಾರೆ. ದಲಿತರ ಇಂಥ ದುಸ್ಥಿತಿಗೆ ಜಮೀನ್ದಾರರು ಹಾಗೂ ಧಾರ್ಮಿಕ ಶಕ್ತಿಗಳು ಒಂದು ಕಾರಣ ಎಂಬುದನ್ನು ಯಾವುದೇ ತಕರಾರು ಇಲ್ಲದೇ ಒಪ್ಪಿಕೊಂಡಿದ್ದಾರೆ. ಹಾಗೂ ಈ ಜನವರ್ಗಗಳು ಸಮಾಜದಲ್ಲಿ ಶೋಷಣೆಯ ಜಗತ್ತಿನಿಂದ ಎದ್ದು ಬರಬೇಕು ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲದ ದೃಷ್ಟಿ ಅಶೋಕ ಅವರ ಬರೆಹಗಳಲ್ಲಿ ಬಹುಪಾಲು ಸಂದರ್ಭಗಳಲ್ಲಿ ಗುಪ್ತಗಾಮಿನಿಯಾಗಿ ಕೆಲವೊಮ್ಮೆ ನೇರವಾಗಿ ವ್ಯಕ್ತವಾಗಿರುವುದನ್ನು ಕಾಣಬಹುದು. ಇದಕ್ಕೆ ಆಧಾರವಾಗಿ ಅವರ ವಿಮರ್ಶಾ ಬರೆಹವೊಂದರಲ್ಲಿ ಬಂದಿರುವ ಕೆಲವು ಮಾತುಗಳನ್ನು ನೋಡುವುದಾದರೆ :  ಕೆಳವರ್ಗದ ಬದುಕು ಬದಲಾಗಬೇಕು. ಶೋಷಣೆ ನಿಲ್ಲಬೇಕು. ಶೋಷಕ ವರ್ಗವನ್ನು ಎದುರಿಸಲು ಶೋಷಿತ ವರ್ಗ ಸಜ್ಜಾಗಬೇಕು ಎಂಬುದನ್ನೇ ಎಲ್ಲಾ ಪ್ರಜ್ಞಾವಂತ ಓದುಗರು ಬಯಸುವುದು. ಏಕೆಂದರೆ ದಲಿತ ಜನಾಂಗದ ವಿಮೋಚನೆಯಲ್ಲಿ ಮಾತ್ರ ಇಡೀ ಮಾನವ ಜನಾಂಗದ ವಿವೇಚನೆ ಸಾಧ್ಯವೆಂಬುದು ಅವರಿಗೆ ಗೊತ್ತು ( ಪುಸ್ತಕ ಪ್ರೀತಿ, ೧೯೯೩, ಪುಟ : ೧೦೩). ಇದು ಅಶೋಕ ಅವರಿಗೂ ಗೊತ್ತು
ದಲಿತರು ಶೋಷಣೆಯಿಂದ ವಿಮುಕ್ತಿ ಪಡೆಯವುದರ ಬಗ್ಗೆ ಚಿಂತಿಸುತ್ತಾ , ಈ ವಿಮುಕ್ತಿಗಾಗಿ ಶ್ರಮಿಸಿದ ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಈ ಮೂವರನ್ನು ’ ಭಾರತೀಯ ಸಮಾಜವನ್ನು ಅದರ ಮೂಲ ಸ್ಥರಗಳಲ್ಲಿ  ವಿಶ್ಲೇಷಿಸಿದ ಅತೀ ಮುಖ್ಯ ಭಾರತೀಯ ಚಿಂತಕರೆಂದು’ ಒಪ್ಪಿಕೊಳ್ಳುತ್ತಾರೆ. ’ಭಾರತೀಯ ಸಮಾಜದ ಪರಂಪರಾಗತ ವ್ಯವಸ್ಥೆಯಲ್ಲಿ ದಲಿತರಿಗೆ ನ್ಯಾಯ ದೊರಕುವುದಿಲ್ಲ. ಬದಲಿಗೆ ಹೊಸ ನ್ಯಾಯಾಂಗ ವ್ಯವಸ್ಥೆ, ಹೊಸ ರಾಜಕೀಯ ವ್ಯವಸ್ಥೆ, ಹೊಸ ಧಾರ್ಮಿಕ ವ್ಯವಸ್ಥೆಯಿಂದ ಮಾತ್ರ ದಲಿತರ ವಿಮೋಚನೆ ಸಾಧ್ಯ’ ಎಂಬುದನ್ನು ಶ್ರೀರಂಗರ ಹರಿನ್ವಾರ ನಾಟಕದಲ್ಲಿ ಹರಿಜನರಿಗೆ ಸಿಕ್ಕ ಮುನಿಸಿಪಾಲಿಟಿ ಚುನಾವಣೆಯ ಮತದಾನದ ಹಕ್ಕು, ಭೈರಪ್ಪ ಹಾಗೂ ಅನಂತಮೂರ್ತಿ ಅವರುಗಳ ’ದಾಟು’ ಮತ್ತು ’ಭಾರತೀಪುರ’ ಕಾದಂಬರಿಗಳಲ್ಲಿ ವ್ಯಕ್ತವಾಗಿರುವ ಹೊಸಶಿಕ್ಷಣ ವ್ಯವಸ್ಥೆ ಹಾಗೂ ಹೊಸ ಉದ್ಪಾದನಾ ವ್ಯವಸ್ಥೆಗಳಿಂದ ಉಂಟಾದ ಬದಲಾವಣೆಗಳ ಹಿನ್ನೆಯಲ್ಲಿ ಸಮರ್ಥಿಸುತ್ತಾರೆ.  ಆದರೆ ಜಾತಿ ವ್ಯವಸ್ಥೆಯನ್ನು ಏಕ ಮುಖವಾಗಿ ನೋಡುವ ಕ್ರಮವನ್ನು ಪ್ರಶ್ನಿಸುತ್ತಾರೆ. ಲೋಹಿಯಾ ಅವರು ಹೇಳಿರುವ ’ ಸಮಾಜದ ಅಸಮಾನತೆಗೆ ಜಾತಿ ಪದ್ಧತಿಯೇ ಕಾರಣ. ಒಂದೇ ಜಾತಿಯೊಳಗೇ ಕಂಡು ಬರುವ ಅಕ್ಷರ, ವರ್ಗ ಹಾಗೂ ಲಿಂಗ ಭೇದಗಳನ್ನು ಮರೆಯುವಂತಿಲ್ಲ. ಶೂದ್ರರು ದ್ವಿಜರ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಸರಿಯಲ್ಲ’ ಎಂಬ ಮಾತನ್ನು ಎತ್ತಿ ಹಿಡಿಯುತ್ತಾರೆ. ಕ್ರೌರ‍್ಯಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂಬುದರ ಕಡೆಗೆ ಗಮನ ಸೆಳೆಯುತ್ತಾರೆ. ವಿಶೇಷವಾಗಿ ಲೋಹಿಯಾ ಅವರು ಹೇಳಿದಂತೆ ’ ಜಾತಿ ಪಾಲಿಸಿದವರು ದ್ವಿಜರೆನ್ನುವಾಗಲೂ ರಾಷ್ಟ್ರೀಯ ಜಾತಿ ಪದ್ಧತಿಯಲ್ಲಿ ದಲಿತರು ಶೂದ್ರರಾದರೆ; ಅಂತರಾಷ್ಟ್ರೀಯ ಜಾತಿ ಪದ್ಧತಿಯಲ್ಲಿ ದ್ವ್ವಿಜರೂ ಶೂದ್ರರೇ’ ಎಂಬುದನ್ನು ಒತ್ತಿ ಹೇಳುತ್ತಾರೆ. ಇದು ಏನೇ ಆದರೂ ಭಾರತೀಯ ಸಮಾಜದ ಜಾತಿ ಪದ್ಧತಿಯಲ್ಲಿ ದ್ವಿಜರ ಪಾತ್ರವಿರುವುದು ಸುಸ್ಪಷ್ಟ. ಆದರೂ ಈ ಮಾತನ್ನು ಇಡೀ ದ್ವಿಜ ಸಮಾಜಕ್ಕೆ ಅನ್ವಯಿಸಬಾರದು  ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯೊಳಗೆ ಅಶೋಕ ಅವರ ಒಂದು ಅಭಿಪ್ರಾಯ ಹೀಗಿದೆ :  ಜಾತಿ ಪದ್ಧತಿಯನ್ನು ಕೊನೆಗಾಣಿಸಲು ದ್ವಿಜರು ಹಾಗೂ ಶೂದ್ರರು ಒಟ್ಟಾಗಿ ನಿಂತರೆ ಸರ್ವಾಂಗ ಪ್ರಗತಿಯಾಗುತ್ತದೆ. ಈ ಸಂದರ್ಭಕ್ಕೆ ಶೂದ್ರರು ಮೇಲ್ಜಾತಿಯವರ ಬಗ್ಗೆ ದ್ವೇಷ ಹುಟ್ಟಿಸಬಾರದು. ದ್ವಿಜರು ತಮಗೆ ಆಗುವ ತಾತ್ಪೂರ್ತಿಕ ಅನ್ಯಾಯವನ್ನು ಸಹಿಸಿಕೊಳ್ಳಬೇಕು(ಪುಸ್ತಕ ಪ್ರೀತಿ, ೧೯೯೩, ಪುಟ : ೧೩೦)  ಈ ಮಾತುಗಳಿಂದ ಅಶೋಕ ಅವರ ಧೊರಣೆ ಏನೆಂಬುದು ಸ್ಪಷ್ಟವಾಗುತ್ತದೆ.
ದಲಿತರ ವಿಮೋಚನೆಗಾಗಿ ಅಂಬೇಡ್ಕರ್ ಅವರು ನೀಡುವ ಸಾಧ್ಯತೆಗಳ ಬಗ್ಗೆ ಪರಿಶಿಲಿಸುತ್ತಾ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ. ಅಂಬೇಡ್ಕರ್ ಸೂಚಿಸಿದಂತೆ ಅಂತರ್ ಜಾತಿಯ ವಿವಾಹ, ಸಹಪಂಕ್ತಿ ಭೋಜನದ ಮಾರ್ಗಗಳನ್ನು ಒಪ್ಪುತ್ತಾ ಮತಾಂತರದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಮುಖ್ಯವಾಗಿ ಮತಾಂತರ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಸೂಕ್ತ ಮಾರ್ಗವಲ್ಲ. ಅದು ಕೇವಲ ಭಾವನಾತ್ಮಕವಾದುದು ಅದರಿಂದ ದಲಿತರಿಗೆ ಏನೇನು ಲಾಭವಿಲ್ಲ. ಸ್ವತಃ ಅಂಬೇಡ್ಕರ್ ಅವರೇ ಹೋಗಿರುವ ಬೌದ್ಧಧರ್ಮದಲ್ಲಿ ಸಮಸ್ಯೆಗಳಿಲ್ಲವೆ? ಬೌದ್ಧ ಧರ್ಮ ಪ್ರಚಲಿತವಿರುವ ದೇಶಗಳಲ್ಲಿ ದಲಿತರಿಗೆ ಸಮಸ್ಯೆಗಳಿಲ್ಲವೆ? ಅಶೋಕರ ಈ ಪ್ರಶ್ನೆಗಳು ಮೇಲ್ನೋಟಕ್ಕೆ ಸರಿ ಎನಿಸಿದರೂ ನೊಂದವರು ತಮ್ಮ ಬಿಡುಗಡೆಗೆ ತಹತಹಿಸಿದ ತಲ್ಲಣಗಳನ್ನು ಗೌಣವಾಗಿಸುತ್ತವೆ. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೋಗುವ ನಿರ್ಧಾರದಲ್ಲಿ ಹಿಂದು ಧರ್ಮದ ಹಿಂದೆ ಇರುವ ಕೆಟ್ಟ ಜಾತಿಯತೆಯ ಬಗೆಗೆ ಇರುವ ಬೇಸರವನ್ನು ಪಕ್ಕಕ್ಕೆ ಸರಿಸುತ್ತವೆ. ಅದೂ ಅಲ್ಲದೇ ಅಶೋಕ ಅವರೇ ಶಿವರಾಮ ಕಾರಂತರ ’ಚೋಮನದುಡಿ’ ಕಾದಂಬರಿಯಲ್ಲಿ ಬರುವ ಚೋಮನ ಮಗ ’ಗುರುವ’ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡದ್ದರಿಂದ ಸಿಕ್ಕ ಆರ್ಥಿಕ ವಿಮೋಚನೆಯನ್ನು ಸಮರ್ಥನೆಯ ದಾಟಿಯಲ್ಲಿ ವಿಶ್ಲೇಷಿಸಿರುವುದು ವಿಮರ್ಶಕರ ದ್ವಿಮುಖ ನೀತಿಯನ್ನು ದರ್ಶಿಸುತ್ತದೆ.
ದಲಿತರ ವಿಮೋಚನೆಗೆ ಸಮಾಜದ ಆಮೂಲಾಗ್ರ ಬದಲಾವಣೆ ಅಗತ್ಯವೆಂಬುದನ್ನು ಒತ್ತಿ ಹೇಳುವ ವಿಮರ್ಶಕರು ಆಧುನಿಕತೆ ಇದಕ್ಕೆ ಅತ್ಯುತ್ತಮ ಮಾರ್ಗ ಎಂಬುದನ್ನು ಬಲವಾಗಿ ನಂಬುತ್ತಾರೆ. ಏಕೆಂದರೆ ಅವರು ಹೇಳುತ್ತಿರುವ ಹೊಸ ವ್ಯವಸ್ಥೆಗಳು ನಮ್ಮ ಸಮಾಜಕ್ಕೆ ಪ್ರವೇಶಿಸಿದ್ದೇ ೧೮ ನೇ ಶತಮಾನದಿಂದ ಆದ ಜಾಗತಿಕ ಬದಲಾವಣೆಗಳಿಂದ. ಅಂದರೆ ನಮ್ಮಲ್ಲಿ ವಸಾಹತುಶಾಹಿಯ ಪ್ರವೇಶದಿಂದ. ಆದರೆ ಈ ರೀತಿಯ ದಲಿತರ ಬಿಡುಗಡೆಯ ಸಾಧ್ಯತೆಗಳು ವಸಾಹತುಶಾಹಿಯ ಫಲಗಳಾದರೂ ಈ ಕಾರಣಕ್ಕೆ ವಸಾಹತು ಶಾಹಿಯನ್ನು ಸಂಪೂರ್ಣವಾಗಿ ಸಮರ್ಥಿಸುವ ಅಗತ್ಯವಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ.
ಒಟ್ಟಾರೆ ಅಶೋಕ ಅವರಿಗೆ ದಲಿತರ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಅರಿವಿದೆ. ಹಾಗೂ ಅದರ ಬಗ್ಗೆ ವಿರೋಧವೂ ಇದೆ. ಅದನ್ನು ಹೋಗಲಾಡಿಸುವ ಅಗತ್ಯ ಹಾಗೂ ಮಾರ್ಗಗಳ ಬಗ್ಗೆ ಆಲೋಚನೆಗಳೂ ಇವೆ. ಈ ಸಂದರ್ಭಕ್ಕೆ ಅವರು ಹೇಳುವಂತೆ : ’ ದಲಿತರ ದುರ್ಗತಿಗೆ ಕೇವಲ ಧರ್ಮ ಮತ್ತು ಜಾತಿಯನ್ನು ಹೊಣೆಯಾಗಿಸಬೇಕಿಲ್ಲ. ಅಸಮಾನತೆಯ ಬೀಜಗಳು ಜಾತಿಯ ಒಳಗೂ ಹೊರಗೂ ಎರಡೂ ಕಡೆ ಇವೆ. ಹಾಗಾಗಿ ಇಂಥ ಕ್ರೂರ ಜಾತಿ ಪದ್ಧತಿಯ ವಿನಾಶಕ್ಕೆ ಎರಡೂ ದಿಕ್ಕಿನಲ್ಲಿ ಪ್ರಯತ್ನಗಳಾಗಬೇಕು. ಆಧುನಿಕತೆ ಅದಕ್ಕೊಂದು ವೇದಿಕೆ ಒದಗಿಸಲು ಸಹಕರಿಸಲಿದೆ. ದಲಿತರು ಬರೀ ದ್ವೇಷ ಅಸೂಹೆ ಹಾಗೂ ಆಕ್ರೋಶಗಳಿಂದ ಬಿಡುಗಡೆ ಹೊಂದುವುದು ಅಸಾಧ್ಯ. ವಿನಯಶೀಲತೆ, ಅಹಿಂಸೆ ಸ್ನೇಹಮಯತೆ ಇರಬೇಕು ಎನ್ನುತ್ತಾ ದೇವನೂರ ಮಹದೇವ ಅವರಲ್ಲಿ ಇಂಥ ಗುಣಗಳನ್ನು ಗುರುತಿಸುತ್ತಾರೆ. 
ಸಾಹಿತ್ಯಕ ನೆಲೆ 
ಕುವೆಂಪು ಹಾಗೂ ಕಾರಂತರ ಕಾದಂಬರಿಗಳನ್ನೂ ಒಳಗೊಂಡಂತೆ ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರತಿನಿಧೀಕರಣ ತೃಪ್ತಿಕರವಾಗಿರಲಿಲ್ಲ. ದಲಿತ ಲೋಕದಿಂದ ತರುಣ ಲೇಖಕರು ಸಾಹಿತ್ಯ ಬರೆಯಲು ಆರಂಭಿಸಿದ ನಂತರ ಆ ಕೊರತೆ ಈಡೇರಿತು ಎಂಬ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಕಡೆಗೆ ಗಮನ ಸೆಳೆಯುವ ಟಿ.ಪಿ.ಅಶೊಕ ಅವರು ದೇವನೂರ ಮಹಾದೇವ ಅವರ ’ಕುಸುಮಬಾಲೆ’ ಕೃತಿಯನ್ನು ವಿಮರ್ಶೆಮಾಡುತ್ತಾ ಹೀಗೆ ಹೇಳುತ್ತಾರೆ : ಕನ್ನಡ ಸಾಹಿತ್ಯದ ಓದುಗರಿಗೆ ಅಷ್ಟಾಗಿ ಪರಿಚಿತವಲ್ಲದ ಒಂದು ಮನುಷ್ಯ ಲೋಕವನ್ನು ಒಳಗಿನವರಾಗಿ ಚಿತ್ರಿಸುವುದರ ಮೂಲಕ ದಲಿತ ಸಾಹಿತಿಗಳು ಓದುಗರ ಅನುಭವ ಪ್ರಪಂಚವನ್ನು ಹಿಗ್ಗಿಸಿದ್ದಾರೆ. ಸಾವಿರಾರು ವರ್ಷಗಳಿಂದ ಮೂಕವಾಗಿದ್ದ ಜನಾಂಗವೊಂದು ನಿಧಾನವಾಗಿ ಮೈಕೊಡವಿಕೊಂಡು  ಎದ್ದು ಮಾತನಾಡಲು ಆರಂಭಿಸಿದ್ದರಿಂದಾಗಿ ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಹೊಸ ಕಂಪನಗಳು ಎದ್ದಿದ್ದು ಐತಿಹಾಸಿಕ ಸತ್ಯವಾಗಿದೆ...... ಇದುವರೆಗೆ ಬಹಳ ಮಟ್ಟಿಗೆ ಸಂಕೇತ, ಪ್ರತೀಕಗಳಾಗಿ ಕಾಣಿಸಿದ್ದ ಕೆಲವು ಮನುಷ್ಯ ಮಾದರಿಗಳು, ವರ್ಗಗಳು ಇತರೆ ಮನುಷ್ಯರಂತೆ ಜೀವಂತ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದು ಈ ಲೇಖಕರ ಒಂದು ಸಾದನೆಯೆಂದೇ ಹೇಳಬೇಕು....... ಆಧುನಿಕ ಕನ್ನಡ ಸಾಹಿತ್ಯದ ಒಂದು ಪ್ರಮುಖ ಇತ್ಯಾತ್ಮಕ ಅನಿವಾರ‍್ಯ ಆಪೇಕ್ಷಣೀಯ ಚಳುವಳಿ ಎಂದು ಪರಿಗಣಿತವಾಗಿ ಅದರ ದಟ್ಟ ಪ್ರಭಾವ ಅನೇಕ ಹಿರಿಯ ಲೇಖಕರ (ಚದುರಂಗ ಮೊದಲಾದವರು) ಹೊಸ ಬರೆಹಗಳಲ್ಲಿ ನಿಚ್ಚಳವಾಗಿ ಕಂಡು ಬಂದಿತು. ಒಟ್ಟಾರೆ ಇವರ ಬರವಣಿಗೆಗಳು ಕನ್ನಡ ಸಾಹಿತಯ ದಿಕ್ಕನ್ನು ಬದಲಿಸುವಷ್ಟು ಸಮರ್ಥವಾಗಲಿಲ್ಲ ಎಂಬುದು ನಿಜವಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವರಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ನೀಡುವುದರ ಮೂಲಕ ಓದುಗರ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾದವು( ಪುಸ್ತಕ ಪ್ರೀತಿ, ೧೯೯೩, ಪುಟ : ೨೬೩)
ವಿಮರ್ಶಕರ ಮೇಲಿನ ಮಾತುಗಳು ದಲಿತ ಸಾಹಿತ್ಯ ಹಾಗೂ ಸಾಹಿತಿಗಳನ್ನು ಸರಿಯಾಗಿಯೇ ಅರ್ಥೈಯಿಸುತ್ತವೆ ಎನ್ನಬಹುದು. ದಲಿತ ಬರೆಹಗಳು ಶುದ್ಧ ಸಾಹಿತ್ಯದ ತತ್ವಗಳಾಚೆಗೆ ನಡೆದುದರ ಬಗ್ಗೆಯೂ ಇಲ್ಲಿ ಸುಳಿವುಗಳಿವೆ. ಸಿದ್ಧಲಿಂಗಯ್ಯ ಅವರ ಕಾವ್ಯದ ಆಕ್ರೋಶದ ಭಾಷೆ, ದೇವನೂರ ಮಹದೇವ ಅವರ ಕಾದಂಬರಿಗಳ ಗ್ರಾಮ್ಯ ಭಾಷೆ ಹಾಗೂ ಬಹುತೇಕ ದಲಿತ ಬರೆಗಾರರ ಮೀಮಾಂಸೆ ಮತ್ತು ಛಂದಸ್ಸಿನ ಪರಧಿಯನ್ನು ಮೀರಿದ ರಚನೆಗಳು ಕನ್ನಡ ಸಾಹಿತ್ಯದ ಹೊಸತನಗಳಾದುದರ ಬಗ್ಗೆ ಇಲ್ಲಿ ಗಮನಸೆಳೆಯಲಾಗಿದೆ. ದಲಿತ ಸಾಹಿತ್ಯದ ಹೆಗ್ಗಳಿಕೆಗಳನ್ನು ಅವರು ಹೀಗೆ ಗುರುತಿಸುತ್ತಾರೆ.
೧. ದಲಿತ ಕೃತಿಗಳಲ್ಲಿ ಸಿಗುವ ಸಾಂಸ್ಕೃತಿಕ ವಿವರಗಳಲ್ಲಿ ಹೊಸನವಿದೆ
೨. ದಲಿತ ಲೇಖಕರ ರೋಷ, ಆರ್ತತೆ ಹಾಗೂ ವಿಶ್ಲೇಷಣೆ ನಮ್ಮಲ್ಲಿ (ಮೇಲ್ವರ್ಗಗಳಲ್ಲಿ) ಅಪರಾಧಿ ಮನೋಭಾವವನ್ನು ಉಂಟುಮಾಡುತ್ತವೆ
೩. ದಲಿತ ಲೇಖಕರ ಬರೆಹಗಳಲ್ಲಿ ಹೊಸತನದ ತುಡಿತವಿದೆ, ಹೊಸ ಕಾಣ್ಕೆಯಿದೆ
ದಲಿತ ಸಾಹಿತ್ಯದ ಇಂಥ ಉತ್ತಮ ಗುಣಗಳ ಬಗ್ಗೆ ಹೇಳುವಾಗ ಅವುಗಳಿಗೆ ಇರುವ ಮಿತಿಗಳ ಬಗ್ಗೆ ಮಾತನಾಡುವುದನ್ನು ಮರೆಯುವುದಿಲ್ಲ. ದಲಿತ ಕೃತಿಗಳು ಹಾಗೂ ಕೃತಿಕಾರರಲ್ಲಿ ಕಂಡು ಬರುವ ಮಿತಿಗಳನ್ನು ಹೀಗೆ ಗುರುತಿಸುತ್ತಾರೆ : 
೧. ಒಂದು ದಲಿತ ಕೃತಿಗೂ ಮತ್ತೊಂದು ದಲಿತ ಕೃತಿಗೂ ಮೂಲಭೂತವಾದ ವ್ಯತ್ಯಾಸ ಕಂಡುಬರುವುದಿಲ್ಲ
೨. ದಲಿತ ಲೇಖಕರು ತಮ್ಮ ಮೊದಲ ಕೃತಿಗಳಲ್ಲಿ ತೋರಿದ ಉತ್ಸಾಹ ಅನಂತರದ ಪ್ರಕಟಣೆಗಳಲ್ಲಿ ಕಾಣುವುದಿಲ್ಲ
೩. ದಲಿತರ ಅನೇಕ ಕೃತಿಗಳಲ್ಲಿ ಸ್ಥಿತಿಯ ವರ್ಣನೆ ಮಾತ್ರವಿದ್ದು, ಸಾಧ್ಯತೆಯ ಕಾಣ್ಕೆ ಇಲ್ಲಾವಾಗಿದೆ. ಇದರಿಂದಾಗಿಯೇ ಬಹುತೇಕ ಕೃತಿಗಳು ವಿವರಗಳ ಸಂವೃದ್ಧತೆಯಿಂದ ಮಾನವ ಶಾಸ್ತ್ರೀಯ ಆಸಕ್ತಿಯನ್ನು ಮಾತ್ರ ಮೂಡಿಸುತ್ತವೆ.
ಅಶೊಕ ಅವರು ಗುರುತಿಸಿರುವ ದಲಿತ ಸಾಹಿತ್ಯದ ಈ ಮಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲಗಳೆಯಲಾಗದು. ಆದರೆ ಮುಖ್ಯವಾಗಿ ಗಮನಿಸಬೇಕಾದುದೆಂದರೆ ದಲಿತಸಾಹಿತ್ಯ ಶುದ್ಧಸಾಹಿತ್ಯವಲ್ಲ. ಬದಲಿಗೆ ಚಳುವಳಿ ಆಧಾರಿತವಾದುದು. ಸಮಸ್ಯೆಗಳು ಬಿಗಡಾಯಿಸಿ ಚಳವಳಿ ತೀರ್ವಗೊಂಡಾಗ ಉತ್ತಮ ಸಾಹಿತ್ಯಕೃತಿಗಳು ರಚನೆಯಾಗಿವೆ. ಇದರ ಅರಿವೂ ವಿಮರ್ಶಕರಿಗಿದೆ. ಇಂಥ ಚಳುವಳೀ ಆಧರಿತ ಕೃತಿಗಳನ್ನು ಆರಂಭಕ್ಕೆ ಉದಾರವಾಗಿ ನಂತರ ನಿರ್ಭಾವುಕವಾಗಿ ನೋಡಬೇಕು ಎಂಬ ಎಚ್ಚರದೊಂದಿಗೆ ದಲಿತ ಕೃತಿಗಳನ್ನು ವಿವೇಚಿಸಿರುವ ಇವರು ಸಾಂಸ್ಕೃತಿಕ ಎಚ್ಚರದ ವಿಮರ್ಶೆಯನ್ನು ಮಾಡಿದ್ದಾರೆ. ಟಿ.ಪಿ. ಅಶೋಕ ಅವರ ವಿಮರ್ಶೆಯ ದಲಿತ ದೃಷ್ಟಿಯ ಬಗೆಗಿನ ಸ್ಥೂಲವಾದ ನೋಟ ಇದಾಗಿದ್ದು ಇನ್ನೂ ಅವರ ಸಮಗ್ರ ಬರೆಹಗಳನ್ನು ಗಮನಿಸಿ ದೀರ್ಘವಾದ ಹಾಗೂ ಸೂಕ್ಷ್ಮವಾದ ಅಧ್ಯಯನ ನಡೆಸುವ ಅಗತ್ಯತೆ ಇದೆ.

ಆಕರ ಗ್ರಂಥಗಳು
೧. ಸಾಹಿತ್ಯ ಸಂಬಂಧ, ಟಿ.ಪಿ. ಅಶೋಕ, ೨೦೦೮, ಅಕ್ಷರ ಪ್ರಕಾಶನ,  ಹೆಗ್ಗೋಡು
೨. ಸಾಹಿತ್ಯ ಸಮಯ, ಟಿ.ಪಿ. ಅಶೋಕ, ೨೦೧೧, ಅಕ್ಷರ ಪ್ರಕಾಶನ,  ಹೆಗ್ಗೋಡು
೩. ಪುಸ್ತಕ ಪ್ರೀತಿ, ಟಿ.ಪಿ. ಅಶೋಕ, ೧೯೯೩, ಅಕ್ಷರ ಪ್ರಕಾಶನ,  ಹೆಗ್ಗೋಡು


*  ಡಾ. ಎಸ್. ಎಂ. ಮುತ್ತಯ್ಯ 

No comments:

Post a Comment