Sunday 12 July 2020

ಬಯಲಾಟದ ನಾದ ಬ್ರಹ್ಮ ಮದ್ದಳೆ ಸಣ್ಣಪಾಲಯ್ಯ ವಿಧಿವಶ

ನಲಗೇತನಹಟ್ಟಿಯ ಬಯಲಾಟದ ಮದ್ದಳೆ ಕಲಾವಿದ ಸಣ್ಣಪಾಲಯ್ಯ ಅವರು ೧೨.೦೭.೨೦೧೧ ರಂದು ವಿಧಿವಶರಾಗಿದ್ದು ಅದೇ ದಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೋವಿನ ಸಂಗತಿಯೆಂದರೆ ನಾನು ಅಪಾರವಾಗಿ ಗೌರವಿಸುವ ನನ್ನೂರಿನ ಕಲಾವಿದರಲ್ಲಿ ಒಬ್ಬರಾದ ಸಣ್ಣಪಾಲಯ್ಯ ಅವರ ಅಂತ್ಯಸಂಸ್ಕಾರದಲ್ಲಿ ನಾನು ಅನಿವಾರ್ಯ ಕಾರಣಗಳಿಂದಾಗಿ ಭಾಗವಹಿಸಲಾಗಲಿಲ್ಲ. ಈ ಬೇಸರದೊಂದಿಗೆ ಪ್ರಸ್ತುತ ಬರೆಹದ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಯಸುತ್ತೇನೆ.

ಸಣ್ಣಪಾಲಯ್ಯ ಮ್ಯಾಸನಾಯಕ ಬುಡಕಟ್ಟಿನ ಒಂದು ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿ ಮೂರನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲೇ ತನ್ನ ಪರಿಸರದಲ್ಲಿ ಪ್ರಚಲಿತವಿದ್ದ ಭಜನೆ ಕಲೆಯಲ್ಲಿ ಆಸಕ್ತರಾಗಿ ಭಜನೆಯ ಡಕ್ಕೆ ಬಾರಿಸುವುದರಲ್ಲಿ ಪ್ರವೀಣರಾದವರು. ಇದರಿಂದ ಇವರು ಭಜನೆ ಸಣ್ಣಪಾಲಯ್ಯ ಅಂತಲೇ ಜನಪ್ರಿಯರಾಗಿದ್ದರು. ಅನಂತರ ನಿಧಾನವಾಗಿ ಬಯಲಾಟದ ಕಡೆ ಗಮನಹರಿಸಿ ಅನೇಕ ಪ್ರದರ್ಶನಗಳಲ್ಲಿ ಅರ್ಜುನ, ಸಖಿ ಮೊದಲಾದ ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಅನಂತರ ಭಜನೆಯ ಡಕ್ಕೆ ವಾದ್ಯ ನುಡಿಸಿದ ಅನುಭವದ ನೆರಳಲ್ಲಿ ಬಯಲಾಟದ ಮದ್ದಳೆ ಅಥವಾ ಮೃದಂಗ ಬಾರಿಸಲು ಆರಂಭಿಸುತ್ತಾರೆ. ಆಮೂಲಕ ಮದ್ದಳೆ ಸಣ್ಣಪಾಲಯ್ಯನಾಗಿ ರೂಪಾಂತರಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ತನ್ನ ಹಟ್ಟಿಯಲ್ಲಿ ಮದ್ದಳೆ ಬಾರಿಸುವುದರಲ್ಲಿ ನಿಪುಣರಾಗಿದ್ದ ಮೂಳೋಬಜ್ಜ, ಕೆಂಗಯ್ಯ, ಕಾರೆಬೋರಯ್ಯ ಮೊದಲಾದ ಹಿರಿಯರಿಂದ ಮದ್ದಳೆಯ ವಿವಿಧ ಮಟ್ಟುಗಳನ್ನು ಕಲಿಯುತ್ತಾರೆ. ನಿಧಾನವಾಗಿ ಅವೆಲ್ಲ ಮಟ್ಟುಗಳನ್ನು ಕರಗತಮಾಡಿಕೊಂಡು ಎಂಥ ಸಂದರ್ಭದಲ್ಲೂ ದೃತಿಗೆಡದೆ ಮದ್ದಳೆ ಬಾರಿಸುವ ಶಕ್ತಿಯನ್ನು ಸಂಪಾದಿಸುತ್ತಾರೆ. ಅಲ್ಲಿಂದಲೆ ಬಯಲಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಲ್ಲಿಯವರೆಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸಣ್ಣಪಾಲಯ್ಯ ಅವರ ನೆಂಟರ ಬಳಿ ಇದ್ದ ಮದ್ದಳೆ ಇವರಿಗೆ ಬಳುವಳಿಯಾಗಿ ಸಿಕ್ಕಿದ್ದು ಇವರ ಕಲಾಸಕ್ತಿಗೆ ಇನ್ನಷ್ಟು ನೀರೆರೆಯುತ್ತದೆ. ಆ ದಿನಗಳಲ್ಲಿ ಇಡೀ ಹಟ್ಟಿಗೆ ಇದ್ದದ್ದು ಒಂದೆ ಮದ್ದಳೆ ಎಂದರೆ ಆ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಸಣ್ಣಪಾಲಯ್ಯನವರ ಕಲಾಸಕ್ತಿಗೆ ಮನೆಯ ಹಿರಿಯರಿಂದ ಎದುರಾದ ವಿರೋಧವನ್ನು ಲೆಕ್ಕಿಸದೆ ತನ್ನ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು ನಿಜವಾಗಿಯೂ ಬಯಲಾಟ ಕಲೆಗೆ ಸಹಕಾರಿಯಾಯಿತು ಎನ್ನಬಹುದು.

ಒಂದು ವಿಶೇಷವೆಂದರೆ ನಲಗೇತನಹಟ್ಟಿ ಸುತ್ತಲಿನ ಬಯಲಾಟದ ಪ್ರದರ್ಶನಗಳನ್ನು ಸಣ್ಣಪಾಲಯ್ಯ ಅವರನ್ನು ಬಿಟ್ಟು ಊಹಿಸಿಕೊಳ್ಳುವುದು ಕಷ್ಟ. ತನ್ನ ಹಟ್ಟಿಯಲ್ಲಿ ಮಾತ್ರವಲ್ಲದೆ ಸುತ್ತ ಮುತ್ತಲಿನ ಹಲವಾರು ಊರುಗಳಲ್ಲಿ ಬಯಲಾಟದ ಪ್ರದರ್ಶನಗಳಲ್ಲಿ ಮದ್ದಳೆ ವಾದಕನಾಗಿ ಭಾಗವಹಿಸಿ ಅವರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ತನ್ನ ಮದ್ದಳೆಯ ಮೂಲಕ ನೂರಾರು ಪ್ರದರ್ಶನಗಳಿಗೆ ಸಾಥ್ ನೀಡಿದ್ದು ಅವುಗಳಲ್ಲಿ ಪ್ರಧಾನವಾಗಿ ಗಿರಿಜಾ ಕಲ್ಯಾಣ, ಇಂದ್ರಜಿತ್ ಕಾಳಗ, ತಾಮ್ರಧ್ವಜ, ರಾಮಾಂಜಿನಯ ಯುದ್ಧ, ಐರಾವಣ-ಮೈರಾವಣ, ಶಶಿರೇಖ ಭರಣಿ, ದುಶ್ಯಾಸನನ ಕಾಳಗ, ಪಾರ್ಥಪಾಂಚಾಲಿ, ಕಾಳಾಸುರ, ಸಂಪೂರ್ಣ ರಾಮಾಯಣ, ಬಬ್ರುವಾಹನ, ರತಿಕಲ್ಯಾಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟು ಕಥೆಗಳಲ್ಲಿ ಒಂದೊಂದು ಕಥೆ ಹತ್ತಾರು ಪ್ರದರ್ಶನಗಳನ್ನು ಕಂಡಿದ್ದಿದೆ. ಅವೆಲ್ಲವುಗಳಿಗೆ ಮದ್ದಳೆ ಬಾರಿಸಿದ ಸಣ್ಣಪಾಲಯ್ಯ ಈ ಎಲ್ಲಾ ಪ್ರದರ್ಶನಗಳಲ್ಲೂ ನಾನು ಅತ್ಯುತ್ತಮವಾಗಿ ಬಾರಿಸಿದ್ದೇನೆ ಎಂದು ಹೇಳಲಾರೆ ಆದರೆ ಹೆಚ್ಚು ಪ್ರದರ್ಶನಗಳಲ್ಲಿ ಚನ್ನಾಗಿಯೇ ಬಾರಿಸಿದ್ದೇನೆ. ಪ್ರದರ್ಶನಗಳು ಕಳಪೆಯಾದಾವೆಂದಾಗ ತಾನು ಕುಣಿಯಲಾರದೆ ಮದ್ಲೆಕಾರನನ್ನು ಗೋಳು ಹೊಯ್ದು ಕೊಂಡರು ಎನ್ನುವ ಗಾದೆ ಮಾತಿನಂತೆ ಅದರ ಅಪಕೀರ್ತಿಯನ್ನು ನನ್ನ ಹೆಗಲಿಗೆ ಏರಿಸಿದ್ದಿದೆ. ಇಂತಹ ಟೀಕೆಗಳು ಬಂದಾಗ ನಾನು ಯಾರಿಗೂ ಎದುರಾಡದೆ  ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ  ಎಂಬ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಮದ್ದಳೆಯ ಬಗ್ಗೆ ಯಾವುದೇ ಶಾಸ್ತ್ರೀಯ ಜ್ಞಾನವನ್ನು ಕಲಿಯದೇ ಇದ್ದರು ಮದ್ದಳೆಯ ಜಂಪೆ, ಸಾಂಗತ್ಯ, ಅರ್ಧರೇಖ, ಆಟತಾಳ, ಕುಕ್ಕತಾಳ ಮೊದಲಾದ ಮಟ್ಟುಗಳ ಬಗ್ಗೆ ಅವರಲ್ಲಿರುವ ಅನುಭವ ಜ್ಞಾನ ಬೆರಗು ಮೂಡಿಸುವಂಥಹದ್ದು.

ಶ್ರೀಯುತರು ಬರೀ ಮದ್ದಳೆ ಬಾರಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಕಲಾವಿದರಿಗೆ ಮಾತು ಮತ್ತು ಅಭಿನಯವನ್ನು  ಹೇಳಿಕೊಟ್ಟವರು ಕೂಡ. ಅದರಲ್ಲೂ ಅಕ್ಷರಜ್ಞಾನವಿಲ್ಲದ ಕಲಾವಿದರಿಗೆ ಮಾತುಗಳನ್ನು ಹೇಳಿಕೊಟ್ಟು ಕಲಿಸಿರುವುದು ಇವರ ವಿಶೇಷ. ಇವರಲ್ಲಿ ಕಲಿತ ಯುವ ಕಲಾವಿದರಾದ ಚಿತ್ರಲಿಂಗಯ್ಯ, ಕುರುಡುಬೋರಯ್ಯ, ಪಿ.ಎಸ್.ದೊಡ್ಡಬೋರಯ್ಯ ಅವರುಗಳು ಹೇಳುವಂತೆ - ಅಕ್ಷರಗೊತ್ತಿಲ್ಲದ ನಮಗೆ ತಾಲೀಮು ಸಂದರ್ಭದಲ್ಲಿ ಅಷ್ಟೇ ಅಲ್ಲದೆ ತನ್ನ ಮನೆ ಮತ್ತು ಹೊಲಗಳಲ್ಲಿ ಮಾತುಕಲಿಸಿದ್ದಾರೆ. ನಟನೆಯ ಹೆಜ್ಜೆಗಳನ್ನು ಹೇಳಿಕೊಟ್ಟದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ. ಏಕೆಂದರೆ ನಮ್ಮ ಕಾಲನ್ನು ಕೈಯಲ್ಲಿಡಿದು ತಿರುವಿ ಹೀಗೆಂದು ಹೇಳಿಕೊಟ್ಟದ್ದಾರೆ. ಅದರ ಜೊತೆಗೆ ಒಂದು ಸ್ಥಳದಲ್ಲಿ ಮರಳನ್ನು ಹರಡಿ ಅದರಲ್ಲಿ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸಿ ನಮಗೆ ತೋರಿಸುತ್ತಿದ್ದರು. ಯುವ ಕಲಾವಿದರ ಈ ಮಾತುಗಳು ಸಣ್ಣಪಾಲಯ್ಯ ಅವರ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಇಂತಹ ಅಪರೂಪದ ಈ ಕಲಾವಿದನ ಬದುಕು ಸುಖಕರವಾಗಿರಲ್ಲಿಲ್ಲ. ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಆರ್ಥಿಕ ಬಲ  ಈ ಕಲೆಯಿಂದ ಒದಗಿಬರಲಿಲ್ಲ. ಮೊದಲಿಂದಲೂ ಇವರಿಗೆ ತಾಲೀಮು, ಪ್ರದರ್ಶನ ಎಲ್ಲಾ ಸೇರಿ ಕಲಾವಿದರಿಂದ ಸಿಗುತ್ತಿದ್ದ ಸಂಭಾವನೆ ಕೇವಲ ೨೦ ರಿಂದ ೫೦ ರೂಗಳು ಮಾತ್ರ. ಇತೀಚೆಗೆ ಅದು ೨೫೦ ರಿಂದ ೫೦೦ ರೂಗಳಿಗೆ ಸೀಮಿತಗೊಂಡಿತ್ತು. ಇದರ ಜೊತೆಗೆ ಕೆಲವೊಮ್ಮೆ ಒಂದು ಜೊತೆ ಬಟ್ಟೆ. ಈ ವಿಷಯದಲ್ಲಿ ಯಾರನ್ನು ಜುಲ್ಮೆಮಾಡದ ಇವರು ಕೊಟ್ಟಷ್ಟರಲ್ಲೇ ತೃಪ್ತಿ ಕಂಡವರು. ಯಾರನ್ನು ಇಂತಿಷ್ಟೆ ಎಂದು ಬಾಯಿಬಿಟ್ಟು ಕೇಳಿದ ಉದಾಹರಣೆಗಳೆ ಇಲ್ಲ ಎಂಬುದು ಇವರ ಒಡನಾಡಿ ಕಲಾವಿದರ ಅಂಬೋಣ. ಸಂಭಾವನೆಯ ವಿಷಯ ಹೀಗಾದರೆ ಇನ್ನೂ ಸರ್ಕಾರ ಸಂಘ ಸಂಸ್ಥೆಗಳಿಂದ ಕಲೆಗಾಗಿ ಸಿಗುವ ಯಾವುದೇ ಸೌಕರ್ಯಗಳು ಕೂಡ ಬಹುದಿನಗಳವರೆಗೆ ಇವರ ಪಾಲಿಗೆ ಸಿಕ್ಕಿಲಿಲ್ಲ ಎಂಬುದು ಕಲಾಪ್ರಪಂಚದ ದೌರ್ಭಾಗ್ಯವೇ ಸರಿ.

ಹಿರಿಯರೆಲ್ಲರು ತಮ್ಮ ಪರಂಪರೆಯ ಕಲೆಯ ಬಗ್ಗೆ ಈ ಹೊಸಕಾಲದ ಯುವಕರು ನಿರಾಸಕ್ತರಾಗಿದ್ದಾರೆ ಎಂದು ಕೊರಗುತ್ತಿರುವುದು ಸಾಮಾನ್ಯವಾದ ಸಂಗತಿ. ಆದರೆ ಸಣ್ಣಪಾಲಯ್ಯ ಈ ಬಗ್ಗೆ ಹೊಂದಿರುವ ಅಭಿಪ್ರಾಯವೇ ಬೇರೆಯಾಗಿತ್ತು. ಅವರು ಹೇಳುವಂತೆ ಹೀಗಿನ ಯುವಕರು ನಮಗಿಂತ ಹೆಚ್ಚು ಶಕ್ತಿಶಾಲಿಗಳು ಅವರು ಈ ಕಲೆಯನ್ನು ಯಾವುದಾದರೂ ರೂಪದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಧೃಡವಾದ ಮಾತುಗಳನ್ನಾಡುತ್ತಿದ್ದರು. ಇದಕ್ಕೆ ಪೂರಕವಾಗಿ ಅನೇಕ ಯುವ ಕಲಾವಿದರು ತನ್ನ ಬಳಿ  ತೀವ್ರ ಆಸಕ್ತಿಯಿಂದ ಬಂದು ಕಲಿಯುತ್ತಿರುವುದನ್ನು ನೆನಪಿಸಿಕೊಳ್ಳುತ್ತಿದ್ದರು.

ಇಂತಹ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ತನ್ನ ೧೫ನೇ ವರ್ಷದಿಂದ ಇಲ್ಲಿಯವರೆಗೆ ಅಂದರೆ ಅರ್ದಶತಮಾನಕ್ಕೂ ಹೆಚ್ಚು ಕಾಲ ಬಯಲಾಟ ಕಲೆಯ ಸೇವಕರಂತೆ ಕೆಲಸಮಾಡಿದ್ದ ಈ ಕಲಾವಿದನನ್ನು ಗುರುತಿಸಿ ೨೦೧೩-೧೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿರುವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿದ್ದ ಬೆಳಗಲ್ ವೀರಣ್ಣ ಹಾಗೂ ಎಲ್ಲಾ ಸದಸ್ಯರು ವಿಶೇಷವಾಗಿ ಡಾ. ಬಿ.ಎಂ. ಗುರುನಾಥ ಅವರು ಖಂಡಿತವಾಗಿ ಅಭಿನಂದನಾರ್ಹರು.
ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ೨೦೧೨ ಮತ್ತು ೨೦೧೩ನೇ ಸಾಲಿನ ವಾರ್ಷಿಕ ಗೌರವ  ಪ್ರಶಸ್ತಿಗಾಗಿ ಅರ್ಜಿ ಹಾಕಿಸಲು ಬಯಲಾಟದ ಮದ್ದಳೆ ಕಲಾವಿದರಾಗಿ ಸಾಕಷ್ಟು ದುಡಿದಿರುವ ಸಣ್ಣಪಾಲಯ್ಯ ಅವರನ್ನು  ಭೇಟಿಮಾಡಿದ್ದೆವು. ಆ ಸಂದರ್ಭದಲ್ಲಿ ಅವರು ನಮ್ಮ ಮುಂದೆ ತೋಡಿಕೊಂಡ ನೋವು ಏನೆಂದರೆ ನನಗಿಂತ ಕಿರಿಯ ಹಾಗೂ ನನ್ನಷ್ಟು ಸೇವೆ ಮಾಡದೇ ಇರುವ ತೋರಿಕೆಯ ವ್ಯಕ್ತಿಗಳು ಒಂದೆರಡು ನಾಟಕದಲ್ಲಿ ಭಾಗವಹಿಸಿ ಅದರ ಆಧಾರದ ಮೇಲೆ ಮಾಶಾಸನ ಪಡೆದಿದ್ದಾರೆ. ನನಗೆ ೭೦ ವರ್ಷವಾದರೂ ಯಾವುದೇ ಮಾಶಾಸನ ಸಿಕ್ಕಿಲ್ಲ ಹಾಗಾಗಿ ಹಾಗೆಯೇ ಏನಾದರೂ ಮಾಡಿ ನನಗೆ ಸಂಬಳ( ಮಾಶಾಸನ) ಮಾಡಿಸಿಕೊಡಿ ಎಂದರು. ನಾವು ಈ ಬಗ್ಗೆ ಅವರ ಜೊತೆ ಮಾಶಾಸನಕ್ಕೆ ಅರ್ಜಿ ಹಾಕಿ ಯಶಸ್ವಿಯಾದ ಕಲಾವಿದರ ಜೊತೆ ಚರ್ಚಿಸಲಾಗಿ ಅವರು ಹೇಳಿದ್ದು ಆತ ಇಲಾಖೆ ಕೇಳಿದ್ದ ದಾಖಲೆಗಳನ್ನು ಸರಿಯಾಗಿ ಒದಗಿಸಲಿಲ್ಲ. ಹಣದ ಮುಖ ನೋಡಿಕೊಂಡು ಹಿಂಜರಿದ ಎಂಬ ಅಭಿಪ್ರಾಯ ವ್ಯಕ್ತಮಾಡಿದರು. ಈ ಬಗ್ಗೆ ಇಲಾಖೆಯಲ್ಲಿ ವಿಚಾರಿಸಿದಾಗ ತಿಳಿದು ಬಂದ ಸತ್ಯವೆಂದರೆ ಈ ಕಲಾವಿದನಿಗೆ ಮಾಶಾಸನ ಮಂಜೂರು ಆದೇಶವಾಗಿ ಸುಮಾರು ಮೂರು ವರ್ಷವಾಗಿದೆ. ಅಂತಿಮವಾಗಿ  ಇಲಾಖೆಗೆ ಸಲ್ಲಿಸಬೇಕಿದ್ದ ಒಂದೆರಡು ದಾಖಲೆಗಳನ್ನು ನೀಡದೆ ಆ ಆದೇಶ ಜಾರಿಯಾಗಿರಲಿಲ್ಲ. ಈ ಬಗ್ಗೆ ಕಲಾವಿದನ ಗಮನಸೆಳೆದು ಅವರು ನೀಡಬೇಕಿದ್ದ ದಾಖಲೆಗಳನ್ನು ಸಲ್ಲಿಸಿ ಮಾಶಾಸನ ಮರು ಆದೇಶವನ್ನು ಮಾಡಿಸಿದ್ದಾಯಿತು. ಅದರ ಪ್ರಕ್ರಿಯೆಗಳು ಮುಗಿಯುವವರೆಗೂ ಆತ ಕಾಯುವ ತಾಳ್ಮೆ ಇರಲಿಲ್ಲ. ಇದೇ ಸಂದರ್ಭಕ್ಕೆ ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿ ಸಿಕ್ಕಿತ್ತು. ಅದನ್ನು ತಿಳಿಸಲು ಹೋದ ನಮಗೆ ಆ ಪ್ರಶಸ್ತಿಯ ವಿಷಯ ಅಲ್ಲಿರಲಿ ನನ್ನ ಸಂಬಳದ ಸಮಸ್ಯೆ ಎಲ್ಲಿಗೆ ಬಂತಪ್ಪ ?  ಎಂಬ ಪ್ರಶ್ನೆ ಕೇಳಿದರು. ಇದರಿಂದ ನಮಗೆ ಕೊಂಚ ಬೇಸರವಾದರೂ ಅದನ್ನು ತೋರದೆ ಅವರಿಗೆ ಅಭಿನಂದನೆ ಹೇಳಿ ಮರಳಿದ್ದೆವು.

ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯು ೨೦೧೨, ೨೦೧೩ ನೇ ಸಾಲಿನ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಉಡುಪಿ ಸಾಲಿಗ್ರಾಮದಲ್ಲಿ ಸಮಾರಂಭ  ಏರ್ಪಡಿಸಿತ್ತು. ಈ ಸಮಾರಂಭಕ್ಕೆ ಸಣ್ಣಪಾಲಯ್ಯನನ್ನು ನಮ್ಮ ಜೊತೆಯೇ ಕರೆದುಕೊಂಡು ಹೋಗಿದ್ದೆವು. ಸಮಾರಂಭಕ್ಕೂ ಮೊದಲು ಪ್ರಶಸ್ತಿ ವಿಜೇತ ಕಲಾವಿದರನ್ನು ಸಕಲ ಗೌರವ ಹಾಗೂ ಮರ‍್ಯಾದೆಗಳೊಂದಿಗೆ ಮೆರವಣಿಗೆ ಮಾಡುವ ಕಾರ್ಯಕ್ರಮ ನಡೆಯಿತು. ಎಲ್ಲಾ ಕಲಾವಿದರು ವಿವಿಧ ವಾಧ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಗಂಭೀರವಾಗಿ ನಡೆಯುತ್ತಿರುವಾಗ ಸಣ್ಣಪಾಲಯ್ಯ ಆ ಗುಂಪಿನಲ್ಲಿ  ಕಾಣಲಿಲ್ಲ. ಎಲ್ಲಿ ಹೋಗಿರಬಹುದೆಂದು ನಾವು ಹುಡುಕಿ ನೋಡುವುದರಲ್ಲಿ ಆತ ವೇದಿಕೆಯ ಮುಂಭಾಗದ ಕುರ್ಚಿಯೊಂದರಲ್ಲಿ ಕುಳಿತಿದ್ದ. ಯಾಕೆ ಮೆರವಣಿಗೆಗೆ ಹೋಗಲಿಲ್ಲ? ಎಂದು ಪ್ರಶ್ನಿಸಿದರೆ ಅದಕ್ಕೆ ಆತ ನೀಡಿದ ಉತ್ತರದಿಂದಾಗಿ ನಮಗೆ ಆಶ್ಚರ್ಯ ಹಾಗೂ ಬೇಸರ ಒಟ್ಟಿಗೆ ಆಯಿತು. ನಮ್ಮ ಪ್ರಶ್ನೆಗೆ ಆತ ನೀಡಿದ ಉತ್ತರ ಹೀಗಿತ್ತು : ಏನಪ್ಪ ದುಡ್ಡು ಏನೂ ಕೊಡಲಿಲ್ಲ. ಯಾವಾಗಪ್ಪ ಕೊಡೋದು. ಯಾರೋ ಒಬ್ಬರು ಹೇಳಿದರು ನೀವು ಎಲ್ಲಿ ಹೋಗಬೇಡಿ ಇಲ್ಲೇ ಇರಿ ದುಡ್ಡು ಕೊಡ್ತಾರೆ. ನೀವು ಇಲ್ಲದೆ ಇದ್ದರೆ ದುಡ್ಡು ಬೇರೆಯರ ಪಾಲಾಗುತ್ತದೆ ಅಂಥ ಹೇಳಿದರು. ಹಾಗಾಗಿ ನಾವು ಇಲ್ಲೇ ಕೂತಿದ್ದೆವು. ಈ ಮಾತುಗಳನ್ನು ಕೇಳಿ ನಮಗೆ ವಿಪರೀತ ಸಿಟ್ಟು ಬಂದಿತ್ತು. ಅದೇ ಸಿಟ್ಟಲ್ಲಿ ಬೈದು ಕರೆದುಕೊಂಡು ಹೋಗಿ ಮೆರವಣಿಗೆ ಮಧ್ಯಕ್ಕೆ ಬಿಟ್ಟೆವು. ಆಗ ಮನಸ್ಸಿಲ್ಲದ ಮನಸ್ಸಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಎಲ್ಲರಿಗಿಂತ  ಮೊದಲೇ ಹಿಂದೆ ಕುಳಿತಿದ್ದ ಜಾಗದಲ್ಲಿಯೇ ಕುಳಿತಿದ್ದರು.

ಈ ಕಲಾವಿದನ ಇಂತಹ ವಿಚಿತ್ರ ನಡವಳಿಕೆಗಳನ್ನು ಕಂಡ ನಾವು ಅವರ ಒಡನಾಡಿ ಕಲಾವಿದರ ಜೊತೆ ಮಾತನಾಡಿದಾಗ ನಮಗೆ ತಿಳಿದ ವಿಷಯಗಳು ನಮ್ಮ ಇಲ್ಲಿಯವರೆಗಿನ ತಿಳುವಳಿಕೆಗಳನ್ನು ಬುಡಮೇಲು ಮಾಡುವಂತಿದ್ದವು. ಅವರು ಹೇಳುವಂತೆ  ಈತ ತಮ್ಮ ೩೦-೪೦ ವರ್ಷಗಳ ಕಲಾ ಜೀವನದಲ್ಲಿ ಎಂದೂ ಯಾರನ್ನೂ ಹಣಕ್ಕಾಗಿ ಪೀಡಿಸಿದವರಲ್ಲ. ಚಿಕ್ಕ ವಯಸ್ಸಿನಿಂದಲೂ ಒಂದು ನಾಟಕಕ್ಕೆ  ೨೦, ೩೦ ರೂಗಳು ಮಾತ್ರ ಸಂಭಾವನೆ ಪಡೆದು ಅದರಲ್ಲೇ ತೃಪ್ತಿ ಕಂಡವರು. ನಾಟಕದ ಬಹುತೇಕ ಪಾತ್ರಧಾರಿಗಳು ಸಾಮಾನ್ಯವಾಗಿ ಅನಕ್ಷರಸ್ಥರಾಗಿದ್ದರಿಂದ ಅವರಿಗೆ ಮಾತು ಮತ್ತು ಅಭಿನಯದ ಮಟ್ಟುಗಳನ್ನು ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಟ್ಟವರು. ಒಂದು ಪ್ರದರ್ಶನಕ್ಕೆ ಸಾವಿರಾರು ರೂಪಾಯಿಗಳ ಸಂಭಾವನೆಯಿರುವ ಈ ಕಾಲದಲ್ಲಿಯೂ ಈತನ ಸಂಭಾವನೆ ೫೦೦ ರೂಗಳನ್ನು ಮೀರಿಲ್ಲ. ಎಲ್ಲಾ ಮೇಳಗಾರರು ನಮಗೆ ಇಂತಿಷ್ಟೇ ಸಂಭಾವನೆ ಕೊಡಬೇಕೆಂದು ಕೇಳುತ್ತಿರುವಾಗ ಇವರು ಕೊಟ್ಟಷ್ಟನ್ನೇ ಪಡೆದು ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ  ಒಡನಾಡಿಗಳ  ಮನಸ್ಸಲ್ಲಿರುವ  ಆ ಪ್ರಾಮಾಣಿಕ ಕಲಾವಿದನಿಗೂ ಈಗ ನಮ್ಮ ನಡುವೆ ಇರುವ ಕಲಾವಿದನಿಗೂ ಎಷ್ಟೊಂದು ಅಂತರ ! ಯಾಕೆ ಹೀಗೆ ? ಎಂಬ ಜಿಜ್ಞಾಸೆ ನಮ್ಮದಾಗಿತ್ತು. ಈ ನಮ್ಮ ಎಲ್ಲಾ ಜಿಜ್ಞಾಸೆಗಳಿಗೆ ಉತ್ತರ ಹೇಳದೆ ತಣ್ಣಗೆ ಈ ಲೋಕ ತೊರೆದಿದ್ದು ಮಧ್ಯೆ ಕನಾಟಕದ ಬಯಲಾಟ ಕಲೆಗೆ ಆದ ನಷ್ಟವೆಂಬುದರಲ್ಲಿ ಅನುಮಾನವಿಲ್ಲ.


-  ಡಾ.ಎಸ್.ಎಂ. ಮುತ್ತಯ್ಯ







1 comment: