ಕರ್ನಾಟಕ ಸಂಸ್ಕೃತಿಗಳ ಅಂತರ್ಯದಲ್ಲಿ ಅನೇಕ ರೋಚಕ ಹಾಗೂ ಅರ್ಥಪೂರ್ಣ ಸಂಪ್ರದಾಯ ಆಚರಣೆಗಳಿವೆ. ಆಧುನಿಕ ಪ್ರಹಾರಗಳು ಏನೆಲ್ಲ ಪ್ರಭಾವಿಸಿದರೂ ತಮ್ಮದೇ ಆದ ಅಸ್ತಿತ್ವ ಹಾಗೂ ಅನನ್ಯತೆಗಳನ್ನು ಉಳಿಸಿಕೊಂಡಿವೆ. ಅಂಥ ಸಂಪ್ರದಾಯಗಳಲಿ ’ಎತ್ತಿನ ಕಿಲಾರಿಗಳು’ ಒಂದು ವಿಶಿಷ್ಟ ಸಂಪ್ರದಾಯ. ಚಿತ್ರದುರ್ಗ ಸೀಮೆಯ ಸುತ್ತ ಮುತ್ತ ವಾಸಿಸುವ ಮ್ಯಾಸನಾಯಕ ಸಮುದಾಯದಲ್ಲಿ ಕಂಡು ಬರುವ ಇದು, ಸಂಸ್ಕೃತಿ ಅಧ್ಯಯನಗಳಿಗೆ ಹಲವು ಒಳನೋಟಗಳನ್ನು ನೀಡುತ್ತದೆ.
ಕಿಲಾರಿ ಪದದ ಅರ್ಥ :
ಪದ ಕೋಶಗಳು ಹೇಳುವಂತೆ ಕಿಲಾರ್ ಅಥವಾ ಕಿಲಾರಿ ಎಂದರೆ ದನಗಳ ವಿಶಿಷ್ಟವಾದ ಒಂದು ತಳಿ. ಈ ತಳಿಯ ದನಗಳನ್ನು ಸರ್ಕಾರದ ಅಧೀನದಲ್ಲಿ ಸಾಕಲಾಗುತ್ತಿತ್ತು ಎಂಬುದಾಗಿ ತಿಳಿದುಬರುತ್ತದೆ. ಕರ್ನಾಟಕದ ಹಲವು ಕಡೆಗಳಲ್ಲಿ ಕಿಲಾರಿ ದನಗಳು ಸಿಗುತ್ತವೆ. ಮ್ಯಾಸನಾಯಕ ಸಮುದಾಯದೊಳಗೆ ಕಿಲಾರಿ ಪದಕ್ಕೆ ಕಾಯುವವನು ಎಂಬ ಸಾಮಾನ್ಯ ಅರ್ಥವಿದೆ. ಇಲ್ಲಿಯ ಎತ್ತಿನ ಕಿಲಾರಿಗಳು ಇದೇ ಹಿನ್ನೆಲೆಯೊಳಗೆ ಬಳಕೆಗೊಂಡಿರುವಂತದ್ದು ಸ್ಪಷ್ಟ. ಎಲ್ಲಾ ಕಿಲಾರಿಗಳಿಗಿಂತ ದೇವರೆತ್ತಿನ ಕಿಲಾರಿಗಳು ಅತೀ ಗೌರವಾನ್ವಿತರು.
ದೇವರ ಎತ್ತುಗಳು :
ಕರ್ನಾಟಕದ ಹಲವಾರು ಸಂಸ್ಕೃತಿಗಳಲ್ಲಿ ಭಕ್ತರು ತಮ್ಮ ದೈವಕ್ಕೆ ಹರಕೆ ರೂಪದಲ್ಲಿ ಗೂಳಿಯನ್ನು (ಎತ್ತನ್ನು) ಒಪ್ಪಿಸುವುದು ಸಾಮಾನ್ಯ. ಆಕಳನ್ನು ದೇವರಿಗೆ ಬಿಡುವ ಪದ್ದತಿ ಕಡಿಮೆ. ಹಾಗೆಯೇ ಇಲ್ಲೆಲ್ಲ ದೇವರಿಗೆ ಬಿಡುವ ಎತ್ತುಗಳ ಸಂಖ್ಯೆ ಅತೀ ಕಡಿಮೆ. ಆದರೆ ಮ್ಯಾಸನಾಯಕರ ಸಮುದಾಯದಲ್ಲಿ ದೇವರಿಗೆ ಆಕಳು ಮತ್ತು ಎತ್ತುಗಳೆರಡನ್ನು ಯಾವುದೇ ಭೇದಭಾವವಿಲ್ಲದೆ ಬಿಡುತ್ತಾರೆ. ಹೀಗೆ ದೇವರಿಗೆ ಬಿಟ್ಟ ದನಗಳ ಸಂಖ್ಯೆ ನೂರನ್ನು ದಾಟಿರುತ್ತದೆ. ಎತ್ತುಗಳನ್ನು ಕಾಯುವುದಕ್ಕೆ ಗುಡಿಕಟ್ಟಿನ ಹಿರಿಯರು ಹಾಗೂ ಕುಲಸಾವಿರದವರು ಕಿಲಾರಿಗಳನ್ನು ನೇಮಿಸುತ್ತಾರೆ. ಅವರನ್ನೇ ದೇವರ ಎತ್ತಿನ ಕಿಲಾರಿಗಳು ಎಂದು ಕರೆಯುತ್ತಾರೆ. ಈ ಕಿಲಾರಿಗಳು ಊರಿಂದ ಹೊರಗೆ ಕಾಡಿಗೆ ಹತ್ತಿರವಾಗಿ ಮುಳ್ಳು ಬೇಲಿಯಿಂದ ದೊಡ್ಡಿಯನ್ನು ನಿರ್ಮಿಸಿಕೊಂಡು, ಅದರಲ್ಲಿ ಆ ದನಗಳನ್ನು ಜತನದಿಂದ ಕಾದು ಸಂಬಾಳಿಸುತ್ತಾರೆ. ಈ ದೊಡ್ಡಿಯನ್ನು ಗೂಡು ಎಂಬ ಪೂಜ್ಯ ಹೆಸರಿನಿಂದ, ದೇವರೆತ್ತುಗಳನ್ನು ಮುತ್ತಯ್ಯಗಳು, ಸುರುಬುಗಳು ಎಂಬ ಗೌರವ ನಾಮಗಳಿಂದ ಕರೆಯುತ್ತಾರೆ.
ದೇವರೆತ್ತುಗಳನ್ನು ಮುತ್ತಯ್ಯಗಳು ಎಂದು ಕರೆಯುವುದೇ ಹೆಚ್ಚು. ಮುತ್ತಯ್ಯಗಳು ಎಂದರೆ ಹಿರಿಯರು ಎಂದರ್ಥ. ಅಂದರೆ ದೇವರ ಎತ್ತುಗಳನ್ನು ಇವರು ಕುಲದ ಹಿರಿಯರ ಪ್ರತಿರೂಪವಾಗಿ ಕಂಡಿದ್ದಾರೆ. ಹೀಗೆ ದೇವರೆತ್ತುಗಳನ್ನು ಪರಿಭಾವಿಸುವ ಕ್ರಮ ಮ್ಯಾಸನಾಯಕರ ಕಂಪಳರಂಗ, ಗಾದ್ರಿಪಾಲನಾಯಕ, ಬೋರೆದೇವರು, ಬೋಸೆದೇವರು, ಬಂಗಾರದೇವರು, ಬೊಮ್ಮದೇವರು ಇವೇ ಮೊದಲಾದ ದೈವದ ಒಕ್ಕಲುಗಳಲ್ಲಿ ಮುಖ್ಯವಾಗಿದೆ. ಈ ಮುತ್ತಯ್ಯಗಳು ಇವರ ಆಚರಣೆಗಳಲ್ಲಿ ಎಷ್ಟು ಮುಖ್ಯವೆಂದರೆ, ಯಾವುದೇ ಹಬ್ಬ ಪ್ರಾರಂಭವಾಗುವುದು ಮುತ್ತಯ್ಯಗಳ ಪೂಜೆಯ ಮೂಲಕ ಮತ್ತು ಮುತ್ತಯ್ಯಗಳ ಮೀಸಲು ಹಾಲು, ತುಪ್ಪ ಬಂದ ನಂತರವೇ.
ಇಲ್ಲಿ ಗೂಡು, ದೇವರಗುಡಿ ಮತ್ತು ಉದಿಪದಿ, ಒಡಪು ಇವುಗಳ ಬಗ್ಗೆ ಕೆಲವು ವಿಚಾರಗಳನ್ನು ಹೇಳುವುದು ಉಚಿತ. ಈಗಾಗಲೇ ಹೇಳಿದ ಹಾಗೆ ಗೂಡು ದೇವರ ಎತ್ತುಗಳನ್ನು ಕೂಡಲು ಊರ ಹೊರಗೆ ಮುಳ್ಳು ಕಳ್ಳೆಗಳಿಂದ ನಿರ್ಮಿಸಿದ ದೊಡ್ಡಿ, ಈ ದೊಡ್ಡಿಯೊಳಗೆ ಒಡಪು ಇರುತ್ತದೆ. ಒಡಪು ಎಂದರೆ ದಿನಾಲು ಬೆಳಿಗ್ಗೆ, ಸಾಯಂಕಾಲ ಬೆಂಕಿ ಹಾಕಲು ಮಾಡಿರುವ ಒಂದು ಗುಂಡಿ. ಇದು ಸಾಮಾನ್ಯವಾದ ಗುಂಡಿಯಲ್ಲ ಅದಕ್ಕೂ ದೈವ ಮಾನ್ಯತೆ ಇದೆ. ಇದರಲ್ಲಿ ದೊರೆಯುವ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುತ್ತಾರೆ. ಹಾಗಾಗಿಯೇ ಈ ಗುಂಡಿಯನ್ನು ಕೇವಲ ಗುಂಡಿಯೆಂದು ಕರೆಯದೇ ಒಡಪು ಎಂದು ಕರೆದಿದ್ದಾರೆ. ದೇವರ ಗುಡಿ ಹಟ್ಟಿಯಲ್ಲಿರುತ್ತದೆ. ಆ ಗುಡಿಯ ಮುಂದೆ ಮುತ್ತಯ್ಯಗಳ ಪೂಜಾಸ್ಥಾನವೊಂದಿರುತ್ತದೆ. ಅಲ್ಲಿ ಮುತ್ತಯ್ಯಗಳ ಹಾಲಿನಿಂದ ಬಂದ ಬೆಣ್ಣೆಯಿಂದ ಗರುಡಗಂಬದ ದೀಪಗಳನ್ನು ಉರಿಸುತ್ತಾರೆ. ಮತ್ತೆ ಅಲ್ಲಿಯೂ ಒಡಪು ಇರುತ್ತದೆ.
ಕಿಲಾರಿಗಳ ನೇಮಕ ಮತ್ತು ಕೆಲಸ ಕಾರ್ಯಗಳು:
ಕಿಲಾರಿಗಳನ್ನು ನೇಮಿಸುವುದು ಅತ್ಯಂತ ವ್ಯವಸ್ಥಿತ. ಗುಡಿಕಟ್ಟಿನ ಕುಲಸಾವಿರದವರು, ಹಿರಿಯರು ಸೇರಿ ಒಂದು ಕುಟುಂಬವನ್ನೇ ಈ ಕೆಲಸಕ್ಕೆ ನೇಮಿಸುತ್ತಾರೆ. ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಈ ಕುಟುಂಬಗಳನ್ನು ಆಯ್ಕೆ ಮಾಡಿರುವುದರಿಂದ, ಈಗ ಕುಟುಂಬದ ಒಳಗಿನ ಜನ, ಯಾರು ಈ ವೃತ್ತಿ ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ.
ಕಿಲಾರಿಗಳ ಕೆಲಸಗಳು ಅತ್ಯಂತ ಕಠಿಣತರವಾದಂತಹವು ದೇವರ ಎತ್ತುಗಳನ್ನು ದಿನಾಲು ಮೇಯಿಸುವುದು. ಸುರಕ್ಷಿತವಾಗಿ ನೋಡಿಕೊಳ್ಳುವುದು, ಹಬ್ಬದ ಸಂದರ್ಭಕ್ಕೆ ಹಾಲನ್ನು ಮೀಸಲಿಡಿದು, ಅದರಿಂದ ಬಂದ ಬೆಣ್ಣೆಯನ್ನು ಮತ್ತು ಒಂದಿಷ್ಟು ಮೀಸಲು ಹಾಲನ್ನು ದೇವರಗುಡಿಗೆ ಒಪ್ಪಿಸುವುದು, ಗೂಡಿಂದ ದೇವರೆತ್ತುಗಳನ್ನು ಕರೆತಂದು ಹಬ್ಬ ಮುಗಿಸಿಕೊಂಡು ಕರೆದೊಯ್ಯುವುದು. ಗುಡಿಯ ಮುಂಭಾಗದಲ್ಲಿ ಇರುವ ಮುತ್ತಯ್ಯಗಳ ಪದಿಯಲ್ಲಿ ಪೂಜಾಕಾರ್ಯ ನೆರವೇರಿಸುವುದು. ಹಾಗೆಯೇ ಭಕ್ತರು ಗೂಡಿಗೆ ಮಲಗಲು ಬಂದಾಗ ಅವರಿಗೆ ಪೂಜೆ ಮಾಡಿಕೊಟ್ಟು ಪ್ರಸಾದ ನೀಡಿ ಕಳುಹಿಸುವುದು ಇತ್ಯಾದಿ. ಇಂತಹ ಅನೇಕ ಮಹತ್ವದ ಧಾರ‍್ಮಿಕ ಕೆಲಸ ಕಾರ್ಯಗಳನ್ನು ಮತ್ತು ಸಾಮಾನ್ಯ ಕಾರ್ಯಗಳನ್ನು ಕಿಲಾರಿಗಳು ಮಾಡಬೇಕಾಗಿರುತ್ತದೆ.
ಕಿಲಾರಿಗಳ ವೇಷ ಭೂಷಣ ಮತ್ತು ಜೀವನ ನಿರ್ವಹಣೆ:
ದೇವರ ಕೆಲಸವೆಂದು ಎತ್ತುಗಳನ್ನು ಕಾಯುವ ಕಿಲಾರಿಗಳಿಗೆ ಕುಲಸಾವಿರದವರಿಂದ ದೈವಿಕ ದೀಕ್ಷೆಯಾಗುತ್ತದೆ. ಇವರು ದೀಕ್ಷೆಯಾದ ದಿನದಿಂದ ಮೈಗೆ ಪೂರ್ತಿ ಬಟ್ಟೆ ಧರಿಸುವುದಿಲ್ಲ. ತಲೆಗೆ ಒಂದು ಪಾಗು. ಸೊಂಟಕ್ಕೆ ಒಂದು ಪಂಚೆ, ಹೊದಿಯಲು ಒಂದು ಪಚ್ಚಡ, ಹೆಗಲ ಮೇಲೊಂದು ಕಂಬಳಿ, ಕೈಯಲ್ಲಿ ಬಿದುರಿನ ಒಂದು ಕೋಲು ಮತ್ತು ನೀರಿನ ಕುಡಿಕೆ ಇದು ಕಿಲಾರಿಗಳ ಸಾಮಾನ್ಯ ವೇಷ. ಇವರು ಬಹಳ ದಿನಗಳ ಕಾಲ ಗೂಡಿನಲ್ಲಿಯೇ ಬಂದರಿಕೆ ಸೊಪ್ಪಿನ ತಡಿಕೆಗಳ ಮೇಲೆ ಮಲಗುತ್ತಿದ್ದರು. ಈಗೀಗ ಊರಿಗೆ ಬಂದು ಮಲಗುವ ಪರಿಪಾಠವಿದೆ.
ಭಕ್ತರು ನೀಡುವ ದವಸ ಧಾನ್ಯಗಳೇ ಇವರ ಜೀವನ ನಿರ್ವಹಣೆಗೆ ಆಧಾರ ಸುಗ್ಗಿಯ ಕಾಲದಲ್ಲಿ ಕಿಲಾರಿಗಳು ಪ್ರತಿ ಭಕ್ತರು ಕಣಗಳಿಗೆ ಬೇಟಿ ನೀಡಿ ದಾನ್ಯಗಳನ್ನು ಸಂಗ್ರಹಿಸುತ್ತಾರೆ. ಕಿಲಾರಿ ಹೋಗದೇ ಇದ್ದರು ಕೆಲ ಭಕ್ತರು ಕಿಲಾರಿಯ ಮನೆಗೆ ತಮ್ಮ ಭಕ್ತಿಯ ಸ್ವರೂಪವನ್ನು ದವಸವನ್ನು ಒಪ್ಪಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ದೊರೆಯುವ ಕಾಯಿ, ಕಾಸು ಕೂಡ ಜೀವನ ನಿರ್ವಹಣೆಗೆ ಪೂರಕ.
ಇವರ ವಿಶೇಷವೇನೆಂದರೆ ಅತಿಯಾದ ಮಡಿವಂತಿಕೆ ಕಿಲಾರಿಗಳು ತಮ್ಮ ಮನೆಯಲ್ಲಿ ಬೇರೆ ಸದಸ್ಯರು ಉಂಡ ತಟ್ಟೆಯಲ್ಲಿ ಉಣ್ಣುವುದಿಲ್ಲ. ಬೇರೆಯರ ಮನೆಗಳಲ್ಲಿ ಉಣ್ಣುವುದಿಲ್ಲ. ತೀರಾ ಉಣ್ಣಲೇ ಬೇಕಾದ ಪ್ರಸಂಗ ಬಂದರೆ ದೊನ್ನೆಯಲ್ಲಿ ಉಣ್ಣುತ್ತಾರೆ. ಪ್ರಯಾಣ ಏನೆಂದರೂ ಕಾಲನ್ನಡಿಗೆಯದು. ಬಹಳ ಎಂದರೆ ದ್ವಿಚಕ್ರದಲ್ಲಿ, ಅದು ಸ್ವಗೋತ್ರದವರಾದರೆ ಮಾತ್ರ. ಪಟ್ಟಣಗಳಿಗೆ ಹೋಗುವುದೇ ಅಪರೂಪ. ಇಂತಹ ಮಡಿವಂತಿಕೆ ಇದ್ದು, ಸ್ವಲ್ಪ ಸಡಿಲಗೊಳ್ಳುತ್ತಿದೆ.
ದೇವರ ರೂಪ ತೆಳೆದ ಕಿಲಾರಿಗಳು:
ಎತ್ತುಗಳನ್ನು ಕಾಯುತ್ತಿದ್ದ ಈ ಕಿಲಾರಿ ಸಂಪ್ರದಾಯ ಸುಮಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಅಂತ ಉದಾಹರಣೆಗಳಲ್ಲಿ ಹಿಂದೇ ಕಿಲಾರಿಗಳಿಗೆ ಕಾರ್ಯನಿರ್ವಹಿಸುತ್ತಾ, ಪ್ರಕೃತಿಯಲ್ಲಿ ಅಪಾಯಗಳಿಗೆ ಸಿಕ್ಕಿ ಮಡಿದ ಕಿಲಾರಿಗಳು ಇಂದು ಪೂಜ್ಯನೀಯರಾಗಿದ್ದಾರೆ. ಅಂತವರಲ್ಲಿ ಗ್ರಾಧಿಪಾಲನಾಯಕ, ನಲಗೇತ ಎರಗಯ್ಯ ಮೊದಲಾದವರು. ಧಾರ‍್ಮಿಕ ವೃತ್ತಿಯಾಗಿರುವ ಕಿಲಾರಿತನ ಇಂದು ಅಂಥ ಆಕರ್ಷಣೆಯ ಕಾರ್ಯವಾಗಿ ಉಳಿದಿಲ್ಲ. ಆದರೂ ಜನರಿಗೆ ದೈವದ ಬಗೆಗೆ ಇರುವ ಭಯ, ನಂಬಿಕೆ ಸಂಪ್ರದಾಯ ರೂಪದಲ್ಲಿಯಾದರೂ ಉಳಿದಿದೆ. ಮುಂದೆಯೂ ಉಳಿಯುತ್ತದೆ.
ಡಾ. ಎಸ್. ಎಂ .ಮುತ್ತಯ್ಯ