Wednesday 6 January 2016

ಆಗಲೇಬೇಕು ಶಿಕ್ಷಣ ಕ್ರಾಂತಿ*


                 ನಾನು ಈ ಸಭೆಯನ್ನು ಉದ್ದೇಶಿಸಿ ಮಾತನಾಡುವ ಅವಕಾಶವನ್ನು ಬಳಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ  ಮೂರು ಮುಖ್ಯ ವಿಷಯಗಳ ಕಡೆ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ. ಮೊದಲಿಗೆ ಇಂದು ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿರುವ ದೋಷಗಳ ಬಗ್ಗೆ ವಿವರಿಸುತ್ತೇನೆ. ನಂತರ ಈ ವ್ಯವಸ್ಥೆಗಿಂತ ಭಿನ್ನವಾದ ಪರ್ಯಾಯ ಮಾದರಿಗಳನ್ನು ಪರಿಚಯಿಸುತ್ತೇನೆ. ಕೊನೆಯದಾಗಿ ಈ ಹೊಸಮಾದರಿಗಳನ್ನು ನಾವು ಅಳವಡಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಪ್ರಸ್ತಾಪಿಸುತ್ತೇನೆ.
ಇಂದಿನ ನಮ್ಮ ಶಿಕ್ಷಣದ ಸ್ಥಿತಿ-ಗತಿ
ಭಯ ಮತ್ತು ಒತ್ತಡ - ನಾಲ್ಕು ಗೋಡೆಯ ಬಂಧನ, ಹೊರಲಾರದ ಪುಸ್ತಕದ ಚೀಲ, ಅರ್ಥವಾಗದ ವಿಷಯಗಳ ಬೋಧನೆ, ಎಡೆ ಬಿಡದ ಪರೀಕ್ಷೆಗಳ ಸರಮಾಲೆ, ಸಮವಸ್ತ್ರ-ವೇಳಾಪಟ್ಟಿ, ಹೋಮ್ ವರ್ಕ್, ಅತೀ ಹೆಚ್ಚು ಪಠ್ಯಕ್ರಮ, ಪೋಷಕರು ಮತ್ತು ಶಿಕ್ಷಕರ ಒತ್ತಡ
ಭವಿಷ್ಯದ ಅತಂಕ - ಉತ್ತಮ ಸಂಬಳ ತರುವ ಶ್ರಮವಿಲ್ಲದ ಉದ್ಯೋಗ ಪಡೆಯಲೇ ಬೇಕು. ಸ್ಪರ್ಧೆ ಹೆಚ್ಚು. ಅದಕ್ಕಾಗಿ ಉತ್ತಮ ಅಂಕಗಳನ್ನು ಪಡೆಯಬೇಕು. ಏನಾಗುತ್ತೋ ಎನ್ನುವ ಆತಂಕದೊಂದಿಗೆ ಶಾಲೆ ಪ್ರವೇಶ. ಕಛೇರಿ ಕಂಪನಿಯ ಉದ್ಯೋಗಗಳಾಚೆಗಿರುವ ಸಾವಿರಾರು ಉದ್ಯೋಗಗಳ ಬಗ್ಗೆ ಅಸಾಧ್ಯವಾದ ನಿರ್ಲಕ್ಷೆ
ಪಠ್ಯ ಮತ್ತು ಪರೀಕ್ಷಾ ಪ್ರಧಾನ್ಯತೆ : ಪಠ್ಯದಲ್ಲಿ ಇರುವ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಕಂಠಪಾಠದ ರೂಪದಲ್ಲಿ ಒಪ್ಪಿಸುವುದು. ವಿಷಯದಿಂದ ಪಡೆಯಬಹುದಾದ ಲಾಭ ಅಂಕಗಳು. ಆನ್ವಯಿಕತೆ ಗೊತ್ತಿಲ್ಲ. ಗಣಿತದಲ್ಲಿ ೧೦೦ ಅಂಕ ಪುಸ್ತಕದಲ್ಲಿ ಯಾವುದೆ ಲೆಕ್ಕ ಕೊಟ್ಟರು ನಿಂತಲ್ಲೇ ಹೇಳುತ್ತಾರೆ. ಆದರೆ ಮನೆಯ ಸಣ್ಣ ಬಟಾವಡೆ ಲೆಕ್ಕ ಹೇಳಲ್ಲ. ಇನ್ನು ಸಾಮಾಜಿಕ ಕೌಟುಂಬಿಕ ಮೌಲ್ಯಗಳು ಕೂಡ ಕೇವಲ ಪರೀಕ್ಷೆ ಬರೆಯಲೆಂಬಂತೆ ಹೇಳಲ್ಪಡುತ್ತಿವೆ. ೧೦ ನೇ ತರಗತಿ ಒದುವ ಮಕ್ಕಳಿಗೆ ೨-೩ ನೇ ತರಗತಿ ಮಕ್ಕಳಿಗೆ ಇರಬೇಕಾದ ಜ್ಞಾನ ಇರುವುದಿಲ್ಲ.   
ಸ್ವಾತಂತ್ರ ಇಲ್ಲದಿರುವುದು : ಮಕ್ಕಳು ಕಲಿಯುವಂತಹವರು ಎಂಬ ಭಾವನೆಯಿಂದ ಅವರ ಒಳಗಿರುವ ಬೇರೆ ಬೇರೆ ಚಿಂತನೆಗಳಿಗೆ ಅವಕಾಶವಿಲ್ಲ. ನಮ್ಮ ಏಕ ಮುಖಿ ಬೋಧನೆ. ಎಲ್ಲರಿಗೂ ಒಂದೇ ವಿಷಯ ಒಂದೇ ಬೋಧನಾ ವಿಧಾನ. ಮಕ್ಕಳ ಇಷ್ಟಕ್ಕಿಂತ ಪೋಷಕರು ಮತ್ತು ಸಲಹೆಗಾರರ ಇಷ್ಟದಂತೆ  ಪಠ್ಯಗಳ ಆಯ್ಕೆ ಮತ್ತು ಅಭ್ಯಾಸ.
ಬಾಲ್ಯದ ಕಡೆಗಣನೆ : ಮಕ್ಕಳಿಗೆ ಬಾಲ್ಯದ ಆಟ, ಸಂಬಂಧಗಳ ಒಡನಾಟದಿಂದ ಕಲಿಯಬೇಕಾದ ಬದುಕಿನ ಪಾಠಗಳು ಇಲ್ಲವಾಗಿವೆ. ಇದರ ದುಷ್ಪರಿಣಾಮಗಳನ್ನು ಇಂದು ನೋಡುತ್ತಾ ಇದ್ದೇವೆ. ಸಮಾಜೀಕರಣ ಸಾದ್ಯವಾಗಿಲ್ಲ.
ಈ ಎಲ್ಲಾ ಸಂಗತಿಗಳಿಂದ ತಿಳಿದು ಬರುವುದೇನೆಂದರೆ ನಮ್ಮ ಶಿಕ್ಷಣ ಆಸಕ್ತಿ ಮತ್ತು ಅವಕಾಶಗಳಿಗೆ ಅನುಗುಣವಾಗಿ ಇರಬೇಕಿತ್ತು ಅದರೆ ಆಸೆ ಮತ್ತು ಅಗತ್ಯಗಳಿಗಾಗಿ ಇದೆ. ಇದರಿಂದ ನಮ್ಮ ಶಿಕ್ಷಣದ ಉದ್ದೇಶಗಳು ಪೂರ್ಣವಾಗಿ ಈಡೇರುತ್ತಿಲ್ಲ. ಶಿಕ್ಷಣದಿಂದ ಪಡೆಯಬೇಕಾದ ಲಾಭಗಳು ಯಾವ ದೃಷ್ಟಿಯಿಂದಲೂ ದೊರೆಯುತ್ತಿಲ್ಲ.   ಉದಾ : ಶಿಕ್ಷಣದಿಂದ ನಮಗೆ ಬದುಕಿನ ಕೌಶಲ್ಯಗಳು ದೊರೆತವೆ ಎಂದರೆ ಖಂಡಿತಾ ಇಲ್ಲ. ಹೆಚ್ಚು ಕಲಿತಿರುವ ವೃತ್ತಿ ಕೌಶಲ್ಯಗಳಿಂದ ಎಲ್ಲರಿಗೂ ಉದ್ಯೋಗ ಸಿಕ್ಕಿತೆ ಎಂದರೆ ಅದೂ ಇಲ್ಲ. ಉದ್ಯೋಗ ಸಿಕ್ಕ ಕೆಲವರಾದರೂ ಸುಖದ ಬದುಕನ್ನು ಬದುಕುತ್ತಾರೆಯೇ ಎಂದರೆ ಇಲ್ಲವೇ ಇಲ್ಲ. ಒಟ್ಟಾರೆ ನಮ್ಮ ಶಿಕ್ಷಣ ವ್ಯವಸ್ಥೆಯ ಮಕ್ಕಳ ಮತ್ತು ಪೋಷಕರು ಕೊನೆಯಲ್ಲಿ ಒಂದು ರೀತಿಯ ಹತಾಶೆ ಮತ್ತು ನಿರಾಸೆಗಳಿಗೆ ಒಳಗಾಗಿರುವುದನ್ನು ಕಾಣುವಂತಾಗಿದೆ.
ನನ್ನ ಈ ಅಭಿಪ್ರಾಯಗಳನ್ನು ಸಮರ್ಥಿಸಲು ಮೂರು ಮಹಾನ್ ವ್ಯಕ್ತಿಗಳ ಅಭಿಪ್ರಾಯಗಳನ್ನು ಉಲ್ಲೇಖಿಸುತ್ತೇನೆ.
೧. ಪುಸ್ತಕದಲ್ಲಿರುವುದನ್ನು ಕಲಿಸುವುದು ಶಿಕ್ಷಣವಲ್ಲ. ಮಾನವನಲ್ಲಿ ಉದುಗಿರುವ ಜ್ಞಾನ ಪ್ರಜ್ವಲಿಸುವಂತೆ ಮಾಡುವುದೇ ಶಿಕ್ಷಣ- ಸ್ವಾಮಿ ವಿವೇಕಾನಂದ

೨. ವಿದ್ಯಾರ್ಥಿಗಳು ಭತ್ತ ತುಂಬುವ ಕಣಜಗಳಾಗದೆ ಬತ್ತ ಬೆಳೆಯುವ ಗದ್ದೆಗಳಾಗಬೇಕು- ಕುವೆಂಪು 
೩. ಮಾಹಿತಿಯನ್ನು ನೀಡುವುದು ಶ್ರೇಷ್ಟ ಶಿಕ್ಷಣವಲ್ಲ. ಶಿಕ್ಷಣದಲ್ಲಿ ಸ್ವಾತಂತ್ರ್ಯ ಮುಖ್ಯ. ಅಜ್ಞಾನದಿಂದ, ತೀವ್ರ ವ್ಯಾಮೋಹಗಳಿಂದ ಸ್ವತಂತ್ರಗೊಳಿಸುವುದು ನಿಜವಾದ ಶಿಕ್ಷಣ. ಜಗತ್ತಿನ ಎಲ್ಲಾ ಜೀವಿಗಳ ಜೊತೆ ಸಾಮರಸ್ಯದಿಂದ ಇರುವುದನ್ನು ಕಲಿಸುವುದೇ ಶಿಕ್ಷಣ - ರವೀಂದ್ರನಾಥ ಠ್ಯಾಗೂರ್

ಶಿಕ್ಷಣದಿಂದ ಇಂಥ ನಿಜವಾದ ಫಲಿತಗಳನ್ನು ಪಡೆಯಲು ಸಾಧ್ಯವಾಗಿಲ್ಲದಿರುವುದಕ್ಕೆ ಮೇಲೆ ವಿವರಿಸಿದಂತಹ ನಮ್ಮ ಶಿಕ್ಷಣ ಪದ್ಧತಿ. ಅದಕ್ಕೆ ಪೂರಕವಾದ ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಪ್ರಮುಖ ಕಾರಣವಾಗಿವೆ.
ಹಾಗಾದರೆ ನಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ಅನುಸರಿಸಬೇಕಾಗಿರುವ ಮಾದರಿಗಳ್ಯಾವುವು?
’ಮನೆಯೇ ಮೊದಲ ಪಾಠ ಶಾಲೆ’, ’ಮಕ್ಕಳ ಸ್ಕೂಲ್ ಮನೇಲಿಲ್ಲವೆ’ ಎನ್ನುವ ಮಾತುಗಳನ್ನು ನಾವು ಕೇಳುತ್ತಾ ಬಂದಿದ್ದೇವೆ.
ಮಕ್ಕಳ ಕಲಿಕೆ ಎನ್ನುವುದು ಒತ್ತಡ-ಭಯ-ನಿರ್ಬಂಧದಲ್ಲಿ ಸಾಧ್ಯವಾಗುವುದಿಲ್ಲ. ಪಠ್ಯಗಳು ಅಂಕಗಳಿಸುವ ಮಾಹಿತಿ ಯಾಗುವುದಕ್ಕಿಂತ ಬದುಕನ್ನು ನಡೆಸಲು ಬೇಕಾಗುವ ವೃತ್ತಿ ಮತ್ತು ಜೀವನ ಕೌಶಲ್ಯಗಳನ್ನು ಕಲಿಸಬೇಕಿದೆ. ಮಕ್ಕಳು ತಮ್ಮ ಆಸಕ್ತಿ ಕ್ಷೇತ್ರಗಳ ಕಡೆ ನಡೆಯಲು ಅವಕಾಶವಿರಬೇಕು. ಈಗಾಗಲು ಸಾಧ್ಯವಾಗಬೇಕಾದರೆ ಮನೆಯೆ ಮಕ್ಕಳಿಗೆ ಉತ್ತಮ ಪಾಠಶಾಲೆಯಾಗಬೇಕು. ಇಲ್ಲವೇ ಶಾಲೆಯೇ ಮನೆಯಾಗಬೇಕು. 
ಇದಕ್ಕೆ ಕೆಲವು ಮಾದರಿಗಳನ್ನು ಹೇಳುವುದಾದರೆ : ಮೊದಲಿಗೆ ಜಪಾನಿನ ಒಂದು ಉದಾಹರಣೆ
ಜಪಾನಿನ ‘ತೊಮೊಯೆ’ 
ಜಪಾನ್ ದೇಶದಲ್ಲಿ ವಸಾಹತುಶಾಹಿಯ ಕೊಡುಗೆಯಾದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಬಹಳಷ್ಟು ಕಟ್ಟುಪಾಡುಗಳ ನಡುವೆ ಕಲಿಯುತ್ತಿದ್ದಾಗ.  ಇದಕ್ಕೆ ಪರ್ಯಾಯವಾಗಿ ಶಾಲೆಯನ್ನು ರೂಪಿಸಲು ಶ್ರಮಿಸಿದವರು ’ಕೊಬಯಾಶಿ’. ಮಕ್ಕಳನ್ನು ಮಕ್ಕಳ ಹಾಗೆಯೇ ಬೆಳೆಸಬೇಕು, ರೇಸ್ ಕುದುರೆಗಳಂತಲ್ಲ! ಕಲಿಕೆ ಎಂಬುದು ಸ್ವಚ್ಚಂದವಾಗಿ ಮಕ್ಕಳು ಆಹ್ಲಾದಿಸಬೇಕೇ ಹೊರತು ಒತ್ತಾಯದಿಂದ ಓದುವುದಲ್ಲ ಎಂದು ನಂಬಿದ್ದ ಅವರು, ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಪ್ರಪಂಚದ ಅನೇಕ ಶಾಲೆಗಳಿಗೆ ಭೇಟಿ ನೀಡಿ, ತಮ್ಮ ಶಾಲೆ ಹೇಗಿರಬೇಕು? ಎಂಬುದರ ಬಗ್ಗೆ ಖಚಿತ ಅಭಿಪ್ರಾಯ ಹೊಂದಿ ‘ತೊಮೊಯೆ’ ಎಂಬ ಶಾಲೆಯನ್ನು ಪ್ರಾರಂಭಿಸುತ್ತಾರೆ. ‘ತೊಮೊಯೆ’ ಶಾಲೆಯ ಕಟ್ಟಡವೇ ಅತ್ಯಂತ ಸೊಗಸು. ರೈಲು ಗಾಡಿಗಳದ್ದು! ಇಂತಹ ಕಲ್ಪನೆಯಾದರೂ ನಮಗೆ ಬರಬಹುದೇ? ಪುಟ್ಟ, ಪುಟ್ಟ ಮಕ್ಕಳಿಗೆ ರೈಲಿನ ಪ್ರಯಾಣ ಎಂದರೆ ಬಹಳ ಇಷ್ಟವಲ್ಲವೇ? ಇನ್ನೂ ಅಂತಹ ರೈಲು ಗಾಡಿಯೇ ಶಾಲೆಯಾಗಿಬಿಟ್ಟರೆ? ಓದಿನ ಸುಖ! ಆಹಾ! ಮಧ್ಯಾಹ್ನದ ಆ ಮಕ್ಕಳ ಊಟವಂತೂ ನಿಜಕ್ಕೂ ಚಂದ. ‘ಒಂದಿಷ್ಟು ನೆಲದ್ದು, ಒಂದಿಷ್ಟು ಜಲದ್ದು’ ತೆಗೆದುಕೊಂಡು ಬರಬೇಕು ಮತ್ತು ಊಟಕ್ಕೂ ಮುನ್ನಾ ಅವರ ಪಾರ್ಥನೆ ‘ಅಗಿಯಿರಿ, ಅಗಿದು ತಿನ್ನಿರಿ’ ಎನ್ನುವ ಪುಟ್ಟ ಪದ್ಯವಾಗಿರುತ್ತದೆ. ಊಟವಾದ ನಂತರ ಮಕ್ಕಳ ಇಷ್ಟದ ಹಾಗೇ ವಾಕಿಂಗ್ ಅಥವಾ ಈಜುವುದೋ ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಮೇರಿಕಾದಿಂದ ಪುಟ್ಟ ಹುಡುಗನೊಬ್ಬ ಈ ಶಾಲೆಗೆ ಬಂದು ಸೇರುತ್ತಾನೆ. ಅವನಿಗೆ ಈ ಮಕ್ಕಳು ಜಪಾನೀಸ್ ಕಲಿಸುವುದು, ಆತನಿಂದ ಇಂಗ್ಲೀಷ್ ಭಾಷೆ ಕಲಿಯುತ್ತಾ ಹೋಗುತ್ತಾರೆ. ಅಂಗವಿಕಲರು, ಹೆಣ್ಣು ಮಕ್ಕಳು, ಗಂಡು ಮಕ್ಕಳು, ಜಪಾನೀಯರು, ಅಮೇರಿಕನ್ನರು ಎನ್ನುವ ಬೇಧಭಾವವಿಲ್ಲದೇ ಕಲಿಯುತ್ತಿದ್ದರು, ಯಾರಿಗೂ ಕೂಡ ಮುಜುಗರವಾಗದಂತಹ, ಎಲ್ಲರಲ್ಲೂ ಆತ್ಮವಿಶ್ವಾಸ ಉಕ್ಕುವಂತಹ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಸಂಗೀತ ಕಲಿಯುತ್ತಿದ್ದರು, ಬೇಸಿಗೆಯಲ್ಲಿ ಕ್ಯಾಂಪು ಹಾಕುತ್ತಿದ್ದರು, ಪ್ರವಾಸಕ್ಕೆ ಹೋಗುತ್ತಿದ್ದರು, ಶಾಲೆಯಲ್ಲಿಯೇ ‘ನೈಟ್ ಔಟ್’ ಮಾಡುತ್ತಿದ್ದರು, ಅಡುಗೆ ಮಾಡುತ್ತಿದ್ದರು, ಇಷ್ಟವಿದ್ದವರು ವಿಜ್ಞಾನ ಪ್ರಯೋಗಗಳಲ್ಲಿ ತೊಡಗುತ್ತಿದ್ದರು ಹೀಗೆ?.. ಮಗುವೊಂದು ‘ದೊಡ್ಡವ’ನಾಗಿ ಬೆಳೆಯಲು ಬೇಕಾದ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಮಕ್ಕಳು ಅದನ್ನೊಂದು ಶಿಕ್ಷೆ ಎಂಬಂತೆ ಅನುಭವಿಸದೇ, ಆನಂದದಿಂದ ‘ದೊಡ್ಡವ’ರಾಗುತ್ತಿದ್ದರು.
ಗುಜರಾತಿನ ‘ಬಾಲಮಂದಿರ’
ಗುಜರಾತಿನ ಮಹಾನ್ ಶಿಕ್ಷಣ ತಜ್ಜ ಹಾಗೂ ಮಕ್ಕಳ ಶಿಕ್ಷಕ ಗೀಜುಭಾಯಿ ಬಾಧೆಕಾ ೧೯೨೦ ರಲ್ಲಿ ಸ್ಥಾಪಿಸಿದ ಶಾಲೆ ಇದು. ಮಕ್ಕಳಿಗೆ ಸುತ್ತ-ಮುತ್ತಲಿನ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳುವಳಿಕೆ ಮೂಡಿಸದಂಥ ಯಾವ ಶಿಕ್ಷಕನೂ ಇರಲಾರ. ಆದರೆ ಶಾಲಾ ಸಂಸ್ಕೃತಿ ಹೇಗಾಗಿದೆಯೆಂದರೆ ಕ್ರಿಮಿ-ಕೀಟಗಳಿಂದ ಹಿಡಿದು ನಕ್ಷತ್ರಗಳವರೆಗಿನ ಎಲ್ಲ ವಸ್ತು-ವಿಷಯಗಳನ್ನು ತರಗತಿ ಹೊರಗಿನ ವಿಷಯಗಳೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ಶಿಕ್ಷಕ ತನ್ನ ಕೆಲಸ ಪಠ್ಯಕ್ರಮವನ್ನು ಮುಗಿಸುವುದು ಹಾಗೂ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದಕ್ಕೆ ಮಾತ್ರ ಸೀಮಿತವೆಂಬ ನಂಬಿಕೆಯನ್ನು ಹೊಂದಿರುತ್ತಾನೆ. ಮಕ್ಕಳ ಕುತೂಹಲ, ಉತ್ಸುಕತೆ, ಇವುಗಳನ್ನು ವಿಕಾಸಗೊಳಿಸುವುದು ತನ್ನ ಕೆಲಸವೂ ಅಲ್ಲ. ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಪರಿಸ್ಥಿತಿಗಳೂ ಶಾಲೆಯಲ್ಲಿ ಇಲ್ಲವೆಂದು ತಿಳಿಯುತ್ತಾನೆ. ಆದರೆ ಶಿಕ್ಷಣದಲ್ಲಿ ಪರಿವರ್ತನೆ ತರುವ ಭಾಗವಾಗಿ ಶಿಕ್ಷಣ ಶಾಸ್ತ್ರದ ಸಾರವೆಂದರೆ ಮಕ್ಕಳಿಗೆ ಸ್ವಾತಂತ್ರ್ಯಹಾಗೂ ಸ್ವಾವಲಂಬನೆಯ ಪರಿಸ್ಥಿಯನ್ನು ಒದಗಿಸುವುದು ಎಂದು ನಂಬಿದ ಗೀಜುಬಾಯಿ ಅವರು ತಮ್ಮ ‘ಬಾಲಮಂದಿರ’ವನ್ನು ಸ್ಥಾಪಿಸಿ ತಮ್ಮ ಕನಸಿಗೆ ಒಂದು ಶಾಶ್ವತ ನೆಲೆಗಟ್ಟನ್ನು ಹಾಕಿದರು. 
ಬಾಲವನ, ಪುತ್ತೂರು
 ನಮ್ಮ ರಾಜ್ಯದಲ್ಲಿ ಇಲ್ಲಿಗೆ ೭೦ ವರ್ಷಗಳ ಹಿಂದೆಯೇ ಈ ರೀತಿಯ ಶಾಲೆಯನ್ನು ರೂಪಿಸುವ ಪ್ರಯತ್ನಮಾಡಿದರು. ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಸುತ್ತಿರುವ ಬಾಲಭವನ ಅಂಥದ್ದೊಂದು ಶಾಲೆ. ಮಕ್ಕಳಿಗೆ ಒಣ ಶಿಕ್ಷಣವನ್ನು ನೀಡದೆ ಜ್ಞಾನವಷ್ಟೇ ಅಲ್ಲದ ಅರಿವು ನೀಡುವ ಸಂವೇದನಾಶೀಲ ಶಿಕ್ಷಣ ಬೇಕೆಂದು ಕಾರಂತರ ನಂಬಿಕೆಯಾಗಿತ್ತು ಈ ಹಿನ್ನೆಲೆಯೊಳಗೆ ಬಾಲವನ ಶಾಲೆ ತೆರದು ಅಲ್ಲಿ ಮಕ್ಕಳ ಸ್ವಚ್ಛಂಧ ಕಲಿಕೆಗೆ ಅವಕಾಶ ಕಲ್ಪಿಸಿದ್ದರು. ವಿವಿಧ ಕ್ಷೇತ್ರಗಳ ಪರಿಣಿತರು, ಕಲಾವಿದರು ಅಲ್ಲಿಗೆ ಬಂದು ಹೋಗುತ್ತಿದ್ದರು. ಅವರ ಜೊತೆ ಬೆರತು ಪಠ್ಯದ ಆಚೆಗಿನ ಅನೇಕ ಸಂಗತಿಗಳನ್ನು ಕಲಿಯುತ್ತಿದ್ದರು.(ಕಾರಂತರ ಮಕ್ಕಳಾದ ಕ್ಷಮಾರಾವ್ ಮತ್ತು ಉಲ್ಲಾಸ್ ಕಾರಂತ ಕೂಡ ಕಲಿತದ್ದು ಇಲ್ಲಿಯೇ)
ಬಾಲಬಳಗ, ಧಾರವಾಡ
  ಧಾರವಾಡದ ಡಾ. ಸಂಜೀವ ಕುಲಕರ್ಣಿ ಅವರು ಮಕ್ಕಳ ಕೇಂದ್ರಿತ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ೨೦೦೦ ದಲ್ಲಿ ಆರಂಭವಾಗಿರುವ ಶಾಲೆ ಇದು.  ೩ ಮಕ್ಕಳಿಂದ ಆರಂಭವಾಗಿ ಈಗ ೩೩೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ೫-೧೦ ನೇ ತರಗತಿ ಮಕ್ಕಳು ಇಲ್ಲಿ ಓದುತಿದ್ದಾರೆ. ಈ ಶಾಲೆಯ ರಚನೆಯೇ ಬೇರೆ- ಬಾಗಿಲಲ್ಲದ ಕೊಠಡಿಗಳು, ಜೋಕಾಲಿ, ಜಾರುಬಂಡೆ, ಬಯಲು ರಂಗಮಂದಿರ, ಮಕ್ಕಳೆ ಮಾಡಿದ ಗೊಂಬೆಗಳು, ಪಾಠಕ್ಕಿಂತ ಆಟಕ್ಕೆ ಇಲ್ಲಿ ಹೆಚ್ಚಿನ ಮಾನ್ಯತೆ. ರಾಜ್ಯ ಪಠ್ಯಕ್ರಮವನ್ನೇ ಅಳವಡಿಸಿಕೊಳ್ಳಲಾಗಿದ್ದು, ಬೋಧನಾ ವಿಧಾನದಲ್ಲಿ ಹೊಸತನವಿದೆ. ಇಲ್ಲಿ ಪಾಠ ಮಾಡುವ ಶಿಕ್ಷಕರು ಗುರುಗಳಿಗಿಂತ ಹೆಚ್ಚಾಗಿ ಮಾನವೀಯ ರಕ್ತ ಸಂಬಂಧದ ನೆಲೆಯಲ್ಲಿ ಅಕ್ಕ-ಅಣ್ಣ-ಮಾಮ-ಅಮ್ಮ ರಾಗಿಯೇ ಇರುತ್ತಾರೆ. ಶುದ್ಧ ಮನೆಯ ವಾತಾವರಣ. ಇಲ್ಲಿ ಸಮವಸ್ತ್ರದ ಕಟ್ಟುಪಾಡಿಲ್ಲ. ಪರೀಕ್ಷೆಗಳ ಭಯವಿಲ್ಲ, ಮನೆಗೆಲಸದ ಒತ್ತಡವಿಲ್ಲ, ಡೊನೇಷನ್ ಇಲ್ಲ. ಇಲ್ಲಿ ಹೊಸದಾಗಿ ಬರುವ ಶಿಕ್ಷಕರು ಮೊದಲು ಮೂರು ತಿಂಗಳು ಮಕ್ಕಳ ನಡುವೆ ಕುಳಿತು ತಾವು ಪಾಠ ಕೇಳಿಸಿಕೊಳ್ಳುತ್ತಾ ಕಲಿಸುವ ಕ್ರಮಗಳನ್ನು ಕಲಿತು ನಂತರ ಮಕ್ಕಳಿಗೆ ಬೋಧಿಸುತ್ತಾರೆ.
ಕಲಿಯುವ ಮನೆ, ಮೈಸೂರು 
 ಎಂ ಆರ್. ಅನಂತಕುಮಾರ್ ಅವರು ೨೦೦೫ರಲ್ಲಿ ಅರಂಭ ಮಾಡಿರುವ ಶಾಲೆ ಇದು. ೧೪ ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ  ಈಗ ೧೨೦ ವಿದ್ಯಾರ್ಥಿಗಳು. ಇಲ್ಲಿಯೂ ಕಲಿಕಾ ಮಾರ್ಗ ಭಿನ್ನ. ಮಗುವಿನ ಸಾಮರ್ಥ್ಯದ ಅನುಸಾರ ಬೋಧನೆ. ಇಲ್ಲಿ ತರಗತಿಗಳಿಲ್ಲ. ಬದಲಿಗೆ ಗುಂಪುಗಳಿವೆ. ಪಾಸು ಫೇಲಿನ ಕಿರಿ ಕಿರಿ ಇಲ್ಲ. ಅಂಕಗಳ ಗೊಡವೆ ಇಲ್ಲ. ಮಾಧ್ಯಮದ ಗೊಂದಲ ಇಲ್ಲ. ಪ್ರತೀ ಉತ್ತಮ ಕಲಿಕೆಗೆ ಬಹುಮನ ಸಿಗುತ್ತದೆ. ಶಿಕ್ಷೆಯ ಸುಳಿವಿಲ್ಲ. ಮಾತೃ ಭಾಷೆಯಲ್ಲಿಯೇ ಕಲಿಕೆ, ತರಗತಿಯಿಂದ ಇಂಗ್ಲೀಷ್‌ಗೆ ಒತ್ತು. ಇಲ್ಲಿ ಅನೌಪಚಾರಿಕ ಶಿಕ್ಷಣ ಪಡೆದು ನೇರವಾಗಿ ೧೦ ನೇ ತರಗತಿ ಪರೀಕ್ಷೆ. ಈ ವಿದ್ಯಾರ್ಥಿಗಳ ಫಲಿತಾಂಶ ೧೦೦% 
        ಇದೇ ಸ್ವರೂಪದಲ್ಲಿ ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂಥ ಸುಮಾರು ೧೫ ಶಾಲೆಗಳು ಕಾರ್ಯ ನಿರ್ವವಹಿಸುತ್ತಿವೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದರೆ : ಸೆಂಟರ್ ಫಾರ್ ಲರ್ನಿಂಗ್, ಬೆಂಗಳೂರು, ಆರೋಹಿ ಲೈಪ್ ಸ್ಕೂಲ್, ಬೆಂಗಳೂರು, ಪೂರ್ಣಪ್ರಜ್ಞಾ, ಮೈಸೂರು, ಶಿಭೂಮಿ, ಬೆಂಗಳೂರು, ದಿ ವ್ಯಾಲಿ ಸ್ಕೂಲ್, ಬೆಂಗಳೂರು, ಇತ್ಯಾದಿ.
ಈ ರೀತಿಯ ಮಕ್ಕಳ ಸ್ನೇಹಿ ಶಾಲೆಗಳನ್ನು ಎಲ್ಲ ಕಡೆಯೂ ತೆರೆಯುವುದು ಅಸಾಧ್ಯವಾಗಬಹುದು ಆದರೆ ಅಂಥ ಶಾಲೆಗಳ ಮೂಲ ತತ್ವಗಳೇನಿವೆ ಅವುಗಳನ್ನು ನಮ್ಮ ಸಾಂಪ್ರದಾಯಿಕ ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಗಲೇ ಬೇಕಿರುವ ಕ್ರಾಂತಿಗೆ ಕಾರಣರಾಗಬೇಕು. ಆ ಮೂಲಕ ಮಕ್ಕಳ ಕಲಿಕೆಯನ್ನು ಸುಗಮ ಹಾಗೂ ಅರ್ಥ ಪೂರ್ಣಮಾಡುವುದರ ಮೂಲಕ ನಿಜವಾದ ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ಹೀಗಾದರೆ ಮಕ್ಕಳು ಯಾವುದನ್ನೂ ಕಳೆದುಕೊಳ್ಳದೆ ಪಡೆಯ ಬೇಕಾದುದನ್ನು ನಿಸ್ಸಂಶಯವಾಗಿ ಪಡೆಯುತ್ತಾರೆ. ಆಗ ನಮ್ಮನ್ನು ಕಾಡುತ್ತಿರುವ ವರ್ತಮಾನದ ಸಂಕಟ ಮತ್ತು ಭವಿಷ್ಯದ ಆತಂಕ ಇಲ್ಲವಾಗುತ್ತದೆ. ಮಕ್ಕಳು ನೆಮ್ಮದಿಯ, ಸಮಾನತೆಯ ಸದೃಢಸಮಾಜದ ಸತ್ಪ್ರಜೆಗಳಾಗುತ್ತಾರೆ.  
            ಹೀಗೆ ಹೇಳುತ್ತಾ ಅಮೇರಿಕಾದ ಅಧ್ಯಕ್ಷರಾಗಿದ್ದ ಮಹಾನ್ ಮಾನವತಾವಾದಿ ಅಬ್ರಾಹಂ ಲಿಂಕನ್ ತನ್ನ ಮಗನ ಮೇಸ್ಟ್ರಿಗೆ ಬರದ ಪತ್ರದ ಕೆಲವು ಸಾಲಗಳನ್ನು ಮತ್ತು ಸಮಾನತೆಯ ಕನಸುಗಾರ ಸಿರಿಯಾದ ಕವಿ ಖಲೀಲ್ ಗಿಬ್ರಾನ್ ಅವರು ಬರೆದಿರುವ ಕವನದ ಒಂದೆರಡು ಸಾಲುಗಳನ್ನು ನಿಮ್ಮ ಮುಂದೆ ಓದಿ ನನ್ನ ಮಾತು ಮುಗಿಸುತ್ತೇನೆ.
 ಎಲ್ಲರೂ ಸತ್ಯವಂತರಲ್ಲ ಎಂಬುದನ್ನು ನಾನು ಬಲ್ಲೆ.
ಪ್ರತಿಯೊಬ್ಬ ಮುಠ್ಠಾಳನಿಗೆ ಪ್ರತಿಯಾಗಿ ಒಬ್ಬ ಧಿರೋದಾತ್ತ 
ಪ್ರತಿಯೊಬ್ಬ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತ ನಾಯಕ 
ಪ್ರತಿಯೊಬ್ಬ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರ ಇರುವನು ಎಂಬುದನ್ನು ಕಲಿಸು.
ಗಳಿಸಿದ ಒಂದು ಡಾಲರು ಸಿಕ್ಕ ಐದು ಡಾಲರುಗಳಿಗಿಂತ ಬೆಳೆಯುಳ್ಳದ್ದು ಎಂಬುದನ್ನು ಕಲಿಸು.
ಸೋಲುವುದನ್ನು ಕಲಿಸು, ಗೆಲುವಿನಲ್ಲಿ ಹರ್ಷಿಸುವುದನ್ನು ಕಲಿಸು.
ಪುಸ್ತಕಗಳ ಅದ್ಭುತವನ್ನು ಅವನಿಗೆ ಕಲಿಸು.
ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು ಧ್ಯಾನಿಸಲು ಅವನಿಗೆ ಬಿಡುವು ಮಾಡಿಕೊಡು.
ಶಾಲೆಯಲ್ಲಿ ವಂಚಿಸುವುದಕ್ಕಿಂತ ಫೇಲಾಗುವುದು ಹೆಚ್ಚು ಗೌರವಯುತ ಎಂಬುದನ್ನು ಕಲಿಸು.
ಎಲ್ಲರು ತಪ್ಪೆಂದಾಗ ತನ್ನ ವಿಚಾರಗಳಲ್ಲಿ ಅವನು ನಂಬಿಕೆ ಉಳಿಸಿಕೊಳ್ಳಲು ಕಲಿಸು.
ನಯದ ಜನರಲ್ಲಿ ವಿನಯದಿಂದ ಮತ್ತು ಒರಟರಲ್ಲಿ ಒರಟುತನದಿಂದ ನಡೆಯುವುದನ್ನು ಕಲಿಸು.
ಬೆವರು ಬುದ್ಧಿಗಳನ್ನು ಹೆಚ್ಚು ಬೆಲೆ ತೆರವುವನಿಗೆ ಮಾರುವುದನ್ನು
ತನ್ನ ಹೃದಯ ಮತ್ತು ಆತ್ಮಕ್ಕೆ ಬೆಲೆಯ ಚೀಟಿಯನ್ನು ಎಂದಿಗೂ ಅಂಟಿಸದಿರುವುದನ್ನು ಕಲಿಸು
ಬೇಸರಗೊಂಡಾಗ ನಗುವುದನ್ನು, ಕಣ್ಣೀರಿನಲ್ಲಿ ಅವಮಾನವಿಲ್ಲ ಎಂಬುದನ್ನು ಕಲಿಸು
                                                                               - ಅಬ್ರಹಾಂ ಲಿಂಕನ್ ಮಗನ ಮೇಷ್ಟ್ರಿಗೆ ಬರೆದ ಪತ್ರದ ಭಾಗ 
                                                                              (೧೮೫೮-೧೮೬೨ ರ ವರಗೆ ಅಮೇರಿಕಾದ ಅಧ್ಯಕ್ಷರಾಗಿದ್ದರು)
        ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ಜೀವನ ಸ್ವ-ಪ್ರೇಮದ ಪುತ್ರ-ಪುತ್ರಿಯರು
  ಅವರು ನಿಮ್ಮ ಜೊತೆಗೆ ಇರುವರಾದರೂ ನಿಮಗೆ ಸೇರಿದವರಲ್ಲ
  ಅವರಿಗೆ ನೀವು ನಿಮ್ಮ ಪ್ರೀತಿಯನ್ನು ನೀಡಬಹುದಾದರೂ ನಿಮ್ಮ ಆಲೋಚನೆಗಳನ್ನಲ್ಲ
        ಅವರಂತಿರಲು ನೀವು ಪ್ರಯತ್ನಿಸಬಹುದು. ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸದಿರಿ 
        ಜೀವನದಿ ಹಿಮ್ಮುಖವಾಗಿ ಹರಿಯದಿರಲಿ 
                                                                                            - ಖಲೀಲ್ ಗಿಬ್ರಾನ್,   ಸಿರಿಯಾ ದೇಶದ ಕವಿ
  ಲಿಂಕನ್ ಅವರ ಮಾತುಗಳನ್ನು ಶಿಕ್ಷಕರು, ಗಿಬ್ರಾನ್ ಅವರ ಮಾತುಗಳನ್ನು ಪೋಷಕರು ಅನುಸರಿಸೋಣ ನಮ್ಮ ಮಕ್ಕಳ ನಿಜವಾದ ಭವಿಷ್ಯವನ್ನು ರೂಪಿಸೋಣ.

                                                                                                                                ಡಾ. ಎಸ್.ಎಂ. ಮುತ್ತಯ್ಯ

No comments:

Post a Comment