Saturday 23 June 2012

ಪುರಾಣ ಪರಿಕಲ್ಪನೆ : ಶಿಷ್ಟ - ಪರಿಶಿಷ್ಟ ದೃಷ್ಟಿಕೋನಗಳು


ಡಾ.ಎಸ್.ಎಂ. ಮುತ್ತಯ್ಯ

                  ಪುರಾಣ ಎಂಬುದು ಬರೀ ಶಬ್ಧವಲ್ಲ. ಶಬ್ಧದಾಚೆಗೆ ಸಮಾಜದಲ್ಲಿ ತನ್ನ ಪ್ರಭಾವಳಿಯನ್ನು ಸೃಷ್ಟಿಸಿದ ಶಕ್ತಶಾಲಿಯಾದ ಒಂದು ಪರಿಕಲ್ಪನೆಯಾಗಿದೆ. ಹಾಗಾಗಿ ಪುರಾಣ ಎಂದರೇನು? ಅದರ ಸೃಷ್ಟಿಯ ಹಿಂದಿನ ಉದ್ದೇಶ ಯಾವುದು? ಅದರ ಬಗ್ಗೆ ಶಿಷ್ಟ - ಪರಿಶಿಷ್ಟ ಸಮುದಾಯಗಳಲ್ಲಿ ಪ್ರಚಲಿತವಿರುವ ಅರ್ಥ ಮತ್ತು ಬಳಕೆಯ ಸಾಧ್ಯತೆಗಳೇನು? ಎಂಬಿತ್ಯಾದಿ ವಿಷಯಗಳನ್ನು ವಿವರಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

 ಪುರಾಣದ ಅರ್ಥ ಮತ್ತು ಸ್ವರೂಪ

       'ಪುರಾಣ'ವು ಆಂಗ್ಲಭಾಷೆಯ 'Myth'ನ ಜೊತೆ ಸಮೀಕರಣಗೊಂಡಿದೆ. ಪುರಾಣವನ್ನು ಪುರಾ=ನವ=ಪುರಾಣ ಎಂಬುದಾಗಿ ವಿಭಜಿಸಿ ಅರ್ಥೈಯಿಸಲಾಗಿದೆ. 'ಪುರಾ' ಎಂದರೆ ಪುರಾತನವಾದುದು ಎಂತಲೂ 'ನವ' ಎಂದರೆ ನಿತ್ಯನೂತನವಾದುದು ಎಂತಲೂ ಹೇಳಲಾಗಿದೆ. ಹಾಗಾಗಿ ಪುರಾಣ ಎಂಬುದು ಭಾಷಿಕ ಅಭಿವ್ಯಕ್ತಿಗೆ ಒಳಪಟ್ಟ ಒಂದು ದೀರ್ಘನಿರೂಪಣೆ. ಪ್ರಾಚೀನ ಮಾನವ ತನ್ನ ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಹಾಗೂ ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಕಟ್ಟಿಕೊಂಡ ಕಾಲ್ಪನಿಕ ಕಥೆಗಳು ಇಲ್ಲಿವೆ. ಜೊತೆಗೆ ಪೂಜ್ಯ, ಗೌರವಯುತ ವ್ಯಕ್ತಿಗಳ, ದೈವಗಳ, ಸಾಂಸ್ಕೃತಿಕ ನಾಯಕರ ಜೀವನ ವಿವರಗಳು ಹಾಗೂ ಜನ ಸಮುದಾಯಗಳ ನಡುವೆ ಬದುಕಿರುವ ಧಾರ್ಮಿಕ ನಂಬಿಕೆಗಳು, ಆಚರಣೆ ಸಂಪ್ರದಾಯಗಳು ಪ್ರಧಾನವಾಗಿವೆ. ಇಂಥ ಸಂಗತಿಗಳನ್ನು ಅದ್ಭುತ ಶೈಲಿಯಲ್ಲಿ ವಿವರಿಸುವ ಮತ್ತು ಸಮರ್ಥಿಸುವ ಕಥನಗಳಾಗಿಯೂ ಪುರಾಣಗಳು ಕಾರ್ಯನಿರ್ವಹಿಸುತ್ತವೆ. ಒಂದು ದೃಷ್ಟಿಯಲ್ಲಿ ವಿಜ್ಞಾನ ಪೂರ್ವಯುಗದ ವಿಜ್ಞಾನಗಳು. 

   ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಊಹಾತ್ಮಕ ನೆಲೆಯಿಂದ ವಿವರಿಸುವಂತಹವು. ಈ ದೃಷ್ಟಿಯಿಂದ ನೋಡಿದಾಗ ಪುರಾಣಗಳ ವಸ್ತು ಏನೆಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ವಿಚಾರದಲ್ಲಿ ಅಮರಕೋಶ ಹೇಳಿದ ಮಾತು ಗಮನಾರ್ಹ. 
                                                            ಸರ್ಗಶ್ಚ ಪ್ರತಿಸರ್ಗಶ್ಚವಂಶೋ ಮನ್ವಂತರಾಣಿ ಚ
                                                           ವಂಶಾನು ಚರಿತಂ ಚಾಪಿ ಪುರಾಣಂ ಪಂಚಲಕ್ಷಣಂ      ಎನ್ನುತ್ತದೆ. 

  ಅಂದರೆ ಪುರಾಣವೆನ್ನುವುದು ಸ್ವರ್ಗ, ಪ್ರತಿಸ್ವರ್ಗ, ವಂಶ, ಮನ್ವಂತರ ಮತ್ತು ವಂಶಾನುಚರಿತೆ ಎಂಬ ಐದು ಲಕ್ಷಣಗಳುಳ್ಳದ್ದು. ಇವುಗಳಲ್ಲಿ ಸ್ವರ್ಗ ಎಂದರೆ ಜಗತ್ತಿನ ಮೂಲಸೃಷ್ಟಿ; ಪ್ರತಿಸ್ವರ್ಗ ಎಂದರೆ ಬ್ರಹ್ಮನಿಂದಾದ ಜಗತ್ಸೃಷ್ಟಿ; ವಂಶವೆಂದರೆ ಪ್ರಾಚೀನ ಕಾಲದಿಂದ ಬಂದ ದೇವತೆಗಳು, ಋಷಿಗಳು, ಮಾನವರು; ಮನ್ವಂತರ ಎಂದರೆ ಮನುಗಳ ಕಾಲ; ವಂಶಾನುಚರಿತ್ರೆ ಎಂದರೆ ಬೇರೆ ಬೇರೆ ವಂಶಗಳಲ್ಲಿ ಬಂದ ರಾಜಾಧಿರಾಜರ ಚರಿತ್ರೆ ಎಂದರ್ಥವಿದೆ. ಈ ಮೇಲಿನ ಐದು ಮುಖ್ಯ ನೆಲೆಗಳೇ ಪುರಾಣದ ವಸ್ತುಗಳು. 
                ಮೊದಲಿಗೆ, ಇಡೀ ಪುರಾಣಗಳನ್ನು ಲಿಖಿತ ಹಾಗೂ ಮೌಖಿಕವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಇವೆರಡೂ ಗುಂಪುಗಳು ಸ್ಪಷ್ಟವಾದ ಭಿನ್ನತೆಗಳನ್ನು ರೂಢಿಸಿಕೊಂಡಿರುತ್ತವೆ. ಇನ್ನು ಪುರಾಣಗಳಲ್ಲಿ ಸೃಷ್ಟಿಪುರಾಣಗಳು, ಆಕಾಶಕಾಯ ಮತ್ತು ಮನುಷ್ಯ ಚಟುವಟಿಕೆ ಕುರಿತ ಪುರಾಣಗಳು, ಸಾವಿನ ನಂತರದ ಜಗತ್ತನ್ನು ಕುರಿತ ಪುರಾಣಗಳು ಎಂಬಿತ್ಯಾದಿಯಾಗಿ ವಿಂಗಡಿಸಿಕೊಳ್ಳಬಹುದು. ಇದೇ ಹಿನ್ನೆಲೆಯಲ್ಲಿ ಎಲ್.ಆರ್. ಹೆಗಡೆಯವರು ಪುರಾಣದ ಬಗೆಗಳನ್ನು ಸೃಷ್ಟಿಕ್ರಮದ ಕಥೆಗಳು, ಮಾನವ ಹಾಗೂ ಪ್ರಾಣಿಗಳ ಉತ್ಪತ್ತಿ, ಆಕಾಶದ ನಕ್ಷತ್ರ-ಗ್ರಹಗಳ ಉತ್ಪತ್ತಿಗಳು ಮತ್ತು ವಿಧಿಕ್ರಮಗಳನ್ನು ರೂಪಿಸಿದ ಕಥೆಗಳು ಎಂಬುದಾಗಿ ಗುರುತಿಸಿಕೊಂಡಿದ್ದಾರೆ. ಹಿ.ಶಿ. ರಾಮಚಂದ್ರೇಗೌಡರ ಪ್ರಕಾರ ಪುರಾಣಗಳನ್ನು ಋತುಮಾನಕ್ಕೆ ಸಂಬಂಧಿಸಿದ, ನಿಸರ್ಗದ ಹುಟ್ಟ-ಸಂದರ್ಭಕ್ಕೆ ಸಂಬಂಧಿಸಿದ, ದೇವತೆಗಳ ಹುಟ್ಟು ಮನುಷ್ಯ ಪ್ರಾಣಿಗಳ ಹುಟ್ಟು-ರೂಪಾಂತರ, ಸಾಂಸ್ಕೃತಿಕ ನಾಯಕರ ಸಾಮಾಜಿಕ ಅನ್ವೇಷಣೆಗಳು, ಸಾವಿನ ನಂತರದ ಸ್ಥಳಗಳ ಕುರಿತ, ಚಾರಿತ್ರಿಕ ಘಟನೆಗಳ ಕುರಿತ ಪುರಾಣಗಳು ಎಂಬುದಾಗಿ ವರ್ಗೀಕರಿಸಬಹುದು 

               ಅನೇಕ ವಿದ್ವಾಂಸರು ಹೇಳಿರುವಂತೆ, 'ಆದಿ ಮಾನವನ ಲೋಕದೃಷ್ಟಿಯ ಅಭಿವ್ಯಕ್ತಿಯೇ ಪುರಾಣ. ಅದೊಂದು ನಿರೂಪಣೆ, ಮನುಷ್ಯ ತಾನು ಪರಿಸರಕ್ಕೆ ಹೊಂದಿಕೊಂಡು ಬಾಳಲಾರಂಭಿಸಿದ ಕಾಲಕ್ಕೆ ಪರಿಸರದ ಭೌತಿಕ ಜಗತ್ತು ಹಾಗೂ ಪಕ್ಷಿ, ಪ್ರಾಣಿ ಪರಿಸರಗಳ ಹುಟ್ಟು-ಸಾವಿನ ಬಗೆಗೆ ತಳೆದ ಊಹಾತ್ಮಕ ವಿಚಾರಗಳ ಮೊತ್ತ. ಮೊದಲು ಪ್ರಾಚೀನ ಘಟನಾವಳಿಗಳು, ಪಳಗತೆಗಳು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಇವು ನಂತರದ ಕಾಲಕ್ಕೆ ಪುರಾಣ ಎಂಬುದಾಗಿ ಕರೆಸಿಕೊಂಡಿವೆ'. ಒಟ್ಟಾರೆ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ಕುರಿತಂತಿರುವ ಆದಿ ಮಾನವನ ಕಲ್ಪನೆಗಳೇ ಪುರಾಣಗಳು. ಇವುಗಳ ಪ್ರಧಾನ ಉದ್ದೇಶ ವಿವರಣೆ, ಸಮರ್ಥನೆ, ಶಿಕ್ಷಣ, ಪುನರ್ ನವೀಕರಣ ಮತ್ತು ಸ್ಪೂರ್ತಿಯನ್ನು ಹುಟ್ಟಿಸುವುದು. ಈ ಮಾತನ್ನು ಇನ್ನಷ್ಟು ವಿವರಿಸುವುದಾದರೆ, ಜಗತ್ತು ಹೀಗೇ ಯಾಕೆ ಇದೆ ಎಂಬ ಸಹಜ ಕುತೂಹಲಕ್ಕೆ ಇರುವ ಉತ್ತರಗಳೇ ಪುರಾಣಗಳು. ಇವು ತಾವು ಮಂಡಿಸುವ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸುತ್ತವೆ. ಇವುಗಳನ್ನು ಪುರಾಣಗಳಿಗಿರುವ ಅಧಿಕಾರ ಹಾಗೂ ಗೌರವದ ಸ್ಥಾನಮಾನಗಳು ಸತ್ಯವೆನ್ನುವಂತೆ ನಂಬಿಸುತ್ತವೆ. ಹೀಗೆ ಜನರಿಗೆ ಜಗತ್ತಿನ ಚರಾಚರ ವಸ್ತು ವಿಷಯಗಳ ಉಗಮ-ವಿಕಾಸವನ್ನು ಕುರಿತು ಹೇಳುವುದರಿಂದ ಇದು ಶಿಕ್ಷಣದ ಒಂದು ಕ್ರಮವೂ ಹೌದು. ಮಾನವ ಒಂದು ಕಾಲಕ್ಕೆ ತಾನು ಊಹಿಸಿದ ಸಂಗತಿಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗು ರವಾನಿಸುವ ಮೂಲಕ ಜಗತ್ತಿನ ಬಗ್ಗೆ ಒಂದು ಬಗೆಯ ತಿಳುವಳಿಕೆಯನ್ನು ನೀಡುತ್ತಾನೆ. ಈ ಊಹಾತ್ಮಕ ಸಂಗತಿಗಳು ಎಲ್ಲಾ ಕಾಲ, ಧರ್ಮ, ಜಾತಿ, ಜನಾಂಗಗಳಲ್ಲಿ ಒಂದೇ ರೀತಿ ಇರಲಾರವು. ಕಾಲಕ್ಕೆ ತಕ್ಕಂತೆ ಆದಿಮಾನವನ ಕಲ್ಪನೆಗಳು ಬದಲಾವಣೆಯಾಗುತ್ತಾ ಬರುತ್ತವೆ. ಇವೆಲ್ಲವುಗಳ ಜೊತೆಗೆ ಪುರಾಣಗಳು ಲೋಕದ ನಡುವೆ ಬದುಕುವ ಮನುಷ್ಯನಿಗೆ ಈ ಮತ್ರ್ಯಲೋಕದಲ್ಲಿ ಇನ್ನಷ್ಟು ಕಾಲ ಬದುಕುವ, ಬರೀ ಬದುಕುವ ಅಲ್ಲ; ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ  ಸ್ಪೂರ್ತಿಯನ್ನು  ನೀಡುತ್ತವೆ. ವಿಶೇಷವಾಗಿ ಸಾಂಸ್ಕೃತಿಕ ನಾಯಕರನ್ನು ಕುರಿತ ಪುರಾಣಗಳು ಸಾಂಸ್ಕೃತಿಕ ನಾಯಕನ ಶೌರ್ಯ-ಸಾಹಸಗಳನ್ನು ವಿವರಿಸುವುದರ ಮೂಲಕ ಕೇಳುವವರಲ್ಲಿ ಆಸಕಿ ಮತ್ತು  ಸ್ಪೂರ್ತಿಯನ್ನು  ತುಂಬುತ್ತವೆ. 

               ಪುರಾಣಗಳು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಊಹಾತ್ಮಕ ವಿವರಣೆ ನೀಡುವುದಷ್ಟೇ ಅಲ್ಲ, ಅದರಾಚೆಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುತ್ತವೆ. ತಮ್ಮ ಬುದ್ಧಿಗೆ ನಿಲುಕದಿರುವ ವಿಷಯಗಳಿಗೂ ಕಾರ್ಯ ಕಾರಣ ಸಂಬಂಧವನ್ನು ಸೂಚಿಸುತ್ತವೆ. ಜೊತೆಗೆ ಕೆಲವು ಸತ್ಯ ಸಂಗತಿಗಳನ್ನೂ ಪುರಾಣೀಕರಿಸುತ್ತವೆ. ಪ್ರಸಿದ್ಧ ರಚನಾವಾದಿ ಲೆವಿಸ್ಟ್ರಾಸ್ ಹೇಳುವ ಹಾಗೆ ಪುರಾಣ ಎನ್ನುವುದು ಒಂದು ಭಾಷೆ. ಮಾನವನ ಸುಪ್ತ ಅಭೀಪ್ಸೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸಿದ ರಚನೆಗಳಿವು. ಹೀಗೆಂದಾಕ್ಷಣ ಸಾಹಿತ್ಯಕ ಪ್ರಕಾರಗಳೆಲ್ಲವೂ ನಮ್ಮ ಕಣ್ಣೆದುರಿಗೆ ನಿಲ್ಲುತ್ತವೆ. ಈ ಎಲ್ಲಾ ಪ್ರಕಾರಗಳಲ್ಲಿ ಪುರಾಣಗಳ ಆಶಯಗಳಿರುತ್ತವೆ. ಹೀಗೆ ಪ್ರಾಚೀನಕಾಲದಿಂದಲೂ ಮಾನವ ತನ್ನ ಪರಿಸರದ ಸ್ವರೂಪ ಹಾಗೂ ಚಟುವಟಿಕೆಗಳಿಗೆ ಕಾರ್ಯಕಾರಣ ಸಂಬಂಧಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಹುಟ್ಟಿದ ಈ ಪುರಾಣಗಳ ಸೃಷ್ಟಿ ಅಲ್ಲಿಗೇ ನಿಂತಿಲ್ಲ. ಈ ರೀತಿಯ ರಚನೆಗಳು ಆಧುನಿಕ ಕಾಲದವರೆಗೂ ಮುಂದುವರೆದಿದೆ. ಈ ಮುಂದುವರಿಕೆ ಹೊಸ ಪುರಾಣಗಳ ಸೃಷ್ಟಿಗಿಂತ ಹಳೆಯ ಪುರಾಣಗಳನ್ನು ಹೊಸ ಅರ್ಥ ಹಾಗೂ ಆಶಯಗಳಿಗೆ ಒಗ್ಗಿಸುವ ಕಡೆ ಗಮನ ಹರಿಸುತ್ತದೆ. ಸಮಾಜದಲ್ಲಿ ಹೊಸ ದರ್ಶನಗಳು ಮೂಡಿದಾಗ ಅವುಗಳನ್ನು ಜನಪ್ರಿಯಗೊಳಿಸಲು ಸಂಪೂರ್ಣ ಹೊಸದೇ ಆದ ಪುರಾಣ ರಚನೆಯಾಗುವುದು ಅಪರೂಪ. ಏಕೆಂದರೆ ಜನ ಹೊಸದನ್ನು ಅಷ್ಟು ಸುಲಭವಾಗಿ ಶೀಘ್ರವಾಗಿ ಸ್ವೀಕರಿಸಲಾರರು. ಇಂಥ ಸಂದರ್ಭದಲ್ಲಿ ತಮ್ಮ ಮೂಲ ಆಕಾರವನ್ನು ಕಳೆದುಕೊಳ್ಳದೇ ಹೊಸ ದರ್ಶನಗಳನ್ನು ಹೇಳಲಾಗುತ್ತದೆ.

         ಹೀಗೆ ರೂಪಗೊಂಡಿರುವ ಪುರಾಣಗಳು ಯಾವಗ ರಚಿತವಾದವು ಎಂಬುದು ಮುಖ್ಯವಾದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಆಲೋಚಿಸುತ್ತಿರುವ ಹಲವು ವಿದ್ವಾಂಸರು ಕ್ರಿ.ಶ. ಆರಂಭದ ಹೊತ್ತಿಗಾಗಲೇ ಪುರಣಾಗಳು ಅಸ್ತಿತ್ವದಲ್ಲಿದ್ದವು. ವಿಶೇಷವಾಗಿ ವೈದಿಕ ಸಮುದಾಯಗಳಲ್ಲಿ ರಾಜಾಯಣ-ಮಹಾಭಾರತಗಳು ರಚನೆಯಾಗುತ್ತಿದ್ದ ಕಾಲಕ್ಕೆ ಮತ್ತೊಂದು ಕಡೆ ಪುರಾಣಗಳು ರಚನೆಯಾಗುತ್ತಿದ್ದವು. ಅವುಗಳನ್ನೇ ನಾವು ಇಂದು 18 ಮಹಾಪುರಾಣಗಳು 18 ಉಪ-ಪುರಾಣಗಳು ಎಂಬುದಾಗಿ ಕರೆದುಕೊಳ್ಳುತ್ತಿದ್ದೇವೆ. ಆ ಕಾಲಕ್ಕೆ ವೇದಗಳು ಪ್ರಧಾನ ಸಾಹಿತ್ಯ ಸಾಮಗ್ರಿಗಳಾಗಿ ನೆಲೆನಿಂತಿದ್ದರೂ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ಸು ಕಂಡಿರಲಿಲ್ಲ. ಕಾರಣ ಸಾಮಾನ್ಯ ಜನ ಹಾಗೂ ವಿಶೇಷವಾಗಿ ಕೆಳಜಾತಿಯ ಜನ ವೇದಗಳನ್ನು ಓದಲು ಅರ್ಹರಲ್ಲ ಎಂಬ ಹೇರಿಕೆ ಇತ್ತು. ಜೊತೆಗೆ ಸ್ವತಃ ವೇದಗಳೇ ಕಠಿಣ ರಚನೆಗಳಾಗಿದ್ದವು. ಈ ಕಾರಣಕ್ಕಾಗಿ ವೇದಗಳು ಜನರಿಂದ ದೂರವಾಗಲಾರಂಭಿಸಿದವರು. ಈ ಅಭಿಪ್ರಾಯವನ್ನು ತಪ್ಪಿಸುವ ಸಲುವಾಗಿ ವೇದಗಳನ್ನೇ ಅತ್ಯಂತ ಸರಳವಾದ ಜನಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಲಾಯಿತು. ಅದರ ಫಲವೇ 18 ಮಹಾಪುರಾಣಗಳು, 18 ಉಪಪುರಾಣಗಳ ಸೃಷ್ಟಿ. ಈ ಕಾರಣಕ್ಕಾಗಿಯೇ ಇರಬೇಕು, ಪುರಾಣಗಳನ್ನು ಐದನೇ ವೇದ ಎಂಬುದಾಗಿ ಕರೆಯಲಾಗಿದೆ. ಇವುಗಳಲ್ಲಿ ಆದಿಮಾನವನ ಕಲ್ಪನೆಗಳಿದ್ದು ಇವು ಒಂದು ರೀತಿಯಲ್ಲಿ ಪುರಾಣದ ಆಶಯ-ಸ್ವರೂಪಗಳನ್ನು ಪಡೆದಿವೆ ಎಂಬುದು ಗಮನಾರ್ಹ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಬಗೆಗೆ ಜನಪದರಲ್ಲಿ ಅವರವೇ ಆದ ನಂಬಿಕೆ-ಸಂಪ್ರದಾಯ-ಹಾಡು-ಕಥೆಗಳಿದ್ದವು. ಈ ಹೊತ್ತಿಗೂ ಜನಪದರಲ್ಲಿ ಪ್ರಚಲಿತವಿರುವ ಆಚರಣೆಗಳಲ್ಲಿ ಅಂತಹ ಆಶಯಗಳನ್ನು ಗುರುತಿಸಬಹುದಾಗಿದೆ. 

          ಮುಖ್ಯವಾಗಿ, ಪುರಾಣಗಳಿಗೆ ವ್ಯವಸ್ಥಿತ ರೂಪ ಕೊಟ್ಟು ತಮ್ಮ ಉದ್ದೇಶಗಳ ಈಡೇರಿಕೆಗೆ ಬಳಸಿಕೊಂಡಿದ್ದು ಮಾತ್ರ ವೈದಿಕ ಧಮ್. ತದನಂತರ ಈ ತಂತ್ರವನ್ನು ಎಲ್ಲಾ ಧರ್ಮಗಳು ಉಪಯೋಗಿಸಿಕೊಂಡು ತಮ್ಮ ಪ್ರಚಾರವನ್ನು ಗಿಟ್ಟಿಸಿಕೊಂಡವು. ಜೈನಧರ್ಮದ ತೀರ್ಥಂಕರ ಚರಿತೆಗಳು, ಶೈವಸಂತರ ಚರಿತ್ರೆಗಳು ವಿಶೇಷವಾಗಿ ಸೃಷ್ಟಿಯಾಗಿರುವುದನ್ನು ನೋಡಬಹುದು. ಹೀಗೆ ಧರ್ಮ ಪ್ರಚಾರದ ಆಶಯವನ್ನೇ ಕೇಂದ್ರವಾಗಿಸಿಕೊಂಡ ಪುರಾಣಗಳಿಗೆ ಸಂಕೀರ್ಣತೆ ಬಂದೊದಗಿತು. ಇದನ್ನು ರಾಜಾರಾಮ ಹೆಗಡೆಯವರು ಹೀಗೆ ವಿವರಿಸುತ್ತಾರೆ: ಪುರಾಣಗಳು ವೈದಿಕ ಅವೈದಿಕ ಧಾರೆಗಳೆರಡರಲ್ಲಿ ಸಮ್ಮಿಶ್ರ ರೂಪಗಳಿರುತ್ತವೆ. ಯಾವೊಂದು ಗುಂಪಿನ ಪುರಾಣಗಳು ಕೂಡಾ ತನ್ನಷ್ಟಕ್ಕೆ ತಾನೇ ಸ್ವಯಂಭೂ ಆಗಿರುವುದಿಲ್ಲ. ಏಕೆಂದರೆ ಇದೊಂದು ಸಾಂಸ್ಕೃತಿಕ ಉತ್ಪನ್ನ. ಹಾಗಾಗಿ ಇತಿಹಾಸದ ವಿಭಿನ್ನ ಸಂದರ್ಭಗಳನ್ನು ಹೊಂದುತ್ತ, ಹಿಗ್ಗುತ್ತಾ, ರೂಪಾಂತರಗೊಳ್ಳುತ್ತಾ ಹೋಗುತ್ತವೆ. ಹಾಗಾಗಿ, ಈ ಪುರಾಣಲೋಕ ಒಂದು ಸಮ್ಮಿಶ್ರ ಸಂಪ್ರದಾಯವಾಗಿ ಕಂಡುಬರುತ್ತದೆ. ಆದ್ದರಿಂದ ಪುರಾಣಗಳು ಇಡಿಯಾಗಿ ಯಾವುದೇ ಒಂದು ಧರ್ಮದ ಸಂಪ್ರದಾಯವನ್ನು ಪ್ರತಿಪಾದಿಸಬೇಕೆಂದೇನೂ ಇಲ್ಲ. ಕೂರ್ಮ ಪುರಾಣದಲ್ಲಿ ರುದ್ರನೇ ಶೈವ ಸಂಪ್ರದಾಯದಲ್ಲಿ ಸೇರಿದ ಕಾಪಾಲಕರನ್ನು ಹಳಿಯುವಂತೆ ಚಿತ್ರಿಸಲಾಗಿದೆ. ವೃಷ್ಣವ ಸಂಪ್ರದಾಯ ಶಿವನನ್ನು ವಿಷ್ಣುವಿನ ಅಧೀನಕ್ಕೆ ತಂದು ದಂತ ಕಥೆಗಳನ್ನು ಸಷ್ಟಿಸಿದರೆ; ಅದೇ ದಂತ ಕಥೆಯಲ್ಲಿ ಶಿವನನ್ನು ಎತ್ತಿ ಹಿಡಿಯುವ ಶೈವ ಪಾಠವೊಂದು ಬಂದಿರುತ್ತದೆ. ಪುರಾಣಗಳಲ್ಲಿ ಇಂಥ ಹಲವು ದಂತಕಥೆಗಳನ್ನು ನೋಡಬಹುದು. ಶಿಷ್ಟಪರಂಪರೆಯ ಪಂಡಿತರಿಂದ ವ್ಯಕ್ತವಾಗುವ ವಿಚಾರಗಳಿವು. ಈ ಪರಂಪರೆಗಿಂತ ಭಿನ್ನವಾದ ದೃಷ್ಟಿ - ಧೋರಣೆಗಳಿರುವ ಜನಪದರು ಇದೇ ಪರಂಪರೆಯ ಪುರಾಣಗಳನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ? ಹಾಗೂ ಅವರು ಕಟ್ಟಿಕೊಂಡಿರುವ ಜನಪದ ಪುರಾಣಗಳ ಸ್ವರೂಪವೇನು ಎಂಬುದು ವಿಚಾರಾರ್ಹ. ಹಾಗಾಗಿ, ಮೊದಲಿಗೆ ಜನಸಾಮಾನ್ಯರು ಪುರಾಣಗಳನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬಹುದು. 

           ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಬಹುತೇಕ ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಆಶ್ರಯಿಸಿದ್ದು ಅರಣ್ಯವಾಸಿ ಮತ್ತು ಕೃಷಿಕರಂಥ ಶ್ರಮಸಂಸ್ಕೃತಿಯ ಜನರನ್ನೇ. ಈ ಪ್ರಕ್ರಿಯೆಯೊಳಗೆ ಹಲವಾರು ಸಮುದಾಯಗಳು ತಮ್ಮ ಅನನ್ಯತೆಯನ್ನು ಕಳೆದುಕೊಂಡವು. ಮತ್ತೆ ಕೆಲವು ಅನನ್ಯತೆಯ ಉಳಿವಿಗಾಗಿ ಹೋರಾಡಿದವು. ಈ ಹೋರಾಟಗಳು ಯಾವ ಸ್ವರೂಪದಲ್ಲಿದ್ದವು ಎಂಬುದಕ್ಕೆ ನಿಖರವಾದ ಯಾವ ಆಧಾರಗಳೂ ಇಲ್ಲ. ಆದರೂ ಭಾಷಾಭಿವ್ಯಕ್ತಿಗಳಿಂದ ಪ್ರತಿಭಟನೆ ಮಾಡಿದ್ದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕೆ ಇಂದಿಗೂ ಸಮುದಾಯಗಳಲ್ಲಿ ಪ್ರಚಲಿತವಿರುವ ಪುರಾಣಗಳು ಸಮರ್ಥ ಉದಾಹರಣೆಯಾಗಬಲ್ಲವು. ಈ ಕಾಲದ ಜನಪದ ಪುರಾಣಗಳು ಶಾಸ್ತ್ರೀ ಪುರಾಣಗಳ ಅನುಕರಣೆ ಎಂಬಂತೆ ಇವೆ. ಆದರೆ ಅವುಗಳ ಆಳದಲ್ಲಿ ಶಾಸ್ತ್ರೀಯ ಧಾರೆಯ ಮೌಲ್ಯಗಳನ್ನು ಟೀಕಿಸುವ, ಅವುಗಳನ್ನು ಮೀರುವ ಪ್ರಯತ್ನಗಳಿವೆ. ಜೊತೆಗೆ ಆ ಮೌಲ್ಯಗಳ ಸ್ಥಾನದಲ್ಲಿ ಅವರದೇ ಜಗತ್ತಿನೊಳಗೆ ಚಾಲ್ತಿಯಲ್ಲಿದ್ದ ಮೌಲ್ಯಗಳು ತುಂಬಿಕೊಂಡಿವೆ. ಜನಪದ ಪುರಾಣಗಳು ಇಂಥ ರೂಪಾಂತರ ಕಂಡ ಕಾಲ ಯಾವುದು? ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ಸದ್ಯ ನಮಗೆ ಲಭಿಸಿರುವ ಐತಿಹ್ಯ ಪುರಾಣಗಳ ಸ್ವರೂಪವನ್ನು ಗಮನಿಸಿದರೆ 15, 16, 17ನೇ ಶತಮಾನದಿಂದಲೇ ಸೃಷ್ಟಿಯಾದಂತೆ ತೋರುತ್ತದೆ. .......................... ಇದನ್ನು ಒಪ್ಪಿಕೊಂಡರೆ, 15, 16, 17ನೇ ಶತಮಾನದ ಸಾಮಾಜಿಕ, ಆಥರ್ಿಕ, ಧಾಮರ್ಿಕ ಸಂರಚನೆಗಳು ಐತಿಹ್ಯ ಮತ್ತು ಪುರಾಣಗಳ ಸೃಷ್ಟಿಗೆ ಕಾರಣವಾಗಿರಬೇಕೆಂದು ಊಹಿಸಬಹುದು. ಇದಕ್ಕೆ ಪುಷ್ಟಿನೀಡುವಂತೆ ಅನೇಕ ಜನಪದ ಮಹಾಕಾವ್ಯಗಳ ಹುಟ್ಟು ಇದೇ ಕಾಲಮಾನದಲ್ಲಿ ಓಡಾಡುತ್ತಿರುವುದು ಗಮನಾರ್ಹ. ಈ ಕಾಲ ಭಕ್ತಿ ಪಂಥದ ಕಾಲ, ಈ ಭಕ್ತಿಪಂಥ ಮಾಡಿದ ಮುಖ್ಯ ಕೆಲಸವೆಂದರೆ ಆದಿವಾಸಿ, ಕೆಳಜಾತಿಗಳ ಮೂಲಧರ್ಮದ ನಿರಾಕರಣೆ. ಇದಕ್ಕೆ ಕಾರಣ ಕಲ್ಲು, ಮರ, ಮೊದಲಾದ ಕ್ಷುದ್ರ ದೇವತೆಗಳು ಇವರವೆಂಬುದು. ಹೀಗೆ ಕೆಳಜಾತಿಗಳ ದೈವಗಳನ್ನು ನಿರಾಕರಿಸಿ, ಹೊಸ ರೀತಿಯ ಧರ್ಮದ ಪ್ರತಿಷ್ಠಾಪನೆಗೆ ಪ್ರಯತ್ನಿಸಿತು ಪರಿಣಾಮ, ಕೆಳ ಜಾತಿಗಳು ತಮ್ಮ ಮೂಲ ಧರ್ಮ, ದೇವತೆಗಳನ್ನು ಕಾಯ್ದಿಟ್ಟುಕೊಳ್ಳುವ ತಂತ್ರವಾಗಿ ಇಂಥ ಪುರಾಣ ಕಾವ್ಯಗಳನ್ನು ಕಟ್ಟಿಕೊಂಡಿರಬಹುದೆಂದು ಊಹಿಸಬಹುದಾಗಿದೆ.

          'ಪುರಾಣ'ವನ್ನು ಕುರಿತ ಹಾಗೆ ಪ್ರಾಚೀನ ಕಾಲದಿಂದಲೂ ಇರುವ ವಿವಿಧ ರೀತಿಯ ಅರ್ಥಗ್ರಹಿಕೆಗಳಲ್ಲಿ ಜನಪದರ ಗ್ರಹಿಕೆಯೊಂದಿದೆ ಎಂಬುದು ವಿಶೇಷ. ಸಾಮಾನ್ಯ ಜನತೆಯ ಪುರಾಣದ ವ್ಯಾಖ್ಯಾನ ಅತ್ಯಂತ ಕುತೂಹಲಕರವಾದುದು. ಇವರು ಪುರಾಣದ ಹಿನ್ನೆಲೆ ಮುನ್ನೆಲೆಗಳನ್ನು ತಾತ್ವಿಕವಾಗಿ ಗ್ರಹಿಸದೇ ಹೋದರೂ, ಅವು ಅರ್ಥವಾದಷ್ಟನ್ನು ಸ್ಪಷ್ಟವಾಗಿ ಹೇಳಬಲ್ಲರು. ಈ ಹಿನ್ನೆಲೆಯಲ್ಲಿ ಪ್ರಚಲಿತವಿರುವ ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಗಮನಿಸುವುದರ ಮೂಲಕ ಪುರಾಣದ ಬಗ್ಗೆ ಜನಸಾಮಾನ್ಯರಿಗಿರುವ ದೃಷ್ಟಿಕೋನವನ್ನು ನೋಡಬಹುದು. 
                             1) ಪುರಾಣ ಹೇಳೋಕೆ; ಬದನೆಕಾಯಿ ತಿನ್ನೋಕೆ 
                             2) ಪುರಾಣ ಕೇಳಿ ಪರಾಣ (ಪ್ರಾಣ) ಹೋಯಿತು 
                             3) ಪುರಾಣ ಹೇಳ್ಬೇಡ
                             4) ರಾತ್ರಿಯೆಲ್ಲ ರಾಮಾಯಣ ನೋಡಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕೆಂದನಂತೆ 
                             5) ಪೂರ್ವಿಕರು ಹೇಳಿದ್ದು ಪುರಾಣ; ಊರ್ವಿಕರು ಹೇಳಿದ್ದು ಗಾದೆ 
         ಮೇಲಿನ ನುಡಿಗಟ್ಟುಗಳಲ್ಲಿ, ಮೊದಲನೆಯ ನುಡಿಗಟ್ಟು ಪುರಾಣಗಳನ್ನು ವಾಸ್ತವ, ಅವಾಸ್ತವ ಎಂಬೆರಡು ನೆಲೆಗಳಿಂದ ವಿವರಿಸುತ್ತದೆ. ಇಲ್ಲಿ ಪುರಾಣ ಹೇಳೋಕೆ ಮಾತ್ರ ಎಂಬ ಮಾತಿನಿಂದ ಅದೊಂದು ಅವಾಸ್ತವತೆಯಿಂದ ಕೂಡಿದ್ದು, ಬರೀ ನುಡಿ, ತಾತ್ವಿಕ ದೃಷ್ಟಿ ಎಂಬರ್ಥ ಹೊರಡುತ್ತದೆ. ಮುಂದಿನ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವ ನೆಲೆಯುಳ್ಳದ್ದು. ಎರಡನೇ ನುಡಿಗಟ್ಟು ಪುರಾಣವೆಂದರೆ, ದೀರ್ಘವಾದುದು ಆದರೆ, ಜೀವನ ಮಾತ್ರ ಅಲ್ಪಕಾಲಾವಧಿಯುಳ್ಳದ್ದು. ಮನುಷ್ಯನ ಜೀವಿತಾವಧಿ ಮುಗಿದರೂ ಪುರಾಣ ಮುಗಿಯಲಾರದು ಎಂಬರ್ಥ ಸ್ಫುರಿಸುತ್ತದೆ. ಇದೇ ನೆಲೆಯಲ್ಲಿ ಮೂರನೇ ನುಡಿಗಟ್ಟನ್ನು ಗಮನಿಸಬಹುದಾಗಿದೆ. ಅದರಲ್ಲಿಯೂ ಕೂಡ ಪುರಾಣ ದೀರ್ಘವಾದುದು ಎಂಬರ್ಥ ಬರುವಂತೆ ಹೇಳಲಾಗಿದೆ. ಹಾಗೆಯೇ ಅವಾಸ್ತವ ಎಂಬರ್ಥ ಹೊಳೆಯುತ್ತದೆ. ಇನ್ನು ನಾಲ್ಕನೇ ನುಡಿಗಟ್ಟು ಪುರಾಣದ ಸಂಕೀರ್ಣತೆಯ ಕಡೆಗೆ ಗಮನಕೊಡುತ್ತದೆ. ರಾತ್ರಿಯೆಲ್ಲ ರಾಮಾಯಣ ಕಥೆ ನೋಡಿದರೂ ರಾಮ ಸೀತೆಯರ ಸಂಬಂಧಗಳು ಅರ್ಥವಾಗದೇ ಉಳಿಯುತ್ತವೆ. ಹಾಗಾಗಿ ಪುರಾಣವೆಂಬುದು ಅಷ್ಟೊಂದು ಸಂಕೀರ್ಣ ಸ್ಥಿತಿಯದ್ದು. ಐದನೇ ನುಡಿಗಟ್ಟಾದರೂ ಪುರಾಣದ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಆದಿ ಮಾನವನ ಕಲ್ಪನೆ ಅಥವಾ ಊಹೆಯ ಅಭಿವ್ಯಕ್ತಿಯಾಗಿ ಪುರಾಣಗಳನ್ನು; ಅನುಭವದ ಮಾತಾಗಿ ಗಾದೆಯನ್ನು ಪರಿಭಾವಿಸಿರುವುದು ಸ್ಪಷ್ಟವಾಗುತ್ತದೆ. 

      ಒಟ್ಟಾರೆ, ಪುರಾಣವೆಂದರೆ ಪುರಾತನವಾದುದು, ಪುರಾತನ ಮಾನವನ ಊಹಾತ್ಮಕ ಮಾತು, ಧೀರ್ಘವಾದುದು, ಸಂಕೀರ್ಣವಾದುದು ಎಂಬರ್ಥದಲ್ಲಿ ಸಾಮಾನ್ಯ ಜನತೆ ಅರ್ಥೈಸಿರುವುದು ಸ್ಪಷ್ಟವಾಗಿದೆ. ಇದರ ಜೊತೆಗೆ ಸೂಕ್ಷ್ಮವಾಗಿ ಗಮನಿಸಿದರೆ ಪುರಾಣದ ಬಗೆಗೆ ಮೇಲಿರುವ ಜನಸಾಮಾನ್ಯರ ಹೇಳಿಕೆಗಳು ಪುರಾಣಗಳನ್ನು ನೇತ್ಯಾತ್ಮಕವಾಗಿ ನೋಡಿರುವುದು ಸ್ಪಷ್ಟವಾಗುತ್ತದೆ. ಶಿಷ್ಟ ಪರಂಪರೆಗಳು ಸೃಷ್ಟಿಸಿ ಇವರ ನಡುವೆ ಚಲಾವಣೆಗೆ ಬಿಟ್ಟಿದ್ದ ಪುರಾಣಗಳನ್ನು ಹೀಗೆ ನೋಡಿದ ಈ ಮನಸ್ಸುಗಳು ತಾವು ಸೃಷ್ಟಿಸಿದ ಪುರಾಣಗಳಿಗೆ ಯಾವ ಸ್ವರೂಪ ನೀಡಿವೆ ಎಂಬುದು ಕುತೂಹಲಕರವಾದುದು. ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

  ಜನಪದ - ಶಿಷ್ಟ ಪುರಾಣಗಳು

 ಪುರಾಣಗಳನ್ನು ಶಿಷ್ಟ-ಜಾನಪದ ಎಂಬುದಾಗಿ ವಿಂಗಡಿಸಿ ನೋಡುವುದು ಅಂತಿಮವಾಗಿ ಯಾವುದೇ ಬಹುದೊಡ್ಡ ಫಲಿತ ನೀಡಲಾರದು. ಆದರೂ ಎರಡು ವಿಭಿನ್ನ ಗುಂಪುಗಳ ಸೃಷ್ಟಿಗಳನ್ನು ಸೂಕ್ಷ್ಮ ಅಧ್ಯಯನಕ್ಕೊಳಪಡಿಸುವ ಕಾರಣಕ್ಕಾಗಿ ಇಂಥ ವಗರ್ೀಕರಣ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ: ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳೆರಡರ ಮೂಲ ಸಾಮಗ್ರಿಗಳು ಮನೋಬಿಂಬಗಳು, ಪ್ರತಿಮೆಗಳಂಥ ಸ್ವಪ್ನ ಪ್ರತೀಕಗಳೇ ಆಗಿವೆ. ಎರಡರಲ್ಲಿಯೂ ಹೇರಳವಾದ ಬ್ರಾಮಕಗಳಿರುತ್ತವೆ. ಅಪ್ಪ-ಅಮ್ಮ, ಗಂಡ-ಹೆಂಡತಿ, ಮಗ-ಮಗಳು, ಕಾಮ-ಪ್ರೇಮ, ಹುಟ್ಟು-ಸಾವು, ಲೌಕಿಕ-ಅಲೌಕಿಕ ಪ್ರತೀಕಗಳು ಎರಡರಲ್ಲಿಯೂ ಇರುತ್ತವೆ. ಎರಡರಲ್ಲಿಯೂ ಸಂಸ್ಕೃತಿಯ ವೀರನೊಬ್ಬನ ಮೂಲಕ ಸಂಸ್ಕೃತಿಯ ಮುಖ್ಯ ಲಕ್ಷಣಗಳು ಪ್ರಕಟವಾಗುತ್ತಿರುತ್ತವೆ. ಇಷ್ಟು ಬಿಟ್ಟರೆ ಉಳಿದಂತೆ ಮೂಲಭೂತವಾದ ಕೆಲವು ವ್ಯತ್ಯಾಸಗಳಿರುವುದು ಕಂಡುಬರುತ್ತದೆ. 

        ಲಿಖಿತ ಅಥವಾ ಶಿಷ್ಟಪುರಾಣಗಳು ಅಧಿಕಾರದ ನೆಲೆಯ ಸೃಷ್ಟಿಗಳು. ಇವುಗಳಲ್ಲಿ ಬಹುತೇಕ ಸುಖಾಂತ ನಿರೂಪಣೆಯುಳ್ಳವು. ಇಲ್ಲಿಯ ನಾಯಕ ಹುಟ್ಟುತ್ತಲೇ ಮಹಾನ್ ವ್ಯಕ್ತಿಯಾಗಿದ್ದು, ಕೊನೆಗೆ ಅಮರನಾಗುತ್ತಾನೆ. ಸಾವು ಈತನ ಹತ್ತಿರ ಸುಳಿಯುವುದಿಲ್ಲ. ಇಲ್ಲಿ ಬರುವ ಹೋರಾಟಗಳು ರಕ್ಷಣಾತ್ಮಕವಾಗಿರುತ್ತವೆ. ಸಾಮ್ರಾಜ್ಯ ಉಳಿಸಿಕೊಳ್ಳುವಿಕೆ, ಸಮರ್ಥವಾಗಿ ಮೂಡಿಬಂದರೆ ಮಾತ್ರ ಸಮೂಹದ ಪ್ರತಿಬಿಂಬಗಳಾಗುತ್ತವೆ. ಮೌಖಿಕ ಅಥವಾ ಜನಪದ ಪುರಾಣಗಳಾದರೋ ಸಮಾಜದ ನೊಂದ ಜನತೆಯ ದನಿಗಳು. ಬಹುತೇಕ ಜನಪದ ಪುರಾಣಗಳು ದುಃಖಾಂತ ನಿರೂಪಣೆಗಳಾಗಿವೆ. ಸಾಮಾನ್ಯವಾಗಿ ಇಲ್ಲಿಯ ಹೆಚ್ಚಾನುಹೆಚ್ಚು ನಾಯಕರು ಮಧ್ಯೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ. ಕಾರಣ ಇಲ್ಲಿಯ ನಾಯಕರು ಸಾಮಾನ್ಯ ಜನತೆಯ ಸ್ವರೂಪದಲ್ಲಿ ಬಂದವರು. ಶಿಷ್ಟನಾಯಕರಿಗಿದ್ದಂತಹ ದೈವತ್ವ ಇಲ್ಲಿಯ ನಾಯಕರಿಗಿಲ್ಲ. ಹಾಗಾಗಿ ಇಲ್ಲಿಯ ನಾಯಕರು ಸಾಧನೆಯಿಂದ ಮೇಲೇರುತ್ತಾರೆ. ಇಡೀ ಪುರಾಣಗಳಲ್ಲಿ ನಾಯಕರ ಹೋರಾಟದ ನೆಲೆ ಸೃಷ್ಟ್ಯಾತ್ಮಕ ನೆಲೆಯುಳ್ಳದ್ದು. ಇಲ್ಲಿ ಯಾವುದೇ ಸಾಮ್ರಾಜ್ಯದ ಅಥವಾ ಅಧಿಕಾರದ ವಿಸ್ತರಣೆ ಅಥವಾ ಉಳಿವಿಗಾಗಿ ಹೋರಾಟ ನಡೆಯುವುದಿಲ್ಲ. ಬದಲಿಗೆ ತಮ್ಮ ಬದುಕಿನ ಅಸ್ತಿತ್ವಕ್ಕಾಗಿ ಹೋರಾಡುತ್ತಾರೆ. ಅಧಿಕಾರ ಪಡೆಯುವ ಆಸಕ್ತಿಯೂ ಕೆಲವೊಮ್ಮೆ ಇದ್ದಿರಬಹುದು. ಒಟ್ಟಾರೆ ಸಾಮೂಹಿಕ ಅಭಿವ್ಯಕ್ತಿಯಾಗಿರುವ ಇವು ಸಮುದಾಯಗಳ ಅನುಭವಗಳಿಂದ ಮೂಡಿಬಂದವುಗಳು. 

ಪುರಾಣ ಮತ್ತು ಚರಿತ್ರೆ 

ಜಗತ್ತಿನ ಸಂಗತಿಗಳ ಬಗ್ಗೆ ಮಾನವ ಊಹಿಸಿ ಕಟ್ಟಿದ ಕಥೆಗಳೇ ಪುರಾಣಗಳಾದವು. ಜೊತೆಗೆ ಚರಿತ್ರೆಯ ಘಟನೆಗಳೂ ಕಾಲಾನಂತರ ಪುರಾಣಗಳಾದವು. ಇವೆರಡು ಮಾತುಗಳು ಪುರಾಣ ಮತ್ತು ಚರಿತ್ರೆಯ ಸಂಬಂಧಗಳ ಕುರಿತು ವಿವೇಚಿಸಲು ಹಚ್ಚುತ್ತವೆ. ನಮ್ಮಲ್ಲಿ ಪುರಾಣಗಳನ್ನು ಎರಡು ಅತಿರೇಖದ ನೆಲೆಗಳಲ್ಲಿ ಗ್ರಹಿಸಲಾಗಿದೆ.

 1. ಪುರಾಣಗಳು ಆದಿಮಾನವನ ಊಹೆಗಳು. ಧಾಮರ್ಿಕ ಪುಣ್ಯ ಕಥೆಗಳು
 2. ಪುರಾಣಗಳು ಚರಿತ್ರೆಗಳೇ ಆಗಿವೆ. 

 ಇವುಗಳಲ್ಲಿ ಮೊದಲನೆಯದು ಭಕ್ತರನ್ನು ಕೇವಲ ಕೇಳುವ ಭಕ್ತರನ್ನಾಗಿಸುವ ಪ್ರಯತ್ನ ಮಾಡಿದರೆ; ಎರಡನೆಯದು ಪುರಾಣಗಳ ಅನೇಕ ಕಲ್ಪನೆಗಳನ್ನು ಚರಿತ್ರೆಯ ಘಟನೆಗಳೆಂದೇ ನಂಬಿಸುವ ಮನೋಭಾವ ಹೊಂದಿದೆ. ಹಾಗಾದರೆ ಪುರಾಣ ಮತ್ತು ಚರಿತ್ರೆಗಳ ಸಂಬಂಧ ಎಂಥದ್ದು? ಎಂಬುದು ಇಲ್ಲಿಯ ಪ್ರಶ್ನೆ. ಪುರಾಣ ಮತ್ತು ಚರಿತ್ರೆ ಸಂಪೂರ್ಣ ಪ್ರತ್ಯೇಕ ಅಸ್ತಿತ್ವ ಹೊಂದಿರುವಂಥವು. ಆದರೆ ತೀರಾ ಹತ್ತಿರದ ಸಂಬಂಧಗಳನ್ನೂ ಪಡೆದಿರುವುದು ಸಹ ಅಷ್ಟೇ ಸತ್ಯ. ಪುರಾಣದೊಳಗೆ ಚರಿತ್ರೆ ಇರುವುದನ್ನು ವಿವರಿಸುತ್ತಾ ಬರಗೂರು ರಾಮಚಂದ್ರಪ್ಪ ಹೀಗೆನ್ನುತ್ತಾರೆ. ಪುರಾಣಗಳ ವಿವರಗಳೆಲ್ಲ ನಿಜವಾಗಿ ನಡೆದ ಘಟನೆಗಳಲ್ಲ. ಪುರಾಣದ ಪಾತ್ರಗಳೆಲ್ಲ ಹಿಂದೆ ಜೀವಂತವಿದ್ದ ವ್ಯಕ್ತಿಗಳಲ್ಲ. ಆದರೆ ಪುರಾಣಗಳಲ್ಲಿ ಸಮಾಜ ಹಾಗೂ ಸಾಂಸ್ಕೃತಿಕ ಚಾರಿತ್ರಿಕ ವಿನ್ಯಾಸಗಳು ಇರುತ್ತವೆ. ಪುರಾಣದ ಪಾತ್ರಗಳು ಬದುಕಿನ ವ್ಯಕ್ತಿ ರೂಪಕಗಳಾಗಿರುತ್ತವೆ. ನಿದರ್ಿಷ್ಟ ಸ್ವಭಾವ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ಅರ್ಥಪೂರ್ಣವಾಗಿದೆ. 

          ಜನಪದ ಪುರಾಣಗಳು ಆಳುವ ವರ್ಗ ಮತ್ತು ಆಳುವ ವರ್ಗ ಪ್ರತಿಪಾದಿಸಿರುವ ಮೌಲ್ಯಗಳನ್ನು ಪ್ರಬಲವಾಗಿ ವಿರೋಧಿಸಿವೆ. ಹಾಗೂ ಹೊಸ ಮೌಲ್ಯ ಪ್ರಪಂಚದ ಕನಸ್ಸೊಂದನ್ನು ಕಂಡಿವೆ. ಈ ಹಿನ್ನೆಲೆಯಲ್ಲಿ ಜನಪದ ಪುರಾಣ ಹಾಗೂ ಶಿಷ್ಟ ಪುರಾಣಗಳ ನಡುವೆ ಕೆಲ ಮುಖಾಮುಖಿಗಳಿವೆ. ಹಿಂದಿನ ಭಾಗದಲ್ಲಿ ವಿಶ್ಲೇಷಿಸಿರುವಂತೆ, ಪುರಾಣಗಳ ಮೂಲ ಮಾದರಿಗಳು ಜಾನಪದದಲ್ಲಿಯೇ ಇದ್ದವು. ಆದರೆ ಅಂಥ ವಿಚಾರಗಳ ಆಧಾರದ ಮೇಲೆ ವೈದಿಕಾದಿ ಸಾಂಸ್ಥಿಕ ಧರ್ಮಗಳು ಹೊಸ ಮಾದರಿಯ ಅಂದರೆ ಧರ್ಮ ಪ್ರಚಾರಕ್ಕೆ ಯೋಗ್ಯವಾದ ಪುರಾಣಗಳನ್ನು ಸೃಷ್ಟಿಸಿದವು. ಇವುಗಳನ್ನು ಮತ್ತೆ ಜನಪದದ ಕ್ರಿಯಾಶೀಲ ಮನಸ್ಸುಗಳು ತಮ್ಮ ಅಸ್ತಿತ್ವ-ಅನನ್ಯತೆಗಳ ಪ್ರಕಟಣೆಗೆ ಬಳಸಿಕೊಂಡವು. ಹಾಗಾಗಿಯೇ ಶಿಷ್ಟ ಹಾಗೂ ಮೌಖಿಕ ಧಾರೆಗಳ ಪುರಾಣಗಳಲ್ಲಿ ಹಲವಾರು ಸಾಮ್ಯತೆಗಳಿವೆ. ನಾಯಕರ ಗುಣ-ಲಕ್ಷಣಗಳು ಮತ್ತು ವಿವಿಧ ಪಾತ್ರಗಳ ಆಳದಲ್ಲಿ ಇಂಥ ಸಂಬಂಧವಿದೆ. ಇಂಥ ಹೋಲಿಕೆಯಿಂದ ಸ್ಪಷ್ಟವಾಗುವ ಸಂಗತಿಗಳು ಹಲವಾರು. 

           ಈ ದಿಕ್ಕಿನಲ್ಲಿ ಆಲೋಚಿಸಿರುವ ವಿದ್ವಾಂಸರು ಜನಪದ ಪುರಾಣಗಳು ಒಂದಲ್ಲ ಒಂದು ರೀತಿಯಲ್ಲಿ ಶಿಷ್ಟ ಪುರಾಣಗಳಿಂದ ಪಾತ್ರಗಳನ್ನು, ಘಟನೆಗಳನ್ನು ಪರಿಕಲ್ಪನೆಗಳನ್ನು ಕಾಣಬಹುದು............... ಆ ಮೂಲಕ ಶಿಷ್ಟ ಪರಂಪರೆಯ ಕಡೆಗೆ ಸಾಗುವ ಪ್ರಯತ್ನ ನಡೆಸಿರುವುದನ್ನು ಗುರುತಿಸಬಹುದು. ಸಣ್ಣ ಸಣ್ಣ ಸಮುದಾಯಗಳ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೀರರ ಚರಿತ್ರೆಗಳು ಆ ಸಮುದಾಯಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದವು. ಪ್ರಬಲ ಸಂಸ್ಕೃತಿಯ ಪ್ರಭಾವ ಪ್ರೇರಣೆಗಳಿಂದ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಸ್ಕೃತಿ, ಸಾಂಸ್ಕೃತಿಕ ವೀರರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸಲು ಹವಣಿಸಿದವು. ಆಳುವ ವರ್ಗದಲ್ಲಿ ಹುಟ್ಟುವ ಅನೇಕ ಪುರಾಣಗಳ ವಿಷಯಗಳನ್ನು ಎತ್ತಿಕೊಂಡು ತನ್ನ ಸಂಸ್ಕೃತಿಗೆ ಒಗ್ಗುವಂತೆ ಮಾರ್ಪಡಿಸಿಕೊಂಡವು. ಪ್ರಬಲ ಕೋಮಿನ ಬೆನ್ನು ಹತ್ತಿದ ನಮ್ಮ ಕಾವ್ಯಗಳಲ್ಲಿನ ವೀರರು ತಮ್ಮ ತನವನ್ನು ಕಳೆದುಕೊಂಡರು ಎನ್ನುತ್ತಾರೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈಗಿರುವ ಜನಪದ ಪುರಾಣಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ದೃಷ್ಟಿ ಮೂಲತಃ ಶಾಸ್ತ್ರೀಯ ಸಂಪ್ರದಾಯಗಳಿಂದ ಪ್ರೇರಿತವಾದುದು. ಹಾಗೂ ತಮ್ಮ ಉದ್ದೇಶಕ್ಕೆ ತಕ್ಕ ಹಾಗೆ ರೂಪಗೊಂಡಂತಹವು. ಮೇಲಿನ ವಿದ್ವಾಂಸರ ಮಾತುಗಳಲ್ಲಿರುವ ಆತಂಕವೆಂದರೆ ಕೆಳ ಎನಿಸಿಕೊಂಡಿರುವ ಸಂಸ್ಕೃತಿಗಳು ಮೇಲ್ವರ್ಗ ಅಥವಾ ಅಧಿಕಾರದ ನೆಲೆಯ ಸಂಪ್ರದಾಯಗಳನ್ನು ಅನುಕರಿಸುವುದರ ಮೂಲಕ ತಮ್ಮ ತನವನ್ನು ಕಳೆದುಕೊಂಡರು ಎಂಬುದು. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಮೇಲೆ ಉಲ್ಲೇಖಿಸಿರುವ ವಿದ್ವಾಂಸರ ಮಾತುಗಳಲ್ಲಿನ ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ಮಾರ್ಪಡಿಸಿದರು ಎಂಬಲ್ಲಿಯೇ ಅ ಸಮುದಾಯಗಳ ಅನನ್ಯತೆ ಇದೆ. ಯಾವುದೋ ಒಂದು ಸಂಸ್ಕೃತಿ ಪ್ರಬಲವಾದ ಮತ್ತೊಂದು ಸಂಸ್ಕೃತಿ ಜೊತೆ ಮುಖಾಮುಖಿಯಾದಾಗ ನೇರ ಹಾಗೂ ಖಚಿತವಾಗಿ ಪ್ರತಿಭಟನೆ ಮಾಡದೆ ಹೋದರೂ ಅಂರ್ತಮುಖಿಯಾದ ವಿರೋಧ ಇದ್ದೆ ಇರುತ್ತದೆ. ಜೊತೆಗೆ ವಿರೋಧಿಸಿದ ಮೌಲ್ಯ ಪ್ರಪಂಚಕ್ಕಿಂತ ಆರೋಗ್ಯಪೂರ್ಣ ಎನಿಸಿದ ಮತ್ತೊಂದು ಮೌಲ್ಯ ಪ್ರಪಂಚವನ್ನು ಕಟ್ಟುವ ಆಶಯಗಳಿರುತ್ತವೆ. ಸಮುದಾಯಗಳ ಇಂಥ ಪ್ರಕ್ರಿಯೆಯನ್ನು ಪ್ರತಿಸಂಸ್ಕೃತಿಯ ನಿರ್ಮಾಣ ಎನ್ನಬಹುದು. ಈ ನೆಲೆಯಲ್ಲಿ ಅದರ ಸ್ವರೂಪ ಮತ್ತು ಸಾಧ್ಯತೆಗಳ ಪ್ರಧಾನ ಚರ್ಚೆಯನ್ನು ಹೀಗೆ ಬೆಳೆಸಬಹುದು. 

        ಪುರಾಣಗಳೆಂದರೆ ವ್ಯಕ್ತಿಗಳ ಅಥವಾ ಸಮೂಹಗಳ ಸುಪ್ತ ಮನಸ್ಸಿನ ಅಭಿವ್ಯಕ್ತಿಗಳಲ್ಲದೆ ಮತ್ತೇನು ಅಲ್ಲ. ಇಂಥ ಅಭಿವ್ಯಕ್ತಿಗಳ ಸಂದರ್ಭಗಳಲ್ಲಿ ಸಹಜವಾಗಿ ಪರಂಪರೆ ಪ್ರಭುತ್ವ ಸಾಧಿಸಿದೆ. ಹಾಗೂ ಈಗಲೂ ಸಾಧಿಸುತ್ತಿದೆ. ಜೊತೆಗೆ ಇಂಥ ಪುರಾಣಗಳ ಬಗೆಗೆ ನಿರ್ಲಕ್ಷಿತ ಸಮುದಾಯದಲ್ಲಿ ಸಮ್ಮಿಶ್ರವಾದ ಅಭಿಪ್ರಾಯಗಳೂ ಇರಲು ಸಾಧ್ಯ. ಇವುಗಳಲ್ಲಿ ಪ್ರತಿಷ್ಠೆಯ ಪುರಾಣಗಳ ಬಗ್ಗೆ ಮೋಹಗೊಂಡು ಅವುಗಳನ್ನು ಅನುಕರಿಸುವ ಹಂಬಲಗಳು ಒಂದೆಡೆಯಾದರೆ, ಮತ್ತೊಂದೆಡೆ ಅಂಥವುಗಳಿಂದ ನಾನೇನು ಕಡಿಮೆ? ಎನ್ನುವ ಮನೋಧರ್ಮದೊಡನೆ ಪರ್ಯಾಯ ನೆಲೆಯಲ್ಲಿ ಸೃಜಿಸುವ ಧೈರ್ಯಮಾಡುತ್ತವೆ. ಇಂತ ಸಂದರ್ಭಗಳೇ ಪ್ರತಿಸಂಸ್ಕೃತಿ ನಿರ್ಮಾಣದ ಸಾಧ್ಯತೆಗಳನ್ನು ತೋರ್ಪಡಿಸುತ್ತವೆ.

 ಕೊನೆ ಟಿಪ್ಪಣಿಗಳು 
  •  ವಿವರಗಳಿಗೆ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 4-5, 1987 
  •  ಉದ್ಧೃತ: ಕೆ.ಎಲ್. ಗೋಪಾಲಕೃಷ್ಣಯ್ಯ, ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ, ಪುಟ: 5, 1987
  •  ಎಲ್.ಆರ್. ಹೆಗಡೆ, ಪುರಾಣಜಿಜ್ಞಾಸೆ, ಪುಟ: 71, 1976 
  •  ಸೋಮಶೇಖರ ಇಮ್ರಾಪುರ, (ಸಂ) ಜಾನಪದ ಸಾಹಿತ್ಯ ದರ್ಶನ-15, ಪುಟ: 49-50, 1994
  •  ಓ.ಎಲ್. ನಾಗಭೂಷಣಸ್ವಾಮಿ, ಪುರಾಣ, ಪುಟ: 13,
  •  1993 ರಾಜರಾಮ ಹೆಗಡೆ, ಭಾರತೀಯ ಮೂರ್ತಿಶಾಸ್ತ್ರ......, ಅರಿವು ಬರಹ-4, ಪುಟ: 86,
  •  1993 ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ-101, 1997
  •  ಎಸ್.ವಿ. ಪ್ರಭಾಕರ, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪುಟ-60, 2000 
  •  ಹಿ.ಶಿ. ರಾಮಚಂದ್ರೇಗೌಡ ಅವರ ವಿಚಾರಗಳಿಗೆ ಋಣಿ ಪುರುಷೋತ್ತಮ ಬಿಳಿಮಲೆ, ಕೂಡುಕಟ್ಟು, ಪುಟ: 99, 1997
  •  ಬರಗೂರು ರಾಮಚಂದ್ರಪ್ಪ,ಪುರಾಣದೊಳಗೆ ಚರಿತ್ರೆಯ ಚಡಪಡಿಕೆ,ಪ್ರಜಾವಾಣಿ (ಸಾ.ಪು),ಪುಟ:8, 25-08-2002 
  •  ತೀ.ನಂ. ಶಂಕರನಾರಾಯಣ, ಜನಪದ ಮಹಾಕಾವ್ಯ, ಪುಟ: 55, 1996
  •  ಗಂಗಾಧರ ದೈವಜ್ಞ, ಮಾಳಿಂಗರಾಯನ ಕಾವ್ಯ, ಪುಟ: 12, 1999





No comments:

Post a Comment