Monday 9 April 2012

ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ

ಸಾರಲೇಖ

ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ 
          (ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ)              

ಊರಿನಲ್ಲಿ ಶಾಲೆಯೊಂದು ತೆರೆದರೆ ಅಲ್ಲಿನ ಜಾನಪದ ಸಂಪತ್ತು ಸಂಪೂರ್ಣ ನಾಶವಾಯಿತೆಂದೆ ಅರ್ಥ
ಡಾ. ಚಂದ್ರಶೇಖರ ಕಂಬಾರ
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಕಂಬಾರರ ಮೇಲಿನ ಮಾತು ನಮಗೆ ವಿಚಿತ್ರವಾಗಿ ಕಂಡರು ಸತ್ಯವಾದುದು. ಅಂದರೆ ಶಾಲೆಗಳಲ್ಲಿ ಹೇಳಿಕೊಡುವ ಶಿಕ್ಷಣ ನಮ್ಮ ಜಾನಪದ ಬದುಕಿಗೆ ಮಾರಕ. ಉದಾಹರಣೆಗೆ ಶಾಲೆಗಳಿಗೆ ಹೋಗಿ ಕಲಿತ ಹೆಣ್ಣು ಪಾರಂಪರಿಕವಾಗಿ ಅವರ ತಾಯಿ ಹೇಳಿಕೊಂಡು ಬಂದಿರುವ ಸೋಬಾನೆ ಪದಗಳನ್ನು ಹಾಡಲಾರಳು. ಕಾರಣ ಸೋಬಾನೆ ಪದ ಹಾಡುವುದು ಅವಮಾನದ, ಮುಜುಗರದ  ಸಂಗತಿ. ಅದೇ ಚಿತ್ರ ಗೀತೆಯನ್ನೋ , ಭಾವಗೀತೆಯನ್ನೋ ಯಾವುದೇ ಎಗ್ಗಿಲ್ಲದೇ  ಹಾಡಬಲ್ಲಳು. ಇದು ಗೌರವದ ಸಂಗತಿ.ಹಾಗೆಯೇ ಶಾಲೆಯಲ್ಲಿ ಕಲಿತ ಒಬ್ಬ ಹುಡುಗ ಹೊಲದಲ್ಲಿ ಕೆಲಸ ಮಾಡುವುದಿಲ್ಲ.ಪೇಟೆಯಲ್ಲಿ ಯಾರದಾದರೂ ಪಾದ ಸೇವೆ ಬೇಕಾದರೆ ಮಾಡಬಲ್ಲ. ಹೊಲದಲ್ಲಿ ಕೆಲಸ ಮಾಡುವುದು ಅಥವಾ ಯಾವುದಾದರು  ನಮ್ಮ ಪಾರಂಪರಿಕ ವೃತ್ತಿಯನ್ನು ಮಾಡುವುದಕ್ಕಿಂತ ಪೇಟೆಯಲ್ಲಿ ಮಾಡುವ ಕೆಲಸ ಶ್ರೇಷ್ಟ ಎಂಬುದಾಗಿ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮೆಲ್ಲರನ್ನು ನಂಬಿಸಿದೆ.ಇನ್ನೂ ಮುಂದುವರಿದು ಹೇಳುವುದಾದರೆ ದೇಹ ಶ್ರಮವಿಲ್ಲದೆ ಹೆಚ್ಚು ಸಂಪಾದಿಸುವ ವೃತ್ತಿಗಳ ಕಡೆ ಮನುಷ್ಯನ ಮನಸ್ಸನ್ನು ತಿರುಗಿಸಿದ ಕೀರ್ತಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಸಲ್ಲಬೇಕು.ಇದರ ಪರಿಣಾಮವಾಗಿಯೇ ಆಧುನಿಕ ಶಿಕ್ಷಣ ವ್ಯವಸ್ಥೆ ಪಾರಂಪರಿಕ ಬದುಕು ಮತ್ತು ಅದರ ಜ್ಞಾನಗಳಿಗೆ ಮಾರಕವಾಗಿದೆ.ಮೂಲಭೂತವಾಗಿ ಶಿಕ್ಷಣ ಎನ್ನುವುದು ಬದುಕಿಗೆ ಅಗತ್ಯವಿರುವ ವೃತ್ತಿ ಕೌಶಲ್ಯಗಳನ್ನು,ಜೀವನ ಕುಶಲತೆ,ಮೌಲ್ಯಗಳನ್ನು ಅದೆಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ವಿವೇಕವನ್ನು ನೀಡುವಂತಹದ್ದು  ಆಗಿರಬೇಕಿತ್ತು. ಆ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಬೇಕಿತ್ತು. ಹಾಗಾಗದಿರುವುದು ನಮ್ಮ ಸಮಾಜದ ದುರಂತವೇ ಸರಿ. ಇಲ್ಲಿ ಗಮನಿಸಬೇಕಾಗಿರುವ ಅಂಶ ಯಾವುದೆಂದರೆ ಇಂದು ಶಿಕ್ಷಣ ವ್ಯವಸ್ಥೆ ಎಂದಾಕ್ಷಣ ಔಪಚಾರಿಕ ಶಾಲಾ ಶಿಕ್ಷಣ ಮಾತ್ರ ನೆನಪಿಗೆ ಬರುತ್ತದೆ.ಪಾರಂಪರಿಕವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅನೌಪಚಾರಿಕ ಶೈಕ್ಷಣಿಕ ಪದ್ಧತಿಗಳು ವಿಸ್ಮೃತಿಗೊಳಗಾಗಿವೆ.ಇದರಿಂದ ನಮಗೆ ಅನೇಕ ರೀತಿಯ ನಷ್ಟಗಳುಂಟಾಗಿವೆ. ಹಾಗಾಗಿ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಜಾಗೃತಗೊಳಿಸುವ ಕೆಲಸವು ಆಗಬೇಕಿದೆ.
                       ಇಂದಿನ ಶಿಕ್ಷಣ ವ್ಯವಸ್ಥೆಗೆ ಇರುವ ಬಹು ದೊಡ್ಡ ಸವಾಲೆಂದರೆ ಬುಡಕಟ್ಟುಗಳು ಏಕಕಾಲಕ್ಕೆ ಒಂದು ಕೈಯಲ್ಲಿ ಕೋಲು ಇನ್ನೊಂದು ಕೈಯಲ್ಲಿ ಪುಸ್ತಕವನ್ನು ಹಿಡಿಯುವಂತೆ ಮಾಡಬೇಕಾಗಿರುವುದು. ಅಂದರೆ  ಪರಂಪರೆಯನ್ನು ಸಂಪೂರ್ಣ ಕಳೆದುಕೊಳ್ಳದೇ ಹೊಸತನಕ್ಕೆ ಹೊಂದಿಕೊಳ್ಳುವ ಪರಿಜ್ಞಾನವನ್ನು ಶಿಕ್ಷಣ ನೀಡಬೇಕಿದೆ. ಇಂಥ ಆಲೋಚನೆಯ ಹಿನ್ನಲೆಯಲ್ಲಿ ಕನರ್ಾಟಕದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯಲ್ಲಿ ನೆಲೆನಿಂತಿರುವ ಬುಡಕಟ್ಟುಗಳಾದ ಕಾಡುಗೊಲ್ಲರು,  ಮ್ಯಾಸ ಬೇಡರು, ಲಂಬಾಣಿಗರು, ಮೊಂಡರು ಮೊದಲಾದ ಸಮುದಾಯಗಳಲ್ಲಿ ಆಧುನಿಕ ಶಿಕ್ಷಣ ಉಂಟುಮಾಡಿರುವ ಧನಾತ್ಮಕ ಹಾಗು ಋಣಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳುವುದು  ಹಾಗೆಯೆ ಈ ಬುಡಕಟ್ಟುಗಳ ನಿಜವಾದ ಅಭಿವೃದ್ಧಿ ಸೂತ್ರ ಯಾವುದು?ಹಾಗು ಅವುಗಳಿಗೆ ಬೇಕಿರುವ ನಿಜವಾದ ಶಿಕ್ಷಣದ ಸ್ವರೂಪ ಎಂಥದ್ದು?ಅವರಲ್ಲಿರುವ ಪಾರಂಪರಿಕ ಜ್ಞಾನಗಳನ್ನು ಹಾಗೂ ಅನೌಪಚಾರಿಕ ಶಿಕ್ಷಣ ಪದ್ಧತಿಗಳನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸುವುದು ಹೇಗೆ ? ಎಂಬುದನ್ನು ಕಂಡುಕೊಳ್ಳುವುದು ಈ ಪ್ರಬಂಧದ ಪ್ರಧಾನ ಉದ್ದೇಶವಾಗಿದೆ.
ಪ್ರಸ್ತುತ ಸಮುದಾಯಗಳು ಹಾಗೂ ಸಂಬಂಧಿಸಿದ ಪರಿಕಲ್ಪನೆಗಳ ಬಗ್ಗೆ ಈಗಾಗಲೇ ಪ್ರಕಟವಾಗಿರುವ ಬರೆಹಗಳಿಂದ ಹಾಗೂ ಸಮುದಾಯಗಳ ಬದುಕಿನ ಅವಲೋಕನದಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ದೇಸೀವಾದದ ವಿಭಿನ್ನ ಆಯಾಮದ ಚಿಂತನೆಗಳ ಮೂಲಕ ವಿಶ್ಲೇಷಿಸಲಾಗುವುದು.ಸಮುದಾಯಗಳ ಅಭಿವೃದ್ಧಿ ಪರಿಕಲ್ಪನೆಗಳಿಗೆ ಒಂದು ರೀತಿಯ ಸ್ಪಷ್ಟಿಕರಣವನ್ನು ಪಡೆಯುವ ಹಂಬಲವುಳ್ಳ ಈ ಅಧ್ಯಯನಕ್ಕೆ ಸಮಕಾಲೀನ ಮಹತ್ವವಿದೆ.


* ವಿಳಾಸ: ಡಾ.ಎಸ್.ಎಂ.ಮುತ್ತಯ್ಯ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ),    ಶಿವಮೊಗ್ಗ- 577 203, ದೂ : 94486 40114,

No comments:

Post a Comment