Saturday, 27 September 2014

ಆದಿವಾಸಿಗಳ ಶುದ್ಧೀಕರಣ ಪದ್ಧತಿಗಳ ಲೋಕದೃಷ್ಟಿ

ಬುಡಕಟ್ಟು ಸಮುದಾಯಗಳು ಆಧನಿಕತೆ ಹಾಗೂ ಅದರ ನೆರಳಲ್ಲಿ ರೂಪುಗೊಂಡ ಪ್ರಭುತ್ವದ ಅಭಿವೃದ್ಧಿ ಯೋಜನೆಗಳ ಕಾರಣದಿಂದ ತಮ್ಮ ಬದುಕಿನ ಅನನನ್ಯತೆಯನ್ನು ಕಳೆದುಕೊಂಡಿವೆ ಎಂಬುದು ನಿರ್ವಿವಾದ. ಆಧುನಿಕತೆಯ ಆಕರ್ಷಣೆಗೆ ಒಳಗಾಗಿರುವ ಈ ಆದಿವಾಸಿ ಸಮುದಾಯಗಳು ಯಾವುದೇ ನಿದಿಷ್ಟ ತಳಹದಿಯಿಲ್ಲದ ಆಸೆಗಳಿಗೆ ಮುಖಮಾಡಿ ಹಲವಾರು ಸವಾಲು ಹಾಗೂ ಸಂಕಟಗಳನ್ನು ಎದುರಿಸುತ್ತಿವೆ. ಮುಖ್ಯವಾಗಿ ಎದುರಿಸುತ್ತಿರುವ ಸಂಕಟವೆಂದರೆ ತಮ್ಮ ಭಾಷೆ, ಸಂಸ್ಕೃತಿ, ವೃತ್ತಿಜ್ಞಾನಗಳು, ಜೀವನ ಮೌಲ್ಯಗಳು ಹಾಗೂ ಬದುಕಿನ ಅನುಭವ ಜನ್ಯವಾಗಿ ಬಂದ ಸಮಸ್ತ ಜ್ಞಾನಗಳನ್ನು ಕಳೆದುಕೊಂಡು ಅನಾಥ ಸ್ಥಿತಿಗೆ ತಲುಪಿರುವುದು. ಈ ಕಾಲದ ವಿಪರ್ಯಾಸದ ಸಂಗತಿಯೆಂದರೆ ತಮ್ಮ ಅನನ್ಯತೆಯ ಬದುಕಿನ ಕ್ರಮಗಳನ್ನು ಮತ್ತು ಮೌಲ್ಯಗಳನ್ನು ಅನುಸರಿಸುವುದು ಒಂದು ದೊಡ್ಡ ದೋಷವೆಂಬ ಅಪರಾಧಿ ಭಾವನೆಯೊಂದಿಗೆ ಜೀವಿಸುವಂತೆ ಮಾಡಿರುವುದು. ಬುಡಕಟ್ಟುಗಳು ಉದ್ಧಾರವಾಗಬೇಕಾದರೆ ಅವು ತಮ್ಮ ಮೂಲ ನೆಲೆಗಳನ್ನು ತೊರೆದು ಮುಖ್ಯವಾಹಿನಿಗೆ ಬರಲೇಬೇಕು ಎಂಬ ಭಾವನೆಯನ್ನು ಪ್ರಶ್ನಾತೀತವಾಗಿ ನಂಬಿಸಲಾಗಿರುವುದು. ಈ ವಿಷಯದಲ್ಲಿ ಚಿಂತಕರ ಚರ್ಚೆಗಳಲ್ಲಿ ಇಣುಕುವ ಒಂದು ಪ್ರಶ್ನೆಯೆಂದರೆ ಪಾರಂಪರಿಕ ಸಮುದಾಯಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಬೇಕೆಂದಾಗ ಅಂತ ಸಮುದಾಯಗಳ ಅಭಿವೃದ್ಧಿಯನ್ನು ತಡೆದಂತಾಗುವುದಿಲ್ಲವೇ? ಈ ಪ್ರಶ್ನೆ ಸರಿ ಎನಿಸಿದರೂ ಪಾರಂಪರಿಕ ಜ್ಞಾನಗಳನ್ನು ಗೌರವಿಸಿ, ಉಳಿಸಿ ಬೆಳೆಸುವ ನೆಲೆಯಲ್ಲಿ ಯೊಚಿಸಿದರೆ ಬೇರೆಯೇ ಆದ ಪ್ರಶ್ನೆಗಳು ಎದುರಾಗುತ್ತವೆ. ಅವುಗಳೆಂದರೆ ಒಂದು ಸಮುದಾಯ ತನ್ನ ನಿಡುಗಾಲದ ಬದುಕಲ್ಲಿ ಅನುಭವದಿಂದ ಕಂಡುಕೊಂಡ ಜ್ಞಾನಗಳನ್ನು ಯಾವುದೇ ವಿಚಾರಮಾಡದೆ ಮೌಢ್ಯಗಳೆಂದು ನಿರಾಕರಿಸುವುದು ಎಷ್ಟು ಸರಿ? ಅಷ್ಟಾಗಿಯೂ ಒಂದು ಸಮುದಾಯದ ವೃತ್ತಿ ಬದುಕನ್ನು ಅದೇ ಸಮುದಾಯ ಮುಂದುವರಿಸಬೇಕೆಂದು ಹೇಳಿದವರಾರು? ಆ ವೃತ್ತಿ ಮತ್ತು ಬದುಕಿನ ಜ್ಞಾನಗಳನ್ನು ಬೇರೆ ಸಮುದಾಯಗಳು ಅನುಸರಿಸಬಾರದೆಂದು ಎಲ್ಲಿ ಹೇಳಿದೆ? ಹಾಗೆಯೇ ಇವರ ಜೀವನದ ಸಮಸಮಾಜ ನಿರ್ಮಾಣ ಹಾಗೂ ಮಾನವೀಯತೆಯ ಮೌಲ್ಯಗಳೇನಿವೆ ಅವುಗಳು ಈ ಕಾಲಕ್ಕೆ ಅನಿವಾರ್ಯ ಎನಿಸಿರುವಾಗ ಅವುಗಳನ್ನು ಆಧುನಿಕ ಸಮಾಜಗಳು ಅನುಸರಿಸಬಾರದೇಕೆ? ಇಂಥ ಹಲವು ಮಹತ್ವದ ಪ್ರಶ್ನೆಗಳಿಗೆ ಮುಖಾಮುಖಿಯಾದಾಗ ಪ್ರಮುಖವಾಗಿ ಎರಡು ಸಂಗತಿಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.
೧. ಬುಡಕಟ್ಟು ಸಮುದಾಯಗಳಲ್ಲಿ ಪಾರಂಪರಿಕವಾಗಿ ಹರಿದು ಬಂದಿರುವ ವೃತ್ತಿ ಹಾಗೂ ಬದುಕಿನ ಜ್ಞಾನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವುಗಳನ್ನು ಮೌಢ್ಯತೆಯ ನೆಪ ಹೇಳಿ ವಿನಾಶಕ್ಕೆ ತಳ್ಳುವುದು ಸರಿಯಲ್ಲ. ಈ ಸಮುದಾಯಗಳು ಅನುಸರಿಸುವ ಕ್ರಮಗಳೆಲ್ಲ ಮೌಢ್ಯತೆಯಿಂದ ಮುಕ್ತವಾಗಿವೆ ಎಂದು ಹೇಳಲಾಗದಿದ್ದರೂ ಕೆಲವಾದರೂ ಪದ್ಧತಿಗಳು ಶುದ್ಧ ಅನುಭವಜನ್ಯ ಜ್ಞಾನಗಳಾದ್ದರಿಂದ ಅವುಗಳು ವೈಜ್ಞಾನಿಕ ತಳಹದಿಯನ್ನು ಹೊಂದಿವೆ. ಅವುಗಳನ್ನು ಇರುವಂತೆ ಅಲ್ಲದಿದ್ದರೂ ಅವುಗಳ ಹಿಂದಿರುವ ತಾತ್ವಿಕತೆಯ ಹಿನ್ನೆಲೆಯಲ್ಲಿ ಸಮಕಾಲೀನ ಸಮಾಜ ಮುಂದುವರೆಸಬೇಕಿದೆ.
೨. ಆಧುನಿಕ ಕಾಲಕ್ಕೆ ದಕ್ಕಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಮೌಲ್ಯಗಳು ನಮ್ಮ ಪಾರಂಪರಿಕ ಹಿನ್ನೆಲೆಯಿರುವ ಸಮಾಜಕ್ಕೆ ಹೊಂದಿಕೆಯಾಗದಿರುವ ಹಿನ್ನೆಲೆಯಲ್ಲಿ ನಮ್ಮ ಪಾರಂಪರಿಕ ಸಮಾಜದ ಮೌಲ್ಯಗಳನ್ನು ಉಳಿಸಿಕೊಂಡು ಮಾನವೀಯತೆಯ ಸ್ಪರ್ಷವನ್ನು ಉಳಿಸಿಕೊಳ್ಳಬೇಕಾಗಿದೆ.
ಮೇಲಿನ ಎರಡು ಅಂಶಗಳಿಗೆ ಅನೇಕರಿಗೆ ಒಪ್ಪಿಗೆಯಾಗಿದ್ದು ಇವುಗಳನ್ನು ಅನುಷ್ಟಾನಕ್ಕೆ ತರುವ ಪ್ರಯತ್ನಗಳು ಆರಂಭವಾಗಿವೆ. ಈ ಪ್ರಯತ್ನಗಳ ಭಾಗವಾಗಿ ಈ ಲೇಖನದಲ್ಲಿ ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ಆಚರಣೆಯಲ್ಲಿರುವ ಶುದ್ಧೀಕರಣ ಪದ್ಧತಿಗಳ ಸ್ವರೂಪ ಹಾಗೂ ಅವುಗಳ ಹಿಂದಿರುವ ಲೋಕದೃಷ್ಟಿ ಹಾಗೂ ತಾತ್ವಿಕ ಹಿನ್ನೆಲೆಯನ್ನು ಪರಿಶೀಲಿಸುವ ಪ್ರಯತ್ನಮಾಡಲಾಗಿದೆ.
ಲೋಕದೃಷ್ಟಿಯ ಪರಿಕಲ್ಪನೆ
ಪ್ರಸ್ತುತ ಲೇಖನದಲ್ಲಿ ಬುಡಕಟ್ಟುಗಳ ಶುದ್ಧೀಕರಣ ಪದ್ಧತಿಗಳನ್ನು ಅವರ ಲೋಕದೃಷ್ಟಿಯ ಹಿನ್ನೆಲೆಯಲ್ಲಿ ಪರಿಶೀಲಿಸುವುದರಿಂದ ಲೋಕದೃಷ್ಟಿಯ ಪರಿಕಲ್ಪನೆಯ ಬಗ್ಗೆ ಕೆಲವು ಪ್ರಾಥಮಿಕ ವಿಚಾರಗಳನ್ನು ತಿಳಿಯುವುದು ಸೂಕ್ತ. ಮಾನವಶಾಸ್ತ್ರ, ಜಾನಪದ ಅಧ್ಯಯನಕಾರರು ವ್ಯಾಖ್ಯಾನಿಸಿರುವಂತೆ ಜನಪದರು ನೇರವಾಗಿ ಅಥವಾ ಪರೋಕ್ಷವಾಗಿ ಲೋಕದ ಸಮಸ್ತದ ಬಗೆಗೆ ಹೊಂದಿರುವ ದರ್ಶನವನ್ನು ಲೋಕದೃಷ್ಟಿ ಎಂದು ಕರೆಯಬಹುದು. ಇದು ಜನಾಂಗದಿಂದ ಜನಾಂಗಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನ ಸ್ವರೂಪವನ್ನು ಹೊಂದಬಹುದು. ವರ್ಗ ಮತ್ತು ಜಾತಿಗಳಿಗನುಗುಣವಾಗಿ ಬದಲಾಗಬಹುದು. ಲೋಕದೃಷ್ಟಿ ಆಳದಲ್ಲಿ ಸಂಸ್ಕೃತಿ ನಿಷ್ಟವಾಗಿರುತ್ತದೆ. ಹೀಗೆಂದಾಕ್ಷಣ ಸರ್ವ ಸಾಮಾನ್ಯವಾದ ಒಂದೇ ಲೋಕದೃಷ್ಟಿ ಇರುವುದು ಸಾಧ್ಯವೇ ಇಲ್ಲವೆಂದು ಭಾವಿಸ ಬೇಕಾಗಿಲ್ಲ. ಭೌಗೋಳಿಕ ಪರಿಸರದಿಂದ ಪ್ರೆರಿತವಾದ ಭಿನ್ನ ಜನ ವರ್ಗದಲ್ಲಿ ಒಂದೇ ದೃಷ್ಟಿಕೋನ ಕಂಡು ಬರುವ ಸಾಧ್ಯತೆಯೂ ಇಲ್ಲದಿಲ್ಲ (ಜಾನಪದ ಕೈಪಿಡಿ, ಪುಟ : ೪೬೦) ಹಾಗಾಗಿ ಲೋಕ ದೃಷ್ಟಿ ಎಂಬುದು ಇಲ್ಲದೇ ಇರುವ ಜನರಾಗಲಿ, ಜನಾಂಗವಾಗಲಿ ಎಲ್ಲಾದರೂ ಇರಲು ಸಾಧ್ಯವೇ ಇಲ್ಲ. ಜನಪದರು ಬದುಕುತ್ತಿರುವ ವರ್ತಮಾನದ ಉತ್ಕಟ ಕ್ಷಣಗಳಲ್ಲಿ, ಅದು ಪರಂಪರೆಯ ಕೊಡುಗೆಯಾಗಿ ಮತ್ತು ಭವಿಷ್ಯತ್ತಿನ ಬುನಾದಿಯಾಗಿ ಕ್ರಿಯಾಶೀಲವಾಗುತ್ತಿರುತ್ತದೆ. (ಜಾನಪದ ಕೈಪಿಡಿ, ಪುಟ : ೪೬೦) ಲೋಕದೃಷ್ಟಿಯು ಯಾವುದೇ ಸಂಸ್ಕೃತಿಯ ಹೃದಯ ಭಾಗದಲ್ಲಿದ್ದು ಸಂಸ್ಕೃತಿಯ ಶಿಷ್ಟವನ್ನು, ಪರಿಶಿಷ್ಟವನ್ನು ರೂಪಿಸುತ್ತದೆ. ತನ್ನ ಒಳಗಿನ ಜನರಿಗೆ ಅಪ್ರಜ್ಞಾಪೂರ್ವಕವಾಗಿ ಮಾರ್ಗದರ್ಶನ ಮಾಡುತ್ತದೆ. ಇದರಿಂದಲೇ ಜಾನಪದರ ಜೀವನ ವಿನ್ಯಾಸಗಳು ರೂಪುಗೊಳ್ಳುತ್ತವೆ. ಈ ಕಾರಣಕ್ಕೆ ಲೋಕದೃಷ್ಟಿಯನ್ನು ಸಂಸ್ಕೃತಿಯೊಂದರ ಕೇಂದ್ರೀಯ ನಿಯಂತ್ರಕ ಶಕ್ತಿ ಎಂದು ಕರೆಯಬಹುದು(ಜಾನಪದ ಕೈಪಿಡಿ, ಪುಟ : ೪೬೩) ಈ ಹಿನ್ನಲೆಯಲ್ಲಿ ಹೇಳುವುದಾದರೆ ಸಮಾಜದ ನಂಬಿಕೆ ಸಂಪ್ರದಾಯ ಆಚರಣೆಗಳ ಹಿಂದೆ ಅವುಗಳನ್ನು ಆಚರಿಸುವ ಸಮುದಾಯದ ಲೋಕದೃಷ್ಟಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಬುಡಕಟ್ಟು ಸಮುದಾಯಗಳಲ್ಲಿ ಪ್ರಚಲಿತವಿರುವ ಶುದ್ಧೀಕರಣ ಪದ್ಧತಿಗಳ ಆಚರಣೆಗಳನ್ನು ಅವುಗಳ ಸ್ವರೂಪವನ್ನು ತಿಳಿಯುವುದರ ಜೊತೆಗೆ ಅವುಗಳ ಹಿಂದೆ ಅಡಗಿರುವ ಲೋಕದೃಷ್ಟಿಯನ್ನು ಗಮನಿಸಿ ಆಚರಣೆಗಳಲ್ಲಿ ಅಡಗಿರುವ ಆಶಯಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. 
ಈ ಸಂಶೋಧನಾ ಲೇಖನಕ್ಕೆ ಕರ್ನಾಟಕದಲ್ಲಿ ನೆಲೆನಿಂತಿರುವ ಹಸಲರು, ಸಿದ್ಧಿಯರು, ಗೌಳಿಗರು, ಗೊಂಡರು, ಕುಡುಬಿಗಳು, ಕೊರಗರು, ಸೋಲಿಗರು, ಹಾಲಕ್ಕಿ ಒಕ್ಕಲಿಗರು, ಕರೆ ಒಕ್ಕಲರು, ಗ್ರಾಮೊಕ್ಕಲು, ಮುಕ್ರಿಯರು, ಗೌಡಾಲು, ಮಲೆಕುಡಿಯರು, ಮನ್ಸರು, ಪಣಿಯರು, ಜೇನುಕುರುಬರು, ಕಾಡುಕುರುಬರು, ಕಾಡುಗೊಲ್ಲರು ಮತ್ತು ಮ್ಯಾಸಬೇಡರು ಮೊದಲಾದ ಬುಡಕಟ್ಟು ಸಾಮಾಜಗಳಲ್ಲಿ ಆಚರಣೆಯಲ್ಲಿರುವ ಆಚರಣೆಗಳನ್ನು ಗಮನಿಸಲಾಗುವುದು. ಪ್ರಸ್ತುತ ಲೇಖನಕ್ಕೆ ಆಕರ ಸಾಮಗ್ರಿಯನ್ನು ಈ ಬುಡಕಟ್ಟು ಸಮುದಾಯಗಳ ಬಗ್ಗೆ ಈವರೆಗೂ ನಡೆದಿರುವ ಸಂಶೋಧನಾ ಅಧ್ಯಯನಗಳಲ್ಲಿ ಲಭ್ಯವಾಗಿರುವ ಮಾಹಿತಿಯನ್ನು ಆಧರಿಸಿ ಪಡೆಯಲಾಗಿದೆ. ಉಳಿದಂತೆ ಕೆಲವು ಬುಡಕಟ್ಟು ಸಮಾಜಗಳಲ್ಲಿ ಖುದ್ದು ಕ್ಷೇತ್ರಕಾರ್ಯ ನಡೆಸಿಯೂ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಬುಡಕಟ್ಟುಗಳ ಮೈಲಿಗೆ ಭಾವ ಮತ್ತು ಶುದ್ಧೀಕರಣ
ಪ್ರಪಂಚದ ಯಾವುದೇ ಬುಡಕಟ್ಟುಗಳಲ್ಲಿ ಕಂಡುಬರುವ ಸಾಮಾನ್ಯ ಗುಣಲಕ್ಷಣಗಳೆಂದರೆ ಪ್ರಕೃತಿಯ ಅವಲಂಬನೆಯ ಬದುಕು ಮತ್ತು ಅತಿಯಾದ ಮೈಲಿಗೆ ಭಾವ. ಬುಡಕಟ್ಟು ಸಮುದಾಯದ ಜನರ ಮೊದಲ ಆದ್ಯತೆ ತಮ್ಮ ದೇಹ, ಮನಸ್ಸು, ಸ್ಥಳ, ಸಂಸ್ಕೃತಿ ಹೀಗೆ  ಬದುಕಿನ ಪ್ರತೀ ಹಂತಗಳಲ್ಲೂ ತಮ್ಮ ಪರಿಶುದ್ಧತೆಯನ್ನು ಉಳಿಸಿಕೊಳ್ಳುವುದು. ಈ ಪರಿಶುದ್ಧತೆಗೆ ಭಂಗ ಬಂದಲ್ಲಿ ಅದನ್ನು  ಪ್ರಕೃತಿಯ ಮಡಿಲಿಂದಲೇ ಸುಲಭವಾಗಿ ಪರಿಹರಿಸಿಕೊಳ್ಳುತ್ತಾರೆ. ಇವರು ಮೈಲಿಗೆಯೆಂದು ಭಾವಿಸುವ ಸಂದರ್ಭಗಳನ್ನು ಹೀಗೆ ಗುರುತಿಸಬಹುದು : ಬೇರೆ ಸಮುದಾಯದ ಅಥವಾ ನಾಗರೀಕ ಸಮುದಾಯದ ಜನ ತಮ್ಮ ಹಾಡಿ/ಹಟ್ಟಿಗಳಿಗೆ ಪ್ರವೇಶಮಾಡಿದರೆ, ತಮ್ಮದೇ ಮನೆಗಳಲ್ಲಿ ಹುಟ್ಟು, ಋತುಮತಿ, ಸಾವಿನಂತಹ ನೈಸರ್ಗಿಕ ಕ್ರಿಯೆಗಳು ನಡೆದಾಗ, ಅನ್ಯರ ಮನೆಗಳಲ್ಲಿ ಊಟಮಾಡಿದಾಗ, ಬೇರೆಯವರ ಎಂಜಲು ತಿಂದಾಗ, ಅಂತರ್ಜಾತಿಯ ವಿವಾಹ ಅಥವಾ ಲೈಂಗಿಕ ಸಂಪರ್ಕಗಳು ನಡೆದಾಗ ಹಾಗೂ ಚಪ್ಪಲಿ ಮತ್ತಿತರ ವಸ್ತುಗಳಿಂದ ಹೊಡೆದಾಡಿದಾಗ ಇವೇ ಮುಂತಾದ ಸಂದರ್ಭಗಳು. ಈ ಸಂದರ್ಭಗಳಲ್ಲಿ ಮೈಲಿಗೆ ಎಂದು ತಿಳಿದಾಕ್ಷಣ ಅನುಸರಿಸುವ ಕ್ರಮಗಳು ಹಾಗೂ ಅವುಗಳ ನಿವಾರಣೆಗೆ ಅನುಸರಿಸುವ ಕ್ರಮಗಳನ್ನು ಈ ಮುಂದಿನಂತೆ ಪರಿಶೀಲಿಸಬಹುದು.
ಜನನ : ಮಾನವನ ಜೀವನದಲ್ಲಿ ಜನನ ಬಹಳಮುಖ್ಯವಾದ ಘಟನೆ. ಈ ಕ್ರಿಯೆ ಒಂದು ಮನೆಗೆ ಒಬ್ಬ ಹೊಸ ಸದಸ್ಯನ್ನು ಪಡೆದ ಖುಷಿ ಒಂದು ಕಡೆಯಾದರೆ. ಜನನದ ಸಂದರ್ಭ ಮೈಲಿಗೆ ಎಂಬ ಭಾವನೆಯಿಂದ ಬರುವ ಸೂತಕದ ಛಾಯೆ ಮತ್ತೊಂದು ಕಡೆ. ಇಲ್ಲಿ ಖುಷಿಯ ಸಂಗತಿಯನ್ನು ಮರೆತು ಸೂತಕದ ಭಾವನೆಗಳ ಸ್ವರೂಪವನ್ನು ಪರಿಶೀಲಿಸುವುದಾದರೆ - ಬಹುತೇಕ ಬುಡಕಟ್ಟುಗಳಲ್ಲಿ ಜನನ ಸೂತಕವೆಂದು ನಂಬಿರುವ ಹಿನ್ನೆಲೆಯಲ್ಲಿ ಗರ್ಭವತಿಯನ್ನು ಮೂರು, ಐದು, ಏಳು, ಒಂಭತ್ತು, ಹನ್ನೊಂದು ದಿನಗಳ ಕಾಲ ವಾಸದ  ಮನೆಯಿಂದ ಹೊರಗಡೆ ಪ್ರತ್ಯೇಕ ಗುಡಿಸಲುಗಳಲಲ್ಲಿ ಇರಿಸುವ ಕ್ರಮವಿದೆ. ಹೀಗೆ ಹೊರಗಿಟ್ಟ ಬಾಣಂತಿ, ಮಗು ಹಾಗೂ ಆಕೆಯನ್ನು ನೋಡಿಕೊಳ್ಳಲು ನೇಮಿಸಿರುವ ಹೆಂಗಸನ್ನು ಯಾರೂ ಮುಟ್ಟುವಂತಿಲ್ಲ. ಅಷ್ಟೇ ಅಲ್ಲ ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯನ್ನು ಮಾಡುವ ಕ್ರಮವಿದೆ. ಇಂಥ ಪದ್ಧತಿಯನ್ನು ಅನುಸರಿಸುವ ಸಮುದಾಯಗಳಲ್ಲಿ ಕಾಡುಗೊಲ್ಲರು, ಕೊರಗರು, ಮಲೆಕುಡಿಯರು, ಗೌಳಿಗರು ಮತ್ತಿತರ ಸಮುದಾಯಗಳು ಪ್ರಮುಖವಾಗಿವೆ. ಹಾಗೆಯೇ ಹೆರಿಗೆಯ ನಂತರ ಬಾಣಂತಿಯನ್ನು ಯಾರು ಮುಟ್ಟುವಂತಿಲ್ಲ ಮತ್ತು ಆ ಮನೆಯಲ್ಲಿ ಯಾವುದೇ ರೀತಿಯ ಶುಭಾ ಸಮಾರಂಭಗಳನ್ನು ಮಾಡುವುದಿಲ್ಲ. ಹೆರಿಗೆ ಮನೆಯ ಸದಸ್ಯರು ಬೇರೆ ಯಾವುದೇ ಹಬ್ಬ, ಜಾತ್ರೆ, ಮರಣಗಳಲ್ಲಿ ಭಾಗವಹಿಸುವಂತಿಲ್ಲ. ಒಟ್ಟಾರೆ ಈ ರೀತಿ ಜನನವನ್ನು ಸೂತಕ ಎಂದು ಭಾವಿಸಿ ಜನನದ ಆ ಮನೆ, ವ್ಯಕ್ತಿಗಳನ್ನು ಮುಟ್ಟದಿರುವ, ಮನೆಯಿಂದ ದೂರವಿಡುವ ಕ್ರಮಗಳು ಬಳಕೆಯಲ್ಲಿವೆ.
ಈ ಸೂತಕದ ಭಾವನೆಗಳು ಶಾಶ್ವತವಲ್ಲ. ಇದರ ಪರಿಹಾರ ಅತೀ ಸುಲುಭ. ಜನನದ ಕ್ರಿಯೆಯಿಂದ ಆಗಿರುವ ಸೂತಕವನ್ನು ಕಳೆಯುವ ಕ್ರಮಗಳು ಎಂಥವು ಎಂಬುದನ್ನು ಈ ಮುಂದಿನಂತೆ ತಿಳಿಯಬಹುದು : 
೧. ಮಗು ಹುಟ್ಟಿದ ತಕ್ಷಣ ಭಟ್ಟರ ಮನೆಯಿಂದ ಪಂಚಗವ್ಯ ತಂದು ಸೂತಕದ ಮನೆಯನ್ನು ಶುಚಿಗೊಳಿಸುತ್ತಾರೆ. ಹನ್ನೊಂದನೇ ದಿನ ಸ್ವತಃ ಬ್ರಾಹ್ಮಣನೇ ಬಂದು ಮನೆಗೆ ತೀರ್ಥ ಪರೋಕ್ಷಣ ಮಾಡಿ ಹೋಗುತ್ತಾರೆ.(ಸಿದ್ಧಿಯರು)
೨. ಬಾಣಂತಿ ಮತ್ತು ಮಗುವಿಗೆ ಸ್ನಾನ ಮಾಡಿಸುತ್ತಾರೆ. ಸಂಬಂಧಿಗಳಿಗೆ ಊಟವಾಕುತ್ತಾರೆ.  ದೇವರಿಗೆ ಆಕಳಿಗೆ ಪೂಜೆಮಾಡಿ ಎಡೆ ಮಾಡುತ್ತಾರೆ.(ಗೌಳಿಗರು)
೩. ಶಿಶುವಿನ ಪೋಷಕ ವಸ್ತುಗಳನ್ನು ಮಲತ ಇತ್ಯಾದಿಗಳನ್ನು ಮನೆಯ ಮುಂದಿನ ಅಂಗಳದ ಹೊರಗೆ ಒಂದು ಹೊಂಡ(ಅಮೆ ಹೊಂಡ) ತೋಡಿ ಹುಗಿದು ಮಣ್ಣು ಮುಚ್ಚಿ ಅಲ್ಲಿಯೇ ನಿತ್ಯ ಶಿಶುವನ್ನು ಮೀಯಿಸುತ್ತಾರೆ. ಶಿಶು ಜನನವಾದ ೩,೫,೯ ದಿನಗಳಲ್ಲೊಂದು ದಿನ ಶಿಶುವನ್ನು ಶುದ್ದ ಮಾಡುವ ಕಾರ್ಯಕ್ರಮವಿರುತ್ತದೆ. ಆ ದಿನ ಹಿಂದೆ ಮಡಿವಾಳತಿ ’ಕಾರ’ ಎಂಬ ಹೆಸರಿನ ಬೂದಿಯನ್ನು ತರುತ್ತಾಳೆ. ಕಾರದ ನೀರನ್ನು ಮನೆಯಲ್ಲಿ ಹಾಗೂ ಹೊರಗೆ ಸಿಂಪಡಿಸಿ ಮನೆ ಶುದ್ಧ ಮಾಡುತಿದ್ದರು(ಗೊಂಡರು)
೪. ಹೆರಿಗೆಯಾದ ಮೂರನೇ ದಿನಕ್ಕೆ ಶುದ್ಧವನ್ನು ಮಾಡಿಸುತ್ತಾರೆ. ಬ್ರಾಹ್ಮಣರ ಮನೆ ಇಲ್ಲವೇ ದೇವಾಸ್ಥಾನದಿಂದ ಪವಿತ್ರ ಜಲವನ್ನು ತಂದು, ಸಗಣಿ ಸಾರಿಸಿದ ನಂತರ ಚಿಮುಕಿಸಿ ಶುದ್ಧಗೊಳಿಸುತ್ತಾರೆ. ಹೆರಿಗೆಯಾದ ಏಳನೇ ದಿವಸಕ್ಕೆ ಆಮೆಯನ್ನು ಮಾಡುತ್ತಾರೆ. ಅಮೆ ಗೆ ಜಾತಿ  ಮನೆಯವರನ್ನು ಕರೆಸುತ್ತಾರೆ.  ಅಮೆಯ ಮರುದಿನ ಹೆಂಗಸರು ಬಾಣಂತಿ ಮತ್ತು ಮಗುವಿಗೆ ಶುಧ್ಧದ ಆಚರಣೆಯನ್ನು ನಡೆಸುತ್ತಾರೆ. ಅಂದೇ ಯಜಮನನ ಹೆಂಡತಿ ಮಗುವಿನ ಬಾಯಿಗೆ ಅನ್ನದ ತುತ್ತನ್ನು ಇಡಬೇಕು. (ಕುಡುಬಿಯರು)
೫. ಸಮುದಾಯದ ಬಂಧುಗಳು ರಕ್ತಬಾಂಧವರು, ತಾಯಿ ಮಗುವಿಗೆ ಸ್ನಾನ ಮಾಡಿಸಿ ಹೊಸಬಟ್ಟೆ ಉಡಿಸುವರು. ಅಮೆ ಕಳೆಯುವ ಪರಿವರ್ತನಾ ವಿಧಿಗಳು ಸಮುದಾಯದ ಗುರಿಕಾರನ ಮೂಲಕ ನಡೆಯುವುದು. (ಕೊರಗರು)
೬. ಹುಟ್ಟಿನ ಹನ್ನೊಂದನೇ ದಿನಕ್ಕೆ ಮಡಿವಾಳಗಿತ್ತಿ ತಂದ ಕಾರ ಬೂದಿಯಿಂದ ಮನೆಯನ್ನು ಶುದ್ಧ ಮಾಡುತ್ತಾರೆ. ಎಲ್ಲಾ ಬಟ್ಟೆಗಳನ್ನು ತೊಳೆಯುತ್ತಾರೆ. ಮನೆಯವರಿಗೆಲ್ಲ ತಲೆಮೈಯನ್ನು ಮೀಯಿಸುತ್ತಾರೆ. ಮಗುವನ್ನು ಸ್ನಾನ ಮಾಡಿಸಿಕೊಂಡು ಬರುವಾಗ ಮನೆ ಮುಂದಿನ ಸೊರಕಲ್ಲಿನಲ್ಲಿ ನಿಲ್ಲಿಸಿ ಮುಖಕ್ಕೆ ಚಳ್ಳನಿರನ್ನು ಹೊಡೆಯುತ್ತಾರೆ. ಬಾಣಂತಿಯು ಒಂದು ಎಲೆ ಮತ್ತು ಆಡಿಕೆಯನ್ನು ತೆಗೆದುಕೊಂಡು ಹೋಗಿ ನೀರಿಗೆ ಬಿಟ್ಟು ಪೂಜೆಮಾಡಿ ಬರಬೇಕು. ಆ ದಿನದಿಂದ ಅವಳ ಮೈಲಿಗೆ ಕಳೆಯುತ್ತದೆ.(ಮುಕ್ರಿಯರು)
೭. ಜನನದ ನಾಲ್ಕನೇ ದಿವಸಕ್ಕೆ ಮನೆಯನ್ನು ಶುಚಿಗೊಳಿಸುತ್ತಾರೆ. ಮಡಿವಾಳನನ್ನು ಕರೆಸಿ ನಡು ಮನೆಯಲ್ಲಿ ಮಡಿ ಇಡಿಸಿ ಪೂಜೆ ನೆರವರಿಸುವರು.(ಮಲೆಕುಡಿಯರು)
೮. ಹೆರಿಗೆಯಾದ ಮೂರು, ಐದು, ಏಳನೇ ದಿನಗಳಂದು ಅಮೆ ಆಚರಣೆ ನಡೆಯುತ್ತದೆ. ಮೊದಲ ದಿನ ಬಾಣಂತಿಗೆ ಪಳದ್ಯ ಮಾಡಿಕೊಡಬೇಕು., ಮೂರನೇ ದಿನ ದೇವರ ನೀರು ತಂದು ಶುದ್ಧವಾಗಬೇಕು. ಬಟ್ಟೆ, ಚಾಪೆ ಇತ್ಯಾದಿ ಒಗೆದು ಶುಚಿಗೊಳಿಸಬೇಕು. ಐದನೇ ದಿನ ಬಾಣಂತಿಗೆ ಮಾಂಸದ ಅಡಿಗೆಯನ್ನು ನೀಡುತ್ತಾರೆ. (ಮನ್ಸರು)
೯. ಜನನವಾದ ಮೂರನೇ ದಿನ, ಐದನೇ ದಿನ, ಏಳನೇ ದಿನ, ಒಂಬತ್ತನೇ ದಿನ, ಹನ್ನೊಂದನೇ ದಿನ ಹೀಗೆ ಶುದ್ದೀಕರಣ ಕ್ರಮಗಳು ಜರಗುತ್ತವೆ. ಇದರಲ್ಲಿ ಮುಖ್ಯವಾಗಿ ಬೇವಿನ ಸೊಪ್ಪು ಬೆರಸಿದ ನೀರಿನಿಂದ ಬಾಣಂತಿಯನ್ನು ಸ್ನಾನ ಮಡಿಸುತ್ತಾರೆ. ಮನೆಯನ್ನು ಶುಚಿಗೊಳಿಸುವರು, ಗೋ ಮೂತ್ರವನ್ನು ಮನೆಗೆ ಪ್ರೋಕ್ಷಣೆ ಮಾಡುವರು. ಬೇವಿನ ಸೊಪ್ಪನ್ನು ಹಿಡಿದು ಸೂರ್ಯ ದೇವನಿಗೆ ನಮಸ್ಕಾರ ಮಾಡಿಸುವರು. (ಮ್ಯಾಸನಾಯಕರು)
೧೦. ಹೆರಿಗೆಯಾದ ಎರಡನೇ ದಿನ ಬಾಣಂತಿಯ ಗುಡಿಸಲಿನ ಆವರಣವನ್ನು ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುವರು. ಹನ್ನೆರಡನೇ ದಿನ ಬಾಣಂತಿ ತನ್ನ ಮಗುವಿನೊಡನೆ ಹಟ್ಟಿಯ ಮೂಡಲ ದಿಕ್ಕಿಗೆ ಬರುತ್ತಾಳೆ. ಆಕೆಯ ಗಂಡ ತನ್ನ ಕುಲದೈವದ ಗುಡಿಗೆ ಹೋಗಿ ಜನ್ನಿಗೆ ಕುರಿ (ಪವಿತ್ರ ಕುರಿ) ಹಾಲನ್ನು ತರುತ್ತಾನೆ. ಈ ಹಾಲನ್ನು ಬಾಣಂತಿ ಮತ್ತು ಮಗು ಸೇವಿಸಿ ಊರ ಒಳಗೆ ಪ್ರವೇಶ ಮಾಡುತ್ತಾರೆ. ಮಾಡಿದ ತಕ್ಷಣ ಮತ್ತೊಮ್ಮೆ ಜನ್ನಿಗೆ ಹಾಲನ್ನು ಕುಡಿಸಲಾಗುತ್ತದೆ. ಅಲ್ಲಿಂದ ನೇರವಾಗಿ ದೇವರ ಗುಡಿಗೆ ಹೋಗಿ ಪೂಜೆ ಮಾಡಿಸಿ ಪೂಜಾರಿಯಿಂದ ಮತ್ತೊಂದು ಸುತ್ತು ಜನ್ನಿಗೆ ಹಾಲನ್ನು ಕುಡಿಸುತ್ತಾರೆ. ಅನಂತರ ಮಗುವಿನ ತಂದೆ ಪೂಜಾರಿಗೆ ಸಾಕಷ್ಟು ಪ್ರಮಾಣದಲ್ಲಿ ಎಲೆ ಅಡಿಕೆಯನ್ನು ನೀಡುತ್ತಾನೆ. ಅಲ್ಲಿಗೆ ಸೂತಕ ಕಳೆದಂತಾಗುತ್ತದೆ. (ಕಾಡುಗೊಲ್ಲರು)
ಋತುಮತಿ : ಹೆಣ್ಣು ಮಗುವೊಂದು ಮಕ್ಕಳನ್ನು ಪಡೆಯುವ ಶಕ್ತಿ ಪಡೆಯುವ ಈ ನೈಸರ್ಗಿಕ ಬದಲಾವಣೆ ಒಂದು ದೃಷ್ಟಿಯಲ್ಲಿ ಖುಷಿಯ ಸಂಗತಿ ಆದರೆ ಮತ್ತೊಂದು ದೃಷ್ಟಿಯಲ್ಲಿ ಸೂತಕ. ಈ ಸಂದರ್ಭದಲ್ಲಿ ಅನುಸರಿಸುವ ಮೈಲಿಗೆ ನಡೆಗಳನ್ನು ನೋಡುವುದಾದರೆ : ಹೆಣ್ಣು ಮೈನೆರೆದಳು ಎಂದು ತಿಳಿದ ತಕ್ಷಣ ಅವಳನ್ನು ಮನೆಯಿಂದ ಹೊರಗೆ ಏಳು ಒಂಬತ್ತು ಅಥವಾ ಹನ್ನೊಂದು ದಿನಗಳ ಕಾಲ ಪ್ರತ್ಯೇಕ ಗುಡಿಸಲಲ್ಲಿ ಇರಿಸುತ್ತಾರೆ. ಅವರನ್ನು ಯಾರೂ ಮುಟ್ಟುವಂತಿಲ್ಲ. ಬಹುತೇಕ ಎಲ್ಲಾ ಬುಡಕಟ್ಟುಗಳಲ್ಲಿ ಈ ಕ್ರಮವಿದೆ. ಇಂಥ ಸೂತಕದ ಭಾವವದಿಂದ ಹೊರಬರಲು ಆಚರಿಸುವ ಆಚರಣೆಗಳ ಬಗ್ಗೆ ನೋಡುವುದಾದರೆ ಅವು ಹೀಗಿವೆ :
೧. ಋತುಮತಿಯಾದ ಹುಡುಗಿಯನ್ನು ಐದು ದಿನದ ನಂತರ ಹಳ್ಳದಲ್ಲಿಯೋ ಕೆರೆಯಲ್ಲಿಯೋ ನೀರು ತಂದು ಸ್ನಾನ ಮಾಡಿಸುತ್ತಾರೆ. ಕೆಲವೊಮ್ಮೆ ಹನ್ನೆರಡನೇ ದಿನಕ್ಕೆ ಕಳಸ ಹಿಡಿದು ದಾಸಯ್ಯನಿಂದ ಪಡೆದು ತಂದ ತೀರ್ಥ ಕುಡಿದು ನಂತರ ಪವಿತ್ರಳಾಗುತ್ತಾಳೆ.(ಹಲಸರು)
೨. ಹನ್ನೆರಡನೇ ದಿವಸ ಮೈನೆರೆದ ಹೆಣ್ಣಿಗೆ ನೀರೋಯ್ಯುವ ಶಾಸ್ತ್ರ ಮಾಡಿಸುತ್ತಾರೆ. ಸುಮಂಗಲೆಯೊಬ್ಬಳು ತನ್ನ ಎಡಗೈಯ ಐದು ಬೆರಳುಗಳ ಮೇಲೆ ಬಿಲ್ಲೆಯಾಕಾರದ ಐದು ರಾಗಿ ರೊಟ್ಟಿಗಳನ್ನಿಟ್ಟುಕೊಂಡು ಹುಡುಗಿಯ ತೆಲೆಯ ಮೇಲೆ ಕೈ ಚಾಚಿ ನಿಲ್ಲಬೇಕು. ಇನ್ನೊಬ್ಬ ಸುಮಂಗಲೆ ರೊಟ್ಟಿಗಳ ಮೇಲೆ ನೀರೊಯ್ಯುತ್ತಾಳೆ. ಮನೆಯನ್ನು ಶುಚಿಗೊಳಿಸುತ್ತಾರೆ. ಅವಳಿಗೆ ಹೊಸ ಉಡುಗೆಗಳನ್ನು ಕೊಟ್ಟು ಮಡಿಲು ತುಂಬಿಸುತ್ತಾರೆ. ನಂತರ ಮನೆಯಲ್ಲಿ ಸಿಹಿ ಊಟಮಾಡುತ್ತಾರೆ.( ಗೌಳಿಗರು)
೩. ಮುಟ್ಟಾದವರನ್ನು ಯಾರಾದರೂ ಮುಟ್ಟಿದರೆ ಅವರು ಮೈಲಿಗೆಯಾಗುತ್ತದೆ ಎಂಬ ಭಾವನೆಯಿಂದಾಗಿ ಅವರು ಬಟ್ಟೆಯನ್ನು ತೆಗೆದಿಡಬೇಕು ಇಲ್ಲವೇ ನೀರಿಗಾಕಬೇಕು. ಬಟ್ಟೆಯಿಲ್ಲದೆ ಮುಟ್ಟಿದರೆ ಮೈಲಿಗೆ ಇಲ್ಲ. ಮುಟ್ಟಾದವಳು ತಾನು ಮಲಗಿದ ಸ್ಥಾನವನ್ನು, ಊಟ ಮಾಡಿದ ಸ್ಥಳವನ್ನು ಪ್ರತಿ ಬಾರಿ ಸಗಣಿಯಲ್ಲಿ ಸಾರಿಸಬೇಕು.(ಗೊಂಡರು)
೪. ಸೂತಕ ಕಳೆಯಲು ಹುಡುಗಿಯನ್ನು ನೀರಿನ ಬಳಿ ಕರೆದುಕೊಂಡು ಹೋಗಿ ಒನಕೆ ದಾಟಿಸುತ್ತಾರೆ.(ಕಾಡು ಕುರುಬರು)
೫. ಮೈನೆರೆದ ಕೂಡಲೆ ಹೆಣ್ಣನ್ನು ಹಾಲು ಬರುವ ಮರದ ಬುಡದಲ್ಲಿ ಕೂರಿಸುತ್ತಾರೆ. ಬಂಧು ಸಮಾಜದ ವಿಭಿನ್ನ ಬಳಿಯ ಹೆಂಗಸರು ಕೂಡಿ ನೀರೆರದು ಮೈನೆರೆದ ಹೆಣ್ಣುಮಗಳನ್ನು ಸ್ನಾನ ಮಾಡಿಸುತ್ತಾರೆ. ಏಳನೇ ದಿನ ಸೂರ್ಯನಿಗೆ ಕೈಮುಗಿಸಿ ಹರಿವ ನೀರಿನಲ್ಲಿ ಸ್ನಾನ ಮಾಡಿಸಿ ಮನೆಯ ಮುಂದಿನ ಅಂಗಳದಲ್ಲಿ ಕ್ರಿಯಾ ವಿಧಿಗಳನ್ನು ನಡೆಸಿ ಆ ಬಳಿಕ ಮನೆಯ ಒಳಗೆ ಕರೆದು ಕೊಳ್ಳುತ್ತಾರೆ.(ಕೊರಗರು)
೬. ಋತುಮತಿಯಾದ ಹುಡುಗಿಯನ್ನು ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತಾರೆ. ಗಂಗಾ ಪೂಜೆಯನ್ನು  ಮಾಡಿ ಹುಡುಗಿಯ ಕೈಯಲ್ಲಿ ಒಂದು ಮಡೆಕೆಯಲ್ಲಿ ನೀರು ಹಿಡಿಸಿಕೊಂಡು ವಾದ್ಯ ಘೋಷಗಳೊಂದಿಗೆ ಮೆರವಣಿಗೆಯಲ್ಲಿ ಮನೆಗೆ ಬರುತ್ತಾರೆ. ನಂತರ ಹುಡುಗಿ ಹಿರಿಯರಿಗೆ ಎಲೆ ಅಡಿಕೆ ನೀಡಿ ಕಾಲಿಗೆ ಬಿದ್ದು ಆರ್ಶಿವಾದ ಪಡೆದುಕೊಳ್ಳುತ್ತಾಳೆ.( ಪಣಿಯರು)
೭. ಹೆಣ್ಣು ಮಕ್ಕಳು ಮೈನೆರೆತಾಗ ಮನೆಯ ಮುಂದೆ ಹೊಂಗೆ ಮತ್ತು ಬೇವಿನ ಸೊಪ್ಪಿನಿಂದ ಗುಡಿಸಲು ನಿರ್ಮಿಸಿ ಅದರಲ್ಲಿ ಈ ಹೆಣ್ಣುಮಗಳನ್ನು ಹನ್ನೊಂದು ದಿನದವರೆಗೆ ಇರಿಸಲಾಗುತ್ತದೆ. ಹನ್ನೊಂದನೆ ದಿನ ಊರ ಹೊರಗೆ ಕರೆದೊಯ್ದು ಸ್ನಾನ ಮಾಡಿಸಿ ವಾದ್ಯ ಸಮೇತ ಹಟ್ಟಿಯೊಳಗೆ ಕರೆತರುವರು. ಬರುವಾಗ ಮಾರ್ಗ ಮಧ್ಯೆದಲ್ಲಿ ತಂಗಟೆ ಗಿಡವನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಮೂರು ಬಾರಿ ದಾಟಿಸುತ್ತಾರೆ. ಅನಂತರ ದೇವಸ್ಥಾನದ ಬಳಿ ಬಂದು ಪೂಜಾರಿಗೆ ಎಲೆ ಅಡಿಕೆ ಹಾಗೂ ಕಾಸು ಕೊಟ್ಟು ದೇವರಿಗೆ ನಮಸ್ಕಾರ ಮಾಡುತ್ತಾರೆ. ಅಲ್ಲಿಂದ ನೇರವಾಗಿ ಮನೆಯ ಬಳಿ ಕರೆದುಕೊಂಡು ಬರುತ್ತಾರೆ. ಮನೆಯ ಮುಂದಿನ ಅಂಗಳದಲ್ಲಿ ಕರೆ ಕಂಬಳಿ ಹಾಸಿ ಅದರ ಮುಂದೆ ಕುರಿಯ ಒಣ ಪಿಕ್ಕೆಯಿಂದ ಕೆಂಡಮಾಡಿರಲಾಗುತ್ತದೆ. ಆ ಕೆಂಡದಿಂದ ಬೇವಿನ ಕಡ್ಡಿಯ ಮೂಲಕ ಅವಳ ನಾಲಗೆಯನ್ನು ಸುಡಲಾಗುತ್ತದೆ. ಇದ್ದಿಲನಿಂದ ಹಲ್ಲುಜ್ಜಿಸಿ ಬಾಯಿ ತೊಳೆಸುತ್ತಾರೆ. ನಂತರ ಅಲ್ಲಿ ಹಾಕಿದ್ದ ಎಡೆಯನ್ನು ತಿನ್ನಲು ನಾಯಿಯೊಂದನ್ನು ಹಿಡಿದು ತರುತ್ತಾರೆ. ಆ ನಾಯಿ ಅನ್ನ ತಿನ್ನುವುದಕ್ಕೆ ಮೊದಲೇ ಅದರ ಕಿವಿ ಹಿಂಡಿ ಹೋಡಿಸುತ್ತಾರೆ. ಈ ಕಾರ್ಯವನ್ನು ಅವಳ ಸೋದರ ಮಾವನೇ ಮಾಡಬೇಕೆಂಬುದು ನಿಯಮ. ಕೊನೆಯಲ್ಲು ಅವಳು ಸೋದರ ಮಾವನಿಗೆ ಉತ್ತುತ್ತಿ, ಕೊಬ್ಬರಿ, ಎಲೆ ಅಡಿಕೆ ಮತ್ತು ಕಾಸು ಕೊಡುತ್ತಾಳೆ. ಅಲ್ಲಿಗೆ ಸೂತಕ ಮುಗಿಯಿತೆಂದು ಭಾವಿಸಲಾಗುತ್ತದೆ.(ಮ್ಯಾಸನಾಯಕರು)
೮. ಹದಿಮುರನೇ ದಿನ ಋತುಮತಿಯಾದ ಹೆಣ್ಣು ಮಗಳು ಹಟ್ಟಿಯ ಮೂಡಲ ಮೂಡಲ ದಿಕ್ಕಿನಿಂದ ಸ್ನಾನಮಾಡಿ ಮಡಿ ಬಟ್ಟೆಗಳನ್ನು ಉಟ್ಟು ಹಟ್ಟಿಯೊಳಗೆ ಬರುವಳು. ಅವಳಿಗೆ ಮೈತುಂಬಾ ಕಂಬಳಿ ಹೊದಿಸಿ ಕೈಯಲ್ಲಿ ಉರಿಯುವ ಹಣತೆಯನ್ನು ಕೊಡುತ್ತಾರೆ. ಆಕೆಯನ್ನು ನಿದಾನವಾಗಿ ನಡೆಸಿಕೊಂಡು ಗುಡಿಗೆ ಬರುತ್ತಾರೆ. ಗುಡಿಯಲ್ಲಿ ಪೂಜಾರಿಗೆ ಎಲೆ ಅಡಿಕೆ ಕೊಟ್ಟು ಪೂಜೆ ಮಾಡಿಸಿದ ಮೇಲೆ  ಅಲ್ಲಿಂದ ಆಕೆಯನ್ನು ಮತ್ತೆ ಹಟ್ಟಿಗಳ ಮುಂದೆ ಗೀತೆಗಳನ್ನು ಹಾಡಿಕೊಂಡು ಮೆರವಣಿಗೆಯ ಮೂಲಕ ಮನೆಗೆ ಸೇರಿಸಿಕೊಳ್ಳುತ್ತಾರೆ.(ಕಾಡುಗೊಲ್ಲರು)
ಮರಣ : ಮರಣ ಬಹುತೇಕ ಎಲ್ಲಾ ಸಮುದಾಯಗಳಲ್ಲಿ ಸೂತಕವೇ. ಸೂತಕದ ಜೊತೆಗೆ ನೋವಿನ ಸಂಗತಿ. ಬುಕಟ್ಟುಗಳಲ್ಲಿ ಈ ನೋವು ಮತ್ತು ಸೂತಕಗಳಲ್ಲಿ ಸೂತಕಕ್ಕೆ ಮೊದಲ ಆದ್ಯತೆ. ನೋವಿನ ನಡುವೆಯೂ ಸೂತಕದ ಆಚರಣೆಗಳನ್ನು ಕಟ್ಟು ನಿಟ್ಟಾಗಿ ಆಚರಿಸುತ್ತಾರೆ. ಮರಣವಾದ ಮನೆಯವರು ಮತ್ತು ಅವರ ಬಳಿಯವರಿಗೆಲ್ಲ ಹೊರಗಡೆ ಹೋಗುವುದಾಗಲಿ, ಶುಭಕಾರ್ಯಗಳಲ್ಲಿ ಭಾಗವಹಿಸುವುದಾಗಲಿ ನಿಷಿದ್ಧವಾಗಿರುತ್ತದೆ. ಊಟ ಉಪಚಾರ ಮತ್ತಿತರ ನಡಾವಳಿಗಳ ಮೇಲೆ ನಿರ್ಬಂಧವಿರುತ್ತದೆ. ಇಂಥ ನಿರ್ಬಂಧಗಳು ಸೂತಕ ಪರಿಹಾರದ ನಂತರ ಸಹಜ ಸ್ಥಿತಿಗೆ ಬರುತ್ತವೆ.   ಅಂಥ ಕೆಲವು ಸೂತಕ ಪರಿಹಾರದ ಆಚರಣೆಗಳನ್ನು ಈ ಮುಂದಿನಂತೆ ವಿವರಿಸಿಕೊಳ್ಳಬಹುದು :
೧. ಸಾವಿನ ಸೂತಕ ಒಂಬತ್ತರಿಂದ ಹನ್ನೊಂದನೇ ದಿನದವರೆಗೆ ಇರುತ್ತದೆ. ಅಥವಾ ಶುಚಿ ಕಾರ್ಯ ಆಗುವವರೆಗೆ ಇರುತ್ತದೆ. ಶುಚಿ ಕಾರ್ಯದ ದಿನ ಮನೆಯನ್ನೆಲ್ಲಾ ತೊಳೆಯುತ್ತಾರೆ. ಸಗಣಿಯಿಂದ ನೆಲ ಸಾರಿಸುತ್ತಾರೆ. ಬ್ರಾಹ್ಮಣ ಭಟ್ಟರಿಂದ ಅಥವಾ ಲಿಂಗಯತ ಜಂಗಮನಿಂದ ತಂದ ತೀರ್ಥವನ್ನು ಸಿಂಪಡಿಸುತ್ತಾರೆ.(ಹಸಲರು)
೨. ಸಾವಿನ ಒಂಬತ್ತನೇ ದಿನದಂದು ಕುರಿ ಕುಯ್ದು ಮಾಂಸದ ಅಡಿಗೆ ಮಾಡಿ ತಮ್ಮ ಬಳಿಯರಿಗೆಲ್ಲ ಊಟ ಹಾಕುತ್ತಾರೆ. ನಂತರ ದೈವದವರು ಕೂಡಿ ಹುಣಸೆ ಸೊಪ್ಪಿನಿಂದ ಗೋಮೂತ್ರ ಸಿಂಚನಗೈದು ಸೂತಕ ಪರಿಹಾರ ಮಾಡುತ್ತಾರೆ.(ಗೌಳಿಗರು)
೩. ಹೆಣವನ್ನು ಹೂಳಲು ಹೋದವರು ಹೊಳೆಯಲ್ಲಿ ಸ್ನಾನಮಾಡುತ್ತಾರೆ. ನಂತರ ಸತ್ತವರ ಮನೆಗೆ ಬರುತ್ತಾರೆ. ಅಲ್ಲಿ ಹೆಂಗಸರು ಮನೆಯನ್ನು ಸಾರಿಸಿ, ಚಪ್ಪೆ ಗಂಜಿ ಮಾಡಿರುತ್ತಾರೆ. ಸಿಂಹನ ಬೇಟೆಗೆ (ಸಂಸ್ಕಾರಕ್ಕೆ)ಹೋಗಿ ಬಂದವರಿಗೆ ಗೋಮಯ ಹಾಗೂ ಮಾವಿನ ಚಕ್ಕೆ ಹಾಕಿದ ನೀರಿನಲ್ಲಿ ಯಾದಿ ಮಾಡಿ ಎಲೆಯನ್ನು ಅದ್ದಿಸಿಕೊಡುತ್ತಾರೆ. ಅದನ್ನು ಅವರು ಎಡಗೈಯಲ್ಲಿ ಮೂಸಿ ಒಗೆಯುತ್ತಾರೆ. ಹಾಗೆಯೆ ಸಂಸ್ಕಾರಕ್ಕೆ ಹೋಗಿ ಬಂದವರಿಗೆಲ್ಲ ನಾಳೆಗೆ ಬರಬೇಡಿ ಎಂದು ಎಡಗೈಯಲ್ಲಿ ಗೋಮಯ ಹೊಡೆಯುತ್ತಾರೆ.( ಮುಕ್ರಿಯರು)
೪. ಸಾವಾದ ವ್ಯಕ್ತಿಯನ್ನು ಸಂಸ್ಕಾರ ಮಾಡಿದ ನಂತರ ಪಕ್ಕದಲ್ಲಿದ್ದ ಹಳ್ಳ ಅಥವಾ ಬೋರ‍್ವೆಲ್ ಬಳಿ ಕೈ ಕಾಲು ಮುಖ ತೊಳೆದು ನೆಂಟರು ಬಂಟರು ಪರಸ್ಪರ ಎಲೆ ಅಡಿಕೆ ಹಂಚಿಕೆ ಮಾಡಿಕೊಂಡು ಹಟ್ಟಿಗೆ ಬರುತ್ತಾರೆ. ಮೊದಲು ಸತ್ತವರ ಮನೆಗೆ ಬಂದು ದೀಪ ನೋಡುತ್ತಾರೆ. ಆ ಮನೆಯ ಒಳಗೆ ಹೋಗುವ ಮುನ್ನ ಮನೆಯ ಬಾಗಿಲಲ್ಲೇ ಸಗಣಿ, ಎಕ್ಕೆ ಎಲೆಗಳು ಹಾಗೂ ನೀರನ್ನು ಇಟ್ಟಿರುತ್ತಾರೆ. ಅವುಗಳನ್ನು ಎಡಗೈಯಲ್ಲಿ ಸ್ವಲ್ಪ ತೆಗೆದುಕೊಂಡು ಮೈಗೆ ಚಿಮುಕಿಸಿಕೊಂಡು ಹೊಳಗೆ ಹೊಗಿ ದೀಪ ನೋಡಬೇಕು. ನೋಡಿ ಅಲ್ಲಿಯೇ ಒಂದರೆಡು ಸೆಕೆಂಡ್ ಗಳ ಕಾಲ ಕುಳಿತುಕೊಳ್ಳ ಬೇಕು ನಂತರ ನೇರವಾಗಿ ದೇವಾಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ತಮ್ಮ ತಮ್ಮ ಮನೆಗಳಿಗೆ ವಾಪಾಸ್ಸು ಹೋಗಬೇಕು. ಇದಾದ ಮೂರನೇ ದಿನಕ್ಕೆ ಸಣ್ಣ ದಿವಸ ಮಾಡುತ್ತಾರೆ. ಆ ದಿನ ಬೆಳಗ್ಗೆ ಹೆಣ ಹೊತ್ತವರಿಗೆ ಹೊರೆ ಇಳಿಸುವ ಕಾರ್ಯಕ್ರವಿರುತ್ತದೆ. ಆ ನಂತರ ಮನೆಯನ್ನು ಶುಚಿಗೊಳಿಸಿ ಕೂಳು ಹಾಕುವ ಶಾಸ್ತ್ರವಿರುತ್ತದೆ.( ಮ್ಯಾಸನಾಯಕರು)
ಇತರೆ ಮೈಲಿಗೆ ಸಂದರ್ಭಗಳು
೧. ಚಪ್ಪಲಿಯಲ್ಲಿ ಹೊಡೆದರೆ, ಹೊಡೆಸಿಕೊಂಡವನು ದಾಸಯ್ಯನ ಮೂಲಕ ಮಠಕ್ಕೆ ಹೋಗಿ ಸ್ವಾಮಿಗಳಿಂದ ತೀರ್ಥ ಹಾಕಿಸಿಕೊಂಡು ಬರಬೇಕು(ಹಸಲರು)
೨. ತಮ್ಮದಲ್ಲದ ಬುಡಕಟ್ಟಿನಲ್ಲಿ ವಿವಾಹವಾದರೆ ಇಂಥ ವಿಶೇಷ ಸಂದರ್ಭಗಳಲ್ಲಿ ಒಂದು ಹುಲ್ಲಿನ ಗುಡಿಸಲಿಗೆ ಹೆಣ್ಣನ್ನು ಕೂಡಿಹಾಕಿ ಬೆಂಕಿ ಹಚ್ಚುತ್ತಾರೆ. ಅದರಿಂದ ತಪ್ಪಿಸಿಕೊಂಡು ಹೆಣ್ಣು ಹೊರ ಬರಬೇಕು. ಹಾಗೆ ಹೊರಬಂದ ನಂತರ ಸುಟ್ಟ ಬೂದಿಯನ್ನು ಸಮುದಾಯದ ಮುಖ್ಯಸ್ಥ ಆ ಹೆಣ್ಣಿಗೆ ತಿನ್ನಿಸುತ್ತಾನೆ. ಅಲ್ಲಿಂದ ಅವಳು ಮೂಲ ಸ್ಥಿತಿಗೆ ಬಂದಳೆಂದು ಭಾವಿಸಲಾಗುತ್ತದೆ.(ಸಿದ್ಧಿಗಳು)
೩. ಉತ್ತರ ಕನ್ನಡ ಜಿಲ್ಲೆಯ ಸಿದ್ಧಿಗಳಲ್ಲಿ ಇತರೆ ಬುಡಕಟ್ಟುಗಳಲ್ಲಿ ದೇವರು ಮೈಮೇಲೆ ಬರುವುದು ಸಾಮಾನ್ಯವಾದರೂ ಅದರ ಹಿಂದಿನ ತಿಳುವಳಿಕೆಗಳಲ್ಲಿ ವ್ಯತ್ಯಾಸವಿದೆ. ಮನೆಯಲ್ಲಿ ಏನಾದರೂ ತೊಂದರೆಯಾದರೆ, ಹಿರಿಯರ ಆತ್ಮಗಳಿಗೆ ಅತೃಪ್ತಿಯಾದರೆ ಕುಟುಂಬದ ವಯಸ್ಕರಲ್ಲಿ ಯಾರಾದರೂ ಒಬ್ಬರಿಗೆ ಮೈಮೇಲೆ ಬರುತ್ತದೆ. ಮೈಮೇಲೆ ಬಂದಾಗ ಮನೆಯಲ್ಲಿ ತೊಂದರೆಯಾಗಿರುವ ಕಾರಣವನ್ನು ಹಾಗೂ ಅದರ ಉಪಶಮನಕ್ಕೆ ಮಾಡಬೇಕಾದ ಕೆಲಸಗಳನ್ನು ದೇವರು ಕುಟುಂಬದವರಿಗೆ ತಿಳಿಸಿ ಹೇಳುವುದು. ನಂತರ ಕುಟುಂಬದ ಯಜಮಾನನು ಮನೆಯ ಗೃಹ ಶುದ್ಧಿಮಾಡುವನು. ಇಂಥ ಕೆಲಸಕ್ಕೆ ಆಕಳ ಸಗಣಿಯು ಬಹಳ ಮುಖ್ಯ.(ಸಿದ್ಧಿಗಳು)
೪. ಯಾವುದಾದರೂ ತಪ್ಪು ಮಾಡಿದ ವ್ಯಕ್ತಿಯನ್ನು ಕುಲದಿಂದ ಹೊರ ಹಾಕುವಾಗ ಅಪರಾಧಿಯ ಕೊರಳಿಗೆ ದನದ ಮೂಳೆಯ ಸರವನ್ನು ಹಾಕಿ ಕುಲದ  ಹಿರಿಯರು ಬಹಿಷ್ಕಾರ ಹಾಕುತ್ತಾರೆ. ಹೀಗೆ ಕುಲದಿಂದ ಬಹಿಷ್ಕರಿಸಲ್ಪಟ್ಟ ವ್ಯಕ್ತಿ ಒಂದು ವೇಳೆ ಕುಲಕ್ಕೆ ಸೇರಲು ಇಚ್ಛಿಸಿದರೆ  ಹಿರಿಯರಿಗೆ ಬೇಡಿಕೆ ಸಲ್ಲಿಸಬೇಕು. ಹಿರಿಯರು ಮಾಡಿದ ತಪ್ಪಿಗೆ ಪರಿಹಾರವನ್ನು ಜೊತೆಗೆ ಇಡೀ ಕುಲಕ್ಕೆ ಊಟವನ್ನು ಹಾಕಬೇಕೆಂದು ಷರತ್ತು ಹಾಕುತ್ತಾರೆ. ಇದಕ್ಕೆ ಬಹಿಷ್ಕೃತ ಒಪ್ಪಿದರೆ ಆಗ ಆ ವ್ಯಕ್ತಿಯನ್ನು ಕುಲಕ್ಕೆ ಸೇರಿಸಿಕೊಳ್ಳುವ ಆಚರಣೆಯೊಂದು ನಡೆಯುತ್ತದೆ. ಅದರ ಸ್ವರೂಪ ಹೀಗಿರುತ್ತದೆ. ಮೊದಲು ಅಪರಾದಿಯ ತಲೆ ಬೋಳಿಸುತ್ತಾರೆ. ಮಿಂದು ಮಡಿಯುಟ್ಟು ಬಂದ ಅವನನ್ನು ಊರಿಂದ ಹೊರಗಡೆ ಏಳು ಪರದೆಯ ಆಚೆ ನಿಲ್ಲಿಸಿ ಒಂದೊಂದು ತೆರೆಯನ್ನು ದಾಟಿದಾಗಲೂ ಗೋಮೂತ್ರ ಕುಡಿಯುತ್ತ ಹೀಗೆ ಏಳು ಬಾರಿ ತೀರ್ಥ ಕುಡಿದು ಏಳು ತೆರೆಗಳನ್ನು ದಾಟಿಸಿಕೊಂಡು ಊರೊಳಗೆ ಕರೆದುಕೊಂಡು ಬರುತ್ತಾರೆ.( ಸೋಲಿಗರು)
೫. ಚರ್ಮದ ಚಪ್ಪಲಿಯಿಂದ ಏಟು ತಿಂದವನು ಮೈಲಿಗೆಯಾಗುತ್ತಾನೆ. ಹೀಗೆ ಅಶುಚಿಯಾದವನನ್ನು ಶುಚಿಗೊಳಿಸಿ ಮರಳಿ ಒಳಕ್ಕೆ ಕರೆದುಕೊಳ್ಳಲು  ನಾಗಬೆತ್ತದ ತೀರ್ಥವನ್ನು ಊರ ಗೌಡನಿಂದ ಪ್ರೋಕ್ಷಿಸಿಕೊಳ್ಳುತ್ತಾರೆ(ಕರೆ ಒಕ್ಕಲರು)
೬. ಮೆಟ್ಟನಿಂದ ಹೊಡೆದಾಡಿಕೊಳ್ಳುವುದು ವಿಧವೆಯರು ಅನೈತಿಕ ಸಂಬಂಧದ ಮೂಲಕ ಗರ್ಭಧರಿಸುವುದನ್ನು ಗಾಮೊಕ್ಕಲು ಮಹಾ ಅಪರಾಧವೆಂದು ಭಾವಿಸುತ್ತಾರೆ. ಮೆಟ್ಟಿನಿಂದ ಹೊಡೆದವ ಮತ್ತು ಹೊಡೆಸಿಕೊಂಡವ ಇಬ್ಬರೂ ಗೋಕರ್ಣಕ್ಕೆ ಹೋಗಿ ತೀರ್ಥ ಸ್ನಾನಮಾಡಿ ಶುದ್ಧವಾಗಿ ಬರಬೇಕು. ವಿಧವೆಯರ ಅನೈತಿಕ ಬಸಿರಿಗೆ ಕಾರಣರಾದವರು ಗೋಕರ್ಣಕ್ಕೆ ಹೋಗಿ ಗಡ್ಡ ಮೀಸೆ ಬೋಳಿಸಿ, ತೀರ್ಥ ಸ್ನಾನಮಾಡಿಸಿಕೊಂಡು ಬರಬೇಕು.( ಗಾಮೊಕ್ಕಲು)
೭. ವಿಧವೆ ಗರ್ಭೀಣಿಯಾದರೆ ಮುಕ್ರಿಯರು ಆಕೆಗೆ ಬಹಿಷ್ಕಾರ ಹಾಕುತ್ತಾರೆ. ಇದಕ್ಕೆ ಕಾರಣನಾದ ಪುರುಷ ಮೊದಲು ಗೋಕರ್ಣಕ್ಕೆ ಹೋಗಿ ತಲೆ ಬೋಳಿಸಿಕೊಂಡು ತೀರ್ಥ ಹಾಕಿಸಿಕೊಂಡು ಬರಬೇಕು. ನಂತರ ಊರಿಗೆ ಬಂದು ಜಾತಿಯ ಇಬ್ಬರು ಗೃಹಸ್ಥರ ಮುಂದೆ ಸ್ನಾನ ಮಾಡಿ ಅಲ್ಲಿಯೇ ಹಂಗಾಮಿಯಾಗಿ ನಿರ್ಮಿಸಿದ ಏಳು ಕಡಜನ ಗುಡಿಸಲುಗಳನ್ನು ಆತ ಪ್ರವೇಶಿಸಬೇಕು ಕೊನೆಗೆ ಆ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ.(ಮುಕ್ರಿಯರು)
೮. ಹೆಣ್ಣು ಮದುವೆಗಿಂತ ಮೊದಲೇ ಗರ್ಭಿಣಿಯಾದರೆ ಆಕೆಯ ಗೊಂಬೆಯನ್ನು ಹುಲ್ಲಿನಿಂದ ಸುಟ್ಟು ಹಾಕುತ್ತಾರೆ(ಗೌಡಾಲು)
೯. ಕಾಡುಗೊಲ್ಲರಲ್ಲಿ ಹೆಣ್ಣಿರಲಿ ಗಂಡಿರಲಿ ತಮ್ಮದಲ್ಲದ ಸಮಾಜದ ವ್ಯಕ್ತಿಗಳೊಡನೆ ದೈಹಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದೇ ಆದರೆ ಅವರು ಕುಲವನ್ನು ಬಿಟ್ಟು ಹೋಗಬೇಕು ಇಲ್ಲವಾದರೆ ಕುಲದ ಹಿರಿಯರು ಒಳಪಡಿಸುವ ಶುದ್ಧೀಕರಣ ಪ್ರಕ್ರಿಯೆಗೆ ಒಳಗಾಗಬೇಕು. ಇಲ್ಲಿ ಮೊದಲು ದೇವರನ್ನು ಗಂಗಾ ಪೂಜೆಗೆ ಹೊರಡಿಸಬೇಕು. ಅದರ ಖರ್ಚನ್ನು ತಪ್ಪಿತಸ್ಥರೇ ನೀಡಬೇಕಾಗುತ್ತದೆ. ಗಂಗಾ ಪೂಜೆಗೆ ಹೋಗುವಾಗ ದಾರಿಯಲ್ಲಿ ಮೂರು ಕಡೆ ಹುಲ್ಲಿನ ಗುಡಿಸಲುಗಳನ್ನು ಹಾಕಿರುತ್ತಾರೆ. ಅಪರಾಧಿಯು ಈ ಮೂರು ಗುಡಿಸಲಿಗಳಲ್ಲಿ ಒಂದೊಂದಕ್ಕೂ ಒಳಗೆ ಪ್ರವೇಶ ಮಾಡುತ್ತಿದ್ದಂತೆ ಯಜಮಾನ ಆ ಗುಡಿಸಲಿಗೆ ಬೆಂಕಿ ಹಚ್ಚುತ್ತಾನೆ. ಅದರಿಂದ ಆತ ತಪ್ಪಿಸಿಕೊಳ್ಳಬೇಕು. ಆನಂತರ ಅವರು ಏಳು ಕೆರೆ ಅಥವಾ ಬಾವಿಗಳಲ್ಲಿ ಸ್ನಾನ ಮಾಡಿಬರಬೇಕು. ಅನಂತರ ಊಟದ ವ್ಯವಸ್ಥೆ ಇರುತ್ತದೆ. ಊಟದ ಸಮಯದಲ್ಲಿ ಅಪರಾಧಿಯಾದವರು ನೆಲದಲ್ಲಿ ಗುಂಡಿ ತೋಡಿಕೊಂಡು ಅದಕ್ಕೆ ಅಂಬಲಿ ಸುರಿದು ಅದನ್ನು ನೆಕ್ಕುತ್ತಿರಬೇಕು. ಆಗ ಯಜಮಾನನೊಬ್ಬ ಆ ಅಪರಾಧಿಯನ್ನು ನಾಯಿಯನ್ನು ಕರೆಯುವಂತೆ ಕರೆಯುತ್ತಾನೆ. ಅವರು ಎದ್ದು ಬಂದರೆ ಯಜಮಾನ ತನ್ನ ಕೈಯಲ್ಲಿ ಹಿಡಿದ ಬರಲಿನಿಂದ ಹೊಡೆಯುತ್ತಾನೆ. ನಂತರ ಪೂಜಾರಿ ತಪ್ಪಿತಸ್ಥರ ನಾಲಗೆಯನ್ನು ಬೇವಿನ ಕಡ್ಡಿಯಿಂದ ಸುಡುವನು. ಕೊನೆಗೆ ಹಸುವಿನ ಗಂಜಳವನ್ನು ತೀರ್ಥದಂತೆ ಕುಡಿಯ ಬೇಕು. ಅಲ್ಲಿಗೆ ಅವರು ಶುದ್ಧಿಯಾದಂತೆ.( ಕಾಡುಗೊಲ್ಲರು)
೧೦. ಮ್ಯಾಸನಾಯಕರಲ್ಲಿ ಅನ್ಯ ಸಮುದಾಯದ ಪುರುಷರ ಜೊತೆ ದೈಹಿಕ ಸಂಬಂಧವನ್ನು ಬೆಳೆಸಿದರೆ ಅವಳನ್ನು ಕುಲದಿಂದ ಹೊಗಿಡುತ್ತಾರೆ. ಮತ್ತೆ ಅವಳನ್ನು ಕುಲದ ಒಳಗೆ ಕರೆದುಕೊಳ್ಳಲು ಮಾಡುವ ಒಂದು ಆಚರಣೆ ಹೀಗಿದೆ :  ಹಟ್ಟಿಯ ಹೊರಗೆ ಏಳು ಗುಡಿಸಲುಗಳನ್ನು ನಿರ್ಮಿಸುತ್ತಾರೆ. ಆನಂತರ ಅವಳ ತಲೆ ಬೋಳಿಸಿ ಗುಡಿಸಲೊಳಗೆ ಕಳುಹಿಸುತ್ತಾರೆ. ಅವಳು ಒಂದೊಂದು ಗುಡಿಸಳೊಳಗೆ ಹೋದಾಕ್ಷಣ ಆ ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಅವಳು ಆ ಬೆಂಕಿಯಿಂದ ತಪ್ಪಿಸಿಕೊಳ್ಳಬೇಕು. ಕೊನೆಯಲ್ಲಿ ಗೋ ಗಂಜಳ ಚಿಮುಕಿಸಿಕೊಂಡು ಪರಿಶುದ್ಧಳಾಗುತ್ತಾಳೆ. (ಮ್ಯಾಸ ನಾಯಕರು)
೧೧. ಚಪ್ಪಲಿಯಲ್ಲಿ ಹೊಡೆದಾಡಿದರೆ, ಹೊಡೆದವರು ಹೊಡಿಸಿಕೊಂಡವರು ಇಬ್ಬರೂ ಕುಲಗೆಟ್ಟಂತೆ. ಹೀಗೆ ಕುಲಗೆಟ್ಟವರು ದೇವರ ಎತ್ತುಗಳ ಗೂಡಿಗೆ ಬಂದು ನೀರಾಕಿಸಿಕೊಂಡು ಹೋಗಬೇಕು. ನೀರು ಹಾಕಿ ಸಿದ್ಧಿ ಮಾಡುವವನು ದೇವರ ಎತ್ತಿನ ಕಿಲಾರಿ. ಚಪ್ಪಲಿಯಲ್ಲಿ ಹೊಡೆದವನು ಭತ್ಯೆ(ಧಾನ್ಯ)-ಬೇಟೆ ದಂಡ ಕೊಡಬೇಕು. ಹೀಗೆ ಕೊಟ್ಟ ಬತ್ತ್ಯೆಯನ್ನು ಬೇಟೆಯನ್ನು ಊರಿನ ಯಜಮಾನರಿಗೆ ತಿಳಿಸಿ ಗೂಡಿಗೆ ತರಬೇಕು. ಅವೊತ್ತು ಗೂಡಲ್ಲಿ ಅನ್ನ ಮಾಡಿ ಮೂರು ಎಡೆ ಹಾಕುತ್ತಾರೆ. ಅಲ್ಲಿ ಪೂಜೆ ಮಾಡಿ ಯಜಮಾನ ಬೇಟೆ ಕಡಿಯುತ್ತಾನೆ. ನಂತರ ಕಿಲಾರಿ ತಂದುಕೊಡುವ ದೇವರ ಎತ್ತುಗಳ ತೀರ್ಥ(ಗಂಜುಲು) ಹಿಡಿದು ಪೂಜೆಗೆ ಇಟ್ಟಿರುತ್ತೇನೆ. ಆ ಮೇಲೆ ಆ ತೀರ್ಥವನ್ನು ಗೌಡರ ಕೈಗೆ ಕೊಡುತ್ತಾನೆ. ಅಲ್ಲಿಯವರೆಗೂ ಕುಲಗೆಟ್ಟವರು ಗೂಡಿನ ಹೊರಗೆ ಇರುತ್ತಾರೆ. ಆಗ ಗೌಡ್ರು ಈ ತೀರ್ಥ ತಗೆದುಕೊಂಡು ಹೋಗಿ ಅವರಿಗೆ (ಕುಲಗೆಟ್ಟವರಿಗೆ) ಕುಡಿಸಿ, ಮೈಗೆ ಚಿಮುಕಿಸಿ ಗೂಡಿನ ಒಳಗೆ ಕರೆದುಕೊಳ್ಳುತ್ತಾನೆ. ಆಮೇಲೆ ಮಾಂಸಾಹಾರ ಮಾಡಿರುತ್ತಾರೆ. ಆ ಮುದ್ದೆ ಉಣ್ಣುವಾಗ ಎಲ್ಲರ ಜನ್ನೆಗಳಿಂದ ಅಂದರೆ ಏಳು ಜನ ಹಿರಿಯರು ತಮ್ಮ ಜನ್ನೆಯಿಂದ ಒಂದೊಂದು ತುತ್ತನ್ನು ಕುಲಗೆಟ್ಟವರಿಗೆ ಕೊಡುತ್ತಾರೆ. ಅದನ್ನು ಅವರು ತಿಂದು ಶುದ್ಧನಾಗಬೇಕು. ಹೊಡೆಸಿಕೊಂಡವರು, ಹೊಡೆದವರು ಒಂದೇ ದಿನ ಬರುವುದಿಲ್ಲ. ಬೇರೆ ಬೇರೆ ದಿನ ಬಂದು ಶುದ್ಧರಾಗಿ ಹೋಗುತ್ತಾರೆ.  ಜೈಲಿಗೆ ಹೋಗಿ ಬಂದವರು ಕೂಡ ಕುಲಗೆಟ್ಟಿರುತ್ತಾರೆ. ಅವರನ್ನು  ಹೀಗೆ ಶುದ್ದ ಮಾಡುತ್ತಾರೆ.(ಮ್ಯಾಸನಾಯಕರು)
ಬುಡಕಟ್ಟುಗಳ ಶುದ್ಧೀಕರಣ ಪದ್ಧತಿಗಳ ಲೋಕದೃಷ್ಟಿ
ಬುಡಕಟ್ಟುಗಳ ವಿಶೇಷ ಲಕ್ಷಣವೆಂದರೆ ಅತಿಯಾದ ಮಡಿವಂತಿಕೆ. ಬಹುಬೇಗ ಮೈಲಿಗೆಯ ಭಾವನೆಯನ್ನು ತಾಳುವ ಇವರು ಅಷ್ಟೇ ಬೇಗ ಹಾಗೂ ಅಷ್ಟೇ ಸುಲಭ ಮಾರ್ಗದಲ್ಲಿ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ ಎಂಬುದು. ಮೇಲಿನ ಉಲ್ಲೇಖಗಳಿಂದ ನಾವು ತಿಳಿಯಬಹುದಾದ ಸಂಗತಿಗಳೆಂದರೆ : 
೧. ಶುದ್ಧೀಕರಣಕ್ಕೆ ಇವರು ಬಳಸುವ ವಸ್ತುಗಳೆಂದರೆ ದೇವರ ತೀರ್ಥ, ಗೋಗಂಜಳ, ಬೇವಿನ ಕಡ್ಡಿ ಮತ್ತು ಸೊಪ್ಪು, ಉರಿವ ಬೆಂಕಿ, ಹರಿವ ಜಲ, ಬೂದಿ, ಸಗಣಿ, ಎಕ್ಕೆಗಿಡ, ಉಣಿಸೆ ಎಲೆ, ಮಾವಿನ ಚಕ್ಕೆ, ಆಕಳು ಹಾಲು ಅಥವಾ ಜಿನ್ನಿಗೆ ಹಾಲು ಇವುಗಳನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಂಡರೆ ಪವಿತ್ರತೆ ಬರುತ್ತದೆ ಎಂಬ ಭಾವನೆ.
೨. ಈ ಶುದ್ಧೀಕರಣದಲ್ಲಿ ದೇವರು ಮತ್ತು ಪೂಜಾರಿ, ಕುಲದ ಹಿರಿಯರು, ಮಡಿವಾಳ, ಮಡಿವಾಳತಿ, ದೇವರಹಸುಗಳು, ಕಾಗೆ, ನಾಯಿ ಮೊದಲಾದ ಮನುಷ್ಯ, ಪ್ರಾಣಿ ಪಕ್ಷಿಗಳು ಪಾತ್ರವಹಿಸುವವು 
೩. ಮಾಡುವ ಕಾರ್ಯಗಳೆಂದರೆ ಸ್ನಾನಮಾಡುವುದು, ಮನೆಯನ್ನು ಶುಚಿಗೊಳಿಸುವುದು, ಬಟ್ಟೆ ಕಳಚಿಹಾಕುವುದು, ಬೆಂಕಿಯನ್ನು ದಾಟಿಹೋಗುವುದು, ಕೈತುತ್ತು ತಿನ್ನವುದು, ತಲೆ ಬೋಳಿಸುವುದು ಇತ್ಯಾದಿ
೪. ಅನ್ನ ಸೇವೆ ಮಾಡುವುದು, ಎಲೆ ಅಡಿಕೆ ಮತ್ತು ಕಾಸು ಕೊಡುವುದು, ದೇವರಿಗೆ ಪೂಜಾರಿಗಳಿಗೆ ನಮಸ್ಕರಿಸುವುದು  
ಇಲ್ಲಿ ಬಳಸುವ ವಸ್ತಗಳು, ಪಾಲ್ಗೊಳ್ಳುವ ಜೀವಗಳು, ಕಾರ್ಯಮಾಡುವ ಕ್ರಮಗಳು ಮುಖ್ಯವಾಗಿ ಆ ಸಮುದಾಯಗಳು ನಮ್ಮ ಲೋಕ ರಚನೆ ಹಾಗೂ ನಿರ್ವಹಣೆಯ ಬಗ್ಗೆ ಹೊಂದಿರುವ ನಂಬಿಕೆಗಳನ್ನು ಆದರಿಸಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಂಶಗಳನ್ನು ಪರಿಶೀಲಿಸಿದರೆ ಅವುಗಳ ಹಿಂದಿನ ಆಲೋಚನೆಯ ದೃಷ್ಟಿ ದೊರೆಯುತ್ತದೆ. ಮೊದಲು ಸದರಿ ಆಚರಣೆಗಳಲ್ಲಿ ಪಾಲ್ಗೊಳ್ಳುವ ಹಿರಿಯರು/ಗುರಿಕಾರರು ಇಡೀ ಕುಲದ ಜವಾಬ್ದಾರರು. ಇವರು ಕುಲದ ಕ್ಷೇಮಪಾಲಕರೆಂಬುದು ಇಡೀ ಸಮುದಾಯದ ನಂಬಿಕೆ. ಹಾಗಾಗಿಯೇ ಕುಲಕ್ಕೆ ಅಪಚಾರ ಮಾಡಿದವರನ್ನು ಕುಲದಿಂದ ಹೊರ ಹಾಕುವ ಮತ್ತೆ ಒಳಗೆ ಕರೆದುಕೊಳ್ಳುವ ಹಕ್ಕುಳ್ಳವರು. ಹಾಗಾಗಿಯೇ ಇಲ್ಲಿ ಇವರಿಗೆ ಬಹಳ ಪ್ರಾಮುಖ್ಯತೆ ಇದೆ. ಹಾಗೆಯೇ ಶುದ್ಧೀಕರಣ ಪದ್ಧತಿಗಳಲ್ಲಿ ಮಡಿವಾಳ/ಮಡಿವಾಳತಿಯರಿಗೆ ಪ್ರಮುಖ ಸ್ಥಾನವಿದೆ. ಇದಕ್ಕೆ ಕಾರಣ ಇವರು ಮಡಿಬಟ್ಟೆಗಳನ್ನು ಮಡಿಮಾಡುವವರು. ಅಂದರೆ ಆಗಿರುವ ಕೊಳೆಯನ್ನು ತೊಳೆಯುವವರು. ಬಟ್ಟೆಗಳನ್ನು ತೊಳೆಯುವ ಹಾಗೆ ಎಲ್ಲಾ ರೀತಿಯ ಕೊಳೆಗಳನ್ನು ತೊಳೆಯ ಬಲ್ಲವರೆಂಬ ಭಾವನೆಯಿದೆ. ಹಾಗೆಯೇ ಇಲ್ಲಿ ಬಳಸುವ ಕೆಲವು ವಸ್ತುಗಳ ಬಗ್ಗೆಯೂ ಇಂಥದ್ದೇ ತಿಳುವಳಿಕೆ ಇದೆ. ಅವುಗಳಲ್ಲಿ ಒಂದೆರಡನ್ನು ಇಲ್ಲಿ ಪರಿಶೀಲಿಸಬಹುದು : 
ನೀರು : ಪಂಚಭೂತಗಳಲ್ಲಿ ನೀರು ಅತ್ಯಂತ ಮಹತ್ವದ್ದು. ಅದಕ್ಕಾಗಿಯೇ ಇದನ್ನು ನೀರು ಎಂಬ ಸಮಾನ್ಯ ಹೆಸರಲ್ಲಿ ಕರೆಯುವುದಕ್ಕಿಂತ ಜಲ ಎಂಬ ಪವಿತ್ರ ಬಾವನೆಯುಳ್ಳ ಹೆಸರಲ್ಲಿ ಕರೆಯಲಾಗಿದೆ. ಈ ಜಲ ಮನುಷ್ಯನ ಜೀವನಕ್ಕೆ ಅತೀ ಮುಖ್ಯವೆಂದು ಜಗತ್ತಿನ ಎಲ್ಲಾ ಸಮುದಾಯಗಳು ನಂಬುತ್ತವೆ. ನೀರಿಗೆ ಔಷಧೀಯ ಗುಣವಿದೆ ಎನ್ನುವುದನ್ನು ಅನಾದಿ ಕಾಲದಿಂದಲೂ ಮಾನವ ತಿಳಿದಿದ್ದ. ಮಾಟ ಮಂತ್ರಗಳಲ್ಲಿ ಬಳಸುವ ಜಲಕ್ಕೆ ಕ್ಷುದ್ರಶಕ್ತಿಯನ್ನು ಬಿಡಿಸುವ ಮತ್ತು ರೋಗ ಗುಣಪಡಿಸುವ ಶಕ್ತಿಯಿದೆ ಎಂದು ನಂಬಲಾಗಿದೆ. ( ವಿವರಗಳಿಗೆ ನೋಡಿ : ಕನ್ನಡ ವಿಷಯ ವಿಶ್ವಕೋಶ- ಜಾನಪದ ಸಂಪುಟದ ಪುಟ : ೬೪೦-೬೪೧)
ಬೇವು : ಬೇವಿನಮರ ಸರ್ವೋಪಯೋಗಿ. ಇದನ್ನು ಜನಪದರು ಅನೇಕ ಔಷಧಿಗಳಲ್ಲಿ ಬಳಸುತ್ತಾರೆ. ಹಾಗಾಗಿಯೇ ಇದನ್ನು ದೈವವೆಂದು ಪೂಜಿಸುತ್ತಾರೆ. ( ವಿವರಗಳಿಗೆ ನೋಡಿ : ಕನ್ನಡ ವಿಷಯ ವಿಶ್ವಕೋಶ- ಜಾನಪದ ಸಂಪುಟದ ಪುಟ : ೮೯೪) 
ಹುಣಸೆ : ದಕ್ಷಿಣ ಆಪ್ರಿಕಾ ಮೂಲದ ಈ ಹುಣಸೆ ಮರ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹುಣಸೆ ಹಣ್ಣನ್ನು ಪಾತ್ರೆ ಶುದ್ಧಿ ಮಾಡಲು ಬಳಸುತ್ತಾರೆ. ಕೆಲವುಮ್ಮೆ ಮಡಿ ಮೈಲಿಗೆಯ ಸಂಕೇತವಾಗಿ ನೋಡುವುದು ಉಂಟು. ಈ ಮರಗಳಲ್ಲಿ ದೆವ್ವಗಳು ವಾಸಿಸುತ್ತವೆ ಎಂಬುದು ನಂಬಿಕೆ (ವಿವರಗಳಿಗೆ ನೋಡಿ : ಕನ್ನಡ ವಿಷಯ ವಿಶ್ವಕೋಶ- ಜಾನಪದ ಸಂಪುಟದ ಪುಟ : ೧೨೫೬)
ಜನ್ನಿಗೆ ಕುರಿ/ಹಸು : ಕರ್ನಾಟಕದ ಕಾಡುಗೊಲ್ಲರು, ಮ್ಯಾಸ ಬೇಡರು ಮೊದಲಾದ ಕೆಲವೇ ಕೆಲವು ಸಮುದಾಯಗಳಲ್ಲಿ ಪ್ರಚಲಿತ ವಿರುವ ಸಂಪ್ರದಾಯ. ದೇವರ ಹೆಸರಿನಲ್ಲಿ ಕುರಿ/ಹಸುವನ್ನು ಜನ್ನಿಗೆ ಬಿಡುತ್ತಾರೆ. ಇದು ಅತ್ಯಂತ ಪವಿತ್ರವೆಂಬುದು ಇವರ ನಂಬಿಕೆ. ಇವುಗಳ ಹಾಲು ಪವಿತ್ರ ಹಾಗಾಗಿ ಈ ಹಾಲನ್ನು ಮಡಿಯಾಗಲು ಬಳಸುತ್ತಾರೆ(ವಿವರಗಳಿಗೆ ನೋಡಿ : ಕನ್ನಡ ವಿಷಯ ವಿಶ್ವಕೋಶ- ಜಾನಪದ ಸಂಪುಟದ ಪುಟ : ೬೩೬)
ಹೀಗೆ ತಮ್ಮ ತಿಳುವಳಿಕೆಯಿಂದ ಕುಲದಿಂದ ಮೈಲಿಗೆಯಾಗಿರುವ ವ್ಯಕ್ತಿಗಳನ್ನು ಶುದ್ಧೀಕರಿಸುವ ಪದ್ಧತಿಯಲ್ಲಿ ಅನುಸರಿಸುವ ಕ್ರಮ ಹಾಗೂ ಬಳಸುವ ವಸ್ತುಗಳ ಬಳಕೆಯ ಹಿಂದಿನ ಜ್ಞಾನವನ್ನು ಇನ್ನಷ್ಟು ಆಳವಾಗಿ ವಿಶ್ಲೇಷಣೆಗೆ ಒಳಪಡಿಸಿ ಅವುಗಳ ಹಿಂದಿರುವ ಲೋಕಜ್ಞಾನವನ್ನು ಅರ್ಥಮಾಡಿಕೊಳ್ಳಬೇಕಿದೆ. 
ಒಟ್ಟಾರೆ ಕುಲದಿಂದ ಹೊರಹಾಕುವ ಕ್ರೂರವೆನಿಸುವ ಪದ್ಧತಿಗಳನ್ನು ಅನುಸರಿಸುವ ಸಮುದಾಯಗಳು ಅಷ್ಟೇ ಮಾನವೀಯವಾದ ಸರಳ ಪರಿಹಾರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿವೆ ಎಂಬುದು ಇಲ್ಲಿ ಗಮನಾರ್ಹ.

ಪರಮರ್ಶನ ಗ್ರಂಥಗಳು

೧. ಕರ್ನಾಟಕ ಬುಡಕಟ್ಟುಗಳು-೧, ಸಂ : ಹೆಚ್.ಜೆ. ಲಕ್ಕಪ್ಪಗೌಡ, ೧೯೯೮, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.
೨. ಬುಡಕಟ್ಟು ಅಭಿವೃದ್ಧಿ ಮೀಮಾಂಸೆ, ಸಂ : ಎ.ಎಸ್.ಪ್ರಭಾಕರ, ೨೦೦೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೩. ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಎ.ಎಸ್.ಪ್ರಭಾಕರ, ೨೦೦೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
೪. ಕನ್ನಡ ವಿಷಯ ವಿಶ್ವಕೋಶ-ಜಾನಪದ, ೨೦೦೬, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು
೫. ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲರು ಹಾಗೂ ಮ್ಯಾಸ ಬೇಡರ ಕೆಲವು ಹಟ್ಟಿಗಳಲ್ಲಿ ನಡೆಸಿದ ಕ್ಷೇತ್ರಕಾರ್ಯದ ವಿವರಗಳು


*  ಡಾ. ಎಸ್.ಎಂ. ಮುತ್ತಯ್ಯ, 












No comments:

Post a Comment