Saturday, 27 September 2014

ಜನಪದ ಸಂಪ್ರದಾಯ - ಆಚರಣೆಗಳಲ್ಲಿ ದಲಿತ ಪ್ರಜ್ಞೆ

ಜನಪದ ಸಂಸ್ಕೃತಿಯಲ್ಲಿ ಸಂಪ್ರದಾಯ-ಆಚರಣೆಗಳು ಬಹು ಮುಖ್ಯ ಭಾಗಗಳು. ಇವುಗಳ ಜೊತೆಗೆ ನಂಬಿಕೆಯೂ ಸೇರಿಕೊಳ್ಳುತ್ತದೆ. ಈ ಮೂರು ಸಂಗತಿಗಳು ಒಂದಕ್ಕೊಂದು ಪರಸ್ಪರ ಪೂರಕ ಸಂಬಂಧಗಳನ್ನು ಹೊಂದಿರುತ್ತವೆ. ಇವುಗಳ ಅರ್ಥ ಹಾಗೂ ಸಂಬಂಧಗಳನ್ನು ಹೀಗೆ ಸೂಚಿಸಲಾಗಿದೆ; ಮೂಲತಃ ಕಾಲ್ಪನಿಕ ಆಲೋಚನೆಯೊಂದು ವೈಯುಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡು ಸಾಮೂಹಿಕ ಮಾನ್ಯತೆಯನ್ನು ಪಡೆದುಕೊಂಡಾಗ ಅದು ನಂಬಿಕೆಯಾಗುತ್ತದೆ. ಪ್ರಕೃತಿ ರಹಸ್ಯವನ್ನು ಭೋದಿಸುವಲ್ಲಿ ಆದಿಮಾನವನ ವಿಫಲತೆ, ಹುಟ್ಟು-ಬದುಕು-ಸಾವುಗಳ ನಿಗೂಢತೆಯನ್ನು ಅರ್ಥೈಯಿಸಲಾಗದ ಆತಂಕ, ಜಾತಿ-ಮತಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ-ಈ ಹಿನ್ನೆಲೆಯಲ್ಲಿ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಇವು ಸೂಚನೆ-ನಿಯಮ, ವಿಧಿ-ನಿಷೇಧ, ನಿರ್ದೇಶನ, ಆಗ್ರಹ-ಆಜ್ಞೆಗಳ ರೂಪದಲ್ಲಿರುತ್ತವೆ. ನಂಬಿಕೆಯೊಂದು ಐತಿಹ್ಯ-ಪುರಾಣ-ಧರ್ಮಗಳೊಂದಿಗೆ ಸಂಬಂಧವನ್ನು ಪಡೆದುಕೊಂಡು ಸಮುದಾಯದ ಶ್ರದ್ಧೆಯೊಂದಿಗೆ ಸಮರ್ಥನೆಯನ್ನು ಪಡೆದುಕೊಂಡಾಗ ಸಂಪ್ರದಾಯವಾಗುತ್ತದೆ. ಇಂತಹ ಸಂಪ್ರದಾಯಗಳ ಪ್ರಾಯೋಗಿಕ ಅಥವಾ ಕ್ರಿಯಾ ರೂಪಗಳೇ ಆಚರಣೆಗಳು (ಜಾನಪದ ಕೈಪಿಡಿ, ಪುಟ-೧೬೩, ೧೮೮) ಈ ರೀತಿಯ ಸಾತತ್ಯ ಹೊಂದಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳು ಅವುಗಳನ್ನು ಅನುಸರಿಸುವ ಸಮುದಾಯದ ಲೋಕದೃಷ್ಟಿ ಹಾಗೂ ತಮ್ಮ ಸಮಾಜದ ಸಂದರ್ಭಗಳಿಗೆ ನೀಡಿದ ಪ್ರತಿಕ್ರಿಯೆಗಳಾಗಿರುತ್ತವೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಮೂರರಲ್ಲಿ ನಂಬಿಕೆ ಮೊದಲು ಎನ್ನಬಹುದು. ನಂಬಿಕೆಯನ್ನು ಆಧರಿಸಿ ಸಂಪ್ರದಾಯವೊಂದು ರೂಪುಗೊಳ್ಳುತ್ತದೆ. ಈಗಾಗಲೇ ಸೂಚಿಸಿರುವಂತೆ ಸಂಪ್ರದಾಯದ ಪ್ರಾಯೋಗಿಕ ರೂಪವೇ ಆಚರಣೆ. ಇಂಥಲ್ಲಿ ನಂಬಿಕೆಯೊಂದು ರೂಪುಪಡೆಯುವುದಾದರೂ ಹೇಗೆ ಎಂದರೆ ’ಬದುಕಿನಲ್ಲಿ ಆಕಸ್ಮಿಕವಾದ ಒಂದು ಘಟನೆ ಅಥವಾ ಮತ್ತೆ ಮತ್ತೆ ಪುನರಾವರ್ತನೆಗೊಂಡಾಗ ಅದು ನಂಬಿಕೆಯಾಗಿ ಘನೀಭವಿಸುತ್ತದೆ’.
ಸಂಪ್ರದಾಯ-ಆಚರಣೆಗಳ ಹುಟ್ಟು ಮತ್ತು ಪ್ರಸರಣದ ಬಗ್ಗೆ ಕೆಲವು ಪ್ರಾಥಮಿಕ ವಿಚಾರಗಳನ್ನು ತಿಳಿಯುವುದು ಸೂಕ್ತ. ಯಾವುದೇ ನಂಬಿಕೆ ಮತ್ತು ಸಂಪ್ರದಾಯಗಳು ಆಯಾ ಭೌಗೋಳಿಕ, ಧಾರ‍್ಮಿಕ ಹಾಗೂ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುತ್ತವೆ. ಹಾಗೆಯೇ ಕಾಲಕಾಲಕ್ಕೆ ಬದಲಾದ ಮೌಲ್ಯಗಳಿಗೆ ಅನುಗುಣವಾಗಿ ಅವು ಕೂಡಾ ಬದಲಾಗುತ್ತಾ ಸಾಗಿಬರುತ್ತವೆ. ವಿಶೇಷವೆಂದರೆ ಇವುಗಳ ಹುಟ್ಟು ಪ್ರದೇಸ, ಸಂಸ್ಕೃತಿ ಮತ್ತು ಪರಿಸರ ನಿಷ್ಠವಾದರೂ ಮಾನವನ ಮೂಲ ಮನೋಧರ‍್ಮದ ಸಾಮಾನ್ಯ ಸ್ವರೂಪದಿಂದಾಗಿ ಬಹುತ್ವದ ನೆಲೆಗಳಲ್ಲಿ ಉಗಮವಾದ ನಂಬಿಕೆ, ಸಂಪ್ರದಾಯ ಹಾಗೂ ಆಚರಣೆಗಳಲ್ಲಿ ಹಲವಾರು ಸಾದೃಶ್ಯವಾಗಿರುತ್ತವೆ. ಇಂಥ ಸಂಪ್ರದಾಯ-ಆಚರಣೆಗಳನ್ನು ಅನೇಕ ಬಗೆಗಳ್ಲಲಿ ಗುರುತಿಸಲಾಗಿದೆ. ಧಾರ‍್ಮಿಕ, ಸಾಂಸ್ಕೃತಿಕ, ವೈಯುಕ್ತಿಕ, ಬೌದ್ಧಿಕ, ಭಾವುಕ ಹೀಗೆ ಹಲವಾರು ವಿಭಾಗಗಳನ್ನು ಮಾಡಬಹುದಾಗಿದೆ. ಈ ರೀತಿಯ ಹಲವು ರೂಪಗಳಲ್ಲಿ ಕನ್ನಡ ಜನಪದ ಸಮಾಜಗಳೊಳಗೆ ಪ್ರಚಲಿತವಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳ ಅಧ್ಯಯನ ಅತ್ಯಂತ ಕುತೂಹಲದಾಯಕ ಫಲಿತಗಳಿಗೆ ಕಾರಣವಾಗುತ್ತದೆ.
ಯಾವುದೇ ಭಾಷೆಯ ಜಾನಪದಕ್ಕೂ ಹಾಗೂ ಕೆಳವರ್ಗಗಳಿಗೂ ನೇರವಾದ ಸಂಬಂಧವಿರುವುದನ್ನು ಕಾಣಬಹುದಾಗಿದೆ. ವಿಶೇಷವಾಗಿ ಜಾನಪದವನ್ನು ಹೊತ್ತು ಮುನ್ನಡೆಸುವ ಕಾರ‍್ಯ ಆ ಸಮಾಜದ ಕೆಳವರ್ಗಗಳದೇ ಆಗಿರುತ್ತದೆ. ಈ ಹಿನ್ನೆಲೆಯೊಳಗೆ ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ದಲಿತ ವರ್ಗಗಳ ಮನಸ್ಸಿನ ಪ್ರತಿನಿದೀಕರಣವನ್ನು ಪರಿಶೀಲಿಸುವ ಉದ್ದೇಶ ಈ ಲೇಖನಕ್ಕಿದೆ.
ಜನಪದ ನಂಬಿಕೆ-ಸಂಪ್ರದಾಯಗಳಲ್ಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯ ಸ್ವರೂಪವೇನು? ಎಂಬುದಾಗಿ ಶೋಧನೆಗೆ ಹೊರಡುವ ಪ್ರಸ್ತುತ ಪ್ರಯತ್ನಕ್ಕೆ ಬಹುಮುಖ್ಯವಾದ ಪ್ರಶ್ನೆಯೊಂದು ಎದುರಾಗುತ್ತದೆ. ಅದೇನೆಂದರೆ, ಜಾನಪದ ಆಸ್ತಿತ್ವದಲ್ಲಿರುವುದೆ ದಲಿತ ಸಮುದಾಯಗಳಲ್ಲಿ ಎಂಬ ಅಭಿಪ್ರಾಯವನ್ನು ಒಪ್ಪುವುದಾದರೆ; ನಂತರ ಜಾನಪದ ಅಭಿವ್ಯಕ್ತಿಗಳಲ್ಲಿಯೆ ದಲಿತ ಪ್ರಜ್ಞೆ ಹುಡುಕುವುದು ಒಂದು ವಿಪರ್ಯಾಸವಲ್ಲವೆ? ಈ ಪ್ರಶ್ನೆ ಬಹಳ ಸೂಕ್ತವಾದುದು ಹಾಗೂ ಅರ್ಥಪೂರ್ಣವಾದದು. ಏಕೆಂದರೆ, ದಲಿತ ಸಮುದಾಯಗಳಲ್ಲಿ ಪ್ರಸ್ತುತ ಪ್ರಚಲಿತವಿರುವ ಅನೇಕ ಸಂಪ್ರದಾಯ-ಆಚರಣೆಗಳು ದಲಿತಪರವಾದ ಆಶಯಗಳನ್ನು ಹೊಂದಿರದೆ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುವಂತಿವೆ. ಉದಾ: ದಕ್ಷಿಣ ಕನ್ನಡದ ಮಡೆಸ್ನಾನ, ಅಜಲನ ಪದ್ಧತಿಗಳು ಹಾಗೂ ನಾಡಿನಾದ್ಯಂತ ಪ್ರಚಲಿತ ವಿರುವ ಮಾರಿಯ ಆಚರಣೆಗಳಿರಬಹುದು. ಈ ಆಚರಣೆಗಳಲ್ಲಿ ದಲಿತರನ್ನು ಹೀನಾಯವಾಗಿ ಕಾಣುವ ಆಶಯವಿದ್ದಾಗಲೂ ದಲಿತರೇ ಅಂಥ ಆಚರೆಣಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ಬರುತ್ತಿರುವುದು ವಿಚಿತ್ರವಲ್ಲವೆ? ಇಂಥ ಸಂಪ್ರದಾಯ-ಆಚರಣೆಗಳು ಹುಟ್ಟುವಾಗಲೇ ದಲಿತ ವಿರೋಧಿ ಆಶಯಗಳನ್ನು ಹೊತ್ತು ಬಂದವೂ ಅಥವಾ ಕಾಲದ ಬದಲಾವಣೆಯಲ್ಲಿ ಹೀಗಾದವೋ ಹೇಳುವುದು ಕಷ್ಟ. ಇದನ್ನು ದಲಿತರ ಮುಗ್ಧತೆ ಹಾಗೂ ಮೇಲ್ವರ್ಗದ ವ್ಯವಸ್ಥಿತ ಹುನ್ನಾರದ ಸಂಯೋಗವೆನ್ನಬಹುದು. ಇದರ ನಡುವೆಯೇ ಹಲವಾರು ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳೊಳಗೆ ದಲಿತರ ಅಂತಃಸತ್ವವನ್ನು ಪ್ರತಿನಿಧಿಸುವ ಆಶಯಗಳು; ದಲಿತ ಪರವಾದ ದನಿಗಳು ಕಂಡುಬರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿನ್ನೆಲೆಯೊಳಗೆ ಪ್ರಸ್ತುತ ಲೇಖನದಲ್ಲಿ ಜನಪದ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯನು ಶೋಧಿಸಿ ವಿಶ್ಲೇಷಿಸುವ ಪ್ರಯತ್ನಮಾಡಲಾಗಿದೆ. 
ಈ ಪ್ರಯತ್ನಕ್ಕೂ ಮುನ್ನ ದಲಿತ ಪ್ರಜ್ಞೆ ಎಂದರೇನು? ಎಂಬುದನ್ನು ಸ್ಪಷ್ಟಪಡಿಸಿಕೊಲ್ಳುವುದು ಅಗತ್ಯವೆನಿಸುತ್ತದೆ. ದಲಿತ ಪ್ರಜ್ಞೆ ಬಗ್ಗೆ ಅರವಿಂದ ಮಾಲಗತ್ತಿ ಅವರು ಹೀಗೆ ಅಭಿಪ್ರಾಯಪಡುತ್ತಾರೆ. ದಲಿತ ವಿರೋಧಿ ಅಸ್ತಿತ್ವದ ವಿಚಾರಗಳನ್ನು ಭೂತ-ವರ್ತಮನ-ಭವಿಸ್ಯತ್ಕಾಲಗಳನ್ನೊಳಗೊಂಡಂತೆ ಸಾಮಾಜಿಕ, ಆರ್ಥಿಕ, ರಾಜಕೀಯ, ಬೌದ್ಧಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹೀಗೆ ಎಲ್ಲಾ ರಂಗದಲ್ಲಿ ದಲಿತರ ಮೇಲೆ ಹೇರಿರುವ ಮತ್ತು ಶೋಷಿಸುವ, ಅಂತರಾಳದ ಬಗೆಗೆ ಮೂಡುವ ಅರಿವು ಮತ್ತು ಆ ವಸ್ತುಸ್ಥಿತಿಯಿಂದ ವಿಮೋಚನೆ ಹೊಂದಲು ಮಾಡುತ್ತಿರುವ ಪ್ರಯತ್ನ ಹಾಗೂ ಕ್ರಿಯಾತ್ಮಕವಾಗಿ ಬೆಳವಣಿಗೆ ಹೊಂದುತ್ತವೆ ಎಂಬುದರಲ್ಲಿ ನಂಬಿಕೆ ಇದ್ದು, ಹೊಸ ಚರ್ಚೆಗೆ, ಬೆಳವಣಿಗೆಗೆ ಸಾಗುತ್ತೇವೆ ಎಂಬ ಆಶಯ ಹೊಂದಿರುವಂತಹದ್ದು ದಲಿತ ಪ್ರಜ್ಞೆ ಎಂದು ಕರೆಸಿಕೊಳ್ಳುತ್ತದೆ (ಸಾಹಿತ್ಯ. ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ ಪುಟ-೧೧೫) ಮಾಲಗತ್ತಿಯವರ ಈ ಅಭಿಪ್ರಾಯವನ್ನು ಸ್ವಲ್ಪ ಸರಳಗೊಳಿಸಿ ಹೀಗೆ ಹೇಳಬಹುದು; ಸಾಮಾಜಿಕ, ವಿರೋಧಿಸುವ ಮನೋಭಾವ ನೇರವಾಗಿ ಪ್ರತಿಭಟಿಸಲು ವಿರೋಧಿಸಲು ಸಾಧ್ಯವಾಗದೆ ಸಾಂಕೇತಿಕವಾಗಿ ಮಾಡುವ ಪ್ರಯತ್ನ  ಜನಪದ ಸಾಹಿತ್ಯದಲ್ಲಿ ಈ ಬಗೆಯ ಮನೋಭಾವ ಹೆಚ್ಚು ಹೆಚ್ಚು ಕಂಡುಬರುತ್ತದೆ. ಆದರೆ ನಂಬಿಕೆ-ಸಂಪ್ರದಾಯಗಳಲ್ಲಿ ಈ ಮನೋಭಾವ ಕಡಿಮೆಯೇ ಅದರಲ್ಲೂ ಈ ಹೊತ್ತಿಗೆ ಪ್ರಚಲಿತವಿರುವ ಸಂಪ್ರದಾಯ-ಆಚರಣೆಗಳಲ್ಲಿ ದಲಿತ ಪ್ರಜ್ಞೆ ಇರುತ್ತದೆಯಾದರೂ ಅದು ಮಸುಕಾಗಿದೆ. ಇನ್ನೂ ಹಲವರಿಗೆ ತಾವು ಆಚರಿಸುವ ಸಂಪ್ರದಾಯಗಳೊಳಗೆ ಅಂಥ ಭಾವನೆ ಇದೆ ಎಂಬ ಪ್ರಜ್ಞೆಯೇ ಇರುವುದಿಲ್ಲ. 
ಭಾರತೀಯ ಸಾಂಸ್ಕೃತಿಕ ಚರಿತ್ರೆಯನ್ನು ಮೇಲೆ ವಿವರಿಸಲಾದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ ಅನೇಕ ಕುತೂಹಲಕರ ಸಂಗತಿಗಳು ತಿಳಿದುಬರುತ್ತವೆ. ಚರಿತ್ರೆಯೊಳಗೆ ಸಂಪ್ರದಾಯ-ಆಚರಣೆಗಳು ಅನೇಕ ಬಾರಿ ಸಮಾಜದ ದಮನಿತ ವರ್ಗಗಳನ್ನು ಶೋಷಿಸಲು ಪ್ರಬಲ ಅಸ್ತ್ರಗಳಂತೆ ಬಳಕೆಯಾಗಿವೆ. ದೇವರು-ಧರ‍್ಮದ ಬಗ್ಗೆ ಸಾಮಾನ್ಯ ಜನರಲ್ಲಿರುವ ಭಕ್ತಿಯ ಮುಗ್ದ ಭಾವನೆಯನ್ನೆ ಬಂಡವಾಳವಾಗಿಸಿಕೊಂಡು ಅವರನ್ನು ಶೋಷಿಸಲಾಗಿದೆ. ಆಮೂಲಕ ಸಾಮಾಜಿಕ ಅಸಮಾನತೆಯನ್ನು ಉಳಿಸುವ ಹುನ್ನಾರವು ನಡೆದಿದೆ. ಇಂಥ ವ್ಯವಸ್ಥೆಯೊಳಗೂ ಶೋಷಣೆಗೆ ಗುರಿಯಾದ ಸಮುದಾಯಗಳು ಬಿಡುಗಡೆಯ ಹಾದಿಗಾಗಿ ತುಡಿಯುತ್ತಾ ಇರುವುದನ್ನು ಗುರುತಿಸಬಹುದು. ಈ ಹಿನ್ನೆಲೆಯೊಳಗೆ ಜನಪದ ನಂಬಿಕೆ-ಸಂಪ್ರದಾಯ ಹಾಗೂ ಆಚರಣೆಗಳ್ಲಲಿ ವ್ಯಕ್ತವಾಗಿರುವ ದಲಿತ ಪ್ರಜ್ಞೆಯನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ಗುರುತಿಸಬಹುದಾಗಿದೆ. ಇವುಗಳಲ್ಲಿ ಒಂದು ನೇರವಗಿ ಕಾಣುವಂತಹದ್ದು, ಮತ್ತೊಂದು ಮನಸ್ಸಿನ ಸುಪ್ತಭಾವನೆಯ ಸ್ಥಿತಿಯದ್ದು. ಇಲ್ಲಿ ಗಮನಿಸಬೇಕಾದುದೆಂದರೆ ಸಂಪ್ರದಾಯ-ಆಚರಣೆಗಳಲ್ಲಿ ಕಾಣುವ ದಲಿತ ಪ್ರಜ್ಞೆ ಸುಪ್ತ ಭಾವನೆಗಳ ರೂಪದಲ್ಲಿರುವುದೇ ಹೆಚ್ಚು ಹಾಗಾಗಿಯೇ ಇಂಥ ಶೋಧನೆಗೆ ಮನೋ ವೈಜ್ಞನಿಕ ದೃಷ್ಟಿ ಅತ್ಯಗತ್ಯವಾಗಿ ಬೇಕಾಗುತ್ತದೆ. ಇಂಥ ಸ್ಪಷ್ಟ ತಿಳುವಳಿಕೆಯ ಹಿನ್ನೆಲೆಯಲ್ಲಿ ಕನ್ನಡ ನಾಡಲ್ಲಿ ಪ್ರಚಲಿತವಿರುವ ನಂಬಿಕೆ-ಸಂಪ್ರದಾಯ-ಆಚರಣೆಗಳಲ್ಲಿ ಕೆಲವನ್ನು ಪರಿಶೀಲಿಸಬಹುದಾಗಿದೆ.
೧. ಮಾರಿಯ ಆಚರಣೆ
’ಮಾರಿ’ ಅಥವಾ ಮಾರಮ್ಮ ಮೂಲತಃ ವಲಸೆಗಾರ ಪಶುಪಾಲಕರ ಆರಾಧ್ಯ ದೇವತೆ. ಕಾಲಾನಂತರ ವಲಸೆಗಾರ ಪಶುಪಾಲಕರು ಹಾಗೂ ನೆಲಸುಗಾರ ಕೃಷಿಕ ಸಮುದಾಯಗಳ ಪರಸ್ಪರ ಸಂಯೋಗದ ನಂತರ ಈ ಮಾರಮ್ಮ ಇವೆರಡೂ ಸಮುದಾಯಗಳ ಸಂಗಮ ದೇವತೆಯಾಗಿದ್ದಾಳೆ. ಮುಂದುವರೆದಂತೆ ದಕ್ಷಿಣ ಭಾರತದ ಎಲ್ಲಾ ಜಾತಿ-ಜನಾಂಗಗಳಲ್ಲಿ ಮಾರಿಯ ಆಚರಣೆ ಇದೆ. ಪ್ರಸ್ತುತ ಆಚರಣೆಯ ಹಿನ್ನೆಲೆಗೆ ಇರುವ ಕಥೆಯಂತೆ ಮಾದಿಗರ ಹುಡುಗ ಬ್ರಾಹ್ಮಣರ ಹುಡುಗಿಯನ್ನು ತನ್ನ ಜಾತಿ ವಿಷಯವನ್ನು ಮರೆಮಾಚಿ ಮದುವೆಯಾಗಿದ್ದ. ಕಾಲಾನಂತರ ನಿಜಸ್ಥಿತಿ ತಿಳಿದ ಬ್ರಾಹ್ಮಣ ಹುಡುಗಿ ’ನೀನು ಮುಂದಿನ ಪ್ರತೀ ಜನ್ಮದಲ್ಲಿ ಕೋಣನಾಗಿ ಹುಟ್ಟು; ನಾನು ಮಾರಿಯಾಗಿ ಹುಟ್ಟಿ ನಿನ್ನನ್ನು ಬಲಿತೆಗೆದುಕೊಳ್ಳುತ್ತೇನೆ. ಹಾಗೆಯೇ ನಿನ್ನ ಸಂತತಿ ಎಲ್ಲಾ ಹಸಾದಿಗಳಾಗಲಿ’ ಎಂದು ಶಾಪ ಹಾಕಿ ಕೊಂಡವೇರುತ್ತಾಲೆ. ಇಂಥ ಹನ್ನೆಲೆಯಲ್ಲಿರುವ ಆಚರಣೆಯನ್ನು ದಲಿತರು ವಿಶೇಷವಾಗಿ ಮಾದಿಗರು-ಮುಂದೆ ನಿಂತು ಪ್ರಧಾನ ಪಾತ್ರವಹಿಸಿ ಆಚರಿಸುವುದು ವಿಚಿತ್ರವಾಗಿ ಕಾಣುತ್ತದೆ. ಕನ್ನಡ ನಾಡಿನ ಬಹುತೇಕ ಮಾರಿಯ ಗುಡಿಗಳಲ್ಲಿ ಪ್ರಚಾರಿ ಮಾದಿಗರವನೇ ಆಗಿರುತ್ತಾನೆ. ಉಳಿದಂತೆ ಮಾರಿಯ ಕೋಣವನ್ನು ಹಿಡಿದು ತಂದು ಮೆರವಣಿಗೆ ಮಾಡುವ, ಬಲಿಕೊಡುವ, ಬಲಿಕೊಟ್ಟ ನಂತರ ರಕ್ತಮಿಶ್ರಿತ ಅನ್ನವನ್ನು ಚರಗ ಚೆಲ್ಲುವ ಇವೇ ಮೊದಲಾದ ಪ್ರಮುಖ ಕೆಲಸಗಳು ದಲಿತರವೇ ಆಗಿವೆ. ಮಾರಿಯ ಜಾತ್ರೆಗಳ ಆಚರಣೆಗಳ್ಲಲಿ ಯಾವುದೋ ಒಂದು ನೆಲೆಮಾತ್ರ ಮುಖ್ಯವಾಗದೆ ಬಹುಮುಖೀ ಆಯಾಮಗಳು ಮುಖ್ಯವಾಗುತ್ತವೆ. ವಿಶೇಷವೆಂದರೆ ಅಂಥ ಎಲ್ಲಾ ಆಯಾಮಗಳು ಪರಸ್ಪರ ಪೂರಕವಾಗದೆ ವಿರೋಧವಾಗಿಯೂ ಕಂಡುಬರುತ್ತವೆ.
ಈಗಾಗಲೇ ಪ್ರಸ್ತಾಪಿಸಿದಂತೆ ಮಾರಿಯ ಆಚರಣೆಗಳಲ್ಲಿ ದಲಿತ ವಿರೋಧಿ ನೆಲೆಗಳು ಸಾಕಷ್ಟು ಇದ್ದು ಅವುಗಳ ಮಧ್ಯೆ ದಲಿತರ ಚೈತನ್ಯದ ನೆಲಗಳು ಕಂಡುಬರುತ್ತವೆ. ಅಂಥವುಗಳಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸಬಹುದುದಾದರೆ ಜಾತ್ರೆಯ ಸಮಯದಲ್ಲಿ ಶೂದ್ರ ಇಲ್ಲವೆ ಪಂಚಮರ ಮೇಲೆ ದೇವತೆಯ ಆವಾಹನೆಯಾದಾಗ, ಆತನ ಕುಲದ ಕೀಳ್ಮೆಯಳಿದು, ಆತ ಅಂದಿನ ಮಟ್ಟಿಗೆ ಪುರೋಹಿತ ವರ‍್ಗವನ್ನು ಮೀರಿ ನಿಲ್ಲುತ್ತಾನೆ. ಅಂದಿನ ಮಟ್ಟಿಗೆ ಅವನಿಗೂ ಹಿರಿಯ ಸ್ಥಾನಮಾನಗಳು ಲಭಿಸುತ್ತವೆ. (ಕರ್ನಾಟಕ ಜಾತ್ರೆಗಳು; ಪುಟ-೧೭೦) ಇದೇ ರೀತಿಯ ಮತ್ತೊಂದು ಅಂಶ ಮಾರಿಹಬ್ಬಕ್ಕೂ ವಾರದ ಮುಂಚೆ ಕೋಣವನ್ನು ಹಿಡಿದು ನಂತರ ಊರ ತುಂಬಾ ಮೆರವಣಿಗೆ ಮಾಡುವ, ಮನೆ ಮನೆ ತಿರುಗಿಸುವ ಸಂದರ್ಭ, ತಮ್ಮ ಮನೆಯ ಮುಂದಕ್ಕೆ ಬಂದ ಕೋಣವನ್ನು ಎಣ್ಣೆ ಹಾಕಿ ಪೂಜಿಸುವ ಪರಿಕ್ರಮ ಗಮನಾರ್ಹವಾದುದು. ಇಲ್ಲಿ ಕೋಣ ಮತ್ತು ದಲಿತರು ಪೂಜನೀಯ ಸ್ಥಿತಿಗೆ ತಲುಪುವುದನ್ನು ಗಮನಿಸಬೇಕು. ಮಾರಮ್ಮನಿಗೆ ಸಂಬಂಧಿಸಿದ ಜನಪ್ರಿಯವಾಗಿರುವ ಕಥೆಯ ಪ್ರಕಾರ ಮಾರಿಯ ಗಂಡನಾದ ಹೊಲೆಯನೇ ಕೋಣನಾಗಿದ್ದರೆ, ಇಲ್ಲಿ ಜನ ಕೋಣವನ್ನು ಪೂಜಿಸುವ ಮೂಲಕ ಹೊಲೆಯನನ್ನು ಪೂಜಿಸಿದಂತಾಗುತ್ತದೆ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಪುಟ-೧೦೫) ಎಂಬ ವಿಚಾರ ಬಹಳ ಮಹತ್ವದ್ದಾಗುತ್ತದೆ.
ಮಾರಿಹಬ್ಬದ ಸಂದರ್ಭದಲ್ಲಿ ಮೂರ್ತಿ ತಯಾರಿಕೆಗಾಗಿ ಮರಕಡಿದು ತರುವ ಸಂಪ್ರದಾಯವೊಂದು ಕೆಲವಾರು ಪ್ರದೇಶಗಳಲ್ಲಿ ಪ್ರಚಲಿತವಿದೆ. ಈ ಸಂಪ್ರದಾಯದಲ್ಲಿ ಮಾರಿಯ ಮೂರ್ತಿಗೆ ಊರಿನ ಪ್ರಮುಖರು ಪೂಜಾರಿ, ಬಡಗಿ, ಕಾಡಿಗೆ ಹೋಗುವರು. ಹೀಗೆ ಮರ ತರಲು ಹೋಗುವಾಗ ಕಾಗೆ, ಒಂಟಿ ಬ್ರಾಹ್ಮಣ, ಸರ್ಪ ವಿಧವೆ ಅಡ್ಡ ಬಂದರೆ ಅಮಂಗಳವೆಂಬ ಭಾನವೆಯಿದೆ. (ಜಾನಪದ ಸಂಕಲನ, ಪುಟ-೬೨) ಈ ಭಾವನೆಯಲ್ಲಿ ಗಮನಿಸಬೇಕಾದುದೆಂದರೆ ಅಮಂಗಳಕರ ವಿಷಯದಲ್ಲಿ ಬ್ರಾಹ್ಮಣನೂ ಸೇರಿರುವುದು. ಆನಪದ ಸಂಪ್ರದಾಯಗಳಲ್ಲಿರುವ ವೈದಿಕ ವಿರೋಧಿತತ್ವಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಇದನ್ನು ವಿಶ್ಲೇಷಿಸುತ್ತಾ ಎಸ್.ಎಸ್.ಹಿರೇಮಠ ಅವರು ಹೇಳಿರುವ ಅಭಿಪ್ರಾಯ ಇಂತಿದೆ. ಬ್ರಾಹ್ಮಣರು ಹುಟ್ಟಿಸಿದ ಕಥೆಯ ಪ್ರಕಾರ ಆರಾಧಕ ವರ್ಗವೇ ತಮ್ಮ ಆರಾಧನಾ ವಸ್ತುವಿನ ವಿರುದ್ಧವಾಯಿತು. ದಲಿತ ದ್ರೋಹಿಯಾದ ಈ ಕಥೆಯ ಒಳಮರ್ಮವನ್ನು ತಿಳಿಯದ ಜನ ಇದನ್ನೇ ನಂಬಿದರು. ಆದರೆ ದಲಿತರು ಈ ದ್ರೋಹವನ್ನು ಸುಮ್ಮನೇ ಒಪ್ಪಿರಲಿಲ್ಲ. ಬ್ರಾಹ್ಮಣರನ್ನೇ ಅಸ್ಪೃಶ್ಯರಂತೆ ಕಂಡರು. ತಮ್ಮ ಕೇರಿಗಳಿಗೆ ಅವರು ಪ್ರವೇಶಿಸುವುದನ್ನು ಮೈಲಿಗೆ ಎಂದು ಭಾವಿಸಿದರು. ಮೇಲೆ ವಿವರಿಸಿದಂತೆ ಮಾರಮ್ಮನ ಮರ ತರುವಾಗ ಬ್ರಾಹ್ಮಣ ಎದುರಾದರೆ ಅಪಶಕುನ ಎನ್ನುವ ನಂಬಿಕೆಯೂ ಕೂಡ ಈ ಪ್ರತಿಭಟನೆಯ ಮೂಲದಿಂದ ಬಂದ ಆಶಯವೇ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨, ಜಾತ್ರೆಗಳು, ಪುಟ-೧೦೬).
ಮಾರಿಯ ಸಂಪ್ರದಾಯದೊಳಗೆ ದಲಿತ ಪ್ರಜ್ಞೆಯನ್ನು ಹುಡುಕುವಾಗ ಗಮನಿಸಬೆಕಾದ ಮತ್ತೊಂದು ಸಂಗತಿ ಅಸಾದಿಗಳದು. ಜಾತ್ರೆಯಲ್ಲಿ ಮಾರಿ ದೇವತೆಯ ಮುಂದೆ ಹಲಗೆ ಬಡಿಯುತ್ತಾ ಅತ್ಯಂತ ಅಶ್ಲೀಲ ಪದಗಳಲ್ಲಿ ಬೈಯ್ದು ಹಾಡುವ ಗಾಯಕ ಪರಂಪರೆ ಈ ಅಸಾದಿಗಳು; ಬ್ರಾಹ್ಮಣರ ಹುಡುಗಿಯೆಂದು ಹೇಳಲಾಗಿರುವ ಮಾರಿಯನ್ನು ಬೈಯುವ ಅಸಾದಿಗಳು ಮಾಡಿಗರು ಎಂಬುದನ್ನು ತಿಳಿದರೆ ಈ ಆಚರಣೆಗೆ ವಿಶೇಷ ಮಹತ್ವ ದೊರೆಯುತ್ತದೆ. ಹಿಂದೆ ಪ್ರಸ್ತಾಪಿಸಿರುವಂತೆ ಮಾರಿಗೆ ಬಲಿಕೊಡುವ ಕೋಣನಿಗೆ ಪೂಜೆ ಸಂದರೆ ಬಲಿತೆಗೆದುಕೊಳ್ಳುವ ಮಾರಿಗೆ ಅಸಾದಿಯಿಂದ ಬೈಗುಳ ಸಲ್ಲುವುದು ಕೇವಲ ಕಾರತಾಳೀಯವಲ್ಲ. ಇಂಥ ಆಚರಣೆಗಳ ಹಿಂದೆ ನೊಂದವರ ನೋವಿನ ದನಿ ಇದ್ದು, ಅದು ವ್ಯಕ್ತವಾಗುವ ರೂಪ ಇದಾಗಿದೆ. ಅಸಾದಿಗಳ ಬೈಗುಳ ಪದಗಳಲ್ಲಿ ಅಡಗಿರುವ ಅರ್ಥಗಳನ್ನು ಸರಿಯಾದ ರೀತಿಯಲ್ಲಿ ಶೋಧಿಸಿಲ್ಲ. ಇದಕ್ಕೆ ಪ್ರಮುಖವಾದ ಎರಡು ಕಾರಣಗಳಿವೆ. ಒಂದು, ಅಸಾದಿ ಮಾರಮ್ಮನ ಮಗ. ಈತ ಮಾರಿಯನ್ನು ಹೊಗಳುತ್ತಾನೆ. ಹಿಯ್ಯಾಳಿಸುತ್ತನೆ. ಆತ ಏನು ಮಾಡಿದರೂ ಮಾರಿಗೆ ಸಂತೋಷ ಎಂಬ ನಂಬಿಕೆಯನ್ನು ನಂಬಿದ್ದು; ಎರಡು, ಅಸಾದಿಗಳ ಪದಗಳು ಅಶ್ಲಿಲತೆಯ ಪರಮಾವದಿಯಾಗಿದ್ದು ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಾದರೂ ಹೇಗೆ? ಎಂಬ ಮಡಿವಂತ ಮನಸ್ಸಿನ ವಿದ್ವಾಂಸರ ಅವಜ್ಞೆಯಭಾವ ಅಸಾದಿಗಳೆಂದರೆ ಬೈಯ್ಯುವವರು ಮಾತ್ರವೆಂದು ಅನೇಕರು ತಿಳಿದಂತಿದೆ. ಆದರೆ ಬೈಯ್ಯುವುದರ ಜೊತೆಗೆ ಕೆಲವೊಂದು ಆಚರಣೆಗಳಲ್ಲೂ ಭಾಗಿಯಾಗುತ್ತಾರೆ. ಉದಾ: ಮಾರಮ್ಮನನ್ನು ಅದಕ್ಕಿಷ್ಟ ಬಂದಕಡೆ ಬಿಟ್ಟು ಬಂದಾಗ ’ಅಸಾದಿ ಮಾರಮ್ಮನನ್ನು ಒದ್ದು ಬಯ್ದು ಅಕೆ ಧರಿಸಿದ ವಡವೆಗಳನ್ನು ಕಿತ್ತುಕೊಂಡು ಬರುತ್ತಾನೆ. (ಜಾನಪದ ಜಗತ್ತು ಪುಟ-೩೩) ಅಸಾದಿ ಮಾರಮ್ಮನಿಂದು ಕಿತ್ತು ತರುವ ವಡವೆಗಳಲ್ಲಿ ತಾಳಿಯೂ ಸೇರಿಸುತ್ತದೆ ಎಂಬ ಅಂಶ ಅತ್ಯಂತ ಕುತೂಹಲಕರ. ಜಾತಿಯ ಕಾರಣಕ್ಕೆ ತನ್ನ ಸಂಬಂಧವನ್ನೆ ಕಳೆದುಕೊಂಡು ಮಾರಿಯ ಕೊರಳಲ್ಲಿರುವ ತಾಳಿಯನ್ನು ತಾನೇ ಸ್ವತಃ ಕೀಳುವುದರ ಮೂಲಕ ಮತ್ತೊಂದು ವಿನೂತನ ಪ್ರತಿಭಟನೆಯನ್ನು ಮಾಡುತ್ತಾನೆ ಎನಿಸುತ್ತದೆ.
’ಮಾತಂಗಿ’ ಮಾರಿಯ ಆಚರಣೆಗಳಲ್ಲಿ ಕಂಡುಬರುವ ಮತ್ತೊಂದು ದೇವತೆ. ಮಾರಿಯ ಗುಡಿಗಳು ಇದ್ದಲ್ಲೆಲ್ಲ ಆ ಗುಡಿಗಳ ಮುಂದೆ ಮಾತಂಗಿಯ ಗುಡಿಯೂ ಇರುತ್ತದೆ. ಮಾರಿ ಜಾತ್ರೆಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸುವ ಗುಡಿಸಲಿನ ಎದುರಿಗೂ ಮಾತಂಗಿಯ ಗುಡಿಸಲು ಹಾಕಲಾಗುತ್ತದೆ. ಮಾರಿಯ ಆಚರಣೆಗಳಲ್ಲಿ ಅಸಾದಿಗಳಷ್ಟೆ ಮಹತ್ವ ಮಾತಂಗಿಗೂ ಇದೆ. ಊರಮ್ಮನ ಜಾತ್ರೆಗಳಲ್ಲಿ ಮಾತಂಗಿ ದೇವತೆಯ ಅವತಾರವೆಂದು ಪರಿಗಣಿಸಲ್ಪಡುವಳು ಸೇರಿದ ಎಲ್ಲಾ ಜಾತಿಯ ಜನರನ್ನು ಅಶ್ಲೇಲವಾಗಿ ಬಯ್ಯುವ ಅವರ ಮೇಲೆ ಉಗುಳುವ ಹಕ್ಕುಳ್ಳವಳು. ಇದನ್ನು ಜನ ಪವಿತ್ರವೆಂದು ಭಾವಿಸುತ್ತಾರೆ. ಇದರಿಂದ ನಮ್ಮ ಪಾಪ ನಿವಾರಣೆಯಾಗುವುದೆಂದು ನಂಬುತ್ತಾರೆ (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು, ಪುಟ-೨೪೪) ಈ ಉಲ್ಲೇಖಿದಿಂದ ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿಯ ಜನರು ಮಾತಂಗಿಯ ಕಡೆಯಿಂದ ಉಗಿಸಿಕೊಳ್ಳುವುದು ದಲಿತರ ಪ್ರತಿಭಟನೆಯ ಮತ್ತೊಂದು ಪ್ರಮುಖ ಕಾರಣ. ಈ ಮಾತಂಗಿಯ ಗುಡಿಸಲಲ್ಲೇ ಶ್ರೀದೇವಿ ಮತ್ತು ಅವಳ ಹೊಲೆಯ ಪತಿ ವಾಸಿಸಿದ್ದು ಎಂಬ ನಂಬಿಕೆಯೇ ಆಗಿದೆ. ಜಾತ್ರೆಯಲ್ಲಿ ಮಾರಿಗುಡಿಯ ಮುಂದೆ ನಿರ್ಮಿಸಲಾದ ತಾತ್ಕಾಲಿಕ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಆಗ ಆಸಾದಿಗಳು ತಬ್ಬಲಿಗಳಂತೆ ಅಳುತ್ತಾರೆ. ಒಟ್ಟಾರೆ ಮಾತಂಗಿಯ ಸಂಪ್ರದಾಯಗಳಲ್ಲಿ ದಲಿತರ ಅಸಹಾಯಕತೆ ಹಾಗೂ ಆಕ್ರೊಶಗಳೆರಡು ಕಂಡುಬರುತ್ತವೆ. ಈ ಮಾತಂಗಿ ಬರೀ ಮಾರಿಯ ಆಚರಣೆಗಳಲ್ಲಿ ಮಾತ್ರವಲ್ಲದೆ ಎಲ್ಲಮ್ಮನಂಥ ಆಚರೆಣೆಗಳ್ಲಲೂ ಕಂಡು ಬರುವುದರ ಮೂಲಕ ಕೇವಲ ಒಂದು ಭಾವದ ಸಂಕೇತ ನಾನಲ್ಲ ಎಂಬುದನ್ನು ತೋರಿಸುವಂತಿದ್ದು ಮುಂದೆ ಈ ಬಗ್ಗೆ ಇನ್ನಷ್ಟು ಚರ್ಚಿಸಬಹುದಾಗಿದೆ. 
೨. ಮೈಲಾರ ಸಂಪ್ರದಾಯ
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯೆಪ್ರದೇಶಗಳನ್ನೊಳಗೊಂಡು ಡೆಕ್ಕನ್ ಪ್ರಸ್ಥಭೂಮಿಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಸರಣಗೊಂಡಿರುವ ಬಹುಜನಪ್ರಿಯ ಸಂಪ್ರದಾಯವೇ ಮೈಲಾರ ಸಂಪ್ರದಾಯ. ಕುರುಬರ ಸಂಸ್ಕೃತಿಗೆ ಸಂಬಂಧಿಸಿದ ಈ ಸಂಪ್ರದಾಯ ಯಾವುದೇ ಒಂದು ಸಂಸ್ಕೃತಿಗೆ ಮೀಸಲಾಗದೆ ಸಮಾಜದ ಎಲ್ಲಾ ಆತಿ-ಜನವರ್ಗಗಳ ಒಳಗೂ ಹರಡಿಕೊಂಡಿದೆ. ಮೈಲಾರದ ಗುರು ಸಂಪ್ರದಾಯದಂತಿರುವ ಗೊರವರು ಎಲ್ಲಾ ಸಮುದಾಯಗಳಿಂದಲೂ ಬರುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹಿರೇಮೈಲಾರದಲ್ಲಿ ಒಂದು ಕೇಂದ್ರ ಹಾಗೂ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ದೇವರಗುಡ್ಡದಲ್ಲಿ ಮತ್ತೊಂದು ಕೇಂದ್ರವಿದೆ. ಈ ಪಂಥಕ್ಕೂ ದಲಿತರಿಗೂ ನೇರವಾದ ಸಂಬಂಧವಿದೆ. ಅದನ್ನು ಎಸ್.ಎಸ್.ಹಿರೇಮಠ ಅವರು ಹೀಗೆ ಗುರುತಿಸಿದ್ದಾರೆ; ಶಿಶ್ನಾರಾಧಕ ಪಶುಪಾಲಕ ವಲಸೆಗಾರ ಕುರುಬರ ಮಾರಡಿಗಳ ದೇವರ ಮೈಲಾರಲಿಂಗ. ಇವರು ಸ್ವಯಂಭು ಲಿಂಗಗಳ ಸಂಸ್ಥಾಪಕರು. ನಾಗರಾದ ಹೊಲೆಮಾದಿಗರನ್ನು ನಾಸಮಾಡಿ ಅಂದರೆ ಹುತ್ತಗಳನ್ನು ನಾಶಮಾಡಿ ಅಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು (ಕನಾಟಕ ದಲಿತ ಸಂಸ್ಕೃತಿ, ಪರಂಪರೆ-೨, ಜಾತ್ರೆಗಳು-ಪುಟ-೩೨) ಈ ಮಾತನ್ನು ಒಪ್ಪುವುದಾದರೆ ಪಶುಪಾಲಕ ವಲೇಸೆಗಾರ ಕುರುಬರಿಗೂ ಹಾಗೂ ಹೊಲೆಮಾದಿಗರಿಗೂ ಏರ್ಪಟ್ಟ ಸಂಘರ್ಷದಲ್ಲಿ ಹೊಲೆ ಮಾದಿಗರ ಧಮನವಾಗಿದೆ. ಹಾಗೆಯೇ ಮೈಲಾರಲಿಂಗ ಮಣಿಮಲ್ಲಾಸರರನ್ನು ಸಂಹಾರ ಮಾಡಿದ ಕಥನಗಳು ದೊರೆಯುತ್ತವೆ. ಇಂದಿಗೂ ಈ ಘಟನೆ ಆಚರಣಾ ರೂಪದಲ್ಲಿ ಉಳಿದು ಬಂದಿರುವುದನ್ನು ನೋಡಬಹುದು. ಮೈಲಾರದ ಜಾತ್ರೆಯಲ್ಲಿ ಕಡಬಿನ ಕಾಳಗ ನಡೆಯುತ್ತದೆ. ಅದರಲ್ಲಿ ಹೊಲೆಯರವನೊಬ್ಬ ದೇವರ ಮುಂದೆ ಬಂದು ನಿಂತು ಕಕ್ಕಾಡಾರತಿ ಬೆಳಗಿ ಕಕ್ಕಡದಿಂದ ಅಲ್ಲಿದ್ದ ಗೂರವರನ್ನು ಹೊಡೆಯುತ್ತಾನೆ. ಅಲ್ಲಿದ್ದವರು ಅವನನ್ನು ತಿರುಗಿ ಕಡಬುಗಳಿಂದ ಹೊಡೆಯುತ್ತಾರೆ. ಅದಾಗುವ ವೇಳೆಯಲ್ಲಿ ಆ ಹೊಲೆಯರವನು ಅಲ್ಲಿಂದ ಓಡಿ ಹೋಗಿ ಕುರುಬತೆವ್ವನ ಗುಡಿಯ ಸಮೀಪ ಅಡಗಿಕೊಳ್ಳುತ್ತಾನೆ. ಆಮೇಲೆ ಖಡ್ಗಪಾಣಿಗಳಾಗಿ ನಿಂತ ಕಂಚಾವೀರರು ಅವನನ್ನು ಬೆನ್ನಟ್ಟಿ ಹೋಗಿ ಹಿಡಿದು ಅವನ ಕುತ್ತಿಗೆಯ ಮೇಲೆ ಖಡ್ಗವನ್ನಿಟ್ಟು ದೇವರಲ್ಲಿಗೆ ಕರೆತರುತ್ತಾರೆ (ಮೈಲಾರಲಿಂಗ-ಖಂಡೋಬ ಸಾಂಸ್ಕೃತಿಕ ಅಧ್ಯಯನ ಪುಟ-೧೩೫) ಅಂದರೆ ದಲಿತರು ಮೈಲಾರನ ಪಂಥದಲ್ಲಿ ಸಂಹರಿಸಲ್ಪಟ್ಟವರು. ಇನ್ನೂ ದಲಿತರ ಸಂಹಾರಕ್ಕೆ ಸಹಕರಿಸಿದ ಮತ್ತೊಂದು ದಲಿತರ ಗುಂಪು ಇದ್ದು ಅವರೇ ಕಂಚಾವೀರರು. ಕಂಚಾವೀರರು ಹೊಲೆಯರೇ ಅಗಿದ್ದಾರೆ. ಮೈಲಾರ ಪಂಥದ ಅನೇಕ ಸಂದರ್ಭದಲ್ಲಿ ಕಂಚಾವೀರರು ಉಗ್ರ ಪವಾಡಪುರುಷರಾಗಿ ಕಾಣುತ್ತಾರೆ. ಬಗನಿಗೂಟ, ಕಬ್ಬಿಣ ಸರಪಳಿಗಳನ್ನು ಕಾಲು ಕೈಗಳಲ್ಲಿ ಹೊಡೆದುಕೊಳ್ಳುತ್ತಾರೆ (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨, ಜಾತ್ರೆಗಳು, ಪುಟ-೩೩) ಹೊಲೆಯರಿಗೆ ಮೋಸಮಾಡಿದ ವಿಚಿತ್ರ ಪ್ರಸಂಗ ಇದಾಗಿರುವುದು ಗಮನಿಸಬೇಕಾದ ಸಂಗತಿ. ಈ ಕಂಚಾವೀರರು ಮೈಲಾರ ಪಂಥದಲ್ಲಿ ಅತೀ ಹೆಚ್ಚಿನ ಸ್ಥಾನಮಾನಗಳನ್ನು ಹೊಂದಿದ್ದಾರೆ. ಮಾದಿಗ ಕುಲದವರು ಗೊರಪ್ಪ, ಗೊರಮ್ಮ ಆಗಬೇಕಾದರೆ ಅವರಿಗೆ ಧೀಕ್ಷೆ ಕೊಡಬೇಕಾದವರು ಈ ಕಂಚಾವೀರರೆ. ಮೈಲಾರಲಿಂಗನ ಪಾದರಕ್ಷೆ ಮತ್ತು ಬಿಲ್ಲುಗಳಿಗೆ ಭಕ್ತರು ಹಾಕುವ ಕಾಣಿಕೆ ಹಣಕ್ಕೆ ವಾರಸುದಾರರಾದ ಕಂಚಾವೀರರು ಒಡಬು ಹೇಳುವವರೂ ಆಗಿದ್ದಾರೆ. ಇಂಥ ಪರಸ್ಪರ ವಿರೋಧಾಭಾಸ ಸ್ವರೂಪದ ಮೈಲಾರದ ದಲಿತ ಪರಂಪರೆಬಗ್ಗೆ ಇನ್ನೂ ಸೂಕ್ಷ್ಮವಾದ ಅಧ್ಯಯನಗಳು ನಡೆಯಬೇಕಿದೆ. ಅನೇಕ ದಲಿತರ ಮನೆ ದೈವವಾಗಿ ಮೈಲಾರ ಲಿಂಗವನ್ನು ಸ್ವೀಕರಿಸಿರುವುದರ ಹಿಂದಿನ ಗುಟ್ಟೇನು? ದಲಿತ ಗೊರಪ್ಪ-ಗೊರಮ್ಮರು ಅನ್ಯ ಜಾತಿಯಿಂದ ಬಂದ ಗೊರಪ್ಪ, ಗೊರಮ್ಮರಿಗಿಂತ ಹೇಗೆ ಭಿನ್ನ? ಎಂಬ ವಿಚಾರಗಳನ್ನು ಆಲೋಚಿಸಿದರೆ ಈ ಪಂಥದೊಳಗಿನ ದಲಿತ ಪ್ರಜ್ಞೆ ಸ್ಪಷ್ಟವಾಗುತ್ತದೆ. 
೩. ಎಲ್ಲಮ್ಮನ ಸಂಪ್ರದಾಯ
ಕರ್ನಾಟಕದಲ್ಲಿ ಪ್ರಚಲಿತವಿರುವ ಬಹುಜನಪ್ರಿಯ ಆರಾಧನಾ ಸಂಪ್ರದಾಯ ಎಲ್ಲಮ್ಮನ ಸಂಪ್ರದಾಯ ಕರ್ನಾಟಕದ ಮೂರು ಸ್ಥಳಗಳಲ್ಲಿ ಇದರ ಕೇಂದ್ರಗಳಿವೆ. ಅವುಗಳೆಂದರೆ ಸವದತ್ತಿ, ಚಂದ್ರಗುತ್ತಿ ಹಾಗೂ ಉಚ್ಚಂಗಿದುರ್ಗ. ಈ ಸ್ಥಳಗಳ್ಲಿ ವರ್ಷಕ್ಕೊಮ್ಮೆ ಬೃಹತ್ ಪ್ರಮಾಣದ ಜಾತ್ರೆಗಳು ನಡೆಯುತ್ತದೆ. ಜಾತ್ರೆಗಳಲ್ಲಿ ಎಲ್ಲಮ್ಮನ ಭಕ್ತರು ಅದಕ್ಕಿಂತ ಹೆಚ್ಚಾಗಿ ದೇವತೆಯನ್ನು ಮೈಮೇಲೆ ಆಹ್ವಾನಿಸಿಕೊಂಡವರು ಜೋತತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಸಂಪ್ರದಾಯ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರಚಲಿತವಿದ್ದು ಅನೇಕ ರೂಪಾಂತರಗಳನ್ನು ಹೊಂದಿದೆ. 
ಎಲ್ಲಮ್ಮ ಶೂದ್ರರರ ಹೆಣ್ಣು. ಮೇಲ್ಜಾತಿ ಗಂಡನಿಂದ ಹತಳಾದ ಈಕೆ ನಂತರದ ದಿನಗಳ್ಲಿ ಜೀವ ಸೆಲೆಯಾಗಿ ಹರಿದವಳು. ಶೂದ್ರ ಹೆಣ್ಣು ಮಗಳ ಈ ಪರಂಪರೆಯಲ್ಲಿ ಸಮಾಜದ ಎಲ್ಲಾ ಜಾತಿ-ವರ್ಗದ ಜನ ಭಕ್ತರಾಗಿದ್ದು ವ್ಯಾಪಕವಾದ ನೆಲೆಯ ವಿಸ್ತಾರವಿದೆ. ಇಂಥ ಪರಂಪರೆಯೊಳಗೆ ದಲಿತರ ಸ್ಥನವೇನು? ಆಚರಣೆಗಳಲ್ಲಿ ಕಂಡುಬರುವ ದಲಿತ ಪ್ರಜ್ಞೆ ಎಂಥದ್ದು ಎಂಬುದನ್ನು ತಿಳಿಯಬಹುದು.
ಎಲ್ಲಮ್ಮನ ಸಂಪ್ರದಯದಲ್ಲಿ ದಲಿತರ ಪ್ರತಿನಿಧೀಕರಣವನ್ನು ಹಾಗೂ ದಲಿತ ಪ್ರಜ್ಞೆಯನ್ನು ಹುಡುಕ ಹೋರಟಾಗ ಈಗಲೂ ಚಾಲ್ತಿಯಲ್ಲಿರುವ ಆಚರಣೆಯೊಂದು ಗಮನಾರ್ಹ. ಎಲ್ಲಮ್ಮ ತನಗಿಷ್ಟಬಂದ ಹೆಣ್ಣು-ಗಮಡಿನ ಮೇಲೆ ಒದಗಿಬರುತ್ತದೆ ಎಂಬುದು ಒಂದು ನಂಬಿಕೆ. ಹೀಗೆ ಒದಗಿಬಂದಾಗ ಅಂಥವರು ದೇವಿಯ ಗುಡ್ಡಕ್ಕೆ ಹೋಗಿ ಮುತ್ತು ಕಟ್ಟಿಸಿಕೊಂಡು ಬರುತ್ತಾರೆ. ಬರುವಾಗ ದೇವಿಯ ಮೂರ್ತಿ ಹಾಗು ಅದನ್ನು ಇದಲು ಪುಟ್ಟಿ ಅಥವಾ ಕೊಡವನ್ನು ತರುತ್ತಾರೆ ತಂದು ಮೊದಲ ಪೂಜೆಗೆ ಹೋಗುವುದು ಮಾದಿಗರ ಕೇರಿಯಲ್ಲಿರುವ ಬಾನಿ ಅಥವಾ ಗಲ್ಲಾಕ್ಕೆ ಗಲ್ಲಾ ನೀರಿನಿಂದ ಪುಟ್ಟಿ ಅಥವಾ ಕೊಡವನ್ನು ಶುದ್ಧೀಕರಿಸಿ ಪೂಜಿಸಿಕೊಂಡು ತಮ್ಮ ಮನೆಯೊಳಗೆ ತಂದುಕೊಳ್ಳುತ್ತಾರೆ. ಹಾಗಾದರೆ ಏನಿದು ಸಂಪ್ರದಾಯ? ದೇವಿಯ ವಸ್ತುಗಳನ್ನು ತಮ್ಮವನ್ನಾಗಿ ಮಾಡಿಕೊಳ್ಳಲು ಧರ್ಮ ಹದಮಾಡುವ, ಅನೇಕರಿಗೆ ಅನಿಷ್ಟದಂತೆ ಕಾಣುವ ಬಾನಿಯ ಹತ್ತಿರ ಹೋಗುವುದೇಕೆ? ಹೋದರೂ ಅದರ ನೀರಿನಿಂದ ಆ ವಸ್ತುಗಳನ್ನು ಶುದ್ದೀಕರಿಸುವುದರ ಹಿಂದಿನ ನಂಬಿಕೆ ಏನು? ಎಂಬುದನ್ನು ವಿಚಾರಮಾಡಬೇಕಾಗುತ್ತದೆ. ಈ ಬಗ್ಗೆ ಆಲೋಚಿಸಿದರೆ ಅನೇಕ ಸಂಗತಿಗಳು ತಿಳಿದು ಬರುತ್ತದೆ. ಎಲ್ಲಮ್ಮನ ಕಥೆಯಲ್ಲಿ/ಐತಿಹ್ಯದಲ್ಲಿ ಕಂಡುಬರುವಂತೆ ಪರುಶುರಮ ಮಾತಂಗಿಯನ್ನು ಕೊಂದಾಗ ಆಕೆ ಮಾದಿಗರು ಧರ್ಮ ಹದಮಾಡುವ ಕರಿಬಾನೆಯಲ್ಲಿ ಉಳಿಯುತ್ತಾಳೆ. (ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ-೨ ಜಾತ್ರೆಗಳು-ಪುಟ-೨೪೫) ಇದೊಂದು ರೀತಿಯ ಅಭಿಪ್ರಾಯವಾದರೆ ಇನ್ನೊಂದು ಅಭಿಪ್ರಾಯ ಹೀಗಿದೆ; ಒಮ್ಮೆ ಶಾಪಗ್ರಸ್ಥಳಾದ ಎಲ್ಲಮ್ಮ ಕೃಷ್ಟರೋಗಿಯಾಗಿ ಸಂಕಟ ಪಡುತ್ತಿರುತ್ತಾಳೆ. ಮಾತಂಗಿಯ ಮನೆಯ ಕರಿಬಾನಿಯ ನೀರಿನಲ್ಲಿ ಸ್ನಾನಮಾಡಿದಾಗ ಅವಳ ಕುಷ್ಠರೊಗವು ನಿವಾರಣೆಯಾಗುತ್ತದೆ. ಆಗ ಕರಿಬಾನಿಯ ನೀರನ್ನು ಸೇವಿಸಿ ನನ್ನಂತೆ ಎಲ್ಲರೂ ಗುಣಮುಖರಾಗಲಿ ಎಂದು ಹರಿಸುತ್ತಾಳೆ (ಚಂದ್ರಗುತ್ತಿ ಕ್ಷೇತ್ರದ ಸಾಂಸ್ಕೃತಿಕ ಸಂಕಥನ, ಪುಟ-೧೭೨) ಇಂಥ ನಂಬಿಕೆಗಳ ಕಾರಣದಿಂದಾಗಿಯೇ ಮಾದಿಗರ ಕರಿಬಾನಿಯ ನೀರು ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿ ಜನಕ್ಕೂ ಪವಿತ್ರವಾದುದಾಗಿದೆ. ಇಂಥ ಕಾರಣಕ್ಕಾಗಿ ದೇವಿಯ ಭಕ್ತರು ಮೊದಲು ಕರಿಬಾನಿಯ ಪೂಜೆಸಲ್ಲಿಸುತ್ತಾರೆ.
ಮೇಲಿನ ವಿವರಗಳಲ್ಲಿ ಮಾತಂಗಿಯ ಪ್ರಸ್ತಾಪವಾಯಿತು. ಮಾರಿಯ ಸಂಪ್ರದಾಯದೊಳಗೂ ಈ ಮಾತಂಗಿಯ ವಿಷಯ ಬಂತು. ಹಾಗಾದರೆ ಆ ಮಾತಂಗಿಗೂ ಈ ಮಾತಂಗಿಗೂ ಏನು ಸಂಬಂಧ ಎಂಬ ಅನುಮಾನ ಬರುವುದುಂಟು. ಹಾಗೆ ನೋಡಿದರೆ ಈ ಎರಡೂ ಸಂಪ್ರದಾಯಗಳಲ್ಲಿ ಬರುವ ಮಾತಂಗಿಯರು ಒಬ್ಬರೇ ಆಗಬೇಕಿಲ್ಲ. ಏಕೆಂದರೆ, ದ್ರಾವಿಡರ ಮಾದಿಗ ಪದವೆ ಸಂಸ್ಕೃತಕ್ಕೆ ಮಾತಂಗವಾಗಿ ಸೇರಿತು ಎಂಬ ವಾದವು ದ್ರಾವಿಡ ಜ್ಞಾತಿಪದಕೋಶದಲ್ಲಿ ಮಂಡಿತವಾಗಿರುವುದನ್ನು ನೋಡಿದರೆ ಮಾತಂಗಿ ಎಂಬುದು ಒಬ್ಬ ಮಹಿಳೆಗಿರುವ ನಿರ್ದಿಷ್ಟ ಹೆಸರು ಎನ್ನುವುದಕ್ಕಿಂತ ಜನಾಂಗವಾಚಕ ಪದವಾಗಿ ಬಳಕೆಯಾದುದರ ಬಗ್ಗೆ ಯಾವುದೇ ಅನುಮಾನ ಪಡೆಬೇಕಿಲ್ಲ. ಈ ಪಂಥದಲ್ಲಿ ಬರುವ ಮಾತಂತಿ ಎಲ್ಲಮ್ಮನನ್ನು ಆಕೆಯ ಗಂಡ ಹಾಗೂ ಮಗನಿಂದ ರಕ್ಷಣೆಮಾಡಿದ್ದಕ್ಕಾಗಿ ಮೊದಲ ಪೂಜೆ ಸಲ್ಲುತ್ತದೆ. ಒಟ್ಟಾರೆ ಎಲ್ಲಮ್ಮನ ಸಂಪ್ರದಾಯದಲ್ಲಿ ದಲಿತ ಸಮುದಾಯಗಳ ಬಗೆಗಿನ ದೃಷ್ಟಿ ಉನ್ನತಸ್ಥಾನದಲ್ಲಿ ಇಲ್ಲದಿದ್ದರೂ ದಲಿತರು ಮಾತ್ರ ಹೆಚ್ಚು ಭಕ್ತರು ಹಾಗೂ ಜೋಗತಿಯರಾಗುತ್ತಿದ್ದಾರೆ. ಮಾತಂಗಿಯ ಶ್ರೇಷ್ಟತೆಯನ್ನು ಕೊಂಡಾಡುತ್ತಿದ್ದಾರೆ.
೪. ಭೂತಾರಾಧನೆಯ ಸಂಪ್ರದಾಯ
ಕರ್ನಾಟಕದ ತುಳುನಾಡಿನ ಜಾನಪದ ಸಂಪ್ರದಾಯಗಳಲ್ಲಿ ಭೂತಾರಾಧನೆ ಅತ್ಯಂತ ಮಹತ್ವದ ಆಚರಣೆ ಎನಿಸಿದೆ. ಇದರ ಬಗ್ಗೆ ಬರೀ ದೇಶಿಯ ವಿದ್ವಾಂಸರಷ್ಟೇ ಅಲ್ಲದೆ ಅನೇಕ ವಿದೇಶಿ ವಿದ್ವಾಂಸರು ಆಸಕ್ತಿ ವಹಿಸಿ ಅಧ್ಯಯನಗಳನ್ನು ನಡೆಸಿದ್ದಾರೆ. ಹಿರಿಯರ ಆರಾಧನಾ ಕೂಪವಾದ ಈ ಆಚರಣೆಯಲ್ಲಿ ನೂರಾರು ಭೂತಗಳಿವೆ. ಭೂತಗಳೆಂದರೆ ಇಲ್ಲಿ ಪ್ರೇತಗಳಲ್ಲ ಬದಲಿಗೆ ದೈವೀ ರೂಪಗಳು. ದೈವೀ ರೂಪಗಳೆಂದರೆ ಪೂರ‍್ಣ ದೈವಗಲ್ಲ ದೇವ-ಮನುಷ್ಯನ ಮಧ್ಯೆದ ಸ್ಥಿತಿ. ಪ್ರಸ್ತುತ ಭೂತಾರಾಧನೆಯಲ್ಲಿ ಪ್ರಮುಖವಾದ ಎರಡು ಗುಂಪುಗಳಿವೆ. ಒಂದು ಭೂತ ಕಟ್ಟಿಸುವವರದು ಮತ್ತೊಂದು ಭೂತ ಕಟ್ಟುವವರು. ಇವರ ಪರಸ್ಪರ ಸಂಬಂಧಗಳನ್ನು ವಿಶ್ಲೇಷಿಸಿಕೊಳ್ಳುವುದು ದಲಿತ ಪ್ರಜ್ಞೆಯ ಶೋಧವೆನಿಸುತ್ತದೆ.
ಇಲ್ಲಿ ಮೊದಲಿಗೆ ಭೂತಾರಾಧನೆಯ ಸಮಗ್ರ ಆಚರಣೆಯನ್ನು ತಿಳಿಯುವುದು ಸೂಕ್ತ. ಎ.ವಿ.ನಾದಡ ಅವರು ಹೇಳಿರುವಂತೆ ಭೂತಾರಾಧನೆಯು ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟವಾದ ಜನಪ್ರಿಯ ಆರಾಧನಾ ಸಂಪ್ರದಾಯ. ಬಣ್ಣ, ವೇಷ, ಬೂಷಣ, ಮಾತು, ಹಾಡು, ಕುಣಿತಗಳನ್ನು ಒಳಗೊಂಡಿರುವ ಇದು ಧಾರ‍್ಮಿಕ ಜನಪದ ರಂಗಭೂಮಿಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳೆಂದರೆ ಸತ್ಯನ್ಯಾಯಗಳನ್ನು ಬಿತ್ತರಿಸುವ ದೈವ ಶಕ್ತಿಗಳೆಂದೂ ತಿಳಿಯಲಾಗಿದೆ. ಅವು ಅಲೌಕಿಕ ಜಗತ್ತಿನಲ್ಲಿ ವಾಸಮಾಡುತ್ತವೆ ಹಾಗೂ ವಿಶಿಷ್ಟ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಮೂಲಕ ಮೈದುಂಬಿ ನಂಬಿದವರ ರಕ್ಷಣೆ ಮಾಡುತ್ತವೆ. ದಕ್ಷಿಣ ಕನ್ನಡದಲ್ಲಿ ಇಂಥ ಸುಮಾರು ೪೦೦ಕ್ಕೂ ಹೆಚ್ಚಿನ ಭೂತಗಳನ್ನು ಗುರುತಿಸಲಾಗಿದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಪಾತ್ರಿ ಎನ್ನುತ್ತರೆ. ಭೂತದ ವೇಷ ಹಾಕುವವನು ಭೂತಕಟ್ಟುವವರು ಎನ್ನುತ್ತಾರೆ. ಪರಿಶಿಷ್ಟವರ್ಗಕ್ಕೆ ಸೇರಿದ ಪರವ, ಪಂಬದ ಮತ್ತು ಮಲಿಕೆ ಜನಾಂಗದವರಷ್ಟೇ ಭೂತ ಕಟ್ಟುವವರು. ಭೂತದ ಕಲಾವಿದ ಮುಖವರ್ಣಿಕೆ ಮಾಡಿಕೊಳ್ಳುವಾಗ ಆ ಭೂತದ ಉಗಮ ಸಾಹಸ, ಕಾರಣಿಕ, ಪ್ರಸರಣಗಳನ್ನು ಕುರಿತ ಹಾಡನ್ನು ಹಾಡುತ್ತಾರೆ. ಇದನ್ನು ಪಾಡ್ಡನ ಎನ್ನುತ್ತಾರೆ. ಈಪಾಡ್ಡನವನ್ನು ಹಾಡುವವಳು ಭೂತ ಕಲಾವಿದನ ಕುಟುಂಬದ ಹೆಂಗಸು, ಈಕೆ ತೆಂಬರೆ ಎನ್ನುವ ಧರ್ಮನಾದ್ಯವನ್ನು ಬಡಿಯುತ್ತಾ ಲಯಬದ್ಧವಾಗಿ ಹಾಡುತ್ತಿರುತ್ತಾಲೆ (ಜಾನಪದ ಕೈಪಿಡಿ -೩೭೪).
ಇಂಥ ವಿಶಿಷ್ಟ ಆರಾಧನೆಯಲ್ಲಿ ಮೇಲೆ ವಿವರಿಸಿರುವಂತೆ ಪರವ-ಪಂಬದ, ನಲಿಕೆ ಮೊದಲಾದ ದಲಿತ ಜನಾಂಗದವರು ಭೂತಕಟ್ಟುವುದರ ಮೂಲಕ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಭೂತಕಟ್ಟಿಸುವ ಭಂಟ ಮೊದಲಾದ ಮೇಲ್ವರ್ಗದವರ ಹೊಲ-ಮನೆಗಳಲ್ಲಿ ವರ್ಷವಿಡೀ ಜೀತಮಾಡುವ ಈ ಜನ ವರ್ಷಕ್ಕೊಮ್ಮೆ ಬರುವ ಭೂತಾರಾದನೆಯಲ್ಲಿ ತಮ್ಮ ಮುಂದೆ ಕೈಮುಗಿದು ನಿಲ್ಲುವ ಒಡೆಯರ ಸ್ಥಿತಿಯನ್ನು ಕಾಣುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ತಾನು ಹೇಳಿದಂತೆ ಕೇಳಬೇಕೆಂದು ಆಜ್ಞಾಪಿಸುತ್ತಾನೆ. ಬಹುಶಃ ವರ್ಷವಿಡೀ ಒಡೆಯರಿಂದ ಅನುಭವಿಸಿದ ನೋವನ್ನು ಭೂತದ ಆಹಾವನೆಯ ನೆಪದಲ್ಲಿ ಹೊರಹಾಕುತ್ತಾನೆ ಎನಿಸುತ್ತದೆ. ಭೂತ ಕಟ್ಟಿದವರು ಹಾಗೂ ಒಡೆಯನ ಮಧ್ಯೆ ಪಾತ್ರಿ ಎನ್ನುವ ವ್ಯಕ್ತಿಯೊಬ್ಬ ಇರುತ್ತಾನೆ. ಆದರೂ ಆ ಸಂದರ್ಭದ ಮಟ್ಟಿಗೆ ಭೂತದ್ದೇ ಮೇಲ್‌ಗೈ ಭೂತದ ಆರಾಧನೆಗೆ ಕೋಲ ಏರ್ಪಡಿಸುವ ಮೇಲ್ವರ್ಗ ಭೂತ ಕಟ್ಟುವವನ ಆಯ್ಕೆ ಹಾಗೂ ಭೂತದ ನುಡಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಾರಾದರೂ ಅನೇಕ ಸಲ ಅದು ಫಲ ನೀಡದೆ ಭೂತವೇ ಮೇಲಗೈ ಸಾಧಿಸುತ್ತದೆ. ಭೂತ ಕಟ್ಟಿಸಿದವರ ಕುಟುಂಬದ ಹಿರಿಯರು ಭೂತದ ರೂಪದಲ್ಲಿ ಬರುತ್ತಾರೆಂಬ ನಂಬಿಕೆ ಇಂಥ ಸ್ಥಿತಿಗೆ ಕಾರಣವಾಗುತ್ತದೆ. ಗಮನಿಸಬೇಕಾದುದೆಂದರೆ ಕೆಳಜಾತಿಯವರ ಮೈಮೇಲೆ ಮೇಲ್ವರ್ಗದ ಭೂತಗಳು ಬರುವುದು ಬಂದಾಗ ತಮಗಿಷ್ಟವಿಲ್ಲದಿದ್ದರೂ ಭೂತಕಟ್ಟಿದವರನ್ನೂ ಗೌರವಿಸುವುದ; ಭೂತಕಟ್ಟಿದವರಾದರೂ ತಾವೇ ದೈವ ಎಂಬಂತೆ ಭಾವಿಸಿಕೊಂಡು ವರ್ತಿಸುವ ವರ್ತನೆಗಳನ್ನು ವಿಶೇಷವಾಗಿ ದಲಿತ ಸಂವೇದನೆಯ ಹಿನ್ನೆಲೆಯಲ್ಲಿ ಗಮನಿಸಬೇಕು.
ಭೂತಾರಾಧನೆಯಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಭೂತದ ಆರಾಧನೆಯು ಇನ್ನೊಂದು ಅರ್ಥದಲ್ಲಿ ವೀರರ ಆರಾಧನೆ. ದಲಿತ ವೀರರ ಕುರಿತು ಅಧ್ಯಯನ ಮಾಡಿದರೆ, ಮಾನವ ಹಕ್ಕಿಗಾಗಿ ಹೋರಾಡುವವರನ್ನು ಮೇಲು ಜಾತಿಯ ಭೂತಗಳು ಕೊಲೆಮಾಡಿವೆ ಎನ್ನುವುದು ಗೊತ್ತಾಗುತ್ತದೆ. ಸೋಜಿಗದ ವಿಷಯವೆಂದರೆ ಇಲ್ಲಿ ಕೊಲೆ ಮಾಡಿದ ಮತ್ತು ಮಾಡಿಕೊಂಡ ಎರಡೂ ಶಕ್ತಿಗಳ ಆರಾಧನೆ ನಡೆಯುತ್ತದೆ. ಕೊರಗತನಿಯ, ಕೊಡ್ಡಬ್ಬು, ಮುಗೇರ‍್ಲು, ಕಲ್ಕುಡ, ಕಲ್ಲುರ್ಟಿ ಇಂಥ ಭೂತಗಳು ಕೆಲವು ನಿರ್ದಿಷ್ಟ ಪ್ರಾಣಿಗಳ ಮುಖವಾಡಗಳನ್ನು ಹೊಂದಿರುತ್ತವೆ. ಹಂದಿ (ಪಂಜುರ್ಲಿ) ಅಂಥ ಮುಖವಾಡಗಳಲ್ಲಿ ಬಹಳ ಮುಖ್ಯವಾದುದಾಗಿದೆ. ಇಂಥ ಹಲವಾರು ಸಂಗತಿಗಳು ಭೂತಾರಾಧನೆಯ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡಬಲ್ಲವು. 
ಭೂತರಾಧನೆಯ ಬಗ್ಗೆ ಅಧ್ಯಯನ ಮಾಡಿರುವ ಕೆಲವು ವಿದ್ವಾಂಸರು ಪ್ರಸ್ತುತ ಆಚರಣೆ ಹೇಗೆ ದಲಿತ ವಿರೋಧಿಯಾಗಿದೆ ಎಂಬ ಅಂಶಗಳ ಬಗ್ಗೆ ಗಮನ ಸೆಳೆದಿದ್ದಾರೆ. ಈ ವಿಷಯದಲ್ಲಿ ಅರವಿಂದ ಮಾಲಗತ್ತಿಯವರಂತೂ ಭೂತಾರಾಧನೆಯ ಜನಾಂಗಿಕ ಅಧಃಪತನ, ಜಾತಿಯನ್ನು ಮತ್ತಷ್ಟು ಭದ್ರಗೊಳಿಸುವ ವ್ಯವಸ್ಥೆ, ಇದು ಒಂದು ಹಗಲು ದರೋಡೆ ಎಂದು ಕಟು ವಾಕ್ಯಗಳಿಂದ ವಿಮರ್ಶಿಸಿದ್ದಾರೆ (ಪುರಾಣ ಜಾನಪದ ಮತ್ತು ದೇಶೀವಾದ, ಪುಟ-೧೯೬) ಹೌದು ಇವೆಲ್ಲ ಸತ್ಯವೆ. ಆದರೆ ಇಷ್ಟು ಕಟ್ಟುನಿಟ್ಟಿನ ವ್ಯವಸ್ಥೆಯೊಳಗೆ ಕೆಲವಾದರೂ ದಲಿತರ ಚೈತನ್ಯ ನೆಲೆಗಳಿವೆ ಎಂಬುದನ್ನು ತಿರಸ್ಕರಿಸಲಾಗದು.
೫. ಇತರೆ ಆಚರಣೆಗಳು
ಕನ್ನಡ ನಾಡಿನ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಪ್ರಚಲಿತವಿರುವ ಅನೇಕ ಪ್ರಾಚೀನ ಆಚರಣೆಗಳ ಜೊತೆ ಆಧುನಿಕ ಕಾಲಕ್ಕೆ ಉಗಮಿಸಿದ ಅಥವಾ ಬೆಳಕಿಗೆ ಬಂದ ಅನೇಕ ಆಚರಣೆಗಳು ಇವೆ. ಅಂಥವುಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ದಾವಣೆಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಅಜ್ಜುಯ್ಯನ ಸಂಪ್ರದಾಯ. ದೆವ್ವ ಬಡಿಸುವ ಪ್ರಧಾನ ಕಾರ‍್ಯ ಅಜ್ಜುಯ್ಯನದಾದರೂ ಮಾನವನ ಸಕಲ ಸಂಕಷಟಗಳನ್ನು ಪರಿಹರಿಸುವ ಶಕ್ತಿಯೂ ಇದೆ. ಈ ಸಂಪ್ರದಾಯದ ವಿಶೇಷವೆಂದರೆ ದೆವ್ವ ಮೈಮೇಲೆ ಬಂದವರಿಗೆ ಅಜ್ಜಯ್ಯನ (ಕರಿಬಸವ) ಹತ್ತಿರ ಕರೆದೊಯ್ಯಲಾಗುತ್ತದೆ. ಆಗ ಆ ರೋಗಿಗೆ ಅಜ್ಜಯ್ಯ ಸೇವೆಯಾಗಿ ನಿಷ್ಠೆಯಿಂದ ಒಮದು ವಾರವೋ ತಿಂಗಳೋ ಪೂಜಿಸುವ ಜವಾಬ್ದಾರಿ ಹೊರಿಸಲಾಗುತ್ತದೆ. ವಿಶೇಷವೆಂದರೆ ಅಜ್ಜಯ್ಯನನ್ನು ಪೂಜಿಸುತ್ತ ಪೂಜಿಸುತ್ತಾ ರೋಗಿ ಭಕ್ತ ಸ್ಥಾನದಿಂದ ಪೂಜಾರಿ ಸ್ಥಾನಕ್ಕೆ ಬಡ್ತಿ ಪಡೆಯುತ್ತಾನೆ. ರೋಗಿಯಾಗಿದ್ದ ವ್ಯಕ್ತಿ ಇಲ್ಲಿಂದ ತಾನೇ ದೈವವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವನಾಗುತ್ತಾನೆ. ರೋಗಿಯಾಗಿದ್ದ ವ್ಯಕ್ತಿ ಇಲ್ಲಿಂದ ತಾನೇ ದೈವವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವವನಾಗುತ್ತಾನೆ. ಇಂಥ ಪೂಜಾರಿಗಳನ್ನು ಗಮನಿಸದರೆ ಅವರೆಲ್ಲರೂ ದಲಿತ ಹಾಗೂ ಮಹಿಳೆಯರೇ ಆಗಿರುತ್ತಾರೆ. ಯಾಕೆ ಹೀಗೆ ಎಂದರೆ, ದೆವ್ವ ಮೈಮೇಲೆ ಬರುವುದು ಬಹುತೇಕ ದಲಿತರಲ್ಲೇ ಹೆಚ್ಚು. ಹಾಗಾಗಿ ದೆವ್ವ ಬಿಡಿಸಲು ಹೋಗಿ ತಾವೇ ದೈವವಾಗಿದ್ದಾರೆ. ಇಂಥ ಪೂಜಾರಿಗಳ ಹತ್ತಿರ ಸಮಾಜದ ಎಲ್ಲಾವರ್ಗದ ಜನ ನಿಡುತ್ತಾರೆ. ಹಾಗಾಗಿ ಇಂಥ ಆಚರಣೆಗಳನ್ನು ದಲಿತ ಪ್ರಜ್ಞೆಯ ಹಿನ್ನೆಲೆಯಲ್ಲಿ ನೋಡುವುದ ಅತ್ಯಂತ ಕುತೂಹಲಕರ ಸಂಗತಿ ಎನಿಸುತ್ತದೆ. ಇಂಥ ಇನ್ನೂ ಹಲವಾರು ಆಚರಣೆಗಳು ಸಮಾಜದಲ್ಲಿ ಪ್ರಚಲಿತವಿದ್ದು ಅವುಗಳಲ್ಲಿ ದಲಿತ ಸಂವೇದನೆ ವ್ಯಕ್ತವಾಗಿರುವ ರೂಪಗಳನ್ನು ಗುರುತಿಸಬೇಕಾಗಿದೆ..
ಆಚರಣೆಗಳು ಮತ್ತು ವಾದ್ಯಗಳು
ಜನಪದ ಆಚರಣೆಗಳಲ್ಲಿ ಬಹುತೇಕ ಪ್ರದರ್ಶನಾತ್ಮಕ ಆಯಾಮಗಳೇ ಹೆಚ್ಚು. ಹಾಗೆಯೇ ವಾದ್ಯಗಳ ಬಳಕೆ ಸಾಮಾನಯ. ಅವುಗಳಲ್ಲ ಕಹಳೆ, ಉರುಮೆ, ಹಲಗೆ, ತೆಂಬರಿ, ಶಹನಾಯಿ, ಚೌಡಿಕೆ ಹೀಗೆ ಹತ್ತಾರು ಚರ್ಮ ಮತ್ತು ತಂತಿ ವಾದ್ಯಗಳು ಮುಖ್ಯವಾಗುತ್ತವೆ. ಧರ್ಮ ವಾದ್ಯಗಳಂತೂ ಪ್ರಾಚೀನ ಕಾಲದಿಂದ ಇಂದಿನವರೆಗೂ ಅದ್ಭುವಾದ ಅಸ್ತಿತ್ವವನ್ನು ಸಾಧಿಸಿಕೊಂಡಿವೆ. ಈ ವಾದ್ಯಗಳು ಇಲ್ಲದೆ ಯಾವ ಆಚರಣೆಗಳೂ ನಡೆಸಲಾರವು. ಇಂಥ ಬಹಳ ಪ್ರಮುಖವಾದ ವಾದ್ಯಗಳನ್ನು ನುಡಿಸುವವರು ಸಮಾಜದ ಕೆಳವರ್ಗದ ಜನರೇ ವಾದ್ಯಗಾರರಾಗುವುದು ಸರಿಯಲ್ಲವೆನಿಸಿದರೂ ವಾದ್ಯಗಾರರಾದ ದಲಿತರು ತಮ್ಮ ಅಂತರಾಳದ ಗುಟ್ಟನ್ನು ಹೇಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಕಂಡರೆ ಅಶ್ಚರ್ಯವೆನಿಸುತ್ತದೆ. ಮೇಲ್ವರ್ಗದ ಪೂಜಾರಿ ದೇವರು ಹೊತ್ತಿರುತ್ತಾನೆ. ಅದರ ಮುಂದೆ ವಾದ್ಯಗಾರ ದೇವ ವಾಕ್ಯದ ಆಧಾರದ ಮೇಲೆ ವಾದ್ಯಗಾರ ನುಡಿಸಬೇಕಾದರೂ ನುಡಿಸುವವನ ಆಳದ ನೋವಿನ ನೆಲೆಗಳು ಅಭಿವ್ಯಕ್ತಗೊಳ್ಳುವ ಕ್ರಮ ವಿಶಿಷ್ಟವಾದುದು. ದೇವರನ್ನು ಹೊತ್ತ ಪೂಜಾರಿಗೆ ದೇವರು ಮೈಮೇಲೆ ಬರುವುದೇ ತಾನು ಬಾರಿಸಿದ ವಾದ್ಯದ ತಾಳ-ಗತಿಗಳ ಪರಿಣಾಮ ಎಂಬ ಸಂಗತಿ ತಿಳಿದ ತಕ್ಷಣ ವಾದ್ಯಗಾರನಿಗೆ ತನ್ನ ಸ್ಥಾನದ ಅರಿವಾಗುತ್ತದೆ. ಹಾಗೆಯೇ ಮುಂದುವರೆದು ದೇವರನ್ನು ಕುಣಿಸಲು ಬೇರೆ ಬೇರೆ ತಾಳಗಳನ್ನು ಬಾರಿಸುತ್ತಾ ಹೋಗುತ್ತಾನೆ. ದೇವರು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹೋಗುತ್ತದೆ. ತಾಳು-ಕುಣಿತಗಳ ಗತಿ ತಾರಕಕ್ಕೇರಿದಂತೆಲ್ಲ ಖಂಡಿತಾ ನುಡಿಸುವವರ ಮನದಾಳದ ನೋವು ಕಾಣುತ್ತದೆ. ಅವನ್ನು ನಾನು ಕುಣಿಸುತ್ತಿದ್ದೇನೆ ಎಂಬ ಭಾವನೆ ಆದರಿಸಿದಂತೆ ಭಾಸವಾಗುತ್ತದೆ. ದೈವ ವಾಕ್ಯದಂತೆ ನುಡಿಸಬೇಕಿದ್ದ ವಾದ್ಯಗಾರ ಒಂದು ಹಂತ ದಾಟಿದ ಮೇಲೆ ಇಡೀ ಕುಣಿತ ವಾದ್ಯಗಾರನ ಹಿಡಿತಕ್ಕೆ ಬರುತ್ತದೆ. ಇಂಥ ಸಂದರ್ಭಗಳೆಲ್ಲೆಲ್ಲ ದಲಿತ ಪ್ರಜ್ಞೆ ಜಾಗೃತಗೊಂಡಿರುವುದ ಸ್ಪಷ್ಟವಾಗುತ್ತದೆ.
ಒಟ್ಟಾರೆ ಹೇಳುವುದಾದರೆ ಜನಪರ ನಂಬಿಕೆ - ಸಂಪ್ರದಾಯ - ಆಚರಣೆಗಳು ಬಹುಪಾಲು ಸಂದರ್ಭಗಳ್ಲಲಿ ಸಮಾಜದಲ್ಲಿರುವ ಏಣಿ ಶ್ರೇಣಿ ವ್ಯವಸ್ಥೆಯನ್ನು ಸಮರ್ಥಿಸುವಂತೆ ಕಾಣುತ್ತನೆ. ಆದರೆ ಸೂಕ್ಷ್ಮವಾಗಿ ಆಚರಣೆಗಳ ಪ್ರದರ್ಶನಗಳನ್ನು ಗಮನಿಸಿದರೆ ಅವುಗಳೊಳಗೆ ಗುಪ್ತಗಾಮಿನಿಯಾಗಿ ಹರಿದ ದಲಿತ ಪ್ರಜ್ಞೆ ಕಾಣುತ್ತದೆ. 

ಪರಾಮರ್ಶನ
೧. ಜಾನಪದ ಕೈಪಿಡಿ, ಎಚ್.ಜೆ.ಲಕ್ಕಪ್ಪಗೌಡ, ೧೯೯೭, ಕನ್ನಡ ಪ್ರಸ್ತಕ ಪ್ರಾಧೀಕಾರ, ಬೆಂಗಳೂರು.
೨. ಜಾನಪದ ಅಧ್ಯಯನ, ದೇಜಗೌ, ೨೦೦೧, ಕನ್ನಡ ಪುಸ್ತಕ ಪ್ರಾಧೀಕಾರ, ಬೆಂಗಳೂರು.
೩. ಸಾಹಿತ್ಯ, ಸಂಸ್ಕೃತಿ ಮತ್ತು ದಲಿತ ಪ್ರಜ್ಞೆ, ಅರವಿಂದ ಮಾಲಗತ್ತಿ, ೨೦೦೩, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
೪. ಪುರಾಣ ಜಾನಪದ ಮತ್ತು ದೇಶಿವಾದ, ಅರವಿಂದ ಮಾಲಗತ್ತಿ, ೧೯೯೯ ಕ.ಸಾ.ಪ. ಬೆಂಗಳೂರು
೫. ದ್ರಾವಿಡ ಜಾನಪದ, ಸಂ: ತೀ.ನಂ ಶಂಕರನಾರಾಯಣ, ೧೯೮೫, ಬಿ.ಅರ್.ಪಿ, ಕನ್ನಡವಿಭಾಗ, ಶಿವಮೊಗ್ಗ.
೬. ಕರ್ನಾಟಕದ ಬುಡಕಟ್ಟುಗಳು-೧ ಪ್ರ.ಸಂ.ಹೆಚ್.ಜೆ.ಲಕ್ಕಪ್ಪಗೌಡ, ೧೯೯೮, ಕ.ಜಾ.ಯ. ಅಕಾಡೆಮಿ. ಬೆಂಗಳೂರು.
೭. ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ, ಜಾತ್ರೆಗಳು, ಎಸ್.ಎಸ್.ಹಿರೇಮಠ, ೧೯೯೩; ಸಮತಾ ಪ್ರಾಕಾಸನ, ಹೊಸಪೇಟೆ.
೮. ಜನಪದ ಸಮಾಜ ಸಂಸ್ಕೃತಿ, ಎಸ್.ಎಸ್.ಹಿರೇಮಠ, ೨೦೦೫ ಸೂರ‍್ಯಪ್ರಕಾಶನ, ಮಲ್ಲಾಡಿಹಳ್ಳಿ
೯. ಕನಾಟಕ ಜಾನಪದ, ಪ್ರ.ಸಂ.ಎಸ್.ಕೆ ಕರೀಂದಾನ್, ೧೯೮೯, ಕ.ಜಾ.ಯ.ಅ.ಬೆಂಗಳೂರು.
೧೦. ಕರ್ನಾಟಕ ಜಾತ್ರೆಗಳು, ಸಾ; ಸಿ.ಎಸ್.ಶಿವಕುಮಾರಸ್ವಾಮಿ, ೧೯೮೮, ಕನ್ನಡ ವಿಭಾಗ, ಬಿ.ಆರ್.ಪಿ
೧೧. ಜಾನಪದ ಸಂಕಲನ, ಬಸವರಾಜ ನೆಲ್ಲಿಸರ,
೧೨. ಜಾನಪದ ಜಗತ್ತು ಗಿoಟ-II ೧೯೯೦, ಕ.ಜಾನಪದ ಪರಿಷತ್, ಬೆಂಗಳೂರು
೧೩. ಮೈಲಾರಲಿಂಗ -ಖಂಡೋಬಾ ಸಾಂಸ್ಕೃತಿಕ ಅಧ್ಯಯನ, ಎಂ.ಬಿ.ನೇಗಿನ ಹಾಳ, ಕರ್ನಾಟಕ ವಿ.ವಿ. ಧಾರವಾಡ.

ಡಾ.ಎಸ್.ಎಂ.ಮುತ್ತಯ್ಯ 

No comments:

Post a Comment