Sunday 12 July 2020

ಇಹಲೋಕ ತ್ಯಜಿಸಿದ ಕಿಲಾರಿ ಬೋರಯ್ಯ


ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿಯ ಮ್ಯಾಸಬೇಡರ ಸಾಂಸ್ಕೃತಿಕ ಪ್ರತಿನಿಧಿ, ಅಪ್ಪಟ ಪಶುಪಾಲಕ ಕಿಲಾರಿ ಬೋರಯ್ಯ ಮೊನ್ನೆ (೦೯.೦೭.೨೦೨೦  ರ ಗುರುವಾರ ರಾತ್ರಿ ೯ ಗಂಟೆ ಸುಮಾರಿಗೆ) ನಿಧನರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ. ಅವರ ಸ್ವಗ್ರಾಮ ನಲಗೇತಹಟ್ಟಿಯ ಅವರ ನೆಂಟರ ಹೊಲದಲ್ಲಿ ಮ್ಯಾಸಬೇಡರ ಸಂಸ್ಕೃತಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಈ ಅಂತ್ಯಕ್ರಿಯೆಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ ಕಾರಣ ನಾನು ಶಿವಮೊಗ್ಗದಲ್ಲಿ ಕೊರೋನಾ ವಾರಿಯರ್ ( ಇನ್ಸಿಡೆಂಟ್ ಕಮ್ಯಾಂಡರ್) ಆಗಿ ಕರ್ತವ್ಯದಲ್ಲಿ ಇದ್ದೇನೆ. ಇದಕ್ಕಾಗಿ ದಿ. ಬೋರಯ್ಯ ಅವರ ಆತ್ಮಕ್ಕೆ ಕ್ಷಮೆ ಕೇಳುತ್ತೇನೆ. ಬೋರಯ್ಯ ನನಗೆ ಹತ್ತಿರದ ಬಂಧು ಸಂಬಂಧದ ವರಸೆಯಲ್ಲಿ ಮಾವನಾಗಬೇಕು. ನಾನು ಇವರನ್ನು ತುಂಬಾ ಗೌರವಿಸುತ್ತಿದ್ದುದು ನನ್ನ ಬಂಧು ಎನ್ನುವುದಕ್ಕಿಂತ ನಮ್ಮ ಸಂಸ್ಕೃತಿಯಲ್ಲಿ ಪ್ರಚಲಿತವಿರುವ ದೇವರೆತ್ತುಗಳನ್ನು ಕಾಯುವ ಕಿಲಾರಿಯಾಗಿ ಮಾಡಿದ ನಿಷ್ಟೆಯ ಸೇವೆಗಾಗಿ, ಮತ್ತೆ ಅವರಲ್ಲಿದ್ದ ಪ್ರಾಮಾಣಿಕತೆ, ಅಪ್ಪಟ ಮಾನವೀಯ ಗುಣ ನಡತೆಗಳಿಗಾಗಿ.


ಇಲ್ಲಿಗೆ ೨೦ ವರ್ಷಗಳ ಹಿಂದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಕಲಾವಿದರ ನೋವು ನಲಿವು ಎನ್ನುವ ವಿಶಿಷ್ಟ ಯೋಜನೆಗೆ ನನ್ನ ಗುರುಗಳಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಸೂಚನೆಯಂತೆ ಕಿಲಾರಿ ಬೋರಯ್ಯನವರ ಆತ್ಮ ಕಥೆಯನ್ನು ನಿರೂಪಿಸಿದ್ದೆ. ಯಾವುದೇ ಅಂಜಿಕೆ, ಮುಚ್ಚುಮರೆಯಿಲ್ಲದೆ ತನ್ನ ಜೀವನ ಚರಿತ್ರೆಯನ್ನು ನನ್ನ ಮುಂದೆ ಹೇಳಿಕೊಂಡಿದ್ದರು. ಅದನ್ನು ನಾನು ಕೇವಲ ಲಿಪಿಕಾರನಾಗಿ ದಾಖಲಿಸಿದ್ದೆ. ಈ ದಾಖಲೆ ಬರೆಹ ಮನದಾಳದ ಕನಸುಗಳು ಎಂಬ ಸಂಪುಟದಲ್ಲಿ ಪ್ರಕಟವಾಯಿತು. ಈ ಬರೆಹ ೬೨ ಪುಟಗಳಷ್ಟು ಸುದೀರ್ಘವಾಗಿದ್ದರೂ ಸಂಪಾದಕರಾದ ಶಿವಣ್ಣ ಸರ್ ಒಂದು ಅಕ್ಷರವೂ ಬಿಡದೇ ಬಳಸಿಕೊಂಡಿದ್ದರು. ಆನಂತರ ಅದನ್ನು ಇನ್ನಷ್ಟು ವಿಸ್ತರಿಸಿ, ಪರಿಷ್ಕಾರ ಮಾಡಿ ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸಿದೆವು. ಈ ಕಾರ್ಯಕ್ಕೆ ಪ್ರೀತಿಯ ಒತ್ತಾಸೆ ತೋರಿ ಪ್ರಕಟಿಸಿ ಕೃತಿ ಹೊರಬರಲು ಕಾರಣರಾದವರು ಸೃಷ್ಟಿ ಪ್ರಕಾಶನದ ಮಾಲಿಕರೂ ನನ್ನ ಆತ್ಮೀಯ ಗೆಳೆಯರು ಆದ ಶ್ರೀ ಸೃಷ್ಟಿನಾಗೇಶ್ ಅವರು. ಆನಂತರ ಗೆಳೆಯರಾದ ಡಾ. ಅರುಣ್ ಜೋಳದ ಕೂಡ್ಲಿಗಿ ಹಾಗು ಡಾ. ರಂಗನಾಥ ಕಂಟನಕುಂಟೆ ಅವರ ಅಭಿಲಾಷೆಯಂತೆ ಅನಿಕೇತನ ಹೆಸರಿನ ಇ-ಪತ್ರಿಕೆಯಲ್ಲಿ ದಾರವಾಹಿಯಾಗಿ ಪ್ರಕಟವಾಯಿತು. ಇಂಥ ಪ್ರಯತ್ನಗಳಿಂದಾಗಿ  ಈ ಬರೆಹದ ಮೂಲಕ ಕಿಲಾರಿ ಬೋರಯ್ಯನ ಸಾಂಸ್ಕೃತಿಕ ಸೇವೆಯನ್ನು ದಾಖಲಿಸಿರುವ ಈ ಕೃತಿ ಕರ್ನಾಟಕ ಮಾತ್ರವಲ್ಲ ದೇಶದ ಬೇರೆ ಬೇರೆ ಭಾಗಗಳಿಗೆ (ಕನ್ನಡ ಭಾಷೆಯ ವ್ಯಾಪ್ತಿಯ ಒಳಗೆ) ತಲುಪಿ ಕನ್ನಡದ ಗಂಭಿರವಾದ ಸಾಂಸ್ಕೃತಿಕ  ಚರ್ಚೆಗಳಲ್ಲಿ ಪ್ರಸ್ತಾಪವಾಯಿತು. ಇದರಿಂದ ಈ ಕೃತಿಯ ಪ್ರತಿಗಳಿಗೆ ಅಪಾರ ಬೇಡಿಕೆ ಬಂತು. ಆದರೆ ಕೃತಿಯ ಪ್ರತಿಗಳ ಮುದ್ರಣವಾದ ಕೆಲವೆ ದಿನಗಳಲ್ಲಿ ಮಾರಾಟ ಆಗಿದ್ದವು. ಇಂಥ ಬೇಡಿಕೆಯ ಮೇಲೆ ಗೆಳೆಯ ಸೃಷ್ಟಿನಾಗೇಶ ಕಳೆದ ನಾಲ್ಕೈದು ವರ್ಷಗಳಿಂದ ಕೃತಿಯನ್ನು ಇನ್ನಷ್ಟು ಹೊಸ ಮಾಹಿತಿಗಳೊಂದಿಗೆ ಪರಿಷ್ಕರಿಸಿ ಕೊಡುವಂತೆ ಒತ್ತಾಯಿಸುತ್ತಲೇ ಇದ್ದರು. ನಾನು ಬೇರೆ ಬೇರೆ ಕೆಲಸಗಳ ಒತ್ತಡದಲ್ಲಿದ್ದ ಕಾರಣ ಅದನ್ನು ಕಾಲಮಿತಿಯೊಳಗೆ ಮಾಡಲಾಗಲಿಲ್ಲ. ಮಾಡಬೇಕೆಂಬ ಆಸೆಯೇನು ಅದಮ್ಯವಾಗಿತ್ತು, ದುರಾದೃಷ್ಟ ಬೋರಯ್ಯ ಅವರು ಯಾವುದೇ ಸುಳಿವು ನೀಡಿದೆ ದಿಢೀರೆಂದು ಈ ಲೋಕ ತ್ಯಜಿಸಿದರು. ಇನ್ನು ಈ ಕೆಲಸವನ್ನು ಹೇಗೆ ಮುಂದುವರಿಸುವುದು ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೇನೆ.
ಕಿಲಾರಿ ಬೋರಯ್ಯ ತಮ್ಮ ಮನೆತನದ  ಧಾರ್ಮಿಕ ಹಕ್ಕುದಾರಕೆಯ ಭಾಗವಾಗಿ ಚಿಕ್ಕ ವಯಸ್ಸಿನಲ್ಲೇ ಕಿಲಾರಿ ಕೆಲಸಕ್ಕೆ ನೇಮಕವಾದವರು. ದೇವರಿಗಾಗಿ ಭಕ್ತರು ಬಿಟ್ಟಿರುವ ಎತ್ತುಗಳನ್ನು ಕಾಯುವುದು, ದೇವರ ಕಾರ್ಯಗಳಲ್ಲಿ ಭಾಗಿಯಾಗುವುದು ಇವರ ಕೆಲಸ. ದೇವರ ಪ್ರತಿನಿಧಿಯಂತೆ ಕಾಣುವ ಕಿಲಾರಿಗೆ ಧಾರ್ಮಿಕವಾಗಿ ಗೌರವವಿದೆಯಾದರೂ ಅವರು ಎತ್ತುಗಳನ್ನು ಕಾಯಲು ಕಾಡಲ್ಲಿ ನಡೆಸುವ ಜೀವನ ಬಹಳ ದುಸ್ತರವಾದುದು. ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಸುಮಾರು ೫೦ ವರ್ಷಗಳ ಕಾಲ ಕಿಲಾರಿ ಕೆಲಸವನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ನಡೆಸಿಕೊಂಡು ಬಂದಿದ್ದರು. ಇವರ ಆತ್ಮಕಥನವನ್ನು ಓದಿದ ಡಾ. ಲೋಕೇಶ್ ಅಗಸನಕಟ್ಟೆ ಅವರು ಬೋರಯ್ಯ ಅವರ ಬಗ್ಗೆ ಹೇಳಿರುವಂತೆ ಈ ಕಥನದ ಕಾರಣ ಪುರಷ ಬೋರಯ್ಯನ ವ್ಯಕ್ತಿತ್ವವಾದರೂ ಹಾಗೇಯೇ ಇದೆ. ಸ್ವಾಭಿಮಾನ, ಶ್ರದ್ದೆ, ಅನನ್ಯ ಭಕ್ತಿ. ಕಾಯಕ ನಿಷ್ಠೆ, ಮತ್ತು ಆತನ ಮುಗ್ಧತೆ ಮತ್ತು ನಿಷ್ಠುರತೆಗಳನ್ನು ನೋಡಿದರೆ, ಆಧುನಿಕತೆಯ ಜೀವನ ಶೈಲಿಯೊಳಗೆ ಬೆರೆತು ಹೋಗಿರುವ ಯಾವ ಕೃತಿಮತೆಗೂ ಅಲ್ಲಿ ಅವಕಾಶವೇ ಇಲ್ಲ. ಹರಳು ಹುರಿದಂತೆ ಮಾತು, ಮತ್ತು ನಡೆ. ಒಂದು ಬುಡಕಟ್ಟು ಸಂಸ್ಕೃತಿ ಹೇಗೆ ಆಧುನಿಕ ಜೀವನಶೈಲಿಗೆ ಮರುಳಾಗಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅರಿವು ಮತ್ತು ವಿಷಾದ  ಎರಡೂ ಬೋರಯ್ಯನಲ್ಲಿ ಕಾಣುವ ಪರಿಗಿಂತ ಮಿಗಿಲಾದ್ದೆಂದರೆ ಇದು ಕಾಲದ ಚಲನೆಯಲ್ಲಿ ಅವಾರ್ಯವೆಂದು ಸ್ವೀಕರಿಸುವ ಆತನ ವ್ಯಕ್ತಿತ್ವವೇ ಈ ಕಥನದಲ್ಲಿ ವಿಸ್ಮಯಗೊಳಿಸುವ ಅಂಶವಾಗಿದೆ. ಬದುಕು ಹೇಗೆ ಹೇಗೆ ಬರುತ್ತೋ ಹಾಗೆ ಸ್ವೀಕರಿಸಲೇಬೇಕೆಂಬ ಒಂದು ದಾರ್ಶನಿಕ ನಿಲುವಿನ ಬೋರಯ್ಯನ ವ್ಯಕ್ತಿತ್ವವನ್ನು ಘನವಾಗಿಸುತ್ತದೆ. ಈ ಮಾತುಗಳು ಕಿಲಾರಿ ಬೋರಯ್ಯನ ವ್ಯಕ್ತಿತ್ವವನ್ನು ಸರಿಯಾಗಿಯೇ ಪರಿಚಯಿಸುತ್ತವೆ.

ವಿಶೇಷವೆಂದರೆ ನಾನು ಈ ವರೆಗೂ ನಿಷ್ಠೆಯಿಂದ ಈ ಕೆಲಸಮಾಡಿಕೊಂಡು ಬಂದಿದ್ದೇನೆ. ಆದರೆ ನನ್ನ ಮಕ್ಕಳಿಗೆ ಈ ಕೆಲಸ ಮುಂದುವರೆಸುವ ಆಸಕ್ತಿಯಿಲ್ಲ ಎನ್ನುವ ನೋವು ಅವರದಾಗಿತ್ತು. ಇಂಥ ನಿಷ್ಠೆಯ ಕಿಲಾರಿಯನ್ನು ಊರಿನ ಆಂತರಿಕ ಪ್ರತಿಷ್ಠೆಗಳ ಮೇಲಾಟದಲ್ಲಿ ಮದ್ಯೆದಲ್ಲೇ ಬಿಡಿಸಿ ಇನ್ನೊಂದು ಕುಟುಂಬದವರನ್ನು ಕಿಲಾರಿಯನ್ನಾಗಿ ಮಾಡಿದರು. ಈ ಬೆಳವಣಿಗೆ ಬೊರಯ್ಯನವರ ಮನಸ್ಸಿಗೆ ಅತ್ಯಂತ ನೋವುಂಟುಮಾಡಿತ್ತು. ವೃತ್ತಿಯನ್ನು ಬಿಡಿಸಿದ ನಂತರವೂ ಅವರ ಸುದೀರ್ಘ ಸೇವೆಯನ್ನು ಮಾಡಿದ ವ್ಯಕ್ತಿಗೆ ನೀಡಬೇಕಾದ ಕನಿಷ್ಟ ಗೌರವವನ್ನು ಕೂಡ ನೀಡದಿರುವುದು ಅವರನ್ನು ಇನ್ನಷ್ಟು ಕುಗ್ಗಿಸಿತು. ಬಹುಶಃ ಕಿಲಾರಿ ವೃತ್ತಿಯಲ್ಲಿದ್ದಿದ್ದರೆ ಇನ್ನಷ್ಟು ಕಾಲ ಬದುಕುತ್ತಿದ್ದರೋ ಏನೋ? ಆದರೆ ಅಷ್ಟೇನು ದೀರ್ಘ ಕಾಲ ಕಾಯಿಲೆಗೆ ಬೀಳದೆ ದಿಢೀರನೆ ಕಳೆದ ಗರುವಾರ ರಾತ್ರಿ ಮರಣಿಸಿದ್ದು ಮತ್ತೊಂದು ವಿಶೇಷ ಗರುವಾರ ಮ್ಯಾಸಬೇಡರಿಗೆ ಒಂದು ವಿಶಿಷ್ಟವಾರ. ದೇವರೆತ್ತುಗಳ ಆರಾಧನೆಗೆ ಮೀಸಲಾದ ದಿನವದು. ಅದೇ ದಿನ ಅವರು ಲೋಕ ತ್ಯಜಿಸಿದ್ದು ಬೋರಯ್ಯನವರು ದೇವರೆತ್ತುಗಳ ಬಗ್ಗೆ ಹೊಂದಿದ್ದ ಭಕ್ತಿಯನ್ನು ತೋರಿಸುತ್ತದೆ. ಏನೇ ಇದ್ದರೂ ಬೋರಯ್ಯ ಅವರ ಸಾಂಸ್ಕೃತಿಕ ಸೇವೆ ಮ್ಯಾಸಬೇಡರ ಇತಿಹಾಸದಲ್ಲಿ ಅಜರಾಮರವಾಗಿದೆ.

                                                   - ಡಾ. ಎಸ್.ಎಂ. ಮುತ್ತಯ್ಯ

No comments:

Post a Comment