Saturday, 27 September 2014

ಮಂಟೇಸ್ವಾಮಿಯ ಕಾಲಜ್ಞಾನ

ಕರ್ನಾಟಕದ ಬಹುಮುಖ್ಯ ಸಾಂಸ್ಕೃತಿಕ ಪರಂಪರೆಗಳಲ್ಲಿ ಮಂಟೇಸ್ವಾಮಿ ಪರಂಪರೆಯೂ ಒಂದು. ಮಂಟೇಸ್ವಾಮಿ  ಹದಿನೈದನೇ ಶತಮಾನದಲ್ಲಿ ಬದುಕಿದ್ದನೆಂದು ಹೇಳಲಾಗುವ ಒಬ್ಬ ಚಾರಿತ್ರಿಕ ವ್ಯಕ್ತಿ. ಅಲ್ಲಿಂದ ಮುಂದೆ ಈ ಸಾಂಸ್ಕೃತಿಕ ವೀರ ಎಷ್ಟು ದೈವೀಕರಣಗೊಂಡಿದ್ದಾನೆ ಎಂದರೆ ಈತನ ಕಾಲಮಾನವನ್ನು ತಿಳಿಸಲು ಈ ಪರಂಪರೆಯ ನೀಲಗಾರರು ಹಾಡುವ ಮೌಖಿಕ ರಚನೆಗಳು ಹಾಗೂ ಪರಂಪರೆಯ ಆಚರಣೆಗಳನ್ನು ಬಿಟ್ಟರೆ ಬೇರೆ ಯಾವುದೇ ಆಕರಗಳು ಇಲ್ಲ. ಹಾಗಾಗಿಯೇ ೧೨ ನೇ ಶತಮಾನದಿಂದ ೧೭ ನೇ ಶತಮಾನದ ಮಧ್ಯೆ ಈತನ ಕಾಲಮಾನ ಓಡಾಡುತ್ತಿದೆ. ಈ ಕಾಲದ ಅಂಗು ಈಗ ನಮಗೆ ಮುಖ್ಯವಾಗುವುದಿಲ್ಲ. ಏಕೆಂದರೆ ಮಂಟೇಸ್ವಾಮಿಯ ಬದುಕಿನ ಹೋರಾಟ ನಮ್ಮ ಭೂತ-ವರ್ತಮಾನ-ಭವಿಷತ್ತನ್ನು ಒಟ್ಟಾಗಿಯೇ ಒಳಗೊಂಡಿದೆ. 
ಮಂಟೇಸ್ವಾಮಿಯ ಜೀವನ ಆರಂಭವಾಗುವುದೇ ಶೂನ್ಯದಿಂದ. ಭೂಮಿ ಹುಟ್ಟುವ ಮೊದಲೇ ಮಂಟೇಸ್ವಾಮಿ ಹುಟ್ಟಿದ ಎಂಬುದು ಈ ಪರಂಪರೆಯ ತಿಳುವಳಿಕೆ. ಹಾಗಾಗಿಯೇ ಈತನನ್ನು ’ಧರೆಗೆದೊಡ್ಡವರು’ ಎಂದು ಆರ್ಥಪೂರ್ಣವಾದ ಹೆಸರಿನಿಂದ ಕರೆಯಲಾಗಿದೆ. ಮಂಟೇಸ್ವಾಮಿಯೇ ಈ ಭೂಮಿ-ಆಕಾಶ, ಸೂರ್ಯ- ಚಂದ್ರ, ಬ್ರಹ್ಮ-ವಿಷ್ಣು-ಮಹೇಶ್ವರರನ್ನು, ಮನುಷ್ಯ-ಪ್ರಾಣಿ ಮೊದಲಾದ ಸಕಲ ಜೀವಕೋಟಿಯನ್ನು ಸೃಷ್ಟಿಸುತ್ತಾನೆ. ಇದು ಮಂಟೇಸ್ವಾಮಿಯ ಜೀವನದ ಪೌರಾಣಿಕ ಮಜಲು
ಮಂಟೇಸ್ವಾಮಿಯ ಜೀವನದ  ಐತಿಹಾಸಿಕ ಮಜಲು ಶುರುವಾಗುವುದು ಉತ್ತರ ದೇಶದ ಕಲ್ಯಾಣವನ್ನು ಎದುರುಗೊಳ್ಳುವುದರ ಮೂಲಕ. ಧರೆಗೆದೊಡ್ಡವನೆನಸಿದ ಈತ ೧೨ನೇ ಶತಮಾನದ ಶರಣ ಚಳವಳಿಯನ್ನು ಮುಖಾಮಖಿ ಯಾಗುವುದು ಒಂದು ವಿಚಿತ್ರ ಎನಿಸಿದರು ಈ ಸೃಷ್ಟಿಯ ಹಿಂದೆ ಆ ಪರಂಪರೆಯ ವಾರಸುದಾರರ ನವ ಸಮಾಜ ನಿರ್ಮಾಣದ ಆಶಯಗಳಿವೆ. ಹಾಗಾಗಿಯೇ ಒಂದು ಕಾಲಕ್ಕೆ ಅತ್ಯಂತ ಮಹತ್ವದ್ದಾಗಿದ್ದ ಶರಣ ಚಳವಳಿಯ ನೆಲದಿಂದಲೆ ಮಂಟೆಸ್ವಾಮಿಯ ಪಯಣ ಶುರುವಾಗುತ್ತದೆ.  ತನ್ನ ಸೃಷ್ಟಿ ಕಾರ್ಯ ಮುಗಿಸಿದ ಮಂಟೇಸ್ವಾಮಿ ನೇರವಾಗಿ ಕಲ್ಯಾಣದ ದೃಢವ ಪರಿಕ್ಷಿಸಲು ಹೊರಡುತ್ತಾನೆ. ಅಲ್ಲಿದ್ದ ಶರಣರ ಡಾಂಭಿಕತೆಯನ್ನು ಬಸವಣ್ಣನ ಗಮನಕ್ಕೆ ತರುವುದರ ಮೂಲಕ ಕಲ್ಯಾಣದ ಹುಳುಕುಗಳ ದರ್ಶನ ಮಾಡಿಸುತ್ತಾನೆ. ಅಲ್ಲಿಂದ ರಾಚಪ್ಪಯ್ಯನೆಂಬ ಭಕ್ತನನ್ನು ತನ್ನ ಜೊತೆ ಕರೆದುಕೊಂಡು ಹೊರಡುತ್ತಾನೆ. ಅಲ್ಲಿಂದ ಕೊಡೆಗಲ್ಲಿಗೆ ಬಂದು, ಅಲ್ಲಿಂದ ವಿಜಯನಗರ ಪಟ್ಟಣಕ್ಕೆ ಬಂದು ಅಲ್ಲಿದ್ದ ಗಾರಡಿಗರನ್ನು ಗೆದ್ದು ಅವರನ್ನು ಒಕ್ಕಲುಗಳನ್ನಾಗಿ ಮಾಡಿಕೊಂಡು ಮುಂದೆ ಕಾಗಿನೆಲೆಗೆ ಬಂದು ಅಲ್ಲಿ ದೊಡ್ಡಮ್ಮತಾಯಿಯನ್ನು ಶಿಶುಮಗಳಾಗಿ ಪಡೆದುಕೊಂಡು ನಂತರ ಸಖರಾಯ ಪಟ್ಟಣಕ್ಕೆ ಬಂದು ಅಲ್ಲಿಂದ ಬಸವರಾಜೇಂದ್ರ ಮತ್ತು ವೀರಭದ್ರಸ್ವಾಮಿಗಳನ್ನು ಶೀಶು ಮಕ್ಕಳಾಗಿ ಪಡೆಯುತ್ತಾರೆ. ತದನಂತರ ಚನ್ನಪಟ್ಟಣದ ಹೊನ್ನಾಯ್ಕನಹಳ್ಳಿಯ ಮುದ್ದಮ್ಮನಿಂದ ಧರೆಗೆದೊಡ್ಡವರು ಎಂಬ ನಾಮಕರಣ ಪಡೆದು ಬೊಪ್ಪಗೌಡನಪುರಕ್ಕೆ ಬಂದು ಕಾಂಕನಹಳ್ಳಿಯ ಮಡಿವಾಳ ಮಾಚಯ್ಯನ ಉಬ್ಬೇ ಒಲೆಯನ್ನು ಗದ್ದುಗೆಯಾಗಿ ಅವನು ಕತ್ತೆ ಕಟ್ಟೋ ಜಾಗವನ್ನು ಚಂದ್ರಶಾಲೆಯನ್ನಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ ಬಂದು ನಿಡುಗಟ್ಟದ ಆಚಾರಿಗಳ ಮನೆಯ ಅದೃಷ್ಟದ ಮಗ ಕೆಂಪಣ್ಣನನ್ನು ಶಿಶುಮಗನಾಗಿ ಪಡೆಯುತ್ತಾನೆ. ಹಲಗೂರು ದೊರೆಗಳ ದರ್ಪವನ್ನು ಮುರಿದು ಅವರನ್ನು ತನ್ನ ಒಕ್ಕಲಾಗಿಸಿಕೊಂಡು , ಇಲ್ಲೆಲ್ಲ ತನ್ನ ಗದ್ದುಗೆಗಳನ್ನು ಸ್ಥಾಪಿಸಿ ಅವುಗಳನ್ನು ತನ್ನ ಶಿಷ್ಯರಿಗೆ ಒಪ್ಪಿಸಿ ತಾನು ಪಾತಾಳ ಲೋಕಕ್ಕೆ ತೆರಳುವುದಾಗಿ ನಿರ್ದರಿಸುತ್ತಾನೆ.  
ಹೀಗೆ ತನ್ನ ಸಮ ಸಮಾಜದ ನಿರ್ಮಾಣಕ್ಕೆ ಬೇಕಿರುವ ಶಿಷ್ಯರನ್ನು ಪಡೆದು ಬಂದ ಮಂಟೇಸ್ವಾಮಿ ತನ್ನ ಎಲ್ಲಾ ಶಿಷ್ಯರನ್ನು ಮುಂದೆ ಕೂರಿಸಿಕೊಂಡು ಕಾಲಜ್ಞಾನದ ಪುಸ್ತಕವನ್ನು ನೋಡಿ ಮುಂದೆ ಬರಲಿರುವ ಕಲಿಗಾಲದ ವೈಚಿತ್ರ್ಯಗಳನ್ನು ವಿವರಿಸುತ್ತಾನೆ. ಮಂಟೇಸ್ವಾಮಿ ತನ್ನ ಶಿಷ್ಯಂದಿರನ್ನೆಲ್ಲ ಕರೆಸಿ ಕಲಿ ಬಗ್ಗೆ  ಹೇಳುವ ಸಂದರ್ಭದಲ್ಲಿ, ನಾನು ಹಿಂದೆ ಹೋದ ಕಲಿಯ ಬಗ್ಗೆ ಹೇಳಬೇಕಾ ಇಲ್ಲ ಬರುವ ಕಲಿ ಬಗ್ಗೆ ಹೇಳಬೇಕಾ? ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. ಅದಕ್ಕೆ ದೊಡ್ಡಮ್ಮ ಮುಂದೆ ಬರುವ ಕಲಿಯ ಬಗ್ಗೆ ಹೇಳುವಂತೆ ಕೇಳುತ್ತಾಳೆ. ಆಗ ಮಂಟೇಸ್ವಾಮಿ ಈ ಕಲಿಯಿಂದ ನಿಮಗೇನು ಪ್ರಯೋಜನ? ಎಂದು ಕೇಳಿದಾಗ ದೊಡ್ಡಮ್ಮ ತಾಯಿ ಹೀಗೆ ಉತ್ತರಿಸುತ್ತಾಳೆ- 
’ನಾಳೆ ದಿವಸ ನಮ್ಮ ಹೊಟ್ಟೇಲಿ ಮಕ್ಕಳು ಹುಟ್ತವೆ |
 ಹುಟ್ಟದಂಥ ಮಕ್ಕಳಿಗೆ ಏನಂಥ ಹೇಳ್ತಿನಿ ಅಂದರೆ | 
 ಇಂತಿಂಥ ಕಲಿಗಾಲ ಬರ‍್ತದೆ ಕಣ್ರಪ್ಪ ಮಕ್ಕಳೆ | 
 ಅರಿತು ಬಾಳಿ ಆಂತ ಹೇಳಿ | 
 ಹುಟ್ಟಿದ ಮಕ್ಕಳಿಗೆ ಬುದ್ಧಿ ಹೇಳ್ಕೊಂಡು ಬಾಳಿ ಬದುಕ್ತೀವಿ ಸ್ವಾಮಿ | (ಮ.ಕಾ.ಪು: ೫೫೭-೫೫೮) 
ಆಗ ಮಂಟೇಸ್ವಾಮಿ ತನ್ನ ಕಾಲ ಜ್ಞಾನ ಹೇಳಲು ಮುಂದಾಗುತ್ತಾರೆ. ಅವರು ಹೇಳಿದ ಕಲಿಗಾಲದ ಲಕ್ಷಣಗಳು ಈ ಮುಂದಿನಂತಿವೆ : ಭೂಮಿ ನಡುಗುತ್ತದೆ. ಬಾಲಚುಕ್ಕಿ ಮೂಡುತ್ತದೆ. ಕೊತ್ತಿ ಕೊಂಬೂಡುತ್ತದೆ .ಅಟ್ಟದ ಮೇಲಿರುವ ಕಬ್ಬಿಣ ನುಚ್ಚಾಗಿ ಉದುರುತ್ತದೆ. ಗುರುಗಳ ಮದ್ಯೆ ಗುದ್ದಾಟ ಬರುತ್ತೆ. ಅನ್ಯಾಯ ಹೆಚ್ಚುತ್ತದೆ. ಅಮ್ಮ ಎನ್ನುವ ಕಂದ ಇಲ್ಲದಂತಾಗುತ್ತದೆ. ಕಾವಿ ಹೊದ್ದವರೆಲ್ಲ ಕಳ್ಳರಾಗಿ ತಿರುಗುತ್ತಾರೆ. ದಾಸಯ್ಯರೆಲ್ಲ ದೇಸಾಂತರ ಹೋಗಬೇಕು. ಜೋಗಯ್ಯ ಗೊವಯ್ಯರೆಲ್ಲ ಗೋಳಾಡಿ ಸಾಯುತ್ತಾರೆ. ಊರು ಕಾಡಾಗುತ್ತದೆ. ಕಾಡು ನಾಡು ಆಗುತ್ತದೆ. ಧರ್ಮ ಕಾಡು ಸೇರುತ್ತದೆ. ಆಡುವ ಮಕ್ಕಳ ಮಾತು ಮುಂದೆ, ಬಿಲತವರ ಮಾತು ಹಿಂದೆ ಆಗುತ್ತದೆ. ಅತ್ತೆ ಸೊಸೆ ಸೊಸೆ ಅತ್ತೆ ಆಗುತ್ತಾರೆ. ಅರಸ ಆಳಾಗುತ್ತಾನೆ, ಆಳು ಅರಸನಾಗುತ್ತಾನೆ. ಹಾಳೆಯಲ್ಲಿ ಉಣ್ಣುವವರು ಹರಿವಾಣಕ್ಕೆ, ಹರಿವಾಣದಲ್ಲಿ ಉಣ್ಣುವವರು ಹಾಳೆಗೆ ಬರುತ್ತಾರೆ. ರಾಜರಿಗೆಲ್ಲ ಗೋಳಾಟ ಬರುತ್ತದೆ, ಬಡಿದಾಟ ಮಾಡುತ್ತಾರೆ. ಮೈಸೂರು ರಾಜ ರೈತನಾಗಿ ತಿರುಗುತ್ತಾನೆ. ಅಟ್ಟ,ಬೆಟ್ಟಗುಡ್ಡಾ ಎಲ್ಲಾ ಹೊಲ ಆಯ್ತದೆ. ಉಣ್ಣುವಂತ ಅನ್ನವನ್ನು ತಕ್ಕಡಿಯಲ್ಲಿ ತೂಗುವಂಥಾಗುತ್ತದೆ. ಉಡುವ ಬಟ್ಟೆಗಳನ್ನು ತಕ್ಕಡಿಯಲ್ಲಿ ತೂಗುವಂತಾಗುತ್ತದೆ. ಮುಂದೆ ಹುಟ್ಟು ಮಕ್ಕಳಿಗೆ ಅನ್ನ ಇಲ್ಲದಂತಾಗುತ್ತದೆ. ಗರತಿ ಗೌಡತಿಯಾಗಿ, ಗೌಡತಿ ಗರತಿಯಾಗುತ್ತಾರೆ. ಮಾತು ಕಲಿತ ಜನ ಹೊಟ್ಟ ತುಂಬಾ ಉಣ್ಣುತ್ತಾರೆ. ನಾಳೆ ದೇವರಿಲ್ಲ ಎನ್ನುತ್ತಾರೆ. ಗಂಡು ಸಂತಾನ ಕಡಿಮೆಯಾಗಿ ಎಣ್ಣು ಸಂತಾನ ಹೆಚ್ಚಾಗಿ ಹಣ್ಣಿಗೆ ಗಂಡು ಇಲ್ಲದಂತಾಗುತ್ತದೆ. ಏಳು ವರ್ಷದ ಮಗಳು ಋತುಮತಿಯಾಗುತ್ತಾಳೆ. ಏಳು ವರ್ಷದ ಮಗಳು ಜೋಡು ತೊಟ್ಲು ಕಟ್ಟುತ್ತಾಳೆ. ಜಗಮರ ಮಠದಲ್ಲಿ ಜೋಡು ತೊಟ್ಟಿಲು ಕಟ್ಟುತ್ತಾಳೆ. ಎತ್ತಿನ ಬೆಲೆಗೆ ಎಮ್ಮೆ ಮಾರಬೇಕು. ಟಗರಿನ ಬೆಲೆಗೆ ಕೋಳಿ ಮಾರಬೇಕು. ಕೋಳಿ ಬೆಲೆಗೆ ಕೊತ್ತಿಯ ಮಾರಬೇಕು. ಹುಟ್ಟಿದ ಹೆಣ್ನು ಮಕ್ಕಳನ್ನು ಸಂತೆಯಲ್ಲಿ ಮಾರಬೇಕು. ದಲ್ಲಾಳಿಗೆ ಲಾಭ ಗಂಟಿನವನಿಗೆ ಮೂರು ನಾಮ. ಭೂಮಿಗೆ ಬೆಂಕಿ ಮಳೆ ಬೀಳುತ್ತದೆ.(ವಿವರಗಳಿಗೆ ನೋಡಿ : ಹಿ.ಚಿ. ಬೋರಲಿಂಗಯ್ಯ ನವರು ಸಂಪಾದಿಸಿ ಪ್ರಕಟಿಸಿರುವ ಮಂಟೇಸ್ವಾಮಿ ಕಾವ್ಯದ ಕಲಿಪುರುಷನ ಸಾಲು ಪುಟ : ೫೫೩-೫೭೬) ಕಲಿಗಾಲದ ಇಂಥ ವಿಚಿತ್ರ ಕಾಲದಲ್ಲಿ ನಾನು ಈ ಭೂಮಿ ಮೇಲೆ ಬದುಕಲಾರೆ. ಕಲಿ ಬರುವುದರ ಒಳಗೆ ನಾನು ಪಾತಾಳಲೋಕಕ್ಕೆ ಹೋಗಬೇಕೆಂದು ತನ್ನ ನಿರ್ದಾರವನ್ನು ಪ್ರಕಟಿಸುತ್ತಾರೆ. 
ಕಾಲ ಕಳೆದಂತೆ ಕಲಿ ಬಂದು ಬಿಡುತ್ತಾನೆ. ಆ ಕಲಿಮನುಷ್ಯನ ಸ್ವರೂಪವಾದರೂ ಎಂಥದ್ದು? ಕಲಿ ಮನುಷ್ಯ ಮೊದಲ ಬಾರಿಗೆ ಕಂಡದ್ದು ಮಂಟೇಸ್ವಾಮಿಗೆ. ಆಗ ಆತನ ರೂಪ ಹೀಗಿತ್ತು : ಕಲಿ ಮನುಷ್ಯ ತನ್ನ ಹೆಂಡತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು, ಬಲದಲ್ಲಿ ತನ್ನ ತಾಯಿಯನ್ನು ನಡೆಸಿಕೊಂಡು ಹೆಂಡತಿಯ ಚಪ್ಪಲಿಯನ್ನು ತಲೆ ಮೇಲೆ ಹೊರಿಕೊಂಡು, ತಾನು ಮೆಡುವ ಚಪ್ಪಲಿಯನ್ನು ಆಕೆಯ ಮಡಿಲಲ್ಲಿ ಕಟ್ಟಿಸಿಕೊಂಡು ತಾವು ವೀಳ್ಯ ಹಾಕಿಕೊಂಡು ಉಗಿಯುವ ಪಿಕಿದಾನಿಯನ್ನು ಹಿಡಿಸಿಕೊಂಡು; ಎಡದಲ್ಲಿದ್ದ ತಂದೆಯ ತಲೆಯ ಮೇಲೆ ತಮ್ಮ ಮಲಗುವ ಮಂಚ, ಹಾಸಿಗೆ ಮತ್ತು ದಿಂಬುಗಳನ್ನು ಹೊರಿಸಿಕೊಂಡು ಬರುತ್ತಿರುವುದು ಕಾಣಿಸುತ್ತದೆ.(ಮಂಟೇಸ್ವಾಮಿಕಾವ್ಯ. ಪು:೫೫೯-೫೬೦) 
ಮಂಟೇಸ್ವಾಮಿ ಪರಂಪರೆಯಲ್ಲಿ ಕಾಲಜ್ಞಾನಕ್ಕೆ ತುಂಬಾ ಮಹತ್ವವಿದೆ. ಮಂಟೇಸ್ವಾಮಿಯು ತನ್ನ ಗುರುವಾದ ಕೊಡೆಕಲ್ಲ ಬಸವಣ್ಣನಿಂದ ಬೀಳ್ಕೊಂಡು ಉತ್ತರ ದೇಶದಿಂದ ಬರುವಾಗ ಕಾಲಗ್ನಾನ, ನೀಲಿಗ್ನಾನ, ಖಂಡಗ್ನಾನ ತಂದನು ಎಂಬ ಉಲ್ಲೇಖ ಮಳವಳ್ಳಿ ಪಠ್ಯದಲ್ಲಿದೆ( ಮಂಟೇಸ್ವಾಮಿ ಕಾವ್ಯ ಸಾಂಸ್ಕೃತಿಕ ಮುಖಾ ಮುಖಿ, ಪುಟ : ೯೩) ಎಂಬ ಅಭಿಪ್ರಾಯಗಳು ಇವೆ ಹಾಗೆಯೇ ಮಂಟೇಸ್ವಾಮಿಯು ಸ್ವತಃ ಕಾಲಜ್ಞಾನದ ವಚನಗಳನ್ನು ರಚಿಸಿರುವುದರ ಕುರುಹುಗಳು ಸಿಗುತ್ತವೆ. ವಿ. ಶಿವಾನಂದ ವಿರಕ್ತಮಠ ಅವರು ಮಂಟೇಸ್ವಾಮಿಯ ಸ್ವರವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕೊಡೆಕಲ್ಲಿನಲ್ಲಿರುವ ಲಿಖಿತ ವಚನಗಳ ಕಟ್ಟಿಗೆ ’ದೊಡ್ಡವರ ವಚನ ತಾಲೂಕು’ ಎಂದು ಕರೆಯುತ್ತಾರೆ. ಇಲ್ಲಿ ಮಂಟೇಸ್ವಾಮಿ ಕಾಲಜ್ಞಾನ ವಚನಗಳು ಲಭ್ಯವಾಗಿವೆ. ಇವು ತತ್ವಪದಗಳ ಸ್ವರೂಪದಲ್ಲಿದ್ದರೂ ವಚನಗಳೆಂದೇ ಕರೆಯುತ್ತಾರೆ. (ಮಂಟೇಸ್ವಾಮಿ ಪರಂಪರೆ, ಪುಟ : ೧೩) ಇದೇನೆ ಇದ್ದರೂ  ಇನಕಲ್ ಮಹದೇವಯ್ಯನವರು ಹಾಡಿರುವ ಪಠ್ಯದಲ್ಲಿ ಮಂಟೇಸ್ವಾಮಿ ಈ ಲೋಕಕ್ಕೆ ಬರುವಾಗಲೆ ಕಾಲಜ್ಞಾನದ ಬುಕ್ಕನ್ನು ಆಭರಣದಂತೆ ಧರಿಸಿಯೇ ಬರುತ್ತಾನೆ. ಅಂದರೆ ಮಂಟೇಸ್ವಾಮಿಗೆ ಕಾಲಜ್ಞಾನವೂ ಕೂಡ ಒಂದು ಆಸ್ತಿ ಇದ್ದಂತೆ. ಹಾಗಾಗಿಯೇ ಅದನ್ನು ಯಾರಿಗೂ ಕೊಡಲು ಇಷ್ಟಪಡುವುದಿಲ್ಲ. ಇದಕ್ಕೆ ಎರಡು ಪ್ರಸಂಗಗಳನ್ನು ಉದಾಹರಿಸಬಹುದು : ಮಂಟೇಸ್ವಾಮಿ ತನ್ನ ಕಾಲಜ್ಞಾನವನ್ನು ತನ್ನ ದೈವ ಮಕ್ಕಳಾದ ತ್ರಿಮೂರ್ತಿಗಳಿಗೆ ಹೇಳಿಕೊಡುವ ಸಂದರ್ಭದಲ್ಲಿ  ಆ ಕಾಲಜ್ಞಾನದ ಹೊತ್ತಗೆಯನ್ನು ಮಕ್ಕಳಿಗೆ ಕೊಡೆದೆ ಬ್ರಹ್ಮನಿಗೆ ಅದನ್ನು ಇನ್ನೊಂದು ಪ್ರತಿಮಾಡಿಕೊಳ್ಳಲು ಹೇಳುತ್ತಾನೆ. ಬ್ರಹ್ಮ ಅದನ್ನು ತನ್ನ ಪುಸ್ತಕದಲ್ಲಿ ಬರೆದುಕೊಳ್ಳುತ್ತಾನೆ.(ಮಂಟೇಸ್ವಾಮಿಕಾವ್ಯ. ಪು:೭೩) ಹೀಗೆಯೇ ಇನ್ನೊಂದು ಸಂದರ್ಭದಲ್ಲಿ ಮಂಟೇಸ್ವಾಮಿ ತನ್ನ ಪಟ್ಟದ ಶಿಷ್ಯೆ ದೊಡ್ಡಮ್ಮತಾಯಿ ಮೊದಲಾದ ಶಿಷ್ಯರಿಗೂ ಈ ಕಾಲಜ್ಞಾನದ ಬಗ್ಗೆ ಹೇಳಿಕೊಡುವಾಗ ಕಾಲಜ್ಞಾನದ ಬುಕ್ಕನ್ನು ಕೊಡಲು ಒಪ್ಪುವುದಿಲ್ಲ. ನಾನು ಹೇಳುತ್ತೇನೆ. ನೀವು ಬರೆದುಕೊಳ್ಳಿ ಎಂದು ಹೇಳುತ್ತಾನೆ. (ಮಂಟೇಸ್ವಾಮಿಕಾವ್ಯ, ಪುಟ:೫೫೮) ಹಾಗಾದರೆ ಈ ಕಾಲಜ್ಞಾನಕ್ಕೆ ಇರುವ ಮಹತ್ವ ಎಂಥದ್ದು ? ಎಂಬುದಕ್ಕೆ ಮಂಟೇಸ್ವಾಮಿಯೇ ಒಂದು ಸಂದರ್ಭದಲ್ಲಿ ನೀಡುವ ಉತ್ತರ ಹೀಗಿದೆ : ತನ್ನ ಮಕ್ಕಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ನಾನು ವಿದ್ಯೆ ಕಲಿಸಬೇಕೆಂದು ಅವರಿಗೆ ಕಾಲಜ್ಞಾನವನ್ನು ಓದುವಂತೆ ಹೇಳುತ್ತಾರೆ. ಇದನ್ನು ವಿಷ್ಣು ಅದರ ಅವಶ್ಯಕತೆ ನನಗಿಲ್ಲ ಎಂದು ನಿರಾಕರಿಸುತ್ತಾನೆ. ಅದನ್ನು ಮಂಟೇಸ್ವಮಿಯೂ ಒಪ್ಪುತ್ತಾನೆ. ಆದರೂ ಕೊನೆಗೆ ವಿಷ್ಣು ಶಿವ ಇಬ್ಬರೂ ಕಾಲಜ್ಞಾನವನ್ನು ಓದುತ್ತಾರೆ. ನಂತರ ಮಂಟೇಸ್ವಾಮಿ ತನ್ನ ಕಾಲಜ್ಞಾನದ ಬಗ್ಗೆ ಹೀಗೆ ಹೇಳುತ್ತಾರೆ.
ಕಂದಾ ಕಾಲ ಕಳೆಯೋಗಂಟಾ |
 ನನ್ನ ಕಾಲ ಜ್ಞಾನದ ಬುಕ್ಕು | 
 ಬಾಳುತದೆ ನನ ಕಂದಾ| 
 ಈ ಕಾಲ ಜ್ಞಾನವ ನೀನು ತೆಪ್ಪಿ ಬಾಳಲುಬ್ಯಾಡ | (ಮಂಟೇಸ್ವಾಮಿಕಾವ್ಯ. ಪು:೪೧) 
  ಅಂದರೆ ಈ ಕಾಲಜ್ಞಾನ ಬಹಳ ಕಾಲ ಉಳಿಯುವಂತಹದ್ದು ಹಾಗು ಇದನ್ನು ತಪ್ಪಿ ನಡೆಯಬಾರದು ಎಂಬುದು ಇಲ್ಲಿನ ಸಂದೇಶ. ಮಂಟೇಸ್ವಾಮಿಯ ಈ ಆಶಯವನ್ನು ಇಂದಿಗೂ ಈ ಪಂಥದ ಒಕ್ಕಲು ಸಂಪ್ರದಾಯವಾಗಿ ಉಳಿಸಿಕೊಂಡು ಬಂದಿದ್ದಾರೆ. ಬೊಪ್ಪಗೌಡನ ಪುರದ ಮಂಟೇಸ್ವಾಮಿ ಗದ್ದುಗೆಯಲ್ಲಿ ಈಗಲೂ ಪೂಜೆಗೊಳ್ಳುವ ಕಾಲಜ್ಞಾನ ವಚನಗಳಿವೆ........ ಕಪ್ಪಡಿ ಜಾತ್ರೆಯ ಸಂದರ್ಭದಲ್ಲಿ ಈ ವಚನಗಳ ಕಟ್ಟನ್ನು ಪೂಜೆಮಾಡಿ ಬೊಪ್ಪಗೌಡನ ಪುರದಿಂದ ಕಪ್ಪಡಿಗೆ  ಕೊಂಡೊಯ್ದು, ಅಲ್ಲಿ ರಾಚಪ್ಪಾಜಿಯ ಗದ್ದುಗೆಯ ಮೇಲಿಟ್ಟು ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ಪ್ರತಿದಿನ ಪೂಜಿಸುತ್ತಾರೆ.(ಮಂಟೇಸ್ವಾಮಿ ಪರಂಪರೆ, ಪುಟ : ೧೧) 
ಒಟ್ಟಾರೆ ಹೇಳುವುದಾದರೆ ಮಂಟೇಸ್ವಾಮಿಯ ಕಾಲಜ್ಞಾನ ಮನುಷ್ಯನ ಬದುಕಿಗೆ ಮುಂದೆ ಒದಗಿ ಬರಲಿರುವ ಕೆಟ್ಟಕಾಲವನ್ನು ಹೇಳುತ್ತದೆ. ಈ ರೀತಿ ಹೇಳುವ ಮೂಲಕ ತನ್ನ ಪರಂಪರೆ ಆ ಕಾಲವನ್ನು ಸರಿಯಾದ ರೀತಿಯಲ್ಲಿ ಎದುರಿಸಿ ಸನ್ಮಾರ್ಗದಲ್ಲಿ ಬದುಕಲಿ ಎಂಬ ಆಶಯವಿದೆ. ನೀಲಗಾರರು ಹಾಡುವ ಕಲಿಭಾಗ ಆಧುನಿಕತೆ ಅಬ್ಬರಕ್ಕೆ ಸಿಕ್ಕಿ ಅಳಿದು ಹೋಗುತ್ತಿರುವ ಸಮುದಾಯ- ಸಂಸ್ಕೃತಿಗಳ ದುರಂತದ ಕಥನಗೀತೆಗಳಂತಿದೆ. ಅಧಿಕಾರ-ಜ್ಞಾನ -ಉತ್ಪಾದನೆಯಲ್ಲಿ ಉಂಟಾದ ಚಾರಿತ್ರಿಕ ದ್ರೋಹದ ಪರಿಣಾಮ ಕಲಿ. ಮಂಟೇಸ್ವಾಮಿಗಳು ಮೊದಲು ಇದನ್ನು ಗುರುತಿಸಿ ಪಾತಾಳ ಬಾವಿಯನ್ನು ತೋಡಿಸಿಕೊಂಡು ಕಣ್ಮರೆಯಾಗಿ ಹೋಗುತ್ತಾರೆ. ನಂತರ ಮಂಟೇಸ್ವಾಮಿಗಳ ಪ್ರತಿನಿಧಿಗಳಾದ ನೀಲಗಾರರು ತಮ್ಮ ಕಾಲದ ವಿವರಗಳನ್ನು ಇದಕ್ಕೆ ಸೇರಿಸಿಕೊಳ್ಳುತ್ತಾರೆ. ಆಧುನಿಕ ಹೆಸರಲ್ಲಿ ಹರಿದು ಬರುತ್ತಿರುವ ಹೊಸ ಆವಿಷ್ಕಾರಗಳು ಸಮುದಾಯದಲ್ಲಿ ತಾರತಮ್ಯವನ್ನು ಸೃಷ್ಟಿಸಿ ದಿಕ್ಕೆಡಿಸಿವೆ ಎಂದು ಹಾಡುತ್ತಾರೆ. ಆಧುನಿಕತೆಯಿಂದ ಉಂಟಾದ ಬರ್ಬರತೆಗಳನ್ನೆಲ್ಲಾ ಕಲಿಭಾಗದಲ್ಲಿ ಚಿತ್ರಿಸುತ್ತಾರೆ. ಕೈ ತಪ್ಪಿ ಹೋಗಿರುವ ಅಧಿಕಾರ, ಸಂಪತ್ತಿನ ಅಸಮಾನ ಹಂಚಿಕೆ , ಅವುಗಳಿಂದ ಉಂಟಾದ ಬೇಗಾಟಗಳನ್ನೆಲ್ಲ ಇದು ಪ್ರತಿನಿಧಿಸುತ್ತದೆ. ಮಂಟೇಸ್ವಾಮಿ ಸಿದ್ಧಪ್ಪಾಜಿಯವರ ಮುಂದುವರೆಕೆಯಾಗಿ ನೀಲಗಾರರು ಆಧುನಿಕ ಜಗತ್ತನ್ನು ಕಲಿಯ ಬಾಗದಲ್ಲಿ ಚಿತ್ರಿಸಿ ಅದರ ವಿರುದ್ಧ ತಮ್ಮ ಅಸಮಾಧಾನವನ್ನು ತೋರಿಸುತ್ತಾರೆ.(ಮಂಟೇಸ್ವಾಮಿ ಪರಂಪರೆ, ಪುಟ: ೯೫) ಕಲಿಗೆ ಒಳಿತು ಕೆಡಕಿನ ಲೆಕ್ಕವಿಲ್ಲ. ಎಲ್ಲವನ್ನು ತನ್ನೊಳಗೆ ಕೆಡಕಗಾಗಿಸಿಕೊಲ್ಳುವ ಶಕ್ತಿ ಇರುವಂಥದ್ದು. ಕಲಿಯೆಂದರೆ ಆಧುನಿಕ ಆವಿಷ್ಕಾರಗಳೇ ಆಗಿವೆ. ಆಧುನಿಕತೆಯನ್ನು ಬೆನ್ನು ಹತ್ತಿದ ಮನುಷ್ಯ ಅಂತಿಮವಾಗಿ ವಿನಾಶದತ್ತ ಸಾಗುತ್ತಿದ್ದಾನೆ. ಎಂಬುದನ್ನು ತಿಳಿಸುವುದೆ ಕಲಿ ಸಾರುವುದು. ಈ ಪಟ್ಟಿಯಲ್ಲಿ ತಂತ್ರಜ್ಞಾನ, ಅಣುಸಮರ, ಜಾಗತೀಕರಣ ಪ್ರಕ್ರಿಯೆಗಳನ್ನೆಲ್ಲ ಸೇರಿಸುತ್ತಾ ಹೋಗುತ್ತಾರೆ. ಇವು ಮನುಷ್ಯ ಕುಲದಲ್ಲಿ ಅಸಮಾನತೆಯನ್ನು ತುಂಬುವುದಷ್ಟೇ ಅಲ್ಲ. ಅಂತಿಮವಾಗಿ ವಿನಾಶವನ್ನು ತಂದುಕೊಳ್ಳುತ್ತವೆ. ಎಂದು ಮಂಟೇಸ್ವಾಮಿಗಳ ಪ್ರತಿನಿಧಿಗಳಾಗಿ ನೀಲಗಾರರು ಕಲಿ ಭಾಗಗದಲ್ಲಿ ಹಾಡುತ್ತಾರೆ. ಇದನ್ನು ಕಣ್ಣಿನಿಂದ ನೋಡಲಾಗದ ಮಂಟೇಸ್ವಾಮಿ ತಾವೆ ಮರೆತು ಲೋಕಕ್ಕೆ ಮರೆಯಾಗಿ ಹೋಗುವಲ್ಲಿ ಧರೆಗೆ ದೊಡ್ಡವರ ಕಥೆ ಮುಗಿಯುತ್ತದೆ.(ಮಂಟೇಸ್ವಾಮಿ ಪರಂಪರೆ, ಪುಟ : ೬೩)
ಕಲಿಮನುಷ್ಯನ ಪ್ರವೇಶದ ಹೊತ್ತಿಗೆ ನಾನು ಪಾತಾಳ ಲೋಕಕ್ಕೆ ಹೋಗಬೇಕೆಂದು ಕೊಂಡಿದ್ದ ಮಂಟೇಸ್ವಾಮಿಗೆ ದಿಢೀರನೆ ಕಲಿ ಕಾಣಿಸಿಕೊಳ್ಳುತ್ತಾನೆ. ಆಗ ಮಂಟೇಸ್ವಾಮಿ ಮಾಡುವ ಒಂದು ಮಹತ್ವದ ಸಾಂಕೇತಿಕವಾದ ಕಾರ್ಯವನ್ನು ಗಮನಿಸಬೇಕು. ಆ ಕಲಿ ಪುರುಷ ತನ್ನ ಹೆಂಡತಿಯನ್ನು ತಲೆಯ ಮೇಲೆ ಹೊತ್ತುಕೊಂಡು ತಂದೆ ತಾಯಿಯರನ್ನು ತಮ್ಮ ಸೇವಕರಂತೆ ಬಳಸಿಕೊಂಡು ಬರುತ್ತಿರುವಾಗ ಅವನ್ನನು ತಡೆದು  ಕಲಿಮನುಷ್ಯನನ್ನು ಪಾತಾಳಕ್ಕೆ ತುಳಿದು ನೀನು ಮುಂದೆ ಕಲಿಪುರುಷ ಶನಿದೇವರಾಗಿ ಬರಬೇಕೆಂಬುದು ಆದೇಶಿಸುತ್ತಾನೆ. ಮತ್ತು ಅವನ ತಂದೆ ತಾಯಂದಿರ ತಲೆಯ ಮೇಲೆ ಪಾದವಿಟ್ಟು ನಂತರ ಅವರನ್ನು ಸೂರ್ಯ ಚಂದ್ರರನ್ನಾಗಿ ಮಾಡುತ್ತಾನೆ. (ಮಂಟೇಸ್ವಾಮಿ ಕಾವ್ಯ, ಪುಟ: ೫೫೯-೫೬೧)
ಕಾಲಜ್ಞಾನವೆಂದರೆ ಮುಂದೆ ನಡೆಯುವುದನ್ನು ಹೇಳುವ ಒಂದು ಶಾಖೆ. ಇದನ್ನು ಆಧುನಿಕ ಸಂದರ್ಭದಲ್ಲಿ ಕಣಿಹೇಳುವುದು, ಭವಿಷ್ಯನುಡಿಯುವುದು, ಶಾಸ್ತ್ರಹೇಳುವುದು, ಜೋತಿಷ್ಯಹೇಳುವುದು ಎಂಬ ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತಿದೆ. ಈ ಶಾಖೆಗಳೆಲ್ಲವೂ ಹೊಟ್ಟೆ ಹೊರೆಯುವುದಕ್ಕೆ ಜನರಿಗೆ ಮಂಕು ಬೂದಿ ಎರಚುವ ಜ್ಞಾನಗಳು ಎಂಬ ಕಾರಣಕ್ಕೆ ಅವೆಲ್ಲವುಗಳು ಮೌಢ್ಯಗಳಾಗಿದ್ದು ಅವುಗಳನ್ನು ನಿರ್ನಾಮ ಮಾಡಬೇಕೆಂಬ ವಾದಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಈ ವಾದವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನಮ್ಮ ಕಣ್ಣೆದುರಿಗೆ ನಡೆಯುವ ಅನೇಕ ಘಟನೆಗಳು ಸಾಕ್ಷಯಾಗಿವೆ. ಆದರೆ ಇಂಥ ಸಮಾಜದ ಪರಂಪರೆಯಲ್ಲಿ ಭವಿಷ್ಯವನ್ನು ಹೇಳುವ ಅನೇಕ ದೇಸಿ ಪರಂಪರೆಗಳಿವೆ. ಅವುಗಳಲ್ಲಿ ಬಾಲಬಸವಯ್ಯನವರ ಸಂಪ್ರದಾಯ, ಕೊರವಂಜಿ ಸಂಪ್ರದಾಯ, ಕೊಡೆಕಲ್ಲಬಸವಣ್ಣ, ಮಂಟೇಸ್ವಾಮಿ ಪರಂಪರೆಗಳು ಬಹಳ ಮುಖ್ಯವಾಗಿವೆ. ಒಂದು ಸ್ಥಾಪಿತ ಜನವರ್ಗ ಅನುಸರಿಸುವ ಜೋತಿಷ್ಯ ಸಂಪ್ರದಾಯಗಳು ಹೊಟ್ಟೆ ಹೊರೆಯುವ ಜಡ ಸಂಪ್ರದಾಯಗಳೆಂಬ ಪಟ್ಟದೊಂದಿಗೆ ತಿರಸ್ಕಾರ ಯೋಗ್ಯ ಎನಿಸಿರುವಾಗ ದೇಸಿಯವಾಗಿ ಹರಿದು ಬಂದಿರುವ ಜನಾಭಿವೃದ್ಧಿಯ ನಿಜವಾದ ಕಾಳಜಿಯನ್ನು ಹೊಂದಿರುವ ಸಂಪ್ರದಾಯಗಳನ್ನು ಎಲ್ಲಿ ಇರಿಸಿ ನೋಡುವುದು. ಹಾಗೆ ನೋಡಿದರೆ ದೇಸಿ ಶಾಖೆಗಳು ತನ್ನ ಪರಂಪರೆಯನ್ನು ಗೌರವಿಸುವ ಭಾಗವಾಗಿ, ಅಷ್ಟೇ ಅಲ್ಲದೆ ತನ್ನ ಜನಸಮುದಾಯಗಳು ಸರಿಯಾದ ದಾರಿಯಲ್ಲಿ ನಡೆಯ ಬೇಕೆಂಬ ನೈಜ ಕಾಳಜಿಯೊಂದಿಗೆ ನಡೆಯುತ್ತಿವೆ. ಇಲ್ಲಿ ಹೊಟ್ಟೆಪಾಡಿನ ವಿಷಯವಾಗಲಿ, ಜನರನ್ನು ನಂಬಿಸಿ ಮೋಸಗೊಳಿಸುವುದಾಗಲಿ ಕಂಡುಬರುವುದಿಲ್ಲ.

ಪರಾಮರ್ಶನ 
೧. ಮಂಟೇಸ್ವಾಮಿ (ಜನಪದ ಮಹಾಕಾವ್ಯ), ಸಂ. ಹಿ.ಚಿ.ಬೋರಲಿಂಗಯ್ಯ, ೧೯೯೭, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೨. ಮಂಟೇಸ್ವಾಮಿ ಪರಂಪರೆ, ವೆಂಕಟೇಶ ಇಂದ್ವಾಡಿ, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೩. ಮಂಟೇಸ್ವಾಮಿ ಕಾವ್ಯ ಸಾಂಸ್ಕೃತಿಕ ಮುಖಾ ಮುಖಿ, ಸಂ. ವೆಂಕಟೇಶ ಇಂದ್ವಾಡಿ, ೨೦೦೪ , ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೪. ಕನ್ನಡ ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ, ಎಸ್.ಎಂ. ಮುತ್ತಯ್ಯ, ೨೦೦೮, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
೫. ಮಂಟೇಸ್ವಾಮಿ (ನಾಟಕ), ಎಚ್.ಎಸ್. ಶಿವಪ್ರಕಾಶ್, 
೬. ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಜೀ.ಶಂ.ಪರಮಶಿವಯ್ಯ, 


*  ಡಾ. ಎಸ್.ಎಂ. ಮುತ್ತಯ್ಯ,


No comments:

Post a Comment