Sunday 28 December 2014

ಶಿಕ್ಷಕರ ದಿನಾಚರಣೆ

                                                                                                                        ಡಾ. ಎಸ್.ಎಂ.ಮುತ್ತಯ್ಯ
ತಮಗೆಲ್ಲರಿಗೂ ಇಂದಿನ ಶಿಕ್ಷರ ದಿನಾಚರಣಾ ಸಮಾರಂಭದ ಶುಭಾಷಯಗಳು ನನ್ನ ಕೆಲವು ವಿಚಾರಗಳನ್ನು ಇಷ್ಟೊಂದು ಜನ ಶಿಕ್ಷಕರ ನಡುವೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಶಿಕ್ಷಣ ಎಂಬುದು ಮಾನವನ ಜೀವನಕ್ಕೆ ಬಹಳ ಮಹತ್ವದ್ದು. ಮನುಷ್ಯನ ಸರ್ವೋತೋಮುಖ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ಇಂಥ ಮಹತ್ವದ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ-ಮೌಲ್ಯಗಳ ರವಾನೆದಾರರಾದ ಶಿಕ್ಷಕರ ಪಾತ್ರ ಅತ್ಯಂತ ಪ್ರಧಾನವಾದುದು.  ಇದು ನಿರಂತರವಾದ ಮತ್ತು ಸಾರ್ವತ್ರಿಕ ಪ್ರಕ್ರಿಯೆ ಕೂಡಾ ಆಗಿದೆ. ಈ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ ೫ ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ ೫, ೧೯೬೨ ರಿಂದ  ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ  ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯನ್ನು ಕಳೆದ ಕಳೆದ ೫೨ ವರ್ಷಗಳಿಂದ ಆಚರಿಸುತ್ತಾ ಬಂದಿರುವ ನಾವು ಸಹಜವಾಗಿಯೇ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಮಾಡಿರುವ ಸಾಧನೆಗಳನ್ನು ಹಾಗೂ ಅವರು ತಲುಪಿದ ಉನ್ನತ ಸ್ಥಿತಿಯನ್ನು ಸ್ಮರಿಸುವುದು. ಶಿಕ್ಷಕ ವೃತ್ತಿಯ ಶ್ರೇಷ್ಟತೆಯನ್ನು ಹೇಳುವುದು. ಅಲ್ಲಲ್ಲಿ ಔಪಚಾರಿಕವಾಗಿ ಶಿಕ್ಷಕರು ತಮ್ಮ ಮೂಲ ಉದ್ದೇಶಗಳನ್ನು ಮರೆತಿರುವ ಬಗ್ಗೆ ಪ್ರಸ್ತಾಪಿಸುವುದು. ಒಟ್ಟಾರೆ ಎಲ್ಲರು ಉತ್ತಮ ಶಿಕ್ಷಕರಾಗಬೇಕೆಂದು ಕರೆಕೊಡುವುದು ಇಂಥ ಸಾಂಪ್ರದಾಯಿಕ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ. ಸ್ವತಃ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಪರಿವರ್ತಿಸಿದ ದಿನ ಬಹಳ ಖುಷಿಯಾಗಿದ್ದು ತನ್ನ ಜನ್ಮ ದಿನ ವೈಯುಕ್ತಿಕತೆಯನ್ನು ಕಳೆದುಕೊಂಡು ಸಾಮೂಹಿಕವಾಗಿತ್ತಿದೆ ಎಂಬ ಕಾರಣಕ್ಕೆ. ವೈಯುಕ್ತಿಕವಾದುದು ಒಬ್ಬರ ಸಾಧನೆಗಳನ್ನು ಸ್ಮರಣೆಮಾಡುವುದರ ಮೂಲಕ ಜನರ ಮನಸ್ಸಲ್ಲಿ ಉಳಿಸ ಬಹುದಷ್ಟೇ ಆದರೆ ಅವರ ಆ ಕಾರ್ಯಗಳು ಮುಂದುವರೆಯಲಾರವು. ಸಾಮೂಹಿಕತೆ ಇದಕ್ಕೆ ವಿರುದ್ಧವಾದುದು. ಇದರಲ್ಲಿ ಒಬ್ಬರ ಉನ್ನತ ಕಾರ್ಯಗಳು ಸ್ಮರಣೆಗೆ ಸೀಮಿತಗೊಳ್ಳದೆ ಸ್ಮರಣೆಯ ಆಚೆಗೆ ಮುಂದುವರೆಯುವ ಪ್ರಯತ್ನವಿರುತ್ತದೆ. ರಾಧಾಕೃಷ್ಣನ್ ಅವರು ತಮ್ಮ  ಸಾಧನೆಗಳು ಮುಂದಿನ ಕಾಲಕ್ಕೆ ಉಳಿದು ಬೆಳೆಯಬೇಕು ಎಂಬ ಕಾರಣಕ್ಕೆ ತನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಒಪ್ಪಿಗೆ ಸೂಚಿಸಿದರು. ಹಾಗಾಗಿಯೇ ಶಿಕ್ಷಕರ ದಿನಾಚರಣೆ ಎಂಬುದು ರಾಧಾಕೃಷ್ಣ ಅವರ ಸಾಧನೆಗಳ ಪ್ರಸಂಶೆ ಮಾತ್ರವಾಗದೆ, ಅವರ ಆ ಮಹಾನ್ ಶಕ್ತಿಯನ್ನು ನಾವೆಲ್ಲರೂ ಅನುಸರಿಸಿ ಅಂಥ ಇನ್ನಷ್ಟು ಸಾಧನೆಗಳನ್ನು ಮಾಡುವುದರ ಮೂಲಕ ಶಿಕ್ಷಕ ವೃತ್ತಿಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯಬೇಕು. ಆದರೆ ಇಂದು ನಾವೆಲ್ಲರೂ ಪ್ರಮಾಣಿಕವಾಗಿ ಹೇಳುವುದಾದರೆ ಅಂಥ ಪಥದ ವಿಸ್ತರಕರು ಬೇಡ ಕೇವಲ ಪಥಿಕರಾದರೂ ಆಗಿದ್ದೇವೆ ? ಎಂಬುದಾಗಿ ಪ್ರಶ್ನಿಸಿಕೊಳ್ಳಬೇಕು
ಆದರೆ ನಾವು ಈ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ನಮ್ಮ ಸಮಾಜದಲ್ಲಿ ಆಚರಿಸುವ ಎಲ್ಲಾ ದಿನಾಚರಣೆಗಳು ಹೀಗೆ ಇವೆ ಎಂಬ ಕಾರಣಕ್ಕೆ ನಮ್ಮ ಇಂಥ ತಪ್ಪು ನಡೆಗಳಿಗೆ ಸಮರ್ಥನೆ ಪಡೆಯಬೇಕಿಲ್ಲ. ಪಡೆಯಬಾರದು ಕೂಡ. ಏಕೆಂದರೆ ನಾವೆಲ್ಲ ಭವಿಷ್ಯವನ್ನು ರೂಪಿಸುವ ಜ್ಞಾನಿಗಳನ್ನು, ಉತ್ತಮ ಜೀವನ ನಡೆಸುವ ಪ್ರಜೆಗಳನ್ನು, ಶಿಕ್ಷಕರನ್ನು ರೂಪಿಸುವ ಶಿಕ್ಷಕರನ್ನೇ ತಯಾರು ಮಾಡುವ ಮಹತ್ವದ ಮೌಲ್ಯಯುತವಾದ ಕೆಲಸವನ್ನು ಮಾಡುವ ನಾವೇ ಇಂಥ ಕೆಲಸಮಾಡುವುದು ಸರಿಯಲ್ಲ. ಆದ್ದರಿಂದ ಈ ನೆಪದಲ್ಲಿ ನಾನು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಿತಿ ಹಾಗೂ ಅವರ ವೃತ್ತಿಯ ಮುಂದಿರುವ ಸವಾಲುಗಳು ಮತ್ತು ಅವುಗಳನ್ನು ಎದುರಿಸಲು ಇರುವ ಸಾಧ್ಯತೆಗಳ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಲು ಇಚ್ಚಿಸುತ್ತೇನೆ.
ಶಿಕ್ಷಕರ ಈಗಿನ ಸ್ಥಿತಿ 
ಗುರು ಶಿಷ್ಯ ಪರಂಪರೆಗೆ ಹೆಸರಾದ ಈ ಭವ್ಯ ಭಾರತದಲ್ಲಿ  ಶಿಕ್ಷಕರ ಇಂದಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. 
ಇಂದಿನ ಸಮಾಜದಲ್ಲಿ ಶಿಕ್ಷಕರಿಗೆ ಶಿಷ್ಯರಿಂದಾಗಲಿ ಅಥವಾ ಅವರ ಪೋಷಕರಿಂದಾಗಲಿ ಯಾವುದೇ ದೊಡ್ಡ ಗೌರವವನ್ನು ಪಡೆಯುವ ಸಂದರ್ಭಗಳಿಲ್ಲ.
ಶಿಕ್ಷಕರನ್ನು ಕಾರಣಕ್ಕೆ ಅತ್ಯಂತ ಗುಮಾನಿಯಿಂದ ತಾತ್ಸಾರದಿಂದ ಕಾಣುವ ಸಂದರ್ಭಗಳೇ ಹೆಚ್ಚಾಗಿವೆ. 
ಇದಕ್ಕೆ ಅನೇಕರು ಹೇಳುವಂತೆ ಕಾರಣಗಳು ಹೀಗಿವೆ: 
ಶೇಕಡವಾರು ಶಿಕ್ಷಕರು ಇಂದು ಸಂಯಮ, ಸಹನೆ, ಆದರ್ಶ, ಪ್ರೀತಿ, ವಾತ್ಸಲ್ಯ ಎಂಬ ಬಹುಮುಖ್ಯ ಮೌಲ್ಯಗಳನ್ನು ಮರೆತಿರುವುದಂತೂ ಅಪ್ಪಟ ಸತ್ಯ. 
ಶಿಕ್ಷಕರು ಪಾಠ ಹೇಳುವ ಕೆಲಸಕ್ಕಿಂತ ಬಿಸಿಯೂಟ ನಿರ್ವಹಣೆ, ಜನಗಣತಿ ಕಾರ್ಯ, ಮತದಾರರಪಟ್ಟಿ ಪರಿಷ್ಕರಣೆ, ವರದಿ ತಯಾರಿಸುವುದು, ಕಚೇರಿ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವಾಗಿದೆ.
ವಿದ್ಯಾರ್ಥಿಗಳು ಶಾಲೆಯಲ್ಲಿರುವವರಗೆ ಮಾತ್ರ ನಮ್ಮ ಜವಾಬ್ದಾರಿ ಅಲ್ಲಿಂದ ಹೊರಗೆ ಹೋದರೆ ನಮಗೂ ಅವರಿಗೂ ಏನೂ ಸಂಬಂಧವಿಲ್ಲ ಎಂಬ ಭಾವನೆ. ಶಾಲೆಯ ಒಳಗಾದರೂ ಪಾಠ ವಿಷಯಗಳಿಗೆ ಮಾತ್ರ ವಿದ್ಯಾರ್ಥಿ ಸಂಬಂಧ ಎಂಬ ಮನೋಭಾವ
ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ಶಾಲೆಯಲ್ಲಿದ್ದರೂ ಸರಿಯಾದ ಕ್ರಮದಲ್ಲಿ ತರಗತಿಗಳನ್ನು ತೆಗೆದು ಕೊಳ್ಳದಿರುವುದು
ಅವುಗಳ ಜಾಗದಲ್ಲಿ, ರಾಜಕಾರಣ, ಜಾತಿ ಪ್ರೀತಿ ಬೆಳೆಸಿಕೊಳ್ಳುವುದು
ಹಿರಿಯ ಅಧಿಕಾರಿಗಳ ಜೊತೆ ನಂಟು, ಒಳಗೊಳಗೇ ಏನೋ ಒಡಂಬಡಿಕೆ, 
ಅಸೋಸಿಯೇಷನ್ಗಳ ಹೆಸರಲ್ಲಿ ಓಡಾಟ, ಪಾಠ ಮಾಡುವುದಕ್ಕಿಂತ ಶಿಕ್ಷಕರ ಸಮಸ್ಯೆಗಳ ಹೈಲೈಟ್ ಮಾಡೋದು  
ಸರಕಾರ ಸಂಬಳ ಕೊಡುವುದೇ ಪಾಠ ಮಾಡಲು ಎಂಬುದನ್ನೇ ಮರೆತು, ತಮ್ಮ ಸಂಬಳ ಸಾರಿಗೆ ಬಡ್ತಿಗಳ ವಿಷಯಕ್ಕೆ ತಿಂಗಳಲ್ಲಿ ಹದಿನಾಲ್ಕು ದಿವಸವೂ ಬಿಎಓ ಆಫೀಸುಗಳಿಗೆ ಅಲೆದಾಟ
ಈಗೀಗಂತೂ, ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿಯಲ್ಲಿ ತಮಗೂ ಪಾಲಿರಬೇಕೆಂಬ ಉದ್ದೇಶದಿಂದ ನಾನಾ ರೀತಿಯ ತಂತ್ರಗಳನ್ನು ಮಾಡುವುದು
ಆಯಾ ದಿನದ ಪಾಠ ಮಾಡುವ ಕೆಲಸವನ್ನು ಹೆಚ್ಚು ಶ್ರಮವಿಲ್ಲದೇ ಮಾಡಿ ಮುಗಿಸುವುದಷ್ಟೇ ತಮ್ಮ ಶಿಕ್ಷಕ ವೃತ್ತಿಯ ಸೀಮಿತ ಎಂದು ಅರಿತುಕೊಂಡಂತಿದೆ. 
ಮಕ್ಕಳು ಗಲಾಟೆ ಮಾಡುತ್ತಿದ್ದರೆ ಪಾಠ ಮಾಡಲು ಹೇಗಾಗುತ್ತದೆ. ಅದಕ್ಕಾಗಿ ಈ ಶಿಕ್ಷಕರು ಶಿಕ್ಷಿಸಲು ಮುಂದಾಗುತ್ತಾರೆ. ಸಿಟ್ಟಿನ ಭರದಲ್ಲಿ ತಮ್ಮ ದಂಡನೆಯ ಸ್ವರೂಪ ಹೇಗಿರುತ್ತದೆ ಎಂದರೆ ಅರಿಯಲಾಗದಷ್ಟು ವಿವೇಚನೆ ಕಳಕೊಂಡು ಬಿಡುತ್ತಾರೆ.
ಕಲಿಯಲು ಶಾಲೆಗಳಿಗೆ ಬಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಅನೇಕ ಶಿಕ್ಷಕರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ
ಶಿಕ್ಷಕರ ಮುಂದಿರುವ ಸವಾಲುಗಳು
ಶಿಕ್ಷಕ ವೃತ್ತಿಯ ಪ್ರಮಾಣಿಕತೆ ಮತ್ತು ಗೌರವಗಳು ಇಂದು ಪಾತಾಳಕ್ಕೆ ಕುಸಿದಿದ್ದು ಅವುಗಳನ್ನು ಶಾಪಮುಕ್ತಗೊಳಿಸಿ ಮೇಲೆತ್ತಬೇಕಿದೆ. ಅದಕ್ಕಾಗಿ ಶಿಕ್ಷಕರು ಮಾಡಬೇಕಿರುವ ಅಗತ್ಯವಾದ ಕಾರ್ಯಗಳು
ಮೊದಲಿಗೆ ನಮ್ಮ ವೃತ್ತಿಗಿರುವ ಪ್ರಾಮುಖ್ಯತೆಯನ್ನು ಮನಗಾಣಬೇಕಿದೆ. ಅಷ್ಟೇ ಅಲ್ಲ ಅದನ್ನು ತಮ್ಮ ಕಾರ್ಯಗಳ ಮೂಲಕ ಪ್ರಕಟಮಾಡಬೇಕಿದೆ.
ನಾವು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿದ್ದೇವೆ. ಶಿಕ್ಷಕರೇ ಅಪ್ರಸ್ತುತ ಎಂಬ ವಾತವರಣ ನಿರ್ಮಾಣವಾಗುತ್ತಿದೆ. ಎಜುಸ್ಯಾಟ್ ಮೂಲಕ ಸಿಗುತ್ತಿರುವ ಪಾಠಗಳು, ಅಂತರ್ಜಾಲದಲ್ಲಿ ಯಾವುದೇ ವಿಷಯದ ಬಗ್ಗೆ ಅನಂತವಾದ ಮಾಹಿತಿ ಸಿಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಕಾಲಕ್ಕೆ ಅನುಗುಣವಾದ ವಿಷಯಜ್ಞಾನ ಹಾಗೂ ಸಂವಹನ ತಂತ್ರ, ಕಲಿಕೆಯ ಮಾದರಿಗಳನ್ನು ಹುಡುಕಿಕೊಳ್ಳಬೇಕಿದೆ. ಬೆಳಗಿನ ವಿಷಯ ಸಂಜೆಗೆ ಹಳತೆನಿಸುವ ಈ ಕಾಲದಲ್ಲಿ ದಿನದಿನವೂ ಹೊಸಹೊಸದನ್ನು ಕಲಿತರೆ ಮಾತ್ರವೇ ನಮ್ಮ ಅಸ್ತಿತ್ವ ಉಳಿಯುತ್ತದೆ. ಇಲ್ಲವಾದರೆ ಎಲ್ಲರಿಂದಲೂ ಛೀ ಥೂ ಎನಿಸಿಕೊಂಡು ಸಂಬಳಕ್ಕೆ ಮಾತ್ರ ದುಡಿಯುವ ನಿಸ್ತೇಜ ಕಾರ್ಮಿಕರಾಗುತ್ತೇವೆ.

೧. ಕಥೆ : ಶಿಕ್ಷಕರಿಗೆ ಇರುವ ಅರ್ಹತೆಯ ಬಗ್ಗೆ ಒಂದು ಘಟನೆ : ಒಂದು ಹೈಸ್ಕೂಲ್ ನಲ್ಲಿ ಒಬ್ಬ ಇಂಗ್ಲೀಷ್ ಶಿಕ್ಷಕಿ 
ತನ್ನ ಒಂದು ತರಗತಿಯಲ್ಲಿ ಸ್ವಂತ ಕವನ ಬರೆಯುವ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಆ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕವನಗಳನ್ನು ಬರೆದು ತರುತ್ತಾರೆ. ಅವುಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕಿ ಅವುಗಳಿಗೆ ಎ,ಬಿ,ಸಿ ಎಂದು ಗ್ರೇಡ್ ಗಳನ್ನು ನೀಡಿ ಮರುದಿನ ತರಗತಿಯಲ್ಲಿ ಹಂಚುತ್ತಾರೆ. ಅದರಲ್ಲಿ ಒಬ್ಬ ಹುಡುಗನ ಕವನದ ಪ್ರತಿ ಇರುವುದಿಲ್ಲ. ಅದಕ್ಕಾಗಿ ಎಲ್ಲರಿಗೂ ಪ್ರತಿಗಳನ್ನು ನೀಡಿಯಾದ ಮೇಲೆ ನನ್ನ ಪ್ರತಿ ಇಲ್ಲವೆಂದು ಕೇಳುತ್ತಾನೆ. ಶಿಕ್ಷಕಿ ವಿಪರೀತ ಸಿಟ್ಟು ಬಂದು ಹುಡಗನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ. ಅವರಿಗೆ ಇಷ್ಟೊಂದು ಸಿಟ್ಟು ಬರಲು ಕಾರಣ ಆ ಹುಡುಗ ಬೇರೆ ಯಾರೋ ಪ್ರಸಿದ್ಧ ಕವಿಯ ಕವನವನ್ನು ನಕಲುಮಾಡಿ ತಂದಿದ್ದಾನೆ. ಅವನೊಬ್ಬ ವಂಚಕ ಎಂಬ ಅವರ ತಿಳುವಳಿಕೆ. ಆದರೆ ಆ ಹುಡುಗ ನಿಜವಾಗಿ ತಾನೆ ಬರೆದಿದ್ದ. ಇದನ್ನು ತನ್ನ ಶಿಕ್ಷಕಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದ. ಆದರೆ ಇದರಿಂದ ಶಿಕ್ಷಕಿಗೆ ಕೋಪ ಇನ್ನಷ್ಟು ಜಾಸ್ತಿಯಾಯಿತು. ಹುಡುಗನಿಗೆ ಇದರಿಂದ ತುಂಬಾ ಬೇಸರವಾಯಿತು. ಅಂದಿನಿಂದ ಆ ಶಿಕ್ಷಕಿಯ ಬಗ್ಗೆ ಒಂದು ರೀತಿಯ ಅಸಹನೆಯನ್ನು ಬೆಳೆಸಿಕೊಂಡ. ಈ ಅಸಹನೆ ಅವನು ಆ ಶಾಲೆಯನ್ನು ಬಿಟ್ಟ ನಂತರವೂ ಮುಂದುವರೆಯಿತು. ಯಾರಾದರೂ ಆ ಶಿಕ್ಷಕಿಯ ಹೆಸರನ್ನು ಹೇಳಿದರೆ ಸಾಕು ಅವನಿಗೆ ಕೋಪಬರುತ್ತಿತ್ತು. ಶಿಕ್ಷಕಿಯನ್ನು ಬಯ್ಯುತ್ತಿದ್ದ. ಮುಂದೆ ಆ ಹುಡುಗ ಜಗತ್ಪ್ರಸಿದ್ದ ಸಾಹಿತಿಯಾದ ಆತನ ಕೀರ್ತಿ ಎಷ್ಟಿತ್ತು ಎಂದರೆ ಅವನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಕರೆಯುವುದಾದರೆ ಮೂರು ತಿಂಗಳು ಮುಂಚಿತವಾಗಿ ತಿಳಿಸಬೇಕಿತ್ತು. ಈ ಸಂದರ್ಭದಲ್ಲೂ ತನ್ನ ಶಿಕ್ಷಕಿಯನ್ನು ನೆನಪಿಸಿಕೊಂಡರೆ ಅವನಿಗೆ ಸಿಟ್ಟು ಬರುತ್ತಿತ್ತು. ಇತ್ತ ಶಿಕ್ಷಕಿ ತನ್ನ ವೃತ್ತಿಯನ್ನು ಮಾಡುತ್ತಿದ್ದಾಗಲೆ ಗುಣಪಡಿಸಲಾರದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾಳೆ. ಆಸ್ಪತ್ರೆಗೆ ಸೇರುತ್ತಾಳೆ. ಹೀಗೆ ಇರುವಾಗ ಒಂದು ದಿನ ತನ್ನ ಹಳೆಯ ಆ ಶಿಷ್ಯನನ್ನು ನೋಡಬೇಕೆಂದು ಆಪೇಕ್ಷಿಸುತ್ತಾಳೆ. ಆಕೆಯ ಪತಿ ಹೇಗೋ ಹರಸಾಹಸ ಮಾಡಿ ಆತನ ಪೋನ್ ನಂಬರ್ ಪಡೆದು ಪೋನ್ ಮಾಡಿ ನಿಮ್ಮ ಇಂಥ ಶಿಕ್ಷಕಿಯ ಪತಿ ನಾನು ನಿಮ್ಮ ಶಿಕ್ಷಕಿಗೆ ಇಂಥ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾಳೆ. ಈಗ ನಿಮ್ಮನ್ನು ನೋಡಬೇಕೆಂದು ಬಯಸುತ್ತಿದ್ದಾಳೆ. ನೀವು ಬರಲು ಆಗುತ್ತದೆಯೇ ಎಂದು ಕೇಳುತ್ತಾನೆ. ತನ್ನ ಹಳೆಯ ಶಿಕ್ಷಕಿಯ ಹೆಸರು ಕೇಳಿದ ತಕ್ಷಣ ಅವನು ಸಿಟ್ಟಿಗೇಳುತ್ತಾನೆ. ಅಷ್ಟೇ ಅಲ್ಲ ನಾನು ಬರಲಾಗುವುದಿಲ್ಲ ಎಂದು ಕಡಾಖಂಡಿತವಾಗಿ ಹೇಳಿಬಿಡುತ್ತಾನೆ. ಪತಿ ಎಷ್ಟು ಪ್ರಯತ್ನಿಸಿದರೂ ಅವನು ಒಪ್ಪುವುದಿಲ್ಲ. ಅನಂತರ ಕೆಲವು ದಿನಗಳಾದ ಮೇಲೆ ಮತ್ತೊಮ್ಮೆ ಆತನಿಗೆ ಪೋನ್ ಮಾಡಿ ನಿಮ್ಮ ಶಿಕ್ಷಕಿ ನಿಮ್ಮನ್ನು ನೋಡಲೇ ಬೇಕೆಂದು ಹಟ ಮಾಡುತ್ತಿದ್ದಾಳೆ. ಅವಳು ಇನ್ನು ಬಹಳ ಕಾಲ ಬದುಕಲಾರಳು ಹಾಗಾಗಿ ತಾವು ದೊಡ್ಡ ಮನಸ್ಸು ಮಾಡಿ ಬರಬೇಕೆಂದು ವಿನಮ್ರವಾಗಿ ಬೇಡಿಕೊಳ್ಳುತ್ತಾನೆ. ಕೊನೆಗೆ ಶಿಕ್ಷಕಿಯ ಕೊನೆಯ ದಿನಗಳು ಎನ್ನುವ ಕಾರಣಕ್ಕೆ ಬರಲು ಒಪ್ಪುತ್ತಾನೆ. ಒಂದಿ ದಿನ ಶಿಕ್ಷಕಿಯನ್ನು ಸೇರಿಸಲಾಗಿದ್ದ ಆಸ್ಪತ್ರೆಗೆ ಬರುತ್ತಾನೆ. ಶಿಕ್ಷಕಿ ಸಂಪೂರ್ಣ ಸವೆದು ಹೋಗಿದ್ದಾಳೆ. ನೋಡಿ ಇವನಿಗೆ ಬಹಳ ಬೇಸರವಾಗುತ್ತದೆ. ಮಾತುನಾಡುವ ಸ್ಥಿತಿಯಲ್ಲಿ ಇಲ್ಲದ ಅವಳು ಹಾಸಿಗೆಯಲ್ಲಿ ಮಲಗಿಕೊಂಡೆ ಇವನನ್ನೇ ನೋಡುತ್ತಿದ್ದಾಳೆ. ಕೊನೆಗೆ  ತನ್ನ ಪತಿಯನ್ನು ಕರೆದು ಅಲ್ಲಿನ ಔಷಧಿ ಇಡುವ ಕಪಾಟಿನಲ್ಲಿ ಒಂದು ಪೇಪರ್ ಇದೆ ಕೊಡಿ ಎಂದು ಕೇಳುತ್ತಾಳೆ. ಪತಿ ತಂದು ಕೊಡುತ್ತಾನೆ. ಆಗ ಆ ಪತ್ರಿಕೆಯನ್ನು ಅವನ ಕೈಗೆ ಕೊಡುತ್ತಾಳೆ. ಅದನ್ನು ನೋಡಿದರೆ ಆ ದಿನ ಅವನೇ ಬರೆದುಕೊಟ್ಟಿದ್ದ ಕವನದ ಪ್ರತಿ. ಅದರಲ್ಲಿ ಮೌಲ್ಯಮಾಪನ ಮಾಡಿ ಅದಕ್ಕೆ ಎ+ ಗ್ರೇಡ್ ನೀಡಲಾಗಿತ್ತು. ಅದನ್ನು ನೋಡಿ ಅವನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ತಲೆ ಎತ್ತಿ ನೋಡಿದರೆ ಶಿಕ್ಷಕಿ ತಾನು ಅಂದು ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ್ತ ಪಡುವಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. - ಈ ಕಥೆಯ ಮೂಲಕ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿಯುತ್ತದೆ. ನಾವು ಬೆಳೆಯುವ ಸಸಿಗಳನ್ನು ಪೋಷಿಸುವವರು. ಆ ಸಂದರ್ಭಕ್ಕೆ ನಾವು ಯಾವುದೇ ಒಂದು ಸಣ್ಣ ತಪ್ಪು ಮಾಡಿದರೂ ಅದು ಬೆಳೆಯುವ ಪೈರಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಮಯ ಬಂದರೆ ಆ ಸಸಿ ಅಲ್ಲಿಯೇ ಮರಟಿ ಹೋಗಬಹುದು. ಇಂಥ ಮಹತ್ವದ ಕೆಲಸ ನಮ್ಮದು. ನಿಜವಾದ ಶಿಕ್ಷಕರಾದರೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವನ್ನು ಯಾವತ್ತಾದರೂ ಒಂದು ದಿನ ಒಪ್ಪಿಕೊಳ್ಳುತ್ತೇವೆ. ನಿಜವಾದ  ವಿದ್ಯಾರ್ಥಿಯಾದರೆ ಸಾವಿನ ಸಂದರ್ಭದಲ್ಲಾದರೂ ತನ್ನನ್ನು ನೋಡುವುದರಿಂದ ಅವರ ಮನಸ್ಸು ನೆಮ್ಮದಿ ಪಡೆಯುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಮಾಡಿರುವ ಅಪರಾಧವನ್ನು ಕ್ಷಮಿಸುತ್ತಾನೆ.
***************************************************************************
  
+ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ದಿನಾಂಕ ೦೫.೦೯.೨೦೧೪ ರಂದು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾಡಿದ ಭಾಷಣ

ಕರ್ನಾಟಕ ಅಂಬೇಡ್ಕರ್ : ಪ್ರೊ. ಬಿ. ಕೃಷ್ಣಪ್ಪ


                                                                                                                              -ಡಾ.ಎಸ್.ಎಂ.ಮುತ್ತಯ್ಯ
                                                                                    -೧-
ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ಪಾಲ್ಗೊಂಡಿರುವ ವೇದಿಕೆಯ ಮೇಲಿರುವ ಹಾಗೂ ನಮ್ಮ ಮುಂದೆ ಆಸೀನರಾಗಿರುವ ಎಲ್ಲಾ ಬಂಧುಗಳೇ ತಮಗೆಲ್ಲರಿಗೂ ಪ್ರೀತಿ ಪೂರ್ವಕ ನಮಸ್ಕಾರಗಳು.
ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುವುದಕ್ಕೆ ನನಗೆ ಅತ್ಯಂತ ಸಂತಸವೆನಿಸುತ್ತದೆ. ಇದು ಎಲ್ಲಾ ಸಮಾರಂಭಗಳಲ್ಲಿ ಭಾಷಣಕಾರರು ಹೇಳುವಂತೆ ಬರೀ ಉಪಚಾರಕ್ಕೆ ಹೇಳಿದ ಮಾತಲ್ಲ. ಇದಕ್ಕೆ ಸ್ಪಷ್ಟವಾದ ಎರಡು ಕಾರಣಗಳಿವೆ : 
ಮೊದಲನೆಯದಾಗಿ ಈ ಸಮಾರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದೇವೆ. ಪ್ರೊ.ಬಿಕೆ ಅವರು ತಮ್ಮ ಅಸ್ಸೀಮ ಹೋರಾಟವನ್ನು ಆರಂಭ ಮಾಡಿದ್ದು ಈ ಭದ್ರಾವತಿಯಿಂದಲೇ. ಈ ನಗರ ಇಲ್ಲಿರುವ ವಿ.ಐ.ಎಸ್.ಎಲ್ ಮತ್ತು ಎಂ.ಪಿ.ಎಂ ಕಾರ್ಖಾನೆಗಳಿಂದ ಎಷ್ಟು ಪ್ರಸಿದ್ಧಿಯೋ ಕೃಷ್ಣಪ್ಪನವರು  ’ದಲಿತ ಸಂಘರ್ಷ ಸಮಿತಿ’ ಯನ್ನು ಮೊದಲು ಕಟ್ಟಿದ್ದು ಈ ಊರಿಂದಲೇ ಎಂಬುದರಿಂದಲೂ ಅಷ್ಟೇ ಪ್ರಸಿದ್ಧಿಪಡೆದಿದೆ. ಇಂಥ ಚಾರಿತ್ರಿಕ ಮಹತ್ವವಿರುವ ಈ ನೆಲದಲ್ಲಿ ನಿಂತು ಕೃಷ್ಣಪ್ಪನವರ ವಿಚಾರ ಧಾರೆಗಳನ್ನು ಮೆಲಕು ಹಾಕುವುದು ಮಾತನಾಡುವವರಿಗೆ ಒಂದು ರೀತಯಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. 
ಇನ್ನೂ ಎರಡನೆಯ ಕಾರಣವೆಂದರೆ ಈ ದಿನದ ಸಮಾರಂಭದಲ್ಲಿ ದಲಿತ ನೌಕರರ ಜಾಗೃತಿ ದಿನವೆಂದು ಕರೆದಿರುವುದು. ಈ ಹೊತ್ತಿನ ದಲಿತರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು ಎಂದರೆ ತಮ್ಮ ಸಮುದಾಯಗಳಲ್ಲಿ ಜಾಗೃತ ಪ್ರಜ್ಞೆ ಇಲ್ಲವಾಗಿರುವುದು. ಮೇಲ್ವರ್ಗದ ಸಮುದಾಯಗಳು ದಲಿತ ಸಮುದಾಯದವರನ್ನು ಶೋಷಣೆ ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕಿಂತ ದೊಡ್ಡ ಸತ್ಯವೇನೆಂದರೆ ಶೋಷಣೆ ಮಾಡುತ್ತಿದ್ದಾರೆ ಎಂಬುದೆ ದಲಿತರಿಗೆ ತಿಳಿಯದಂತಾಗಿರುವುದು. ಮೇಲ್ವರ್ಗದವರು ನಾವು ಶೇಷ್ಟ್ರರೆಂದು ಕರೆದುಕೊಂಡು ನೀವು ದಲಿತರು ಕನಿಷ್ಟವೆಂದು ಹೇಳಿದರೆ ಅದನ್ನು ಪ್ರಶ್ನಿಸದೇ ವಿಧೇಯತೆಯಿಂದ ಒಪ್ಪಿಕೊಂಡಿರುವುದು. ಇದೆಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ದುರ್ಬಲ ವರ್ಗಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆದು ಉದ್ಧಾರವಾದ ದಲಿತರು ತಮ್ಮದೇ ಗುಂಪಿನ ದಲಿತರನ್ನು ಶೋಷಿಸುತ್ತಿರುವುದು. ಹಾಗೆಯೇ ದಲಿತರನ್ನು ಶೋಷಿಸುವವರಗೆ ಬಂಬಲವಾಗಿ ನಿಲ್ಲಿತ್ತಿದ್ದಾರೆ. ಹಾಗೆಯೇ ನಮ್ಮ ದಲಿತ ಸಮುದಾಯಗಳ ಯುವ ಪೀಳಿಗೆಯ ಜನ ದಲಿತರಾಗಿ ಹುಟ್ಟಿ ದಲಿತರಾಗಿರುವ ಕಾರಣಕ್ಕೆ ಸಿಗುವ ಎಲ್ಲಾ ಅವಮಾನಗಳನ್ನು ಉಂಡು, ಸಿಗುವ ಸೌಲಭ್ಯಗಳನ್ನು ಅನುಭವಿಸಿಯೂ  ಕೂಡ ನಾವು ದಲಿತರೆಂದು ಧೈರ‍್ಯದಿಂದ ಹೇಳಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಈ ಎಲ್ಲದಕ್ಕೂ ಇರಬಹುದಾದ ಮುಖ್ಯ ಕಾರಣವೆಂದರೆ ನಮ್ಮಲ್ಲಿ ಸರಿಯಾದ ಜಾಗೃತಿ ಇಲ್ಲದಿರುವದೇ ಕಾರಣ. ಈ ಸಂದರ್ಭದಲ್ಲಿ ನಮ್ಮೊಳಗೆ ಗೈರು ಹಾಜರಿಯಾಗಿರುವ ಜಾಗೃತಿಯನ್ನು ಮೂಡಿಸಿಕೊಳ್ಳಬೇಕಾದುದು ಇಂದಿನ ಅತೀ ತುರ್ತಿನ ಕೆಲಸವಾಗಿದೆ. ಇಂಥ ಅಗತ್ಯವನ್ನು ಮನಗಂಡು ಆ ಕುರಿತು ಚರ್ಚಿಸಲು,ಆತ್ಮಾವಲೋಕನ ಮಾಡಿಕೊಳ್ಳಲು ಸೇರಿರುವ ಈ ಸಭೆಯನ್ನು ಕುರಿತು ಮಾತನಾಡುವುದೆಂದರೆ ಮಾತಾಡುವವರಿಗೆ ಖಂಡಿತಾ ಅತ್ಯಂತ ಖುಷಿಯ ಸಂಗತಿ. ಯಾರೂ ಶಾಲೆಗೆ ಬರುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅನಿರೀಕ್ಷಿತವಾಗಿ ಬಹಳಷ್ಟು ಜನ ವಿದ್ಯಾರ್ಥಿಗಳು ಬಂದಾಗ ಶಿಕ್ಷರಲ್ಲಿ ಉಂಟಾಗುವ ಸಂತಸದ ಭಾವ ನನ್ನಲ್ಲಿ ಮೂಡುತ್ತಿದೆ.
ಈ ದಿನ ನಾನು ಮಾತನಾಡಬೇಕಿಂದಿರುವ ಮಾತುಗಳನ್ನು ಪ್ರಮುಖವಾದ ಎರಡು ಭಾಗಗಳಾಗಿ ವಿಂಗಡಿಸಿ ಮಾತನಾಡಲು ಬಯಸುತ್ತೇನೆ. ಮೊದಲನೆಯದು ಪ್ರೊ.ಕೃಷ್ಣಪ್ಪ ಅವರ ಹೋರಾಟದ ಬದುಕಿನ ನಡೆ ಮತ್ತು ನುಡಿಯನ್ನು ಕುರಿತ ಭಾಗ. ಎರಡನೆಯದು ಇಂದಿನ ದಲಿತರ ಪ್ರಮುಖ ಸಮಸ್ಯೆಗಳು ಮತ್ತು ಅದಕ್ಕೆ ನಾವು ತೋರಬೇಕಾದ ಪ್ರತಿಕ್ರಿಯೆಗಳು
-೨-
ಪ್ರೊ. ಕೃಷ್ಣಪ್ಪ ಅವರ ಬದುಕು  ಇಂದಿನ ನಮ್ಮ ನಿಮ್ಮ ಬದುಕಿಗಿಂತ ತುಂಬಾ ದುಸ್ಥಿತಿಯಲ್ಲಿತ್ತು. ಅವರ ದುಸ್ಥಿತಿಯ ಒಂದರೆಡು ವಿಷಯಗಳನ್ನು ಪ್ರಸ್ತಾಪಿಸುವುದಾದರೆ : ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿದ್ದ ಕೃಷ್ಣಪ್ಪ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಮತ್ತು ಆರ್ಥಿಕ ಬಲವಿರಲಿಲ್ಲ. ಮೂರು ಜನ ತಂಗಿಯರು ಹಾಗೂ ಮೂರು ಜನ ಸೋದರಿಯರ ಕೂಲಿ ಕುಟುಂಬದಲ್ಲಿ ಜೀವನ ನಡೆಸಿದವರು. ತಾವು ಬದುಕಿದ ಊರಲ್ಲಿದ್ದ ವಿಪರೀತ ಅಸ್ಪೃಶತಾವಾದಿಗಳ ನಡುವೆ ಬದುಕಿದವರು. ಮೆಡಿಕಲ್ ಓದಲು ಮನಸ್ಸಿದ್ದರೂ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಹಿಂದೆ ಬಿದ್ದವರು. ದಲಿತ ಜನಾಂಗದಲ್ಲಿ ಹುಟ್ಟದ ಕಾರಣಕ್ಕೆ ತನ್ನ ಕೊನೆಗಾಲದವರೆಗೂ ಸಾಕಷ್ಟು ನೋವನ್ನುಂಡವರು. ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು ೧೯೩೮, ಜೂನ್ ೯ ರಂದು ಜನಿಸಿದರು. ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು. ಇಂಥ ಕಷ್ಟಕರವಾದ ಬದುಕನ್ನು ಸಾಗಿಸಿದ ಬಿಕೆ ಅವರು ಸಾಮಾನ್ಯರಂತೆ ತನಗೆ ಬಂದ ಬಾಳಿನ ಕರ್ಮವೆಂದು ಭಾವಿಸದ್ದರೆ ಈ ಹೊತ್ತು ನಾವೆಲ್ಲರು ಸೇರಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಶ್ರೀಯುತರು ಬಾಳಿನ ಪ್ರತೀ ನೋವಿನ ಸಂದರ್ಭದಲ್ಲೂ ತನ್ನ ನೋವನ್ನು ತನ್ನದು ಮಾತ್ರವೆಂದು ತಿಳಿಯದೇ ನನ್ನ ನೋವು ನನ್ನ ಸಮುದಾಯಗಳ ಎಲ್ಲರ ನೋವು ಎಂದು ಭಾವಿಸಿ, ಆ ನೋವಿಗೆ ಕಾರಣರಾದವರ ವಿರುದ್ಧ ಸಿಡಿದೆದ್ದು ಪ್ರತಿಭಟನಾ ಆಂದೋಳನಗಳನ್ನು ಕಟ್ಟಿ ಬೆಳೆಸಿದರು. ಇವರ ಅಂಥ ನೂರಾರು ಪ್ರಯತ್ನಗಳು ಕರ್ನಾಟಕದ ದಲಿತ ಸಮುದಾಯಗಳ ಬಿಡುಗಡೆಯ ಮಾರ್ಗಗಳಾದವು. ಕೃಷ್ಣಪ್ಪನವರು ದಲಿತರ ಆಶಾಕಿರಣವಾದರು.
ಇವರಿಗೆ ತನ್ನ ವಿದ್ಯಾಭ್ಯಾಸದ ಪ್ರತಿಫಲವಾಗಿ ಉತ್ತಮವಾದ ಸರ್ಕಾರಿ ನೌಕರಿಯೂ ಸಿಕ್ಕಿತೂ ಆಗ ಈಗಿನ ನಮ್ಮ ನೌಕರರಂತೆ ತಾನು ತನ್ನ ಕುಟುಂಬ ಸಂತೋಷದಿಂದ ಇದ್ದರೆ ಸಾಕು ಎಂದು ಯೊಚಿಸಬಹುದಿತ್ತು. ಆದರೆ ಕೃಷ್ಣಪ್ಪನವರು ಎಂದು ಹಾಗೆ ಯೋಚಿಸಲಿಲ್ಲ. ತನಗೆ ಬರಿತ್ತಿದ್ದ ಸಂಭಳದ ಬಹುಭಾಗವನ್ನು ತನ್ನ ಚಳವಳಿಯ ಓಡಾಟಗಳಿಗೆ ಬಳಸಿದರು. ಚಳುವಳಿಯ ನಾಯಕನಾಗಿ ಪಡೆದ ಜನಪ್ರಿಯತೆಯಿಂದ ದೊರೆಯುವ ರಾಜಕೀಯ ಲಾಭಗಳನ್ನು ಪಡೆದು ತಾನು ದೊಡ್ಡ ವಿಐಪಿಯಾಗಿ ಬೆಳೆಯಬಹುದಿತ್ತು. ಅದರ ಬದಲಿಗೆ ನಾನು ಮಾಡವುದೇನಿದ್ದರೂ ಅದು ಸಮುದಾಯದ ಉದ್ಧಾರಕ್ಕೆ ಮಾತ್ರ ಎಂಬ ಧೃಢವಾದ ನಂಬಿಕೆಯುಳ್ಳವರಾಗಿದ್ದರು. ಅಧಿಕಾರದ ಹಿಂದೆ ಬೀಳದೆ ತಮ್ಮ ಜನರ ಶ್ರೇಯೋಭಿವೃದ್ಧಿಯ ಬೆನ್ನು ಹತ್ತಿದವರು. ಪ್ರೊ.ಬಿ.ಕೆಯವರು ಶಾಸಕರೂ ಆಗಲಿಲ್ಲ, ಮಂತ್ರಿಯೂ ಆಗಲಿಲ್ಲ, ಅಧ್ಯಕ್ಷಗಿರಿಗಾಗಲೀ, ತಮ್ಮವರನ್ನು ಅಲ್ಲಿಗೆ ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶಸ್ತಿ ಪತ್ರಕ್ಕಾಗಲಿ, ಬೆಳೆಯುತ್ತಿರುವ ದಲಿತ ಶಕ್ತಿಯು ಬೃಹತ್ ರಾಜಕೀಯ ಶಕ್ತಿಯಾಗ ದಂತೆ ನಿಗ್ರಹಿಸುವ ತಂತ್ರದಲ್ಲಿ ಇಡಿಯಾದ ಸಂಘಟನೆಯನ್ನು ಚಿಂದಿ ಮಾಡಲು ವಸಾಹತು ಶಾಹಿಗಳು ನೀಡುವ ಎಂಜಲಿಗಾಗಲೀ ಲಾಬಿ ನಡೆಸಿದವರಲ್ಲ. ಸ್ವಾಭಿಮಾನದಿಂದ ಸಂಘರ್ಷ ಮಾಡಿದ್ದರು. ಸಂಘಟನೆಯ ವಿಷಯದಲ್ಲಿ ಸೈದ್ಧಾಂತಿಕವಾಗಿ ತುಂಬಾ ಗಂಭೀರತೆಯಿದ್ದ ವಿಚಾರಶೀಲ ವ್ಯಕ್ತಿಯಾಗಿದ್ದರು. ವೈಯಕ್ತಿಕವಾಗಿಯೂ ಅಪಾರ ಪ್ರಾಮಾಣಿಕರಾಗಿದ್ದರು. ಅವರು ಪರಿನಿಬ್ಬಾಣ ಹೊಂದಿದ ದಿನ ಅವರ ಮೃತ ಶರೀರವನ್ನು ದಫನ ಮಾಡುವುದಕ್ಕೂ ಅವರದ್ದೇ ಆದ ಸ್ವಂತ ಜಾಗ ಇರಲಿಲ್ಲ! ಹತ್ತಿರದ ಸ್ವಜಾತಿ ಬಾಂಧವರೊಬ್ಬರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಪ್ರತಿಯೊಬ್ಬರೂ ಬಿ.ಕೆ.ಯವರಿಂದ (ಸಂಘಟನೆಯಿಂದ) ವಿಚಾರದ ನೆರವು ಪಡೆದಿದ್ದಾರೆಯೇ ಹೊರತು ಅವರಿಗೆ ಸಂಘಟನೆ (ನಾವು) ಏನನ್ನೂ ನೀಡಲಿಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ. ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆಸಿದ ಹೊರಾಟಗಳ ಸ್ವರೂಪವನ್ನು ಒಮ್ಮೆ ಚಾರಿತ್ರಿಕ ಅವಲೋಕನ ಮಾಡಿಕೊಳ್ಳಬೇಕು. ಶ್ರೀಯುತರು ನಡೆಸಿದ ಹೋರಾಟಗಳನ್ನು ಹೆಸರಿಸುವುದಾದರೆ:   
೧. ಕರ್ನಾಟಕದಲ್ಲಿ ಸಾರ್ವಜನಿಕ ಹೋಟೆಲ್‌ಗಳಲ್ಲಿ ದಲಿತರು ತೆಂಗಿನ ಚಿಪ್ಪಿನಲ್ಲಿ ಟೀ ಕಾಫಿ ಕುಡಿಯುವದರ ವಿರುದ್ಧ ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿ ಅದನ್ನು ನಿಷೇಧಿಸುವಂತೆ ಮಾಡಿದ್ದು ದಲಿತರ ಬದುಕಿನ ಮರ್ಯಾದೆ ಕಾಪಾಡಿದ ಕೀರ್ತಿ
೨. ದಲಿತರಿಗೆ ಯಾವುದೇ ಭೂ ಒಡೆತನವಿಲ್ಲದೆ ಕೇವಲ ಜೀತದಾಳಗಳಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರಿಗೂ ಭೂ ಒಡೆತನ ಬೇಕೆಂದು ಹೋರಾಟಗಳನ್ನು ಕಟ್ಟಿ ಸರ್ಕಾರಿ ಭೂಮಿಯನ್ನು ದಲಿತ ಭೂಹೀನರಿಗೆ ಹಂಚುವಂತೆ ಮಾಡಿದ್ದು ಕೃಷ್ಣಪ್ಪ ನವರ ಬಹುದೊಡ್ಡ ಸಾಧನೆ.


*ದಿನಾಂಕ ೦೬.೦೭.೨೦೧೪ ರಂದು ಭದ್ರಾವತಿಯಲ್ಲಿ ನಡೆದ ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಇಂದು ನಡೆಯುತ್ತಿರುವ ಪ್ರೊ. ಕೃಷ್ಣಪ್ಪ ನವರ ೭೬ನೇ ಜನ್ಮ ದಿನಾಚರಣೆ ಮತ್ತು ದಲಿತ ನೌಕರರ ಜಾಗೃತಿ ದಿನ ಆಚರಣೆಯ ಸಮಾರಂಭದಲ್ಲಿ ನೀಡಿದ ಉಪನ್ಯಾಸ

Saturday 27 September 2014

ಜನಪದ ಸಂಪ್ರದಾಯ - ಆಚರಣೆಗಳಲ್ಲಿ ದಲಿತ ಪ್ರಜ್ಞೆ

ಜನಪದ ಸಂಸ್ಕೃತಿಯಲ್ಲಿ ಸಂಪ್ರದಾಯ-ಆಚರಣೆಗಳು ಬಹು ಮುಖ್ಯ ಭಾಗಗಳು. ಇವುಗಳ ಜೊತೆಗೆ ನಂಬಿಕೆಯೂ ಸೇರಿಕೊಳ್ಳುತ್ತದೆ. ಈ ಮೂರು ಸಂಗತಿಗಳು ಒಂದಕ್ಕೊಂದು ಪರಸ್ಪರ ಪೂರಕ ಸಂಬಂಧಗಳನ್ನು ಹೊಂದಿರುತ್ತವೆ. ಇವುಗಳ ಅರ್ಥ ಹಾಗೂ ಸಂಬಂಧಗಳನ್ನು ಹೀಗೆ ಸೂಚಿಸಲಾಗಿದೆ; ಮೂಲತಃ ಕಾಲ್ಪನಿಕ ಆಲೋಚನೆಯೊಂದು ವೈಯುಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡು ಸಾಮೂಹಿಕ ಮಾನ್ಯತೆಯನ್ನು ಪಡೆದುಕೊಂಡಾಗ ಅದು ನಂಬಿಕೆಯಾಗುತ್ತದೆ. ಪ್ರಕೃತಿ ರಹಸ್ಯವನ್ನು ಭೋದಿಸುವಲ್ಲಿ ಆದಿಮಾನವನ ವಿಫಲತೆ, ಹುಟ್ಟು-ಬದುಕು-ಸಾವುಗಳ ನಿಗೂಢತೆಯನ್ನು ಅರ್ಥೈಯಿಸಲಾಗದ ಆತಂಕ, ಜಾತಿ-ಮತಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ-ಈ ಹಿನ್ನೆಲೆಯಲ್ಲಿ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಇವು ಸೂಚನೆ-ನಿಯಮ, ವಿಧಿ-ನಿಷೇಧ, ನಿರ್ದೇಶನ, ಆಗ್ರಹ-ಆಜ್ಞೆಗಳ ರೂಪದಲ್ಲಿರುತ್ತವೆ. ನಂಬಿಕೆಯೊಂದು ಐತಿಹ್ಯ-ಪುರಾಣ-ಧರ್ಮಗಳೊಂದಿಗೆ ಸಂಬಂಧವನ್ನು ಪಡೆದುಕೊಂಡು ಸಮುದಾಯದ ಶ್ರದ್ಧೆಯೊಂದಿಗೆ ಸಮರ್ಥನೆಯನ್ನು ಪಡೆದುಕೊಂಡಾಗ ಸಂಪ್ರದಾಯವಾಗುತ್ತದೆ. ಇಂತಹ ಸಂಪ್ರದಾಯಗಳ ಪ್ರಾಯೋಗಿಕ ಅಥವಾ ಕ್ರಿಯಾ ರೂಪಗಳೇ ಆಚರಣೆಗಳು (ಜಾನಪದ ಕೈಪಿಡಿ, ಪುಟ-೧೬೩, ೧೮೮) ಈ ರೀತಿಯ ಸಾತತ್ಯ ಹೊಂದಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳು ಅವುಗಳನ್ನು ಅನುಸರಿಸುವ ಸಮುದಾಯದ ಲೋಕದೃಷ್ಟಿ ಹಾಗೂ ತಮ್ಮ ಸಮಾಜದ ಸಂದರ್ಭಗಳಿಗೆ ನೀಡಿದ ಪ್ರತಿಕ್ರಿಯೆಗಳಾಗಿರುತ್ತವೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಮೂರರಲ್ಲಿ ನಂಬಿಕೆ ಮೊದಲು ಎನ್ನಬಹುದು. ನಂಬಿಕೆಯನ್ನು ಆಧರಿಸಿ ಸಂಪ್ರದಾಯವೊಂದು ರೂಪುಗೊಳ್ಳುತ್ತದೆ. ಈಗಾಗಲೇ ಸೂಚಿಸಿರುವಂತೆ ಸಂಪ್ರದಾಯದ ಪ್ರಾಯೋಗಿಕ ರೂಪವೇ ಆಚರಣೆ. ಇಂಥಲ್ಲಿ ನಂಬಿಕೆಯೊಂದು ರೂಪುಪಡೆಯುವುದಾದರೂ ಹೇಗೆ ಎಂದರೆ ’ಬದುಕಿನಲ್ಲಿ ಆಕಸ್ಮಿಕವಾದ ಒಂದು ಘಟನೆ ಅಥವಾ ಮತ್ತೆ ಮತ್ತೆ ಪುನರಾವರ್ತನೆಗೊಂಡಾಗ ಅದು ನಂಬಿಕೆಯಾಗಿ ಘನೀಭವಿಸುತ್ತದೆ’.
ಸಂಪ್ರದಾಯ-ಆಚರಣೆಗಳ ಹುಟ್ಟು ಮತ್ತು ಪ್ರಸರಣದ ಬಗ್ಗೆ ಕೆಲವು ಪ್ರಾಥಮಿಕ ವಿಚಾರಗಳನ್ನು ತಿಳಿಯುವುದು ಸೂಕ್ತ. ಯಾವುದೇ ನಂಬಿಕೆ ಮತ್ತು ಸಂಪ್ರದಾಯಗಳು ಆಯಾ ಭೌಗೋಳಿಕ, ಧಾರ‍್ಮಿಕ ಹಾಗೂ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುತ್ತವೆ. ಹಾಗೆಯೇ ಕಾಲಕಾಲಕ್ಕೆ ಬದಲಾದ ಮೌಲ್ಯಗಳಿಗೆ ಅನುಗುಣವಾಗಿ ಅವು ಕೂಡಾ ಬದಲಾಗುತ್ತಾ ಸಾಗಿಬರುತ್ತವೆ. ವಿಶೇಷವೆಂದರೆ ಇವುಗಳ ಹುಟ್ಟು ಪ್ರದೇಸ, ಸಂಸ್ಕೃತಿ ಮತ್ತು ಪರಿಸರ ನಿಷ್ಠವಾದರೂ ಮಾನವನ ಮೂಲ ಮನೋಧರ‍್ಮದ ಸಾಮಾನ್ಯ ಸ್ವರೂಪದಿಂದಾಗಿ ಬಹುತ್ವದ ನೆಲೆಗಳಲ್ಲಿ ಉಗಮವಾದ ನಂಬಿಕೆ, ಸಂಪ್ರದಾಯ ಹಾಗೂ ಆಚರಣೆಗಳಲ್ಲಿ ಹಲವಾರು ಸಾದೃಶ್ಯವಾಗಿರುತ್ತವೆ. ಇಂಥ ಸಂಪ್ರದಾಯ-ಆಚರಣೆಗಳನ್ನು ಅನೇಕ ಬಗೆಗಳ್ಲಲಿ ಗುರುತಿಸಲಾಗಿದೆ. ಧಾರ‍್ಮಿಕ, ಸಾಂಸ್ಕೃತಿಕ, ವೈಯುಕ್ತಿಕ, ಬೌದ್ಧಿಕ, ಭಾವುಕ ಹೀಗೆ ಹಲವಾರು ವಿಭಾಗಗಳನ್ನು ಮಾಡಬಹುದಾಗಿದೆ. ಈ ರೀತಿಯ ಹಲವು ರೂಪಗಳಲ್ಲಿ ಕನ್ನಡ ಜನಪದ ಸಮಾಜಗಳೊಳಗೆ ಪ್ರಚಲಿತವಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳ ಅಧ್ಯಯನ ಅತ್ಯಂತ ಕುತೂಹಲದಾಯಕ ಫಲಿತಗಳಿಗೆ ಕಾರಣವಾಗುತ್ತದೆ.
ಯಾವುದೇ ಭಾಷೆಯ ಜಾನಪದಕ್ಕೂ ಹಾಗೂ ಕೆಳವರ್ಗಗಳಿಗೂ ನೇರವಾದ ಸಂಬಂಧವಿರುವುದನ್ನು ಕಾಣಬಹುದಾಗಿದೆ. ವಿಶೇಷವಾಗಿ ಜಾನಪದವನ್ನು ಹೊತ್ತು ಮುನ್ನಡೆಸುವ ಕಾರ‍್ಯ ಆ ಸಮಾಜದ ಕೆಳವರ್ಗಗಳದೇ ಆಗಿರುತ್ತದೆ. ಈ ಹಿನ್ನೆಲೆಯೊಳಗೆ ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ದಲಿತ ವರ್ಗಗಳ ಮನಸ್ಸಿನ ಪ್ರತಿನಿದೀಕರಣವನ್ನು ಪರಿಶೀಲಿಸುವ ಉದ್ದೇಶ ಈ ಲೇಖನಕ್ಕಿದೆ.
ಜನಪದ ನಂಬಿಕೆ-ಸಂಪ್ರದಾಯಗಳಲ್ಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯ ಸ್ವರೂಪವೇನು? ಎಂಬುದಾಗಿ ಶೋಧನೆಗೆ ಹೊರಡುವ ಪ್ರಸ್ತುತ ಪ್ರಯತ್ನಕ್ಕೆ ಬಹುಮುಖ್ಯವಾದ ಪ್ರಶ್ನೆಯೊಂದು ಎದುರಾಗುತ್ತದೆ. ಅದೇನೆಂದರೆ, ಜಾನಪದ ಆಸ್ತಿತ್ವದಲ್ಲಿರುವುದೆ ದಲಿತ ಸಮುದಾಯಗಳಲ್ಲಿ ಎಂಬ ಅಭಿಪ್ರಾಯವನ್ನು ಒಪ್ಪುವುದಾದರೆ; ನಂತರ ಜಾನಪದ ಅಭಿವ್ಯಕ್ತಿಗಳಲ್ಲಿಯೆ ದಲಿತ ಪ್ರಜ್ಞೆ ಹುಡುಕುವುದು ಒಂದು ವಿಪರ್ಯಾಸವಲ್ಲವೆ? ಈ ಪ್ರಶ್ನೆ ಬಹಳ ಸೂಕ್ತವಾದುದು ಹಾಗೂ ಅರ್ಥಪೂರ್ಣವಾದದು. ಏಕೆಂದರೆ, ದಲಿತ ಸಮುದಾಯಗಳಲ್ಲಿ ಪ್ರಸ್ತುತ ಪ್ರಚಲಿತವಿರುವ ಅನೇಕ ಸಂಪ್ರದಾಯ-ಆಚರಣೆಗಳು ದಲಿತಪರವಾದ ಆಶಯಗಳನ್ನು ಹೊಂದಿರದೆ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುವಂತಿವೆ. ಉದಾ: ದಕ್ಷಿಣ ಕನ್ನಡದ ಮಡೆಸ್ನಾನ, ಅಜಲನ ಪದ್ಧತಿಗಳು ಹಾಗೂ ನಾಡಿನಾದ್ಯಂತ ಪ್ರಚಲಿತ ವಿರುವ ಮಾರಿಯ ಆಚರಣೆಗಳಿರಬಹುದು. ಈ ಆಚರಣೆಗಳಲ್ಲಿ ದಲಿತರನ್ನು ಹೀನಾಯವಾಗಿ ಕಾಣುವ ಆಶಯವಿದ್ದಾಗಲೂ ದಲಿತರೇ ಅಂಥ ಆಚರೆಣಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ಬರುತ್ತಿರುವುದು ವಿಚಿತ್ರವಲ್ಲವೆ? ಇಂಥ ಸಂಪ್ರದಾಯ-ಆಚರಣೆಗಳು ಹುಟ್ಟುವಾಗಲೇ ದಲಿತ ವಿರೋಧಿ ಆಶಯಗಳನ್ನು ಹೊತ್ತು ಬಂದವೂ ಅಥವಾ ಕಾಲದ ಬದಲಾವಣೆಯಲ್ಲಿ ಹೀಗಾದವೋ ಹೇಳುವುದು ಕಷ್ಟ. ಇದನ್ನು ದಲಿತರ ಮುಗ್ಧತೆ ಹಾಗೂ ಮೇಲ್ವರ್ಗದ ವ್ಯವಸ್ಥಿತ ಹುನ್ನಾರದ ಸಂಯೋಗವೆನ್ನಬಹುದು. ಇದರ ನಡುವೆಯೇ ಹಲವಾರು ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳೊಳಗೆ ದಲಿತರ ಅಂತಃಸತ್ವವನ್ನು ಪ್ರತಿನಿಧಿಸುವ ಆಶಯಗಳು; ದಲಿತ ಪರವಾದ ದನಿಗಳು ಕಂಡುಬರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿನ್ನೆಲೆಯೊಳಗೆ ಪ್ರಸ್ತುತ ಲೇಖನದಲ್ಲಿ ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯನು ಶೋಧಿಸಿ ವಿಶ್ಲೇಷಿಸುವ ಪ್ರಯತ್ನಮಾಡಲಾಗಿದೆ. 
ಈ ಪ್ರಯತ್ನಕ್ಕೂ ಮುನ್ನ ದಲಿತ ಪ್ರಜ್ಞೆ ಎಂದರೇನು? ಎಂಬುದನ್ನು ಸ್ಪಷ್ಟಪಡಿಸಿಕೊಲ್ಳುವುದು ಅಗತ್ಯವೆನಿಸುತ್ತದೆ. ದಲಿತ ಪ್ರಜ್ಞೆ ಬಗ್ಗೆ ಅರವಿಂದ ಮಾಲಗತ್ತಿ ಅವರು ಹೀಗೆ ಅಭಿಪ್ರಾಯಪಡುತ್ತಾರೆ. ದಲಿತ ವಿರೋಧಿ ಅಸ್ತಿತ್ವದ ವಿಚಾರಗಳನ್ನು ಭೂತ-ವರ್ತಮನ-ಭವಿಸ್ಯತ್ಕಾಲಗಳನ್ನೊಳಗೊಂಡಂತೆ ಸಾಮಾಜಿಕ, ಆರ್ಥಿಕ, ರಾಜಕೀಯ, ಬೌದ್ಧಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹೀಗೆ ಎಲ್ಲಾ ರಂಗದಲ್ಲಿ ದಲಿತರ ಮೇಲೆ ಹೇರಿರುವ ಮತ್ತು ಶೋಷಿಸುವ, ಅಂತರಾಳದ ಬಗೆಗೆ ಮೂಡುವ ಅರಿವು ಮತ್ತು ಆ ವಸ್ತುಸ್ಥಿತಿಯಿಂದ ವಿಮೋಚನೆ ಹೊಂದಲು ಮಾಡುತ್ತಿರುವ ಪ್ರಯತ್ನ ಹಾಗೂ ಕ್ರಿಯಾತ್ಮಕವಾಗಿ ಬೆಳವಣಿಗೆ ಹೊಂದುತ್ತವೆ ಎಂಬುದರಲ್ಲಿ ನಂಬಿಕೆ ಇದ್ದು, ಹೊಸ ಚರ್ಚೆಗೆ, ಬೆಳವಣಿಗೆಗೆ ಸಾಗುತ್ತೇವೆ ಎಂಬ ಆಶಯ ಹೊಂದಿರುವಂತಹದ್ದು ದಲಿತ ಪ್ರಜ್ಞೆ ಎಂದು ಕರೆಸಿಕೊಳ್ಳುತ್ತದೆ (ಸಾಹಿತ್ಯ. ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ ಪುಟ-೧೧೫) ಮಾಲಗತ್ತಿಯವರ ಈ ಅಭಿಪ್ರಾಯವನ್ನು ಸ್ವಲ್ಪ ಸರಳಗೊಳಿಸಿ ಹೀಗೆ ಹೇಳಬಹುದು; ಸಾಮಾಜಿಕ, ವಿರೋಧಿಸುವ ಮನೋಭಾವ ನೇರವಾಗಿ ಪ್ರತಿಭಟಿಸಲು ವಿರೋಧಿಸಲು ಸಾಧ್ಯವಾಗದೆ ಸಾಂಕೇತಿಕವಾಗಿ ಮಾಡುವ ಪ್ರಯತ್ನ  ಜನಪದ ಸಾಹಿತ್ಯದಲ್ಲಿ ಈ ಬಗೆಯ ಮನೋಭಾವ ಹೆಚ್ಚು ಹೆಚ್ಚು ಕಂಡುಬರುತ್ತದೆ. ಆದರೆ ನಂಬಿಕೆ-ಸಂಪ್ರದಾಯಗಳಲ್ಲಿ ಈ ಮನೋಭಾವ ಕಡಿಮೆಯೇ ಅದರಲ್ಲೂ ಈ ಹೊತ್ತಿಗೆ ಪ್ರಚಲಿತವಿರುವ ಸಂಪ್ರದಾಯ-ಆಚರಣೆಗಳಲ್ಲಿ ದಲಿತ ಪ್ರಜ್ಞೆ ಇರುತ್ತದೆಯಾದರೂ ಅದು ಮಸುಕಾಗಿದೆ. ಇನ್ನೂ ಹಲವರಿಗೆ ತಾವು ಆಚರಿಸುವ ಸಂಪ್ರದಾಯಗಳೊಳಗೆ ಅಂಥ ಭಾವನೆ ಇದೆ ಎಂಬ ಪ್ರಜ್ಞೆಯೇ ಇರುವುದಿಲ್ಲ. 
ಭಾರತೀಯ ಸಾಂಸ್ಕೃತಿಕ ಚರಿತ್ರೆಯನ್ನು ಮೇಲೆ ವಿವರಿಸಲಾದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ ಅನೇಕ ಕುತೂಹಲಕರ ಸಂಗತಿಗಳು ತಿಳಿದುಬರುತ್ತವೆ. ಚರಿತ್ರೆಯೊಳಗೆ ಸಂಪ್ರದಾಯ-ಆಚರಣೆಗಳು ಅನೇಕ ಬಾರಿ ಸಮಾಜದ ದಮನಿತ ವರ್ಗಗಳನ್ನು ಶೋಷಿಸಲು ಪ್ರಬಲ ಅಸ್ತ್ರಗಳಂತೆ ಬಳಕೆಯಾಗಿವೆ. ದೇವರು-ಧರ‍್ಮದ ಬಗ್ಗೆ ಸಾಮಾನ್ಯ ಜನರಲ್ಲಿರುವ ಭಕ್ತಿಯ ಮುಗ್ದ ಭಾವನೆಯನ್ನೆ ಬಂಡವಾಳವಾಗಿಸಿಕೊಂಡು ಅವರನ್ನು ಶೋಷಿಸಲಾಗಿದೆ. ಆಮೂಲಕ ಸಾಮಾಜಿಕ ಅಸಮಾನತೆಯನ್ನು ಉಳಿಸುವ ಹುನ್ನಾರವು ನಡೆದಿದೆ. ಇಂಥ ವ್ಯವಸ್ಥೆಯೊಳಗೂ ಶೋಷಣೆಗೆ ಗುರಿಯಾದ ಸಮುದಾಯಗಳು ಬಿಡುಗಡೆಯ ಹಾದಿಗಾಗಿ ತುಡಿಯುತ್ತಾ ಇರುವುದನ್ನು ಗುರುತಿಸಬಹುದು. ಈ ಹಿನ್ನೆಲೆಯೊಳಗೆ ಜನಪದ ನಂಬಿಕೆ-ಸಂಪ್ರದಾಯ ಹಾಗೂ ಆಚರಣೆಗಳ್ಲಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಗುರುತಿಸಬಹುದಾಗಿದೆ. ಇವುಗಳಲ್ಲಿ ಒಂದು ನೇರವಗಿ ಕಾಣುವಂತಹದ್ದು, ಮತ್ತೊಂದು ಮನಸ್ಸಿನ ಸುಪ್ತಭಾವನೆಯ ಸ್ಥಿತಿಯದ್ದು. ಇಲ್ಲಿ ಗಮನಿಸಬೇಕಾದುದೆಂದರೆ ಸಂಪ್ರದಾಯ-ಆಚರಣೆಗಳಲ್ಲಿ ಕಾಣುವ ದಲಿತ ಪ್ರಜ್ಞೆ ಸುಪ್ತ ಭಾವನೆಗಳ ರೂಪದಲ್ಲಿರುವುದೇ ಹೆಚ್ಚು ಹಾಗಾಗಿಯೇ ಇಂಥ ಶೋಧನೆಗೆ ಮನೋ ವೈಜ್ಞನಿಕ ದೃಷ್ಟಿ ಅತ್ಯಗತ್ಯವಾಗಿ ಬೇಕಾಗುತ್ತದೆ. ಇಂಥ ಸ್ಪಷ್ಟ ತಿಳುವಳಿಕೆಯ ಹಿನ್ನೆಲೆಯಲ್ಲಿ ಕನ್ನಡ ನಾಡಲ್ಲಿ ಪ್ರಚಲಿತವಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ಕೆಲವನ್ನು ಪರಿಶೀಲಿಸಬಹುದಾಗಿದೆ.
೧. ಮಾರಿಯ ಆಚರಣೆ
’ಮಾರಿ’ ಅಥವಾ ಮಾರಮ್ಮ ಮೂಲತಃ ವಲಸೆಗಾರ ಪಶುಪಾಲಕರ ಆರಾಧ್ಯ ದೇವತೆ. ಕಾಲಾನಂತರ ವಲಸೆಗಾರ ಪಶುಪಾಲಕರು ಹಾಗೂ ನೆಲಸುಗಾರ ಕೃಷಿಕ ಸಮುದಾಯಗಳ ಪರಸ್ಪರ ಸಂಯೋಗದ ನಂತರ ಈ ಮಾರಮ್ಮ ಇವೆರಡೂ ಸಮುದಾಯಗಳ ಸಂಗಮ ದೇವತೆಯಾಗಿದ್ದಾಳೆ. ಮುಂದುವರೆದಂತೆ ದಕ್ಷಿಣ ಭಾರತದ ಎಲ್ಲಾ ಜಾತಿ-ಜನಾಂಗಗಳಲ್ಲಿ ಮಾರಿಯ ಆಚರಣೆ ಇದೆ. ಪ್ರಸ್ತುತ ಆಚರಣೆಯ ಹಿನ್ನೆಲೆಗೆ ಇರುವ ಕಥೆಯಂತೆ ಮಾದಿಗರ ಹುಡುಗ ಬ್ರಾಹ್ಮಣರ ಹುಡುಗಿಯನ್ನು ತನ್ನ ಜಾತಿ ವಿಷಯವನ್ನು ಮರೆಮಾಚಿ ಮದುವೆಯಾಗಿದ್ದ. ಕಾಲಾನಂತರ ನಿಜಸ್ಥಿತಿ ತಿಳಿದ ಬ್ರಾಹ್ಮಣ ಹುಡುಗಿ ’ನೀನು ಮುಂದಿನ ಪ್ರತೀ ಜನ್ಮದಲ್ಲಿ ಕೋಣನಾಗಿ ಹುಟ್ಟು; ನಾನು ಮಾರಿಯಾಗಿ ಹುಟ್ಟಿ ನಿನ್ನನ್ನು ಬಲಿತೆಗೆದುಕೊಳ್ಳುತ್ತೇನೆ. ಹಾಗೆಯೇ ನಿನ್ನ ಸಂತತಿ ಎಲ್ಲಾ ಹಸಾದಿಗಳಾಗಲಿ’ ಎಂದು ಶಾಪ ಹಾಕಿ ಕೊಂಡವೇರುತ್ತಾಲೆ. ಇಂಥ ಹನ್ನೆಲೆಯಲ್ಲಿರುವ ಆಚರಣೆಯನ್ನು ದಲಿತರು ವಿಶೇಷವಾಗಿ ಮಾದಿಗರು-ಮುಂದೆ ನಿಂತು ಪ್ರಧಾನ ಪಾತ್ರವಹಿಸಿ ಆಚರಿಸುವುದು ವಿಚಿತ್ರವಾಗಿ ಕಾಣುತ್ತದೆ. ಕನ್ನಡ ನಾಡಿನ ಬಹುತೇಕ ಮಾರಿಯ ಗುಡಿಗಳಲ್ಲಿ ಪ್ರಚಾರಿ ಮಾದಿಗರವನೇ ಆಗಿರುತ್ತಾನೆ. ಉಳಿದಂತೆ ಮಾರಿಯ ಕೋಣವನ್ನು ಹಿಡಿದು ತಂದು ಮೆರವಣಿಗೆ ಮಾಡುವ, ಬಲಿಕೊಡುವ, ಬಲಿಕೊಟ್ಟ ನಂತರ ರಕ್ತಮಿಶ್ರಿತ ಅನ್ನವನ್ನು ಚರಗ ಚೆಲ್ಲುವ ಇವೇ ಮೊದಲಾದ ಪ್ರಮುಖ ಕೆಲಸಗಳು ದಲಿತರವೇ ಆಗಿವೆ. ಮಾರಿಯ ಜಾತ್ರೆಗಳ ಆಚರಣೆಗಳ್ಲಲಿ ಯಾವುದೋ ಒಂದು ನೆಲೆಮಾತ್ರ ಮುಖ್ಯವಾಗದೆ ಬಹುಮುಖೀ ಆಯಾಮಗಳು ಮುಖ್ಯವಾಗುತ್ತವೆ. ವಿಶೇಷವೆಂದರೆ ಅಂಥ ಎಲ್ಲಾ ಆಯಾಮಗಳು ಪರಸ್ಪರ ಪೂರಕವಾಗದೆ ವಿರೋಧವಾಗಿಯೂ ಕಂಡುಬರುತ್ತವೆ.
ಈಗಾಗಲೇ ಪ್ರಸ್ತಾಪಿಸಿದಂತೆ ಮಾರಿಯ ಆಚರಣೆಗಳಲ್ಲಿ ದಲಿತ ವಿರೋಧಿ ನೆಲೆಗಳು ಸಾಕಷ್ಟು ಇದ್ದು ಅವುಗಳ ಮಧ್ಯೆ ದಲಿತರ ಚೈತನ್ಯದ ನೆಲಗಳು ಕಂಡುಬರುತ್ತವೆ. ಅಂಥವುಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸಬಹುದುದಾದರೆ ಜಾತ್ರೆಯ ಸಮಯದಲ್ಲಿ ಶೂದ್ರ ಇಲ್ಲವೆ ಪಂಚಮರ ಮೇಲೆ ದೇವತೆಯ ಆವಾಹನೆಯಾದಾಗ, ಆತನ ಕುಲದ ಕೀಳ್ಮೆಯಳಿದು, ಆತ ಅಂದಿನ ಮಟ್ಟಿಗೆ ಪುರೋಹಿತ ವರ‍್ಗವನ್ನು ಮೀರಿ ನಿಲ್ಲುತ್ತಾನೆ. ಅಂದಿನ ಮಟ್ಟಿಗೆ ಅವನಿಗೂ ಹಿರಿಯ ಸ್ಥಾನಮಾನಗಳು ಲಭಿಸುತ್ತವೆ. (ಕರ್ನಾಟಕ ಜಾತ್ರೆಗಳು; ಪುಟ-೧೭೦) ಇದೇ ರೀತಿಯ ಮತ್ತೊಂದು ಅಂಶ ಮಾರಿಹಬ್ಬಕ್ಕೂ ವಾರದ ಮುಂಚೆ ಕೋಣವನ್ನು ಹಿಡಿದು ನಂತರ ಊರ ತುಂಬಾ ಮೆರವಣಿಗೆ ಮಾಡುವ, ಮನೆ ಮನೆ ತಿರುಗಿಸುವ ಸಂದರ್ಭ, ತಮ್ಮ ಮನೆಯ ಮುಂದಕ್ಕೆ ಬಂದ ಕೋಣವನ್ನು ಎಣ್ಣೆ ಹಾಕಿ ಪೂಜಿಸುವ ಪರಿಕ್ರಮ ಗಮನಾರ್ಹವಾದುದು. ಇಲ್ಲಿ ಕೋಣ ಮತ್ತು ದಲಿತರು ಪೂಜನೀಯ ಸ್ಥಿತಿಗೆ ತಲುಪುವುದನ್ನು ಗಮನಿಸಬೇಕು. ಮಾರಮ್ಮನಿಗೆ ಸಂಬಂಧಿಸಿದ ಜನಪ್ರಿಯವಾಗಿರುವ ಕಥೆಯ ಪ್ರಕಾರ ಮಾರಿಯ ಗಂಡನಾದ ಹೊಲೆಯನೇ ಕೋಣನಾಗಿದ್ದರೆ, ಇಲ್ಲಿ ಜನ ಕೋಣವನ್ನು ಪೂಜಿಸುವ ಮೂಲಕ ಹೊಲೆಯನನ್ನು ಪೂಜಿಸಿದಂತಾಗುತ್ತದೆ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಪುಟ-೧೦೫) ಎಂಬ ವಿಚಾರ ಬಹಳ ಮಹತ್ವದ್ದಾಗುತ್ತದೆ.
ಮಾರಿಹಬ್ಬದ ಸಂದರ್ಭದಲ್ಲಿ ಮೂರ್ತಿ ತಯಾರಿಕೆಗಾಗಿ ಮರಕಡಿದು ತರುವ ಸಂಪ್ರದಾಯವೊಂದು ಕೆಲವಾರು ಪ್ರದೇಶಗಳಲ್ಲಿ ಪ್ರಚಲಿತವಿದೆ. ಈ ಸಂಪ್ರದಾಯದಲ್ಲಿ ಮಾರಿಯ ಮೂರ್ತಿಗೆ ಊರಿನ ಪ್ರಮುಖರು ಪೂಜಾರಿ, ಬಡಗಿ, ಕಾಡಿಗೆ ಹೋಗುವರು. ಹೀಗೆ ಮರ ತರಲು ಹೋಗುವಾಗ ಕಾಗೆ, ಒಂಟಿ ಬ್ರಾಹ್ಮಣ, ಸರ್ಪ ವಿಧವೆ ಅಡ್ಡ ಬಂದರೆ ಅಮಂಗಳವೆಂಬ ಭಾನವೆಯಿದೆ. (ಜಾನಪದ ಸಂಕಲನ, ಪುಟ-೬೨) ಈ ಭಾವನೆಯಲ್ಲಿ ಗಮನಿಸಬೇಕಾದುದೆಂದರೆ ಅಮಂಗಳಕರ ವಿಷಯದಲ್ಲಿ ಬ್ರಾಹ್ಮಣನೂ ಸೇರಿರುವುದು. ಆನಪದ ಸಂಪ್ರದಾಯಗಳಲ್ಲಿರುವ ವೈದಿಕ ವಿರೋಧಿತತ್ವಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಇದನ್ನು ವಿಶ್ಲೇಷಿಸುತ್ತಾ ಎಸ್.ಎಸ್.ಹಿರೇಮಠ ಅವರು ಹೇಳಿರುವ ಅಭಿಪ್ರಾಯ ಇಂತಿದೆ. ಬ್ರಾಹ್ಮಣರು ಹುಟ್ಟಿಸಿದ ಕಥೆಯ ಪ್ರಕಾರ ಆರಾಧಕ ವರ್ಗವೇ ತಮ್ಮ ಆರಾಧನಾ ವಸ್ತುವಿನ ವಿರುದ್ಧವಾಯಿತು. ದಲಿತ ದ್ರೋಹಿಯಾದ ಈ ಕಥೆಯ ಒಳಮರ್ಮವನ್ನು ತಿಳಿಯದ ಜನ ಇದನ್ನೇ ನಂಬಿದರು. ಆದರೆ ದಲಿತರು ಈ ದ್ರೋಹವನ್ನು ಸುಮ್ಮನೇ ಒಪ್ಪಿರಲಿಲ್ಲ. ಬ್ರಾಹ್ಮಣರನ್ನೇ ಅಸ್ಪೃಶ್ಯರಂತೆ ಕಂಡರು. ತಮ್ಮ ಕೇರಿಗಳಿಗೆ ಅವರು ಪ್ರವೇಶಿಸುವುದನ್ನು ಮೈಲಿಗೆ ಎಂದು ಭಾವಿಸಿದರು. ಮೇಲೆ ವಿವರಿಸಿದಂತೆ ಮಾರಮ್ಮನ ಮರ ತರುವಾಗ ಬ್ರಾಹ್ಮಣ ಎದುರಾದರೆ ಅಪಶಕುನ ಎನ್ನುವ ನಂಬಿಕೆಯೂ ಕೂಡ ಈ ಪ್ರತಿಭಟನೆಯ ಮೂಲದಿಂದ ಬಂದ ಆಶಯವೇ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨, ಜಾತ್ರೆಗಳು, ಪುಟ-೧೦೬).
ಮಾರಿಯ ಸಂಪ್ರದಾಯದೊಳಗೆ ದಲಿತ ಪ್ರಜ್ಞೆಯನ್ನು ಹುಡುಕುವಾಗ ಗಮನಿಸಬೆಕಾದ ಮತ್ತೊಂದು ಸಂಗತಿ ಅಸಾದಿಗಳದು. ಜಾತ್ರೆಯಲ್ಲಿ ಮಾರಿ ದೇವತೆಯ ಮುಂದೆ ಹಲಗೆ ಬಡಿಯುತ್ತಾ ಅತ್ಯಂತ ಅಶ್ಲೀಲ ಪದಗಳಲ್ಲಿ ಬೈಯ್ದು ಹಾಡುವ ಗಾಯಕ ಪರಂಪರೆ ಈ ಅಸಾದಿಗಳು; ಬ್ರಾಹ್ಮಣರ ಹುಡುಗಿಯೆಂದು ಹೇಳಲಾಗಿರುವ ಮಾರಿಯನ್ನು ಬೈಯುವ ಅಸಾದಿಗಳು ಮಾಡಿಗರು ಎಂಬುದನ್ನು ತಿಳಿದರೆ ಈ ಆಚರಣೆಗೆ ವಿಶೇಷ ಮಹತ್ವ ದೊರೆಯುತ್ತದೆ. ಹಿಂದೆ ಪ್ರಸ್ತಾಪಿಸಿರುವಂತೆ ಮಾರಿಗೆ ಬಲಿಕೊಡುವ ಕೋಣನಿಗೆ ಪೂಜೆ ಸಂದರೆ ಬಲಿತೆಗೆದುಕೊಳ್ಳುವ ಮಾರಿಗೆ ಅಸಾದಿಯಿಂದ ಬೈಗುಳ ಸಲ್ಲುವುದು ಕೇವಲ ಕಾರತಾಳೀಯವಲ್ಲ. ಇಂಥ ಆಚರಣೆಗಳ ಹಿಂದೆ ನೊಂದವರ ನೋವಿನ ದನಿ ಇದ್ದು, ಅದು ವ್ಯಕ್ತವಾಗುವ ರೂಪ ಇದಾಗಿದೆ. ಅಸಾದಿಗಳ ಬೈಗುಳ ಪದಗಳಲ್ಲಿ ಅಡಗಿರುವ ಅರ್ಥಗಳನ್ನು ಸರಿಯಾದ ರೀತಿಯಲ್ಲಿ ಶೋಧಿಸಿಲ್ಲ. ಇದಕ್ಕೆ ಪ್ರಮುಖವಾದ ಎರಡು ಕಾರಣಗಳಿವೆ. ಒಂದು, ಅಸಾದಿ ಮಾರಮ್ಮನ ಮಗ. ಈತ ಮಾರಿಯನ್ನು ಹೊಗಳುತ್ತಾನೆ. ಹಿಯ್ಯಾಳಿಸುತ್ತನೆ. ಆತ ಏನು ಮಾಡಿದರೂ ಮಾರಿಗೆ ಸಂತೋಷ ಎಂಬ ನಂಬಿಕೆಯನ್ನು ನಂಬಿದ್ದು; ಎರಡು, ಅಸಾದಿಗಳ ಪದಗಳು ಅಶ್ಲಿಲತೆಯ ಪರಮಾವದಿಯಾಗಿದ್ದು ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಾದರೂ ಹೇಗೆ? ಎಂಬ ಮಡಿವಂತ ಮನಸ್ಸಿನ ವಿದ್ವಾಂಸರ ಅವಜ್ಞೆಯಭಾವ ಅಸಾದಿಗಳೆಂದರೆ ಬೈಯ್ಯುವವರು ಮಾತ್ರವೆಂದು ಅನೇಕರು ತಿಳಿದಂತಿದೆ. ಆದರೆ ಬೈಯ್ಯುವುದರ ಜೊತೆಗೆ ಕೆಲವೊಂದು ಆಚರಣೆಗಳಲ್ಲೂ ಭಾಗಿಯಾಗುತ್ತಾರೆ. ಉದಾ: ಮಾರಮ್ಮನನ್ನು ಅದಕ್ಕಿಷ್ಟ ಬಂದಕಡೆ ಬಿಟ್ಟು ಬಂದಾಗ ’ಅಸಾದಿ ಮಾರಮ್ಮನನ್ನು ಒದ್ದು ಬಯ್ದು ಅಕೆ ಧರಿಸಿದ ವಡವೆಗಳನ್ನು ಕಿತ್ತುಕೊಂಡು ಬರುತ್ತಾನೆ. (ಜಾನಪದ ಜಗತ್ತು ಪುಟ-೩೩) ಅಸಾದಿ ಮಾರಮ್ಮನಿಂದು ಕಿತ್ತು ತರುವ ವಡವೆಗಳಲ್ಲಿ ತಾಳಿಯೂ ಸೇರಿಸುತ್ತದೆ ಎಂಬ ಅಂಶ ಅತ್ಯಂತ ಕುತೂಹಲಕರ. ಜಾತಿಯ ಕಾರಣಕ್ಕೆ ತನ್ನ ಸಂಬಂಧವನ್ನೆ ಕಳೆದುಕೊಂಡು ಮಾರಿಯ ಕೊರಳಲ್ಲಿರುವ ತಾಳಿಯನ್ನು ತಾನೇ ಸ್ವತಃ ಕೀಳುವುದರ ಮೂಲಕ ಮತ್ತೊಂದು ವಿನೂತನ ಪ್ರತಿಭಟನೆಯನ್ನು ಮಾಡುತ್ತಾನೆ ಎನಿಸುತ್ತದೆ.
’ಮಾತಂಗಿ’ ಮಾರಿಯ ಆಚರಣೆಗಳಲ್ಲಿ ಕಂಡುಬರುವ ಮತ್ತೊಂದು ದೇವತೆ. ಮಾರಿಯ ಗುಡಿಗಳು ಇದ್ದಲ್ಲೆಲ್ಲ ಆ ಗುಡಿಗಳ ಮುಂದೆ ಮಾತಂಗಿಯ ಗುಡಿಯೂ ಇರುತ್ತದೆ. ಮಾರಿ ಜಾತ್ರೆಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸುವ ಗುಡಿಸಲಿನ ಎದುರಿಗೂ ಮಾತಂಗಿಯ ಗುಡಿಸಲು ಹಾಕಲಾಗುತ್ತದೆ. ಮಾರಿಯ ಆಚರಣೆಗಳಲ್ಲಿ ಅಸಾದಿಗಳಷ್ಟೆ ಮಹತ್ವ ಮಾತಂಗಿಗೂ ಇದೆ. ಊರಮ್ಮನ ಜಾತ್ರೆಗಳಲ್ಲಿ ಮಾತಂಗಿ ದೇವತೆಯ ಅವತಾರವೆಂದು ಪರಿಗಣಿಸಲ್ಪಡುವಳು ಸೇರಿದ ಎಲ್ಲಾ ಜಾತಿಯ ಜನರನ್ನು ಅಶ್ಲೇಲವಾಗಿ ಬಯ್ಯುವ ಅವರ ಮೇಲೆ ಉಗುಳುವ ಹಕ್ಕುಳ್ಳವಳು. ಇದನ್ನು ಜನ ಪವಿತ್ರವೆಂದು ಭಾವಿಸುತ್ತಾರೆ. ಇದರಿಂದ ನಮ್ಮ ಪಾಪ ನಿವಾರಣೆಯಾಗುವುದೆಂದು ನಂಬುತ್ತಾರೆ (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಪುಟ-೨೪೪) ಈ ಉಲ್ಲೇಖಿದಿಂದ ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿಯ ಜನರು ಮಾತಂಗಿಯ ಕಡೆಯಿಂದ ಉಗಿಸಿಕೊಳ್ಳುವುದು ದಲಿತರ ಪ್ರತಿಭಟನೆಯ ಮತ್ತೊಂದು ಪ್ರಮುಖ ಕಾರಣ. ಈ ಮಾತಂಗಿಯ ಗುಡಿಸಲಲ್ಲೇ ಶ್ರೀದೇವಿ ಮತ್ತು ಅವಳ ಹೊಲೆಯ ಪತಿ ವಾಸಿಸಿದ್ದು ಎಂಬ ನಂಬಿಕೆಯೇ ಆಗಿದೆ. ಜಾತ್ರೆಯಲ್ಲಿ ಮಾರಿಗುಡಿಯ ಮುಂದೆ ನಿರ್ಮಿಸಲಾದ ತಾತ್ಕಾಲಿಕ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಆಗ ಆಸಾದಿಗಳು ತಬ್ಬಲಿಗಳಂತೆ ಅಳುತ್ತಾರೆ. ಒಟ್ಟಾರೆ ಮಾತಂಗಿಯ ಸಂಪ್ರದಾಯಗಳಲ್ಲಿ ದಲಿತರ ಅಸಹಾಯಕತೆ ಹಾಗೂ ಆಕ್ರೊಶಗಳೆರಡು ಕಂಡುಬರುತ್ತವೆ. ಈ ಮಾತಂಗಿ ಬರೀ ಮಾರಿಯ ಆಚರಣೆಗಳಲ್ಲಿ ಮಾತ್ರವಲ್ಲದೆ ಎಲ್ಲಮ್ಮನಂಥ ಆಚರೆಣೆಗಳ್ಲಲೂ ಕಂಡು ಬರುವುದರ ಮೂಲಕ ಕೇವಲ ಒಂದು ಭಾವದ ಸಂಕೇತ ನಾನಲ್ಲ ಎಂಬುದನ್ನು ತೋರಿಸುವಂತಿದ್ದು ಮುಂದೆ ಈ ಬಗ್ಗೆ ಇನ್ನಷ್ಟು ಚರ್ಚಿಸಬಹುದಾಗಿದೆ. 
೨. ಮೈಲಾರ ಸಂಪ್ರದಾಯ
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯೆಪ್ರದೇಶಗಳನ್ನೊಳಗೊಂಡು ಡೆಕ್ಕನ್ ಪ್ರಸ್ಥಭೂಮಿಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಸರಣಗೊಂಡಿರುವ ಬಹುಜನಪ್ರಿಯ ಸಂಪ್ರದಾಯವೇ ಮೈಲಾರ ಸಂಪ್ರದಾಯ. ಕುರುಬರ ಸಂಸ್ಕೃತಿಗೆ ಸಂಬಂಧಿಸಿದ ಈ ಸಂಪ್ರದಾಯ ಯಾವುದೇ ಒಂದು ಸಂಸ್ಕೃತಿಗೆ ಮೀಸಲಾಗದೆ ಸಮಾಜದ ಎಲ್ಲಾ ಆತಿ-ಜನವರ್ಗಗಳ ಒಳಗೂ ಹರಡಿಕೊಂಡಿದೆ. ಮೈಲಾರದ ಗುರು ಸಂಪ್ರದಾಯದಂತಿರುವ ಗೊರವರು ಎಲ್ಲಾ ಸಮುದಾಯಗಳಿಂದಲೂ ಬರುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹಿರೇಮೈಲಾರದಲ್ಲಿ ಒಂದು ಕೇಂದ್ರ ಹಾಗೂ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಮತ್ತೊಂದು ಕೇಂದ್ರವಿದೆ. ಈ ಪಂಥಕ್ಕೂ ದಲಿತರಿಗೂ ನೇರವಾದ ಸಂಬಂಧವಿದೆ. ಅದನ್ನು ಎಸ್.ಎಸ್.ಹಿರೇಮಠ ಅವರು ಹೀಗೆ ಗುರುತಿಸಿದ್ದಾರೆ; ಶಿಶ್ನಾರಾಧಕ ಪಶುಪಾಲಕ ವಲಸೆಗಾರ ಕುರುಬರ ಮಾರಡಿಗಳ ದೇವರ ಮೈಲಾರಲಿಂಗ. ಇವರು ಸ್ವಯಂಭು ಲಿಂಗಗಳ ಸಂಸ್ಥಾಪಕರು. ನಾಗರಾದ ಹೊಲೆಮಾದಿಗರನ್ನು ನಾಸಮಾಡಿ ಅಂದರೆ ಹುತ್ತಗಳನ್ನು ನಾಶಮಾಡಿ ಅಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು (ಕನಾಟಕ ದಲಿತ ಸಂಸ್ಕೃತಿ, ಪರಂಪರೆ-೨, ಜಾತ್ರೆಗಳು-ಪುಟ-೩೨) ಈ ಮಾತನ್ನು ಒಪ್ಪುವುದಾದರೆ ಪಶುಪಾಲಕ ವಲೇಸೆಗಾರ ಕುರುಬರಿಗೂ ಹಾಗೂ ಹೊಲೆಮಾದಿಗರಿಗೂ ಏರ್ಪಟ್ಟ ಸಂಘರ್ಷದಲ್ಲಿ ಹೊಲೆ ಮಾದಿಗರ ಧಮನವಾಗಿದೆ. ಹಾಗೆಯೇ ಮೈಲಾರಲಿಂಗ ಮಣಿಮಲ್ಲಾಸರರನ್ನು ಸಂಹಾರ ಮಾಡಿದ ಕಥನಗಳು ದೊರೆಯುತ್ತವೆ. ಇಂದಿಗೂ ಈ ಘಟನೆ ಆಚರಣಾ ರೂಪದಲ್ಲಿ ಉಳಿದು ಬಂದಿರುವುದನ್ನು ನೋಡಬಹುದು. ಮೈಲಾರದ ಜಾತ್ರೆಯಲ್ಲಿ ಕಡಬಿನ ಕಾಳಗ ನಡೆಯುತ್ತದೆ. ಅದರಲ್ಲಿ ಹೊಲೆಯರವನೊಬ್ಬ ದೇವರ ಮುಂದೆ ಬಂದು ನಿಂತು ಕಕ್ಕಾಡಾರತಿ ಬೆಳಗಿ ಕಕ್ಕಡದಿಂದ ಅಲ್ಲಿದ್ದ ಗೂರವರನ್ನು ಹೊಡೆಯುತ್ತಾನೆ. ಅಲ್ಲಿದ್ದವರು ಅವನನ್ನು ತಿರುಗಿ ಕಡಬುಗಳಿಂದ ಹೊಡೆಯುತ್ತಾರೆ. ಅದಾಗುವ ವೇಳೆಯಲ್ಲಿ ಆ ಹೊಲೆಯರವನು ಅಲ್ಲಿಂದ ಓಡಿ ಹೋಗಿ ಕುರುಬತೆವ್ವನ ಗುಡಿಯ ಸಮೀಪ ಅಡಗಿಕೊಳ್ಳುತ್ತಾನೆ. ಆಮೇಲೆ ಖಡ್ಗಪಾಣಿಗಳಾಗಿ ನಿಂತ ಕಂಚಾವೀರರು ಅವನನ್ನು ಬೆನ್ನಟ್ಟಿ ಹೋಗಿ ಹಿಡಿದು ಅವನ ಕುತ್ತಿಗೆಯ ಮೇಲೆ ಖಡ್ಗವನ್ನಿಟ್ಟು ದೇವರಲ್ಲಿಗೆ ಕರೆತರುತ್ತಾರೆ (ಮೈಲಾರಲಿಂಗ-ಖಂಡೋಬ ಸಾಂಸ್ಕೃತಿಕ ಅಧ್ಯಯನ ಪುಟ-೧೩೫) ಅಂದರೆ ದಲಿತರು ಮೈಲಾರನ ಪಂಥದಲ್ಲಿ ಸಂಹರಿಸಲ್ಪಟ್ಟವರು. ಇನ್ನೂ ದಲಿತರ ಸಂಹಾರಕ್ಕೆ ಸಹಕರಿಸಿದ ಮತ್ತೊಂದು ದಲಿತರ ಗುಂಪು ಇದ್ದು ಅವರೇ ಕಂಚಾವೀರರು. ಕಂಚಾವೀರರು ಹೊಲೆಯರೇ ಅಗಿದ್ದಾರೆ. ಮೈಲಾರ ಪಂಥದ ಅನೇಕ ಸಂದರ್ಭದಲ್ಲಿ ಕಂಚಾವೀರರು ಉಗ್ರ ಪವಾಡಪುರುಷರಾಗಿ ಕಾಣುತ್ತಾರೆ. ಬಗನಿಗೂಟ, ಕಬ್ಬಿಣ ಸರಪಳಿಗಳನ್ನು ಕಾಲು ಕೈಗಳಲ್ಲಿ ಹೊಡೆದುಕೊಳ್ಳುತ್ತಾರೆ (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨, ಜಾತ್ರೆಗಳು, ಪುಟ-೩೩) ಹೊಲೆಯರಿಗೆ ಮೋಸಮಾಡಿದ ವಿಚಿತ್ರ ಪ್ರಸಂಗ ಇದಾಗಿರುವುದು ಗಮನಿಸಬೇಕಾದ ಸಂಗತಿ. ಈ ಕಂಚಾವೀರರು ಮೈಲಾರ ಪಂಥದಲ್ಲಿ ಅತೀ ಹೆಚ್ಚಿನ ಸ್ಥಾನಮಾನಗಳನ್ನು ಹೊಂದಿದ್ದಾರೆ. ಮಾದಿಗ ಕುಲದವರು ಗೊರಪ್ಪ, ಗೊರಮ್ಮ ಆಗಬೇಕಾದರೆ ಅವರಿಗೆ ಧೀಕ್ಷೆ ಕೊಡಬೇಕಾದವರು ಈ ಕಂಚಾವೀರರೆ. ಮೈಲಾರಲಿಂಗನ ಪಾದರಕ್ಷೆ ಮತ್ತು ಬಿಲ್ಲುಗಳಿಗೆ ಭಕ್ತರು ಹಾಕುವ ಕಾಣಿಕೆ ಹಣಕ್ಕೆ ವಾರಸುದಾರರಾದ ಕಂಚಾವೀರರು ಒಡಬು ಹೇಳುವವರೂ ಆಗಿದ್ದಾರೆ. ಇಂಥ ಪರಸ್ಪರ ವಿರೋಧಾಭಾಸ ಸ್ವರೂಪದ ಮೈಲಾರದ ದಲಿತ ಪರಂಪರೆಬಗ್ಗೆ ಇನ್ನೂ ಸೂಕ್ಷ್ಮವಾದ ಅಧ್ಯಯನಗಳು ನಡೆಯಬೇಕಿದೆ. ಅನೇಕ ದಲಿತರ ಮನೆ ದೈವವಾಗಿ ಮೈಲಾರ ಲಿಂಗವನ್ನು ಸ್ವೀಕರಿಸಿರುವುದರ ಹಿಂದಿನ ಗುಟ್ಟೇನು? ದಲಿತ ಗೊರಪ್ಪ-ಗೊರಮ್ಮರು ಅನ್ಯ ಜಾತಿಯಿಂದ ಬಂದ ಗೊರಪ್ಪ, ಗೊರಮ್ಮರಿಗಿಂತ ಹೇಗೆ ಭಿನ್ನ? ಎಂಬ ವಿಚಾರಗಳನ್ನು ಆಲೋಚಿಸಿದರೆ ಈ ಪಂಥದೊಳಗಿನ ದಲಿತ ಪ್ರಜ್ಞೆ ಸ್ಪಷ್ಟವಾಗುತ್ತದೆ. 
೩. ಎಲ್ಲಮ್ಮನ ಸಂಪ್ರದಾಯ
ಕರ್ನಾಟಕದಲ್ಲಿ ಪ್ರಚಲಿತವಿರುವ ಬಹುಜನಪ್ರಿಯ ಆರಾಧನಾ ಸಂಪ್ರದಾಯ ಎಲ್ಲಮ್ಮನ ಸಂಪ್ರದಾಯ ಕರ್ನಾಟಕದ ಮೂರು ಸ್ಥಳಗಳಲ್ಲಿ ಇದರ ಕೇಂದ್ರಗಳಿವೆ. ಅವುಗಳೆಂದರೆ ಸವದತ್ತಿ, ಚಂದ್ರಗುತ್ತಿ ಹಾಗೂ ಉಚ್ಚಂಗಿದುರ್ಗ. ಈ ಸ್ಥಳಗಳ್ಲಿ ವರ್ಷಕ್ಕೊಮ್ಮೆ ಬೃಹತ್ ಪ್ರಮಾಣದ ಜಾತ್ರೆಗಳು ನಡೆಯುತ್ತದೆ. ಜಾತ್ರೆಗಳಲ್ಲಿ ಎಲ್ಲಮ್ಮನ ಭಕ್ತರು ಅದಕ್ಕಿಂತ ಹೆಚ್ಚಾಗಿ ದೇವತೆಯನ್ನು ಮೈಮೇಲೆ ಆಹ್ವಾನಿಸಿಕೊಂಡವರು ಜೋತತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಸಂಪ್ರದಾಯ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರಚಲಿತವಿದ್ದು ಅನೇಕ ರೂಪಾಂತರಗಳನ್ನು ಹೊಂದಿದೆ. 
ಎಲ್ಲಮ್ಮ ಶೂದ್ರರರ ಹೆಣ್ಣು. ಮೇಲ್ಜಾತಿ ಗಂಡನಿಂದ ಹತಳಾದ ಈಕೆ ನಂತರದ ದಿನಗಳ್ಲಿ ಜೀವ ಸೆಲೆಯಾಗಿ ಹರಿದವಳು. ಶೂದ್ರ ಹೆಣ್ಣು ಮಗಳ ಈ ಪರಂಪರೆಯಲ್ಲಿ ಸಮಾಜದ ಎಲ್ಲಾ ಜಾತಿ-ವರ್ಗದ ಜನ ಭಕ್ತರಾಗಿದ್ದು ವ್ಯಾಪಕವಾದ ನೆಲೆಯ ವಿಸ್ತಾರವಿದೆ. ಇಂಥ ಪರಂಪರೆಯೊಳಗೆ ದಲಿತರ ಸ್ಥನವೇನು? ಆಚರಣೆಗಳಲ್ಲಿ ಕಂಡುಬರುವ ದಲಿತ ಪ್ರಜ್ಞೆ ಎಂಥದ್ದು ಎಂಬುದನ್ನು ತಿಳಿಯಬಹುದು.
ಎಲ್ಲಮ್ಮನ ಸಂಪ್ರದಯದಲ್ಲಿ ದಲಿತರ ಪ್ರತಿನಿಧೀಕರಣವನ್ನು ಹಾಗೂ ದಲಿತ ಪ್ರಜ್ಞೆಯನ್ನು ಹುಡುಕ ಹೋರಟಾಗ ಈಗಲೂ ಚಾಲ್ತಿಯಲ್ಲಿರುವ ಆಚರಣೆಯೊಂದು ಗಮನಾರ್ಹ. ಎಲ್ಲಮ್ಮ ತನಗಿಷ್ಟಬಂದ ಹೆಣ್ಣು-ಗಮಡಿನ ಮೇಲೆ ಒದಗಿಬರುತ್ತದೆ ಎಂಬುದು ಒಂದು ನಂಬಿಕೆ. ಹೀಗೆ ಒದಗಿಬಂದಾಗ ಅಂಥವರು ದೇವಿಯ ಗುಡ್ಡಕ್ಕೆ ಹೋಗಿ ಮುತ್ತು ಕಟ್ಟಿಸಿಕೊಂಡು ಬರುತ್ತಾರೆ. ಬರುವಾಗ ದೇವಿಯ ಮೂರ್ತಿ ಹಾಗು ಅದನ್ನು ಇದಲು ಪುಟ್ಟಿ ಅಥವಾ ಕೊಡವನ್ನು ತರುತ್ತಾರೆ ತಂದು ಮೊದಲ ಪೂಜೆಗೆ ಹೋಗುವುದು ಮಾದಿಗರ ಕೇರಿಯಲ್ಲಿರುವ ಬಾನಿ ಅಥವಾ ಗಲ್ಲಾಕ್ಕೆ ಗಲ್ಲಾ ನೀರಿನಿಂದ ಪುಟ್ಟಿ ಅಥವಾ ಕೊಡವನ್ನು ಶುದ್ಧೀಕರಿಸಿ ಪೂಜಿಸಿಕೊಂಡು ತಮ್ಮ ಮನೆಯೊಳಗೆ ತಂದುಕೊಳ್ಳುತ್ತಾರೆ. ಹಾಗಾದರೆ ಏನಿದು ಸಂಪ್ರದಾಯ? ದೇವಿಯ ವಸ್ತುಗಳನ್ನು ತಮ್ಮವನ್ನಾಗಿ ಮಾಡಿಕೊಳ್ಳಲು ಧರ್ಮ ಹದಮಾಡುವ, ಅನೇಕರಿಗೆ ಅನಿಷ್ಟದಂತೆ ಕಾಣುವ ಬಾನಿಯ ಹತ್ತಿರ ಹೋಗುವುದೇಕೆ? ಹೋದರೂ ಅದರ ನೀರಿನಿಂದ ಆ ವಸ್ತುಗಳನ್ನು ಶುದ್ದೀಕರಿಸುವುದರ ಹಿಂದಿನ ನಂಬಿಕೆ ಏನು? ಎಂಬುದನ್ನು ವಿಚಾರಮಾಡಬೇಕಾಗುತ್ತದೆ. ಈ ಬಗ್ಗೆ ಆಲೋಚಿಸಿದರೆ ಅನೇಕ ಸಂಗತಿಗಳು ತಿಳಿದು ಬರುತ್ತದೆ. ಎಲ್ಲಮ್ಮನ ಕಥೆಯಲ್ಲಿ/ಐತಿಹ್ಯದಲ್ಲಿ ಕಂಡುಬರುವಂತೆ ಪರುಶುರಮ ಮಾತಂಗಿಯನ್ನು ಕೊಂದಾಗ ಆಕೆ ಮಾದಿಗರು ಧರ್ಮ ಹದಮಾಡುವ ಕರಿಬಾನೆಯಲ್ಲಿ ಉಳಿಯುತ್ತಾಳೆ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು-ಪುಟ-೨೪೫) ಇದೊಂದು ರೀತಿಯ ಅಭಿಪ್ರಾಯವಾದರೆ ಇನ್ನೊಂದು ಅಭಿಪ್ರಾಯ ಹೀಗಿದೆ; ಒಮ್ಮೆ ಶಾಪಗ್ರಸ್ಥಳಾದ ಎಲ್ಲಮ್ಮ ಕೃಷ್ಟರೋಗಿಯಾಗಿ ಸಂಕಟ ಪಡುತ್ತಿರುತ್ತಾಳೆ. ಮಾತಂಗಿಯ ಮನೆಯ ಕರಿಬಾನಿಯ ನೀರಿನಲ್ಲಿ ಸ್ನಾನಮಾಡಿದಾಗ ಅವಳ ಕುಷ್ಠರೊಗವು ನಿವಾರಣೆಯಾಗುತ್ತದೆ. ಆಗ ಕರಿಬಾನಿಯ ನೀರನ್ನು ಸೇವಿಸಿ ನನ್ನಂತೆ ಎಲ್ಲರೂ ಗುಣಮುಖರಾಗಲಿ ಎಂದು ಹರಿಸುತ್ತಾಳೆ (ಚಂದ್ರಗುತ್ತಿ ಕ್ಷೇತ್ರದ ಸಾಂಸ್ಕೃತಿಕ ಸಂಕಥನ, ಪುಟ-೧೭೨) ಇಂಥ ನಂಬಿಕೆಗಳ ಕಾರಣದಿಂದಾಗಿಯೇ ಮಾದಿಗರ ಕರಿಬಾನಿಯ ನೀರು ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿ ಜನಕ್ಕೂ ಪವಿತ್ರವಾದುದಾಗಿದೆ. ಇಂಥ ಕಾರಣಕ್ಕಾಗಿ ದೇವಿಯ ಭಕ್ತರು ಮೊದಲು ಕರಿಬಾನಿಯ ಪೂಜೆಸಲ್ಲಿಸುತ್ತಾರೆ.
ಮೇಲಿನ ವಿವರಗಳಲ್ಲಿ ಮಾತಂಗಿಯ ಪ್ರಸ್ತಾಪವಾಯಿತು. ಮಾರಿಯ ಸಂಪ್ರದಾಯದೊಳಗೂ ಈ ಮಾತಂಗಿಯ ವಿಷಯ ಬಂತು. ಹಾಗಾದರೆ ಆ ಮಾತಂಗಿಗೂ ಈ ಮಾತಂಗಿಗೂ ಏನು ಸಂಬಂಧ ಎಂಬ ಅನುಮಾನ ಬರುವುದುಂಟು. ಹಾಗೆ ನೋಡಿದರೆ ಈ ಎರಡೂ ಸಂಪ್ರದಾಯಗಳಲ್ಲಿ ಬರುವ ಮಾತಂಗಿಯರು ಒಬ್ಬರೇ ಆಗಬೇಕಿಲ್ಲ. ಏಕೆಂದರೆ, ದ್ರಾವಿಡರ ಮಾದಿಗ ಪದವೆ ಸಂಸ್ಕೃತಕ್ಕೆ ಮಾತಂಗವಾಗಿ ಸೇರಿತು ಎಂಬ ವಾದವು ದ್ರಾವಿಡ ಜ್ಞಾತಿಪದಕೋಶದಲ್ಲಿ ಮಂಡಿತವಾಗಿರುವುದನ್ನು ನೋಡಿದರೆ ಮಾತಂಗಿ ಎಂಬುದು ಒಬ್ಬ ಮಹಿಳೆಗಿರುವ ನಿರ್ದಿಷ್ಟ ಹೆಸರು ಎನ್ನುವುದಕ್ಕಿಂತ ಜನಾಂಗವಾಚಕ ಪದವಾಗಿ ಬಳಕೆಯಾದುದರ ಬಗ್ಗೆ ಯಾವುದೇ ಅನುಮಾನ ಪಡೆಬೇಕಿಲ್ಲ. ಈ ಪಂಥದಲ್ಲಿ ಬರುವ ಮಾತಂತಿ ಎಲ್ಲಮ್ಮನನ್ನು ಆಕೆಯ ಗಂಡ ಹಾಗೂ ಮಗನಿಂದ ರಕ್ಷಣೆಮಾಡಿದ್ದಕ್ಕಾಗಿ ಮೊದಲ ಪೂಜೆ ಸಲ್ಲುತ್ತದೆ. ಒಟ್ಟಾರೆ ಎಲ್ಲಮ್ಮನ ಸಂಪ್ರದಾಯದಲ್ಲಿ ದಲಿತ ಸಮುದಾಯಗಳ ಬಗೆಗಿನ ದೃಷ್ಟಿ ಉನ್ನತಸ್ಥಾನದಲ್ಲಿ ಇಲ್ಲದಿದ್ದರೂ ದಲಿತರು ಮಾತ್ರ ಹೆಚ್ಚು ಭಕ್ತರು ಹಾಗೂ ಜೋಗತಿಯರಾಗುತ್ತಿದ್ದಾರೆ. ಮಾತಂಗಿಯ ಶ್ರೇಷ್ಟತೆಯನ್ನು ಕೊಂಡಾಡುತ್ತಿದ್ದಾರೆ.
೪. ಭೂತಾರಾಧನೆಯ ಸಂಪ್ರದಾಯ
ಕರ್ನಾಟಕದ ತುಳುನಾಡಿನ ಜಾನಪದ ಸಂಪ್ರದಾಯಗಳಲ್ಲಿ ಭೂತಾರಾಧನೆ ಅತ್ಯಂತ ಮಹತ್ವದ ಆಚರಣೆ ಎನಿಸಿದೆ. ಇದರ ಬಗ್ಗೆ ಬರೀ ದೇಶಿಯ ವಿದ್ವಾಂಸರಷ್ಟೇ ಅಲ್ಲದೆ ಅನೇಕ ವಿದೇಶಿ ವಿದ್ವಾಂಸರು ಆಸಕ್ತಿ ವಹಿಸಿ ಅಧ್ಯಯನಗಳನ್ನು ನಡೆಸಿದ್ದಾರೆ. ಹಿರಿಯರ ಆರಾಧನಾ ಕೂಪವಾದ ಈ ಆಚರಣೆಯಲ್ಲಿ ನೂರಾರು ಭೂತಗಳಿವೆ. ಭೂತಗಳೆಂದರೆ ಇಲ್ಲಿ ಪ್ರೇತಗಳಲ್ಲ ಬದಲಿಗೆ ದೈವೀ ರೂಪಗಳು. ದೈವೀ ರೂಪಗಳೆಂದರೆ ಪೂರ‍್ಣ ದೈವಗಲ್ಲ ದೇವ-ಮನುಷ್ಯನ ಮಧ್ಯೆದ ಸ್ಥಿತಿ. ಪ್ರಸ್ತುತ ಭೂತಾರಾಧನೆಯಲ್ಲಿ ಪ್ರಮುಖವಾದ ಎರಡು ಗುಂಪುಗಳಿವೆ. ಒಂದು ಭೂತ ಕಟ್ಟಿಸುವವರದು ಮತ್ತೊಂದು ಭೂತ ಕಟ್ಟುವವರು. ಇವರ ಪರಸ್ಪರ ಸಂಬಂಧಗಳನ್ನು ವಿಶ್ಲೇಷಿಸಿಕೊಳ್ಳುವುದು ದಲಿತ ಪ್ರಜ್ಞೆಯ ಶೋಧವೆನಿಸುತ್ತದೆ.
ಇಲ್ಲಿ ಮೊದಲಿಗೆ ಭೂತಾರಾಧನೆಯ ಸಮಗ್ರ ಆಚರಣೆಯನ್ನು ತಿಳಿಯುವುದು ಸೂಕ್ತ. ಎ.ವಿ.ನಾದಡ ಅವರು ಹೇಳಿರುವಂತೆ ಭೂತಾರಾಧನೆಯು ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟವಾದ ಜನಪ್ರಿಯ ಆರಾಧನಾ ಸಂಪ್ರದಾಯ. ಬಣ್ಣ, ವೇಷ, ಬೂಷಣ, ಮಾತು, ಹಾಡು, ಕುಣಿತಗಳನ್ನು ಒಳಗೊಂಡಿರುವ ಇದು ಧಾರ‍್ಮಿಕ ಜನಪದ ರಂಗಭೂಮಿಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳೆಂದರೆ ಸತ್ಯನ್ಯಾಯಗಳನ್ನು ಬಿತ್ತರಿಸುವ ದೈವ ಶಕ್ತಿಗಳೆಂದೂ ತಿಳಿಯಲಾಗಿದೆ. ಅವು ಅಲೌಕಿಕ ಜಗತ್ತಿನಲ್ಲಿ ವಾಸಮಾಡುತ್ತವೆ ಹಾಗೂ ವಿಶಿಷ್ಟ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಮೂಲಕ ಮೈದುಂಬಿ ನಂಬಿದವರ ರಕ್ಷಣೆ ಮಾಡುತ್ತವೆ. ದಕ್ಷಿಣ ಕನ್ನಡದಲ್ಲಿ ಇಂಥ ಸುಮಾರು ೪೦೦ಕ್ಕೂ ಹೆಚ್ಚಿನ ಭೂತಗಳನ್ನು ಗುರುತಿಸಲಾಗಿದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಪಾತ್ರಿ ಎನ್ನುತ್ತರೆ. ಭೂತದ ವೇಷ ಹಾಕುವವನು ಭೂತಕಟ್ಟುವವರು ಎನ್ನುತ್ತಾರೆ. ಪರಿಶಿಷ್ಟವರ್ಗಕ್ಕೆ ಸೇರಿದ ಪರವ, ಪಂಬದ ಮತ್ತು ಮಲಿಕೆ ಜನಾಂಗದವರಷ್ಟೇ ಭೂತ ಕಟ್ಟುವವರು. ಭೂತದ ಕಲಾವಿದ ಮುಖವರ್ಣಿಕೆ ಮಾಡಿಕೊಳ್ಳುವಾಗ ಆ ಭೂತದ ಉಗಮ ಸಾಹಸ, ಕಾರಣಿಕ, ಪ್ರಸರಣಗಳನ್ನು ಕುರಿತ ಹಾಡನ್ನು ಹಾಡುತ್ತಾರೆ. ಇದನ್ನು ಪಾಡ್ಡನ ಎನ್ನುತ್ತಾರೆ. ಈಪಾಡ್ಡನವನ್ನು ಹಾಡುವವಳು ಭೂತ ಕಲಾವಿದನ ಕುಟುಂಬದ ಹೆಂಗಸು, ಈಕೆ ತೆಂಬರೆ ಎನ್ನುವ ಧರ್ಮನಾದ್ಯವನ್ನು ಬಡಿಯುತ್ತಾ ಲಯಬದ್ಧವಾಗಿ ಹಾಡುತ್ತಿರುತ್ತಾಲೆ (ಜಾನಪದ ಕೈಪಿಡಿ -೩೭೪).
ಇಂಥ ವಿಶಿಷ್ಟ ಆರಾಧನೆಯಲ್ಲಿ ಮೇಲೆ ವಿವರಿಸಿರುವಂತೆ ಪರವ-ಪಂಬದ, ನಲಿಕೆ ಮೊದಲಾದ ದಲಿತ ಜನಾಂಗದವರು ಭೂತಕಟ್ಟುವುದರ ಮೂಲಕ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಭೂತಕಟ್ಟಿಸುವ ಭಂಟ ಮೊದಲಾದ ಮೇಲ್ವರ್ಗದವರ ಹೊಲ-ಮನೆಗಳಲ್ಲಿ ವರ್ಷವಿಡೀ ಜೀತಮಾಡುವ ಈ ಜನ ವರ್ಷಕ್ಕೊಮ್ಮೆ ಬರುವ ಭೂತಾರಾದನೆಯಲ್ಲಿ ತಮ್ಮ ಮುಂದೆ ಕೈಮುಗಿದು ನಿಲ್ಲುವ ಒಡೆಯರ ಸ್ಥಿತಿಯನ್ನು ಕಾಣುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ತಾನು ಹೇಳಿದಂತೆ ಕೇಳಬೇಕೆಂದು ಆಜ್ಞಾಪಿಸುತ್ತಾನೆ. ಬಹುಶಃ ವರ್ಷವಿಡೀ ಒಡೆಯರಿಂದ ಅನುಭವಿಸಿದ ನೋವನ್ನು ಭೂತದ ಆಹಾವನೆಯ ನೆಪದಲ್ಲಿ ಹೊರಹಾಕುತ್ತಾನೆ ಎನಿಸುತ್ತದೆ. ಭೂತ ಕಟ್ಟಿದವರು ಹಾಗೂ ಒಡೆಯನ ಮಧ್ಯೆ ಪಾತ್ರಿ ಎನ್ನುವ ವ್ಯಕ್ತಿಯೊಬ್ಬ ಇರುತ್ತಾನೆ. ಆದರೂ ಆ ಸಂದರ್ಭದ ಮಟ್ಟಿಗೆ ಭೂತದ್ದೇ ಮೇಲ್‌ಗೈ ಭೂತದ ಆರಾಧನೆಗೆ ಕೋಲ ಏರ್ಪಡಿಸುವ ಮೇಲ್ವರ್ಗ ಭೂತ ಕಟ್ಟುವವನ ಆಯ್ಕೆ ಹಾಗೂ ಭೂತದ ನುಡಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರಾದರೂ ಅನೇಕ ಸಲ ಅದು ಫಲ ನೀಡದೆ ಭೂತವೇ ಮೇಲಗೈ ಸಾಧಿಸುತ್ತದೆ. ಭೂತ ಕಟ್ಟಿಸಿದವರ ಕುಟುಂಬದ ಹಿರಿಯರು ಭೂತದ ರೂಪದಲ್ಲಿ ಬರುತ್ತಾರೆಂಬ ನಂಬಿಕೆ ಇಂಥ ಸ್ಥಿತಿಗೆ ಕಾರಣವಾಗುತ್ತದೆ. ಗಮನಿಸಬೇಕಾದುದೆಂದರೆ ಕೆಳಜಾತಿಯವರ ಮೈಮೇಲೆ ಮೇಲ್ವರ್ಗದ ಭೂತಗಳು ಬರುವುದು ಬಂದಾಗ ತಮಗಿಷ್ಟವಿಲ್ಲದಿದ್ದರೂ ಭೂತಕಟ್ಟಿದವರನ್ನೂ ಗೌರವಿಸುವುದ; ಭೂತಕಟ್ಟಿದವರಾದರೂ ತಾವೇ ದೈವ ಎಂಬಂತೆ ಭಾವಿಸಿಕೊಂಡು ವರ್ತಿಸುವ ವರ್ತನೆಗಳನ್ನು ವಿಶೇಷವಾಗಿ ದಲಿತ ಸಂವೇದನೆಯ ಹಿನ್ನೆಲೆಯಲ್ಲಿ ಗಮನಿಸಬೇಕು.
ಭೂತಾರಾಧನೆಯಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಭೂತದ ಆರಾಧನೆಯು ಇನ್ನೊಂದು ಅರ್ಥದಲ್ಲಿ ವೀರರ ಆರಾಧನೆ. ದಲಿತ ವೀರರ ಕುರಿತು ಅಧ್ಯಯನ ಮಾಡಿದರೆ, ಮಾನವ ಹಕ್ಕಿಗಾಗಿ ಹೋರಾಡುವವರನ್ನು ಮೇಲು ಜಾತಿಯ ಭೂತಗಳು ಕೊಲೆಮಾಡಿವೆ ಎನ್ನುವುದು ಗೊತ್ತಾಗುತ್ತದೆ. ಸೋಜಿಗದ ವಿಷಯವೆಂದರೆ ಇಲ್ಲಿ ಕೊಲೆ ಮಾಡಿದ ಮತ್ತು ಮಾಡಿಕೊಂಡ ಎರಡೂ ಶಕ್ತಿಗಳ ಆರಾಧನೆ ನಡೆಯುತ್ತದೆ. ಕೊರಗತನಿಯ, ಕೊಡ್ಡಬ್ಬು, ಮುಗೇರ‍್ಲು, ಕಲ್ಕುಡ, ಕಲ್ಲುರ್ಟಿ ಇಂಥ ಭೂತಗಳು ಕೆಲವು ನಿರ್ದಿಷ್ಟ ಪ್ರಾಣಿಗಳ ಮುಖವಾಡಗಳನ್ನು ಹೊಂದಿರುತ್ತವೆ. ಹಂದಿ (ಪಂಜುರ್ಲಿ) ಅಂಥ ಮುಖವಾಡಗಳಲ್ಲಿ ಬಹಳ ಮುಖ್ಯವಾದುದಾಗಿದೆ. ಇಂಥ ಹಲವಾರು ಸಂಗತಿಗಳು ಭೂತಾರಾಧನೆಯ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡಬಲ್ಲವು. 
ಭೂತರಾಧನೆಯ ಬಗ್ಗೆ ಅಧ್ಯಯನ ಮಾಡಿರುವ ಕೆಲವು ವಿದ್ವಾಂಸರು ಪ್ರಸ್ತುತ ಆಚರಣೆ ಹೇಗೆ ದಲಿತ ವಿರೋಧಿಯಾಗಿದೆ ಎಂಬ ಅಂಶಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ವಿಷಯದಲ್ಲಿ ಅರವಿಂದ ಮಾಲಗತ್ತಿಯವರಂತೂ ಭೂತಾರಾಧನೆಯ ಜನಾಂಗಿಕ ಅಧಃಪತನ, ಜಾತಿಯನ್ನು ಮತ್ತಷ್ಟು ಭದ್ರಗೊಳಿಸುವ ವ್ಯವಸ್ಥೆ, ಇದು ಒಂದು ಹಗಲು ದರೋಡೆ ಎಂದು ಕಟು ವಾಕ್ಯಗಳಿಂದ ವಿಮರ್ಶಿಸಿದ್ದಾರೆ (ಪುರಾಣ ಜಾನಪದ ಮತ್ತು ದೇಶೀವಾದ, ಪುಟ-೧೯೬) ಹೌದು ಇವೆಲ್ಲ ಸತ್ಯವೆ. ಆದರೆ ಇಷ್ಟು ಕಟ್ಟುನಿಟ್ಟಿನ ವ್ಯವಸ್ಥೆಯೊಳಗೆ ಕೆಲವಾದರೂ ದಲಿತರ ಚೈತನ್ಯ ನೆಲೆಗಳಿವೆ ಎಂಬುದನ್ನು ತಿರಸ್ಕರಿಸಲಾಗದು.
೫. ಇತರೆ ಆಚರಣೆಗಳು
ಕನ್ನಡ ನಾಡಿನ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಪ್ರಚಲಿತವಿರುವ ಅನೇಕ ಪ್ರಾಚೀನ ಆಚರಣೆಗಳ ಜೊತೆ ಆಧುನಿಕ ಕಾಲಕ್ಕೆ ಉಗಮಿಸಿದ ಅಥವಾ ಬೆಳಕಿಗೆ ಬಂದ ಅನೇಕ ಆಚರಣೆಗಳು ಇವೆ. ಅಂಥವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ದಾವಣೆಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಅಜ್ಜುಯ್ಯನ ಸಂಪ್ರದಾಯ. ದೆವ್ವ ಬಡಿಸುವ ಪ್ರಧಾನ ಕಾರ‍್ಯ ಅಜ್ಜುಯ್ಯನದಾದರೂ ಮಾನವನ ಸಕಲ ಸಂಕಷಟಗಳನ್ನು ಪರಿಹರಿಸುವ ಶಕ್ತಿಯೂ ಇದೆ. ಈ ಸಂಪ್ರದಾಯದ ವಿಶೇಷವೆಂದರೆ ದೆವ್ವ ಮೈಮೇಲೆ ಬಂದವರಿಗೆ ಅಜ್ಜಯ್ಯನ (ಕರಿಬಸವ) ಹತ್ತಿರ ಕರೆದೊಯ್ಯಲಾಗುತ್ತದೆ. ಆಗ ಆ ರೋಗಿಗೆ ಅಜ್ಜಯ್ಯ ಸೇವೆಯಾಗಿ ನಿಷ್ಠೆಯಿಂದ ಒಮದು ವಾರವೋ ತಿಂಗಳೋ ಪೂಜಿಸುವ ಜವಾಬ್ದಾರಿ ಹೊರಿಸಲಾಗುತ್ತದೆ. ವಿಶೇಷವೆಂದರೆ ಅಜ್ಜಯ್ಯನನ್ನು ಪೂಜಿಸುತ್ತ ಪೂಜಿಸುತ್ತಾ ರೋಗಿ ಭಕ್ತ ಸ್ಥಾನದಿಂದ ಪೂಜಾರಿ ಸ್ಥಾನಕ್ಕೆ ಬಡ್ತಿ ಪಡೆಯುತ್ತಾನೆ. ರೋಗಿಯಾಗಿದ್ದ ವ್ಯಕ್ತಿ ಇಲ್ಲಿಂದ ತಾನೇ ದೈವವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವನಾಗುತ್ತಾನೆ. ರೋಗಿಯಾಗಿದ್ದ ವ್ಯಕ್ತಿ ಇಲ್ಲಿಂದ ತಾನೇ ದೈವವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವನಾಗುತ್ತಾನೆ. ಇಂಥ ಪೂಜಾರಿಗಳನ್ನು ಗಮನಿಸದರೆ ಅವರೆಲ್ಲರೂ ದಲಿತ ಹಾಗೂ ಮಹಿಳೆಯರೇ ಆಗಿರುತ್ತಾರೆ. ಯಾಕೆ ಹೀಗೆ ಎಂದರೆ, ದೆವ್ವ ಮೈಮೇಲೆ ಬರುವುದು ಬಹುತೇಕ ದಲಿತರಲ್ಲೇ ಹೆಚ್ಚು. ಹಾಗಾಗಿ ದೆವ್ವ ಬಿಡಿಸಲು ಹೋಗಿ ತಾವೇ ದೈವವಾಗಿದ್ದಾರೆ. ಇಂಥ ಪೂಜಾರಿಗಳ ಹತ್ತಿರ ಸಮಾಜದ ಎಲ್ಲಾವರ್ಗದ ಜನ ನಿಡುತ್ತಾರೆ. ಹಾಗಾಗಿ ಇಂಥ ಆಚರಣೆಗಳನ್ನು ದಲಿತ ಪ್ರಜ್ಞೆಯ ಹಿನ್ನೆಲೆಯಲ್ಲಿ ನೋಡುವುದ ಅತ್ಯಂತ ಕುತೂಹಲಕರ ಸಂಗತಿ ಎನಿಸುತ್ತದೆ. ಇಂಥ ಇನ್ನೂ ಹಲವಾರು ಆಚರಣೆಗಳು ಸಮಾಜದಲ್ಲಿ ಪ್ರಚಲಿತವಿದ್ದು ಅವುಗಳಲ್ಲಿ ದಲಿತ ಸಂವೇದನೆ ವ್ಯಕ್ತವಾಗಿರುವ ರೂಪಗಳನ್ನು ಗುರುತಿಸಬೇಕಾಗಿದೆ..
ಆಚರಣೆಗಳು ಮತ್ತು ವಾದ್ಯಗಳು
ಜನಪದ ಆಚರಣೆಗಳಲ್ಲಿ ಬಹುತೇಕ ಪ್ರದರ್ಶನಾತ್ಮಕ ಆಯಾಮಗಳೇ ಹೆಚ್ಚು. ಹಾಗೆಯೇ ವಾದ್ಯಗಳ ಬಳಕೆ ಸಾಮಾನಯ. ಅವುಗಳಲ್ಲ ಕಹಳೆ, ಉರುಮೆ, ಹಲಗೆ, ತೆಂಬರಿ, ಶಹನಾಯಿ, ಚೌಡಿಕೆ ಹೀಗೆ ಹತ್ತಾರು ಚರ್ಮ ಮತ್ತು ತಂತಿ ವಾದ್ಯಗಳು ಮುಖ್ಯವಾಗುತ್ತವೆ. ಧರ್ಮ ವಾದ್ಯಗಳಂತೂ ಪ್ರಾಚೀನ ಕಾಲದಿಂದ ಇಂದಿನವರೆಗೂ ಅದ್ಭುವಾದ ಅಸ್ತಿತ್ವವನ್ನು ಸಾಧಿಸಿಕೊಂಡಿವೆ. ಈ ವಾದ್ಯಗಳು ಇಲ್ಲದೆ ಯಾವ ಆಚರಣೆಗಳೂ ನಡೆಸಲಾರವು. ಇಂಥ ಬಹಳ ಪ್ರಮುಖವಾದ ವಾದ್ಯಗಳನ್ನು ನುಡಿಸುವವರು ಸಮಾಜದ ಕೆಳವರ್ಗದ ಜನರೇ ವಾದ್ಯಗಾರರಾಗುವುದು ಸರಿಯಲ್ಲವೆನಿಸಿದರೂ ವಾದ್ಯಗಾರರಾದ ದಲಿತರು ತಮ್ಮ ಅಂತರಾಳದ ಗುಟ್ಟನ್ನು ಹೇಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಕಂಡರೆ ಅಶ್ಚರ್ಯವೆನಿಸುತ್ತದೆ. ಮೇಲ್ವರ್ಗದ ಪೂಜಾರಿ ದೇವರು ಹೊತ್ತಿರುತ್ತಾನೆ. ಅದರ ಮುಂದೆ ವಾದ್ಯಗಾರ ದೇವ ವಾಕ್ಯದ ಆಧಾರದ ಮೇಲೆ ವಾದ್ಯಗಾರ ನುಡಿಸಬೇಕಾದರೂ ನುಡಿಸುವವನ ಆಳದ ನೋವಿನ ನೆಲೆಗಳು ಅಭಿವ್ಯಕ್ತಗೊಳ್ಳುವ ಕ್ರಮ ವಿಶಿಷ್ಟವಾದುದು. ದೇವರನ್ನು ಹೊತ್ತ ಪೂಜಾರಿಗೆ ದೇವರು ಮೈಮೇಲೆ ಬರುವುದೇ ತಾನು ಬಾರಿಸಿದ ವಾದ್ಯದ ತಾಳ-ಗತಿಗಳ ಪರಿಣಾಮ ಎಂಬ ಸಂಗತಿ ತಿಳಿದ ತಕ್ಷಣ ವಾದ್ಯಗಾರನಿಗೆ ತನ್ನ ಸ್ಥಾನದ ಅರಿವಾಗುತ್ತದೆ. ಹಾಗೆಯೇ ಮುಂದುವರೆದು ದೇವರನ್ನು ಕುಣಿಸಲು ಬೇರೆ ಬೇರೆ ತಾಳಗಳನ್ನು ಬಾರಿಸುತ್ತಾ ಹೋಗುತ್ತಾನೆ. ದೇವರು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹೋಗುತ್ತದೆ. ತಾಳು-ಕುಣಿತಗಳ ಗತಿ ತಾರಕಕ್ಕೇರಿದಂತೆಲ್ಲ ಖಂಡಿತಾ ನುಡಿಸುವವರ ಮನದಾಳದ ನೋವು ಕಾಣುತ್ತದೆ. ಅವನ್ನು ನಾನು ಕುಣಿಸುತ್ತಿದ್ದೇನೆ ಎಂಬ ಭಾವನೆ ಆದರಿಸಿದಂತೆ ಭಾಸವಾಗುತ್ತದೆ. ದೈವ ವಾಕ್ಯದಂತೆ ನುಡಿಸಬೇಕಿದ್ದ ವಾದ್ಯಗಾರ ಒಂದು ಹಂತ ದಾಟಿದ ಮೇಲೆ ಇಡೀ ಕುಣಿತ ವಾದ್ಯಗಾರನ ಹಿಡಿತಕ್ಕೆ ಬರುತ್ತದೆ. ಇಂಥ ಸಂದರ್ಭಗಳೆಲ್ಲೆಲ್ಲ ದಲಿತ ಪ್ರಜ್ಞೆ ಜಾಗೃತಗೊಂಡಿರುವುದ ಸ್ಪಷ್ಟವಾಗುತ್ತದೆ.
ಒಟ್ಟಾರೆ ಹೇಳುವುದಾದರೆ ಜನಪರ ನಂಬಿಕೆ - ಸಂಪ್ರದಾಯ - ಆಚರಣೆಗಳು ಬಹುಪಾಲು ಸಂದರ್ಭಗಳ್ಲಲಿ ಸಮಾಜದಲ್ಲಿರುವ ಏಣಿ ಶ್ರೇಣಿ ವ್ಯವಸ್ಥೆಯನ್ನು ಸಮರ್ಥಿಸುವಂತೆ ಕಾಣುತ್ತನೆ. ಆದರೆ ಸೂಕ್ಷ್ಮವಾಗಿ ಆಚರಣೆಗಳ ಪ್ರದರ್ಶನಗಳನ್ನು ಗಮನಿಸಿದರೆ ಅವುಗಳೊಳಗೆ ಗುಪ್ತಗಾಮಿನಿಯಾಗಿ ಹರಿದ ದಲಿತ ಪ್ರಜ್ಞೆ ಕಾಣುತ್ತದೆ. 

ಪರಾಮರ್ಶನ
೧. ಜಾನಪದ ಕೈಪಿಡಿ, ಎಚ್.ಜೆ.ಲಕ್ಕಪ್ಪಗೌಡ, ೧೯೯೭, ಕನ್ನಡ ಪ್ರಸ್ತಕ ಪ್ರಾಧೀಕಾರ, ಬೆಂಗಳೂರು.
೨. ಜಾನಪದ ಅಧ್ಯಯನ, ದೇಜಗೌ, ೨೦೦೧, ಕನ್ನಡ ಪುಸ್ತಕ ಪ್ರಾಧೀಕಾರ, ಬೆಂಗಳೂರು.
೩. ಸಾಹಿತ್ಯ, ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ, ಅರವಿಂದ ಮಾಲಗತ್ತಿ, ೨೦೦೩, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
೪. ಪುರಾಣ ಜಾನಪದ ಮತ್ತು ದೇಶಿವಾದ, ಅರವಿಂದ ಮಾಲಗತ್ತಿ, ೧೯೯೯ ಕ.ಸಾ.ಪ. ಬೆಂಗಳೂರು
೫. ದ್ರಾವಿಡ ಜಾನಪದ, ಸಂ: ತೀ.ನಂ ಶಂಕರನಾರಾಯಣ, ೧೯೮೫, ಬಿ.ಅರ್.ಪಿ, ಕನ್ನಡವಿಭಾಗ, ಶಿವಮೊಗ್ಗ.
೬. ಕರ್ನಾಟಕದ ಬುಡಕಟ್ಟುಗಳು-೧ ಪ್ರ.ಸಂ.ಹೆಚ್.ಜೆ.ಲಕ್ಕಪ್ಪಗೌಡ, ೧೯೯೮, ಕ.ಜಾ.ಯ. ಅಕಾಡೆಮಿ. ಬೆಂಗಳೂರು.
೭. ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ, ಜಾತ್ರೆಗಳು, ಎಸ್.ಎಸ್.ಹಿರೇಮಠ, ೧೯೯೩; ಸಮತಾ ಪ್ರಾಕಾಸನ, ಹೊಸಪೇಟೆ.
೮. ಜನಪದ ಸಮಾಜ ಸಂಸ್ಕೃತಿ, ಎಸ್.ಎಸ್.ಹಿರೇಮಠ, ೨೦೦೫ ಸೂರ‍್ಯಪ್ರಕಾಶನ, ಮಲ್ಲಾಡಿಹಳ್ಳಿ
೯. ಕನಾಟಕ ಜಾನಪದ, ಪ್ರ.ಸಂ.ಎಸ್.ಕೆ ಕರೀಂದಾನ್, ೧೯೮೯, ಕ.ಜಾ.ಯ.ಅ.ಬೆಂಗಳೂರು.
೧೦. ಕರ್ನಾಟಕ ಜಾತ್ರೆಗಳು, ಸಾ; ಸಿ.ಎಸ್.ಶಿವಕುಮಾರಸ್ವಾಮಿ, ೧೯೮೮, ಕನ್ನಡ ವಿಭಾಗ, ಬಿ.ಆರ್.ಪಿ
೧೧. ಜಾನಪದ ಸಂಕಲನ, ಬಸವರಾಜ ನೆಲ್ಲಿಸರ,
೧೨. ಜಾನಪದ ಜಗತ್ತು ಗಿoಟ-II ೧೯೯೦, ಕ.ಜಾನಪದ ಪರಿಷತ್, ಬೆಂಗಳೂರು
೧೩. ಮೈಲಾರಲಿಂಗ -ಖಂಡೋಬಾ ಸಾಂಸ್ಕೃತಿಕ ಅಧ್ಯಯನ, ಎಂ.ಬಿ.ನೇಗಿನ ಹಾಳ, ಕರ್ನಾಟಕ ವಿ.ವಿ. ಧಾರವಾಡ.

ಡಾ.ಎಸ್.ಎಂ.ಮುತ್ತಯ್ಯ 

ಟಿ.ಪಿ.ಅಶೋಕ ಅವರ ವಿಮರ್ಶೆಯಲ್ಲಿ ದಲಿತ ದೃಷ್ಟಿಕೋನ

ಆಧುನಿಕ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ’ಸಾಹಿತ್ಯ ವಿಮರ್ಶೆ’ ಮಹತ್ವದ ಪ್ರಕಾರವಾಗಿ ಬೆಳೆದು ನಿಂತಿದೆ. ಈ ಬೆಳವಣಿಗೆಯಲ್ಲಿ ಅನೇಕ ಬರೆಹಗಾರರು ಪಾಲುದಾರರರಾಗಿದ್ದಾರೆ. ಅಂಥ ಪಾಲುದಾರರಲ್ಲಿ ಟಿ.ಪಿ. ಅಶೋಕ ಅವರೂ ಕೂಡ ಒಬ್ಬರು. ಇವರು ಆಧುನಿಕ ಕನ್ನಡ ಸಾಹಿತ್ಯ ವಿಮಶೆಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿಮಾಡಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮೂಲತಃ ನಂಜನಗೂಡಿನವರಾದ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಎಲ್.ಬಿ. ಕಾಲೇಜಿನಲ್ಲಿ  ಇಂಗ್ಲಿಷ್ ಪ್ರಾಧ್ಯಾಪಕ ವೃತ್ತಿಯನ್ನು ಮಾಡುತ್ತಾ ಸಾಹಿತ್ಯ ವಿಮರ್ಶೆಯನ್ನು ಒಂದು ಪ್ರವೃತ್ತಿಯನ್ನಾಗಿಸಿ ಕೊಂಡವರು. ತಮ್ಮ ಸಾಹಿತ್ಯದ ವಿದ್ವತ್ ಚಿಂತನೆಗಳ ಪರಿಣಾಮ ಕೆಲಕಾಲ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದಾರೆ. ೧೯೭೮ ರಿಂದಲೇ ಸಾಹಿತ್ಯ ವಿಮರ್ಶೆಯ ಬರವಣಿಗೆಯನ್ನು ಆರಂಭಿಸಿದ ಇವರು ವಿಶೇಷವಾಗಿ ಪುಸ್ತಕ ವಿಮರ್ಶೆಯ ಕಾರ್ಯವನ್ನು ನೋಂಪಿಯಂತೆ ಮಾಡುತ್ತಾ ಬಂದವರು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ೧೯೮೪ ರಿಂದ ೧೯೯೧ ರವರೆಗೆ ’ಮಯೂರ’ ಪತ್ರಿಕೆಯಲ್ಲಿ ’ಅವಲೋಕನ’ ಎನ್ನುವ ಅಂಕಣದ ಮೂಲಕ; ೧೯೭೮ ರಿಂದ ೧೯೯೩ ರವರೆಗೆ ’ಪ್ರಜಾವಾಣಿಯ’ಯ ’ಸಾಪ್ತಾಹಿಕ ಪುರವಣಿ’ ಯಲ್ಲಿ ; ೨೦೦೦ ದಿಂದ ೨೦೧೦ ರವರೆಗೆ ’ವಿಜಯ ಕರ್ನಾಟಕ’ ದ ’ಸಾಪ್ತಾಹಿಕ ವಿಜಯ’ ದ ’ವಿರಾಮದ ಓದು’ ಅಂಕಣದ ಮೂಲಕ; ’ಸಂಯುಕ ಕರ್ನಾಟಕ’ ದ ’ಅಂತರ್ಯ’ ಅಂಕಣದಲ್ಲಿ , ’ಕಸ್ತೂರಿ’ ಪತ್ರಿಕೆಯಲ್ಲಿ; ಇಂಗ್ಲಿಷ್ ನ ’ದಿ ಹಿಂದೂ’ ಪತ್ರಿಕೆಯಲ್ಲಿ ಕನ್ನಡ ಹಾಗೂ ಬೇರೆ ಬೇರೆ ಭಾಷೆಯ ಸಾಹಿತ್ಯ ಕೃತಿಗಳನ್ನು ವಿಮರ್ಶಿಸಿದ್ದಾರೆ. ಇದಲ್ಲದೆ ಅಶೋಕ ಅವರು ಬರೆದಷ್ಟೆ ಮಾತನಾಡಿದ್ದಾರೆ. ಇದಕ್ಕಾಗಿ ಶಿಬಿರಗಳನ್ನು ಬಳಸಿಕೊಂಡಿದ್ದಾರೆ. ಶಿಬಿರಗಳನ್ನು ಆಯೋಜಿಸುವುದರಲ್ಲಿ ಇವರು ಸಿದ್ಧಹಸ್ತರು. ಸುಮಾರು ೩೦೦ ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದಾರೆ. ಆ ಮೂಲಕ ಹೊಸ ತಲೆಮಾರಿನ ತರುಣ ಓದುಗರನ್ನು ಬೆಳೆಸಿದ್ದಾರೆ. ಇದರ ಫಲವೆಂಬಂತೆ ಪತ್ರಿಕೆಗಳಲ್ಲಿ ಹಾಗೂ ಶಿಬಿರಗಳಲ್ಲಿ ಹೊರಹೊಮ್ಮಿದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಆಶೋಕ ಅವರ ಈವರೆಗೂ ಪ್ರಕಟವಾದ ಕೃತಿಗಳು ಹೀಗಿವೆ : ’ಸಾಹಿತ್ಯ ಸಂದರ್ಭ’, ’ಸಾಹಿತ್ಯ ಸಂಪರ್ಕ’, ’ಸಾಹಿತ್ಯ ಸಂಬಂಧ’, ’ಪುಸ್ತಕ ಪ್ರೀತಿ’, ’ಪುಸ್ತಕ ಸಮಯ’, ’ನವ್ಯ ಕಾದಂಬರಿಯ ಪ್ರೇರಣೆಗಳು’,’ಹೊಸ ಹೆಜ್ಜೆ- ಹೊಸ ಹಾದಿ’, ’ಕಾರಂತರ ಕಾದಂಬರಿಗಳಲ್ಲಿ ಆಧುನೀಕರಣ ಪ್ರ್ರಕ್ರಿಯೆ’, ’ಶಿವರಾಮ ಕಾರಂತ : ಎರಡು ಅಧ್ಯಯನಗಳು’, ’ವೈದೇಹಿ ಅವರ ಕಥೆಗಳು’, ’ಯು. ಆರ್. ಅನಂತಮೂರ್ತಿ : ಒಂದು ಅಧ್ಯಯನ’, ’ಕುವೆಂಪು ಕಾದಂಬರಿ : ಎರಡು ಅಧ್ಯಯನಗಳು’ ಮತ್ತು ’ತೇಜಸ್ವಿ ಕಥನ’ ಮೊದಲಾದ ವಿಮರ್ಶಾ ಸಂಕಲನಗಳು ; ’ಕೆ.ವಿ ಸುಬ್ಬಣ್ಣ ಆಯ್ದ ಬರೆಹಗಳು’ , ’ಸಾಹಿತ್ಯ ವಿಮರ್ಶೆ-೧೯೮೩’, ’ಎ.ಕೆ. ರಾಮಾನುಜನ್ ಅವರ ನೆನಪಿನ ಸಂಪುಟ’, ’ಕಾರಂತ ಮಂಥನ’, ’ಶಿವರಾಮ ಕಾರಂತ : ಈ ಶತಮಾನದ ನೋಟ’ ಮುಂತಾದ ಸಂಪಾದಿತ ಕೃತಿಗಳು ; ಇವಲ್ಲದೆ ರಷ್ಯನ್ ನೀಳ್ಗತೆಗಳು, ರಿಕ್ತ ರಂಗಭೂಮಿ ಎಂಬ ಎರಡು ಅನುವಾದ ಕೃತಿಗಳು ಕೂಡ ಪ್ರಕಟವಾಗಿವೆ.
ಇದುವರೆಗೂ ಒಟ್ಟು ೨೮ ಕೃತಿಗಳನ್ನು ಪ್ರಕಟಿಸಿರುವ ಟಿ.ಪಿ.ಅಶೋಕ ಅವರಿಗೆ ’ಸಾಹಿತ್ಯ ಸಂಪರ್ಕ’ ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನಾಮ್ದಾರ್ ಸ್ಮಾರಕ ಬಹುಮಾನ; ’ಪುಸ್ತಕ ಪ್ರೀತಿ’ ಗ್ರಂಥಕ್ಕೆ ವರ್ಧಮಾನ ಪ್ರಶಸ್ತಿ; ’ಸಾಹಿತ್ಯ ಸಂದರ್ಭ’ ಕೃತಿಗಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ತೀನಂಶ್ರೀ ಸ್ಮಾರಕ ಬಹುಮಾನ; ’ಶಿವರಾಮ ಕಾರಂತ : ಎರಡು ಅಧ್ಯಯನಗಳು’ ಕೃತಿಗೆ ಆರ್ಯಭಟ ಪ್ರಶಸ್ತಿಗಳು ಲಭಿಸಿವೆ. ಇದಲ್ಲದೆ ನಾಡಿನಾದ್ಯಂತ ಶಿಬಿರಗಳನ್ನು ನಡೆಸಿದ ಸಾಧನೆಗಾಗಿ ಸಂದೇಶ್ ಪ್ರಶಸ್ತಿ ಹಾಗೂ ಎಸ್.ವಿ. ಪರಮೇಶ್ವರಭಟ್ಟ ಸಂಸ್ಮರಣಾ ಪ್ರಶಸ್ತಿ ಗಳಿಸಿದ್ದಾರೆ.  ಇವೆಲ್ಲ ಪ್ರಶಸ್ತಿಗಳಿಗೆ ಮುಕುಟವೆಂಬಂತೆ ಆರನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಟಿ.ಪಿ ಅಶೋಕ ಅವರ ವಿಮರ್ಶಾ ದೃಷ್ಟಿ 
ಟಿ.ಪಿ. ಅಶೋಕ ಅವರ ವಿಮರ್ಶಾ ಬರೆಹದ ಹಿಂದೆ ಇರುವ ತಾತ್ವಿಕತೆಯ ಸ್ವರೂಪ ಮತ್ತು ಬೆಳವಣಿಗೆ ಅತ್ಯಂತ ಕೂತೂಹಲದಾಯಕವಾದುದು. ೧೯೭೯ ರಲ್ಲಿ ಪ್ರಕಟವಾದ ’ನವ್ಯ ಕಾದಂಬರಿಯ ಪ್ರೇರಣೆಗಳು’ ಕೃತಿಯಿಂದ ಆರಂಭಿಸಿ ೨೦೧೧ ರಲ್ಲಿ ಪ್ರಕಟವಾದ ’ಪುಸ್ತಕ ಸಮಯ’ ಕೃತಿಯವರೆಗಿನ ಒಟ್ಟು ಬರೆಹಗಳಲ್ಲಿ ಪ್ರಮುಖವಾದ ಎರಡು ರೀತಿಯ ಬರೆಹಗಳಿವೆ. ಅವುಗಳಲ್ಲಿ ಒಂದು : ಪುಸ್ತಕ ಪರಿಚಯ. ಸುಮಾರು ನೂರಾರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಗ್ರಂಥಗಳ ವಿಮರ್ಶಾತ್ಮಕ ಅವಲೋಕನ. ಎರಡು : ಕವಿ-ಕಾಲ-ಸಂದರ್ಭಗಳೊಡನೆ ಕೃತಿಗಳ ಮೌಲ್ಯಮಾಪನ. ಅಶೋಕರ ಆರಂಭಿಕ  ಬರೆಹಗಳಲ್ಲಿ ಕಥೆಯನ್ನು ನಂಬು ಕಥೆಗಾರರನ್ನಲ್ಲ ಎಂಬ ಭಾವನೆ ಪ್ರಧಾನವಾಗಿ ಕಂಡರೆ, ನಂತರದ ಬರೆಹಗಳಲ್ಲಿ ಕಥೆ ಹಾಗೂ ಕಥೆಗಾರ ಇವೆರಡನ್ನು ಒಂದೇ ಕಥಾನಕವಾಗಿ ಕಾಣುವ ದೃಷ್ಟಿ ಕಂಡು ಬರುತ್ತದೆ. ಇವರು  ವಿಮರ್ಶೆ ಎನ್ನುವುದು ಕೇವಲ ಅಕಾಡೆಮಿಕ್ ಕಾರ್ಯವಲ್ಲ. ಅದೊಂದು ಮಾನಸಿಕ, ಸಾಂಸ್ಕೃತಿಕ ಅಗತ್ಯ. ಮನಸ್ಸಿನ ಆರೋಗ್ಯಕ್ಕೆ, ಸಂಸ್ಕೃತಿಯ ಆರೋಗ್ಯಕ್ಕೆ ವಿಮರ್ಶೆ ಅತ್ಯವಶ್ಯ...... ವಿಮರ್ಶೆ ಕೇವಲ ಪ್ರತಿಕ್ರಿಯೆಯಲ್ಲ ಅದೇ ಮುಖ್ಯ ಕ್ರಿಯೆ. ಸರಿ ತಪ್ಪುಗಳ ತೀರ್ಪಿಗಿಂತ ಹೆಚ್ಚಾಗಿ ಎಚ್ಚರ ಸಂವಾದ ವಿಮರ್ಶೆಯ ಗುರಿಯಾಗಿರಬೇಕು.  ವಿಮರ್ಶೆಯು ಕೃತಿಯ ಮೇಲೆ ಸವಾರಿ ಮಾಡಬಾರದು. ಒಳ್ಳೆಯ ವಿಮರ್ಶೆಯು ಕಲಾ ಕೃತಿಯೊಂದು ಹೀಗೆ ಇರಬೇಕೆಂದು ಷರತ್ತು ಹಾಕುವುದಿಲ್ಲ. ಕಲಾಕೃತಿಯ ಅನನ್ಯತೆಯನ್ನು ಗುರುತಿಸುವುದೆ ವಿಮರ್ಶೆಯ ಮುಖ್ಯ ಕಾರ್ಯ. ಓದುಗನು ಕೃತಿಕಾರನನ್ನು ತಲುಪಲು ಇರುವ ಅಡ್ಡಿ ಆತಂಕಗಳನ್ನು ತೊಡದು ಹಾಕಲು ಪ್ರಯತ್ನಿಸಬೇಕು. ಆ ಮೂಲಕ ಒಳ್ಳೆಯ ಕೃತಿಗಳ ವ್ಯಾಪಕ ಓದು, ಚರ್ಚೆಯನ್ನು ಪ್ರಚೋದಿಸುವಂತಿರಬೇಕು. (ಸಾಹಿತ್ಯ ಸಂಬಂಧ, ೨೦೦೮, ಪುಟ : ೨೯೦-೨೯೨) ಎಂದು ನಂಬಿದವರು. ಈ ನಂಬಿಕೆ ಇವರ ಬರೆಹಗಳುದ್ದಕ್ಕೂ ಕಾಣುತ್ತದೆ. ಇಂಥ ತಾತ್ವಿಕತೆಯ ಹಿನ್ನೆಲೆಯಲ್ಲಿ ವಿಮರ್ಶಿಸುವ ಇವರು ’ಕಲಾಕೃತಿಗಳು ನಿರ್ದಿಷ್ಟ ಕಾಲ-ದೇಶ- ಸಂಸ್ಕೃತಿಗಳ ಒತ್ತಡದಲ್ಲಿ ಸೃಷ್ಟಿಯಾಗುತ್ತವೆ’ ಎಂಬುದನ್ನು ಪ್ರಧಾನವಾಗಿ ಪರಿಗಣಿಸುತ್ತಾರೆ. ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಪಂಚದಲ್ಲಿ ಇವರ ವಿಮರ್ಶೆಯ ಸ್ಥಾನ ಯಾವುದು ? ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಇಲ್ಲಿ ಕೇಳಿಕೊಳ್ಳಬೇಕು. ಇದಕ್ಕೆ ಉತ್ತರವೆಂಬಂತೆ ಅಶೋಕ ಅವರ ’ಸಾಹಿತ್ಯ ಸಂಬಂಧ’ ಕೃತಿಗೆ ಪ್ರಸ್ತಾವನೆ ಬರೆದ ಕೆ.ವಿ. ಅಕ್ಷರ ಅವರ ಮಾತುಗಳನ್ನು ಇಲ್ಲಿ ನೋಡಬಹುದು ; ಕನ್ನಡ ವಿಮರ್ಶೆಯಲ್ಲಿ ಪ್ರಮುಖವಾದ ಎರಡು ವಿಧಗಳಿವೆ. ಒಂದು ಡಿ.ಆರ್. ನಾಗರಾಜ್ ಅವರ ಮಾರ್ಗ, ಅದು ಪಶ್ಚಿಮದ ಪರಿಣಿತರಿಗಿಂತ ಹೆಚ್ಚು ಪರಿಣಿತಿಗೆ ಯತ್ನಿಸುವ ಮತ್ತು ಆ ಮೂಲಕವೇ ನಾಜೂಕಾಗಿ ಅವರಿಗೇ ಚೆಳ್ಳೇಹಣ್ಣು ತಿನಿಸುವ ತಿರುಮಂತ್ರದ ಹಾದಿ. ಇನ್ನೊಂದು ’ಡಿ ಪ್ರೊಫೇಷನಲೈಜೇಷನ್’ ನ ಹಾದಿ. ಟಿ.ಪಿ ಅಶೋಕ ಅವರ ವಿಮರ್ಶೆ ಈ ಎರಡನೇ ಮಾದರಿಯದು. ಈ ಹಾದಿಯಲ್ಲಿ ಹೊರಡುವ ಲೇಖಕರು ತಾವು ಮತ್ತು ತಮ್ಮ ಓದುಗ, ಕೇಳುಗರಿಬ್ಬರೂ ಸಮಾನವಾಗಿ ಸರಳರೆಂದು ಭಾವಿಸಿಕೊಂಡು, ಮೇಲ್ನೋಟಕ್ಕೆ ಕ್ಲಿಷ್ಟವಾಗಿ ಕಾಣಬಹುದಾದ ಸಂಗತಿಗಳನ್ನು ಸರಳವಾಗಿ ವಿವರಿಸಲಿಕ್ಕೆ ಸಾಧ್ಯವೆಂದು ನಂಬುವಂತವರು. ಮಾತ್ರವಲ್ಲ ಸಾಹಿತ್ಯದ ಪ್ರಯೋಜನವು ಸಾಹಿತ್ಯದ ವಿದ್ಯಾರ್ಥಿಗಳ ಆಚೆಗೂ ಇದೆಯೆಂಬ ನಂಬಿಕೆ ಈ ವರ್ಗದ ವಿಮರ್ಶಕರಿಗಿದೆ.(ಸಾಹಿತ್ಯ ಸಂಬಂಧ, ೨೦೦೮, ಪುಟ : ೦೯-೧೦). ಈ ಕಾರಣದಿಂದಾಗಿಯೇ ಅಶೋಕ ಅವರ ವಿಮರ್ಶೆಯ ಬರೆಹವು ಅತ್ಯಂತ ಸರಳವಾಗಿರುತ್ತದೆ ಹಾಗೂ ಕೃತಿನಿಷ್ಟವಾಗಿರುತ್ತದೆ. ಇವರು ಯಾವುದೇ ಕೃತಿಯ ಬಗ್ಗೆ ಬರೆಯುವಾಗಲೂ ಅದರಲ್ಲಿನ ಕಥೆಯನ್ನು ಪುನಃ ಹೇಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ ಆ ಕೃತಿಯೊಳಗಿಂದ ದೀರ್ಘ ಉಲ್ಲೇಖಗಳನ್ನು ನೀಡುತ್ತಾರೆ. ಇದರಿಂದಾಗಿ ಕೆಲವರು ಅಶೋಕ ಅವರನ್ನು ’ಸಾರಾಂಶ ವಿಮರ್ಶಕ’ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಆದರೆ ಮೇಲೆ ವಿವರಿಸಿದ ಅವರ ವಿಮರ್ಶಾ ನಂಬಿಕೆ ಹಾಗೂ ತಿಳುವಳಿಕೆಯ ಹಿನ್ನೆಲೆಯಲ್ಲಿ ಗಮನಿಸಿದರೆ ಅದೊಂದು ದೋಷವಲ್ಲ; ಗುಣ ಎಂಬುದು ಅರಿವಿಗೆ ಬರುತ್ತದೆ. ಅದೂ ಅಲ್ಲದೇ ಸಾರಾಂಶ ಹೇಳುವುದರಲ್ಲೇ ಅಶೋಕ ಅವರು ವಿರಮಿಸುವುದಿಲ್ಲ. ಅದರ ಗುಣ ದೋಷಗಳನ್ನು ಹಾಗೂ ಸಾಧ್ಯತೆಗಳನ್ನು ಪರಿಶೀಲಿಸಿ ಮೌಲ್ಯಮಾಪನವನ್ನು ಮಾಡುತ್ತಾರೆ. ಇದರೊಳಗೆ ಅವರದೇ ಆದ ದೃಷ್ಟಿ ಧೋರಣೆಗಳೂ ಇರುತ್ತವೆ.
ಟಿ.ಪಿ ಅಶೋಕ ಅವರ ವಿಮರ್ಶೆಯಲ್ಲಿ ದಲಿತ ದೃಷ್ಟಿ 
ಟಿ.ಪಿ ಅಶೋಕ ಅವರ ವಿಮರ್ಶೆಯ ಒಟ್ಟು ಬರೆಹದ ಬೃಹತ್ ರಾಶಿಯಲ್ಲಿ ದಲಿತ ಕಥನಗಳು ಹಾಗೂ ಕಥನಕಾರರ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಅವುಗಳಲ್ಲಿ ’ಲೋಹಿಯಾ ಅವರ ಜಾತಿ ಪದ್ಧತಿ’, ’ಕುಂವೀ ಅವರ ಡೋಮ ಮತ್ತಿತರ ಕಥೆಗಳು’, ’ಅಂಬೇಡ್ಕರ್ ಅವರ ಬರೆಹ ಮತ್ತು ಭಾಷಣಗಳು’, ’ದೇವನೂರ ಮಹದೇವ ಅವರ ಕುಸುಮಬಾಲೆ’, ’ಸಿದ್ಧಲಿಂಗಯ್ಯ ಅವರ ಉರಿ ಕಂಡಾಯ’, ದೇವನೂರ ಮಹದೇವ : ವ್ಯಕ್ತಿ ಮತ್ತು ಕೃತಿ’, ’ಕುವೆಂಪು ಆಧುನಿಕತೆಯ ಪ್ರಶ್ನೆ’, ಕನ್ನಡ ಕಾದಂಬರಿ ಪರಂಪರೆ ಮತ್ತು ಭಾರತೀಪುರ’ ಇವೇ ಮೊದಲಾದ ಬರೆಹಗಳನ್ನು ಆಧರಿಸಿ ಟಿ.ಪಿ.ಅಶೋಕ ಅವರ ದಲಿತ ದೃಷ್ಟಿಕೋನವನ್ನು ಗುರುತಿಸುವ ಪ್ರಯತ್ನ ಮಾಡಬಹುದಾಗಿದೆ.
ಟಿ.ಪಿ.ಅಶೋಕ ಅವರ ವಿಮರ್ಶಾ ಬರೆಹಗಳಲ್ಲಿ ವ್ಯಕ್ತವಾಗಿರುವ ದಲಿತ ದೃಷ್ಟಿಕೋನವನ್ನು ಪ್ರಧಾನವಾದ ಎರಡು ನೆಲೆಗಳಲ್ಲಿ ಗುರುತಿಸಬಹುದಾಗಿದೆ. ಅವುಗಳಲ್ಲಿ ಒಂದು : ದಲಿತ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆ. ಎರಡು : ದಲಿತ ಕೃತಿಗಳ ಸಾಹಿತ್ಯಿಕ ನೆಲೆ
 ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆ 
ಭಾರತೀಯ ಸಂದರ್ಭದೊಳಗೆ ದಲಿತರು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಣೆಗೆ ಒಳಗಾದವರು ಎಂಬ ಸಾಮಾನ್ಯ ತಿಳುವಳಿಕೆಯನ್ನು ಅಶೋಕ ಅವರೂ ಕೂಡ ಮಾನ್ಯ ಮಾಡುತ್ತಾರೆ. ದಲಿತರ ಇಂಥ ದುಸ್ಥಿತಿಗೆ ಜಮೀನ್ದಾರರು ಹಾಗೂ ಧಾರ್ಮಿಕ ಶಕ್ತಿಗಳು ಒಂದು ಕಾರಣ ಎಂಬುದನ್ನು ಯಾವುದೇ ತಕರಾರು ಇಲ್ಲದೇ ಒಪ್ಪಿಕೊಂಡಿದ್ದಾರೆ. ಹಾಗೂ ಈ ಜನವರ್ಗಗಳು ಸಮಾಜದಲ್ಲಿ ಶೋಷಣೆಯ ಜಗತ್ತಿನಿಂದ ಎದ್ದು ಬರಬೇಕು ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲದ ದೃಷ್ಟಿ ಅಶೋಕ ಅವರ ಬರೆಹಗಳಲ್ಲಿ ಬಹುಪಾಲು ಸಂದರ್ಭಗಳಲ್ಲಿ ಗುಪ್ತಗಾಮಿನಿಯಾಗಿ ಕೆಲವೊಮ್ಮೆ ನೇರವಾಗಿ ವ್ಯಕ್ತವಾಗಿರುವುದನ್ನು ಕಾಣಬಹುದು. ಇದಕ್ಕೆ ಆಧಾರವಾಗಿ ಅವರ ವಿಮರ್ಶಾ ಬರೆಹವೊಂದರಲ್ಲಿ ಬಂದಿರುವ ಕೆಲವು ಮಾತುಗಳನ್ನು ನೋಡುವುದಾದರೆ :  ಕೆಳವರ್ಗದ ಬದುಕು ಬದಲಾಗಬೇಕು. ಶೋಷಣೆ ನಿಲ್ಲಬೇಕು. ಶೋಷಕ ವರ್ಗವನ್ನು ಎದುರಿಸಲು ಶೋಷಿತ ವರ್ಗ ಸಜ್ಜಾಗಬೇಕು ಎಂಬುದನ್ನೇ ಎಲ್ಲಾ ಪ್ರಜ್ಞಾವಂತ ಓದುಗರು ಬಯಸುವುದು. ಏಕೆಂದರೆ ದಲಿತ ಜನಾಂಗದ ವಿಮೋಚನೆಯಲ್ಲಿ ಮಾತ್ರ ಇಡೀ ಮಾನವ ಜನಾಂಗದ ವಿವೇಚನೆ ಸಾಧ್ಯವೆಂಬುದು ಅವರಿಗೆ ಗೊತ್ತು ( ಪುಸ್ತಕ ಪ್ರೀತಿ, ೧೯೯೩, ಪುಟ : ೧೦೩). ಇದು ಅಶೋಕ ಅವರಿಗೂ ಗೊತ್ತು
ದಲಿತರು ಶೋಷಣೆಯಿಂದ ವಿಮುಕ್ತಿ ಪಡೆಯವುದರ ಬಗ್ಗೆ ಚಿಂತಿಸುತ್ತಾ , ಈ ವಿಮುಕ್ತಿಗಾಗಿ ಶ್ರಮಿಸಿದ ಅಂಬೇಡ್ಕರ್, ಗಾಂಧಿ ಮತ್ತು ಲೋಹಿಯಾ ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಈ ಮೂವರನ್ನು ’ ಭಾರತೀಯ ಸಮಾಜವನ್ನು ಅದರ ಮೂಲ ಸ್ಥರಗಳಲ್ಲಿ  ವಿಶ್ಲೇಷಿಸಿದ ಅತೀ ಮುಖ್ಯ ಭಾರತೀಯ ಚಿಂತಕರೆಂದು’ ಒಪ್ಪಿಕೊಳ್ಳುತ್ತಾರೆ. ’ಭಾರತೀಯ ಸಮಾಜದ ಪರಂಪರಾಗತ ವ್ಯವಸ್ಥೆಯಲ್ಲಿ ದಲಿತರಿಗೆ ನ್ಯಾಯ ದೊರಕುವುದಿಲ್ಲ. ಬದಲಿಗೆ ಹೊಸ ನ್ಯಾಯಾಂಗ ವ್ಯವಸ್ಥೆ, ಹೊಸ ರಾಜಕೀಯ ವ್ಯವಸ್ಥೆ, ಹೊಸ ಧಾರ್ಮಿಕ ವ್ಯವಸ್ಥೆಯಿಂದ ಮಾತ್ರ ದಲಿತರ ವಿಮೋಚನೆ ಸಾಧ್ಯ’ ಎಂಬುದನ್ನು ಶ್ರೀರಂಗರ ಹರಿನ್ವಾರ ನಾಟಕದಲ್ಲಿ ಹರಿಜನರಿಗೆ ಸಿಕ್ಕ ಮುನಿಸಿಪಾಲಿಟಿ ಚುನಾವಣೆಯ ಮತದಾನದ ಹಕ್ಕು, ಭೈರಪ್ಪ ಹಾಗೂ ಅನಂತಮೂರ್ತಿ ಅವರುಗಳ ’ದಾಟು’ ಮತ್ತು ’ಭಾರತೀಪುರ’ ಕಾದಂಬರಿಗಳಲ್ಲಿ ವ್ಯಕ್ತವಾಗಿರುವ ಹೊಸಶಿಕ್ಷಣ ವ್ಯವಸ್ಥೆ ಹಾಗೂ ಹೊಸ ಉದ್ಪಾದನಾ ವ್ಯವಸ್ಥೆಗಳಿಂದ ಉಂಟಾದ ಬದಲಾವಣೆಗಳ ಹಿನ್ನೆಯಲ್ಲಿ ಸಮರ್ಥಿಸುತ್ತಾರೆ.  ಆದರೆ ಜಾತಿ ವ್ಯವಸ್ಥೆಯನ್ನು ಏಕ ಮುಖವಾಗಿ ನೋಡುವ ಕ್ರಮವನ್ನು ಪ್ರಶ್ನಿಸುತ್ತಾರೆ. ಲೋಹಿಯಾ ಅವರು ಹೇಳಿರುವ ’ ಸಮಾಜದ ಅಸಮಾನತೆಗೆ ಜಾತಿ ಪದ್ಧತಿಯೇ ಕಾರಣ. ಒಂದೇ ಜಾತಿಯೊಳಗೇ ಕಂಡು ಬರುವ ಅಕ್ಷರ, ವರ್ಗ ಹಾಗೂ ಲಿಂಗ ಭೇದಗಳನ್ನು ಮರೆಯುವಂತಿಲ್ಲ. ಶೂದ್ರರು ದ್ವಿಜರ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಸರಿಯಲ್ಲ’ ಎಂಬ ಮಾತನ್ನು ಎತ್ತಿ ಹಿಡಿಯುತ್ತಾರೆ. ಕ್ರೌರ‍್ಯಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂಬುದರ ಕಡೆಗೆ ಗಮನ ಸೆಳೆಯುತ್ತಾರೆ. ವಿಶೇಷವಾಗಿ ಲೋಹಿಯಾ ಅವರು ಹೇಳಿದಂತೆ ’ ಜಾತಿ ಪಾಲಿಸಿದವರು ದ್ವಿಜರೆನ್ನುವಾಗಲೂ ರಾಷ್ಟ್ರೀಯ ಜಾತಿ ಪದ್ಧತಿಯಲ್ಲಿ ದಲಿತರು ಶೂದ್ರರಾದರೆ; ಅಂತರಾಷ್ಟ್ರೀಯ ಜಾತಿ ಪದ್ಧತಿಯಲ್ಲಿ ದ್ವ್ವಿಜರೂ ಶೂದ್ರರೇ’ ಎಂಬುದನ್ನು ಒತ್ತಿ ಹೇಳುತ್ತಾರೆ. ಇದು ಏನೇ ಆದರೂ ಭಾರತೀಯ ಸಮಾಜದ ಜಾತಿ ಪದ್ಧತಿಯಲ್ಲಿ ದ್ವಿಜರ ಪಾತ್ರವಿರುವುದು ಸುಸ್ಪಷ್ಟ. ಆದರೂ ಈ ಮಾತನ್ನು ಇಡೀ ದ್ವಿಜ ಸಮಾಜಕ್ಕೆ ಅನ್ವಯಿಸಬಾರದು  ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯೊಳಗೆ ಅಶೋಕ ಅವರ ಒಂದು ಅಭಿಪ್ರಾಯ ಹೀಗಿದೆ :  ಜಾತಿ ಪದ್ಧತಿಯನ್ನು ಕೊನೆಗಾಣಿಸಲು ದ್ವಿಜರು ಹಾಗೂ ಶೂದ್ರರು ಒಟ್ಟಾಗಿ ನಿಂತರೆ ಸರ್ವಾಂಗ ಪ್ರಗತಿಯಾಗುತ್ತದೆ. ಈ ಸಂದರ್ಭಕ್ಕೆ ಶೂದ್ರರು ಮೇಲ್ಜಾತಿಯವರ ಬಗ್ಗೆ ದ್ವೇಷ ಹುಟ್ಟಿಸಬಾರದು. ದ್ವಿಜರು ತಮಗೆ ಆಗುವ ತಾತ್ಪೂರ್ತಿಕ ಅನ್ಯಾಯವನ್ನು ಸಹಿಸಿಕೊಳ್ಳಬೇಕು(ಪುಸ್ತಕ ಪ್ರೀತಿ, ೧೯೯೩, ಪುಟ : ೧೩೦)  ಈ ಮಾತುಗಳಿಂದ ಅಶೋಕ ಅವರ ಧೊರಣೆ ಏನೆಂಬುದು ಸ್ಪಷ್ಟವಾಗುತ್ತದೆ.
ದಲಿತರ ವಿಮೋಚನೆಗಾಗಿ ಅಂಬೇಡ್ಕರ್ ಅವರು ನೀಡುವ ಸಾಧ್ಯತೆಗಳ ಬಗ್ಗೆ ಪರಿಶಿಲಿಸುತ್ತಾ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಾರೆ. ಅಂಬೇಡ್ಕರ್ ಸೂಚಿಸಿದಂತೆ ಅಂತರ್ ಜಾತಿಯ ವಿವಾಹ, ಸಹಪಂಕ್ತಿ ಭೋಜನದ ಮಾರ್ಗಗಳನ್ನು ಒಪ್ಪುತ್ತಾ ಮತಾಂತರದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಮುಖ್ಯವಾಗಿ ಮತಾಂತರ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಸೂಕ್ತ ಮಾರ್ಗವಲ್ಲ. ಅದು ಕೇವಲ ಭಾವನಾತ್ಮಕವಾದುದು ಅದರಿಂದ ದಲಿತರಿಗೆ ಏನೇನು ಲಾಭವಿಲ್ಲ. ಸ್ವತಃ ಅಂಬೇಡ್ಕರ್ ಅವರೇ ಹೋಗಿರುವ ಬೌದ್ಧಧರ್ಮದಲ್ಲಿ ಸಮಸ್ಯೆಗಳಿಲ್ಲವೆ? ಬೌದ್ಧ ಧರ್ಮ ಪ್ರಚಲಿತವಿರುವ ದೇಶಗಳಲ್ಲಿ ದಲಿತರಿಗೆ ಸಮಸ್ಯೆಗಳಿಲ್ಲವೆ? ಅಶೋಕರ ಈ ಪ್ರಶ್ನೆಗಳು ಮೇಲ್ನೋಟಕ್ಕೆ ಸರಿ ಎನಿಸಿದರೂ ನೊಂದವರು ತಮ್ಮ ಬಿಡುಗಡೆಗೆ ತಹತಹಿಸಿದ ತಲ್ಲಣಗಳನ್ನು ಗೌಣವಾಗಿಸುತ್ತವೆ. ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೋಗುವ ನಿರ್ಧಾರದಲ್ಲಿ ಹಿಂದು ಧರ್ಮದ ಹಿಂದೆ ಇರುವ ಕೆಟ್ಟ ಜಾತಿಯತೆಯ ಬಗೆಗೆ ಇರುವ ಬೇಸರವನ್ನು ಪಕ್ಕಕ್ಕೆ ಸರಿಸುತ್ತವೆ. ಅದೂ ಅಲ್ಲದೇ ಅಶೋಕ ಅವರೇ ಶಿವರಾಮ ಕಾರಂತರ ’ಚೋಮನದುಡಿ’ ಕಾದಂಬರಿಯಲ್ಲಿ ಬರುವ ಚೋಮನ ಮಗ ’ಗುರುವ’ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡದ್ದರಿಂದ ಸಿಕ್ಕ ಆರ್ಥಿಕ ವಿಮೋಚನೆಯನ್ನು ಸಮರ್ಥನೆಯ ದಾಟಿಯಲ್ಲಿ ವಿಶ್ಲೇಷಿಸಿರುವುದು ವಿಮರ್ಶಕರ ದ್ವಿಮುಖ ನೀತಿಯನ್ನು ದರ್ಶಿಸುತ್ತದೆ.
ದಲಿತರ ವಿಮೋಚನೆಗೆ ಸಮಾಜದ ಆಮೂಲಾಗ್ರ ಬದಲಾವಣೆ ಅಗತ್ಯವೆಂಬುದನ್ನು ಒತ್ತಿ ಹೇಳುವ ವಿಮರ್ಶಕರು ಆಧುನಿಕತೆ ಇದಕ್ಕೆ ಅತ್ಯುತ್ತಮ ಮಾರ್ಗ ಎಂಬುದನ್ನು ಬಲವಾಗಿ ನಂಬುತ್ತಾರೆ. ಏಕೆಂದರೆ ಅವರು ಹೇಳುತ್ತಿರುವ ಹೊಸ ವ್ಯವಸ್ಥೆಗಳು ನಮ್ಮ ಸಮಾಜಕ್ಕೆ ಪ್ರವೇಶಿಸಿದ್ದೇ ೧೮ ನೇ ಶತಮಾನದಿಂದ ಆದ ಜಾಗತಿಕ ಬದಲಾವಣೆಗಳಿಂದ. ಅಂದರೆ ನಮ್ಮಲ್ಲಿ ವಸಾಹತುಶಾಹಿಯ ಪ್ರವೇಶದಿಂದ. ಆದರೆ ಈ ರೀತಿಯ ದಲಿತರ ಬಿಡುಗಡೆಯ ಸಾಧ್ಯತೆಗಳು ವಸಾಹತುಶಾಹಿಯ ಫಲಗಳಾದರೂ ಈ ಕಾರಣಕ್ಕೆ ವಸಾಹತು ಶಾಹಿಯನ್ನು ಸಂಪೂರ್ಣವಾಗಿ ಸಮರ್ಥಿಸುವ ಅಗತ್ಯವಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ.
ಒಟ್ಟಾರೆ ಅಶೋಕ ಅವರಿಗೆ ದಲಿತರ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಅರಿವಿದೆ. ಹಾಗೂ ಅದರ ಬಗ್ಗೆ ವಿರೋಧವೂ ಇದೆ. ಅದನ್ನು ಹೋಗಲಾಡಿಸುವ ಅಗತ್ಯ ಹಾಗೂ ಮಾರ್ಗಗಳ ಬಗ್ಗೆ ಆಲೋಚನೆಗಳೂ ಇವೆ. ಈ ಸಂದರ್ಭಕ್ಕೆ ಅವರು ಹೇಳುವಂತೆ : ’ ದಲಿತರ ದುರ್ಗತಿಗೆ ಕೇವಲ ಧರ್ಮ ಮತ್ತು ಜಾತಿಯನ್ನು ಹೊಣೆಯಾಗಿಸಬೇಕಿಲ್ಲ. ಅಸಮಾನತೆಯ ಬೀಜಗಳು ಜಾತಿಯ ಒಳಗೂ ಹೊರಗೂ ಎರಡೂ ಕಡೆ ಇವೆ. ಹಾಗಾಗಿ ಇಂಥ ಕ್ರೂರ ಜಾತಿ ಪದ್ಧತಿಯ ವಿನಾಶಕ್ಕೆ ಎರಡೂ ದಿಕ್ಕಿನಲ್ಲಿ ಪ್ರಯತ್ನಗಳಾಗಬೇಕು. ಆಧುನಿಕತೆ ಅದಕ್ಕೊಂದು ವೇದಿಕೆ ಒದಗಿಸಲು ಸಹಕರಿಸಲಿದೆ. ದಲಿತರು ಬರೀ ದ್ವೇಷ ಅಸೂಹೆ ಹಾಗೂ ಆಕ್ರೋಶಗಳಿಂದ ಬಿಡುಗಡೆ ಹೊಂದುವುದು ಅಸಾಧ್ಯ. ವಿನಯಶೀಲತೆ, ಅಹಿಂಸೆ ಸ್ನೇಹಮಯತೆ ಇರಬೇಕು ಎನ್ನುತ್ತಾ ದೇವನೂರ ಮಹದೇವ ಅವರಲ್ಲಿ ಇಂಥ ಗುಣಗಳನ್ನು ಗುರುತಿಸುತ್ತಾರೆ. 
ಸಾಹಿತ್ಯಕ ನೆಲೆ 
ಕುವೆಂಪು ಹಾಗೂ ಕಾರಂತರ ಕಾದಂಬರಿಗಳನ್ನೂ ಒಳಗೊಂಡಂತೆ ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರತಿನಿಧೀಕರಣ ತೃಪ್ತಿಕರವಾಗಿರಲಿಲ್ಲ. ದಲಿತ ಲೋಕದಿಂದ ತರುಣ ಲೇಖಕರು ಸಾಹಿತ್ಯ ಬರೆಯಲು ಆರಂಭಿಸಿದ ನಂತರ ಆ ಕೊರತೆ ಈಡೇರಿತು ಎಂಬ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಕಡೆಗೆ ಗಮನ ಸೆಳೆಯುವ ಟಿ.ಪಿ.ಅಶೊಕ ಅವರು ದೇವನೂರ ಮಹಾದೇವ ಅವರ ’ಕುಸುಮಬಾಲೆ’ ಕೃತಿಯನ್ನು ವಿಮರ್ಶೆಮಾಡುತ್ತಾ ಹೀಗೆ ಹೇಳುತ್ತಾರೆ : ಕನ್ನಡ ಸಾಹಿತ್ಯದ ಓದುಗರಿಗೆ ಅಷ್ಟಾಗಿ ಪರಿಚಿತವಲ್ಲದ ಒಂದು ಮನುಷ್ಯ ಲೋಕವನ್ನು ಒಳಗಿನವರಾಗಿ ಚಿತ್ರಿಸುವುದರ ಮೂಲಕ ದಲಿತ ಸಾಹಿತಿಗಳು ಓದುಗರ ಅನುಭವ ಪ್ರಪಂಚವನ್ನು ಹಿಗ್ಗಿಸಿದ್ದಾರೆ. ಸಾವಿರಾರು ವರ್ಷಗಳಿಂದ ಮೂಕವಾಗಿದ್ದ ಜನಾಂಗವೊಂದು ನಿಧಾನವಾಗಿ ಮೈಕೊಡವಿಕೊಂಡು  ಎದ್ದು ಮಾತನಾಡಲು ಆರಂಭಿಸಿದ್ದರಿಂದಾಗಿ ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಹೊಸ ಕಂಪನಗಳು ಎದ್ದಿದ್ದು ಐತಿಹಾಸಿಕ ಸತ್ಯವಾಗಿದೆ...... ಇದುವರೆಗೆ ಬಹಳ ಮಟ್ಟಿಗೆ ಸಂಕೇತ, ಪ್ರತೀಕಗಳಾಗಿ ಕಾಣಿಸಿದ್ದ ಕೆಲವು ಮನುಷ್ಯ ಮಾದರಿಗಳು, ವರ್ಗಗಳು ಇತರೆ ಮನುಷ್ಯರಂತೆ ಜೀವಂತ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದು ಈ ಲೇಖಕರ ಒಂದು ಸಾದನೆಯೆಂದೇ ಹೇಳಬೇಕು....... ಆಧುನಿಕ ಕನ್ನಡ ಸಾಹಿತ್ಯದ ಒಂದು ಪ್ರಮುಖ ಇತ್ಯಾತ್ಮಕ ಅನಿವಾರ‍್ಯ ಆಪೇಕ್ಷಣೀಯ ಚಳುವಳಿ ಎಂದು ಪರಿಗಣಿತವಾಗಿ ಅದರ ದಟ್ಟ ಪ್ರಭಾವ ಅನೇಕ ಹಿರಿಯ ಲೇಖಕರ (ಚದುರಂಗ ಮೊದಲಾದವರು) ಹೊಸ ಬರೆಹಗಳಲ್ಲಿ ನಿಚ್ಚಳವಾಗಿ ಕಂಡು ಬಂದಿತು. ಒಟ್ಟಾರೆ ಇವರ ಬರವಣಿಗೆಗಳು ಕನ್ನಡ ಸಾಹಿತಯ ದಿಕ್ಕನ್ನು ಬದಲಿಸುವಷ್ಟು ಸಮರ್ಥವಾಗಲಿಲ್ಲ ಎಂಬುದು ನಿಜವಾದರೂ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವರಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ನೀಡುವುದರ ಮೂಲಕ ಓದುಗರ ತಿಳುವಳಿಕೆಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾದವು( ಪುಸ್ತಕ ಪ್ರೀತಿ, ೧೯೯೩, ಪುಟ : ೨೬೩)
ವಿಮರ್ಶಕರ ಮೇಲಿನ ಮಾತುಗಳು ದಲಿತ ಸಾಹಿತ್ಯ ಹಾಗೂ ಸಾಹಿತಿಗಳನ್ನು ಸರಿಯಾಗಿಯೇ ಅರ್ಥೈಯಿಸುತ್ತವೆ ಎನ್ನಬಹುದು. ದಲಿತ ಬರೆಹಗಳು ಶುದ್ಧ ಸಾಹಿತ್ಯದ ತತ್ವಗಳಾಚೆಗೆ ನಡೆದುದರ ಬಗ್ಗೆಯೂ ಇಲ್ಲಿ ಸುಳಿವುಗಳಿವೆ. ಸಿದ್ಧಲಿಂಗಯ್ಯ ಅವರ ಕಾವ್ಯದ ಆಕ್ರೋಶದ ಭಾಷೆ, ದೇವನೂರ ಮಹದೇವ ಅವರ ಕಾದಂಬರಿಗಳ ಗ್ರಾಮ್ಯ ಭಾಷೆ ಹಾಗೂ ಬಹುತೇಕ ದಲಿತ ಬರೆಗಾರರ ಮೀಮಾಂಸೆ ಮತ್ತು ಛಂದಸ್ಸಿನ ಪರಧಿಯನ್ನು ಮೀರಿದ ರಚನೆಗಳು ಕನ್ನಡ ಸಾಹಿತ್ಯದ ಹೊಸತನಗಳಾದುದರ ಬಗ್ಗೆ ಇಲ್ಲಿ ಗಮನಸೆಳೆಯಲಾಗಿದೆ. ದಲಿತ ಸಾಹಿತ್ಯದ ಹೆಗ್ಗಳಿಕೆಗಳನ್ನು ಅವರು ಹೀಗೆ ಗುರುತಿಸುತ್ತಾರೆ.
೧. ದಲಿತ ಕೃತಿಗಳಲ್ಲಿ ಸಿಗುವ ಸಾಂಸ್ಕೃತಿಕ ವಿವರಗಳಲ್ಲಿ ಹೊಸನವಿದೆ
೨. ದಲಿತ ಲೇಖಕರ ರೋಷ, ಆರ್ತತೆ ಹಾಗೂ ವಿಶ್ಲೇಷಣೆ ನಮ್ಮಲ್ಲಿ (ಮೇಲ್ವರ್ಗಗಳಲ್ಲಿ) ಅಪರಾಧಿ ಮನೋಭಾವವನ್ನು ಉಂಟುಮಾಡುತ್ತವೆ
೩. ದಲಿತ ಲೇಖಕರ ಬರೆಹಗಳಲ್ಲಿ ಹೊಸತನದ ತುಡಿತವಿದೆ, ಹೊಸ ಕಾಣ್ಕೆಯಿದೆ
ದಲಿತ ಸಾಹಿತ್ಯದ ಇಂಥ ಉತ್ತಮ ಗುಣಗಳ ಬಗ್ಗೆ ಹೇಳುವಾಗ ಅವುಗಳಿಗೆ ಇರುವ ಮಿತಿಗಳ ಬಗ್ಗೆ ಮಾತನಾಡುವುದನ್ನು ಮರೆಯುವುದಿಲ್ಲ. ದಲಿತ ಕೃತಿಗಳು ಹಾಗೂ ಕೃತಿಕಾರರಲ್ಲಿ ಕಂಡು ಬರುವ ಮಿತಿಗಳನ್ನು ಹೀಗೆ ಗುರುತಿಸುತ್ತಾರೆ : 
೧. ಒಂದು ದಲಿತ ಕೃತಿಗೂ ಮತ್ತೊಂದು ದಲಿತ ಕೃತಿಗೂ ಮೂಲಭೂತವಾದ ವ್ಯತ್ಯಾಸ ಕಂಡುಬರುವುದಿಲ್ಲ
೨. ದಲಿತ ಲೇಖಕರು ತಮ್ಮ ಮೊದಲ ಕೃತಿಗಳಲ್ಲಿ ತೋರಿದ ಉತ್ಸಾಹ ಅನಂತರದ ಪ್ರಕಟಣೆಗಳಲ್ಲಿ ಕಾಣುವುದಿಲ್ಲ
೩. ದಲಿತರ ಅನೇಕ ಕೃತಿಗಳಲ್ಲಿ ಸ್ಥಿತಿಯ ವರ್ಣನೆ ಮಾತ್ರವಿದ್ದು, ಸಾಧ್ಯತೆಯ ಕಾಣ್ಕೆ ಇಲ್ಲಾವಾಗಿದೆ. ಇದರಿಂದಾಗಿಯೇ ಬಹುತೇಕ ಕೃತಿಗಳು ವಿವರಗಳ ಸಂವೃದ್ಧತೆಯಿಂದ ಮಾನವ ಶಾಸ್ತ್ರೀಯ ಆಸಕ್ತಿಯನ್ನು ಮಾತ್ರ ಮೂಡಿಸುತ್ತವೆ.
ಅಶೊಕ ಅವರು ಗುರುತಿಸಿರುವ ದಲಿತ ಸಾಹಿತ್ಯದ ಈ ಮಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲಗಳೆಯಲಾಗದು. ಆದರೆ ಮುಖ್ಯವಾಗಿ ಗಮನಿಸಬೇಕಾದುದೆಂದರೆ ದಲಿತಸಾಹಿತ್ಯ ಶುದ್ಧಸಾಹಿತ್ಯವಲ್ಲ. ಬದಲಿಗೆ ಚಳುವಳಿ ಆಧಾರಿತವಾದುದು. ಸಮಸ್ಯೆಗಳು ಬಿಗಡಾಯಿಸಿ ಚಳವಳಿ ತೀರ್ವಗೊಂಡಾಗ ಉತ್ತಮ ಸಾಹಿತ್ಯಕೃತಿಗಳು ರಚನೆಯಾಗಿವೆ. ಇದರ ಅರಿವೂ ವಿಮರ್ಶಕರಿಗಿದೆ. ಇಂಥ ಚಳುವಳೀ ಆಧರಿತ ಕೃತಿಗಳನ್ನು ಆರಂಭಕ್ಕೆ ಉದಾರವಾಗಿ ನಂತರ ನಿರ್ಭಾವುಕವಾಗಿ ನೋಡಬೇಕು ಎಂಬ ಎಚ್ಚರದೊಂದಿಗೆ ದಲಿತ ಕೃತಿಗಳನ್ನು ವಿವೇಚಿಸಿರುವ ಇವರು ಸಾಂಸ್ಕೃತಿಕ ಎಚ್ಚರದ ವಿಮರ್ಶೆಯನ್ನು ಮಾಡಿದ್ದಾರೆ. ಟಿ.ಪಿ. ಅಶೋಕ ಅವರ ವಿಮರ್ಶೆಯ ದಲಿತ ದೃಷ್ಟಿಯ ಬಗೆಗಿನ ಸ್ಥೂಲವಾದ ನೋಟ ಇದಾಗಿದ್ದು ಇನ್ನೂ ಅವರ ಸಮಗ್ರ ಬರೆಹಗಳನ್ನು ಗಮನಿಸಿ ದೀರ್ಘವಾದ ಹಾಗೂ ಸೂಕ್ಷ್ಮವಾದ ಅಧ್ಯಯನ ನಡೆಸುವ ಅಗತ್ಯತೆ ಇದೆ.

ಆಕರ ಗ್ರಂಥಗಳು
೧. ಸಾಹಿತ್ಯ ಸಂಬಂಧ, ಟಿ.ಪಿ. ಅಶೋಕ, ೨೦೦೮, ಅಕ್ಷರ ಪ್ರಕಾಶನ,  ಹೆಗ್ಗೋಡು
೨. ಸಾಹಿತ್ಯ ಸಮಯ, ಟಿ.ಪಿ. ಅಶೋಕ, ೨೦೧೧, ಅಕ್ಷರ ಪ್ರಕಾಶನ,  ಹೆಗ್ಗೋಡು
೩. ಪುಸ್ತಕ ಪ್ರೀತಿ, ಟಿ.ಪಿ. ಅಶೋಕ, ೧೯೯೩, ಅಕ್ಷರ ಪ್ರಕಾಶನ,  ಹೆಗ್ಗೋಡು


*  ಡಾ. ಎಸ್. ಎಂ. ಮುತ್ತಯ್ಯ 

ಶರಣರ ದಾಸೋಹ ತತ್ವ

ಕರ್ನಾಟಕದಲ್ಲಿ ನಡೆದ ಸಾಮಾಜಿಕ ಚಳುವಳಿಗಳಲ್ಲಿ ಹನ್ನೆರಡನೇ ಶತಮಾನದ ವಚನ ಚಳವಳಿ ಅಪರೂಪವಾದುದು ಅಷ್ಟೇ ಪ್ರಮುಖವಾದುದು. ಐತಿಹಾಸಿಕ ಮಹತ್ವವುಳ್ಳ ಈ ಚಳವಳಿ ಕರ್ನಾಟಕದಲ್ಲಿ ನಡೆದ ಮೊದಲ ಸಂಘಟಿತ ಸಾಮಾಜಿಕ ಚಳುವಳಿಯಾಗಿದೆ. ಇದರಲ್ಲಿ ಸಮಾಜದ ಯಾವುದೋ ಒಂದು ಮುಖದ ದೋಷಗಳನ್ನು ಪ್ರಸ್ತಾಪಿಸಿ ಅವುಗಳ ನಿವಾರಣೆಗೆ ಪ್ರಯತ್ನಿಸದೇ ಸಮಾಜ ಎದುರಿಸುತ್ತಿದ್ದ ಎಲ್ಲಾ ರೀತಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಿಸಿ ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸಿತು. ಅದಕ್ಕಾಗಿ ಅನೇಕ ಮಹತ್ವದ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಂಡಿತು. ಅಂಥ ಪರಿಕಲ್ಪನೆಗಳಲ್ಲಿ ಮುಖ್ಯವಾದವುಗಳೆಂದರೆ : ಷಟ್‌ಸ್ತಲ,  ಗುರು-ಲಿಂಗ-ಜಂಗಮ, ಮತ್ತು ಕಾಯಕ-ಪ್ರಸಾದ-ದಾಸೋಹ.
ಇವುಗಳಲ್ಲಿ ಬಹಳ ಮುಖ್ಯವಾದ ದಾಸೋಹದ ಬಗ್ಗೆ ವಚನಕಾರರ ರಚನೆಗಳನ್ನು ಆಧರಿಸಿ ಕೆಲವು ವಿಚಾರಗಳನ್ನು ತಿಳಿಯಬಹುದು. ವಚನಕಾರರ ವಿಚಾರಗಳು ಸಮಕಾಲೀನ ಸಮಾಜದ ಸಂದರ್ಭದಲ್ಲಿ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತಿಳಿಯುವುದು ಇಂದಿನ ಅಗತ್ಯವಾಗಿದ್ದು ಅಂಥ ಪ್ರಯತ್ನ ಇಲ್ಲಿದೆ. ದಾಸೋಹದ ತತ್ವವನ್ನು ಕುರಿತು ಬಹುತೇಕ ಎಲ್ಲಾ ವಚನಕಾರರು ಮಾತನಾಡಿರುವುದು ಅವರ ವಚನಗಳಿಂದ ತಿಳಿದು ಬರುತ್ತದೆ. ವಿಶೇಷವೆಂದರೆ  ಕೆಲವರು ದಾಸೋಹವೆಂಬ ಶಬ್ದ ಬಳಕೆಮಾಡದ ಆ ಬಗ್ಗೆ ಮಾತನಾಡಿದ್ದಾರೆ.
ವಚನ ಚಳುವಳಿಯ ಸಂದರ್ಭದಲ್ಲಿ ಗುರು-ಲಿಂಗ-ಜಂಗಮರ ಸೇವೆಯೇ ದಾಸೋಹ ಎಂಬುದಾಗಿ ಹೇಳಲಾಗಿದೆ. ಹಾಗಾದರೆ  ಗುರು-ಲಿಂಗ-ಜಂಗಮದ ಅರ್ಥವೇನು? ಎಂಬುದನ್ನು ತಿಳಿಯಬೇಕಾಗುತ್ತದೆ.  ಗುರು - ದೀಕ್ಷೆ ಕೊಟ್ಟು ಜ್ಞಾನೋಪದೇಶ ಮಾಡುವವ; ಲಿಂಗ - ಪರಮಾತ್ಮ ; ಜಂಗಮ - ಅನುಭವ ಜ್ಞಾನ ಪಡೆದವನು. ಈ ಗುರು-ಲಿಂಗ-ಜಂಗಮದ ಸೇವೆಯನ್ನು ತ್ರಿವಿಧ ದಾಸೋಹ ಎನ್ನಲಾಗಿದೆ. ತ್ರಿವಿಧ ದಾಸೋಹವಲ್ಲದೇ ನಾಲ್ಕನೇ ದಾಸೋಹವೊಂದಿದೆ ಅದೇ ಶರಣ ದಾಸೋಹ. ಬಸವಣ್ಣನವರ ಅಯ್ಯ, ನಿಮ್ಮ ಶರಣರ ದಾಸೋಹಕ್ಕೆ ಎನ್ನ ತನು-ಮನ-ಧನವಲಸದಂತೆ ಮಾಡಯ್ಯ ಎಂಬ ವಚನವೂ ಅದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಇನ್ನೂ ಕೆಲವು ವಚನಕಾರರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ದಾಸೋಹದ ಅರ್ಥವನ್ನು ಹೀಗೆ ವಿವರಿಸಬಹುದು :  ಪ್ರತಿಯೊಬ್ಬರು ಕಾಯಕ ಮಾಡಬೇಕು. ಕಾಯಕವೆಂದರೆ ಸತ್ಯದ ನೆಲೆಗಟ್ಟಿನ ಮೇಲೆ ಶುದ್ಧವಾಗಿ , ಲೋಕ ಹಿತಕ್ಕಾಗಿ ಉತ್ಪಾದನೆಯಲ್ಲಿ ತೊಡಗುವ ಕ್ರಿಯೆ. ಮಾನವ ಕುಲಕ್ಕೆ ಹಾನಿಯುಂಟುಮಾಡುವ ಯಾವುದೇ ಕೆಲಸ ಕಾಯಕವಲ್ಲ. ನಿಜವಾದ ಕಾಯಕದಿಂದ ಬಂದಿದ್ದನ್ನು ದೇವರ ಪ್ರಸಾದವೆಂದು ತಿಳಿಯಬೇಕು. ಗಳಿಸಿದ್ದನ್ನೆಲ್ಲ ನಮಗಾಗಿ ಬಳಸದೇ ಅಥವಾ ಸಂಗ್ರಹಿಸದೇ ಸಾಮಾಜಿಕ ಜವಾಬ್ಧಾರಿಯನ್ನು ಪ್ರದರ್ಶಿಸಬೇಕು. ಎಷ್ಟು ಬೇಕೋ ಅಷ್ಟು ಐಹಿಕ ವಸ್ತುಗಳನ್ನು ಪ್ರಸಾದದ ಹಾಗೆ ಸ್ವೀಕರಿಸಬೇಕು. ಅದಕ್ಕಿಂತ ಹೆಚ್ಚಿನದು ವಿಷ ವಸ್ತುವಾಗಿ ಪರಿಣಮಿಸುತ್ತದೆ. ಅವುಗಳ ಬಳಕೆಯಿಂದ ಭವರೋಗ ಬರುವುದು. ಆದ್ದರಿಂದ ಅವಶ್ಯಕತೆಗಿಂತ ಹೆಚ್ಚಿನ ವಸ್ತುಗಳನ್ನು ವಿಷ ವಸ್ತುವಾಗಿಸದೇ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದೇ ಭವ ರೋಗದಿಂದ ಮುಕ್ತವಾಗುವ ಕ್ರಮ
ದಾಸೋಹದ ಹಿನ್ನೆಲೆಯಿಂದ ಬಂದಿರುವ ಇನ್ನೊಂದು ಪದ ದಾಸೋಹಿ. ದಾಸೋಹಿ ಎಂದರೆ : ೧ ಜಗತ್ತಿನ ವಸ್ತುಗಳೆಲ್ಲ ಸಕಲ ಜೀವಾತ್ಮರಿಗೆ ಸೇರಿದವು ಎಂಬ ನಂಬಿಕೆಯುಳ್ಳವನು. ೨. ಕಾಯಕದಿಂದ ಪಡೆದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುವವನು. ೩. ಅದನ್ನು ದೇವರ ಸ್ವತ್ತೆಂದು ಹಿತಮಿತವಾಗಿ ಬಳಸುವವನು. ೪. ಸಮಾಜವನ್ನು ದೇವರು ಕಾಣುವ ರೂಪವೆಂದು ನಂಬಿದವನು. ೫. ಕಾಯಕದಿಂದ ತನಗಾಗಿ ಕೂಡಿಸಿಡದೇ ದಾಸೋಹದ ಮೂಲಕ ದೇವರಿಗೆ ಅರ್ಪಿಸುವವನು. ೬. ಸಕಲ ಜೀವಾತ್ಮವೂ ಆನಂದಮಯವಾಗಿರಲಿ ಎಂದು ನಂಬಿದವನು
ಶರಣರ ಕಲ್ಪನೆಯ ದಾಸೋಹದ ಸಮಾಜ ತನ್ನದೇ ಆದ ಗುಣ ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಅವುಗಳನ್ನು ಈ ಮುಂದಿನಂತೆ ಹೆಸರಿಸಬಹುದು : ೧. ದುಡಿಯು ಸಾಮರ್ಥ್ಯವೇ ಸಂಪತ್ತು ೨. ಕೂಡಿಡುವುದು ಸಂಪತ್ತಲ್ಲ ೩. ಕೂಡಿಡುವುದು ಮಿಗುತಾಯ ಮೌಲ್ಯ ೪. ಮಿಗುತಾಯ ಮೌಲ್ಯ ಮಾನವೀಯ ಮೌಲ್ಯಗಳಿಗೆ ವಿರುದ್ಧ ೫. ಮಿಗುತಾಯಕ್ಕೆ ವಿರುದ್ಧವಾದುದು ದಾಸೋಹ ೬. ಗಳಿಸಿದ್ದನ್ನು ಶಿವನ ಪ್ರಸಾದವೆಂದು ಭಾವಿಸಿದ್ದರು ೭. ಗಳಿಸಿದ್ದರಲ್ಲಿ  ಹೆಚ್ಚನ್ನು ಶಿವನಿಧಿಗೆ ೮. ಶಿವನಿಧಿಯಿಂದ ತೊಂದರೆಯಲ್ಲಿದವರಿಗೆ ಧನಸಹಾಯ ೯. ವೈಯುಕ್ತಿಕ ದುಡಿಮೆ ಸಾಮೂಹಿಕ ಬದುಕು ಈ ಕಾರಣಗಳಿಂದಲೇ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ
ದಾಸೋಹಿಯಾಗುವುದು ತುಂಬಾ ಕಷ್ಟ. ದಾಸೋಹಿಗಳನ್ನು ಕಾಣುವುದು ಅತೀ ವಿರಳ. ಈ ಭಾವವನ್ನು ಬಸವಣ್ಣನವರು  ’ತನು ಮನ ಬಳಲಿಸಿ ತಂದು ದಾಸೋಹವ ಮಾಡುವ ಪರಮ ಸದ್ಭಕ್ತನ ಪಾದವ ತೊರಯ್ಯ’ ’ಸೋಹಂ ಎಂದೆನಿಸದೇ, ದಾಸೋಹಂ ಎಂದೆನಿಸಯ್ಯ’ ಎಂದರೆ, ’ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ ಅತಿಗಳೆದನು ಗುಹೇಶ್ವರ.’ ಎಂಬುದಾಗಿ ಅಲ್ಲಮ ಹೇಳುತ್ತಾನೆ. ಇದರಲ್ಲಿ ಸೋಹಂ - ಅಹಂ ಬ್ರಹ್ಮಾಸ್ಮಿ  ಎಂದರೆ ನಾನೇ ದೇವರಾಗುವುದು. ದಾಸೋಹಂ ಎಂದರೆ ನಾವು ಎಂದರ್ಥ. 
ವಚನಕಾರರ ತತ್ವಗಳಲ್ಲಿ ಮಾತ್ರವಲ್ಲದೆ ಪರಿಸರದಲ್ಲಿಯೂ ಕಾಯಕ -ಪ್ರಸಾದ-ದಾಸೋಹ ತತ್ವವಿದೆ ಎಂಬುದು ಗಮನಿಸಬೇಕಾದ ಅಂಶ. ಇಡೀ ಬ್ರಹ್ಮಾಂಡವು ಕಾಯಕ ತತ್ತ್ವದ ಮೇಲೆ ನಿಂತಿದೆ. ಪೃಥ್ವಿಯು ಸೂರ್ಯನ ಸುತ್ತ ತಿರುಗುವ ಕಾಯಕ ಮಾಡುವುದು. ಸೂರ್ಯ ಬೆಳಕನ್ನು ಕೊಡುವ ಕಾಯಕ ಮಾಡುವನು. ಚಂದಿರ ಬೆಳದಿಂಗಳು ಕೊಡುವನು. ನದಿಗಳು ಸಮುದ್ರ ಸೇರುವ ಕಾಯಕದಲ್ಲಿ ತೊಡಗಿವೆ. ಸೂರ್ಯನ ತಾಪಕ್ಕೆ ಸಮುದ್ರದ ನೀರು ಆವಿಯಾಗುವುದು. ಮೋಡಾಗುವುದು, ಮಳೆಯಾಗುವುದು, ಸಕಲ ಜೀವರಾಶಿಗೆ ನೀರಾಗುವುದು. ನದಿಗಳು ಮತ್ತೆ ತುಂಬಿ ಹರಿಯುವವು. ಸಾಗರದ ಕಡೆಗೆ ಧಾವಿಸುವವು. ರೈತರು ಸೂರ್ಯಾಸ್ತದ ನಂತರ ಹೊಲದ ಕಾಯಕ ಮುಗಿಸಿ ಮನೆಗೆ ಬಂದರೂ ಎರೆಹುಳುಗಳು ಅವರ ಭೂಮಿಯನ್ನು ಹದಗೊಳಿಸುವ ಕಾಯಕವನ್ನು ಮಾಡುತ್ತಲೇ ಇರುವವು. ಮರಗಳು ಬಯಲಲ್ಲಿ ನಿಂತಲ್ಲೇ ಕಾಯಕ ನಿರತವಾಗಿರುತ್ತವೆ. ಅವು ಬೇರುಗಳ ಮೂಲಕ ಭೂಮಿ ಮತ್ತು ನೀರಿನ ಜೊತ ಸಂಬಂಧ ಹೊಂದಿರುತ್ತವೆ. ಎಲೆಗಳ ಮೂಲಕ ಸೂರ್ಯ ಮತ್ತು ಗಾಳಿಯ ಜೊತೆ ಸಂಬಂಧ ಹೊಂದಿರುತ್ತವೆ. ಅವು ಭೂಮಿಯ ಸತ್ವವನ್ನು ಪ್ರಸಾದದ ಹಾಗೆ ಎಷ್ಟು ಬೇಕೊ ಅಷ್ಟು ಮಾತ್ರ ಸ್ವೀಕರಿಸುತ್ತವೆ. ನಂತರ ದಾಸೋಹ ರೂಪದಲ್ಲಿ ನಮಗೆ ಹೂ ಹಣ್ಣು ಮುಂತಾದವುಗಳಲ್ಲದೆ ಪ್ರಾಣವಾಯುವನ್ನು ಕೊಡುವ ಕೆಲಸವನ್ನೂ ಮಾಡುತ್ತವೆ. ಹೀಗೆ ಇಡೀ ಬ್ರಹ್ಮಾಂಡವೇ ಕಾಯಕನಿರತವಾಗಿದೆ. ನಿಸರ್ಗದಲ್ಲಿ ಒಂದು ಮರ ಕೂಡ ಕಾಯಕ-ಪ್ರಸಾದ-ದಾಸೋಹ ತತ್ತ್ವವನ್ನು ಪಾಲಿಸುವಾಗ ನರರಿಗೇಕೆ ಸಾಧ್ಯವಾಗದು ಎಂದು ಬಸವಧರ್ಮ ಪ್ರಶ್ನಿಸುತ್ತದೆ. 

ಐಹಿಕ ಜಗತ್ತನ್ನು ಗೆಲ್ಲದವ ದಾಸೋಹಂ ಭಾವ ತಾಳಲಾರ ಕೇರಳದ ಮಾರ್ತಾಂಡಂನಲ್ಲಿ ಮಾರ್ತಾಂಡವರ್ಮ ಎಂಬ ರಾಜ ಆಳುತ್ತಿದ್ದ. ಮಹಾಶೂರನಾಗಿದ್ದ ಆತ ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡ. ನಂತರ ಏನು ಮಾಡಬೇಕೆಂದು ತಿಳಿಯದೆ ಗಾಬರಿಯಾದ. ಆತನಿಗೆ ಸಮಾಧಾನವೆಂಬುದೇ ಇರಲಿಲ್ಲ. ಐಹಿಕ ವಸ್ತುಗಳ ಮಧ್ಯೆ ಒದ್ದಾಡತೊಡಗಿದ. ಕೊನೆಗೆ ಪದ್ಮನಾಭ ಮಂದಿರಕ್ಕೆ ಹೋಗಿ ದೇವರ ಪಾದಗಳ ಅಡಿಯಲ್ಲಿ ತನ್ನ ನೆಚ್ಚಿನ ಖಡ್ಗವನ್ನಿಟ್ಟು ಶರಣಾಗತನಾದ. "ನಾನು ನಿನಗೆ ಶರಣಾಗತನಾಗಿದ್ದೇನೆ. ಎಲ್ಲ ಮಾನಸಿಕ ಒತ್ತಡಗಳಿಂದ ಮತ್ತು ಐಹಿಕ ಆಸೆಗಳಿಂದ ದೂರವಾಗುವಂತೆ ಕೃಪೆ ಮಾಡು ಎಂದು ಬೇಡಿಕೊಂಡ. ನಂತರ ತನ್ನ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಕರೆದ. ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ.

ಜಗತ್ತಿನಲ್ಲಿ ದಾಸೋಹ ಇರುವುದರಿಂದಲೇ ಬದುಕುತಿದ್ದಾರೆ. ಜಗತ್ತಿನಲ್ಲಿ ದಾಸೋಹ ಭಾವ ಇರುವುದರಿಂದಲೇ ಶೇಕಡಾ ೭೫ರಷ್ಟು ಮಂದಿ ಬದುಕುತ್ತಿದ್ದಾರೆ. "ಆಧುನಿಕ ಔಪಚಾರಿಕ ಅರ್ಥವ್ಯವಸ್ಥೆ ಜಗತ್ತಿನ ಕಾರ್ಮಿಕ ಶಕ್ತಿಯ ಶೇಕಾಡಾ ೨೫ರಷ್ಟನ್ನು ಮಾತ್ರ ಬಯಸುತ್ತದೆ. ಉಳಿದ ಶೇಕಡಾ ೭೫ರಷ್ಟು ಜನ ಅನೌಪಚಾರಿಕ ಅರ್ಥವ್ಯವಸ್ಥೆಯಿಂದಾಗಿ ಬದುಕುವುದರಲ್ಲಿ ತಲ್ಲೀನರಾಗಿದ್ದಾರೆ." ಎಂದು ಖ್ಯಾತ ಸಮಾಜವಿಜ್ಞಾನಿ ಮತ್ತು ಆರ್ಥಿಕ ತಜ್ಞ ಥಿಯೊಡೊರ್ ಶನಿನ್ ಹೇಳುತ್ತಾರೆ. ಅವರು ನೂರಾರು ದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳ ಆಧ್ಯಯನ ಮಾಡಿ ಈ ನಿರ್ಣಯಕ್ಕೆ ಬಂದಿದ್ದಾರೆ. ಜಗತ್ತಿನ ಶೇಕಡಾ ೭೫ರಷ್ಟು ಮಂದಿ ನೆರೆಹೊರೆಯವರ ಸಹಾಯ ಸಹಕಾರದೊಂದಿಗೆ ಬದುಕುತ್ತಿದ್ದಾರೆ. ಜನ ಇನ್ನೂ ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಇದರರ್ಥ. ಜಗತ್ತಿನಲ್ಲಿ ಇನ್ನೂ ದಾಸೋಹಂಭಾವ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.
ದಾಸೋಹದ ನಾಡಿನ ಗುಣಗಳು  :  ೧. ದುಡಿದು ಗಳಿಸಿದ್ದೇವೆ ಎಂಬ ಅಹಂಭಾವವಿರಬಾರದು ೨. ಇಲ್ಲಿ ಯಾರು ನಿರುದ್ಯೋಗಿಗಳಿರುವುದಿಲ್ಲ, ೩. ಕಾಯಕದ ಕಾರಣಕ್ಕೆ ಅಪಮಾನವಿರುವುದಿಲ್ಲ, ೪. ಯಾರೂ ಹಸಿವಿನಿಂದ ಬಳಲುವುದಿಲ್ಲ, ೫. ಯಾರೂ ಒಂಟಿತನ ಅನುಭವಿಸುವುದಿಲ್ಲ, ೬. ಬೇಡುವುವರಿರುವುದಿಲ್ಲ

ಡಾ. ಎಸ್.ಎಂ. ಮುತ್ತಯ್ಯ


ಮಲೆನಾಡಿನ ಬುಡಕಟ್ಟು ಮಹಿಳೆ : ಒಂದು ಹಿನ್ನೋಟ

ಮಹಿಳೆಯರನ್ನು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿರುವ ಕ್ರಮ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ಈ ಕ್ರಮ ಎಲ್ಲಾ ಕಾಲಕ್ಕೂ ಪ್ರದೇಶಕ್ಕೂ ಸಮುದಾಯಕ್ಕೂ ಒಂದೇ ಆಗಿದೆ ಎನ್ನುವಂತಿಲ್ಲ. ಭಾರತದ ದೀರ್ಘ ಪರಂಪರೆಯಲ್ಲಿ ಹೆಣ್ಣನ್ನು ಗೌರವದ ತುತ್ತ ತುದಿಯಲ್ಲಿರಿಸಿ ಪೂಜಿಸಿರುವುದೂ ಇದೆ. ಹಾಗೆಯೇ ಸೇವಕಿಯಂತೆ ಅತ್ಯಂತ ಕೀಳಾಗಿ ಕಂಡಿರುವ ನಿದರ್ಶನಗಳೂ ಇವೆ. ಇಂಥ ವಿಷಯದ ಚರ್ಚೆಯ ಸಂದರ್ಭದಲ್ಲಿ ಪದೇ ಪದೇ ಪ್ರಸ್ತಾಪವಾಗಿರುವ ಒಂದು ಸಂಗತಿಯೆಂದರೆ ಮಹಿಳೆ ಎಲ್ಲಿ ಉತ್ಪಾದನೆಯ ವ್ಯವಸ್ಥೆಯ ಪಾಲುದಾರಳಾಗಿದ್ದಾಳೋ ಅಲ್ಲಿ ಪುರಷನಷ್ಟೇ ಸಮಾನವಾದ ಸ್ಥಾನಮಾನಗಳು ದೊರೆತಿವೆ. ಅಂತೆಯೇ ಉತ್ಪಾದನಾ ವ್ಯವಸ್ಥೆಯ ಬಳಕೆದಾರಳು ಮಾತ್ರ ಆಗಿರುವಲ್ಲಿ ಮಹಿಳೆ ಕೇವಲ ಸೇವಕಿಯಂತಾಗಿದ್ದಾಳೆ. ಈ ಮಾತನ್ನು ಸ್ವಲ್ಪ ಸರಳಗೊಳಿಸಿ ಹೇಳುವುದಾದರೆ : ದುಡಿಯುವ, ಶ್ರಮಿಕ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಗೆ ಉನ್ನತ ಸ್ಥಾನಮಾನಗಳು ದೊರಕಿದ್ದರೆ; ನಾಗರೀಕ ಸಮಾಜಗಳಲ್ಲಿ ಮಹಿಳೆ ಪುರುಷನ ಅಧೀನಳಾಗಿ ಬದುಕುವಂತಾಗಿದೆ. 
ಶ್ರಮಿಕ ಸಮುದಾಯಗಳಲ್ಲಿ ಮಹಿಳೆಯರನ್ನು ಎಲ್ಲಾ ಕಾಲದಲ್ಲೂ ಪುರಷನಷ್ಟೆ ಸಮಾನವಾಗಿ ಕಾಣಲಾಗಿದೆ ಎಂದು ಹೇಳುವಂತಿಲ್ಲ. ಏಕೆಂದರೆ ಅಲ್ಲಿಯೂ ಕೂಡ ಮಹಿಳೆ ನಾಗರೀಕ ಸಮಾಜಗಳಲ್ಲಿರುವಂತೆ ಶೋಷಿತಳಾಗಿರುವುದು ಕಂಡುಬರುತ್ತದೆ. ಇದಕ್ಕೆ ಪ್ರಧಾನವಾದ ಎರಡು ಕಾರಣಗಳಿವೆ. ಅವುಗಳಲ್ಲಿ ಮೊದಲನೆಯದು ಅವು ನಂಬಿರುವ ನಂಬಿಕೆಯ ಜಗತ್ತು ಎರಡನೆಯದು ವೈದಿಕ ಸಂಸ್ಕೃತಿಯ ಪ್ರಭಾವ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನ ಸಮುದಾಯಗಳ ಬದುಕಿನ ಕ್ರಮಗಳನ್ನು ಪರಿಶೀಲಿಸುವುದು ಅತ್ಯಂತ ಕೂತೂಹಲದ ಸಂಗತಿ. ಇಂಥ ಪ್ರಯತ್ನದ ಭಾಗವಾಗಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ನೆಲೆನಿಂತಿರುವ ಬುಡಕಟ್ಟು ಸಮುದಾಯಗಳ ಬದುಕುಗಳನ್ನು ಪರಿಶೀಲಿಸುವ ಪ್ರಯತ್ನ ಈ ಲೇಖನದ್ದು.
ಮಲೆನಾಡು ಮತ್ತು ಬುಡಕಟ್ಟು ಸಮುದಾಯಗಳು
ಅರಣ್ಯ ಮತ್ತು ಬೆಟ್ಟಗಳಿಗೂ ಬುಡಕಟ್ಟುಗಳಿಗೂ ಅವಿನಭಾವ ಸಂಬಂಧ. ಬುಡಕಟ್ಟುಗಳು ತಮ್ಮ ನಂಬಿಕೆ ಹಾಗೂ ಆಹಾರ ಅಗತ್ಯಗಳನ್ನು  ಈಡೇರಿಸಿಕೊಳ್ಳಲು ಇಂಥ ಪ್ರದೇಶಗಳು ಅತೀ ಪ್ರಶಸ್ತವಾದ ತಾಣಗಳು. ಹಾಗಾಗಿಯೇ ಜಗತ್ತಿನ ಬಹುತೇಕ ಬುಡಕಟ್ಟುಗಳು ಅರಣ್ಯಗಳಲ್ಲಿಯೇ ತಮ್ಮ ನೆಲೆಗಳನ್ನು ಕಂಡುಕೊಂಡಿವೆ. ಅದರಲ್ಲೂ ಮಲೆನಾಡಿನ ಸಹ್ಯಾದ್ರಿ ತಪ್ಪಲುಗಳಲ್ಲಿ ಹಲವಾರು ಪ್ರಧಾನ ಬುಡಕಟ್ಟುಗಳು ತಮ್ಮ ಬದುಕನ್ನು ರೂಪಿಸಿಕೊಂಡು ಬದುಕುತ್ತಿವೆ. ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಬುಡಕಟ್ಟುಗಳಿಗೆ ಆಶ್ರಯ ತಾಣವಾಗಿದೆ. ಹಾಗೆಯೇ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಕೆಲವಾರು ಸಮುದಾಯಗಳು ನೆಲೆನಿಂತಿವೆ. ಮಲೆನಾಡಿನ ಅಂಥ ಕೆಲವು ಬುಡಕಟ್ಟುಗಳನ್ನು ಹೆಸರಿಸುವುದಾದರೆ : ಹಸಲರು, ಗೌಳಿಗರು, ಗೌಡಾಲು, ಹಕ್ಕಿಪಿಕ್ಕಿಗಳು, ಸಿದ್ಧಿಗಳು, ಕೊರಗರು, ಮಾಲೇರು, ಮಲೆಕುಡಿಯರು, ಕರೆಒಕ್ಕಲು, ಕುಡುಬಿಗಳು ಇತ್ಯಾದಿ. ಈ ಸಮುದಾಯಗಳು ಇಂದಿಗೂ ತಮ್ಮ ಅಸ್ಮಿತೆಯೊಂದಿಗೆ ಜೀವನ ನಡೆಸುತ್ತಿವೆ. ಆಧುನಿಕತೆ ತೀವ್ರತರವಾದ ಹೊಡೆತಗಳಿಗೆ ಸಿಕ್ಕು  ಅಧಿಕಾರ ಹಾಗೂ ಆಸೆಯ ಮನೋಭಾಗಳ ಮಧ್ಯೆ ಹೊಸದನ್ನು ಪಡೆಯುವ ಹಂಬಲ, ಪರಂಪರೆಯನ್ನು ಮೀರಲಾರದ ತಲ್ಲಣಗಳ ನಡುವೆ ಎಣಗಾಡುತ್ತಿರುವ ಈ ಸಮುದಾಯಗಳು ಹಳೆಯ ಮತ್ತು ಹೊಸದರ ಸಮ್ಮಿಶ್ರವಾದ ಬದುಕನ್ನು ಸಾಗುಸುತ್ತಿವೆ.
ಬುಡಕಟ್ಟುಗಳು ಮತ್ತು ಮಹಿಳೆ
ಬುಡಕಟ್ಟುಗಳು ಮೂಲತಃ ಪ್ರಕೃತಿಗೆ ಹತ್ತಿರವಾಗಿ ಬದುಕುವ ಜನಗುಂಪುಗಳಾಗಿದ್ದು, ಶ್ರಮವನ್ನೇ ಆಧರಿಸಿ ಬದುಕುವಂತಹವುಗಳು. ಹಾಗಾಗಿ ಬಹುತೇಕ ಬುಡಕಟ್ಟುಗಳಲ್ಲಿ ಲಿಂಗಬೇಧದ ಕಲ್ಪನೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ ಇವರ ಪರಿಶುದ್ಧತೆಯ ಪರಿಕಲ್ಪನೆಗಳು, ಅಲೌಕಿಕ ಭಾವನೆಗಳು ಮತ್ತು ಹೊರಗಿನ ಸಂಸ್ಕೃತಿಯ ಪ್ರಭಾವಗಳ ಕಾರಣದಿಂದ ಸ್ತ್ರೀಯರ ಬಗೆಗಿನ ನಂಬಿಕೆಗಳು ನಾಗರೀಕ  ಜಗತ್ತಿನ ಸಮಾಜಗಳಲ್ಲಿರುವಂತೆ ಶೋಷಕ ನೆಲೆಯವು ಎನ್ನುವ ಅನುಮಾನಗಳನ್ನು ಸೃಷ್ಟಿಸುತ್ತವೆ. ಈ ಸಂದರ್ಭಗಳಲ್ಲಿ ಇಂಥ ವಿಷಯಗಳನ್ನು ಪರಿಶೋಧಿಸುವಾಗ ಶೋಧಕರಿಗೆ ಎಚ್ಚರದ ದೃಷ್ಟಿಯೊಂದು ಇರಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹೊರಗಿನ ಪ್ರಭಾವಗಳಿಂದ ಬಂದಿರುವ ಶೋಷಕ ದೃಷ್ಟಿ ಇವರಲ್ಲಿ ಅಳವಡಿಕೆಯಾಗಿರುವ ಕ್ರಮಗಳನ್ನು ಗಮನಿಸದರೆ ಮೂಲಕ್ಕಿಂತ ಭಿನ್ನವಾಗಿ ತಮ್ಮದೇ ಆದ ಸಮಾನತೆಯ ದೃಷ್ಟಿಯನ್ನು ಪ್ರಕಟಪಡಿಸುತ್ತವೆ. ಇಂಥ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದು ಸಾಧ್ಯವಾಗದಿದ್ದರೆ ಬುಡಕಟ್ಟು ಸಮುದಾಯಗಳು ಎಲ್ಲ ನಾಗರೀಕ ಸಮುದಾಯಗಳಂತೆ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡಿವೆ ಎಂಬ ಅಪಕ್ವತೆಯ ತೀರ್ಮಾನಗಳಿಗೆ ಬರುವ ಅಪಾಯವಿರುತ್ತದೆ. ಈ ಸ್ಪಷ್ಟ ತಿಳುವಳಿಕೆಯೊಂದಿಗೆ ಮಲೆನಾಡಿನ ಕೆಲವು ಬುಡಕಟ್ಟುಗಳ ಜೀವನ ವಿಧಾನಗಳನ್ನು  ಗಮನಿಸುವ ಪ್ರಯತ್ನಯನ್ನು ಇಲ್ಲಿ ಮಾಡಬಹುದಾಗಿದೆ. 
ಯಾವುದೇ ಒಂದು ಸಮುದಾಯದ ಬದುಕಿನಲ್ಲಿ ಮಹಿಳೆಯರಿಗೆ ಇರುವ ಸ್ಥಾನ ಮಾನಗಳನ್ನು ತಿಳಿಯಬೇಕಾದರೆ ಆ ಸಮುದಾಯದ ಬದುಕಿನ ಕ್ರಮಗಳನ್ನು ಗಮನಿಸಬೇಕಾಗುತ್ತದೆ. ಮುಖ್ಯವಾಗಿ  ಬುಡಕಟ್ಟುಗಳಲ್ಲಿ ಬಳಕೆಯಲ್ಲಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳು, ಕಟ್ಟು-ಕಟ್ಟಳೆ, ವಿಧಿ ವಿಧಾನಗಳು, ವೈವಾಹಿಕ ನಡಾವಳಿಗಳು ಉಡುಗೆ ತೊಡುಗೆ, ಆಭರಣಗಳು ಇವೇ ಮೊದಲಾದ ಸಂಗತಿಗಳಲ್ಲಿ ಹುಡಕಾಡಬೇಕೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಬುಡಕಟ್ಟುಗಳಲ್ಲಿ ಮಹಿಳೆಯರಿಗೆ ಇರುವ ಗೌರವ ಮತ್ತು ಸ್ಥಾನಮಾನಗಳನ್ನು ಮುಂದಿನಂತೆ ಪರಿಶೀಲಿಸಬಹುದು.
ಸೂತಕದ ಕಲ್ಪನೆ  
 ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನೋಡಬಹುದಾದ ಬಹುಮುಖ್ಯ ವಿಷಯ ಸೂತಕಕ್ಕೆ ಸಂಬಂಧಿಸಿದ್ದು. ಹೆಣ್ಣಿನ ಜೀವನದ ಮಹತ್ವದ ಘಟ್ಟ ಋತುಮತಿ ಮತ್ತು ಹೆರಿಗೆ ಸಂದರ್ಭದ್ದು. ಇವೆರಡು ಸಂದರ್ಭಗಳಲ್ಲಿ ಮಹಿಳೆಯರನ್ನು ಮನೆಯಿಂದ ಹೊರಗಿಡುವ ಸಂಪ್ರದಾಯಗಳು ಬಹುತೇಕ ಎಲ್ಲಾ ಬುಡಕಟ್ಟುಗಳಲ್ಲಿ ಆಚರಣೆಯಲ್ಲಿವೆ. ಹಾಗಾಗಿ ಮಲೆನಾಡಿನ ಬುಡಕಟ್ಟುಗಳಲ್ಲಿಯೂ ಈ ಸಂಪ್ರದಾಯಗಳು ಜೀವಂತ ಆಚರಣೆಗಳಾಗಿ ಕ್ವಚಿತ್ತಾಗಿ ಮುಂದುವರೆದಿವೆ. ಮಡಿವಂತಿಕೆಯ ಭಾವನೆಯಿರುವ ಈ ಸಮುದಾಯಗಳಲ್ಲಿ ಋತುಮತಿ ಮತ್ತು ಹೆರಿಗೆ ನಾಗರೀಕ ಸಮುದಾಯಗಳಿಗಿಂತ ಚೂರು ಹೆಚ್ಚಿನ ಮೈಲಿಗೆಯಾಗಿ ಕಂಡಿವೆ. ಹಾಗಾಗಿಯೇ ಈ ಸಂದರ್ಭಗಳಲ್ಲಿ ಮಹಿಳೆಯರನ್ನು ದಿನನಿತ್ಯದ ವಾಸದ ಮನೆಯಿಂದ ಬೇರ್ಪಡಿಸಿ ಅದಕ್ಕೆಂದೇ ಮನೆಯಿಂದ ತುಸು ದೂರದಲ್ಲಿ ನಿರ್ಮಿಸಿದ ಪ್ರತ್ಯೇಕ ಗುಡಿಸಲಲ್ಲಿ ಇರಿಸುವ ಪದ್ಧತಿಗಳಿದ್ದವು. ಇನ್ನೂ ಕೆಲವು ಪಂಗಡಗಳಲ್ಲಿ ಪ್ರತೀ ತಿಂಗಳು ಮನೆಯ ಹೊರಗಡೆ ಇಡುವ ಪದ್ಧತಿ ಇತ್ತು. ಆದರೆ ಈಗ ಬಹುತೇಕ ಗುಂಪುಗಳಲ್ಲಿ ಈ ಆಚರಣೆಗಳು ಇಂದು ಯತಾವತ್ತಾಗಿ ಉಳಿದು ಬಂದಿಲ್ಲ. ನಿದರ್ಶನಕ್ಕೆ ಗಮನಿಸುವುದಾದರೆ :
೧. ಮಲೆನಾಡಿನ ಪ್ರಮುಖ ಬುಡಕಟ್ಟುಗಳಲ್ಲಿ ಒಂದಾದ ಹಸಲರಲ್ಲಿ ಹಿಂದೆ ಈ ಪದ್ಧತಿ ಕಟ್ಟುನಿಟ್ಟಾಗಿ ಆಚರಣೆಗೊಳ್ಳುತ್ತಿದ್ದು ಈಗ ಬದಲಾವಣೆಯಾಗಿದೆ. ಪ್ರಸ್ತುತ ಹಸಲರಲ್ಲಿ ಋತುಮತಿಯಾದ ಹೆಣ್ಣನ್ನು ಮನೆಯ ಒಳಗಡೆ ಸ್ನಾನ ಮಾಡಿಸುವುದಿಲ್ಲ ಅಷ್ಟೇ. ಹಳ್ಳದಲ್ಲಿಯೋ ಅಥವಾ ಹತ್ತಿರ ಕೆರೆಯಲ್ಲಿಯೋ ಸ್ನಾನ ಮಾಡಿಸಿ ಮನೆಯ ಒಳಗಡೆ ಕರೆದುಕೊಳ್ಳುತ್ತಾರೆ. ಇನ್ನೂ ಮನೆಯಲ್ಲಿಯೇ ಹೆರಿಗೆ ಮಾಡಿಸುತ್ತಾರೆ.  ಮಗು ಜನನವಾದ ಮೂರು, ಏಳು ಮತ್ತು ಹನ್ನೊಂದನೇ ದಿನಗಳಲ್ಲಿ ತಮ್ಮನ್ನು ತಮ್ಮ ಮನೆಯನ್ನು ಶುದ್ಧಗೊಳಿಸಿಕೊಳ್ಳುತ್ತಾರೆ.
೨. ಮಲೆನಾಡಿನ ಮತ್ತೊಂದು ಬುಡಕಟ್ಟು ಗೌಡಾಲು ಸಮುದಾಯದಲ್ಲಿ ಋತುಮತಿಯಾದ ಹೆಣ್ಣನ್ನು ತಮ್ಮ ಮನೆಯ ಪಕ್ಕದಲ್ಲೇ ಒಂದು ಪ್ರತ್ಯೇಕ ಗುಡಿಸಲು ನಿರ್ಮಿಸಿ ಅಲ್ಲಿರಿಸುತ್ತಾರಾದರೂ ಅವಳನ್ನು ಅಸ್ಪೃಶ್ಯಳಂತೆ ಕಾಣುವುದಿಲ್ಲ. ಬದಲಿಗೆ ದಿನಂಪ್ರತಿ ಮುತ್ತೈದೆಯರು ಸೇರಿ ಅರಿಶಿನ ಸ್ನಾನ ಮಾಡಿಸುತ್ತಾರೆ. ಅವಳಿಗೆ ಪ್ರಿಯವಾದ ಆಹಾರ ಕೊಡುತ್ತಾರೆ. ಅಷ್ಟೇ ಅಲ್ಲದೆ ಸೋಬಾನೆ ಪದಗಳನ್ನು, ತಮಾಷೆಯ ಮಾತುಗಳನ್ನು ಹೇಳಿ ಸಂತೃಪ್ತಿಗೊಳಿಸುತ್ತಾರೆ. ಹೆರಿಗೆ ಸಮಯದಲ್ಲೂ ಹೀಗೆ ಮನೆಯಿಂದ ಪ್ರತ್ಯೇಕಿಸಿದರೂ ಅವಳಿಗೆ ಬೇಕಾದ ಉಪಚಾರವನ್ನು ಮಾಡುತ್ತಾರೆ.
ಇಂಥ ಸಂದರ್ಭಗಳಲ್ಲಿ ಗಮನಿಸಲೇ ಬೇಕಾಗಿರುವ ಸಂಗತಿಯೆಂದರೆ - ಈ ಸಮುದಾಯಗಳಲ್ಲಿ ಋತುಮತಿ ಹಾಗೂ ಹೆರಿಗೆ ಸಂದರ್ಭದಲ್ಲಿ ಮನೆಯಿಂದ ಹೊರಗಿಡುತ್ತಾರೆ ಎಂಬುದನ್ನು ಕೇವಲ ಒಂದು ದೋಷವೆಂಬಂತೆ ಗ್ರಹಿಸುವುದು ನಮ್ಮಲ್ಲಿ ಸಾಮಾನ್ಯವಾಗಿದೆ. ಆದರೆ ನಿಜ ಸ್ಥಿತಿಯನ್ನು ನೋಡಿದರೆ ಅವರು ಮನೆಯಿಂದ ಹೊರಗಿಡುವ ಪದ್ಧತಿ ಒಂದು ಕಾಲಕ್ಕೆ ಅಗತ್ಯವಾಗಿ ಮಾಡಬೇಕಿದ್ದ ಕ್ರಮವಾದಂತಿದೆ. ಹೊರಗಿಡಟ್ಟವರು ಅವಳ ಯೋಗಕ್ಷೇಮದ ಬಗ್ಗೆ ಚಿಂತಿಸದೆ ಇದ್ದಿದ್ದರೆ ನಮ್ಮ ಈ ನಿಲುವು ಸರಿಯೆನಿಸುತ್ತಿತ್ತು. ಆದರೆ ಹೊರಗಿಟ್ಟ ಹೆಣ್ಣಿನ ಬಗ್ಗೆ ಅವರ ಪೋಷಕರು ಹೊಂದಿರುವ ಕಾಳಜಿ ಅಪಾರ. ಅಷ್ಟಕ್ಕೂ ಹೊರಗಿಡುವ ಈ ಪದ್ಧತಿಯಲ್ಲಿ ಪಾರಂಪರಿಕ ದೇಸಿ ಜ್ಞಾನವೊಂದಿದೆ ಎನ್ನುವುದನ್ನು ನಾವು ನಂಬಲೆಬೇಕು. ಪ್ರತ್ಯೇಕವಾಗಿ ನಿರ್ಮಿಸುವ ಗುಡಿಸಲುಗಳ ನಿರ್ಮಾಣಕ್ಕೆ ಬಳಸುತ್ತಿದ್ದ ಸೊಪ್ಪು, ಬೇವು, ಹೊಂಗೆ ಮತ್ತಿತರ ಔಷಧೀಯ ಗುಣವಿರುವ ಮರಗಿಡಗಳಿಂದ ಪಡೆದದ್ದು, ಇನ್ನೂ ಹೆಣ್ಣಿನ ಈ ಜೈವಿಕ ಬದಲಾವಣೆಯ ಸೂಕ್ಷ್ಮ ಸಮಯಕ್ಕೆ ಸ್ವತಃ ಆ ಹೆಣ್ಣಿಗೂ ಕೂಡ ಸಾಮಾನ್ಯ ಜನರಿಂದ ತಗಲಬಹುದಾದ ಸಾಂಕ್ರಮಿಕ ರೋಗಗಳ ಬಗೆಗಿನ ಅರಿವು ಇದಾಗಿರಲು ಸಾಧ್ಯ. ಈ ಕ್ರಮಗಳು ವಿಫುಲ ಆರೋಗ್ಯ ಸೌಲಭ್ಯಗಳಿರುವ ಇಂದಿನ  ನಾಗರೀಕ ಸಮಾಜಕ್ಕೆ ಅನಗತ್ಯ ಎನಿಸಿರುವುದು ಸಹಜವೇ ಆದರೂ ಒಂದು ಕಾಲ ಸಂದರ್ಭಕ್ಕೆ ಈ ಆಚರಣೆಗಳು ಅಗತ್ಯವಾಗಿದ್ದವು ಎಂಬುದನ್ನು ನಿರಾಕರಿಸಲಾದೀತೆ? ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲದಿರುವ ಅದೆಷ್ಟೋ ಸಮುದಾಯಗಳಿಗೆ ಇವು ಅನುಸರಣಾ ಯೋಗ್ಯವೆಂದೆನಿಸದರೆ ಅದರಲ್ಲಿರು ತಪ್ಪೇನು? ಎಂಬ ಪ್ರಶ್ನೆಗಳನ್ನು ಇಲ್ಲಿ ಕೇಳಿಕೊಳ್ಳಬೇಕಾದುದು ಇಂದಿನ ತುರ್ತಾಗಿದೆ. ಹಾಗಾಗಿ ಆದಿವಾಸಿ ಸಮುದಾಯಗಳು ಹಾಗೂ ನಾಗರೀಕ ಸಮಾಜಗಳು ಇಲ್ಲಿ ಬಳಸುವ ಮೈಲಿಗೆ, ಸೂತಕ ಎಂಬ ಪದಗಳನ್ನು ಮತ್ತೊಮ್ಮೆ ಬಹುಮುಖೀ ವ್ಯಾಖ್ಯಾನಕ್ಕೆ ಒಳಪಡಿಸಬೇಕಿದೆ. ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ಆರಂಭವಾದ ಈ ಆಚರಣೆಗಳು ಕಾಲಾನಂತರ ಆಚರಣೆ ಮಾಡುವವರಿಗೆ ಕೇವಲ ಸಂಪ್ರದಾಯದ ಮುಂದುವರಿಕೆಗಳಾಗಿ ಮಾರ್ಪಾಡಾಗಿರುವುದರ ಬಗ್ಗೆಯೂ ವಿಚಾರ ಮಂಥನ ಮಾಡಬೇಕಿದೆ. ಈ ಸಂದರ್ಭಗಳೆಲ್ಲೆಲ್ಲ ನಾವು ನೆನಪಿಡಬೇಕಾದ ಅಂಶವೆಂದರೆ ಪರಂಪರೆಯ ಯಾವ ಆಚರಣೆಯೂ ದುರುದ್ದೇಶದಿಂದಾಗಲೀ, ನಿರರ್ಥಕವಾಗಿಯಾಗಲೀ ಆರಂಭಗೊಂಡಿರುವುದಿಲ್ಲ. ಕೆಲವೊಮ್ಮೆ ಅನ್ಯ ಸಂಸ್ಕೃತಿಗಳ ಶೋಷಕ ಪ್ರವೃತ್ತಿ ಇಂತಹ ಆಚರಣೆಗಳನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡಿಸಿ ಚಾಲ್ತಿಗೆ ಬಿಟ್ಟರುತ್ತವೆ. ಈ ಬಗ್ಗೆ ಎಚ್ಚರದ ನೋಟಗಳ ಅಗತ್ಯತೆ ತುಂಬಾ ಇದೆ.  
ಬಾಲ್ಯ ವಿವಾಹ 
ನಮ್ಮ ನಾಗರೀಕ ಸಮಾಜವನ್ನು ಕಾಡುತ್ತಿರುವ ಸಾಮಾಜಿಕ ಪಿಡುಗುಗಳಲ್ಲಿ ಬಾಲ್ಯವಿವಾಹ ಬಹುಮುಖ್ಯವಾಗಿತ್ತು. ಈಗಲೂ ಕೆಲವೊಂದು ಕಡೆ ಇರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗುವುದನ್ನು ನಾವು ಕಾಣುತ್ತಿದ್ದೇವೆ. ಬುಡಕಟ್ಟು ಸಮುದಾಯಗಳಲ್ಲಿ ಬಹುಪಾಲು ಸಮುದಾಯಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇತ್ತೆಂದು ತಿಳಿದು ಬರುತ್ತದೆ. ಹಾಗೆಯೇ ಅನೇಕ ಸಮುದಾಯಗಳಲ್ಲಿ ಈ ಪದ್ಧತಿ ಬಳಕೆಯಲ್ಲಿರಲಿಲ್ಲ. ಉದಾ : ಹಸಲರು ಮತ್ತಿತರ ಬುಡಕಟ್ಟು ಸಮುದಾಯಗಳಲ್ಲಿ ಈ ಪದ್ಧತಿ ಇಲ್ಲ. ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದ ಸಮುದಾಯಗಳಲ್ಲಿ ಕಾಲಾನಂತರ ಸಾಕಷ್ಟು ಬಲಾವಣೆಗಳಾಗಿವೆ. ಉದಾ : ಗೌಳಿಗರಲ್ಲಿ ತೊಟ್ಟಲಲ್ಲಿ ಇರುವ ಮಕ್ಕಳಿಗೆ ವಿವಾಹ ಮಾಡುತ್ತಿದ್ದವರು ಬರುಬರುತ್ತಾ ಮೈನರೆಯುವ ಮುನ್ನವೇ ಮದುವೆ ಮಾಡಲಾರಂಭಿಸಿದರು. ಇವರಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಸೂಕ್ತ ವಯೋಮಾನಕ್ಕೆ ಅನುಗುಣವಾಗಿ ಮದುವೆಗಳು ನಡೆಯುತ್ತಿವೆ. 
ವೈವಾಹಿಕ ನಡಾವಳಿಗಳು
ಯಾವುದೇ ಪುರಷ ಮತ್ತು ಮಹಿಳೆಗೆ ತಮ್ಮ ಜೀವನದ ಬಹಳ ಮಹತ್ವದ ಘಟ್ಟ ವಿವಾಹ. ವಿವಾಹದ ಈ ಪ್ರಕ್ರಿಯೆಯಲ್ಲಿ ಸಂಗಾತಿಯ ಆಯ್ಕೆಯಿಂದ ಹಿಡಿದು ಸಮಬಾಳ್ವೆಯವರೆಗೂ ಮಹಿಳೆ ಸಾಕಷ್ಟು ಸಂಕಟ ಸಂಭ್ರಮಗಳನ್ನು ಅನುಭವಿಸುತ್ತಾಳೆ. ಅದರಲ್ಲಿ ಮುಖ್ಯವಾಗಿ ಆಯ್ಕೆಯ ಸ್ವಾತಂತ್ರ, ಮನೆಯಲ್ಲಿ ಗಂಡನಷ್ಟೇ ಗೌರವದ ಸ್ಥಾನಮಾನ, ವರದಕ್ಷಿಣೆಯೆಂಬ ಹಿಂಸಾತ್ಮಕ ಪ್ರವೃತ್ತಿ, ಗಂಡನನ್ನು ಕಳೆದುಕೊಂಡ ವೈದವ್ಯದ ನೋವು ಮತ್ತಿತರ ವಿಷಯಗಳಲ್ಲಿ ನಾಗರೀಕ ಎಂದುಕೊಂಡಿರುವ ಸಮಾಜದ ಮಹಿಳೆಯರ ಸ್ಥಿತಿಯನ್ನು ನಾವೆಲ್ಲರೂ ಇಂದು ದಿನಬೆಳಗಾದರೆ ಕಾಣುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ ಅನಾಗರೀಕ ಸಮುದಾಯಗಳೆಂದು ಕರೆಸಿಕೊಂಡಿರುವ ಬುಡಕಟ್ಟು ಸಮುದಾಯಗಳು ಇಂಥ ವಿಷಯದಲ್ಲಿ ಅನುಸರಿಸಿದ ಮಾದರಿಗಳನ್ನು ನೋಡಬೇಕು. ಈ ಹಿನ್ನೆಲೆಯಲ್ಲಿ ನೋಡಲೆಬೇಕಾದ ಒಂದರೆಡು ಮಾದರಿಗಳೆಂದರೆ : ತೆರ ಕೊಡುವ ಪದ್ಧತಿ, ಅಂತರ್ ಕುಲದ ವಿವಾಹ, ಸೀರುಡಿಕೆ ಪದ್ಧತಿ, ಸ್ವಗೋತ್ರ ವಿವಾಹ ನಿಷೇಧ . ಇವುಗಳ ವಿಶೇಷತೆಗಳೇನು ಎಂಬುದನ್ನು ಮುಂದಿನಂತೆ ವಿವರಿಸಿಕೊಳ್ಳಬಹುದು
ಅ. ತೆರ ಪದ್ಧತಿ
ಇಂದಿನ ಸಮಾಜದ ಬಹುದೊಡ್ಡ ಸಮಸ್ಯೆ ವರದಕ್ಷಿಣೆ. ವರದಕ್ಷಿಣೆಯ ಕಾರಣಕ್ಕಾಗಿ ಹಲವಾರು ಮಹಿಳೆಯರು ಇನ್ನಿಲ್ಲದಂತಹ ಸಂಕಷ್ಟಗಳನ್ನು ಎದುರಿಸುತ್ತಿರುವುದು ಸಮಾನ್ಯವೆಂಬಂತಾಗಿದೆ. ಈ ಪಿಡಗನ್ನು ಹೋಗಲಾಡಿಸಲು ಸಾಕಷ್ಟು ಕಾಯಿದೆಗಳನ್ನು ಜಾರಿಗೆ ತಂದಿದ್ದಾಗ್ಯೂ ಪರಿಸ್ಥಿತಿ ಸುಧಾರಿಸಿಲ್ಲ. ಇಂಥ ಸಂಕಟದ ಕಾಲದಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ತೆರ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವೆನಿಸುತ್ತಿದೆ. ಮಲೆನಾಡಿನ ಬುಡಕಟ್ಟುಗಳಲ್ಲಿ ಹಿಂದೆ ಗಟ್ಟಿಯಾಗಿ ಅಸ್ತಿತ್ವದಲ್ಲಿದ್ದು ಈಗ ಸ್ಪಲ್ಪಮಟ್ಟಿಗೆ ಹಿನ್ನೆಲೆಗೆ ಸರಿದಿರುವ ತೆರ ಕೊಡುವ ಸಂಪ್ರದಾಯ ನಮ್ಮ ಭವಿಷ್ಯದ ಕಗ್ಗತ್ತಲ ಬದುಕಿಗೆ ಬೆಳಕಾಗುವಂತೆ ಕಾಣಿಸುತ್ತಿದೆ. ಪ್ರಾಚೀನ ಕಾಲದಿಂದಲೂ ಆದಿಮಾ ಸಮುದಾಯಗಳಲ್ಲಿ ಪ್ರಚಲಿತವಿದ್ದ ತೆರ ಪದ್ಧತಿಯಲ್ಲಿ ಗಂಡಿನ ಕಡೆಯವರು ಹೆಣ್ಣಿನ ತಂದೆ ತಾಯಿಗೆ ತಮ್ಮ ಶಕ್ತಿಗನುಸಾರವಾಗಿ ಹಣ ಮತ್ತು ಧಾನ್ಯಗಳನ್ನು ನೀಡುವ ಪದ್ಧತಿಯನ್ನೇ ತೆರ ಕೊಡುವ ಪದ್ಧತಿ ಎನ್ನುವರು. ಇದನ್ನು ಆಧುನಿಕರು ವಧುದಕ್ಷಿಣೆ ಪದ್ಧತಿಯೆಂತಲೂ ಕರೆದುಕೊಂಡಿರುವುದುಂಟು. ಇದು ಅತ್ಯಂತ ಸಾಂಕೇತಿಕ ಆಚರಣೆಯಾಗಿದ್ದು ಇಂತಿಷ್ಟೆ ಕೊಡಬೇಕೆಂಬ ಕಟ್ಟುನಿಟ್ಟಿನ ನಿಯಮಗಳಿಲ್ಲ. ಉದಾ : ಗೌಳಿಗರ ಜಾಜ್ ಎಂಬ ಹೆಸರಲ್ಲಿ ಕರೆಯುವ ತೆರ ಕೊಡುವ ಪದ್ಧತಿಯಲ್ಲಿ ೧೫೦೦-೩೦೦೦ ರೂಗಳನ್ನು ನೀಡುವುದು ಒಂದು ಕ್ರಮವಾದರೆ; ಕುಡಬಿಗಳಲ್ಲಿ ದೇವರ ಮರ್ಯಾದೆ ಎಂದು ಕೇವಲ ೨೫ ರೂಪಾಯಿ ದುಡ್ಡು ಮತ್ತು ಒಂದಿಷ್ಟು ವಸ್ತುಗಳನ್ನು ನೀಡುತ್ತಾರೆ; ಕರೆ ಒಕ್ಕಲರು ೩೨ ಬೆಳ್ಳಿ ನಾಣ್ಯಗಳು( ೫೦೦ ರೂ.ಗೆ ಸಮ),೧೫-೨೦ ಚೀಲ ಬತ್ತ,೪-೫ ಡಬ್ಬಿ ಬೆಲ್ಲ ನೀಡುತ್ತಾರೆ. ಹಾಗೆಯೇ ಗೌಡಾಲು ಜನಾಂಗದಲ್ಲಿ ೧೨ ೧/೪ ರೂ. ಮಾತ್ರ ತೆರ ಕೊಡುವ ಕ್ರಮವಿದೆ. ಈ ಪದ್ಧತಿ ಹೆಣ್ಣುಗಳು ಸಿಗುವುದೇ ಅಪರೂಪವಾಗಿರುವ ಸಂದರ್ಭದಲ್ಲಿ ಹುಟ್ಟಿಕೊಂಡು ಇಂದಿಗೂ ಕೆಲವಡೆ ಯಥಾವತ್ತಾಗಿ ಇನ್ನೂ ಕೆಲವೆಡೆ ಸಾಂಕೇತಿಕವಾಗಿ ಉಳಿದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ತೆರ ಪದ್ಧತಿ ಸಂಬಂಧಗಳಲ್ಲಿ ವಿರಸವನ್ನು ಉಂಟುಮಾಡಿದ್ದು ಅತೀ ವಿರಳವೆನ್ನಬಹುದು. ಇಂದಿನ ವರದಕ್ಷಿಣೆಯಂತೆ ಬಹಿರಂಗವಾಗಿಯೋ ಇಲ್ಲವೇ ಗುಪ್ತವಾಗಿಯೋ ಕುಳಿತು ಮಾತನಾಡುವ ಕ್ರಮಗಳು ಇದ್ದಂತಿಲ್ಲ. ಹಾಗಾಗಿ ಯಾರನ್ನು ಯಾರು ಇಂತಿಷ್ಟೇ ಕೊಡಬೇಕೆಂದು ಒತ್ತಾಯಿಸುವ ಪ್ರಮೇಯವೇ ಇಲ್ಲಿರುವುದಿಲ್ಲ. ಇದೊಂದು ಆರೋಗ್ಯ ಪೂರ್ಣ ಪದ್ಧತಿ ಎನ್ನುವುದಕ್ಕೆ ಅಡ್ಡಿಯಿಲ್ಲ.
ಆ. ಸೀರುಡಿಕೆ 
ಪ್ರಸ್ತುತ ಭಾರತೀಯ ಸಮಾಜದಲ್ಲಿ ಇಂದಿಗೂ ಜಾರಿಯಲ್ಲಿರುವ ವಿಧವಾ ಪದ್ಧತಿ ಮಹಿಳೆಯರ ಡೊಡ್ಡ ಶತೃ. ಸಹಜವಾಗಿ ಪರಸ್ಪರ ಸಂಗಾತಿಗಳನ್ನು ಕಳೆದುಕೊಂಡಾಗ ಅಥವಾ ಸುಗಮ ಸಂಸಾರ ಸಾಗಿಸಲು ಸಾಧ್ಯವಾಗದೇ ವಿಚ್ಛೇಧನ ಪಡೆದು ಪರಿತ್ಯಕ್ತರಾದ ಸಂಧರ್ಭಗಳಲ್ಲಿ ಗಂಡಿಗೆ ಮರುಮದುವೆಯಾಗುವ ಮುಕ್ತ ಅವಕಾಶವನ್ನು ನೀಡಲಾಗಿದೆ. ಆದರೆ ಈ ಅವಕಾಶ ಮಹಿಳೆಯರಿಗೆ ಇಂದಿನವರೆಗೂ ಪರಿಪೂರ್ಣವಾಗಿ ಸಿಕ್ಕಿಲ್ಲ ಎಂಬುದು ಅತ್ಯಂತ ಅಶ್ಚರ್ಯಕರ ಸಂಗತಿ. ನಾಗರೀಕ ಸಮಾಜ ಯಾವ ಸಮುದಾಯಗಳನ್ನು ಅನಾಗರೀಕ ಗಿರಿಜನ ಸಮುದಾಯಗಳೆಂದು ಕರೆದಿದೆಯೋ ಅಂಥ ಸಮುದಾಯಗಳಲ್ಲಿ ಈ ಅವಕಾಶಗಳು ಹೇಗಿದ್ದವು ಎಂದು ತಿಳಿಯುವುದು ಆಸಕ್ತಿ ಮೂಡಿಸುವ ಸಂಗತಿ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಬಹುತೇಕ ಬುಡಕಟ್ಟು ಸಮಾಜಗಳಲ್ಲಿ ಪರಿತ್ಯಕ್ತರಾದ ಪುರುಷ ಮಹಿಳೆಯರಿಬ್ಬರಿಗೂ ಮರುಮದುವೆಯಾಗುವ ಮುಕ್ತ ಅವಕಾಶಗಳಿದ್ದವು ಎಂಬುದು ಗಮನಾರ್ಹ. ಗಂಡನನ್ನು ಕಳೆದುಕೊಂಡ ಹೆಣ್ಣು, ಹೆಂಡತಿಯನ್ನು ಕಳೆದುಕೊಂಡ ಗಂಡು ಪರಸ್ಪರ ಒಪ್ಪಿ ಸಮುದಾಯದ ಹಿರಿಯರ ಸಮ್ಮಿತಿಯೊಂದಿಗೆ ವಿವಾಹವಾಗುವುದು ಈ ಗುಂಪುಗಳಲ್ಲಿ ಸಹಜವಾದ ಪ್ರಕ್ರಿಯೆಗಳು. ಇಲ್ಲಿ ಗಂಡ ಹೆಂಡತಿಯ ಮಧ್ಯೆ ಹಲವಾರು ಕಾರಣಗಳಿಗಾಗಿ ಸುಖ ಸಂಸಾರ ಸಾಧ್ಯವಾಗದೇ ಇದ್ದರೆ ವಿಚ್ಛೇಧನ ಪಡೆದು ಮರು ಮದುವೆಯಾಗುವ ಅವಕಾಶಗಳು ಇವೆ. ಮತ್ತೊಂದು ಮುಖ್ಯ ಸಂಗತಿಯೆಂದರೆ ಈ ಸಮುದಾಯಗಳಲ್ಲಿ ಬಹುಪತಿತ್ವ ಅಥವಾ ಬಹುಪತ್ನಿತ್ವ ಪದ್ಧತಿಗಳಿಗೆ ಅವಕಾಶವಿಲ್ಲ. ಹಾಗೇನಾದರೂ ಆದರೆ ಬುಡಕಟ್ಟಿನಿಂದಲೇ ಬಹಿಷ್ಕಾರ ಮಾಡುತ್ತಿದ್ದ ಬಗ್ಗೆ ವಿವರಗಳು ದೊರೆಯುತ್ತವೆ. ಇದರಲ್ಲಿ ಇರುವ ಒಂದು ದೋಷವೆಂದರೆ ಹೀಗೆ ಮರುಮದುವೆ ಆದವರಿಗೆ ಮಂಗಳಕಾರ್ಯಗಳಲ್ಲಿ ಪ್ರವೇಶವನ್ನು ನಿರಾಕರಿಸಿರುವುದು. ಆದರೆ ಸಮಾಧಾನದ ಸಂಗತಿಯೆಂದರೆ ಈತ್ತೀಚೆಗೆ ಈ ಭಾವನೆ ಮರೆಯಾಗಿ ಅವರನ್ನೂ ಎಲ್ಲರಂತೆ ಕಾಣುವ ಮನೋಧರ್ಮವನ್ನು ರೂಢಿಸಿಕೊಳ್ಳುತ್ತಿದ್ದಾರೆ.
ಇ. ಸಗೋತ್ರ ವಿವಾಹ ನೀಷೇಧ
ಬಹುಪಾಲು ಬುಡಕಟ್ಟುಗಳಲ್ಲಿ ಮದುವೆ ಮಾಡುವಾಗ ಗಮನಿಸುವ ಬಹುಮುಖ್ಯ ಸಂಗತಿ ಬಳಿಗಳಿಗೆ ಸಂಬಂಧಿಸಿದ್ದು. ಇವರಲ್ಲಿ ಸೋದರ ಬಳಿಗಳಲ್ಲಿ ಹೆಣ್ಣು ಗಂಡಿನ ಸಂಬಂಧಗಳನ್ನು ಮಾಡುವುದು ಸಂಪೂರ್ಣ ನಿಷಿದ್ಧ. ಈ ಆಚಾರ ಮಾನವೀಯ, ರಕ್ತ ಸಂಬಂಧಗಳಿಗೆ ಆದಿವಾಸಿ ಸಮುದಾಯಗಳು ನೀಡಿದ ಪ್ರಾಮುಖ್ಯತೆಯನ್ನು ಪ್ರಕಟಪಡಿಸುತ್ತದೆ. ಮಲೆನಾಡಿನ ಹಸಲರು, ಗೌಳಿಗರು, ಕುಡಬಿಗಳು, ಕರೆಒಕ್ಕಲರು ಹಾಗೂ ಗೌಡಾಲು ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಈ ನಿಷೇಧಗಳು ಬಳಕೆಯಲ್ಲಿರುವುದನ್ನು ಕಾಣಬಹುದಾಗಿದೆ. ಸಗೋತ್ರ ಗುಂಪುಗಳಲ್ಲಿ ವಿವಾಹವಾದರೆ ಒಂದೇ ಹೊಟ್ಟೆಯಲ್ಲಿ ಜನಿಸಿದ ಸೋದರ ಸೋದರಿಯರನ್ನೇ ವಿವಾಹವಾದಂತೆ ಎಂಬ ನಂಬಿಕೆ ಇಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಹೀಗೆ ಬುಡಕಟ್ಟುಗಳು ಸೋದರ ಬಳಿಗಳಲ್ಲಿ ವೈವಾಹಿಕ ಸಂಬಂಧಗಳನ್ನು ನಿಷೇಧಿಸುವ ಮೂಲಕ ವಂಶೋತ್ಪತ್ತಿಯನ್ನು ಕಾಪಾಡಿಕೊಂಡು, ರಕ್ತ ಸಂಕರದಿಂದಾಗುವ ತೊಂದರೆಗಳನ್ನು ನಿವಾರಿಸಿಕೊಂಡು ಬಂದಿವೆ ಎಂಬುದು ಇಂದಿನ ಸಮಾಜ ಗಮನಿಸಲೇಬೇಕಾದ ಅಂಶವಾಗಿದೆ. 
ಮಹಿಳಾ ಸಮಾನತೆಗೆ ಇನ್ನಷ್ಟು ನಿದರ್ಶನಗಳು
ಬುಡಕಟ್ಟುಗಳಲ್ಲಿ ಬಳಕೆಗೊಳ್ಳುತ್ತಿರುವ ಆಚರಣೆಗಳಲ್ಲಿ ಮಹಿಳೆಯರ ಸಮಾನತೆಯನ್ನು ಸಾರುವ ಇನ್ನು ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ವಿಶೇಷವಾಗಿ ದೇವರ ಹೆಸರಿನಲ್ಲಿ ಮಹಿಳೆಯರನ್ನು ಬಸವಿ, ದೇವದಾಸಿಯರನ್ನಾಗಿಸುವ ಕ್ರಮಗಳಿಲ್ಲ. ಹಾಗೆಯೇ ಪ್ರೇಮ ವಿವಾಹಕ್ಕೂ ಅಕಾಶಗಳುಂಟು. ಗಂಡು ಹೆಣ್ಣು ಪರಸ್ಪರ ಅನುರುಕ್ತರಾಗಿ ಹಟ್ಟಿಬಿಟ್ಟು ಹೋದಾಗ ಅವರನ್ನು ಕರೆತಂದು ಸರಳವಾಗಿ ವಿವಾಹಮಾಡುವುದುಂಟು. ಇಲ್ಲಿ ಹೇಳಲೇ ಬೇಕಿರುವ ಮಹತ್ವದ ಅಂಶವೆಂದರೆ ಅತೀ ಮಡಿವಂತಿಕೆಯ ಭಾವನೆಯಿರುವ ಬುಡಕಟ್ಟುಗಳಲ್ಲಿ ಅನ್ಯ ಸಮುದಾಯದ ಹೆಣ್ಣನ್ನು ವಿವಾಹ ಮಾಡಿಕೊಳ್ಳುವ ಸಂದರ್ಭಗಳು ಸೃಷ್ಟಿಯಾದಾಗ ಹೊರಗಿನಿಂದ ಬಂದ ಹೆಣ್ಣನ್ನು ಅವರದೇ ಕ್ರಮಗಳಲ್ಲಿ ಶುದ್ಧಿಮಾಡಿಕೊಳ್ಳುತ್ತಾರೆ. ಇನ್ನೂ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಮಹಿಳೆ ಪುರಷನಂತೆಯೆ ಎಲ್ಲಾ ಸಂದರ್ಭಗಳಲ್ಲೂ ಭಾಗಿಯಾಗುವುದನ್ನು ಕಾಣಬಹುದು.
ಅಪವಾದಗಳು
ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಸಂಪೂರ್ಣವಾಗಿ ಸರ್ವ ಸಮಾನಳು, ಸ್ವತಂತ್ರಳು ಎಂದು ಹೇಳಿದರೆ ತಪ್ಪಾಗುತ್ತದೆ. ಈ ವ್ಯವಸ್ಥೆಯಲ್ಲೂ ಮಹಿಳೆ ಹಲವಾರು ಸಂದರ್ಭಗಳಲ್ಲಿ ಧಮನಿತಳಾಗಿರುವುದು ಉಂಟು. ಅಂಥ ಕೆಲವು ಸಂದರ್ಭಗಳನ್ನು ನೋಡುವುದಾದರೆ : ಮೂಲದಲ್ಲಿ ಮಾತೃಮೂಲಿಯ ಈ ಸಮುದಾಯಗಳು ಬರು ಬರುತ್ತಾ ಪಿತೃಪ್ರಧಾನ ಸಮಾಜಗಳಾಗಿ ಬದಲಾದ ಕಾರಣದಿಂದಾಗಿ ನಾಗರೀಕ ಸಮಾಜಗಳಲ್ಲಿ ಕಾಣುವಂತೆ ಇಲ್ಲಿಯೂ ಕೆಲವಾರು ಸಂದರ್ಭಗಳಲ್ಲಿ ಮಹಿಳೆಯನ್ನು ಗೌಣವಾಗಿ ಪರಿಗಣಿಸಲಾಗಿದೆ. ಹೆಣ್ಣನ್ನು ಸೋದರಮಾವನ ಆಸ್ತಿಯೆಂಬ ಭಾವನೆಯನ್ನು ಹೊಂದಿರುವುದು, ಹಿರಿಯರ ಪೂಜೆಯಲ್ಲಿ ಕೇವಲ ಗಂಡಸರಿಗೆ ಮಾತ್ರ ಗೌರವ ನೀಡುತ್ತಿರುವುದು, ಹೆಣ್ಣಿನ ಹೆಸರುಗಳನ್ನು ಏಕ ವಚನದಲ್ಲಿ ಕರೆಯುವ ರೀತಿ, ಅನೇಕ ಆಚರಣೆಗಳಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ಪರಿ ಇಂಥ ಸಂಗತಿಗಳು ಬುಡಕಟ್ಟುಗಳಲ್ಲಿ ಹೆಣ್ಣನ್ನು ನೋಡಿರುವ ರೀತಿ ಒಂದೇ ತೆರನಾಗಿಲ್ಲ ಎಂಬುದನ್ನು ನೆನಪಿಸುತ್ತವೆ.  
ಸಮಾರೋಪ 
ಮೇಲೆ ವಿವರಿಸಿದಂತೆ ಮಲೆನಾಡಿನ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣನ್ನು ಕೆಲವೊಮ್ಮೆ ಸಮಾನವಾಗಿ ಇನ್ನೂ ಕೆಲವೊಮ್ಮೆ ಅಸಮಾನ ನೆಲೆಯಲ್ಲಿ ಕಾಣಲಾಗಿದೆ. ಈ ದೃಷ್ಟಿಗಳಲ್ಲಿ ಕೆಲವು ನಿಸಂಶಯವಾಗಿ ಹೊರಗಿನ ಶಿಷ್ಟ ಸಂಸ್ಕೃತಿಗಳ ಪ್ರಭಾವದಿಂದ ಬಂದಿರುವಂತಹವು. ಮತ್ತೆ ಕೆಲವು ತಮಗೆ ತಾವೇ ತಮ್ಮ ಲೋಕದೃಷ್ಟಿಯ ಅನುಗುಣವಾಗಿ ರೂಢಿಸಿಕೊಂಡವುಗಳಾಗಿವೆ. ಇವು ಏನೆ ಇದ್ದರೂ ಈ ಸಮುದಾಯಗಳು ತಮ್ಮ ಮಹಿಳೆಯರನ್ನು ಭೂಮಿಯಂತೆ ಫಲವಂತಿಕೆಯ ಶಕ್ತಿಯಾಗಿ ಕಾಣುವ ದೃಷ್ಟಿಯನ್ನು ಕಳೆದುಕೊಂಡಿಲ್ಲ. ಏನೇ ಇದ್ದರೂ ಬುಡಕಟ್ಟಿನ ಮಹಿಳೆಯರ ಒಟ್ಟಾರೆ ಜೀವನವನ್ನು ಗಮನಿಸಿದಾಗ ನಾಗರೀಕ ಎಂದುಕೊಂಡಿರುವ ಸಮುದಾಯಗಳಲ್ಲಿ ಹೆಣ್ಣಿನ ಬಗ್ಗೆ ಇರುವಷ್ಟು ಅಮಾನವೀಯತೆ ಇಲ್ಲಿಲ್ಲ ಎಂಬುದು ಸಮಧಾನದ ಸಂಗತಿ. ಒಟ್ಟಾರೆ ಬುಡಕಟ್ಟುಗಳ ಜೀವನಕ್ರಮದಲ್ಲಿ ಸಿಗುವ ಒಳ್ಳೆಯ ಮಾದರಿಗಳನ್ನು ಸ್ವೀಕರಿಸಿ ಮನ್ನಡೆಯಬೇಕಾದ ಅನಿವಾರ್ಯತೆಯನ್ನು ನಮ್ಮ ಕಾಲ ಸೃಷ್ಟಿಸಿದೆ. ಈ ಜವಾಬ್ಧಾರಿಯನ್ನು ನಾವೆಲ್ಲರೂ ನಿಷ್ಟೆಯಿಂದ ನಿರ್ವಹಿಸಬೇಕಿದೆ.
###################
ಪರಾಮರ್ಶನ ಗ್ರಂಥಗಳು

೧. ಕರ್ನಾಟಕದ ಬುಡಕಟ್ಟುಗಳು ಸಂಪುಟ-೦೧,೧೯೯೮,ಸಂ:ಎಚ್.ಜೆ ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು 
೨. ದಕ್ಷಿಣ ಭಾರತೀಯ ಜಾನಪದ ಕೋಶ ಸಂಪುಟ-೦೧, ೨೦೧೧, ಸಂ : ಸ.ಚಿ.ರಮೇಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೩. ಬುಡಕಟ್ಟು ಕುಲಕಸುಬುಗಳು, ೨೦೦೨, ಕೆ.ಎಂ. ಮೈತ್ರಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೪. ಕರ್ನಾಟಕ ಜನಪದ ಕಲೆಗಳು, ೧೯೯೬, ಸಂ : ಹಿ.ಚಿ. ಬೋರಲಿಂಗಯ್ಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ
೫. ಇದು ನಮ್ಮ ಕರ್ನಾಟಕ, ೨೦೧೦, ಸಂ : ಅರವಿಂದ ಚೊಕ್ಕಾಡಿ, ಚಾಣುಕ್ಯ ಪ್ರಕಾಶನ, ವಿಜಾಪುರ
೬. ಗಿರಿಜನ ನಾಡಿಗೆ ಪಯಣ, ೨೦೧೦, ಹಿ.ಚಿ. ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
೭. ಮಹಿಳಾ ಜಾನಪದ, ೨೦೦೩, ಸಂ : ಕೆ.ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು 

 ಡಾ. ಎಸ್.ಎಂ. ಮುತ್ತಯ್ಯ

ಹಡಪದ ಅಪ್ಪಣ್ಣ : ಒಂದು ಚಿಂತನೆ


ಹನ್ನೆರಡನೇ ಶತಮಾನದಲ್ಲಿ ನಡೆದ ವಚನ ಚಳವಳಿ ಇಡೀ ಮಾನವ ಪ್ರಪಂಚದಲ್ಲಿಯೇ ಒಂದು ಅಪರೂಪ. ಇಂಥ ಚಳವಳಿ ನಮ್ಮ ಕನ್ನಡ ನೆಲದಲ್ಲಿ ನಡೆದ ಘಟನೆ ಎಂಬುದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ಆ ಕಾಲಕ್ಕೆ ಸಮಾಜದ ಬೇರೂರಿದ್ದ ಅನೇಕ ವಿಕಾರಗಳನ್ನು ಹೊಡೆದೋಡಿಸಲು ವಚನಕಾರರು ನಡಸಿದ ಪ್ರಯತ್ನ ಅತ್ಯಂತ ಶ್ಲಾಘನೀಯ. ಮುಖ್ಯವಾಗಿ ಧರ್ಮ-ಪ್ರಭುತ್ವ ಆ ಕಾಲದಲ್ಲಿ ಸೃಷ್ಟಿಮಾಡಿದ ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಮಾಡಿದ ಕೆಲಸ  ಮುಖ್ಯವಾದುದು. ಈ ಹಿನ್ನೆಯಲ್ಲಿ ಬಸವಣ್ಣ ಕಲ್ಯಾಣದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಕರೆ ಕೊಟ್ಟಾಗ  ರಾಷ್ಟ್ರದ ವಿವಿಧ ಕಡೆಗಳಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಯಲ್ಲಿ ನಲುಗಿದ್ದ ಜನ ಕಲ್ಯಾಣಕ್ಕೆ ಸಿಹಿಯ ವಾಸನೆ ಹಿಡಿದ ಇರುವೆಯಂತೆ  ಸಾಲಿಟ್ಟರು. ಹೀಗೆ ಬಂದವರೆಲ್ಲ ವಿವಿಧ ಜಾತಿ ಹಾಗೂ ವೃತ್ತಿಗಳ ಕಾರಣಕ್ಕೆ ನೊಂದು ನಲುಗಿದವರು. ಇಂಥ ಜನರಿಗೆಲ್ಲ ಬಸವಣ್ಣ ಹಾಗೂ ಆತನ ಕಲ್ಯಾಣ ಬಿಡುಗಡೆಯ ಮಾರ್ಗವಾಗಿ ಕಂಡಿತು. ಇದರ ಫಲವಾಗಿಯೇ ವಚನಕಾರರಲ್ಲಿ ಬಹುಪಾಲು ಜನ ಸಮಾಜದ ಕೆಳಸ್ತರದಲ್ಲಿದ್ದವರೇ ಆಗಿದ್ದಾರೆ. 
ಹೀಗೆ ಸಾಮಾಜಿಕ ಅಸಮಾನತೆಯ ಕ್ರೂರ ದೃಷ್ಟಿಗೆ ಬಲಿಯಾದ ಜನಾಂಗಗಳಿಂದ ಬಂದ ವ್ಯಕ್ತಿಗಳು ತಮ್ಮ ವೃತ್ತಿಗಳನ್ನು ಯಾವುದೇ ಕೀಳರಿಮೆ ಇಲ್ಲದಂತೆ ಅನುಸರಿಸಲು ಕಲ್ಯಾಣ ವೇದಿಕೆಯಾಯಿತು. ಅಷ್ಟೇ ಅಲ್ಲ ಈ ಸಮಾನತೆಯ ತತ್ವವನ್ನು ಇಡೀ ಸಮಾಜಕ್ಕೆ ಸಾರುವ ವೇದಿಕೆಯೂ ಆಯಿತು. ಇಂಥ ಪ್ರವಾಹದಲ್ಲಿ ಬಂದ ಕೆಳವರ್ಗದ ವಚನಕಾರರಲ್ಲಿ ನಮ್ಮ ಹಡಪದ ಅಪ್ಪಣ್ಣ ಒಬ್ಬರು. 
ಹಡಪದ ’ಅಪ್ಪಣ್ಣನವರದು ತಾಂಬೂಲ ಕರಂಡ ಕಾಯಕದವನಾಗಿದ್ದ. "ಹಡಪ" ಎಂದರೆ ತಾಂಬೂಲದ ಚೀಲ. ಇನ್ನೂಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕದ ಚೀಲ. ವೀರಶೈವರಲ್ಲಿರುವ ಹಡಪದ ಕಾಯಕದವರಂತೂ ತಾವು ಅಪ್ಪಣ್ಣನವರ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಅವನ ವೃತ್ತಿ ಕ್ಷೌರಮಾಡುವುದು ಎಂಬುದಕ್ಕೆ ಆತನ ವಚನಗಳಲ್ಲಿ ಆಧಾರವಿಲ್ಲ. ಹಾಗಾಗಿ ಈತ ತಾಂಬೂಲ ಪಿಕದಾನಿ ಹಿಡಿಯುವ ವೃತ್ತಿಯವನಾಗಿದ್ದ ಎಂಬುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಕಲ್ಯಾಣ ಪಟ್ಟಣದಲ್ಲಿ ಬಸವಾದಿ ಪ್ರಮಥರ ಜೊತೆಯಲ್ಲಿದ್ದ ಹಡಪದ ಅಪ್ಪಣ್ಣ ಬಸವಣ್ಣನವರಿಗೆ ಅಪ್ತನಾಗಿದ್ದನು. ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಹತ್ತಿರದವನಾಗಿದ್ದವನು. ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಈತನ ಹೆಂಡತಿ. ಚೆನ್ನಬಸವೇಶ್ವರ ಈತನ ಗುರು. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾನೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಿಯೇ ಬಸವಣ್ಣನವರು ಐಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರೂ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.’(ವಿಕಿಪೀಡಿಯಾ, ವಚನ ಸಂಚಯ ಅಂತರ್ಜಾಲ ತಾಣಗಳಿಂದ) 
ಹಡಪದ ಅಪ್ಪಣ್ಣ ಅವರು ’ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಅಂಕಿತದಲ್ಲಿ ೨೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಹೆಚ್ಚು ವಚನಗಳು ಷಟ್-ಸ್ಥಲ ತತ್ವ ನಿರೂಪಣೆಗೆ ಮೀಸಲಾಗಿವೆ . ಕೆಲವು ವಿಶಿಷ್ಟ ಕಥನ ಶೈಲಿಯ ಮಾದರಿಯನ್ನು ಅನುಸರಿಸಿದರೆ ಮತ್ತೆ ಕೆಲವು ಬೆಡಗಿನ ವಚನಗಳಾಗಿವೆ. ಒಟ್ಟಾರೆ ಈತನ ವಚನಗಳು ಗ್ರಹಿಸಲು ಹೆಚ್ಚು ಸುಲಭವಾಗಿವೆ.
ಶರಣರ ತತ್ವಗಳಲ್ಲಿ ಕಾಯಕದ ತತ್ವದ ಪರಿಕಲ್ಪನೆ ತುಂಬಾ ಮುಖ್ಯವಾದುದು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಕಾಯಕ ಮಾಡದೆ ಉಣ್ಣುವುದು ಅಪರಾಧ ಎಂಬುದು ಇವರ ಭಾವನೆ. ಹಾಗಾಗಿಯೇ ಎಲ್ಲಾ ವಚನಕಾರರಲ್ಲೂ ಕಾಯಕ ನಿಷ್ಠೆಯಿದೆ. ಕಾಯಕದ ಬಗ್ಗೆ ಹಡಪದ ಹಪ್ಪಣ್ಣ ಹೇಳಿದ ಒಂದು ವಚನ ಇಲ್ಲಿ ಗಮನಾರ್ಹ.
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು,
ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು.
ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು.
ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು.
ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು.
ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು.
ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು.
ಇದನರಿದು, ಇವೆಲ್ಲವನು ಕಳೆದು,
ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು,
ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ,
ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು.

ಅನ್ನ, ಹೊನ್ನು, ಹೆಣ್ಣು, ಹಾಲು, ಹೂ ಹಣ್ಣು, ತರಗೆಲೆ ಇವುಗಳಲ್ಲ ಯಾವುದನ್ನು ನೇರವಾಗಿ ತೆಗದುಕೊಂಡರು ಅದು ಇನ್ನೊಂದರ ಹಂಗಾಗಿರುತ್ತದೆ. ಹಾಗಾಗಿ ತನ್ನ ತಾಂಬೂಲದ ಕೆಲಸ ಮಾಡಿ ಲಿಂಗಜಂಗಮರು ನೀಡಿದ ಪ್ರಸಾದವನ್ನು ತಿಂದರೆ ನನ್ನ ಹುಟ್ಟು ಸಾರ್ಥಕವಾಗಿ ಮುಕ್ತಿ ದಕ್ಕುತ್ತದೆ ಎಂಬ ಮುಕ್ತಭಾವನೆಯನ್ನು ಇಲ್ಲಿ ವ್ಯಕ್ತಮಾಡಿದ್ದಾರೆ. ನಿಜ ಶ್ರಮದಿಂದ ಏನನ್ನೂ ಮಾಡದೆ ಎಲ್ಲವೂ ಬೇಕೆನ್ನುವ ಪ್ರಸ್ತುತ ಸಮಾಜಕ್ಕೆ ಅಪ್ಪಣ್ಣನ ಈ ಮಾತು ಖಂಡಿತಾ ಮಾರ್ಗದರ್ಶಿ. ತನ್ನ ಕೆಸವನ್ನು ತಾ ಮಾಡಿ ಯಾವುದೇ ಹಂಗಿಲ್ಲದ ಬದುಕನ್ನು ಬದುಕುವ ಅನಿವಾರ್ಯತೆ ಇಂದಿನ ಸಮಾಜಕ್ಕೆ ಇರುವುದರಿಂದ ಇಂಥ ವಿಚಾರಗಳು ಬೆಳಕಾಗಬೇಕಿದೆ. 
ಪ್ರಸ್ತುತ ಸಮಾಜದಲ್ಲಿ ಮನುಷ್ಯ ವಿವೇಕರಹಿತ ನಡೆಯನ್ನು ನಡೆಯುತ್ತಿದ್ದಾನೆ. ಪ್ರಕೃತಿಯ ಚರಾಚರವು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿ ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಯಾವುದೇ ಒಂದು ಕೆಲಸವನ್ನು ನಾನು ಮಾಡಿದೆ ಎಂಬ ವೈಯುಕ್ತಿಕ ದುರಹಂಕಾರದ ನೆಲೆಯಲ್ಲಿ ಭಾವಿಸುತ್ತಿದ್ದಾನೆ. ಇನ್ನೊಬ್ಬರಿಗೆ ಏನನ್ನಾರೂ ಕೊಟ್ಟರೆ ಅದನ್ನು ನಾನು ಕೊಟ್ಟೆ ಎಂದು ಕೊಳ್ಳುತ್ತಾನೆ. ಇಂಥ ಸಮಾಜದ ಎದುರಿಗೆ ಅಪ್ಪಣ್ಣ ಇಟ್ಟ ಪ್ರಶ್ನೆ ಇದು 
ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಈ ವಚನದಲ್ಲಿ ಪ್ರಧಾನವಾಗಿ ಅನ್ನ, ಹೊನ್ನು, ಮಣ್ಣು ಮತ್ತು ಹೆಣ್ಣುಗಳನ್ನು ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂಬ ಅರ್ಥವಿಲ್ಲದ ಮಾತನ್ನು ಪ್ರಶ್ನಿಸಲಾಗಿದೆ. ಆರ್ಘ್ಯ ಕೊಡುವ ಬ್ರಾಹ್ಮಣನೊಬ್ಬ ನದಿಯ ನೀರು ತನ್ನ ಬೊಗಸೆಗೆ ಬಂದಾಕ್ಷಣ ತನ್ನದೆಂದು ಭಾವಿಸಿ ಇದರಿಂದ ನನಗೆ ಪುಣ್ಯ ಉಂಟಾಗುತ್ತದೆ ಎಂದು ಭಾವಿಸುವುದು ಎಷ್ಟು ತಮಾಷೆ ಎಂಬುದರ ಬಗ್ಗೆ ನಮ್ಮ ಗಮನಸೆಳೆಯುತ್ತದೆ. ಇಲ್ಲಿ ಇರುವ ಮುಖ್ಯವಾದ ಪ್ರಶ್ನೆಯೆಂದರೆ ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ಅವರೇ ಸೃಷ್ಟಿಸಿದರೆ? ಇಂಥ ಸುಲುಭ ವಿಚಾರವನ್ನು ಅರಿಯದೇ ವರ್ತಿಸುವ ಜನರ ಬಗ್ಗೆ ಏನು ಹೇಳಲಿ? ಇದನ್ನು ತಿಳಿಯದೇ ಇರುವ ವ್ಯಕ್ತಿಗಳು ಈ ರೀತಿಯ ಯಾವ ದಾನ, ಸೇವೆಗಳಿಂದ ಯಾವುದೇ ಫಲವಿಲ್ಲ ಎಂಬುದು ಇಲ್ಲಿಯ ಆಶಯ.
ವಚನಕಾರರಲ್ಲಿ ಕಂಡು ಬರುವ ಮತ್ತೊಂದು ಮೌಲ್ಯ ಭಕ್ತಿ ಮತ್ತು ಭಕ್ತನಿಗೆ ಸಂಬಂಧಿಸಿದ್ದು. ಇವರಲ್ಲಿ ಭಕ್ತಿಯೆಂಬು ತೋರುಂಬ ಲಾಭವಲ್ಲ. ಹಾಗೆಯೇ ಭಕ್ತನಾಗುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಂಥದ್ದರಲ್ಲಿ ಭಕ್ತಿಯ ಹೆಸರೇಳಿ ಬದುಕುವ ವ್ಯಕ್ತಿಗಳಿಗೇನು ಕಡಿಮೆ ಇರಲಿಲ್ಲ. ಹಾಗಾಗಿಯೇ ಬಹುತೇಕ ವಚನಕಾರರು ಭಕ್ತಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.   ಈ ಬಗ್ಗೆ ಹಡಪದ ಅಪ್ಪಣ್ಣ  ಹೇಳಿರುವ ಕೆಲವು ಮಾತುಗಳನ್ನು ಇಲ್ಲಿ ಗಮನಿಸುವುದು ಸೂಕ್ತ
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ 

 ಈ ವಚನದಲ್ಲಿ ಶರಣರು ಮಾಡುವ ಭಕ್ತಿ ಜೀವನ ಮುಖವಾಡವಿಲ್ಲದ  ನೈಜವಾದುದು ಎಂಬುದನ್ನು ಹೇಳುವುದರ ಮೂಲಕ ಆದರ್ಶ ಶರಣತ್ವದ ಸ್ಥಿತಿಯನ್ನು ಹೇಳಲಾಗಿದೆ. ಆದರೆ ಎಲ್ಲಾ ಶರಣರು ತಮ್ಮ ಭಕ್ತಿಯನ್ನು ಹೀಗೆ ಮಾಡುವುದಿಲ್ಲ ಎಂಬುದನ್ನು ಆ ಮೂಲಕ ಶರಣರ ನಾಟಕೀಯತೆಯನ್ನು ವಿಡಂಭಿಸಿರುವುದು ಇದೆ. ಇದಕ್ಕೆ ಈ ಮುಂದಿನ ಎರಡು ವಚನಗಳನ್ನು ನೋಡಬಹುದು. 
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ . 

ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ. 
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ, 
ಲಿಂಗ ಜಂಗಮಕ್ಕೆ ದೂರ, 
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.

ಮೇಲಿನ ವಚನಗಳಲ್ಲಿ ತೋರಿಕೆಯ ಭಕ್ತಿ ಮಾಡುವ ಶರಣರ ಡಾಂಭಿಕತೆಯನ್ನು ವಿಡಂಭಿಸಿರುವುದನ್ನು ನೋಡಬಹುದು. ಭಕ್ತಿಯನ್ನು ಲಾಭದ ಆಸೆಗೆ ಮೋಸದ ಕ್ರಿಯೆ ಎಂಬಂತೆ ಮಾಡುವವರಿದ್ದಾರೆ. ಹಾಗೆ ಮಾಡಿದರೆ ಅದರಿಂದ ಯಾವ ಲಾಭವೂ ಆಗಲಾರದು ಎಂಬುದು ಇಲ್ಲಿನ ಮುಖ್ಯ ಸಂದೇಶವಾಗಿದೆ. ಇಲ್ಲಿನ ಭಕ್ತಿಯನ್ನು ಸನ್ಮಾರ್ಗದ ಬದುಕಿನ ಕ್ರಮವೆಂದು ಭಾವಿಸಿದರೆ ಅದರಿಂದ ಸಿಗುವ ಮುಕ್ತಿ ಉತ್ತಮ ಜೀವನದ ಸ್ಥಿತಿ ಎಂಬುದನ್ನು ಸೂಚಿಸುತ್ತದೆ. ಇಂಥ ವಿಶಾಲ ನೆಲೆಯಲ್ಲಿ ವಚನಗಳನ್ನು ಓದಿದರೆ ವಚನ ಸಾಹಿತ್ಯವು ಕೇವಲ ಭಕ್ತಿಯ ಭಾವನೆಗಳಷ್ಟೇ ಆಗದೆ ಉತ್ತಮ ಜೀವನದ ಮೌಲ್ಯಗಳಾಗಿ ಕಾಣಿಸುತ್ತವೆ. ಈ ಅಗತ್ಯ ನಮ್ಮ ಸಮಕಾಲೀನ ಸಮಾಜಕ್ಕಿದೆ.

ಡಾ. ಎಸ್.ಎಂ. ಮುತ್ತಯ್ಯ, 
ಮಂಟೇಸ್ವಾಮಿಯ ಕಾಲಜ್ಞಾನ

ಕರ್ನಾಟಕದ ಬಹುಮುಖ್ಯ ಸಾಂಸ್ಕೃತಿಕ ಪರಂಪರೆಗಳಲ್ಲಿ ಮಂಟೇಸ್ವಾಮಿ ಪರಂಪರೆಯೂ ಒಂದು. ಮಂಟೇಸ್ವಾಮಿ  ಹದಿನೈದನೇ ಶತಮಾನದಲ್ಲಿ ಬದುಕಿದ್ದನೆಂದು ಹೇಳಲಾಗುವ ಒಬ್ಬ ಚಾರಿತ್ರಿಕ ವ್ಯಕ್ತಿ. ಅಲ್ಲಿಂದ ಮುಂದೆ ಈ ಸಾಂಸ್ಕೃತಿಕ ವೀರ ಎಷ್ಟು ದೈವೀಕರಣಗೊಂಡಿದ್ದಾನೆ ಎಂದರೆ ಈತನ ಕಾಲಮಾನವನ್ನು ತಿಳಿಸಲು ಈ ಪರಂಪರೆಯ ನೀಲಗಾರರು ಹಾಡುವ ಮೌಖಿಕ ರಚನೆಗಳು ಹಾಗೂ ಪರಂಪರೆಯ ಆಚರಣೆಗಳನ್ನು ಬಿಟ್ಟರೆ ಬೇರೆ ಯಾವುದೇ ಆಕರಗಳು ಇಲ್ಲ. ಹಾಗಾಗಿಯೇ ೧೨ ನೇ ಶತಮಾನದಿಂದ ೧೭ ನೇ ಶತಮಾನದ ಮಧ್ಯೆ ಈತನ ಕಾಲಮಾನ ಓಡಾಡುತ್ತಿದೆ. ಈ ಕಾಲದ ಅಂಗು ಈಗ ನಮಗೆ ಮುಖ್ಯವಾಗುವುದಿಲ್ಲ. ಏಕೆಂದರೆ ಮಂಟೇಸ್ವಾಮಿಯ ಬದುಕಿನ ಹೋರಾಟ ನಮ್ಮ ಭೂತ-ವರ್ತಮಾನ-ಭವಿಷತ್ತನ್ನು ಒಟ್ಟಾಗಿಯೇ ಒಳಗೊಂಡಿದೆ. 
ಮಂಟೇಸ್ವಾಮಿಯ ಜೀವನ ಆರಂಭವಾಗುವುದೇ ಶೂನ್ಯದಿಂದ. ಭೂಮಿ ಹುಟ್ಟುವ ಮೊದಲೇ ಮಂಟೇಸ್ವಾಮಿ ಹುಟ್ಟಿದ ಎಂಬುದು ಈ ಪರಂಪರೆಯ ತಿಳುವಳಿಕೆ. ಹಾಗಾಗಿಯೇ ಈತನನ್ನು ’ಧರೆಗೆದೊಡ್ಡವರು’ ಎಂದು ಆರ್ಥಪೂರ್ಣವಾದ ಹೆಸರಿನಿಂದ ಕರೆಯಲಾಗಿದೆ. ಮಂಟೇಸ್ವಾಮಿಯೇ ಈ ಭೂಮಿ-ಆಕಾಶ, ಸೂರ್ಯ- ಚಂದ್ರ, ಬ್ರಹ್ಮ-ವಿಷ್ಣು-ಮಹೇಶ್ವರರನ್ನು, ಮನುಷ್ಯ-ಪ್ರಾಣಿ ಮೊದಲಾದ ಸಕಲ ಜೀವಕೋಟಿಯನ್ನು ಸೃಷ್ಟಿಸುತ್ತಾನೆ. ಇದು ಮಂಟೇಸ್ವಾಮಿಯ ಜೀವನದ ಪೌರಾಣಿಕ ಮಜಲು
ಮಂಟೇಸ್ವಾಮಿಯ ಜೀವನದ  ಐತಿಹಾಸಿಕ ಮಜಲು ಶುರುವಾಗುವುದು ಉತ್ತರ ದೇಶದ ಕಲ್ಯಾಣವನ್ನು ಎದುರುಗೊಳ್ಳುವುದರ ಮೂಲಕ. ಧರೆಗೆದೊಡ್ಡವನೆನಸಿದ ಈತ ೧೨ನೇ ಶತಮಾನದ ಶರಣ ಚಳವಳಿಯನ್ನು ಮುಖಾಮಖಿ ಯಾಗುವುದು ಒಂದು ವಿಚಿತ್ರ ಎನಿಸಿದರು ಈ ಸೃಷ್ಟಿಯ ಹಿಂದೆ ಆ ಪರಂಪರೆಯ ವಾರಸುದಾರರ ನವ ಸಮಾಜ ನಿರ್ಮಾಣದ ಆಶಯಗಳಿವೆ. ಹಾಗಾಗಿಯೇ ಒಂದು ಕಾಲಕ್ಕೆ ಅತ್ಯಂತ ಮಹತ್ವದ್ದಾಗಿದ್ದ ಶರಣ ಚಳವಳಿಯ ನೆಲದಿಂದಲೆ ಮಂಟೆಸ್ವಾಮಿಯ ಪಯಣ ಶುರುವಾಗುತ್ತದೆ.  ತನ್ನ ಸೃಷ್ಟಿ ಕಾರ್ಯ ಮುಗಿಸಿದ ಮಂಟೇಸ್ವಾಮಿ ನೇರವಾಗಿ ಕಲ್ಯಾಣದ ದೃಢವ ಪರಿಕ್ಷಿಸಲು ಹೊರಡುತ್ತಾನೆ. ಅಲ್ಲಿದ್ದ ಶರಣರ ಡಾಂಭಿಕತೆಯನ್ನು ಬಸವಣ್ಣನ ಗಮನಕ್ಕೆ ತರುವುದರ ಮೂಲಕ ಕಲ್ಯಾಣದ ಹುಳುಕುಗಳ ದರ್ಶನ ಮಾಡಿಸುತ್ತಾನೆ. ಅಲ್ಲಿಂದ ರಾಚಪ್ಪಯ್ಯನೆಂಬ ಭಕ್ತನನ್ನು ತನ್ನ ಜೊತೆ ಕರೆದುಕೊಂಡು ಹೊರಡುತ್ತಾನೆ. ಅಲ್ಲಿಂದ ಕೊಡೆಗಲ್ಲಿಗೆ ಬಂದು, ಅಲ್ಲಿಂದ ವಿಜಯನಗರ ಪಟ್ಟಣಕ್ಕೆ ಬಂದು ಅಲ್ಲಿದ್ದ ಗಾರಡಿಗರನ್ನು ಗೆದ್ದು ಅವರನ್ನು ಒಕ್ಕಲುಗಳನ್ನಾಗಿ ಮಾಡಿಕೊಂಡು ಮುಂದೆ ಕಾಗಿನೆಲೆಗೆ ಬಂದು ಅಲ್ಲಿ ದೊಡ್ಡಮ್ಮತಾಯಿಯನ್ನು ಶಿಶುಮಗಳಾಗಿ ಪಡೆದುಕೊಂಡು ನಂತರ ಸಖರಾಯ ಪಟ್ಟಣಕ್ಕೆ ಬಂದು ಅಲ್ಲಿಂದ ಬಸವರಾಜೇಂದ್ರ ಮತ್ತು ವೀರಭದ್ರಸ್ವಾಮಿಗಳನ್ನು ಶೀಶು ಮಕ್ಕಳಾಗಿ ಪಡೆಯುತ್ತಾರೆ. ತದನಂತರ ಚನ್ನಪಟ್ಟಣದ ಹೊನ್ನಾಯ್ಕನಹಳ್ಳಿಯ ಮುದ್ದಮ್ಮನಿಂದ ಧರೆಗೆದೊಡ್ಡವರು ಎಂಬ ನಾಮಕರಣ ಪಡೆದು ಬೊಪ್ಪಗೌಡನಪುರಕ್ಕೆ ಬಂದು ಕಾಂಕನಹಳ್ಳಿಯ ಮಡಿವಾಳ ಮಾಚಯ್ಯನ ಉಬ್ಬೇ ಒಲೆಯನ್ನು ಗದ್ದುಗೆಯಾಗಿ ಅವನು ಕತ್ತೆ ಕಟ್ಟೋ ಜಾಗವನ್ನು ಚಂದ್ರಶಾಲೆಯನ್ನಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ ಬಂದು ನಿಡುಗಟ್ಟದ ಆಚಾರಿಗಳ ಮನೆಯ ಅದೃಷ್ಟದ ಮಗ ಕೆಂಪಣ್ಣನನ್ನು ಶಿಶುಮಗನಾಗಿ ಪಡೆಯುತ್ತಾನೆ. ಹಲಗೂರು ದೊರೆಗಳ ದರ್ಪವನ್ನು ಮುರಿದು ಅವರನ್ನು ತನ್ನ ಒಕ್ಕಲಾಗಿಸಿಕೊಂಡು , ಇಲ್ಲೆಲ್ಲ ತನ್ನ ಗದ್ದುಗೆಗಳನ್ನು ಸ್ಥಾಪಿಸಿ ಅವುಗಳನ್ನು ತನ್ನ ಶಿಷ್ಯರಿಗೆ ಒಪ್ಪಿಸಿ ತಾನು ಪಾತಾಳ ಲೋಕಕ್ಕೆ ತೆರಳುವುದಾಗಿ ನಿರ್ದರಿಸುತ್ತಾನೆ.  
ಹೀಗೆ ತನ್ನ ಸಮ ಸಮಾಜದ ನಿರ್ಮಾಣಕ್ಕೆ ಬೇಕಿರುವ ಶಿಷ್ಯರನ್ನು ಪಡೆದು ಬಂದ ಮಂಟೇಸ್ವಾಮಿ ತನ್ನ ಎಲ್ಲಾ ಶಿಷ್ಯರನ್ನು ಮುಂದೆ ಕೂರಿಸಿಕೊಂಡು ಕಾಲಜ್ಞಾನದ ಪುಸ್ತಕವನ್ನು ನೋಡಿ ಮುಂದೆ ಬರಲಿರುವ ಕಲಿಗಾಲದ ವೈಚಿತ್ರ್ಯಗಳನ್ನು ವಿವರಿಸುತ್ತಾನೆ. ಮಂಟೇಸ್ವಾಮಿ ತನ್ನ ಶಿಷ್ಯಂದಿರನ್ನೆಲ್ಲ ಕರೆಸಿ ಕಲಿ ಬಗ್ಗೆ  ಹೇಳುವ ಸಂದರ್ಭದಲ್ಲಿ, ನಾನು ಹಿಂದೆ ಹೋದ ಕಲಿಯ ಬಗ್ಗೆ ಹೇಳಬೇಕಾ ಇಲ್ಲ ಬರುವ ಕಲಿ ಬಗ್ಗೆ ಹೇಳಬೇಕಾ? ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. ಅದಕ್ಕೆ ದೊಡ್ಡಮ್ಮ ಮುಂದೆ ಬರುವ ಕಲಿಯ ಬಗ್ಗೆ ಹೇಳುವಂತೆ ಕೇಳುತ್ತಾಳೆ. ಆಗ ಮಂಟೇಸ್ವಾಮಿ ಈ ಕಲಿಯಿಂದ ನಿಮಗೇನು ಪ್ರಯೋಜನ? ಎಂದು ಕೇಳಿದಾಗ ದೊಡ್ಡಮ್ಮ ತಾಯಿ ಹೀಗೆ ಉತ್ತರಿಸುತ್ತಾಳೆ- 
’ನಾಳೆ ದಿವಸ ನಮ್ಮ ಹೊಟ್ಟೇಲಿ ಮಕ್ಕಳು ಹುಟ್ತವೆ |
 ಹುಟ್ಟದಂಥ ಮಕ್ಕಳಿಗೆ ಏನಂಥ ಹೇಳ್ತಿನಿ ಅಂದರೆ | 
 ಇಂತಿಂಥ ಕಲಿಗಾಲ ಬರ‍್ತದೆ ಕಣ್ರಪ್ಪ ಮಕ್ಕಳೆ | 
 ಅರಿತು ಬಾಳಿ ಆಂತ ಹೇಳಿ | 
 ಹುಟ್ಟಿದ ಮಕ್ಕಳಿಗೆ ಬುದ್ಧಿ ಹೇಳ್ಕೊಂಡು ಬಾಳಿ ಬದುಕ್ತೀವಿ ಸ್ವಾಮಿ | (ಮ.ಕಾ.ಪು: ೫೫೭-೫೫೮) 
ಆಗ ಮಂಟೇಸ್ವಾಮಿ ತನ್ನ ಕಾಲ ಜ್ಞಾನ ಹೇಳಲು ಮುಂದಾಗುತ್ತಾರೆ. ಅವರು ಹೇಳಿದ ಕಲಿಗಾಲದ ಲಕ್ಷಣಗಳು ಈ ಮುಂದಿನಂತಿವೆ : ಭೂಮಿ ನಡುಗುತ್ತದೆ. ಬಾಲಚುಕ್ಕಿ ಮೂಡುತ್ತದೆ. ಕೊತ್ತಿ ಕೊಂಬೂಡುತ್ತದೆ .ಅಟ್ಟದ ಮೇಲಿರುವ ಕಬ್ಬಿಣ ನುಚ್ಚಾಗಿ ಉದುರುತ್ತದೆ. ಗುರುಗಳ ಮದ್ಯೆ ಗುದ್ದಾಟ ಬರುತ್ತೆ. ಅನ್ಯಾಯ ಹೆಚ್ಚುತ್ತದೆ. ಅಮ್ಮ ಎನ್ನುವ ಕಂದ ಇಲ್ಲದಂತಾಗುತ್ತದೆ. ಕಾವಿ ಹೊದ್ದವರೆಲ್ಲ ಕಳ್ಳರಾಗಿ ತಿರುಗುತ್ತಾರೆ. ದಾಸಯ್ಯರೆಲ್ಲ ದೇಸಾಂತರ ಹೋಗಬೇಕು. ಜೋಗಯ್ಯ ಗೊವಯ್ಯರೆಲ್ಲ ಗೋಳಾಡಿ ಸಾಯುತ್ತಾರೆ. ಊರು ಕಾಡಾಗುತ್ತದೆ. ಕಾಡು ನಾಡು ಆಗುತ್ತದೆ. ಧರ್ಮ ಕಾಡು ಸೇರುತ್ತದೆ. ಆಡುವ ಮಕ್ಕಳ ಮಾತು ಮುಂದೆ, ಬಿಲತವರ ಮಾತು ಹಿಂದೆ ಆಗುತ್ತದೆ. ಅತ್ತೆ ಸೊಸೆ ಸೊಸೆ ಅತ್ತೆ ಆಗುತ್ತಾರೆ. ಅರಸ ಆಳಾಗುತ್ತಾನೆ, ಆಳು ಅರಸನಾಗುತ್ತಾನೆ. ಹಾಳೆಯಲ್ಲಿ ಉಣ್ಣುವವರು ಹರಿವಾಣಕ್ಕೆ, ಹರಿವಾಣದಲ್ಲಿ ಉಣ್ಣುವವರು ಹಾಳೆಗೆ ಬರುತ್ತಾರೆ. ರಾಜರಿಗೆಲ್ಲ ಗೋಳಾಟ ಬರುತ್ತದೆ, ಬಡಿದಾಟ ಮಾಡುತ್ತಾರೆ. ಮೈಸೂರು ರಾಜ ರೈತನಾಗಿ ತಿರುಗುತ್ತಾನೆ. ಅಟ್ಟ,ಬೆಟ್ಟಗುಡ್ಡಾ ಎಲ್ಲಾ ಹೊಲ ಆಯ್ತದೆ. ಉಣ್ಣುವಂತ ಅನ್ನವನ್ನು ತಕ್ಕಡಿಯಲ್ಲಿ ತೂಗುವಂಥಾಗುತ್ತದೆ. ಉಡುವ ಬಟ್ಟೆಗಳನ್ನು ತಕ್ಕಡಿಯಲ್ಲಿ ತೂಗುವಂತಾಗುತ್ತದೆ. ಮುಂದೆ ಹುಟ್ಟು ಮಕ್ಕಳಿಗೆ ಅನ್ನ ಇಲ್ಲದಂತಾಗುತ್ತದೆ. ಗರತಿ ಗೌಡತಿಯಾಗಿ, ಗೌಡತಿ ಗರತಿಯಾಗುತ್ತಾರೆ. ಮಾತು ಕಲಿತ ಜನ ಹೊಟ್ಟ ತುಂಬಾ ಉಣ್ಣುತ್ತಾರೆ. ನಾಳೆ ದೇವರಿಲ್ಲ ಎನ್ನುತ್ತಾರೆ. ಗಂಡು ಸಂತಾನ ಕಡಿಮೆಯಾಗಿ ಎಣ್ಣು ಸಂತಾನ ಹೆಚ್ಚಾಗಿ ಹಣ್ಣಿಗೆ ಗಂಡು ಇಲ್ಲದಂತಾಗುತ್ತದೆ. ಏಳು ವರ್ಷದ ಮಗಳು ಋತುಮತಿಯಾಗುತ್ತಾಳೆ. ಏಳು ವರ್ಷದ ಮಗಳು ಜೋಡು ತೊಟ್ಲು ಕಟ್ಟುತ್ತಾಳೆ. ಜಗಮರ ಮಠದಲ್ಲಿ ಜೋಡು ತೊಟ್ಟಿಲು ಕಟ್ಟುತ್ತಾಳೆ. ಎತ್ತಿನ ಬೆಲೆಗೆ ಎಮ್ಮೆ ಮಾರಬೇಕು. ಟಗರಿನ ಬೆಲೆಗೆ ಕೋಳಿ ಮಾರಬೇಕು. ಕೋಳಿ ಬೆಲೆಗೆ ಕೊತ್ತಿಯ ಮಾರಬೇಕು. ಹುಟ್ಟಿದ ಹೆಣ್ನು ಮಕ್ಕಳನ್ನು ಸಂತೆಯಲ್ಲಿ ಮಾರಬೇಕು. ದಲ್ಲಾಳಿಗೆ ಲಾಭ ಗಂಟಿನವನಿಗೆ ಮೂರು ನಾಮ. ಭೂಮಿಗೆ ಬೆಂಕಿ ಮಳೆ ಬೀಳುತ್ತದೆ.(ವಿವರಗಳಿಗೆ ನೋಡಿ : ಹಿ.ಚಿ. ಬೋರಲಿಂಗಯ್ಯ ನವರು ಸಂಪಾದಿಸಿ ಪ್ರಕಟಿಸಿರುವ ಮಂಟೇಸ್ವಾಮಿ ಕಾವ್ಯದ ಕಲಿಪುರುಷನ ಸಾಲು ಪುಟ : ೫೫೩-೫೭೬) ಕಲಿಗಾಲದ ಇಂಥ ವಿಚಿತ್ರ ಕಾಲದಲ್ಲಿ ನಾನು ಈ ಭೂಮಿ ಮೇಲೆ ಬದುಕಲಾರೆ. ಕಲಿ ಬರುವುದರ ಒಳಗೆ ನಾನು ಪಾತಾಳಲೋಕಕ್ಕೆ ಹೋಗಬೇಕೆಂದು ತನ್ನ ನಿರ್ದಾರವನ್ನು ಪ್ರಕಟಿಸುತ್ತಾರೆ. 
ಕಾಲ ಕಳೆದಂತೆ ಕಲಿ ಬಂದು ಬಿಡುತ್ತಾನೆ. ಆ ಕಲಿಮನುಷ್ಯನ ಸ್ವರೂಪವಾದರೂ ಎಂಥದ್ದು? ಕಲಿ ಮನುಷ್ಯ ಮೊದಲ ಬಾರಿಗೆ ಕಂಡದ್ದು ಮಂಟೇಸ್ವಾಮಿಗೆ. ಆಗ ಆತನ ರೂಪ ಹೀಗಿತ್ತು : ಕಲಿ ಮನುಷ್ಯ ತನ್ನ ಹೆಂಡತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು, ಬಲದಲ್ಲಿ ತನ್ನ ತಾಯಿಯನ್ನು ನಡೆಸಿಕೊಂಡು ಹೆಂಡತಿಯ ಚಪ್ಪಲಿಯನ್ನು ತಲೆ ಮೇಲೆ ಹೊರಿಕೊಂಡು, ತಾನು ಮೆಡುವ ಚಪ್ಪಲಿಯನ್ನು ಆಕೆಯ ಮಡಿಲಲ್ಲಿ ಕಟ್ಟಿಸಿಕೊಂಡು ತಾವು ವೀಳ್ಯ ಹಾಕಿಕೊಂಡು ಉಗಿಯುವ ಪಿಕಿದಾನಿಯನ್ನು ಹಿಡಿಸಿಕೊಂಡು; ಎಡದಲ್ಲಿದ್ದ ತಂದೆಯ ತಲೆಯ ಮೇಲೆ ತಮ್ಮ ಮಲಗುವ ಮಂಚ, ಹಾಸಿಗೆ ಮತ್ತು ದಿಂಬುಗಳನ್ನು ಹೊರಿಸಿಕೊಂಡು ಬರುತ್ತಿರುವುದು ಕಾಣಿಸುತ್ತದೆ.(ಮಂಟೇಸ್ವಾಮಿಕಾವ್ಯ. ಪು:೫೫೯-೫೬೦) 
ಮಂಟೇಸ್ವಾಮಿ ಪರಂಪರೆಯಲ್ಲಿ ಕಾಲಜ್ಞಾನಕ್ಕೆ ತುಂಬಾ ಮಹತ್ವವಿದೆ. ಮಂಟೇಸ್ವಾಮಿಯು ತನ್ನ ಗುರುವಾದ ಕೊಡೆಕಲ್ಲ ಬಸವಣ್ಣನಿಂದ ಬೀಳ್ಕೊಂಡು ಉತ್ತರ ದೇಶದಿಂದ ಬರುವಾಗ ಕಾಲಗ್ನಾನ, ನೀಲಿಗ್ನಾನ, ಖಂಡಗ್ನಾನ ತಂದನು ಎಂಬ ಉಲ್ಲೇಖ ಮಳವಳ್ಳಿ ಪಠ್ಯದಲ್ಲಿದೆ( ಮಂಟೇಸ್ವಾಮಿ ಕಾವ್ಯ ಸಾಂಸ್ಕೃತಿಕ ಮುಖಾ ಮುಖಿ, ಪುಟ : ೯೩) ಎಂಬ ಅಭಿಪ್ರಾಯಗಳು ಇವೆ ಹಾಗೆಯೇ ಮಂಟೇಸ್ವಾಮಿಯು ಸ್ವತಃ ಕಾಲಜ್ಞಾನದ ವಚನಗಳನ್ನು ರಚಿಸಿರುವುದರ ಕುರುಹುಗಳು ಸಿಗುತ್ತವೆ. ವಿ. ಶಿವಾನಂದ ವಿರಕ್ತಮಠ ಅವರು ಮಂಟೇಸ್ವಾಮಿಯ ಸ್ವರವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕೊಡೆಕಲ್ಲಿನಲ್ಲಿರುವ ಲಿಖಿತ ವಚನಗಳ ಕಟ್ಟಿಗೆ ’ದೊಡ್ಡವರ ವಚನ ತಾಲೂಕು’ ಎಂದು ಕರೆಯುತ್ತಾರೆ. ಇಲ್ಲಿ ಮಂಟೇಸ್ವಾಮಿ ಕಾಲಜ್ಞಾನ ವಚನಗಳು ಲಭ್ಯವಾಗಿವೆ. ಇವು ತತ್ವಪದಗಳ ಸ್ವರೂಪದಲ್ಲಿದ್ದರೂ ವಚನಗಳೆಂದೇ ಕರೆಯುತ್ತಾರೆ. (ಮಂಟೇಸ್ವಾಮಿ ಪರಂಪರೆ, ಪುಟ : ೧೩) ಇದೇನೆ ಇದ್ದರೂ  ಇನಕಲ್ ಮಹದೇವಯ್ಯನವರು ಹಾಡಿರುವ ಪಠ್ಯದಲ್ಲಿ ಮಂಟೇಸ್ವಾಮಿ ಈ ಲೋಕಕ್ಕೆ ಬರುವಾಗಲೆ ಕಾಲಜ್ಞಾನದ ಬುಕ್ಕನ್ನು ಆಭರಣದಂತೆ ಧರಿಸಿಯೇ ಬರುತ್ತಾನೆ. ಅಂದರೆ ಮಂಟೇಸ್ವಾಮಿಗೆ ಕಾಲಜ್ಞಾನವೂ ಕೂಡ ಒಂದು ಆಸ್ತಿ ಇದ್ದಂತೆ. ಹಾಗಾಗಿಯೇ ಅದನ್ನು ಯಾರಿಗೂ ಕೊಡಲು ಇಷ್ಟಪಡುವುದಿಲ್ಲ. ಇದಕ್ಕೆ ಎರಡು ಪ್ರಸಂಗಗಳನ್ನು ಉದಾಹರಿಸಬಹುದು : ಮಂಟೇಸ್ವಾಮಿ ತನ್ನ ಕಾಲಜ್ಞಾನವನ್ನು ತನ್ನ ದೈವ ಮಕ್ಕಳಾದ ತ್ರಿಮೂರ್ತಿಗಳಿಗೆ ಹೇಳಿಕೊಡುವ ಸಂದರ್ಭದಲ್ಲಿ  ಆ ಕಾಲಜ್ಞಾನದ ಹೊತ್ತಗೆಯನ್ನು ಮಕ್ಕಳಿಗೆ ಕೊಡೆದೆ ಬ್ರಹ್ಮನಿಗೆ ಅದನ್ನು ಇನ್ನೊಂದು ಪ್ರತಿಮಾಡಿಕೊಳ್ಳಲು ಹೇಳುತ್ತಾನೆ. ಬ್ರಹ್ಮ ಅದನ್ನು ತನ್ನ ಪುಸ್ತಕದಲ್ಲಿ ಬರೆದುಕೊಳ್ಳುತ್ತಾನೆ.(ಮಂಟೇಸ್ವಾಮಿಕಾವ್ಯ. ಪು:೭೩) ಹೀಗೆಯೇ ಇನ್ನೊಂದು ಸಂದರ್ಭದಲ್ಲಿ ಮಂಟೇಸ್ವಾಮಿ ತನ್ನ ಪಟ್ಟದ ಶಿಷ್ಯೆ ದೊಡ್ಡಮ್ಮತಾಯಿ ಮೊದಲಾದ ಶಿಷ್ಯರಿಗೂ ಈ ಕಾಲಜ್ಞಾನದ ಬಗ್ಗೆ ಹೇಳಿಕೊಡುವಾಗ ಕಾಲಜ್ಞಾನದ ಬುಕ್ಕನ್ನು ಕೊಡಲು ಒಪ್ಪುವುದಿಲ್ಲ. ನಾನು ಹೇಳುತ್ತೇನೆ. ನೀವು ಬರೆದುಕೊಳ್ಳಿ ಎಂದು ಹೇಳುತ್ತಾನೆ. (ಮಂಟೇಸ್ವಾಮಿಕಾವ್ಯ, ಪುಟ:೫೫೮) ಹಾಗಾದರೆ ಈ ಕಾಲಜ್ಞಾನಕ್ಕೆ ಇರುವ ಮಹತ್ವ ಎಂಥದ್ದು ? ಎಂಬುದಕ್ಕೆ ಮಂಟೇಸ್ವಾಮಿಯೇ ಒಂದು ಸಂದರ್ಭದಲ್ಲಿ ನೀಡುವ ಉತ್ತರ ಹೀಗಿದೆ : ತನ್ನ ಮಕ್ಕಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ನಾನು ವಿದ್ಯೆ ಕಲಿಸಬೇಕೆಂದು ಅವರಿಗೆ ಕಾಲಜ್ಞಾನವನ್ನು ಓದುವಂತೆ ಹೇಳುತ್ತಾರೆ. ಇದನ್ನು ವಿಷ್ಣು ಅದರ ಅವಶ್ಯಕತೆ ನನಗಿಲ್ಲ ಎಂದು ನಿರಾಕರಿಸುತ್ತಾನೆ. ಅದನ್ನು ಮಂಟೇಸ್ವಮಿಯೂ ಒಪ್ಪುತ್ತಾನೆ. ಆದರೂ ಕೊನೆಗೆ ವಿಷ್ಣು ಶಿವ ಇಬ್ಬರೂ ಕಾಲಜ್ಞಾನವನ್ನು ಓದುತ್ತಾರೆ. ನಂತರ ಮಂಟೇಸ್ವಾಮಿ ತನ್ನ ಕಾಲಜ್ಞಾನದ ಬಗ್ಗೆ ಹೀಗೆ ಹೇಳುತ್ತಾರೆ.
ಕಂದಾ ಕಾಲ ಕಳೆಯೋಗಂಟಾ |
 ನನ್ನ ಕಾಲ ಜ್ಞಾನದ ಬುಕ್ಕು | 
 ಬಾಳುತದೆ ನನ ಕಂದಾ| 
 ಈ ಕಾಲ ಜ್ಞಾನವ ನೀನು ತೆಪ್ಪಿ ಬಾಳಲುಬ್ಯಾಡ | (ಮಂಟೇಸ್ವಾಮಿಕಾವ್ಯ. ಪು:೪೧) 
  ಅಂದರೆ ಈ ಕಾಲಜ್ಞಾನ ಬಹಳ ಕಾಲ ಉಳಿಯುವಂತಹದ್ದು ಹಾಗು ಇದನ್ನು ತಪ್ಪಿ ನಡೆಯಬಾರದು ಎಂಬುದು ಇಲ್ಲಿನ ಸಂದೇಶ. ಮಂಟೇಸ್ವಾಮಿಯ ಈ ಆಶಯವನ್ನು ಇಂದಿಗೂ ಈ ಪಂಥದ ಒಕ್ಕಲು ಸಂಪ್ರದಾಯವಾಗಿ ಉಳಿಸಿಕೊಂಡು ಬಂದಿದ್ದಾರೆ. ಬೊಪ್ಪಗೌಡನ ಪುರದ ಮಂಟೇಸ್ವಾಮಿ ಗದ್ದುಗೆಯಲ್ಲಿ ಈಗಲೂ ಪೂಜೆಗೊಳ್ಳುವ ಕಾಲಜ್ಞಾನ ವಚನಗಳಿವೆ........ ಕಪ್ಪಡಿ ಜಾತ್ರೆಯ ಸಂದರ್ಭದಲ್ಲಿ ಈ ವಚನಗಳ ಕಟ್ಟನ್ನು ಪೂಜೆಮಾಡಿ ಬೊಪ್ಪಗೌಡನ ಪುರದಿಂದ ಕಪ್ಪಡಿಗೆ  ಕೊಂಡೊಯ್ದು, ಅಲ್ಲಿ ರಾಚಪ್ಪಾಜಿಯ ಗದ್ದುಗೆಯ ಮೇಲಿಟ್ಟು ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ಪ್ರತಿದಿನ ಪೂಜಿಸುತ್ತಾರೆ.(ಮಂಟೇಸ್ವಾಮಿ ಪರಂಪರೆ, ಪುಟ : ೧೧) 
ಒಟ್ಟಾರೆ ಹೇಳುವುದಾದರೆ ಮಂಟೇಸ್ವಾಮಿಯ ಕಾಲಜ್ಞಾನ ಮನುಷ್ಯನ ಬದುಕಿಗೆ ಮುಂದೆ ಒದಗಿ ಬರಲಿರುವ ಕೆಟ್ಟಕಾಲವನ್ನು ಹೇಳುತ್ತದೆ. ಈ ರೀತಿ ಹೇಳುವ ಮೂಲಕ ತನ್ನ ಪರಂಪರೆ ಆ ಕಾಲವನ್ನು ಸರಿಯಾದ ರೀತಿಯಲ್ಲಿ ಎದುರಿಸಿ ಸನ್ಮಾರ್ಗದಲ್ಲಿ ಬದುಕಲಿ ಎಂಬ ಆಶಯವಿದೆ. ನೀಲಗಾರರು ಹಾಡುವ ಕಲಿಭಾಗ ಆಧುನಿಕತೆ ಅಬ್ಬರಕ್ಕೆ ಸಿಕ್ಕಿ ಅಳಿದು ಹೋಗುತ್ತಿರುವ ಸಮುದಾಯ- ಸಂಸ್ಕೃತಿಗಳ ದುರಂತದ ಕಥನಗೀತೆಗಳಂತಿದೆ. ಅಧಿಕಾರ-ಜ್ಞಾನ -ಉತ್ಪಾದನೆಯಲ್ಲಿ ಉಂಟಾದ ಚಾರಿತ್ರಿಕ ದ್ರೋಹದ ಪರಿಣಾಮ ಕಲಿ. ಮಂಟೇಸ್ವಾಮಿಗಳು ಮೊದಲು ಇದನ್ನು ಗುರುತಿಸಿ ಪಾತಾಳ ಬಾವಿಯನ್ನು ತೋಡಿಸಿಕೊಂಡು ಕಣ್ಮರೆಯಾಗಿ ಹೋಗುತ್ತಾರೆ. ನಂತರ ಮಂಟೇಸ್ವಾಮಿಗಳ ಪ್ರತಿನಿಧಿಗಳಾದ ನೀಲಗಾರರು ತಮ್ಮ ಕಾಲದ ವಿವರಗಳನ್ನು ಇದಕ್ಕೆ ಸೇರಿಸಿಕೊಳ್ಳುತ್ತಾರೆ. ಆಧುನಿಕ ಹೆಸರಲ್ಲಿ ಹರಿದು ಬರುತ್ತಿರುವ ಹೊಸ ಆವಿಷ್ಕಾರಗಳು ಸಮುದಾಯದಲ್ಲಿ ತಾರತಮ್ಯವನ್ನು ಸೃಷ್ಟಿಸಿ ದಿಕ್ಕೆಡಿಸಿವೆ ಎಂದು ಹಾಡುತ್ತಾರೆ. ಆಧುನಿಕತೆಯಿಂದ ಉಂಟಾದ ಬರ್ಬರತೆಗಳನ್ನೆಲ್ಲಾ ಕಲಿಭಾಗದಲ್ಲಿ ಚಿತ್ರಿಸುತ್ತಾರೆ. ಕೈ ತಪ್ಪಿ ಹೋಗಿರುವ ಅಧಿಕಾರ, ಸಂಪತ್ತಿನ ಅಸಮಾನ ಹಂಚಿಕೆ , ಅವುಗಳಿಂದ ಉಂಟಾದ ಬೇಗಾಟಗಳನ್ನೆಲ್ಲ ಇದು ಪ್ರತಿನಿಧಿಸುತ್ತದೆ. ಮಂಟೇಸ್ವಾಮಿ ಸಿದ್ಧಪ್ಪಾಜಿಯವರ ಮುಂದುವರೆಕೆಯಾಗಿ ನೀಲಗಾರರು ಆಧುನಿಕ ಜಗತ್ತನ್ನು ಕಲಿಯ ಬಾಗದಲ್ಲಿ ಚಿತ್ರಿಸಿ ಅದರ ವಿರುದ್ಧ ತಮ್ಮ ಅಸಮಾಧಾನವನ್ನು ತೋರಿಸುತ್ತಾರೆ.(ಮಂಟೇಸ್ವಾಮಿ ಪರಂಪರೆ, ಪುಟ: ೯೫) ಕಲಿಗೆ ಒಳಿತು ಕೆಡಕಿನ ಲೆಕ್ಕವಿಲ್ಲ. ಎಲ್ಲವನ್ನು ತನ್ನೊಳಗೆ ಕೆಡಕಗಾಗಿಸಿಕೊಲ್ಳುವ ಶಕ್ತಿ ಇರುವಂಥದ್ದು. ಕಲಿಯೆಂದರೆ ಆಧುನಿಕ ಆವಿಷ್ಕಾರಗಳೇ ಆಗಿವೆ. ಆಧುನಿಕತೆಯನ್ನು ಬೆನ್ನು ಹತ್ತಿದ ಮನುಷ್ಯ ಅಂತಿಮವಾಗಿ ವಿನಾಶದತ್ತ ಸಾಗುತ್ತಿದ್ದಾನೆ. ಎಂಬುದನ್ನು ತಿಳಿಸುವುದೆ ಕಲಿ ಸಾರುವುದು. ಈ ಪಟ್ಟಿಯಲ್ಲಿ ತಂತ್ರಜ್ಞಾನ, ಅಣುಸಮರ, ಜಾಗತೀಕರಣ ಪ್ರಕ್ರಿಯೆಗಳನ್ನೆಲ್ಲ ಸೇರಿಸುತ್ತಾ ಹೋಗುತ್ತಾರೆ. ಇವು ಮನುಷ್ಯ ಕುಲದಲ್ಲಿ ಅಸಮಾನತೆಯನ್ನು ತುಂಬುವುದಷ್ಟೇ ಅಲ್ಲ. ಅಂತಿಮವಾಗಿ ವಿನಾಶವನ್ನು ತಂದುಕೊಳ್ಳುತ್ತವೆ. ಎಂದು ಮಂಟೇಸ್ವಾಮಿಗಳ ಪ್ರತಿನಿಧಿಗಳಾಗಿ ನೀಲಗಾರರು ಕಲಿ ಭಾಗಗದಲ್ಲಿ ಹಾಡುತ್ತಾರೆ. ಇದನ್ನು ಕಣ್ಣಿನಿಂದ ನೋಡಲಾಗದ ಮಂಟೇಸ್ವಾಮಿ ತಾವೆ ಮರೆತು ಲೋಕಕ್ಕೆ ಮರೆಯಾಗಿ ಹೋಗುವಲ್ಲಿ ಧರೆಗೆ ದೊಡ್ಡವರ ಕಥೆ ಮುಗಿಯುತ್ತದೆ.(ಮಂಟೇಸ್ವಾಮಿ ಪರಂಪರೆ, ಪುಟ : ೬೩)
ಕಲಿಮನುಷ್ಯನ ಪ್ರವೇಶದ ಹೊತ್ತಿಗೆ ನಾನು ಪಾತಾಳ ಲೋಕಕ್ಕೆ ಹೋಗಬೇಕೆಂದು ಕೊಂಡಿದ್ದ ಮಂಟೇಸ್ವಾಮಿಗೆ ದಿಢೀರನೆ ಕಲಿ ಕಾಣಿಸಿಕೊಳ್ಳುತ್ತಾನೆ. ಆಗ ಮಂಟೇಸ್ವಾಮಿ ಮಾಡುವ ಒಂದು ಮಹತ್ವದ ಸಾಂಕೇತಿಕವಾದ ಕಾರ್ಯವನ್ನು ಗಮನಿಸಬೇಕು. ಆ ಕಲಿ ಪುರುಷ ತನ್ನ ಹೆಂಡತಿಯನ್ನು ತಲೆಯ ಮೇಲೆ ಹೊತ್ತುಕೊಂಡು ತಂದೆ ತಾಯಿಯರನ್ನು ತಮ್ಮ ಸೇವಕರಂತೆ ಬಳಸಿಕೊಂಡು ಬರುತ್ತಿರುವಾಗ ಅವನ್ನನು ತಡೆದು  ಕಲಿಮನುಷ್ಯನನ್ನು ಪಾತಾಳಕ್ಕೆ ತುಳಿದು ನೀನು ಮುಂದೆ ಕಲಿಪುರುಷ ಶನಿದೇವರಾಗಿ ಬರಬೇಕೆಂಬುದು ಆದೇಶಿಸುತ್ತಾನೆ. ಮತ್ತು ಅವನ ತಂದೆ ತಾಯಂದಿರ ತಲೆಯ ಮೇಲೆ ಪಾದವಿಟ್ಟು ನಂತರ ಅವರನ್ನು ಸೂರ್ಯ ಚಂದ್ರರನ್ನಾಗಿ ಮಾಡುತ್ತಾನೆ. (ಮಂಟೇಸ್ವಾಮಿ ಕಾವ್ಯ, ಪುಟ: ೫೫೯-೫೬೧)
ಕಾಲಜ್ಞಾನವೆಂದರೆ ಮುಂದೆ ನಡೆಯುವುದನ್ನು ಹೇಳುವ ಒಂದು ಶಾಖೆ. ಇದನ್ನು ಆಧುನಿಕ ಸಂದರ್ಭದಲ್ಲಿ ಕಣಿಹೇಳುವುದು, ಭವಿಷ್ಯನುಡಿಯುವುದು, ಶಾಸ್ತ್ರಹೇಳುವುದು, ಜೋತಿಷ್ಯಹೇಳುವುದು ಎಂಬ ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತಿದೆ. ಈ ಶಾಖೆಗಳೆಲ್ಲವೂ ಹೊಟ್ಟೆ ಹೊರೆಯುವುದಕ್ಕೆ ಜನರಿಗೆ ಮಂಕು ಬೂದಿ ಎರಚುವ ಜ್ಞಾನಗಳು ಎಂಬ ಕಾರಣಕ್ಕೆ ಅವೆಲ್ಲವುಗಳು ಮೌಢ್ಯಗಳಾಗಿದ್ದು ಅವುಗಳನ್ನು ನಿರ್ನಾಮ ಮಾಡಬೇಕೆಂಬ ವಾದಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಈ ವಾದವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನಮ್ಮ ಕಣ್ಣೆದುರಿಗೆ ನಡೆಯುವ ಅನೇಕ ಘಟನೆಗಳು ಸಾಕ್ಷಯಾಗಿವೆ. ಆದರೆ ಇಂಥ ಸಮಾಜದ ಪರಂಪರೆಯಲ್ಲಿ ಭವಿಷ್ಯವನ್ನು ಹೇಳುವ ಅನೇಕ ದೇಸಿ ಪರಂಪರೆಗಳಿವೆ. ಅವುಗಳಲ್ಲಿ ಬಾಲಬಸವಯ್ಯನವರ ಸಂಪ್ರದಾಯ, ಕೊರವಂಜಿ ಸಂಪ್ರದಾಯ, ಕೊಡೆಕಲ್ಲಬಸವಣ್ಣ, ಮಂಟೇಸ್ವಾಮಿ ಪರಂಪರೆಗಳು ಬಹಳ ಮುಖ್ಯವಾಗಿವೆ. ಒಂದು ಸ್ಥಾಪಿತ ಜನವರ್ಗ ಅನುಸರಿಸುವ ಜೋತಿಷ್ಯ ಸಂಪ್ರದಾಯಗಳು ಹೊಟ್ಟೆ ಹೊರೆಯುವ ಜಡ ಸಂಪ್ರದಾಯಗಳೆಂಬ ಪಟ್ಟದೊಂದಿಗೆ ತಿರಸ್ಕಾರ ಯೋಗ್ಯ ಎನಿಸಿರುವಾಗ ದೇಸಿಯವಾಗಿ ಹರಿದು ಬಂದಿರುವ ಜನಾಭಿವೃದ್ಧಿಯ ನಿಜವಾದ ಕಾಳಜಿಯನ್ನು ಹೊಂದಿರುವ ಸಂಪ್ರದಾಯಗಳನ್ನು ಎಲ್ಲಿ ಇರಿಸಿ ನೋಡುವುದು. ಹಾಗೆ ನೋಡಿದರೆ ದೇಸಿ ಶಾಖೆಗಳು ತನ್ನ ಪರಂಪರೆಯನ್ನು ಗೌರವಿಸುವ ಭಾಗವಾಗಿ, ಅಷ್ಟೇ ಅಲ್ಲದೆ ತನ್ನ ಜನಸಮುದಾಯಗಳು ಸರಿಯಾದ ದಾರಿಯಲ್ಲಿ ನಡೆಯ ಬೇಕೆಂಬ ನೈಜ ಕಾಳಜಿಯೊಂದಿಗೆ ನಡೆಯುತ್ತಿವೆ. ಇಲ್ಲಿ ಹೊಟ್ಟೆಪಾಡಿನ ವಿಷಯವಾಗಲಿ, ಜನರನ್ನು ನಂಬಿಸಿ ಮೋಸಗೊಳಿಸುವುದಾಗಲಿ ಕಂಡುಬರುವುದಿಲ್ಲ.

ಪರಾಮರ್ಶನ 
೧. ಮಂಟೇಸ್ವಾಮಿ (ಜನಪದ ಮಹಾಕಾವ್ಯ), ಸಂ. ಹಿ.ಚಿ.ಬೋರಲಿಂಗಯ್ಯ, ೧೯೯೭, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೨. ಮಂಟೇಸ್ವಾಮಿ ಪರಂಪರೆ, ವೆಂಕಟೇಶ ಇಂದ್ವಾಡಿ, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೩. ಮಂಟೇಸ್ವಾಮಿ ಕಾವ್ಯ ಸಾಂಸ್ಕೃತಿಕ ಮುಖಾ ಮುಖಿ, ಸಂ. ವೆಂಕಟೇಶ ಇಂದ್ವಾಡಿ, ೨೦೦೪ , ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೪. ಕನ್ನಡ ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ, ಎಸ್.ಎಂ. ಮುತ್ತಯ್ಯ, ೨೦೦೮, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
೫. ಮಂಟೇಸ್ವಾಮಿ (ನಾಟಕ), ಎಚ್.ಎಸ್. ಶಿವಪ್ರಕಾಶ್, 
೬. ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಜೀ.ಶಂ.ಪರಮಶಿವಯ್ಯ, 


*  ಡಾ. ಎಸ್.ಎಂ. ಮುತ್ತಯ್ಯ,