Saturday, 4 July 2015

ಜನಪದ ಮಹಾಕಾವ್ಯಗಳಲ್ಲಿ ಪ್ರತಿಮಾ ವಿಧಾನಗಳು

- ಡಾ. ಎಸ್.ಎಂ. ಮುತ್ತಯ್ಯ

ಕನ್ನಡ ಜಾನಪದ ಜಗತ್ತಿನ ಅಧ್ಯಯನ ಕ್ಷೇತ್ರದಲ್ಲಿ ಕಳೆದ ೫೦-೬೦ ವರ್ಷಗಳಿಂದ ಜಾನಪದವನ್ನು ಅರ್ಥೈಯಿಸುವ ಪ್ರಯತ್ನಗಳು ನಡೆದಿದೆ. ಇವುಗಳಲ್ಲಿ ಜಾನಪದ ನಮ್ಮ ಅಸ್ಮಿತೆಯ ಪ್ರಶ್ನೆ. ಅದನ್ನು ಉಳಿಸಿ ಬೆಳಸಬೇಕು ಎಂಬ ಭಾವನೆ ಎದ್ದು ಕಾಣಿಸುತ್ತದೆ. ಈ ಉಳಿಸಿ ಬೆಳೆಸುವ ಆಶಯಗಳಲ್ಲಿ ಉಳಿಸುವ ಕೆಲಸ ಚನ್ನಾಗಿಯೇ ಆಗಿದೆ. ಆದರೆ ಬೆಳೆಸುವ ಕೆಲಸ ಸಮಾಧಾನಕರವಾದ ರೀತಿಯಲ್ಲಿ ಇಲ್ಲ. ಜಾನಪದವನ್ನು ಬೆಳೆಸುವ ಕ್ರಿಯೆಗೆ ಮುಖ್ಯವಾಗಿ ಬೇಕಿರುವುದು ಆ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾದುದು. ಜಾನಪದ ಸೃಷ್ಟಿಗಳ ವಿವಿಧ ರೀತಿಯ ರಚನೆಗಳ ಹಿಂದೆ ಸಾಕಷ್ಟು ಸಂಕೀರ್ಣತೆಯಿದೆ. ಅವುಗಳನ್ನು ನಿರಚನೆಗೊಳಿಸಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಂಥ ಪ್ರಯತ್ನಗಳು ನಮ್ಮ ಈವರೆಗಿನ ಆಧ್ಯಯನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ನಮ್ಮ ಜಾನಪದ ರಚನೆಗಳನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದು ಸಾಧ್ಯವಾಗದ ಹೊರತು ಅದನ್ನು ಸಮಕಾಲೀನ ಅಥವಾ ಭವಿಷ್ಯದ ಸಮಾಜಕ್ಕೆ ಅನ್ವಯಿಸುವುದಾಗಲಿ, ಅದನ್ನು ಬೆಳಸಿ ಮುಂದುವರೆಸುವುದಾಗಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಇನ್ನು ಮುಂದಾದರೂ ನಾವು ನಮ್ಮ ಜಾನಪದ ಸೃಷ್ಟಿಗಳನ್ನು ನಿಜವಾದ ನೆಲೆಗಳಲ್ಲಿ ಅರ್ಥೈಯಿಸುವ ಪ್ರಯತ್ನಗಳನ್ನು ಆರಂಭಿಸಬೇಕಿದೆ. ಈ ಪ್ರಯತ್ನದ ಭಾಗವಾಗಿ ಸಮಗ್ರ ಜಾನಪದದ ಒಂದು ಭಾಗವಾಗಿರುವ ಜನಪದ ಸಾಹಿತ್ಯವನ್ನು ’ಪ್ರತಿಮಾ ವಿಧಾನ’ ತತ್ವದ ಮೂಲಕ ಅರ್ಥೈಸುವ ಪ್ರಯತ್ನ ಮಾಡಲಾಗಿದೆ.
ಪ್ರತಿಮಾ ವಿಧಾನದ ತಾತ್ವಿಕತೆ
ಈ ಪ್ರಯತ್ನಕ್ಕೆ ತೊಡಗುವ ಮುನ್ನ ’ಪ್ರತಿಮಾ ವಿಧಾನ’ದ ತಾತ್ವಿಕ ನೆಲೆಗಳನ್ನು ಸ್ಪಷ್ಟಗೊಳಿಸಿಕೊಳ್ಳಬೇಕಾದುದು ಅಗತ್ಯ. ಸಾಹಿತ್ಯ ಮೀಮಾಂಸೆಯ ಅಲಂಕಾರಗಳ ಚರ್ಚೆಯ ಸಂದರ್ಭದಲ್ಲಿ ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಕವಿ ಬಳಸುವ ಉಪಮೆ ರೂಪಕ, ಪ್ರತಿಮೆ ಮತ್ತು ಸಂಕೇತ ವಿಷಯಗಳು ಬರುತ್ತವೆ. ಇವೆಲ್ಲವೂ ಉಕ್ತಿ ವೈಚಿತ್ರ್ಯಗಳನ್ನು ಹೇಳುವ ಕ್ರಮಗಳು. ಇವುಗಳ ಮುಂದುವರೆದ ರೂಪವಾಗಿ ಪ್ರತಿಮಾ ವಿಧಾನ ಕಂಡು ಬರುತ್ತದೆ. ಪ್ರತಿಮಾ ವಿಧಾನದ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಚರ್ಚಿಸಿರುವ ಕುವೆಂಪು ಅವರು ಪ್ರತಿಮಾ ವಿಧಾನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ-ಇದ್ದದ್ದನ್ನು ಇದ್ದಂತೆಯೆ, ನಡೆದುದನ್ನು ನಡೆದಂತೆಯೆ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ ಇದ್ದದ್ದೂ ನಡೆದದ್ದೂ ತನಗೆ ಹೇಗೆ ಗೋಚರಿಸಿತೊ ಆ ಅನುಭವಕ್ಕೆ ಆಕಾರ ಕಲ್ಪನೆಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾ ವಿಧಾನವೆಂದು ಕರೆಯುತ್ತೇವೆ. ಪ್ರತಿಮಾದೃಷ್ಟಿಗೆ ವಸ್ತುವಿಗಿಂತಲೂ ಆ ವಸ್ತು ಪ್ರಚೋದಿಸುವ ಅನುಭವವೆ ವಿಶೇಷವಾಗಿ ಮಾನ್ಯ ವಿಷಯ. ಅಲ್ಲದೆ, ವಸ್ತುವಿಗಿಂತಲು ಆ ವಸ್ತುವಿಗೆ ಕಾರಣವಾದ ಅಥವಾ ಪ್ರೇರಣವಾದ ಶಕ್ತಿ ಅಥವಾ ಚೈತನ್ಯವೆ ಪ್ರತಿಮಾದೃಷ್ಟಿಗೆ ಅಗ್ರಗಣ್ಯವಾದ ಪರಮ ಪ್ರಯೋಜನದ ಕಲಾವಿಷಯ(ತಪೋನಂದನ, ಪುಟ : ೮೩-೮೪) ಅಂದರೆ ವ್ಯಕ್ತಿಯೊಬ್ಬ ಲೋಕದ ಪ್ರಕೃತಿಯನ್ನು ತಾನು ಕಂಡಾಗ ಅದು ತನ್ನ ಅನುಭವಕ್ಕೆ ದಕ್ಕಿದ ಸ್ವರೂಪದಲ್ಲಿ ಅಭಿವ್ಯಕ್ತಿಸುತ್ತಾನೆ. ಇಲ್ಲಿ ದೃಷ್ಟಿಕೋನ ಬಹುಮುಖ್ಯವೆನಿಸುತ್ತದೆ.  ಈ ದೃಷ್ಟಿಕೋನ ತನ್ನಿಂದ ತನಗೆ ಬಂದಿರುವಂಥದ್ದು ಆಗಿರುವುದಿಲ್ಲ. ಬದಲಿಗೆ ಆ ವ್ಯಕ್ತಿಯ ಪರಂಪರೆ, ಪರಿಸರ, ಸಮಾಜ, ಸಂಸ್ಕೃತಿ ಇವೇ ಮೊದಲಾದ ಸಂಗತಿಗಳಿಂದ ಪ್ರಭಾವಿತವಾಗಿರುತ್ತದೆ. ಹಾಗಾಗಿ ಅಂಥ ಅಭಿವ್ಯಕ್ತಿಗಳು ಯಾವ ಒಬ್ಬ ವ್ಯಕ್ತಿಯ ಒಂದು ಮನಸ್ಸಿನ ರಚನೆಯಲ್ಲ; ಅದು ಒಂದು ಧರ್ಮಕ್ಕೆ ಸೇರಿದ ಒಂದು ಜನಾಂಗದ ಸಮಷ್ಟಿಮನಸ್ಸಿನ ಸಾಮೂಹಿಕ ಸೃಜನೆ, ಉದ್ಭವರೂಪ ಸೃಷ್ಟಿ, ಅವಿಚಾರಕ ಆವಿರ್ಭೂತಿ. ಅದು ಅತೀತದ ಆವಶ್ಯಕವಾದ ಒತ್ತಡದಿಂದ ಅವಶ್ಯವಾಗಿ ಮೈದೋರುವ ಸಂಭೂತಿ. ಅದರ ಹಿಂದೆ ಋತಚಿತ್ತಿನ ಸತ್ಯಸಂಕಲ್ಪವಿರುವುದರಿಂದ ಅದೊಂದು ನಿಗ್ರಹಾನುಗ್ರಹ ಸಮರ್ಥವಾದ ದೇವತಾ ವಿಭೂತಿ. ( ರಸೋ ವೈ ಸಃ, ಪುಟ : ೨೩ ) ಹೀಗೆಂದ ಮಾತ್ರಕ್ಕೆ ಈ ಪ್ರತಿಮಾ ವಿಧಾನ ಪ್ರಯತ್ನ ಪೂರ್ವಕವಾಗಿ ನಡೆಯುವ ಕ್ರಿಯೆಯಲ್ಲ. ಕಾವ್ಯಾಭಿವ್ಯಕ್ತಿಗೆ ಅಥವಾ ಭಾವಪ್ರಕಾಶನಕ್ಕೆ ಆವಶ್ಯಕವಾದ ಸಾಮಗ್ರಿ ಸಂವಿಧಾನಗಳು ಕವಿ ಪ್ರತಿಭೆಗೆ ಬಾಹ್ಯಜಗತ್ತಿನಿಂದ ಬುದ್ಧಿಯ ಮೂಲಕ ದೊರೆಯುತ್ತವಾದರೂ ಆ ಅಭಿವ್ಯಕ್ತಿಯ ಅಥವಾ ಪ್ರಕಾಶನದ ಸೃಷ್ಟಿ ಮುಹೂರ್ತವು ಬುದ್ಧಿಗತವಾಗಿರದೆ ಅದಕ್ಕೆ ಅತೀತವೂ ಭಿತ್ತಿರೂಪವೂ ಆಗಿರುವ ‘ಅಪ್ರಜ್ಞಾವಲಯ’ಕ್ಕೆ ಸೇರಿರುತ್ತದೆ. ಏಕೆಂದರೆ ಅನುಭವಕ್ಕೆ ಸಾಂಕೇತಿಕವಾದ ಪ್ರತಿಮಾರಚನೆ ಸುಪ್ತಚಿತ್ತದಲ್ಲಿ ಸಾಗುವ ಗುಪ್ತಕರ್ಮ. ವಾಸನಾ ಸಂಸ್ಕಾರಗಳಿಗೆ ಪ್ರತಿಮಾಲೋಕಗಳನ್ನು ಸೃಜಿಸುವ ಸ್ವಪ್ನವು ಹೇಗೆ ನಮ್ಮ ಜಾಗ್ರತ್ತಿನ ಬುದ್ಧಿಗೆ ಒಳಗಾಗುವುದಿಲ್ಲವೋ ಹಾಗೆಯೆ ಕಾವ್ಯದಲ್ಲಿ ಕವೀಂದ್ರನ ಮಹದನುಭವಗಳಿಗೆ ಪ್ರತಿಮಾನುಭವನಗಳನ್ನು ಕೃತಿಗೆಯ್ಯುವ ಕಲಾಪ್ರತಿಭೆಯೂ ಬುದ್ಧಿತಂತ್ರವಾಗಿರುವುದಿಲ್ಲ.(ತಪೋನಂದನ, ಪುಟ : ೨೭). ಹೀಗೆ ಮೈದೋರುವ ಪ್ರತಿಮೆಗಳಲ್ಲಿ ಎರಡು ವಿಧಗಳಿರುವುದನ್ನು ಗುರುತಿಸಲಾಗಿದೆ. ಪ್ರತಿಮೆಗಳಲ್ಲಿ ಅವುಗಳ ಸೃಷ್ಟಿವಿಧಾನಗಳನ್ನು ಗಮನಿಸಿದರೆ ಎರಡು ರೀತಿಯವು ಕಂಡುಬರುತ್ತವೆ. ಮೊದಲನೆಯದನ್ನು ಅವರೋಹಣ ಕ್ರಮದ್ದೆಂದೂ ಎರಡನೆಯದನ್ನು ಆರೋಹಣ ಕ್ರಮವೆಂದೂ ಕರೆಯಬಹುದು. ಅತೀತ ಲೋಕಗಳಲ್ಲಿಯ ಯಾವುದಾದರೂ ಶಕ್ತಿ ಅಥವಾ ದೇವತೆ ಇಂದ್ರಿಯ ಪ್ರಪಂಚದಲ್ಲಿ ಪ್ರಕಟವಾಗಬೇಕಾದರೆ ಅದು ಇಲ್ಲಿಯ ಕಾಲದೇಶ ನಾಮರೂಪಗಳ ಚೌಕಟ್ಟಿಗೆ ಇಳಿದು ಮೈದೋರುತ್ತದೆ. ಅದು ಯಾವ ಪ್ರಯತ್ನಪೂರ್ವಕವಾದ ಕೃತಕರಚನೆಯ ಫಲವೂ ಆಗಿರುವುದಿಲ್ಲ. ಅದು ಸಹಜ ಸಂಭವ. ಒಂದು ಉದ್ದೇಶ ಸಾಧನೆಗಾಗಿ ತನ್ನ ಇಚ್ಚಾಶಕ್ತಿಯಿಂದಲೆ ತನಗೆ ತಾನೆ ಆಗುವ ಅವತರಣ. ಅದು ಅವರೋಹಣ ಕ್ರಮದ್ದಾಗಿರುತ್ತದೆ. ಆರೋಹಣ ಕ್ರಮದಿಂದ ಸಿದ್ದವಾಗುವ ಇನ್ನೊಂದು ರೀತಿಯ ಪ್ರತಿಮೆ ಭಕ್ತಿಭಾವಮಯ ಪ್ರಚೋದನೆಯಿಂದ ಪ್ರೇರಿತವಾದರೂ ಭಾವದೀಪ್ತ ಬುದ್ಧಿಯ ನೆರವನ್ನು ಪಡೆದು ಪಜ್ಞಾಪೂರ್ವಕವಾಗಿಯೆ ರಚಿತವಾಗುತ್ತದೆ. ಹಾಗೆ ರಚಿತವಾಗುವ ಪ್ರತಿಮೆಯಲ್ಲಿ ಉಪಾಸಕನ ಶ್ರದ್ದೆಯ, ಭಕ್ತಿಯ ಮತ್ತು ಅಭೀಪ್ಸೆಯ ಮಹಿಮೆಯಿಂದ, ಕರೆಯಿಂದ, ಆಹ್ವಾನದಿಂದ ಪ್ರಾಣ ಪ್ರತಿಷ್ಟೆಯಾಗಿ ಅತೀತದ ದೇವತಾ ಶಕ್ತಿಯ ಆವಾಹನವಾಗುತ್ತದೆ.(ರಸೋ ವೈ ಸಃ, ಪುಟ:೨೫ ) ಇಂಥ ತಳಹದಿಯ ಮೇಲೆ ರೂಪುಗೊಂಡ ಸಾಹಿತ್ಯವನ್ನು ಪ್ರತಿಮಾ ವಿಧಾನದಿಂದ ಅರ್ಥಮಾಡಿಕೊಳ್ಳಬೇಕಾದ ಅಗತ್ಯತೆಯನ್ನು ಕುವೆಂಪು ಅವರು ಹೀಗೆ ಹೇಳುತ್ತಾರೆ-ಇದುವರೆಗೆ ಪ್ರಪಂಚದ ಸಾಹಿತ್ಯದಲ್ಲಿ ದೈವೀಕಲೆಗೆ ವಿಶೇಷ ಸಹಾಯವಾಗಿ ನಿಂತಿರುವ ವಿಧಾನವೆಂದರೆ ಪ್ರತಿಮಾವಿಧಾನ. ವಿಧಾನಮಾತ್ರದಿಂದ ದೈವೀಗುಣ ಹೊಮ್ಮುತ್ತದೆಂದು ಸಮರ್ಥಿಸುವುದು ಈ ಲೇಖಕನ ಆಶಯವಲ್ಲವಾದರೂ ಯಥಾರ್ಥವಿಜ್ಞಾನದ ಹೆಸರಿನಲ್ಲಿ ಪ್ರತಿಕೃತಿಯ ದೃಷ್ಟಿಯನ್ನೇ ಪರಮಸತ್ಯದ ದೃಷ್ಟಿ ಎಂದು ಪರಿಕೀರ್ತಿಸುವ ಈ ಕಾಲದಲ್ಲಿ ಪ್ರತಿಮಾವಿಧಾನದ ಪಕ್ಷದಲ್ಲಿ ನಿಂತು ಅದರ ಮರ್ಮವನ್ನು ಅರಿಯುವ ಸಾಹಸ ಮಾಡಿದರೆ ನಮ್ಮ ಮಹಾಕಾವ್ಯ ಪುರಾಣ ನಾಟಕಾದಿ ಸಾಹಿತ್ಯಕೃತಿಗಳಲ್ಲಿ ಹುದುಗಿ ಬೆಳಗುತ್ತಿರುವ ಆತ್ಮಶ್ರೀ ನಮ್ಮ ಜನತಾ ಹೃದಯಕ್ಕೆ ದೀಪಧಾರಿಯಾಗಬಹುದು.( ತಪೋನಂದನ, ಪುಟ : ೮೮)
  ಕುವೆಂಪು ಅವರು ಪ್ರತಿಮಾ ವಿಧಾನದ ಬಗ್ಗೆ ಹೇಳಿರುವ ಇವಿಷ್ಟು ವಿಚಾರಗಳಿಂದ ನಾವು ತಿಳಿಯಬೇಕಾದ ಕೆಲವು ಪ್ರಮುಖಾಂಶಗಳನ್ನು ಹೀಗೆ ಪಟ್ಟಿ ಮಾಡಬಹುದು :
೧. ಸಾಹಿತ್ಯಾಭಿವ್ಯಕ್ತಿಯಲ್ಲಿ ಪ್ರತಿಮಾ ವಿಧಾನ ಪ್ರಧಾನವಾದ ಪಾತ್ರ ವಹಿಸುವುದು. ಇದು ಜಗತ್ತು ತನ್ನ ಗ್ರಹಿಕೆಗೆ ದಕ್ಕಿದ ರೂಪದಲ್ಲಿ ಅಭಿವ್ಯಕ್ತಿಸುತ್ತದೆ.
೨. ಪ್ರತಿಮಾ ವಿಧಾನದ ಅಭಿವ್ಯಕ್ತಿ ಯಾರೋ ಒಬ್ಬರ ಸ್ವಂತ ಅನುಭವವಲ್ಲ. ಬದಲಿಗೆ ಅದೊಂದು ಸಾಮೂಹಿಕ ದೃಷ್ಟಿಯಾಗಿರುತ್ತದೆ.
೩. ಈ ವಿಧಾನ ಪ್ರಜ್ಞಾಪೂರ್ವಕವಾದುದಲ್ಲ. ಅದಕ್ಕೆ ವಿರುದ್ಧವಾದ ಮನಸ್ಸಿನ ಸುಪ್ತಭಾವನೆಗಳ ಅಭಿವ್ಯಕ್ತಿಯಾಗಿರುತ್ತದೆ.
೪. ಈ ವಿಧಾನಗಳಲ್ಲಿ ದೇವರ ಸಾಮಾನ್ಯ ವ್ಯಕ್ತಿಯಾಗುವ, ಸಾಮಾನ್ಯ ವ್ಯಕ್ತಿ ದೇವರಾಗುವ ಕ್ರಿಯೆ ನಡೆಯುತ್ತದೆ.
೫. ಧಾರ್ಮಿಕ ಅಭಿವ್ಯಕ್ತಿಗಳಲ್ಲಿ ಈ ವಿಧಾನ ಅತ್ಯಂತ ಪ್ರಧಾನ ಪಾತ್ರವಹಿಸುತ್ತದೆ.
೬. ಈ ಪ್ರತಿಮಾ ವಿಧಾನ ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿ ಕಂಡು ಬರುತ್ತಿದ್ದು. ಅಂಥ ಸಾಹಿತ್ಯವನ್ನು ನಿಜವಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರತಿಮಾ ವಿಧಾನ ದೃಷ್ಟಿ ಅಗತ್ಯವಾಗಿದೆ.
-೩-
ಈ ಪ್ರತಿಮಾ ವಿಧಾನ ಮುಖ್ಯವಾಗಿ ಮನೋ ವ್ಯಾಪಾರಕ್ಕೆ ಸಂಬಂಧಿಸಿದ್ದು, ಈ ತತ್ವ ಜನಪದ ನಂಬಿಕೆ, ಸಂಪ್ರದಾಯ ಆಚರಣಾ ಲೋಕ ಹಾಗೂ ಸಾಹಿತ್ಯದಲ್ಲಿ  ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಹಾಗಾಗಿಯೇ ಇಂದು ಅನೇಕ ಸಂದರ್ಭಗಳಲ್ಲಿ ಜನಪದ ಸೃಷ್ಟಿಯನ್ನು ಕೇವಲ ವಾಸ್ತವವಾದಿ ದೃಷ್ಟಿಕೋನದಲ್ಲಿ ನೋಡಿ ಇದು ಕೇವಲ ಕಾಲ್ಪನಿಕವೆಂತಲೋ ಇಲ್ಲವೇ ಯಾವುದೇ ತಾರ್ಕಿಕತೆಯಿಲ್ಲದ ಅಸಂಬದ್ಧ ರಚನೆಗಳೆಂತಲೋ ಅಥವಾ ಕೇವಲ ಭಾವನಾತ್ಮಕ ಮೌಢ್ಯಗಳೆಂತಲೋ ತಿರಸ್ಕರಿಸುವವರೇ ಹೆಚ್ಚು.  ಇಂಥ ಸಂದರ್ಭದಲ್ಲಿ ಜಾನಪದ ಸೃಷ್ಟಿಸಂಪತ್ತನ್ನು  ನಿಜ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಈ ಪ್ರತಿಮಾವಿಧಾನದ ದೃಷ್ಟಿಕೋನ ಅತ್ಯುಪಯುಕ್ತ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜಾನಪದದ ವಿವಿಧ ಪ್ರಕಾರಗಳಲ್ಲಿ ಕಂಡು ಬರುವ ರಚನೆಯ ಸ್ವರೂಪಗಳನ್ನು ಈ ದೃಷ್ಟಿಯಿಂದ ಪರಿಶೀಲಿಸಿದರೆ ಇಲ್ಲಿಯವರೆಗೂ ದಕ್ಕದೇ ಇರುವ ಅಪರೂಪದ ಸಂಗತಿಗಳು ತಿಳಿದುಬರುತ್ತವೆ. 
ಜಾನಪದ ಬಹಳಷ್ಟು ವಿಸ್ತಾರತೆ ಇದ್ದು ಅದೆಲ್ಲವನ್ನೂ ಇಂಥ ಸಣ್ಣ ಪ್ರಯತ್ನದಲ್ಲಿ ಮಾಡಿ ಮುಗಿಸುವುದು ಅಸಾಧ್ಯ. ಹಾಗಾಗಿ ಜನಪದ ಸಾಹಿತ್ಯ ಅದರಲ್ಲೂ ಸಮುದಾಯಗಳ ಸಾಂಸ್ಕೃತಿಕ ರಚನೆಗಳೆನಿಸಿದ ಮಹಾಕಾವ್ಯ ಪ್ರಕಾರಗಳಲ್ಲಿ ಸಿಗುವ ಕೆಲವು ಪ್ರಸಂಗಗಳನ್ನು ಮಾತ್ರ ಪ್ರತಿಮಾ ವಿಧಾನದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
ಸಾಂಸ್ಕೃತಿಕ ನಾಯಕರ ಸೃಷ್ಟಿ ಕ್ರಿಯೆ 
ಭೂಮಿ-ಆಕಾಶ, ಸೂರ್ಯ-ಚಂದ್ರ, ಪ್ರಕೃತಿ-ಪರಿಸರ, ದೇವ-ಮನುಷ್ಯ, ಪ್ರಾಣಿ ಪಕ್ಷಿ ಮೊದಲಾದ ಸಕಲ ಜೀವ ಕೋಟಿಯ ಸೃಷ್ಟಿಯ ರಹಸ್ಯ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈ ನಿಗೂಢತೆಯನ್ನು ವಿಜ್ಞಾನದಿಂದಲೂ ಪತ್ತೆಮಾಡಲು ಸಾಧ್ಯವಾಗಿಲ್ಲ. ಇಂಥ ನಿಗೂಡತೆಗಳನ್ನು ಪಾರಂಪರಿಕ ಸಮುದಾಯಗಳು ತಮ್ಮ ಮಾನಸಿಕ ನೆಲೆಯಲ್ಲಿ ಯೋಚಿಸಿ ತಮ್ಮದೇ ಆದ ವಾದಗಳನ್ನು ಮಂಡಿಸಿವೆ. ಸಹಜವೆಂಬಂತೆ ಈ ವಾದಗಳಲ್ಲಿ ಒಂದೇ ತಳಹದಿಯನ್ನು ಹೊಂದಿಲ್ಲ. ಹಾಗಾಗಿಯೇ ಎಷ್ಟು ಸಮುದಾಯಗಳಿವೆಯೋ ಅಷ್ಟು ಸೃಷ್ಟಿ ಪುರಾಣಗಳು ಹುಟ್ಟಿಕೊಂಡಿವೆ. ಈ ಸೃಷ್ಟಿ ಪುರಾಣಗಳು ಅವುಗಳನ್ನು ಕಟ್ಟಿಕೊಂಡ ಸಮುದಾಯದ ಲೋಕದೃಷ್ಟಿಯನ್ನು ಪ್ರಕಟಪಡಿಸಿವೆ. ಇಲ್ಲಿ ನಮ್ಮ ವಿಶ್ಲೇಷಣೆಗೆ ಮಂಟೇಸ್ವಾಮಿ ಹಾಗೂ ಜುಂಜಪ್ಪ ಜನಪದ ಮಹಾಕಾವ್ಯಗಳಲ್ಲಿ ಕಂಡು ಬರುವ ರಚನೆಗಳನ್ನು ಗಮನಿಸಬಹುದು.
ಅಭಿಜಾತ ಪರಂಪರೆಯ ಪುರಾಣ ಸಾಹಿತ್ಯದಲ್ಲಿ ಲೋಕ ಸೃಷ್ಟಿಯ ದೇವತೆಗಳನ್ನು ಕುರಿತು ಹೇಳುವಾಗ ವಿಷ್ಣು, ಶಿವ ಮತ್ತು ಬ್ರಹ್ಮ ಇವರೇ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಉಪನಿಷತ್ತು, ವಿಷ್ಣು ಪುರಾಣ, ಲಿಂಗಪುರಾಣ, ಶಿವಪುರಾಣಗಳಲ್ಲೆಲ್ಲ  ಈ ವಿಷಯ ನಿರೂಪಿಸಲ್ಪಟ್ಟಿದೆ.  ಈ ಅಭಿಜಾತ  ಪರಂಪರೆಯಲ್ಲಿ ಬ್ರಹ್ಮನೇ ಸೃಷ್ಟಿಕರ್ತ.  ಆದರೆ, ಜನಪದ ಪರಂಪರೆಯಲ್ಲಿ ಜಗತ್ತು  ಸೃಷ್ಟಿಯ ಶಕ್ತಿಯನ್ನು  ಬ್ರಹ್ಮನಿಂದ ಕಿತ್ತುಕೊಳ್ಳುತ್ತಾರೆಂಬುದು ಅತ್ಯಂತ ಕುತೂಹಲಕರ ಸಂಗತಿ. ಮಂಟೇಸ್ವಾಮಿ ಕಥನದಲ್ಲಿ  ಪೂರ್ಣ ಜಗತ್ತಿನ ಸೃಷ್ಟಿಯ ಬಗೆಗೆ ಹೇಳಲಾಗಿದೆ. ’ಮಂಟೇಸ್ವಾಮಿ ಕಾವ್ಯ’ ಆರಂಭವಾಗುವುದೇ ಜಗತ್ತು ಸೃಷ್ಟಿಯ ಸಾಲಿನಿಂದ. ಮಹಾಕಾವ್ಯದ ಈ ಭಾಗ ಪೂರಾ ಪ್ರತಿಮೆ ಮತ್ತು  ಆಶಯಗಳ  ಅತ್ಯಂತ ಮೋಹಕ ನಾಟ್ಯ.  ಇದನ್ನು ಡಿ. ಆರ್. ನಾಗರಾಜ ಅವರು ಅರ್ಥಪೂರ್ಣವಾಗಿ ಸಾಬೀತು ಪಡಿಸಿದ್ದಾರೆ. (ಡಿ. ಆರ್.ನಾಗರಾಜ, ಅಲ್ಲಮ ಪ್ರಭು ಮತ್ತು  ಶೈವ ಪ್ರತಿಭೆ, ಪುಟ: ೧೪೪) ಮಂಟೇಸ್ವಾಮಿ ಮಹಾಕಾವ್ಯದ ಜಗತ್ತು ಸೃಷ್ಟಿಯ ಸಾಲು ಹೇಳುವ ಹಾಗೆ ಮಂಟೇಸ್ವಾಮಿ ಜಗತ್ತಿನ ಮೂಲ ಪುರುಷ. ಸ್ವಯಂಭೂ ಕೂಡ ಹೌದು.  ಆತನ ಮೂಲ ಸುರರಿಗಾಗಲಿ, ನರರಿಗಾಗಲಿ ತಿಳಿದಿಲ್ಲ . ಮಂಟೇಸ್ವಾಮಿ, ಜಗತ್ತಿಗೆ ತೀರಾ ಕ್ಷುಲ್ಲಕ ಎನಿಸಿದ ಹುಳುವಿನ ರೂಪಿನಲ್ಲಿ ಉದ್ಭವಿಸಿದವನು ಎಂದು ಹೇಳುವ ಮೂಲಕ ಒಂದು ಸಮುದಾಯ   ಏಕಕಾಲಕ್ಕೆ   ಹುಳಕ್ಕೂ ಮಂಟೇಸ್ವಾಮಿಗೂ ರೋಚಕವಾದ ವರ್ಚಸ್ಸನ್ನು  ತಂದುಕೊಡಲಾಗಿದೆ.  ಏನೂ ಅಲ್ಲದಂತಿರುವ ಇಂಥ ಕೀಟವಾಗಿ ಬಂದ ಮಂಟೇಸ್ವಾಮಿ ಮೂರು ಲೋಕಗಳನ್ನು ಸೃಷ್ಟಿಸಿದನು ಎಂಬುದು  ಕೆಳವರ್ಗದ ಪುರುಷನೊಬ್ಬನ ಅಸಾಧಾರಣ ಶಕ್ತಿಯನ್ನು ದರ್ಶಿಸುತ್ತದೆ. ಅಂಥ ಒಂದು ಶಕ್ತಿ ಹುಳುವಿನ ರೂಪದಲ್ಲಿ ಬಂದಿತ್ತು.  ಅಷ್ಟೇ ಅಲ್ಲ ಅಂಥ ಹುಳು ಯಾವುದೆಂದರೆ ಮಿಣುಕಿನ ಹುಳು.  ಇದು ಹಗಲಲ್ಲಿ ಯಾರ ಕಣ್ಣಿಗೂ ಕಾಣುವುದಿಲ್ಲ.  ಯಾರ ಕೈಗೂ ಸಿಗುವುದಿಲ್ಲ.  ಅಷ್ಟೇ ಅಲ್ಲ ಅದರ ಬೆಳಕು ಇಲ್ಲದೇ ಹೋದರೆ ರಾತ್ರಿಯಲ್ಲೂ ಕೀಟವೇ ಗೊತ್ತಾಗುವುದಿಲ್ಲ.  ಇಂಥ ಅದ್ಭುತ ಗುಣ  ಆ ಹುಳುವಿನಲ್ಲಿದೆ. ಅಂಥ ರೂಪದಲ್ಲ್ಲಿ ಮಂಟೇಸ್ವಾಮಿ ಬಂದನೆಂದು ಹೇಳುವಲ್ಲಿ ವಿಶೇಷವಿದೆ. ’ದೈನಂದಿನ ಕ್ಷುದ್ರವೆನಿಸಿರುವ ವಿವರಗಳನ್ನು ರೂಪಕದ ಮಟ್ಟಕ್ಕೆ ಎತ್ತುವ ಕೆಲಸವಿದು.’(ಡಿ.ಆರ್.ನಾಗರಾಜ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಪುಟ: ೧೪೫) ಸಮಾಜದಲ್ಲಿ ಉನ್ನತ ಗೌರವ ಸ್ಥಾನಮಾನಗಳನ್ನು ಪಡೆದ ಅಭಿಜಾತ ಸಂವೇದನೆಗೂ  ಅದ್ಯಾವುದು ಇಲ್ಲದ ಜಾನಪದ ಅನುಭಾವಿ ಸಂವೇದನೆಗೂ ಇರುವ ಬಹುಮುಖ್ಯ ವ್ಯತ್ಯಾಸವೂ ಕೂಡ ಇದೇ ಆಗಿದೆ.  
ಹೀಗೆ ಮೂಡಿ ಬಂದ ಮಂಟೇಸ್ವಾಮಿ  ಧರೆಗೆ ದೊಡ್ಡವರು. ಏಕೆಂದರೆ ಇಡೀ ಭೂಲೋಕವನ್ನು ಸೃಷ್ಟಿಸಿದವರು ಅವರೆ.  ಇಲ್ಲಿ ಜಗತ್ತನ್ನು ಸೃಷ್ಟಿಸುವುದು ಬೇರೆ ಯಾವುದೇ ದೊಡ್ಡ ಉದ್ದೇಶದಿಂದಲ್ಲ. ’ಬದಲಿಗೆ ನಾನೊಬ್ಬನೆ ಇರುವುದಕ್ಕೆ ಬೇಸರ ಅಂತ ಹೇಳಿ ಮೊದಲಿಗೆ ಉತ್ತೇಶ್ವರ, ಮಹೇಶ್ವರ ಎಂಬೆರಡು ಶಿಶು ಮಕ್ಕಳನ್ನು ಪಡೆಯುತ್ತಾರೆ.  ನಂತರ ವಿಭೂತಿಗಟ್ಟಿಯೊಂದನ್ನು ಎರಡು ಹೋಳು ಮಾಡಿ ಒಂದರಿಂದ ಭೂಮಿಯನ್ನು ಇನ್ನೊಂದರಿಂದ ಆಕಾಶವನ್ನು ಸೃಷ್ಟಿಸುತ್ತಾರೆ.  ಸೃಷ್ಟಿಸಿದ ಭೂಮಿಯ ಮೇಲೆ ಪಾದ ಮಡಗಿದಾಕ್ಷಣ ಮುತ್ತು- ರತ್ನ ಭೂಮಿಗೆ ಸುರಿಯುತ್ತವೆ.  ಆಗ  ಈ ಭೂಮಿಯ ಮೇಲೆ ಆದಿಶಕ್ತಿ, ಶಿವ, ವಿಷ್ಣು, ಬ್ರಹ್ಮ, ಪಾರ‍್ವತಿ, ಲಕ್ಷ್ಮಿ, ಸರಸ್ವತಿಯರ ಸೃಷ್ಟಿ ನಡೆಯುತ್ತದೆ.  ಆದಿಶಕ್ತಿ ತನಗೆ ಪತಿಬೇಕೆಂದು ಬಯಸಿ ಮಂಟೇಸ್ವಾಮಿಯ ಹತ್ತಿರ ಬೇಡಿಕೊಳ್ಳುತ್ತಾಳೆ.  ಈ ಬೇಡಿಕೆ ಮಂಟೇಸ್ವಾಮಿಗೆ ಮುಜುಗರ ಉಂಟುಮಾಡಿ ಕೆಟ್ಟವಾಕ್ಯವನ್ನು ಕೇಳಿಬಿಟ್ಟೆ ಎಂದು ಕೊರಗುತ್ತ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ನಿನಗೆ ಪತಿಯಾಗಲಿ ಎಂದು ಶಾಪವಿಡುತ್ತಾನೆ.  ಅದರ ಫಲವೇ ತ್ರಿಮೂರ್ತಿಗಳ ಜನನ.  ಇವರೆಲ್ಲರ ಮುಂದೆಯೂ ಆದಿಶಕ್ತಿ ತನಗೆ ಪತಿಯಾಗಬೇಕೆಂದು ಬೇಡುತ್ತಾಳೆ.  ಶಿವ, ಬ್ರಹ್ಮ ಒಪ್ಪಿಕೊಳ್ಳುವುದೇ ಇಲ್ಲ.  ವಿಷ್ಣು ಮಾತ್ರ ಉಪಾಯದಿಂದ ಒಪ್ಪಿಕೊಂಡಂತೆ ಮಾಡಿ ಆದಿಶಕ್ತಿಯನ್ನು ಸುಟ್ಟು ಬೂದಿಮಾಡುತ್ತಾನೆ.  ಆ ಬೂದಿಯಿಂದಲೇ ತ್ರಿಮೂರ್ತಿಗಳಿಗೆ ಪತ್ನಿಯರಾಗುವ ಮಹಿಳೆಯರು  ಉದ್ಭವಿಸುತ್ತಾರೆ.  ತ್ರಿಮೂರ್ತಿಗಳಿಗೆ ಮಂಟೇಸ್ವಾಮಿ ಕೆಲಸ ಕಾರ‍್ಯಗಳನ್ನು ಹಂಚಿಕೊಡುತ್ತಾನೆ.  ಅದರಲ್ಲಿ ಬ್ರಹ್ಮ-ವಿಧಿಯಮ್ಮರಿಗೆ ಮನುಷ್ಯ ಸೃಷ್ಟಿಯ ಕಾರ‍್ಯ ವಹಿಸಲಾಗುತ್ತದೆ.  ಆಗ ಬ್ರಹ್ಮ - ವಿಧಿಯಮ್ಮರಲ್ಲಿ, ವಿಧಿಯಮ್ಮ ಭೂಮಿತಾಯಿಯ ಭಾಗವಾದ ಮಣ್ಣಿನಿಂದ ಮೂರ್ತಿ ಮಾಡುತ್ತಾಳೆ.  ಬ್ರಹ್ಮ ಅದಕ್ಕೆ ಜೀವ ತುಂಬುತ್ತಾನೆ.  ಹೀಗೆ ಜಗತ್ತಿಗೆ   ಬೇಕಾದ ಸಕಲಪ್ರಾಣಿ - ಪಕ್ಷಿ - ಸಸ್ಯ   ಸಂಕುಲಗಳನ್ನು ಸೃಷ್ಟಿಸಲಾಗುತ್ತದೆ.  ಬ್ರಹ್ಮ ವಿಧಿಯಮ್ಮರಿಗೆ ಈ ಸೃಷ್ಟಿಕ್ರಿಯೆ ಬೇಸರದ ಚಾಕ್ರಿಯಾಗಿ ಕಾಣುತ್ತದೆ.  ಆಗ ಮಂಟೇಸ್ವಾಮಿ ಪ್ರಾಣಿಗಳ ಹೊಟ್ಟೆಯಲ್ಲೆ ಪ್ರಾಣಿ ಜನಿಸಬೇಕೆಂದು ವರ ನೀಡುತ್ತಾನೆ.  ನಂತರ ಜಗತ್ತಿಗೆ ಬೇಕಾದ ಸೂರ‍್ಯ - ಚಂದ್ರರನ್ನು ಸೃಷ್ಟಿಸಲಾಗುತ್ತದೆ.  
ಜಗತ್ತು ಸೃಷ್ಟಿಯಸಾಲು ವಿವರಿಸುವ ಸೃಷ್ಟಿ ಕ್ರಿಯೆಯ ಹಿನ್ನೆಲೆ ಹಾಗೂ ಸ್ವರೂಪಗಳು ಹಲವು.  ಇಲ್ಲಿ ಮಣ್ಣು, ಹುತ್ತ, ಬಾಳೆ ಇಂಥವುಗಳಿಂದಲೇ ಸಕಲ ಪ್ರಾಣಿಗಳ ಮೂಲ ಧಾತು  ಉದ್ಭವಿಸುತ್ತದೆ.  ಇವೆಲ್ಲವೂ ಪಶುಪಾಲಕ ಹಾಗೂ  ಕೃಷಿ ಸಮುದಾಯಗಳಲ್ಲಿ  ಫಲವಂತಿಕೆಯ ಸಂಕೇತಗಳು.(ಎಂ.ಬಿ.  ನೇಗಿನಹಾಳ, ಮೈಲಾರಲಿಂಗ - ಖಂಡೋಬ ಸಾಂಸ್ಕೃತಿಕ ಅಧ್ಯಯನ, ಪುಟ:೨೨೮) ಹೀಗೆ ಮಣ್ಣಿಗೆ ಹತ್ತಿರವಾದ ಧಾತುಗಳಿಂದ ಉದ್ಭವಿಸಿದ ಪ್ರಾಣಿಗಳೆಲ್ಲವೂ ಸಮಾನ. ಜಗತ್ತಿಗೆ ಮನುಷ್ಯ ಎಷ್ಟು ಅಗತ್ಯವೋ ಚೇಳು, ಸರ್ಪ, ಗೊದ್ದ, ಗೋಸುಂಬೆಗಳು ಅಷ್ಟೇ ಪ್ರಧಾನ ಎಂಬ ಸ್ಪಷ್ಟ ಸಂದೇಶ ಇಲ್ಲಿ ಕಂಡು ಬರುತ್ತದೆ..   ಜಗತ್ತು ಸೃಷ್ಟಿಯ ಸಾಲು ವಿವರಿಸುವ ಹಾಗೆ   ’ಮನುಷ್ಯನ ಉದ್ಭವಕ್ಕೆ ಮೂಲ ಧಾತು ಒದಗಿಸಿದ ಭೂಮಿ, ಗೊಂಬೆಮಾಡಿದ ವಿದಿಯಮ್ಮ, ಜೀವ ತುಂಬಿದ ಬ್ರಹ್ಮ ಇವರುಗಳು ಮನುಷ್ಯನ ಸಾವಿನ ನಂತರ ತಮ್ಮ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆ.  ಹಾಗಾಗಿಯೇ ಸತ್ತ ಮನುಷ್ಯನ  ಜೀವವನ್ನು ಬ್ರಹ್ಮ ಸ್ವೀಕರಿಸಿದರೆ, ಉಳಿದ ದೇಹವನ್ನು ಭೂಮಿ ಸ್ವೀಕರಿಸುತ್ತದೆ’ ಎನ್ನುವ ಅಂಶ ಗಮನಿಸಬೇಕಾದುದೆ.  
ಸೃಷ್ಟಿ ಪುರಾಣಗಳಲ್ಲಿ  ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರರು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ ಅವರೇ ಸರ್ವ ಸ್ವತಂತ್ರರಲ್ಲ  ಎಂಬುದು ಅತ್ಯಂತ ಕುತೂಹಲಕರ ಸಂಗತಿ.  ಜನಪದ ಸಮುದಾಯಗಳಲ್ಲಿ ಬಾಳಿ ಬದುಕಿದ ಸಾಂಸ್ಕೃತಿಕ ವೀರರೆ ತ್ರಿಮೂರ್ತಿಗಳನ್ನು  ಸೃಷ್ಟಿಸುತ್ತಾರೆ.  ತ್ರಿಮೂರ್ತಿಗಳು ಸಾಂಸ್ಕೃತಿಕ ನಾಯಕರ ಅಧೀನದಲ್ಲಿರುವವರು. ಮಂಟೇಸ್ವಾಮಿಯ ವಿಷಯದ ಮೂಲಕವೇ ಈ ಅಂಶವನ್ನು ಸ್ಪಷ್ಟಪಡಿಸುವುದಾದರೆ: ಜೀವ ಜಗತ್ತಿಗೆ ಅತೀ ಅಗತ್ಯವಾದ ಸೃಷ್ಟಿಯ eನವನ್ನು ಬ್ರಹ್ಮ ಹಾಗೂ ವಿಧಿಯಮ್ಮನಿಗೆ ನೀಡಿದ್ದಾರೆ. ಆದರೆ ಸಂಪೂರ್ಣ eನ ಅದಲ್ಲ.  ಅದಕ್ಕಿಂತ ಹೆಚ್ಚಿನ eನ ಮಂಟೆಸ್ವಾಮಿಯಲ್ಲಿ ಮಾತ್ರವೇ ಇದೆ.  ಅದಕ್ಕಾಗಿ ಮಂಟೇಸ್ವಾಮಿ ಬ್ರಹ್ಮ-ವಿಧಿಯಮ್ಮರಿಗೆ ಸಾಧ್ಯವಾಗದೇ ಇರುವ ಸೃಷ್ಟಿಯ ಬಗ್ಗೆ ಯೋಚಿಸುತ್ತಾನೆ. 
ಹೀಗೆ ಯೋಚಿಸುತ್ತಾ ತ್ರಿಮೂರ್ತಿಗಳಿಗೆ ದಕ್ಕದೇ ಇರುವ eನ ನನ್ನಲ್ಲಿದೆ ಎಂಬುದನ್ನು ಮಂಟೇಸ್ವಾಮಿ ಸಾಬೀತುಪಡಿಸುತ್ತಾನೆ.  ಇನ್ನೊಂದು ಕಡೆ ಬ್ರಹ್ಮ - ವಿದಿಯಮ್ಮರ ಅಸಮರ್ಥತೆಯ ಬಗ್ಗೆಯೂ ನಿರೂಪಣೆಯಿದೆ.  ವಿದಿಯಮ್ಮ ಭೂಮಿಯ ಮಣ್ಣಿನಿಂದ ಗೊಂಬೆ ಮಾಡಿ, ಬ್ರಹ್ಮ ಅವುಗಳಿಗೆ  ಜೀವ ತುಂಬಿ ನಮಗೆ ಸಾಕಿನ್ನು ಈ ಚಾಕ್ರಿ ಎಂಬ ಸ್ಥಿತಿಗೆ ಬರುತ್ತಾರೆ.  ಆಗ ಮಂಟೇಸ್ವಾಮಿ  ಪ್ರಾಣಿಗಳ ಹೊಟ್ಟೆಯಲ್ಲಿ ಪ್ರಾಣಿಗಳು ಹುಟ್ಟಲಿ ಎಂದು ಹಾರೈಸಿ ಬ್ರಹ್ಮ-ವಿಧಿಯಮ್ಮರ ತೀರ್ಮಾನಕ್ಕೆ ಸಲಹೆ ಕೊಡುತ್ತಾನೆ.  ಮಂಟೇಸ್ವಾಮಿಯ ಇಂಥ ಶಕ್ತಿ ಸಾಮರ್ಥ್ಯಗಳನ್ನು ಸಮುದಾಯಗಳು ಎರಡಿಲ್ಲದೆ ಒಪ್ಪಿಕೊಂಡಿವೆ. ಹೀಗೆ ಮಂಟೇಸ್ವಾಮಿ ಇಡೀ ಜಗತ್ತನ್ನು  ಒಂದು ವ್ಯವಸ್ಥೆಗೆ ಜೋಡಿಸಿ  ಹೊರಟುನಿಂತಾಗ, ತ್ರಿಮೂರ್ತಿಗಳಿಗೆ ಮಂಟೇಸ್ವಾಮಿಯನ್ನು ಬಿಟ್ಟು ಬದುಕುವುದು ದೊಡ್ಡ ಆತಂಕವೆನಿಸಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮಂಟೇಸ್ವಾಮಿ  ಜಗತ್ತನ್ನು ಹೇಗೆ ಆಳಬೇಕೆಂದು ನಿರ್ದೇಶಿಸುತ್ತಾನೆ. ಹೀಗೆ  ಶಾಸ್ತ್ರೀಯ ಪರಂಪರೆಯಲ್ಲಿ ಸಾರಸರ್ವಸ್ವ, ಸರ್ವಶಕ್ತ, ಅತೀ ಅವಶ್ಯಕವೆನಿಸಿದವರನ್ನು ಅಮುಖ್ಯವಾಗಿಸಿ; ಸಮುದಾಯದ ಸಾಮಾನ್ಯ ವೀರನೊಬ್ಬನನ್ನು  ಸರ್ವಶಕ್ತವಾಗಿಸಿ  ಆತನ ಅಧೀನಕ್ಕೆ ಅವರನ್ನು ತರುವ ಆಶಯಗಳು ಇಲ್ಲಿವೆ.
ಕಾಡುಗೊಲ್ಲರ ಕುಲಚರಿತೆಯಂತಿರುವ ’ಜುಂಜಪ್ಪನಕಾವ್ಯ’ ಹೇಳುವಂತೆ ಜುಂಜಪ್ಪನ ಪೂರ‍್ವಿಕರು ವಿಷ್ಣುವಿನ ’ಗೊಲ್ಲ ಕುಲವನ್ನು ಬೆಳಸಬೇಕು’ ಎಂಬ ಅಭೀಪ್ಸೆಯ ಮೇರೆಗೆ ಸೃಷ್ಟಿಯಾದವರು.  ಅಂಥ ಪರಂಪರೆಯ ನಾಲ್ಕನೇ ತಲೆಮಾರಿನ ವ್ಯಕ್ತಿ ಜುಂಜಪ್ಪ. ಇವರ ಒಟ್ಟು ಕುಲದ ಬೆಳವಣಿಗೆಯೇ ಅತ್ಯಂತ ಸಾಂಕೇತಿಕ. ಮನುಷ್ಯ ಮತ್ತು ಹಸುವಿನ ಸಂಯೋಗದಿಂದ ಇವರ ಸಂತತಿ ಬೆಳೆಯುತ್ತದೆ. ಹಾಗೆಯೇ ಇವರ ಜನನಗಳೂ ಕೂಡ ಬೇರೆ ಬೇರೆ ಆಯಾಮಗಳಲ್ಲಿ ಜರಗುತ್ತವೆ.  ಆರಂಭದ ಚಿತ್ರಲಿಂಗ, ಕಾಟಮುಲಿಂಗರು ಶಿವನ ಬೆವರಿನಿಂದ ಜನಿಸಿದರೆ; ಜುಂಜಪ್ಪ ತಾಯಿಯ ಬಲಭುಜದಲ್ಲಿ ಬಂಗಾರದ ಹಲ್ಲಿಯಾಗಿ ಜನಿಸುತ್ತಾನೆ. ಮತ್ತೆ ಕೆಲವರು ಸಾಮಾನ್ಯರಂತೆ ಜನನ ಪಡೆಯುತ್ತಾರೆ, ಇನ್ನೂ ಕೆಲವು ವಸ್ತು ಪರಿಸರಗಳು ಹುತ್ತ, ಮೊಸರಿನಿಂದ ಜನಿಸುತ್ತವೆ. ಜನನಗಳ ಬಗ್ಗೆ ಇರುವ ಈ ಕಥೆಗಳು ನಿಜ ಸಂಗತಿಗಳನ್ನು ನೇರ ಹೇಳಲಾಗದ ಸಂದರ್ಭಕ್ಕೆ ಹುಟ್ಟಿದ ಸೃಷ್ಟಿಗಳೆಂದು ತಿಳಿದರೆ ಇವುಗಳ ಸತ್ಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ.
ಜುಂಜಪ್ಪನ ಕಾವ್ಯದಲ್ಲಿ ಈ ದೃಷ್ಟಿಯಿಂದ ಮುಖ್ಯವಾಗುವ ನಾಲ್ಕು ಬಗೆಯ ವಿವರಗಳು ದೊರೆಯುತ್ತವೆ. ಅವುಗಳೆಂದರೆ, ಕುರಿಗಳ ಸೃಷ್ಟಿ, ಮಳೆಗಳ ಸೃಷ್ಟಿ, ಊರುಗಳ ಸೃಷ್ಟಿ ಮತ್ತು ದೇವರುಗಳ ಸೃಷ್ಟಿ. ಪಶುಪಾಲನೆಯ ಹಂತದ ಸಮುದಾಯಗಳಲ್ಲಿ ಹಲವಾರು ಸಂಘರ್ಷ - ಸಮನ್ವಯಗಳು ನಡೆದಿವೆ ಎಂಬುದು ಸಹಜ.  ಈ ಹಿನ್ನೆಲೆಯಲ್ಲಿ ಜುಂಜಪ್ಪ ತನ್ನ ಪಶುಗಳೊಂದಿಗೆ ಕುರುಬರ ಉಂಡಾಡಿ ಪದುಮಣ್ಣನ ಹೊಲದಲ್ಲಿ ಬಹಳಷ್ಟು ದಿನ ನೆಲೆಯೂರಿದ್ದರ ಸ್ಮರಣಾರ್ಥ ಆತನಿಗೆ ಕುರಿಗಳನ್ನು ಸೃಷ್ಟಿಸಿಕೊಡುತ್ತಾನೆ.  
ಜನಪದ  ಕಥನ ಗೀತೆಗಳಲ್ಲಿ ಪ್ರಮುಖವಾದ ’ಉತ್ತರ ದೇವಿ’ ಗೀತೆಯಲ್ಲಿ ಕೊನೆಗೆ ಉತ್ತರೆ ಮಳೆಯಾಗಿ ಹರಿದು ಹೋದಳು ಎಂದು ಹೇಳಲಾಗುತ್ತಿದೆ.  ಇಂಥ ಕಲ್ಪನೆಗಳು ಸಮುದಾಯಗಳಲ್ಲಿ ಸದಾ ಜೀವಂತವಾಗಿರುತ್ತದೆ.  ಇಂಥ ಕಲ್ಪನೆಯ ಒಳಗೆ ಚಿತ್ತ, ಸ್ವಾತಿ, ವಿಸಾತಿ ಮಳೆಗಳು ಹೇಗೆ ಸೃಷ್ಟಿಯಾದವು ಎಂಬುದಕ್ಕೆ ಜುಂಜಪ್ಪನ ಕಾವ್ಯ ತನ್ನ ಲೋಕದೃಷ್ಟಿಯನ್ನು ಅಭಿವ್ಯಕ್ತಿಸುತ್ತದೆ.  ಜುಂಜಪ್ಪನ ಅಜ್ಜಿ ಸಾತೆಮ್ಮ (ಮಾರು ಮುತ್ತಣ್ಣನ ಹೆಂಡತಿ)  ಒಬ್ಬಳಿಂದಲೇ ಸ್ವಾತಿ, ವಿಸಾತಿ ಮಳೆಗಳು ಸೃಷ್ಟಿಯಾದುದರ ವಿವರಗಳಿವೆ.  ಸಾತೆಮ್ಮ  ಹಾಗೂ ಮಾರುಮುತ್ತಣ್ಣ ತಮ್ಮ ಆಹಾರ ಶೋಧನೆ ನಡೆಸುತ್ತಾ ಕಾಡಿನಲ್ಲಿ ಮಗುವನ್ನು ಬಿಟ್ಟು ಹಿಂದಿರುಗಿ ಬರಲಾರದಷ್ಟು ದೂರ ಹೊರಟುಹೋಗುತ್ತಾರೆ. ನಂತರ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಬೆಟ್ಟದ ಮೇಲಿಂದ ಜಾರಿ ಬಿದ್ದು ಸಾವನ್ನಪ್ಪುತ್ತಾರೆ.  ಇದೇ ಸಂದರ್ಭದಲ್ಲಿ ಲೋಕಾರ್ಥ ಹೊರಟಿದ್ದ  ಶಿವ-ಪಾರ‍್ವತಿಯರು ಇವರನ್ನು ಮತ್ತೆ ಜೀವಂತವಾಗಿಸುತ್ತಾರೆ.  ಆದರೆ ಇಬ್ಬರೂ ಬದುಕಲು ತಿರಸ್ಕರಿಸುತ್ತಾರೆ.  ಆಗ ಶಿವನು ಸಾತೆಮ್ಮನ ದವಡೆಯ ಒಂದು ಭಾಗದಲ್ಲಿ ವಿಷ ಮತ್ತೊಂದು ಭಾಗದಲ್ಲಿ ಮುತ್ತು-ರತ್ನ ಇರುವುದನ್ನು ಗುರುತಿಸಿ, ವಿಷವಿರುವ ದವಡೆಯಿಂದ  ವಿಸಾತಿ; ಮುತ್ತು ರತ್ನವಿರುವ ದವಡೆಯಿಂದ ಸ್ವಾತಿ ಮಳೆಯಾಗಿ ಹೋಗೆಂದು ವರಕೊಡುತ್ತಾನೆ. ಇಲ್ಲಿಯ ವಿಚಾರಗಳಿಂದ ಕೆಲ ಮಹತ್ವದ ಸಂಗತಿಗಳು ಹೊಳೆಯುತ್ತವೆ.  ವಿಷಾತಿ ಮಳೆ ಬಂದರೆ ಸಾಮಾನ್ಯವಾಗಿ ಕ್ರಿಮಿ ಕೀಟಗಳು, ಹುಳ-ಹುಪ್ಪಡಿಗಳು ನಾಶವಾಗುತ್ತವೆ.  ಹಾಗೆಯೇ ಸ್ವಾತಿ ಮಳೆ ಬಂದರೆ ಸಮುದ್ರಗಳಲ್ಲಿ  ಮುತ್ತು ರತ್ನ ತುಂಬಿಕೊಳ್ಳುತ್ತವೆ ಎಂಬ ನಂಬಿಕೆ ಇದೆ. ಕಾವ್ಯವೂ ಇದನ್ನು ಸ್ಪಷ್ಟಪಡಿಸುತ್ತದೆ.  ಬೆಳೆಗಳನ್ನು ಹಾಗೂ ಮನುಷ್ಯ ಕುಲವನ್ನು ವಿಷ ಜಂತುಗಳಿಂದ ಕಾಪಾಡುವ, ಇಡೀ ಭೂ ಪ್ರದೇಶಗಳಿಗೆ ಮುತ್ತು ರತ್ನದ ಹೊಳೆ ಹರಿಸುವ ಮಹತ್ವದ ಕೆಲಸಗಳ ಹಿಂದೆ ಗೊಲ್ಲ ಮಹಿಳೆಯೊಬ್ಬಳಿದ್ದಾಳೆಂಬುದು ಇಲ್ಲಿಯ ಆಶಯ. ಇದರ ಜೊತೆಗೆ ಚಿತ್ತ ಮಳೆಯೊಂದು ಸೃಷ್ಟಿಯಾಗಿದೆ.  ಅದರ ಜೊತೆಗೂ ಗೊಲ್ಲ ಮಹಿಳೆಯೊಬ್ಬಳಿದ್ದಾಳೆ.  ಆದರೂ ಇದು ಜನಪರವಾಗಿ ಉಳಿಯುವುದಿಲ್ಲ.   ಏಕೆಂದರೆ ಗೊಲ್ಲರ ಪೂಜಾರಿ ಚಿತ್ತಯ್ಯನ ಮಗಳಾದ ಚಿನ್ನಮ್ಮ , ಒಮ್ಮೆ ಜುಂಜಪ್ಪನ ತಾಯಿಯ ಶೀಲವನ್ನು ಶಂಕಿಸಿ ಮಾತನಾಡುತ್ತಾಳೆ. ಆಗ ಜುಂಜಪ್ಪ  ’ನೀನು ನಮ್ಮ ತಾಯಿಯನ್ನು ಹಿಯಾಳಿಸಿ ಸ್ವಾಟೆಗೆ ತಿವುದು ಬಯ್ದಿದ್ದಕ್ಕಾಗಿ ನೀನು ಯಾವಾಗಲೂ ಸೋನೆ ಮಳೆಯಾಗಿ ಹೋಗಿ ಜನರ ಹತ್ತಿರ ತೀರಾ ಹೊಲಸು ಮಾತುಗಳಿಂದ ಬೈಸಿಕೊಳ್ಳಬೇಕು ಹಾಗೆ ಮಾಡುತ್ತೇನೆ, ಎನ್ನುತ್ತಾ ಆಕೆಗೆ ಚಿತ್ತ ಮಳೆಯಾಗಿ ಹರಿದು ಹೋಗೆಂದು ಶಾಪವಿಕ್ಕುತ್ತಾನೆ.’ ಚಿನ್ನಮ್ಮ ಚಿತ್ತೆ ಮಳೆಯಾಗುತ್ತಾಳೆ.
ಕುರಿ ಮತ್ತು ಮಳೆಗಳನ್ನು ಸೃಷ್ಟಿಸಿದ ಜುಂಜಪ್ಪ ನಂತರ ಕೆಲವು ಊರುಗಳನ್ನು ಸೃಷ್ಟಿಮಾಡಿದ ಬಗ್ಗೆ ಕಾವ್ಯ ಸ್ವಾರಸ್ಯಕರವಾಗಿ ವಿವರಿಸುತ್ತದೆ.  ಜುಂಜಪ್ಪ  ಮತ್ತು  ಆತನ ಪರಿವಾರದವರು (ರಂಗಪ್ಪ, ಭೂತಪ್ಪ, ಮೊದಲಾದವರು) ತಾಳೇದುರಿಗಿಯನ್ನು ಕೊಂದು ಮರಳುತ್ತಿರುವಾಗ ಕೆಲವು ಊರುಗಳನ್ನು ಸೃಷ್ಟಿಸುತ್ತಾರೆ.  ಅವುಗಳೆಂದರೆ ಮೊಸರು ಕುಂಟೆ,ತುಪ್ಪದಕೋಣ, ಸಾಕ್ಷಿಪಾಳ್ಯ, ನಿಂಬೆಮರದಹಳ್ಳಿ ಮೊದಲಾದವು. ಭೂತಪ್ಪನಿಗೆ ತುಪ್ಪ, ಮೊಸರು ಮಾಡಿ ಉಣಿಸಿದ್ದರ eಪಕಾರ್ಥ ತುಪ್ಪದ ಕೋಣ, ಮೊಸರು ಕುಂಟೆ ಎಂಬ ಸ್ಥಳಗಳು ಸೃಷ್ಟಿಯಾದರೆ; ಈ ಘಟನೆಗಳಿಗೆ  ಸಾಕ್ಷಿಯಾಗಿ ಸಾಕ್ಷಿಪಾಳ್ಯ ಸೃಷ್ಟಿಯಾಗುತ್ತದೆ.  ಈಗಲೂ ಈ ಸ್ಥಳಗಳಿದ್ದು ಇವುಗಳಿಗೆ ಬೇರೆಯದೇ ಆದ ಸ್ಥಳ ಪುರಾಣಗಳಿರಬಹುದು. ಊರುಗಳನ್ನು ಸೃಷ್ಟಿಸಿದ ನಂತರ ಕೆಲವು ದೇವರುಗಳನ್ನು ಸೃಷ್ಟಿಸಲಾಗುತ್ತದೆ.  ಭೂತಪ್ಪ  ಹಟ್ಟಿಮಾರಮ್ಮ  ಮೊದಲಾದ ದೈವಗಳನ್ನು ಸೃಷ್ಟಿಸಿದ್ದಲ್ಲದೆ, ತಾಳೇದುರುಗಿಯ  ಪ್ರಭೆಯಿಂದಾಗಿ ಕೆಲವಾರು ದೈವಗಳಿಗೆ ಪೂಜೆಯ ವ್ಯವಸ್ಥೆಯೂ ಮಾಡಲಾಗುತ್ತದೆ.
ಜನಪದ  ಮಹಾಕಾವ್ಯಗಳ ಪ್ರಕಾರ  ಜಗತ್ತಿಗೆ ಮೂರು ಲೋಕಗಳಿವೆ.  ಅವು ದೇವಲೋಕ, ಭೂಲೋಕ, ಪಾತಾಳಲೋಕ. ದೇವಲೋಕ ಆಕಾಶದಲ್ಲಿರುವಂತಹದ್ದು, ದೇವರು ವಾಸಿಸುವ ಕೈಲಾಸ, ವೈಕುಂಠ ಮೊದಲಾದ ಸ್ಥಳಗಳಿರುವುದು ಅಲ್ಲಿಯೆ. ಭೂಲೋಕ, ಇದು ನರರಲೋಕದ ದೈವಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಾಣಿ-ಪಕ್ಷಿ-ಸಸ್ಯ ಸಂಕುಲಗಳ ವಾಸಸ್ಥಾನ. ಪಾತಾಳಲೋಕ, ಕೆಳಲೋಕ. ಇದರ ಬಗ್ಗೆ ಕಾವ್ಯಗಳಲ್ಲಿ ವಿವರವಾದ ಮಾಹಿತಿ ಸಿಗುವುದಿಲ್ಲ.  ಆದರೂ ಕೆಲವೊಬ್ಬರ ಸಾವಿನ ಸಂದರ್ಭಗಳಲ್ಲಿ ನಡೆಯುವ ಸಂಭಾಷಣೆಗಳನ್ನು  ಸೂಕ್ಷ್ಮವಾಗಿ ಗಮನಿಸಿದರೆ ಅದರ ಅರ್ಥ ಸ್ಪಷ್ಟವಾಗುತ್ತಾ ಹೋಗುತ್ತದೆ.  ಜುಂಜಪ್ಪನ ಕಾವ್ಯದಲ್ಲಿ  ಅಂಬೆರಾಯ ಮತ್ತು ತುಂಬೇರಾಯ, ಜುಂಜಪ್ಪನ ತಾಯಿ ಚಿನ್ನಮ್ಮ ಅವರುಗಳು ಕಾಲುಬೆರೆಸಿ ಕೈಲಾಸಕ್ಕೋಗುವ ಆಶಯ ವ್ಯಕ್ತಪಡಿಸುತ್ತಾರೆ.  ಮಂಟೇಸ್ವಾಮಿ, ಜುಂಜಪ್ಪ  ಅವರುಗಳು ಸಹ ಪಾತಾಳಲೋಕಕ್ಕೆ ಹೋಗುವ ಬಗ್ಗೆ ಆಲೋಚಿಸುತ್ತಾರೆ.  ಮಂಟೇಸ್ವಾಮಿಯಂತೂ ತನ್ನ ಜೀವ ಸಮಾಧಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಹಲವಾರು ಹೋರಾಟಗಳನ್ನು ಮಾಡಿದ್ದಾನೆ.  ಇವೆಲ್ಲ ಪಾತಾಳಲೋಕಕ್ಕೆ ಸಂಬಂಧಿಸಿದವು. ಆದ್ದರಿಂದ ಇದು ಸವಾಲಿನ ಜಗತ್ತು ಎಂಬುದು ಅರ್ಥವಾಗುತ್ತದೆ.  ಇಲ್ಲಿ ಕೆಲವರು ಕಾಲುಬೆರೆಸಿ ಕೈಲಾಸಕ್ಕೆ ಹೋಗುವುದು ಸ್ವರ್ಗದಲ್ಲಿ ಮುಕ್ತಿ ಪಡೆಯುವುದಕ್ಕಾಗಿ.  ಸಾಂಸ್ಕೃತಿಕ ನಾಯಕರು ಮಾತ್ರ ಇನ್ನಷ್ಟು   ಛಲದಿಂದ ಪಾತಾಳಲೋಕಕ್ಕೆ ತೆರಳಲು ಸಾಹಸ ಮಾಡುತ್ತಾರೆ.  ಇವರು ನರಲೋಕದ ಬದುಕು ಸಾಕೆನಿಸಿ ಪಾತಾಳಲೋಕದ ಕಡೆಗೆ ಮುಖಮಾಡುತ್ತಾರಾದರೂ, ಪಾತಾಳಲೋಕದಲ್ಲಿ ಶಾಂತವಾಗಿ ಕೂರುವ ಕನಸು ಕಾಣುವುದಿಲ್ಲ.  ಜುಂಜಪ್ಪ ನಂತವರು ಶಿವನ ಅನುಗ್ರಹದಿಂದ ಭೂಮಿಗೆ ಬಂದು ಮತ್ತೆ ಮೇಲಕ್ಕೆ ಬರುವೆವೆಂದು ಅಭಯಕೊಟ್ಟವರು.  ಆದರೂ ಕೊನೆಗೆ ಶಿವನಿಗೆ ಕೊಟ್ಟ ಅಭಯವನ್ನೂ ಮೀರಿ ಪಾತಾಳಲೋಕಕ್ಕೆ ಹೊರಡುವುದು ಅತ್ಯಂತ ವಿಶಿಷ್ಟವಾಗಿದೆ. 
ಶಾಸ್ತ್ರೀಯ ಪುರಾಣಗಳ ನಾಯಕರು ಶಿವನಿಂದ ಶಿಕ್ಷಿತರಾಗಿಯೋ ಅಥವಾ ಭೂಲೋಕವನ್ನು ಶುದ್ಧೀಕರಿಸುವ ಸಲುವಾಗಿಯೋ ಭೂಮಿಗೆ ಬಂದವರು. ಇವರು ಯಾವುದೇ ಕಾರಣಕ್ಕೂ ಶಿವನ ಅಭಯವನ್ನು ಮೀರಲಾರರು.  ನಂತರ ದೇವಲೋಕಕ್ಕೆ ಹೋಗಿ ಮುಕ್ತಿ ಹೊಂದುವುದು ಇವರ ರೂಢಿ.  ಇದು ಬದುಕಿಗೆ ತೋರುವ ಪಲಾಯನವಾದವೇ ಆಗಿದೆ.  ಆದರೆ,  ದೇವಲೋಕಕ್ಕೆ ಹೋಗಿ ಹತ್ತರಲ್ಲಿ ಹನ್ನೊಂದು ಆಗುವ ಮನಸ್ಸು ಜನಪದ ನಾಯಕರದಲ್ಲ.  ಹಾಗಾಗಿ ಇವರು ಭೂ ಲೋಕದಲ್ಲಿಯೇ  ದೇವರಾಗಬೇಕು (ಸ್ಥಾಪಿತ ದೈವಗಳಂತಲ್ಲ) ಎಂದು ಬಯಸುತ್ತಾರೆ.  ಇವರು ದೇವರಾಗಬಯಸುವುದು ಸಹ ಪಾತಾಳಲೋಕಕ್ಕೆ ಹೋಗಿ ಜೀವ ಸಮಾಧಿಯಾಗುವ ಮೂಲಕ. ಜೀವ ಸಮಾಧಿಯ ಈ ಪರಿಕಲ್ಪನೆ ಪಾತಾಳಲೋಕಕ್ಕೆ ಹೋಗಬೇಕೆಂಬ ಅವರ ಲೋಕ ದೃಷ್ಟಿಗೆ ಸಂಬಂಧಿಸಿದೆ.  ಸಮಾಧಿಯಾಗುವುದೆಂದರೆ ದೇವರಾಗುವುದೆಂದೂ ಅರ್ಥವಾಗುತ್ತದೆ.  ಸಮಾಧಿಯಾಗುವುದರ ಮೂಲಕ ಭೂಲೋಕಕ್ಕೆ ಸ್ಫೂರ್ತಿಯಾಗಿ, ಪಾತಾಳಲೋಕಕ್ಕೆ ಪ್ರಜೆಯಾಗಿ ಹೋಗಬೇಕೆಂಬುದೇ ಇಲ್ಲಿಯ ಆಶಯ. ಜೇನು ಕುರುಬರಂತಹ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಪಾತಾಳಲೋಕವೆಂದರೆ ನರಕಲೋಕವೆಂದೂ ಭಾವಿಸಿದ್ದಾರೆ. (ಗಂಗಾಧರ ದೈವಜ್ಞ, ಬುಡಕಟ್ಟು ಸಮಾಜ ಹುಟ್ಟು ಸಾವಿನ ನಡುವೆ, ಪುಟ: ೬) ಬದುಕನ್ನು ಸದಾಕಾಲ ಸವಾಲೆಂಬಂತೆ ಸ್ವೀಕರಿಸುವ ಸಮುದಾಯಗಳಿಗೆ ದೇವಲೋಕಕ್ಕೆ ಹೋಗಿ ಸ್ವರ್ಗ ಪಡೆದು ಮುಕ್ತಿ ಹೊಂದುವ ಇರಾದೆ ಇಲ್ಲದೇ ಇರುವುದು ಕಂಡುಬರುತ್ತದೆ.  ಸಮಾಧಿಯಾಗುವುದರ ಮೂಲಕ ಮಣ್ಣಿನ ಜನರೊಡನೆ ಬದುಕಲು ಬಯಸುವ ಇವರು ಜೀವ ಸಮಾಧಿಯಾಗಬೇಕೆಂದು ಬಯಸುತ್ತಾರೆ.  ಸಮಾಧಿ ಕಲ್ಪನೆ ಹಲವಾರು ಸಮುದಾಯಗಳಲ್ಲಿ ವಿಭಿನ್ನವಾಗಿದೆ.  ವಿಶೇಷವಾಗಿ  ಇಸ್ಲಾಂ ಧರ‍್ಮದಲ್ಲಿ ಮರಣದ ನಂತರ ಸಮಾಧಿಯಾಗಿರುವಾತ ಪ್ರಳಯವಾಗುವವರೆಗೂ ಅಲ್ಲಿಯೇ ಇರುತ್ತಾನೆ.  ಪ್ರಳಯದ ದಿನ ಆತನನ್ನು ಬದುಕಿಸಿ, ಪರೀಕ್ಷಿಸಿ ನೇರವಾಗಿ ದೇವಲೋಕಕ್ಕೆ ಕರೆದೊಯ್ಯಲಾಗುತ್ತದೆಂದು ನಂಬುತ್ತಾರೆ. (ಸೋಮಶೇಖರ ಇಮ್ರಾಪುರ, (ಸಂ.) ಜಾನಪದ ಸಾಹಿತ್ಯ ದರ್ಶನ - ೧೫, ಪುಟ: ೧೦೪)  ಇಂಥಲ್ಲಿ   ಸ್ವರ್ಗ ಪಡೆಯಲು ಕಾಯ್ದು  ಕೂರುವ  ಸ್ಥಳವೇ ಸಮಾಧಿ ಎಂಬರ್ಥವಿದೆ.  ಈ ರೀತಿಯ   ಮನೋಭಾವ   ಮಹಾಕಾವ್ಯಗಳನ್ನು  ಅಭಿವ್ಯಕ್ತಿಸಿದ  ಗಾಯಕರಿಗಾಗಲಿ, ಸಮುದಾಯಗಳಿಗಾಗಲಿ, ಸಾಂಸ್ಕೃತಿಕ ನಾಯಕರಿಗಾಗಲೀ ಇಲ್ಲ.  ಭೂಲೋಕದ ಜನರನ್ನು ಸದಾ ಎಚ್ಚರದಿಂದಿಡುವ ಶಕ್ತಿಕೇಂದ್ರ ಇದೆಂಬುದೇ ಇವರ ಬಲವಾದ ನಂಬಿಕೆ.  
ಜನಪದ ಸಮುದಾಯಗಳಲ್ಲಿ ಪುನರ್ ಜನ್ಮದ ಬಗೆಗೆ ನಂಬುಗೆಯಿಲ್ಲ.  ಆದರೂ ಸತ್ತಂತ ವ್ಯಕ್ತಿಗಳನ್ನು ಬದುಕಿಸುವ ಆಶಯಗಳುಂಟು.  ಮಹಾಕಾವ್ಯಗಳಲ್ಲೂ ಈ ತರಹದ ಸಂಗತಿಗಳಿವೆ. ಮಂಟೇಸ್ವಾಮಿ ಸತ್ತ ಹೆಣ್ಣು ಮಗಳನ್ನು ಬದುಕಿಸಿ ತನ್ನ ಶಿಶು ಮಗಳಾಗಿಸಿಕೊಳ್ಳುತ್ತಾನೆ.  ಸಾಂಸ್ಕೃತಿಕ ನಾಯಕರಿಗೆಲ್ಲರಿಗೂ ಇಂಥ ಶಕ್ತಿಯಿದೆ.  ಜೊತೆಗೆ ಈ ನಾಯಕರ ಸಾಹಸಗಳನ್ನು ಕೊಂಡಾಡುವ ಗಾಯಕ ವರ್ಗಕ್ಕೂ ಈ ಕಲ್ಪನೆ ಸ್ಪಷ್ಟವಾಗಿದೆ. ಹೀಗಿರುವುದರಿಂದಲೇ ಅನೇಕ ಜನ ಸಾಂಸ್ಕೃತಿಕ ನಾಯಕರು ಮಧ್ಯ ವಯಸ್ಸಿಗೆ ಮಡಿದರೂ ನಂತರ ಬದುಕಿ ಅವರ ಕೆಲಸ ಕಾರ‍್ಯಗಳನ್ನು ಪೂರ್ತಿಗೊಳಿಸುತ್ತಾರೆ.  ಇದು ಗಾಯಕರ ಬಹುದೊಡ್ಡ ಆಶಯ.  ಇದಕ್ಕೆ ’ಜುಂಜಪ್ಪ ಕಾವ್ಯ’ ಉತ್ತಮ ಉದಾಹರಣೆ.  ಜುಂಜಪ್ಪ ತನ್ನ ಸೋದರ ಮಾವಂದಿರು ಇಕ್ಕಿದ ಮದ್ದನ್ನು ತಿಂದು ಮಡಿದರೂ  ಕೊನೆಗೆ ಶಿವನ ಶಕ್ತಿಯಿಂದ ಬದುಕಿ ತನ್ನ ಸೋದರ ಮಾವಂದಿರನ್ನು ಕೊಲ್ಲುತ್ತಾನೆ.  ಗಾಯಕರ ಇಂಥ ಕಲ್ಪನೆ ನಾಯಕರ ಶಕ್ತಿ ಸಾಮರ್ಥ್ಯಕ್ಕಿಂತ ಹಿರಿದು. ಏಕೆಂದರೆ ತಮ್ಮ  ನಿಜ ಜೀವನದಲ್ಲಿ ಸಾಧಿಸಲಾಗದ್ದನ್ನು ಕಾವ್ಯಗಳ ಮೂಲಕ ಸಾಧಿಸಿದ್ದಾರೆ.  ಗಾಯಕರಲ್ಲಿರುವ ಆಳುವ ವರ್ಗಗಳ ಬಗೆಗಿನ ಅಸಹನೆ ಇಂಥ ಅದ್ಭುತ ಕಲ್ಪನೆಗಳ ಸೃಷ್ಟಿಗೆ ಕಾರಣವಾಗುತ್ತದೆ.  
ಸಾಂಸ್ಕೃತಿಕ ಪ್ರತಿಮೆಯಾಗಿ ಹುಲಿ
ಜನಪದ ಸಾಹಿತ್ಯ ಸೃಷ್ಟಿಯಲ್ಲಿ ಹುಲಿ ಬಹುದೊಡ್ಡ ಸಾಂಸ್ಕೃತಿಕ ಪ್ರತಿಮೆಯಾಗಿ ಬಳಕೆಯಾಗಿದೆ. ಉದಾಹರಣೆಗೆ :  ಮ್ಯಾಸ ನಾಯಕರ ಗಾದ್ರಿಪಾಲನಾಯಕ ಹುಲಿಯೊಡನೆ ನಡೆಸಿದ ಹೋರಾಟ, ಗೋವಿನ ಹಾಡಿನ ಹುಲಿಯೊಂದಿಗಿನ ಪುಣ್ಯಕೋಟಿಯ ಜಗಳ, ಕಾಡುಗೊಲ್ಲರ ಮೈಲಣ್ಣ ಮತ್ತು ಹುಲಿಯ ಸಂಘರ್ಷ, ಮಲೆಯ ಮಾದೇಶ್ವರ ಕಾವ್ಯದ ಮಾದೇಶ್ವರ ಹುಲಿಯನ್ನು ವಾಹನ ಮಾಡಿಕೊಂಡಿರುವುದು, ರಾಮೋಜಿ ಹುಲಿಯೊಡನೆ ಹೋರಾಟ, ಗೊಂಡರಲ್ಲಿಯ ಹುಲಿ ಪೂಜೆ, ಚರಿತ್ರೆಯ ಸಳ ಮತ್ತು ಹುಲಿಯ ನಡುವಿನ ಯುದ್ಧ ಮತ್ತು ಹುಲಿಯೊಡನೆ ಟಿಪ್ಪುವಿನ ಹೋರಾಟಗಳನ್ನು ಪ್ರತಿಮಾ ವಿಧಾನದ ತಾತ್ವಿಕತೆಯ ಹಿನ್ನೆಲೆಯಲ್ಲಿ ಪರಿಶೀಲಿಸಿದರೆ ಈ ಸಾಂಸ್ಕೃತಿಕ ನಾಯಕರು ಹೋರಾಡಿದ್ದು ಹುಲಿಯ ಜೊತೆಯಲ್ಲಿ ಅಲ್ಲ  ಹುಲಿಯ ರೀತಿಯ ಗುಣಗಳುಳ್ಳ ಪ್ರಕೃತಿ, ಪರಿಸರದ ಜೊತೆಗೆ. ಅರಣ್ಯವಾಸಿಗಳಾದ ಸಮುದಾಯಗಳು ತಮ್ಮ  ಬದುಕಿನಲ್ಲಿ  ಹಲವು ಸವಾಲುಗಳನ್ನು ಎದುರಿಸಿವೆ. ಅವುಗಳಲ್ಲಿ ಮುಖ್ಯವಾಗಿ ಆಹಾರ ವಸತಿ ಸಮಸ್ಯೆಗಳೇ ಮುಖ್ಯವಾದವುಗಳು. ಈ ಸಂದರ್ಭಗಳೆಲ್ಲೆಲ್ಲ ಪ್ರಕೃತಿಯ ಜೊತೆ ಮುಖಾಮುಖಿಯಾಗಿವೆ. ಇದರಲ್ಲಿ ಸಂಘರ್ಷ, ಸಂಧಾನ, ಸೋಲು ಗೆಲವು ಎಲ್ಲವು ನಡೆದಿದೆ. ಮೇಲಿನ ಉದಾಹರಣೆಗಳನ್ನೆ ಗಮನಿಸುವುದಾದರೆ, ಕಾಡುಗೊಲ್ಲರ ಮೈಲಣ್ಣ ನಡೆಸಿದ ಸಂಘರ್ಷ ಹೇಗಾದರೂ ಮಾಡಿ ಈ ಅಪಾಯದಿಂದ ಪಾರಾಗಬೇಕು ಎಂದುಕೊಂಡರೆ, ಗಾದ್ರಿಪಾಲನಾಯಕನ ಪ್ರಯತ್ನ ಪ್ರಕೃತಿಯೊಡನೆ ಸಂಧಾನ ಮಾಡಿಕೊಂಡು ಎಲ್ಲರೂ ಒಂದೇ ಎನ್ನುವಂತೆ ಬದುಕಬೇಕೆಂಬುದಾಗಿದೆ. ಗೊಂಡರಲ್ಲಿ ಹುಲಿ ಪೂಜಾ ಸಂಪ್ರದಾಯ, ಆ ಗುಂಪು ಪ್ರಕೃತಿಯ ಶಕ್ತಿಗೆ ಶರಣಾಗಿ ಭಕ್ತಿಯ ಭಾವದಲ್ಲಿ ಆರಾಧಿಸುವ ಕ್ರಮವಾಗಿದೆ. ಕೊನೆಗೆ ಮಾದೇಶ್ವರನು ಹುಲಿ ವಾಹನ ಮಾಡಿಕೊಂಡದ್ದು ಒಂದರ್ಥದಲ್ಲಿ ಪ್ರಕೃತಿಯ ಮೇಲೆ ತಾನು ಹಿಡಿತ ಸಾಧಿಸಿದೆನೆಂಬ ಭಾವನೆ ವ್ಯಕ್ತವಾಗುತ್ತದೆ.  ಹೀಗೆ ಜನಪದ ಸಾಹಿತ್ಯ ರಚನೆಗಳಲ್ಲಿ ಕಂಡು ಬರುವ ಹುಲಿಯನ್ನು ಬರೀ ಕಾಡಿನ ಒಂದು ಕ್ರೂರ ಪ್ರಾಣಿ ಎಂದು ಭಾವಿಸದೆ ಅದನ್ನು ಒಂದು ಪ್ರತಿಮೆ ಎಂದು ಭಾವಿಸಿ ಆ ರಚನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಮಂಟೇಸ್ವಾಮಿಯ ಕಲಿಪುರುಷನ ರೂಪ
ಮಂಟೇಸ್ವಾಮಿ ಕಾವ್ಯದಲ್ಲಿ ಮುಂದಿನ ಕಲಿಯುಗದ ಸ್ವರೂಪ ಹೇಗಿರುತ್ತದೆ ಎಂಬ ವಿವರಗಳು ಸಿಗುತ್ತವೆ. ಅದರಲ್ಲಿ ಕಲಿಪುರುಷನ ಚಿತ್ರಣವಿದೆ. ಅದು ನಮ್ಮ ಜನಪದ ಕವಿಗಳ ಪ್ರತಿಮಾ ಸೃಷ್ಟಿಯ ಶಕ್ತಿಯನ್ನು ಕಾಣಿಸುತ್ತದೆ. ಅಲ್ಲಿ ಕಂಡುಬರುವ ಕಲಿ ಪುರುಷನ ಸ್ವರೂಪ ಹೀಗಿದೆ : ಕಲಿ ಮನುಷ್ಯ ತನ್ನ ಹೆಂಡತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು, ಬಲದಲ್ಲಿ ತನ್ನ ತಾಯಿಯನ್ನು ನಡೆಸಿಕೊಂಡು ಹೆಂಡತಿಯ ಚಪ್ಪಲಿಯನ್ನು ತಲೆ ಮೇಲೆ ಹೊರಿಸಿಕೊಂಡು, ತಾನು ಮೆಡುವ ಚಪ್ಪಲಿಯನ್ನು ಆಕೆಯ ಮಡಿಲಲ್ಲಿ ಕಟ್ಟಿಸಿಕೊಂಡು, ತಾವು ವೀಳ್ಯ ಹಾಕಿಕೊಂಡು ಉಗಿಯುವ ಪಿಕಿದಾನಿಯನ್ನು ಹಿಡಿಸಿಕೊಂಡು; ಎಡದಲ್ಲಿದ್ದ ತಂದೆಯ ತಲೆಯ ಮೇಲೆ ತಮ್ಮ ಮಲಗುವ ಮಂಚ, ಹಾಸಿಗೆ ಮತ್ತು ದಿಂಬುಗಳನ್ನು ಹೊರಿಸಿಕೊಂಡು ಬರುತ್ತಿರುವುದು ಕಾಣಿಸುತ್ತದೆ. ಈತ ಮೇಲಿನ ಉಡುಗೆಯನ್ನು ಕೆಳಗೆ, ಕೆಳಗಿನ ಉಡುಗೆಯನ್ನು ಮೇಲೆ ಧರಿಸಿದ್ಧ. ಹಾಗೆಯೇ ಹೊಂದು ಮುಂದಾಗಿ ನಡೆಯುತ್ತಿದ್ದ. ಕಲಿಪುರುಷನ ಈ ಪ್ರತಿಮೆ ಮುಂದೆ ಬರಲಿರುವ ಕಲಿಗಾಲದ ವಿಕೃತಿಗಳನ್ನು ಸಂಕೇತಿಸುತ್ತದೆ.
ಹೀಗೆ ಜನಪದ ಕವಿಗಳು ತಮ್ಮ ಅನುಭವಗಳನ್ನು ತಮಗೆ ಗೊತ್ತಿರುವ ಭಾಷೆಯ ಮಿತಿಯಲ್ಲೇ ಅದ್ಭುತ ಉಪಮೆ, ರೂಪಕ ಮತ್ತು ಪ್ರತಿಮೆಗಳನ್ನು ಸೃಷ್ಟಿಸಿದ್ದಾರೆ. ಅವುಗಳನ್ನು ಅರ್ಥೈಯಿಸುವುದರ ಮೂಲಕವೇ ಜಾನಪದ ರಚನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇದು ನಿಜವಾದ ಅರ್ಥದಲ್ಲಿ ಜಾನಪದವನ್ನು ಅರ್ಥಮಾಡಿಕೊಳ್ಳುವ ಕ್ರವಾಗಿದ್ದು, ಆ ಪರಂಪರೆಯನ್ನು ಮುಂದುವರೆಸುವ ಸೂಕ್ತಮಾರ್ಗವೂ ಆಗಿದೆ.
ಪರಾಮರ್ಶನ
೧. ತಪೋನಂದನ, ಕುವೆಂಪು, ಉದಯರವಿ ಪ್ರಕಾಶನ, ಮೈಸೂರು
೨. ರಸೋ ವೈಸಃ, ಕುವೆಂಪು, ಉದಯರವಿ ಪ್ರಕಾಶನ, ಮೈಸೂರು
೩. ಮಂಟೇಸ್ವಾಮಿ, (ಸಂ) ಹಿ.ಚಿ. ಬೋರಲಿಂಗಯ್ಯ, ೧೯೯೭, ಕನ್ನಡ ವಿಶ್ವವಿದ್ಯಾಲಯ, ಹಂಪಿ
೪. ಜುಂಜಪ್ಪ,  (ಸಂ) ಚಲುವರಾಜ, ೧೯೯೭,  ಕನ್ನಡ ವಿಶ್ವವಿದ್ಯಾಲಯ, ಹಂಪಿ
೫. ಗಾದ್ರಿಪಾಲನಾಯಕ, (ಸಂ) ವಿರುಪಾಕ್ಷಿ ಪೂಜಾರಹಳ್ಳಿ, ೧೯೯೯, ಕನ್ನಡ ವಿಶ್ವವಿದ್ಯಾಲಯ, ಹಂಪಿ
೬. ಅರವಿಂದ ಮಾಲಗತ್ತಿ, ಪುರಾಣ ಜಾನಪದ ಮತ್ತು ದೇಶೀವಾದ,  ೧೯೯೯, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
೭. ಡಿ. ಆರ್.ನಾಗರಾಜ, ಅಲ್ಲಮ ಪ್ರಭು ಮತ್ತು  ಶೈವ ಪ್ರತಿಭೆ, ೨೦೦೦, ಅಕ್ಷರ ಪ್ರಕಾಶನ, ಹೆಗ್ಗೋಡು
೮. ಎಂ.ಬಿ.ನೇಗಿನಹಾಳ, ಮೈಲಾರಲಿಂಗ-ಖಂಡೋಬ ಸಾಂಸ್ಕೃತಿಕ ಅಧ್ಯಯನ,೧೯೯೨,ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
೯. ಗಂಗಾಧರ ದೈವಜ್ಞ, ಬುಡಕಟ್ಟು ಸಮಾಜ ಹುಟ್ಟು ಸಾವಿನ ನಡುವೆ, ೨೦೦೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೧೦. ಸೋಮಶೇಖರ ಇಮ್ರಾಪುರ,(ಸಂ.)ಜಾನಪದ ಸಾಹಿತ್ಯ ದರ್ಶನ-೧೫, ೧೯೯೪, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

No comments:

Post a Comment