Friday, 14 June 2013

ಚರಗ ಆಚರಣೆಯ ವಿಭಿನ್ನ ಆಯಾಮಗಳು


       'ಚರಗ ಚೆಲ್ಲುವುದು’ ಮೂಲತಃ ಕೃಷಿ ಮತ್ತು ಪಶುಪಾಲನಾ ಸಂಸ್ಕೃತಿಗಳಿಗೆ ಸಂಬಂಧಿಸಿದ ಒಂದು ಆಚರಣೆಯಾಗಿದೆ. ಪ್ರಕೃತಿಯ ಒಡನಾಟದಲ್ಲಿ ಬದುಕನ್ನು ನಡೆಸಿದ ಜನರ ಪಾರಂಪರಿಕ ಜ್ಞಾನ ಇದಾಗಿದ್ದು, ಪ್ರದೇಶ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ಹೆಸರು ಮತ್ತು ಸ್ವರೂಪಗಳಲ್ಲಿ ಬೇರೆ ಬೇರೆಯಾಗಿದೆ. ವಿಶಿಷ್ಟವಾದ ಈ ಆಚರಣೆಯ ಬಗ್ಗೆ ಇಲ್ಲಿಯವರೆಗೂ ಗಂಭೀರವಾದ  ಅಧ್ಯಯನಗಳು ನಡೆದಿರುವುದು ವಿರಳ.  ಪರಂಪರೆಯಲ್ಲಿ ಇರುವುದೆಲ್ಲವು ಮೌಢ್ಯ ಎಂಬ ಅಪಕಲ್ಪನೆಯೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಸಿಜ್ಞಾನ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನಗಳು ಆರಂಭವಾಗಿದ್ದು ಅವುಗಳಲ್ಲಿ ಇರುವ ಅನುಭವದ ಸತ್ಯಗಳನ್ನು ಕಂಡುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನಲ್ಲಿ ಪ್ರಚಲಿತವಿರುವ ಚರಗ ಚೆಲ್ಲುವ ಆಚರಣೆಯ ವಿಭಿನ್ನ ಆಯಾಮಗಳನ್ನು ಪರಿಚಯಿಸಿಕೊಳ್ಳುತ್ತಾ ಅವುಗಳ ಹಿಂದಿರುವ ಅನುಭವದ ಸತ್ಯಗಳನ್ನು ಕಂಡುಕೊಳ್ಳುವುದು ಪ್ರಸ್ತುತ ಲೇಖನದ ಪ್ರಧಾನ ಉದ್ದೇಶವಾಗಿದೆ. ಇಲ್ಲಿ ಮುಖ್ಯವಾಗಿ ಕರ್ನಾಟಕದ ಜಾನಪದ ಬದುಕಿನ ಬಗ್ಗೆ ಇಲ್ಲಿಯವರೆಗೂ ಬಂದಿರುವ ಬರೆಹಗಳಲ್ಲಿ ದೊರೆಯುವ ಆನುಷಂಗಿಕ ಮಾಹಿತಿಯನ್ನು, ಜೊತೆಗೆ ಕರ್ನಾಟಕದ ಬೇರೆ ಬೇರೆ ಪ್ರದೇಶ ಹಾಗೂ ಸಮುದಾಯಗಳಲ್ಲಿ ಸದ್ಯಕ್ಕೆ ಪ್ರಚಲಿತವಿರುವ ಆಚರಣೆಯ ಮಾಹಿತಿಗಳನ್ನು ಸಂಗ್ರಹಿಸಿ ಪ್ರಸ್ತುತ ಆಚರಣೆಯನ್ನು ಅರ್ಥೈಯಿಸುವ ಪ್ರಯತ್ನಮಾಡಲಾಗಿದೆ.
ಚರಗ ಎಂದರೇನು ?
’ಚರಗ’ ಎಂಬ ಈ ಪದಕ್ಕೆ ನಿಘಂಟು, ವಿಶ್ವಕೋಶ ಹಾಗೂ ಗ್ರಂಥಗಳಲ್ಲಿ ನೀಡಿರುವ ಅರ್ಥಗಳಲ್ಲಿ ಕೆಲವನ್ನು ಇಲ್ಲಿ ಗಮನಿಸಬಹುದು : 
 ಚರಗ (ನಾಮಪದ) ಹೊಲಗದ್ದೆಗಳಲ್ಲಿ ಪೈರು ಬೆಳೆದಾಗ ರೈತರು ಭೂಮಿತಾಯಿಗೆ ನೈವೇದ್ಯವೆಂದು ಕ್ಷೇತ್ರದ ತುಂಬ ಎರಚುವ ಆಹಾರ ಪದಾರ್ಥ (ಜಿವಿ ಕನ್ನಡ ನಿಘಂಟುವಿನಿಂದ ). 
ಇದಕ್ಕೆ ಹೊಲಗಳಲ್ಲಿ ನಡೆಸಿದ ಆಚರಣೆಯ ಬಳಿಕ ಚೆಲ್ಲುವ ಅನ್ನ ಇಲ್ಲವೇ ಬೇರೆ ಆಹಾರ (ಮಾಂಸವೂ ಸೇರಿದಂತೆ) ಎಂಬ ತಿರುಳಿದೆ. ಚರಗ, ಚರುಗ, ಸರುಗ ಎಂದೆಲ್ಲ ಈ ಪದವನ್ನು ನುಡಿಯುತ್ತಾರೆ (ಕೆ.ವಿ.ನಾರಾಯಣ, ಪದ ಸಂಪದ, ಪ್ರಜಾವಾಣಿ) ಎಂಬುದಾಗಿ ಅರ್ಥೈಯಿಸಲಾಗಿದೆ.
ಹೊಲ ಗದ್ದೆಗಳಲ್ಲಿ ಪೈರು ಬೆಳೆದಾಗ ರೈತರು ಭೂಮಿತಾಯಿಗೆ ನೈವೇದ್ಯವೆಂದು ಕ್ಷೇತ್ರದ ತುಂಬಾ ಆಹಾರ ಪದಾರ್ಥವನ್ನು ಎರಚುವ  ಪದ್ಧತಿ
ಚರಗ ಪದವನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಪ್ರಾಣಿಬಲಿಯ ನಂತರದ ರಕ್ತದ ಅನ್ನ ಹಾಗೂ ತಂಗಳು ಅಡುಗೆ ಪದಾರ್ಥಗಳಿಂದ ಮಾಡಿದ ಮಿಶ್ರಣ ನೆನಪಿಗೆ ಬರುತ್ತದೆ.  
’ಚರಗ’ ಎಂದರೆ ರೈತರು ತಾವು ಬೆಳೆದ ಪೈರಿನ ರಕ್ಷಣೆಗಾಗಿ, ಪಶುಪಾಲಕರು ತಮ್ಮ ಪಶುಗಳ ರಕ್ಷಣೆ ಹಾಗೂ ಯೋಗಕ್ಷೇಮಕ್ಕಾಗಿ ಆಹಾರ ಪದಾರ್ಥಗಳನ್ನು ಹೊಲದ ಸುತ್ತ ಚೆಲ್ಲುವ ಒಂದು ಪದ್ಧತಿ.
ಭೂತಾಯಿಗೆ ಸೀಮಂತ ಮಾಡುವ ಈ ದಿನ ಭೂತಾಯಿಯ ಬಯಕೆ ಈಡೇರಿಸಲು  ಕಡುಬು, ಹೋಳಿಗೆ, ಸಜ್ಜಿ ರೊಟ್ಟಿ, ಬರ್ತ ಮುಂತಾದ ಆಹಾರ ಪದಾರ್ಥ ಮಾಡಿ ಸಾಂಕೇತಿಕವಾಗಿ ತೃಪ್ತಿ ಪಡಿಸಲಾಯಿತು. ಇದನ್ನೇ ಚರಗ ಚೆಲ್ಲುವುದು ಎಂದು ಕರೆಯಲಾಗುತ್ತದೆ 
ಈ ಎಲ್ಲಾ ಅರ್ಥ ವ್ಯಾಖ್ಯಾನಗಳನ್ನು ಗಮನಿಸಿದರೆ ಚರಗ ಎಂದರೆ ಭೂಮಿ ತಾಯಿಗೆ ಅರ್ಪಿಸುವ ನೈವೇದ್ಯ ಎಂಬುದು ತಿಳಿಯುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಚರಗ ಕೇವಲ ಕೃಷಿಕ ಸಮುದಾಯಗಳು ಮಾತ್ರ ಆಚರಿಸುವ ಆಚರಣೆ ಎಂಬಂತೆ ಭಾವಿಸಿರುವುದು. ಆದರೆ ಚರಗ ಎಂದರೆ ಇದಿಷ್ಟೇ ಅಲ್ಲ.  ಹೊಲಗಳಿಗೆ ಮಾತ್ರ ಚರಗ ಚೆಲ್ಲುವುದಿಲ್ಲ; ಬದಲಿಗೆ ಊರು, ದೊಡ್ಡಿಗಳಿಗೂ ಚರಗ ಚೆಲ್ಲುವ ಪದ್ಧತಿಗಳಿರುವುದನ್ನು ಕಾಣಬಹುದಾಗಿದೆ. 
ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದಲ್ಲಿ ಚರಗ ಚೆಲ್ಲುವ ಆಚರಣೆ ಮುಖ್ಯವಾದ ಎರಡು ರೂಪಗಳಲ್ಲಿ ಇರುವುದನ್ನು ಕಾಣಬಹುದು. ಒಂದು, ಕೃಷಿಮೂಲ ಸಂಸ್ಕೃತಿಯ ರೂಪ. ಇನ್ನೊಂದು ಪಶುಪಾಲನಾ ಸಂಸ್ಕೃತಿಯ ರೂಪ. ಇವೆರಡು ರೂಪಗಳಲ್ಲಿ ಅನೇಕ ಅಂಶಗಳು ಸಾಮಾನ್ಯವಾಗಿದ್ದು ಕೆಲವು ಅಂಶಗಳು ವಿಭಿನ್ನವಾಗಿವೆ. ಉದಾ: ಕೃಷಿಮೂಲ ಸಂಸ್ಕೃತಿಯಲ್ಲಿ ಚರಗ ಚೆಲ್ಲಲು ಕೇವಲ ಸಸ್ಯಾಹಾರ ಪದಾರ್ಥಗಳನ್ನು ಮಾತ್ರ ಬಳಸಿ, ತಮ್ಮ ಪೈರಿರುವ ಹೊಲಗಳಿಗೆ ಚಲ್ಲಿದರೆ; ಪಶುಪಾಲನಾ ಸಂಸ್ಕೃತಿಯಲ್ಲಿ ಪ್ರಾಣಿಬಲಿ ನೀಡಿ , ಬಲಿನೀಡಿದ ಪ್ರಾಣಿಯ ರಕ್ತ ಹಾಗೂ ಹೊಟ್ಟೆಯೊಳಗಿನ ಕರಸನ್ನು(ಸಗಣಿ), ಅನ್ನ, ಹಣ್ಣು , ಕಾಯಿಗಳೊಂದಿಗೆ ಬೆರಸಿ ತಮ್ಮ ಜನ ಜಾನುವಾರುಗಳ ಊರು ಮತ್ತು ದೊಡ್ಡಿಗಳಿಗೆ ಚೆಲ್ಲುತ್ತಾರೆ.
ಕರ್ನಾಟಕದ ಹಲವಾರು ಬುಡಕಟ್ಟು ಹಾಗೂ ಜಾತಿಗಳ ಸಮುದಾಯಗಳಲ್ಲಿ ಪ್ರಚಲಿತವಿರುವ ಚರಗದ ಸಂಪ್ರದಾಯಗಳು ಪ್ರದೇಶ, ಸಮುದಾಯಗಳಿಗನುಗುಣವಾಗಿ ಬೇರೆ ಬೇರೆ ಹೆಸರಲ್ಲಿ ಕರೆಯಲ್ಪಡುತ್ತವೆ. ಅವುಗಳನ್ನು ಹೀಗೆ ಹೆಸರಿಸಬಹುದು : ಅನ್ನದ ಚರಗ, ಅಂಬಲಿ ಚರಗ, ಮುಸುರೆ ಚರಗ, ಸರ್ವ ಅಡಿಗೆಯ ಮಿಶ್ರ ಚರಗ, ರಕ್ತಾನ್ನದ ಚರಗ. ಕೂತೂಹಲದ ಸಂಗತಿಯೆಂದರೆ ಇವುಗಳಲ್ಲಿ ಎಲ್ಲವನ್ನು ಚರಗ ಎನ್ನುವುದಿಲ್ಲ. ಬದಲಿಗೆ ಮುಸುರೆ ಚೆಲ್ಲುವುದು, ತೀರ್ಥಚೆಲ್ಲುವುದು, ಚರಗ ಅಥವ ಸರುಗ ಚೆಲ್ಲುವುದು, ‘ಕೇರ್ಯಾಂಬಲಿ’, ‘ಅಳ್ಳಾಂಬಲಿ’, ಮೊದಲಾಗಿ ಕರೆಯುತ್ತಾರೆ.
ಈ ಪದ್ಧತಿಯನ್ನು ಅಧ್ಯಯನಕ್ಕೆ ಒಳಪಡಿಸಿರುವ ಕೆಲವು ವಿದ್ವಾಂಸರು ’ಚರಗ ಹಾಕುವುದು’, ’ಚರಗ ಹೊಡೆಯುವುದು’ ಎಂಬುದಕ್ಕೂ ವ್ಯತ್ಯಾಸ ಇರುವುದಾಗಿ ಹೇಳುತ್ತಾರೆ. ಈ ಬಗ್ಗೆ ಎಂ.ಜಿ. ಈಶ್ವರಪ್ಪ ಅವರು ಹೇಳಿರುವ ಮಾತುಗಳನ್ನು ಗಮನಿಸಬಹುದು : ಚರಗ ಹಾಕುವುದು ಒಂದು ಆಚರಣೆ ಮತ್ತು ವಿಧಿ. ಬೆಳೆಗಳಿಗೆ ಕಣ್ಣಾಸರಾಗದಿರಲಿ ದೆವ್ವ ಪೀಡೆಗಳ ಕಾಟ ದೂರವಾಗಲಿ, ಬೆಳೆ ಹುಲುಸಾಗಲಿ ಎಂದು ಹೋಲಿಗ್ಯ, ಹೋಲಿಗ್ಯ ಹೆಚ್ಚಲಿ ಹೆಚ್ಚಲಿ ಎಂದು ಚಲ್ಲುವ ನೀರು ಮುದ್ದೆ ಮಜ್ಜಿಗೆ ಅನ್ನದ ಚರಗವನ್ನು ಹೀಗೆನ್ನುತ್ತಾರೆ. ಚರಗ ಹೊಡೆಯುವುದು ಹುಳು ನಿವಾರಣೆಗೆ ಅನುಸರಿಸುವ ಕ್ರಿಯೆ , ಉಪಚಾರ. (ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಪುಟ: ೧೩೭)

ಚರಗದ ಪ್ರಾಚೀನತೆ

ಚರಗ ಪ್ರಪಂಚದಾದ್ಯಂತ ಪ್ರಾಚೀನ ಕಾಲದದಿಂದಲೂ ಪ್ರಚಲಿತವಿರುವ ಆಚರಣೆ. ಇದಕ್ಕೆ ಪೂರಕವಾಗಿ ಕೆಲವು ನಿದರ್ಶನಗಳನ್ನು ನೀಡುವುದಾದರೆ - ಸೆಂಟ್ರಲ್ ಬೋರ್ನಿಯಾದ ಕಾಯನ್ಸ್ ಜನಾಂಗದವರು ಬಿತ್ತನೆ ಮತ್ತು ಕೊಯ್ಲು ಸಂದರ್ಭದಲ್ಲಿ ತಮ್ಮ ಸುತ್ತ ಮುತ್ತ ಬೆಳೆಯುವ ತಿನ್ನಬಲ್ಲ ಗಿಡಮೂಲಿಕೆಗಳ ಬೇಯಿಸಿದ ವಸ್ತುವನ್ನು ಸಿಂಪಡಿಸುವುದನ್ನು ನೆನಯಬಹುದು ಅಷ್ಟೇ ಅಲ್ಲದೆ ಪ್ರಾಚೀನ ಗ್ರಂಥ ಸುರಪಾಲನ ವೃಕ್ಷಾರ್ಯುವೇದ ಸಹಾ ’ಜನಗಳ ಕುದೃಷ್ಟಿ ಪರಿಹಾರಕ್ಕಾಗಿ ಬೇಯಿಸಿದ ಸಾಲಿ ಅಕ್ಕಿಯ ಗಂಜಿಯನ್ನು ಮೊಸರು ಮತ್ತು ಸೈಂಧವ ಉಪ್ಪಿನೊಡನೆ ಬೆರಸಿ ಮರಗಳ ತೊಪಿನಲ್ಲೆಲ್ಲ ಚೆಲ್ಲಬೇಕು(ಶ್ಲೋಕ-೭೭)ಎಂದು ಹೇಳುತ್ತದೆ  ( ಉದ್ಧೃತ : ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಪುಟ: ೨೯೫) ಎಳ್ಳ ಅಮಾವಾಸ್ಯೆಯ ದಿನ ಭೂಮಿ ತಾಯಿಗೆ ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಬಂದಿದೆ. ಮಹಾಭಾರತದಲ್ಲಿ ಬರುವ ಒಂದು ಸನ್ನಿವೇಷದದಲ್ಲಿ ಪಾಂಡವರು, ಕೌರವರ ಮೆಲೆ ಯುದ್ಧ ಮಾಡಲು ಹೊರಟಾಗ ಮಾರ್ಗ ಮಧ್ಯೆ ಹೊಲ ಕಾಣುತ್ತದೆ. ಪಾಂಡವರೆಲ್ಲರೂ ಆ ಹೊಲದ ಹತ್ತಿರ ಹೋದಾಗ ಬನ್ನಿ ಮರವಿರುತ್ತದೆ. ಆ ಮರಕ್ಕೆ ಪೂಜೆಯನ್ನು ಸಲ್ಲಿಸಿ ತಾವು ತಂದಿದ್ದ ಆಹಾರವನ್ನು ಆ ಹೊಲದ ತುಂಬೆಲ್ಲ ಚೆಲ್ಲಿ, ಅಲ್ಲಿಯೇ ಊಟ ಮಾಡಿ ಯುದ್ಧಕ್ಕೆ ಹೊರಡುತ್ತಾರೆ.( ಚರಗ ಚೆಲ್ಲುವುದಕ್ಕೂ ಆಧುನಿಕತೆ ಸೋಂಕು(ಲೇಖನ),ಚಿದಂಬರ ಪ್ರಸಾದ, ಪ್ರಜಾವಾಣಿ, ಜನವರಿ ೧೨, ೨೦೧೩)

ಸ್ವರೂಪ, ಮಾದರಿ ಮತ್ತು ಪ್ರಸರಣ

ಈಗಾಗಲೇ ಪ್ರಸ್ತಾಪಿಸಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬಿನ್ನ ಭಿನ್ನ ರೂಪದಲ್ಲಿ ಚಾಲ್ತಿಯಲ್ಲಿರುವ ಈ ಚರಗ ಸಂಪ್ರದಾಯವು ಉತ್ತರ ಕರ್ನಾಟಕದ ಭಾಗಗಳಲ್ಲಿ ಎಳ್ಳು ಅಮವಾಸ್ಯೆಯಂದು ನಡೆಯುವ ಕೃಷಿ ಆಚರಣೆ. ವರ್ಷಕ್ಕೊಂದು ಬಾರಿ ಕೃಷಿಕರು ತಮ್ಮ ತಮ್ಮ ಹೊಲಗಳಿಗೆ ಚರಗದ ಮೂಲಕ ನೈವೇದ್ಯ ಅರ್ಪಿಸುತ್ತಾರೆ. ಮಲೆನಾಡಿನ ಭಾಗಗಳಲ್ಲಿ ಭೂಮಿ ಹುಣ್ಣಿಮೆಯಿಂದು ಭೂಮಿಗೆ ಎಡೆ ಅರ್ಪಿಸಿ, ರೈತರು ತಮ್ಮ ಹೊಲಗಳಿಗೆ ಅನ್ನ ಬೀರುವ ಪದ್ಧತಿ ಇದೆ. ಅಲ್ಲದೆ ‘ಕಟ್ಟಿಜ್ಜಿ’ಯಲ್ಲಿ ರಕ್ತದ ಅನ್ನವನ್ನು ಗದ್ದೆಗಳಿಗೆ ಹಾಕುವ ಪದ್ಧತಿಯೂ ಇದೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಸಂಕ್ರಾಂತಿಯಂದು ಚರಗ ಚಲ್ಲುವ ಪದ್ಧತಿ ರೂಢಿಯಲ್ಲಿದೆ. ’ಪಂಚಮಿ ಹಬ್ಬದಲ್ಲಿ ‘ಕೇರ್ಯಾಂಬಲಿ’, ಜೋಕುಮಾರನ ಹಬ್ಬದಲ್ಲಿ ‘ಅಳ್ಳಾಂಬಲಿ’, ಶೀಗಿ ಹುಣ್ಣಿಮೆ ಹಾಗೂ ಎಳ್ಳ ಅಮವಾಸೆಯಂದು ‘ಚರಗ’ಚೆಲ್ಲುವುದು. ಹಲವಾರು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.’( ಈರಯ್ಯ ಕಿಲ್ಲೇದಾರ್, ಚರಗ - ಜೈವಿಕ ಕೀಟ ಹತೋಟಿ ವಿಧಾನ)
ಚರಗದ ಮಾದರಿಗಳು :  ಕರ್ನಾಟಕದಲ್ಲಿ ಭಿನ್ನ ಪ್ರದೇಶ ಹಾಗೂ ಭಿನ್ನ ಸಮುದಾಯಗಳಲ್ಲಿ ನಡೆಯುತ್ತಿರುವ ಚರಗದ ಇನ್ನೂ ಕೆಲವು ಮಾದರಿಗಳನ್ನು ಈ ಕೆಳಕಂಡಂತೆ ಉಲ್ಲೇಖಿಸಬಹುದು.
ಹೊಲದ ದೇವರು : ಹೊಲದಲ್ಲಿ ಬೆಳೆಗಳು ಬೆಳದು ನಿಂತಾಗ ಹೊಲದಲ್ಲಿ ಪ್ರಾಣಿ ಬಲಿ ನೀಡಿ   ಅದರ ರಕ್ತ ಹಾಗೂ ಹೊಟ್ಟೆಯೊಳಗಿನ ಕರಸನ್ನು ಅನ್ನದಲ್ಲಿ ಬೆರಸಿ ಹೊಲದ ಸುತ್ತ ಚರಗ ಚೆಲ್ಲುತ್ತಾರೆ.
ಯುಗಾದಿ ಅಮವಾಸೆ ದಿನ : ಯುಗಾದಿ ಅಮವಾಸೆಯ ದಿನ ದೇವರ ಎತ್ತುಗಳ ಗೂಡಿನಲ್ಲಿ( ದೊಡ್ಡಿಯಲ್ಲಿ) ಪ್ರಾಣಿ ಬಲಿ ನೀಡಿ ರಕ್ತ ಮತ್ತು ಕರಸನ್ನು ಅನ್ನದಲ್ಲಿ ಬೆರಸಿ ಗೂಡಿನ ಸುತ್ತ ಚರಗ ಚೆಲ್ಲುತ್ತಾರೆ. ಇದೇ ದಿನ ದನ/ಕುರಿಗಹಿಗಳು ತಮ್ಮ ತಮ್ಮ  ಕುರಿ/ದನದ ದೊಡ್ಡಿಗಳಲ್ಲಿ ಪ್ರಾಣಿ ಬಲಿ ನೀಡಿ ದೊಡ್ಡಿಯ ಸುತ್ತಾ ಚರಗ ಚೆಲ್ಲುತ್ತಾರೆ.
ಮಾರಿ ಹಬ್ಬಗಳಲ್ಲಿ ಊರಲ್ಲಿ ಮಾರಿಗುಡಿಯ ಮುಂದೆ ಪಟ್ಟದ ಕೋಣವನ್ನು ಬಲಿ ನೀಡಿ ಅದರ  ರಕ್ತ ಮತ್ತು ಕರಸನ್ನು ಅನ್ನದಲ್ಲಿ ಬೆರೆಸಿ ಊರಿನ ಸುತ್ತಾ ಚರಗ ಚೆಲ್ಲುತ್ತಾರೆ.
ದಿನಾಲು ಮುದ್ದೆ ಮಾಡಿದ ನಂತರ ಅದರ ನೀರನ್ನು ಮನೆಗೆ ಮುಸುರೆ ಚೆಲ್ಲುತ್ತಾರೆ
ಬೆಳೆಗಳಿಗೆ ರೋಗ ರುಜನಿ ಬಿದ್ದಾಗ ಅಥವ ಬೀಳುವುದಕ್ಕಿಂತ ಮೊದಲು ಕೆಲವರು ನಿರ್ದಿಷ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತಂದ ತೀರ್ಥವನ್ನು ಹೊಲಗಳಿಗೆ ಚೆಲ್ಲುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ತೀರ್ಥವನ್ನು ಅಲ್ಲಿಂದಲೇ ತರಬಹುದು ಇಲ್ಲವೇ ಅಲ್ಲಿ ತೀರ್ಥದ ಕಾಯಿ ಮಾಡಿಸಿ ತಂದು ಹೊಲದಲ್ಲಿ ಪೂಜೆಮಾಡಿ ಆ ಕಾಯಿಯನ್ನು ಹೊಡೆದು ಅದರ ತೀರ್ಥವನ್ನು ಚೆಲ್ಲುವುದುಂಟು. 
ಮಳೆ ಗುಡುಗು, ಬೆಂಕಿಗಳ ಆರ್ಭಟ ಜಾಸ್ತಿಯಾದಾಗ ಮನೆಯೊಳಗಿನ ಮುದ್ದೆಯ ಮುಸುರೆ ನೀರನ್ನು ಚೆಲ್ಲುತ್ತಾರೆ.
ಸ್ತ್ರೀ ದೇವತೆಗಳ ಹಬ್ಬ ಜಾತ್ರೆಗಳು ಮುಗಿದ ನಂತರ ಇಡೀ ಊರಿಗೆ ಅನ್ನದ ಮುಸುರೆ ಚೆಲ್ಲುವುದುಂಟು

ಘೋಷ ವಾಕ್ಯಗಳು 
 ಚರಗ ಚೆಲ್ಲುವಾಗ  ಕೆಲವು ವಾಕ್ಯಗಳನ್ನು ಉದ್ಧರಿಸಲಾಗುತ್ತದೆ. ಅವುಗಳನ್ನು ಈ ಮುಂದಿನಂತೆ ಉಲ್ಲೇಖಿಸಬಹುದು : 

ಮುಂದಿನವರು ಆಹಾರ ಮಿಶ್ರಣ ಮಾಡಿದ ನೀರು ಚಿಮುಕಿಸಿ ’ಹುಲ್ಲುಲ್ಲಗೋ ಚಲ್ಲಂಬರಗೋ..’ ಎಂದು ಕೂಗುತ್ತಾರೆ.
ತಲೆ ಮೇಲೆ ತರಹೇವಾರಿ ಭಕ್ಷ್ವ ಭೋಜನದ ಬುಟ್ಟಿ ಹೊತ್ತು ಹೊಲದತ್ತ ಹೆಜ್ಜೆ ಹಾಕಿದ ರೈತ ಕುಟುಂಬಗಳು. ’ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ’ ಎಂದು ಕೂಗುತ್ತ ಭೂರಮೆಗೆ ಚರಗ (ತೀರ್ಥ) ಚೆಲ್ಲಿ ಭೂತಾಯಿಯ ಪ್ರಾರ್ಥಿಸಿದರು.
ಬಗೆ ಬಗೆಯ ಅಡಿಗೆಯನ್ನು ಮಾಡಿ ಬುತ್ತಿಕಟ್ಟಿಕೊಂಡು ಕುಟುಂಬ ಸಮೇತರಾಗಿ ತಮ್ಮ ಹೊಲಗಳಿಗೆ ತೆರಳಿ ಹೊಲದ ಮಧ್ಯದಲ್ಲಿರುವ ಬನ್ನಿಗಿಡ ಅಥವಾ ಮಧ್ಯ ಭಾಗದಲ್ಲಿ ಸುಮಂಗಲೆಯರು ಐದು ಕಲ್ಲುಗಳನ್ನು ಪಾಂಡವರು ಎಂದು ಪೂಜಿಸಿ, ಕಾಯಿ ಹೊಡೆದು ತಾವು ತಂದ ವಿವಿಧ ಅಡಿಗೆಗಳನ್ನು ನೈವೇದ್ಯ ಸಲ್ಲಿಸಿದ ನಂತರ ಅಡಿಗೆಯನ್ನೆಲ್ಲಾ ಮಿಶ್ರಣ ಮಾಡಿ ಅದನ್ನು ಕುಟುಂಬದ ಒಬ್ಬರು ತಮ್ಮ ಹೊಲದ ಸುತ್ತ ಇರುವ ನಾಲ್ಕು ಬದುವಿನ ದಿಕ್ಕುಗಳಿಗೆ ಒಬ್ಬರು ಹುಲಿಗೋ ಹುಲಿಗೋ ಎನ್ನುತ್ತಾ ನೀರು ಸಿಂಪಡಿಸಿದರೆ ಅದರ ಹಿಂದೆ ಮತ್ತೊಬ್ಬರು ಮಿಶ್ರಣ ಮಾಡಿದ ಅಡಿಗೆಯನ್ನು ಎರಚುತ್ತಾ ಸಲಾ ಪೊಲಿಗೋ ಎಂದು ಸಾರುತ್ತಾ ಹೊಲದ ಸುತ್ತಲೂ ಚರಗ ಚೆಲ್ಲಿದರು.
ಹೊಲದಲ್ಲಿ ಬೇವಿನ, ಬನ್ನಿಯ ಅಥವಾ ಆರಿ ಗಿಡದ ಕೆಳಗೆ ಐದು ಕಲ್ಲುಗಳನ್ನಿಟ್ಟು ಪೂಜೆ ಮಾಡಿ ನೈವೇದ್ಯ ಸಮರ್ಪಣೆ ಮಾಡಿದ ನಂತರ ಎಲ್ಲ ಆಹಾರ ಪದಾರ್ಥಗಳನ್ನು ಚೂರು ಚೂರು ಮಾಡಿ ಹೊಲದ ತುಂಬ ‘ಹುಲುಲ್ಲೋ ಹುಲ್ಗಿ’ ಎನ್ನುತ್ತ ಬೆಳೆ ಹುಲುಸಾಗಲಿ ಎಂದು ಪ್ರಾರ್ಥಿಸುತ್ತ ಚೆಲ್ಲುತ್ತಾರೆ. ಅದೂ ಅಲ್ಲದೆ ಎಳ್ಳ ಅಮವಾಸೆಯ ದಿವಸ ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಿಂಗಾರಿ ಬೆಳೆಗಳಲ್ಲಿ ಚರಗ ಚೆಲ್ಲುವ ಸಂಪ್ರದಾಯವಿದೆ.
ಹೊಲದಲ್ಲಿರುವ ಬನ್ನಿಗಿಡದ ಕೆಳಗೆ ಭರಮ ದೇವರೆಂದು ಕರೆಯುವ ಕೃಷಿ ದೇವತೆಯನ್ನು ಐದು ಗುಂಡುಕಲ್ಲುಗಳನ್ನಿಡುವುದರ ಮೂಲಕ ಸಾಂಕೇತಿಕವಾಗಿ ಪ್ರತಿಷ್ಠಾಪಿಸುತ್ತಾರೆ. ದೇವರ ಕಲ್ಲುಗಳನ್ನು ತೊಳೆದು ಹೂ ಏರಿಸಿ, ತಿಲಕವಿಟ್ಟು ಅಲಂಕರಿಸುತ್ತಾರೆ. ನೈವೇದ್ಯ ಮಾಡಿದ ನಂತರ ಸ್ವಲ್ಪ ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ ಚಲ್ಲಿ ‘ಉಲ್ಲುಲ್ಲಗೋ ?.ಚಳಂಬ್ರಿಗೋ’ ಎಂದು ಹೇಳುತ್ತಾರೆ. ನಂತರ ‘ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಮಡಿಲು ತುಂಬಿ ಎಲ್ಲರೂ ಕುಳಿತು ನೈವೇದ್ಯದೊಂದಿಗೆ ಅಂದಿನ ಅಡುಗೆಯನ್ನು ಸವಿಯುತ್ತಾರೆ. 
ಸಾಮಾನ್ಯವಾಗಿ ಹೀಗೆ ಚರಗ ಚೆಲುವುದು ಇಬ್ಬರ ಕೆಲಸ. ಮುಂದಿರುವ ನ ವ್ಯಕ್ತಿ ಒಂದು ಕೈಯಲ್ಲಿ ಬೆಂಡುಗೊಳ್ಳಿ ಮತ್ತೊಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟರೆ, ಹಿಂದಿನವನು ಚರಗದ ಕುಡಿಕೆ ಹಿಡಿದು ಅದನ್ನು ಚಲ್ಲುತ್ತಾ ‘ಹೋಲಿಗ್ಯ ಹೋಲಿಗ್ಯ ಎಂದು ಉದ್ಘರಿಸುತ್ತಾನೆ.  ಹೋಲಿಗ್ಯ ಎಂಬ ಕೂಗು ಎಲ್ಲಿಯವರೆಗೆ ಕೇಳಿಸುತ್ತದೆಯೋ ಅಷ್ಟು ವ್ಯಾಪ್ತಿಯ ಬೆಳೆಗಳಿಗೆ ಒಳ್ಳೆಯದಾಗುತ್ತದೆ ಎಂದು ನಂಬಿಕೆ. ಒಂದು ಸುತ್ತು ಚರಗ ಚಲ್ಲಿದ ಮೇಲೆ ಮುಂದಿದ್ದವನು ಕುಡುಗೋಲಿನಿಂದ ಬಾಳೆಯ ಗಿಡವೊಂದನ್ನು ಕಡಿದು ಹಾಕು ಬೆಂಡುಗೊಳ್ಳಿಯನ್ನು ಬಿಸಾಕುತ್ತಾನೆ. 
ಹೊಲಕ್ಕೆ ಸಾಗಿದ ನಂತರ  ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ  ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ.  ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ ‘ಉಲ್ಲುಲ್ಲಗೋ? ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ.  
ಚರಗದ ಆಚರಣೆಯ ಆಶಯಗಳು : ಚರಗ ಚೆಲ್ಲುವ ಕ್ರಿಯೆಯ ಹಿಂದೆ ನಂಬಿಕೆ ಮತ್ತು ಅನುಭವ ಜನ್ಯ ಜ್ಞಾನ ಇರುವುದನ್ನು ಗುರುತಿಸಬಹುದಾಗಿದೆ. ಬೆಳೆಗಳಿಗೆ ಅಂಟುವ ಪೀಡೆ ಪರಿಹಾರಾರ್ಥವಾಗಿ, ರೋಗ ನಿವಾರಣಾರ್ಥವಾಗಿ ಚರಗ ಚಲ್ಲುವ ಆಚರಣೆ ವ್ಯವಸಾಯಗಾರರಲ್ಲಿ ದಟ್ಟವಾಗಿ ನೆಲೆಯೂರಿದೆ.   ಈ ಸಂಪ್ರದಾಯ/ ಆಚರಣೆಯನ್ನು ಅನುಸರಿಸುತ್ತಾ ಬಂದಿರುವ ಜನ ಹಾಗೂ ಅಧ್ಯಯನ ಮಾಡಲು ಪ್ರಯತ್ನಿಸಿರುವ ವಿದ್ಯಾವಂತರು ನಂಬಿರುವ/ಗುರುತಿಸಿರುವ ಉದ್ದೇಶಗಳು ಕೂತೂಹಲದಾಯಕವಾಗಿದ್ದು ಅವುಗಳು ಹೀಗಿವೆ :
’ಬೆಳೆ ಅಂದರೆ ರಾವು ಇದ್ದಂತೆ ಅದಕ್ಕೇ ಚರಗ ಹಾಕುತ್ತೇವೆ.’ ’ಹೊಲ ಗದ್ದೆ ತೋಟಗಳಲ್ಲಿ ರಾತ್ರಿ ಹಗಲು ಓಡಾಡುತಿರುತೀವಿ ನಮಗೆ ಏನೂ ಆಗದಂತಿರಲಿ ಎಂದು ಚರಗ ಹಾಕುತ್ತೇವೆ.’
ರೈತ ತಾನು ಬೆಳೆದಿದ್ದನ್ನು ತಾನೇ ಉಪಯೋಗಿಸದೇ ಭೂತಾಯಿಗೂ ಸಮರ್ಪಸಿ, ಪ್ರಾಣಿ - ಪಕ್ಷಿಗಳು ಅದನ್ನು ತಿಂದು ಸಂತೋಷ ಪಡಲಿ ಎಂಬ ಧ್ಯೇಯ ಈ ಚರಗದ ವಿಶೇಷ.
ನೆಲವನ್ನು ಉತ್ತಿ-ಬಿತ್ತಿ, ಗೊಬ್ಬರ ಹಾಕಿ ಬೆಳೆ ಮೈತುಂಬಿಕೊಂಡಾಗ ರಾಶಿಗಾಗಿ ಕಾಯುವ ದಿನಗಳಲ್ಲಿ ಬೆಳೆ ಹುಲುಸಾಗಿ ಬರಲಿ ಎಂದು ಭೂತಾಯಿಗೆ ಪೂಜೆ ಮಾಡುವುದೇ ಚರಗ.
ಸೀಗೆ ಹುಣ್ಣಿವೆಯ ಹಗಲಿನಲ್ಲಿ ರೈತರೆಲ್ಲ ತಮ್ಮ ಹೊಲಗಳಲ್ಲಿ ‘ಚರಗ ಚೆಲ್ಲಿ’ ಬರುವದರ ಕಾರಣವೂ ಇದೇ ಆಗಿದೆ. ನಿಸರ್ಗದ ಚೈತನ್ಯಗಳು ಬೆಳೆದು ನಿಂತ ಪೈರನ್ನು ರಕ್ಷಿಸಲಿ ಎಂದು ಪ್ರಾರ್ಥಿಸಿ, ‘ಭೂತಬಲಿ’ಯನ್ನು ನೀಡುವದರ ಸಂಕೇತವಿದು.-ಈರಯ್ಯ ಕಿಲ್ಲೇದಾರ
ಚರಗ ಮೂಢನಂಬಿಕೆ ಅಲ್ಲ: ಕೇರ್ಯಾಂಬಲಿ, ಅಳ್ಳಾಂಬಲಿ ಮತ್ತು ಚರಗ ಚೆಲ್ಲುವ ಸಂಪ್ರದಾಯ ಮೂಢನಂಬಿಕೆ ಅಲ್ಲ. ಅಂಧಾನುಕರಣೆಯಲ್ಲ. ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಬೆಳೆಯುತ್ತಿರುವ ಹಚ್ಚಹಸುರಾದ ಬೆಳೆಯು ಕಂಗೊಳಿಸುತ್ತಿರುವ ಸಂದರ್ಭದಲ್ಲಿ, ಬಸಿರಾದ ಹೆಂಗಸಿಗೆ ಬಯಕೆಯೂಟ ನೀಡಿದಂತೆ, ಹಸಿರುಡುಗೆ ತೊಟ್ಟು ಬಸಿರಾದ ಭೂಮಿತಾಯಿಗೆ ಬಯಕೆಯೂಟ ನೀಡುವರೆಂಬ ನಂಬಿಕೆ ಇದೆ. ಇದಷ್ಟೇ ಅಲ್ಲ. ಇದು ಸಂಪ್ರದಾಯ ಅಥವಾ ಪರಂಪರೆ ಅಲ್ಲ. ಇದರಲ್ಲಿ ಹಲವಾರು ವೈಜ್ಞಾನಿಕ ಸಂಗತಿಗಳಿವೆ. ಇದೊಂದು ಜೈವಿಕ ಕೀಟ ಹತೋಟಿ ವಿಧಾನ ಆಗಿದೆ. ಹೊಲದಲ್ಲಿರುವ ಬೆಳೆಗಳ ಆಯಾ ಹಂತಗಳಲ್ಲಿ ಕೀಟಗಳ ವಂಶವೃದ್ಧಿಯಾಗದಂತೆ ತಡೆಯಲು ಈ ಆಚರಣೆಗಳು ರೂಢಿಯಲ್ಲಿವೆ. ಕೋಲುಗಳಿಗೆ ತೂಗು ಹಾಕಿದ ಸುಣ್ಣ ಹಚ್ಚಿದ ಬಿಳಿ ಗಡಿಗೆಗಳು ಪಕ್ಷಿಗಳನ್ನು ಹೊಲದಲ್ಲಿ ಆಕರ್ಷಿಸುತ್ತವೆ. ಹೊಲದಲ್ಲಿ ಚೆಲ್ಲಿದ ಆಹಾರ ಪದಾರ್ಥಗಳನ್ನು ತಿನ್ನಲು ಪಕ್ಷಿಗಳು ಸಹಜವಾಗಿ ಆಕರ್ಷಿತವಾಗುವವು. ಆಗ ಪಕ್ಷಿಗಳಿಗೆ ಬೆಳೆಯನ್ನು ಬಾಧಿಸುವ ಕೀಟಗಳ ವಾಸನೆ ಬರುತ್ತದೆ. ಹೀಗಾಗಿ ಪಕ್ಷಿಗಳು ಕೀಟಗಳನ್ನು ತಿಂದು ತೇಗುತ್ತವೆ.
ಯಾವುದೇ ಖರ್ಚಿಲ್ಲದೇ, ವಿಷ ಸಿಂಪಡಿಸದೆ, ಕೀಟಗಳ ನಿಯಂತ್ರಣ ಮಾಡುವ ವಿಧಾನ ಇದಾಗಿದೆ. ಪರಿಸರಕ್ಕೆ ಹಾನಿ ಇಲ್ಲ. ಭೂಮಿ, ನೀರು ಮತ್ತು ಆಹಾರ ವಿಷಮುಕ್ತವಾಗುವುದು. ಉಪಕಾರಿ ಕೀಟಗಳನ್ನು ಸಾಯದಂತೆ ತಡೆಯುವ ಈ ವಿಧಾನ ಸಂಪೂರ್ಣ ಸ್ವಾವಲಂಭಿ ಮತ್ತು ಜೈವಿಕ ಕೀಟ ಹತೋಟಿ ವಿಧಾನವಾಗಿದೆ.

     ಚರಗದ ಆಚರಣೆ ಹಿಂದುಗಳಲ್ಲಿ ಅಲ್ಲದೆ ಅನ್ಯ ಧರ್ಮಿಯರಲ್ಲೂ ಪ್ರಚಲಿತದಲ್ಲಿರುವುದು ಅತ್ಯಂತ ಕುತೂಹಲದಾಯಕವಾಗಿದೆ. ಉದಾ : ಕರ್ನಾಟಕದ ಪಿಂಜಾರ ಸಮುದಾಯದಲ್ಲೂ ಈ ಆಚರಣೆ ಜಾರಿಯಲ್ಲಿರುವುದನ್ನು ಕಾಣಬಹುದು.  ಪಿಂಜಾರರು ತಮ್ಮ ಮೂಲಾಶ್ರಮದ ಹಬ್ಬಗಳನ್ನು ಎಲ್ಲ ಹಿಂದೂ ಶೂದ್ರ ಸಮುದಾಯದವರು ಆಚರಿಸುವ ವಿಧಾನದಲ್ಲೇ ಆಚರಿಸುತ್ತಾರೆ. ಪಿಂಜಾರರು ಮಾರ್ನೆಮಿ (ಮಹಾನವಮಿ) ಹಬ್ಬ ಇನ್ನೇನು ಬಂತು ಅನ್ನುವಾಗ, (ಅಮಾವಾಸ್ಯೆಯಾದ ಹನ್ನೊಂದು ದಿನದಲ್ಲಿ ಹಬ್ಬ ಎನ್ನುತ್ತಾರೆ) ಮನೆಗೆ ಸುಣ್ಣ ಬಳಿದು ಬಾಗಿಲಿಗೆ ಕೆಮ್ಮಣ್ಣು ಬಳಿದು ಶುದ್ಧ ಮಾಡುತ್ತಾರೆ. ಹಬ್ಬದ ದಿನ ಹುಗ್ಗಿ, ಅನ್ನ, ಸಾರು ಮಾಡಿಕೊಂಡು ಊರಿನ ಹನುಮಂತ ದೇವರ ಗುಡಿ ಅಥವಾ ಈಶ್ವರ ಗುಡಿಗೆ ಹಣ್ಣು ಕಾಯಿ ಮಾಡಿಸಿ ಅಡ್ಡಬಿದ್ದು ಬರುತ್ತಾರೆ. ನಂತರ ಹೊಲಕ್ಕೆ ಹೋಗಿ ಇದ್ದ (ಹತ್ತಿ ಅಥವಾ ಜೋಳ) ಬೆಳೆಯ ತುಂಬಾ ಅನ್ನ, ಮಜ್ಜಿಗೆಯನ್ನು ಕಲಸಿಕೊಂಡು ಚರಗ ಉಗ್ಗುತ್ತಾರೆ.( ಡಾ. ಬಿ.ಸಿ. ದಾದಾಪೀರ್, ಪಿಂಜಾರರ ಮಹಿಳಾ ಸಂಸ್ಕೃತಿ, ಸಂಸ್ಕೃತಿ ಮಹಿಳಾ ಮಾಲಿಕೆ -೨)


ಪರಾಮರ್ಶನ
೧. ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ, ಎಂ.ಜಿ. ಈಶ್ವರಪ್ಪ, ೧೯೯೫, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
೨. ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಎಸ್.ಎಸ್. ಹಿರೇಮಠ, ೧೯೯೩, ಸಮತಾ ಪ್ರಕಾಶನ, ಹೊಸಪೇಟೆ
೩. ಚರಗ ಚೆಲ್ಲುವುದಕ್ಕೂ ಆಧುನಿಕತೆ ಸೋಂಕು(ಲೇಖನ),ಚಿದಂಬರ ಪ್ರಸಾದ, ಪ್ರಜಾವಾಣಿ, ಜನವರಿ ೧೨ ೨೦೧೩
೪. ಚರಗ ಚೆಲ್ಲಿ ವಸುಧೆಗೆ ವಂದಿಸಿದ ರೈತರು, ಉದಯವಾಣಿ, ಜನವರಿ ೧೨ ೨೦೧೩
೫. ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ, ಉದಯವಾಣಿ ? ಶನಿ., ೧೨ ಜನವರೀ, ೨೦೧೩
೬. ಚರಗ - ಜೈವಿಕ ಕೀಟ ಹತೋಟಿ ವಿಧಾನ, ಈರಯ್ಯ ಕಿಲ್ಲೇದಾರ , hಣಣಠಿ://ತಿತಿತಿ. ಞಚಿಟಿಚಿರಿಚಿ.iಟಿ  
೭. ಚರಗ(ಲೇಖನ), ಸ.ಚಿ. ರಮೇಶ್, ಇದರಲ್ಲಿ :  ಕರ್ನಾಟಕದ ಜನಪದ ಆಚರಣೆಗಳು, ೨೦೦೮,  ಕನ್ನಡ ವಿಶ್ವವಿದ್ಯಾಲಯ, ಹಂಪಿ
೮. ಬೆಳೆ ಸಂಬಂಧಿ ಆಚರಣೆಗಳು, ಮಲ್ಲಿಕಾರ್ಜುನ ಹೊಸಪಾಳ್ಯ, <hಣಣಠಿ://ತಿತಿತಿ>. ಞಚಿಟಿಚಿರಿಚಿ.iಟಿ  
೯. ಪಿಂಜಾರರ ಮಹಿಳಾ ಸಂಸ್ಕೃತಿ, ಡಾ. ಬಿ.ಸಿ. ದಾದಾಪೀರ್, ಸಂಸ್ಕೃತಿ ಮಹಿಳಾ ಮಾಲಿಕೆ -೨, 
         ಸಂ : ಎಂ.ಎಸ್. ಶೇಖರ್  ಕರ್ನಾಟಕ ಸಾಹಿತ್ಯ   ಅಕಾಡೆಮಿ, ಬೆಂಗಳೂರು
೧೦. ಕ್ಷೇತ್ರಕಾರ್ಯದ ಮಾಹಿತಿಗಳು

1 comment:

  1. ನಮಸ್ತೆ ಸರ್,
    ನಿಮ್ಮ ಬರವಣಿಗೆ ತುಂಬ ಮಾಹಿತಿ ಪೂರ್ವಕವಾಗಿದೆ.
    ನನ್ನ ಪ್ರಶ್ನೆ: ನೀವು ಹೇಳಿರುವಂತ ಭರಮ ದೇವರು ಯಾರ ಅವತಾರ? I mean shiva or vishnu or subramanya or nagadevate.
    ದಯವಿಟ್ಟು ತಿಳಿಸಿ.

    ReplyDelete