Sunday, 30 June 2013

ವಿಜ್ಞಾನ ನಗರಿಯ ವಿರೂಪಗಳು


          ಚಳ್ಳಕೆರೆ ತಾಲ್ಲುಕಿನ ನೇರ್‍ಲಗುಂಟೆ ಹಾಗೂ ವರವು ಕಾವಲುಗಳಲ್ಲಿ ಅಭಿವೃಧ್ಧಿಯ ಹೆಸರಿನಲ್ಲಿ ಸುಮಾರು ೯೭೨೩ ಎಕರೆ ಜಿಲ್ಲಾ ಸಂರಕ್ಷಿತ ಅರಣ್ಯವನ್ನು ವಶಪಡಿಸಿಕೊಂಡು ವಿವಿಧ ರೀತಿಯ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ಪ್ರ.ವಾ.ಯ ಏ. ೧೧ ರ ಸಂಚಿಕೆಯಲ್ಲಿ ನಾಗೇಶ್ ಹೆಗಡೆಯವರ ವಿಚಾರಗಳಿಗೆ ಏ. ೧೮ ರ ಸಂಚಿಕೆಯಲ್ಲಿ ಎಸ್. ಶಿವಣ್ಣ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅದೇ ಭೂ ಭಾಗದಲ್ಲಿ ಬೆಳೆದ ನನ್ನ ಅನುಭವಗಳ ಹಿನ್ನೆಲೆಯಲ್ಲಿ ಕೆಲವು ಅಭಿಪ್ರಾಯಗಳನ್ನು ಹೇಳಲೇ ಬೇಕಾಗಿದೆ. 
ಎಸ್ ಶಿವಣ್ಣ ಅವರು ’ಖುದಾಪುರ ಪಾರಂ ಗೆ ಎಲ್ಲಾ ಬರಲಿ , ಬೆಲ್ಲವೇ ಇರಲಿ’ ಎಂದು ಬಯಸಿದ್ದಾರೆ. ಹಾಗೆಯೇ ’ಕೆಲಸಕ್ಕೆ ಬಾರದ ಹಾಳು ಕೊಂಪೆಯಂತಿದ್ದ ಈ ಕಾಡು ಹಲವು ಯೋಜನೆಗಳ ಬೀಡಾಗುತ್ತಿರುವುದು ಇಡೀ ಈ ಪ್ರದೇಶದ ಜನರಿಗೆ ಸಂತೋಷವಾಗಿದೆ’ ಎಂದು ಭಾವಿಸಿದ್ದಾರೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿವಿಧ ರೀತಿಯ ಕಾಮಗಾರಿಗಳು ಹಾಗೂ ಅದರಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ ಇವರ ಈ ಎರಡೂ ಬಯಕೆಗಳು ಖಂಡಿತಾ ತಮಾಷೆಯಾಗಿವೆ. ಶಾಲೆಯಿಂದ ಹೋಗಿಬರುವ ಹೊರಸಂಚಾರದ ನೆಪದಲ್ಲಿ ನೋಡುವ ಖುದಾಪುರದ ಕುರಿ ಸಂವರ್ಧನಾ ಕೇಂದ್ರ ಹಾಗೂ ಅಲ್ಲಿನ ಸ್ವಲ್ಪ ಪ್ರದೇಶಕ್ಕೆ ಶಿವಣ್ಣ ಅವರ ಮಾತುಗಳು ಸೀಮಿತವಾಗಿವೆ. ಕುರಿ ಸಂವರ್ಧನಾ ಕೇಂದ್ರದ ನಿವರ್ಹಣೆ ಸರಿಯಾಗದೇ ಸರ್ಕಾರಕ್ಕೆ ಹೊರೆಯಾಗಿತ್ತು, ಅದರ ಬದಲಿಗೆ ಈ ಸಂಶೋಧನಾ ಕೇಂದ್ರಗಳು ಬಂದಿದ್ದು ಸೂಕ್ತವಾಗಿದೆ ಎಂಬ ಭಾವ ಇಲ್ಲಿ ಮುಖ್ಯವಾದಂತಿದೆ.  ಆದರೆ ಇಲ್ಲಿ ನಿಜವಾದ ಸಮಸ್ಯೆ ಇರುವುದು ೯೭೨೩ ಎಕರೆ ಪ್ರದೇಶದ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಹಳ್ಳಿಗಳ ಪಶುಪಾಲಕ ಹಾಗೂ ಕೂಲಿಮಾಡುವ ಜನರಲ್ಲಿ. ಹಾಗಾಗಿ  ಸುತ್ತ ಮುತ್ತಲಿನ ಸುಮಾರು ನೂರಾರು ಗ್ರಾಮಗಳಲ್ಲಿ ಈ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಜನ ಇಂದು ತಲುಪಿರುವ ಸ್ಥಿತಿಯನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಆಗ ಇಲ್ಲಿಗೆ ಬರುವುದೆಲ್ಲವೂ ಬೆಲ್ಲವೇ ಆಗುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ.
ಈ ಭಾಗದಲ್ಲಿ ಬದುಕುತ್ತಿರುವ ಜನರಲ್ಲಿ ಬಹುಪಾಲು ಜನ ಪಶುಪಾಲನೆಯನ್ನು ಪ್ರಧಾನ ವೃತ್ತಿಯನ್ನಾಗಿಸಿಕೊಂಡವರು. ಈ ಗುಂಪಿನಲ್ಲಿ ಕುರಿ-ಮೇಕೆ ಸಾಕುವವರ ಸಂಖ್ಯೆ ದೊಡ್ಡದು. ಕೆಲವೇ ವರ್ಷಗಳ ಹಿಂದೆ ಇಲ್ಲಿನ ಹಲವಾರು ಕುಟುಂಭಗಳಲ್ಲಿ ಸಾವಿರಾರು ಸಂಖ್ಯೆಯ ಕುರಿ ಮೇಕೆಗಳಿದ್ದು ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದರು. ಕಳೆದ ಕೆಲವಾರು ವರ್ಷಗಳಲ್ಲಿ ಕಾವಲುಗಳ ಒತ್ತುವರಿ ಪ್ರದೇಶದಲ್ಲಿ ಸ್ಥಿತಿವಂತರೇ ಜಮೀನಿಗಾಗಿ ಕಾಡನ್ನು ನಾಶಪಡಿಸಿದರು. ಇಷ್ಟರಿಂದಲೇ ಘಾಸಿಗೊಂಡಿದ್ದ ಈ ಜನ ವಿಜ್ಞಾನ ನಗರಿ ಮಾಡಲು ಬಂದು ಬಹುಪಾಲು ಕಾವಲನ್ನು ವಶ ಪಡಿಸಿಕೊಂಡಿರುವುದರಿಂದ ಮುಂದೇನು ಮಾಡಬೇಕೆಂದು ತೋಚದವರಾಗಿದ್ದಾರೆ. ತಮ್ಮ ಕುರಿ ಹಾಗೂ ಮೇಕೆ ಸಾಕಾಣಿಕೆಗೆ ಕಾವಲುಗಳು ಸಿಗುವುದಿಲ್ಲವೆಂದು ತಿಳಿದಾಗ ತಮ್ಮ ಕುರಿ ಮೇಕೆಗಳನ್ನು ಮಾರಿದ್ದಾರೆ.  ಇದಿಷ್ಟೇ ಅಲ್ಲದೇ ಈ ಕಾವಲುಗಳಲ್ಲಿ ದೊರೆಯುತ್ತಿದ್ದ ಕಾರೆ ಹಾಗೂ ಕೌಳೆ ಹಣ್ಣುಗಳನ್ನು ಕಿತ್ತು ತಂದು ಮಾರಿ ಜೀವನ ನಡೆಸುತ್ತಿದ್ದರು. ಹಾಗೆಯೇ ಈ ಕಾವಲಿನ ಒಳಗೆ ಹುತ್ತಗಳಲ್ಲಿ ಸಿಗುತ್ತಿದ್ದ ಹುತ್ತದ ಹುಳಗಳನ್ನು ಹಿಡಿದು ಪೇಟೆಯಲ್ಲಿ ಮಾರಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಭಗಳಿದ್ದವು. ಇಲ್ಲಿ ದೊರೆಯುತ್ತಿದ್ದ ಈಚಲು ಹಾಗೂ ಹೂಲಿ ಗಿಡಗಳ ಕಡ್ಡಿಗಳಿಂದ ಪೊರಕೆ, ಬುಟ್ಟಿ ಮಾಡಿ ಜೀವಿಸುತ್ತಿದ್ದ  ನೂರಾರು ಸಂಸಾರಗಳಿದ್ದವು. ಒಟ್ಟಾರೆ ಹತ್ತಾರು ರೀತಿಯ ಬುಕಿನ ಮಾರ್ಗಗಳು ಅಲ್ಲಿದ್ದವು. ಜೊತೆಗೆ ಇಲ್ಲಿನ ಮ್ಯಾಸಬೇಡ ಬುಡಕಟ್ಟಿನ ಹಲವು ಪೂಜಾ ನೆಲೆಗಳು ಸದರಿ ಕಾವಲುಗಳಲ್ಲಿದ್ದವು. ಕಾಡಿನಲ್ಲಿ ವಿಶೇಷವಾದ ಜಿಂಕೆಗಳ ದೊಡ್ಡ ಸಮೂಹವೇ ಇತ್ತು ;  ಈಗ ಈ ಕಾವಲು ಪ್ರದೇಶದ ಬಹು ಭಾಗಕ್ಕೆ ಎರಡು ಆಳೆತ್ತರದ ಗೋಡೆಯನ್ನು ನಿರ್ಮಿಸಿದ್ದರ ಪರಿಣಾಮ  ಜನ ಹಾಗೂ ಪ್ರಾಣಿ- ಪಕ್ಷಿಗಳು ಬೀದಿಗೆ ಬಿದ್ದಿದ್ದಾರೆ.
ಎಲ್ಲ್ಲರು ಹೇಳುವಂತೆ  ಈ ಕೇಂದ್ರಗಳು ದೇಶದ ಅಭಿವೃದ್ದಿಯಲ್ಲಿ ಬಹಳ ಮುಖ್ಯ. ಇಂತಹ ಮಹತ್ವದ ಕೇಂದ್ರಗಳನ್ನು ಹೊಂದಿದ ಕೀರ್ತಿ ನಮ್ಮ ಭಾಗದ್ದು. ಇವುಗಳಿಗೆ ಸ್ಥಾನ ಕೊಡುವುದರ ಮೂಲಕ ನಮ್ಮ ಊರನ್ನು ಜಗತ್ತಿನ ಭೂಪಟದಲ್ಲಿ ಮೂಡಿಸುತ್ತೇವೆ ಎಂಬ ಎಂಬ ಹೆಮ್ಮೆಯನ್ನು ಇಲ್ಲಿನ ಬಹುಪಾಲು ಜನ  ಹೊಂದಿದ್ದರು.  ಇದರ ಪರಿಣಾಮ ಸ್ವಲ್ಪ ಅಸಮಾಧಾನದಿಂದಲೆ ತಮ್ಮ ಕುರಿ-ಮೇಕೆಗಳನ್ನು, ಕೇಂದ್ರಗಳು ನಿರ್ಮಾಣವಾಗಲಿರುವ ಪ್ರದೇಶಗಳ ಸುತ್ತಾ ಮುತ್ತಲಿನ ತಮ್ಮ ಖಾತೆಯಿರುವ ಜಮೀನುಗಳನ್ನು ಉಧ್ಯಮಿಗಳಿಗೆ ಮಾರಿದರು. ಆದರೆ ಈ ಭಾವನೆ ಬಹಳ ಕಾಲ ಉಳಿಯಲಿಲ್ಲ . ಚಾಲಕ ರಹಿತ ಯುದ್ಧವಿಮಾನ ಪರೀಕ್ಷಾ ಕೇಂದ್ರದ ವಿಮಾನಗಳು ಕರ್ಣಪಟಲ ಹರಿದು ಹೋಗುವಷ್ಟು ಶಬ್ಧಮಾಡುತ್ತಾ ಹಾರಾಡಿದಾಗ; ಕಾವಲಿಗೆ ರಕ್ಷಣೆಯ ನೆಪದಲ್ಲಿ ಎತ್ತರದ ಗೋಡೆ ನಿರ್ಮಿಸಿದಾಗ; ಈ ಕೇಂದ್ರಗಳಲ್ಲಿ ನಮ್ಮ  ಓದಿದ ಮಕ್ಕಳಿಗೆ ನೌಕರಿ ಸಿಗುತ್ತೆ ಎಂದು ಕೊಂಡವರಿಗೆ  ’ಡಿ’ ಗ್ರೂಪ್ ನೌಕರಿಗೂ ಇಂಗ್ಲೀಷ್ ಹಾಗೂ ಹಿಂದಿ ಕಡ್ಡಾಯ ಎಂಬುದಾಗಿ ಜಾಹಿರಾತು ಬಂದಾಗ; ಉನ್ನತ ಮಟ್ಟದ ಬಹಳಷ್ಟು ಜನ ಇಲ್ಲಿಗೆ ಬರುವುದರಿಂದ ಅವರಿಗೆ ಬೇಕಾದ ವಸ್ತುಗಳ ವ್ಯಾಪಾರ ಮಾಡಬಹುದು ಎಂದುಕೊಂಡವರಿಗೆ ’ಇದು ಮಿಲಿಟರಿ ನೆಲೆಯಾದ್ದರಿಂದ ಆಹಾರವೂ ಸೇರಿದಂತೆ ಎಲ್ಲವೂ ನೇರವಾಗಿ ಅಲ್ಲಿಗೆ ಪೂರೈಕೆಯಾಗುತ್ತದೆ. ಸಣ್ಣ ಬೆಂಕಿಪೊಟ್ಟಣವನ್ನು ಸಹಾ ಯಾರೂ ಕೊಳ್ಳುವುದಿಲ್ಲ.’ ಎಂದು ತಿಳಿದಾಗ ಸಮಸ್ಯೆಯ ಅರಿವಾಗಿದೆ. ಆದರೆ  ಕಾಲ ಮಿಂಚಿಹೋಗಿದೆ. ಈಗ ಈ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವಂತೆಯೂ ಇಲ್ಲ. ಅವುಗಳೊಟ್ಟಿಗೆ ಬದುಕುವಂತೆಯೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ ಹಾಕಿಕೊಂಡ ಸ್ಥಿತಿ ಈ ಭಾಗದ ಜನರದಾಗಿದೆ. 
ನಾಗೇಶ್ ಹೆಗಡೆಯವರು ತಮ್ಮ ಲೇಖನದಲ್ಲಿ ವಿವರಿಸಿರುವಂತೆ ಯಾವುದೇ ಯೋಜನೆಯ ಜಾರಿಯಿಂದಾಗುವ ಪರಿಣಾಮಗಳ ಯೋಚಿಸಿದೇ ಇರುವ ಆಡಳಿತದ ಅಸ್ಸೀಮ ನಿರ್ಲಕ್ಷೆಯಿಂದಲೇ ಇಂಥ ಅವಘಡಗಳು ಪದೆ ಪದೆ ಜರಗುತ್ತವೆ.  ಅಧಿಕಾರ ವ್ಯವಸ್ಥೆಗಳು ಯಾವಾಗಲೂ ಮಾಡಿರುವುದು ಇದೇ ಬಗೆಯ ತಂತ್ರಗಳನ್ನೇ. ಇಂಥ ಅಧಿಕಾರ ತಂತ್ರಗಳ ನಡುವೆ ನಾಶವಾಗುವವರು ಸಾಮಾನ್ಯ ಜನ ಮಾತ್ರ. ಭೂಮಿ ಸರ್ಕಾರದ್ದು ಎಂದಾಕ್ಷಣ ಏನನ್ನಾದರೂ ಮಾಡಬಹುದೆಂಬ ಮನೋಭಾವನೆಗಳು ಹೆಚ್ಚಾಗಿವೆ. ಹಾಗಾಗಿಯೇ ಇಂಥ ಯೋಜನೆಗಳನ್ನು ಆರಂಭಿಸುವಾಗ ಜನರ ಅಭಿಪ್ರಾಯಗಳಿಲ್ಲದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ( ಏ.೧೯)  ಅರಣ್ಯವಾಸಿಗಳ ಭೂಮಿ ಹಕ್ಕಿನ ಬಗ್ಗೆ ಸುಪ್ರಿಂ ಕೋರ್ಟ್  ನೀಡಿರುವ ಒಂದು ತೀರ್ಪು ಇಲ್ಲಿ ಗಮನಾರ್ಹ. ಆ ತೀರ್ಪಿನಲ್ಲಿ ಹೇಳಿರುವಂತೆ ’ ಸ್ಥಳೀಯ ಜನರ ಸಾಮಾಜಿಕ ,ರಾಜಕೀಯ  ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವುದು ಬಹಳ ಮುಖ್ಯ. ಆದ್ದರಿಂದ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸುವ ಮೊದಲು ಆಯಾ ಸ್ಥಳಗಳ ಗ್ರಾಮ ಸಭೆಗಳ ಅನುಮತಿ ಕಡ್ಡಾಯವಾಗಬೇಕು’ ಎಂದು ಅಭಿಪ್ರಾಯ ಪಟ್ಟಿದೆ. ಹಾಗೆಯೇ ಮುಂದುವರೆದು ’ಪರಿಶಿಷ್ಟ ಪಂಗಡ ಹಾಗೂ ಅರಣ್ಯ ವಾಸಿಗಳು  ತಮ್ಮ ನೆಲದ ಜೊತೆ ಭಾವನಾತ್ಮಕ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಎಲ್ಲಾ ಹಕ್ಕನ್ನು ಪಡೆದಿದ್ದಾರೆ. ಕೃಷಿಯ ಜೊತೆಗೆ ಕಿರು ಅರಣ್ಯ ಉತ್ಪನಗಳನ್ನು ಸಂಗ್ರಹಿಸಿ ಮಾರಾಟಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಹಕ್ಕನ್ನೂ ಹೊಂದಿದ್ದಾರೆ.’ ಎಂಬುದನ್ನು ಒತ್ತಿ ಹೇಳಿದೆ. ಈ ನಡುವೆ ಬಹಳಷ್ಟು  ಮುಗ್ದ ಜನ  ಈ ಬಗ್ಗೆ  ಕೇಳುತ್ತಿರುವ ಪ್ರಶ್ನೆಗಳೆಂದರೆ : ಮುಖ್ಯವಾಗಿ ಈ ಕೇಂದ್ರಗಳ ಸ್ಥಾಪನೆ ಬಗ್ಗೆ  ನಮಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ ಏಕೆ? ಇವುಗಳ ನಿರ್ಮಾಣಕ್ಕೆ ನಿಜವಾಗಿಯೂ  ಇಷ್ಟೊಂದು ಜಮೀನು ಬೇಕಿತ್ತಾ ? ನಾವು ದೇಶಕ್ಕೆ ವಿಶೇಷವಾದ ನೆರವು ನೀಡಿದೆವು ಎಂದ ಮೇಲೆ ದೇಶ ನಮಗೆ ಕೊಟ್ಟ ವಿಶೇಷ ಕೊಡುಗೆ ಏನು? ಬದುಕಿಗೆ ಆಧಾರವಾಗಿದ್ದ ಕಾವಲನ್ನು ಕಳೆದುಕೊಂಡ ನಮಗೆ ಮುಂದಿನ ದಾರಿಯಾವುದು? ಈ ಪ್ರಶ್ನೆಗಳಿಗೆ ಉತ್ತರ ಹೇಳುವವರು ಯಾರು ?
- ಡಾ.ಎಸ್.ಎಂ. ಮುತ್ತಯ್ಯ