Saturday, 27 September 2014

ಹಡಪದ ಅಪ್ಪಣ್ಣ : ಒಂದು ಚಿಂತನೆ


ಹನ್ನೆರಡನೇ ಶತಮಾನದಲ್ಲಿ ನಡೆದ ವಚನ ಚಳವಳಿ ಇಡೀ ಮಾನವ ಪ್ರಪಂಚದಲ್ಲಿಯೇ ಒಂದು ಅಪರೂಪ. ಇಂಥ ಚಳವಳಿ ನಮ್ಮ ಕನ್ನಡ ನೆಲದಲ್ಲಿ ನಡೆದ ಘಟನೆ ಎಂಬುದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ಆ ಕಾಲಕ್ಕೆ ಸಮಾಜದ ಬೇರೂರಿದ್ದ ಅನೇಕ ವಿಕಾರಗಳನ್ನು ಹೊಡೆದೋಡಿಸಲು ವಚನಕಾರರು ನಡಸಿದ ಪ್ರಯತ್ನ ಅತ್ಯಂತ ಶ್ಲಾಘನೀಯ. ಮುಖ್ಯವಾಗಿ ಧರ್ಮ-ಪ್ರಭುತ್ವ ಆ ಕಾಲದಲ್ಲಿ ಸೃಷ್ಟಿಮಾಡಿದ ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಮಾಡಿದ ಕೆಲಸ  ಮುಖ್ಯವಾದುದು. ಈ ಹಿನ್ನೆಯಲ್ಲಿ ಬಸವಣ್ಣ ಕಲ್ಯಾಣದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಕರೆ ಕೊಟ್ಟಾಗ  ರಾಷ್ಟ್ರದ ವಿವಿಧ ಕಡೆಗಳಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಯಲ್ಲಿ ನಲುಗಿದ್ದ ಜನ ಕಲ್ಯಾಣಕ್ಕೆ ಸಿಹಿಯ ವಾಸನೆ ಹಿಡಿದ ಇರುವೆಯಂತೆ  ಸಾಲಿಟ್ಟರು. ಹೀಗೆ ಬಂದವರೆಲ್ಲ ವಿವಿಧ ಜಾತಿ ಹಾಗೂ ವೃತ್ತಿಗಳ ಕಾರಣಕ್ಕೆ ನೊಂದು ನಲುಗಿದವರು. ಇಂಥ ಜನರಿಗೆಲ್ಲ ಬಸವಣ್ಣ ಹಾಗೂ ಆತನ ಕಲ್ಯಾಣ ಬಿಡುಗಡೆಯ ಮಾರ್ಗವಾಗಿ ಕಂಡಿತು. ಇದರ ಫಲವಾಗಿಯೇ ವಚನಕಾರರಲ್ಲಿ ಬಹುಪಾಲು ಜನ ಸಮಾಜದ ಕೆಳಸ್ತರದಲ್ಲಿದ್ದವರೇ ಆಗಿದ್ದಾರೆ. 
ಹೀಗೆ ಸಾಮಾಜಿಕ ಅಸಮಾನತೆಯ ಕ್ರೂರ ದೃಷ್ಟಿಗೆ ಬಲಿಯಾದ ಜನಾಂಗಗಳಿಂದ ಬಂದ ವ್ಯಕ್ತಿಗಳು ತಮ್ಮ ವೃತ್ತಿಗಳನ್ನು ಯಾವುದೇ ಕೀಳರಿಮೆ ಇಲ್ಲದಂತೆ ಅನುಸರಿಸಲು ಕಲ್ಯಾಣ ವೇದಿಕೆಯಾಯಿತು. ಅಷ್ಟೇ ಅಲ್ಲ ಈ ಸಮಾನತೆಯ ತತ್ವವನ್ನು ಇಡೀ ಸಮಾಜಕ್ಕೆ ಸಾರುವ ವೇದಿಕೆಯೂ ಆಯಿತು. ಇಂಥ ಪ್ರವಾಹದಲ್ಲಿ ಬಂದ ಕೆಳವರ್ಗದ ವಚನಕಾರರಲ್ಲಿ ನಮ್ಮ ಹಡಪದ ಅಪ್ಪಣ್ಣ ಒಬ್ಬರು. 
ಹಡಪದ ’ಅಪ್ಪಣ್ಣನವರದು ತಾಂಬೂಲ ಕರಂಡ ಕಾಯಕದವನಾಗಿದ್ದ. "ಹಡಪ" ಎಂದರೆ ತಾಂಬೂಲದ ಚೀಲ. ಇನ್ನೂಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕದ ಚೀಲ. ವೀರಶೈವರಲ್ಲಿರುವ ಹಡಪದ ಕಾಯಕದವರಂತೂ ತಾವು ಅಪ್ಪಣ್ಣನವರ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಅವನ ವೃತ್ತಿ ಕ್ಷೌರಮಾಡುವುದು ಎಂಬುದಕ್ಕೆ ಆತನ ವಚನಗಳಲ್ಲಿ ಆಧಾರವಿಲ್ಲ. ಹಾಗಾಗಿ ಈತ ತಾಂಬೂಲ ಪಿಕದಾನಿ ಹಿಡಿಯುವ ವೃತ್ತಿಯವನಾಗಿದ್ದ ಎಂಬುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಕಲ್ಯಾಣ ಪಟ್ಟಣದಲ್ಲಿ ಬಸವಾದಿ ಪ್ರಮಥರ ಜೊತೆಯಲ್ಲಿದ್ದ ಹಡಪದ ಅಪ್ಪಣ್ಣ ಬಸವಣ್ಣನವರಿಗೆ ಅಪ್ತನಾಗಿದ್ದನು. ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಹತ್ತಿರದವನಾಗಿದ್ದವನು. ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಈತನ ಹೆಂಡತಿ. ಚೆನ್ನಬಸವೇಶ್ವರ ಈತನ ಗುರು. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರ ಜೊತೆ ಕೂಡಲಸಂಗಮದವರೆಗೂ ಹೋಗುತ್ತಾನೆ. ಅವರ ಅಪ್ಪಣೆಯ ಮೇರೆಗೆ ಕಲ್ಯಾಣಕ್ಕೆ ಹೋಗಿ ನೀಲಮ್ಮನವರನ್ನು ಕರೆತರುವಷ್ಟರಲ್ಲಿಯೇ ಬಸವಣ್ಣನವರು ಐಕ್ಯರಾದ ಸಂಗತಿ ತಿಳಿಯುತ್ತದೆ. ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರೂ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.’(ವಿಕಿಪೀಡಿಯಾ, ವಚನ ಸಂಚಯ ಅಂತರ್ಜಾಲ ತಾಣಗಳಿಂದ) 
ಹಡಪದ ಅಪ್ಪಣ್ಣ ಅವರು ’ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಅಂಕಿತದಲ್ಲಿ ೨೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಹೆಚ್ಚು ವಚನಗಳು ಷಟ್-ಸ್ಥಲ ತತ್ವ ನಿರೂಪಣೆಗೆ ಮೀಸಲಾಗಿವೆ . ಕೆಲವು ವಿಶಿಷ್ಟ ಕಥನ ಶೈಲಿಯ ಮಾದರಿಯನ್ನು ಅನುಸರಿಸಿದರೆ ಮತ್ತೆ ಕೆಲವು ಬೆಡಗಿನ ವಚನಗಳಾಗಿವೆ. ಒಟ್ಟಾರೆ ಈತನ ವಚನಗಳು ಗ್ರಹಿಸಲು ಹೆಚ್ಚು ಸುಲಭವಾಗಿವೆ.
ಶರಣರ ತತ್ವಗಳಲ್ಲಿ ಕಾಯಕದ ತತ್ವದ ಪರಿಕಲ್ಪನೆ ತುಂಬಾ ಮುಖ್ಯವಾದುದು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಕಾಯಕ ಮಾಡದೆ ಉಣ್ಣುವುದು ಅಪರಾಧ ಎಂಬುದು ಇವರ ಭಾವನೆ. ಹಾಗಾಗಿಯೇ ಎಲ್ಲಾ ವಚನಕಾರರಲ್ಲೂ ಕಾಯಕ ನಿಷ್ಠೆಯಿದೆ. ಕಾಯಕದ ಬಗ್ಗೆ ಹಡಪದ ಹಪ್ಪಣ್ಣ ಹೇಳಿದ ಒಂದು ವಚನ ಇಲ್ಲಿ ಗಮನಾರ್ಹ.
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು,
ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು.
ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು.
ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು.
ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು.
ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು.
ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು.
ಇದನರಿದು, ಇವೆಲ್ಲವನು ಕಳೆದು,
ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು,
ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ,
ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು.

ಅನ್ನ, ಹೊನ್ನು, ಹೆಣ್ಣು, ಹಾಲು, ಹೂ ಹಣ್ಣು, ತರಗೆಲೆ ಇವುಗಳಲ್ಲ ಯಾವುದನ್ನು ನೇರವಾಗಿ ತೆಗದುಕೊಂಡರು ಅದು ಇನ್ನೊಂದರ ಹಂಗಾಗಿರುತ್ತದೆ. ಹಾಗಾಗಿ ತನ್ನ ತಾಂಬೂಲದ ಕೆಲಸ ಮಾಡಿ ಲಿಂಗಜಂಗಮರು ನೀಡಿದ ಪ್ರಸಾದವನ್ನು ತಿಂದರೆ ನನ್ನ ಹುಟ್ಟು ಸಾರ್ಥಕವಾಗಿ ಮುಕ್ತಿ ದಕ್ಕುತ್ತದೆ ಎಂಬ ಮುಕ್ತಭಾವನೆಯನ್ನು ಇಲ್ಲಿ ವ್ಯಕ್ತಮಾಡಿದ್ದಾರೆ. ನಿಜ ಶ್ರಮದಿಂದ ಏನನ್ನೂ ಮಾಡದೆ ಎಲ್ಲವೂ ಬೇಕೆನ್ನುವ ಪ್ರಸ್ತುತ ಸಮಾಜಕ್ಕೆ ಅಪ್ಪಣ್ಣನ ಈ ಮಾತು ಖಂಡಿತಾ ಮಾರ್ಗದರ್ಶಿ. ತನ್ನ ಕೆಸವನ್ನು ತಾ ಮಾಡಿ ಯಾವುದೇ ಹಂಗಿಲ್ಲದ ಬದುಕನ್ನು ಬದುಕುವ ಅನಿವಾರ್ಯತೆ ಇಂದಿನ ಸಮಾಜಕ್ಕೆ ಇರುವುದರಿಂದ ಇಂಥ ವಿಚಾರಗಳು ಬೆಳಕಾಗಬೇಕಿದೆ. 
ಪ್ರಸ್ತುತ ಸಮಾಜದಲ್ಲಿ ಮನುಷ್ಯ ವಿವೇಕರಹಿತ ನಡೆಯನ್ನು ನಡೆಯುತ್ತಿದ್ದಾನೆ. ಪ್ರಕೃತಿಯ ಚರಾಚರವು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿ ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಯಾವುದೇ ಒಂದು ಕೆಲಸವನ್ನು ನಾನು ಮಾಡಿದೆ ಎಂಬ ವೈಯುಕ್ತಿಕ ದುರಹಂಕಾರದ ನೆಲೆಯಲ್ಲಿ ಭಾವಿಸುತ್ತಿದ್ದಾನೆ. ಇನ್ನೊಬ್ಬರಿಗೆ ಏನನ್ನಾರೂ ಕೊಟ್ಟರೆ ಅದನ್ನು ನಾನು ಕೊಟ್ಟೆ ಎಂದು ಕೊಳ್ಳುತ್ತಾನೆ. ಇಂಥ ಸಮಾಜದ ಎದುರಿಗೆ ಅಪ್ಪಣ್ಣ ಇಟ್ಟ ಪ್ರಶ್ನೆ ಇದು 
ಅನ್ನವನ್ನಿಕ್ಕಿದರೇನು ? ಹೊನ್ನ ಕೊಟ್ಟರೇನು ?
ಹೆಣ್ಣು ಕೊಟ್ಟರೇನು ? ಮಣ್ಣು ಕೊಟ್ಟರೇನು ? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ ?
ಇದಕ್ಕೆ ಪುಣ್ಯವಾವುದು, ಪಾಪವಾವುದು ?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಈ ವಚನದಲ್ಲಿ ಪ್ರಧಾನವಾಗಿ ಅನ್ನ, ಹೊನ್ನು, ಮಣ್ಣು ಮತ್ತು ಹೆಣ್ಣುಗಳನ್ನು ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂಬ ಅರ್ಥವಿಲ್ಲದ ಮಾತನ್ನು ಪ್ರಶ್ನಿಸಲಾಗಿದೆ. ಆರ್ಘ್ಯ ಕೊಡುವ ಬ್ರಾಹ್ಮಣನೊಬ್ಬ ನದಿಯ ನೀರು ತನ್ನ ಬೊಗಸೆಗೆ ಬಂದಾಕ್ಷಣ ತನ್ನದೆಂದು ಭಾವಿಸಿ ಇದರಿಂದ ನನಗೆ ಪುಣ್ಯ ಉಂಟಾಗುತ್ತದೆ ಎಂದು ಭಾವಿಸುವುದು ಎಷ್ಟು ತಮಾಷೆ ಎಂಬುದರ ಬಗ್ಗೆ ನಮ್ಮ ಗಮನಸೆಳೆಯುತ್ತದೆ. ಇಲ್ಲಿ ಇರುವ ಮುಖ್ಯವಾದ ಪ್ರಶ್ನೆಯೆಂದರೆ ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ಅವರೇ ಸೃಷ್ಟಿಸಿದರೆ? ಇಂಥ ಸುಲುಭ ವಿಚಾರವನ್ನು ಅರಿಯದೇ ವರ್ತಿಸುವ ಜನರ ಬಗ್ಗೆ ಏನು ಹೇಳಲಿ? ಇದನ್ನು ತಿಳಿಯದೇ ಇರುವ ವ್ಯಕ್ತಿಗಳು ಈ ರೀತಿಯ ಯಾವ ದಾನ, ಸೇವೆಗಳಿಂದ ಯಾವುದೇ ಫಲವಿಲ್ಲ ಎಂಬುದು ಇಲ್ಲಿಯ ಆಶಯ.
ವಚನಕಾರರಲ್ಲಿ ಕಂಡು ಬರುವ ಮತ್ತೊಂದು ಮೌಲ್ಯ ಭಕ್ತಿ ಮತ್ತು ಭಕ್ತನಿಗೆ ಸಂಬಂಧಿಸಿದ್ದು. ಇವರಲ್ಲಿ ಭಕ್ತಿಯೆಂಬು ತೋರುಂಬ ಲಾಭವಲ್ಲ. ಹಾಗೆಯೇ ಭಕ್ತನಾಗುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಂಥದ್ದರಲ್ಲಿ ಭಕ್ತಿಯ ಹೆಸರೇಳಿ ಬದುಕುವ ವ್ಯಕ್ತಿಗಳಿಗೇನು ಕಡಿಮೆ ಇರಲಿಲ್ಲ. ಹಾಗಾಗಿಯೇ ಬಹುತೇಕ ವಚನಕಾರರು ಭಕ್ತಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.   ಈ ಬಗ್ಗೆ ಹಡಪದ ಅಪ್ಪಣ್ಣ  ಹೇಳಿರುವ ಕೆಲವು ಮಾತುಗಳನ್ನು ಇಲ್ಲಿ ಗಮನಿಸುವುದು ಸೂಕ್ತ
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ 

 ಈ ವಚನದಲ್ಲಿ ಶರಣರು ಮಾಡುವ ಭಕ್ತಿ ಜೀವನ ಮುಖವಾಡವಿಲ್ಲದ  ನೈಜವಾದುದು ಎಂಬುದನ್ನು ಹೇಳುವುದರ ಮೂಲಕ ಆದರ್ಶ ಶರಣತ್ವದ ಸ್ಥಿತಿಯನ್ನು ಹೇಳಲಾಗಿದೆ. ಆದರೆ ಎಲ್ಲಾ ಶರಣರು ತಮ್ಮ ಭಕ್ತಿಯನ್ನು ಹೀಗೆ ಮಾಡುವುದಿಲ್ಲ ಎಂಬುದನ್ನು ಆ ಮೂಲಕ ಶರಣರ ನಾಟಕೀಯತೆಯನ್ನು ವಿಡಂಭಿಸಿರುವುದು ಇದೆ. ಇದಕ್ಕೆ ಈ ಮುಂದಿನ ಎರಡು ವಚನಗಳನ್ನು ನೋಡಬಹುದು. 
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ . 

ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ. 
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ, 
ಲಿಂಗ ಜಂಗಮಕ್ಕೆ ದೂರ, 
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.

ಮೇಲಿನ ವಚನಗಳಲ್ಲಿ ತೋರಿಕೆಯ ಭಕ್ತಿ ಮಾಡುವ ಶರಣರ ಡಾಂಭಿಕತೆಯನ್ನು ವಿಡಂಭಿಸಿರುವುದನ್ನು ನೋಡಬಹುದು. ಭಕ್ತಿಯನ್ನು ಲಾಭದ ಆಸೆಗೆ ಮೋಸದ ಕ್ರಿಯೆ ಎಂಬಂತೆ ಮಾಡುವವರಿದ್ದಾರೆ. ಹಾಗೆ ಮಾಡಿದರೆ ಅದರಿಂದ ಯಾವ ಲಾಭವೂ ಆಗಲಾರದು ಎಂಬುದು ಇಲ್ಲಿನ ಮುಖ್ಯ ಸಂದೇಶವಾಗಿದೆ. ಇಲ್ಲಿನ ಭಕ್ತಿಯನ್ನು ಸನ್ಮಾರ್ಗದ ಬದುಕಿನ ಕ್ರಮವೆಂದು ಭಾವಿಸಿದರೆ ಅದರಿಂದ ಸಿಗುವ ಮುಕ್ತಿ ಉತ್ತಮ ಜೀವನದ ಸ್ಥಿತಿ ಎಂಬುದನ್ನು ಸೂಚಿಸುತ್ತದೆ. ಇಂಥ ವಿಶಾಲ ನೆಲೆಯಲ್ಲಿ ವಚನಗಳನ್ನು ಓದಿದರೆ ವಚನ ಸಾಹಿತ್ಯವು ಕೇವಲ ಭಕ್ತಿಯ ಭಾವನೆಗಳಷ್ಟೇ ಆಗದೆ ಉತ್ತಮ ಜೀವನದ ಮೌಲ್ಯಗಳಾಗಿ ಕಾಣಿಸುತ್ತವೆ. ಈ ಅಗತ್ಯ ನಮ್ಮ ಸಮಕಾಲೀನ ಸಮಾಜಕ್ಕಿದೆ.

ಡಾ. ಎಸ್.ಎಂ. ಮುತ್ತಯ್ಯ, 
















4 comments:

  1. ಧನ್ಯವಾದಗಳು ಡಾ ಮುತ್ತಯ್ಯ ಸರ್

    ReplyDelete
  2. ಒಳ್ಳೆಯ ಮಾಹಿತಿ ಸರ್

    ReplyDelete
    Replies
    1. ಥ್ಯಾಂಕ್ ಯು ಸರ್ ತುಂಬಾ ಒಲೆಯ ವಿಚಾರ ಕೊಟ್ಟಿದಿರಾ ಹಡಪದ ಅಪ್ಪಣ್ಣ ಅವರ ಬಗ್ಗೆ ಇನ್ನು ನಾವುಗಳು ತಿಳಿದುಕೊದು ಬಾಹಳ ಇದೆ ಮಾಹಿತಿಯನ್ನು ಪೋಸ್ಟ್ ಮಾಡಿ ನಿಮಗೆ ತುಂಬು ಹೃದಯದಿಂದ ದನ್ಯವಾದಗಳು ಸರ್

      Delete
  3. ಅದ್ಭುತವಾದ ವಚನಗಳು ಅದರ ವಿವರಣೆಗಳನ್ನು ತಿಳಿಸುವ ರೀತಿ ತುಂಬಾ ಚೆನ್ನಾಗಿದೆ ಸರ್ ಅಭಿನಂದನೆಗಳು...

    ReplyDelete