Tuesday, 9 October 2012

ಕನ್ನಡ ಜನಪದ ಸಂಸ್ಕೃತಿ-6


ಜನಪದ ವಿಜ್ಞಾನ-ತಂತ್ರಜ್ಞಾನ

ವಿಜ್ಞಾನ-ತಂತ್ರಜ್ಞಾನಗಳು ಆಧುನಿಕತೆಯ ಕೂಸುಗಳು ಎಂಬುದಾಗಿ ಅನೇಕ ವರ್ಷಗಳಿಂದ ನಂಬಿಸಲಾಗಿದೆ. ಆದರೆ ಇದು ಪರಿಪೂರ್ಣ ಸತ್ಯವಲ್ಲ ವಿಜ್ಞಾನ-ತಂತ್ರಜ್ಞಾನ ಎಂಬ ಪದಪುಂಜಗಳು ಹಾಗೂ ಯಂತ್ರಗಳ ಅಸಾಧ್ಯದ ಬೆಳವಣಿಗೆಯನ್ನು ಹೊರತು ಪಡಿಸಿದರೆ ಉಳಿದ ಜ್ಞಾನಧಾರೆಗಳು ಹಾಗೂ ಅವುಗಳ ಪ್ರಯೋಗ ಆಧುನಿಕ ರೂಪಗಳಿಗೆ ಜನಪದ ವಿಜ್ಞಾನ ತಂತ್ರಜ್ಞಾನಗಳ ತಳಹದಿ ಹಾಗೂ ಬೇರು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಆಧುನಿಕತೆ ಇದನ್ನು ಮರೆಮಾಚಿ ತನ್ನದೇ ಸ್ವಂತ ಸೃಷ್ಟಿ ಈ ವಿಜ್ಞಾನ-ತಂತ್ರಜ್ಞಾನ ಎಂಬುದಾಗಿ ಬಿಂಬಿಸಿದ್ದು ಮಾತ್ರ ಪರಂಪರೆಗೆ ಮಾಡಿದ ಅನ್ಯಾಯ. ಈ ಹಿನ್ನೆಲೆಯಲ್ಲಿ ಆಲೋಚನೆ ಮಾಡುವುದಾದರೆ ಆದಿ ಮಾನವನ ಸೃಷ್ಟಿ ಅದ್ಭುತ ವಿಜ್ಞಾನ. ಏಕೆಂದರೆ ಪ್ರಕೃತಿಯ ಜೊತೆ ಒಡನಾಡಿದ ಅನುಭವಗಳ ಮೂಲಕ ಕಂಡುಕೊಂಡ ವಿಶಿಷ್ಟ ಜ್ಞಾನವಿದು. ಇದರ ಶೋಧಕರು ಅಕ್ಷರಸ್ಥರಲ್ಲದೇ ಇರಬಹುದು. ಆದರೆ ಅನುಭವಿಗಳು ಮತ್ತು ಜ್ಞಾನಿಗಳು, ಬಹಳಷ್ಟು ಮಂದಿ ತಿಳಿದಿರುವಂತೆ ಜನಪದರು ಕಲೆ-ಸಂಪ್ರದಾಯ-ನಂಬಿಕೆ-ಆಚರಣೆಗಳನ್ನು ಮಾತ್ರ ಹುಟ್ಟು ಹಾಕಲಿಲ್ಲ. ಜೊತೆಗೆ ಆಹಾರ-ಔಷಧಿ ಪದ್ಧತಿಗಳು, ವಸತಿ ನಿರ್ಮಾಣದ ಕುಶಲತೆಗಳು, ಉಡುಪಿನ ಅನ್ವೇಷಣೆ, ಬೇಟೆ, ಆಯುಧಗಳು, ವ್ಯವಸಾಯ ಉಪಕರಣಗಳು, ಅಲಂಕಾರಿಕ ವಸ್ತುಗಳು, ಕುಟ್ಟಿ-ಬೀಸುವ ಉಪಕರಣಗಳು ಮತ್ತು ಪದ್ಧತಿಗಳು, ಸಾಗಾಣೆ ಸಾಧನಗಳು, ಜಲ ಸಂರಕ್ಷಣಾ ಪದ್ಧತಿಗಳು, ಮಕ್ಕಳ ಲಾಲನೆ ಪಾಲನೆ-ಪೋಷಣೆಯ ವಿಧಾನಗಳು, ಸಸ್ಯ-ಬೀಜಗಳ ಉತ್ಪತ್ತಿ ಮತ್ತು ಸಂರಕ್ಷಣಾ ಪದ್ಧತಿಗಳು, ನ್ಯಾಯ ತೀಮರ್ಾನಕ್ಕೆ ಕಾನೂನುಗಳು, ವಿವಿಧ ರೀತಿಯ ಕಸುಬುಗಳ ಕೌಶಲ್ಯಗಳು ಇತ್ಯಾದಿ ನೂರಾರು ಅನ್ವೇಷಣೆಗಳನ್ನು ನಡೆಸಿ ತನ್ನ ಬದುಕನ್ನು ಪ್ರಗತಿಯತ್ತ ಮುನ್ನಡೆಸಿದ್ದಾರೆ. ಆದರೆ ಇಂದಿಗೆ ಇವೆಲ್ಲವೂ ಕೇವಲ ಮೌಢ್ಯಗಳೆಂದು ನಿರ್ಲಕ್ಷೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ನಿಜವಾಗಿ ಹೇಳುವುದಾದರೆ ಇವೆಲ್ಲವೂ ಜನಪದ ವಿಜ್ಞಾನಗಳೆ. ಈ ವಿಜ್ಞಾನಗಳ ತಳಹದಿಯ ಮೇಲೆ ಆಧುನಿಕ ವಿಜ್ಞಾನ ನಿಂತಿದೆ. ಉದಾ: ಆರಂಭಕ್ಕೆ ರೈತನೊಬ್ಬ ತನ್ನ ಸಾಗಣೆಯ ಅನುಕೂಲಕ್ಕೆ ಎತ್ತಿನಗಾಡಿ ಸೃಷ್ಟಿಸಿದ ಮೂಲ ತತ್ವಗಳ ಮೇಲೆ ಅಲ್ಲವೇ ಇಂದಿನ ವಿಜ್ಞಾನ ಕಾರನು ಸೃಷ್ಟಿಸಿದ್ದು. ಹಾಗಾಗಿಯೇ ಇಂದಿನ ವಿಜ್ಞಾನದ ಯಾವ ಸೃಷ್ಟಿಯೂ ನೂರಕ್ಕೆ ನೂರರಷ್ಟು ನವೀನವಾದ, ಸ್ವತಂತ್ರವಾದ ಸೃಷ್ಟಿ ಅಲ್ಲ. ಹಾಗೆ ನೋಡಿದರೆ ಆದಿ ಮಾನವನ ಅವಿಷ್ಕಾರದ ಮೂಲ ತತ್ವಗಳನ್ನೆ ಇಂದಿನ ಆಧುನಿಕ ವಿಜ್ಞಾನಿಗಳು ಪರಿಷ್ಕರಿಸಿದರು ಎಂದೇ ಹೇಳಬೇಕಾಗುತ್ತದೆ. ಇಂಥ ಸತ್ಯಗಳನ್ನು ಅರ್ಥ ಮಾಡಿಕೊಳ್ಳದ ನಾವೆಲ್ಲರೂ ಪದವೀಧರ ವಿಜ್ಞಾನಿಗಳಿಗೆ ಹಾರ-ತುರಾಯಿಗಳನ್ನು ನೀಡಿ, ಹೊತ್ತು ಮರೆಸುತ್ತಾ ಅನುಭವದ ವಿಜ್ಞಾನಿಗಳನ್ನು ಕೀಳರಿಮೆಯಿಂದ ನರಳುವಂತೆ ಮಾಡಿದ್ದೇವೆ. ಅವರ ಜ್ಞಾನವನ್ನು ಮೂಲೆಗುಂಪಾಗಿಸಿದ್ದೇವೆ. ಹೂವನ್ನು ವಣರ್ಿಸುವ ಮುಡಿಯುವ ಬರದಲ್ಲಿ ಹೂವಿಗೆ ಕಾರಣವಾದ ಬೇರುಗಳನ್ನು ಮರೆತಂತಾಗಿದೆ. ಈ ಬಗೆಗಿನ ಆಲೋಚನೆಯ ಹಿನ್ನೆಲೆಯಲ್ಲಿ ಜನಪದರ ವಿಜ್ಞಾನ-ತಂತ್ರಜ್ಞಾನದ ಸ್ವರೂಪವನ್ನು ಸ್ಥೂಲವಾಗಿ ಪರಿಚಯಿಸಿಕೊಳ್ಳಬಹುದು.

ಬೇಟೆ ವಿಜ್ಞಾನ

ಆದಿಮಾನವ ಮೊದಲ ವೃತ್ತಿಯೇ ಬೇಟೆ ಎನ್ನಬಹುದು. ಆ ಕಾಲಕ್ಕೆ ಬೇಟೆ ಎರಡು ಕಾರಣಗಳಿಂದ ಅನಿವಾರ್ಯವಾಗಿತ್ತು ಎನಿಸುತ್ತದೆ. ಒಂದು ಕಾಡಿನಲ್ಲಿ ಬದುಕುವ ಮನುಷ್ಯನಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ. ಎರಡು: ತಿನ್ನಲು ಬೇಕಾದ ಆಹಾರ ಗಳಿಕೆಗಾಗಿ ಇದಕ್ಕಾಗಿ ಬೇಟೆ ವೃತ್ತಿಯನ್ನು ಆರಂಭಿಸಿದ ಆತನಿಗೆ ಯಾವುದೇ ಬೇಟೆ ಪರಿಕಗಳಾಗಲಿ ತಂತ್ರವಾಗಲಿ ಗೊತ್ತಿರಲಿಲ್ಲ. ಆದರೂ ಪ್ರಕೃತಿಯಲ್ಲಿ ಪ್ರಾಣಿಗಳು ಬೇಟೆಯಾಡುತ್ತಿದ್ದನ್ನು ಕಂಡು ತನ್ನ ಸೃಜನಶೀಲವಾದ ಆಲೋಚನೆಯ ಹಿನ್ನೆಲೆಯಲ್ಲಿ ನೂರಾರು ಬೇಟೆ ವಿಧಾನಗಳನ್ನು, ಆಯುಧಗಳನ್ನು ಪರಿಕರಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಪ್ರಕೃತಿಯಿಂದ ದೊರೆಯುವ ಮರ-ನಾರುಗಳಿಂದಲೇ ಎಷ್ಟೋ ಆಯುಧಗಳನ್ನು ತಯಾರಿಸಿದ್ದಾನೆ. ಈ ಕ್ಷೇತ್ರದಲ್ಲಿ ಜನಪದ ಬೇಟೆಗಾರರು ಸಾಧಿಸಿದ ಸಾಧನೆದೊಡ್ಡದು. ಸಮಕಾಲೀನ ಕೆಲವಾರು ಇಕ್ಕಟ್ಟುಗಳಲ್ಲಿ ಪಾರಂಪರಿಕ ಬೇಟೆಗಾರರ ಅವಶ್ಯಕತೆ ಕಂಡುಬರುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಉದಾ: ತುಮಕೂರು ಜಿಲ್ಲೆಯ ಪಾವಗಡ ಗ್ರಾಮದಲ್ಲಿ ತೊಳಗಳ ಕಾಟ ಜಾಸ್ತಿಯಾದಾಗ ಅಂತಹ ತೋಳಗಳನ್ನು ಬೇಟೆಯಾಡಲು ಬುಡಕಟ್ಟು ಸಮುದಾಯಗಳ ತಜ್ಞ ಬಿಲ್ಲುಗಾರರನ್ನು ಕರೆಸುವ ಪ್ರಸ್ತಾಪವಾಗಿದ್ದನ್ನು ನೆನಪಿಸಿಕೊಳ್ಳಬಹುದು.

ಕೃಷಿ ವಿಜ್ಞಾನ

ಬೇಟೆಯ ಹಂತದ ನಂತರದ ಮನುಷ್ಯನ ಮಹತ್ವದ ಆವಿಷ್ಕಾರ ಕೃಷಿ, ಇರುವ ಕಾಡನ್ನು ಕಡಿದು ಭೂಮಿಯನ್ನು ಕೃಷಿಯೋಗ್ಯ ಮಾಡಲು ಅಗತ್ಯವಿರುವ ಹಲವಾರು ಉಪಕರಣಗಳನ್ನು ಸೃಷ್ಟಿಸಲಾಗಿದೆ. ಏಳುವ ಸಾಧನಗಳಾದ ನೇಗಿಲು, ಕೂರಿಗೆ, ಕುಂಟೆ, ಹಲುವೆಸೆಡ್ಡೆ, ಹೆಗ್ಗುಂಟೆ, ಎಡೆಕುಂಟೆ ಮುಂತಾದವು: ಕಳೆ ತೆಗೆಯುವ ಸಾಧನವಗಳಾದ ಕಳೆಕುಡ್ಲು ಕುರುಜಿಗೆ, ಕುಳ್ಮುಡು, ಕುಡ್ಲು, ಅಟ್ಟಣೆ, ಕಣಕ್ಕೆ ಬೇಕಾದ ಮೆಟಿಗೂಟ, ಮೆರಗೋಲು, ಜರಡಿ, ರೋನಗಲ್ಲು, ನೀರೆತ್ತಲು ಏತ, ಕಪಿಲೆ ಇನ್ನಿತರ ಉಪಕರಣಗಳು; ಇವುಗಳಲ್ಲದೆ ಬೀಜಗಳ ಉತ್ಪಾದನೆ ಮತ್ತು ಸಂರಕ್ಷಣಾ ವಿಧಾನಗಳು; ಬಿತ್ತನೆ ಕೊಯ್ಲು ಮೊದಲಾದ ಕೆಲಸಗಳಿಗೆ ಕಾಲಮಾನವನ್ನು ಹೊಂದಿಸಿಕೊಂಡಿದ್ದು ಇವೇ ಮೊದಲಾದವು ಆದಿಮಾನವ ಮಹತ್ವದ ಶೋಧಗಳಾಗಿವೆ. ಇಂಥ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರೆಸಬೇಕಿದ್ದು ನಾವು ಆಧುನಿಕ ಯಂತ್ರಜ್ಞಾನದ ದಾಸರಾಗಿ ಅನೇಕ ಸಮಸ್ಯೆಗಳನ್ನು ಮೈ ಮೇಲೆ ಹಾಕಿಕೊಂಡಿದ್ದೇವೆ.  ಇದನ್ನು ಮನಗಂಡೇ ಇತ್ತೀಚಿನ ದಿನಗಳಲ್ಲಿ ಆಧುನಿಕ ಕೃಷಿಗೆ ಪಯರ್ಾಯವಾಗಿ ಪಾರಂಪರಿಕ ಕೃಷಿ ಪದ್ಧತಿಗಳ ಕಡೆಗೆ ಒಲವು ಹೆಚ್ಚಾಗಿದೆ.

ವಸತಿ ತಂತ್ರಜ್ಞಾನ

ಮಾನವ ತನ್ನ ಅಲೆಮಾರಿ ಜೀವನವನ್ನು ಕೊನೆಗೊಳಿಸಿ ಒಂದು ಕಡೆ ನೆಲೆನಿಂತ ಮೇಲೆ ತನ್ನ ವಾಸಕ್ಕೆ ಯೋಗ್ಯವೆನಿಸುವ ಮನೆಗಳನ್ನು ನಿಮರ್ಿಸಿಕೊಂಡ. ಇದಕ್ಕೂ ಮೊದಲು ಬಂಡೆಯ ಬುಡದಲ್ಲಿ, ಗುಹೆಗಳಲ್ಲಿ, ಮರದ ಪೊಟರುಗಳಲ್ಲಿ ಆಶ್ರಯ ಪಡೆದಿದ್ದ. ಮನುಷ್ಯ ಪ್ರಕೃತಿಯಲ್ಲೇ ದೊರಕುವ ವಿವಿಧ ಸಾಮಗ್ರಿಗಳನ್ನು ಬಳಸಿ ವಾಸಕ್ಕೆ ಯೋಗ್ಯವಾದ ಮನೆಗಳನ್ನು ನಿಮರ್ಿಸಿಕೊಂಡದ್ದು ಮಹತ್ವದ ಬದಲಾವಣೆ. ವಿಶೇಷವೆಂದರೆ ಪರಿಸರದಲ್ಲಿ ಪ್ರಾಣಿ-ಪಕ್ಷಿಗಳು ಕೂಡ ತಮಗೆ ಅನುಕೂಲವೆನಿಸುವ ವಾಸಸ್ಥಾನಗಳನ್ನು ನಿಮರ್ಿಸಿಕೊಂಡಿದ್ದನ್ನು ಕಾಣಬೇಕು. ಈ ಹಿನ್ನೆಲೆಯೊಳಗೆ ಮನುಷ್ಯನ ನೆರಕೆ-ಗುಡ್ಲು, ಇರುವೆಗೂಡು, ಜೇನುಗೂಡು ಗೀಜಗನ ಗೂಡು, ರೇಷ್ಮೆಗೂಡು, ಜೇಡರ ಬಲೆಗಳ ವಿಷಯಗಳನ್ನು ಗಮನಿಸಿದರೆ ಈ ವಸತಿ ತಂತ್ರಜ್ಞಾನ ಎಂಥ ಅದ್ಭುತ ಜ್ಞಾನ ಎಂಬುದು ಮನವರಿಕೆಯಾಗುತ್ತದೆ.

ವೈದ್ಯ ವಿಜ್ಞಾನ

ಮಾನವನ ಆರಂಭಿಕ ದಿನಗಳಲ್ಲಿ ಔಷಧಿ ಮತ್ತು ಆಹಾರ ಬೇರೆ ಬೇರೆ ಅಲ್ಲ. ಇವರ ಸಂಸ್ಕೃತಿಯೊಳಗೆ ಸಾಮಾನ್ಯ ಕಾಯಿಲೆಗಳಿಗೆಲ್ಲ ಪ್ರತ್ಯೇಕ ಮದ್ದು ಇಲ್ಲ. ಬದಲಿಗೆ ಆಹಾರದಲ್ಲಿಯೇ ಔಷಧೀಯ ಗುಣಗಳಿರುವ ಪದಾರ್ಥಗಳು ಸೇರುತ್ತಿದ್ದವು. ಇನ್ನೂ ಗಂಭೀರ ಕಾಯಿಲೆಗಳು ಬಂದಲ್ಲಿ ಪ್ರಕೃತಿಯಲ್ಲೆ ಸಿಗುವ ಬೇರು-ನಾರು, ಸೊಪ್ಪು, ಹೂವು-ಕಾಯಿಗಳೇ ಔಷಧಿಗಳು. ಈ ಸಂಬಂಧದ ನಾಟಿ ವೈದ್ಯ ಪದ್ಧತಿಗಳು ಇಂದಿಗೂ ಬಳಕೆಯಲ್ಲಿವೆ. ಅಲೋಪತಿ ವೈದ್ಯ ಪದ್ಧತಿಗೆ ಪಯರ್ಾಯವೆಂಬಂತೆ ಬಿಂಬಿಸಬೇಕಾಗಿರುವ ಅಯುವರ್ೇದಿಕ್ ಹಾಗೂ ನಾಟೀ ಔಷಧೀಯ ಕ್ರಮಗಳನ್ನು ಇಲ್ಲಿ ಗಮನಿಸಬೇಕು. ಯಾವುದೇ ಅಡ್ಡ ಪರಿಣಾಮಗಳಿಲ್ಲದ, ಕಡಿಮೆ ಖಚರ್ಿನಲ್ಲಿ ದೊರೆಯುವ ಈ ಪದ್ಧತಿಗಳ ಬೆಲೆಯನ್ನು ಕಳೆದು ತಾನು ಮಾತ್ರ ಸತ್ಯ ಎಂದು ಬಿಂಬಿಸಿದ ಇಂಗ್ಲಿಷ್ ವೈದ್ಯಪದ್ಧತಿಯ ಹುನ್ನಾರಗಳನ್ನು ನಾವು ಈಗಾಗಲೇ ಅರ್ಥಮಾಡಿಕೊಂಡಿದ್ದೇವೆ.

ಆಹಾರ ವಿಜ್ಞಾನ

ಜಾಗತಿಕ ವಿದ್ಯಾಮನಗಳ ಕಾರಣದಿಂದಾಗಿ ಏಕರೂಪ ಆಹಾರ ಪದ್ಧತಿ ಇಂದು ನಮ್ಮ ಸಮಾಜವನ್ನು ಹಿಡಿತದಲ್ಲಿಟ್ಟುಕೊಂಡಿದೆ. ಆದರೆ ಮನುಷ್ಯನ ಚರಿತ್ರೆಯ ಒಡಲಲ್ಲಿ ಪ್ರದೇಶ-ಹವಾಮಾನಕ್ಕೆ ಅನುಗುಣವಾಗಿ ಸ್ಥಳೀಯವಾಗಿ ದೊರೆಯುವ ಪರಿಕರಗಳನ್ನು ಬಳಸಿಕೊಂಡು ನೂರಾರು- ಸಾವಿರಾರು ರೀತಿಯಲ್ಲಿ ಅಡುಗೆಗಳ ಬಗೆಗಳನ್ನು ತಯಾರಿಸಿದ್ದಾರೆ. ರುಚಿ-ಸ್ವಾದ ಹಾಗೂ ಆರೋಗ್ಯದ ಹಿನ್ನೆಲೆಯಲ್ಲೇ ಎಲ್ಲಾ ಅಡುಗೆಗಳು ಸಿದ್ಧಗೊಂಡಿವೆ. ಈ ಮೊದಲೇ ಪ್ರಸ್ತಾಪಿಸಿದಂತೆ ಏಕ ರೂಪಿಯಾದ ಅಡುಗೆಗಳಲ್ಲಿ ಹಲವಾರು ದೋಷಗಳು ಇರುವುದನ್ನು ಎಲ್ಲರೂ ಗಮನಿಸಿದ್ದೇವೆ. ಹಾಗಾಗಿ ಆರೋಗ್ಯ ಮತ್ತು ರುಚಿಗಾಗಿ ಮತ್ತೆ ನಾವು ಹಿಂದಕ್ಕೆ ಹೊರಳಿ ನೋಡಬೇಕಿದೆ.

ಜನಪದ ತಂತ್ರಜ್ಞರು ಮತ್ತು ತಂತ್ರಜ್ಞಾನ

ನಾವು ತಿಳಿದಿರುವಂತೆ ತಂತ್ರಜ್ಞಾನ ಮತ್ತು ಅದನ್ನು ಸೃಷ್ಟಿಸಿದ ತಂತ್ರಜ್ಞರು 19ನೇ ಶತಮಾನದಲ್ಲಿ ದಿಡೀರನೆ ಉದ್ಭವಿಸಿದ್ದಲ್ಲ. ಆಧುನಿಕ ತಂತ್ರಜ್ಞಾನಕ್ಕೆ ಪರಂಪರೆಯ ಜ್ಞಾನ ಮೂಲ ಎಂಬುದನ್ನು ಧೈರ್ಯವಾಗಿ ಹೇಳಬಹುದು. ಏಕೆಂದರೆ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದು ಬಡಗಿಗಳು, ನೇಕಾರರು ಕುಂಬಾರರು, ಕಮ್ಮಾರರು, ಮೇದರು, ಚೆನಿವಾರದವರು, ಲೋಹಶಿಲ್ಪಿಗಳು, ಬಣ್ಣಗಾರರು ಇವರೆಲ್ಲ ನಿಜವಾದ ತಂತ್ರಜ್ಞರು.  ಇವರು ಸೃಷ್ಟಿಸಿದ ಜ್ಞಾನ ಅದ್ಭುತ ತಂತ್ರಜ್ಞಾನ ಹಾಗಾಗಿ ನಾವು ಈ ಜ್ಞಾನಗಳ ಬಗ್ಗೆಯೂ ಗಂಭೀರವಾದ ತಿಳುವಳಿಕೆಯನ್ನು ಪಡೆಯಬೇಕಿದೆ.
ಮೇಲಿನ ಎಲ್ಲಾ ಅಂಶಗಳನ್ನು ಗಂಭೀರವಾಗಿ ವಿಚಾರ ಮಾಡಿದರೆ ಸಿಗುವ ಫಲಿತಗಳೆಂದರೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳು ಸರ್ವಸ್ವತಂತ್ರವೆಂಬಂತೆ ಬಿಂಬಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇವುಗಳಿಗೆ ಮೂಲಾಧಾರಗಳಂತೆ ಇರುವ ಪಾರಂಪರಿಕ ಜ್ಞಾನಗಳು ಮತ್ತು ಜ್ಞಾನಿಗಳು ಮುಂದೆ ಬಂದ ಜ್ಞಾನಿಗಳಿಗೆ ಬೇರುಗಳು. ಹಾಗಾಗಿ ಮೂಲೆಗುಂಪಾಗುತ್ತಿರುವ, ಕೀಳರಿಮೆಗೆ ಒಳಗಾಗಿರುವ ಆದಿಮ ಜ್ಞಾನಗಳಿಗೂ ಸೂಕ್ತ ಗೌರವ ಹಾಗೂ ಮಾನ್ಯತೆಗಳನ್ನು ನೀಡಿ ಅವುಗಳಿಗೂ ಆಧುನಿಕ ಕಾಲದಲ್ಲಿ ಒಂದು ಸ್ಥಾನವನ್ನು ನೀಡುವ ಕೆಲಸ ಅಗತ್ಯವಾಗಿ ನಡೆಯಬೇಕಿದೆ.

                                                                                                                 ಡಾ. ಎಸ್. ಎಂ. ಮುತ್ತಯ್ಯ

No comments:

Post a Comment