Saturday, 4 July 2015
ಕನ್ನಡ ಜಾನಪದ ಜಗತ್ತಿನ ಅಧ್ಯಯನ ಕ್ಷೇತ್ರದಲ್ಲಿ ಕಳೆದ ೫೦-೬೦ ವರ್ಷಗಳಿಂದ ಜಾನಪದವನ್ನು ಅರ್ಥೈಯಿಸುವ ಪ್ರಯತ್ನಗಳು ನಡೆದಿದೆ. ಇವುಗಳಲ್ಲಿ ಜಾನಪದ ನಮ್ಮ ಅಸ್ಮಿತೆಯ ಪ್ರಶ್ನೆ. ಅದನ್ನು ಉಳಿಸಿ ಬೆಳಸಬೇಕು ಎಂಬ ಭಾವನೆ ಎದ್ದು ಕಾಣಿಸುತ್ತದೆ. ಈ ಉಳಿಸಿ ಬೆಳೆಸುವ ಆಶಯಗಳಲ್ಲಿ ಉಳಿಸುವ ಕೆಲಸ ಚನ್ನಾಗಿಯೇ ಆಗಿದೆ. ಆದರೆ ಬೆಳೆಸುವ ಕೆಲಸ ಸಮಾಧಾನಕರವಾದ ರೀತಿಯಲ್ಲಿ ಇಲ್ಲ. ಜಾನಪದವನ್ನು ಬೆಳೆಸುವ ಕ್ರಿಯೆಗೆ ಮುಖ್ಯವಾಗಿ ಬೇಕಿರುವುದು ಆ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದುದು. ಜಾನಪದ ಸೃಷ್ಟಿಗಳ ವಿವಿಧ ರೀತಿಯ ರಚನೆಗಳ ಹಿಂದೆ ಸಾಕಷ್ಟು ಸಂಕೀರ್ಣತೆಯಿದೆ. ಅವುಗಳನ್ನು ನಿರಚನೆಗೊಳಿಸಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂಥ ಪ್ರಯತ್ನಗಳು ನಮ್ಮ ಈವರೆಗಿನ ಆಧ್ಯಯನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ನಮ್ಮ ಜಾನಪದ ರಚನೆಗಳನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ಸಾಧ್ಯವಾಗದ ಹೊರತು ಅದನ್ನು ಸಮಕಾಲೀನ ಅಥವಾ ಭವಿಷ್ಯದ ಸಮಾಜಕ್ಕೆ ಅನ್ವಯಿಸುವುದಾಗಲಿ, ಅದನ್ನು ಬೆಳಸಿ ಮುಂದುವರೆಸುವುದಾಗಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಇನ್ನು ಮುಂದಾದರೂ ನಾವು ನಮ್ಮ ಜಾನಪದ ಸೃಷ್ಟಿಗಳನ್ನು ನಿಜವಾದ ನೆಲೆಗಳಲ್ಲಿ ಅರ್ಥೈಯಿಸುವ ಪ್ರಯತ್ನಗಳನ್ನು ಆರಂಭಿಸಬೇಕಿದೆ. ಈ ಪ್ರಯತ್ನದ ಭಾಗವಾಗಿ ಸಮಗ್ರ ಜಾನಪದದ ಒಂದು ಭಾಗವಾಗಿರುವ ಜನಪದ ಸಾಹಿತ್ಯವನ್ನು ’ಪ್ರತಿಮಾ ವಿಧಾನ’ ತತ್ವದ ಮೂಲಕ ಅರ್ಥೈಸುವ ಪ್ರಯತ್ನ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ನಡೆದ ಸರಣಿ ಅಂಬೇಡ್ಕರ್ ಜಯಂತಿ ಯ ಸಮಾರೋಪ ಸಮಾರಂಭದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ ಎಂಬ ಹೆಸರಲ್ಲಿ ಮಾತನಾಡಿದ ಮಾತುಗಳು *
ಡಾ. ಎಸ್.ಎಂ. ಮುತ್ತಯ್ಯ
ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಕೊನೆಯ ಕಾಲದಲ್ಲಿ ತನ್ನ ಚಳವಳಿ ಹಾಗೂ ಜನರು ತಲುಪಿರುವ ಅವಸ್ಥೆಯನ್ನು ಕುರಿತು ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುವುದರ ಮೂಲಕ ನನ್ನ ಮಾತುಗಳನ್ನು* ಆರಂಭಿಸುತ್ತೇನೆ.
೧. "ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ. ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ"
೨. "ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ"
೩. "ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!"
೪. "ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು...’, ‘ಹೋಗು... ಅವರಿಗೆ ಹೇಳು...’, ‘ಹೋಗು... ಅವರಿಗೆ ಹೇಳು..."(* ಬಾಬಾಸಾಹೇಬರ ಆಪ್ತಕಾರ್ಯದರ್ಶಿ ಸರ್ ನಾನಕ್‌ಚಂದ್ ರತ್ತು, "ಐಚಿsಣ ಜಿeತಿ ಥಿeಚಿಡಿs oಜಿ ಆಡಿ. ಂmbeಜಞಚಿಡಿ")
ಅಂಬೇಡ್ಕರ್ ಅವರ ಮೇಲಿನ ಮಾತುಗಳಿಂದ ವ್ಯಕ್ತವಾಗುವ ಸಂಗತಿಗಳು
೧. ನಾನು ನನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ ಎನ್ನುವ ಕೊರತೆ. ಅದನ್ನು ಮುಂದುವರೆಸಲು ಬೇಕಾದ ವಯಸ್ಸು ಮತ್ತು ಆರೋಗ್ಯ ನನ್ನ ಬಳಿ ಇಲ್ಲವಲ್ಲ ಎಂಬ ನಿರಾಸೆ
೨. ನನ್ನ ಹೋರಾಟದ ಫಲವಾಗಿ ದಕ್ಕಿದ ಕೆಲವಾದರೂ ಫಲಗಳನ್ನು ಪಡೆದು ತಮಗೆ ತಾವೇ ಸುಖ ಪಡುತ್ತಿದ್ದಾರೆ. ಅವರಿಗೆ ತಮ್ಮ ಹಿಂದಿರುವ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಾಗಿ ಅವರು ಹಾದಿತಪ್ಪಿದ ಅಯೋಗ್ಯರಾಗಿದ್ದಾರೆ
೩. ನನ್ನ ನಂತರ ಚಳುವಳಿಯನ್ನು ಮುನ್ನಡೆಸುವರು ಅಂದುಕೊಂಡಿದ್ದ ವ್ಯಕ್ತಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಬದಲಿಗೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಹಾಗಾಗಿ ಅಂತಹ ಜವಾಬ್ದಾರಿ ಇರುವ ಯಾವ ವ್ಯಕ್ತಿಗಳು ಕಾಣುತ್ತಿಲ್ಲ
೪. ನಾನು ಚಳವಳಿಯನ್ನು ಬಹಳ ಕಷ್ಟಪಟ್ಟು ನನ್ನ ಜೀವನವಡೀ ಶತೃಗಳ ಜೊತೆ ಹೋರಾಡಿ ನೋವನ್ನು ಅನುಭವಿಸಿ ಕಟ್ಟಿದ ಚಳವಳಿಯನ್ನು ಸಮರ್ಥವಾಗಿ ಮುನ್ನಡೆಸಬೇಕು. ಮುನ್ನಡೆಸಲು ಸಾಧ್ಯವಾಗದಿದ್ದರೆ ಅದನ್ನು ಹಿಂದಕ್ಕೆ ತಳ್ಳಬಾರದೆಂಬುದನ್ನು ನನ್ನ ಜನ ತಿಳಿಯಬೇಕು
ಅಂದರೆ ಅಂಬೇಡ್ಕರ್ ವಿಚಾರ ಹಾಗೂ ಹೋರಾಟಗಳು ಅವರ ಕಾಲಕ್ಕೇ ಸಾಕಷ್ಟು ನಿಷ್ಕ್ರಿಯೆ ಹಾಗೂ ಭ್ರಷ್ಟಗೊಂಡಿದ್ದವು ಎಂಬುದು ನಾವು ಗಮನಿಸಬೇಕಾದ ಸಂಗತಿ . ಈ ಸಂದೇಶ ಇಂದು ನಮ್ಮನ್ನು ಇನ್ನಷ್ಟು ಚುಚ್ಚಿ ಎಚ್ಚರಿಸುತ್ತಿದೆ. ಅಂಬೇಡ್ಕರ್ ಅವರ ವಿಚಾರ ಮತ್ತು ಹೋರಾಟಗಳನ್ನು ಸಮರ್ಥವಾಗಿ ಮನ್ನಡೆಸಲು ಆಗಿಲ್ಲ ಎಂಬುದನ್ನು ನಾವು ಇಂಥಲ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ ಅಂಬೇಡ್ಕರ್ ಅವರು ಬಯಸಿದಂತೆ ಅವರ ಹೋರಾಟದ ರಥವನ್ನು ಇರುವಲ್ಲಿಯಾದರೂ ಉಳಿಸುವ ಕೆಲಸವನ್ನು ಮಾಡಿದ್ದೇವೆ ಎಂಬುದನ್ನು ಯೋಚಿಸಿದರೆ ಇದಕ್ಕೂ ಹೌದು ಎಂದು ಧೈರ್ಯವಾಗಿ ಹೇಳುವುದು ಕಷ್ಟವೆ. ಯಾಕೆ ಹೀಗೆ ಎಂದರೆ ಅಂಬೇಡ್ಕರ್ ಅವರ ಕಾಲಕ್ಕೆ ಕಾಣಿಸಿಕೊಂಡಿದ್ದ ಸ್ವ-ಹಿತಾಸಕ್ತಿ, ಅಧಿಕಾರ ಲಾಲಸೆ, ಜವಾಬ್ಧಾರಿಯಿಂದ ನುಣಚಿಕೊಳ್ಳುವ ಗುಣ, ಕಾಳಜಿ ಇಲ್ಲದಿರುವುದು ಇಂಥ ದುಷ್ಟ ಶಕ್ತಿಗಳು ಅಂದಿನಿಂದ ಇಂದಿನವರೆಗೂ ತನ್ನ ಭಾಹುಗಳನ್ನು ಇನ್ನಷ್ಟು ಉದ್ದಕ್ಕೆ ಚಾಚಿರುವುದನ್ನು ಕಾಣುತ್ತಿದ್ದೇವೆ.
ಇದರ ದುಷ್ಪರಿಣಾಮವೆಂದರೆ ಇಂದಿನ ಸಾಮಾನ್ಯ ದಲಿತರು ತಮ್ಮನ್ನು ಉದ್ಧರಿಸುತ್ತೇವೆಂದು ಬಂದ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆ, ರಾಜಕೀಯ ಪಕ್ಷವನ್ನು ಕೊನೆಗೆ ಸಂವಿಧಾನವನ್ನು ನಂಬಲಾರದ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ನಾವೇ ಕಾರಣವಾಗಿದ್ದರೂ ಆ ಗೂಬೆಯನ್ನ ಇನ್ಯಾರದೋ ಮೇಲೆ ಕೂರಿಸಿ ನಾವು ಮಾತ್ರ ಪಾರಾಗುತ್ತಿರುವುದು ಇಂದಿನ ಸಮಾನ್ಯ ದಲಿತರಲ್ಲಿ ಇನ್ನಷು ಗೊಂದಲ ಅನುಮಾನಗಳು ಮೂಡುವುದಕ್ಕೆ ಕಾರಣವಾಗಿದೆ.
ಇಂದು ದಲಿತರ ಉದ್ದಾರಕ್ಕಾಗಿ ನಡೆಯುತ್ತಿರುವ ಕೆಲಸಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸುವುದು ಉಚಿತ. ದಲಿತರ ಉದ್ಧಾರವೆಂದರೆ ಯಾರ ಒಬ್ಬರ ಅಣತಿಯಂತೆ ಒಬ್ಬರ ಕೈಯಲ್ಲೇ ನಡೆಯುವ ಕೆಲಸವಲ್ಲ. ಇದರಲ್ಲಿ ದಲಿತೇತರರು ಅಥವಾ ದಲಿತರನ್ನು ಸಮಾನತೆಯಿಂದ ಕಾಣುವ ಮನಸ್ಸಿಲ್ಲದ ಜನರು ಸೇರುತ್ತಾರೆ ಆದರೂ. ನಾನು ಇಲ್ಲಿ ಅವರ ದೋಷಗಳನ್ನು ಇಲ್ಲಿ ಹೇಳದೆ ನಮ್ಮ ಅಂದರೆ ದಲಿರನ್ನು ಉದ್ದರಿಸುತ್ತೇವೆಂದು ಸ್ಥಾಪಿಸಿಕೊಂಡ ನಿಯೋಗಗಳೇನಿವೆ ಅವುಗಳು ಮತ್ತು ಅವುಗಳನ್ನು ಮನ್ನೆಡೆಸುವ ಮುಂದಾಳುಗಳ ದೋಷಗಳ ಬಗ್ಗೆ ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಇಂದು ಅನೇಕರು ಒಪ್ಪಿರುವಂತೆ ‘ಸಾವಿರಾರು ವರ್ಷಗಳ ಅಸಮಾನತೆಯನ್ನು ಹೋಗಲಾಡಿಸಲು ಕಳೆದ ಮುಕ್ಕಾಲು ಶತಮಾನದ ವ್ಯವಸ್ತಿತ ಹೋರಾಟ ಹಾಗೂ ಕಾನೂನಿನ ಬೆಂಬಲಗಳು ಇದ್ದಗ್ಯೂ ದಲಿತರ ಸ್ಥಿತಿ ಇನ್ನೂ ಹಾಗೆ ಇದೆ ಎನ್ನುವುದಾದರೆ ಅದಕ್ಕೆ ಹೊರಗಿನ ಕಾರಣಗಳು ಎಷ್ಟಿವೆಯೋ ಒಳಗಿನ ಕಾರಣಗಳು ಅವುಗಳಿಗಿಂತ ಹೆಚ್ಚು ಇವೆ.’ ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಚರ್ಚೆಗಳಲ್ಲಿ ದಲಿತರ ಉದ್ದಾರಕ್ಕೆ ಅಡ್ಡಿಯಾಗಿರುವ ಹೊರಗಿನ ಕ್ರೂರ ಶಕ್ತಿಗಳ ಬಗ್ಗೆ ಚರ್ಚೆಯಾದಷ್ಟು ಒಳಗಿನ ಮುಖವಾಡದ ಕಾಳಜಿಯ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ. ಈಗಲಾದರೂ ಕೂಡ ನಾವೆಲ್ಲ ಧೈರ್ಯದಿಂದ ಅಂತ ವಿಷಗಳ ಬಗ್ಗೆ ಬಹಿರಂಗ ಚರ್ಚೆಯನ್ನು ಬೆಳೆಸುತ್ತಾ ನಿಜವಾದ ಕಾಳಜಿ ಹಾಗೂ ಬದ್ಧತೆ ಹೇಗಿರಬೇಕು ಎಂಬುದನ್ನು ಮನಗಾಣಬೇಕು ಬರೀ ಮನಗಂಡರಷ್ಟೇ ಸಾಲದು ಅದನ್ನು ಪಾಲನೆಮಾಡಬೇಕು.
ಈ ಹಿನ್ನೆಲೆಯಲ್ಲಿ ನಾನು ನಮ್ಮ ಕೆಲವೊಂದು ದೋಷಗಳನ್ನು ಪ್ರಸ್ತಾಪಿಸ ಬಯಸುತ್ತೇನೆ. ಇವುಗಳನ್ನು ನಾನೇ ಮೊದಲಿಗೇನು ಹೇಳುತ್ತಿಲ್ಲ. ಸಾಕಷ್ಟು ಜನ ಅಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ ಇಲ್ಲಿ ಎದುರಾಗುವ ತೊಂದರೆ ಎಂದರೆ ನಾವು ಯಾರಕಡೆ ಬೆರಳು ತೋರುತ್ತೇವೆಯೋ ಅವರು ಇದನ್ನು ಖಡಾಖಂಡಿತವಾಗಿ ಒಪ್ಪಲು ಸಿದ್ಧರಿಲ್ಲ. ಅವರು ಅದಕ್ಕೆ ವಿರುದ್ಧವಾದ ಇನ್ನೋಮದು ವಾದವನ್ನು ಮಂಡಿಸುತ್ತಾರೆ. ಅವರು ಮಂಡಿಸುವ ವಾದ ಸಹಜವಾಗಿ ಆಳುವ ವ್ಯವಸ್ಥೆ ಕಲಿಸಿದ ಪಾಠವೇ ಆಗಿರುತ್ತದೆ. ಇಂಥ ಸಂದರ್ಭಗಳ ಅರಿವಿದ್ದು ನಾನು ಮತ್ತೆ ಆ ಸತ್ಯವನ್ನೇ ಒತ್ತಿ ಹೇಳಬಯಸುತ್ತೇನೆ.
ಅಂದು ಅಂಬೇಡ್ಕರ್ ದಲಿತರ ಉದ್ಧಾರಕ್ಕೆ ಅಗತ್ಯವೆಂದಿದ್ದ ನಿಯೋಗಗಳು ಇಂದು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಗೊಂಡಿವೆ. ಇಲ್ಲಿ ನಾನು ಮೂರು ಮುಖ್ಯ ನಿಯೋಗಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ ಅವುಗಳೆಂದರೆ ಶಿಕ್ಷಣ, ಹೋರಾಟ ಮತ್ತು ಸಂಸದೀಯ ರಾಜಕಾರಣ. ಅಂಬೇಡ್ಕರ್ ದಲಿತರ ವಿಮುಕ್ತಿಗೆ ಇವು ಸಮರ್ಥ ಸಾಧನಗಳೆಂದು ತಿಳಿದೇ ಈ ಬಗ್ಗೆ ತಮ್ಮ ಜೀವನದುದ್ದಕ್ಕೂ ಸಾಕಷ್ಟು ಹೋರಾಟ ನಡೆಸಿ ಒಂದು ಹಂತದ ಪರಿಣಾಮವನ್ನು ಉಂಟು ಮಾಡಿದ್ದರು.
ಶಿಕ್ಷಣ : ಪಾರಂಪರಿಕವಾಗಿ ಶಿಕ್ಷಣದಿಂದ ವಂಚಿತರಾದ ಶೋಷಿತ ಜನಸಮುದಾಯಗಳಿಗೆ ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ಮೂಲಕ ದತ್ತವಾದ ಹಕ್ಕುಗಳ ಮೂಲಕ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವುದಾಗಲೇ ಅನೇಕ ಸವಾಲು ಮತ್ತು ಸಮಸ್ಯೆಗಳು ಎದುರಾಗಿವೆ. ಅದರಲ್ಲಿಯೂ ಇಂದು ದಲಿತರ ಮತ್ತು ಶೋಷಿತ ವರ್ಗಗಳು ಶಿಕ್ಷಣದಲ್ಲಿ ಖಾಸಗೀಕರಣದ ದುಷ್ಪರಿಣಾಮಗಳನ್ನು ಅನುಭವಿಸುವಂತಾಗಿದೆ.
? ಶಿಕ್ಷಣ ಕೆಲವು ಉದ್ಯಮಪತಿಗಳು ಹಾಗೂ ರಾಜಕಾರಣಿಗಳ ಕೈವಶವಾಗಿದೆ. ಹಾಗಾಗಿಯೇ ಶಿಕ್ಷಣ ಕ್ಷೇತ್ರದ ಬಹುತೇಕ ಕಾನೂನುಗಳು ಸರ್ವರಿಗೂ ಶಿಕ್ಷಣವೆಂಬ ಸಿಹಿಮಾತಿನೊಳಗೆ ಹಣವಿದ್ದವರಿಗೆ ಮಾತ್ರ ಶಿಕ್ಷಣ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ
? ಸರ್ಕಾರಿ ಶಾಲೆಗಳ ಮೂಲಕ ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ನೀಡುತ್ತೇವೆಂದು ಹೇಳುತ್ತಲೆ ಏನೇನು ಉಪಯೋಗಕ್ಕೆ ಭಾರದ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇಲ್ಲೆಲ್ಲ ಗುಣಾತ್ಮಕ ಶಿಕ್ಷಣ ಸಿಗದೇ, ಶಿಕ್ಷಣದಿಂದ ಪಡೆಯಬೇಕಾಗಿದ್ದ ಅವಶ್ಯ ಜ್ಞಾನ ದೊರೆಯದೇ ಕೇವಲ ಅಕ್ಷರಸ್ಥ ನಿರುದ್ಯೋಗಿಗಳ ಕಾರ್ಖಾನೆಗಳಂತಾಗಿವೆ.
ಸಂಸದೀಯ ರಾಜಕಾರಣ : ಸಂಸದೀಯ ವ್ಯವಸ್ಥೆಯಲ್ಲಿ ತಾವು ನೇರವಾಗಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಉದ್ದಾರಕ್ಕೆ ತಾವೇ ಕಾರಣರಾಗುವುದು ಉತ್ತಮ ಎಂಬುದು ಅಂಬೇಡ್ಕರ್ ಅವರೇ ಶೋಧಿಸಿಕೊಂಡ ಸತ್ಯ. ಆದರೆ ಆ ವ್ಯವಸ್ಥೆಯಲ್ಲಿ ಪಾಲ್ಗೊಂಡರೂ ನಿರೀಕ್ಷಿತ ಫಲಿತಗಳು ಹೋಗಲಿ ಅದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಉದಾ : ಇಂದಿನ ಸಂಸದೀಯ ರಾಜಕಾರಣದಲ್ಲಿ ಯಾವುದೇ ರಾಜಕೀಯ ಪಕ್ಷ ದಲಿತರೊಬ್ಬರಿಗೆ ಟಿಕೆಟ್ ನೀಡಿದರೆ ಅದು ಸಾಧನೆ, ಅವರು ಅಲ್ಲಿಂದ ಗೆದ್ದು ಬಂದರೆ ಮಹಾನ್ ಸಾಧನೆ, ಸರ್ಕಾರ ರಚನೆಯಾಗಿ ಅವರಿಗೊಂದು ಸಚಿವ ಸ್ಥಾನ ನೀಡಿದರೆ ಮಹಾನ್ ಮಹಾನ್ ಸಾಧನೆ ಅಂದರೆ ದಲಿತರೊಬ್ಬರು ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರೆ ದಲಿತರ ಉದ್ದಾರಕರು ನಾವು ಎಂದು ಎಲ್ಲಾ ಪಕ್ಷಗಳು ಬಿಂಬಿಸಿಕೊಳ್ಳುತ್ತವೆ. ದುರಂತವೆಂದರೆ ಸ್ವತಃ ಆ ದಲಿತ ರಾಜಕಾರಣಿಯಿಂದಲೆ ನಮ್ಮ ಪಕ್ಷ ಎಷ್ಟು ದಲಿತ ಪರವಾಗಿದೆ ಎಂದು ಹೇಳಿಕೆ ಕೊಡಿಸುತ್ತಾರೆ. ಒಟ್ಟಾರೆ ಇಲ್ಲಿಗೆ ದಲಿತರ ಉದ್ದಾರದ ಕಥೆ ಮುಗಿಯಿತು. ಅಲ್ಲಿಂದ ಮುಂದೆ ನಿಜವಾಗಿ ಉದ್ದಾರವಾಗಲು ಮಾಡಬೇಕಿದ್ದ ಕೆಲಸಗಳು ಹಳೆಯ ಕಾನೂನಿನ ನೆರಳಲ್ಲಿ ನಾಮಕಾವಸ್ಥೆಗೆ ನಡೆಯುತ್ತವೆ. ಒಟ್ಟಾರೆ ಈ ಒಬ್ಬ ಮಂತ್ರಿಯಿಂದ ಇಡೀ ಜನಾಂಗವನ್ನು ನಿಯಂತ್ರಿಸುವ ಅಪಾಯಕಾರಿ ಸಂದರ್ಭಗಳನ್ನು ಎಲ್ಲಾ ರಾಜ್ಯಗಳಲ್ಲೂ ಕಾಣುತ್ತಿದ್ದೇವೆ. ಇನ್ನೂ ಅಪಾಯಕಾರಿ ಸಂಗತಿಗಳೆಂದರೆ ಮಠಕ್ಕೆ ಹಣನೀಡಿದರೆ, ಆ ಜನಾಂಗದ ಪುಣ್ಯಪುರುಷರ ದಿನವನ್ನು ಸರ್ಕಾರಿ ದಿನಾಚರಣೆಯಾಗಿ ಘೋಷಿಸಿದರೆ ಇವೆಲ್ಲವು ಸಮುದಾಯದ ಉದ್ಧಾರದ ನಿಜವಾದ ಕೆಲಸಗಳು
ಹೋರಾಟದ ರಾಜಕಾರಣ ? ಎಲ್ಲಾ ರೀತಿಯ ಶೋಷಕರಿಗೆ ಹೋರಾಟವೇ ಮುಕ್ತಿಯ ಹಾದಿ ಆ ಹೋರಾಟ ಬೀದಿಗಿಳಿದು ಹೋರಾಟ ಮಾಡುವುದಾಗಿರಬಹುದು, ಇಲ್ಲವೆ ವ್ಯವಸ್ಥೆಯೊಳಗಿಂದಲೇ ಹೋರಾಟ ಮಾಡುವುದು ಇರಬಹುದು. ಹೋರಾಟಕ್ಕೆ ಸಂಘಟನೆಗಳು ಬಹುಮುಖ್ಯ. ಈ ಹಿನ್ನೆಯಲ್ಲಿ ಹುಟ್ಟಿಕೊಂಡ ಯಾವುದೇ ಪ್ರದೇಶದ ಸಂಘಟನೆಗಳನ್ನು ನೋಡಿ ಅವು ಕೆಲವು ಸಾಮಾನ್ಯ ಕಾರಣಗಳಿಂದ ವಿಘಟನೆಗೊಂಡು ತಮ್ಮ ಶಕ್ತಿಯನ್ನು ಕಳೇದುಕೊಂಡಿವೆ ಇಲ್ಲ ವಿನಾಶದ ಅಂಚಿಗೆ ಸರಿದಿವೆ. ಆ ಸಾಮಾನ್ಯ ಕಾರಣಗಳು ಹೀಗಿರುತ್ತವೆ- ಸಂಘಟನೆಯಲ್ಲಿ ನನಗೆ ಗೌರವದ ಸ್ಥಾನವಿಲ್ಲ, ಸಂಘಟನೆಯ ಮುಖ್ಯ ಪ್ರವರ್ತಕರು ಪ್ರಭುತ್ವದ ಅಧಿಕಾರಲಾಲಸೆಗೆ ತಮ್ಮ ಸಂಘಟನೆಯನ್ನೇ ಬಲಿಕೊಡುತ್ತಾರೆ.
ದಲಿತರು ಮತ್ತು ಶೋಷಿತರು ಎದುರಿಸುತ್ತಿರುವ ಬಿಕ್ಕಟ್ಟುಗಳು
೧. ಐಂಡೆಂಟಿಟಿ : ಓಬಿಸಿ ರೈತ- ದಲಿತ ಕೃಷಿ ಕಾರ್ಮಿಕ , ದಲಿತ ಅಧಿಕಾರಿ- ಅದೇ ಅಧಿಕಾರಿಯ ಮನೆ ಕೆಲಸದವ, ಅಧಿಕಾರಿ- ಅವನ ಮೂಲ ಊರಿನ ಜನ, ಮೇಲ್ಚಲನೆ ಪಡೆದ ದಲಿತರು ತಮ್ಮ ಮೂಲ ಗುರುತನ್ನು ಹೇಳಿಕೊಳ್ಳಲು ಹಿಂಜರಿಕೆ
೨.ಸೈದ್ದಾಂತಿಕ : ಅಂಬೇಡ್ಕರ್ ವಿಚಾರಗಳಿಗೆ ವಿರುದ್ಧವಾಗಿರುವವರು ನಾವು ಅಂಬೇಡ್ಕರ್‌ವಾದಿಗಳೆಂದು ಹೇಳಿಕೊಳ್ಳವುದು. ಅಂಬೇಡ್ಕರ್ ಹೇಳಿದ ವಿಚಾರವನ್ನು ಇನ್ನೊಂದು ರೀತಿಯಲ್ಲಿ ಅರ್ಥೈಯಿಸುವುದು ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಉದಾ : ಅಂಬೇಡ್ಕರ್ ರಾಷ್ಟ್ರೀಯವಾದಿಯಾಗಿದ್ದರೆಂದು ವಾದಿಸುವುದು. ದಲಿತ ಬಂಡವಾಳಶಾಹಿತ್ವವನ್ನು ಪ್ರತಿಪಾದಿಸುವುದು. ಬ್ರಾಹ್ಮಣಶಾಹಿಯನ್ನು ಮಾತ್ರ ತೆಗಳಿ ಉಳಿದ್ದನ್ನು ಹಾಗೆ ಉಳಿಸಿಕೊಳ್ಳುವುದು. ಜಾಗತೀಕರಣವನ್ನು ಬೆಂಬಲಿಸುವುದು
೩. ನಾಯಕತ್ವ : ವೈಯುಕ್ತಿಕ ನಾಯತ್ವಕ್ಕೆ ಮನ್ನಣೆ. ದಲಿತ ನಾಯಕತ್ವ ಮುಖ್ಯ ಅದು ಹೇಗಾದರೂ ಫಲಿಸಲಿ ಅದು ಮೇಲ್ವರ್ಗದವರಿಂದ ದಾನ ಪಡೆದು ಅವರಿಗೆ ನಿಷ್ಟರಾಗಿ ನಡೆದರೂ ಸೈ
೪.ರಾಜಕಾರಣ : ದಲಿತರನ್ನು ರಾಜ ಕಾರಣ ಓಟ್ ಬ್ಯಾಂಕಾಗಿ ಹಿಡಿದಿಟ್ಟುಕೊಂಡಿದೆ. ಅಧಿಕಾರ ದಲಿತರ ಉದ್ದಾರಕ್ಕೆ ಅನಿವಾರ್ಯ ಅದನ್ನು ಹೇಗಾದರೂ ಪಡೆದು ಬಿಡಬಹುದು. ಹೋರಾಟದ ರಾಜಕಾರಣ- ಸಂಸದೀಯ ರಾಜಕಾರಣ
೫. ನೈತಿಕತೆ : ಬೌದ್ಧ ಧರ್ಮ ದಲಿತರಲ್ಲಿ ನೈತಿಕ ಜಾಗೃತಿಗೆ ಕಾರಣವಾಗಬೇಕು ಎಂದ ಅಂಬೇಡ್ಕರ್ ಮಾತು ಯಾವುದೇ ಮಾನ್ಯತೆ ಇಲ್ಲದೆ ಮತ್ತದೆ ಹಳೆಯ ಜಾಡಿನಲ್ಲಿ ನಡೆದಿದೆ
೬. ಸಂಘಟನೆ : ಜಾತಿಯನ್ನು ಮೀರಿದ ಚಳುವಳಿ ಮಾತ್ರ ಅಂಬೇಡ್ಕರ್ ಕಂಡ ಕನಸಿನ ಸಮಾಜವನ್ನು ಕಟ್ಟಬಹುದು ಆದರೆ ದಲಿತ ಚಳವಳಿಗಳು ಅದನ್ನು ಮೀರಲಾಗದೆ ಹಲವು ಜಾತಿಗಳನ್ನು ಸೇರಿಸಿಕೊಂಡು ಮುಂದುವರೆಯಲು ನೋಡಿದವು ಅದು ಹಿಂದಿನ ಹಾದಿಯ ಭಿನ್ನ ಜಾಡಾಯಿತು ಅಷ್ಟೇ
೭. ದಿನನಿತ್ಯದ : ಭೂಹೀನ ದಲಿತರ ಸಂಖ್ಯೆ ಹೆಚ್ಚಳ. ವಿಮೋಚನೆಗೆ ಇರುವ ಏಕೈಕ ದಾರಿ ಎನಿಸಿದ್ದ ಶಿಕ್ಷಣ ಖಾಸಗೀಕರಣ. ಮೀಸಲಾತಿ ನೀತಿ ವಿರೂಪಗೊಂಡು ಒಟ್ಟು ದಲಿತರಲ್ಲಿ ೯-೧೦% ರಷ್ಟು ಜನ ಮಾತ್ರ ಇದರ ಲಾಭ ಪಡೆದಿದ್ದಾರೆ.
ಅಂಬೇಡ್ಕರ್ ಅವರ ವಿಚಾರಗಳು ಇಂದು ಎಲ್ಲಾ ಪ್ರದೇಶ, ಧರ್ಮ, ಸಮುದಾಯ, ವರ್ಗ ಹಾಗೂ ವ್ಯಕ್ತಿಗಳಿಗೆ ಒಂದು ರಕ್ಷಣಾ ಕವಚವಾಗಿ ಬಳಕೆಯಾಗುತ್ತಿದೆ : ರಾಜಕಾರಣ, ಸಾಮಾಜಿಕ ಸಂಸ್ಥೆಗಳು, ನೌಕರರ ಸಂಘಟನೆಗಳು, ಅಕಾಡೆಮಿಕ್ಸ್, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು, ವೃತ್ತಿಪರ ಸಂಘಟನೆಗಳು, ದಲಿತ ಜನಾಂಗ, ಸರ್ಕಾರೇತರ ಸಂಸ್ಥೆಗಳು, ಚಳವಳಿಗಾರರು ಮತ್ತು ಬುದ್ಧಿ ಜೀವಿಗಳು, ಜನ ಸಾಮಾನ್ಯರು
ಬಂಧುಗಳೇ, ಇಂದು ನಾವು ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಈ ಸಮಾಜದ ಶೋಷಿತ ಸಮುದಾಯಗಳ ಬಿಡುಗಡೆ ಆ ಮೂಲಕ ಅವುಗಳ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವಗಳು ಮೇಳೈಸಿದ ಸುಖ ಜೀವನದ ನಿರ್ಮಾಣದ ಬಗ್ಗೆ ಚಿಂತಿಸಿದ್ದೇವೆ.
? ಶೋಷಿತ ಸಮುದಾಯಗಳು ತಮಗಿರುವ ಅನಂತ ಅಡೆತಡೆಗಳನ್ನು ಡಾಟಿ ಮುನ್ನಡೆಯಬೇಕು ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾವಿಲ್ಲ. ಆದರೆ ಆ ಕೆಲಸ ಯಾರು? ಹೇಗೆ ? ಮಾಡಬೇಕು ಎಂಬುದಷ್ಟೇ ಇಲ್ಲಿರುವ ಬಹು ಮುಖ್ಯ ಪ್ರಶ್ನೆ ಈ ಬಗ್ಗೆ ನಾವು ಹೆಚ್ಚು ಗಂಭೀರವಾಗಿ ಚಿಂತಿಸಬೇಕಿದೆ.
? ಯಾಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ಸಮಾಜವನ್ನು ಉದ್ದರಿಸಲೆಂದು ನಾನು ದುಡಿಯುತ್ತೇನೆ ಎಂದು ಮುಂದೆ ಬರುವ ಯಾವ ವ್ಯಕ್ತಿ ಅಥವಾ ಸಂಸ್ಥೆಯನ್ನು ನಂಬಿಕೆಯಿಂದ ನೋಡು ಕಾಲದಲ್ಲಿ ನಾವಿಲ್ಲ. ಏಕೆಂದರೆ ಈವರೆಗೂ ನಡೆದಿರುವ ಪ್ರಯತ್ನಗಳಲ್ಲಿ ಬಹುತೇಕ ಸಮುದಾಯಗಳನ್ನು ಉದ್ದಾರಮಾಡುವುದಕ್ಕಿಂತ ತಾವು ಸ್ವಂತ ಉದ್ದಾರವಾಗಿರುವದೇ ಹೆಚ್ಚು.
? ಅಂಬೇಡ್ಕರ್ ಅವರನ್ನು ನಾವು ಎಷ್ಟು ಗೌರವಿಸುತ್ತೇವೆ ಎಂದರೆ ಅವರ ವಿಚಾರಗಳ ಗ್ರಹಿಕೆ ಮತ್ತು ಆಚರಣೆಗಿಂತ ಅವರ ಕೀರ್ತಿ ಮತ್ತು ಪೂಜೆಯೇ ಮುಖ್ಯವಾಗಿದೆ.
? ವಿಮರ್ಶೆಯಿಲ್ಲದ ಆರಾಧನೆ ಅಂಬೇಡ್ಕರ್ ಮತ್ತು ಅವರ ಚಿಂತನೆಗಳಿಂದ ಪಡೆಯಬಹುದಾಗಿದ್ದ ಲಾಭಗಳನ್ನು ತಪ್ಪಿಸಿವೆ
* ಅಂಬೇಡ್ಕರ್ ತಮ್ಮ ಜೀವಮಾನದುದ್ದಕ್ಕೂ ಈ ದೇಶದ ಧೀನ ದಲಿತರ ಶೋಷಿತರ ಉದ್ಧಾರಕ್ಕಾಗಿ ದುಡಿದರು ಆದರೆ ಅವರ ಹೋರಾಟದ ಪ್ರಯತ್ನಗಳು ಕೂಡ ಅವರ ಕಾಲಕ್ಕೆ ಕೊನೆಗೊಳ್ಳಲಿಲ್ಲ. ಹಾಗಾಗಿ ಅವರು ಈ ಹೋರಾಟ ನಿರಂತರವಾಗಿರಬೇಕೆಂದು ಬಯಸಿದರು. ಆದರೆ ಅವರ ಮುಂದಿನ ತಲೆಮಾರಿನ ನಾವು ಅವರ ಹಾಗೆ ನಿಷ್ಟೆ ಹಾಗೂ ಬದ್ಧತೆಗಳಿಂದ ಹೋರಾಟಗಳನ್ನು ನಡೆಸಿದ್ದೇವೆ ? ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರವನ್ನು ಹೇಳಬೇಕಿದೆ.
ಅಂಬೇಡ್ಕರ್ ವಾದಿಗಳ ಮುಂದಿರುವ ಸವಾಲುಗಳು
ಅ. ಅಂಬೇಡ್ಕರ್ ವಾದದ ಪುನರ್ ವ್ಯಾಖ್ಯಾನ
೧. ಅಂಬೇಡ್ಕರ್ ವಾದವನ್ನು ದಲಿತ ಜನತೆಯ ಹೋರಾಟಕ್ಕೆ ಮಾರ್ಗದರ್ಶಿಯಾಗುವಂತೆ ಪುನರ್ ನಿರ್ಮಿಸುವುದು
೨. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ. ದಲಿತರ ಗುರಾಣಿ, ರಕ್ಷಣಾ ಕವಚ
೩. ಇದು ಬಹಳ ದುರುಪಯೋಗವಾಗಿದೆ. ಮಲಿನ, ವಿರೂಪ, ಮೊಂಡು, ತುಕ್ಕು ಹಿಡಿದಿವೆ. ಅದನ್ನು ರಿಪೇರಿ ಹರಿತಗೊಳಿಸು
೪. ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ತಕ್ಕಂತೆ ನಿರ್ವಚಿಸಿಕೊಳ್ಳಬೇಕು. ಹೀಗೆ ಪುನರ್ ನಿರ್ಮಿಸಿಕೊಳ್ಳುವ ಹಾದಿಯಲ್ಲಿ ಅದರ ಮಿತಿಗಳನ್ನು ಅರಿತು ಅವನ್ನು ಮೀರಲು ಯತ್ನಿಸಬಹುದು. ಇಂಥ ಪುನರ್ ನಿರ್ಮಾಣವು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿರಬೇಕು
ಆ . ದಲಿತ ಚಳವಳಿಗಳ ವಿಮರ್ಶೆ
೧. ಮೂಲ ಉದ್ದೇಶ ಮತ್ತು ಗುರಿ ಏನು
೨. ಜಾತಿ ನಾಶವೇ/ ನಿರ್ಮಾಣವೇ
೩. ಜಾತಿಯಾಧಾರಿತ ಸಂಘಗಳನ್ನು ಕಟ್ಟಿ ಜಾತಿ ನಿರ್ಮೂಲನೆ ಮಾಡಬಹುದೇ
೪. ಎಲ್ಲವನ್ನು ಜಾತಿಯಿಂದ ಗ್ರಹಿಸುವ ನಮ್ಮಿಂದ ಜಾತಿ ಹೇಗೆ ನಾಶವಾಗುತ್ತದೆ
೫. ಜಾತಿ ವ್ಯವಸ್ಥೆಯನ್ನು ಸರಿಯಗಿ ಅರ್ಥಮಾಡಿಕೊಂಡಿದ್ದೇವೆಯೆ
೬. ನಮ್ಮ ನಿಜವಾದ ಶತೃಗಳು ಯಾರು
೭. ನಾವು ಯಾರ ಬಗ್ಗೆ ಹೋರಾಡುತ್ತೇವೆಯೋ ಅವರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇದೆಯೇ
ಇ. ಸಂಘಟನೆಗಳು ಪ್ರಭುತ್ವದ ಜೊತೆ ಯಾವ ರೀತಿಯ ಸಂಬಂಧವನ್ನು ಬೆಳಸಬೇಕು
೧. ಸಂವಿಧಾನದ ಅಣತಿಯಂತೆ ನಡೆಯುತ್ತವೆ ಎಂಬ ನಂಬಿಕೆಯೊಂದಿಗೆ ನಿಶ್ಚಿಂತೆಯಿಂದರದೆ ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಎಷ್ಟು ವಿಚಾರಗಳು ಸಂವಿಧಾನದೊಳಗೆ ಸ್ಥಾನ ಪಡೆದವು ಎಂಬುದನ್ನು ಸರಿಯಾಗಿ ಚಿಂತಿಸಬೇಕು
೨. ದಲಿತರು ಭೂತದ ಗುಹೆಯೊಳಗೆ ಕುಳಿತಿದ್ದು ಅವರನ್ನು ವರ್ತಮಾನಕ್ಕೆ ಎಳೆದು ತಂದು ಭವಿಷ್ಯದ ಕಡೆಗೆ ಮುಖಮಾಡಿಸಬೇಕಿದೆ
ಸಮಾಜಕ್ಕೆ ಮರಳಿ ಕೊಡುವ ಪ್ರಕ್ರಿಯೆ
ನಮ್ಮಲ್ಲಿ ನಡೆದೆ ಇಲ್ಲ. ಅಷ್ಟೇ ಅಲ್ಲ ಇನ್ನು ಮುಂದೆ ಬರುವುದು ಕೂಡ ನಮಗೇ ಬೇಕೆಂಬ ವಿಚಿತ್ರ ಆಸೆ ನಮ್ಮದಾಗಿದೆ. ನಮ್ಮ ಈ ವಿಚಿತ್ರ ಮನೋಭಾವನೆಯೇ ದಲಿತರ ಹಿಂದುಳಿಯುವಿಕೆಗೆ ಒಂದು ಕಾರಣವಾಗಿದೆ.
* ವಿಳಾಸ : ಎಸ್.ಎಂ. ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ), ಶಿವಮೊಗ್ಗ- ೫೭೭೨೦೩, ದೂ : ೯೪೪೮೬೪೦೧೧೪, ಈ ಮೇಲ್ ? smmuಣhಚಿiಚಿh@gmಚಿiಟ.ಛಿom, ಬ್ಲಾಗ್ ? ಞiಟಚಿಡಿisಚಿmsಞಡಿuಣhi.bಟogsಠಿoಣ.ಛಿom
Subscribe to:
Posts (Atom)