Sunday 22 September 2013

ಜಾನಪದ ಪರಂಪರೆ : ಚರಿತ್ರೆಯ ನೆಲೆಗಳು

       ಇತಿಹಾಸವೆನ್ನುವುದು ಮಾನವನ ಒಟ್ಟಾರೆ ಜೀವನದ ಗತಿಸಿದ ಘಟನೆಗಳ ನೆನಪು. ಇದರಲ್ಲಿ ಮೌಖಿಕ ಇತಿಹಾಸ ಮತ್ತು ಬರಹದ ಇತಿಹಾಸ ಎಂದು ಎರಡು ಮಾರ್ಗಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೌಖಿಕ ಇತಿಹಾಸವೇ ಮೊದಲು ಎನ್ನಬಹುದು. ಮಾನವನು ಅಕ್ಷರ ಪೂರ್‍ವಕಾಲದಲ್ಲಿ ತನ್ನ ಜೀವನದ ಘಟನೆಗಳನ್ನು ತನ್ನ ಸ್ಮೃತಿಪಟಲದಲ್ಲಿ ದಾಖಲಿಸುತ್ತಿದ್ದ. ಅಕ್ಷರ ಯುಗ ಬಂದ ಅನಂತರ ಅಕ್ಷರ ಬಲ್ಲವರು ಆ ಘಟನೆಗಳನ್ನು ಅಕ್ಷರಗಳ ಮೂಲಕ ಹಿಡಿದಿಡುವುದನ್ನು ಪ್ರಾರಂಭಿಸಿದರು. ಅಕ್ಷರಗಳಿಂದ ಇತಿಹಾಸವನ್ನು ದಾಖಲು ಮಾಡುವಂತಹ ಸಂದರ್ಭದೊಳಗೇ ಮೌಖಿಕ ಇತಿಹಾಸವೂ ಕೂಡ ಬೆಳೆಯುತ್ತಿತ್ತು. ಬಹಳ ವಸ್ತುನಿಷ್ಠವಾಗಿ ಕಟ್ಟಲ್ಪಡುತ್ತಿದ್ದ ಇತಿಹಾಸ ಅಕ್ಷರ ಯುಗದ ಪ್ರಾರಂಭದಿಂದಾಗಿ ಪಕ್ಷಪಾತ ನಿಲುವುಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು. ಇದಕ್ಕೆ ಮತ್ತೊಂದು ಕಾರಣ ಇತಿಹಾಸ ರಚನೆ ಎನ್ನುವುದು ಪ್ರಭುತ್ವದ ವಶವಾಯಿತು. ಪ್ರಭುತ್ವದ ವಶವಾದ ಬರಹದ ಇತಿಹಾಸ ಪ್ರಭುತ್ವದ ಪರವಾಗಿ ವಾದಿಸುತ್ತಾ ಹೊರಟಿತು. ಇಲ್ಲಿ ಇತಿಹಾಸ ಮತ್ತು ನಿಷ್ಠತೆಯನ್ನು ಕಳೆದುಕೊಂಡು ಘಟನೆಯ ಯಾವುದೋ ಒಂದು ಮುಖವನ್ನು ಮಾತ್ರ ದಾಖಲಿಸುವಂತಾಯಿತು. ಈ ಇತಿಹಾಸದಿಂದ ಕಣ್ಮರೆಯಾದ ಅನೇಕ ಸಂಗತಿಗಳು ತುಂಬಾ ಮುಖ್ಯವಾದಂತಹವು. ಆದ್ದರಿಂದಲೇ ಆ ಸಂಗತಿಗಳು ಜನಪದರ ಮೌಖಿಕ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡವು. ಅಂಥ ಸಾಧ್ಯತೆಗಳನ್ನು ಕೆಲವು ಉದಾಹರಣೆಗಳ ಮೂಲಕ ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
ಪ್ರಸ್ತಾವನೆ
ಭಾರತದ ಚರಿತ್ರೆಯ ಚರ್ಚೆಯ ಸಂದರ್ಭಗಳಲ್ಲಿ ’ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬ ಮಾತು ವಿದೇಶಿ ಹಾಗೂ ದೇಶಿ ವಿದ್ವಾಂಸರಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇದು ಬಹಳ ವರ್ಷಗಳ ಕಾಲ ಒಪ್ಪಿತ ಅಭಿಪ್ರಾಯವೇ ಆಗಿತ್ತು. ಸ್ವಲ್ಪ ಕಾಲಾನಂತರ ಈ ಅಭಿಪ್ರಾಯದ ಬಗ್ಗೆ ಜಿಜ್ಞಾಸೆ ಶುರುವಾಯಿತು. ಇದರಿಂದ ತಿಳಿದು ಬಂದ ಸಂಗತಿಯೆಂದರೆ ಬ್ರಿಟೀಷರು ಈ ದೇಶಕ್ಕೆ ಬಂದು ಆಳತೊಡಗಿದ ಮೇಲೆ ಅವರು ಈ ನಾಡಿನ ಇತಿಹಾಸ ಬರೆದರು. ಹಾಗೆ ಬರೆಯುವಾಗ ಅವರು ಲಿಖಿತ ಸಾಮಗ್ರಿಗಳನ್ನೇ ಆಧರಿಸಿಕೊಂಡರು. ಅದು ಪಶ್ಚಿಮದ ರೀತಿಯೂ ಆಗಿತ್ತು. ಎಷ್ಟೋ ಬಾರಿ ಲಿಖಿತ ಸಾಮಾಗ್ರಿಗಳು ಸಿಗದೇ ಇದ್ದಾಗ ಈ ನಾಡಿನ ಜನರಿಗೆ ಇತಿಹಾಸ ಪ್ರಜ್ಞೆ ಇಲ್ಲ್ಲ ಎಂದು ಅವರು ಗೊಣಗಿಕೊಂಡಿದ್ದಾರೆ.. ಅಂದರೆ ಬರೆಹದ ಚರಿತ್ರೆಯನ್ನು ಆರಂಭಿಸಿದ ವಿದೇಶಿ ವಿದ್ವಾಂಸರಿಗೆ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಚರಿತ್ರೆ ಎಂದರೆ ಕೇವಲ ಬರೆಹದ ಚರಿತ್ರೆ ಮಾತ್ರ ಎಂಬುದಾಗಿ ನಂಬಲಾಗಿದೆ. ಈ ಮಾತಿನಲ್ಲಿ ಸತ್ಯಾಂಶ ಇಲ್ಲ  ಎಂಬುದನ್ನು  ಅರ್ಥಮಾಡಿಕೊಳ್ಳಲು ಬಹಳ ವರ್ಷ ಕಾಯಬೇಕಾಯಿತು. ಚರಿತ್ರೆಯ ಭಿನ್ನ ಆಕರಗಳನ್ನು ಶೋಧಿಸುವ ಸಂದರ್ಭದಲ್ಲಿ ಇದಕ್ಕೆ ಉತ್ತರ ಸಿಕ್ಕಿತು ಎನ್ನಬಹುದು. ಚರಿತ್ರೆ ಎನ್ನುವುದು ಕಟ್ಪಲ್ಪಡುವಂಥದ್ದು. ಹೀಗೆ ಕಟ್ಪಲ್ಪಡುವ ಚರಿತ್ರೆ ಒಂದು ಸತ್ಯವನ್ನು ಮಾತ್ರ ಹೇಳುತ್ತಿರುತ್ತದೆ. ಯಾವುದೇ ಒಂದು ಘಟನೆಗೆ ಒಂದೇ ಸತ್ಯ ಇರುವುದಿಲ್ಲ. ಇಂತಹ ಬಹುಮುಖ ಸತ್ಯಗಳನ್ನು ಹೊಂದಿರುವ ಘಟನೆಗಳನ್ನು ಕುರಿತ ಚರಿತ್ರೆಗಳು ಸಹ ಹಲವಾರು. ಈವರೆಗೂ ಸಿದ್ಧಗೊಂಡಿರುವ ಚರಿತ್ರೆಯನ್ನು ಪ್ರಮುಖವಾದ ಎರಡು ರೂಪಗಳಲ್ಲಿ ಗುರುತಿಸಬಹುದು. ಅವುಗಳಲ್ಲಿ ಒಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ ಹುಟ್ಟಿಕೊಂಡ ಬರಹದ ಚರಿತ್ರೆ. ಇನ್ನೊಂದು ಹಿಂದಿನಿಂದಲೂ ಚಾಲ್ತಿಯಲ್ಲಿದ್ದ  ಮೌಖಿಕ ಚರಿತ್ರೆ. 
ಮೌಖಿಕ ಚರಿತ್ರೆಯ ಪರಿಕಲ್ಪನೆ
ಇಂದು ಮನುಷ್ಯನ ನೆನಪಿನ ಶಕ್ತಿಯ ಮಿತಿಯಿಂದಾಗಿ ಹುಟ್ಟಿಕೊಂಡ ಬರಹದ ಚರಿತ್ರೆ (Wಡಿiಣಣeಟಿ ಊisಣoಡಿಥಿ) ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಮೌಖಿಕ ಚರಿತ್ರೆ (ಔಡಿಚಿಟ ಊisಣoಡಿಥಿ)ಯನ್ನು ಅನಧಿಕೃತ ಎನ್ನುವ ವಾತಾವರಣವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ. ಬರೆಹದ ಇತಿಹಾಸವು ರಾಜರ ಹುಟ್ಟು, ಹೋರಾಟ, ಸಾವು ಎನ್ನುವ ಘಟನೆಗಳನ್ನು ಪ್ರಧಾನವಾಗಿಸಿಕೊಂಡು ಇವೇ ವಸ್ತುನಿಷ್ಠ ಎಂದು ಭಾವಿಸುತ್ತದೆ. ಸಮಾಜವನ್ನು ಮೇಲುಸ್ತರದ ಗ್ರಹಿಕೆಗಳಿಂದ ಪರಿಭಾವಿಸುತ್ತದೆ. ಇದು ಲಿಖಿತತೆಯನ್ನು ತನ್ನ ಮೂಲ ಬಂಡವಾಳವನ್ನಾಗಿಸಿಕೊಂಡಿದೆ. ಮೌಖಿಕಇತಿಹಾಸವು ಘಟನೆಗಳನ್ನು/ವಿವರಗಳನ್ನು  ಸಮಾಜದ ಕೆಳಸ್ತರದಿಂದ ಪರಿಭಾವಿಸುತ್ತಾ ರಾಜರದಷ್ಟೇ ಚರಿತ್ರೆ ಅಲ್ಲ; ಪ್ರತಿಯೊಂದು ವಸ್ತು, ವ್ಯಕ್ತಿಗೂ ಒಂದು ಇತಿಹಾಸವಿದೆ. ಪ್ರತಿಯೊಂದು ಘಟನೆಗೂ ಕಾರ್ಯಕಾರಣ ಸಂಬಂಧವಿದೆ ಎನ್ನುವ ತಿಳುವಳಿಕೆ ಇಲ್ಲಿ ಪ್ರಧಾನವಾಗಿರುತ್ತದೆ. ಈ ಆಲೋಚನಕ್ರಮ ಮೌಖಿಕ ತಿಳುವಳಿಕೆ, ದಾಖಲೆಗಳನ್ನು ತನ್ನ ಪ್ರಧಾನ ಆಕರ ಸಾಮಗ್ರಿಗಳಾಗಿಸುತ್ತದೆ. ಜೊತೆಗೆ ಯಾವುದೇ ಒಂದು ಘಟನೆಗೆ ಮುಕ್ತಾಯವಿಲ್ಲ ಎಂಬುದಾಗಿ ಭಾವಿಸುತ್ತದೆ. 
ಈವರೆಗೂ ನಾವು ಇತಿಹಾಸವೆಂದರೆ ಬರೆಹದ ಇತಿಹಾಸವೆಂಬ ಪರಿಮಿತಿಯ ಒಳಗಡೆ ಸುತ್ತಾಡಿದ್ದೇವೆ. ಆದ್ದರಿಂದಲೇ ನಮ್ಮ ಆಲೋಚನೆ ಏಕಮುಖೀಯವಾಗಿದೆ. ಮಾತಿನ ಇತಿಹಾಸದ ಬಗ್ಗೆಯೇ ಯೋಚಿಸಿರುವ ನಾವು ಮೌನಕ್ಕೂ ಒಂದು ಇತಿಹಾಸವಿದೆ ಎಂಬ ಸತ್ಯವನ್ನು ಗ್ರಹಿಸಲಾರದೇ ಹೋಗಿದ್ದೇವೆ. ’ಮೌನಂ ಸಮ್ಮತಿ ಲಕ್ಷಣಂ’ ಎನ್ನುವಾಗಲೇ ಮೌನವು ಅಸಮ್ಮತಿಯ, ವಿರೋಧದ, ಹತಾಶೆಯ ಲಕ್ಷಣವೂ ಏಕಾಗಿರಬಾರದು ಎಂಬುದನ್ನು ಅರಿಯದವರಾಗಿದ್ದೇವೆ. ರಾಜರದು, ಬರಹ ರೂಪದ್ದು ಇತಿಹಾಸ ಎಂದು ನಂಬಿದ್ದ ನಾವು, ಪ್ರತಿಯೊಬ್ಬನಿಗೂ ಒಂದು ಇತಿಹಾಸವಿದೆ. ಬರವಣಿಗೆಯ ಇತಿಹಾಸಕ್ಕಿಂತ ಭಿನ್ನವಾದ, ಬರವಣಿಗೆಯ ಇತಿಹಾಸದ ಕೊರತೆಗಳನ್ನು ತುಂಬಬಲ್ಲ ಸಾಮರ್ಥ್ಯವುಳ್ಳ ಮೌಖಿಕ ಇತಿಹಾಸ ನಮ್ಮ ನಡುವೆ ಇದೆ ಎಂಬ ಕಟು ವಾಸ್ತವವನ್ನು ತಿಳಿಯಬೇಕಾಗಿದೆ. ಇಂಥ ಪ್ರಧಾನ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ ಹೊಸ ಆಲೋಚನ ಕ್ರಮವೇ ನವ ಇತಿಹಾಸ. ಇದರ ಆಲೋಚನಾ ಶಾಖೆಗಳು ಹಲವು. ಅವುಗಳಲ್ಲಿ ದೈಹಿಕ ಚರಿತ್ರೆ, ಮಹಿಳಾ ಚರಿತ್ರೆ, ಮೌಖಿಕ ಚರಿತ್ರೆ ಮೊದಲಾದವು ಮುಖ್ಯವಾಗುತ್ತವೆ. ಈ ಎಲ್ಲಾ ಶಾಖಾ ವಿಧಾನಗಳು ಕೆಳಸ್ತರದಿಂದಲೇ ಇಡೀ ಚರಿತ್ರೆಯನ್ನು ಕಟ್ಟಿಕೊಳ್ಳುವಲ್ಲಿ ಶ್ರಮಿಸುತ್ತವೆ. 
ಪ್ರಸ್ತುತ ಮೌಖಿಕ ಇತಿಹಾಸದ (ಔಡಿಚಿಟ ಊisಣoಡಿಥಿ) ಬಗ್ಗೆ ಸ್ವಲ್ಪ ವಿವರವಾದ ವಿಶ್ಲೇಷಣೆ ಮಾಡಬಹುದು. ಮೌಖಿಕ ಇತಿಹಾಸ ಎನ್ನುವುದು ಮೌಖಿಕ ಪರಂಪರೆಯ ಒಳಗೂ ಸೇರಿಕೊಂಡುಬಿಟ್ಟಿದೆ. ಇಂಥ ಇತಿಹಾಸವನ್ನು ಕಟ್ಟಿಕೊಳ್ಳುವಾಗ ಪ್ರಧಾನ ಆಕರ ಸಾಮಗ್ರಿ ಜಾನಪದ. ಜನಪದ ಸಾಹಿತ್ಯ, ಕಲೆ, ಭೌತಿಕ ವಸ್ತುಗಳೂ ಸೇರಿದಂತೆ ಒಟ್ಟಾರೆ ಜೀವನ ಕ್ರಮದ ವಿವಿಧ ಆಯಾಮಗಳು ಮೌಖಿಕ ಇತಿಹಾಸ ರಚನೆಗೆ ಸಹಕಾರಿ. ಈವರೆಗಿನ ಪ್ರಭುತ್ವದ ಕೂಸಾದ ಇತಿಹಾಸದ ಲೋಪಗಳನ್ನು ತಿದ್ದುತ್ತಾ, ಕೊರತೆಗಳನ್ನು ತುಂಬುತ್ತಾ ಮುನ್ನಡೆಯಲು ಪರಂಪರೆಯ ಮೌಖಿಕಾಭಿವ್ಯಕ್ತಿಗಳನ್ನು ಪರಿಗಣಿಸಬೇಕಾಗುತ್ತದೆ. ಇಲ್ಲಿಯವರೆಗಿನ ಪ್ರಧಾನ ಧಾರೆಯ ಇತಿಹಾಸಗಳು ರಾಜಕೀಯ ಚೌಕಟ್ಟನ್ನೇ ಪ್ರಧಾನವಾಗಿರಿಸಿಕೊಂಡು ಸಾಂಸ್ಕೃತಿಕ ಚೌಕಟ್ಟನ್ನು ನಿರ್ಲಕ್ಷಿಸಿವೆ. ಮತ್ತೊಂದು ಕಡೆ ಜಾನಪದ ದೃಷ್ಟಿ ಸಾಂಸ್ಕೃತಿಕವಾಗಿ ಹೆಚ್ಚು ಒಲವು ತೋರಿದರೂ ರಾಜಕೀಯದ ಕಡೆ ನಿರ್ಲಕ್ಷೆ ತೋರಿಲ್ಲ ಎಂಬುದು ಇಲ್ಲಿ ಮಹತ್ವದ ಸಂಗತಿ. 
ನಮ್ಮ ಪ್ರಧಾನಧಾರೆಯ ಇತಿಹಾಸಗಳು ಹೇಗೆ ತಪ್ಪುಗಳನ್ನು ಮಾಡುತ್ತಾ ಬಂದಿವೆ. ಅದಕ್ಕೆ ಮೌಖಿಕ ಪರಂಪರೆ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನು ಕೆಲವು ಉದಾಹರಣೆ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ಬರಹದ ಇತಿಹಾಸಗಳು ’ರಾಜ ಪ್ರತ್ಯಕ್ಷ ದೇವತಾ’ ಎಂದರೆ, ಮೌಖಿಕ ಪರಂಪರೆ ’ರಾಜನ ಕಣ್ಣಿಗೆ ಬೀಳಬೇಡ’, ’ಅರಮನೆಯ ಮುಂದೆ ಹೋಗಬಾರದು’ ಎನ್ನುತ್ತದೆ. ಇವು ಒಂದು ರಾಜ ಪ್ರಭುತ್ವದ ಬಗ್ಗೆ ಅಭಿವ್ಯಕ್ತಿಗೊಂಡ ಎರಡು ಸತ್ಯಗಳು. ಇವುಗಳಲ್ಲಿ ನಾವು ’ರಾಜ ಪ್ರತ್ಯಕ್ಷ ದೇವತಾ’ ಎನ್ನುವ ಮಾತನ್ನು ಸ್ವೀಕರಿಸಿದ ಹಾಗೆ ಇನ್ನುಳಿದ ಮೌಖಿಕ ಪರಂಪರೆಯ ಎರಡು ಮಾತುಗಳನ್ನು ಸ್ವೀಕರಿಸಿಲ್ಲ ಎಂಬುದನ್ನು ಅತ್ಯಂತ ಗಂಭೀರವಾಗಿ ಚಿಂತಿಸಬೇಕಾಗಿದೆ. ಇದೇ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಬಹು ಪ್ರಚಲಿತ ಹಾಗೂ ಜನಪ್ರಿಯ ’ಕಲ್ಗುಡ ಕಲ್ಲುರ್ಟಿ’ ಪಾಡ್ದನವನ್ನು ಗಮನಿಸಬಹುದು. ಗೊಮ್ಮಟೇಶ್ವರನ ಮೂರ್ತಿಯನ್ನು ಅತ್ಯಂತ ಅಭೂತಪೂರ್ವವಾಗಿ ಕೆತ್ತಿದವನು ಕಲ್ಕುಡ. ಇವನಿಗೆ ರಾಜ ಬಹುಮಾನ ನೀಡಿ ಗೌರವಿಸಿದ. ಈ ಅಂಶ ಗೊಮ್ಮಟೇಶ್ವರನ ಕುರಿತ ಶಾಸನ ಹಾಗೂ ಚರಿತ್ರೆಯ ಗ್ರಂಥಗಳಿಂದ ತಿಳಿದುಬರುತ್ತದೆ. ಆದರೆ ಪಾಡ್ದನ ಹೇಳುವಂತೆ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿಕೊಂಡ ಹುಚ್ಚುದೊರೆ ತನಗಲ್ಲದೆ ಬೇರೆ ಯಾರಿಗೂ ಇಂಥ ಮೂರ್ತಿ ಕೆತ್ತಬಾರದೆಂದು ಕಲ್ಕುಡನ ಬಲಗೈ ಹಾಗೂ ಬಲಗಾಲನ್ನು ಕತ್ತರಿಸುತ್ತಾನೆ. ಇಂತಹ ವೈರುಧ್ಯದ ಸಂಗತಿಗಳು ಹೇಗೆ ಏಕೆ ದಾಖಲಾದವು ಎಂಬುದರ ಬಗ್ಗೆ ಗಂಭೀರ ಅಧ್ಯಯನಗಳು, ಚಿಂತನ ಮಂಥನಗಳು ನಡೆಯಬೇಕಿದೆ. 
ಇಲ್ಲಿ ಗಮನಹರಿಸಬೇಕಾದ ಮತ್ತೊಂದು ಮಹತ್ವದ ಸಂಗತಿಯೆಂದರೆ ಬರಹದ ಇತಿಹಾಸ ನಿರ್ಲಕ್ಷಿಸಿದ ಅನೇಕ ಐತಿಹಾಸಿಕ ಘಟನೆಗಳನ್ನು ಮೌಖಿಕ ಪರಂಪರೆ ದಾಖಲಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಾಗಾಗಿಯೇ ಪ್ರಧಾನ ಧಾರೆಯ ಇತಿಹಾಸ ಮದಕರಿನಾಯಕ, ಕಿತ್ತೂರು ರಾಣಿಚೆನ್ನಮ್ಮ, ಕೃಷ್ಣದೇವರಾಯ ಮೊದಲಾದ ದೊಡ್ಡವರೆಂದು ಕರೆದುಕೊಂಡವರ ವಿವರಗಳನ್ನು ಒದಗಿಸಿದರೆ, ಇಂತಹ ಹಿರಿಯರಿಗೆ ಬೆನ್ನೆಲುಬಾಗಿ ನಿಂತ ಗಾದ್ರಿಪಾಲನಾಯಕ, ಸಂಗೊಳ್ಳಿರಾಯಣ್ಣ, ಕುಮಾರರಾಮ, ಜುಂಜಪ್ಪನಂತಹ ಶೂರರನ್ನು ಕುರಿತು ಮೌಖಿಕ ಪರಂಪರೆ ಪರಿಚಯಿಸುತ್ತದೆ. ಈ ಎಲ್ಲಾ ಸಂಗತಿಗಳ ಬಗ್ಗೆ ಆಳವಾಗಿ ಚಿಂತಿಸುವ ಅಗತ್ಯ ತುಂಬಾ ಇದೆ. ಇಂತಹ ಆಲೋಚನೆಗೆ ಮೌಖಿಕ ಪರಂಪರೆಯ ಆಧಾರದಿಂದ ರೂಪುಗೊಂಡಿರುವ ಮೌಖಿಕ ಚರಿತ್ರೆಯ ಪರಿಕಲ್ಪನೆ ಸಾಕಷ್ಟು ಇಂಬುಕೊಡುತ್ತದೆ. ಇಂಥ ಮಹತ್ವಪೂರ್ಣವಾದ ಮೌಖಿಕ ಚರಿತ್ರೆಯನ್ನು ಕಟ್ಟಿಕೊಳ್ಳುವ ತುರ್ತು ಇದೆ. ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ಕೆಲವು ವಿದ್ವಾಂಸರು ಮೌಖಿಕ ಚರಿತ್ರೆಯ ಸ್ವರೂಪಗಳನ್ನು ಗುರುತಿಸುವ ಪ್ರಯತ್ನಮಾಡಿದ್ದಾರೆ. ಅಂಥ ಒಂದೆರಡು ನಿದರ್ಶಗಳನ್ನು ಇಲ್ಲಿ ವಿವರಿಸಬಹುದು

ನಿದರ್ಶನ-೧ 
ಶರಣ ಚಳವಳಿ - ಮಂಟೆಸ್ವಾಮಿ ಕಾವ್ಯ

ಶರಣಚಳವಳಿ ೧೨ನೇ ಶತಮಾನದ ಬಹುದೊಡ್ಡ ಸಾಹಿತ್ಯಿಕ ಮತ್ತು ಸಾಮಾಜಿಕ ಕ್ರಾಂತಿ. ಇದರ ಬಗ್ಗೆ ಅಂದಿನಿಂದ ಇಂದಿನವರೆಗೂ ಅನೇಕಾನೇಕ ಬರೆಹದ ಇತಿಹಾಸಗಳು ದೊರೆಯುತ್ತವೆ. ಈ ಇತಿಹಾಸಗಳೆಲ್ಲ ಶರಣರು  ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದ್ದನ್ನು, ಆಗಿನ ಕಲ್ಯಾಣ ಪಟ್ಟಣದ ಆದರ್ಶ ಗುಣಲಕ್ಷಣಗಳನ್ನು  ಹಾಗೂ ಆ ಚಳುವಳಿಯ ನಾಯಕರಾದ ಬಸವಣ್ಣ ಮೊದಲಾದ ಶರಣರ ನಡುವಿನ ಅನೋನ್ಯ ಸಂಬಂಧಗಳನ್ನು ದಾಖಲಿಸಿವೆ. ಆದರೆ ಇದರ ಬಗ್ಗೆ ಮೌಖಿಕ ಕಥನಗಳಲ್ಲಿ ದೊರೆಯುವ ಮಾಹಿತಿ ತೀರಾ ಭಿನ್ನವೆನಿಸುತ್ತದೆ. ಈ ಬಗ್ಗೆ ಪ್ರಸ್ತಾಪವಿರುವ ಮೌಖಿಕ ಕಥನಗಳಲ್ಲಿ ಮಂಟೇಸ್ವಾಮಿ ಜನಪದ ಮಹಾಕಾವ್ಯ ಗಮನಾರ್ಹವಾದುದು. ಆ ಕಾವ್ಯದಲ್ಲಿ ಬರುವ ವಿವರಗಳನ್ನು ಮುಂದಿನಂತೆ ಸಂಗ್ರಹಿಸಬಹುದು.  
ಮಂಟೇಸ್ವಾಮಿ ೧೨ನೇ ಶತಮಾನದಲ್ಲಿದ್ದ ಕೆಳವರ್ಗದ ಶಿವಶರಣ. ಬಸವಣ್ಣನ ಕಾಲದಲ್ಲೇ ಉಳುಕಾಗಿದ್ದ ಕಲ್ಯಾಣ ಪಟ್ಟಣದ ಶರಣ ಸಮೂಹವನ್ನು ತಿದ್ದಿ ಸರಿಪಡಿಸಲು ಕಲ್ಯಾಣ ಪಟ್ಟಣಕ್ಕೆ ಈತ ಹೊರಡುತ್ತಾನೆ. ಕಲ್ಯಾಣದಲ್ಲಿ ದಾಸೋಹಕ್ಕೆ ಮೊದಲು ಶುಭ್ರವಾಗಿರುವ ಮಹತ್ಮರು, ಶರಣರನ್ನು ಬಿಡು ಅನಂತರ ರೋಗಿ, ಭಿಕ್ಷುಕರನ್ನು ಬಿಡಬೇಕೆಂದು ಬಸವಣ್ಣನ ಆಜ್ಞೆಯಾಗಿರುತ್ತದೆ. ಇದನ್ನು ಮನಗಂಡ ಮಂಟೇಸ್ವಾಮಿ ಕುಷ್ಠರೋಗಿಯ ವೇಷಧಾರಿಯಾಗಿ ಕಲ್ಯಾಣ ಪಟ್ಟಣದ ಬಾಗಿಲಿಗೆ ಬರುತ್ತಾನೆ. ಬಾಗಿಲಲ್ಲಿದ್ದ ಕಟುಗರ ಸಂಗಯ್ಯ ಎನ್ನುವ ವ್ಯಕ್ತಿ ಮಂಟೇಸ್ವಾಮಿಯನ್ನು ತಡೆದು ನಿಲ್ಲಿಸುತ್ತಾನೆ. ಇದರಿಂದ ಕೋಪಗೊಂಡ ಮಂಟೇಸ್ವಾಮಿ ಬಸವಣ್ಣ ಮತ್ತು ನೀಲಾಂಬಿಕೆಯರಿಗೆ ಜ್ಞಾನೋದಯ ಮಾಡಿಸಿ, ಬಾಗಿಲಿಗೆ ನಮಗಿಂತ ಬಹುದೊಡ್ಡ ಶರಣ ಬಂದಿದ್ದಾನೆಂದು ತಿಳಿಯುವಂತೆ ಮಾಡುತ್ತಾನೆ. ಈ ವಿಷಯ ತಿಳಿದ ಬಸವಣ್ಣ-ನೀಲಾಂಬಿಕೆ ಅವರು ಬಾಗಿಲಿಗೆ ದಾವಿಸುತ್ತಾರೆ. ಅಷ್ಟೊತ್ತಿಗಾಗಲೇ ಮಂಟೇಸ್ವಾಮಿ ಹರಳಯ್ಯನ ತಿಪ್ಪೇಗುಂಡಿಯಲ್ಲಿ ಬಿದ್ದಿರುತ್ತಾನೆ. ಅದನ್ನು ಕಂಡ ಬಸವ ದಂಪತಿಗಳು ಸ್ವಾಮಿಯನ್ನು ಕೈ ಹಿಡಿದೆತ್ತಲು ಕೈ, ಕಾಲಿಡಿದೆತ್ತಲು ಕಾಲು, ರುಂಡವಿಡಿದೆತ್ತಲು ರುಂಡ ಕಿತ್ತು ಬರುತ್ತವೆ. ಅವುಗಳನ್ನೆಲ್ಲಾ ಪೊಟ್ಟಣ ರೀತಿ ಕಟ್ಟಿ ಹೊತ್ತು ತರುತ್ತಾರೆ. ಸ್ವಾಮಿಯ ಪವಾಡ ಪರಿಣಾಮದಿಂದ ಅವರು ಹೊತ್ತು ತರುವ ಆ ದೇಹದ ಭಾಗಗಳು ನೋಡುವ ಶರಣರಿಗೆ ಹೆಂಡದ ಗಡಿಗೆ, ಮಾಂಸದ ಪೊಟ್ಟಣದ ರೀತಿ ಕಾಣಲಾರಂಭಿಸುತ್ತವೆ. ಇಂತಹ ದೃಶ್ಯವನ್ನು ನೋಡಿದ ಕಲ್ಯಾಣದ ಮೇಲ್ವರ್ಗದ ಶರಣರು ನಾವು ಮತ್ತು ನಮ್ಮ ಲಿಂಗ ಬತ್ತಗೆಟ್ಟಂತಾಯಿತು ಎಂದು ಕಲ್ಯಾಣದಿಂದ ಓಡುತ್ತಾರೆ. ದಲಿತ ಶರಣರು ಮಾತ್ರ ಅಲ್ಲೇ ಇದ್ದರು. ಆಗ ಸ್ವಾಮಿ ಬಸವಣ್ಣನಿಗೆ ಬುದ್ಧಿವಾದ ಹೇಳುತ್ತಾ ನಿಜವಾದ ಶರಣರೆಂದರೆ ಇವರು (ದಲಿತರು). ಓಡಿ ಹೋದವರೆಲ್ಲ ಕಳ್ಳ ಜಂಗಮರು. ಉಳಿದವರನ್ನೇ ಶರಣರೆಂದು ನಂಬಿ ಗುರುಮಠ ಬೆಳೆಸು ಎನ್ನುವ ಮಾತುಗಳನ್ನು ಹೇಳುತ್ತಾನೆ. 
ಈ ಮೇಲಿನ ಸಾರಾಂಶ ಲಿಖಿತ ಇತಿಹಾಸಕ್ಕಿಂತ ವಿರುದ್ಧವಾದ, ಅಥವಾ ಅಲ್ಲಿ ದೊರೆಯದ ಅನೇಕ ಸತ್ಯಾಂಶಗಳನ್ನು ಹೊರಗೆಡಹುತ್ತಿದೆ. ಬಸವಣ್ಣ ಸಮಾನತೆಯ ಒಳಗೇನೆ ಎಂತಹ ಧ್ವಂಧ್ವಾತ್ಮಕವಾಗಿದ್ದ. ಹಾಗೆಯೇ ಎಂಥ ವೇಷಧಾರಿ ಜಂಗಮರು ಕಲ್ಯಾಣದಲ್ಲಿದ್ದರು, ಶಿವಶರಣರಲ್ಲಿದ್ದ ತಾರತಮ್ಯ ಮನೋಭಾವ ಯಾವ ತೆರನಾದುದು ಎನ್ನುವ ವಿಷಯಗಳನ್ನು ತಿಳಿಸುತ್ತಿದೆ. ಶಿವಶರಣರ ಈ ಜಾತಿ ತಾರತಮ್ಯ ನೀತಿಯಿಂದಾಗಿ ಕೆಳವರ್ಗದ ಶಿವಶರಣರಿಗೆ ಸರಿಯಾದ ಸ್ಥಾನ ಸಿಕ್ಕದೇ ಇದ್ದ ಕಾರಣದಿಂದಾಗಿ ತುಂಬಾ ಪ್ರಜ್ಞಾವಂತರಾದ ಮಂಟೇಸ್ವಾಮಿಯಂತಹ ಶರಣರು ಬಸವಣ್ಣನೂ ಸೇರಿದಂತೆ ಮೇಲ್ವರ್ಗದ ಶರಣರ ವಿರುದ್ಧ ದಂಗೆಯೆದ್ದು ಪರಿಸ್ಥಿತಿ ಸುಧಾರಿಸಿದ ಈ ಅಂಶ ಬಹುಶಃ ಬರಹದ ಮೂಲಕ ದಾಖಲಾಗುತ್ತ ಬಂದಿರುವ ಯಾವ ಇತಿಹಾಸದಲ್ಲೂ ಸಿಗಲಾರದು. ಆದ್ದರಿಂದಲೇ ಜಾನಪದ ಮತ್ತು ಇತಿಹಾಸದ ಸಂಬಂಧಗಳನ್ನು ಹೇಳುವಾಗ ’ಇತಿಹಾಸ ಎಲ್ಲಿ ಸೋಲುತ್ತದೆಯೋ ಅಲ್ಲಿ ಜಾನಪದ ನೆರವಿಗೆ ಬರುತ್ತದೆ’ ಎನ್ನುವ ವಿದ್ವಾಂಸರ ಮಾತು ಸತ್ಯಕ್ಕೆ ಹತ್ತಿರವಾದುದು. ಒಂದು ಕಾಲದ ವಸ್ತುನಿಷ್ಟ ಇತಿಹಾಸವನ್ನು ತಿಳಿಯಬೇಕಾದರೆ ಬರಹದ ಇತಿಹಾಸದ ಜೊತೆಗೆ ಅದೇ ಕಾಲದಲ್ಲಿ ರಚನೆಯಾದ ಮೌಖಿಕ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಏಕಪಕ್ಷಿಯ ನಿಲುವುಗಳು ಮಾತ್ರ ತಿಳಿಯುತ್ತವೆ. ಈವರೆಗೂ ರಚನೆಯಾಗಿರುವ ಇತಿಹಾಸಗಳ ರಚನೆಯೇ ಇದಕ್ಕೆ ಸಾಕ್ಷಿ. ಬಸವಣ್ಣ ಎಲ್ಲಾ ಶರಣರನ್ನು ತಿದ್ದಿ ಬೆಳಿಸಿದ ಸುದ್ದಿ ನೀಡುವ ಇತಿಹಾಸ ಎಂದೂ ಕೂಡ ದಲಿತ ಶರಣನೊಬ್ಬ ಬಸವಣ್ಣನನ್ನು ತಿದ್ದಿದ ಸುದ್ದಿಯನ್ನು ನೀಡಲಾರದು. ಅಂತಹ ಅದ್ಭುತ ಕೆಲಸ ಮೌಖಿಕ ಇತಿಹಾಸದಿಂದಲೇ ಸಾಧ್ಯ. ಇದನ್ನು ಮನಗಂಡಿರುವ ಅನೇಕ ಇತಿಹಾಸಕಾರರು ಮೌಖಿಕ ಚರಿತ್ರೆಯ ಕಡೆಗೆ ಗಮನ ನೀಡಿರುವುದು ಸ್ವಾಗತಾರ್ಹ. 
ಮೌಖಿಕ ಇತಿಹಾಸ, ಇತಿಹಾಸ ರಚನೆಗೆ ತುಂಬಾ ಸಹಕಾರಿ, ಅನಿವಾರ್‍ಯ ಕೂಡ ಎಂಬುದು ಸತ್ಯ. ಆದರೆ ಮೌಖಿಕ ಇತಿಹಾಸವನ್ನು ಇತಿಹಾಸ ರಚನೆಗೆ ಬಳಸಿಕೊಳ್ಳುವ ವಿದ್ವಾಂಸ ತುಂಬಾ ಪ್ರಜ್ಞಾವಂತನಿರಬೇಕು. ಕಾರಣ ಮೌಖಿಕ ಇತಿಹಾಸದಲ್ಲಿ ಅನೇಕ ಘಟನೆಗಳು ಐತಿಹ್ಯ-ಪುರಾಣಗಳಾಗಿ ಮಾರ್ಪಾಟಾಗಿರುತ್ತವೆ. ಈ ಐತಿಹ್ಯ-ಪುರಾಣಗಳಿಂದ ಐತಿಹಾಸಿಕ ಅಂಶಗಳನ್ನು ಬಿಡಿಸಿಕೊಳ್ಳುವ ಕ್ರಿಯೆ ತುಂಬಾ ಕಷ್ಟಕರ. ಆದ್ದರಿಂದ ಮೌಖಿಕ ಇತಿಹಾಸ ವಸ್ತುನಿಷ್ಟ ಇತಿಹಾಸದ ರಚನೆಗೆ ತುಂಬಾ ಸಹಕಾರಿ, ವಿದ್ವಾಂಸ ಮೌಖಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳುವಾಗ ಸ್ವಲ್ಪ ಎಡವಿದ್ದೇ ಆದಲ್ಲಿ ಅಷ್ಟೇ ಅಪಾಯಕಾರಿ. 
ನಿದರ್ಶನ-೨ 
ಭಗೀರತಿ - ಬಂದಮ್ಮ
ಕೆರೆಗೆಹಾರ ಕನ್ನಡದ ಜನಪ್ರಿಯ ಕಥನಗೀತೆ. ಇದರ ಪಾಠಾಂತರಗಳು ಕನ್ನಡ ನಾಡಿನಲ್ಲಿ ಅಷ್ಟೇ ಅಲ್ಲದೆ ನೆರೆಯ ಆಂದ್ರದಲ್ಲಿಯೂ ಸಿಗುತ್ತವೆ. ಈ ಕಥನಗೀತೆಯ ಬರೆಹದ ಪಾಠಾಂತರದಲ್ಲಿ ಸಮಾಜದ ಒಂದು ವರ್ಗದ ಉದಾರತೆ ಹಾಗೂ ತ್ಯಾಗ ಮನೋಭಾವಗಳನ್ನು ಬಿಂಬಿಸಲಾಗಿದೆ. ಇದರ ಕಥೆಯನ್ನು ಹೀಗೆ ಸಂಗ್ರಹಿಸಬಹುದು : ಕಲ್ಲನಕೇರಿ ಮಲ್ಲನಗೌಡ ಕೆರೆಯೊಂದು ಕಟ್ಟಿಸುತ್ತಾನೆ. ಕೆರೆಯಲ್ಲಿ ಸೆರೆಮುಕ್ಕ ನೀರಿಲ್ಲ . ಅದಕ್ಕೆ ಗೌಡ ಹೊತ್ತಿಗೆ ತೆಗೆಸುತ್ತಾನೆ. ಅದರಲ್ಲಿ ಗೌಡನ ಹಿರಿಸೊಸೆಯನ್ನು ಬಲಿಕೊಡಬೇಕೆಂದು ಹೇಳುತ್ತದೆ. ಇದರಿಂದ ಚಿಂತೆಗೊಳಗಾದ ಗೌಡ ಹಿರಿಸೊಸೆಯನ್ನು ಬಲಿಕೊಟ್ಟರೆ ತನ್ನ ವಂಶದ ನಾಶವಾಗುತ್ತದೆ ಎಂದು ಭಾವಿಸುತ್ತಾನೆ. ಕೊನೆಗೆ ತನ್ನ ಕಿರಿಸೊಸೆ ಭಗೀರತಿಯನ್ನು ಬಲಿಕೊಡಲು ತೀರ್ಮಾನಿಸುತ್ತಾನೆ. ಸೊಸೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಬಲಿಯಾಗುತ್ತಾಳೆ. ಇದರಿಂದ ಕೆರೆಗೆ ನೀರುಬರುತ್ತದೆ. ಈ ಕಥೆಗೆ ಅನೇಕ ಪ್ರತಿವಾದಗಳನ್ನು ಒಡ್ಡುವ ಮೂಖಿಕ ರೂಪದ ಪಾಠಾಂತರಗಳು ದೊರೆಯುತ್ತವೆ. ಅಂತಹ ಒಂದು ವಿಶಿಷ್ಟ ಪಾಠಾಂತರದ ಬಗ್ಗೆ ಗಂಭೀರವಾದ ಅಧ್ಯಯನಮಾಡಿರುವ ಎಸ್.ಆರ್. ಗುರುನಾಥ ಅವರು ’ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ’ ಎನ್ನುವ ಪುಸ್ತಕ ಪ್ರಕಟಿಸಿದ್ದು ಅದರಲ್ಲಿ ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕರ್ನಾಟಕವೂ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಊರಿನ ಗೌಡರು / ಪಟೇಲರು ಕೆರೆ ಕಟ್ಟೆಗಳನ್ನು, ಕೋಟೆ ಕೊತ್ತಲಗಳನ್ನು ಕಟ್ಟಿಸುವುದು, ಅವುಗಳು ಸುಭದ್ರವಾಗಿ ನಿಲ್ಲದೇ ಇರುವುದು, ಅದಕ್ಕೆ ಹೊತ್ತಗೆ ತೆಗೆಸುವುದು, ಅದರಲ್ಲಿ ಗೌಡನ / ಪಟೇಲನ ಸೊಸೆಯನ್ನು ಬಲಿಕೊಡಬೇಕೆಂದು ಬರುವುದು, ಕೊನೆಗೆ ಬಲಿ ಕೊಡುವುದು, ನಂತರ ಕೆರೆ ಕಟ್ಟೆ, ಕೋಟೆ ಕೊತ್ತಲುಗಳು ಸುಸೂತ್ರವಾಗುವುದು. ತೀರಾ ಸಾಮಾನ್ಯ ಕಥೆ. ಈ ಸಂದರ್ಭಗಳಲ್ಲಿ ಗೌಡ ನಿಜವಾಗಿ ತನ್ನ ಸೊಸೆಯನ್ನು ಬಲಿಕೊಟ್ಟನೇ? ಎಂಬುದು ಎಲ್ಲರಿಗೂ ಪ್ರಶ್ನೆಯಾಗಿತ್ತು. ಇದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಆಧಾರಗಳ ಕೊರತೆ ಇತ್ತು. ಗುರುನಾಥ್ ಅವರು ಅಂಥ ಪ್ರಶ್ನೆಗಳು ಅನುಮಾನಗಳು ಸರಿಯಾಗಿಯೇ ಇವೆ ಎಂಬುದನ್ನು ತಮ್ಮ ಅಧ್ಯಯನದುದ್ದಕ್ಕೂ ಸ್ಪಷ್ಟ ಆಧಾರಗಳೊಂದಿಗೆ ಸಾಬೀತುಮಾಡಿದ್ದಾರೆ. 
ಎಸ್.ಆರ್.ಗುರುನಾಥ್ ಅವರ ಅಧ್ಯಯನದಲ್ಲಿ ತಿಳಿದುಬರುವ ಸಂಗತಿಗಳೆಂದರೆ : ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಒಂದು ಗ್ರಾಮ. ಅದರ ಹೆಸರು ’ಎರಡು ಕೆರೆ’. ಈ ಗ್ರಾಮದ ಗೌಡ ಮರಿಗೌಡ ಅಂತ. ಈತ ಕಟ್ಟಿಸಿದ ಕೆರೆಯೊಂದಕ್ಕೆ ತನ್ನ ಸೊಸೆಯನ್ನು ಬಲಿಕೊಡಬೇಕಾದ ಪ್ರಸಂಗ ಬಂತು. ಇದು ಗೌಡರನ್ನು ಚಿಂತೆಗೀಡುಮಾಡಿತು. ಹಾಗಾಗಿ ಈ ಸಂಬಂಧ ಶಾನುಭೋಗರ ಸಲಹೆ ಕೇಳಿದ. ಶಾನುಭೋಗ ನೀಡಿದ ಸಲಹೆ ಹೀಗಿತ್ತು. ಗೌಡರ ಮನೆಯಲ್ಲಿ ’ತಿಮ್ಮ’ ಅನ್ನುವ ಒಬ್ಬ ಜೀತದಾಳು ಇದ್ದ. ಅವನು ಗೌಡನನ್ನು ಅಪ್ಪ ಎಂದೇ ಕರೆಯುತಿದ್ದ. ಇದನ್ನು ಅರಿತಿದ್ದ ಶಾನುಭೋಗರು ತಿಮ್ಮ ಹೇಗಿದ್ದರೂ ನಿಮ್ಮ ಮಗನಂತಲ್ಲವೇ? ಹಾಗಾದರೆ ಅವನ ಹೆಂಡತಿಯು ನಿಮ್ಮ ಸೊಸೆಯೇ. ಅವಳನ್ನೇ ಬಲಿಕೊಡಿ ಎಂದರು. ಇದು ಗೌಡರಿಗೂ ಹೌದೆನಿಸಿತು. ಪರಿಣಾಮ ತಿಮ್ಮನ ಹೆಂಡತಿ ತುಂಬ ಬಸುರಿಯಾಗಿದ್ದರೂ ಬಲಿ ಕೊಡಲಾಯಿತು. ನಂತರ ದಿನಗಳಲ್ಲಿ ಬಂದಮ್ಮನ ಬಲಿಯನ್ನು ತ್ಯಾಗ ಎಂದು ಬಣ್ಣಿಸಲಾಯಿತು. ಬಂದಮ್ಮನ ಹಾಡು ಕೂಡ ಸೃಷ್ಟಿಯಾಯಿತು. ಆದರೆ ಈ ಹಾಡು ತುಂಬಾ ದಿನ ಆ ಊರಿನ ಜನರ ಬಾಯಲ್ಲಿ ಉಳಿಯಲೇ ಇಲ್ಲ. ಬಂದಮ್ಮನ ಬದಲಿಗೆ ಭಗೀರಥಿ ಬಂದಳು. 
ಇದಿಷ್ಟು ಇತಿಹಾಸವನ್ನು ಲೇಖಕರು ಅತೀ ಶ್ರದ್ಧೆ ಹಾಗೂ ಶ್ರಮದಿಂದ ಶೋಧಿಸಿದ್ದಾರೆ. ಪ್ರಸ್ತುತ ಘಟನೆಗಳು ನಮ್ಮನ್ನು ದಿಘ್ಮೂಢರನ್ನಾಗಿಸುತ್ತವೆ. ಏಕೆಂದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಿಮ್ಮನಂತಹವರನ್ನು ಎಂದಿಗೂ ತನ್ನ ಸಂಬಂಧಿ ಎಂಬುದಾಗಿ ಭಾವಿಸಲಾರದ ವ್ಯವಸ್ಥೆಯೊಂದು ತನಗೆ ಬಂದ ಕಷ್ಟದಿಂದ ಪಾರಾಗಲು ಅತ್ಯಂತ ಸುಲಭವಾಗಿ ಸಂಬಂಧವನ್ನು ಆಗು ಮಾಡಿ ತಿಮ್ಮನ ಹೆಂಡತಿಯಂತಹ ಅಮಾಯಕರನ್ನು ಬಲಿ ನೀಡಿದ್ದು. ಹಾಗೇನೆ ಬಲಿಯಾದ ಹೆಣ್ಣನ್ನು ಸ್ಮರಿಸುವ ಹಾಡುಗಳು ಕಾಲಾನಂತರ ಮೇಲ್ವರ್ಗದ ಹಿತಕ್ಕೆ ಬಲಿಬಿದ್ದು ಕಾಲ್ಪನಿಕ ಭಗೀರಥ ಬಂದದ್ದು. ಪ್ರಸ್ತುತ ಸಂಗತಿಗಳು ನಮ್ಮನ್ನು ವಿವಿಧ ಚಿಂತನೆಗಳಿಗೆ ಪ್ರೇರೇಪಿಸುತ್ತವೆ. ಅಲಕ್ಷಿತ ಅಧ್ಯಯನಗಳು ಎತ್ತಿಕೊಂಡ ಗೌಡ ತನ್ನ ಸ್ವಂತ ಸೊಸೆಯನ್ನು ನಿಜವಾಗಿ ಬಲಿಗೊಟ್ಟನೆ? ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಒಂದು ಕಡೆ. ಮತ್ತೊಂದು ಕಡೆ ಮೌಖಿಕ ಅಭಿವ್ಯಕ್ತಿಗಳು ಆಳುವವರ್ಗ ಎಸಗುವ ಲೋಪಗಳನ್ನು ಮೀರಿ ಕೆಳವರ್ಗಗಳ ಪರವಾಗಿ ನಿಲ್ಲುತ್ತವೆ ಎಂಬ ವಾದಕ್ಕೆ ಪ್ರತಿಯಾಗಿ ಅವೂ ಕೂಡ ಮೇಲ್ವರ್ಗದ ಆಶಯಗಳಿಗೆ ಹೊಂದಿಕೊಳ್ಳುವುದು ವಿಚಿತ್ರವಾಗಿದೆ. 
ಮೇಲಿನ ಎರಡು ನಿದರ್ಶನಗಳನ್ನು ನೋಡಿದ ಮೇಲೆ ಇತಿಹಾಸ ರಚನಾಕಾರರು ತಪ್ಪದೇ ಮೌಖಿಕ ಆಕರಗಳ ಕಡೆ ಮುಖ ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ. ಒಂದು ಕಾಲದ ಘಟನೆಯ ಇತಿಹಾಸ ಪರಿಪೂರ್ಣವಾಗಬೇಕಾದರೆ ರಾಜರ ನೆರಳಿನ ಬರೆಹದ ಆಕರಗಳ ಜೊತೆಗೆ ಜನ ಸಾಮಾನ್ಯರ ಬಾಯಿಮಾತಿನ ಆಕರಗಳು ಕೂಡ ಪರಿಗಣಿತವಾಗಬೇಕಿದೆ. ಆದರೆ ಹೀಗೆ ಮೌಖಿಕ ಆಕರಗಳ ಮೂಲಕ ಚರಿತ್ರೆಯನ್ನು  ಕಟ್ಟುವ ಕೆಲಸ ಅತ್ಯಂತ ಸವಾಲಿನ ವಿಷಯ. ಇಲ್ಲಿ ಹತ್ತು ಹಲವು ತೊಡಕುಗಳು ಎದುರಾಗುತ್ತವೆ. ಅಂತಹವುಗಳಲ್ಲಿ ಜಾನಪದಕ್ಕೆ ಸಹಜವಾಗಿ ಅಂಟಿಕೊಂಡಿರುವ ಅತಿಮಾನುಷತೆಯನ್ನು ಕಳಚುವುದು, ಇತಿಹಾಸಕಾರರು ಜಾನಪದ ವಿದ್ವಾಂಸರು ಅನುಸಂಧಾನ ಮಾಡಿಕೊಳ್ಳಬೇಕಾಗಿರುವುದು, ಇನ್ನೂ ಮೊದಲಾದವು. ಅಂತೂ ಇಂತಹ ಮಹತ್ವದ ಕಾರ್‍ಯವನ್ನು ಗಂಭೀರವಾಗಿ ತೆಗೆದುಕೊಂಡು ಪರಂಪರಾಗತ ಚರಿತ್ರೆಗೆ ಒಂದು ಹೊಸ ಆಯಾಮ ನೀಡಬೇಕಾಗಿದೆ.

ಪರಾಮರ್ಶನ ಗ್ರಂಥಗಳು
೧. ಕಾಳಿಂಗರಾಯನ ಕಾವ್ಯ, ಹೆಚ್.ವಿ. ನಾಗೇಶ್ (ಸಂ), ಕನ್ನಡ ವಿಶ್ವವಿದ್ಯಾನಿಲಯ, ಹಂಪಿ. ೧೯೯೮
೨. ಮರದೊಳಗಣ ಕಿಚ್ಚು, ರಹಮತ್ ತರೀಕೆರೆ, ಬೆಳ್ಳಿಚುಕ್ಕಿ ಟ್ರಸ್ಟ್, ಬೆಂಗಳೂರು. ೨೦೦೨
೩. ಮಂಟೇಸ್ವಾಮಿ (ಸಂ), ಹೊ.ಚಿ. ಬೋರಲಿಂಗಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ ಹಂಪಿ.೧೯೯೭
೪. ಕೂಡುಕಟ್ಟು, ಪುರುಷೋತ್ತಮ ಬಿಳಿಮಲೆ, ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ,೧೯೯೭
೫. ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ,೨೦೦೦
೬. ಅವ್ಯಕ್ತ ಚರಿತ್ರೆ, ಮೊಗಳ್ಳಿ ಗಣೇಶ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.೨೦೦೯
೭. ಸ್ಥಳೀಯ ಚರಿತ್ರೆ ಅಧ್ಯಯನದ ತಾತ್ವಿಕತೆ ಮತ್ತು ಸ್ವರೂಪ, ಸಂ:ಲಕ್ಷ್ಮಣ ತೆಲಗಾವಿ, ೨೦೦೩,ಪ್ರಸಾರಾಂಗ, ಕನ್ನಡ         ವಿಶ್ವವಿದ್ಯಾನಿಲಯ ಹಂಪಿ.
೮. ಜಾನಪದ ಸಂಕಥನ, ಎಸ್.ಎಂ. ಮುತ್ತಯ್ಯ, ಅಕ್ಷಯ ಪ್ರಕಾಶನ, ಚಿತ್ರದುರ್ಗ,೨೦೦೭
೯. ಲಿಖಿತ ಅಲಿಖಿತ, ಎಸ್.ಎಂ. ಮುತ್ತಯ್ಯ, ಸೃಷ್ಟಿಪ್ರಕಾಶನ, ಬೆಂಗಳೂರು, ೨೦೦೫


ಡಾ. ಎಸ್.ಎಂ. ಮುತ್ತಯ್ಯ 

ಜನಪದರ ದೈವ ಕಲ್ಪನೆ

         ಇಂದಿನ ಸಮಾಜದಲ್ಲಿ ದೇವರ ಸಂಬಂಧದ ವಿಷಯಗಳು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಆದಿಮಾನವನ ದೇವರ ಸೃಷ್ಟಿಯ ಹಿಂದಿರುವ ಮಾನವಪರವಾದ ಆಲೋಚನೆಗಳಲ್ಲಿ ಗಂಭೀರವಾದ ಪಲ್ಲಟಗಳಾಗಿರುವುದು. ಇದಕ್ಕೆ ಪ್ರಮುಖ ಕಾರಣವಾಗಿದೆ. ದೇವರು ಮನುಷ್ಯನನ್ನು ಕಾಪಾಡುವ ಮುಖ್ಯ ಉದ್ದೇಶದಿಂದ ಹುಟಿದ್ದು. ಆದರೆ ಕಾಲಾನಂತರ ಮನುಷ್ಯರೇ ದೇವರನ್ನು ರಕ್ಷಿಸಬೇಕಾದ ದುರಂತ ಒದಗಿದೆ. ಇಂಥ ಸಂದರ್ಭದಲ್ಲಿ ದೇವರ ಸೃಷ್ಟಿಯ ಆರಂಭಿಕ ಉದ್ದೇಶ ಹಾಗೂ ಸ್ವರೂಪಗಳನ್ನು ತಿಳಿಯುವ ಅಗತ್ಯತೆ ಇಂದು ಅನಿವಾರ್ಯವಾಗಿದೆ. ಈ ಉದ್ದೇಶದಿಂದ ದೇವರ ಆರಂಭಿಕ ಸ್ಥಿತಿಯನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ಇವರ ಧರ್‍ಮಕ್ಕೆ ಒಬ್ಬ ಸಂಸ್ಥಾಪಕನಾಗಲಿ, ಒಂದು ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಜನಪದ ಲೋಕದಲ್ಲಿ ಪ್ರಕೃತಿಯೇ ಪ್ರಧಾನ ದೈವ . ಹಾಗೇಯೇ ತಮ್ಮ ಸಮಾಜ - ಸಂಸ್ಕೃತಿ ಉದ್ಧಾರಕ್ಕೆ ದುಡಿದ ನಾಯಕರೇ ನಿಜವಾದ ದೇವರುಗಳು. ಇನ್ನೂ ಕೂತೂಹಲದ ಸಂಗತಿಯೆಂದರೆ ತಮ್ಮ ಬದುಕಿಗೆ ಸಹಾಯವಾಗಿ ಬಂದ ಎಲ್ಲಾ ವಸ್ತು ವಿಷಯಗಳೂ ದೇವರುಗಳೇ. ಈ ಕಾರಣಕ್ಕಾಗಿ ಜನಪದರ ದೈವ ಸಮೂಹ ಅಗಣಿತವಾದದು. ಇಷ್ಟೆಲ್ಲ ದೊಡ್ಡ ಸಮೂಹವಿದ್ದರೂ ಯಾವ ದೇವರು ತನ್ನ ಭಕ್ತರಲ್ಲಿ ಪರಸ್ಪರ ಸಂಘರ್ಷಗಳನ್ನು ಉಂಟುಮಾಡಿಲ್ಲ. ಭಕ್ತರಿಗೆ ಯಾವುದೇ ಆಮಿಷವೊಡ್ಡಿಲ್ಲ. ಅತ್ಯಂತ ಮಾನವೀಯ ವಾತವರಣದೊಂದಿಗೆ ಬದುಕುವ ಸಂದರ್ಭಗಳನ್ನು ಸೃಷ್ಟಿಸಿವೆ. 

        ನಮ್ಮ ಸಮಕಾಲೀನ ಸಂದರ್ಭದಲ್ಲಿ ಪ್ರಚಲಿತವಿರುವ ದೈವ ಕಲ್ಪನೆಗಳನ್ನು ಕಂಡರೆ ಯಾರಿಗಾದರೂ ಬೇಸರವೆನಿಸುತ್ತದೆ. ವೈದಿಕ ಪರಂಪರೆಯ ದೈವಗಳು ಪಾರಂಪರಿಕ ದೈವಗಳ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದಾಳಿಗಳ ಕಾರಣದಿಂದ ಇಂದು ದೇವರ ಹೆಸರಲ್ಲಿ ಹೊಟ್ಟೆಹೊರೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಇಂಥವರಿಂದ ಭಕ್ತರ ಶೋಷಣೆ ಹೆಚ್ಚು ಹೆಚ್ಚು ನಡೆದಿದೆ. ಆಧುನಿಕ ಸಮಾಜದ ವಿಜ್ಞಾನದ ವಿಚಾರಗಳು ದೈವ ಕಲ್ಪನೆಯನ್ನು ಸಡಿಲಗೊಳಿಸಿದರ ಪರಿಣಾಮ ಇದರ ಫಲ ಪಡೆದ ಜನ ದೈವಗಳನ್ನೆ ಶೋಷಿಸುವ ಮಟ್ಟಕ್ಕಿಳಿದ್ದಿದ್ದಾರೆ. ದೇವರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದೇವಾಲಯ ಹಾಗೂ ಮಠಗಳು ಕೂಡ ಹಣ-ಆಸ್ತಿ ಗಳಿಕೆಯಲ್ಲಿ ಪೈಪೋಟಿ ನಡೆಸುತ್ತಿರುವುದು ನಮ್ಮ ಕಾಲದ ದುರಂತ. ಇಂಥ ಸಂದರ್ಭದೊಳಗೆ ನಿಜವಾದ ಭಕ್ತಿಯುಳ್ಳ ಯಾರನ್ನು ಹಿಂಸಿಸದ, ನಿಜವಾದ ಮಾನವ ಪ್ರೇಮವನ್ನು ಕಾಪಿಡುವ ಜನಪದರ ದೈವ ವ್ಯವಸ್ಥೆ ಇಂದು ನಮ್ಮೆಲ್ಲರ ಅಗತ್ಯವಾಗಿದೆ. 
                ಪ್ರಸ್ತುತ ಸಮಾಜದ ಹಲವಾರು ಆತಂಕ ಹಾಗೂ ಸಮಸ್ಯೆಗಳಿಗೆ ಧರ್‍ಮಗಳು ಬಹುಮುಖ್ಯ ಕಾರಣವಾಗಿವೆ.  ಬರಹ ಹಾಗೂ ಉನ್ನತ ವರ್ಗಗಳಿಗೆ ಸೇರಿದ ಪ್ರಧಾನ ಧಾರೆಯ ಧರ್‍ಮಗಳು ಪಾರಂಪರಿಕವಾಗಿ ಬೆಳೆದು ಬಂದ ದುಡಿಮೆಯ ಆಧರಿತ ಸೇವಾ ವೃತ್ತಿಗಳನ್ನು ಮೂಲೆ ಗುಂಪಾಗಿಸಿವೆ. ಅಷ್ಟೇ ಅಲ್ಲದೆ ಸಮಾಜದ ಶ್ರೇಣೀಕರಣ ವ್ಯವಸ್ಥೆಯನ್ನು ಸಮರ್ಥಿಸುವ ಮೂಲಕ ಸಮಾಜದ ಸಮುದಾಯಗಳಲ್ಲಿ ಮತೀಯ ಮತ್ಸರಗಳನ್ನು ಹೆಚ್ಚಿಸಿವೆ. ಹೀಗಾಗಿಯೇ ಹಿಂದೆಂದೂ ಕಾಣದಂತಹ ಕೋಮುಗಲಭೆಗಳು ಮತ್ತು ಹಿಂಸಾಚಾರಗಳು ತಲೆ ಎತ್ತಿ ನಿಂತಿವೆ. ಚಲನಶೀಲತೆಯಿಲ್ಲದ ಈ ಕರ್ಮಠ ಧರ್‍ಮಗಳಲ್ಲಿ ಯಾವುದೇ ರೀತಿಯ ಪರಿವರ್ತನೆಯ ಮನಸ್ಸಿಲ್ಲ. ಇಂಥ ಸ್ಥಿರ ಮನೋಭಾವ ತನ್ನ ಶಕ್ತಿ-ಸಾಮರ್ಥ್ಯ ಹಾಗೂ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ಹೆಚ್ಚು ಒಲವು ತೋರುತ್ತಿದೆ. ಆ ಮೂಲಕ ಸಮಾಜದ ಶಾಂತಿಗಾಗಿ ದುಡಿಯಬೇಕಿದ್ದ ಧರ್‍ಮಗಳು ಅಶಾಂತಿಯನ್ನು ಸೃಷ್ಟಿಸುವ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾನವ ಸಮಾಜ ಶಾಂತಿಗಾಗಿ ಆತೊರೆಯುತ್ತಿದೆ. ಇವರಿಗೆ ಶಾಂತಿ ಸಿಗುವುದಾದರೂ ಎಲ್ಲಿಂದ? ಅದು ನಮ್ಮ ಪಾರಂಪರಿಕವಾದ ಚಲನಶೀಲ ಜನಪದ ಸಂಸ್ಕೃತಿಯೊಳಗಿನ ಧರ್‍ಮಗಳಿಂದ ಮಾತ್ರ ಸಾಧ್ಯವೆಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ. 
ಜನಪದ ಧರ್ಮ ಮತ್ತು ದೇವರು
            ಜನಪದ ಸಮಾಜಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ದೇಹ ಪ್ರಧಾನ ಕಾಯಕ ಮೌಲ್ಯವನ್ನು; ಸಮಷ್ಟಿಯ ಹಿತಾಸಕ್ತಿಯನ್ನು; ಭೌತಿಕ ಸಂಪತ್ತಿನ ನಿರಾಕರಣೆಯ ಭಾವನೆಯನ್ನು; ಮನುಷ್ಯನಿಗಿಂತ ಹೆಚ್ಚಾಗಿ ಪ್ರಕೃತಿ ಕೇಂದ್ರಿತ ಮನೋಭಾವನೆಯನ್ನು; ದ್ವೇಷರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು; ವ್ಯವಹಾರಿಕವಲ್ಲದ ನಿಜವಾದ ಮಾನವೀಯ ಸಂಬಂಧದ ಬಂಧುತ್ವವನ್ನು. ಇವೆಲ್ಲ ಭಾವನೆಗಳ ಮೂಸೆಯಲ್ಲಿ ಮೂಡಿ ಅನೇಕ ತಿರುವುಗಳಲ್ಲಿ ಬೆಳೆದ ಜನಪದ ಸಂಸ್ಕೃತಿಯಲ್ಲಿ ಕಂಡು ಬರುವ ದೇವರು-ಧರ್ಮದ ಸ್ವರೂಪವನ್ನು ತಿಳಿಯುವುದು ಅತ್ಯಂತ ಕೂತೂಹಲಕರ ಸಂಗತಿಯಾಗಿದೆ. ಸಂಸ್ಕೃತಿಗೂ ಧರ್‍ಮಕ್ಕೂ ನಿಕಟ ಸಂಬಂಧವಿದೆ. ಸಂಸ್ಕೃತಿಯನ್ನು ರೂಪಿಸುವಲ್ಲಿ ಧರ್‍ಮದ ಪಾತ್ರ ದೊಡ್ಡದು. ಜನಪದರ ಧರ್‍ಮಕ್ಕೆ ಒಬ್ಬ ಸಂಸ್ಥಾಪಕನಾಗಲಿ, ಒಂದು ಧರ್‍ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್‍ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್‍ಮಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಈ ಹಿನ್ನೆಲೆಯೊಳಗೆ ಕನ್ನಡ ಜನಪದ ಲೋಕದಲ್ಲಿ ಕಂಡು ಬರುವ ದೇವರ ಕಲ್ಪನೆಗಳನ್ನು ಈ ಮುಂದಿನಂತೆ ವಿವರಿಸಬಹುದು.
           ’ಜನಪದ ಧರ್ಮವು ಲಿಖಿತ ಪಠ್ಯ, ಆ ಮೂಲಕ ಏರ್ಪಟ್ಟ ತಾತ್ವಿಕ ಚಿಂತನೆಯ ಮೂಲಕ ಆಕಾರ ಪಡೆದುದ್ದಲ್ಲ. ಅದು ಬಹುಮಟ್ಟಿಗೆ ಅನುಕರಣೆ ಮತ್ತು ಆಚರಣೆಗಳಿಂದ ಹರಿದು ಬಂದಿದ್ದು, ಅತಿಮಾನುಷ ಕಲ್ಪನೆ, ಅಲೌಕಿಕ ಜೀವಿಗಳ ಆರಾಧನೆ ಹಾಗೂ ಅನೇಕ ಬಗೆಯ ಧಾರ್ಮಿಕ ನಂಬಿಕೆಗಳಿಂದ ಕೂಡಿದೆ’. ಇದರಲ್ಲಿ ಕಂಡು ಬರುವ ಆಚಾರ - ವಿಚಾರಗಳು, ನಡಾವಳಿಗಳು, ನಂಬಿಕೆಗಳು ಕಲೆಗಳು ಮತ್ತು ಹುಟ್ಟು-ಸಾವುಗಳ ಮಧ್ಯೆ ಅನುಸರಿಸಲೇ ಬೇಕಾದ ಸಂಪ್ರದಾಯಗಳು, ಜನರ ಜೀವನ ವಿಧಾನ ಮತ್ತು ಅದರ ಮನೋ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ತಾವು ಪರಿಪಾಲಿಸುವ ಧರ್ಮಗಳ ಧೇಯೋದ್ದೇಶಗಳ ಅರಿವಿಲ್ಲವಾದರೂ ತಮ್ಮ ಸುತ್ತ ನಮ್ಮನ್ನು ಕಾಪಾಡುವ ಒಂದು ಶಕ್ತಿಯಿದೆ ಎಂಬುದನ್ನು ಜನಪದರು ನಂಬುತ್ತಾರೆ. ಹೀಗಾಗಿ ಅವರು ಸೂರ್ಯ,ಚಂದ್ರ,ನೀರು,ಬೆಟ್ಟ-ಗುಡ್ಡಗಳು, ದಟ್ಟವಾದ ಕಾಡು ಎಲ್ಲವುಗಳಲ್ಲೂ ದೈವತ್ವವನ್ನು ಅರಸುತ್ತಾರೆ. ಇವುಗಳ ಒಡೆಯನೇ ಆ ಪ್ರದೇಶದಲ್ಲಿ ವಾಸವಾಗಿದ್ದು, ಕಾಯಿಲೆ ಮತ್ತು ಅನಿಷ್ಟಗಳಿಗೆ ಆತನೇ ಕಾರಣನೆಂದು ನಂಬಿ ಅವುಗಳನ್ನು ಪೂಜಿಸುತ್ತಾರೆ. ಇಂಥ ’ಸರ್ವಚೇತನವಾದ’ ವಾಸ್ತವವಾಗಿ ಜನಪದ ಧರ್ಮದ ಅಡಿಗಲ್ಲಾಗಿದೆ ಎಂದು ಹೇಳಬಹುದು. ಗಮನಿಸಬೇಕಾದ ಸಂಗತಿ ಎಂದರೆ ಜನಪದ ಸಂಸ್ಕೃತಿಯ ಧಾರ್ಮಿಕ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳಿಲ್ಲ. ಬದಲಿಗೆ ಒತ್ತಾಯದ, ಒತ್ತಡದ, ಬಲತ್ಕಾರದ ಗೇಲಿಯ ನಿಲುವಿದೆ. ಜನಪದರ ಬದುಕು ರಾಜಶಕ್ತಿಗಿಂತ ಹೆಚ್ಚಾಗಿ ಧರ್ಮ ಶಕ್ತಿಯನ್ನು ಆಧರಿಸಿದೆ. ತಮ್ಮ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವೊಂದನ್ನು ರೂಪಿಸಿಕೊಂಡ ಜನಪದರ ಕಲ್ಪನೆಯ ದೇವರು ಪ್ರತಿಷ್ಟಿತ ಶಕ್ತಿಗಿಂತಲೂ ತೀರಾ ಭಿನ್ನವಾದುದು. 
ಪ್ರಕೃತಿ  : ಆರಾಧನೆ ಮತ್ತು ಅನುಸಂಧಾನ
             ’ಪ್ರಕೃತಿ ಪೂಜೆ ಜನಪದ ಧರ್‍ಮದ ಪ್ರಧಾನ ಲಕ್ಷಣ. ತಾವು ವಾಸಿಸುವ ಭೂಮಿ, ಸಮೀಪದ ಕಡಲು, ಶಾಖ ಮತ್ತು ಬೆಳಕನ್ನು ನೀಡುವ ಸೂರ್‍ಯ-ಚಂದ್ರ, ವಿವಿಧ ಉಪಯೋಗಗಳಿಗೆ ಬರುವ ಮರ-ಗಿಡ-ಬಳ್ಳಿಗಳು ಜನಪದರ ಆರಾಧ್ಯ ದೈವಗಳು. ಜನಪದರ ಪ್ರಕೃತಿಯ ಪೂಜೆಯ ಹಿಂದೆ ಕೃತಜ್ಞತೆಯ ಭಾವನೆಯಿದೆ. ಪ್ರಕೃತಿಯನ್ನು ಅವಲಂಬಿಸಿ ಬದುಕಿದ ಮನುಷ್ಯನಿಗೆ ಅದರ ಒಡನಾಟದಲ್ಲಿ ಆದ ನೋವು -ನಲಿವು ದೈವ ಸ್ವರೂಪವನ್ನು ಕಂಡಿವೆ. ಮುಖ್ಯವಾಗಿ ಪ್ರಕೃತಿಯಲ್ಲಿನ ಭಯ ಹುಟ್ಟಿಸುವ ವಸ್ತು-ವಿಷಯಗಳನ್ನು; ವಿಸ್ಮಯ ಮೂಡಿಸಿದ ಘಟನೆಗಳನ್ನೂ ದೇವರೆಂದು ಆರಾಧಿಸಿದ ಪರಿಕ್ರಮ ಇಲ್ಲಿದೆ. ಜನಪದ ದೈವ ಕಲ್ಪನೆಯ ಚರಿತ್ರೆಯಲ್ಲಿ ಮೊದಲ ಹೆಜ್ಜೆ ಎಂದರೆ ಪ್ರಕೃತಿಯ ಭಯ-ವಿಸ್ಮಯಗಳನ್ನು ಅನುಸಂಧಾನಗೊಳಿಸಿದ ಕ್ರಮ. ಮುಖ್ಯವಾಗಿ ಪ್ರಕೃತಿಯ ಜೊತೆ ನಡೆಸಿದ - ಬೆಳೆಸಿದ ಸಂಬಂಧಗಳ ಸ್ವರೂಪದಲ್ಲಿ ಜನಪದರ ದೈವ ಕಲ್ಪನೆ ಒಡಮೂಡಿದೆ. ಪ್ರಕೃತಿಯ ಭಾಗವಾದ ಸೂರ್‍ಯ-ಚಂದ್ರ-ಭೂಮಿ-ಆಕಾಶ, ನೀರು-ಗಾಳಿ, ಮಳೆ-ಬೆಳೆ ಇವುಗಳನ್ನು ಜನಪದರು ದೇವರೆಂದು ಪೂಜಿಸಿದ್ದಾರೆ. ಅದರಲ್ಲೂ ’ಭೂಮಿ’ ಮಣ್ಣಿಗೆ ಹತ್ತಿರವಾಗಿ ಬದುಕಿದ ಜನಪದ ಸಮುದಾಯಗಳಿಗೆ ಶ್ರೇಷ್ಟ ದೈವ. ಹಾಗಾಗಿ ಜನಪದ ತ್ರಿಪದಿಯೊಂದು ಭೂಮಿ ತಾಯಿಗೆ ಎಂಥ ಸ್ಥಾನವಿದೆ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತದೆ.
                 ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ|
ಎಳ್ಳು ಜೀರಿಗೆ ಬೆಳೆವಂಥ| ಭೂಮಿ ತಾಯಿನ|
ಎದ್ದೊಂದು ಗಳಿಗೆ ನೆನೆದೇನ||
ಈ ಸಾಲುಗಳು, ಇರುವ ಅನಂತ ದೈವಗಳ ನಡುವೆ ಭೂಮಿ ತಾಯಿ ದೊಡ್ಡವಳು; ಹಾಗಾಗಿಯೇ ಅವಳಿಗೆ ಮೊದಲ ಸ್ಥಾನ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಭೂಮಿಯನ್ನು ತಾಯಿಯೆಂದು ತಿಳಿದ. ಸಮುದಾಯಗಳ ಪ್ರಜ್ಞೆ ಅನುಭವಜನ್ಯವಾದುದು. ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಭೂಮಿಯಿಂದ ಪಡೆಯುವ ಸಹಾಯವೆಷ್ಟು? ಆದರೆ ಇತ್ತೀಚಿನ ದಿನಮಾನದಲ್ಲಿ ಭೂಮಿಯ ಗರ್ಭವನ್ನು ಬಸಿದ ಆಧುನಿಕರ ಜ್ಞಾನ ಯಾಕಾಗಿ ಈ ಪರಂಪರೆಯನ್ನು ನಿಲಕ್ಷಿಸಿತು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಭೂಮಿಯಂತೆ ಸೂರ್‍ಯ, ಚಂದ್ರ, ನೀರು, ಗಾಳಿ ಮಳೆ ಮೊದಲಾದವು ಮನುಷ್ಯನ ಬದುಕಿಗೆ ಅನಿವಾರ್‍ಯ ಎಂಬುದಾಗಿ ನಂಬುವ ಅವು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಗೌರವಿಸುವ ಮನೋಭಾವದಿಂದಾಗಿ ಇವೆಲ್ಲವೂ ದೈವ ಸ್ವರೂಪಿಯಾಗಿವೆ. ಜನಪದರ ಬದುಕುಗಳಲ್ಲಿ ದೊರೆಯುವ ಪ್ರಕೃತಿ ಆರಾಧನೆಯ ಮತ್ತೊಂದು ರೂಪ ಗಿಡ-ಮರ-ಬಳ್ಳಿಗಳ ಹಾಗೂ ಪ್ರಾಣಿ ಪಕ್ಷಿಗಳ ಆರಾಧನೆ. ಇದನ್ನು ಕುಲದೇವತಾರಾಧನೆ ಪದ್ಧತಿ ಎಂದು ಕರೆಯಲಾಗಿದೆ. ಈ ಪದ್ಧತಿಯ ಅನ್ವಯ ’ಒಂದು ಸಮುದಾಯದ ಜನ ತಮ್ಮ ಕುಲದ ಮೂಲವನ್ನು ಒಂದು ಸಸ್ಯ ಅಥವಾ ಪ್ರಾಣಿಗಳಲ್ಲಿ ಆರೋಪಿಸಿಕೊಂಡು ಅವುಗಳನ್ನೇ ತಮ್ಮ ಕುಲದೇವರು ಎಂದು ಆರಾಧಿಸಿಕೊಂಡು ಬರುತ್ತಾರೆ. ತಮ್ಮ ಕುಲದೇವತೆಯ ಲಾಂಛನವಾದ ಮರ/ಸಸ್ಯವನ್ನು ಅವರು ಕಡಿಯುವುದಿಲ್ಲ ಮತ್ತು ಸುಡುವುದಿಲ್ಲ. ಪ್ರಾಣಿಯನ್ನು ಬೇಟೆಯಾಡುವುದಿಲ್ಲ ಹಾಗೂ ಆಹಾರವಾಗಿ ಸೇವಿಸುವುದಿಲ್ಲ. ಈ ಸಮುದಾಯಗಳು ಪೂಜಿಸುವ ಬನ್ನಿ, ಬೇವು, ಆಲ, ಎಕ್ಕೆ ಮೊದಲಾದವು ಕೇವಲ ಹಸಿರಲ್ಲ. ಅವುಗಳಲ್ಲಿರುವ ಔಷಧೀಯ ಗುಣವೇ ಅವುಗಳನ್ನು ಪೂಜೆಗೊಳ್ಳುವಂತೆ ಮಾಡಿದೆ. ಇಂಥಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಕರಿಸಿದಕ್ಕೆ ಪ್ರತಿಯಾಗಿ ಮೂಡಿದ ಕೃತಜ್ಞತಾ ಭಾವವೇ ಅವುಗಳ ಆರಾಧನೆಗೆ ಪ್ರಮುಖ ಕಾರಣವಾಗಿದೆ. ಈ ರೀತಿಯಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಬದುಕಿಗೆ ಅನುಕೂಲವಾಗಿ ಒದಗಿಬಂದ ವಸ್ತು-ವಿಷಯಗಳನ್ನು ಗೌರವ ಮತ್ತು ಕೃತಜ್ಞತೆ ಸೂಚಿಸುವ ಸಲುವಾಗಿ ಪೂಜಿಸಿದರೆ; ಇದೇ ಮನುಷ್ಯ ಮತ್ತೊಂದು ಕಡೆ ಪ್ರಕೃತಿಯ ವಿನಾಶಿ ರೂಪಗಳನ್ನು ಪೂಜಿಸಿದ್ದಾನೆ. ಉದಾ: ಪ್ರಕೃತಿಯಲ್ಲಿರುವ ಕ್ರೂರ ಪ್ರಾಣಿಗಳು, ವಿಷಜಂತುಗಳು; ಗುಡುಗು-ಸಿಡಿಲು ಮೊದಲಾದ ಭಯವನ್ನುಂಟು ಮಾಡುವ ಪ್ರಕೃತಿಯ ವೈಚಿತ್ರಗಳು. ಗಮನಿಸಬೇಕಾದ ಸಂಗತಿ ಎಂದರೆ ಕೃತಜ್ಞತಾ ಭಾವನೆಯ ಪೂಜಾಕ್ರಮಗಳಿಗಿಂತ ಭಯದ ಭಾವನೆಯಲ್ಲಿ ಪೂಜಿಸುವ ಪೂಜಾಮಾದರಿಗಳು ಭಿನ್ನವಾಗಿರುತ್ತವೆ. ಕೃತಜ್ಞತೆಗೆ ಎಡೆ ಮಾತ್ರ ಪ್ರಧಾನವಾದರೆ ಭಯಕ್ಕೆ ಬಲಿ ಮುಖ್ಯವಾಗುತ್ತದೆ.
ಹಿರಿಯರ ಆರಾಧನೆ : ಕುಟುಂಬ ಮತ್ತು ಕುಲ
ಜನಪದರ ದೈವ ಕಲ್ಪನೆಯಲ್ಲಿ ಹಿರಿಯರ ಆರಾಧನೆ ಮತ್ತೊಂದು ಪ್ರಮುಖ ಮಜಲು. ಕುಟುಂಬದ, ಜಾತಿಯ ಹಾಗೂ ಸಮುದಾಯದ ಉದ್ದಾರಕ್ಕೆ ದುಡಿದ ಹಿರಿಯರೇ ಇಲ್ಲಿನ ದೇವರು. ಸಾಂಸ್ಕೃತಿಕ ವೀರರು ಎನ್ನುವ ಹೆಸರಿನಲ್ಲಿ ಕರೆಯಲ್ಪಡುವ ಈ ವ್ಯಕ್ತಿಗಳು ಸಮೂಹದ ಪರವಾದ ಕೆಲಸ-ಕಾರ್‍ಯಗಳ ಮೂಲಕ ಗಮನ ಸೆಳೆದು ಪೂಜನೀಯರಾಗಿರುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಸಾವಿರಾರು ಜನ ಸಾಂಸ್ಕೃತಿಕ ವೀರರು ಬಾಳಿ ಬದುಕಿದ್ದನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಮಲೆಯಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಗಾದ್ರಿ ಪಾಲನಾಯಕ, ಕುಮಾರರಾಮ, ಸೇವಾಲಾಲ, ಎಲ್ಲಮ್ಮ, ಸಿರಿ, ಕೋಟಿಚನ್ನಯ್ಯ  ಇಂಥ ಕೆಲವೇ ಕೆಲವರು ಮಾತ್ರ ನಮ್ಮ ಲಕ್ಷ್ಯದಲ್ಲಿದ್ದಾರೆ. ಇವರಲ್ಲದೆ ಇನ್ನು ನೂರಾರು ಜನ ಸಾಂಸ್ಕೃತಿಕ ವೀರರ ಕಥನಗಳು ಮತ್ತು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಳಗೆ ಪ್ರಚಲಿತದಲ್ಲಿವೆ. ಈ ಮಟ್ಟದ ನಾಯಕರಲ್ಲದೆ ಪ್ರತೀ ಬಳಿ, ಕುಟುಂಬಕ್ಕೂ ಹಿರಿಯರ ಪರಂಪರೆ ಇದ್ದು ಅವರು ತಾತ, ತಂದೆ, ಮೊದಲಾದ ನೆಲೆಗಳಲ್ಲಿ ದುಡಿದು ಶ್ರೇಷ್ಠರಾದ ಪೂಜನೀಯರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ. ಕುಟುಂಬ ಹಾಗೂ ಸಮುದಾಯಗಳ ಹಿರಿಯನ್ನು ಪೂಜೆ ಮಾಡುವ ಕ್ರಮಗಳು ವಿಭಿನ್ನ. ಉದಾ: ಹಿರಿಯರ ಪ್ರತಿನಿಧಿಯಾಗಿ ಕಲ್ಲು, ಕೋಲು, ಮಗೆ ಮೊದಲಾದ ವಸ್ತುಗಳನ್ನು ವ್ಯಕ್ತಿಗಳೆಂದು ಪರಿಭಾವಿಸಿ ಪೂಜಿಸಲಾಗುತ್ತದೆ. ಇತ್ತೀಚೆಗೆ ಛಾಯಾಚಿತ್ರಗಳ ರೂಪದಲ್ಲಿ ಪೂಜಿಸುವ ಪದ್ಧತಿಗಳು ಚಾಲ್ತಿಗೆ ಬರುತ್ತಿವೆ. 
ಸಹಾಯಕ್ಕೆ ಬಂದ ವಸ್ತು ಪರಿಕರಗಳು
ಜನಪದ ಧರ್‍ಮದ ಆರಾಧನೆಯ ಭಾಗವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತನ್ನ ಬದುಕಿಗೆ ಸಹಕರಿಸಿದ ಸೂರ್ಯ-ಚಂದ್ರ-ಭೂಮಿ; ಭಯವನ್ನುಂಟು ಮಾಡಿದ ಹಲವಾರು ಪ್ರಕೃತಿ ವಿಕೋಪಗಳು ಇಂಥ ಮಹಾನ್ ಸಂಗತಿಗಳಲ್ಲದೆ ಕೃಷಿ ಮೊದಲಾದ ವಿವಿಧ ವೃತ್ತಿಯ ಜನ ಬಳಸುವ ಸಣ್ಣ ಸಣ್ಣ ಸಲಕರಣೆಗಳು ಕೂಡ ಪೂಜನೀಯವಾಗಿವೆ. ನೇಗಿಲು, ರಂಟೆ, ಕುಂಟೆ, ಕುಡ ಮೊದಲಾದ ವಸ್ತುಗಳಿಲ್ಲದ ರೈತ; ಕೋಲು, ಮಗೆಗಳಿಲ್ಲದ ಪುಶುಪಾಲಕ; ಉಳಿ, ಬೈರಿಗೆ, ಬಾಚಿ ಇಲ್ಲದ ಬಡಗಿ; ತಿಡಿ, ಬೆಂಕಿ, ಚಮ್ಮಟಿಗೆ ಇಲ್ಲದ ಕಮ್ಮಾರ; ಮೊರ ಕಸಬರಿಗೆ ಹೊಂದಿಲ್ಲದ ಕುಟುಂಬದ ಮಹಿಳೆಯರ ಕಾಯಕ ಅದೆಷ್ಟು ಕಷ್ಟಕರ ಎಂಬುದನ್ನು ಅರಿತರೆ ಇಲ್ಲಿನ ದೈವಾರಾಧನೆಯ ಸ್ವರೂಪದ ಹಿನ್ನೆಲೆ ಅರ್ಥವಾಗುತ್ತದೆ. ಹಾಗಾಗಿಯೇ ಪ್ರತೀಯೊಮದು ವೃತ್ತಿ ಪರಿಕರಗಳನ್ನು ದೈವ ಸ್ವರೂಪಿಯೆಂದು ಭಾವಿಸಿ ಪೂಜಿಸಿದ್ದಾನೆ. ಆ ಮೂಲಕ ಗೌರವಿಸಿದ್ದಾನೆ.
ಜನಪದ ದೇವರ ವಿಶಿಷ್ಟ ಲಕ್ಷಣಗಳು 
ಕನ್ನಡ ಜನಪದ ಜೀವನದೊಳಗೆ ರೂಪುಗೊಂಡ ದೈವಗಳಲ್ಲಿ ಕಂಡು ಬರುವ ಗುಣಲಕ್ಷಣಗಳು ಹಲವಾರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: 
ದೇವರೂ ಮನುಷ್ಯರಂತೆ ಲೌಕಿಕ ಪ್ರಾಣಿ ! : ದೇವರುಗಳು ಕೂಡ ಮನುಷ್ಯನಂತೆ ಲೌಕಿಕ ಭಾವನೆಗಳನ್ನು ಹೊಂದಿವೆ. ಜನಸಮುದಾಯಗಳು ದೇವರಲ್ಲಿ ಮಾಡಿಕೊಳ್ಳುವ ಹರಕೆಯ ಸ್ವರೂಪಗಳು, ನಡೆಸುವ ಪೂಜಾವಿಧಾನಗಳು, ಬಳಸುವ ಪೂಜಾ ಸಾಮಗ್ರಿಗಳು ಇವೇ ಮೊದಲಾದ ಸಂಗತಿಗಳನ್ನು ಗಮನಿಸಿದರೆ ಮೇಲಿನ ಸಂಗತಿ ಸ್ಪಷ್ಟವಾಗುತ್ತದೆ. ಮನುಷ್ಯನ ಹಸಿವು,ಆಸೆ,ಆಮಿಷೆಗಳು ದೇವರಲ್ಲ್ಲಿಯೂ ಇರುತ್ತದೆ ಎಂಬ ತಿಳುವಳಿಕೆಯಿಂದ ಎರಡು ಬೇಟೆ ಕಡಿತೀನಿ, ೧೦೧ ಕಾಯಿ ಹೊಡಿತೀನಿ, ಸೀರೆ ಉಡುಸ್ತೀನಿ, ಆಭರಣ ಮಾಡುಸ್ತೀನಿ ಇವೇ ಮೊದಲಾದ ಹರಕೆಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಾಗುತ್ತದೆ.   ಅಷ್ಟೆ ಅಲ್ಲದೆ ಮನುಷ್ಯರಂತೆಯೇ ದೇವರುಗಳ ನಡುವೆ ಮಾನವೀಯ ಸಂಬಂಧಗಳು, ರಕ್ತ ಸಂಬಂಧದ ನೆಲೆಗಳು ಇರುತ್ತವೆ. ಸಾಮಾನ್ಯವಾಗಿ ದೇವರುಗಳ ಮಧ್ಯೆ ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಕಲ್ಪಿಸಿರುವುದು ಕಂಡುಬರುತ್ತದೆ. 
ಮುಖವಿಲ್ಲದ ದೇವರು : ಪ್ರಸ್ತುತ ಸಂದರ್ಭದಲ್ಲಿ ಶಿಷ್ಟ ಪರಂಪರೆಯ ಯಾವುದೇ ದೇವರನ್ನು ನೋಡಿದರೂ ಅವುಗಳಿಗೆ ಮನುಷ್ಯನ ಇಲ್ಲವೇ ಪ್ರಾಣಿಯ ಮುಖಗಳಿರುವುದನ್ನು ನೋಡಬಹುದು. ವಿಶೇಷವೆಂದರೆ ಮನುಷ್ಯರ ಮುಖಗಳಿರುವ ದೇವರು ಎಷ್ಟು ಶಕ್ತಿಶಾಲಿಯೆಂದು ಭಕ್ತರು ಭಾವಿಸುತ್ತಾರೋ ಅಷ್ಟು ಮುಖಗಳು ಅಷ್ಟು ಕೈಗಳು ಜಾಸ್ತಿಯಾಗುತ್ತವೆ. ಪ್ರಾಣಿಮುಖವಾದರೆ ಇಡೀ ದೇಹದ ಗಾತ್ರ ಮತ್ತು ಹಲ್ಲುಗಳು,ಉಗುರುಗಳು ಮೊದಲಾದ ಭಾಗಗಳು ಅಸಾಮಾನ್ಯ ಸ್ಥಿತಿಯಲ್ಲಿರುತ್ತವೆ. ಜನಪದ ಲೋಕದ ದೇವರುಗಳಿಗೆ ಈ ರೀತಿಯ ಯಾವುದೇ ಮುಖವಿರುವುದಿಲ್ಲ. ಮೇಲೆ ವಿವರಿಸಿದಂತೆ ಜನಪದರ ದೈವಗಳು ಒಂದು ರೀತಿಯ ಸಾಂಕೇತಿಕ ಗುರುತುಗಳು. ಉದಾಹರಣೆಗೆ ಕುಲದ ಹಾಗೂ ಕುಟುಂಬದ ಹಿರಿಯರನ್ನು ಪೂಜಿಸುವ ಕ್ರಮದಲ್ಲಿ ಆ ಹಿರಿಯರು ಬಳಸಿದ ಕೋಲು, ಆಭರಣ ಮತ್ತು ಆಯುಧ ಮತ್ಯಾವುದೋ ವಸ್ತುವಿನಲ್ಲಿ ಅವರ ರೂಪವನ್ನು ಕಂಡು ಅವುಗಳನ್ನೇ ಪೂಜಿಸುತ್ತಾರೆ. ಹಾಗೆಯೇ ಕುಟುಂಬದ ಹಿರಿಯರನ್ನು ಕೇವಲ ಒಂದು ಚಿಕ್ಕ ಕಲ್ಲಿನಲ್ಲಿ ಕಾಣುತ್ತಾರೆ. ಇನ್ನೂ ಪ್ರಕೃತಿ ಹಾಗೂ ವೃತ್ತಿಮೂಲದ ವಸ್ತುವಿಷಯಗಳು ನೇರ ಕಾಣುವ ರೂಪಗಳು. 
ಪೂಜಾರಿಗೆ ಜಾಗವಿಲ್ಲ : ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳ ನಿಲುವಿನ ಸಂಬಂಧವಿಲ್ಲ. ಹಾಗಾಗಿಯೇ ಜನಪದರ ದೇವರುಗಳಿಗೆ ಪ್ರತಿಯೊಬ್ಬ ಭಕ್ತನೂ ಕೂಡ ಒಂದರ್ಥದಲ್ಲಿ ಪೂಜಾರಿಯೇ. ವಿಶೇಷವೆಂದರೆ ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಅರಸ-ಆಳು ರೀತಿಯ ಸಂಬಂಧಗಳಿರುವುದಿಲ್ಲ. ಅದರ ಹೊರತಾಗಿ ಇಲ್ಲಿ ಬಂಧುತ್ವ, ಸ್ನೇಹ ರೀತಿಯ ನಂಟು ಕಂಡುಬರುತ್ತದೆ. ಹಾಗಾಗಿಯೇ ಜನಪದರು ದೇವರಲ್ಲಿ ವರವನ್ನು ಬೇಡಿ ಪಡೆಯುವುದಕ್ಕಿಂತ ಒತ್ತಾಯಮಾಡಿ ಇಲ್ಲವೇ ಬೈದು ವರಪಡೆಯುವ ಕ್ರಮಗಳೇ ಹೆಚ್ಚು. ಈ ದೈವ ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಯ ಕೆಲಸವೇನು? ಎಂಬುದನ್ನು ಜನಪದ ಗರತಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ : 
ದೇವರಿಗೆ ಬಂದೀನಿ ದಾರಿ ಬಿಡು ಪೂಜಾರಿ| 
ದೇವರಿಗೆ ನನಗೆ ಒಳಮಾತ | ಮೈಲಾರ ಲಿಂಗನ|
          ಠಾವಿಗೋಗಿ ಕೈಯ ಮುಗಿದೇನ||
ಜಂಗಮ ಸ್ವರೂಪಿ ದೇವರು ಮತ್ತು ಗುಡಿಗಳು : ಜನಪದ ದೇವರುಗಳಲ್ಲಿ ಹಲವು ದೇವರಿಗೆ ಗುಡಿಗಳೇ ಇಲ್ಲ. ಕೆಲವು ದೇವರಿಗೆ ಗುಡಿಗಳಿವೆ ಆದರೆ ಆ ಗುಡಿಗಳು ನಮ್ಮ ಶಿಷ್ಟ ಪರಂಪರೆಯ ದೇವರುಗಳ ಗುಡಿಗಳಂತೆ ನಿಂತ ಕಟ್ಟಡದ ಸ್ಮಾರಕಗಳಲ್ಲ. ಗುಡಿಗಳನ್ನು ಹೊಂದಿರದ ದೇವರುಗಳಿಗೆ ಸ್ವತಃ ಅಸ್ತಿತ್ವವಿಲ್ಲ. ಮನೆಯಲ್ಲಿರುವ ಮಗೆ ಮತ್ತು ಕೋಲು ಸಮಯ ಬಂದಾಗ ದೇವರಾಗಿ ನಂತರ ದಿನನಿತ್ಯದ ಉಪಯೋಗಕ್ಕೆ ಬಳಕೆಯಾಗುತ್ತವೆ. ಇನ್ನು ಸಗಣಿ ಸೂಕ್ತ ಸಂದರ್ಭಕ್ಕೆ ಗಣಪನಾಗಿ ನಂತರ ಒಲೆಗಿಡುವ ಬೆರಣಿಯಾಗುತ್ತದೆ. ಹಾಗೆಯೇ ಹೊನ್ನಾರು ಹೂಡುವ ರೈತನಿಗೆ ಅಲ್ಲೇ ಇರುವ ಕಲ್ಲು ಇದಕ್ಕಿದ್ದಂತೆ ದೇವರಾಗಿ ಪೂಜೆ ಮುಗಿದ ನಂತರ ಮತ್ತೆ ಅಲ್ಲೇ ಮಣ್ಣಲ್ಲಿ ಬೆರತು ಹೋಗುತ್ತದೆ. 
ಗುಡಿಗಳನ್ನು ಹೊಂದಿರುವ ಕೆಲವಾರು ದೇವರ ಗುಡಿಗಳು ದೇವರಿಗೆ ಇಲ್ಲಿ ನಿರ್ಮಾಣವಾಗಿರುವ ಗುಡಿಗಳು ಇದ್ದರೂ ಇವು ಚಲಿಸುವ ಜಂಗಮ ಸ್ವರೂಪಿಯಾದವು. ಬಹುತೇಕ ಜನಪದ ದೈವಗಳ ನೆಲೆಗಳು ಮರದ ನೆರಳು, ಮೂರು ಬಂಡೆಗಲ್ಲುಗಳಿಂದ ಕಟ್ಟಿದ ಗುಡಿಯಲ್ಲಿ, ಬಹಳವೆಂದರೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದಾದ ಮರ ಮತ್ತು ಹುಲ್ಲಿನಿಂದ ಸೃಷ್ಟಿಸಿದ ಸುತ್ತು ಗುಡಿಸಲುಗಳಿರುತ್ತವೆ.    
ಜನಪದ ದೇವರ ಮಿತಿಗಳು
ಈ ಸ್ವರೂಪದ ಜನಪದ ದೈವ ವ್ಯವಸ್ಥೆಯಲ್ಲಿ ದೋಷಗಳೇನು ಇಲ್ಲ ಎಂದರೆ ಒಂದು ಮುಖದ ಸತ್ಯವನ್ನು ಮಾತ್ರ ಹೇಳಿದಂತಾಗುತ್ತದೆ. ಹಾಗಾಗಿ ಇಲ್ಲಿರುವ ದೋಷಗಳನ್ನು ಗುರುತಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಜನಪದರ ದೈವ ಕಲ್ಪನೆಯಲ್ಲಿ ಕಂಡು ಬರುವ ಕೆಲವು ಮಿತಿಗಳನ್ನು ಹೀಗೆ ಗುರುತಿಸಬಹುದು
೧. ಎಲ್ಲ ಸಮಸ್ಯೆಗಳಿಗೂ ದೇವರೇ ಕಾರಣವೆಂಬ ದೃಢವಾದ ನಂಬಿಕೆಯಿಂದ ಜನಪದ ಸಮುದಾಯಗಳು ಮೂಢನಂಬಿಕೆಯ ಕಡೆಗೆ ನಡೆದದ್ದು, ತಮ್ಮ ಪೂರ್ವಿಕರ  ಮೂಲ ಉದ್ದೇಶಗಳನ್ನು ಮರೆತು ಕುರುಡು ಆಚರಣೆಗಾರರಾಗಿ ರೂಪುಗೊಂಡಿದ್ದು( ಕಾರ್ಯಾಕಾರಣ ಸಂಬಂಧಗಳ ತಿಳಿವಿಲ್ಲದೆ ನಡೆಸಿದ ಆಚರಣೆಗಳು) ಉದಾ: ಉಪಯೋಗಕ್ಕಿಲ್ಲದ ವಸ್ತುಗಳನ್ನು ಪುಜಿಸಿದ್ದು- ಮೊರದ ಪೂಜೆ, 
೨. ಜನಪದರ ದೇವರ ಬಗೆಗಿನ ದೃಢವಾದ ನಂಬಿಕೆಗಳು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವ ಇಚ್ಛೆಗಳನ್ನು ಪೂರೈಸಿಕೊಳ್ಳಲು ಅನವುಮಡಿಕೊಟ್ಟದ್ದು ( ದೇವದಾಸಿ ಪದ್ಧತಿ, ಬೆತ್ತಲೆಸೇವೆ ಇತ್ಯಾದಿ)
೩. ದೈವ ಸಂಬಂಧೀ ಆಚರಣೆಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಅಡ್ಡಿಯಾಗಿದ್ದು
ಇಂಥ ಮಿತಿಗಳನ್ನು ದಾಟುವುದಾದರೆ ನಮ್ಮ ಪಾರಂಪರಿಕ ದೈವ ಕಲ್ಪನೆ ಅನುಕರಣಾ ಯೋಗ್ಯವಾದುದು. ಹಾಗೂ ಈಗಿನ ಸಂಕಷ್ಟದ ಕಾಲಕ್ಕೆ ಸಮರ್ಥವಾದ ಪರ್‍ಯಾಯ ವ್ಯವಸ್ಥೆಯೂ ಆಗುವುದರಲ್ಲಿ ಅನುಮಾನವಿಲ್ಲ

ಪರಾಮರ್ಶನ ಗ್ರಂಥಗಳು

೧. ಗರತಿಯಹಾಡು, ಸಂ.ಹಲಸಂಗಿ ಸಹೋದರರು, ಕನ್ನಡ ಸಾಹಿತ್ಯ ಪರಿಷತ್,ಬೆಂಗಳೂರು
೨. ದೇವರು, ಎ.ಎನ್. ಮೂತಿರಾಯ, ಡಿವಿಕೆ ಮೂರ್ತಿ ಪ್ರಕಾಶನ, ಮೈಸೂರು,೧೯೯೭
೩. ವಿಶಿಷ್ಟ ಜಾನಪದ, ಸಂ.ಎಚ್.ಜೆ.ಲಕ್ಕಪ್ಪಗೌಡ, ಸ್ನಾತಕೋತ್ತರ ಕೇಂದ್ರ, ಬಿ.ಆರ್.ಪ್ರಾಜೆಕ್ಟ್, ೧೯೮೪
೪. ಜಾನಪದ ತಡಕಾಟ, ಹಿ.ಶಿ.ರಾಮಚಂದ್ರೇಗೌಡ, ಮಾನವಿ ಪ್ರಕಾಶನ, ಮೈಸೂರು, ೧೯೮೮
೫. ಕರಾವಳಿ ಜಾನಪದ, ಪುರುಷೋತ್ತಮ ಬಿಳಿಮಲೆ, ಮಂಗಳ ಗಂಗೋತ್ರಿ, ದ.ಕ, ೧೯೯೦
೬. ಚಿತ್ರದುರ್ಗ ಜಿಲ್ಲೆಯ ಕ್ಷೇತ್ರಕಾರ್ಯದಿಂದ ದೊರೆತ ವಿವರಗಳು

ಡಾ. ಎಸ್.ಎಂ. ಮುತ್ತಯ್ಯ 

Sunday 30 June 2013

ವಿಜ್ಞಾನ ನಗರಿಯ ವಿರೂಪಗಳು


          ಚಳ್ಳಕೆರೆ ತಾಲ್ಲುಕಿನ ನೇರ್‍ಲಗುಂಟೆ ಹಾಗೂ ವರವು ಕಾವಲುಗಳಲ್ಲಿ ಅಭಿವೃಧ್ಧಿಯ ಹೆಸರಿನಲ್ಲಿ ಸುಮಾರು ೯೭೨೩ ಎಕರೆ ಜಿಲ್ಲಾ ಸಂರಕ್ಷಿತ ಅರಣ್ಯವನ್ನು ವಶಪಡಿಸಿಕೊಂಡು ವಿವಿಧ ರೀತಿಯ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ಪ್ರ.ವಾ.ಯ ಏ. ೧೧ ರ ಸಂಚಿಕೆಯಲ್ಲಿ ನಾಗೇಶ್ ಹೆಗಡೆಯವರ ವಿಚಾರಗಳಿಗೆ ಏ. ೧೮ ರ ಸಂಚಿಕೆಯಲ್ಲಿ ಎಸ್. ಶಿವಣ್ಣ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅದೇ ಭೂ ಭಾಗದಲ್ಲಿ ಬೆಳೆದ ನನ್ನ ಅನುಭವಗಳ ಹಿನ್ನೆಲೆಯಲ್ಲಿ ಕೆಲವು ಅಭಿಪ್ರಾಯಗಳನ್ನು ಹೇಳಲೇ ಬೇಕಾಗಿದೆ. 
ಎಸ್ ಶಿವಣ್ಣ ಅವರು ’ಖುದಾಪುರ ಪಾರಂ ಗೆ ಎಲ್ಲಾ ಬರಲಿ , ಬೆಲ್ಲವೇ ಇರಲಿ’ ಎಂದು ಬಯಸಿದ್ದಾರೆ. ಹಾಗೆಯೇ ’ಕೆಲಸಕ್ಕೆ ಬಾರದ ಹಾಳು ಕೊಂಪೆಯಂತಿದ್ದ ಈ ಕಾಡು ಹಲವು ಯೋಜನೆಗಳ ಬೀಡಾಗುತ್ತಿರುವುದು ಇಡೀ ಈ ಪ್ರದೇಶದ ಜನರಿಗೆ ಸಂತೋಷವಾಗಿದೆ’ ಎಂದು ಭಾವಿಸಿದ್ದಾರೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿವಿಧ ರೀತಿಯ ಕಾಮಗಾರಿಗಳು ಹಾಗೂ ಅದರಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಗಮನಿಸಿದರೆ ಇವರ ಈ ಎರಡೂ ಬಯಕೆಗಳು ಖಂಡಿತಾ ತಮಾಷೆಯಾಗಿವೆ. ಶಾಲೆಯಿಂದ ಹೋಗಿಬರುವ ಹೊರಸಂಚಾರದ ನೆಪದಲ್ಲಿ ನೋಡುವ ಖುದಾಪುರದ ಕುರಿ ಸಂವರ್ಧನಾ ಕೇಂದ್ರ ಹಾಗೂ ಅಲ್ಲಿನ ಸ್ವಲ್ಪ ಪ್ರದೇಶಕ್ಕೆ ಶಿವಣ್ಣ ಅವರ ಮಾತುಗಳು ಸೀಮಿತವಾಗಿವೆ. ಕುರಿ ಸಂವರ್ಧನಾ ಕೇಂದ್ರದ ನಿವರ್ಹಣೆ ಸರಿಯಾಗದೇ ಸರ್ಕಾರಕ್ಕೆ ಹೊರೆಯಾಗಿತ್ತು, ಅದರ ಬದಲಿಗೆ ಈ ಸಂಶೋಧನಾ ಕೇಂದ್ರಗಳು ಬಂದಿದ್ದು ಸೂಕ್ತವಾಗಿದೆ ಎಂಬ ಭಾವ ಇಲ್ಲಿ ಮುಖ್ಯವಾದಂತಿದೆ.  ಆದರೆ ಇಲ್ಲಿ ನಿಜವಾದ ಸಮಸ್ಯೆ ಇರುವುದು ೯೭೨೩ ಎಕರೆ ಪ್ರದೇಶದ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಹಳ್ಳಿಗಳ ಪಶುಪಾಲಕ ಹಾಗೂ ಕೂಲಿಮಾಡುವ ಜನರಲ್ಲಿ. ಹಾಗಾಗಿ  ಸುತ್ತ ಮುತ್ತಲಿನ ಸುಮಾರು ನೂರಾರು ಗ್ರಾಮಗಳಲ್ಲಿ ಈ ಕಾವಲುಗಳನ್ನು ಅವಲಂಭಿಸಿ ಬದುಕುತಿದ್ದ ಜನ ಇಂದು ತಲುಪಿರುವ ಸ್ಥಿತಿಯನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಆಗ ಇಲ್ಲಿಗೆ ಬರುವುದೆಲ್ಲವೂ ಬೆಲ್ಲವೇ ಆಗುವುದಿಲ್ಲ ಎಂಬುದು ಮನವರಿಕೆಯಾಗುತ್ತದೆ.
ಈ ಭಾಗದಲ್ಲಿ ಬದುಕುತ್ತಿರುವ ಜನರಲ್ಲಿ ಬಹುಪಾಲು ಜನ ಪಶುಪಾಲನೆಯನ್ನು ಪ್ರಧಾನ ವೃತ್ತಿಯನ್ನಾಗಿಸಿಕೊಂಡವರು. ಈ ಗುಂಪಿನಲ್ಲಿ ಕುರಿ-ಮೇಕೆ ಸಾಕುವವರ ಸಂಖ್ಯೆ ದೊಡ್ಡದು. ಕೆಲವೇ ವರ್ಷಗಳ ಹಿಂದೆ ಇಲ್ಲಿನ ಹಲವಾರು ಕುಟುಂಭಗಳಲ್ಲಿ ಸಾವಿರಾರು ಸಂಖ್ಯೆಯ ಕುರಿ ಮೇಕೆಗಳಿದ್ದು ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದರು. ಕಳೆದ ಕೆಲವಾರು ವರ್ಷಗಳಲ್ಲಿ ಕಾವಲುಗಳ ಒತ್ತುವರಿ ಪ್ರದೇಶದಲ್ಲಿ ಸ್ಥಿತಿವಂತರೇ ಜಮೀನಿಗಾಗಿ ಕಾಡನ್ನು ನಾಶಪಡಿಸಿದರು. ಇಷ್ಟರಿಂದಲೇ ಘಾಸಿಗೊಂಡಿದ್ದ ಈ ಜನ ವಿಜ್ಞಾನ ನಗರಿ ಮಾಡಲು ಬಂದು ಬಹುಪಾಲು ಕಾವಲನ್ನು ವಶ ಪಡಿಸಿಕೊಂಡಿರುವುದರಿಂದ ಮುಂದೇನು ಮಾಡಬೇಕೆಂದು ತೋಚದವರಾಗಿದ್ದಾರೆ. ತಮ್ಮ ಕುರಿ ಹಾಗೂ ಮೇಕೆ ಸಾಕಾಣಿಕೆಗೆ ಕಾವಲುಗಳು ಸಿಗುವುದಿಲ್ಲವೆಂದು ತಿಳಿದಾಗ ತಮ್ಮ ಕುರಿ ಮೇಕೆಗಳನ್ನು ಮಾರಿದ್ದಾರೆ.  ಇದಿಷ್ಟೇ ಅಲ್ಲದೇ ಈ ಕಾವಲುಗಳಲ್ಲಿ ದೊರೆಯುತ್ತಿದ್ದ ಕಾರೆ ಹಾಗೂ ಕೌಳೆ ಹಣ್ಣುಗಳನ್ನು ಕಿತ್ತು ತಂದು ಮಾರಿ ಜೀವನ ನಡೆಸುತ್ತಿದ್ದರು. ಹಾಗೆಯೇ ಈ ಕಾವಲಿನ ಒಳಗೆ ಹುತ್ತಗಳಲ್ಲಿ ಸಿಗುತ್ತಿದ್ದ ಹುತ್ತದ ಹುಳಗಳನ್ನು ಹಿಡಿದು ಪೇಟೆಯಲ್ಲಿ ಮಾರಿ ಜೀವಿಸುತ್ತಿದ್ದ ಅದೆಷ್ಟೋ ಕುಟುಂಭಗಳಿದ್ದವು. ಇಲ್ಲಿ ದೊರೆಯುತ್ತಿದ್ದ ಈಚಲು ಹಾಗೂ ಹೂಲಿ ಗಿಡಗಳ ಕಡ್ಡಿಗಳಿಂದ ಪೊರಕೆ, ಬುಟ್ಟಿ ಮಾಡಿ ಜೀವಿಸುತ್ತಿದ್ದ  ನೂರಾರು ಸಂಸಾರಗಳಿದ್ದವು. ಒಟ್ಟಾರೆ ಹತ್ತಾರು ರೀತಿಯ ಬುಕಿನ ಮಾರ್ಗಗಳು ಅಲ್ಲಿದ್ದವು. ಜೊತೆಗೆ ಇಲ್ಲಿನ ಮ್ಯಾಸಬೇಡ ಬುಡಕಟ್ಟಿನ ಹಲವು ಪೂಜಾ ನೆಲೆಗಳು ಸದರಿ ಕಾವಲುಗಳಲ್ಲಿದ್ದವು. ಕಾಡಿನಲ್ಲಿ ವಿಶೇಷವಾದ ಜಿಂಕೆಗಳ ದೊಡ್ಡ ಸಮೂಹವೇ ಇತ್ತು ;  ಈಗ ಈ ಕಾವಲು ಪ್ರದೇಶದ ಬಹು ಭಾಗಕ್ಕೆ ಎರಡು ಆಳೆತ್ತರದ ಗೋಡೆಯನ್ನು ನಿರ್ಮಿಸಿದ್ದರ ಪರಿಣಾಮ  ಜನ ಹಾಗೂ ಪ್ರಾಣಿ- ಪಕ್ಷಿಗಳು ಬೀದಿಗೆ ಬಿದ್ದಿದ್ದಾರೆ.
ಎಲ್ಲ್ಲರು ಹೇಳುವಂತೆ  ಈ ಕೇಂದ್ರಗಳು ದೇಶದ ಅಭಿವೃದ್ದಿಯಲ್ಲಿ ಬಹಳ ಮುಖ್ಯ. ಇಂತಹ ಮಹತ್ವದ ಕೇಂದ್ರಗಳನ್ನು ಹೊಂದಿದ ಕೀರ್ತಿ ನಮ್ಮ ಭಾಗದ್ದು. ಇವುಗಳಿಗೆ ಸ್ಥಾನ ಕೊಡುವುದರ ಮೂಲಕ ನಮ್ಮ ಊರನ್ನು ಜಗತ್ತಿನ ಭೂಪಟದಲ್ಲಿ ಮೂಡಿಸುತ್ತೇವೆ ಎಂಬ ಎಂಬ ಹೆಮ್ಮೆಯನ್ನು ಇಲ್ಲಿನ ಬಹುಪಾಲು ಜನ  ಹೊಂದಿದ್ದರು.  ಇದರ ಪರಿಣಾಮ ಸ್ವಲ್ಪ ಅಸಮಾಧಾನದಿಂದಲೆ ತಮ್ಮ ಕುರಿ-ಮೇಕೆಗಳನ್ನು, ಕೇಂದ್ರಗಳು ನಿರ್ಮಾಣವಾಗಲಿರುವ ಪ್ರದೇಶಗಳ ಸುತ್ತಾ ಮುತ್ತಲಿನ ತಮ್ಮ ಖಾತೆಯಿರುವ ಜಮೀನುಗಳನ್ನು ಉಧ್ಯಮಿಗಳಿಗೆ ಮಾರಿದರು. ಆದರೆ ಈ ಭಾವನೆ ಬಹಳ ಕಾಲ ಉಳಿಯಲಿಲ್ಲ . ಚಾಲಕ ರಹಿತ ಯುದ್ಧವಿಮಾನ ಪರೀಕ್ಷಾ ಕೇಂದ್ರದ ವಿಮಾನಗಳು ಕರ್ಣಪಟಲ ಹರಿದು ಹೋಗುವಷ್ಟು ಶಬ್ಧಮಾಡುತ್ತಾ ಹಾರಾಡಿದಾಗ; ಕಾವಲಿಗೆ ರಕ್ಷಣೆಯ ನೆಪದಲ್ಲಿ ಎತ್ತರದ ಗೋಡೆ ನಿರ್ಮಿಸಿದಾಗ; ಈ ಕೇಂದ್ರಗಳಲ್ಲಿ ನಮ್ಮ  ಓದಿದ ಮಕ್ಕಳಿಗೆ ನೌಕರಿ ಸಿಗುತ್ತೆ ಎಂದು ಕೊಂಡವರಿಗೆ  ’ಡಿ’ ಗ್ರೂಪ್ ನೌಕರಿಗೂ ಇಂಗ್ಲೀಷ್ ಹಾಗೂ ಹಿಂದಿ ಕಡ್ಡಾಯ ಎಂಬುದಾಗಿ ಜಾಹಿರಾತು ಬಂದಾಗ; ಉನ್ನತ ಮಟ್ಟದ ಬಹಳಷ್ಟು ಜನ ಇಲ್ಲಿಗೆ ಬರುವುದರಿಂದ ಅವರಿಗೆ ಬೇಕಾದ ವಸ್ತುಗಳ ವ್ಯಾಪಾರ ಮಾಡಬಹುದು ಎಂದುಕೊಂಡವರಿಗೆ ’ಇದು ಮಿಲಿಟರಿ ನೆಲೆಯಾದ್ದರಿಂದ ಆಹಾರವೂ ಸೇರಿದಂತೆ ಎಲ್ಲವೂ ನೇರವಾಗಿ ಅಲ್ಲಿಗೆ ಪೂರೈಕೆಯಾಗುತ್ತದೆ. ಸಣ್ಣ ಬೆಂಕಿಪೊಟ್ಟಣವನ್ನು ಸಹಾ ಯಾರೂ ಕೊಳ್ಳುವುದಿಲ್ಲ.’ ಎಂದು ತಿಳಿದಾಗ ಸಮಸ್ಯೆಯ ಅರಿವಾಗಿದೆ. ಆದರೆ  ಕಾಲ ಮಿಂಚಿಹೋಗಿದೆ. ಈಗ ಈ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವಂತೆಯೂ ಇಲ್ಲ. ಅವುಗಳೊಟ್ಟಿಗೆ ಬದುಕುವಂತೆಯೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ ಹಾಕಿಕೊಂಡ ಸ್ಥಿತಿ ಈ ಭಾಗದ ಜನರದಾಗಿದೆ. 
ನಾಗೇಶ್ ಹೆಗಡೆಯವರು ತಮ್ಮ ಲೇಖನದಲ್ಲಿ ವಿವರಿಸಿರುವಂತೆ ಯಾವುದೇ ಯೋಜನೆಯ ಜಾರಿಯಿಂದಾಗುವ ಪರಿಣಾಮಗಳ ಯೋಚಿಸಿದೇ ಇರುವ ಆಡಳಿತದ ಅಸ್ಸೀಮ ನಿರ್ಲಕ್ಷೆಯಿಂದಲೇ ಇಂಥ ಅವಘಡಗಳು ಪದೆ ಪದೆ ಜರಗುತ್ತವೆ.  ಅಧಿಕಾರ ವ್ಯವಸ್ಥೆಗಳು ಯಾವಾಗಲೂ ಮಾಡಿರುವುದು ಇದೇ ಬಗೆಯ ತಂತ್ರಗಳನ್ನೇ. ಇಂಥ ಅಧಿಕಾರ ತಂತ್ರಗಳ ನಡುವೆ ನಾಶವಾಗುವವರು ಸಾಮಾನ್ಯ ಜನ ಮಾತ್ರ. ಭೂಮಿ ಸರ್ಕಾರದ್ದು ಎಂದಾಕ್ಷಣ ಏನನ್ನಾದರೂ ಮಾಡಬಹುದೆಂಬ ಮನೋಭಾವನೆಗಳು ಹೆಚ್ಚಾಗಿವೆ. ಹಾಗಾಗಿಯೇ ಇಂಥ ಯೋಜನೆಗಳನ್ನು ಆರಂಭಿಸುವಾಗ ಜನರ ಅಭಿಪ್ರಾಯಗಳಿಲ್ಲದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ( ಏ.೧೯)  ಅರಣ್ಯವಾಸಿಗಳ ಭೂಮಿ ಹಕ್ಕಿನ ಬಗ್ಗೆ ಸುಪ್ರಿಂ ಕೋರ್ಟ್  ನೀಡಿರುವ ಒಂದು ತೀರ್ಪು ಇಲ್ಲಿ ಗಮನಾರ್ಹ. ಆ ತೀರ್ಪಿನಲ್ಲಿ ಹೇಳಿರುವಂತೆ ’ ಸ್ಥಳೀಯ ಜನರ ಸಾಮಾಜಿಕ ,ರಾಜಕೀಯ  ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ರಕ್ಷಿಸುವುದು ಬಹಳ ಮುಖ್ಯ. ಆದ್ದರಿಂದ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸುವ ಮೊದಲು ಆಯಾ ಸ್ಥಳಗಳ ಗ್ರಾಮ ಸಭೆಗಳ ಅನುಮತಿ ಕಡ್ಡಾಯವಾಗಬೇಕು’ ಎಂದು ಅಭಿಪ್ರಾಯ ಪಟ್ಟಿದೆ. ಹಾಗೆಯೇ ಮುಂದುವರೆದು ’ಪರಿಶಿಷ್ಟ ಪಂಗಡ ಹಾಗೂ ಅರಣ್ಯ ವಾಸಿಗಳು  ತಮ್ಮ ನೆಲದ ಜೊತೆ ಭಾವನಾತ್ಮಕ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವ ಎಲ್ಲಾ ಹಕ್ಕನ್ನು ಪಡೆದಿದ್ದಾರೆ. ಕೃಷಿಯ ಜೊತೆಗೆ ಕಿರು ಅರಣ್ಯ ಉತ್ಪನಗಳನ್ನು ಸಂಗ್ರಹಿಸಿ ಮಾರಾಟಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಹಕ್ಕನ್ನೂ ಹೊಂದಿದ್ದಾರೆ.’ ಎಂಬುದನ್ನು ಒತ್ತಿ ಹೇಳಿದೆ. ಈ ನಡುವೆ ಬಹಳಷ್ಟು  ಮುಗ್ದ ಜನ  ಈ ಬಗ್ಗೆ  ಕೇಳುತ್ತಿರುವ ಪ್ರಶ್ನೆಗಳೆಂದರೆ : ಮುಖ್ಯವಾಗಿ ಈ ಕೇಂದ್ರಗಳ ಸ್ಥಾಪನೆ ಬಗ್ಗೆ  ನಮಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ ಏಕೆ? ಇವುಗಳ ನಿರ್ಮಾಣಕ್ಕೆ ನಿಜವಾಗಿಯೂ  ಇಷ್ಟೊಂದು ಜಮೀನು ಬೇಕಿತ್ತಾ ? ನಾವು ದೇಶಕ್ಕೆ ವಿಶೇಷವಾದ ನೆರವು ನೀಡಿದೆವು ಎಂದ ಮೇಲೆ ದೇಶ ನಮಗೆ ಕೊಟ್ಟ ವಿಶೇಷ ಕೊಡುಗೆ ಏನು? ಬದುಕಿಗೆ ಆಧಾರವಾಗಿದ್ದ ಕಾವಲನ್ನು ಕಳೆದುಕೊಂಡ ನಮಗೆ ಮುಂದಿನ ದಾರಿಯಾವುದು? ಈ ಪ್ರಶ್ನೆಗಳಿಗೆ ಉತ್ತರ ಹೇಳುವವರು ಯಾರು ?
- ಡಾ.ಎಸ್.ಎಂ. ಮುತ್ತಯ್ಯ


Friday 14 June 2013

ಚರಗ ಆಚರಣೆಯ ವಿಭಿನ್ನ ಆಯಾಮಗಳು


       'ಚರಗ ಚೆಲ್ಲುವುದು’ ಮೂಲತಃ ಕೃಷಿ ಮತ್ತು ಪಶುಪಾಲನಾ ಸಂಸ್ಕೃತಿಗಳಿಗೆ ಸಂಬಂಧಿಸಿದ ಒಂದು ಆಚರಣೆಯಾಗಿದೆ. ಪ್ರಕೃತಿಯ ಒಡನಾಟದಲ್ಲಿ ಬದುಕನ್ನು ನಡೆಸಿದ ಜನರ ಪಾರಂಪರಿಕ ಜ್ಞಾನ ಇದಾಗಿದ್ದು, ಪ್ರದೇಶ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ಹೆಸರು ಮತ್ತು ಸ್ವರೂಪಗಳಲ್ಲಿ ಬೇರೆ ಬೇರೆಯಾಗಿದೆ. ವಿಶಿಷ್ಟವಾದ ಈ ಆಚರಣೆಯ ಬಗ್ಗೆ ಇಲ್ಲಿಯವರೆಗೂ ಗಂಭೀರವಾದ  ಅಧ್ಯಯನಗಳು ನಡೆದಿರುವುದು ವಿರಳ.  ಪರಂಪರೆಯಲ್ಲಿ ಇರುವುದೆಲ್ಲವು ಮೌಢ್ಯ ಎಂಬ ಅಪಕಲ್ಪನೆಯೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಸಿಜ್ಞಾನ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನಗಳು ಆರಂಭವಾಗಿದ್ದು ಅವುಗಳಲ್ಲಿ ಇರುವ ಅನುಭವದ ಸತ್ಯಗಳನ್ನು ಕಂಡುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನಲ್ಲಿ ಪ್ರಚಲಿತವಿರುವ ಚರಗ ಚೆಲ್ಲುವ ಆಚರಣೆಯ ವಿಭಿನ್ನ ಆಯಾಮಗಳನ್ನು ಪರಿಚಯಿಸಿಕೊಳ್ಳುತ್ತಾ ಅವುಗಳ ಹಿಂದಿರುವ ಅನುಭವದ ಸತ್ಯಗಳನ್ನು ಕಂಡುಕೊಳ್ಳುವುದು ಪ್ರಸ್ತುತ ಲೇಖನದ ಪ್ರಧಾನ ಉದ್ದೇಶವಾಗಿದೆ. ಇಲ್ಲಿ ಮುಖ್ಯವಾಗಿ ಕರ್ನಾಟಕದ ಜಾನಪದ ಬದುಕಿನ ಬಗ್ಗೆ ಇಲ್ಲಿಯವರೆಗೂ ಬಂದಿರುವ ಬರೆಹಗಳಲ್ಲಿ ದೊರೆಯುವ ಆನುಷಂಗಿಕ ಮಾಹಿತಿಯನ್ನು, ಜೊತೆಗೆ ಕರ್ನಾಟಕದ ಬೇರೆ ಬೇರೆ ಪ್ರದೇಶ ಹಾಗೂ ಸಮುದಾಯಗಳಲ್ಲಿ ಸದ್ಯಕ್ಕೆ ಪ್ರಚಲಿತವಿರುವ ಆಚರಣೆಯ ಮಾಹಿತಿಗಳನ್ನು ಸಂಗ್ರಹಿಸಿ ಪ್ರಸ್ತುತ ಆಚರಣೆಯನ್ನು ಅರ್ಥೈಯಿಸುವ ಪ್ರಯತ್ನಮಾಡಲಾಗಿದೆ.
ಚರಗ ಎಂದರೇನು ?
’ಚರಗ’ ಎಂಬ ಈ ಪದಕ್ಕೆ ನಿಘಂಟು, ವಿಶ್ವಕೋಶ ಹಾಗೂ ಗ್ರಂಥಗಳಲ್ಲಿ ನೀಡಿರುವ ಅರ್ಥಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು : 
 ಚರಗ (ನಾಮಪದ) ಹೊಲಗದ್ದೆಗಳಲ್ಲಿ ಪೈರು ಬೆಳೆದಾಗ ರೈತರು ಭೂಮಿತಾಯಿಗೆ ನೈವೇದ್ಯವೆಂದು ಕ್ಷೇತ್ರದ ತುಂಬ ಎರಚುವ ಆಹಾರ ಪದಾರ್ಥ (ಜಿವಿ ಕನ್ನಡ ನಿಘಂಟುವಿನಿಂದ ). 
ಇದಕ್ಕೆ ಹೊಲಗಳಲ್ಲಿ ನಡೆಸಿದ ಆಚರಣೆಯ ಬಳಿಕ ಚೆಲ್ಲುವ ಅನ್ನ ಇಲ್ಲವೇ ಬೇರೆ ಆಹಾರ (ಮಾಂಸವೂ ಸೇರಿದಂತೆ) ಎಂಬ ತಿರುಳಿದೆ. ಚರಗ, ಚರುಗ, ಸರುಗ ಎಂದೆಲ್ಲ ಈ ಪದವನ್ನು ನುಡಿಯುತ್ತಾರೆ (ಕೆ.ವಿ.ನಾರಾಯಣ, ಪದ ಸಂಪದ, ಪ್ರಜಾವಾಣಿ) ಎಂಬುದಾಗಿ ಅರ್ಥೈಯಿಸಲಾಗಿದೆ.
ಹೊಲ ಗದ್ದೆಗಳಲ್ಲಿ ಪೈರು ಬೆಳೆದಾಗ ರೈತರು ಭೂಮಿತಾಯಿಗೆ ನೈವೇದ್ಯವೆಂದು ಕ್ಷೇತ್ರದ ತುಂಬಾ ಆಹಾರ ಪದಾರ್ಥವನ್ನು ಎರಚುವ  ಪದ್ಧತಿ
ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ.  
’ಚರಗ’ ಎಂದರೆ ರೈತರು ತಾವು ಬೆಳೆದ ಪೈರಿನ ರಕ್ಷಣೆಗಾಗಿ, ಪಶುಪಾಲಕರು ತಮ್ಮ ಪಶುಗಳ ರಕ್ಷಣೆ ಹಾಗೂ ಯೋಗಕ್ಷೇಮಕ್ಕಾಗಿ ಆಹಾರ ಪದಾರ್ಥಗಳನ್ನು ಹೊಲದ ಸುತ್ತ ಚೆಲ್ಲುವ ಒಂದು ಪದ್ಧತಿ.
ಭೂತಾಯಿಗೆ ಸೀಮಂತ ಮಾಡುವ ಈ ದಿನ ಭೂತಾಯಿಯ ಬಯಕೆ ಈಡೇರಿಸಲು  ಕಡುಬು, ಹೋಳಿಗೆ, ಸಜ್ಜಿ ರೊಟ್ಟಿ, ಬರ್ತ ಮುಂತಾದ ಆಹಾರ ಪದಾರ್ಥ ಮಾಡಿ ಸಾಂಕೇತಿಕವಾಗಿ ತೃಪ್ತಿ ಪಡಿಸಲಾಯಿತು. ಇದನ್ನೇ ಚರಗ ಚೆಲ್ಲುವುದು ಎಂದು ಕರೆಯಲಾಗುತ್ತದೆ 
ಈ ಎಲ್ಲಾ ಅರ್ಥ ವ್ಯಾಖ್ಯಾನಗಳನ್ನು ಗಮನಿಸಿದರೆ ಚರಗ ಎಂದರೆ ಭೂಮಿ ತಾಯಿಗೆ ಅರ್ಪಿಸುವ ನೈವೇದ್ಯ ಎಂಬುದು ತಿಳಿಯುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಚರಗ ಕೇವಲ ಕೃಷಿಕ ಸಮುದಾಯಗಳು ಮಾತ್ರ ಆಚರಿಸುವ ಆಚರಣೆ ಎಂಬಂತೆ ಭಾವಿಸಿರುವುದು. ಆದರೆ ಚರಗ ಎಂದರೆ ಇದಿಷ್ಟೇ ಅಲ್ಲ.  ಹೊಲಗಳಿಗೆ ಮಾತ್ರ ಚರಗ ಚೆಲ್ಲುವುದಿಲ್ಲ; ಬದಲಿಗೆ ಊರು, ದೊಡ್ಡಿಗಳಿಗೂ ಚರಗ ಚೆಲ್ಲುವ ಪದ್ಧತಿಗಳಿರುವುದನ್ನು ಕಾಣಬಹುದಾಗಿದೆ. 
ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದಲ್ಲಿ ಚರಗ ಚೆಲ್ಲುವ ಆಚರಣೆ ಮುಖ್ಯವಾದ ಎರಡು ರೂಪಗಳಲ್ಲಿ ಇರುವುದನ್ನು ಕಾಣಬಹುದು. ಒಂದು, ಕೃಷಿಮೂಲ ಸಂಸ್ಕೃತಿಯ ರೂಪ. ಇನ್ನೊಂದು ಪಶುಪಾಲನಾ ಸಂಸ್ಕೃತಿಯ ರೂಪ. ಇವೆರಡು ರೂಪಗಳಲ್ಲಿ ಅನೇಕ ಅಂಶಗಳು ಸಾಮಾನ್ಯವಾಗಿದ್ದು ಕೆಲವು ಅಂಶಗಳು ವಿಭಿನ್ನವಾಗಿವೆ. ಉದಾ: ಕೃಷಿಮೂಲ ಸಂಸ್ಕೃತಿಯಲ್ಲಿ ಚರಗ ಚೆಲ್ಲಲು ಕೇವಲ ಸಸ್ಯಾಹಾರ ಪದಾರ್ಥಗಳನ್ನು ಮಾತ್ರ ಬಳಸಿ, ತಮ್ಮ ಪೈರಿರುವ ಹೊಲಗಳಿಗೆ ಚಲ್ಲಿದರೆ; ಪಶುಪಾಲನಾ ಸಂಸ್ಕೃತಿಯಲ್ಲಿ ಪ್ರಾಣಿಬಲಿ ನೀಡಿ , ಬಲಿನೀಡಿದ ಪ್ರಾಣಿಯ ರಕ್ತ ಹಾಗೂ ಹೊಟ್ಟೆಯೊಳಗಿನ ಕರಸನ್ನು(ಸಗಣಿ), ಅನ್ನ, ಹಣ್ಣು , ಕಾಯಿಗಳೊಂದಿಗೆ ಬೆರಸಿ ತಮ್ಮ ಜನ ಜಾನುವಾರುಗಳ ಊರು ಮತ್ತು ದೊಡ್ಡಿಗಳಿಗೆ ಚೆಲ್ಲುತ್ತಾರೆ.
ಕರ್ನಾಟಕದ ಹಲವಾರು ಬುಡಕಟ್ಟು ಹಾಗೂ ಜಾತಿಗಳ ಸಮುದಾಯಗಳಲ್ಲಿ ಪ್ರಚಲಿತವಿರುವ ಚರಗದ ಸಂಪ್ರದಾಯಗಳು ಪ್ರದೇಶ, ಸಮುದಾಯಗಳಿಗನುಗುಣವಾಗಿ ಬೇರೆ ಬೇರೆ ಹೆಸರಲ್ಲಿ ಕರೆಯಲ್ಪಡುತ್ತವೆ. ಅವುಗಳನ್ನು ಹೀಗೆ ಹೆಸರಿಸಬಹುದು : ಅನ್ನದ ಚರಗ, ಅಂಬಲಿ ಚರಗ, ಮುಸುರೆ ಚರಗ, ಸರ್ವ ಅಡಿಗೆಯ ಮಿಶ್ರ ಚರಗ, ರಕ್ತಾನ್ನದ ಚರಗ. ಕೂತೂಹಲದ ಸಂಗತಿಯೆಂದರೆ ಇವುಗಳಲ್ಲಿ ಎಲ್ಲವನ್ನು ಚರಗ ಎನ್ನುವುದಿಲ್ಲ. ಬದಲಿಗೆ ಮುಸುರೆ ಚೆಲ್ಲುವುದು, ತೀರ್ಥಚೆಲ್ಲುವುದು, ಚರಗ ಅಥವ ಸರುಗ ಚೆಲ್ಲುವುದು, ‘ಕೇರ್ಯಾಂಬಲಿ’, ‘ಅಳ್ಳಾಂಬಲಿ’, ಮೊದಲಾಗಿ ಕರೆಯುತ್ತಾರೆ.
ಈ ಪದ್ಧತಿಯನ್ನು ಅಧ್ಯಯನಕ್ಕೆ ಒಳಪಡಿಸಿರುವ ಕೆಲವು ವಿದ್ವಾಂಸರು ’ಚರಗ ಹಾಕುವುದು’, ’ಚರಗ ಹೊಡೆಯುವುದು’ ಎಂಬುದಕ್ಕೂ ವ್ಯತ್ಯಾಸ ಇರುವುದಾಗಿ ಹೇಳುತ್ತಾರೆ. ಈ ಬಗ್ಗೆ ಎಂ.ಜಿ. ಈಶ್ವರಪ್ಪ ಅವರು ಹೇಳಿರುವ ಮಾತುಗಳನ್ನು ಗಮನಿಸಬಹುದು : ಚರಗ ಹಾಕುವುದು ಒಂದು ಆಚರಣೆ ಮತ್ತು ವಿಧಿ. ಬೆಳೆಗಳಿಗೆ ಕಣ್ಣಾಸರಾಗದಿರಲಿ ದೆವ್ವ ಪೀಡೆಗಳ ಕಾಟ ದೂರವಾಗಲಿ, ಬೆಳೆ ಹುಲುಸಾಗಲಿ ಎಂದು ಹೋಲಿಗ್ಯ, ಹೋಲಿಗ್ಯ ಹೆಚ್ಚಲಿ ಹೆಚ್ಚಲಿ ಎಂದು ಚಲ್ಲುವ ನೀರು ಮುದ್ದೆ ಮಜ್ಜಿಗೆ ಅನ್ನದ ಚರಗವನ್ನು ಹೀಗೆನ್ನುತ್ತಾರೆ. ಚರಗ ಹೊಡೆಯುವುದು ಹುಳು ನಿವಾರಣೆಗೆ ಅನುಸರಿಸುವ ಕ್ರಿಯೆ , ಉಪಚಾರ. (ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಪುಟ: ೧೩೭)

ಚರಗದ ಪ್ರಾಚೀನತೆ

ಚರಗ ಪ್ರಪಂಚದಾದ್ಯಂತ ಪ್ರಾಚೀನ ಕಾಲದದಿಂದಲೂ ಪ್ರಚಲಿತವಿರುವ ಆಚರಣೆ. ಇದಕ್ಕೆ ಪೂರಕವಾಗಿ ಕೆಲವು ನಿದರ್ಶನಗಳನ್ನು ನೀಡುವುದಾದರೆ - ಸೆಂಟ್ರಲ್ ಬೋರ್ನಿಯಾದ ಕಾಯನ್ಸ್ ಜನಾಂಗದವರು ಬಿತ್ತನೆ ಮತ್ತು ಕೊಯ್ಲು ಸಂದರ್ಭದಲ್ಲಿ ತಮ್ಮ ಸುತ್ತ ಮುತ್ತ ಬೆಳೆಯುವ ತಿನ್ನಬಲ್ಲ ಗಿಡಮೂಲಿಕೆಗಳ ಬೇಯಿಸಿದ ವಸ್ತುವನ್ನು ಸಿಂಪಡಿಸುವುದನ್ನು ನೆನಯಬಹುದು ಅಷ್ಟೇ ಅಲ್ಲದೆ ಪ್ರಾಚೀನ ಗ್ರಂಥ ಸುರಪಾಲನ ವೃಕ್ಷಾರ್ಯುವೇದ ಸಹಾ ’ಜನಗಳ ಕುದೃಷ್ಟಿ ಪರಿಹಾರಕ್ಕಾಗಿ ಬೇಯಿಸಿದ ಸಾಲಿ ಅಕ್ಕಿಯ ಗಂಜಿಯನ್ನು ಮೊಸರು ಮತ್ತು ಸೈಂಧವ ಉಪ್ಪಿನೊಡನೆ ಬೆರಸಿ ಮರಗಳ ತೊಪಿನಲ್ಲೆಲ್ಲ ಚೆಲ್ಲಬೇಕು(ಶ್ಲೋಕ-೭೭)ಎಂದು ಹೇಳುತ್ತದೆ  ( ಉದ್ಧೃತ : ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಪುಟ: ೨೯೫) ಎಳ್ಳ ಅಮಾವಾಸ್ಯೆಯ ದಿನ ಭೂಮಿ ತಾಯಿಗೆ ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಬಂದಿದೆ. ಮಹಾಭಾರತದಲ್ಲಿ ಬರುವ ಒಂದು ಸನ್ನಿವೇಷದದಲ್ಲಿ ಪಾಂಡವರು, ಕೌರವರ ಮೆಲೆ ಯುದ್ಧ ಮಾಡಲು ಹೊರಟಾಗ ಮಾರ್ಗ ಮಧ್ಯೆ ಹೊಲ ಕಾಣುತ್ತದೆ. ಪಾಂಡವರೆಲ್ಲರೂ ಆ ಹೊಲದ ಹತ್ತಿರ ಹೋದಾಗ ಬನ್ನಿ ಮರವಿರುತ್ತದೆ. ಆ ಮರಕ್ಕೆ ಪೂಜೆಯನ್ನು ಸಲ್ಲಿಸಿ ತಾವು ತಂದಿದ್ದ ಆಹಾರವನ್ನು ಆ ಹೊಲದ ತುಂಬೆಲ್ಲ ಚೆಲ್ಲಿ, ಅಲ್ಲಿಯೇ ಊಟ ಮಾಡಿ ಯುದ್ಧಕ್ಕೆ ಹೊರಡುತ್ತಾರೆ.( ಚರಗ ಚೆಲ್ಲುವುದಕ್ಕೂ ಆಧುನಿಕತೆ ಸೋಂಕು(ಲೇಖನ),ಚಿದಂಬರ ಪ್ರಸಾದ, ಪ್ರಜಾವಾಣಿ, ಜನವರಿ ೧೨, ೨೦೧೩)

ಸ್ವರೂಪ, ಮಾದರಿ ಮತ್ತು ಪ್ರಸರಣ

ಈಗಾಗಲೇ ಪ್ರಸ್ತಾಪಿಸಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬಿನ್ನ ಭಿನ್ನ ರೂಪದಲ್ಲಿ ಚಾಲ್ತಿಯಲ್ಲಿರುವ ಈ ಚರಗ ಸಂಪ್ರದಾಯವು ಉತ್ತರ ಕರ್ನಾಟಕದ ಭಾಗಗಳಲ್ಲಿ ಎಳ್ಳು ಅಮವಾಸ್ಯೆಯಂದು ನಡೆಯುವ ಕೃಷಿ ಆಚರಣೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ಮಲೆನಾಡಿನ ಭಾಗಗಳಲ್ಲಿ ಭೂಮಿ ಹುಣ್ಣಿಮೆಯಿಂದು ಭೂಮಿಗೆ ಎಡೆ ಅರ್ಪಿಸಿ, ರೈತರು ತಮ್ಮ ಹೊಲಗಳಿಗೆ ಅನ್ನ ಬೀರುವ ಪದ್ಧತಿ ಇದೆ. ಅಲ್ಲದೆ ‘ಕಟ್ಟಿಜ್ಜಿ’ಯಲ್ಲಿ ರಕ್ತದ ಅನ್ನವನ್ನು ಗದ್ದೆಗಳಿಗೆ ಹಾಕುವ ಪದ್ಧತಿಯೂ ಇದೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಸಂಕ್ರಾಂತಿಯಂದು ಚರಗ ಚಲ್ಲುವ ಪದ್ಧತಿ ರೂಢಿಯಲ್ಲಿದೆ. ’ಪಂಚಮಿ ಹಬ್ಬದಲ್ಲಿ ‘ಕೇರ್ಯಾಂಬಲಿ’, ಜೋಕುಮಾರನ ಹಬ್ಬದಲ್ಲಿ ‘ಅಳ್ಳಾಂಬಲಿ’, ಶೀಗಿ ಹುಣ್ಣಿಮೆ ಹಾಗೂ ಎಳ್ಳ ಅಮವಾಸೆಯಂದು ‘ಚರಗ’ಚೆಲ್ಲುವುದು. ಹಲವಾರು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.’( ಈರಯ್ಯ ಕಿಲ್ಲೇದಾರ್, ಚರಗ - ಜೈವಿಕ ಕೀಟ ಹತೋಟಿ ವಿಧಾನ)
ಚರಗದ ಮಾದರಿಗಳು :  ಕರ್ನಾಟಕದಲ್ಲಿ ಭಿನ್ನ ಪ್ರದೇಶ ಹಾಗೂ ಭಿನ್ನ ಸಮುದಾಯಗಳಲ್ಲಿ ನಡೆಯುತ್ತಿರುವ ಚರಗದ ಇನ್ನೂ ಕೆಲವು ಮಾದರಿಗಳನ್ನು ಈ ಕೆಳಕಂಡಂತೆ ಉಲ್ಲೇಖಿಸಬಹುದು.
ಹೊಲದ ದೇವರು : ಹೊಲದಲ್ಲಿ ಬೆಳೆಗಳು ಬೆಳದು ನಿಂತಾಗ ಹೊಲದಲ್ಲಿ ಪ್ರಾಣಿ ಬಲಿ ನೀಡಿ   ಅದರ ರಕ್ತ ಹಾಗೂ ಹೊಟ್ಟೆಯೊಳಗಿನ ಕರಸನ್ನು ಅನ್ನದಲ್ಲಿ ಬೆರಸಿ ಹೊಲದ ಸುತ್ತ ಚರಗ ಚೆಲ್ಲುತ್ತಾರೆ.
ಯುಗಾದಿ ಅಮವಾಸೆ ದಿನ : ಯುಗಾದಿ ಅಮವಾಸೆಯ ದಿನ ದೇವರ ಎತ್ತುಗಳ ಗೂಡಿನಲ್ಲಿ( ದೊಡ್ಡಿಯಲ್ಲಿ) ಪ್ರಾಣಿ ಬಲಿ ನೀಡಿ ರಕ್ತ ಮತ್ತು ಕರಸನ್ನು ಅನ್ನದಲ್ಲಿ ಬೆರಸಿ ಗೂಡಿನ ಸುತ್ತ ಚರಗ ಚೆಲ್ಲುತ್ತಾರೆ. ಇದೇ ದಿನ ದನ/ಕುರಿಗಹಿಗಳು ತಮ್ಮ ತಮ್ಮ  ಕುರಿ/ದನದ ದೊಡ್ಡಿಗಳಲ್ಲಿ ಪ್ರಾಣಿ ಬಲಿ ನೀಡಿ ದೊಡ್ಡಿಯ ಸುತ್ತಾ ಚರಗ ಚೆಲ್ಲುತ್ತಾರೆ.
ಮಾರಿ ಹಬ್ಬಗಳಲ್ಲಿ ಊರಲ್ಲಿ ಮಾರಿಗುಡಿಯ ಮುಂದೆ ಪಟ್ಟದ ಕೋಣವನ್ನು ಬಲಿ ನೀಡಿ ಅದರ  ರಕ್ತ ಮತ್ತು ಕರಸನ್ನು ಅನ್ನದಲ್ಲಿ ಬೆರೆಸಿ ಊರಿನ ಸುತ್ತಾ ಚರಗ ಚೆಲ್ಲುತ್ತಾರೆ.
ದಿನಾಲು ಮುದ್ದೆ ಮಾಡಿದ ನಂತರ ಅದರ ನೀರನ್ನು ಮನೆಗೆ ಮುಸುರೆ ಚೆಲ್ಲುತ್ತಾರೆ
ಬೆಳೆಗಳಿಗೆ ರೋಗ ರುಜನಿ ಬಿದ್ದಾಗ ಅಥವ ಬೀಳುವುದಕ್ಕಿಂತ ಮೊದಲು ಕೆಲವರು ನಿರ್ದಿಷ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ತೀರ್ಥವನ್ನು ಹೊಲಗಳಿಗೆ ಚೆಲ್ಲುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ತೀರ್ಥವನ್ನು ಅಲ್ಲಿಂದಲೇ ತರಬಹುದು ಇಲ್ಲವೇ ಅಲ್ಲಿ ತೀರ್ಥದ ಕಾಯಿ ಮಾಡಿಸಿ ತಂದು ಹೊಲದಲ್ಲಿ ಪೂಜೆಮಾಡಿ ಆ ಕಾಯಿಯನ್ನು ಹೊಡೆದು ಅದರ ತೀರ್ಥವನ್ನು ಚೆಲ್ಲುವುದುಂಟು. 
ಮಳೆ ಗುಡುಗು, ಬೆಂಕಿಗಳ ಆರ್ಭಟ ಜಾಸ್ತಿಯಾದಾಗ ಮನೆಯೊಳಗಿನ ಮುದ್ದೆಯ ಮುಸುರೆ ನೀರನ್ನು ಚೆಲ್ಲುತ್ತಾರೆ.
ಸ್ತ್ರೀ ದೇವತೆಗಳ ಹಬ್ಬ ಜಾತ್ರೆಗಳು ಮುಗಿದ ನಂತರ ಇಡೀ ಊರಿಗೆ ಅನ್ನದ ಮುಸುರೆ ಚೆಲ್ಲುವುದುಂಟು

ಘೋಷ ವಾಕ್ಯಗಳು 
 ಚರಗ ಚೆಲ್ಲುವಾಗ  ಕೆಲವು ವಾಕ್ಯಗಳನ್ನು ಉದ್ಧರಿಸಲಾಗುತ್ತದೆ. ಅವುಗಳನ್ನು ಈ ಮುಂದಿನಂತೆ ಉಲ್ಲೇಖಿಸಬಹುದು : 

ಮುಂದಿನವರು ಆಹಾರ ಮಿಶ್ರಣ ಮಾಡಿದ ನೀರು ಚಿಮುಕಿಸಿ ’ಹುಲ್ಲುಲ್ಲಗೋ ಚಲ್ಲಂಬರಗೋ..’ ಎಂದು ಕೂಗುತ್ತಾರೆ.
ತಲೆ ಮೇಲೆ ತರಹೇವಾರಿ ಭಕ್ಷ್ವ ಭೋಜನದ ಬುಟ್ಟಿ ಹೊತ್ತು ಹೊಲದತ್ತ ಹೆಜ್ಜೆ ಹಾಕಿದ ರೈತ ಕುಟುಂಬಗಳು. ’ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ’ ಎಂದು ಕೂಗುತ್ತ ಭೂರಮೆಗೆ ಚರಗ (ತೀರ್ಥ) ಚೆಲ್ಲಿ ಭೂತಾಯಿಯ ಪ್ರಾರ್ಥಿಸಿದರು.
ಬಗೆ ಬಗೆಯ ಅಡಿಗೆಯನ್ನು ಮಾಡಿ ಬುತ್ತಿಕಟ್ಟಿಕೊಂಡು ಕುಟುಂಬ ಸಮೇತರಾಗಿ ತಮ್ಮ ಹೊಲಗಳಿಗೆ ತೆರಳಿ ಹೊಲದ ಮಧ್ಯದಲ್ಲಿರುವ ಬನ್ನಿಗಿಡ ಅಥವಾ ಮಧ್ಯ ಭಾಗದಲ್ಲಿ ಸುಮಂಗಲೆಯರು ಐದು ಕಲ್ಲುಗಳನ್ನು ಪಾಂಡವರು ಎಂದು ಪೂಜಿಸಿ, ಕಾಯಿ ಹೊಡೆದು ತಾವು ತಂದ ವಿವಿಧ ಅಡಿಗೆಗಳನ್ನು ನೈವೇದ್ಯ ಸಲ್ಲಿಸಿದ ನಂತರ ಅಡಿಗೆಯನ್ನೆಲ್ಲಾ ಮಿಶ್ರಣ ಮಾಡಿ ಅದನ್ನು ಕುಟುಂಬದ ಒಬ್ಬರು ತಮ್ಮ ಹೊಲದ ಸುತ್ತ ಇರುವ ನಾಲ್ಕು ಬದುವಿನ ದಿಕ್ಕುಗಳಿಗೆ ಒಬ್ಬರು ಹುಲಿಗೋ ಹುಲಿಗೋ ಎನ್ನುತ್ತಾ ನೀರು ಸಿಂಪಡಿಸಿದರೆ ಅದರ ಹಿಂದೆ ಮತ್ತೊಬ್ಬರು ಮಿಶ್ರಣ ಮಾಡಿದ ಅಡಿಗೆಯನ್ನು ಎರಚುತ್ತಾ ಸಲಾ ಪೊಲಿಗೋ ಎಂದು ಸಾರುತ್ತಾ ಹೊಲದ ಸುತ್ತಲೂ ಚರಗ ಚೆಲ್ಲಿದರು.
ಹೊಲದಲ್ಲಿ ಬೇವಿನ, ಬನ್ನಿಯ ಅಥವಾ ಆರಿ ಗಿಡದ ಕೆಳಗೆ ಐದು ಕಲ್ಲುಗಳನ್ನಿಟ್ಟು ಪೂಜೆ ಮಾಡಿ ನೈವೇದ್ಯ ಸಮರ್ಪಣೆ ಮಾಡಿದ ನಂತರ ಎಲ್ಲ ಆಹಾರ ಪದಾರ್ಥಗಳನ್ನು ಚೂರು ಚೂರು ಮಾಡಿ ಹೊಲದ ತುಂಬ ‘ಹುಲುಲ್ಲೋ ಹುಲ್ಗಿ’ ಎನ್ನುತ್ತ ಬೆಳೆ ಹುಲುಸಾಗಲಿ ಎಂದು ಪ್ರಾರ್ಥಿಸುತ್ತ ಚೆಲ್ಲುತ್ತಾರೆ. ಅದೂ ಅಲ್ಲದೆ ಎಳ್ಳ ಅಮವಾಸೆಯ ದಿವಸ ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಿಂಗಾರಿ ಬೆಳೆಗಳಲ್ಲಿ ಚರಗ ಚೆಲ್ಲುವ ಸಂಪ್ರದಾಯವಿದೆ.
ಹೊಲದಲ್ಲಿರುವ ಬನ್ನಿಗಿಡದ ಕೆಳಗೆ ಭರಮ ದೇವರೆಂದು ಕರೆಯುವ ಕೃಷಿ ದೇವತೆಯನ್ನು ಐದು ಗುಂಡುಕಲ್ಲುಗಳನ್ನಿಡುವುದರ ಮೂಲಕ ಸಾಂಕೇತಿಕವಾಗಿ ಪ್ರತಿಷ್ಠಾಪಿಸುತ್ತಾರೆ. ದೇವರ ಕಲ್ಲುಗಳನ್ನು ತೊಳೆದು ಹೂ ಏರಿಸಿ, ತಿಲಕವಿಟ್ಟು ಅಲಂಕರಿಸುತ್ತಾರೆ. ನೈವೇದ್ಯ ಮಾಡಿದ ನಂತರ ಸ್ವಲ್ಪ ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ ಚಲ್ಲಿ ‘ಉಲ್ಲುಲ್ಲಗೋ ?.ಚಳಂಬ್ರಿಗೋ’ ಎಂದು ಹೇಳುತ್ತಾರೆ. ನಂತರ ‘ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಮಡಿಲು ತುಂಬಿ ಎಲ್ಲರೂ ಕುಳಿತು ನೈವೇದ್ಯದೊಂದಿಗೆ ಅಂದಿನ ಅಡುಗೆಯನ್ನು ಸವಿಯುತ್ತಾರೆ. 
ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ.  ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ. 
ಹೊಲಕ್ಕೆ ಸಾಗಿದ ನಂತರ  ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ  ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ.  ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ ‘ಉಲ್ಲುಲ್ಲಗೋ? ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ.  
ಚರಗದ ಆಚರಣೆಯ ಆಶಯಗಳು : ಚರಗ ಚೆಲ್ಲುವ ಕ್ರಿಯೆಯ ಹಿಂದೆ ನಂಬಿಕೆ ಮತ್ತು ಅನುಭವ ಜನ್ಯ ಜ್ಞಾನ ಇರುವುದನ್ನು ಗುರುತಿಸಬಹುದಾಗಿದೆ. ಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ.   ಈ ಸಂಪ್ರದಾಯ/ ಆಚರಣೆಯನ್ನು ಅನುಸರಿಸುತ್ತಾ ಬಂದಿರುವ ಜನ ಹಾಗೂ ಅಧ್ಯಯನ ಮಾಡಲು ಪ್ರಯತ್ನಿಸಿರುವ ವಿದ್ಯಾವಂತರು ನಂಬಿರುವ/ಗುರುತಿಸಿರುವ ಉದ್ದೇಶಗಳು ಕೂತೂಹಲದಾಯಕವಾಗಿದ್ದು ಅವುಗಳು ಹೀಗಿವೆ :
’ಬೆಳೆ ಅಂದರೆ ರಾವು ಇದ್ದಂತೆ ಅದಕ್ಕೇ ಚರಗ ಹಾಕುತ್ತೇವೆ.’ ’ಹೊಲ ಗದ್ದೆ ತೋಟಗಳಲ್ಲಿ ರಾತ್ರಿ ಹಗಲು ಓಡಾಡುತಿರುತೀವಿ ನಮಗೆ ಏನೂ ಆಗದಂತಿರಲಿ ಎಂದು ಚರಗ ಹಾಕುತ್ತೇವೆ.’
ರೈತ ತಾನು ಬೆಳೆದಿದ್ದನ್ನು ತಾನೇ ಉಪಯೋಗಿಸದೇ ಭೂತಾಯಿಗೂ ಸಮರ್ಪಸಿ, ಪ್ರಾಣಿ - ಪಕ್ಷಿಗಳು ಅದನ್ನು ತಿಂದು ಸಂತೋಷ ಪಡಲಿ ಎಂಬ ಧ್ಯೇಯ ಈ ಚರಗದ ವಿಶೇಷ.
ನೆಲವನ್ನು ಉತ್ತಿ-ಬಿತ್ತಿ, ಗೊಬ್ಬರ ಹಾಕಿ ಬೆಳೆ ಮೈತುಂಬಿಕೊಂಡಾಗ ರಾಶಿಗಾಗಿ ಕಾಯುವ ದಿನಗಳಲ್ಲಿ ಬೆಳೆ ಹುಲುಸಾಗಿ ಬರಲಿ ಎಂದು ಭೂತಾಯಿಗೆ ಪೂಜೆ ಮಾಡುವುದೇ ಚರಗ.
ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.-ಈರಯ್ಯ ಕಿಲ್ಲೇದಾರ
ಚರಗ ಮೂಢನಂಬಿಕೆ ಅಲ್ಲ: ಕೇರ್ಯಾಂಬಲಿ, ಅಳ್ಳಾಂಬಲಿ ಮತ್ತು ಚರಗ ಚೆಲ್ಲುವ ಸಂಪ್ರದಾಯ ಮೂಢನಂಬಿಕೆ ಅಲ್ಲ. ಅಂಧಾನುಕರಣೆಯಲ್ಲ. ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಬೆಳೆಯುತ್ತಿರುವ ಹಚ್ಚಹಸುರಾದ ಬೆಳೆಯು ಕಂಗೊಳಿಸುತ್ತಿರುವ ಸಂದರ್ಭದಲ್ಲಿ, ಬಸಿರಾದ ಹೆಂಗಸಿಗೆ ಬಯಕೆಯೂಟ ನೀಡಿದಂತೆ, ಹಸಿರುಡುಗೆ ತೊಟ್ಟು ಬಸಿರಾದ ಭೂಮಿತಾಯಿಗೆ ಬಯಕೆಯೂಟ ನೀಡುವರೆಂಬ ನಂಬಿಕೆ ಇದೆ. ಇದಷ್ಟೇ ಅಲ್ಲ. ಇದು ಸಂಪ್ರದಾಯ ಅಥವಾ ಪರಂಪರೆ ಅಲ್ಲ. ಇದರಲ್ಲಿ ಹಲವಾರು ವೈಜ್ಞಾನಿಕ ಸಂಗತಿಗಳಿವೆ. ಇದೊಂದು ಜೈವಿಕ ಕೀಟ ಹತೋಟಿ ವಿಧಾನ ಆಗಿದೆ. ಹೊಲದಲ್ಲಿರುವ ಬೆಳೆಗಳ ಆಯಾ ಹಂತಗಳಲ್ಲಿ ಕೀಟಗಳ ವಂಶವೃದ್ಧಿಯಾಗದಂತೆ ತಡೆಯಲು ಈ ಆಚರಣೆಗಳು ರೂಢಿಯಲ್ಲಿವೆ. ಕೋಲುಗಳಿಗೆ ತೂಗು ಹಾಕಿದ ಸುಣ್ಣ ಹಚ್ಚಿದ ಬಿಳಿ ಗಡಿಗೆಗಳು ಪಕ್ಷಿಗಳನ್ನು ಹೊಲದಲ್ಲಿ ಆಕರ್ಷಿಸುತ್ತವೆ. ಹೊಲದಲ್ಲಿ ಚೆಲ್ಲಿದ ಆಹಾರ ಪದಾರ್ಥಗಳನ್ನು ತಿನ್ನಲು ಪಕ್ಷಿಗಳು ಸಹಜವಾಗಿ ಆಕರ್ಷಿತವಾಗುವವು. ಆಗ ಪಕ್ಷಿಗಳಿಗೆ ಬೆಳೆಯನ್ನು ಬಾಧಿಸುವ ಕೀಟಗಳ ವಾಸನೆ ಬರುತ್ತದೆ. ಹೀಗಾಗಿ ಪಕ್ಷಿಗಳು ಕೀಟಗಳನ್ನು ತಿಂದು ತೇಗುತ್ತವೆ.
ಯಾವುದೇ ಖರ್ಚಿಲ್ಲದೇ, ವಿಷ ಸಿಂಪಡಿಸದೆ, ಕೀಟಗಳ ನಿಯಂತ್ರಣ ಮಾಡುವ ವಿಧಾನ ಇದಾಗಿದೆ. ಪರಿಸರಕ್ಕೆ ಹಾನಿ ಇಲ್ಲ. ಭೂಮಿ, ನೀರು ಮತ್ತು ಆಹಾರ ವಿಷಮುಕ್ತವಾಗುವುದು. ಉಪಕಾರಿ ಕೀಟಗಳನ್ನು ಸಾಯದಂತೆ ತಡೆಯುವ ಈ ವಿಧಾನ ಸಂಪೂರ್ಣ ಸ್ವಾವಲಂಭಿ ಮತ್ತು ಜೈವಿಕ ಕೀಟ ಹತೋಟಿ ವಿಧಾನವಾಗಿದೆ.

     ಚರಗದ ಆಚರಣೆ ಹಿಂದುಗಳಲ್ಲಿ ಅಲ್ಲದೆ ಅನ್ಯ ಧರ್ಮಿಯರಲ್ಲೂ ಪ್ರಚಲಿತದಲ್ಲಿರುವುದು ಅತ್ಯಂತ ಕುತೂಹಲದಾಯಕವಾಗಿದೆ. ಉದಾ : ಕರ್ನಾಟಕದ ಪಿಂಜಾರ ಸಮುದಾಯದಲ್ಲೂ ಈ ಆಚರಣೆ ಜಾರಿಯಲ್ಲಿರುವುದನ್ನು ಕಾಣಬಹುದು.  ಪಿಂಜಾರರು ತಮ್ಮ ಮೂಲಾಶ್ರಮದ ಹಬ್ಬಗಳನ್ನು ಎಲ್ಲ ಹಿಂದೂ ಶೂದ್ರ ಸಮುದಾಯದವರು ಆಚರಿಸುವ ವಿಧಾನದಲ್ಲೇ ಆಚರಿಸುತ್ತಾರೆ. ಪಿಂಜಾರರು ಮಾರ್ನೆಮಿ (ಮಹಾನವಮಿ) ಹಬ್ಬ ಇನ್ನೇನು ಬಂತು ಅನ್ನುವಾಗ, (ಅಮಾವಾಸ್ಯೆಯಾದ ಹನ್ನೊಂದು ದಿನದಲ್ಲಿ ಹಬ್ಬ ಎನ್ನುತ್ತಾರೆ) ಮನೆಗೆ ಸುಣ್ಣ ಬಳಿದು ಬಾಗಿಲಿಗೆ ಕೆಮ್ಮಣ್ಣು ಬಳಿದು ಶುದ್ಧ ಮಾಡುತ್ತಾರೆ. ಹಬ್ಬದ ದಿನ ಹುಗ್ಗಿ, ಅನ್ನ, ಸಾರು ಮಾಡಿಕೊಂಡು ಊರಿನ ಹನುಮಂತ ದೇವರ ಗುಡಿ ಅಥವಾ ಈಶ್ವರ ಗುಡಿಗೆ ಹಣ್ಣು ಕಾಯಿ ಮಾಡಿಸಿ ಅಡ್ಡಬಿದ್ದು ಬರುತ್ತಾರೆ. ನಂತರ ಹೊಲಕ್ಕೆ ಹೋಗಿ ಇದ್ದ (ಹತ್ತಿ ಅಥವಾ ಜೋಳ) ಬೆಳೆಯ ತುಂಬಾ ಅನ್ನ, ಮಜ್ಜಿಗೆಯನ್ನು ಕಲಸಿಕೊಂಡು ಚರಗ ಉಗ್ಗುತ್ತಾರೆ.( ಡಾ. ಬಿ.ಸಿ. ದಾದಾಪೀರ್, ಪಿಂಜಾರರ ಮಹಿಳಾ ಸಂಸ್ಕೃತಿ, ಸಂಸ್ಕೃತಿ ಮಹಿಳಾ ಮಾಲಿಕೆ -೨)


ಪರಾಮರ್ಶನ
೧. ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
೨. ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಎಸ್.ಎಸ್. ಹಿರೇಮಠ, ೧೯೯೩, ಸಮತಾ ಪ್ರಕಾಶನ, ಹೊಸಪೇಟೆ
೩. ಚರಗ ಚೆಲ್ಲುವುದಕ್ಕೂ ಆಧುನಿಕತೆ ಸೋಂಕು(ಲೇಖನ),ಚಿದಂಬರ ಪ್ರಸಾದ, ಪ್ರಜಾವಾಣಿ, ಜನವರಿ ೧೨ ೨೦೧೩
೪. ಚರಗ ಚೆಲ್ಲಿ ವಸುಧೆಗೆ ವಂದಿಸಿದ ರೈತರು, ಉದಯವಾಣಿ, ಜನವರಿ ೧೨ ೨೦೧೩
೫. ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ, ಉದಯವಾಣಿ ? ಶನಿ., ೧೨ ಜನವರೀ, ೨೦೧೩
೬. ಚರಗ - ಜೈವಿಕ ಕೀಟ ಹತೋಟಿ ವಿಧಾನ, ಈರಯ್ಯ ಕಿಲ್ಲೇದಾರ , hಣಣಠಿ://ತಿತಿತಿ. ಞಚಿಟಿಚಿರಿಚಿ.iಟಿ  
೭. ಚರಗ(ಲೇಖನ), ಸ.ಚಿ. ರಮೇಶ್, ಇದರಲ್ಲಿ :  ಕರ್ನಾಟಕದ ಜನಪದ ಆಚರಣೆಗಳು, ೨೦೦೮,  ಕನ್ನಡ ವಿಶ್ವವಿದ್ಯಾಲಯ, ಹಂಪಿ
೮. ಬೆಳೆ ಸಂಬಂಧಿ ಆಚರಣೆಗಳು, ಮಲ್ಲಿಕಾರ್ಜುನ ಹೊಸಪಾಳ್ಯ, <hಣಣಠಿ://ತಿತಿತಿ>. ಞಚಿಟಿಚಿರಿಚಿ.iಟಿ  
೯. ಪಿಂಜಾರರ ಮಹಿಳಾ ಸಂಸ್ಕೃತಿ, ಡಾ. ಬಿ.ಸಿ. ದಾದಾಪೀರ್, ಸಂಸ್ಕೃತಿ ಮಹಿಳಾ ಮಾಲಿಕೆ -೨, 
         ಸಂ : ಎಂ.ಎಸ್. ಶೇಖರ್  ಕರ್ನಾಟಕ ಸಾಹಿತ್ಯ   ಅಕಾಡೆಮಿ, ಬೆಂಗಳೂರು
೧೦. ಕ್ಷೇತ್ರಕಾರ್ಯದ ಮಾಹಿತಿಗಳು