Saturday 27 September 2014

ಮಲೆನಾಡಿನ ಬುಡಕಟ್ಟು ಮಹಿಳೆ : ಒಂದು ಹಿನ್ನೋಟ

ಮಹಿಳೆಯರನ್ನು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿರುವ ಕ್ರಮ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ಈ ಕ್ರಮ ಎಲ್ಲಾ ಕಾಲಕ್ಕೂ ಪ್ರದೇಶಕ್ಕೂ ಸಮುದಾಯಕ್ಕೂ ಒಂದೇ ಆಗಿದೆ ಎನ್ನುವಂತಿಲ್ಲ. ಭಾರತದ ದೀರ್ಘ ಪರಂಪರೆಯಲ್ಲಿ ಹೆಣ್ಣನ್ನು ಗೌರವದ ತುತ್ತ ತುದಿಯಲ್ಲಿರಿಸಿ ಪೂಜಿಸಿರುವುದೂ ಇದೆ. ಹಾಗೆಯೇ ಸೇವಕಿಯಂತೆ ಅತ್ಯಂತ ಕೀಳಾಗಿ ಕಂಡಿರುವ ನಿದರ್ಶನಗಳೂ ಇವೆ. ಇಂಥ ವಿಷಯದ ಚರ್ಚೆಯ ಸಂದರ್ಭದಲ್ಲಿ ಪದೇ ಪದೇ ಪ್ರಸ್ತಾಪವಾಗಿರುವ ಒಂದು ಸಂಗತಿಯೆಂದರೆ ಮಹಿಳೆ ಎಲ್ಲಿ ಉತ್ಪಾದನೆಯ ವ್ಯವಸ್ಥೆಯ ಪಾಲುದಾರಳಾಗಿದ್ದಾಳೋ ಅಲ್ಲಿ ಪುರಷನಷ್ಟೇ ಸಮಾನವಾದ ಸ್ಥಾನಮಾನಗಳು ದೊರೆತಿವೆ. ಅಂತೆಯೇ ಉತ್ಪಾದನಾ ವ್ಯವಸ್ಥೆಯ ಬಳಕೆದಾರಳು ಮಾತ್ರ ಆಗಿರುವಲ್ಲಿ ಮಹಿಳೆ ಕೇವಲ ಸೇವಕಿಯಂತಾಗಿದ್ದಾಳೆ. ಈ ಮಾತನ್ನು ಸ್ವಲ್ಪ ಸರಳಗೊಳಿಸಿ ಹೇಳುವುದಾದರೆ : ದುಡಿಯುವ, ಶ್ರಮಿಕ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನಗಳು ದೊರಕಿದ್ದರೆ; ನಾಗರೀಕ ಸಮಾಜಗಳಲ್ಲಿ ಮಹಿಳೆ ಪುರುಷನ ಅಧೀನಳಾಗಿ ಬದುಕುವಂತಾಗಿದೆ. 
ಶ್ರಮಿಕ ಸಮುದಾಯಗಳಲ್ಲಿ ಮಹಿಳೆಯರನ್ನು ಎಲ್ಲಾ ಕಾಲದಲ್ಲೂ ಪುರಷನಷ್ಟೆ ಸಮಾನವಾಗಿ ಕಾಣಲಾಗಿದೆ ಎಂದು ಹೇಳುವಂತಿಲ್ಲ. ಏಕೆಂದರೆ ಅಲ್ಲಿಯೂ ಕೂಡ ಮಹಿಳೆ ನಾಗರೀಕ ಸಮಾಜಗಳಲ್ಲಿರುವಂತೆ ಶೋಷಿತಳಾಗಿರುವುದು ಕಂಡುಬರುತ್ತದೆ. ಇದಕ್ಕೆ ಪ್ರಧಾನವಾದ ಎರಡು ಕಾರಣಗಳಿವೆ. ಅವುಗಳಲ್ಲಿ ಮೊದಲನೆಯದು ಅವು ನಂಬಿರುವ ನಂಬಿಕೆಯ ಜಗತ್ತು ಎರಡನೆಯದು ವೈದಿಕ ಸಂಸ್ಕೃತಿಯ ಪ್ರಭಾವ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನ ಸಮುದಾಯಗಳ ಬದುಕಿನ ಕ್ರಮಗಳನ್ನು ಪರಿಶೀಲಿಸುವುದು ಅತ್ಯಂತ ಕೂತೂಹಲದ ಸಂಗತಿ. ಇಂಥ ಪ್ರಯತ್ನದ ಭಾಗವಾಗಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನೆಲೆನಿಂತಿರುವ ಬುಡಕಟ್ಟು ಸಮುದಾಯಗಳ ಬದುಕುಗಳನ್ನು ಪರಿಶೀಲಿಸುವ ಪ್ರಯತ್ನ ಈ ಲೇಖನದ್ದು.
ಮಲೆನಾಡು ಮತ್ತು ಬುಡಕಟ್ಟು ಸಮುದಾಯಗಳು
ಅರಣ್ಯ ಮತ್ತು ಬೆಟ್ಟಗಳಿಗೂ ಬುಡಕಟ್ಟುಗಳಿಗೂ ಅವಿನಭಾವ ಸಂಬಂಧ. ಬುಡಕಟ್ಟುಗಳು ತಮ್ಮ ನಂಬಿಕೆ ಹಾಗೂ ಆಹಾರ ಅಗತ್ಯಗಳನ್ನು  ಈಡೇರಿಸಿಕೊಳ್ಳಲು ಇಂಥ ಪ್ರದೇಶಗಳು ಅತೀ ಪ್ರಶಸ್ತವಾದ ತಾಣಗಳು. ಹಾಗಾಗಿಯೇ ಜಗತ್ತಿನ ಬಹುತೇಕ ಬುಡಕಟ್ಟುಗಳು ಅರಣ್ಯಗಳಲ್ಲಿಯೇ ತಮ್ಮ ನೆಲೆಗಳನ್ನು ಕಂಡುಕೊಂಡಿವೆ. ಅದರಲ್ಲೂ ಮಲೆನಾಡಿನ ಸಹ್ಯಾದ್ರಿ ತಪ್ಪಲುಗಳಲ್ಲಿ ಹಲವಾರು ಪ್ರಧಾನ ಬುಡಕಟ್ಟುಗಳು ತಮ್ಮ ಬದುಕನ್ನು ರೂಪಿಸಿಕೊಂಡು ಬದುಕುತ್ತಿವೆ. ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಬುಡಕಟ್ಟುಗಳಿಗೆ ಆಶ್ರಯ ತಾಣವಾಗಿದೆ. ಹಾಗೆಯೇ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಕೆಲವಾರು ಸಮುದಾಯಗಳು ನೆಲೆನಿಂತಿವೆ. ಮಲೆನಾಡಿನ ಅಂಥ ಕೆಲವು ಬುಡಕಟ್ಟುಗಳನ್ನು ಹೆಸರಿಸುವುದಾದರೆ : ಹಸಲರು, ಗೌಳಿಗರು, ಗೌಡಾಲು, ಹಕ್ಕಿಪಿಕ್ಕಿಗಳು, ಸಿದ್ಧಿಗಳು, ಕೊರಗರು, ಮಾಲೇರು, ಮಲೆಕುಡಿಯರು, ಕರೆಒಕ್ಕಲು, ಕುಡುಬಿಗಳು ಇತ್ಯಾದಿ. ಈ ಸಮುದಾಯಗಳು ಇಂದಿಗೂ ತಮ್ಮ ಅಸ್ಮಿತೆಯೊಂದಿಗೆ ಜೀವನ ನಡೆಸುತ್ತಿವೆ. ಆಧುನಿಕತೆ ತೀವ್ರತರವಾದ ಹೊಡೆತಗಳಿಗೆ ಸಿಕ್ಕು  ಅಧಿಕಾರ ಹಾಗೂ ಆಸೆಯ ಮನೋಭಾಗಳ ಮಧ್ಯೆ ಹೊಸದನ್ನು ಪಡೆಯುವ ಹಂಬಲ, ಪರಂಪರೆಯನ್ನು ಮೀರಲಾರದ ತಲ್ಲಣಗಳ ನಡುವೆ ಎಣಗಾಡುತ್ತಿರುವ ಈ ಸಮುದಾಯಗಳು ಹಳೆಯ ಮತ್ತು ಹೊಸದರ ಸಮ್ಮಿಶ್ರವಾದ ಬದುಕನ್ನು ಸಾಗುಸುತ್ತಿವೆ.
ಬುಡಕಟ್ಟುಗಳು ಮತ್ತು ಮಹಿಳೆ
ಬುಡಕಟ್ಟುಗಳು ಮೂಲತಃ ಪ್ರಕೃತಿಗೆ ಹತ್ತಿರವಾಗಿ ಬದುಕುವ ಜನಗುಂಪುಗಳಾಗಿದ್ದು, ಶ್ರಮವನ್ನೇ ಆಧರಿಸಿ ಬದುಕುವಂತಹವುಗಳು. ಹಾಗಾಗಿ ಬಹುತೇಕ ಬುಡಕಟ್ಟುಗಳಲ್ಲಿ ಲಿಂಗಬೇಧದ ಕಲ್ಪನೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ ಇವರ ಪರಿಶುದ್ಧತೆಯ ಪರಿಕಲ್ಪನೆಗಳು, ಅಲೌಕಿಕ ಭಾವನೆಗಳು ಮತ್ತು ಹೊರಗಿನ ಸಂಸ್ಕೃತಿಯ ಪ್ರಭಾವಗಳ ಕಾರಣದಿಂದ ಸ್ತ್ರೀಯರ ಬಗೆಗಿನ ನಂಬಿಕೆಗಳು ನಾಗರೀಕ  ಜಗತ್ತಿನ ಸಮಾಜಗಳಲ್ಲಿರುವಂತೆ ಶೋಷಕ ನೆಲೆಯವು ಎನ್ನುವ ಅನುಮಾನಗಳನ್ನು ಸೃಷ್ಟಿಸುತ್ತವೆ. ಈ ಸಂದರ್ಭಗಳಲ್ಲಿ ಇಂಥ ವಿಷಯಗಳನ್ನು ಪರಿಶೋಧಿಸುವಾಗ ಶೋಧಕರಿಗೆ ಎಚ್ಚರದ ದೃಷ್ಟಿಯೊಂದು ಇರಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹೊರಗಿನ ಪ್ರಭಾವಗಳಿಂದ ಬಂದಿರುವ ಶೋಷಕ ದೃಷ್ಟಿ ಇವರಲ್ಲಿ ಅಳವಡಿಕೆಯಾಗಿರುವ ಕ್ರಮಗಳನ್ನು ಗಮನಿಸದರೆ ಮೂಲಕ್ಕಿಂತ ಭಿನ್ನವಾಗಿ ತಮ್ಮದೇ ಆದ ಸಮಾನತೆಯ ದೃಷ್ಟಿಯನ್ನು ಪ್ರಕಟಪಡಿಸುತ್ತವೆ. ಇಂಥ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದು ಸಾಧ್ಯವಾಗದಿದ್ದರೆ ಬುಡಕಟ್ಟು ಸಮುದಾಯಗಳು ಎಲ್ಲ ನಾಗರೀಕ ಸಮುದಾಯಗಳಂತೆ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿವೆ ಎಂಬ ಅಪಕ್ವತೆಯ ತೀರ್ಮಾನಗಳಿಗೆ ಬರುವ ಅಪಾಯವಿರುತ್ತದೆ. ಈ ಸ್ಪಷ್ಟ ತಿಳುವಳಿಕೆಯೊಂದಿಗೆ ಮಲೆನಾಡಿನ ಕೆಲವು ಬುಡಕಟ್ಟುಗಳ ಜೀವನ ವಿಧಾನಗಳನ್ನು  ಗಮನಿಸುವ ಪ್ರಯತ್ನಯನ್ನು ಇಲ್ಲಿ ಮಾಡಬಹುದಾಗಿದೆ. 
ಯಾವುದೇ ಒಂದು ಸಮುದಾಯದ ಬದುಕಿನಲ್ಲಿ ಮಹಿಳೆಯರಿಗೆ ಇರುವ ಸ್ಥಾನ ಮಾನಗಳನ್ನು ತಿಳಿಯಬೇಕಾದರೆ ಆ ಸಮುದಾಯದ ಬದುಕಿನ ಕ್ರಮಗಳನ್ನು ಗಮನಿಸಬೇಕಾಗುತ್ತದೆ. ಮುಖ್ಯವಾಗಿ  ಬುಡಕಟ್ಟುಗಳಲ್ಲಿ ಬಳಕೆಯಲ್ಲಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳು, ಕಟ್ಟು-ಕಟ್ಟಳೆ, ವಿಧಿ ವಿಧಾನಗಳು, ವೈವಾಹಿಕ ನಡಾವಳಿಗಳು ಉಡುಗೆ ತೊಡುಗೆ, ಆಭರಣಗಳು ಇವೇ ಮೊದಲಾದ ಸಂಗತಿಗಳಲ್ಲಿ ಹುಡಕಾಡಬೇಕೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಬುಡಕಟ್ಟುಗಳಲ್ಲಿ ಮಹಿಳೆಯರಿಗೆ ಇರುವ ಗೌರವ ಮತ್ತು ಸ್ಥಾನಮಾನಗಳನ್ನು ಮುಂದಿನಂತೆ ಪರಿಶೀಲಿಸಬಹುದು.
ಸೂತಕದ ಕಲ್ಪನೆ  
 ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನೋಡಬಹುದಾದ ಬಹುಮುಖ್ಯ ವಿಷಯ ಸೂತಕಕ್ಕೆ ಸಂಬಂಧಿಸಿದ್ದು. ಹೆಣ್ಣಿನ ಜೀವನದ ಮಹತ್ವದ ಘಟ್ಟ ಋತುಮತಿ ಮತ್ತು ಹೆರಿಗೆ ಸಂದರ್ಭದ್ದು. ಇವೆರಡು ಸಂದರ್ಭಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಸಂಪ್ರದಾಯಗಳು ಬಹುತೇಕ ಎಲ್ಲಾ ಬುಡಕಟ್ಟುಗಳಲ್ಲಿ ಆಚರಣೆಯಲ್ಲಿವೆ. ಹಾಗಾಗಿ ಮಲೆನಾಡಿನ ಬುಡಕಟ್ಟುಗಳಲ್ಲಿಯೂ ಈ ಸಂಪ್ರದಾಯಗಳು ಜೀವಂತ ಆಚರಣೆಗಳಾಗಿ ಕ್ವಚಿತ್ತಾಗಿ ಮುಂದುವರೆದಿವೆ. ಮಡಿವಂತಿಕೆಯ ಭಾವನೆಯಿರುವ ಈ ಸಮುದಾಯಗಳಲ್ಲಿ ಋತುಮತಿ ಮತ್ತು ಹೆರಿಗೆ ನಾಗರೀಕ ಸಮುದಾಯಗಳಿಗಿಂತ ಚೂರು ಹೆಚ್ಚಿನ ಮೈಲಿಗೆಯಾಗಿ ಕಂಡಿವೆ. ಹಾಗಾಗಿಯೇ ಈ ಸಂದರ್ಭಗಳಲ್ಲಿ ಮಹಿಳೆಯರನ್ನು ದಿನನಿತ್ಯದ ವಾಸದ ಮನೆಯಿಂದ ಬೇರ್ಪಡಿಸಿ ಅದಕ್ಕೆಂದೇ ಮನೆಯಿಂದ ತುಸು ದೂರದಲ್ಲಿ ನಿರ್ಮಿಸಿದ ಪ್ರತ್ಯೇಕ ಗುಡಿಸಲಲ್ಲಿ ಇರಿಸುವ ಪದ್ಧತಿಗಳಿದ್ದವು. ಇನ್ನೂ ಕೆಲವು ಪಂಗಡಗಳಲ್ಲಿ ಪ್ರತೀ ತಿಂಗಳು ಮನೆಯ ಹೊರಗಡೆ ಇಡುವ ಪದ್ಧತಿ ಇತ್ತು. ಆದರೆ ಈಗ ಬಹುತೇಕ ಗುಂಪುಗಳಲ್ಲಿ ಈ ಆಚರಣೆಗಳು ಇಂದು ಯತಾವತ್ತಾಗಿ ಉಳಿದು ಬಂದಿಲ್ಲ. ನಿದರ್ಶನಕ್ಕೆ ಗಮನಿಸುವುದಾದರೆ :
೧. ಮಲೆನಾಡಿನ ಪ್ರಮುಖ ಬುಡಕಟ್ಟುಗಳಲ್ಲಿ ಒಂದಾದ ಹಸಲರಲ್ಲಿ ಹಿಂದೆ ಈ ಪದ್ಧತಿ ಕಟ್ಟುನಿಟ್ಟಾಗಿ ಆಚರಣೆಗೊಳ್ಳುತ್ತಿದ್ದು ಈಗ ಬದಲಾವಣೆಯಾಗಿದೆ. ಪ್ರಸ್ತುತ ಹಸಲರಲ್ಲಿ ಋತುಮತಿಯಾದ ಹೆಣ್ಣನ್ನು ಮನೆಯ ಒಳಗಡೆ ಸ್ನಾನ ಮಾಡಿಸುವುದಿಲ್ಲ ಅಷ್ಟೇ. ಹಳ್ಳದಲ್ಲಿಯೋ ಅಥವಾ ಹತ್ತಿರ ಕೆರೆಯಲ್ಲಿಯೋ ಸ್ನಾನ ಮಾಡಿಸಿ ಮನೆಯ ಒಳಗಡೆ ಕರೆದುಕೊಳ್ಳುತ್ತಾರೆ. ಇನ್ನೂ ಮನೆಯಲ್ಲಿಯೇ ಹೆರಿಗೆ ಮಾಡಿಸುತ್ತಾರೆ.  ಮಗು ಜನನವಾದ ಮೂರು, ಏಳು ಮತ್ತು ಹನ್ನೊಂದನೇ ದಿನಗಳಲ್ಲಿ ತಮ್ಮನ್ನು ತಮ್ಮ ಮನೆಯನ್ನು ಶುದ್ಧಗೊಳಿಸಿಕೊಳ್ಳುತ್ತಾರೆ.
೨. ಮಲೆನಾಡಿನ ಮತ್ತೊಂದು ಬುಡಕಟ್ಟು ಗೌಡಾಲು ಸಮುದಾಯದಲ್ಲಿ ಋತುಮತಿಯಾದ ಹೆಣ್ಣನ್ನು ತಮ್ಮ ಮನೆಯ ಪಕ್ಕದಲ್ಲೇ ಒಂದು ಪ್ರತ್ಯೇಕ ಗುಡಿಸಲು ನಿರ್ಮಿಸಿ ಅಲ್ಲಿರಿಸುತ್ತಾರಾದರೂ ಅವಳನ್ನು ಅಸ್ಪೃಶ್ಯಳಂತೆ ಕಾಣುವುದಿಲ್ಲ. ಬದಲಿಗೆ ದಿನಂಪ್ರತಿ ಮುತ್ತೈದೆಯರು ಸೇರಿ ಅರಿಶಿನ ಸ್ನಾನ ಮಾಡಿಸುತ್ತಾರೆ. ಅವಳಿಗೆ ಪ್ರಿಯವಾದ ಆಹಾರ ಕೊಡುತ್ತಾರೆ. ಅಷ್ಟೇ ಅಲ್ಲದೆ ಸೋಬಾನೆ ಪದಗಳನ್ನು, ತಮಾಷೆಯ ಮಾತುಗಳನ್ನು ಹೇಳಿ ಸಂತೃಪ್ತಿಗೊಳಿಸುತ್ತಾರೆ. ಹೆರಿಗೆ ಸಮಯದಲ್ಲೂ ಹೀಗೆ ಮನೆಯಿಂದ ಪ್ರತ್ಯೇಕಿಸಿದರೂ ಅವಳಿಗೆ ಬೇಕಾದ ಉಪಚಾರವನ್ನು ಮಾಡುತ್ತಾರೆ.
ಇಂಥ ಸಂದರ್ಭಗಳಲ್ಲಿ ಗಮನಿಸಲೇ ಬೇಕಾಗಿರುವ ಸಂಗತಿಯೆಂದರೆ - ಈ ಸಮುದಾಯಗಳಲ್ಲಿ ಋತುಮತಿ ಹಾಗೂ ಹೆರಿಗೆ ಸಂದರ್ಭದಲ್ಲಿ ಮನೆಯಿಂದ ಹೊರಗಿಡುತ್ತಾರೆ ಎಂಬುದನ್ನು ಕೇವಲ ಒಂದು ದೋಷವೆಂಬಂತೆ ಗ್ರಹಿಸುವುದು ನಮ್ಮಲ್ಲಿ ಸಾಮಾನ್ಯವಾಗಿದೆ. ಆದರೆ ನಿಜ ಸ್ಥಿತಿಯನ್ನು ನೋಡಿದರೆ ಅವರು ಮನೆಯಿಂದ ಹೊರಗಿಡುವ ಪದ್ಧತಿ ಒಂದು ಕಾಲಕ್ಕೆ ಅಗತ್ಯವಾಗಿ ಮಾಡಬೇಕಿದ್ದ ಕ್ರಮವಾದಂತಿದೆ. ಹೊರಗಿಡಟ್ಟವರು ಅವಳ ಯೋಗಕ್ಷೇಮದ ಬಗ್ಗೆ ಚಿಂತಿಸದೆ ಇದ್ದಿದ್ದರೆ ನಮ್ಮ ಈ ನಿಲುವು ಸರಿಯೆನಿಸುತ್ತಿತ್ತು. ಆದರೆ ಹೊರಗಿಟ್ಟ ಹೆಣ್ಣಿನ ಬಗ್ಗೆ ಅವರ ಪೋಷಕರು ಹೊಂದಿರುವ ಕಾಳಜಿ ಅಪಾರ. ಅಷ್ಟಕ್ಕೂ ಹೊರಗಿಡುವ ಈ ಪದ್ಧತಿಯಲ್ಲಿ ಪಾರಂಪರಿಕ ದೇಸಿ ಜ್ಞಾನವೊಂದಿದೆ ಎನ್ನುವುದನ್ನು ನಾವು ನಂಬಲೆಬೇಕು. ಪ್ರತ್ಯೇಕವಾಗಿ ನಿರ್ಮಿಸುವ ಗುಡಿಸಲುಗಳ ನಿರ್ಮಾಣಕ್ಕೆ ಬಳಸುತ್ತಿದ್ದ ಸೊಪ್ಪು, ಬೇವು, ಹೊಂಗೆ ಮತ್ತಿತರ ಔಷಧೀಯ ಗುಣವಿರುವ ಮರಗಿಡಗಳಿಂದ ಪಡೆದದ್ದು, ಇನ್ನೂ ಹೆಣ್ಣಿನ ಈ ಜೈವಿಕ ಬದಲಾವಣೆಯ ಸೂಕ್ಷ್ಮ ಸಮಯಕ್ಕೆ ಸ್ವತಃ ಆ ಹೆಣ್ಣಿಗೂ ಕೂಡ ಸಾಮಾನ್ಯ ಜನರಿಂದ ತಗಲಬಹುದಾದ ಸಾಂಕ್ರಮಿಕ ರೋಗಗಳ ಬಗೆಗಿನ ಅರಿವು ಇದಾಗಿರಲು ಸಾಧ್ಯ. ಈ ಕ್ರಮಗಳು ವಿಫುಲ ಆರೋಗ್ಯ ಸೌಲಭ್ಯಗಳಿರುವ ಇಂದಿನ  ನಾಗರೀಕ ಸಮಾಜಕ್ಕೆ ಅನಗತ್ಯ ಎನಿಸಿರುವುದು ಸಹಜವೇ ಆದರೂ ಒಂದು ಕಾಲ ಸಂದರ್ಭಕ್ಕೆ ಈ ಆಚರಣೆಗಳು ಅಗತ್ಯವಾಗಿದ್ದವು ಎಂಬುದನ್ನು ನಿರಾಕರಿಸಲಾದೀತೆ? ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲದಿರುವ ಅದೆಷ್ಟೋ ಸಮುದಾಯಗಳಿಗೆ ಇವು ಅನುಸರಣಾ ಯೋಗ್ಯವೆಂದೆನಿಸದರೆ ಅದರಲ್ಲಿರು ತಪ್ಪೇನು? ಎಂಬ ಪ್ರಶ್ನೆಗಳನ್ನು ಇಲ್ಲಿ ಕೇಳಿಕೊಳ್ಳಬೇಕಾದುದು ಇಂದಿನ ತುರ್ತಾಗಿದೆ. ಹಾಗಾಗಿ ಆದಿವಾಸಿ ಸಮುದಾಯಗಳು ಹಾಗೂ ನಾಗರೀಕ ಸಮಾಜಗಳು ಇಲ್ಲಿ ಬಳಸುವ ಮೈಲಿಗೆ, ಸೂತಕ ಎಂಬ ಪದಗಳನ್ನು ಮತ್ತೊಮ್ಮೆ ಬಹುಮುಖೀ ವ್ಯಾಖ್ಯಾನಕ್ಕೆ ಒಳಪಡಿಸಬೇಕಿದೆ. ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಆರಂಭವಾದ ಈ ಆಚರಣೆಗಳು ಕಾಲಾನಂತರ ಆಚರಣೆ ಮಾಡುವವರಿಗೆ ಕೇವಲ ಸಂಪ್ರದಾಯದ ಮುಂದುವರಿಕೆಗಳಾಗಿ ಮಾರ್ಪಾಡಾಗಿರುವುದರ ಬಗ್ಗೆಯೂ ವಿಚಾರ ಮಂಥನ ಮಾಡಬೇಕಿದೆ. ಈ ಸಂದರ್ಭಗಳೆಲ್ಲೆಲ್ಲ ನಾವು ನೆನಪಿಡಬೇಕಾದ ಅಂಶವೆಂದರೆ ಪರಂಪರೆಯ ಯಾವ ಆಚರಣೆಯೂ ದುರುದ್ದೇಶದಿಂದಾಗಲೀ, ನಿರರ್ಥಕವಾಗಿಯಾಗಲೀ ಆರಂಭಗೊಂಡಿರುವುದಿಲ್ಲ. ಕೆಲವೊಮ್ಮೆ ಅನ್ಯ ಸಂಸ್ಕೃತಿಗಳ ಶೋಷಕ ಪ್ರವೃತ್ತಿ ಇಂತಹ ಆಚರಣೆಗಳನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡಿಸಿ ಚಾಲ್ತಿಗೆ ಬಿಟ್ಟರುತ್ತವೆ. ಈ ಬಗ್ಗೆ ಎಚ್ಚರದ ನೋಟಗಳ ಅಗತ್ಯತೆ ತುಂಬಾ ಇದೆ.  
ಬಾಲ್ಯ ವಿವಾಹ 
ನಮ್ಮ ನಾಗರೀಕ ಸಮಾಜವನ್ನು ಕಾಡುತ್ತಿರುವ ಸಾಮಾಜಿಕ ಪಿಡುಗುಗಳಲ್ಲಿ ಬಾಲ್ಯವಿವಾಹ ಬಹುಮುಖ್ಯವಾಗಿತ್ತು. ಈಗಲೂ ಕೆಲವೊಂದು ಕಡೆ ಇರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುವುದನ್ನು ನಾವು ಕಾಣುತ್ತಿದ್ದೇವೆ. ಬುಡಕಟ್ಟು ಸಮುದಾಯಗಳಲ್ಲಿ ಬಹುಪಾಲು ಸಮುದಾಯಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇತ್ತೆಂದು ತಿಳಿದು ಬರುತ್ತದೆ. ಹಾಗೆಯೇ ಅನೇಕ ಸಮುದಾಯಗಳಲ್ಲಿ ಈ ಪದ್ಧತಿ ಬಳಕೆಯಲ್ಲಿರಲಿಲ್ಲ. ಉದಾ : ಹಸಲರು ಮತ್ತಿತರ ಬುಡಕಟ್ಟು ಸಮುದಾಯಗಳಲ್ಲಿ ಈ ಪದ್ಧತಿ ಇಲ್ಲ. ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದ ಸಮುದಾಯಗಳಲ್ಲಿ ಕಾಲಾನಂತರ ಸಾಕಷ್ಟು ಬಲಾವಣೆಗಳಾಗಿವೆ. ಉದಾ : ಗೌಳಿಗರಲ್ಲಿ ತೊಟ್ಟಲಲ್ಲಿ ಇರುವ ಮಕ್ಕಳಿಗೆ ವಿವಾಹ ಮಾಡುತ್ತಿದ್ದವರು ಬರುಬರುತ್ತಾ ಮೈನರೆಯುವ ಮುನ್ನವೇ ಮದುವೆ ಮಾಡಲಾರಂಭಿಸಿದರು. ಇವರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಸೂಕ್ತ ವಯೋಮಾನಕ್ಕೆ ಅನುಗುಣವಾಗಿ ಮದುವೆಗಳು ನಡೆಯುತ್ತಿವೆ. 
ವೈವಾಹಿಕ ನಡಾವಳಿಗಳು
ಯಾವುದೇ ಪುರಷ ಮತ್ತು ಮಹಿಳೆಗೆ ತಮ್ಮ ಜೀವನದ ಬಹಳ ಮಹತ್ವದ ಘಟ್ಟ ವಿವಾಹ. ವಿವಾಹದ ಈ ಪ್ರಕ್ರಿಯೆಯಲ್ಲಿ ಸಂಗಾತಿಯ ಆಯ್ಕೆಯಿಂದ ಹಿಡಿದು ಸಮಬಾಳ್ವೆಯವರೆಗೂ ಮಹಿಳೆ ಸಾಕಷ್ಟು ಸಂಕಟ ಸಂಭ್ರಮಗಳನ್ನು ಅನುಭವಿಸುತ್ತಾಳೆ. ಅದರಲ್ಲಿ ಮುಖ್ಯವಾಗಿ ಆಯ್ಕೆಯ ಸ್ವಾತಂತ್ರ, ಮನೆಯಲ್ಲಿ ಗಂಡನಷ್ಟೇ ಗೌರವದ ಸ್ಥಾನಮಾನ, ವರದಕ್ಷಿಣೆಯೆಂಬ ಹಿಂಸಾತ್ಮಕ ಪ್ರವೃತ್ತಿ, ಗಂಡನನ್ನು ಕಳೆದುಕೊಂಡ ವೈದವ್ಯದ ನೋವು ಮತ್ತಿತರ ವಿಷಯಗಳಲ್ಲಿ ನಾಗರೀಕ ಎಂದುಕೊಂಡಿರುವ ಸಮಾಜದ ಮಹಿಳೆಯರ ಸ್ಥಿತಿಯನ್ನು ನಾವೆಲ್ಲರೂ ಇಂದು ದಿನಬೆಳಗಾದರೆ ಕಾಣುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಅನಾಗರೀಕ ಸಮುದಾಯಗಳೆಂದು ಕರೆಸಿಕೊಂಡಿರುವ ಬುಡಕಟ್ಟು ಸಮುದಾಯಗಳು ಇಂಥ ವಿಷಯದಲ್ಲಿ ಅನುಸರಿಸಿದ ಮಾದರಿಗಳನ್ನು ನೋಡಬೇಕು. ಈ ಹಿನ್ನೆಲೆಯಲ್ಲಿ ನೋಡಲೆಬೇಕಾದ ಒಂದರೆಡು ಮಾದರಿಗಳೆಂದರೆ : ತೆರ ಕೊಡುವ ಪದ್ಧತಿ, ಅಂತರ್ ಕುಲದ ವಿವಾಹ, ಸೀರುಡಿಕೆ ಪದ್ಧತಿ, ಸ್ವಗೋತ್ರ ವಿವಾಹ ನಿಷೇಧ . ಇವುಗಳ ವಿಶೇಷತೆಗಳೇನು ಎಂಬುದನ್ನು ಮುಂದಿನಂತೆ ವಿವರಿಸಿಕೊಳ್ಳಬಹುದು
ಅ. ತೆರ ಪದ್ಧತಿ
ಇಂದಿನ ಸಮಾಜದ ಬಹುದೊಡ್ಡ ಸಮಸ್ಯೆ ವರದಕ್ಷಿಣೆ. ವರದಕ್ಷಿಣೆಯ ಕಾರಣಕ್ಕಾಗಿ ಹಲವಾರು ಮಹಿಳೆಯರು ಇನ್ನಿಲ್ಲದಂತಹ ಸಂಕಷ್ಟಗಳನ್ನು ಎದುರಿಸುತ್ತಿರುವುದು ಸಮಾನ್ಯವೆಂಬಂತಾಗಿದೆ. ಈ ಪಿಡಗನ್ನು ಹೋಗಲಾಡಿಸಲು ಸಾಕಷ್ಟು ಕಾಯಿದೆಗಳನ್ನು ಜಾರಿಗೆ ತಂದಿದ್ದಾಗ್ಯೂ ಪರಿಸ್ಥಿತಿ ಸುಧಾರಿಸಿಲ್ಲ. ಇಂಥ ಸಂಕಟದ ಕಾಲದಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ತೆರ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವೆನಿಸುತ್ತಿದೆ. ಮಲೆನಾಡಿನ ಬುಡಕಟ್ಟುಗಳಲ್ಲಿ ಹಿಂದೆ ಗಟ್ಟಿಯಾಗಿ ಅಸ್ತಿತ್ವದಲ್ಲಿದ್ದು ಈಗ ಸ್ಪಲ್ಪಮಟ್ಟಿಗೆ ಹಿನ್ನೆಲೆಗೆ ಸರಿದಿರುವ ತೆರ ಕೊಡುವ ಸಂಪ್ರದಾಯ ನಮ್ಮ ಭವಿಷ್ಯದ ಕಗ್ಗತ್ತಲ ಬದುಕಿಗೆ ಬೆಳಕಾಗುವಂತೆ ಕಾಣಿಸುತ್ತಿದೆ. ಪ್ರಾಚೀನ ಕಾಲದಿಂದಲೂ ಆದಿಮಾ ಸಮುದಾಯಗಳಲ್ಲಿ ಪ್ರಚಲಿತವಿದ್ದ ತೆರ ಪದ್ಧತಿಯಲ್ಲಿ ಗಂಡಿನ ಕಡೆಯವರು ಹೆಣ್ಣಿನ ತಂದೆ ತಾಯಿಗೆ ತಮ್ಮ ಶಕ್ತಿಗನುಸಾರವಾಗಿ ಹಣ ಮತ್ತು ಧಾನ್ಯಗಳನ್ನು ನೀಡುವ ಪದ್ಧತಿಯನ್ನೇ ತೆರ ಕೊಡುವ ಪದ್ಧತಿ ಎನ್ನುವರು. ಇದನ್ನು ಆಧುನಿಕರು ವಧುದಕ್ಷಿಣೆ ಪದ್ಧತಿಯೆಂತಲೂ ಕರೆದುಕೊಂಡಿರುವುದುಂಟು. ಇದು ಅತ್ಯಂತ ಸಾಂಕೇತಿಕ ಆಚರಣೆಯಾಗಿದ್ದು ಇಂತಿಷ್ಟೆ ಕೊಡಬೇಕೆಂಬ ಕಟ್ಟುನಿಟ್ಟಿನ ನಿಯಮಗಳಿಲ್ಲ. ಉದಾ : ಗೌಳಿಗರ ಜಾಜ್ ಎಂಬ ಹೆಸರಲ್ಲಿ ಕರೆಯುವ ತೆರ ಕೊಡುವ ಪದ್ಧತಿಯಲ್ಲಿ ೧೫೦೦-೩೦೦೦ ರೂಗಳನ್ನು ನೀಡುವುದು ಒಂದು ಕ್ರಮವಾದರೆ; ಕುಡಬಿಗಳಲ್ಲಿ ದೇವರ ಮರ್ಯಾದೆ ಎಂದು ಕೇವಲ ೨೫ ರೂಪಾಯಿ ದುಡ್ಡು ಮತ್ತು ಒಂದಿಷ್ಟು ವಸ್ತುಗಳನ್ನು ನೀಡುತ್ತಾರೆ; ಕರೆ ಒಕ್ಕಲರು ೩೨ ಬೆಳ್ಳಿ ನಾಣ್ಯಗಳು( ೫೦೦ ರೂ.ಗೆ ಸಮ),೧೫-೨೦ ಚೀಲ ಬತ್ತ,೪-೫ ಡಬ್ಬಿ ಬೆಲ್ಲ ನೀಡುತ್ತಾರೆ. ಹಾಗೆಯೇ ಗೌಡಾಲು ಜನಾಂಗದಲ್ಲಿ ೧೨ ೧/೪ ರೂ. ಮಾತ್ರ ತೆರ ಕೊಡುವ ಕ್ರಮವಿದೆ. ಈ ಪದ್ಧತಿ ಹೆಣ್ಣುಗಳು ಸಿಗುವುದೇ ಅಪರೂಪವಾಗಿರುವ ಸಂದರ್ಭದಲ್ಲಿ ಹುಟ್ಟಿಕೊಂಡು ಇಂದಿಗೂ ಕೆಲವಡೆ ಯಥಾವತ್ತಾಗಿ ಇನ್ನೂ ಕೆಲವೆಡೆ ಸಾಂಕೇತಿಕವಾಗಿ ಉಳಿದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ತೆರ ಪದ್ಧತಿ ಸಂಬಂಧಗಳಲ್ಲಿ ವಿರಸವನ್ನು ಉಂಟುಮಾಡಿದ್ದು ಅತೀ ವಿರಳವೆನ್ನಬಹುದು. ಇಂದಿನ ವರದಕ್ಷಿಣೆಯಂತೆ ಬಹಿರಂಗವಾಗಿಯೋ ಇಲ್ಲವೇ ಗುಪ್ತವಾಗಿಯೋ ಕುಳಿತು ಮಾತನಾಡುವ ಕ್ರಮಗಳು ಇದ್ದಂತಿಲ್ಲ. ಹಾಗಾಗಿ ಯಾರನ್ನು ಯಾರು ಇಂತಿಷ್ಟೇ ಕೊಡಬೇಕೆಂದು ಒತ್ತಾಯಿಸುವ ಪ್ರಮೇಯವೇ ಇಲ್ಲಿರುವುದಿಲ್ಲ. ಇದೊಂದು ಆರೋಗ್ಯ ಪೂರ್ಣ ಪದ್ಧತಿ ಎನ್ನುವುದಕ್ಕೆ ಅಡ್ಡಿಯಿಲ್ಲ.
ಆ. ಸೀರುಡಿಕೆ 
ಪ್ರಸ್ತುತ ಭಾರತೀಯ ಸಮಾಜದಲ್ಲಿ ಇಂದಿಗೂ ಜಾರಿಯಲ್ಲಿರುವ ವಿಧವಾ ಪದ್ಧತಿ ಮಹಿಳೆಯರ ಡೊಡ್ಡ ಶತೃ. ಸಹಜವಾಗಿ ಪರಸ್ಪರ ಸಂಗಾತಿಗಳನ್ನು ಕಳೆದುಕೊಂಡಾಗ ಅಥವಾ ಸುಗಮ ಸಂಸಾರ ಸಾಗಿಸಲು ಸಾಧ್ಯವಾಗದೇ ವಿಚ್ಛೇಧನ ಪಡೆದು ಪರಿತ್ಯಕ್ತರಾದ ಸಂಧರ್ಭಗಳಲ್ಲಿ ಗಂಡಿಗೆ ಮರುಮದುವೆಯಾಗುವ ಮುಕ್ತ ಅವಕಾಶವನ್ನು ನೀಡಲಾಗಿದೆ. ಆದರೆ ಈ ಅವಕಾಶ ಮಹಿಳೆಯರಿಗೆ ಇಂದಿನವರೆಗೂ ಪರಿಪೂರ್ಣವಾಗಿ ಸಿಕ್ಕಿಲ್ಲ ಎಂಬುದು ಅತ್ಯಂತ ಅಶ್ಚರ್ಯಕರ ಸಂಗತಿ. ನಾಗರೀಕ ಸಮಾಜ ಯಾವ ಸಮುದಾಯಗಳನ್ನು ಅನಾಗರೀಕ ಗಿರಿಜನ ಸಮುದಾಯಗಳೆಂದು ಕರೆದಿದೆಯೋ ಅಂಥ ಸಮುದಾಯಗಳಲ್ಲಿ ಈ ಅವಕಾಶಗಳು ಹೇಗಿದ್ದವು ಎಂದು ತಿಳಿಯುವುದು ಆಸಕ್ತಿ ಮೂಡಿಸುವ ಸಂಗತಿ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಬಹುತೇಕ ಬುಡಕಟ್ಟು ಸಮಾಜಗಳಲ್ಲಿ ಪರಿತ್ಯಕ್ತರಾದ ಪುರುಷ ಮಹಿಳೆಯರಿಬ್ಬರಿಗೂ ಮರುಮದುವೆಯಾಗುವ ಮುಕ್ತ ಅವಕಾಶಗಳಿದ್ದವು ಎಂಬುದು ಗಮನಾರ್ಹ. ಗಂಡನನ್ನು ಕಳೆದುಕೊಂಡ ಹೆಣ್ಣು, ಹೆಂಡತಿಯನ್ನು ಕಳೆದುಕೊಂಡ ಗಂಡು ಪರಸ್ಪರ ಒಪ್ಪಿ ಸಮುದಾಯದ ಹಿರಿಯರ ಸಮ್ಮಿತಿಯೊಂದಿಗೆ ವಿವಾಹವಾಗುವುದು ಈ ಗುಂಪುಗಳಲ್ಲಿ ಸಹಜವಾದ ಪ್ರಕ್ರಿಯೆಗಳು. ಇಲ್ಲಿ ಗಂಡ ಹೆಂಡತಿಯ ಮಧ್ಯೆ ಹಲವಾರು ಕಾರಣಗಳಿಗಾಗಿ ಸುಖ ಸಂಸಾರ ಸಾಧ್ಯವಾಗದೇ ಇದ್ದರೆ ವಿಚ್ಛೇಧನ ಪಡೆದು ಮರು ಮದುವೆಯಾಗುವ ಅವಕಾಶಗಳು ಇವೆ. ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಸಮುದಾಯಗಳಲ್ಲಿ ಬಹುಪತಿತ್ವ ಅಥವಾ ಬಹುಪತ್ನಿತ್ವ ಪದ್ಧತಿಗಳಿಗೆ ಅವಕಾಶವಿಲ್ಲ. ಹಾಗೇನಾದರೂ ಆದರೆ ಬುಡಕಟ್ಟಿನಿಂದಲೇ ಬಹಿಷ್ಕಾರ ಮಾಡುತ್ತಿದ್ದ ಬಗ್ಗೆ ವಿವರಗಳು ದೊರೆಯುತ್ತವೆ. ಇದರಲ್ಲಿ ಇರುವ ಒಂದು ದೋಷವೆಂದರೆ ಹೀಗೆ ಮರುಮದುವೆ ಆದವರಿಗೆ ಮಂಗಳಕಾರ್ಯಗಳಲ್ಲಿ ಪ್ರವೇಶವನ್ನು ನಿರಾಕರಿಸಿರುವುದು. ಆದರೆ ಸಮಾಧಾನದ ಸಂಗತಿಯೆಂದರೆ ಈತ್ತೀಚೆಗೆ ಈ ಭಾವನೆ ಮರೆಯಾಗಿ ಅವರನ್ನೂ ಎಲ್ಲರಂತೆ ಕಾಣುವ ಮನೋಧರ್ಮವನ್ನು ರೂಢಿಸಿಕೊಳ್ಳುತ್ತಿದ್ದಾರೆ.
ಇ. ಸಗೋತ್ರ ವಿವಾಹ ನೀಷೇಧ
ಬಹುಪಾಲು ಬುಡಕಟ್ಟುಗಳಲ್ಲಿ ಮದುವೆ ಮಾಡುವಾಗ ಗಮನಿಸುವ ಬಹುಮುಖ್ಯ ಸಂಗತಿ ಬಳಿಗಳಿಗೆ ಸಂಬಂಧಿಸಿದ್ದು. ಇವರಲ್ಲಿ ಸೋದರ ಬಳಿಗಳಲ್ಲಿ ಹೆಣ್ಣು ಗಂಡಿನ ಸಂಬಂಧಗಳನ್ನು ಮಾಡುವುದು ಸಂಪೂರ್ಣ ನಿಷಿದ್ಧ. ಈ ಆಚಾರ ಮಾನವೀಯ, ರಕ್ತ ಸಂಬಂಧಗಳಿಗೆ ಆದಿವಾಸಿ ಸಮುದಾಯಗಳು ನೀಡಿದ ಪ್ರಾಮುಖ್ಯತೆಯನ್ನು ಪ್ರಕಟಪಡಿಸುತ್ತದೆ. ಮಲೆನಾಡಿನ ಹಸಲರು, ಗೌಳಿಗರು, ಕುಡಬಿಗಳು, ಕರೆಒಕ್ಕಲರು ಹಾಗೂ ಗೌಡಾಲು ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಈ ನಿಷೇಧಗಳು ಬಳಕೆಯಲ್ಲಿರುವುದನ್ನು ಕಾಣಬಹುದಾಗಿದೆ. ಸಗೋತ್ರ ಗುಂಪುಗಳಲ್ಲಿ ವಿವಾಹವಾದರೆ ಒಂದೇ ಹೊಟ್ಟೆಯಲ್ಲಿ ಜನಿಸಿದ ಸೋದರ ಸೋದರಿಯರನ್ನೇ ವಿವಾಹವಾದಂತೆ ಎಂಬ ನಂಬಿಕೆ ಇಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಹೀಗೆ ಬುಡಕಟ್ಟುಗಳು ಸೋದರ ಬಳಿಗಳಲ್ಲಿ ವೈವಾಹಿಕ ಸಂಬಂಧಗಳನ್ನು ನಿಷೇಧಿಸುವ ಮೂಲಕ ವಂಶೋತ್ಪತ್ತಿಯನ್ನು ಕಾಪಾಡಿಕೊಂಡು, ರಕ್ತ ಸಂಕರದಿಂದಾಗುವ ತೊಂದರೆಗಳನ್ನು ನಿವಾರಿಸಿಕೊಂಡು ಬಂದಿವೆ ಎಂಬುದು ಇಂದಿನ ಸಮಾಜ ಗಮನಿಸಲೇಬೇಕಾದ ಅಂಶವಾಗಿದೆ. 
ಮಹಿಳಾ ಸಮಾನತೆಗೆ ಇನ್ನಷ್ಟು ನಿದರ್ಶನಗಳು
ಬುಡಕಟ್ಟುಗಳಲ್ಲಿ ಬಳಕೆಗೊಳ್ಳುತ್ತಿರುವ ಆಚರಣೆಗಳಲ್ಲಿ ಮಹಿಳೆಯರ ಸಮಾನತೆಯನ್ನು ಸಾರುವ ಇನ್ನು ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ವಿಶೇಷವಾಗಿ ದೇವರ ಹೆಸರಿನಲ್ಲಿ ಮಹಿಳೆಯರನ್ನು ಬಸವಿ, ದೇವದಾಸಿಯರನ್ನಾಗಿಸುವ ಕ್ರಮಗಳಿಲ್ಲ. ಹಾಗೆಯೇ ಪ್ರೇಮ ವಿವಾಹಕ್ಕೂ ಅಕಾಶಗಳುಂಟು. ಗಂಡು ಹೆಣ್ಣು ಪರಸ್ಪರ ಅನುರುಕ್ತರಾಗಿ ಹಟ್ಟಿಬಿಟ್ಟು ಹೋದಾಗ ಅವರನ್ನು ಕರೆತಂದು ಸರಳವಾಗಿ ವಿವಾಹಮಾಡುವುದುಂಟು. ಇಲ್ಲಿ ಹೇಳಲೇ ಬೇಕಿರುವ ಮಹತ್ವದ ಅಂಶವೆಂದರೆ ಅತೀ ಮಡಿವಂತಿಕೆಯ ಭಾವನೆಯಿರುವ ಬುಡಕಟ್ಟುಗಳಲ್ಲಿ ಅನ್ಯ ಸಮುದಾಯದ ಹೆಣ್ಣನ್ನು ವಿವಾಹ ಮಾಡಿಕೊಳ್ಳುವ ಸಂದರ್ಭಗಳು ಸೃಷ್ಟಿಯಾದಾಗ ಹೊರಗಿನಿಂದ ಬಂದ ಹೆಣ್ಣನ್ನು ಅವರದೇ ಕ್ರಮಗಳಲ್ಲಿ ಶುದ್ಧಿಮಾಡಿಕೊಳ್ಳುತ್ತಾರೆ. ಇನ್ನೂ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಮಹಿಳೆ ಪುರಷನಂತೆಯೆ ಎಲ್ಲಾ ಸಂದರ್ಭಗಳಲ್ಲೂ ಭಾಗಿಯಾಗುವುದನ್ನು ಕಾಣಬಹುದು.
ಅಪವಾದಗಳು
ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಸಂಪೂರ್ಣವಾಗಿ ಸರ್ವ ಸಮಾನಳು, ಸ್ವತಂತ್ರಳು ಎಂದು ಹೇಳಿದರೆ ತಪ್ಪಾಗುತ್ತದೆ. ಈ ವ್ಯವಸ್ಥೆಯಲ್ಲೂ ಮಹಿಳೆ ಹಲವಾರು ಸಂದರ್ಭಗಳಲ್ಲಿ ಧಮನಿತಳಾಗಿರುವುದು ಉಂಟು. ಅಂಥ ಕೆಲವು ಸಂದರ್ಭಗಳನ್ನು ನೋಡುವುದಾದರೆ : ಮೂಲದಲ್ಲಿ ಮಾತೃಮೂಲಿಯ ಈ ಸಮುದಾಯಗಳು ಬರು ಬರುತ್ತಾ ಪಿತೃಪ್ರಧಾನ ಸಮಾಜಗಳಾಗಿ ಬದಲಾದ ಕಾರಣದಿಂದಾಗಿ ನಾಗರೀಕ ಸಮಾಜಗಳಲ್ಲಿ ಕಾಣುವಂತೆ ಇಲ್ಲಿಯೂ ಕೆಲವಾರು ಸಂದರ್ಭಗಳಲ್ಲಿ ಮಹಿಳೆಯನ್ನು ಗೌಣವಾಗಿ ಪರಿಗಣಿಸಲಾಗಿದೆ. ಹೆಣ್ಣನ್ನು ಸೋದರಮಾವನ ಆಸ್ತಿಯೆಂಬ ಭಾವನೆಯನ್ನು ಹೊಂದಿರುವುದು, ಹಿರಿಯರ ಪೂಜೆಯಲ್ಲಿ ಕೇವಲ ಗಂಡಸರಿಗೆ ಮಾತ್ರ ಗೌರವ ನೀಡುತ್ತಿರುವುದು, ಹೆಣ್ಣಿನ ಹೆಸರುಗಳನ್ನು ಏಕ ವಚನದಲ್ಲಿ ಕರೆಯುವ ರೀತಿ, ಅನೇಕ ಆಚರಣೆಗಳಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ಪರಿ ಇಂಥ ಸಂಗತಿಗಳು ಬುಡಕಟ್ಟುಗಳಲ್ಲಿ ಹೆಣ್ಣನ್ನು ನೋಡಿರುವ ರೀತಿ ಒಂದೇ ತೆರನಾಗಿಲ್ಲ ಎಂಬುದನ್ನು ನೆನಪಿಸುತ್ತವೆ.  
ಸಮಾರೋಪ 
ಮೇಲೆ ವಿವರಿಸಿದಂತೆ ಮಲೆನಾಡಿನ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣನ್ನು ಕೆಲವೊಮ್ಮೆ ಸಮಾನವಾಗಿ ಇನ್ನೂ ಕೆಲವೊಮ್ಮೆ ಅಸಮಾನ ನೆಲೆಯಲ್ಲಿ ಕಾಣಲಾಗಿದೆ. ಈ ದೃಷ್ಟಿಗಳಲ್ಲಿ ಕೆಲವು ನಿಸಂಶಯವಾಗಿ ಹೊರಗಿನ ಶಿಷ್ಟ ಸಂಸ್ಕೃತಿಗಳ ಪ್ರಭಾವದಿಂದ ಬಂದಿರುವಂತಹವು. ಮತ್ತೆ ಕೆಲವು ತಮಗೆ ತಾವೇ ತಮ್ಮ ಲೋಕದೃಷ್ಟಿಯ ಅನುಗುಣವಾಗಿ ರೂಢಿಸಿಕೊಂಡವುಗಳಾಗಿವೆ. ಇವು ಏನೆ ಇದ್ದರೂ ಈ ಸಮುದಾಯಗಳು ತಮ್ಮ ಮಹಿಳೆಯರನ್ನು ಭೂಮಿಯಂತೆ ಫಲವಂತಿಕೆಯ ಶಕ್ತಿಯಾಗಿ ಕಾಣುವ ದೃಷ್ಟಿಯನ್ನು ಕಳೆದುಕೊಂಡಿಲ್ಲ. ಏನೇ ಇದ್ದರೂ ಬುಡಕಟ್ಟಿನ ಮಹಿಳೆಯರ ಒಟ್ಟಾರೆ ಜೀವನವನ್ನು ಗಮನಿಸಿದಾಗ ನಾಗರೀಕ ಎಂದುಕೊಂಡಿರುವ ಸಮುದಾಯಗಳಲ್ಲಿ ಹೆಣ್ಣಿನ ಬಗ್ಗೆ ಇರುವಷ್ಟು ಅಮಾನವೀಯತೆ ಇಲ್ಲಿಲ್ಲ ಎಂಬುದು ಸಮಧಾನದ ಸಂಗತಿ. ಒಟ್ಟಾರೆ ಬುಡಕಟ್ಟುಗಳ ಜೀವನಕ್ರಮದಲ್ಲಿ ಸಿಗುವ ಒಳ್ಳೆಯ ಮಾದರಿಗಳನ್ನು ಸ್ವೀಕರಿಸಿ ಮನ್ನಡೆಯಬೇಕಾದ ಅನಿವಾರ್ಯತೆಯನ್ನು ನಮ್ಮ ಕಾಲ ಸೃಷ್ಟಿಸಿದೆ. ಈ ಜವಾಬ್ಧಾರಿಯನ್ನು ನಾವೆಲ್ಲರೂ ನಿಷ್ಟೆಯಿಂದ ನಿರ್ವಹಿಸಬೇಕಿದೆ.
###################
ಪರಾಮರ್ಶನ ಗ್ರಂಥಗಳು

೧. ಕರ್ನಾಟಕದ ಬುಡಕಟ್ಟುಗಳು ಸಂಪುಟ-೦೧,೧೯೯೮,ಸಂ:ಎಚ್.ಜೆ ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು 
೨. ದಕ್ಷಿಣ ಭಾರತೀಯ ಜಾನಪದ ಕೋಶ ಸಂಪುಟ-೦೧, ೨೦೧೧, ಸಂ : ಸ.ಚಿ.ರಮೇಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೩. ಬುಡಕಟ್ಟು ಕುಲಕಸುಬುಗಳು, ೨೦೦೨, ಕೆ.ಎಂ. ಮೈತ್ರಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೪. ಕರ್ನಾಟಕ ಜನಪದ ಕಲೆಗಳು, ೧೯೯೬, ಸಂ : ಹಿ.ಚಿ. ಬೋರಲಿಂಗಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೫. ಇದು ನಮ್ಮ ಕರ್ನಾಟಕ, ೨೦೧೦, ಸಂ : ಅರವಿಂದ ಚೊಕ್ಕಾಡಿ, ಚಾಣುಕ್ಯ ಪ್ರಕಾಶನ, ವಿಜಾಪುರ
೬. ಗಿರಿಜನ ನಾಡಿಗೆ ಪಯಣ, ೨೦೧೦, ಹಿ.ಚಿ. ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
೭. ಮಹಿಳಾ ಜಾನಪದ, ೨೦೦೩, ಸಂ : ಕೆ.ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು 

 ಡಾ. ಎಸ್.ಎಂ. ಮುತ್ತಯ್ಯ

No comments:

Post a Comment