ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಚಿತ್ರದುರ್ಗ ನಗರದಲ್ಲಿ ಇಂದು ಆಯೋಜನೆಗೊಂಡಿರುವ ಯಕ್ಷಗಾನ ಬಯಲಾಟ ರಂಗಸಂಭ್ರಮ ಎಂಬ ಈ ವಿಶಿಷ್ಟ ಕಾರ್ಯಕ್ರಮದ ಮೊದಲ ಗೋಷ್ಟಿಯ ಅಧ್ಯಕ್ಷರಾದ ಪ್ರೊ. ಎಚ್.ಲಿಂಗಪ್ಪನವರೆ, ಗೋಷ್ಟಿಯಲ್ಲಿ ಉಪಸ್ಥಿತರಿರುವ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಹಿರಿಯರೂ ಆಗಿರುವ ಪಿ. ತಿಪ್ಪೇಸ್ವಾಮಿಯವರೇ, ಚಿತ್ರದುರ್ಗ ಶಿಕ್ಷಕರ ತರಬೇತಿ ಕೇಂದ್ರದ ಸಹ ನಿದೇರ್ಶಕರಾದ ಎಸ್.ಎನ್.ಕುಮಾರ್ ಅವರೆ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿರುವ ಎಲ್ಲಾ ಆಹ್ವಾನಿತ ಗಣ್ಯರೇ, ಕಲಾಸಕ್ತ ಬಂಧುಗಳೆ, ಮಾದ್ಯಮದ ಮಿತ್ರರೆ ನಿಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.
ಬಂಧುಗಳೆ ನಮ್ಮ ಚಿತ್ರದುರ್ಗ ಇತಿಹಾಸ ಹಾಗೂ ಸಂಸ್ಕೃತಿಯ ವಿಷಯದಲ್ಲಿ ಶ್ರೀಮಂತ ಪರೆಂಪರೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಂಥ ಮಹತ್ವದ ನೆಲದಲ್ಲಿ ನಾಡಿನ ವಿಭಿನ್ನ ಜನಪದ ಕಲೆಗಳ ಬಗೆಗಿನ ಚರ್ಚೆ ಹಾಗೂ ಪ್ರರ್ಶನಗಳನ್ನು ಏರ್ಪಡಿಸುವುದರ ಮೂಲಕ ಈ ಭಾಗದ ಜನರಿಗೆ ಸಮಾಜಿಕ ಹಾಗೂ ಕಲಾ ಜಾಗೃತಿಯನ್ನು ಜೊತೆಗೆ ಮನೋರಂಜನೆಯನ್ನು ನೀಡಬಹುದಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ, ಹಾಗೂ ಅವರ ಸದಸ್ಯರೆಲ್ಲರಿಗೂ ಚಿತ್ರದುರ್ಗ ಪ್ರದೇಶದ ಎಲ್ಲಾ ಜನರ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.
ಸರ್ಕಾರ ಅಥವಾ ಸಂಘ ಸಂಸ್ಥೆಗಳ ವತಿಯಿಂದ ನಡೆಯುವ ಇಂಥ ಕಾರ್ಯಕ್ರಮಗಳಲ್ಲಿ ಕಲೆಗಳ ಬಗೆಗಿನ ಕೇವಲ ಚರ್ಚೆಯೋ ಅಥವಾ ಬರೀ ಪ್ರದರ್ಶನವೂ ನಡೆಸುವುದುಂಟು. ಆದರೆ ಈ ಕಾರ್ಯಕ್ರಮದಲ್ಲಿ ಕಲೆಯ ಬಗ್ಗೆ ಮಾಹಿತಿಪೂರ್ಣ ಚರ್ಚೆ ಹಾಗು ಕಲೆಯ ಪ್ರದರ್ಶನ ಒಟ್ಟೊಟ್ಟಿಗೆ ನಡೆಯುತ್ತಿರುವುದು ವಿಶೇಷ. ಇದರ ಭಾಗವಾಗಿ ಈ ದಿನ ಮಧ್ಯಾಹ್ನ ೨ ಗಂಟೆಗೆ ತುಮಕೂರು ಜಿಲ್ಲೆಯ ಪುಟ್ಟ ಶಾಮಯ್ಯ ಅವರ ತಂಡದ ವತಿಯಿಂದ ತೊಗಲುಗೊಂಬೆಯಾಟ ನಡೆಯಲಿದೆ. ಅದಕ್ಕೂ ಮೊದಲು ಈಗ ತೊಗಲುಗೊಂಬೆಯಾಟ ಕಲೆಯ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ.
ತೊಗಲುಗೊಂಬೆಯಾಟದ ಸ್ವರೂಪ
ಹೆಸರೇ ಸೂಚಿಸುವಂತೆ ತೊಗಲಿನಿಂದ ಗೊಂಬೆಗಳನ್ನು ತಯಾರಿಸಿ ಅವುಗಳನ್ನು ವ್ಯವಸ್ಥಿತವಾಗಿ ಜೊಡಿಸಿ ರಂಗ ವೇದಿಕೆಯ ಮೇಲೆ ತಂದು ಅವುಗಳ ಮೂಲಕವೇ ಕಥೆಗಳನ್ನು ಪ್ರದರ್ಶಿಸಿ ತೋರಿಸುತ್ತಾರೆ. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ. ಆ ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಒಬ್ಬ ಅನುಭವೀ ಕಲಾವಿದ ಗೊಂಬೆಗಳನ್ನು ಪ್ರದರ್ಶಿಸಿದೆ ಉಳಿದ ಕಲಾವಿದರು ಪರದೆಯ ಹಿಂದೆ ಕುಳಿತು ಆಟಕ್ಕೆ ಅಗತ್ಯವಾದ ಧ್ವನಿ, ಸಂಗೀತ ಮತ್ತಿತರ ಸಹಾಯವನ್ನು ನೀಡುತ್ತಾರೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಈ ಕಲಾವಿದರ ತಂಡ ಹಲವಾರು ಸಂದರ್ಭಗಳಲ್ಲಿ ಒಂದೇ ಕುಟುಂಬದ ಸದಸ್ಯರೇ ಆಗಿರುತ್ತಾರೆ ಎಂಬುದು ಗಮನಾರ್ಹ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಎತ್ತರದ ಮಂಟಪ ರಚಿಸಿ, ಉದ್ದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ. ಈ ಪ್ರದರ್ಶನಗಳು ರಾತ್ರಿ ಇಡೀ ನಡೆಯುವ ಕಾಲವೊಂದಿತ್ತು ಈಗ ಎರಡು ಮೂರು ಗಂಟೆಗಳ ಅವಧಿಗೆ ಸೀಮಿತಗೊಂಡಿದೆ.
ಉದ್ದೇಶಗಳು ಮತ್ತು ಸಂದರ್ಭಗಳು
ತೊಗಲುಗೊಂಬೆಯಾಟ ಮೊಟ್ಟ ಮೊದಲಿಗೆ ಆರಂಭಗೊಂಡಿದ್ದು ಭಕ್ತಿ ಮತ್ತು ಭಾವನೆಗಳ ಹಿನ್ನೆಲೆಯಲ್ಲಿ. ಹಾಗಾಗಿಯೇ ಈ ಆಟದಲ್ಲಿ ಪೌರಾಣಿಕ ಕಥೆಗಳು ಪ್ರಧಾನವಾಗಿದ್ದು ಅವುಗಳ ಮೂಲಕ ಭಕ್ತಿ ಪ್ರಚಾರದ ಉದ್ದೇಶವಿತ್ತು. ಈ ಕಲೆಯನ್ನು ಪ್ರದರ್ಶಿಸುವವರನ್ನು ದೈವ ಸ್ವರೂಪಿ ಎಂಬುದಾಗಿ ಭಾವಿಸಲಾಗಿತ್ತು. ಗೊಂಬೆ ಆಟದವರು ಊರು ಪ್ರವೇಶಿಸಿದರೆ ಅವರನ್ನು ಕೇವಲ ಹೊಟ್ಟೆ ಹೊರೆಯಲು ಬಂದ ಭಿಕ್ಷುಕರಂತೆ ಕಾಣುತ್ತಿರಲಿಲ್ಲ. ಗೊಂಬೆಯಾಟದವರು ಊರಿಗೆ ಪ್ರವೇಶಿಸಿದರೆ ಅವರು ಒಲೆ ಹಚ್ಚುತ್ತಿರಲಿಲ್ಲ. ಜಾತಿ ಶ್ರೇಣೀಕರಣ ಇವರಿಗೆ ಅಡ್ಡಿ ಉಂಟುಮಾಡುತ್ತಿರಲಿಲ್ಲ. ಕೊಡುವ ಧನ-ಧಾನ್ಯಗಳನ್ನು ಮೀಸಲಿರಿಸಿ ಗೌರವದಿಂದ ಸಮರ್ಪಿಸುತ್ತಿದ್ದರು. ತೊಗಲುಗೊಂಬೆಯಾಟಗಳು ಏರ್ಪಾಟಾಗುತ್ತಿದ್ದ ಸಂದರ್ಭಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಮಳೆ-ಬೆಳೆಗಾಗಿ, ಜನ ಜಾನುವಾರುಗಳ ಕ್ಷೇಮಕ್ಕಾಗಿ, ಊರಿನ ಉಲುಸಿಗಾಗಿ, ಸಂತಾನ ಪ್ರಾಪ್ತಿಗಾಗಿ, ಸ್ವರ್ಗ ಪ್ರಾಪ್ತಿಗಾಗಿ, ದೆವ್ವ ಪ್ರೇತಗಳ ಉಚ್ಛಾಟನೆಗಾಗಿ, ಹಬ್ಬ ಹರಿದಿನ, ಜಾತ್ರೆ-ಉತ್ಸವ ಮೊದಲಾದ ಧಾರ್ಮಿಕ ಆಚರಣೆಗಳ ಭಾಗವಾಗಿ ತೊಗಲುಗೊಂಬೆಯಾಟ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇಂಥ ಸಂದರ್ಭಗಳಲ್ಲೆಲ್ಲ ಈ ಕಲೆ ಶುದ್ಧ ದೈವ ಸ್ವರೂಪಿ ಕಾರ್ಯವಾಗಿತ್ತು. ಹಾಗಾಗಿಯೇ ಗೊಂಬೆಯಾಟದ ತಂಡಗಳನ್ನು ಕರೆಸಿ ಗೌರವದಿಂದ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಿ ಇರುವವರು ಗೊಂಬೆಗಳನ್ನು ಮಾಡಿಸಿ ಕೊಡುವ ಪರಿಪಾಟವೂ ಇತ್ತು. ವಿವಿಧ ಪುರಾಣ ಪಾತ್ರಗಳ ಗೊಂಬೆಗಳನ್ನು ಮಾಡಿಸಿಕೊಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇತ್ತು. ಇತಿಹಾಸದ ರಾಜಮನೆತನಗಳು ಈ ಗೊಂಬೆಯಾಟದ ಕಲಾವಿದರಿಗೆ ಮತ್ತು ಕಲೆಗೆ ರಾಜಾಶ್ರಯವನ್ನು ನೀಡಿರುವುದು ತಿಳಿದು ಬರುತ್ತದೆ. ಆದರೆ ನಂತರದ ಬದಲಾದ ಕಾಲ ಮಾನದ ಕಾರಣದಿಂದ ಈ ಕಲೆಯು ದೈವೀ ಆಯಾಮವನ್ನು ಕಳೆದುಕೊಂಡು ಕೇವಲ ಮನರಂಜನೆ ಹಾಗೂ ನೀತಿ ಬೋಧನೆಯ ಮಾದ್ಯಮವಾಗಿ ಬದಲಾಯಿತು. ಅದರ ಪರಿಣಾಮವಾಗಿ ವಿವಿಧ ಪುರಾಣಕಥೆಗಳ ಮೂಲಕ ಮನೋರಂಜನೆ ಹಾಗೂ ನೀತಿಬೋಧನೆಯನ್ನು ಮಾತ್ರ ಪ್ರಧಾನವಾಗಿಸಿಕೊಳ್ಳಲಾಯಿತು.
ಕಥೆಗಳ ಮೂಲ
ತೊಗಲುಗೊಂಬೆಯಾಟದ ಕಲೆಯ ಪ್ರದರ್ಶನಗಳಿಗೆ ಪ್ರಧಾನವಾಗಿ ರಾಮಾಯಣ, ಮಹಾ ಭಾರತ, ಭಾಗವತ ಮತ್ತಿತರ ಮೂಲಗಳಿಂದ ಕಥೆಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಸಂದರ್ಭಕ್ಕೆ ಅಗತ್ಯವಾಗಿರುವ ಜಾಗೃತಿ ಕಾರ್ಯಕ್ಕಾಗಿ ಈ ಕಲೆಯನ್ನು ಬಳಸಿಕೊಂಡಿದ್ದರ ಪರಿಣಾಮ ಆ ದೃಷ್ಟಿಯಿಂದ ಹಾಗೂ ಸ್ವತಃ ಕಲಾವಿದರ ಹೊಸಕಾಲಕ್ಕೆ ಅನುಗುಣವಾಗಿ ಕಲೆಯನ್ನು ಮರು ರೂಪಿಸುವ ಪ್ರಯತ್ನವಾಗಿ ಕೆಲವು ಸಾಮಾಜಿಕ ಹಾಗೂ ಐತಿಹಾಸಿಕ ಕಥಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಲಾ ಪ್ರದರ್ಶನಗಳಿಗೆ ಬಳಕೆಯಾಗುವ ವಸ್ತುಗಳನ್ನು ಈ ಮುಂದಿನಂತೆ ಕಾಣಿಸಬಹುದು.
ರಾಮಾಯಣ : ರಾವಣ ದಿಗ್ವಿಜಯ, ಕೌಸಲ್ಯ ಕಲ್ಯಾಣ, ಪಂಚವಟಿ, ಶತಕಂಠ ರಾವಣ, ಐರಾವಣ-ಮೈರಾವಣ, ವೈಕುಂಟ, ರಾಮಾಯಣ, ಲವ-ಕುಶ
ಮಹಾಭಾರತ : ಭೀಮಸೇನ ಪ್ರತಿಜ್ಞೆ, ಪಾಂಡವ ವಿಲಾಸ, ವಿರಾಟ ಪರ್ವ, ಕೃಷ್ಣಾರ್ಜುನರ ಕಾಳಗ
ಭಾಗವತ : ದೇವಿ ಮಹಾತ್ಮೆ, ಸಮುದ್ರ ಮಂಥನ, ಶಿವ ಜಲಂದರ, ತ್ರಿಪುರ ಸಂಹಾರ, ಕೃಷ್ಣ ಪಾರಿಜಾತ
ಇತರೆ : ರೇಣುಕಾ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಭಕ್ತ ಮಾರ್ಕಂಡೇಯ
ಜನಪದ : ಚಿತ್ರಕೇತು ಮಹಾರಾಜ, ಸಾರಂಗಧರ, ಸುವರ್ಣವತಿ ಪರಿಣಯ, ಪ್ರಭಾವತಿ, ಮಂಜುಘೋಷ, ಕರಿಭಂಟನ ಕಾಳಗ, ನಗಿಸಿದವರ ಕಥೆ ವಿಧಿವಿಲಾಸ
ಐತಿಹಾಸಿಕ : ಪ್ರವಾದಿ ಬಸವೇಶ್ವರ, ಬಾಪು ಕಥೆ, ಸ್ವತಂತ್ರ ಹೋರಾಟ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಹಾತ್ಮ ಕಬೀರ,ಸಿಪಾಯಿ ದಂಗೆ
ಸಾಮಾಜಿಕ : ತಾಯಿ ಎದೆ ಹಾಲು, ಕುಟುಂಬ ಯೋಜನೆ, ಜನ ಸಂಖ್ಯಾ ನಿಯಂತ್ರಣ, ಕಬ್ಬಿನ ಮಹಾತ್ಮೆ, ತಂಬಾಕಿನ ದುಷ್ಪರಿಣಾಮ, ಬ್ರೂಣ ಹತ್ಯೆ
ಈ ರೀತಿ ಅನೇಕ ವಸ್ತು ವಿಷಯಗಳನ್ನು ತಮ್ಮ ಆಟದೊಳಗೆ ಸೇರಿಸಿಕೊಂಡು ಸಮಾಜದ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವುದು ತೊಗಲು ಗೊಂಬೆಯಾಟದ ಮಹತ್ವವನ್ನು ಸಾರುತ್ತದೆ. ಈ ಪ್ರಸಂಗಗಳಲ್ಲಿ ಕೆಲವನ್ನು ಕೆಲವು ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿ ಪ್ರದರ್ಶಿಸಲಾಗುತ್ತದೆ. ಉದಾ : ಲವ-ಕುಶ ಪ್ರಸಂಗ ಸಂತಾನ ಪ್ರಾಪ್ತಿಗೆ, ರಾಮಾಯಣದ ಸ್ವರ್ಗಾರೋಹಣ ಪ್ರಸಂಗ ಅಪರಕರ್ಮದ ಕೊನೆದಿನ ಸ್ವರ್ಗ ಪ್ರಾಪ್ತಿಗೆ, ಮಳೆಗಾಗಿ ವಿರಾಟಪರ್ವ, ಊರಿಗೆ ಉತ್ತಮ ಉಲುಸಾಗಲೆಂದು ದೇವಿ ಮಹಾತ್ಮೆ ಇತ್ಯಾದಿ
ಪ್ರಾಚೀನತೆ- ಪ್ರದೇಶ
ತೊಗಲುಗೊಂಬೆಯಾಟದ ಮೂಲ ಚೀನ ಎಂದು ಕೆಲವರು, ಭಾರತ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ಜನ ವಿದ್ವಾಂಸರು ಊಹಿಸಿರುವಂತೆ ಭಾರತವೇ ಈ ಕಲೆಯ ಮೂಲ ನೆಲ. ಇಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿರಬಹುದು. ಈ ಕಲೆ ಭಾರತದಲ್ಲಿ ಪುರಾಣ ಕಾಲಕ್ಕಿಂತ ಪೂರ್ವದಲ್ಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಪರಾವೆಗಳಿವೆ. ಇದರ ಪ್ರಾಚೀನತೆಯನ್ನು ಕ್ರಿ.ಪೂ.೩೦೦೦ ವರ್ಷಗಳಷ್ಟು ಹಿಂದಿನ ಭಗವದ್ಗೀತೆಯ ಕಾಲಕ್ಕೆ ಗುರುತಿಸಲಾಗಿದೆ. ಜರ್ಮನಿಯ ವಿದ್ವಾಂಸರು ಹೇಳುವಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೊಗಲುಗೊಂಬೆ ಆಟ ಶಬ್ದದ ಉಲ್ಲೇಖವಿದೆ. ಮಹಾಭಾರತ ಗ್ರಂಥದಲ್ಲೂ ಇದರ ಪ್ರಸ್ತಾಪವಿದೆ. ಈ ಆಟವನ್ನು ಕಿಳ್ಯೇಕ್ಯಾತರು ಸಮುದಾಯ ತಮ್ಮ ಪಾರಂಪರಿಕ ಕಲೆಯಾಗಿಸಿಕೊಂಡಿದ್ದು, ಈ ಕಿಳ್ಳೇಕ್ಯಾತರ ಮೂಲ ಪುರುಷ ಪಾಂಡವರ ಜೊತೆ ವನವಾಸ ಮಾಡಿದನೆಂಬುದು ನಂಬಿಕೆ. ಮೂಲತಃ ತಮಿಳುನಾಡಿನ ಮೂಲದ ಈ ಕಲೆ ಕರ್ನಾಟಕಕ್ಕೆ ಸಮುದಾಯಗಳ ಮೂಲಕ ವಲಸೆ ಬಂದಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದ ಧನಪಾಲನ ತಿಲಕಮಂಜರಿ, ವಿದ್ಯಾರಣ್ಯರ ಪಂಚಾದಶಿ, ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ, ಭೀಮ ಕವಿಯ ಬಸವ ಪುರಾಣ, ನೇಮಿಚಂದ್ರನ ನೇಮಿನಾಥ ಪುರಾಣ ಗಳಲ್ಲಿ ತೊಗಲುಗೊಂಬೆಯಾಟದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕನ್ನಡದ ವಚನಯುಗದಲ್ಲಿ ಅನೇಕ ವಚನಕಾರರು ಈ ಕಲೆಯ ಬಗ್ಗೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಲಕೇತ ಬೊಮ್ಮಯ್ಯ ಎಂಬ ವಚನಕಾರನಿದ್ದು ಅವನು ತೊಗಲುಗೊಂಬೆಯಾಟದ ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದವನಾಗಿರಬಹುದೆಂದು ಊಹಿಸಲಾಗಿದೆ.
ಭಾರತದ ಮಹಾರಾಷ್ಟ್ರ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮೊದಲಾದ ರಾಜ್ಯಗಳಲ್ಲಿ, ಕರ್ನಾಟಕದ ಧಾರವಾಡ(ಕಿಳ್ಳೇಕ್ಯಾತರ ಆಟ), ಕೋಲಾರ,ಬಳ್ಳಾರಿ, ರಾಯಚೂರು ಬೀದರ್ (ತೋಲುಬೊಮ್ಮಲಾಟ), ಗುಲ್ಬರ್ಗಾ(ಕಟಬರಾಟ), ಬೆಳಗಾವಿ-ಕಾರವಾರ( ಚಿತ್ರಮರಾಟಿಗರು,ಕಥಾನಾಯಕರಾಟ), ಹಳೆ ಮೈಸೂರು ಭಾಗ (ಗೊಂಬೆರಾಮರಾಟ)ದ ಜಿಲ್ಲೆಗಳಲ್ಲಿ ಈ ಕಲೆ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಈ ಕಲೆಯನ್ನು ಉತ್ತುಂಗಕ್ಕೇರಿಸಿದ ಅನೇಕ ಕಲಾವಿದರಿದ್ದು ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ ಕರ್ನಾಟಕದ ಪ್ರಮುಖ ಕಲಾವಿದರು : ಹೊಂಬಯ್ಯ, ಗುಡ್ಡಪ್ಪ ಶಟವಾಜಿ, ಎಡ್ರಮ್ಮನಹಳ್ಳಿ ಭರಮಪ್ಪ, ಶಿಂದೆ ರಾಮಮೂರ್ತಿ, ಮೊರನಾಳದ ಭೀಮವ್ವ, ದೊಡ್ಡಬಾಳಪ್ಪ, ಬೆಳಗಲ್ಲು ವೀರಣ್ಣ, ಹನುಮಂತಯ್ಯ, ಹೊಂಬಯ್ಯ, ಅಪ್ಪಾಜಿ, ಬಡೇಲಡುಕಿನ ಕೆ. ತಿಪ್ಪೇಸ್ವಾಮಿ ಮೊದಲಾದವರು. ಇನ್ನೂ ಜಗತ್ತಿನ ಚೀನಾ, ಟರ್ಕಿ, ಗ್ರೀಸ್, ಥೈಲ್ಯಾಂಡ್, ಮಲೇಷಿಯ, ಇಂಡೋನೇಷಿಯಾ, ಪರ್ಷಿಯಾ, ಇಟಲಿ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತೊಗಲು ಗೊಂಬೆಯಾಟ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ವಿದೇಶಗಳಲ್ಲಿ ತೊಗಲುಗೊಂಬೆಯಾಟಕ್ಕೆ ಅನೇಕ ವೃತ್ತಿಪರ ಸಂಸ್ಥೆಗಳು ತೊಡಗಿಸಿಕೊಂಡಿವೆ.
ತೊಗಲು ಗೊಂಬೆಯಾಟದ ಇಂದಿನ ಸ್ಥಿತಿಗತಿ
ಎಲ್ಲಾ ಕಲೆಗಳಿಗೆ ಆಧುನಿಕತೆ ತಂದೊಡ್ಡಿದ ಸವಾಲು ಹಾಗೂ ಸಂಕಟಗಳನ್ನು ಈ ಕಲೆಗೂ ತಂದಿದೆ. ಒಂದು ಕಾಲಕ್ಕೆ ಅಪಾರ ಸಂಖೆಯ ಕಲಾವಿದರು ಮತ್ತು ಕಲಾ ತಂಡಗಳು ಇದದ್ದು ಈಗ ಕೇವಲ ನೂರರ ಒಳಗಿದೆ. ಒಂದು ಸಮೀಕ್ಷೆಯ ಪ್ರಕಾರ ೧೯೮೮ ರಲ್ಲಿ ೧೬೭ ತೊಗಲು ಗೊಂಬೆಯಾಟದ ತಂಡಗಳಿದ್ದು ಅವುಗಳ ಸಂಖ್ಯೆ ಈಗ ಕ್ಷೀಣಿಸಿ ಬೆರಳೆಣಿಕೆಯಷ್ಟಾಗಿವೆ. ಈ ಕಲೆಯಲ್ಲಿ ಅದ್ಭುತ ಸಾಧಕರೆನಿಸಿದ ಬೆಳಗಲ್ಲು ವಿರಣ್ಣ ಅವರ ಪ್ರಕಾರ ಕರ್ನಾಟಕದಲ್ಲಿ ಒಂದು ಕಾಲಕ್ಕೆ ೧೮೦ ಜನ ತೊಗಲುಗೊಂಬೆ ಕಲಾವಿದರಿದ್ದರು ಆದರೆ ಈಗ ೧೦೦ಕ್ಕೆ ಇಳಿದಿದೆ. ಆಧುನಿಕತೆಯ ವಿದುನ್ಮಾನ ಮಾಧ್ಯಮಗಳು ಮನರಂಜನೆಯ ಅನಂತ ಸಾಧ್ಯತೆಗಳನ್ನು ಸೃಷ್ಟಸಿರುವ ಹಿನ್ನೆಲೆಯಿಂದಾಗಿ ಈ ಆಟವನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಕ್ಷೀಣಿಸಿದೆ. ಆಡಿಸುವ ಪ್ರಾಯೋಜಕರು ಇಲ್ಲವಾಗಿದ್ದಾರೆ. ಸರ್ಕಾರದ ಪ್ರೋತ್ಸಾಹವೂ ಅಷ್ಟಕ್ಕಷ್ಟೆ. ಈ ಎಲ್ಲಾ ಕಾರಣದಿಂದಾಗಿ ಈ ಕಲೆಯನ್ನು ನಂಬಿ ಬದುಕುವ ಕುಟುಂಬಗಳು ವೆಚ್ಚದಾಯಕವಾದ ಈ ಕಲೆಯನ್ನು ಮುಂದುವರೆಸಲು ಸಾಧ್ಯವಾಗದೆ ಬೇರೆ ವೃತ್ತಿಗಳನ್ನು ಹರಿಸಿ ಈ ಕಲೆಯಿಂದ ದೂರವಾಗಿವೆ. ಒಟ್ಟಾರೆ ಕಲೆಗಳನ್ನು ನೋಡಿ ಆಸ್ವಾದಿಸುವ ಜನ ಮತ್ತು ವಾತಾವರಣವಿಲ್ಲ. ಕಲೆಯನ್ನು ಮುಂದುವರೆಸುವ ಕಲಾವಿದರಿಲ್ಲ. ಕಲೆಗೆ ಬೇಕಾದ ಅಗತ್ಯ ಸಾಮಾಗ್ರಿ ಮತ್ತು ಕುಶಲತೆಯಿಲ್ಲ. ಆಧುನಿಕ ಸಂದರ್ಭಕ್ಕೆ ಅನುಗುಣವಾಗಿ ಇರುವ ಕಲೆಗೆ ಮರು ರೂಪಣೆಮಾಡುವ ಮನಸ್ಸು ಮತ್ತು ಕಾರ್ಯಗಳಿಲ್ಲ. ಈ ಕಲೆಗೆ ಬೇಕಾದ ಹಣ ಮತ್ತು ಜನ ಬೆಂಬಲ ಇಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಪಾರಂಪರಿಕ ತೊಗಲು ಗೊಂಬೆಯಾಟ ನಾಶದ ಅಂಚಿಗೆ ತಲುಪಿದೆ.
ತೊಗಲು ಗೊಂಬೆಯಾಟ ಮತ್ತು ಪಾರಂಪರಿಕ ಜ್ಞಾನಗಳು
ತೊಗಲುಗೊಂಬೆಯಾಟದ ಕಲೆಯನ್ನು ಕೇವಲ ಕಲೆಯಾಗಿ ನೋಡುವಂತಿಲ್ಲ. ಅದರ ಹಿನ್ನೆಲೆಗೆ ಅಪಾರವಾದ ಜ್ಞಾನ ಸಂಪತ್ತಿದೆ. ಈ ದೃಷ್ಟಿಯಿಂದ ಗಮನಿಸಬೇಕಾದ ಸಂಗತಿಗಳೆಂದರೆ :
೧. ಗೊಂಬೆಗಳ ನಿರ್ಮಾಣ
೨. ಗೊಂಬೆಗಳ ಸಂರಕ್ಷಣೆ
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
೪. ಚಿತ್ರಕಲೆ
೫. ಬಣ್ಣ ತಯಾರಿಕೆ
೧. ಗೊಂಬೆಗಳ ನಿರ್ಮಾಣ
ಕಲಾವಿದರು ತೊಗಲುಗೊಂಬೆಯಾಟವನ್ನು ಪ್ರದರ್ಶಿಸಲು ಬೇಕಾಗುವ ಗೊಂಬೆ ತಯಾರಿಕೆಗೆ ಬೇರೆ ಯಾರನ್ನೂ ಆಶ್ರಯಿಸದೆ ತಾವೇ ಅಗತ್ಯವಿರುವ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಚರ್ಮವನ್ನು ಹದಮಾಡಿ ಅದಕ್ಕೆ ಒಂದು ರೂಪು ಕೊಡುವುದು ಸಾಮಾನ್ಯ ಕಾರ್ಯವಲ್ಲ. ಎಲ್ಲರಿಗೂ ಬರುವಂತಹದ್ದಲ್ಲ. ಅದನ್ನು ತಮ್ಮ ಅಪಾರ ಶ್ರಮ ಹಾಗೂ ಪ್ರಯತ್ನಗಳಿಂದ ಕಲಿಯಬೇಕಾಗುತ್ತದೆ. ಇದನ್ನು ಕಲಾವಿದರು ದೀರ್ಘಕಾಲದ ಪ್ರಯತ್ನದಿಂದಾಗಿ ಕಲಿಯುತ್ತಾರೆ. ಈ ಗೊಂಬೆತಯಾರಿಸುವ ಕುಶಲತೆ ಇದ್ದವರು ಕಲಾ ಪ್ರದರ್ಶನಗಳು ಕಡಿಮೆಯಾದರೂ ಚಿಂತಿಸಬೇಕಾಗಿಲ್ಲ ಇತ್ತೀಚೆಗೆ ಈ ರೀತಿಯ ಗೊಂಬೆಗಳಿಗೆ ಮಾರುಕಟ್ಟೆಯಲ್ಲಿ (ವಿಶೇಷವಾಗಿ ವಿದೇಶಿಯರಿಂದ) ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಈ ಗೊಂಬೆ ತಯಾರಿಸುವ ಕಲೆಯನ್ನು ಉಪ ಜೀವನಕ್ಕೆ ಆದಾರವಾಗಿಸಿಕೊಳ್ಳಲು ಸಾಧ್ಯವಿದೆ. ಇದು ಕಲೆಯ ಜೊತೆ ನಶಿಸಿದರೆ ಅಷ್ಟರ ಮಟ್ಟಿಗೆ ನಮ್ಮ ಪಾರಂಪರಿಕ ಜ್ಞಾನವನ್ನು ಕಳೆದುಕೊಂಡಂತೆ
೨. ಗೊಂಬೆಗಳ ಸಂರಕ್ಷಣೆ
ಕಲಾವಿದರು ತಾವು ತಯಾರಿಸಿದ ಗೊಂಬೆಗಳನ್ನು ಬಹು ದಿನಗಳವರೆಗೆ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಅದಕ್ಕಾಗಿ ಬಿದಿರಿನ ಪಟ್ಟಿಗೆಗಳ ತಯಾರಿ ಮತ್ತು ವಿವಿಧ ಗಿಡಮೂಲಿಕೆಗಳನ್ನು ಗೊಂಬೆಗಳಿಗೆ ಬಳಿಯುವುದು ಕಲಾವಿದರಿಗೆ ಪರಂಪರೆಯ ಅನುಭವದಿಂದ ಲಭ್ಯವಾದ ಜ್ಞಾನ. ಹಾಗಾಗಿ ಇಂಥ ಜ್ಞಾನವನ್ನು ಉಳಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಈ ಬಗ್ಗೆ ಗಂಭೀರವಾದ ಅಧ್ಯಯನಮಾಡಿ ಸಂರಕ್ಷಣಾ ಪುಟ್ಟಿ ತಯಾರಿಸುವ ಕೌಶಲ, ಗೊಂಬೆಗಳು ಹಾಳಾಗದಂತೆ ಸಂರಕ್ಷಿಸುವ ಆ ಗಿಮೂಲಿಕೆಗಳು ಯಾವುವು ಅವುಗಳನ್ನು ಬಳಸುವ ಕ್ರಮಗಳ ಬಗ್ಗೆ ತಿಳಿದು ಸಮಕಾಲೀನ ಸಮಾಜದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳುವ ಅವಕಾಶವಿದೆ.
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
ತೊಗಲುಗೊಂಬೆಯಾಟದ ಪ್ರದರ್ಶನದಲ್ಲಿ ಸಂಗೀತದ ಪಾತ್ರ ಹಿರಿದು. ಇದಕ್ಕೆ ಬೇಕಾಗುವ ವಾದ್ಯಪರಿಕರಗಳು ಹಲವಾರು. ಮೃದಂಗ, ಮುಖವೀಣೆ, ಡೋಲು, ಪುಂಗಿ,ತಾಳ, ಪಾವರೆ,ಹಾರ್ಮೋನಿಯಂ, ಕೊಳಲು ವಾದ್ಯಗಳನ್ನು ಬಳಸುತ್ತಾರೆ. ಈ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುವುದು ಸಾಮಾನ್ಯ. ಹಾಗೂ ಅವುಗಳನ್ನು ಸಮರ್ಥವಾಗಿ ನುಡಿಸುವ ಕಲೆಯೂ ಕೂಡ ಕಲಾವಿದರಿಗೆ ಕರಗತ. ಇಲ್ಲಿ ಬಳಸುವ ಸಂಗೀತ ವಾದ್ಯಗಳು ಈ ಕಲೆಯ ಹೊರತಾಗಿಯೂ ಬಳಸ ಬಹುದಾದವು. ಹಾಗಾಗಿ ಇವುಗಳ ತಯಾರಿಕೆ ಮತ್ತು ಬಳಕೆಯ ಕೌಶಲಗಳನ್ನು ಸಮರ್ಥವಾಗಿ ಉಳಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ವಾದ್ಯಗಳಲ್ಲಿ ಪಾವರೆ ವಾದ್ಯ ವಿಶಿಷ್ಟ. ಈ ವಾದ್ಯವನ್ನು ಕಂಚಿನ ಗಂಗಾಳದಿಂದ ಸಿದ್ದಗೊಳಿಸುತ್ತಾರೆ. ಗಂಗಾಳವನ್ನು ನೆಲದ ಮೇಲೆ ಬೋರಲು ಹಾಕಿ ಅದರ ಮೇಲೆ ಮಧ್ಯಭಾಗದಲ್ಲಿ ಮೇಣ ಮೆತ್ತಿ ಹಂಚಿ ಕಡ್ಡಿಯನ್ನು ಅದರಲ್ಲಿ ನೆಟ್ಟು ಎರಡೂ ಕೈಗಳಿಂದ ಉಜ್ಜಿದಾಗ ನಾದ ಹೊರಡುತ್ತದೆ. ಇಂಥ ವಾದ್ಯಗಳನ್ನು ಮುಂದುವರೆಸುವುದು ಪರಂಪರೆಯನ್ನು ಉಳಿಸುವ ಸಮರ್ಥವಾದ ಕಾರ್ಯವೆನಿಸುತ್ತದೆ.
೪. ಚಿತ್ರಕಲೆ
ತೊಗಲು ಗೊಂಬೆಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಚಿತ್ರಕಲೆ ಬಹು ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಚರ್ಮದ ಮೇಲೆ ರೇಖಾ ವಿನ್ಯಾಸ ಮಾಡುವುದು; ರೇಖಾ ವಿನ್ಯಾಸಕ್ಕನುಗುಣವಾಗಿ ಚರ್ಮವನ್ನು ಕತ್ತರಿಸುವುದು; ಬಣ್ಣ ತುಂಬುವುದು ಇತ್ಯಾದಿ ಕಾರ್ಯಗಳು ನಡೆಯುತ್ತವೆ. ಚರ್ಮವನ್ನು ತಮಗೆ ಬೇಕಾದ ಪಾತ್ರದ ಆಕಾರಕ್ಕೆ ಕತ್ತರಿಸಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ಬಣ್ಣದ ಸಂಯೋಜನೆ ಮಾಡುವುದು ಬಹಳ ಮುಖ್ಯ. ಇಲ್ಲಿ ಕಲಾವಿದರ ಚಿತ್ರಕಲಾ ಕೌಶಲ್ಯ ಕಾಣುತ್ತದೆ. ಈ ಚಿತ್ರಕಲೆ ಕಲಾವಿದರ ಪಾರಂಪರಿಕ ಜ್ಞಾನದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಕಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡು ಸಾಗಿ ಬಂದಿದೆ. ಇಂಥ ಜ್ಞಾನವನ್ನು ಕಲೆಯ ಜೊತೆ ಕಳೆದುಕೊಳ್ಳುವುದೆಂದರೆ ನಮಗೆ ಆಗುವ ನಷ್ಟ ಎಂತಹದ್ದು ಎಂಬುದನ್ನು ಚಿಂತಿಸಿದರೆ ಗಾಬರಿ ಹುಟ್ಟಿಸುತ್ತದೆ.
೫. ಬಣ್ಣ ತಯಾರಿಕೆ
ಗೊಂಬೆಗೆ ಲೇಪಿಸು ಬಣ್ಣವನ್ನು ಸ್ವತಃ ಕಲಾವಿದರೇ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿಕೊಳ್ಳುವುದು ವಿಶೇಷ. ಈ ಕಲೆಯಲ್ಲಿ ಮುಖ್ಯವಾಗಿ ಬಳಸಲ್ಪಡುವ ಬಣ್ಣಗಳೆಂದರೆ ಕೆಂಪು, ಕಪ್ಪು, ಹಳದಿ, ನೀಲಿ, ಸಿಂಧೂರ, ಪಚ್ಚೆ ನೀಲಿ ಇತ್ಯಾದಿ. ಇಷ್ಟೊಂದು ಬಣ್ಣಗಳನ್ನು ತಯಾರಿಸಲು ಕಲಿತ ಇವರ ಜ್ಞಾನ ಎಷ್ಟೊಂದು ಕುತೂಹಲಕಾರಿ? ಈ ರೀತಿ ಪಾರಂಪರಿಕ ಮಾರ್ಗದಲ್ಲಿ ತಯಾರಿಸಿದ ಬಣ್ಣಗಳ ಹೊಳಪು ಮತ್ತು ದೀರ್ಘಕಾಲ ತಾಜಾತನವನ್ನು ಕಾಪಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಹೊಸಕಾಲದ ರಸಾಯನಿಕಗಳನ್ನು ಬಳಸಿದ ಬಣ್ಣಗಳನ್ನು ಬಳಸಿದ ಕಲಾವಿದರಿಗೆ ಅದರ ಪರಿಣಾಮಗಳು ತಿಳಿದವೆ. ಹೊಳಪು ದೀರ್ಘಕಾಲ ಬಾಳಿಕೆ ಬೇಕೆಂದರೆ ಸಾಂಪ್ರದಾಯಿಕ ರೀತಿಯಲ್ಲಿಯೆ ಬಣ್ಣ ತಯಾರಿಕೊಳ್ಳಬೇಕೆಂಬುದು ಸ್ವತಃ ಕಲಾವಿದರ ಅನಿಸಿಕೆ. ಇಲ್ಲಿ ಬಳಸುವ ಪ್ರತಿಯೊಂದು ಬಣ್ಣವನ್ನು ತಯಾರಿಸಲು ಬಳಸಬೇಕಾದ ವಸ್ತುಗಳು ಯಾವುವು ಮತ್ತು ಅದನ್ನು ತಯಾರಿಸು ವಿಧಾನ ಯಾವುದು ಎಂಬುದು ಕಲಾವಿದರೆಲ್ಲರಿಗೂ ಗೊತ್ತಿರುವ ಸತ್ಯವೆ. ಅದರ ಕೆಲವು ಮಾದರಿಗಳನ್ನು ಗಮನಿಸುವುದಾದರೆ :
೧. ಕಪ್ಪು ಬಣ್ಣ ಬೇಕೆಂದರೆ ದೀಪದ ಕಾಡಿಗೆ ಅಥವ ತೆಂಗಿನ ಕಾಯಿಯ ಚಿಪ್ಪನ್ನು ಸುಟ್ಟು ಕರಕು ಮಾಡಿಕೊಳ್ಳಬೇಕು. ಇದನ್ನು ಪುಡಿಮಾಡಿ ನೀರಿನಲ್ಲಿ ಬೆರಸಿ ಅದಕ್ಕೆ ಜಾಲಿಯ ಅಂಟನ್ನು ಬೆರಸ ಬೇಕು. ಅನಂತರ ಅದನ್ನು ಚನ್ನಾಗಿ ಕದಡಿ ಆರುದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಬಿಳಿಬಟ್ಟೆಯಲ್ಲಿ ಸೋಸಬೇಕು. ಹೀಗೆ ತಯಾರಾದ ಕಪ್ಪು ಬಣ್ಣ ವರ್ಷಗಟ್ಟಲೆ ಕೆಡುವುದಿಲ್ಲ.
೨. ಸಿಂಧೂರ ಬಣ್ಣ ಬೇಕೆಂದಾಗ ಮದರಂಗಿ ಮತ್ತು ಸುಣ್ಣವನ್ನು ಬೆರಸಿ ಅದಕ್ಕೆ ಬೇವಿನ ಅಂಟನ್ನು ಸೇರಿಸಿ ಕೆಲವು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಉಪಯೋಗಿಸುತ್ತಾರೆ
ಹೀಗೆ ತಮಗೆ ಬೇಕಾದ ಎಲ್ಲಾ ತರಹದ ಬಣ್ಣಗಳನ್ನು ತಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಬಗೆಬಗೆಯ ಎಲೆ, ಹೂವು, ಅಂಟುಗಳ ಸಹಾಯದಿಂದ ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಗುಣಮಟ್ಟದಲ್ಲಿ ತಯಾರಿಸಿಕೊಳ್ಳುತ್ತಾರೆ. ಆಧುನಿಕ ಕಾಲದ ಬಣ್ಣಗಳಿಗಿಂತ ಹೆಚ್ಚು ಹೊಳಪು ಮತ್ತು ಬಾಳಿಕೆ ಇರುವ ಬಣ್ಣಗಳನ್ನು ತಯಾರಿಸು ಜ್ಞಾನ ನಮ್ಮಲ್ಲಿರುವಾಗ ಹೆಚ್ಚು ಖರ್ಚಿನ ದೀರ್ಘಕಾಲ ಬಾಳಿಕೆ ಬರದ ಬಣ್ಣಗಳನ್ನು ಯಾಕೆ ಉಪಯೋಗಿಸಬೇಕು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ.
ನಮ್ಮ ಮುಂದಿರುವ ಸಾಧ್ಯತೆಗಳು
ತೊಗಲುಗೊಂಬೆಯಾಟ ವಿನಾಶದ ಕಡೆಗೆ ಸಾಗಿರುವಾಗ ಅದನ್ನು ಉಳಿಸಬೇಕಾದ ಬಗೆಗಳ ಬಗ್ಗೆ ಚಿಂತಿಸಬೇಕಾದುದು ಇಂದಿನ ತುರ್ತು. ಈ ಬಗ್ಗೆ ಅನೇಕ ವಿದ್ವಾಂಸರು ಬಹಳ ಗಂಭೀರವಾದ ಆಲೋಚನೆಗಳನ್ನು ನಡೆಸಿದ್ದಾರೆ. ಈ ಕುರಿತು ೧೯೮೯ ಫೆಬ್ರವರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗ ನಡೆಸಿದ ೧೬ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ’ತೊಗಲುಗೊಂಬೆಯಾಟದ ಮೇಲೆ ಆಧುನಿಕತೆಯ ಪರಿಣಾಮ ಮತ್ತು ನವೀಕರಣದ ಸಾಧ್ಯತೆಗಳು’ ಎನ್ನುವ ವಿಷಯ ಕುರಿತು ಮಾತನಾಡುತ್ತಾ ಹಿ.ಚಿ. ಬೋರಲಿಂಗಯ್ಯ ಅವರು ಹೀಗೆ ಹೇಳಿದ್ದಾರೆ :
ಯಾವುದೇ ಕಲೆಗೆ ಹೆಚ್ಚು ಬೆಲೆಸಾಗಬೇಕಾದರೆ ಮತ್ತು ವ್ಯವಸ್ಥಿತವಾಗಿ ನಿಲ್ಲಬೇಕಾದರೆ ವಿದ್ಯಾವಂತರು ಅದರಲ್ಲಿ ಪ್ರವೇಶ ಮಾಡುವುದು ಅನಿವಾರ್ಯ. ಅಂದರೆ ವಿದ್ಯಾವಂತ ಇಲ್ಲಿ “ಕೋರಿಯಾಗ್ರಾಫರ್” ಆಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಅವರ ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳುವವನಾಗಬೇಕು. ಆದ್ದರಿಂದ ಈ ವಿದ್ಯಾವಂತರು ಹಳ್ಳಿಗಳಲ್ಲಿ ಬೆಳೆದು ಕಲೆಯ ಬಗ್ಗೆ ನಿಜವಾದ ಅಭಿಮಾನ ಇರುವವರಾಗಬೇಕು. ಕಲೆಯ ಪರಂಪರೆಯ ಹಿನ್ನೆಲೆಯ ಸುಧಾರಣೆ ಹೇಗೆ ಮಾಡಬೇಕೆಂಬ ಪರಿಜ್ಞಾನವುಳ್ಳವರಾಗಿರಬೇಕು. ಕರಾವಳಿಯ ಯಕ್ಷಗಾನ ಪ್ರವೇಶದ ನಂತರ ನವೀಕರಣಗೊಂಡ ರೀತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಕ್ಷೇತ್ರಕ್ಕೆ ವಿದ್ಯಾವಂತರು ಪ್ರವೇಶ ಮಾಡುವುದರಿಂದ ಎರಡು ಲಾಭಗಳಿವೆ. ಒಂದು ಕೆಲವು ಅಂಧ ಸಂಪ್ರದಾಯಗಳು ಮತ್ತು ಶೋಷಣಾ ಮೂಲವಾದ ಆಚರಣೆಗಳಿಂದ ಕಲಾವಿದರನ್ನು ಅಥವಾ ಒಟ್ಟಾರೆ ಜನಪದರನ್ನು ವಿಮುಕ್ತಿಗೊಳಿಸುವುದು, ಎರಡು ಹಿಂದೆಯೇ ಹೇಳಿದಂತೆ ಕಲೆಯ ಸುಧಾರಣೆ ಮಾಡುವುದು. ಈ ಮಾತಿಗೆ ಅನೇಕ ವಿರೋಧಗಳು ಬರಬಹುದು ಆದರೆ ಇಂದಿನ ವಿಜ್ಞಾನ ಯುಗದಲ್ಲಿಯೂ ಧರ್ಮ. ದೇವರು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಪ್ರಗತಿ ವಿರೋಧಿ ಧೋರಣೆಯೇ ಆಗುತ್ತದೆ. ಅಜ್ಞಾನ ಮತ್ತು ಬಡತನದಿಂದ ನರಳುತ್ತಿರುವ ಭಾರತದಂತ ದೇಶದಲ್ಲಿ ಶೋಷಣಾರಹಿತವಾದ ಸಮಾಜವೊಂದರ ನಿರ್ಮಾಣವಾಗಬೇಕು ಮತ್ತು ಈ ದೇಶದ ಜನರ ಸಂಸ್ಕೃತಿಯ ಪ್ರಮುಖ ಅಂಗಗಳಾದ ಜಾನಪದ ಕಲೆ ಮತ್ತು ಸಾಹಿತ್ಯ ಸಂಗೀತಗಳು ಉಳಿಯಬೇಕು. ಇದು ದೃಂದದಲ್ಲಿರುವ ಮನಸ್ಸೊಂದರ ಆಲೋಚನೆ ಅನ್ನಿಸಿದರೂ ಈ ಎರಡೂ ಆಗಬೇಕಾದುದು ಅಗತ್ಯ. ಇದರ ಜೊತೆಗೆ ಇನೆರಡು ಅಂಶಗಳನ್ನು ಅವರು ಪ್ರಸ್ತಾಪಿಸುತ್ತಾರೆ. ಅವುಗಳೆಂದರೆ- ಸಂಘ -ಸಂಸ್ಥೆಗಳು ಜಾನಪದಕ್ಕಾಗಿಯೇ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಸರ್ಕಾರ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ರೀತಿ.
ಪಾಶ್ಚಾತ್ಯ ದೇಶಗಳಂತೆ ಶುದ್ದ ಮನೋರಂಜನೆ ಕಲೆಯಾಗಿಸಿ ವಾಣಿಜ್ಯೀಕರಣಗೊಳಿಸಬೇಕೆ?
ಹೌದು ಈ ಕಲೆಯಯನ್ನು ಮಾತ್ರವಲ್ಲ ಯಾವುದೇ ಕಲೆ ಇಂದಿನ ಸಮಾಜದಲ್ಲಿ ಉಳಿಯಬೇಕಾದರೆ ಅದು ವಾಣಿಜ್ಯೀಕರಣಗೊಳ್ಳಲೇ ಬೇಕು. ಇಲ್ಲವಾದರೆ ಅದಕ್ಕೆ ಉಳಿಗಾಲವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಈ ಕಲೆಯನ್ನು ವಿದೇಶಗಳು ಸ್ವೀಕರಿಸಿ ತಮ್ಮ ಪರಿಸರ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಹೊಂದಿಸಿಕೊಂಡು ಶುದ್ದಾಂಗವಾಗಿ ವಾಣಿಜ್ಯೀಕರಣಗೊಳಿಸಿದೆ. ಹಾಗಾಗಿ ಅಲ್ಲಿ ಗೊಂಬೆಯಾಟಕ್ಕಾಗಿ ಹಲವಾರು ವೃತ್ತಿಪರ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಕಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಬರುತ್ತದೆ. ಈ ಮಾದರಿಯನ್ನು ನಾವು ಸಂಪೂರ್ಣ ಅನುಕರಿಸಬೇಕೆಂದು ಹೇಳಿದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ನಮ್ಮ ನೆಲೆದಲ್ಲಿ ಈ ಕಲೆ ಕೇವಲ ಮನೋರಂಜನೆಗೆ ಮೀಸಲಾದ ಕಲೆಯಲ್ಲ. ಬದಲಿಗೆ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ, ಪ್ರೇಕ್ಷಕರಿಗೆ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವ, ಮಾನವನ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ರೂಪವಾಗಿರುವ ಕಲೆಯಾಗಿದೆ. ಆದ್ದರಿಂದ ನಮ್ಮ ಈ ನೆಲೆದ ತೊಗಲುಗೊಂಬೆಯಾಟ ಕೇವಲ ಮನೋರಂಜನೆಯಾಗದೆ ತನ್ನ ಮೂಲೋದ್ದೇಶಗಳ ಜೊತೆಗೆ ಆಧುನಿಕ ಸಮಾಜಕ್ಕೆ ಮನೋರಂಜನೆಯೊದಗಿಸುವ ಮೂಲಕ ವಾಣಿಜ್ಯೀಕರಣ ಗೊಳ್ಳಬೇಕಿದೆ.
ವಿದ್ಯಾವಂತ ಯುವ ಜನತೆ ಈ ಕಲಾ ಲೋಕಕ್ಕೆ ಪ್ರವೇಶಿಸಿ ಹೊಸ ರೂಪ ಕೊಡಲು ಪ್ರಯತ್ನಿಸಬೇಕೆ?
ಹೌದು ವಿದ್ಯಾವಂತ ಯುವ ಜನ ಪರಂಪರೆ ಮತ್ತು ಅದರ ಜ್ಞಾನಗಳ ಬಗ್ಗೆ ತೀವ್ರವಾದ ತಾತ್ಸಾರ ಹಾಗೂ ನಿರ್ಲಕ್ಷೆ ಮಾಡುತಿದ್ದು ಇದರಿಂದ ಪಾರಂಪರಿಕ ಕಲೆ ಸಾಹಿತ್ಯ ಮತ್ತಿತರ ಜ್ಞಾನ ಧಾರೆಗಳ ಮುಂದುವರಿಕೆಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಹಾಗಾಗಿ ಈ ಸಮುದಾಯ ಜನಪದ ಕಲೆಯಂತಹ ಕ್ಷೇತ್ರಕ್ಕೆ ಆಸಕ್ತಿಯಿಂದ ಪ್ರವೇಶ ಪಡೆದು ನಿಷ್ಟೆ ತೋರಿದರೆ ಖಂಡಿತಾ ಈ ಕಲೆ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮುಂದುವರೆಯುತ್ತದೆ. ಅನಕ್ಷರಸ್ಥ ಕಲಾವಿದರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಈ ಕಲೆಯನ್ನು ಮುಂದುವರೆಸಬಹುದು. ಇಲ್ಲಿ ವಿದ್ಯಾವಂತ ಯುವಕರು ಮಾತ್ರವಲ್ಲ ಇಡೀ ಯುವ ಸಮುದಾಯ ಅಂದರೆ ಹೊಸ ತಲೆಮಾರಿನ ಜನ ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗಬೇಕು ಹೀಗೆ ಆಗುವುದಾದರೆ ತೊಗಲು ಗೊಂಬೆಯಾಟ ಇನ್ನಷ್ಟು ಕಾಲ ನಮ್ಮ ನಡುವೆ ರಿಲೆವೆಂಟಾಗಿ ಉಳಿಯಬಲ್ಲದು.
ಶಿಕ್ಷಣದ ಮಾದ್ಯಮವಾಗಿ ಬಳಸಿ ಕೊಳ್ಳಬೇಕೆ?
ಇಂದು ಶಿಕ್ಷಣ ಕ್ಷೇತ್ರ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದೆ. ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಬಹಳಷ್ಟು ಸಹಾಯವನ್ನು ಪಡೆದು ಮನ್ನೆಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹಳೆಯ ಕಾಲದ ಉಳಿಕೆಯಾಗಿರುವ ತೊಗಲುಗೊಂಬೆಯ ಕಲೆಯನ್ನು ಶಿಕ್ಷಣ ಮಾದ್ಯಮಲ್ಲಿ ಬಳಸಿಕೊಳ್ಳುವುದೆಂದರೆ ಅಸಂಬದ್ಧವೆನಿಸಬಹುದು. ಆದರೆ ಮಕ್ಕಳ ಮನಸ್ಸಿಗೆ ಈ ಗೊಂಬೆಯಾಟ ತೀವ್ರ ಕೂತೂಹಲ ಮೂಡಿಸುವುದರಿಂದ ಇವುಗಳ ಮೂಲಕ ಕಲಿಕೆ ಸುಗಮವಾಗಬಲ್ಲದು.
ನಮ್ಮ ದೇಶ ಸಂಪ್ರದಾಯಬದ್ದವಾಗಿರುವ ಕಾರಣ ಕಲೆಯನ್ನು ಸಾಂಪ್ರದಾಯಿಕ ನೆಲೆಯಲ್ಲಿ ಮುಂದುವರೆಸಬೇಕೆ?
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಬೇಕೆಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಬರುತ್ತವೆ. ಗೊಂಬೆಯಾಟದ ಮೂಲಕ ಹೊಸ ಕಾಲದ ಕಥೆ ಹೇಳುವ ಪ್ರಯತ್ನ ಮಾಡುವುದು ಕಲೆಯ ಪುನರುಜ್ಜೀವನದ ನಿಟ್ಟಿನಲ್ಲಿ ನಡೆಯುವ ಒಳ್ಳೆಯ ಪ್ರಯತ್ನವೇನೊ ನಿಜ. ಆದರೆ ಹೀಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಜಾನಪದ ಕಲೆಗಳು ಕಳೆದು ಹೋದದ್ದೆ ಹೆಚ್ಚು. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ.- ಕುಮಾರ ಎಸ್.
ಗೊಂಬೆಯಾಟವನ್ನು ಹೇಗೆ ಹೊಸಕಾಲಕ್ಕೆ ಹೊದಿಸಿಕೊಂಡು ಮುಂದುವರೆಸಬೇಕೆಂಬುದಕ್ಕೆ ಇಂದುಶ್ರೀ ಅವರು ಮಾಡುತ್ತಿರುವ ಡಿಂಕು ಪ್ರಯೋಗ ಮಾದರಿಯೆನಿಸುತ್ತದೆ. ಸಂಗೀತ ಮಾತು ಮತ್ತಿತರ ಅಂಶಗಳಲ್ಲಿ ಆಧುನಿಕ ಸಾಧ್ಯತೆಗಳನ್ನು ಬಳಸಿಕೊಂಡು ಮುಂದುವರೆಸ ಬೇಕಾಗುತ್ತದೆ. ಇದಕ್ಕೆ ಆಧುನಿಕ ವಿಜ್ಞಾ ತಂತ್ರಜ್ಞಾನದ ತಿಳುವಳಿಕೆ ಬೇಕಾಗುತ್ತದೆ.
-ಡಾ. ಎಸ್.ಎಂ. ಮುತ್ತಯ್ಯ
ಚಿತ್ರಗಳು : ಅಂತರ್ಜಾಲದ ಮೂಲದಿಂದ
* ದಿನಾಂಕ : ೧೭.೦೧.೨೦೧೫ ರಂದು ಚಿತ್ರದುರ್ಗದಲ್ಲಿ ನಡೆದ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧ
No comments:
Post a Comment