Monday 23 January 2012

ಮಡೆಸ್ನಾನ ಯಾರ ಹಿತಕ್ಕೆ ?

                                                                                                                                                                                    
ಮಡೆಸ್ನಾನ ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವೂ ಸೇರಿದಂತೆ ಕರ್ನಾಟಕದ ಕೆಲವಾರು ಪ್ರದೇಶಗಳಲ್ಲಿ ಪ್ರಚಲಿತವಿರುವ ಒಂದು ಅನಿಷ್ಟ ಆಚರಣೆ ಎಂಬುದನ್ನು ಯಾವುದೇ ಚರ್ಚೆಯಿಲ್ಲದ ಒಪ್ಪಿಕೊಳ್ಳಬಹುದಾದ ಸಂಗತಿ. ಮಡೆಸ್ನಾನ ಎಂಬ ಪದದಲ್ಲಿರುವ ಮಡೆ ಎಂಬ ಶಬ್ಧಕ್ಕೆ ತುಳುವಿನಲ್ಲಿ ಎಂಜಲು ಎಂದರ್ಥ.ಅಂದರೆ ಬ್ರಾಹ್ಮಣರು ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮೂಲಕ ಎಂಜಲು ಸ್ನಾನ ಮಾಡುವುದು ಮಡೆಸ್ನಾನವೆನಿಸಿಕೊಳ್ಳುತ್ತದೆ.ಹೀಗೆ ಮಾಡುವುದರಿಂದ ಉರುಳಾಡಿದವರ ದೇಹದಲ್ಲಿ ಇರುವ ಕಾಯಿಲೆಗಳು ವಾಸಿಯಾಗುತ್ತವೆ(?) ಎಂಬುದು ನಂಬಿಕೆ. ಇಂತಹ ಅನೇಕ ನಂಬಿಕೆಗಳು ಕನರ್ಾಟಕದ ತುಂಬೆಲ್ಲ ಪ್ರಚಲಿತವಿದ್ದು ಅವುಗಳಲ್ಲಿ ಭಾಗವಹಿಸುವವರು ಸಮಾಜದ ದಲಿತ ಹಾಗೂ  ಹಿಂದುಳಿದ ವರ್ಗಗಳ ಜನರಾಗಿರುತ್ತಾರೆ.ಹಾಗೆಯೇ ಈ ಆಚರಣೆಗಳನ್ನು ಜವ್ದಾರಿಯಿಂದ ನಡೆಸಿಕೊಡುವವರು,ಅದನ್ನು ನೋಡುತ್ತಾ ಒಳಗೊಳಗೆ ಖುಷಿಪಡುವ ಜನ ಸಾಮಾನ್ಯವಾಗಿ ಮೇಲ್ವರ್ಗದವರಾಗಿರುತ್ತಾರೆ.ಕರ್ನಾಟಕದ ಈ ರೀತಿಯ ಆಚರಣೆೆಗಳಲ್ಲಿ ಅಜಲು ಪದ್ಧತಿ, ಬೆತ್ತ್ತಲಸೇವೆ ಮೊದಲಾದವುಗಳು ತೀವ್ರ ಚಚರ್ೆಗೆ ಒಳಗಾಗಿದ್ದು  ಇವುಗಳ ಸಾಲಿಗೆ ಮಡೆಸ್ನಾನ ಹೊಸ ಸೇರ್ಪಡೆಯಾಗಿದೆ.ಇಂಥ ಆಚರಣೆಗಳಲ್ಲಿ ಸಮಸ್ಯೆ ಬರುವುದು ಆಚರಣೆಗಳಲ್ಲಿ ಬರೀ ಕೆಳವರ್ಗಗಳ ಜನರೇ ಏಕೆ ಭಾಗವಹಿಸಬೇಕು ? ಸಮಸ್ಯೆಗಳು, ಸಂಕಷ್ಟಗಳು ಕೆಳವರ್ಗದ ಜನರಿಗೆ ಮಾತ್ರ ಸೀಮಿತವೇ ? ಕಷ್ಟವಿರುವ ಜನ ಸಂಕಷ್ಟ ಪರಿಹಾರಕ್ಕಾಗಿ ನಡೆಸುವ ಆಚರಣೆಗಳಲ್ಲಿ ನಿಂತು ನೋಡುವವರಿಗೆ ಏನು ಕೆಲಸ ?ಕೆಳವರ್ಗದ ಜನ ಕಂಟಕ ಪರಿಹಾರಕ್ಕೆ ಮಾಡುವ ಸಮಪ್ರದಾಯಗಳು ಮೇಲವರ್ಗದವರಿಗೆ ಅನ್ವಯಿಸುವುದಿಲ್ಲ ಏಕೆ ?ಮೇಲವರ್ಗದವರಿಗೆ ಸಂಕಷ್ಟಗಳೇ  ಬರುವುದಿಲ್ಲವೇ ? ಎನ್ನುವುದು.ಈ ಹಿನ್ನೆಲೆಯೊಳಗೆ ಆಲೋಚಿಸಿದರೆ ಇಂಥ ಸಂಪ್ರದಾಯಗಳನ್ನು ಹುಟ್ಟುಹಾಕಿರುವ ಹಿಂದಿನ ಧಾಮರ್ಿಕ ಹುನ್ನಾರಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಲಾರದು.ಧರ್ಮ ರಕ್ಷಣೆಯ ಹೆಸರಿನಲ್ಲಿ ಇಂತಹ ಆಚರಣೆಗಳನ್ನು ಹುಟ್ಟುಹಾಕಿರುವಲ್ಲಿ ಹಿಂದೂ ಧರ್ಮದ ಮೂಲಭೂತವಾದಿಗಳ ಪಾತ್ರ ದೊಡ್ಡದಿದೆ ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.ಇಂತಹ ಅನಿಷ್ಟ ಸಂಪ್ರದಾಯಗಳು ಇವರ ಕೂಸುಗಳೇ ಆಗಿರುವುದರಿಂದ ಆಚರಣೆಯಲ್ಲಿ ಪಾಲ್ಗೊಂಡು ಕಷ್ಟಗಳನ್ನು ಬಗೆಹರಿಸಿಕೊಳ್ಳುವವರಿಗಿಂತ ಇವರಿಗೆ ಇಂತಹ ಸಂಪ್ರದಾಯಗಳ ಮೇಲೆ  ಸಹಜವಾಗಿಯೇ ಜವಾಬ್ಧಾರಿ ಜಾಸ್ತಿ. ಇದನ್ನೆಲ್ಲ ಗಮನಿಸಿದರೆ ಈ ಸಂಪ್ರದಾಯಗಳು ಯಾರ ಹಿತಕ್ಕಾಗಿವೆ ಎಂಬುದು ಸ್ಪಷ್ಟವಾಗುತ್ತವೆ.
ಈ ಹಿನ್ನೆಲೆಯೊಳಗೆ ಮಡೆಸ್ನಾನದ ಬಗ್ಗೆ ಕೆಲವು ಸಂಗತಿಗಳನ್ನು ಪ್ರಸ್ಥಾಪಿಸಬಹುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು  ಶಿಕ್ಷಣವೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇಡೀ ರಾಜ್ಯಕ್ಕೇ ಮುಂದು. ಹಾಗೆಯೇ ಧಾಮರ್ಿಕ ಕ್ಷೇತ್ರಗಳಿಗೂ ಪ್ರಸಿದ್ಧಿ. ಕನರ್ಾಟಕದ ಬೇರೆ ಯಾವುದೇ ಜಿಲ್ಲೆಯಲ್ಲೂ ಕಾಣದಷ್ಟು ದೇವಾಲಯಗಳು  ಇಲ್ಲಿ ಕಂಡುಬರುತ್ತವೆ. ಹಾಗೆ ನೋಡಿದರೆ ಈಗಿನ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ದೇವಾಸ್ಥಾನಗಳೆಲ್ಲ ಬ್ರಾಹ್ಮಣ ಸ್ವಾಧೀನ. ಇಲ್ಲಿನ ಬಹುಪಾಲು ದೇವಾಸ್ಥಾನಗಳು ಬ್ರಾಹ್ಮಣ ಆಡಳಿತ ಮಂಡಳಿಯನ್ನು ಹೊಂದಿದ್ದು , ಇನ್ನೂ ಪೂಜಾರಿಕೆಯಂತೂ ಅವರದ್ದೆ. ಆದರೆ ಭಕ್ತರು ಮಾತ್ರ ಇಡೀ ದೇಶದ ಎಲ್ಲಾ ವರ್ಗಗಳ ಜನ. ಇಲ್ಲಿನ ದೇವಾಸ್ಥಾನಗಳಿಗೆ ಬರುವ ಬಹುಪಾಲು ಜನರು ಪ್ರವಾಸದ ಭಾಗವಾಗಿ ದೇಸ್ಥಾನಕ್ಕೆ ಬರುವವರಾಗಿದ್ದು  ಸಂಕಷ್ಟ ಪರಿಹಾರಕ್ಕೆ ಬರುವವರು ತೀರಾ ಅಪರೂಪ . ಇಷ್ಟರ ನಡುವೆ ಸಹಜವಾಗಿ ದೇವಾಸ್ಥಾನಗಳ ನಿರ್ವಹಣೆಯಲ್ಲಿ ಬ್ರಾಹ್ಮಣರು ಪ್ರಧಾನ ಪಾತ್ರವಹಿಸುವುದರಿಂದ ಬ್ರಾಹ್ಮಣೇತರರಿಗೆ ಸಿಗುವ ಸ್ಥಾನಮಾನ ಗೌರವಗಳಲ್ಲಿ ಸಹಜವಾಗಿಯೇ ಅಸಹನೀಯವಾದ ಹಲವಾರು ಸಂಗತಿಗಳಿವೆ.ಬಹುತೇಕ ದೇವಾಸ್ಥಾನಗಳಲ್ಲಿ ಊಟದ ವ್ಯವಸ್ಥೆಯಿದ್ದು ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸಲಾಗುತ್ತದೆ.ಹಾಗೆಯೇ ಕೆಲವಾರು ದೇವಾಸ್ಥಾನಗಳಲಿ ದೇವರ ದರ್ಶನಕ್ಕೆ ಕಡ್ಡಾಯವಾಗಿ ಅರೆ ಬೆತ್ತಲೆಯಲ್ಲಿ ತೆರಳಬೇಕಾಗಿರುತ್ತದೆ.(ಅದೃಷ್ಟವಶಾತ್ ಗಂಡಸರಿಗೆ ಮಾತ್ರ ಈ ನಿಯಮವಿದ್ದು ಮಹಿಳೆಯರಿಗೆ ಇದು ಅನ್ವಯಿಸುವುದಿಲ್ಲ)ಇಂತಹ ಅಸಹನೀಯ ನಡವಳಿಕೆಗಳಲ್ಲಿ ಬ್ರಾಹ್ಮಣರು ಪ್ರತ್ಯೇಕ ಪಂಕ್ತಿಯಲ್ಲಿ ಉಂಡು ಬಿಟ್ಟ ಎಂಜಲೆಲೆ ಮೇಲೆ ಬ್ರಾಹ್ಮಣೇತರರು ಉರುಳಾಡುವ ಪದ್ಧತಿ ಒಂದಾಗಿದೆ.ಇದು ನಮ್ಮಂತಹ ಪ್ರಜಾಪ್ರಭುತ್ವದ ದೇಶದೊಳಗೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ.ಈ ಬಗ್ಗೆ ಕಳೆದ 2011ನೇ ವರ್ಷದಲ್ಲಿ ತೀವ್ರವಾದ ಚರ್ಚೆ ವಾಗ್ವಾದ  ಪ್ರತಿಭಟನೆಗಳು ನಡೆದದ್ದು ಸ್ವಾಗತಾರ್ಹ. ಈ ಪದ್ಧತಿ ಮನುಕುಲದ ವ್ಯಂಗ ಎಂದರಿತ ನಾಡಿನ ಪ್ರಜ್ಞಾವಂತರೆಲ್ಲ ಇದರ ನಿಷೇಧಕ್ಕಾಗಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಉದ್ದೇಶವನ್ನು ಅರಿತ ಸಕರ್ಾರ ತಕ್ಷಣ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸಿತು. ಆದರೆ ಸಕರ್ಾರ ರದ್ಧತಿ ಆದೇಶವನ್ನು ಎರಡೇ ದಿನದಲ್ಲಿ ವಾಪಸ್ಸು ಪಡೆಯಿತು. ಇದಕ್ಕೆ ಕಾರಣವಾದುದು ಮಡೆಸ್ನಾನದಲ್ಲಿ ಭಾಗವಹಿಸುವ ಭಕ್ತರು ನಿಷೇಧದಿಂದ ನಮ್ಮ ನಂಬಿಕೆಗೆ ದಕ್ಕೆಯಾಗಿದೆ ಎಂದು ನಡೆಸಿದ ಪ್ರತಿಭಟನೆ. ಸಕರ್ಾರ ನಿಜವಾಗಿ ಭಕ್ತರ ಒತ್ತಾಯಕ್ಕೆ ಮಣಿಯಿತೋ? ಅಥವಾ ಇದರ ಹಿಂದೆ ಇನ್ಯಾರ್ಯಾದರೂ ಪ್ರಭಾವ ಬೀರಿದರೆ ಎಂಬುದು ಒಂದು ಅನುಮಾನ ಮೂಡಿತು. ಏಕೆಂದರೆ ಕನರ್ಾಟಕ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಮಿತಿ ಸದಸ್ಯ ಶಿವರಾಂ ಅವರ ಮೇಲೆ ಭಕ್ತರು ಹಲ್ಲೆ ನಡೆಸಿದರು ಎಂಬ ಸುದ್ದಿ ಆನಂತರ ಹಲ್ಲೆ ಮಾಡಿದವರು ಕೇವಲ ಭಕ್ತರಲ್ಲ ಅವರನ್ನು ಮುಂದಿಟ್ಟುಕೊಂಡು ದೇವಾಸ್ಥನದ ಆಡಳಿತ ಮಂಡಳಿಯವರೇ ಇಂತಹ ಕೃತ್ಯವೆಸಗಿದರು ಎಂಬ ವಿಷಯ ಬಹಿರಂಗವಾದಾಗ ಇಂತಹ ಅನುಮಾನಗಳಿಗೆ ಇನ್ನಷ್ಟು ರಕ್ಕೆ ಮೂಡಿದವು.ಇದೇನೇ ಆದರೂ ಸಕರ್ಾರ ಇಂತಹ ಅಮಾನವೀಯ ಪದ್ಧತಿಯನ್ನು ರದ್ದುಮಾಡಲು ಹಿಂಜರಿದ್ದದ್ದು ಮಾತ್ರ ಪ್ರಜ್ಞಾವಂತರನ್ನು ಚಿಂತೆಗೀಡುಮಾಡುವ ವಿಷಯ . ಬೆತ್ತಲೆಸೇವೆ, ಅಜಲು ಪದ್ಧತಿ ಗಳನ್ನು ರದ್ದುಮಾಡಿದ್ದು ದಢೀರನೆ ತಾನೆ. ಕೆಲವೊಂದು ಸಂಪ್ರದಾಯಗಳನ್ನು ನಿಧಾನವಾಗಿ ನಿಲ್ಲಿಸಬೇಕೆಂಬುದು ಸತ್ಯ . ಆದರೆ ಇನ್ನೂ ಕೆಲವು ವಿಷಯಗಳನ್ನು ತತ್ಕ್ಷಣದಿಂದಲೇ ರದ್ದು ಮಾಡಬೇಕಾಗುತ್ತದೆ. ಮಡೆಸ್ನಾನ ಆದಷ್ಟು ಬೇಗನೆ ರದ್ದುಮಾಡಬೇಕಾದ  ವಿಷಯ. ಮಡೆಸ್ನಾನದಲ್ಲಿ ದಲಿತರು ಮಾತ್ರವೇ ಪಾಲ್ಗೊಳ್ಳುವುದಿಲ್ಲ  ಜೊತೆಗೆ ಬೇರೆ ಬೇರೆ ಜನಾಂಗಗಳ ಜನರೂ ಪಾಲ್ಗೊಳ್ಳುವುದರಿಂದ ಇದನ್ನು ಜಾತಿ ಬಣ್ಣ ಹಚ್ಚಿ ಸಮಾಜದ ಸ್ವಾಸ್ತ್ಯ ಹಾಳುಮಾಡಬಾರದು ಎಂದು ಕೆಲವು ಮಠಾಧೀಶರು,ಕೆಲವು ಪ್ರಭಾವಿ ವ್ಯಕ್ತಿಗಳು ಪ್ರತಿಭಟನಾಕಾರರಿಗೆ ಕಿವಿಮಾತು ಹೇಳಿದರು.ಪೇಜಾವರ ಸ್ವಾಮಿಗಳಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಪದ್ಧತಿಯಲ್ಲಿ ಬ್ರಾಹ್ಮಣರನ್ನು ದೂಷಿಸುವುದು ಸರಿಯಲ್ಲ.ಈ ಪದ್ಧತಿ ಆಚರಣೆಯಲ್ಲಿರಲು ಬ್ರಾಹ್ಮಣರು ಯಾವ ರೀತಿಯಲ್ಲೂ ಕಾರಣರಲ್ಲ .ಅಷ್ಟಕ್ಕೂ ಇಂತಹ ಪದ್ದತಿಗಳಿಂದ ಹಿಂದೂ ಧರ್ಮ ಉಳಿಯ ಬೇಕಾಗಿಲ್ಲ.ಎಂಬುದಾಗಿ ವಾದಿಸಿದರು.ಆದರೆ ಇಂತಹ ಎಲ್ಲಾ ಮಾತುಗಳು ಸಮಾಜದ ಜವ್ದಾರಿಯಿಂದ ನುಸುಳಿಕೊಳ್ಳುವ ಪಲಾಯನವಾದಗಳೇ ಆಗಿದ್ದವು. 2012 ಜನವರಿ 7,8 ರಂದು ಬೆಂಗಳೂರಿನಲ್ಲಿ ನಡೆದ ಮಡೆಸ್ನಾನ ಕುರಿತ ಮುಕ್ತ ಸಂವಾದದಲ್ಲಿ ನಿಡಿಮಾಮುಡಿ ಸ್ವಾಮಿಗಳು ಸೇರಿದಂತೆ ಹಲವಾರು ಪ್ರಗತಿಪರರು ಇವೆಲ್ಲವುಗಳಿಗೆ ಸರಿಯಾದ ಉತ್ತರವನ್ನೇ ನೀಡಿದರು. ಮಡೆಸ್ನಾನದಲ್ಲಿ ದಲಿತೇತರರು ಭಾಗವಹಿಸುತ್ತಾರೆ ಎಂಬುವುದನ್ನು ಒಪ್ಪುವುದಾದರೂ ಇದರಲ್ಲಿ ದಲಿತರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿದೆ.ಅದೂ ಅಲ್ಲದೆ ಮೊದಲಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯ ಬುಡಕಟ್ಟಿನ ಜನ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರಮುಖ ಸಮುದಾಯ.ಹಾಗಾಗಿ ಈ ಆಚರಣೆಯಲ್ಲಿ ದಲಿತರ ಅಸಹಾಕತೆಯನ್ನು ಬಳಸಿಕೊಂಡು ಒಳಗೊಳಗೆ ಸುಖಿಸುವ ಮನಸ್ಸಿದೆ ಎಂಬುದು ನಿರ್ವವಿವಾದ.ಇನ್ನೂ ಇದಕ್ಕೆ ಬ್ರಾಹ್ಮಣರು ಕಾರಣರಲ್ಲ ಎಂಬ ಮಾತನ್ನು ಯಾವ ರೀತಿಯಲ್ಲೂ ಸಾಬೀತುಗೊಳಿಸುವುದು ಸಾಧ್ಯವಿಲ್ಲ.ಏಕೆಂದರೆ ದೇವಾಸ್ಥಾನದಲ್ಲಿ ಬ್ರಾಹ್ಮಣರು ಪ್ರತ್ಯೇಕ ಪಂಕ್ತಿಯಲ್ಲಿ ಉಣ್ಣುವುದು ಸಮರ್ಥನೆಗೆ ಅಡ್ಡಿ ಬರುತ್ತದೆ.(ಇಂತಲ್ಲಿ ಬ್ರಾಹ್ಮಣರನ್ನು ಮಾತ್ರ ಮುಂದೆಮಾಡಿ ಉಳಿದ ಮೇಲ್ವರ್ಗಗಳು ಬೆನ್ನು ತಟ್ಟಿಕೊಳ್ಳಬೇಕಿಲ್ಲ  ಏಕೆಂದರೆ ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಇಂತಹ ದುಸ್ಥಿತಿಯಲ್ಲಿಡುವುದರಲ್ಲಿ ಬ್ರಾಹ್ಮಣೇತರ ಮೆಲ್ವರ್ಗಗಳು ಪ್ರಧಾನ ಪಾತ್ರವಹಿಸಿವೆ ಎಂಬುದನ್ನು ಮರೆಯಬಾರದು) ಮಡೆಸ್ನಾನ ಬೇಡವೆಂದು ಪೇಜಾವರ ಸ್ವಾಮಿಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ.ಇದು ನಿಜವಾದರೆ ಈ ತತ್ ಕ್ಷಣದಿಂದಲೇ ಬ್ರಾಹ್ಮಣರ ಪ್ರತ್ಯೇಕ ಪಂಕ್ತಿ ಭೋಜನದ ವ್ಯವಸ್ಥೆಯನ್ನು ನಿಲ್ಲಿಸಬೇಕಾಗುತ್ತದೆ.ಇದರ ಜೊತೆಗೆ ಪ್ರಜ್ಞಾವಂತರಾದ ನಾವೆಲ್ಲ ಮಡೆಸ್ನಾನದಲ್ಲಿ ಇರುವ ವೈಜ್ಞಾನಿಕ ಸತ್ಯವನ್ನು ತಿಳಿಯುವ ಪ್ರಯತ್ನಮಾಡಬೇಕು.ಈ ಆಚರಣೆಯಲ್ಲಿ ಭಾಗವಹಿಸುವ ಜನರಿಗೆ ತಿಳುವಳಿಕೆ ನೀಡಬೇಕಿದೆ. ಜೊತೆಗೆ ಈ ಮೊದಲೇ ಕೇಳಿಕೊಂಡ ಪ್ರಶ್ನೆಗಳೇನಿವೆ ಅವುಗಳಿಗೆ ಉತ್ತರ ಕಂಡುಕೊಳ್ಳುವ ಜರೂರು ಕೂಡ ಇಂದಿನದಾಗಿದೆ.ಮಡೆಸ್ನಾನ ಭಕ್ತರಿಗೆ ಬಿಟ್ಟು ಬೇರೆ ಯಾರಿಗೆ ಬೇಡವೆಂದರೆ ಸಂತೋಷ: ಆದರೆ ವಾಸ್ತವವಾಗಿ ಈ ಆಚರಣೆ ಭಕ್ತರಿಗಿಂತ ಹೊರಗಿನವರಿಗೆ ಬಹಳ ಬೇಕಾಗಿದೆ.ಅಂದರೆ ರೋಗ ಇರುವವರಿಗಿಂತ ಇಲ್ಲದವರ ಕಾಳಜಿ ಜಾಸ್ತಿಯಾಗಿದೆ.ಅದಕ್ಕಾಗಿಯೇ ಭಕ್ತರ ಹೆಸರಲ್ಲಿ ಈ ಆಚರಣೆಯನ್ನು ಉಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ತಾವೆ ನಡೆಸುತ್ತಿದ್ದಾರೆ.ಇದು ನಮ್ಮ ನಿಜವಾದ ಸಮಸ್ಯೆ ರಾಜ್ಯದ ಪ್ರಜೆಗಳು ಹಾಗೂ ಆಳುವವರು ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಭಾರತಿಯ ಸಮಾಜವನ್ನು  ನಿಜವಾದ ಅಭಿವೃದ್ಧಿಯತ್ತ ಕೊಂಡೊಯ್ಯ ಬೇಕಾಗಿದೆ.

                                                                                                                             - ಡಾ. ಎಸ್.ಎಂ. ಮುತ್ತಯ್ಯ