Tuesday 9 October 2012

ಕನ್ನಡ ಜನಪದ ಸಂಸ್ಕೃತಿ- 7


ಸಾಹಿತ್ಯಾದಿ ಕಲೆಗಳು


ಸಾಹಿತ್ಯ ಮತ್ತು ಬಗೆ ಬಗೆಯ ಕಲೆಗಳು ಕನ್ನಡ ಜಾನಪದದಲ್ಲಿ ಸಂವೃದ್ಧವಾಗಿದ್ದು, ಸಮಾಜದಲ್ಲಿ ಅನೇಕ ರೀತಿಯ ಕ್ರಿಯಾತ್ಮಕ ಜವಾಬ್ದಾರಿಯನ್ನು ನಿರ್ವಹಿಸಿವೆ. ಬಿ.ಎಂ.ಶ್ರೀ ಅವರು ಹೇಳಿರುವಂತೆ 'ಜನವಾಣಿ ಬೇರು ಕವಿವಾಣಿ ಹೂವು' ಈ ಮಾತು ಬರೀ ಸಾಹಿತ್ಯಕ್ಕೆ ಮಾತ್ರ ಅನ್ವಯಿಸದೆ ಜನಪದದ ಸಾಹಿತ್ಯಾದಿ ಕಲೆಗಳಿಗೆ ಅನ್ವಯಿಸಬಹುದು. ಅಂದರೆ ಇಂದಿನ ಶಿಷ್ಟಸಾಹಿತ್ಯ ಮತ್ತು ಕಲೆಗಳು ರೂಪುಗೊಂಡ ಬಗೆ ಹಾಗೂ ಅವು ಸಮಾಜದ ಉನ್ನತಿಗಾಗಿ ಪಟ್ಟ ಶ್ರಮವನ್ನು ಅವುಗಳ ಸ್ವರೂಪದೊಂದಿಗೆ ವಿವರಿಸಿಕೊಳ್ಳುವುದು ಉಪಯುಕ್ತ. ಮೊದಲಿಗೆ ಸಾಹಿತ್ಯ ಸ್ವರೂಪ, ಪ್ರಕಾರ ಮತ್ತು ಕಾರ್ಯಗಳನ್ನು ತಿಳಿಯಬಹುದು.
ಯಾವುದೇ ಭಾಷೆಯ ಜಾನಪದದಲ್ಲಿ ಸಾಹಿತ್ಯ ಸಿಂಹಪಾಲು. ಕನ್ನಡದಲ್ಲಿಯಂತೂ ಶ್ರೀಮಂತವಾದ ಜನಪದ ಸಾಹಿತ್ಯ ಸಂಪತ್ತು ಇದೆ. 'ಜಗತ್ತಿನ ಜನಪದ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಉದಾಹರಣೆ ನೀಡಬಹುದಾದ ಸಾಹಿತ್ಯ ಇರುವುದಷ್ಟೆ ಅಲ್ಲ. ಆ ಪ್ರಕಾರಗಳಿಗೆ ಹೊರತಾದವೂ ಹೊಸ ಪ್ರಕಾರಗಳಿಗೆ ಆಕರವಾಗುವಂತಹವೂ ಇವೆ. ಈ ಸಾಹಿತ್ಯ ಒಬ್ಬರ ಸೃಷ್ಟಿಯಲ್ಲ. ಹುಟ್ಟುವಾಗಲೇ ಬಹು ವಿಧದ ಅನುಭವಗಳ ಒಟ್ಟು ಮೊತ್ತವಾಗಿ ಸೃಷ್ಟಿಯಾಗುವ ಜನಪದ ಸಾಹಿತ್ಯ ಒಬ್ಬರ ಸೃಷ್ಟಿ ಅಲ್ಲವೇ ಅಲ್ಲ. ಮುಂದುವರೆಯುವುದು ಕೂಡ ಸಮಷ್ಟಿ ನೆಲೆಯಲ್ಲಿಯೇ ಆಗಿದೆ. ಅಂದರೆ ಜನಪದ ಸಾಹಿತ್ಯಕ್ಕೆ ಕತರ್ೃ ಇರುವುದಿಲ್ಲ ಅಪರೂಪಕ್ಕೆ ಇದ್ದರೂ ಮುಂದಿನ ಬೆಳವಣಿಗೆಗಳಲ್ಲಿ ಆತ/ಆಕೆ ಕಾಣದಂತೆ ಮಾಯವಾಗುತ್ತಾರೆ. ಹಾಗೆಯೇ ತೋಂಡಿ ಸಂಪ್ರದಾಯದ ಮೂಲಕ ಮುಂದಿನ ತಲೆಮಾರುಗಳಿಗೆ ಪ್ರಸರಣಗೊಳ್ಳುತ್ತದೆ. ಪ್ರಾಣಿಗಳಿಗೂ ಮನುಷ್ಯರಿಗೂ ವ್ಯತ್ಯಾಸವಿಲ್ಲ. ಸಂಸ್ಕೃತಿಯ ಸಮೃದ್ಧ ಅಂಗ ಸಾಹಿತ್ಯ. ಈ ಸಾಹಿತ್ಯ ಜನಪದದ ಬದುಕಿನ ಅವಿಭಾಜ್ಯ ಅಂಗವಾದುದರಲ್ಲಿ ಸಂಶಯವಿಲ್ಲ. ಮನುಷ್ಯನ ಅಂತರಂಗದ ಅಭಿವ್ಯಕ್ತಿಯ ಸಾಕಾರ ರೂಪ ಸಾಹಿತ್ಯ. ಇದು ಕಾಯಕದೊಡನೆ ಸೃಷ್ಟಿಯಾಗಿದೆ. ಹಾಗಾಗಿ ಜನಪದರಲ್ಲಿ ಬದುಕು ಮತ್ತು ಸಾಹಿತ್ಯ ಇವೆರೆಡು ಬೇರೆ ಬೇರೆ ಅಲ್ಲ. ಈ ಸಾಹಿತ್ಯ ಬಲವಂತವಾಗಿ ತಿಣಿಕಿ ಕಟ್ಟಿದ್ದಲ್ಲ;್ಲ ಪರಿಸರದ ಪ್ರಭಾವದಿಂದ ಸಹಜವಾಗಿ ಹುಟ್ಟಿದ್ದು. ಜನಪದ ಸಾಹಿತ್ಯದ ವಸ್ತು, ರೂಪ, ಅಭಿವ್ಯಕ್ತಿಗಳು ವೈವಿಧ್ಯಮಯವಾಗಿವೆ. ಅಧಿಕವಾದ ತಾಜಾತನದಿಂದ ಕೂಡಿವೆ. ಇಂಥ ವಿಶಿಷ್ಟವಾಗಿರುವ ಕನ್ನಡ ಜನಪದ ಸಾಹಿತ್ಯವನ್ನು ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿ ನೋಡಬಹುದು ಅವುಗಳೆಂದರೆ ಅ) ಜನಪದ ಪದ್ಯ ಸಾಹಿತ್ಯ ಆ) ಜನಪದ ಗದ್ಯ ಸಾಹಿತ್ಯ ಇ) ಜನಪದ ನಾಟಕ ಸಾಹಿತ್ಯ.
ಜನಪದ ಪದ್ಯ ಸಾಹಿತ್ಯ ತನ್ನ ಸ್ವರೂಪ ಹಾಗೂ ಸಾಧ್ಯತೆಗಳ ಹಿನ್ನೆಲೆಯೊಳಗೆ ಅತ್ಯಂತ ಗಮನಾರ್ಹವಾದುದು. ಕೇವಲ ಮನೋರಂಜನೆಯನ್ನು ಮಾತ್ರ ನೀಡದೆ ಅದರಾಚೆಗಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜವಾಬ್ದಾರಿಯನ್ನು ನಿರ್ವಹಿಸಿದೆ. ಪದ್ಯ ಸಾಹಿತ್ಯ ಕಾಣಿಸಿಕೊಳ್ಳುವ ವಿವಿಧ ಬಗೆಗೆಳನ್ನು ಗಮನಿಸಿ ಸ್ತ್ರೀಯರ ಹಾಡುಗಳು, ಗಂಡಸರ ಹಾಡುಗಳು; ನಾಟಿಯ ಪದಗಳು, ಮದುವೆಯ ಪದಗಳು, ಲಾವಣಿಗಳು, ಕಥಾನಗೀತೆಗಳು, ಮಹಾಕಾವ್ಯಗಳು, ತ್ರಿಪ್ರದಿಗಳು ಇತ್ಯಾದಿ ಇನ್ನೂ ಹತ್ತಾರು ರೀತಿಯ ಪದಗಳಿವೆ. ಈ ಸಮೃದ್ಧ ಕಾವ್ಯ ಪ್ರಕಾರಗಳಲ್ಲಿ ಜನಪದದ ಆಲೋಚನೆಯ ದರ್ಶನಗಳಿಂದ ಒಟ್ಟಾರೆ ಈ ಸಾಹಿತ್ಯದಲ್ಲಿ ಹೆಣ್ಣಿನ ಸಮಸ್ಯೆ-ಸವಾಲು-ಸಾಧ್ಯತೆಗಳನ್ನು ತೆರೆದಿಡುವ ತ್ರಿಪದಿ ಸಾಹಿತ್ಯ ಹಾಗೂ ಖಂಡ ಕಾವ್ಯಗಳು, ಮಹಾಕಾವ್ಯಗಳು; ಚರಿತ್ರೆ ಪುರಾಣಗಳನ್ನು ನಮ್ಮ ಮುಂದೆ ಬಿಚ್ಚಿಡುವ ಲಾವಣಿಗಳು; ಸಾಂಸ್ಕೃತಿಕ ನಾಯಕ/ನಾಯಕಿಯರು ಸಮುದಾಯಗಳ ಉದ್ದಾರಕ್ಕೆ ದುಡಿದ ಪರಿ ಆ ಮೂಲಕ ಅವರು ಸಾಧಿಸಿದ ಸಾಧನೆಗಳನ್ನು ಹೇಳುವ ಮಹಾಕಾವ್ಯಗಳು; ದೇವರುಗಳನ್ನು ಕೊಂಡಾಡುವ ದೇವರ ಪದಗಳು ಗಮನಾರ್ಹವಾದವುಗಳಾಗಿವೆ. ಇಷ್ಟೊಂದು ಸಮೃದ್ಧ ಸಾಹಿತ್ಯ ಪರಂಪರೆ ಇದ್ದಾಗ್ಯೂ ಕೇವಲ ಕೆಲವೇ ಪ್ರಕಾರಗಳಿಗೆ ಜೊತುಬಿದ್ದ ಶಿಷ್ಟ ಸಾಹಿತ್ಯ ಪ್ರಚಾರಕ್ಕೆ ಬಂದಿತೇ ಹೊರತು ಜನಪದ ಸಾಹಿತ್ಯ ಬರಲಿಲ್ಲ. ಬದುಕಿನ ಕ್ರಿಯಾತ್ಮಕ ಪ್ರಕಾರವಾದ ಸಾಹಿತ್ಯ ಇಂದು ಅನೇಕ ಬಾರಿ ವೈಯುಕ್ತಿಕ ಲಾಭ ತರುವ ಕೆಲಸಮಾತ್ರ ಎಂಬಂತಾಗಿದ್ದು ದುರಂತ. ಹಾಗಾಗಿ ಇಂಥ ಪ್ರಕಾರಗಳಲ್ಲಿ ಬರೆಯಬೇಕಾದ ಕೆಲಸ ತುತರ್ಾಗಿ ಜರುಗಬೇಕಿದೆ.
ಇನ್ನೂ ಜನಪದ ಗದ್ಯ ಸಾಹಿತ್ಯವೂ ಕೂಡ ಅತ್ಯಂತ ವಿಶಿಷ್ಟ ಹಾಗೂ ಶಕ್ತಿಶಾಲಿ ವಿಭಾಗ. ಈ ವಿಭಾಗ ಜನಪದ ಕಥೆ, ಗಾದೆ, ಪುರಾಣ ಹಾಗೂ ಐತಿಹ್ಯ ಇವೇ ಮೊದಲಾದ ಪ್ರಕಾರಗಳನ್ನು ಗುರುತಿಸಬಹುದು. ಇಡೀ ಜನಪದ ಸಾಹಿತ್ಯದಲ್ಲಿ ಜನಪದ ಕಥೆಗೆ ವಿಶೇಷ ಮಾನ್ಯತೆ. ಈ ಮೊದಲೇ ವಿವರಿಸಿದ ಜನಪದ ಪದ್ಯ ಸಾಹಿತ್ಯ ವಿಭಾಗದ ವಿವಿಧ ಪ್ರಕಾರಗಳು ಜನಪದದ ಕೆಲಸದ ಜೊತೆ ಸಂಪರ್ಕ ಹೊಂದಿದ್ದವು. ಕೆಲಸದ ನಡುವೆಯೇ ಹುಟ್ಟಿ ಪ್ರದರ್ಶನಗೊಳ್ಳುತ್ತವೆ. ಆದರೆ ಈ ಜನಪದ ಕಥೆಗಳು ದುಡಿಮೆಯ ಜೊತೆ ಜೊತೆಗೆ ಇರುವಂತಹವುಗಳಲ್ಲ. ಬದಲಿಗೆ ನಿತ್ಯದ ದುಡಿಮೆಯ ಶ್ರಮವನ್ನು ಮರೆಯಲು, ಬಿಡುವಿನ ವೇಳೆಯನ್ನು ನಿರಾಳವಾಗಿ ಕಳೆಯಲು, ಏಕತಾನದ ಬದುಕಿಗೆ ರಂಜನೆಯನ್ನು ದೊರಕಿಸಿಕೊಳ್ಳಲು ಹೀಗೆ ನಾನಾ ಉದ್ದೇಶಗಳ ಹಿನ್ನೆಲೆಯಲ್ಲಿ ಜನಪದ ಕಥೆಗಳು ಹುಟ್ಟಿಕೊಂಡಿವೆ ಎನ್ನಬಹುದು. ಈ ಕಥೆಗಳ ಸಂವಾಹಕರಾಗಿ ಅಜ್ಜಿಯರು ಪ್ರಧಾನ ಪಾತ್ರವಹಿಸಿದ್ದಾರೆ. ಹೇಳಲ್ಪಡುವ ಕೇಳಲ್ಪಡುವ ಕಥೆಗಳು ಹೇಳುವವರ ಮತ್ತು ಕೇಳುವವರ ಆಶಯಗಳನ್ನು ಹೊಂದಿವೆ. ಅನೇಕರು ತಿಳಿದಿರುವಂತೆ ಜನಪದ ಕಥೆಗಳು ಕೇವಲ ಮನರಂಜನೆ ಹಾಗೂ ನೀತಿ ಭೋಧನೆಗೆ ಮಾತ್ರ ಸೀಮಿತವಲ್ಲ. ಮುಖ್ಯವಾಗಿ ಗಮನಿಸಿಬೇಕಾದುದೆಂದರೆ ಅವುಗಳಲ್ಲಿ ಕಟ್ಟಿದವರ ಕನಸ್ಸುಗಳಿವೆ. ಮನಸ್ಸುಗಳಿವೆ. ಹಾಗೆಯೇ ಅವು ಪ್ರಚಲಿತವಿರುವ ಪ್ರದೇಶದ ಸಂಸ್ಕೃತಿಯ ದರ್ಶಕಗಳೂ ಆಗಿರುತ್ತವೆ. ಜಾನಪದ ವಿದ್ವಾಂಸ ಅಂಬಳಿಕೆ ಹಿರಿಯಣ್ಣ ಹೇಳುವಂತೆ ಈ ಕಥೆಗಳಲ್ಲಿ ಕಥಾನಾಯಕ ಒಳ್ಳೆಯವನೂ ಪ್ರತಿನಾಯಕ ದುಷ್ಟನೂ ಆಗಿರುತ್ತಾನೆ. ಕಥಾರಂಭದಲ್ಲಿ ದೃಷ್ಟರಾಗಿ ಕಾಣಿಸಿಕೊಂಡವರು ಅಂತ್ಯದಲ್ಲಿ ಉತ್ತಮರಾಗುತ್ತಾರೆ. ಕಿರಿಯರು, ದುರ್ಬಲರು ನಿರ್ಲಕ್ಷಕ್ಕೆ ಗುರಿಯಾದವರು ಜಯಗಳಿಸುತ್ತಾರೆ. ಜನಪದ ಕಥೆಗಳಲ್ಲಿ ಸಾಮಾನ್ಯವಾಗಿ ಚಿಕ್ಕವರು-ದೊಡ್ಡವರು, ಮನುಷ್ಯ-ರಾಕ್ಷಸರು, ಒಳ್ಳೆಯದು-ಕೆಟ್ಟದ್ದು, ನಾಯಕ-ಪ್ರತಿನಾಯಕ ಮುಂತಾದ ವೈದೃಶ್ಯಗಳಲ್ಲಿ ವ್ಯಕ್ತವಾಗುತ್ತದೆ. ಸ್ವರ್ಗ, ಮತ್ರ್ಯ, ನರಕ ಈ ಮೂರು ಲೋಕಗಳು ಕಥೆಗಳಲ್ಲಿ ಬರುತ್ತವೆ. ಮನುಷ್ಯರ ಜೊತೆಗೆ ದೇವತೆ, ರಾಕ್ಷಸ ದೆವ್ವ, ಬೇತಾಳ ಪ್ರಾಣಿಗಳೂ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತವೆ. ಅದೃಷ್ಟದ ಏರು-ಪೇರು ಘಟನೆಗಳ ಮೇಲೆ ಪ್ರಭಾವ ಬೀರುತ್ತದೆ. ಮಂತ್ರದಂಡ, ಮಾಯದ ಚಾಪೆ, ಮಂತ್ರದ ಟೋಪಿ, ಉಂಗುರ, ಕಪ್ಪು ಕನ್ನಡಿ ಇವುಗಳ ಜೊತೆಗೆ ಮಂತ್ರವಾದಿಯ ಕೈವಾಡವೂ ಇರುತ್ತದೆ. ಜನಪದ ಕಥೆಯ ಸ್ವರೂಪ ಹಾಗೂ ಲಕ್ಷಣಗಳನ್ನು ಕುರಿತ ಈ ಮಾತುಗಳು ಜನಪದ ಕಥೆಯ ಆಶಯಗಳನ್ನು ಹಾಗೂ ಅವುಗಳ ಕ್ರಿಯಾತ್ಮಕತೆಯನ್ನು ಅತ್ಯಂತ ಸಮರ್ಥವಾಗಿ ವಿವರಿಸುತ್ತವೆ.
ಮೇಲಿನ ವಿವರಣೆಯಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಪ್ರತಿನಾಯಕ ಕಥೆಯ ಕೊನೆಯವರೆಗೂ ಪ್ರತಿನಾಯಕನ ಸ್ಥಾನದಲ್ಲೇ ಮುಂದುವರೆಯದೆ ನಾಯಕನ ಸಮಾನ ಗೌರವಕ್ಕೆ ಬರುವುದು ಮತ್ತು ದುರ್ಬಲರಿಗೆ, ನಿರ್ಲಕ್ಷಕ್ಕೆ ಒಳಗಾದವರಿಗೆ ಜಯ ಲಭಿಸುವುದು. ಈ ಅಂಶಗಳನ್ನು ಪ್ರಸ್ತುತ ಜನಪದ ಕಥೆಗಳನ್ನು ಕಟ್ಟಿ ಹೇಳುತ್ತಿರುವ ಜನಪದರ ವೈಯಕ್ತಿಕ ಹಾಗೂ ಸಾಮಾಜಿಕ ಹಿನ್ನೆಲೆಗಳನ್ನು ಗಮನಿಸಿದರೆ ಬೆರಗುಹುಟ್ಟಿಸುವಂತಹ ಸತ್ಯಾಂಶಗಳು ಮನವರಿಕೆಯಾಗುತ್ತವೆ. ಇದಿಷ್ಟೆ ಅಲ್ಲ ಜನಪದ ಕಥೆಗಳಲ್ಲಿ ಪ್ರಕೃತಿಯಲ್ಲಿ ಯಾವುದು ಅಮುಖ್ಯವಲ್ಲ ಎಂಬುದನ್ನು ಸಾರಿಹೇಳುವ ನೂರಾರು ಆಶಯಗಳು ದೊರೆಯುತ್ತವೆ. ಅಂಥವುಗಳಲ್ಲಿ ಒಂದನ್ನು ನಿದರ್ಶನಕ್ಕಾಗಿ ಇಲ್ಲಿ ಪ್ರಸ್ತಾಪಿಸಬಹುದು. ಜನಪದ ಕಥೆಗಳಲ್ಲಿ ಮನುಷ್ಯರ ಜೊತೆಗೆ ಚಿಕ್ಕ ಚಿಕ್ಕ ಜಂತುಗಳು, ಪಕ್ಷಿಗಳು ಭಾಗಿದಾರರಾಗಿರುತ್ತಾರೆ. ಅಂಥ ಸಂದರ್ಭಗಳಲ್ಲಿ ಮನುಷ್ಯರಿಗೆ ಅಸಾಧ್ಯವಾದ ಕೆಲಸವನ್ನು ಇರುವೆಯಂತಹ ಜಂತುವಿನ ಸಹಾಯದಿಂದಲೋ  ಪಕ್ಷಿಯ ಸಹಾಯದಿಂದಲೋ ಮಾಡಿಸಿಬಿಡುವ ಕಾರ್ಯಗಳು ನಡೆಯುತ್ತವೆ. ಮನುಷ್ಯರೂಪದ ನಾಯಕನಿಗೆ ಆನೆಯಂಥ ಬೃಹತ್ ಪ್ರಾಣಿಯಿಂದ ಬಿಡಿಸಲಾಗದ ಸಮಸ್ಯೆಯನ್ನು ಇರುವೆ, ಸಣ್ಣ ಪಕ್ಷಿ ನೆರವೇರಿಸಿಕೊಡುತ್ತವೆ ಎಂಬುದು ಪವಾಡ ಸದೃಶ್ಯ. ಘಟನೆಯಲ್ಲಿ ನಾಯಕ ಪರೀಕ್ಷೆಯನ್ನು ಗೆದ್ದು ರಾಜಕುಮಾರಿಯನ್ನು ಪಡೆದು ಬರಬೇಕು ಆಗ ರಾಜಕುಮಾರಿ ಕಡೆಯವರು ನಾಯಕನಿಗೆ ಕೆಲವು ಪರೀಕ್ಷೆಗಳನ್ನು ಒಡುತ್ತಾರೆ. ಅಂಥವುಗಳಲ್ಲಿ ಹತ್ತು ಕಡಾಯ ಅನ್ನವನ್ನು ಒಂದು ರಾತ್ರಿಲೇ ತಿಂದು ಮುಗಿಸಬೇಕು ಎಂಬುದಾಗಿದ್ದರೆ ಆಗ ಆನೆ ಬೇಕು, ಆದರೆ ಒಂದು ಚೀಲ ರಾಗಿಯನ್ನು ತಂದು ಹೊಲದಲ್ಲಿ ಚೆಲ್ಲಿ ಅವುಗಳನ್ನು ದಿನ ಬೆಳಗಾಗುವುದರೊಳಗೆ ಆಯ್ದುಕೊಡಬೇಕು ಎಂದಾಗ ಇರುವೆಯ ಸಹಾಯ ಬೇಕಾಗುತ್ತದೆ. ಹೀಗೆ ಪ್ರಕೃತಿಯಲ್ಲಿ ಎಲ್ಲರಿಗೂ ಶಕ್ತಿಯಿದೆ. ಅವರವರ ಕೆಲಸಕಾರ್ಯಗಳಿವೆ. ಆದ್ದರಿಂದ ಯಾರನ್ನೂ ಗೌಣಗೊಳಿಸುವುದು ಸರಿಯಾದ ಕ್ರಮವಲ್ಲ ಎಂಬುದಾಗಿ ಜನಪದ ಕಥೆಗಳು ಅನೇಕ ಆಶಯಗಳು ಸಾರುತ್ತವೆ.
ಇನ್ನೂ ಜನಪದ ಗದ್ಯ ಭಾಗದಲ್ಲಿ ಬರುವ ಗಾದೆ - ಒಗಟುಗಳನ್ನು ಗಮನಿಸುವುದಾದರೆ ಆದಿಮಾನವನ ಬದುಕಿನ ಅನುಭವ ಶಿಖರಗಳಿವು. ಮನುಷ್ಯ ಜಾತಿಗೆ ವಿವೇಕ ಹೇಳಲೆಂದೇ ಹುಟ್ಟಿದಂತಿರುವ ಇವು ಎಷ್ಟು ಪ್ರಭಾವಶಾಲಿ ಎಂದರೆ, ಜನಪದವನ್ನು ವಿರೋಧಿಸುವವರು ಅದೇ ಜನಪದ ಗಾದೆ ಮೂಲಕ ವಿರೋಧಿಸುವ ಪರಿಸ್ಥಿತಿಯನ್ನು ಕಾಣುತ್ತೇವೆ. ಇಂದಿಗೂ ಎಷ್ಟೊಂದು ಜನ ಆಧುನಿಕ ಬರಹಗಾರರು ಅಪಾರ ಪ್ರಮಾಣದ ಗಾದೆ - ಒಗಟುಗಳನ್ನು ತಮ್ಮ ಬರಹಗಳಲ್ಲಿ ಅಳವಡಿಸಿ ಬರೆದಿದ್ದಾರೆ. ಅಷ್ಟೇ ಅಲ್ಲ ನಾಗರೀಕತೆಯ ತುತ್ತ ತುದಿಯಲ್ಲಿ ಇರುವ (?) ಜನ ತಮ್ಮ ಮಾತುಗಳ ಪರಿಣಾಮಕಾರಿ ಸಂವಹನಕ್ಕೆ ಎಷ್ಟೊಂದು ಗಾದೆ ಮಾತುಗಳನ್ನು ಬಳಸುತ್ತಾರೆ. ಈ ಎಲ್ಲಾ ಪ್ರಸಂಗಗಳನ್ನು ಗಮನಿಸಿದರೆ ಜನಪದರು ತಮ್ಮ ಲೋಕಾನುಭವಗಳನ್ನು ಎಂಥ ಪ್ರಕಾರದಲ್ಲಿ ಹಿಡಿದಿಟಿದ್ದಾರೆ ಎಂಬುದರ ಅರಿವು ಮೂಡುತ್ತದೆ.
ಜನಪದ ನಾಟಕ ಸಾಹಿತ್ಯವೂ ಕೂಡ ಆದಿಮಾನವನ ಆಲೋಚನೆಗಳ ಪರಿಣಾಮಕಾರಿ ಅಭಿವ್ಯಕ್ತಿಯಾಗಿದೆ. ಜನಪದ ರಂಗಭೂಮಿಯನ್ನು ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಕನ್ನಡ ಜನಪದ ರಂಗಭೂಮಿ ಇಂದಿಗೂ ಜೀವಂತವಾಗಿ ಅನೇಕ ರೀತಿಯ ಸಾಹಿತ್ಯ ಸೃಷ್ಟಿಯಾಗಲು ಕಾರಣವಾಗಿದೆ. ಅನೇಕ ಆಧುನಿಕ ನಾಟಕಗಳು ಮತ್ತು ನಾಟಕಕಾರರು ಜನಪದ ರಂಗಭೂಮಿಗೆ ಋಣಿಯಾಗಿದ್ದಾರೆ. ಜನಪದ ರಂಗಭೂಮಿಯ ಚಟುವಟಿಕೆಗಳಲ್ಲಿ ಸ್ತ್ರೀಯರ ಹಾಗೂ ಪುರುಷರ ಇಬ್ಬರ ಸಹಾಯ ಸಹಕಾರವೂ ಅಗತ್ಯವಾಗಿರುತ್ತದೆ. ಜನಪದ ರಂಗಭೂಮಿಯು ಸರಳ ಹಾಗೂ ಸ್ಥಳೀಯ ಮುಖಗಳನ್ನು ಹೊಂದಿದ್ದು, ಇತಿಹಾಸ-ಪುರಾಣಗಳಿಂದ ವಸ್ತುವನ್ನು ಆಯ್ದುಕೊಂಡು ತಮ್ಮ ಸಂಸ್ಕೃತಿಗೆ ಅನುಗುಣವಾಗಿ ಮರು ರೂಪಧಾರಣೆ ಮಾಡಿದ ಸಂದರ್ಭಗಳು ಸಾಮಾನ್ಯ. ಇಲ್ಲಿ ಪಾತ್ರದಾರಿಗಳಿಗೂ ಸಾಕಷ್ಟು ಸ್ವಾತಂತ್ರ್ಯವಿದ್ದು ಪ್ರೇಕ್ಷಕರನ್ನು ಜಾಗೃತಗೊಳಿಸುವ ಪ್ರಯತ್ನವೂ ನಡೆಯುತ್ತದೆ. ಈ ರಂಗಭೂಮಿ ಯಕ್ಷಗಾನ, ಬಯಲಾಟ, ಸಣ್ಣಾಟ, ದೊಡ್ಡಾಟ, ಗೊಂಬೆಯಾಟ ಮೊದಲಾದ ಶಾಖೆಗಳನ್ನು ಹೊಂದಿದ್ದು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಪ್ರಚಲಿತದಲ್ಲಿವೆ.

ಪ್ರದರ್ಶನ ಕಲೆಗಳು

ಕನ್ನಡ ಜನಪದ ಬದುಕಿನೊಳಗೆ ಪ್ರದರ್ಶನ ಕಲೆಗಳ ಪಾತ್ರ ಹಾಗೂ ಗಾತ್ರಗಳೆರಡೂ ತುಂಬಾ ವಿಸ್ತಾರವಾದುದು. ಈ ಪ್ರದರ್ಶನ ಕಲೆಗಳ ಸಂಖ್ಯೆ ನೂರಾರು. ಮೇಲು ನೋಟಕ್ಕೆ ಈ ಕಲೆಗಳು ಮನುಷ್ಯನ ಮನೋರಂಜನೆಯ ಉದ್ದೇಶದವು ಎನಿಸಿದರೂ ಆಳದಲ್ಲಿ ಕೇವಲ ಮನೋರಂಜನೆಯಲ್ಲ. ಅದರಾಚೆಗಿನ ಒಂದು ಸಾಮಾಜಿಕ ಜವಾಬ್ದಾರಿ ಇದೆ ಎನಿಸುತ್ತದೆ. ಗಮನಿಸಬೇಕಾದುದು ಏನೆಂದರೆ ಪ್ರದರ್ಶನ ಕಲೆಗಳೆಲ್ಲವು ಯಾವುದಾದರೂ ಒಂದಿಲ್ಲೊಂದು ಧರ್ಮದ ಛಾಯೆಯನ್ನು ಪಡೆದಿವೆ. ಹಾಗೆಯೇ ಒಂದು ಕಲೆಯನ್ನು ಪ್ರದಶರ್ಿಸುವ ಸಮುದಾಯದ ಪ್ರಾಪಂಚಿಕ ಜ್ಞಾನವನ್ನು ಪ್ರಕಟಪಡಿಸುತ್ತವೆ. ಉದಾ: ಪೂಜಾ ಕುಣಿತ, ಸೋಮನ ಕುಣಿತ, ಭೂತಾರಾಧನೆ, ನಾಗಮಂಡಲ, ವೀರಗಾಸೆ, ಜೋಗತಿ ಕುಣಿತ, ಕಂಸಾಳೆ, ಗೊರವರ ಕುಣಿತ, ಡೊಳ್ಳು ಕುಣಿತ, ಕರಪಾಲ ಮೇಳ ಇವೇ ಮೊದಲಾದ ಕಲೆಗಳು ತಮ್ಮ ತಮ್ಮ ದೈವಗಳ ಆರಾಧನೆಯ ಹಿನ್ನೆಲೆಯಲ್ಲಿ ರೂಪುಗೊಂಡಿದ್ದರೆ ಕರಗ ಕುಣಿತ, ಅಂಟಿಗೆ-ಪಂಟಿಗೆ, ಪಂಜಿನ ಕುಣಿತ, ಲಂಬಾಣಿ ಕುಣಿತ,  ಕೋಲಾಟ ಇನ್ನೂ ಮೊದಲಾದವು ಸಮುದಾಯಗಳ ಲೋಕದೃಷ್ಟಿಯನ್ನು ಪ್ರಕಟಿಸುತ್ತವೆ.
ಹೀಗೆ ಜನಪದರ ಪ್ರದರ್ಶನ ಕಲೆಗಳು ತಮ್ಮದೇ ಆದ ಕಾರ್ಯ ನಿಮಿತ್ತ ಪ್ರದರ್ಶನಗೊಳ್ಳುತ್ತವೆ. ಮುಖ್ಯವಾಗಿ ಸಮಾಜದ ಜನರಿಗೆ ಸಮಾಜ ಸ್ವಾಸ್ತ್ಯಕ್ಕೆ ಬೇಕಾಗುವ ನೀತಿ-ನಿಯಮಗಳನ್ನು ತಿಳಿಸುತ್ತಾ ಅವುಗಳನ್ನೂ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಪ್ರಯತ್ನವೂ ಇಲ್ಲಿ ನಡೆಯುತ್ತದೆ. ಆದರೆ ಇತ್ತೀಚೆಗೆ ಈ ಜನಪದ ಪ್ರದರ್ಶನ ಕಲೆಗಳನ್ನು ಕೇವಲ ಮನೋರಂಜನೆಯ ಸಾಧನಗಳಾಗಿ ನೋಡಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಪ್ರದರ್ಶನ ಕಲೆಗಳ ಹಿನ್ನೆಲೆಗೆ ಇದ್ದ ಧಾರ್ಮಿಕ ನಂಟನ್ನೇ ಕಳಚಲಾಗಿದೆ. ದುರಂತವೆಂದರೆ ಧಾರ್ಮಿಕ ಚೌಕಟ್ಟಿನೊಳಗೆ ಗೌರವದಿಂದ ಪ್ರದರ್ಶನವಾಗುತ್ತಿದ್ದ ಕಲೆಗಳು ರಾಜಕಾರಣಿಗಳನ್ನು ಮತ್ಯಾರೋ ದೊಡ್ಡವರೆನಿಸಿಕೊಂಡವರನ್ನು ಮೆರವಣಿಗೆ ಮಾಡಲು ಗಾನ ಬಜಾನಗಳಂತೆ ಬಳಸಲಾಗುತ್ತಿದೆ. ಅಂದರೆ ಈ ಕಲೆಗಳ ಮೂಲ ಉದ್ದೇಶವೆ ಬುಡಮೇಲು ಆದಂತಾಯಿತು. ಕಲೆಗಳೆಲ್ಲವೂ ಮನೋರಂಜನೆಯ ಏಕೈಕ ಉದ್ದೇಶದಿಂದ ಬಳಕೆಯಲ್ಲಿವೆ ಎಂಬ ತಪ್ಪು ತಿಳುವಳಿಕೆ ಇಲ್ಲಿ ಕೆಲಸ ಮಾಡಿದೆ. ಇನ್ನೂ ಕೆಲವು ಪ್ರದರ್ಶನ ಕಲೆಗಳನ್ನು ಸಕರ್ಾರಿ ಸಂದೇಶಗಳನ್ನು ತಲುಪಿಸುವ ವಾಹಕಗಳಾಗಿ ಬಳಸಿದ ಸಂದರ್ಭಗಳೂ ಇದ್ದು ಇದನ್ನು ಜಾನಪದ ಆನ್ವಯತೆ ಎಂದು ಭಾವಿಸಲಾಗಿದೆ. ಇದು ಸರಿ ಆದರೂ ಬಳಸಿಕೊಳ್ಳುವಾಗ ಕಲೆಯ ಯಾವ ಆಯಾಮವನ್ನು ಬಳಸುತ್ತಿದ್ದೇವೆ ಎಂಬ ಎಚ್ಚರ ಇರಬೇಕಾಗುತ್ತದೆ.

ಸಂಗೀತ

ಜಾನಪದ ಪರಂಪರೆಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಬೇರೆ ಬೇರೆ ಅಲ್ಲ. ಹಾಗಾಗಿ ಸಾಹಿತ್ಯದ ಸ್ವರೂಪ ಹಾಗೂ ವ್ಯಾಪ್ತಿ ಎಷ್ಟು ಹಿರಿದೋ ಸಂಗೀತವೂ ಕೂಡ ಅಷ್ಟೇ ಹಿರಿದು. ಇಂಥ ಪ್ರಾಚೀನ ಪರಂಪರೆಯಿರುವ ಸಂಗೀತಕ್ಕೆ ಶಿಷ್ಟ ಶಾಖೆಯಲ್ಲಿರುವಂತೆ ನಿದರ್ಿಷ್ಟ ಶಾಸ್ತ್ರವಿಲ್ಲ. ಆದರೆ ದನಿ ಮತ್ತು ದಾಟಿಗಳ ಪ್ರಾಥಮಿಕ ಅರಿವು ಇದೆ. ಜನಪದ ಸಂಗೀತ ಆರಂಭದಲ್ಲಿ ನಿದರ್ಿಷ್ಟ ನಿಯಮಗಳು ಇದ್ದರೂ ತಲೆಮಾರುಗಳಿಗೆ ಪ್ರಸರಣಗೊಂಡಂತೆಲ್ಲ ಅವು ಸಡಿಲಗೊಂಡಿರಬಹುದು. ಅದು ಏನೇ ಆದರೂ ಯಾವುದೇ ಶಾಸ್ತ್ರ ನಿರ್ಬಂಧಗಳಿಲ್ಲದೆ ಆದಿಯಿಂದಲೂ ವಿವಿಧ ಮಜಲುಗಳಲ್ಲಿ ಬೆಳೆಯುತ್ತಾ ಬಂದಿರುವ ಜನಪದ ಸಂಗೀತ 'ದನಿ-ಬನಿಗಳಿಂದ, ನಡೆ-ನುಡಿಗಳಿಂದ ಮತ್ತು ಗತ್ತು-ಗೈರತ್ತುಗಳಿಂದ ಆಕಷರ್ಿಸುವ, ಪ್ರಕೃತಿಯ ಮಡಿಲಲ್ಲಿ ಹುಟ್ಟಿ, ದಿನ ನಿತ್ಯ ಕಾಯಕದಲ್ಲಿ ಬೆಳೆದು, ಮುಗ್ದ ಹಳ್ಳಿಗರ ಬಾಯಲ್ಲಿ ಫಲವಾದುದು. ಇಂತಹ ಜನಪದ ಸಂಗೀತ ತನ್ನದೇ ಆದ ಲಕ್ಷಣಗಳನ್ನು ಹೊಂದಿದೆ. ಅಂತಹ ಲಕ್ಷಣಗಳನ್ನು ಜನಪದ ತಜ್ಞ ಹೆಚ್.ಎಲ್. ನಾಗೇಗೌಡ ಅವರು ಹೀಗೆ ಗುರುತಿಸಿದ್ದಾರೆ.  ಜನಪದ ಸಂಗೀತದಲ್ಲಿ ಆಡು ನುಡಿಯೇ ಪ್ರಧಾನವಾಗಿದ್ದು ತನ್ನದೇ ಆದ ಹತ್ತಾರು ದನಿ-ದಾಟಿಗಳನ್ನು ಕಾಣಬಹುದು. ಇದಕ್ಕೆ ಶಿಷ್ಟ ಸಂಗೀತದಂತೆ ಯಾವುದೇ ಕಟ್ಟುಪಾಡುಗಳಿಲ್ಲ. ಆದರೂ ದನಿ-ದಾಟಿ-ಮಟ್ಟುಗಳ ಬಗ್ಗೆ ಸ್ಪಷ್ಟ ರೂಪವಿದ್ದು ಅವುಗಳನ್ನು ಹಾಡಬೇಕಾದ ಸಂದರ್ಭಗಳ ಬಗ್ಗೆಯೂ ನಿಕರವಾದ ಮಾಹಿತಿ ಇರುತ್ತದೆ. ಜನಪದ ಸಂಗೀತದಲ್ಲಿ 'ಲಯ'ವೂ ಪ್ರಧಾನವಾಗಿದ್ದು ವಿಶೇಷವಾಗಿ ತ್ರಿಪದಿ ಸಾಹಿತ್ಯವನ್ನು ಹಾಡುವಾಗ ಮಹಿಳೆಯರು ಇದನ್ನು ತೋರ್ಪಡಿಸುತ್ತಾರೆ. ಲಯ ಪ್ರಧಾನವಾದ ಸಂಗೀತವೆಂದರೆ ವಾದ್ಯರಹಿತ ಸಂಗೀತವೆಂದೇ ಆರ್ಥ. ಹಿಮ್ಮೇಳ-ಮುಮ್ಮೇಳನದ ಕಲ್ಪನೆ ಜನಪದ ಸಂಗೀತದ ಅನನ್ಯ ಲಕ್ಷಣ. ಇದು ಹಾಡುಗಾರರಿಗೆ ಸಹಾಯಕವಾಗಿ ಒದಗಿ ಬರುವ ಸಂಗತಿಯಾಗಿದೆ.
ಇಂಥ ಜನಪದ ಸಂಗೀತದ ಬಗ್ಗೆ ಸರಿಯಾದ ಕಲ್ಪನೆಯಿಲ್ಲದೆ ಇಂದು ಆಧುನಿಕ ಪಾಪ್ ಸಂಗೀತ ಮಾದರಿಗಳನ್ನೆ ಆದರ್ಶಗಳೆಂಬಂತೆ ಭಾವಿಸಿದ್ದೇವೆ. ಈ ಶಿಷ್ಟ ಸಂಗೀತ ಎಷ್ಟರ ಮಟ್ಟಿಗೆ ಜನರ ಮನದಲ್ಲಿ ಬೇರೂರಿತೆಂದರೆ ಪಾರಂಪರಿಕವಾಗಿ ಉಳಿದು ಬಂದಿದ್ದ ಜನಪದ ಸಂಗೀತ ಹಿನ್ನೆಲೆಗೆ ಸರಿದು ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತು. ಇಂದಿಗೂ ಆ ಸ್ಥಿತಿಯೇ ಮುಂದುವರೆದಿದೆ. ಇಂಥ ಸ್ಥಿತಿಯಿಂದ ಬಿಡುಗಡೆ ಪಡೆಯಬೇಕಾಗಿದ್ದು ಜನಪದ ಸಂಗೀತದ ನೆಲೆಗಳನ್ನು ಸರಿಯಾಗಿ ಅಥರ್ೈಯಿಸಿಕೊಂಡು ಅದನ್ನು ಪುನರುಜ್ಜೀವನಗೊಳಿಸಬೇಕಿದೆ.

ಚಿತ್ರ ಕಲೆ

ಜನಪದ ಚಿತ್ರಕಲೆ ಜಾನಪದ ಕಲಾಪ್ರಕಾರಗಳಲ್ಲೇ ಗಮನ ಸೆಳೆಯುವ ಕಲೆ. ಮಣ್ಣಿಗೆ ಹತ್ತಿರವಾಗಿ ಗ್ರಾಮ ಜೀವನ ನಡೆಸುವ ಜನಪದರು ಪ್ರಕೃತಿಗೆ ನಿಷ್ಠವಾಗಿ ಬದುಕುವುದಾಗಿ ಅವರ ಚಿತ್ರ ಕಲೆ ಸಹಜವಾಗಿ ಪ್ರಕೃತಿಯನ್ನು ಅವಲಂಬಿಸಿದೆ. ಜನಪದರು ತಮ್ಮ ಮನಗಳ ಮೋರಿ ಮೇಲೆ, ಕೃಷಿ ಉಪಕರಣಗಳ ಮೇಲೆ, ಪ್ರಾಣಿಯ ದೇಹದ ಮೇಲೆ, ಮನುಷ್ಯನ ದೇಹದ ಮೇಲೆ, ಮನೆಯ ಮುಂದಿನ ಅಂಗಳದಲ್ಲಿ ಮೇಲೆ ಚಿತ್ರಕಲೆಯನ್ನು ಬಿಡಿಸುತ್ತಾರೆ. ಈ ಚಿತ್ರಕಲೆಯ ಹಿನ್ನೆಲೆಯಾಗಿ ಸಮೃದ್ಧವಾದ ನಂಬಿಕೆ-ಆಲೋಚನೆಗಳು ಇವೆ. ಗೋಡೆಗಳ ಮೇಲೆ ಬಿಡಿಸಲಾಗುವ ಅನೇಕ ರೀತಿಯ ಪ್ರಾಣಿ-ಪಕ್ಷಿಗಳ ಚಿತ್ರಗಳು, ನೆಲದ ಮೇಲೆ ಬಿಡಿಸುವ ರಂಗೋಲಿ, ತೊಡುವ ವಸ್ತುಗಳಲ್ಲಿ ಬಿಡಿಸುವ ಕಸೂತಿ, ಮನುಷ್ಯರ ದೇಹದ ಮೇಲೆ ಚುಚ್ಚುವ ಹಚ್ಚೆ, ಧಾರ್ಮಿಕ ಆಚರಣೆಗಳಲ್ಲಿ ನಡೆಯುವ ಕುಣಿತಗಳಲ್ಲಿ ಬಳಸುವ ಮುಖವಾಡಗಳ ಚಿತ್ತಾರಗಳು. ಬಯಲಾಟ-ಯಕ್ಷಗಾನದ ಮುಖವರ್ಣನೆಗಳು, ಕೃಷಿ ಇನ್ನು ಮೊದಲಾದ ವೃತ್ತಿಗಳಲ್ಲಿ ಬಳಸುವ ಪರಿಕರಗಳ ಮೇಲೆ ಚಿತ್ರಿಸುವ ಚಿತ್ರಗಳು ಮೊದಲಾದವು ಜನಪದ ಚಿತ್ರ ಕಲೆಯ ಮಾದರಿಗಳಾಗಿವೆ. ಈ ಮಾದರಿಗಳಲ್ಲಿ ಕೇವಲ ಬಣ್ಣ ಬಳಿಯುವ ಕ್ರಿಯೆ ಮಾತ್ರ ಇಲ್ಲ ಬದಲಿಗೆ ಇವುಗಳ ಹಿಂದೆ ಅಪಾರವಾದ ಲೋಕಜ್ಞಾನವಿದೆ. ಇಂಥ ಲೋಕಜ್ಞಾನ ವಿರುವ ಜನಪದ ಚಿತ್ರಕಲೆಯನ್ನು ಆಧುನಿಕ ಚಿತ್ರ ಕಲೆ ಬಂದ ತಕ್ಷಣ ನಮ್ಮ ಸಮಾಜ ಮರೆತುಬಿಟ್ಟಿತು. ಅಷ್ಟೇ ಅಲ್ಲ ಆಧುನಿಕ ಶಿಷ್ಟ ಶಾಖೆೆಯ ಚಿತ್ರಕಲೆಯನ್ನು ಹೊತ್ತು ಮೆರೆಸಿತು. ಇದೊಂದು ಅಪಾಯಕಾರಿ ಬೆಳವಣಿಗೆ ಜನಪದ ಚಿತ್ರಕಲೆಯನ್ನು ಮರೆತರೆ ತೊಂದರೆಯಿಲ್ಲ ಎಂದು ಹೇಳಬಹುದು ಆದರೆ ಆ ಕಲೆಯ ಹಿಂದಿನ ಜ್ಞಾನ ಮರೆಯಾಯಿತಲ್ಲ ಅದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜನಪದ ಚಿತ್ರಕಲೆಗೆ ಮರು ಜೀವ ನೀಡಬೇಕಿದೆ.

ವಾಸ್ತು

ಶಿಷ್ಟ ಪರಂಪರೆಯಲ್ಲಿ ವಾಸ್ತು ಶಾಸ್ತ್ರ ಅತ್ಯಂತ ಮಹತ್ವದ್ದು. ಈ ಬಗ್ಗೆ ಸುದೀರ್ಘ ಅಧ್ಯಯನಗಳು ನಡೆದಿವೆ. ಇಂಥ ವಾಸ್ತು ಸಂಗತಿಗಳನ್ನು ಆಧರಿಸಿ ಸಾಕಷ್ಟು ನಿರ್ಮಾಣಗಳು ನಡೆದಿವೆ. ಈ ಪರಂಪರೆಯಲ್ಲಿರುವಂತೆ ನಮ್ಮ ಜನಪದ ಪರಂಪರೆಯೊಳಗೂ ಒಂದು ವಾಸ್ತು ಶಾಸ್ತ್ರವಿದೆ. ಆದರೆ ಈ ರೂಪದಲ್ಲಲ್ಲ. 'ಶಿಷ್ಯ ಪರಂಪರೆಯ ವಾಸ್ತು ಶಾಸ್ತ್ರವು ಅರಮನೆಗಳ ರಚನೆ, ದೇವಾಲಯಗಳ ರಚನೆ, ಹಾಗೂ ಕೋಟೆಗಳ ರಚನೆಯನ್ನು ವಾಸ್ತು ಶಾಸ್ತ್ರವು ಅಭ್ಯಾಸ ಮಾಡುತ್ತದೆ. ಇದಕ್ಕಿಂತ ಭಿನ್ನವಾಗಿ ಜನಪದ ವಾಸ್ತುವು ಜನಪದರ ಮನೆ, ಕೊಟ್ಟಿಗೆ, ಅಂಗಳ, ಬಾವಿ, ಗುಡಿ ಹಳ್ಳಿ ಮತ್ತಿತ್ತರ ವಿಷಯಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುತ್ತದೆ.
ಈ ಭಾಗದಲ್ಲಿ ನಾವು ಗಮನಿಸಬೇಕಾದ ಸಂಗತಿಗಳೆಂದರೆ ದೇವರ ಗುಡಿ ಮತ್ತು ಮನುಷ್ಯರ ವಾಸದ ಮನೆಗಳ ರಚನೆ ಜನಪದರ ದೇವರ ಗುಡಿಗಳು ಸುತ್ತು ಗುಡಿಸಲುಗಳೇ ಆಗಿರುತ್ತವೆ. ಕಾಡಲ್ಲಿ ಸಿಗುವ ಗಳ ಮತ್ತು ಹುಲ್ಲನ್ನು ಬಳಸಿ ಗುಡಿಸಲು ನಿಮರ್ಿಸುವುದು. ಅದಕ್ಕೊಂದು ಚಿಕ್ಕ ಬಾಗಿಲಿಡುವುದು. ಹಾಗೆಯೇ ಮನುಷ್ಯನ ಮನೆಗಳ ರಚನೆ ಕೂಡ ವಿಶಿಷ್ಟವಾಗಿದ್ದು ಕಾಡಿನ ಪರಿಕರಗಳಿಂದಲೇ ಇವುಗಳು  ಕೂಡ ರಚನೆಯಾಗುತ್ತಿದ್ದವು. ಇವುಗಳಲ್ಲಿ ದೇವರ ಗುಡಿಯ ಬಾಗಿಲು ಅತೀ ಚಿಕ್ಕದಾಗಿರುತ್ತದೆ. ಇದಕ್ಕೆ ಜನಪದರ ನಂಬಿಕೆ ಪ್ರಧಾನ ಕಾರಣವಾಗಿದೆ. ದೇವರ ಗುಡಿಯ ಒಳಗೆ ಹೋಗಬೇಕಾದರೆ ಮನುಷ್ಯ ತಲೆ ಭಾಗಿ ಹೋಗಬೇಕೆಂಬ ವಿಧೇಯತೆಯ ಸಂಕೇತವಾಗಿ ಕಾಣುತ್ತದೆ. ಅಂದರೆ ವಾಸ್ತು ರಚನೆಯೂ ಕೂಡ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಹದ್ದು ವಾಸದ ಮನೆಯ ಒಳರಚನೆಗಳ ರೂಪವನ್ನು ಕೂಡ ಇಲ್ಲಿ ಗಮನಿಸಬೇಕಾಗುತ್ತದೆ. ಮನೆಯ ಹಿತ್ತಲು-ಜಗಲಿ-ಅಡುಗೆ ಮನೆಯ ಸಂರಚನೆ ಕೂಡ ಸಮುದಾಯದ ಮೌಲ್ಯಗಳನ್ನು ಒಳಗೊಂಡಿದೆ.

ಉಡುಗೆ-ತೊಡುಗೆ

ಜನಪದ ಸಂಸ್ಕೃತಿಯಲ್ಲಿ ಕುತೂಹಲ ಮೂಡಿಸುವ ಸಂಗತಿಗಳಲ್ಲಿ ಅವರು ತೊಡುವ ಉಡುಗೆ-ತೊಡುಗೆಗಳೂ ಕೂಡ ಪ್ರಮುಖವಾದವುಗಳಾಗಿವೆ. ಜನಪದ ಜೀವನದಲ್ಲಿ ಉಡುಪು ಮೊದ ಮೊದಲು ಕೇವಲ ಪ್ರಾಕೃತಿಕ ಅವಶ್ಯಕತೆಯಾಗಿತ್ತು. ಮೈಗೆ ಚಳಿಯಾದಾಗ ಆದಿ ಮಾನವ ಮರದ ತೊಗಟೆಯನ್ನು ಅಥವಾ ಪ್ರಾಣಿಯ ಚರ್ಮಗಳನ್ನು ಅಥವಾ ಮರ ಗಿಡಗಳ ಸೊಪ್ಪನ್ನು ಮೈಗೆ ಸುತ್ತಿಕೊಳ್ಳುತ್ತಿದ್ದ. ಮುಂದುವರೆದು ಸೌಂದರ್ಯದ ಕಲ್ಪನೆ ಬಂದಾಗ ಪ್ರಕೃತಿಯಲ್ಲಿ ಸಿಗುವ ಎಲೆ-ಹೂವು-ಕಾಯಿಗಳನ್ನು ಧರಿಸಿದ್ದಿದೆ. ಇಂಥ ಬದುಕು ಹತ್ತಿ ಮತ್ತು ಬೇರೆ ಬೇರೆ ಲೋಹಗಳ ಬಳಕೆಗೆ ಬಂದ ತಕ್ಷಣ ಇನ್ನೊಂದು ಮಾದರಿಗೆ ಬದಲಾಯಿತು. ಪ್ರಕೃತಿಯಲ್ಲಿ ಸುಲಭವಾಗಿ ದೊರೆಯುವ ಪರಿಕರಗಳಿಂದ ಮಾನ ಮುಚ್ಚಿಕೊಳ್ಳುವ , ಸೌಂದರ್ಯ ಹೆಚ್ಚಿಸಿಕೊಳ್ಳುವ ಸಂದರ್ಭಗಳಿದ್ದಾಗ ಮಾನವ ಬದುಕಿನೊಳಗೆ ಸರಳತೆ, ಸಮಾನತೆ ಮನೆಮಾಡಿತ್ತು. ಆದರೆ ಹತ್ತಿ ಮತ್ತು ಲೋಹಗಳ ಬಳಕೆಯ ಕಾಲಕ್ಕೆ ಸಾಮಾಜಿಕ ಅಸಮಾನತೆ ಕಾಣಿಸಿಕೊಂಡಿರುವುದನ್ನು ಗುರುತಿಸಬಹುದು. ಈ ಅಸಮಾನತೆ ಕಾಲ ನಂತರದಲ್ಲಿ ಅತೀ ಹೆಚ್ಚಿನ ಅಂತರ ಸೃಷ್ಟಿಯಾಗಿದೆ. ಪಾಶ್ಚಾತ್ಯ ವೇಷ ಭೂಷಣಗಳು ನಮ್ಮೊಳಗೆ ಪ್ರವೇಶ ಮಾಡಿದ ತಕ್ಷಣ ಈ ಅಂತರ ಇನ್ನಷ್ಟು ಹೆಚ್ಚಿತು. ಆಥರ್ಿಕ ಶಕ್ತಿ ಇರುವ ಜನ ಧರಿಸುವ ವಸ್ತ್ರ ಹಾಗೂ ಆಭರಣಗಳಿಗೂ ಆಥರ್ಿಕವಾಗಿ ಶಕ್ತಿಹೀನರಾದವರು ಧರಿಸುವ ವಸ್ತ್ರಾಭರಣಗಳಿಗೂ ಸ್ಪಷ್ಟವಾದ ವ್ಯತ್ಯಾಸ ಕಂಡುಬರುತ್ತದೆ. ಅಂದರೆ ಆದಿಮಾನವನ ಪರಿಸರದಲ್ಲಿ ಯಾವುದೇ ಅಂತರವನ್ನು ಕಾಣಲಾಗುವುದಿಲ್ಲ. ಈ ಅಂತರಗಳು ಜಾಸ್ತಿಯಾಗಿ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆ-ತೊಡುಗೆಗಳು ಜನರ ಮನಸ್ಸನ್ನು ಆಕಷರ್ಿಸಿ ಪಾರಂಪರಿಕ ವೇಷ-ಭೂಷಣಗಳ ಬಗ್ಗೆ ಕೀಳರಿಮೆಯ ಮನೋಭಾವನೆಯನ್ನುಂಟುಮಾಡಿತು. ಇಂದಿನ ಜನ ಪಂಚೆಗಿಂತ ಪ್ಯಾಂಟ್, ಸೀರೆಗಿಂತ ಚೂಡಿ ಅತ್ಯಂತ ಇಷ್ಟ ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಬರೀ ಇಷ್ಟೇ ಆಗಿದ್ದರೆ ದೊಡ್ಡ ಸಮಸ್ಯೆ ಇರಲಿಲ್ಲ ಆದರೆ ಇಷ್ಟು ಮಾತ್ರವಲ್ಲದೆ ಪಂಚೆ ಹಾಗೂ ಸೀರೆ ಧರಿಸುವವರನ್ನು ಅವಮಾನಕ್ಕೆಳಗುಮಾಡುವ ಹಿಯ್ಯಾಳಿಸುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ಗಮನಿಸಬೇಕಾಗಿರುವ ಸಂಗತಿ ಎಂದರೆ ಪಾರಂಪರಿಕ ಉಡುಗೆ-ತೊಡುಗೆಗಳು ಸಂಪೂರ್ಣ ಮಾಯವಾಗಿದೆ ಎಂದು ನಂಬಬೇಕಿಲ್ಲ. ಇಂದಿಗೂ ಇನ್ನಡ ಸಮುದಾಯಗಳಲ್ಲಿ ಅನೇಕ ಕಡೆ ಪಾರಂಪರಿಕ ಉಡುಗೆ ತೊಡುಗೆಗಳ ಬಳಕೆಯಲ್ಲಿರುವುದನ್ನು ನೋಡಬಹುದು. ಕೆಲವರಲ್ಲಿ ಸಾಮಾನ್ಯ ಬದುಕಿನ ನಡೆಯಲ್ಲಿ ಬಳಕೆಯಲ್ಲಿದ್ದರೆ, ಇನ್ನೂ ಕೆಲವು ಕಡೆ ಸಾಂಪ್ರದಾಯಿಕ ಆಚರಣೆಗಳಲ್ಲಿ ಕಂಡುಬರುತ್ತಿದೆ. ಇಂಥಲ್ಲೆಲ್ಲ ಬಳಕೆಗೊಳ್ಳುವ ಉಡುಗೆ ತೊಡುಗೆಗಳು ಕೇವಲ ಸಂಪ್ರದಾಯಗಳಾಗಿವೆ. ಹಾಗಾಗಿ ಇವು ಸಂಪ್ರದಾಯಗಳಾಚೆಗಿನ ನಿಜಬದುಕಿನ ಪ್ರಯೋಗಗಳಾಗಬೇಕಿದೆ.
ಇಲ್ಲಿಯವರೆಗೂ ಕನ್ನಡ ಜನಪದ ಸಂಸ್ಕೃತಿಯ ಆಳವಾದ ಬದುಕಿನಲ್ಲಿರುವ ಕೆಲವೇ ಕೆಲವು ಆದರ್ಶ ತುಣುಕುಗಳನ್ನು ಆಯ್ದು ಜೋಡಿಸಿ ಕೊಡಲಾಯಿತು. ಈ ಬರಹದ ಆರಂಭದಲ್ಲೇ ಸ್ಪಷ್ಟಪಡಿಸಿದಂತೆ ನಮ್ಮ ಮೌಲ್ಯಯುತ ಸಮಾಜ ಪರರ ಸಂಸ್ಕೃತಿಯಿಂದ ಹುಟ್ಟಿದ ಮೌಲ್ಯಗಳ ಬೆನ್ನು ಹತ್ತಿದ್ದರ ಪರಿಣಾಮ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಯಿತು. ಇದಕ್ಕೆ ಪರಿಹಾರವೆಂದರೆ ನಮ್ಮ ಸಂಸ್ಕೃತಿಯ ಬೇರುಗಳನ್ನು ಗುರುತಿಸಿ ಗಟ್ಟಿಗೊಳಿಸುವುದು. ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಪ್ರಸ್ತುತ ಬರಹದಲ್ಲಿ ಕನ್ನಡ ಜನಪದ ಸಂಸ್ಕೃತಿಯೊಳಗಿನ ಸಕಾರಾತ್ಮಕ ಮೌಲ್ಯಗಳನ್ನು ಗುರುತಿಸುವ ಪ್ರಯತ್ನವಿದೆ. ಇಲ್ಲಿನ ವಿವರಗಳನ್ನು ಓದಿದ ಯಾರಿಗಾದರೂ ಒಂದು ಪ್ರಶ್ನೆ ಅಥವಾ ಅನುಮಾನ ಎದುರಿಗೆ ನಿಲ್ಲುತ್ತದೆ. ಅದೇನೆಂದರೆ ಕನ್ನಡ ಜನಪದ ಸಂಸ್ಕೃತಿಯಲ್ಲಿ ಬರೀ ಗುಣಗಳು ಮಾತ್ರ ಇವೆಯೇ? ದೋಷಗಳಿಲ್ಲವೆ? ಈ ಪ್ರಶ್ನೆಗೆ ಉತ್ತರ ಸುಲಭ ಎಲ್ಲಾ ಸಂಸ್ಕೃತಿಗಳಲ್ಲಿರುವಂತೆ ಇಲ್ಲಿಯೂ ಕೂಡ ಗುಣಗಳಿವೆ ಅಂತೆಯೇ ಅವಗುಣಗಳೂ ಇವೆ. ಆದ್ದರಿಂದ ಅಂಥ ಕೆಲವು ಅವಗುಣಗಳನ್ನು ಗಮನಿಸುವುದು ಸೂಕ್ತ. ಏಕೆಂದರೆ ಕನ್ನಡ ಜನಪದ ಸಂಸ್ಕೃತಿಯ ಅವಗುಣಗಳನ್ನು ತಿಳಿಯದೆ ಮುಂದೆ ನಡೆದರೆ ಅವಲೋಕನ ಪರಿಪೂರ್ಣವಾಗಲಾರದು.

ಮಿತಿಗಳು

ಕನ್ನಡ ಜನಪದ ಸಂಸ್ಕೃತಿಯು ತನ್ನ ಆರಂಭಿಕ ದಿನಗಳಲ್ಲಿ ಅತ್ಯಂತ ಉದಾರ-ಮಾನವೀಯ ನೆಲೆಯಲ್ಲಿ ಸಂಬಂಧಗಳನ್ನು ರೂಪಿಸಿಕೊಂಡಿದ್ದು, ಸರ್ವ ಸಮಾನತೆಯ ಸಮಾಜವನ್ನು ನಿಮರ್ಾಣ ಮಾಡಿಕೊಂಡಿತ್ತು. ಆದರೆ ಈ ಸ್ಥಿತಿ ಕಾಲದ ಬದಲಾವಣೆಯಲ್ಲಿ ಸಿಕ್ಕು ಸಾಕಷ್ಟು ಪರಿವರ್ತನೆಗೊಂಡು ತನ್ನ ಮೂಲ ಸ್ಥಿತಿಯನ್ನು ಕಳೆದುಕೊಳ್ಳುತ್ತಾ ಬಂದಿದೆ. ಹೀಗೆ ಕನ್ನಡ ಜನಪದ ಸಂಸ್ಕೃತಿಯ ಚರಿತ್ರೆ ಒಂದು ಹಂತದವರೆಗೆ ತನ್ನ ನಂಬಿಕೆ ಮೌಲ್ಯಗಳ ಉನ್ನತೀಕರಣಕ್ಕೆ ಕಾರಣವಾಗಿದ್ದರೆ. ಅಲ್ಲಿಂದ ಮುಂದೆ ಅವೆಲ್ಲವುಗಳನ್ನು ಕಳೆದುಕೊಂಡಿದ್ದು ಸತ್ಯ. ಈ ಹಿನ್ನೆಲೆಯೊಳಗೆ ಜನಪದ ಸಂಸ್ಕೃತಿಯನ್ನು ಗಮನಿಸಿದರೆ ನಾವು ಇಲ್ಲಿಯವರೆಗೂ ಹೇಳುತ್ತಾ ಬಂದ ಗುಣಗಳಿಗೆ ವಿರುದ್ಧವಾದ ಅಂಶಗಳು ಹಲವಾರು ಇವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು.
ಜನಪದ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶೇಷ ಗೌರವ-ಸ್ಥಾನಮಾನಗಳಿವೆ ಎಂಬ ವಾದಕ್ಕೆ -ಖಂಡಕಾವ್ಯಗಳಲ್ಲಿ, ಮಹಾಕಾವ್ಯಗಳಲ್ಲಿ, ಕಥೆಗಳಲ್ಲಿ ದೊರೆಯುವ ಅನೇಕ ಸ್ತ್ರೀ ಪಾತ್ರಗಳು ಅಪವಾದವಾಗಿ ನಮ್ಮೆದರು ನಿಲ್ಲುತ್ತವೆ. ದೋಷಪೂರಿತ ಸಮಾಜದ ಲಿಂಗಬೇಧ ನೀತಿ ಇಲ್ಲಿಯೂ ಕೆಲಸ ಮಾಡಿದೆ.
ಪ್ರಸ್ತುತ ಪರಂಪರೆಯಲ್ಲಿ ಬಳಕೆಗೆ ಬಂದಿರುವ ನಂಬಿಕೆ ಸಂಪ್ರದಾಯ-ಆಚರಣೆಗಳೆಲ್ಲವೂ ಅರ್ಥಪೂರ್ಣವೆಂದು ಹೇಳುವಂತಿಲ್ಲ. ಅನೇಕ ಸಲ ಇವೆಲ್ಲವೂ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಅಸ್ತ್ರಗಳಂತೆಯೂ ಬಳಕೆಯಾಗಿವೆ. ಇದಕ್ಕೆ ಬಸವಿ ಬಿಡುವ ಪದ್ಧತಿ, ಮಾರಿಯ ಆಚರಣೆಗಳು ಅತ್ಯುತ್ತಮ ಉದಾಹರಣೆಗಳು.
ಸಮಷ್ಟಿ ಹಿತ ಜನಪದ ಸಂಸ್ಕೃತಿಯ ಜೀವಾಳ ಎಂದು ಹೇಳುತ್ತಿರುವಾಗಲೆ ಪಕ್ಕದಲ್ಲಿಯೇ ಸ್ವಾರ್ಥಪರವಾದ ಅನೇಕ ವ್ಯಕ್ತಿ ವಿಷಯಗಳು ಪಕ್ಕದಲ್ಲಿಯೇ ನಿಂತು ಅಣಕಿಸುತ್ತವೆ ಜನಪದ ವೈದ್ಯ ಪದ್ಧತಿಯಲ್ಲಿ ಇರುವ ಜ್ಞಾನವನ್ನು ಯಾರಿಗೂ ಬಹಿರಂಗ ಮಾಡಬಾರದೆಂಬ ನಂಬಿಕೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಶ್ರಮಾಧಾರಿತ ಬದುಕಿನ ಬಯಕೆ ಇವರಲ್ಲಿದೆ ಎಂದರೂ ಕೂಡ ದುಡಿಮೆಯಿಲ್ಲದೇ ಸುಖಪಡುವ ಮನಸ್ಸು ಇವರಲ್ಲಿ ಇಲ್ಲದೇ ಇಲ್ಲ.
ಸಂಪತ್ತಿನ ನಿರಾಕರಣೆ ಜನಪದ ಸಂಸ್ಕೃತಿಯ ಬಹುಮುಖ್ಯ ಗುಣ ಎಂಬುದಾಗಿ ಹೇಳುವ ಮಾತಿಗೆ ವಿರೋಧವೆಂಬಂತೆ ಸಂಪತ್ತು ಬೇಕೆನ್ನುವ ಹಲವಾರು ಪ್ರಸಂಗಗಳು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ದೊರೆಯುತ್ತವೆ.
ಜನಪದ ಸಮಾಜದೊಳಗಿನ ಸಂಸಾರದಲ್ಲಿ ಅತ್ಯಂತ ಮಧುರ ಬಾಂಧವ್ಯಗಳಿವೆ. ಆದರೂ ಅನೇಕ ಕಡೆ ಈ ಬಂಧುತ್ವ ಸಡಿಲಗೊಂಡಿರುವುದನ್ನು ಗುರುತಿಸಬಹುದಾಗಿದೆ.
ಈ ಮೇಲಿನ ಅಂಶಗಳಿಗೆ ಪೂರಕವಾಗಿ ಅನೇಕ ಆಧಾರಗಳು ಲಭ್ಯವಿದೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳಿಗೆ ಹೋಗುವುದು ಈ ಬರಹದ ಉದ್ದೇಶವಲ್ಲ. ಹಾಗಾಗಿ ಕೆಲವೇ ಕೆಲವು ಅಂಶಗಳ ಪಟ್ಟಿಮಾಡಲಾಯಿತು. ಈ ಸಂದರ್ಭದಲ್ಲಿ ನಾವು ಸ್ಪಷ್ಟಪಡಿಸಿಕೊಳ್ಳಬೇಕಾದ ಸಂಗತಿ ಎಂದರೆ ಆರಂಭಕ್ಕೆ ಸವರ್ೋದಯದ ತಳಹದಿಯ ಮೇಲೆ ನಿಂತಿದ್ದ ಜನಪದ ಸಮಾಜ ಬರುಬರುತ್ತಾ ಮನವ ವಿರೋಧಿ ಮೌಲ್ಯಗಳನ್ನು ಒಳಗೊಳ್ಳುತ್ತಾ ಬಂದಿರುವುದು ಸರಿಯಷ್ಟೇ. ಹಾಗೆಂದು ಇಡೀ ಸಂಸ್ಕೃತಿಯೇ ತಿರಸ್ಕಾರ ಯೋಗ್ಯ ಎಂದು ನಾವ್ಯಾರು ಭಾವಿಸಲಿಕ್ಕಾಗದು. ಆದ್ದರಿಂದಲೇ ಆಧುನಿಕ ಸಮಾಜದ ಅವಘಡಗಳಿಂದ ಪಾರಾಗಲು ಪಯರ್ಾಯಗಳನ್ನು ಹುಡುಕುತ್ತಿರುವಾಗ ನಮಗೆ ಎದ್ದು ಕಾಣುವ ದಾರಿ ಇದೇ ಜನಪದ ಸಂಸ್ಕೃತಿಯದು. ಇಂಥ ಸಾಧ್ಯತೆಗಳನ್ನು ಕುರಿತು ಆಲೋಚಿಸುವಾಗ ಪಾರಂಪರಿಕ ಜನಪದ ಸಂಸ್ಕೃತಿಯನ್ನು ಮರು ಶೋಧಿಸಿ ಅದನ್ನು ನಮ್ಮ ಮುಂದಿನ ಬದುಕಿಗೆ ಅಳವಡಿಸಿಕೊಳ್ಳುವಾಗ ಅದರೊಳಗೆ ಯಾವುದು ಅನುಸರಣಾಯೋಗ್ಯ ಎಂಬುದನ್ನು ಮನಗಂಡು ಆಯ್ದು ಕಟ್ಟಬೇಕಾಗುತ್ತದೆ.

ಸಮಾರೋಪ

ಕನ್ನಡ ಜನಪದ ಸಂಸ್ಕೃತಿ ಅತ್ಯಂತ ಪ್ರಾಚೀನವಾದ ಪರಂಪರೆಯನ್ನು ಹೊಂದಿದ್ದು ಮಹತ್ವದ ಮಾನವೀಯ ಮೌಲ್ಯಗಳನ್ನು ಹೊತ್ತು ತಂದಿದೆ. ದೀರ್ಘಕಾಲದ ನಡೆಯಲ್ಲಿ ಬದಲಾಗುತ್ತಾ ಬಂದ ಈ ಸಂಸ್ಕೃತಿಯ ಒಡಲಲ್ಲಿ ಒಳ್ಳೆಯದರ ಜೊತೆ ಕೆಟ್ಟದ್ದು ಸೇರಿ ಬಿಟ್ಟಿದೆ. ಆದರೂ ಅದನ್ನು ಸಂಪೂರ್ಣ ನಿರ್ಲಕ್ಷಿಸಿ ಮುನ್ನಡೆಯುವಂತಿಲ್ಲ. ಆಧುನಿಕತೆಯ ಬದಲಾದ ಈ ಕಾಲಮಾನದಲ್ಲಿ ಮನುಷ್ಯ ಸಮಾಜ ನಿಜವಾಗಿ ಹೊಂದಿರಲೇ ಬೇಕಾದ ಮೌಲ್ಯಗಳು ಕಾಣದಂತಾಗಿವೆ. ಮಾನವೀಯ ಸಂಬಂಧಗಳು ವ್ಯವಹಾರಿಕವಾಗಿವೆ. ಇಂಥ ಸಂದರ್ಭದೊಳಗೆ ರೋಗಗ್ರಸ್ಥ ಈ ಸಮಾಜವನ್ನು ಗುಣಪಡಿಸುವುದು ಹೇಗೆ ಎಂದು ಚಿಂತಿಸುವವರಿಗೆಲ್ಲ ದೊರೆಯಬಹುದಾದ ಪರಿಹಾರೋಪಾಯಗಳೆಂದರೆ ನಮ್ಮ ಪಾರಂಪರಿಕ ಸಮಾಜದ ಮೌಲ್ಯಗಳ ಪುನರುತ್ಥಾನ. ಇದಕ್ಕಿರುವ ಪ್ರಮುಖ ಅಕರಗಳು ಜಾನಪದ ಬದುಕು ಮತ್ತು ವಿವಿಧ ಸೃಜನಶೀಲ ಅಭಿವ್ಯಕ್ತಿಗಳು. ಈ ಉದ್ದೇಶದಿಂದಲೇ ಜಾನಪದವನ್ನು ಸಮಕಾಲೀನ ಸಮಾಜಕ್ಕೆ ಅವ್ಯಯಿಸಿಕೊಳ್ಳುವಾಗ ಗಮನಿಸಬೆಕಾದ ಹಲವಾರು ಮಹತ್ವದ ಸಂಗತಿಗಳ ಬಗ್ಗೆ ಪ್ರಸ್ತುತ ಬರಹದಲ್ಲಿ ಗಮನಸೆಳೆಯಲಾಯಿತು. ಜೊತೆಗೆ ಅವುಗಳನ್ನು ಅಳವಡಿಸಿಕೊಳ್ಳುವಾಗ ಉತ್ತಮ ಮೌಲ್ಯಗಳ ಜೊತೆ ಕೇಡಿನ ಮೌಲ್ಯಗಳೂ ಇರುತ್ತವೆ. ಹಾಗಾಗಿ ಆಯ್ದು ಕಟ್ಟುವಾಗ ತುಂಬಾ ಎಚ್ಚರದಿಂದ ಇರಬೇಕಾಗುತ್ತದೆ. ಜನಪದ ಸಮಾಜದ ಆದಿಮಾ ಮೌಲ್ಯಗಳನ್ನು ಸಮಕಾಲೀನ ಸಮಾಜಕ್ಕೆ ಅಳವಡಿಸಿಕೊಳ್ಳುವುದು ಎಂದರೆ ಆ ಇಡೀ ಸಮಾಜವೊಂದರ ರಚನೆಯನ್ನು ಯಥಾವತ್ತಾಗಿ ಉಳಿಸುವ ವ್ಯರ್ಥ ಪ್ರಯತ್ನವಾಗಬಾರದು. ಹಾಗೇನಾದರೂ ಆದರೆ ಅದು ಜಾನಪದ ಅನ್ವಯಿಕತೆ ಎನಿಸದೆ ಗತ ಸಂಸ್ಕತಿಯ ಗೀಳು ಆಗಿಬಿಡುತ್ತದೆ. ಅಷ್ಟೇ.

                                                                                                           ಡಾ. ಎಸ್. ಎಂ. ಮುತ್ತಯ್ಯ

2 comments:

  1. ಸರ್,
    ತುಂಬಾ ಅಪರೂಪದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೀರಿ. ಒಳ್ಳೆಯ ಪ್ರಯತ್ನ, ಹೀಗೆಯೇ ಮುಂದುವರೆಸಿ.
    ವಿಶ್ವಾಸಗಳೊಂದಿಗೆ,
    ಪ್ರಸನ್ನ

    ReplyDelete
  2. ಕಿಲಾರಿ...ವಿದ್ಯಾರ್ಥಿಗಳು ~ ಕನ್ನಡದ ಮಕ್ಕಳು ಓದ ಬೇಗಾಗಿರುವ ಬ್ಲಾಗ್. ನಾನು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹಾಗೆಯೇ ತಾವು ಒಮ್ಮೆ ಕೆಳಗೆ ನೀಡಿರುವ ನಮ್ಮ ಬ್ಲಾಗ್ ಲಿಂಕ್ ಗೆ ಒಮ್ಮೆ ಭೇಟಿಕೊಡಿ. ಸ್ಪಂದಿಸಿ. http://maithreyatiptur.blogspot.in/2012/11/gundu-thopu-gomalla-and-kaval-lands-of.html ಧನ್ಯವಾದಗಳು ಮನೋಹರ್ ತಿಪಟೂರು

    ReplyDelete