ಆಕರಗಳು
ಕನ್ನಡ ಜನಪದ ಸಂಸ್ಕೃತಿಯ ಸ್ವರೂಪವನ್ನು ಕಟ್ಟಿಕೊಳ್ಳುವುದಕ್ಕೆ ಅನೇಕ ಸವಾಲುಗಳಿವೆ. ಇದಕ್ಕೆ ಕಾರಣ ಅತ್ಯಂತ ಚಲನಶೀಲ ಮತ್ತು ಸಂವೇದನಾಶೀಲವಾದ ಬದುಕುಗಳು ತೀವ್ರತರವಾದ, ವೇಗವಾದ ಪಲ್ಲಟಗಳಿಗೆ ಗುರಿಯಾಗುತ್ತಿರುವುದು. ದಾಖಲಾತಿಯನ್ನು ಇಚ್ಛಿಸಿದ ಈ ಬದುಕಿನ ವಿವರಗಳು ಕಾಲಗರ್ಭದಲ್ಲಿ ಮರೆಯಾಗಿ ಹೋಗಿವೆ. ಇದ್ದ ಕೆಲವಾರು ವಿಚಾರಗಳು ಗುರುತಿಸಲಾಗದಷ್ಟು, ಮೂಲದಿಂದ ಬೇರೆಯಾಗುವಷ್ಟು ಭಿನ್ನ ಸ್ವರೂಪ ಪಡೆದಿವೆ. ಆದರೂ ಈಗಾಗಲೇ ಸಂಗ್ರಹವಾಗಿರುವ ಸಾಹಿತ್ಯ, ಸಾಹಿತ್ಯವನ್ನು ಕುರಿತು ಬಂದಿರುವ ಬರಹಗಳು; ಈಗಲೂ ಬದಲಾದ ರೂಪದಲ್ಲಿರುವ ಸಾಹಿತ್ಯಾದಿ ಕಲೆಗಳು, ಇಂದಿಗೂ ಆಚರಣೆಯಲ್ಲಿರುವ ಹಲವಾರು ನಂಬಿಕೆ, ಸಂಪ್ರದಾಯ, ಆಚರಣೆಗಳು; ಇಂದಿಗೂ ಉಸಿರಾಡುತ್ತಿರುವ ಗ್ರಾಮೀಣ, ಶ್ರಮ ಸಮುದಾಯಗಳ ಬದುಕುಗಳು ನಮಗೆ ಕನ್ನಡ ಜನಪದ ಸಂಸ್ಕೃತಿಯನ್ನು ಕಟ್ಟಿಕೊಳ್ಳುವ ಪ್ರಮುಖ ಆಕರಗಳಾಗಿವೆ. ಈ ಆಕರಗಳನ್ನು ಬಳಸಿಕೊಂಡು ಕನ್ನಡ ಜನಪದ ಸಂಸ್ಕೃತಿಯ ರೂಪವನ್ನು ಕಟ್ಟಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಇಲ್ಲಿ ನಡೆದಿದೆ.
ಕನ್ನಡ ಜನಪದ ಸಂಸ್ಕೃತಿಯ ಮೂಲಾಂಶಗಳು
ನಮ್ಮ ಕನ್ನಡ ಜನಪದಗಳು ಪ್ರಧಾನವಾಗಿ ನಂಬಿದ್ದು ಮನುಷ್ಯಪರವಾದ ದೇವರು-ಧರ್ಮವನ್ನು; ದೇಹ ಪ್ರಧಾನ ಕಾಯಕ ಮೌಲ್ಯವನ್ನು; ಸಮಷ್ಟಿಯ ಹಿತಾಸಕ್ತಿಯನ್ನು; ಭೌತಿಕ ಸಂಪತ್ತಿನ ನಿರಾಕರಣೆಯ ಭಾವನೆಯನ್ನು; ಮನುಷ್ಯನಿಗಿಂತ ಹೆಚ್ಚಾಗಿ ಪ್ರಕೃತಿ ಕೇಂದ್ರಿತ ಮನೋಭಾವನೆಯನ್ನು; ದ್ವೇಷರಹಿತ ಅಪ್ಪಟ ಮಾನವೀಯ ಅಂತಃಕರಣವನ್ನು; ವ್ಯವಹಾರಿಕವಲ್ಲದ ನಿಜವಾದ ಮಾನವೀಯ ಸಂಬಂಧದ ಬಂಧುತ್ವವನ್ನು ಇವೆಲ್ಲ ಭಾವನೆಗಳ ಮೂಸೆಯಲ್ಲಿ ಮೂಡಿ ಅನೇಕ ತಿರುವುಗಳಲ್ಲಿ ಬೆಳೆದ ಕನ್ನಡ ಜನಪದ ಸಂಸ್ಕೃತಿಯ ಪ್ರಧಾನ ಲಕ್ಷಣಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಿಕೊಳ್ಳಬಹುದು.
ದೇವರು-ಧರ್ಮ
'ಜನಪದ ಧರ್ಮವು ಲಿಖಿತ ಪಠ್ಯ, ಆ ಮೂಲಕ ಏರ್ಪಟ್ಟ ತಾತ್ವಿಕ ಚಿಂತನೆಯ ಮೂಲಕ ಆಕಾರ ಪಡೆದುದ್ದಲ್ಲ. ಅದು ಬಹುಮಟ್ಟಿಗೆ ಅನುಕರಣೆ ಮತ್ತು ಆಚರಣೆಗಳಿಂದ ಹರಿದು ಬಂದಿದ್ದು, ಅತಿಮಾನುಷ ಕಲ್ಪನೆ, ಅಲೌಕಿಕ ಜೀವಿಗಳ ಆರಾಧನೆ ಹಾಗೂ ಅನೇಕ ಬಗೆಯ ಧಾರ್ಮಿಕ ನಂಬಿಕೆಗಳಿಂದ ಕೂಡಿದೆ'. ಇದರಲ್ಲಿ ಕಂಡು ಬರುವ ಆಚಾರ - ವಿಚಾರಗಳು, ನಡಾವಳಿಗಳು, ನಂಬಿಕೆಗಳು ಕಲೆಗಳು ಮತ್ತು ಹುಟ್ಟು-ಸಾವುಗಳ ಮಧ್ಯೆ ಅನುಸರಿಸಲೇ ಬೇಕಾದ ಸಂಪ್ರದಾಯಗಳು, ಜನರ ಜೀವನ ವಿಧಾನ ಮತ್ತು ಅದರ ಮನೋ ದೃಷ್ಟಿಯನ್ನು ಪ್ರತಿನಿಧಿಸುತ್ತವೆ. ತಾವು ಪರಿಪಾಲಿಸುವ ಧರ್ಮಗಳ ಧೇಯೋದ್ದೇಶಗಳ ಅರಿವಿಲ್ಲವಾದರೂ ತಮ್ಮ ಸುತ್ತ ನಮ್ಮನ್ನು ಕಾಪಾಡುವ ಒಂದು ಶಕ್ತಿಯಿದೆ ಎಂಬುದನ್ನು ಜನಪದರು ನಂಬುತ್ತಾರೆ. ಹೀಗಾಗಿ ಅವರು ನದಿ, ಜಲಪಾತಗಳು, ಬೆಟ್ಟಗುಡ್ಡಗಳು ದಟ್ಟವಾದ ಕಾಡು ಎಲ್ಲವುಗಳಲ್ಲೂ ದೈವತ್ವವನ್ನು ಅರಸುತ್ತಾರೆ. ಇವುಗಳ ಒಡೆಯನೇ ಆ ಪ್ರದೇಶದಲ್ಲಿ ವಾಸವಾಗಿದ್ದು, ಕಾಯಿಲೆ ಮತ್ತು ಅನಿಷ್ಟಗಳಿಗೆ ಆತನೇ ಕಾರಣನೆಂದು ನಂಬಿ ಅವುಗಳನ್ನು ಪೂಜಿಸುತ್ತಾರೆ. ಇಂಥ 'ಸರ್ವಚೇತನವಾದ' ವಾಸ್ತವವಾಗಿ ಜನಪದ ಧರ್ಮದ ಅಡಿಗಲ್ಲಾಗಿದೆ ಎಂದು ಹೇಳಬಹುದು. ಗಮನಿಸಬೇಕಾದ ಸಂಗತಿ ಎಂದರೆ ಕನ್ನಡ ನೆಲದ ಜನಪದ ಸಂಸ್ಕೃತಿಯ ಧಾಮರ್ಿಕ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳಲ್ಲಿ ಒತ್ತಾಯದ, ಒತ್ತಡದ, ಬಲತ್ಕಾರದ ಗೇಲಿಯ ನಿಲುವು. ಜನಪದರ ಬದುಕು ರಾಜಶಕ್ತಿಗಿಂತ ಹೆಚ್ಚಾಗಿ ಧರ್ಮ ಶಕ್ತಿಯನ್ನು ಆಧರಿಸಿದೆ. ತಮ್ಮ ಜಾಯಮಾನಕ್ಕೆ ಒಗ್ಗುವ ರೀತಿಯಲ್ಲಿ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವೊಂದನ್ನು ರೂಪಿಸಿಕೊಂಡ ಜನಪದರ ಕಲ್ಪನೆಯ ದೇವರು ಪ್ರತಿಷ್ಟಿತ ಶಕ್ತಿಗಿಂತಲೂ ತೀರಾ ಭಿನ್ನವಾದುದು. ಈ ಹಿನ್ನೆಲೆಯೊಳಗೆ ಜನಪದ ಧರ್ಮದ ವಿವಿಧ ಆಯಾಮಗಳನ್ನು ಕಾಣಬಹುದಾಗಿದ್ದು, ಅವುಗಳನ್ನು ಈ ಮುಂದಿನಂತೆ ವಿವರಿಸಿಕೊಳ್ಳಬಹುದು.
ಜನಪದರ ದೈವ ಕಲ್ಪನೆ
ಸಂಸ್ಕೃತಿಗೂ ಧರ್ಮಕ್ಕೂ ನಿಕಟ ಸಂಬಂಧವಿದೆ. ಸಂಸ್ಕೃತಿಯನ್ನು ರೂಪಿಸುವಲ್ಲಿ ಧರ್ಮದ ಪಾತ್ರ ದೊಡ್ಡದು. ಇವರ ಧರ್ಮಕ್ಕೆ ಒಬ್ಬ ಸಂಸ್ಥಾಪಕನಾಗಲಿ, ಒಂದು ಧರ್ಮಗ್ರಂಥವಾಗಲಿ ಇಲ್ಲ. ಬದಲಿಗೆ ಇಲ್ಲಿ ಎಲ್ಲರೂ ಸಂಸ್ಥಾಪಕ ವಾರಸುದಾರರೆ ಆಗಿರುತ್ತಾರೆ. ಹಾಗೂ ಬದುಕಿನ ಅನುಭವಗಳ ಮೂಲಕ ರೂಪುಗೊಂಡ ನಂಬಿಕೆ, ಸಂಪ್ರದಾಯ ಆಚರಣೆ ಮತ್ತು ಕಲ್ಪನೆಗಳೇ ಇವರ ಧರ್ಮ ಗ್ರಂಥಗಳು. ಇವು ಶಿಷ್ಟಧಾರೆಯ ಧರ್ಮಗ್ರಂಥಗಳಂತೆ ಜಡವಾದವುಗಳಲ್ಲ. ಬದಲಿಗೆ ಅಲಿಖಿತವೂ ಪರಿವರ್ತನಾ ಶೀಲವೂ ಆಗಿರುತ್ತವೆ. ಕನ್ನಡ ಜನಪದ ಲೋಕದಲ್ಲಿ ಕಂಡು ಬರುವ ದೇವರ ಕಲ್ಪನೆಗಳನ್ನು ಈ ಮುಂದಿನಂತೆ ಕಾಣಬಹುದು.
ಪ್ರಕೃತಿ ಆರಾಧನೆ 'ಪ್ರಕೃತಿ ಪೂಜೆ ಜನಪದ ಧರ್ಮದ ಪ್ರಧಾನ ಲಕ್ಷಣ. ತಾವು ವಾಸಿಸುವ ಭೂಮಿ, ಸಮೀಪದ ಕಡಲು, ಶಾಖ ಮತ್ತು ಬೆಳಕನ್ನು ನೀಡುವ ಸೂರ್ಯ-ಚಂದ್ರ, ವಿವಿಧ ಉಪಯೋಗಗಳಿಗೆ ಬರುವ ಮರ-ಗಿಡ-ಬಳ್ಳಿಗಳು ಇದರ ಆರಾಧ್ಯ ದೈವಗಳು. ಜನಪದರ ಪ್ರಕೃತಿಯ ಪೂಜೆಯ ಹಿಂದೆ ಕೃತಜ್ಞತೆಯ ಭಾವನೆಯಿದೆ. ಪ್ರಕೃತಿಯನ್ನು ಅವಲಂಬಿಸಿ ಬದುಕಿದ ಮನುಷ್ಯನಿಗೆ ಅದರ ಒಡನಾಟದಲ್ಲಿ ಆದ ನೋವು -ನಲಿವು ದೈವ ಸ್ವರೂಪವನ್ನು ಕಂಡಿವೆ. ಮುಖ್ಯವಾಗಿ ಪ್ರಕೃತಿಯಲ್ಲಿನ ಭಯ ಹುಟ್ಟಿಸುವ ವಸ್ತು-ವಿಷಯಗಳನ್ನು; ವಿಸ್ಮಯ ಮೂಡಿಸಿದ ಘಟನೆಗಳನ್ನು ದೇವರೆಂದು ಆರಾಧಿಸಿದ ಪರಿಶ್ರಮ ಇಲ್ಲಿದೆ.
ಜನಪದರ ದೈವ ಕಲ್ಪನೆ ಅತ್ಯಂತ ಕುತೂಹಲಕಾರಿಯಾದುದು. ಕುಟುಂಬದ, ಜಾತಿಯ ಹಾಗೂ ಸಮುದಾಯದ ಉದ್ದಾರಕ್ಕೆ ದುಡಿದ ಹಿರಿಯರೇ ಇಲ್ಲಿನ ದೇವರು. ಸಾಂಸ್ಕೃತಿಕ ವೀರರು ಎನ್ನುವ ಹೆಸರಿನಲ್ಲಿ ಕರೆಯಲ್ಪಡುವ ಈ ವ್ಯಕ್ತಿಗಳು ಸಮೂಹದ ಪರವಾದ ಕೆಲಸ-ಕಾರ್ಯಗಳ ಮೂಲಕ ಗಮನ ಸೆಳೆದು ಪೂಜನೀಯರಾಗಿರುತ್ತಾರೆ. ಕನ್ನಡ ನಾಡಿನಲ್ಲಿ ಇಂಥ ಸಾವಿರಾರು ಜನ ಸಾಂಸ್ಕೃತಿಕ ವೀರರು ಬಾಳಿ ಬದುಕಿದ್ದನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಮಲೆಯಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈದಾರಲಿಂಗ ಗಾದ್ರಿ ಪಾಲನಾಯಕ, ಕುಮಾರರಾಮ, ಸೇವಾಲಾಲ ಇಂಥ ಕೆಲವೇ ಕೆಲವರು ಮಾತ್ರ ನಮ್ಮ ಲಕ್ಷ್ಯದಲ್ಲಿದ್ದಾರೆ. ಇವರಲ್ಲದೆ ಇನ್ನು ನೂರಾರು ಜನ ಸಾಂಸ್ಕೃತಿಕ ವೀರರ ಕಥನಗಳು ಮತ್ತು ಆಚರಣೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಳಗೆ ಪ್ರಚಲಿತದಲ್ಲಿವೆ. ಈ ಮಟ್ಟದ ನಾಯಕರಲ್ಲದೆ ಪ್ರತೀ ಬಳಿ, ಕುಟುಂಬಕ್ಕೂ ಹಿರಿಯರ ಪರಂಪರೆ ಇದ್ದು ಅವರು ತಾತ, ತಂದೆ, ಮೊದಲಾದ ನೆಲೆಗಳಲ್ಲಿ ದುಡಿದು ಶ್ರೇಷ್ಠರಾದ ಪೂಜನೀಯರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ. ಕುಟುಂಬ, ಸಮುದಾಯಗಳ ಹಿರಿಯನ್ನು ಪೂಜೆ ಮಾಡುವ ಕ್ರಮಗಳು ವಿಭಿನ್ನ. ಉದಾ: ಹಿರಿಯರ ಪ್ರತಿನಿಧಿಯಾಗಿ ಕಲ್ಲು, ಕೋಲು, ಮಗೆ ಮೊದಲಾದ ವಸ್ತುಗಳನ್ನು ವ್ಯಕ್ತಿಗಳೆಂದು ಪರಿಭಾವಿಸಿ ಪೂಜಿಸಲಾಗುತ್ತದೆ. ಇತ್ತೀಚೆಗೆ ಛಾಯಾಚಿತ್ರಗಳ ರೂಪದಲ್ಲಿ ಪೂಜಿಸುವ ಪದ್ಧತಿಗಳು ಚಾಲ್ತಿಗೆ ಬರುತ್ತಿವೆೆ.
ಜನಪದ ದೈವ ಕಲ್ಪನೆಯ ಚರಿತ್ರೆಯಲ್ಲಿ ಮೊದಲ ಹೆಜ್ಜೆ ಎಂದರೆ ಪ್ರಕೃತಿಯ ಭಯ-ವಿಸ್ಮಯಗಳನ್ನು ಅನುಸಂಧಾನಗೊಳಿಸಿದ ಕ್ರಮ. ಮುಖ್ಯವಾಗಿ ಪ್ರಕೃತಿಯ ಜೊತೆ ನಡೆಸಿದ - ಬೆಳೆಸಿದ ಸಂಬಂಧಗಳ ಸ್ವರೂಪದಲ್ಲಿ ಜನಪದರ ದೈವ ಕಲ್ಪನೆ ಒಡಮೂಡಿದೆ. ಮನುಷ್ಯ ಹಾಗೂ ಪ್ರಕೃತಿಯ ಸಂಬಂಧಗಳು ಅತ್ಯಂತ ಪ್ರಾಚೀನವೂ ನಿರಂತವೂ ಆಗಿವೆ. ಈ ನಿಡುಗಾಲದ ನಡಿಗೆಯಲ್ಲಿ ಮನುಷ್ಯ ಪ್ರಕೃತಿಯ ಬಗ್ಗೆ ವಿಸ್ಮಯ - ಭಯ - ಕೃತಜ್ಞತೆಯ ಭಾವನೆಗಳನ್ನು ಹೊಂದಿದ್ದಾನೆ. ಹಾಗಾಗಿಯೇ ಪ್ರಕೃತಿಯನ್ನು ಮನಸಾರೆ ಆರಾಧಿಸಿದ್ದಾನೆ. ಪ್ರಕೃತಿಯ ಭಾಗವಾದ ಸೂರ್ಯ-ಚಂದ್ರ-ಭೂಮಿ-ಆಕಾಶ, ನೀರು-ಗಾಳಿ, ಮಳೆ-ಬೆಳೆ ಇವುಗಳನ್ನು ಜನಪದರು ದೇವರೆಂದು ಪೂಜಿಸಿದ್ದಾರೆ. ಅದರಲ್ಲೂ 'ಭೂಮಿ' ಮಣ್ಣಿಗೆ ಹತ್ತಿರವಾಗಿ ಬದುಕಿದ ಜನಪದ ಸಮುದಾಯಗಳಿಗೆ ಶ್ರೇಷ್ಟ ದೈವ. ಹಾಗಾಗಿ ಜನಪದ ತ್ರಿಪದಿಯೊಂದು ಭೂಮಿ ತಾಯಿಗೆ ಎಂಥ ಸ್ಥಾನವಿದೆ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತದೆ.
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ|
ಎಳ್ಳು ಜೀರಿಗೆ ಬೆಳೆವಂಥ| ಭೂಮಿ ತಾಯಿನ|
ಎದ್ದೊಂದು ಗಳಿಗೆ ನೆನೆದೇನ||
ಈ ಸಾಲುಗಳು, ಇರುವ ಅನಂತ ದೈವಗಳ ನಡುವೆ ಭೂಮಿ ತಾಯಿ ದೊಡ್ಡವಳು ಹಾಗಾಗಿಯೇ ಅವಳಿಗೆ ಮೊದಲ ಸ್ಥಾನ ಎಂಬುದನ್ನು ಸ್ಪಷ್ಟಪಡಿಸುತ್ತವೆೆ. ಹೀಗೆ ಭೂಮಿಯನ್ನು ತಾಯಿಯೆಂದು ತಿಳಿದ. ಸಮುದಾಯಗಳ ಪ್ರಜ್ಞೆ ಅನುಭವಜನ್ಯವಾದುದು ಹುಟ್ಟಿನಿಂದ ಸಾವಿನವರೆಗೂ ಮನುಷ್ಯ ಭೂಮಿಯಿಂದ ಪಡೆಯುವ ಸಹಾಯವೆಷ್ಟು? ಆದರೆ ಇತ್ತೀಚಿನ ದಿನಮಾನದಲ್ಲಿ ಭೂಮಿಯ ಗರ್ಭವನ್ನು ಬಸಿದ ಆಧುನಿಕರ ಜ್ಞಾನ ಯಾಕಾಗಿ ಪರಂಪರೆಯನ್ನು ನಿಲಕ್ಷಿಸಿತು ಎಂಬುದರ ಬಗ್ಗೆ ಆಲೋಚಿಸಬೇಕಿದೆ. ಭೂಮಿಯಂತೆ ಸೂರ್ಯ, ಚಂದ್ರ ನೀರು, ಗಾಳಿ ಮಳೆ ಮೊದಲಾದವು ಮನುಷ್ಯನ ಬದುಕಿಗೆ ಅನಿವಾರ್ಯ ಎಂಬುವ, ಅವು ನೀಡಿದ ಸಹಕಾರಕ್ಕೆ ಪ್ರತಿಯಾಗಿ ಗೌರವಿಸುವ ಮನೋಭಾವದಿಂದಾಗಿ ಇವೆಲ್ಲವೂ ದೈವ ಸ್ವರೂಪಿಯಾಗಿವೆ. ಜನಪದ ಬದುಕುಗಳಲ್ಲಿ ದೊರೆಯುವ ಪ್ರಕೃತಿ ಆರಾಧನೆಯ ಮತ್ತೊಂದು ರೂಪ ಹೊಸ ಗಿಡ-ಮರ-ಬಳ್ಳಿಗಳ ಆರಾಧನೆ. ಇದನ್ನು ಕುಲದೇವತಾರಾಧನೆ ಪದ್ಧತಿ ಎಂದು ಕರೆಯಲಾಗಿದೆ. ಈ ಪದ್ಧತಿಯ ಅನ್ವಯ 'ಒಂದು ಸಮುದಾಯದ ಜನ ತಮ್ಮ ಕುಲದ ಮೂಲವನ್ನು ಒಂದು ಸಸ್ಯ ಅಥವಾ ಪ್ರಾಣಿಗಳಲ್ಲಿ ಆರೋಪಿಸಿಕೊಂಡು ಅವುಗಳನ್ನೇ ತಮ್ಮ ಕುಲದೇವರು ಎಂದು ಆರಾಧಿಸಿಕೊಂಡು ಬರುತ್ತಾರೆ. ತಮ್ಮ ಕುಲದೇವತೆಯ ಲಾಂಛನವಾದ ಸಸ್ಯವನ್ನು ಅವರು ಕಡಿಯುವುದಿಲ್ಲ. ಪ್ರಾಣಿಯನ್ನು ಬೇಟೆಯಾಡುವುದಿಲ್ಲ ಹಾಗೂ ಆಹಾರದಲ್ಲಿ ಸೇವಿಸುವುದಿಲ್ಲ. ಈ ಸಮುದಾಯಗಳು ಪೂಜಿಸುವ ಬನ್ನಿ, ಬೇವು, ಆಲ, ಎಕ್ಕೆ ಮೊದಲಾದವು ಕೇವಲ ಹಸಿರಲ್ಲ. ಅವುಗಳಲ್ಲಿರುವ ಔಷಧೀಯ ಗುಣವೇ ಅವುಗಳನ್ನು ಪೂಜೆಗೊಳ್ಳುವಂತೆ ಮಾಡಿದೆ. ಇಂಥಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಕರಿಸಿದಕ್ಕೆ ಪ್ರತಿಯಾಗಿ ಮೂಡಿದ ಕೃತಜ್ಞತಾ ಭಾವವೇ ಅವುಗಳ ಆರಾಧನೆಗೆ ಪ್ರಮುಖ ಕಾರಣವಾಗಿದೆ. ಈ ರೀತಿಯಲ್ಲಿ ಪ್ರಕೃತಿ ಮನುಷ್ಯನ ಬದುಕಿಗೆ ಅನುಕೂಲಗಳಾಗಿ ಒದಗಿಬಂದ ವಸ್ತು-ವಿಷಯಗಳನ್ನು ಗೌರವ ಮತ್ತು ಕೃತಜ್ಞತೆ ಸೂಚಿಸುವ ಸಲುವಾಗಿ ಪೂಜಿಸಿದರೆ; ಇದೇ ಮನುಷ್ಯ ಮತ್ತೊಂದು ಕಡೆ ಪ್ರಕೃತಿಯ ವಿನಾಶಿ ರೂಪಗಳನ್ನು ಪೂಜಿಸಿದ್ದಾನೆ. ಉದಾ: ಪ್ರಕೃತಿಯಲ್ಲಿರುವ ಕ್ರೂರ ಪ್ರಾಣಿಗಳು, ವಿಷಜಂತುಗಳು; ಗುಡುಗು-ಸಿಡಿಲು ಮೊದಲಾದ ಭಯವನ್ನುಂಟು ಮಾಡುವ ಪ್ರಕೃತಿಯ ವೈಚಿತ್ರಗಳು ಗಮನಿಸಬೇಕಾದ ಸಂಗತಿ ಎಂದರೆ ಕೃತಜ್ಞತಾ ಭಾವನೆಯ ಪೂಜಾಕ್ರಮಗಳಿಗಿಂತ ಭಯದ ಭಾವನೆಯಲ್ಲಿ ಪೂಜಿಸುವ ಪೂಜಾಮಾದರಿಗಳು ಭಿನ್ನವಾಗಿವೆ.
ಜನಪದ ಧರ್ಮದ ಪ್ರಕೃತಿ ಆರಾಧನೆಯ ಭಾಗವಾಗಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತನ್ನ ಬದುಕಿಗೆ ಸಹಕರಿಸದ ಸೂರ್ಯ-ಚಂದ್ರ-ಭೂಮಿ; ಭಯವನ್ನುಂಟು ಮಾಡಿದ ಹಲವಾರು ವಿಕೋಪಗಳು ಇಂಥ ಮಹಾನ್ ಸಂಗತಿಗಳಲ್ಲದೆ ಕೃಷಿ ಮೊದಲಾದ ವಿವಿಧ ವೃತ್ತಿಯ ಜನ ಬಳಸುವ ಸಣ್ಣ ಸಣ್ಣ ಸಲಕರಣೆಗಳು ಕೂಡ ಪೂಜನೀಯವಾಗಿದೆ. ನೇಗಿಲು ರಂಟೆ, ಕುಂಟೆ, ಕುಡ ಮೊದಲಾದ ವಸ್ತುಗಳಿಲ್ಲದ ರೈತ; ಕೋಲು, ಮಗೆೆಗಳಿಲ್ಲದ ಪುಶುಪಾಲಕ; ಉಳಿ, ಬೈರಿಗೆ, ಬಾಚಿ ಇಲ್ಲದ ಬಡಗಿ; ತಿಡಿ, ಬೆಂಕಿ, ಚಮ್ಮಟಿಗೆ ಇಲ್ಲದ ಕಮ್ಮಾರ; ಮೊರ ಕಸಬರಿಗೆ ಹೊಂದಿಲ್ಲದ ಕುಟುಂಬದ ಮಹಿಳೆಯರ ಕಾಯಕ ಅದೆಷ್ಟು ಕಷ್ಟಕರ ಎಂಬುದನ್ನು ಅರಿತರೆ ಇಲ್ಲಿನ ದೈವಾರಾಧನೆಯ ಸ್ವರೂಪದ ಹಿನ್ನೆಲೆ ಅರ್ಥವಾಗುತ್ತದೆ.
ಕನ್ನಡ ಜನಪದ ಜೀವನದೊಳಗೆ ರೂಪುಗೊಂಡ ದೈವ ಕಲ್ಪನೆಗಳಲ್ಲಿ ಇನ್ನೂ ಕೆಲವು ಕುತೂಹಲ ಮೂಡಿಸುವ ವಿಚಾರಗಳಿವೆ. ಅಂಥವುಗಳಲ್ಲಿ ಪ್ರಧಾನವಾಗಿ ಗಮನಿಸಬೇಕಾದ ಸಂಗತಿ ಎಂದರೆ - ದೇವರುಗಳು ಕೂಡ ಮನುಷ್ಯನಂತೆ ಲೌಕಿಕ ಭಾವನೆಗಳನ್ನು ಹೊಂದಿವೆ. ಈ ಜನ ದೇವರಲ್ಲಿ ಮಾಡಿಕೊಳ್ಳುವ ಹರಕೆಯ ಸ್ವರೂಪಗಳು, ನಡೆಸುವ ಪೂಜಾವಿಧಾನಗಳು, ಬಳಸುವ ಪೂಜಾ ಸಾಮಗ್ರಿಗಳು ಇವೇ ಮೊದಲಾದ ಸಂಗತಿಗಳನ್ನು ಗಮನಿಸಿದರೆ ಮೇಲಿನ ಸಂಗತಿ ಸ್ಪಷ್ಟವಾಗುತ್ತದೆ. ಅಷ್ಟೆ ಅಲ್ಲದೆ ಮನುಷ್ಯರಂತೆಯೇ ದೇವರುಗಳ ನಡುವೆ ಮಾನವೀಯ ಸಂಬಂಧಗಳು, ರಕ್ತ ಸಂಬಂಧದ ನೆಲೆಗಳು ಇರುತ್ತವೆ. ಸಾಮಾನ್ಯವಾಗಿ ದೇವರುಗಳ ಮಧ್ಯೆ ಗಂಡ-ಹೆಂಡತಿ, ಅಣ್ಣ-ತಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ ಸಂಬಂಧಗಳನ್ನು ಕಲ್ಪಿಸಿರುವುದು ಕಂಡುಬರುತ್ತದೆ. ಇಲ್ಲಿಯೇ ಗಮನಿಸಬೇಕಾದ ಅಂಶವೆಂದರೆ ಈ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಈ ಮೊದಲು ಪ್ರಸ್ತಾಪಿಸಿದಂತೆ ಸ್ತೊತ್ರ, ಸ್ತುತಿ, ಪ್ರಾರ್ಥನೆಗಳ ನಿಲುವಿನ ಸಂಬಂಧವಿಲ್ಲ. ಬದಲಿಗೆ ಒತ್ತಾಯದ, ಒತ್ತಡದ ಬಲತ್ಕಾರದ ಗೇಲಿಯ ಮನೋಭಾವದ ಸಂಬಂಧವಿದೆ. ವಿಶೇಷವೆಂದರೆ ಇಂಥ ವ್ಯವಸ್ಥೆಯಲ್ಲಿ ದೈವ ಮತ್ತು ಭಕ್ತರ ನಡುವೆ ಅರಸ-ಆಳು ರೀತಿಯ ಸಂಬಂಧಗಳಿರುವುದಿಲ್ಲ. ಅದಕ್ಕಾಗಿಯೇ ಇಲ್ಲಿ ಬಂಧುತ್ವ, ಸ್ನೇಹ ರೀತಿಯ ನಂಟು ಕಂಡುಬರುತ್ತದೆ. ಹಾಗಾಗಿಯೇ ಜನಪದರು ದೇವರಲ್ಲಿ ವರವನ್ನು ಬೇಡಿ ಪಡೆಯುವುದಕ್ಕಿಂತ ಒತ್ತಾಯಮಾಡಿ, ಬೈದು ವರಪಡೆಯುವ ಕ್ರಮಗಳೇ ಹೆಚ್ಚು. ಈ ದೈವ ವ್ಯವಸ್ಥೆಯಲ್ಲಿ ಪುರೋಹಿತಶಾಹಿಯ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಯ ಕೆಲಸವೇನು? ಎಂಬುದನ್ನು ಜನಪದ ಗರತಿಯೊಬ್ಬಳು ಹೀಗೆ ಪ್ರಶ್ನಿಸುತ್ತಾಳೆ.
ದೇವರಿಗೆ ಬಂದೀನಿ ದಾರಿ ಬಿಡು ಪೂಜಾರಿ|
ದೇವರಿಗೆ ನನಗೆ ಒಳಮಾತ | ಮೈಲಾರ ಲಿಂಗನ|
ಠಾವಿಗೋಗಿ ಕೈಯ ಮುಗಿದೇನ||
ಕನ್ನಡ ಜನಪದ ಲೋಕದೊಳಗೆ ಇಂಥ ವಿಶಿಷ್ಟವೂ ವೈವಿದ್ಯಮಯವೂ ಆದ ದೈವ ಪರಂಪರೆಯಿದೆ. ಈ ಪರಂಪರೆಯೊಳಗೆ ದೈವ ಎನ್ನುವುದು ಮನುಷ್ಯರ ಸಂಕಷ್ಟಗಳ ಪರಿಹಾರಕ. ಆದರೆ ಇದೇ ನೆಲದಲ್ಲಿ ಇಂದು ಪ್ರಚಲಿತವಿರುವ ದೈವ ಕಲ್ಪನೆಗಳನ್ನು ಕಂಡರೆ ಯಾರಿಗಾದರೂ ಬೇಸರವೆನಿಸುತ್ತದೆ. ವೈಧಿಕ ಪರಂಪರೆಯ ದೈವ ಸ್ವರೂಪಗಳು ಜನಪದ ದೈವ ಸ್ವರೂಪದ ಮೇಲೆ ನಿರಂತರವಾಗಿ ನಡೆಸುತ್ತಾ ಬಂದಿರುವ ದಾಳಿಗಳ ಕಾರಣದಿಂದ ಇಂದು ದೇವರ ಹೆಸರಲ್ಲಿ ಹೊಟ್ಟೆಹೊರೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಇಂಥವರಿಂದ ಭಕ್ತರ ಶೋಷಣೆ ಹೆಚ್ಚು ಹೆಚ್ಚು ನಡೆದಿದೆ. ಆಧುನಿಕ ಸಮಾಜದ ವಿಜ್ಞಾನದ ವಿಚಾರಗಳು ದೈವ ಕಲ್ಪನೆಯನ್ನು ಸಡಿಲಗೊಳಿಸಿದರ ಪರಿಣಾಮ ಇದರ ಫಲ ಪಡೆದ ಜನ ದೈವಗಳನ್ನೆ ಶೋಷಿಸುವ ಮಟ್ಟಕ್ಕಿಳಿದ್ದಿದ್ದಾರೆ. ದೇವರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದೇವಾಲಯ ಹಾಗೂ ಮಠಗಳು ಕೂಡ ಹಣ-ಆಸ್ತಿ ಗಳಿಕೆಯಲ್ಲಿ ಪೈಪೋಟಿ ನಡೆಸುತ್ತಿರುವುದು ನಮ್ಮ ಕಾಲದ ದುರಂತ. ಇಂಥ ಸಂದರ್ಭದೊಳಗೆ ನಿಜವಾದ ಭಕ್ತಿಯುಳ್ಳ ಯಾರನ್ನು ಹಿಂಸಿಸದ, ನಿಜವಾದ ಮಾನವ ಪ್ರೇಮವನ್ನು ಕಾಪಿಡುವ ಜನಪದರ ದೈವ ವ್ಯವಸ್ಥೆ ಇಂದು ನಮ್ಮೆಲ್ಲರ ಅಗತ್ಯವಾಗಿದೆ.
ಡಾ. ಎಸ್. ಎಂ. ಮುತ್ತಯ್ಯ
No comments:
Post a Comment