Saturday 27 September 2014

ಶರಣರ ದಾಸೋಹ ತತ್ವ

ಕರ್ನಾಟಕದಲ್ಲಿ ನಡೆದ ಸಾಮಾಜಿಕ ಚಳುವಳಿಗಳಲ್ಲಿ ಹನ್ನೆರಡನೇ ಶತಮಾನದ ವಚನ ಚಳವಳಿ ಅಪರೂಪವಾದುದು ಅಷ್ಟೇ ಪ್ರಮುಖವಾದುದು. ಐತಿಹಾಸಿಕ ಮಹತ್ವವುಳ್ಳ ಈ ಚಳವಳಿ ಕರ್ನಾಟಕದಲ್ಲಿ ನಡೆದ ಮೊದಲ ಸಂಘಟಿತ ಸಾಮಾಜಿಕ ಚಳುವಳಿಯಾಗಿದೆ. ಇದರಲ್ಲಿ ಸಮಾಜದ ಯಾವುದೋ ಒಂದು ಮುಖದ ದೋಷಗಳನ್ನು ಪ್ರಸ್ತಾಪಿಸಿ ಅವುಗಳ ನಿವಾರಣೆಗೆ ಪ್ರಯತ್ನಿಸದೇ ಸಮಾಜ ಎದುರಿಸುತ್ತಿದ್ದ ಎಲ್ಲಾ ರೀತಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಿಸಿ ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸಿತು. ಅದಕ್ಕಾಗಿ ಅನೇಕ ಮಹತ್ವದ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಂಡಿತು. ಅಂಥ ಪರಿಕಲ್ಪನೆಗಳಲ್ಲಿ ಮುಖ್ಯವಾದವುಗಳೆಂದರೆ : ಷಟ್‌ಸ್ತಲ,  ಗುರು-ಲಿಂಗ-ಜಂಗಮ, ಮತ್ತು ಕಾಯಕ-ಪ್ರಸಾದ-ದಾಸೋಹ.
ಇವುಗಳಲ್ಲಿ ಬಹಳ ಮುಖ್ಯವಾದ ದಾಸೋಹದ ಬಗ್ಗೆ ವಚನಕಾರರ ರಚನೆಗಳನ್ನು ಆಧರಿಸಿ ಕೆಲವು ವಿಚಾರಗಳನ್ನು ತಿಳಿಯಬಹುದು. ವಚನಕಾರರ ವಿಚಾರಗಳು ಸಮಕಾಲೀನ ಸಮಾಜದ ಸಂದರ್ಭದಲ್ಲಿ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತಿಳಿಯುವುದು ಇಂದಿನ ಅಗತ್ಯವಾಗಿದ್ದು ಅಂಥ ಪ್ರಯತ್ನ ಇಲ್ಲಿದೆ. ದಾಸೋಹದ ತತ್ವವನ್ನು ಕುರಿತು ಬಹುತೇಕ ಎಲ್ಲಾ ವಚನಕಾರರು ಮಾತನಾಡಿರುವುದು ಅವರ ವಚನಗಳಿಂದ ತಿಳಿದು ಬರುತ್ತದೆ. ವಿಶೇಷವೆಂದರೆ  ಕೆಲವರು ದಾಸೋಹವೆಂಬ ಶಬ್ದ ಬಳಕೆಮಾಡದ ಆ ಬಗ್ಗೆ ಮಾತನಾಡಿದ್ದಾರೆ.
ವಚನ ಚಳುವಳಿಯ ಸಂದರ್ಭದಲ್ಲಿ ಗುರು-ಲಿಂಗ-ಜಂಗಮರ ಸೇವೆಯೇ ದಾಸೋಹ ಎಂಬುದಾಗಿ ಹೇಳಲಾಗಿದೆ. ಹಾಗಾದರೆ  ಗುರು-ಲಿಂಗ-ಜಂಗಮದ ಅರ್ಥವೇನು? ಎಂಬುದನ್ನು ತಿಳಿಯಬೇಕಾಗುತ್ತದೆ.  ಗುರು - ದೀಕ್ಷೆ ಕೊಟ್ಟು ಜ್ಞಾನೋಪದೇಶ ಮಾಡುವವ; ಲಿಂಗ - ಪರಮಾತ್ಮ ; ಜಂಗಮ - ಅನುಭವ ಜ್ಞಾನ ಪಡೆದವನು. ಈ ಗುರು-ಲಿಂಗ-ಜಂಗಮದ ಸೇವೆಯನ್ನು ತ್ರಿವಿಧ ದಾಸೋಹ ಎನ್ನಲಾಗಿದೆ. ತ್ರಿವಿಧ ದಾಸೋಹವಲ್ಲದೇ ನಾಲ್ಕನೇ ದಾಸೋಹವೊಂದಿದೆ ಅದೇ ಶರಣ ದಾಸೋಹ. ಬಸವಣ್ಣನವರ ಅಯ್ಯ, ನಿಮ್ಮ ಶರಣರ ದಾಸೋಹಕ್ಕೆ ಎನ್ನ ತನು-ಮನ-ಧನವಲಸದಂತೆ ಮಾಡಯ್ಯ ಎಂಬ ವಚನವೂ ಅದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಇನ್ನೂ ಕೆಲವು ವಚನಕಾರರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ದಾಸೋಹದ ಅರ್ಥವನ್ನು ಹೀಗೆ ವಿವರಿಸಬಹುದು :  ಪ್ರತಿಯೊಬ್ಬರು ಕಾಯಕ ಮಾಡಬೇಕು. ಕಾಯಕವೆಂದರೆ ಸತ್ಯದ ನೆಲೆಗಟ್ಟಿನ ಮೇಲೆ ಶುದ್ಧವಾಗಿ , ಲೋಕ ಹಿತಕ್ಕಾಗಿ ಉತ್ಪಾದನೆಯಲ್ಲಿ ತೊಡಗುವ ಕ್ರಿಯೆ. ಮಾನವ ಕುಲಕ್ಕೆ ಹಾನಿಯುಂಟುಮಾಡುವ ಯಾವುದೇ ಕೆಲಸ ಕಾಯಕವಲ್ಲ. ನಿಜವಾದ ಕಾಯಕದಿಂದ ಬಂದಿದ್ದನ್ನು ದೇವರ ಪ್ರಸಾದವೆಂದು ತಿಳಿಯಬೇಕು. ಗಳಿಸಿದ್ದನ್ನೆಲ್ಲ ನಮಗಾಗಿ ಬಳಸದೇ ಅಥವಾ ಸಂಗ್ರಹಿಸದೇ ಸಾಮಾಜಿಕ ಜವಾಬ್ಧಾರಿಯನ್ನು ಪ್ರದರ್ಶಿಸಬೇಕು. ಎಷ್ಟು ಬೇಕೋ ಅಷ್ಟು ಐಹಿಕ ವಸ್ತುಗಳನ್ನು ಪ್ರಸಾದದ ಹಾಗೆ ಸ್ವೀಕರಿಸಬೇಕು. ಅದಕ್ಕಿಂತ ಹೆಚ್ಚಿನದು ವಿಷ ವಸ್ತುವಾಗಿ ಪರಿಣಮಿಸುತ್ತದೆ. ಅವುಗಳ ಬಳಕೆಯಿಂದ ಭವರೋಗ ಬರುವುದು. ಆದ್ದರಿಂದ ಅವಶ್ಯಕತೆಗಿಂತ ಹೆಚ್ಚಿನ ವಸ್ತುಗಳನ್ನು ವಿಷ ವಸ್ತುವಾಗಿಸದೇ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದೇ ಭವ ರೋಗದಿಂದ ಮುಕ್ತವಾಗುವ ಕ್ರಮ
ದಾಸೋಹದ ಹಿನ್ನೆಲೆಯಿಂದ ಬಂದಿರುವ ಇನ್ನೊಂದು ಪದ ದಾಸೋಹಿ. ದಾಸೋಹಿ ಎಂದರೆ : ೧ ಜಗತ್ತಿನ ವಸ್ತುಗಳೆಲ್ಲ ಸಕಲ ಜೀವಾತ್ಮರಿಗೆ ಸೇರಿದವು ಎಂಬ ನಂಬಿಕೆಯುಳ್ಳವನು. ೨. ಕಾಯಕದಿಂದ ಪಡೆದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುವವನು. ೩. ಅದನ್ನು ದೇವರ ಸ್ವತ್ತೆಂದು ಹಿತಮಿತವಾಗಿ ಬಳಸುವವನು. ೪. ಸಮಾಜವನ್ನು ದೇವರು ಕಾಣುವ ರೂಪವೆಂದು ನಂಬಿದವನು. ೫. ಕಾಯಕದಿಂದ ತನಗಾಗಿ ಕೂಡಿಸಿಡದೇ ದಾಸೋಹದ ಮೂಲಕ ದೇವರಿಗೆ ಅರ್ಪಿಸುವವನು. ೬. ಸಕಲ ಜೀವಾತ್ಮವೂ ಆನಂದಮಯವಾಗಿರಲಿ ಎಂದು ನಂಬಿದವನು
ಶರಣರ ಕಲ್ಪನೆಯ ದಾಸೋಹದ ಸಮಾಜ ತನ್ನದೇ ಆದ ಗುಣ ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ. ಅವುಗಳನ್ನು ಈ ಮುಂದಿನಂತೆ ಹೆಸರಿಸಬಹುದು : ೧. ದುಡಿಯು ಸಾಮರ್ಥ್ಯವೇ ಸಂಪತ್ತು ೨. ಕೂಡಿಡುವುದು ಸಂಪತ್ತಲ್ಲ ೩. ಕೂಡಿಡುವುದು ಮಿಗುತಾಯ ಮೌಲ್ಯ ೪. ಮಿಗುತಾಯ ಮೌಲ್ಯ ಮಾನವೀಯ ಮೌಲ್ಯಗಳಿಗೆ ವಿರುದ್ಧ ೫. ಮಿಗುತಾಯಕ್ಕೆ ವಿರುದ್ಧವಾದುದು ದಾಸೋಹ ೬. ಗಳಿಸಿದ್ದನ್ನು ಶಿವನ ಪ್ರಸಾದವೆಂದು ಭಾವಿಸಿದ್ದರು ೭. ಗಳಿಸಿದ್ದರಲ್ಲಿ  ಹೆಚ್ಚನ್ನು ಶಿವನಿಧಿಗೆ ೮. ಶಿವನಿಧಿಯಿಂದ ತೊಂದರೆಯಲ್ಲಿದವರಿಗೆ ಧನಸಹಾಯ ೯. ವೈಯುಕ್ತಿಕ ದುಡಿಮೆ ಸಾಮೂಹಿಕ ಬದುಕು ಈ ಕಾರಣಗಳಿಂದಲೇ ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ
ದಾಸೋಹಿಯಾಗುವುದು ತುಂಬಾ ಕಷ್ಟ. ದಾಸೋಹಿಗಳನ್ನು ಕಾಣುವುದು ಅತೀ ವಿರಳ. ಈ ಭಾವವನ್ನು ಬಸವಣ್ಣನವರು  ’ತನು ಮನ ಬಳಲಿಸಿ ತಂದು ದಾಸೋಹವ ಮಾಡುವ ಪರಮ ಸದ್ಭಕ್ತನ ಪಾದವ ತೊರಯ್ಯ’ ’ಸೋಹಂ ಎಂದೆನಿಸದೇ, ದಾಸೋಹಂ ಎಂದೆನಿಸಯ್ಯ’ ಎಂದರೆ, ’ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ ಅತಿಗಳೆದನು ಗುಹೇಶ್ವರ.’ ಎಂಬುದಾಗಿ ಅಲ್ಲಮ ಹೇಳುತ್ತಾನೆ. ಇದರಲ್ಲಿ ಸೋಹಂ - ಅಹಂ ಬ್ರಹ್ಮಾಸ್ಮಿ  ಎಂದರೆ ನಾನೇ ದೇವರಾಗುವುದು. ದಾಸೋಹಂ ಎಂದರೆ ನಾವು ಎಂದರ್ಥ. 
ವಚನಕಾರರ ತತ್ವಗಳಲ್ಲಿ ಮಾತ್ರವಲ್ಲದೆ ಪರಿಸರದಲ್ಲಿಯೂ ಕಾಯಕ -ಪ್ರಸಾದ-ದಾಸೋಹ ತತ್ವವಿದೆ ಎಂಬುದು ಗಮನಿಸಬೇಕಾದ ಅಂಶ. ಇಡೀ ಬ್ರಹ್ಮಾಂಡವು ಕಾಯಕ ತತ್ತ್ವದ ಮೇಲೆ ನಿಂತಿದೆ. ಪೃಥ್ವಿಯು ಸೂರ್ಯನ ಸುತ್ತ ತಿರುಗುವ ಕಾಯಕ ಮಾಡುವುದು. ಸೂರ್ಯ ಬೆಳಕನ್ನು ಕೊಡುವ ಕಾಯಕ ಮಾಡುವನು. ಚಂದಿರ ಬೆಳದಿಂಗಳು ಕೊಡುವನು. ನದಿಗಳು ಸಮುದ್ರ ಸೇರುವ ಕಾಯಕದಲ್ಲಿ ತೊಡಗಿವೆ. ಸೂರ್ಯನ ತಾಪಕ್ಕೆ ಸಮುದ್ರದ ನೀರು ಆವಿಯಾಗುವುದು. ಮೋಡಾಗುವುದು, ಮಳೆಯಾಗುವುದು, ಸಕಲ ಜೀವರಾಶಿಗೆ ನೀರಾಗುವುದು. ನದಿಗಳು ಮತ್ತೆ ತುಂಬಿ ಹರಿಯುವವು. ಸಾಗರದ ಕಡೆಗೆ ಧಾವಿಸುವವು. ರೈತರು ಸೂರ್ಯಾಸ್ತದ ನಂತರ ಹೊಲದ ಕಾಯಕ ಮುಗಿಸಿ ಮನೆಗೆ ಬಂದರೂ ಎರೆಹುಳುಗಳು ಅವರ ಭೂಮಿಯನ್ನು ಹದಗೊಳಿಸುವ ಕಾಯಕವನ್ನು ಮಾಡುತ್ತಲೇ ಇರುವವು. ಮರಗಳು ಬಯಲಲ್ಲಿ ನಿಂತಲ್ಲೇ ಕಾಯಕ ನಿರತವಾಗಿರುತ್ತವೆ. ಅವು ಬೇರುಗಳ ಮೂಲಕ ಭೂಮಿ ಮತ್ತು ನೀರಿನ ಜೊತ ಸಂಬಂಧ ಹೊಂದಿರುತ್ತವೆ. ಎಲೆಗಳ ಮೂಲಕ ಸೂರ್ಯ ಮತ್ತು ಗಾಳಿಯ ಜೊತೆ ಸಂಬಂಧ ಹೊಂದಿರುತ್ತವೆ. ಅವು ಭೂಮಿಯ ಸತ್ವವನ್ನು ಪ್ರಸಾದದ ಹಾಗೆ ಎಷ್ಟು ಬೇಕೊ ಅಷ್ಟು ಮಾತ್ರ ಸ್ವೀಕರಿಸುತ್ತವೆ. ನಂತರ ದಾಸೋಹ ರೂಪದಲ್ಲಿ ನಮಗೆ ಹೂ ಹಣ್ಣು ಮುಂತಾದವುಗಳಲ್ಲದೆ ಪ್ರಾಣವಾಯುವನ್ನು ಕೊಡುವ ಕೆಲಸವನ್ನೂ ಮಾಡುತ್ತವೆ. ಹೀಗೆ ಇಡೀ ಬ್ರಹ್ಮಾಂಡವೇ ಕಾಯಕನಿರತವಾಗಿದೆ. ನಿಸರ್ಗದಲ್ಲಿ ಒಂದು ಮರ ಕೂಡ ಕಾಯಕ-ಪ್ರಸಾದ-ದಾಸೋಹ ತತ್ತ್ವವನ್ನು ಪಾಲಿಸುವಾಗ ನರರಿಗೇಕೆ ಸಾಧ್ಯವಾಗದು ಎಂದು ಬಸವಧರ್ಮ ಪ್ರಶ್ನಿಸುತ್ತದೆ. 

ಐಹಿಕ ಜಗತ್ತನ್ನು ಗೆಲ್ಲದವ ದಾಸೋಹಂ ಭಾವ ತಾಳಲಾರ ಕೇರಳದ ಮಾರ್ತಾಂಡಂನಲ್ಲಿ ಮಾರ್ತಾಂಡವರ್ಮ ಎಂಬ ರಾಜ ಆಳುತ್ತಿದ್ದ. ಮಹಾಶೂರನಾಗಿದ್ದ ಆತ ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡ. ನಂತರ ಏನು ಮಾಡಬೇಕೆಂದು ತಿಳಿಯದೆ ಗಾಬರಿಯಾದ. ಆತನಿಗೆ ಸಮಾಧಾನವೆಂಬುದೇ ಇರಲಿಲ್ಲ. ಐಹಿಕ ವಸ್ತುಗಳ ಮಧ್ಯೆ ಒದ್ದಾಡತೊಡಗಿದ. ಕೊನೆಗೆ ಪದ್ಮನಾಭ ಮಂದಿರಕ್ಕೆ ಹೋಗಿ ದೇವರ ಪಾದಗಳ ಅಡಿಯಲ್ಲಿ ತನ್ನ ನೆಚ್ಚಿನ ಖಡ್ಗವನ್ನಿಟ್ಟು ಶರಣಾಗತನಾದ. "ನಾನು ನಿನಗೆ ಶರಣಾಗತನಾಗಿದ್ದೇನೆ. ಎಲ್ಲ ಮಾನಸಿಕ ಒತ್ತಡಗಳಿಂದ ಮತ್ತು ಐಹಿಕ ಆಸೆಗಳಿಂದ ದೂರವಾಗುವಂತೆ ಕೃಪೆ ಮಾಡು ಎಂದು ಬೇಡಿಕೊಂಡ. ನಂತರ ತನ್ನ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಕರೆದ. ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ.

ಜಗತ್ತಿನಲ್ಲಿ ದಾಸೋಹ ಇರುವುದರಿಂದಲೇ ಬದುಕುತಿದ್ದಾರೆ. ಜಗತ್ತಿನಲ್ಲಿ ದಾಸೋಹ ಭಾವ ಇರುವುದರಿಂದಲೇ ಶೇಕಡಾ ೭೫ರಷ್ಟು ಮಂದಿ ಬದುಕುತ್ತಿದ್ದಾರೆ. "ಆಧುನಿಕ ಔಪಚಾರಿಕ ಅರ್ಥವ್ಯವಸ್ಥೆ ಜಗತ್ತಿನ ಕಾರ್ಮಿಕ ಶಕ್ತಿಯ ಶೇಕಾಡಾ ೨೫ರಷ್ಟನ್ನು ಮಾತ್ರ ಬಯಸುತ್ತದೆ. ಉಳಿದ ಶೇಕಡಾ ೭೫ರಷ್ಟು ಜನ ಅನೌಪಚಾರಿಕ ಅರ್ಥವ್ಯವಸ್ಥೆಯಿಂದಾಗಿ ಬದುಕುವುದರಲ್ಲಿ ತಲ್ಲೀನರಾಗಿದ್ದಾರೆ." ಎಂದು ಖ್ಯಾತ ಸಮಾಜವಿಜ್ಞಾನಿ ಮತ್ತು ಆರ್ಥಿಕ ತಜ್ಞ ಥಿಯೊಡೊರ್ ಶನಿನ್ ಹೇಳುತ್ತಾರೆ. ಅವರು ನೂರಾರು ದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳ ಆಧ್ಯಯನ ಮಾಡಿ ಈ ನಿರ್ಣಯಕ್ಕೆ ಬಂದಿದ್ದಾರೆ. ಜಗತ್ತಿನ ಶೇಕಡಾ ೭೫ರಷ್ಟು ಮಂದಿ ನೆರೆಹೊರೆಯವರ ಸಹಾಯ ಸಹಕಾರದೊಂದಿಗೆ ಬದುಕುತ್ತಿದ್ದಾರೆ. ಜನ ಇನ್ನೂ ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಇದರರ್ಥ. ಜಗತ್ತಿನಲ್ಲಿ ಇನ್ನೂ ದಾಸೋಹಂಭಾವ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.
ದಾಸೋಹದ ನಾಡಿನ ಗುಣಗಳು  :  ೧. ದುಡಿದು ಗಳಿಸಿದ್ದೇವೆ ಎಂಬ ಅಹಂಭಾವವಿರಬಾರದು ೨. ಇಲ್ಲಿ ಯಾರು ನಿರುದ್ಯೋಗಿಗಳಿರುವುದಿಲ್ಲ, ೩. ಕಾಯಕದ ಕಾರಣಕ್ಕೆ ಅಪಮಾನವಿರುವುದಿಲ್ಲ, ೪. ಯಾರೂ ಹಸಿವಿನಿಂದ ಬಳಲುವುದಿಲ್ಲ, ೫. ಯಾರೂ ಒಂಟಿತನ ಅನುಭವಿಸುವುದಿಲ್ಲ, ೬. ಬೇಡುವುವರಿರುವುದಿಲ್ಲ

ಡಾ. ಎಸ್.ಎಂ. ಮುತ್ತಯ್ಯ










1 comment:

  1. ಬಹಳ ಅರ್ಥಗರ್ಭಿತವಾಗಿ ದಾಸೋಹ ತತ್ವದ ಬಗ್ಗೆ ತಿಳಿಸಿದ್ದಿರಿ ಸರ್.ಶರಣ ತತ್ವ ಸ್ಪಷ್ಟವಾಗಿ ಬಿಂಬಿತವಾಗಿದೆ ಸರ್.ಸುಂದರ ಬರಹ ತಮ್ಮದು.

    ReplyDelete