Tuesday 9 October 2012

ಕನ್ನಡ ಜನಪದ ಸಂಸ್ಕೃತಿ-2


ಈ ಬರಹದ ಹಿಂದಿನ ಒತ್ತಾಸೆಗಳು
'ಕನ್ನಡ ಜನಪದ ಸಂಸ್ಕೃತಿ' ಎನ್ನುವ ಹೆಸರಲ್ಲಿ ರೂಪ ಪಡೆಯುತ್ತಿರುವ ಈ ಬರಹಕ್ಕೆ ಕೆಲವು ನಿಧರ್ಿಷ್ಟ ಒತ್ತಾಸೆಗಳಿವೆ. ಕನ್ನಡ ಜನಪದ ಸಮಾಜಗಳಲ್ಲಿ ಆಧುನಿಕ ವಿದ್ಯಾಮಾನಗಳಿಂದ ಉಂಟಾಗಿರುವ ಮಹತ್ತರ ಬದಲಾವಣೆಗಳಿಂದಾಗಿ ಬದುಕಿನ ಮೌಲ್ಯಗಳಲ್ಲಿ ಸಾಕಷ್ಟು ಏರು-ಪೇರಾಗಿದೆ. ನಮ್ಮ ಪಾರಂಪರಿಕ ತಿಳುವಳಿಕೆಯ ಸಂಗತಿಗಳಿಗೂ ಹೊಸಕಾಲದ ಸಂಗತಿಗಳಿಗೂ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣದಿಂದ ಪರಂಪರೆಗೂ-ಆಧುನಿಕತೆಗೂ ಸಾಕಷ್ಟು ಸಂಘರ್ಷಗಳು ನಡೆದು ಆಧುನಿಕ ಮೌಲ್ಯಗಳು ವಿಜೃಂಬಿಸುತ್ತಿವೆ. ಪರಿಣಾಮ ಸಮಕಾಲೀನ ಸಮಾಜ ತೀವ್ರತರವಾದ ತಲ್ಲಣಗಳಿಗೆ ಒಳಗಾಗಿದೆ. ಇಂಥ ಮುಖ್ಯ ಕಾರಣದಿಂದಾಗಿ ಕನ್ನಡ ಜನಪದ ಸಂಸ್ಕೃತಿಯನ್ನು ಶೋಧಿಸಿ ಮರು ಕಟ್ಟಬೇಕಾಗಿದೆ. ಈ ಹಿನ್ನೆಲೆಯೊಳಗೆ ಪ್ರಸ್ತುತ ರೀತಿಯ ಶೋಧನೆಗೆ ಒತ್ತಾಯಿಸುವ ಸಂದರ್ಭಗಳಲ್ಲಿ ಕೆಲವು ಪ್ರಮುಖವಾದವುಗಳನ್ನು ಈ ಮುಂದಿನಂತೆ ಗುರುತಿಸಬಹುದಾಗಿದೆ.
ಅ. ಧರ್ಮಗಳು ಒಡ್ಡಿರುವ ಅಪಾಯ
ಸಮಕಾಲೀನ ಸಮಾಜದ ಹಲವಾರು ಆತಂಕ ಹಾಗೂ ಸಮಸ್ಯೆಗಳಿಗೆ ಧರ್ಮಗಳು ಬಹುಮುಖ್ಯ ಕಾರಣವಾಗಿವೆ. ಬರಹ ಹಾಗೂ ಉನ್ನತ ವರ್ಗಗಳಿಗೆ ಸೇರಿದ ಪ್ರಧಾನ ಧಾರೆಯ ಧರ್ಮಗಳು ಪಾರಂಪರಿಕವಾಗಿ ಬೆಳೆದು ಬಂದ ದುಡಿಮೆಯ ಆಧರಿತ ಸೇವಾ ವೃತ್ತಿಗಳನ್ನು ಮೂಲೆ ಗುಂಪಾಗಿಸಿವೆ. ಅಷ್ಟೇ ಅಲ್ಲದೆ ಸಮಾಜದ ಶ್ರೇಣೀಕರಣ ವ್ಯವಸ್ಥೆಯನ್ನು ಸಮಥರ್ಿಸುವ ಮೂಲಕ ಸಮಾಜದ ಸಮುದಾಯಗಳಲ್ಲಿ ಮತೀಯ ಮತ್ಸರಗಳನ್ನು ಹೆಚ್ಚಿಸಿವೆ. ಹೀಗಾಗಿಯೇ ಪ್ರಸ್ತುತ ಕಾಲದಲ್ಲಿ ಹಿಂದೆಂದೂ ಕಾಣದಂತಹ ಕೋಮುಗಲಭೆಗಳು ಮತ್ತು ಹಿಂಸಾಚಾರಗಳು ತಲೆ ಎತ್ತಿ ನಿಂತಿವೆ. ಚಲನಶೀಲತೆಯಿಲ್ಲದ ಈ ಕರ್ಮಠ ಧರ್ಮಗಳಲ್ಲಿ ಯಾವುದೇ ರೀತಿಯ ಪರಿವರ್ತನೆಯ ಮನಸ್ಸಿಲ್ಲ. ಇಂಥ ಸ್ಥಿರ ಮನೋಭಾವ ತನ್ನ ಶಕ್ತಿ-ಸಾಮಥ್ರ್ಯ ಹಾಗೂ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನತ್ತ ಹೆಚ್ಚು ಒಲವು ತೋರುತ್ತಿವೆ. ಆ ಮೂಲಕ ಸಮಾಜದ ಶಾಂತಿಗಾಗಿ ದುಡಿಯಬೇಕಿದ್ದ ಧರ್ಮಗಳು ಅಶಾಂತಿಯನ್ನು ಸೃಷ್ಟಿಸುವ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇಂಥ ಸಂದರ್ಭದಲ್ಲಿ ಮಾನವ ಸಮಾಜ ಶಾಂತಿಗಾಗಿ ಆತೊರೆಯುತ್ತಿದೆ. ಇವರಿಗೆ ಶಾಂತಿ ಸಿಗುವುದಾದರೂ ಎಲ್ಲಿಂದ? ಅದು ನಮ್ಮ ಪಾರಂಪರಿಕವಾದ ಚಲನಶೀಲ ಜನಪದ ಸಂಸ್ಕೃತಿಯೊಳಗಿನ ಧರ್ಮಗಳಿಂದ ಮಾತ್ರ ಸಾಧ್ಯವೆಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ.
ಆ. ಹೆಚ್ಚುತ್ತಿರುವ ಸ್ವಜನ ಪಕ್ಷಪಾತ
ಮಾನವ ಸಮಾಜದ ಅತ್ಯಂತ ಶಕ್ತಿಶಾಲಿ ಸಂಗತಿ ಜಾತಿ, ಜಾತಿ ಇರುವುದೇ ಇನ್ನೊಂದು ಜಾತಿಯ ಜನರಿಗೆ ಹಿಂಸೆಕೊಟ್ಟು ಹಿಂದೆ ತಳ್ಳುವುದಕ್ಕಾಗಿ ಎಂಬ ವಾತಾವರಣವನ್ನು ನಾವು ಇಂದು ಕಾಣುತ್ತಿರುವುದು ಸವರ್ೇ ಸಾಮಾನ್ಯವಾಗಿದೆ. ಮನುಷ್ಯ ಪ್ರತೀ ಹಂತದ ಬೆಳವಣಿಗೆಗೆ ಜಾತಿ ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತಿದೆ.  ಇಂಥ ಜಾತಿ, ಜಾತಿಯೊಳಗಿನ ಉಪಜಾತಿಗಳ ಕಾರಣಗಳಿಂದಾಗಿ ಹಾಗೂ ಮನುಷ್ಯನಲ್ಲಿ ಮೂಡುತ್ತಿರುವ ಸ್ವಾರ್ಥಪರತೆಯಿಂದಾಗಿ ಸ್ವಜನ ಪಕ್ಷಪಾತವೆಂಬ ದೊಡ್ಡ ಸಮಸ್ಯೆ ನಮ್ಮ ಸಮಕಾಲೀನ ಬದುಕನ್ನು ಕಾಡಿಸುತ್ತಿದೆ. ಬ್ರಷ್ಟಾಚಾರದಂತಹ ಪೆಡಂಭೂತ ಶಕ್ತಿಶಾಲಿಯಾಗಿ ತಲೆಎತ್ತಿ ನಿಲ್ಲುವುದಕ್ಕೂ ಇದೇ ಸ್ವಜನ ಪಕ್ಷಪಾತ ಪ್ರಮುಖ ಕಾರಣವಾಗಿದೆ. 'ಯಾರು ಏನಾದರೆ ಏನು? ಹೇಗಿದ್ದರೇನು? ನಾನು ನಮ್ಮವರು ಚನ್ನಾಗಿದ್ದರೆ ಸಾಕು' ಎನ್ನುವ  ಭಾವನೆ ಇಂದಿನ ದಿವ್ಯ ಮಂತ್ರವಾಗಿದೆ. ಸಮೂಹದ ಹಿತಾಸಕ್ತಿ ಮಾಯವಾಗಿ ವ್ಯಕ್ತಿ ಹಿತಾಸಕ್ತಿ ಪ್ರಧಾನವಾಗಿ ವಿಜೃಂಬಿಸುತ್ತಿದೆ. ಈ ಕಾರಣದಿಂದಾಗಿ ಇಡೀ ಸಾಮಾಜಿಕ ವ್ಯವಸ್ಥೆ ದ್ವೇಷ-ಅಸೂಯೆ, ಅನ್ಯಾಯ-ಅನಾಚಾರಗಳ ದಳ್ಳುರಿಯಲ್ಲಿ ಬೇಯುತ್ತಿದೆ. ಇದಕ್ಕೆ ಪರಿಹಾರ ಜನರಲ್ಲಿ ಸಮೂಹ ಪ್ರಜ್ಞೆ ಜಾಗೃತಗೊಳ್ಳಬೇಕಿದೆ. ಪರರ ಹಿತದಲ್ಲಿ ತನ್ನ ಹಿತವನ್ನು ಕಾಣುವ ದೊಡ್ಡ ಮನಸ್ಸು ಮನುಷ್ಯನಲ್ಲಿ ಬರಬೇಕಿದೆ. ಇದಕ್ಕಿರುವ ಪರಿಹಾರ ತನ್ನ ಪೂರ್ವಿಕರ ಆದರ್ಶ ಬದುಕನ್ನು ಒಮ್ಮೆ ಹೊರಳಿ ನೋಡುವುದೇ ಆಗಿದೆ.
ಇ. ಮಾನವ ಸಂಬಂಧಗಳಲ್ಲಿ ಸಡಿಲತೆ
ಪ್ರಸ್ತುತ ಸಮಾಜ ಪರಸ್ಪರ ವ್ಯಕ್ತಿಗಳ ನಡುವೆ ಇರಬೇಕಾದ ವ್ಯಕ್ತಿಗೌರವ ಹಾಗೂ ಬಂಧುತ್ವದ ಸಾಚಾತನದ ಕೊರತೆಯನ್ನು ಎದುರಿಸುತ್ತಿದೆ. ಪತಿ-ಪತ್ನಿಯರ ಸಾಂಸಾರಿಕ ಸಂಬಂಧಗಳಿಂದ ಹಿಡಿದು ಕೌಟುಂಬಿಕ ಹಾಗೂ ಸಮಾಜದ ಪ್ರತಿಯೊಂದು ಹಂತದಲ್ಲೂ ಮಾನವೀಯ ಸಂಬಂಧಗಳಲ್ಲಿ ಸಡಿಲತೆ ಕಂಡುಬರುತ್ತಿದೆ. ಈ ಸ್ಥಿತಿ ಯಾವುದೇ ಒಂದು ಪ್ರದೇಶ, ಸಮುದಾಯ, ಜಾತಿ-ಜನಾಂಗಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಈ ಸಮಸ್ಯೆಯಿದ್ದು ಪ್ರಮಾಣ ಮತ್ತು ಸ್ವರೂಪಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಿದೆ ಅಷ್ಟೆ. ಮಾನವ ಜೀವಿಗಳ ನಡುವೆ ಬದುಕಿನ ಅನಿವಾರ್ಯತೆಯ ಭಾಗವಾಗಿದ್ದ ಸಂಬಂಧಗಳು ಬೆಸೆದುಕೊಳ್ಳುತ್ತಿರುವುದು ಸಂಬಂಧ ಬೆಳೆಸುವ ವ್ಯಕ್ತಿಯ ಲಾಭ-ನಷ್ಟಗಳನ್ನು ಆಧರಿಸಿದೆ. ರಕ್ತ ಸಂಬಂಧ, ಕುಟುಂಬ, ಸಂಸಾರ, ಸ್ನೇಹ, ಪ್ರೀತಿ-ಪ್ರೇಮ ಮತ್ತಿತರ ಮೌಲ್ಯಗಳು ಇಂದಿಗೆ ಹುಸಿ ಮೌಲ್ಯಗಳು ಎಂಬಂತೆ ಬಿಂಬಿತಗೊಳ್ಳುತ್ತಿವೆ. ಇವೆಲ್ಲ ಕಾರಣಗಳಿಂದಾಗಿ ಮನುಷ್ಯ ಸಂಬಂಧಗಳ ಬೆಸುಗೆಯಿಂದ ಸಿಗುವ ಸುಖ-ಸಂತೋಷಗಳು ಮಾಯವಾಗಿ ದುಃಖ ದುಮ್ಮಾನಗಳೆ ಹೆಚ್ಚಾಗಿವೆ. ಇಂಥ ಸ್ಥಿತಿಯಿಂದ ಮನುಷ್ಯ ಪಾರಾಗದ ಹೊರತು, ಅನ್ಯ ಮಾರ್ಗವಿಲ್ಲ. ಮನುಷ್ಯನ ಸುಖದ ಮೂಲವೇ ಬಂಧುತ್ವದ ಬಂಧ. ಇದನ್ನು ಆಧುನಿಕ ಮನುಷ್ಯ ಅರ್ಥಮಾಡಿಕೊಳ್ಳಬೇಕಿದೆ. ಇದಕ್ಕಿರುವ ದಾರಿ ತನ್ನ ಪೂರ್ವ ಪರಂಪರೆಯ ಸಂಬಂಧಗಳ ಸ್ವರೂಪದ ಗುಟ್ಟನ್ನು ಅರಿಯಬೇಕಾಗಿರುವುದಾಗಿದೆ.
ಈ. ಶ್ರಮದಿಂದ ದೂರ
ಇಂದು ನಮ್ಮ ಅಭಿವೃದ್ಧಿಗೆ ಬೇಕಿರುವ ಸಂಪನ್ಮೂಲಗಳಲ್ಲಿ ನೈಸಗರ್ಿಕ ಸಂಪನ್ಮೂಲಗಳಷ್ಟೇ ಮುಖ್ಯವಾದುದು ಮಾನವ ಸಂಪನ್ಮೂಲ ಮಾನವ ತನಗಿರುವ ಬೌದ್ಧಿಕ ಹಾಗೂ ಭೌತಿಕ ಶಕ್ತಿ ಮತ್ತು ಚತುರತೆಗಳನ್ನು ಬಳಸಿದರೆ ಮಾತ್ರ ಅದು ಮಾನವ ಸಂಪನ್ಮೂಲವಾಗಿ ಪರಿವತರ್ಿತಗೊಳ್ಳುತ್ತದೆ. ಇದನ್ನರಿತೇ ಆದಿಮಾನವನಕಾಲದಿಂದಲೂ ಮನುಷ್ಯ ತನ್ನ ದೇಹ ಶ್ರಮವನ್ನು ಬಳಸಿ ಅಭಿವೃದ್ಧಿ ಮತ್ತು ಆರೋಗ್ಯವನ್ನು ಸಂಪಾದಿಸಿದ್ದ. ಆದ ಕಾರಣದಿಂದಲೇ ದೈಹಿಕವಾಗಿ ಶಕ್ತಿಶಾಲಿಯಾಗಿ ದುಡಿಯುವ ವ್ಯಕ್ತಿಗೆ ಅವರ ಸಮಾಜದಲ್ಲಿ ಸಾಕಷ್ಟು ಗೌರವ, ಸ್ಥಾನ-ಮಾನಗಳು ದೊರಕುತ್ತಿದ್ದವು. ಅಂದರೆ ಮನುಷ್ಯ ತನಗಿರುವ ದುಡಿಯುವ ಸಾಮಥ್ರ್ಯದ ಮೇಲೆ ತನ್ನ ಮೌಲ್ಯವನ್ನು ಪಡೆಯುತ್ತಿದ್ದ. ಆದರೆ ಪ್ರಸ್ತುತ ಸಮಾಜದಲ್ಲಿ ಶ್ರಮ ಯಾರಿಗೂ ಬೇಡವಾಗಿದೆ. ಮೈಮುರಿದು ಶ್ರಮಪಡುವುದೆಂದರೆ ಅದೊಂದು ರೀತಿಯ ಶಿಕ್ಷೆ ಎನ್ನುವ ಭಾವನೆ ಬೆಳೆದಿದೆ. ಶ್ರಮವಿಲ್ಲದ ಬದುಕನ್ನು ಕಟ್ಟಿಕೊಳ್ಳುವುದೇ ಈ ಹೊತ್ತಿನ ಬಹುದೊಡ್ಡ ಆದರ್ಶವಾಗಿದೆ. ಆದ್ದರಿಂದಾಗಿಯೇ ಹಳ್ಳಿಯಲ್ಲಿ ರೈತ ತನ್ನ ಮಗ/ಮಗಳು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ: ನಿಷ್ಟೆಯಿಂದ ಓದುತ್ತಿಲ್ಲ ಎನಿಸಿದರೆ ನಿನಗೆ ನೇಗಿಲೇ/ಕುಜರ್ಿಗೆಯೇ ಗತಿ ಎಂಬುದಾಗಿ ಹೆದರಿಸುವಂತಾಗಿದೆ. ಅಂದರೆ ಶಾಲಾಶಿಕ್ಷಣ ನಮ್ಮ ಶ್ರಮವಿಲ್ಲದ ಬದುಕನ್ನು ಪಡೆಯುವ ಒಂದು ಮಾರ್ಗ ಎಂಬಂತಾಗಿದೆ. ಇಂಥ ಆಲೋಚನೆ ಹಾಗೂ ಚಿಂತನೆಗಳ ಫಲವಾಗಿ ನಮ್ಮ ಸಮಾಜದ ಶ್ರಮಾಧಾರಿತ ವೃತ್ತಿಗಳೆಲ್ಲವೂ ಕಿಮ್ಮತ್ತನ್ನು ಕಳೆದುಕೊಂಡು ಯಾರಿಗೂ ಬೇಡವಾದ ಕ್ಷೇತ್ರಗಳಾಗಿವೆ. ಇದರಿಂದಾಗಿ ಕೃಷಿ, ಪಶುಪಾಲನೆ, ಕರಕುಶಲ ಕಲೆಗಳು ಇವೇ ಮೊದಲಾದ ವೃತ್ತಿಗಳಿಂದ ನಾವು ನಿರಾಯಾಸವಾಗಿ ಪಡೆಯುತ್ತಿದ್ದ ಸಾಮಗ್ರಿಗಳನ್ನು ಇಂದು ಹೊರ ದೇಶಗಳಿಂದ ಕಷ್ಟಪಟ್ಟು ಆಮದು ಮಾಡಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದೇವೆ. ದೇಹ ಶ್ರಮ ಮನುಷ್ಯನ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಪರೋಕ್ಷವಾಗಿ ಮನುಷ್ಯನ ಆರೋಗ್ಯಕ್ಕೂ ಕಾರಣವಾಗಿದ್ದವು. ಈ ಸಂಗತಿ ಇಂದಿಗೆ ಸಂಪೂರ್ಣ ವಿಸ್ಮೃತಿಗೆ ಒಳಗಾಗಿ ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಜಗತ್ತಿನ ಹಲವಾರು ದೇಶಗಳು ಶ್ರಮಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲದ ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿಯೇ ಉತ್ಪಾದನೆಗಳ ಕೊರತೆ ಮತ್ತು ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ವಿಷಯದಲ್ಲಿ ನಮ್ಮಂಥ ದೇಶಗಳದ್ದು ಮತ್ತೊಂದು ರೀತಿಯ ಸಮಸ್ಯೆ. ಮಾನವ ಸಂಪನ್ಮೂಲ ಸಾಕಷ್ಟು ಪ್ರಮಾಣದಲಿದ್ದಾಗ್ಯೂ ಅದು ಸದ್ವಿನಿಯೋಗವಾಗದೆ ಸಮಸ್ಯೆಗಳಿಗೆ ಮೂಲವಾಗಿದೆ. ಇಂಥ ಸ್ಥಿತಿಯನ್ನು ಆಳುವ ಸಕರ್ಾರಗಳು ಇನ್ನಷ್ಟು ಗಟ್ಟಿಗೊಳಿಸುತ್ತಿರುವುದು ನಮ್ಮ ದೊಡ್ಡ ದುರಂತ. ಶಿಕ್ಷಣ ಸಮಾಜದ ಸರ್ವತೋಮುಖ   ಅಭಿವೃದ್ಧಿಗೆ ಶ್ರಮಿಸಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ ದೇಹ ಶ್ರಮವಿಲ್ಲದ ಉದ್ಯೋಗ ಗಳಿಕೆಯ ಮಾರ್ಗವಾಗಿ ರೂಪುಗೊಂಡಿರುವುದು ಅತ್ಯಂತ ಅಪಾಯಕಾರಿಯಾದುದಾಗಿದೆ. ಈ ವಿಷಯದಲ್ಲಿ ದೇಹ ಶ್ರಮದ ಪ್ರಾಮಖ್ಯತೆಯನ್ನು ಅರ್ಥಮಾಡಿಕೊಂಡು ಇಂದಿನ ಯುವ ಶಕ್ತಿಯನ್ನು ಈ ದಿಕ್ಕಿನ ಬದುಕಿಗೆ ಸೆಳೆಯಬೇಕಿದೆ.
ಉ.  ಭೌತಿಕ ಸಂಪತ್ತಿನ ವ್ಯಾಮೋಹ
ಪ್ರಸ್ತುತ ನಮ್ಮ ಸಮಕಾಲೀನ ಸಮಾಜದ ಪ್ರತಿಯೊಬ್ಬ ಪ್ರಜೆಯ ಕಣ್ಣೆದುರಿಗೆ ಕಾಣುತ್ತಿರುವ ಬಹುದೊಡ್ಡ ಆದರ್ಶವೆಂದರೆ ಅದು ಒಂದೇ; ಹಣ-ಆಸ್ತಿಗಳ ಸಂಪಾದನೆ. ಹಣ-ಆಸ್ತಿಗಳಿಂದ ಶಕ್ತಿಶಾಲಿಯಾದವರಿಗೆ ಸಮಾಜದಲ್ಲಿ ಗೌರವ ಸ್ಥಾನಮಾನಗಳು ಹೆಚ್ಚಾಗುತ್ತಿವೆ. ಹಾಗಾಗಾಗಿ ಸಂಪತ್ತನ್ನು ಕ್ರೂಢೀಕರಿಸುವ ಮಾನವನ ಪ್ರಯತ್ನಗಳು ಕೂಡ ಜಾಸ್ತಿಯಾಗಿವೆ. ಗಳಿಕೆ ಮುಖ್ಯವಾಗಿ ಗಳಿಕೆಯ ಮಾರ್ಗಗಳು ಯಾವುದಾದರೇನು? ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪ್ರಯತ್ನಗಳ ದುರಂತವೆಂದರೆ ಗಳಿಸುವ ಪ್ರಯತ್ನಗಳಲ್ಲಿ ಮನುಷ್ಯನ ಕನಿಷ್ಟ ಅಗತ್ಯಗಳನ್ನು ಲೆಕ್ಕಿಸದೆ ದುರ್ಬಲ ವರ್ಗಗಳಿಂದ ಬದುಕುವ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಬಡತನ ಕುಟುಂಬದ ಗರತಿಯ ಕೊರಳಿನ ತಾಳಿಯನ್ನೆ ಕಿತ್ತುಕೊಂಡು ಶ್ರೀಮಂತರ ಮಹಿಳೆಯ ಕೊರಳಿಗೆ ಶೃಂಗಾರದ ಪದಕ ಮಾಡಿಸಿಕೊಳ್ಳುವಂತಹ ಸ್ಥಿತಿ. ಇದರಿಂದಾಗಿಯೇ ಸಮಾಜದಲ್ಲಿ ಸಾಮಾಜಿಕ-ಆಥರ್ಿಕ ವ್ಯವಸ್ಥೆಗಳಲ್ಲಿ ತೀವ್ರತರವಾದ ಅಸಮಾನತೆ ಮನೆಮಾಡಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇಂದಿನ ಜನರಿಗೆ ಭೌತಿಕ ಆಸ್ತಿ ಗಳಿಕೆಯ ಮೇಲೆ ಇದ್ದಷ್ಟು ವ್ಯಾಮೋಹ ಬೌದ್ಧಿಕ ಸಂಪತ್ತನ್ನು, ಆಂತರಿಕ ಅಂತಃಸತ್ವವನ್ನು ಗಳಿಸುವಲ್ಲಿ ಇಲ್ಲವೇ ಇಲ್ಲ. ಇದರ ದುಷ್ಪರಿಣಾಮಗಳನ್ನು ನಾವೆಲ್ಲ ಇಂದು ಅನುಭವಿಸುತ್ತಿದ್ದೇವೆ. ಇಂಥ ಸ್ಥಿತಿಯಿಂದ ಮನುಷ್ಯ ಪಾರಾಗಬೇಕಾದ ಅನಿವಾರ್ಯತೆ ಖಂಡಿತಾ ಇದ್ದು, ಅದು ಸಾಧ್ಯವಾಗಬೇಕಿದೆ.
ಮೇಲೆ ವಿವರಿಸಲಾದ ಮೌಲ್ಯಗಳಲ್ಲದೆ ಇನ್ನೂ ಅನೇಕ ಮೌಲ್ಯಗಳು ಈ ನೆಲದ ಜಾಯಮಾನಕ್ಕೆ ತದ್ವಿರುದ್ಧವಾದವುಗಳಾಗಿವೆ. ಹಾಗಾಗಿಯೇ ಆಧುನಿಕ ಸಮಾಜದ ಸಂದರ್ಭದೊಳಗೆ ಸಮಾಜದಲ್ಲಿ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಂದಿನ ತವಕ ತಲ್ಲಣಗಳಿಗೆ ಕಾರಣವಾಗುತ್ತಿವೆ. ಈ ನೆಲದ ಕೆಲವು ಜನರಿಗಾದರೂ ನಮ್ಮ ಜಾಯಮಾನದ ಹಾದಿಯನ್ನು ಬಿಟ್ಟು ನಮ್ಮದಲ್ಲದ ದಾರಿಯಲ್ಲಿ ನಡೆಯಲಾರಂಬಿಸಿದ್ದೇವೆ ಎಂಬ ಅರಿವು ಮೂಡಿ ಆತಂಕವನ್ನು ಸೃಷ್ಠಿಸಿದೆ. ಈ ಆತಂಕ ನಮ್ಮ ಸಮುದಾಯಗಳು ನಡೆದು ಬಂದ ದಾರಿಗಳನ್ನು ಒಮ್ಮೆ ಹಿಂದುರಿಗಿ ನೋಡುವ ಒತ್ತಡವನ್ನು ಉಂಟುಮಾಡಿವೆ. ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ನಮ್ಮ ಪರಂಪರೆಯ ಜೀವನ ವಿಕಾಸವನ್ನು ಗುರುತಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ. ಇಂಥ ಪ್ರಯತ್ನಗಳ ಒಂದು ಭಾಗವಾಗಿ ಪ್ರಸ್ತುತ ಚಿಂತನೆಯನ್ನು ಬೆಳಸಲಾಗಿದೆ.
                                                                                                                  ಡಾ. ಎಸ್. ಎಂ. ಮುತ್ತಯ್ಯ

No comments:

Post a Comment